Daily Archives: January 3, 2014

ರವಿ ಕೃಷ್ಣಾರೆಡ್ಡಿಯವರ ಲೇಖನ ಓದುವಾಗ ನನಗನ್ನಿಸಿದ್ದು…

– ಶರ್ಮಿಷ್ಠ 

ರವಿ ಕೃಷ್ಣಾರೆಡ್ಡಿಯವರ ಲೇಖನ “ವರ್ತಮಾನ.ಕಾಮ್ ನ 2013 ಭೂತಕಾಲ” ಓದುವಾಗ ನನಗನ್ನಿಸಿದ್ದು…

ದೆಹಲಿಯಲ್ಲಿ ನಡೆದಂತಹ ಪವಾಡಸದೃಶ ಘಟನೆ ನನ್ನ ಪ್ರಕಾರ ನಮಗೆ ಅನಿವಾರ್ಯವಾಗಿ, ಅಗತ್ಯವಾಗಿಯೂ ಬೇಕು. ಆದರೆ ನಮ್ಮಲ್ಲಿ ಮನಸ್ಸುಗಳು ಮುಕ್ತವಾಗಿ ಆಲೋಚಿಸುವುದನ್ನೇ ಕಳೆದುಕೊಂಡಿರುವಾಗ ಇದು ಸಾಧ್ಯನಾ? arvind-kejriwal-delhi-electionsಕರ್ನಾಟಕದಲ್ಲಿ ನೀವು ಒಂದೋ ಎಡ ಅಥವಾ ಬಲ ಪಂಥೀಯರಾಗಿರಲೇ ಬೇಕು. ನೀವು ಗುರುತಿಸಿಕೊಳ್ಳದಿದ್ದರೂ ನಿಮ್ಮ ಸುತ್ತಲಿನ ಜನ ಇದೆರಡರಲ್ಲಿ ಒಂದಕ್ಕೆ ನಿಮ್ಮನ್ನು ಸೇರಿಸಿ, ನಿಮ್ಮನ್ನು ಹಿಗ್ಗಾಮುಗ್ಗಾ ಎಳೆದಾಡುತ್ತಾರೆ. ನಿಮ್ಮ ಒಲವು ಎಡ ವಿಚಾರಗಳ ಕಡೆಗಿದ್ದರೆ ಸಾಕು, ಅನಾವಶ್ಯಕ ನಿಮ್ಮ ಮೇಲೇ ದ್ವೇಷ ಸಾಧಿಸುತ್ತಾರೆ. ಕಾರಣವೇ ಇಲ್ಲದೆ ನಿಮ್ಮ ಬಳಿ ಮಾತು ಬಿಡುತ್ತಾರೆ, ನಿಮ್ಮ ನೆರಳು ಕಂಡರೂ ಸಾಕು ರೇಗುತ್ತಾರೆ. ಒಟ್ಟಿನಲ್ಲಿ ನಿಮ್ಮ ವಿಚಾರಗಳು ಸರಿಯಿಲ್ಲ.

ಬಲಪಂಥೀಯರೆಂದರೆ ವಿಶ್ವಾಸವಿಲ್ಲದ ಯುವಜನತೆ ಎಡಪಂಥೀಯರೆಡೆಗೆ ಹೋಗೋಣ ಎಂದರೆ ಅಲ್ಲಿರುವುದೆಲ್ಲ ಬರಿಯ ಮುಖವಾಡ, ಹಿಪೋಕ್ರಸಿ. ಹೇಳುವುದು ಒಂದು ಮಾಡುವುದು ಇನ್ನೊಂದು. ಯಾರನ್ನು ಆದರ್ಶ ಅಂಥ ಹೇಳೋಣ? ಆದರ್ಶ ಎನ್ನುವುದು ಅದು ಆದರ್ಶ ಅನ್ನೋದಕ್ಕೆ ನಮಗೆ ಆದರ್ಶಯುತವಾಗಿರಬೇಕೇ ಹೊರತು, ಬೇರೆಯವರ ಅನುಕರಣೆ ಅಲ್ಲ. ಅವರು ಆದರ್ಶವಾಗಿದ್ದರೆ ಎಷ್ಟು, ಬಿಟ್ಟರೆ ಎಷ್ಟು. ಆದರೂ ಕೆಲವೊಮ್ಮೆ ನಾವು ನಮ್ಮ ಹೋರಾಟದಲ್ಲಿ ಸೋಲು ಅನುಭವಿಸುವಾಗ ಜೀವಚೈತನ್ಯ ನೀಡುವುದಕ್ಕಾದರೂ ಆದರ್ಶಪ್ರಾಯ ವ್ಯಕ್ತಿಯೊಬ್ಬ ಸಂತೈಸಲು ಬೇಕಾಗುತ್ತದೆ. ನಮ್ಮ ನಡೆಗೆ ಜೀವ ತುಂಬಲು…

