12 Years a Slave – ಮೈಮನಗಳನ್ನು ಗಾಯಗೊಳಿಸುವ ಕಥಾನಕ

– ಬಿ. ಶ್ರೀಪಾದ ಭಟ್

2013 ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಬ್ರಿಟೀಶ್-ಅಮೇರಿಕನ್ ಹಾಲಿವುಡ್ ಸಿನಿಮಾ 12 Years a Slave ನಮ್ಮಲ್ಲಿ ಈ ತಿಂಗಳು ಬಿಡುಗಡೆಯಾಯ್ತು. 12-years-a-slave-book“Solomon Northup” ಬರೆದ “1853 Memoir” ಆತ್ಮಕಥೆಯನ್ನಾಧರಿಸಿ ಈ ಸಿನಿಮಾ ತಯಾರಾಗಿದೆ. ಇದರ ನಿರ್ದೇಶಕರು Steve McQueen. 1841 ರಲ್ಲಿ ಅಮೇರಿಕಾದಲ್ಲಿ ಜರಗುವ ಇದರ ಕತೆ ಸ್ಥೂಲವಾಗಿ ಹೀಗಿದೆ: Solomon Northup> (Chiwetel Ejiofor) ನ್ಯೂಯಾರ್ಕನ ನೀಗ್ರೋ ಪ್ರಜೆ. ಹೆಂಡತಿ ಮತ್ತು ಇಬ್ಬರು ಮಕ್ಕಳ ಸಂಸಾರ ಈತನದು. ವೃತ್ತಿಯಿಂದ ಕಾರ್ಪೆಂಟರ್ ಆಗಿರುವ ಈ ಸೋಲೋಮನ್‌ಗೆ ವಯೋಲಿನ್ ನುಡಿಸುವುದು ಒಂದು ಹವ್ಯಾಸ. ಒಂದು ದಿನ ಕೆಲವು ಆಗುಂತಕರು ಬಂದು ನಿನಗೆ ವಾಷಿಂಗ್ಟನ್‌ನಲ್ಲಿ ಏಳು ದಿನಗಳ ಕಾಲ ಸಂಗೀತಗಾರನ ಉದ್ಯೋಗವನ್ನು ಕೊಡಿಸುತ್ತೇವೆ ಎಂದು ನಂಬಿಸಿ ಸೋಲೋಮನ್‌ಗೆ ಮೋಸದಿಂದ ಮತ್ತು ಬರುವ ಔಷದಿಯನ್ನು ಕುಡಿಸುತ್ತಾರೆ. ಡ್ರಗ್‌ನ ಪ್ರಭಾವದಿಂದ ಚೇತರಿಸಿಕೊಂಡ ಸೋಲೋಮನ್ ಎಚ್ಚೆತ್ತಾಗ ಸರಪಳಿಯಲ್ಲಿ ಬಂಧಿತನಾಗಿರುತ್ತಾನೆ. ಜೀತದಾಳಾಗಿ ಸೋಲೋಮನ್ ಮಾರಾಟವಾಗಿರುತ್ತಾನೆ. ತನ್ನ ಊರಿನಲ್ಲಿ ಹೆಂಡತಿ ಮಕ್ಕಳೊಂದಿಗೆ ನೆಮ್ಮದಿಯಿಂದಿದ್ದ ನೀಗ್ರೋ ಸೋಲೋಮನ್‌ನನ್ನು ಕೆಲವೇ ನಿಮಿಷಗಳಲ್ಲಿ ಗಲೀಜಾದ ಸೆಲ್‌ನ ಗೋಡೆಗಳ ನೆರಳುಗಳಿಂದ ಆವೃತನಾಗಿ, ಸರಪಳಿಯಿಂದ ಬಂಧಿತನಾಗಿರುವುದನ್ನು ಕಂಡು ಸ್ವತಃ ಸೋಲೋಮನ್‌ನಂತೆಯೇ ಪ್ರೇಕ್ಷಕನೂ ಸಹ ಅಘಾತಗೊಳ್ಳುತ್ತಾನೆ. ಈ ದೃಶ್ಯದಲ್ಲಿ ಆತನನ್ನು ಜೀತದಾಳನ್ನಾಗಿಸಿದ ಅಪಹರಣಕಾರ ನೀಗ್ರೋ ಸೋಲೋಮನ್‌ನ ಮೇಲೆ ವಿನಾಕಾರಣ ಹಲ್ಲೆ ನಡೆಸುತ್ತಾನೆ. ಪ್ರಾಣಿಗಳಿಗಿಂತಲೂ ಹಿನಾಯವಾಗಿ ನಡೆಸಿಕೊಳ್ಳುತ್ತಾನೆ. (ಈ ಹಲ್ಲೆಯ ಕ್ರೌರ್ಯ ನಮ್ಮನ್ನು ಇಡೀ ಚಿತ್ರದುದ್ದಕ್ಕೂ ಕಾಡುತ್ತದೆ. ಬೆಚ್ಚಿಬೀಳಿಸುತ್ತದೆ. ಕರಿಯರ ಮೇಲಿನ ಹಿಂಸೆ ನಮ್ಮ ನರನಾಡಿಗಳನ್ನು ತಣ್ಣಗಾಗಿಸುತ್ತದೆ. ಚಿತ್ರಮಂದಿರದಿಂದ ಹೊರಬಂದ ನಂತರವೂ ನಮಗೆ ಈ ಹಿಂಸೆಯಿಂದ ಬಿಡುಗಡೆ ಸಿಗುವುದಿಲ್ಲ. ಇಲ್ಲಿ ನಿರ್ದೇಶಕ ನಮ್ಮನ್ನು ಕೇವಲ ಶಾಕ್‌ಗೊಳಿಸುವ ಉದ್ದೇಶದಿಂದ, ರೋಚಕತೆಗೋಸ್ಕರ ಹಿಂಸೆಯನ್ನು ಪರದೆಯ ಮೇಲೆ ಜಾಳು ಜಾಲಾಗಿ ಚೆಲ್ಲಾಡುವುದಿಲ್ಲ, ಬದಲಾಗಿ ನಮ್ಮಲ್ಲಿನ ಸವರ್ಣೀಯ ಜಾತಿಗಳು ತಳಸಮುದಾಯಗಳ ಮೇಲೆ ದಾಳಿ ನಡೆಸುವ ಹಾಗೆಯೇ 19ನೇ ಶತಮಾನದ ಪಶ್ಚಿಮ ರಾಷ್ಟ್ರಗಳು ಅದರಲ್ಲೂ ಅಮೇರಿಕಾ ಅತ್ಯಂತ ಅಸೂಕ್ಷ್ಮವಾಗಿ, ಫ್ಯೂಡಲ್ ಮನಸ್ಥಿತಿಯಿಂದ ವರ್ತಿಸಿದೆ ಎಂದು ಪ್ರೇಕ್ಷಕನ ಮುಂದೆ ಸೈದ್ಧಾಂತಿಕ ಬದ್ಧತೆಯಿಂದ, ವೈಚಾರಿಕತೆಯಿಂದ ಬಿಚ್ಚಿಡುತ್ತಾನೆ. ಇಲ್ಲಿ ಹಿಂಸೆಯ ವೈಭವೀಕರಣವಿಲ್ಲ, ಆದರೆ ಅದರ ಕ್ರೌರ್ಯ ನಮ್ಮನ್ನು ಅಲ್ಲಾಡಿಸಿಬಿಡುತ್ತದೆ.) ಜೀತದಾಳುಗಳ ವ್ಯಾಪಾರಿ ಫ್ರೀಮನ್ ಈತನಿಗೆ “ಪ್ಲಾಟ್” ಎಂದು ಮರುನಾಮಕರಣ ಮಾಡಿ ಲೂಸಿಯಾನಾದ ಪ್ಲಾಂಟೇಶನ್ ಮಾಲೀಕ ವಿಲಿಯಮ್ ಫೋರ್ಡಗೆ ಮಾರಾಟ ಮಾಡುತ್ತಾನೆ.

