ಯಾರಿಗೆ ಬಂತು ಸ್ವಾತಂತ್ರ್ಯ? ಗಂಗೂರಿನ ದಲಿತರ ಪಾಲಿಗಂತೂ ಇಲ್ಲ!

– ಶುಕ್ಲಾಂ ಸಕಲೇಶಪುರ

ಪಬ್ಲಿಸಿಟಿ ಹುಚ್ಚಿಗಾಗಿ ದಲಿತರಿಗೆ ಕಟಿಂಗ್ ಮಾಡಲು ಬಂದವರು ಹಳೇಬೀಡು ಹತ್ತಿರದ ಗಂಗೂರಿನಲ್ಲಿ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ಏನೂ ತಪ್ಪಿಲ್ಲದ ಅಮಾಯಕ ಐದು ದಲಿತ ಯುವಕರು ಇಂದು ನ್ಯಾಯಾಂಗ ಬಂಧನದಲ್ಲಿದ್ದಾರೆ. ಕೆಲವು ಮಹಿಳೆಯರೂ ಸೇರಿದಂತೆ ಒಟ್ಟು 20 ಮಂದಿ ಕೇಸು ಎದುರಿಸುತ್ತಿದ್ದಾರೆ. Gangoor-1ಅವರ ವಿರುದ್ಧ ದಾಖಲಾಗಿರುವ ಆರೋಪಗಳು: ಅಕ್ರಮ ಕೂಟ (ಸೆ.143 ಭಾದಂಸ), ಧಾರ್ಮಿಕ ಭಾವನೆಗಳಿಗೆ ಧಕ್ಕೆ (ಸೆ.295ಎ, 298) ಮತ್ತು ಹೆಣ್ಣಿನ ಮಾನಭಂಗ ಯತ್ನ (ಸೆ.354). ಸಾಮೂಹಿಕ ಕ್ಷೌರ ಮಾಡಿ ಹೋದ ಮುತ್ತುರಾಜ ತಮ್ಮ ಮೊಬೈಲ್ ದೂರವಾಣಿಯ ಸ್ವಿಚ್ ಆಫ್ ಮಾಡಿಕೊಂಡು ಬಹುಶಃ ಬೆಂಗಳೂರಿನಲ್ಲಿ ಹಾಯಾಗಿದ್ದಾರೆ. ಆದರೆ ಅಮಾಯಕ ಹುಡುಗರು ಆಕ್ರೋಶದಿಂದ, ವಿಷಾದದಿಂದ, ಅತೀವ ನೋವಿನಿಂದ ಜೈಲಿನಲ್ಲಿ ದಿನ ತಳ್ಳುತ್ತಿದ್ದಾರೆ. ಆಗಿರುವ ಅವಮಾನ ತಾಳಲಾರದೆ, ಜೈಲಿನಲ್ಲಿಯೇ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ ಎಂಬ ಮಾಹಿತಿ ಇದೆ.

ಆಗಿದ್ದಿಷ್ಟು…

ಗಂಗೂರು ಹಳೇಬೀಡು ಹೋಬಳಿಯ ಹಳ್ಳಿ. ಅಲ್ಲಿ ಹತ್ತಿರ ಹತ್ತಿರ 500 ಕುಟುಂಬಗಳಿರಬಹುದು. ಐವತ್ತು ಕುಟಂಬಗಳು ದಲಿತರವು. ಉಳಿದವರು ಮೇಲ್ವರ್ಗದವರು. ಅದೇ ಊರಿನಲ್ಲಿ ಒಂದು ಕಟಿಂಗ್ ಶಾಪ್ ಇತ್ತು. ಮುಜರಾಯಿ ಇಲಾಖೆ ಪಟ್ಟಿಯಲ್ಲಿರುವ ರಂಗನಾಥ ಸ್ವಾಮಿ ದೇವಸ್ಥಾನವಿದೆ. ಹಲವು ವರ್ಷಗಳಿಂದ ನಡೆದುಬಂದಿರುವ ಕ್ರಮಗಳೇನೆಂದರೆ, ದಲಿತರಿಗೆ ಆ ದೇವಸ್ಥಾನಕ್ಕೆ ಪ್ರವೇಶವಿಲ್ಲ. ಕಟಿಂಗ್ ಶಾಪ್ ನಡೆಸುವ ಕ್ಷೌರಿಕ ಸಮುದಾಯದವರು, ದಲಿತರನ್ನು ಒಳ ಸೇರಿಸುವಂತಿಲ್ಲ. ವೈಯಕ್ತಿಕವಾಗಿ ಕ್ಷೌರಿಕನಿಗೆ ಆ ಬಗ್ಗೆ ವಿರೋಧವಿಲ್ಲ. ಆದರೆ ದಲಿತರನ್ನು ಸೇರಿಸಿದರೆ, ಸವರ್ಣೀಯರು ಅವನ ಬಳಿ ಬರುವುದಿಲ್ಲ ಎಂದು ತಾಕೀತು ಮಾಡಿದ್ದರು. ಆ ಕಾರಣ ಅವನು ದಲಿತರಿಗೆ ಕಟಿಂಗ್ ಮಾಡುತ್ತಿರಲಿಲ್ಲ. ಯುವಕರು ಪಕ್ಕದ ಊರಿಗೆ (ಸಾತೇನಹಳ್ಳಿ) ಹೋಗಿ ಕಟಿಂಗ್ ಅಥವಾ ಶೇವಿಂಗ್ ಮಾಡಿಸಿಕೊಂಡು ಬರುತ್ತಿದ್ದರು.

ಅಷ್ಟೇ ಅಲ್ಲ, ಈ ಊರಿನಲ್ಲಿ ದಲಿತರಿಗೆ ಸವಲತ್ತುಗಳು ಸಿಗುತ್ತಿಲ್ಲ. ವಿವಿಧ ಯೋಜನೆಗಳಲ್ಲಿ ಮನೆಗಳು ಮಂಜೂರಾದರೆ ಈ ಊರಿನ ದಲಿತರಿಗೆ ಸಿಗುತ್ತಿದ್ದದು ಬೆರಳೆಣಿಕೆಯಷ್ಟು. ನ್ಯಾಯಬೆಲೆ ಅಂಗಡಿಗೆ ಅಕ್ಕಿ, ಗೋಧಿ ತರಲು ಹೋದರೆ, ಅಲ್ಲಿರುವ ಸವರ್ಣೀಯರು ಭಿಕ್ಷೆ ಹಾಕುತ್ತಿರ ಧಿಮಾಕಿನಲ್ಲಿ ಗತ್ತು ತೋರಿಸುತ್ತಾರೆ. Gangoor-5ನಿಗದಿತ ದುಡ್ಡಿಗಿಂತ ಮೂವತ್ತು – ನಲವತ್ತು ರೂಪಾಯಿ ಕೇಳಿದರೂ ಕೊಡಬೇಕು. ಇಲ್ಲವಾದರೆ ಆ ತಿಂಗಳ ಪಡಿತರ ಇಲ್ಲ.

ಬಹಳ ವರ್ಷಗಳಿಂದ ಹೀಗೆ ನಡೆಯುತ್ತಿತ್ತು. ಇತ್ತೀಚೆಗಿನ ಜನರೇಷನ್‌ನ ಯುವಕರು ಒಂದಿಷ್ಟು ಕಲಿತವರು. ಬೇರೆ ಬೇರೆ ಊರುಗಳಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ದಲಿತರು ಅನುಭವಿಸುತ್ತಿರುವ ಅವಮಾನಗಳ ಬಗ್ಗೆ ಆಕ್ರೋಷ ಬೆಳೆಸಿಕೊಂಡಿದ್ದಾರೆ. ಅವರು ಸಂಬಳ ತಗೊಂಡು ಒಳ್ಳೆ ಅಂಗಿ-ಪ್ಯಾಂಟು ಹಾಕಿಕೊಂಡು ಊರಿಗೆ ಬಂದರೆ, ಮೇಲ್ವರ್ಗದವರು.. “ಏನು ಧಿಮಾಕು ನೋಡೋ ಈ ಹುಡುಗರಿಗೆ. ನಮ್ಮೆದುರಿಗೆ ಹೀಗೆ ಮೆರೆಯೋ ಹಂಗಾಗಿದ್ದಾರೆ..” ಎಂದು ಟೀಕಿಸಿದ್ದನ್ನು ಕೇಳಿಸಿಕೊಂಡಿದ್ದಾರೆ. ಅವರಲ್ಲಿ ಜಾಗೃತಿ ಮೂಡಿದಂತೆ ’ಅಂಬೇಡ್ಕರ ಯುವಕ ಸಂಘ’ ಎಂದು ಕಟ್ಟಿಕೊಂಡಿದ್ದಾರೆ. ಈಗ್ಗೆ ಕೆಲವು ದಿನಗಳ ಹಿಂದೆ ಹಾಸನ ಜಿಲ್ಲಾಧಿಕಾರಿಗೆ, ಸಮಾಜ ಕಲ್ಯಾಣ ಅಧಿಕಾರಿಗೆ, ಬೇಲೂರು ತಹಸೀಲ್ದಾರ್‌ಗೆ ಮನವಿ ಕೊಟ್ಟರು. ಊರಿನಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶ ಇಲ್ಲ. ಇಂತಹ ಜಾತಿ ಆಧಾರಿತ ತಾರತಮ್ಯಕ್ಕೆ ಅಂತ್ಯ ಹಾಡಿ ಎಂದು ಕೇಳಿಕೊಂಡರು.