ಜಿಎಸೆಸ್ ತೀರಿಹೋದಾಗ ನನಗನ್ನಿಸಿತ್ತು, ಆದರ್ಶ ಗುರುಪರಂಪರೆಯ ಕಾಲ ಇನ್ನಿಲ್ಲ… Tumkur-VC-Sharma-with-Governorಹಿಂದಿನ ಗುರುಗಳು ಆದರ್ಶಯುತವಾದ ವಿದ್ಯಾರ್ಥಿವೃಂದವನ್ನು ಬೆಳೆಸಿದಂತೆ ಈಗ ಬೆಳೆಸುವವರು ಯಾರಿದ್ದಾರೆ? ಆ ಗುರುವಿನ ಪಟ್ಟಕ್ಕೆ ನಾವು ಬೆಲೆತೆತ್ತು ಹೋಗುತ್ತಿರುವಾಗ, ವಿಸೀ ಪದವಿ ನಡೆಯುತ್ತಿರುವುದು ಆಯ್ಕೆಯಲ್ಲ, ಅನಧಿಕೃತ “ಬಿಡ್” ಅನ್ನುವುದು ಎಲ್ಲರಿಗೂ ಗೊತ್ತಿರುವಾಗ ಆದರ್ಶಯುತ ವಿದ್ಯಾರ್ಥಿವೃಂದ ಬೆಳೆಸೋದು ಸಾಧ್ಯನಾ? ಕಾಲೇಜುಗಳಲ್ಲೇ ವಿದ್ಯಾರ್ಥಿ ಚುನಾವಣೆ ಮೂಲಕ ರಾಜಕೀಯ ಕಾಲಿಟ್ಟು ವಿದ್ಯಾರ್ಥಿ ಸಮುದಾಯವನ್ನೇ ಒಡೆಯುತ್ತಿದೆ. ಸಮಾರಂಭದಲ್ಲಿ ನಮ್ಮ ಅಧ್ಯಾಪಕರ ಆಯ್ಕೆ ಕಾಲೇಜಿಗೆ ಫಂಡ್ ಕೊಡಬಲ್ಲ ಲಂಚಕೋರ ರಾಜಕಾರಣಿಯೇ ಹೊರತು ಆದರ್ಶ ವ್ಯಕ್ತಿ ಅಲ್ಲ.

ಒಳ್ಳೆಯ ಶಿಷ್ಯ ಪರಂಪರೆಯನ್ನು ಕಟ್ಟಬಲ್ಲ ತಾಕತ್ತಿರುವ ಅಧ್ಯಾಪಕರನ್ನು ನಾವು ನಕ್ಸಲ್ ಬೆಂಬಲಿಗ ಎನ್ನುವ ಹಣೆಪಟ್ಟಿ ಹಚ್ಚಿ ಮೂಲೆಗೆ ತಳ್ಳಿಯಾಗಿದೆ. ಸೆಕ್ಯುಲರ್‌ಗಳು ಎನಿಸಿಕೊಂಡಿರುವವರು ತಪ್ಪು ಯಾರು ಮಾಡಿದರೂ ತಪ್ಪು ಎನ್ನೋ ಧೋರಣೆ ಬಿಟ್ಟು ಯಾವುದೋ ವಾದವನ್ನು ಮುಂದಿಟ್ಟುಕೊಂಡು ಬಲಪಂಥೀಯರನ್ನು ಹೆಚ್ಚು ಹೆಚ್ಚು ತಯಾರು ಮಾಡುತ್ತಿದ್ದಾರೆ. ಅದಕ್ಕೆ ಕರ್ನಾಟಕದ ಯುವಜನತೆ ಮೋದಿಯ ಚುಂಗು ಹಿಡಿದುಕೊಂಡಿದೆ. ಇಲ್ಲಿ ಆಮ್ ಆದ್ಮಿ ಮೋಡಿ ಆಗುತ್ತಿಲ್ಲ.