ಸೋಲೋಮನ್ ತನ್ನ ಸಜ್ಜನಿಕೆಯಿಂದ, ಕಾರ್ಪೆಂಟರ್ ವೃತ್ತಿಯ ಕುಶಲತೆಯಿಂದ ಪೋರ್ಡನ ಮೆಚ್ಚುಗೆ ಗಳಿಸುತ್ತಾನೆ, ಹಾಗೆಯೇ ಆತನಿಂದ ವೈಯೋಲಿನ್ ಅನ್ನು ಕಾಣಿಕೆಯಾಗಿ ಪಡೆಯುತ್ತಾನೆ. ಆದರೆ ಇಲ್ಲಿಯೂ ಸೋಲೋಮನ್‌ಗೆ ಕೆಟ್ಟದಿನಗಳು ಬೆನ್ನು ಹತ್ತುತ್ತವೆ. 12-years-a-slaveಇಲ್ಲಿ ಜನಾಂಗೀಯವಾದಿ ಕಾರ್ಪೆಂಟರ್ ಜಾನ್ ಟಿಬೇಟ್ಸ್ ಸೋಲೋಮನ್‌ನ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿರುತ್ತಾನೆ. ಈ ಟಿಬೇಟ್ಸ್ ಎನ್ನುವ ಜನಾಂಗೀಯವಾದಿ ಬಾಯಲ್ಲಿ ಕೋಳಿಯನ್ನು ಕಚ್ಚಿ ಹಿಡಿದು ಪೌಲ್ಟ್ರಿ ಫಾರ್ಮನಿಂದ ಹೊರ ಬರುವ ದೃಶ್ಯವೇ ನಮಗೆ ಆತನ ಕ್ರೌರ್ಯದ ಮನಸ್ಥಿತಿಯನ್ನು ಪರಿಚಯ ಮಾಡಿಕೊಡುತ್ತದೆ. ಆದರೆ ಧ್ರತಿಗಡೆದ ಸೋಲೋಮನ್ (ಫ್ಲಾಟ್) ತಿರುಗಿಬೀಳುತ್ತಾನೆ. ಪ್ರತಿರೋಧಿಸುತ್ತಾನೆ. ಕಡೆಗೆ ಮಾಲೀಕ ಫೋರ್ಡ ಸೋಲೋಮನ್‌ನನ್ನು ಈ ಲುಂಪೆನ್ ಗುಂಪಿಂದ ರಕ್ಷಿಸುತ್ತಾನೆ. ಆದರೆ ಬಹುದಿನಗಳ ಕಾಲ ಈ ಲುಂಪೆನ್ ಗುಂಪಿನಿಂದ ರಕ್ಷಿಸಲು ಸಾಧ್ಯವಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸುವ ಫೋರ್ಡ ಕಡೆಗೆ ಸೋಲೋಮನ್ ಅನ್ನು ಜೀವರಕ್ಷಣೆಯ ಸಲುವಾಗಿ ಮತ್ತೊಬ್ಬ ಫ್ಯೂಡಲಿಸ್ಟ್ ಎಡ್ವಿನ್ ಎಪ್ಸ್‌ಗೆ ಮಾರುತ್ತಾನೆ. ಈ ಎಪ್ಸ್ ಒಬ್ಬ ಸಾಡಿಸ್ಟ್, ವಿಕೃತವಾದಿ. ಕರಿಯರನ್ನು ಹಿಂಸಿಸುವುದು ತನ್ನ ಹಕ್ಕೆಂಬಂತೆ ವರ್ತಿಸುವ ಎಪ್ಸ್ ತನ್ನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕರಿಯ ಜೀತದಾಳು ದಿನಕ್ಕೆ ಕನಿಷ್ಟ 200 ಪೌಂಡ್ ಹತ್ತಿಯನ್ನು ಸಂಗ್ರಹಿಸಬೇಕೆಂದು ಆಜ್ಞೆ ವಿಧಿಸುತ್ತಾನೆ. ಕಡಿಮೆ ಸಂಗ್ರಹಿಸಿದರೆ ಹೊಡೆತಗಳು ಗ್ಯಾರಂಟಿ. ಹೆಣ್ಣು ಜೀತದಾಳು ’ಪೇಸ್ಟೆ’ (Lupita Nyong’o) ದಿನವೊಂದಕ್ಕೆ 500 ಪೌಂಡ್ ಹತ್ತಿಯನ್ನು