ವಿಚಿತ್ರ ಎಂದರೆ ಈ ದೇವಸ್ಥಾನದ ಕಟ್ಟಡಕ್ಕೆ ಇದೇ ದಲಿತರು ತಮ್ಮ ಕೈಲಾದಷ್ಟು ಧನ ಸಹಾಯ ಮಾಡಿದ್ದಾರೆ. ಶ್ರಮದಾನ ಮಾಡಿದ್ದಾರೆ. ದಲಿತ ಯುವಕ ಶಿವಕುಮಾರ್‌ನ ಹಿರಿಯರು ಇದೇ ದೇವಾಲಯದ ಮುಖ್ಯದ್ವಾರಕ್ಕೆ ತಮ್ಮ ಜಮೀನನಲ್ಲಿದ್ದ ಹಲಸಿನ ಮರ ಕೊಡುಗೆಯಾಗಿ ನೀಡಿದ್ದಾರೆ. (ವಿಚಿತ್ರವೆಂದರೆ, ಅದೇ ಶಿವಕುಮಾರ್ ಇಂದು ಜೈಲಿನಲ್ಲಿದ್ದಾನೆ). ಆದರೂ ದಲಿತರಿಗೆ ಪ್ರವೇಶ ಇಲ್ಲ!

ಮನವಿಯ ಪರಿಣಾಮ ಬೇಲೂರಿನ ತಹಸೀಲ್ದಾರ್ ಗ್ರಾಮಕ್ಕೆ ಭೇಟಿ ನೀಡಿದರು. ದೇವಸ್ಥಾನಕ್ಕೆ ಪ್ರವೇಶ ನಿಷೇಧ ಜಾರಿಯಲ್ಲಿರುವುದು ಮನವರಿಕೆಯಾಯಿತು. ಕಟಿಂಗ್ ಶಾಪ್ ಮಾಲೀಕನನ್ನು ಮಾತನಾಡಿಸಿದರು. ದಲಿತರಿಗೆ ನೀನು ಪ್ರವೇಶ ಕೊಡದಿದ್ದರೆ, ನೀನು ಈ ವ್ಯವಹಾರ ಮಾಡುವಂತಿಲ್ಲ ಎಂದು ಆದೇಶ ನೀಡಿದರು. ಅದರಂತೆ, ಅವನ ಅಂಗಡಿಗೆ ಬೀಗ ಬಿತ್ತು.

ಇಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶ ಎಂದರೆ ದಲಿತ ಯುವಕರು ಎಲ್ಲಿಯೂ ಸಂಯಮ ಕಳೆದುಕೊಳ್ಳಲಿಲ್ಲ. Gangoor-2ಜಿಲ್ಲಾ ಆಡಳಿತಕ್ಕೆ ಮನವಿ ಕೊಟ್ಟು ಹದಿನೈದು ದಿನಗಳ ಕಾಲ ಕಾದರು. ಅವರು ಆತುರ ಮಾಡುವ ಉದ್ದೇಶ ಇದ್ದಿದ್ದರೆ, ಎಂದೋ ಕೆಲ ಸವರ್ಣೀಯರ ವಿರುದ್ಧ ಅಸ್ರೃಶ್ಯತಾ ನಿಷೇಧ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಿ ನ್ಯಾಯ ಕೇಳಬಹುದಿತ್ತು. ಆದರೆ ಊರಿನಲ್ಲಿ ಶಾಂತಿ ಕದಡಬಾರದು ಎಂಬ ಏಕೈಕ ಉದ್ದೇಶದಿಂದ ಅವರು ಹಾಗೆ ಮಾಡಲಿಲ್ಲ.