ಒಮ್ಮೆ ಟಿ.ಪಿ. ಅಶೋಕ ಸಮಾರಂಭವೊಂದರಲ್ಲಿ ಹೇಳಿದ್ದರು `ಲೆಟ್ ಅಸ್ ಅಗ್ರೀ ಟು ಡಿಸಗ್ರೀ’. ಅದು ನಮ್ಮಲ್ಲಿ ಸಾಧ್ಯವೇ ಇಲ್ಲ.

ಯಾದವ್ ತರದ ಒಳ್ಳೆಯ ಆದರ್ಶ ಪ್ರೋಪೆಸರ್ ಇಲ್ಲಾ ಅಂಥಲ್ಲ ಅಂಥವರನ್ನು ಸರ್ಕಾರದ ಅಧೀನದಲ್ಲಿರುವ ವಿವಿಗಳು ಕೈಕಟ್ಟಿ ಕೂರಿಸಿವೆ. ಅಥವಾ ಸಾಧ್ಯತೆ ಇರುವವರು ಮುಂದೆ ಬರುತ್ತಿಲ್ಲ.

ಒಳ್ಳೆಯ ಪತ್ರಕರ್ತರು ಅಂಥ ಇದ್ದರೆ ಅವರು ಬಹುಶ ಮಾಧ್ಯಮದಲ್ಲಿ ಉಳಿಯುವುದಿಲ್ಲ. ಒಳ್ಳೆಯ ಆದರ್ಶಗಳಿದ್ದರೆ, ನೀವು ಅನ್‌ಫಿಟ್ ಟು ಬಿಕಮ್ ಜರ್ನಲಿಸ್ಟ್.

ಒಳ್ಳೆಯ ಲಾಯರ್ ಅಂಥ ಯಾರಿದ್ದಾರೆ. ಇದ್ದಾರೆ ಒಬ್ಬರು ಮುಕ್ತ, ಮಹಾಪರ್ವದ ಟಿ..ಎನ್. ಸೀತಾರಾಂ ಅಷ್ಟೆ. ಸಂತೋಷ ಹೆಗ್ಡೆಯವರು ಅಷ್ಟು ಕಷ್ಟಪಟ್ಟು ತಯಾರಿಸಿದ ಲೋಕಾಯುಕ್ತ ವರದಿಯನ್ನು ಲೀಕ್ ಮಾಡಿದಾಗ, Santosh_Hegdeಅವರು ಗಳಗಳನೆ ಅತ್ತರಲ್ಲ ಯಾರಿಂದ ಏನು ಮಾಡಲಿಕ್ಕಾಯ್ತು. ಈ ಪ್ರಜಾಪ್ರಭುತ್ವದಲ್ಲಿ ನಮಗೆ ಏನು ಹಕ್ಕಿದೆ? ಒಂದು ಪಿಐಎಲ್‌ಗೆ ಲಕ್ಷಗಟ್ಟಲೆ ಸುರಿಯಬೇಕಾಗಿರುವಾಗ ಯಾರು ತಾನೇ ಮುಂದೆ ಬಂದು ಜನಪರ ಹೋರಾಟಗಳನ್ನು ಮಾಡುತ್ತಾರೆ. ನಮ್ಮಲ್ಲಿ ಪಠ್ಯಪುಸ್ತಕದಲ್ಲಿ ಜಾತಿ ಹೆಸರಲ್ಲಿ‍, ಇನ್ನು ಯಾವುದೋ ಹೆಸರಲ್ಲಿ ಎಷ್ಟೆಷ್ಟೂ ಗಲಾಟೆಗಳಾಗುತ್ತದೆ. ಆದರೆ ಯಾರದರೂ ಕಾನೂನನ್ನು ಗಂಭೀರವಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರಾ?