ಸಂಗ್ರಹಿಸುತ್ತಾಳೆ. ಸಾಡಿಸ್ಟ್ ಏಪ್ಸ್‌ನ ಕಣ್ಣು ಈಕೆಯ ಮೇಲೆ ಬೀಳುತ್ತದೆ. ಈತನ ಕಾಮನೆಯ ಅತಿರೇಕ ಯಾವ ಮಟ್ಟದ್ದೆಂದರೆ ಪೇಸ್ಟೆಯನ್ನು ಕಾಮನೆಯಿಂದ ಹಿಂಸಿಸುವ ದೃಶ್ಯ ನಮ್ಮನ್ನು ಅಲ್ಲಾಡಿಸುತ್ತದೆ. ಅವಳ ಮೇಲೆ ಅತ್ಯಾಚಾರ ನಡೆಸುತ್ತಾನೆ. ಇಲ್ಲಿ ನಿರ್ದೇಶಕ Slavery and racism ಅನ್ನು ತೆರೆಯ ಮೇಲೆ ಬರೆಯುವಾಗ ಎಲ್ಲಿಯೂ ಕಪ್ಪುಬಿಳುಪಿನ ಮನಸ್ಥಿಯನ್ನು ತೋರಿಸುವುದಿಲ್ಲ. ಬದಲಾಗಿ ಇತಿಹಾಸದ ಪುಟಗಳು ತಂತಾನೆ ನೈಜವಾಗಿ ಹೊಸ ಭಾಷ್ಯೆಯೊಂದಿಗೆ ತೆರೆಯ ಮೇಲೆ ಮೂಡತೊಡಗುತ್ತವೆ. ಅಮೇರಿಕಾ ಇನ್ನು ಮುಂದೆ ಶತಮಾನಗಳ ಕಾಲದ ತನ್ನ ಗ್ಲುಲಾಮಗಿರಿ ಮತ್ತು ವರ್ಣಭೇದವನ್ನು ಮುಚ್ಚಿಟ್ಟುಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಇಲ್ಲಿ ಕಲಾವಂತಿಕೆ ಮತ್ತು ನೈಜತೆಯ ಸಂಯೋಜನೆ ಯಶಸ್ಸನ್ನು ಸಾಧಿಸಿದೆ. ಈ ಫ್ಯೂಡಲ್ ಏಪ್ಸ್ ಪ್ಲಾಂಟೇಶನ್‌ನಲ್ಲಿ ಹಬ್ಬುವ ಪ್ಲೇಗ್ ಮಾದರಿಯ ರೋಗಕ್ಕೆ ಈ Slaves ಕಾರಣವೆಂದು ನಿರ್ಧರಿಸಿ ಪಕ್ಕದ ಪ್ಲಾಂಟರ್‌ಗೆ ಲೀಸ್‌ನ ಮೇಲೆ ಮಾರಿಬಿಡುತ್ತಾನೆ. ಅಲ್ಲಿಯೂ ಸಹ ಸೋಲೋಮನ್ ತನ್ನ ಸರಳತೆ ಮತ್ತು ಕುಶಲತೆಯಿಂದ ಪ್ಲಾಂಟರ್‌ನ ವಿಶ್ವಾಸ ಗಳಿಸಿ ಈ ಪ್ಲಾಂಟರ್‌ನ ಶಿಫಾರಸ್ಸಿನ ಮೂಲಕ ಮದುವೆ ಮನೆಗಳಲ್ಲಿ ವಯೋಲಿನ್ ನುಡಿಸುವ ಅವಕಾಶ ಗಿಟ್ಟಿಸುತ್ತಾನೆ. ನಂತರದ ದೃಶ್ಯಗಳಲ್ಲಿ ಸೋಲೋಮನ್, ಪೇಟ್ಸೆ ಮರಳಿ ಏಪ್ಸ್‌ಗೆ ಮಾರಲ್ಪಡುವ, ಅಲ್ಲಿನ ದೌರ್ಜನ್ಯಗಳ ವಿವರಣೆಯಿದೆ. ಕಡೆಗೆ 12 ವರ್ಷಗಳ ಜೀತದಿಂದ ಮುಕ್ತಿಗೊಂಡು ಸೋಲೋಮನ್ 1853ರಲ್ಲಿ ಮರಳಿ ತನ್ನ ಹೆಂಡತಿ ಮಕ್ಕಳೊಂದಿಗೆ ಕೂಡಿಕೊಳ್ಳುತ್ತಾನೆ. ತನ್ನನ್ನು ಹಾಗೂ ಇತರೇ ನೀಗ್ರೋ ಜನರ ಮೇಲೆ ನಡೆ ದೌರ್ಜನ್ಯದ ವಿರುದ್ಧ ಕಾನೂನು ಸಮರ ನಡೆಸುವ ವಿಫಲ ಪ್ರಯತ್ನ ಮಾಡುತ್ತಾನೆ.