ಫೆಬ್ರವರಿ 10 ರಂದು ಜಿಲ್ಲಾಡಳಿತದ ಅಧಿಕಾರಿಗಳ ನೇತೃತ್ವದಲ್ಲಿ ದಲಿತರು ದೇವಸ್ಥಾನ ಪ್ರವೇಶಿಸಿದರು. ಆ ಮೂಲಕ ಹಲವು ವರ್ಷಗಳಿಂದ ಜಾರಿಯಲ್ಲಿದ್ದ ಅನಿಷ್ಟ ಪದ್ಧತಿಗೆ ಅಂತ್ಯ ಹಾಡಿದರು. ಇದೇ ಹೊತ್ತಲ್ಲಿ ಕೆಲ ಸವರ್ಣೀಯರಿಗೆ ಈ ಎಲ್ಲಾ ಬೆಳವಣಿಗೆಗಳಿಂದ ಬೇಸರವಿತ್ತು. ದೇವಾಲಯ ’ಅಪವಿತ್ರ’ ಆಯ್ತಲ್ಲೋ ಎಂದು ಕೆಲ ಮೇಲ್ವರ್ಗದ ಹೆಣ್ಣುಮಕ್ಕಳು ಕಣ್ಣೀರಿಟ್ಟರು. ಆದರೆ ಯಾರೂ ದಲಿತರ ಪ್ರವೇಶವನ್ನು ಪ್ರತಿಭಟಿಸುವ ಹಂತಕ್ಕೆ ಹೋಗಲಿಲ್ಲ.

ವಿವಾದ ಹುಟ್ಟಿದ್ದು…

ಈ ಎಲ್ಲಾ ಬೆಳವಣಿಗೆಗಳು ಸುದ್ದಿ ವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ ವಿಸ್ತೃತವಾಗಿ ವರದಿಯಾದವು. ಬೆಂಗಳೂರಿನ ಮುತ್ತುರಾಜ್ ರಾಜ್ಯಾದ್ಯಂತ ಹೆಸರಿರುವ ನಟ, ಕಲಾವಿದ, ಸವಿತಾ ಸಮಾಜದ ಮುಖಂಡ ಹಾಗೂ ಸೃಜನಶೀಲ ಕ್ಷೌರಿಕ. ಹಿರಿಯ ಸಾಹಿತಿ, ಕಲಾವಿದರನ್ನು ಸಂಪರ್ಕಿಸಿ ಅವರ ಹೇರ್ ಕಟ್ ಮಾಡುವ ಮೂಲಕ ಮಾಧ್ಯಮಗಳಲ್ಲಿ ಪ್ರಸಿದ್ಧಿ ಪಡೆದವರು. ಇವರ ಕಣ್ಣಿಗೆ ಗಂಗೂರಿನ ಬೆಳವಣಿಗೆಗಳು ಬಿದ್ದವು.