ಕೆಲವೊಮ್ಮೆ ಹೋರಾಟಗಾರರು ತಮ್ಮ ಅಹಿಂದ, ದಲಿತ, ಅಲ್ಪಸಂಖ್ಯಾತ ಧೋರಣೆಯಿಂದ ಹೊರಬೇಕಾಗುತ್ತದೆ. ಇಲ್ಲವಾದಲ್ಲಿ ಅದು ಬಹುಸಂಖ್ಯಾತರ ಬೆಂಬಲ ಕಳೆದುಕೊಂಡು ಸಮಾಜವನ್ನು ಇನ್ನೂ ಛಿದ್ರ ಛಿದ್ರ ಮಾಡುತ್ತದೆ ಅಷ್ಟೆ.

ಏನು ಬರೆದರೂ ಏನು ಸಾಧ್ಯವಿಲ್ಲ. ಎಲ್ಲ ಅಕ್ಷರ ಕಸ ಎನಿಸಿಬಿಡುತ್ತದೆ. ಅದಕ್ಕೆ ಸಾಕ್ಷಿ. sowjanya-heggadeಸೌಜನ್ಯಾ ಪರ ಹೋರಾಟ. ಎಲ್ಲರು ಎಷ್ಟು ದನಿಯೆತ್ತಿದರೂ ಏನೂ ಸಾಧ್ಯವಾಗಲಿಲ್ಲ. ಈ ರೀತಿಯ ಘಟನೆ ಮನಸ್ಸನ್ನು ಮತ್ತೆ ಮತ್ತೆ ಕುಗ್ಗಿಸುತ್ತೆ. ಆ ಅಮಾಯಕ ಹೆಣ್ಣು ಮಗಳಿಗೆ ನ್ಯಾಯ ಕೊಡಿಸಲಿಕ್ಕೆ ಆಗಲೇ ಇಲ್ಲ. ಹಿಂದೂ ಸಮಾಜದ ಏಳಿಗೆಗೆ ಬಲಿದಾನ ಅನಿವಾರ್ಯ ಎಂದು ಹಿಂದೂ ಪರ ಸಂಘಟನೆಗಳು ಕೈಕಟ್ಟಿ ಕುಳಿತವು. ಆದರೆ ಅವಳು ನಮ್ಮ ಮನೆ ಮಗಳಾಗಿದ್ದರೆ…

ಇದನ್ನೆಲ್ಲಾ ಯಾರ ಹತ್ತಿರ ಹೇಳಬೇಕು, ಈ ಅಕ್ಷರ ಕಸ ಯಾಕೆ ಬೇಕು… ಐಯಾಮ್ ಫ್ರಸ್ಟ್ರೇಟೆಡ್.

ನನ್ನ ದೇಹ ಗಂಡಾದರೂ, ನನ್ನ ಮನಸ್ಸು ಮಾತ್ರ ಹೆಣ್ಣು…

– ಸುಮಾ ಮುದ್ದಾಪುರ್
ಪತ್ರಿಕೋದ್ಯಮ ವಿದ್ಯಾರ್ಥಿ

“ನಾನು ಹೀಗೆ ಅಂತ ನಮ್ಮ ಮನೆಯವರಿಗೆ ಗೊತ್ತು. ಆದರೆ ಈ ಕೆಲಸ ಮಾಡ್ತಾ ಇದಿನಿ ಅಂತ ಗೊತ್ತಿಲ್ಲ. ನಾನು ಈ ಕೆಲಸ ಮಾಡ್ತಾ ಇದೀನಿ ಅಂತ ಗೊತ್ತಾದರೆ ನನಗೆ ಮದುವೆ ಮಾಡ್ತಾರೆ. ನನಗೆ ಬೇರೆ ಹುಡುಗಿನ ಮದುವೆ ಆಗಿ ಅವಳ ಜೀವನ ಹಾಳು ಮಾಡೊಕೇ ಇಷ್ಟ ಇಲ್ಲ. ಏಕೆ ಅಂದ್ರೆ ನಾನು ಒಬ್ಬ ಗಂಡಾಗಿದ್ರೂ ಕೂಡ ಹುಡುಗಿಯ ಮೇಲೆ ಆಗಲಿ ಅವಳ ದೇಹದ ಮೇಲೆಯಾಗಲಿ ಆಸೆ ಇಲ್ಲ. ಆ ರೀತಿಯ ಭಾವನೆಗಳು ಕೂಡ ಹುಟ್ಟುವುದಿಲ್ಲ. male-female-transgender-symbolsನನಗೆ ಹುಡುಗಿಯರನ್ನ ನೊಡಿದ್ರೆ ಏನೂ ಅನ್ನಿಸುವುದಿಲ್ಲ. ಅವರ ಮೇಲೆ ಪ್ರೀತಿ ಹುಟ್ಟಲ್ಲ. ಆದರೆ ನನಗೆ ನಾನು ಇಷ್ಟ ಪಡುವ ಹುಡುಗನ ಮೇಲೆ ಪ್ರೀತಿ ಹುಟ್ಟುತ್ತದೆ. ಅವನ ದೇಹದ ಮೇಲೆ ಆಸೆಯಾಗುತ್ತೆ. ನಾನೇನು ಮಾಡ್ಲಿ ಇದು ನನ್ನ ತಪ್ಪಲ್ಲ, ನನ್ನ ಮನಸ್ಸಿನ ತಪ್ಪು. ಆದರೆ ಎಲ್ಲಾರು ನಾನು ತಪ್ಪು ಮಾಡುತ್ತಾ ಇದ್ದೆನೆ ಅನ್ನೋ ರೀತಿಯಲ್ಲಿ ಮಾತಾಡ್ತಾರೆ. ನಾನು ಇರೋದೇ ಹೀಗೆ. ನನ್ನ ದೇಹ ಗಂಡಾದರೂ, ನನ್ನ ಮನಸ್ಸು ಮಾತ್ರ ಹೆಣ್ಣು…”