ಚಿತ್ರಕತೆಯಲ್ಲಿ ಹಿಡಿತವನ್ನು ಸಾಧಿಸಿರುವ ನಿರ್ದೇಶಕ ಸ್ಟೀವ್ ಮೆಕ್ವೀನ್ ನಿರೂಪಣೆಯಲ್ಲಿ ಆಧುನಿಕ ತಾಂತ್ರಿಕ ನೈಪುಣ್ಯತೆಯನ್ನು, ಅದು ಕಟ್ಟಿಕೊಡಬಹುದಾದ ಮನಮೋಹಕ ಸುವರ್ಣ ಚೌಕಟ್ಟನ್ನು ಸಂಪೂರ್ಣವಾಗಿ ತಿರಸ್ಕರಿಸಿ ನಮ್ಮ ಪರ್ಯಾಯ ಸಿನಿಮಾಗಳ ಕ್ಲಾಸಿಕ್ ಎನ್ನಬಹುದಾದ ತಂತ್ರವನ್ನು ಅನುಸರಿಸಿದ್ದಾನೆ. ಅಂದರೆ rawness ಅನ್ನು ಅದರ ಎಲ್ಲಾ ತಾಜಾತನದೊಂದಿಗೆ ಮನಮುಟ್ಟುವ ಕಥಾನಕವಾಗಿಸುತ್ತಾನೆ. (ಉದಾಹರಣೆ – ಗೋವಿಂದ ನಿಹಾಲನಿ ನಿದೇಶನದ ” ಆಕ್ರೋಶ್”, ಗೌತಮ್ ಘೋಷ್ ನಿರ್ದೇಶನದ “ಪಾರ್” ಸಿನಿಮಾಗಳು.) ಯಾರ ವಿರುದ್ಧವೂ ಆರೋಪದ, ಅಪಾದನೆಯ ಬೆರಳು ತೋರಿಸಲು ನಿರ್ದೇಶಕ ನಿರಾಕರಿಸುತ್ತಾನೆ. twelve-years-a-slave-michael-fassbenderಇಡೀ ಸಿನಿಮಾದ ಪಯಣವೇ ನಮ್ಮನ್ನು ಒಳಗೊಳ್ಳುತ್ತಾ, ಸಿನಿಮಾ ನೋಡುತ್ತಾ ಸೋಲೋಮನ್‌ನೊಂದಿಗೆ ಸ್ವಾತಂತ್ರ್ಯದ ಹುಡುಕಾಟದಲ್ಲಿ, ಬದುಕುವ ದಾರಿಗಾಗಿ ನಾವೂ ಪಯಣಿಸುತ್ತಿರುತ್ತೇವೆ.

ಸೋಲೋಮನ್ ಆಗಿ Ejiofor ನ ನಟನೆ ಅದ್ಭುತ. ಕರಿಯ ನೀಗ್ರೋನ ಪಾತ್ರವೇ ತಾನಾಗಿರುವ (ಭಕ್ತ ಕುಂಬಾರದಲ್ಲಿ ನಮ್ಮ ಡಾ.ರಾಜ್‌ರಂತೆ) ಇಜಿಯೋಫರ್‌ನ ನಟನೆಯ ಕುರಿತಾದ ಕಾಮನ್‌ಸೆನ್ಸ್ ನಮ್ಮನ್ನು ಚಕಿತಗೊಳಿಸುತ್ತದೆ. ಉದಾಹರಣೆಗೆ, ಅಪಹರಣಗೊಂಡು ಒಂದು ಪ್ಲಾಂಟೇಶನ್‌ನಿಂದ ಮತ್ತೊಂದು ಪ್ಲಾಂಟೇಶನ್‌ಗೆ ಮಾರಾಟಗೊಂಡು ಬೋಟಿನಲ್ಲಿ ಪಯಣಿಸುತ್ತಿದ್ದಾಗ ಈತನ ಜೊತೆಗಿರುವ ನೀಗ್ರೋ ಒಬ್ಬ “ನಾವು ಈ ಬಿಳಿಯ ಅಪಹರಣಕಾರರ ವಿರುದ್ಧ ಹೋರಾಡೋಣ” ಎನ್ನುತ್ತಾನೆ. ಮತ್ತೊಬ್ಬ ನೀಗ್ರೋ ಇದನ್ನು ತಿರಸ್ಕರಿಸಿ “ಹೋರಾಡಿ ಸಾಯುವುದು ಬದುಕುಳಿಯುವ ಲಕ್ಷಣವಲ್ಲ, ನಾವು ತಲೆತಗ್ಗಿಸಿ ಬದುಕಲೇಕು” ಎಂದು ವಾದಿಸಿದಾಗ ಇವರಿಬ್ಬರ ನಡುವೆ ಕುಳಿತಿದ್ದ ಸೋಲೋಮನ್ ಉದ್ಗರಿಸುತ್ತಾನೆ “You tell me all is lost?” For me, I don’t want to survive, I want to live.” ಇದೇ ಈ ಸಿನಿಮಾದ ಹೆಗ್ಗಳಿಕೆ. ಇಲ್ಲಿ ಮಾನವತಾವಾದ ಯಾವುದೇ ಚೀರುವಿಕೆಗಳಿಲ್ಲದೆ ಗೆಲ್ಲುತ್ತದೆ.