ಅವರು ಫೆ.11 ರ ಬೆಳಗ್ಗೆಯೇ ಹಾಸನಕ್ಕೆ ಆಗಮಿಸಿದರು. ತಮ್ಮ ವೃತ್ತಿಯ ಬಾಂಧವರನ್ನು ಸಂಪರ್ಕಿಸಿದರು. ಅದಕ್ಕಿಂತ ಉತ್ಸಾಹದಲ್ಲಿ ಪತ್ರಕರ್ತರನ್ನು ಸಂಪರ್ಕಿಸಿ ತಾನು ಗಂಗೂರಿಗೆ ಹೋಗಿ ದಲಿತರಿಗೆ ಕ್ಷೌರ ಮಾಡುತ್ತೇನೆ ಬನ್ನಿ ಎಂದು ಕರೆದರು. ಅಂತೆಯೇ ಊರು ತಲುಪಿದರು. Gangoor-3ದಲಿತ ಯುವಕರಿಗಾಗಿ ತಡಕಾಡಿದರು. ಸಿಕ್ಕವರು ಒಬ್ಬರೋ-ಇಬ್ಬರೋ ಅಷ್ಟೆ. ಆ ಹೊತ್ತಲ್ಲಿ ಊರಲ್ಲಿದ್ದ ಕೆಲವರು ಸಿಕ್ಕಿದ್ದಾರೆ ಅಷ್ಟೆ. ಆದರೆ ಮುತ್ತುರಾಜ್ ಸುಮ್ಮನಾಗಲಿಲ್ಲ. ಅದೇ ಊರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗಿದ್ದಾರೆ. ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಿ ಹುಡುಗರಿಗೆ ಕಟಿಂಗ್ ಮಾಡಲು ಅನುಮತಿ ಪಡೆದು ಹತ್ತು ಮಕ್ಕಳಿಗೆ ಕಟಿಂಗ್ ಮಾಡಿದ್ದಾರೆ. ಅವರಲ್ಲಿ ದಲಿತರು, ಸವರ್ಣೀಯರು ಇದ್ದರು. ಒಬ್ಬ ಹುಡುಗಿಯ ಕೂದಲನ್ನೂ ಕತ್ತರಿಸಿದ್ದಾರೆ.

ಈ ಘಟನೆ ಊರಿನ ಜನರಿಗೆ ಗೊತ್ತಾಗುತ್ತಿದ್ದಂತೆಯೇ ಪೋಷಕರು ಆಕ್ರೋಶದಿಂದ ಶಾಲೆಗೆ ಬಂದು ದಾಂಧಲೆ ನಡೆಸಿದರು. ಆ ಹೊತ್ತಿಗೆ ಮುತ್ತುರಾಜ್ ಅಂಡ್ ಗ್ಯಾಂಗ್ ಊರಲ್ಲಿರಲಿಲ್ಲ. ’ನಮ್ಮ ಹುಡುಗರ ಹೇರ್ ಕಟ್ ಮಾಡಿಸಲು ನಿಮಗೆ ಅನುಮತಿ ಕೊಟ್ಟವರಾರು..? ನಾವು ಧರ್ಮಸ್ಥಳಕ್ಕೆಂದು ಮುಡಿ ಬಿಡಿಸಿದ್ದೆವು. ಅದ್ಹೆಂಗೆ ಕಟ್ ಮಾಡಿಸಿದರಿ. ಇವತ್ತು ಮಂಗಳವಾರ ಬೇರೆ, ನಾವು ಮಂಗಳವಾರ ಹೇರ್ ಕಟ್ ಮಾಡಿಸೋಲ್ಲ..” – ರೊಚ್ಚಿಗೆದ್ದರು ಜನ. ಇಡೀ ಊರಿನ ಗ್ರಾಮಸ್ಥರೆಲ್ಲ ಶಾಲೆಯ ಆವರಣದಲ್ಲಿ ಜಮಾಯಿಸಿದರು. ಪ್ರತಿಭಟನೆ ಕಾವು ಏರುತ್ತಿತ್ತು. ಜಿಲ್ಲಾಧಿಕಾರಿ, ಎಸ್.ಪಿ. ಸಮಾಜ ಕಲ್ಯಾಣ ಅಧಿಕಾರಿ, ತಹಸೀಲ್ದಾರ್.. ಎಲ್ಲರೂ ಊರಿಗೆ ಹೋಗಬೇಕಾಯಿತು.

ದಲಿತರ ದೇವಾಲಯ ಪ್ರವೇಶದಿಂದ ಒಳಗೊಳಗೇ ಕ್ರುದ್ಧಗೊಂಡಿದ್ದ ಅವರಿಗೆ ತಮ್ಮ ಆಕ್ರೋಶವನ್ನು ಹೊರಹಾಕಲು ಅವಕಾಶ ಸಿಕ್ಕಿತು. ಶಾಲಾ ಆವರಣದಲ್ಲಿ, ವಿದ್ಯಾರ್ಥಿಗಳ ಹೇರ್ ಕಟ್ ಗೆ ಅವಕಾಶ ಮಾಡಿಕೊಟ್ಟ ಶಿಕ್ಷಕ ಆಕ್ರೋಶಕ್ಕೆ ಗುರಿಯಾದರು. ಶಿಕ್ಷಣ ಇಲಾಖೆಯ ಹಿರಿಯರು ಸ್ಥಳಕ್ಕೆ ಬರಬೇಕಾಯಿತು. ಇಷ್ಟಕ್ಕೆಲ್ಲಾ ಕಾರಣ ದಲಿತರ ಜೊತೆಗೂಡಿ ಸವರ್ಣೀಯ ಹುಡುಗ/ಹುಡುಗಿಯರ ಹೇರ್ ಕಟ್ ಮಾಡಿದ್ದು.