ಹೀಗೆ ನನ್ನ ಜೊತೆ ಮಾತಾಡಿದವರು ಲಕ್ಷಣ್. ಮೂಲತಃ ಹಾವೇರಿಯವರು. ಇವರು ಸರಕಾರೇತರ ಸಂಸ್ಥೆಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡುವವರು. ಡಿಸೆಂಬರ್ 11, 2013 ರಂದು ಸುಪ್ರೀಮ್ ಕೋರ್ಟ ಇಂಡಿಯನ್ ಪೀನಲ್ ಕೋಡ್‌ನ 377 ಸೆಕ್ಷನ್ ಪ್ರಕಾರ ಸಲಿಂಗರತಿ (‍ಸಲಿಂಗ ಕಾಮ) ಕಾನೂನು ಬಾಹಿರ ಎಂದು ಘೋಷಿಸಿದೆ. Supreme_court_of_indiaಈ ತೀರ್ಪಿನ ಬಗ್ಗೆ ಸರಕಾರೇತರ ಸಂಸ್ಥೆಯಾದ ಎ.ಎಲ್.ಎಫ್ ನಲ್ಲಿ ಚರ್ಚೆಯನ್ನು ಆಯೋಜಿಸಿದ್ದರು. ಅಲ್ಲಿಗೆ ಲಕ್ಷಣ್ ಬಂದಿದ್ದರು. ನಾನು ಕೂಡ ಅಲ್ಲಿಗೆ ಹೋಗಿದ್ದೆ. ಆಲ್ಲಿ ಲಕ್ಷಣ್ ಅವರ ಪರಿಚಯ ಆಯಿತು.