ಇನ್ನು ಸ್ಯಾಡಿಸ್ಟ್ ಜಮೀನ್ದಾರ ಎಪ್ಸ್ ಆಗಿ ನಟಿಸಿರುವ ಫಾಸ್‌ಬೆಂಡರ್ ನಮ್ಮನ್ನು ಅಲ್ಲಾಡಿಸಿಬಿಡುತ್ತಾನೆ. ದಶಕಗಳ ಕಾಲ, ಶತಮಾನಗಳ ಕಾಲ ಅಮೇರಿಕಾದ ಈ Slavery & Racism ನ ಇತಿಹಾಸವನ್ನು ತನ್ನ ನಟನೆಯ ಮೂಲಕ ನಮ್ಮ ಮುಂದೆ ಇಂಚಿಂಚೂ ಮಂಡಿಸುತ್ತಾನೆ. ಅನೇಕ ಕಡೆ ಫಾಸ್‌ಬೆಂಡರ್ ಅಮರೀಶ್‌ ಪುರಿಯ ಮೊಗ್ಯಾಂಬೋ ಶೈಲಿಗೆ ಜಿಗಿತ ಪಡೆದುಕೊಂಡು ನಿರ್ದೇಶಕನ ಸಾರ್ಥಕತೆಯನ್ನೇ, ಆಶಯಗಳನ್ನೇ ಮಣ್ಣುಗೂಡಿಸಿಬಿಡುತ್ತಾನಲ್ಲ ಎನ್ನುವ ಆತಂಕವುಂಟಾಗುವಷ್ಟರಲ್ಲಿ ಇದೇ ಫಾಸ್‌ಬೆಂಡರ್ ಇಡೀ ಚಿತ್ರದ ಗತಿಯನ್ನು ಮರಳಿ ಹಳಿಯ ಮೇಲೆ ತಂದು ನಿಲ್ಲಿಸುತ್ತಾನೆ. ಇದು ಈ ಸಿನಿಮಾದ ಮತ್ತೊಂದು ಗೆಲವು. ಕಡೆಗೆ ದೈಹಿಕವಾಗಿ, ಮಾನಸಿಕವಾಗಿ ಗಾಯಗೊಂಡ ಪ್ರೇಕ್ಷಕ ಚಿತ್ರಮಂದಿರದಿಂದ ಹೊರಬರುತ್ತಾನೆ

ಉತ್ತಮ ಸಿನಿಮಾ, ಶ್ರೇಷ್ಠ ನಾಯಕ ನಟ (Ejiofor), ಶ್ರೇಷ್ಠ ನಿರ್ದೇಶಕ (Steve McQueen), ಶ್ರೇಷ್ಠ ಪೋಷಕ ನಟ (Fassbender) ಜೊತೆಗೆ ಇನ್ನೂ ಇತರ ಕೆಲವು ವಿಭಾಗಗಳಲ್ಲಿ ಈ ಸಿನಿಮಾ ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡಿದೆ.

Leave a Reply

Your email address will not be published. Required fields are marked *