ರಾತ್ರಿ ಹತ್ತರವರೆಗೆ ಆಕ್ರೋಶಗೊಂಡಿದ್ದ ಪೋಷಕರನ್ನು ಸಮಾಧಾನಪಡಿಸಲು ಜಿಲ್ಲಾಧಿಕಾರಿ, ಎಸ್.ಪಿ ಹರಸಾಹಸ ಮಾಡಬೇಕಾಯಿತು. ಸಮಾಧಾನ ಪಡಿಸುವ ಕ್ರಮವಾಗಿ, ಹೇರ್ ಕಟ್ ಮಾಡಿಸಲು ಕಾರಣರಾದರು ಎಂಬ ಆರೋಪದ ಮೇಲೆ 20 ಜನರ ವಿರುದ್ಧ ದೂರು ದಾಖಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಆರೋಪಿ ನಂಬರ್ 1. ಇತರರ ಪೈಕಿ ಮುತ್ತುರಾಜ್ ಕೂಡ ಒಬ್ಬರು. ಉಳಿದ ಹದಿನೆಂಟು ಜನ ಊರ ದಲಿತರು. ಅವರ ಹೆಸರುಗಳನ್ನು ಕೊಟ್ಟಿದ್ದು ಆ ಊರಿನ ಸವರ್ಣೀಯರು. ಆ ಪಟ್ಟಿಯಲ್ಲಿ ದೇವಾಲಯ ಪ್ರವೇಶ ಪ್ರಕ್ರಿಯೆಯ ಮುಂದಾಳತ್ವ ವಹಿಸಿದ್ದ ಅನೇಕರಿದ್ದರು. ಅವರಲ್ಲಿ ಕೆಲವರು ಈ ಹೇರ್ ಕಟ್ ಪ್ರಸಂಗ ನಡೆದಾಗ ದೂರದ ಹಾಸನದಲ್ಲಿದ್ದರೂ, ಅವರ ಮೇಲೆ ಹೇರ್ ಕಟ್ ಮಾಡಿಸಲು ಪ್ರಚೋದನೆ ನೀಡಿದರು ಎಂದು ಆರೋಪಿಸಿ ದೂರು ದಾಖಲಾಗಿದೆ. ಉದ್ವಿಗ್ನಗೊಂಡಿದ್ದ ಹಳ್ಳಿಯ ಪರಿಸ್ಥಿತಿ ತಿಳಿಗೊಳಿಸಲು ಈ ಕ್ರಮ ಅನಿವಾರ್ಯವಾಗಿತ್ತು ಎಂದು ಜಿಲ್ಲಾಡಳಿತ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತದೆ, ಆದರೆ ಹಾಗಂತ ಅಮಾಯಕರನ್ನು ಜೈಲಿಗೆ ತಳ್ಳಿದ್ದು ಸರಿಯೆ?