ಅವರು ಹೇಳುತ್ತಾರೆ ಸಲಿಂಗ ಕಾಮ ಅನ್ನುವುದು ಇತ್ತೀಚೆಗೆ ಬಂದಿರುವುದಲ್ಲ. ಇದು ಅನಾದಿ ಕಾಲದಿಂದಲೂ ಇದೆ. ಸ್ವತಂತ್ರ್ಯ ಪೂರ್ವದಲ್ಲಿ ಗುಲಾಮಗಿರಿ ಪದ್ದತಿ ಜಾರಿಯಲ್ಲಿತ್ತು. ಆಗ ಮನುಷ್ಯರನ್ನು ಕೊಂಡುಕೊಂಡು ಅವರನ್ನು ತಮ್ಮ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದರು. ಅದು ಹೆಂಗಸು ಗಂಡಸನ್ನು, ಗಂಡಸು ಹೆಂಗಸನ್ನು ಅಲ್ಲ. ಗಂಡು ಗಂಡನ್ನೆ, ಹೆಣ್ಣು ಹೆಣ್ಣನ್ನೆ ಈ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದರು. ಆದರೆ ಈ ಪುರುಷರು ತಮ್ಮ ಅಸ್ಥಿತ್ವದ ಉಳಿವಿಗಾಗಿ, ಪುರುಷ ಪ್ರಧಾನ ಸಮಾಜದ ನಿಮಾಣಕ್ಕಾಗಿ ಹೆಣ್ಣು ಗಂಡನ್ನು, ಗಂಡು ಹೆಣ್ಣನ್ನು ಕಾಮಿಸುವುದೇ ನೈಸರ್ಗಿಕ. ಹೆಣ್ಣು ಹೆಣ್ಣನ್ನು, ಗಂಡು ಗಂಡನ್ನು ಕಾಮಿಸುವುದು ಅನೈಸರ್ಗಿಕ ಎಂದು ಸಾರುತ್ತಾ ಬಂದರು. ಇವರು ಹೇಗೆ ಹೇಳುತ್ತಾರೆ ಯಾವುದು ನೈಸರ್ಗಿಕ ಯಾವುದು ಅನೈಸರ್ಗಿಕ ಎಂದು? ಪ್ರಕೃತಿಯಲ್ಲಿ ನೈಸರ್ಗಿಕ ಮತ್ತು ಅನೈಸರ್ಗಿಕ ಗಳನ್ನು ಗುರುತಿಸಿದವರು ಯಾರು?

ಸಲಿಂಗ ಕಾಮ ತಪ್ಪು ಎನ್ನುವುದು ಸಮಾಜದಲ್ಲಿ ಭದ್ರವಾಗಿ ಬೇರೂರಿ ಬಿಟ್ಟಿದೆ. sex-edಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತಾಡುವುದೇ ತಪ್ಪು, ಹಾಗೇ ಮಾತಾಡಿದರೆ ಅದು ಅನಾಚಾರ ಎಂದು ಭ್ರಮಿಸಲಾಗಿತ್ತು. ಹಲವು ಶತಮಾನಗಳ ಮಡಿವಂತಿಕೆಯ ಫಲವಾಗಿ, ಹಾಗೂ ಮಿಕ್ಕವರು ಏನೆಂದುಕೊಳ್ಳುತ್ತಾರೋ ಎಂಬ ಭೀತಿಯಿಂದ, ಜನರು ತಮ್ಮ ವೈಯಕ್ತಿಕ ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡುವುದು ದೊಡ್ಡ ಅಪರಾಧ ಎಂದು ಭಾವಿಸಿದ್ದ ಸಮಾಜ ಅಥವಾ ಜನರು ಇಂದು ಮುಕ್ತವಾಗಿ ಮಾತನಾಡುವುದನ್ನು ಕಲಿತಿದ್ದಾರೆ.

ಅದರಲ್ಲೂ ಇತ್ತೀಚಿಗಿನ 15-20 ವರ್ಷಗಳಿಂದ ಸಲಿಂಗ ಕಾಮದ ಬಗ್ಗೆ ಮತ್ತು ತಮ್ಮ ವೈಯಕ್ತಿಕ ಲೈಂಕತೆಯ ಬಗ್ಗೆ ಮುಕ್ತವಾಗಿ ಮಾತನಾಡಲು ಆರಂಭಿಸಿದ್ದಾರೆ ಜನರು. ಇಂತಹ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ಈ ತೀರ್ಪು ಎಷ್ಟರ ಮಟ್ಟಿಗೆ ಸಮಂಜಸ ಎಂದು ಅವರು ನನಗೆ ಪ್ರಶ್ನೆ ಹಾಕಿದರು. ನನಗೆ ಏನು ಹೇಳುಬೇಕು ಅನ್ನುವುದೇ ತೋಚಲಿಲ್ಲ.

“ಸುಪ್ರೀಂ ಕೋರ್ಟ್‌ನ ಈ ತೀರ್ಪು ಬರುವುದಕ್ಕೂ ಮುಂಚೆ ಪೋಲಿಸರಿಂದ ಒಂದು ಹಂತದ ವರೆಗಿನ ಹಿಂಸೆಯಾಗುತ್ತಿತ್ತು. ಆದರೆ ಈ ತೀರ್ಪು ಬಂದ ನಂತರ ಪೋಲಿಸರ ಹಾವಳಿ ಇನ್ನೂ ಹೆಚ್ಚಾಗಿದೆ. ಅವರುಗಳು ನಮ್ಮ ಮೇಲೆ ನಡೆಸುವ ದೈರ್ಜನ್ಯಕ್ಕೆ ನಾವು ಕುಸಿದು ಹೋಗಿದ್ದೆವೆ. ಲೈಂಗಿಕ ಕಾರ್ಯಕರ್ತರಿಗೆ/ರ್ತೆಯರಿಗೆ ಹೆಚ್.ಐ.ವಿ ಬಗ್ಗೆ ಮಾಹಿತಿ ನೀಡಿ ಅವರಿಗೆ ಉಚಿತವಾಗಿ ಕಾಂಡೋಮ್ ಅನ್ನು ವಿತರಿಸುವುದು ಮತ್ತು ಸ್ವಚ್ಛತೆಯ ಬಗ್ಗೆ ಅವರಿಗೆ ಮಾಹಿತಿ ನೀಡುವುದು ನಮ್ಮ ಕೆಲಸ. Transexual, transgenders and Aravani gay men in Tamil Nadu, Indiaಹೀಗೆ ಇತ್ತೀಚೆಗೆ ಸಂಜೆ ಹೊತ್ತು ನಮ್ಮ ಕೆಲಸದಲ್ಲಿ ನಾವು ನಿರತರಾಗಿದ್ದಾಗ ಇಬ್ಬರು ಪೋಲಿಸರು ಬಂದು ನಮ್ಮ ಬ್ಯಾಗ್ ಚೆಕ್ ಮಾಡಿ ಅದರಲ್ಲಿ ಇದ್ದ ಕಾಂಡೋಮ್‌ಗಳನ್ನು ನೋಡಿ ಕೇಳಿದರು ಏನಿದು ಎಂದು. ನಾವು ಮಾಡುತ್ತಿರುವ ಕೆಲಸದ ಬಗ್ಗೆ ಮತ್ತು ನಮ್ಮ ಸಂಸ್ಥೆಯ ಬಗ್ಗೆ ಎಲ್ಲವನ್ನು ತಿಳಿಸಿ ಹೇಳಿದೆವು. ಆದರೆ ಆ ಪೋಲಿಸರು ನಮ್ಮ ಮಾತುಗಳನ್ನು ಕೇಳದೆ (ನಂಬದೆ) ನಮ್ಮ ಬ್ಯಾಗ್‌ನಲ್ಲಿದ್ದ ಕಾಂಡೋಮ್ ಗಳನ್ನೆಲ್ಲ ಸುಟ್ಟು ಹಾಕಿ ನಮಗೆಲ್ಲ ಅವಾಚ್ಯ ಶಬ್ದಗಳಿಂದ ಬೈದು, ಹೊಡೆದರು. “ನೀವು ಯಾಕೆ ಹೀಗೆ ನಡೆದುಕೊಳ್ಳುತ್ತಿರಿ. ನೀನು ಒಬ್ಬ ಗಂಡಸಾಗಿ ಗಂಡಿನ ತರ ನಡೆದುಕೊ. ಹೆಂಗಸಿನ ಹಾಗೆ ಯಾಕೆ ನಡೆದುಕೊಳ್ಳುತ್ತೀಯ” ಎಂದು ಅವರು ನನ್ನನ್ನು ಕೇಳಿದರು. ಅದಕ್ಕೆ ನಾನು ಹೇಳಿದೆ, “ನಾನು ನೋಡಲಿಕ್ಕೆ ಗಂಡಿನ ಹಾಗೆ ನಿಮಗೆ ಕಾಣಬಹುದು. ಆದರೆ ಏನು ಮಾಡುವುದು ಸಾರ್, ನನ್ನ ಒಳಗಡೆ ಮನಸ್ಸು ಅನ್ನುವುದು ಒಂದು ಇದೆಯಲ್ಲ, ಅದು ಹೆಣ್ಣಿನ ಭಾವನೆಗಳನ್ನು ಹೊಂದಿದೆ. ಆ ಮನಸ್ಸಿಗೆ ನಾನು ಗಂಡಸಿನ ಹಾಗೆ ಇರು ಅಂತ ಎಷ್ಟು ಹೇಳಿದರು ಆ ಮನಸ್ಸು ಕೇಳುತ್ತಿಲ್ಲ. ಏನು ಮಾಡಲಿ ಸಾರ್ ಇದು ನನ್ನ ತಪ್ಪ?” ಎಂದು ಕೇಳಿದೆ. ಆದರೆ ಆ ಪೋಲಿಸ್ ಇದನ್ನೆಲ್ಲ ಕೇಳಿ ನನಗೆ ಪಾಠ ಹೇಳೋಕೆ ಬರ್‍ತೀಯಾ ಅಂತಾ ಇನ್ನಷ್ಟ ಹೊಡೆದ್ರು.

“ಏನು ಮಾಡುವುದು ಮೇಡಂ, ನಾವುಗಳು ಈ ಸಮಾಜಕ್ಕೇ ಒಂದು ಪ್ರಶ್ನೆ. ಅತ್ತಾ ಗಂಡಿನ ಹಾಗೆ ಇರೋಕೆ ಅಗ್ತಾ ಇಲ್ಲ. ಇತ್ತಾ ಹೆಣ್ಣಿನ ಹಾಗೇ ಇರೋಕೂ ಆಗ್ತಾ ಇಲ್ಲ. ಗಂಡಿನ ದೇಹ ಹೊತ್ತು, ಹೆಂಗಸಿನ ಮನಸು ಹೊಂದಿ ಈ ಸಮಾಜದಲ್ಲಿ ನಾವು ಅನುಭವಿಸುತ್ತಿರುವ ನೋವು ಅಷ್ಟಿಷ್ಟಲ್ಲ. ಎಲ್ಲರ ಹಾಗೆ ಸಹಜ ಜೀವನ ನಡೆಸಲು ಆಗದೆ ಈ ಸಮಾಜದಲ್ಲಿ ದಿನ ನಿತ್ಯ ಹೋರಾಟ ನಡೆಸುತ್ತಿದ್ದೇವೆ. ನಾವುಗಳು ಕೂಡ ನಿಮ್ಮೆಲ್ಲರ ಹಾಗೆ ಮನುಷ್ಯರು. ಅದರಲ್ಲೂ ಮನಸ್ಸು ಇರುವ ಮನುಷ್ಯರು. ನಮಗೂ ಬದುಕಲು ಬಿಡಿ,” ಎಂದರು.

ಇದನ್ನೆಲ್ಲ ಕೇಳಿ ನನಗೆ ತುಂಬ ನೋವಾಯಿತು. ಲೈಂಗಿಕತೆ ಮತ್ತು ಲೈಂಗಿಕ ಆಸಕ್ತಿ ಅನ್ನುವುದು ಬಹಳ ಸಂರ್ಕೀವಾದ ವಿಷಯ. ಗಂಡು ಹೆಣ್ಣಿನ ಪರಸ್ಪರ ಆಕರ್ಷಣೆ ಎಲ್ಲರಿಗೂ ತಿಳಿದ ವಿಷಯ, ಅಂತೆಯೇ ಸಲಿಂಗಿಗಳ ಪರಸ್ಪರ ಆಕರ್ಷಣೆಯೂ, ಅಸ್ತಿತ್ವದಲ್ಲಿರುವ ಸಂಗತಿಯೇ. ಹೇಗೆ ಎಲ್ಲಾ ಬಣ್ಣದ ಜನರು ಈ ಪ್ರಪಂಚದಲ್ಲಿ ಇದ್ದಾರೋ, ಹಾಗೇಯೇ ಜನರ ಲೈಂಗಿಕತೆಯೂ ಭಿನ್ನವಾಗಿ ಇರುವುದರಲ್ಲಿ ಆಶ್ಚರ್ಯವೇನು ಇಲ್ಲ. ಈ ಪುರುಷ ಪ್ರಧಾನ ಸಮಾಜದ ನಿರ್ಮಿತ ಮೌಲ್ಯಗಳನ್ನು ಬದಲಾಯಿಸಬೇಕು.

ಆದರೆ ಸುಪ್ರೀಂ ಕೋರ್ಟ್‌ನ ಈ ತೀರ್ಪು ಮಾತ್ರ ಪ್ರಜಾಪ್ರಭುತ್ವ ಪದ್ದತಿಯ ಸಮಾಜಕ್ಕೆ ಶೋಭೆ ತರುವಂತಹದಲ್ಲ.