ಮುತ್ತುರಾಜ್ ಇಲ್ಲಿ ಬಂದು ಸಾಧಿಸುವಂತದ್ದೇನೂ ಇರಲಿಲ್ಲ. ಕಾರಣ ಇಷ್ಟೆ. ಬೇರೆ ಊರಿನಿಂದ ಬಂದು ಒಂದು ದಿನದ ಮಟ್ಟಿಗೆ ಹೇರ್ ಕಟಿಂಗ್ ಮಾಡುವ ಮೂಲಕ ಬಗೆಹರಿಸುವಂತಹ ಸಮಸ್ಯೆ ಇದಾಗಿರಲಿಲ್ಲ. ಅದೇ ಊರಿನ ಕ್ಷೌರಿಕ ದಲಿತರಿಗೂ ಕ್ಷೌರ ಮಾಡಲು ಸಿದ್ಧನಿದ್ದರು. ಆದರೆ, ಅದಕ್ಕೆ ಮೇಲ್ವರ್ಗದವರ ವಿರೋಧವಿತ್ತು. ಆ ಕಾರಣ ಆತ ದಲಿತರಿಗೆ ಕಟಿಂಗ್ ಮಾಡುತ್ತಿರಲಿಲ್ಲ. ಮುಖ್ಯವಾಗಿ ಬದಲಾಗಬೇಕಿದ್ದು ಸವರ್ಣೀಯರ ಮನಸ್ಥಿತಿ, ಅವರ ಆಲೋಚನ ವಿಧಾನ. ಅಂತಹ ಪರಿಣಾಮಗಳಿಗೆ ಯಾವುದೇ ಪ್ರಯತ್ನ ಮಾಡದ ಮುತ್ತುರಾಜ್ ಏಕಾಏಕಿ ಶಾಲೆಯ ಆವರಣದಲ್ಲಿ ಕಟಿಂಗ್ ಮಾಡಿ ಸಾಧಿಸಿದ್ದೇನು? ಪ್ರಚಾರದ ಹುಚ್ಚು ಅಲ್ಲದೆ, ಅವರ ಉದ್ದೇಶದಲ್ಲಿ ಮತ್ತೇನೂ ಕಾಣುವುದಿಲ್ಲ. ಇಲ್ಲವಾದಲ್ಲಿ, ಸುದ್ದಿ ತಿಳಿದ ತಕ್ಷಣ ಮಾಧ್ಯಮ ತಂಡದೊಂದಿಗೆ ಆ ಹಳ್ಳಿಗೆ ಭೇಟಿ ಕೊಡುವುದರ ಅಗತ್ಯವೇನಿತ್ತು?

ಮುತ್ತುರಾಜ್ ತಮ್ಮ ಈ ಪ್ರಸಂಗದಿಂದ ಸವರ್ಣೀಯರು ತಮಗೆ ದಲಿತರ ಮೇಲಿದ್ದ ಆಕ್ರೋಶವನ್ನು ಪೊಲೀಸ್ ಕೇಸಿನ ಮೂಲಕ ವ್ಯಕ್ತಪಡಿಸಲು ಅವಕಾಶ ಮಾಡಿಕೊಟ್ಟರು. Gangoor-4ಇಂತಹದೊಂದು ಅವಕಾಶವನ್ನು ’ದುರುಪಯೋಗ’ ಮಾಡಿಕೊಂಡ ಅವರು ಆ ಪ್ರಸಂಗದ ವೇಳೆ ಆ ಊರಿನಲ್ಲಿ ಇಲ್ಲದಿದ್ದ ಹುಡುಗರ ಹೆಸರನ್ನು ಕೇಸಿನಲ್ಲಿ ದಾಖಲು ಮಾಡಿದರು. ಆ ಮೂಲಕ ’ದೇವಾಲಯ ಪ್ರವೇಶ’ ದ ಪ್ರಯತ್ನ ನಡೆಸಿದವರಿಗೆ ’ತಕ್ಕ ಪಾಠ’ ಕಲಿಸಿದ್ದೇವೆಂದು ಅವರು ಬೀಗುತ್ತಿರಬಹುದು!

ಶಾಂತಿ ನೆಲೆಸುವ ನೆಪ ಇಟ್ಟುಕೊಂಡು, ಮೇಲ್ವರ್ಗದವರು ಕೊಟ್ಟ ಹೆಸರುಗಳ ವಿರುದ್ಧ ಕೇಸು ದಾಖಲಿಸಿಕೊಂಡ ಪೊಲೀಸರು ಅವರ ಹಿಂದೆ ಬಿದ್ದಿದ್ದಾರೆ. ಇದುವರೆಗೆ ಆರು ಮಂದಿ ಅರೆಸ್ಟ್ ಆಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಉಳಿದವರನ್ನು ಸದ್ಯದಲ್ಲೇ ಬಂಧಿಸಿದರೂ ಅಚ್ಚರಿ ಇಲ್ಲ. ಪಟ್ಟಿಯಲ್ಲಿ ಇನ್ನೂ ಕೆಲವು ಮಹಿಳೆಯರಿದ್ದಾರೆ. ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾದ ಮುತ್ತುರಾಜ್ ದೂರದಲ್ಲೆಲ್ಲೋ ಹಾಯಾಗಿದ್ದಾರೆ.

ದಲಿತರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸಿದುದರ ಪರಿಣಾಮ ಇಷ್ಟೆಲ್ಲಾ ಎದುರಿಸಬೇಕಾಯಿತು. ಇಂತಹ ಘಟನೆಗಳು ಹಕ್ಕುಗಳಿಗೆ ಒತ್ತಾಯಿಸುವ ಎಷ್ಟೋ ದಲಿತರ ಉತ್ಸಾಹವನ್ನು ಬಾಡಿಸುತ್ತವೆ. ಈಗ ಆ ಊರಲ್ಲಿ, ಈ ಯುವಕರನ್ನು ಹಿರಿಯರು ಇದೇ ಕಾರಣಕ್ಕೆ ಬಯ್ಯುತ್ತಿದ್ದಾರೆ. ’ಇಷ್ಟು ದಿನ ನಾವು ಇರಲಿಲ್ಲವಾ, ಹಂಗೆ ಇರೋಕೆ ಇವರಿಗೇನು ಬಂದಿತ್ತು ಕಷ್ಟ. ಈಗ ಜೈಲಲ್ಲಿ ಕುಂತು ಅನುಭವಿಸುತ್ತಿದ್ದಾರೆ..” ಎಂದು ಮಾತನಾಡುತ್ತಿದ್ದಾರೆ. ಹಾಗಾದರೆ, ಆ ಅಮಾಯಕ ದಲಿತ ಹುಡುಗರು ಮಾಡಿದ್ದ ತಪ್ಪಾದರು ಏನು?

ದಲಿತ ಪರ ಇರುವ ಮನಸುಗಳಿಗೆ ಕಾಡುವ ಬಹು ಮುಖ್ಯ ಪ್ರಶ್ನೆ: ಯಾರೋ ಬಂದು ದಲಿತ ಹುಡುಗರ ಜೊತೆಯಾಗಿ ನಮ್ಮ ಹುಡುಗರ ಹೇರ್ ಕಟ್ ಮಾಡಿದರು ಎಂಬ ಕಾರಣಕ್ಕೆ ಅವಮಾನವಾಯಿತು ಎಂದು ರೊಚ್ಚಿಗೇಳುವ ಮೇಲ್ವರ್ಗದವರಿಗೆ, ಶತಶತಮಾನಗಳ ಕಾಲ ಅವಮಾನವನ್ನು ಉಂಡು, ಹೊದ್ದು, ಅನುಭವಿಸಿ ಬದುಕುತ್ತಿರುವ ದಲಿತರ ಬಗ್ಗೆ ಏನೂ ಅನ್ನಿಸುತ್ತಿಲ್ಲವೆ?

ತಮ್ಮ ಮಲ ಅವರು ಹೊತ್ತಾಗ, ತಮ್ಮ ಕೊಟ್ಟಿಗೆಯ ದನ ಸತ್ತಾಗ ಅವರು ಬಂದು ’ದೇವರ ಹೆಣ’ವನ್ನು ಊರಾಚೆಗೆ ಸಾಗಿಸಿದಾಗ, ಅವರು ನೀರು ಬೇಕೆಂದಾಗಲೆಲ್ಲ ಎರಡು ಅಡಿ ದೂರದಲ್ಲೇ ನಿಂತು ಮೇಲಿಂದ ಹುಯ್ದಾಗ, ತಮ್ಮ ಕಸವನ್ನು ಅವರು ಬಾಚಿದಾಗ, ಇಷ್ಟು ವರ್ಷಕಾಲ ಭೂಮಿಯ ಒಡೆತನ ಇಲ್ಲದೆ, ಶಿಕ್ಷಣ ಇಲ್ಲದೆ ವ್ಯಥೆ ಪಟ್ಟು ಇಂದಿಗೂ ಅಸ್ಪೃಶ್ಯರೇ ಆಗಿ ಉಳಿಸಿರುವ ಬಗ್ಗೆ ಒಂದು ಸಾರಿಯಾದರು ’ಅವಮಾನ’ ಆಗಲಿಲ್ಲವೇ ಈ ಮೇಲ್ವರ್ಗದವರಿಗೆ?

4 thoughts on “ಯಾರಿಗೆ ಬಂತು ಸ್ವಾತಂತ್ರ್ಯ? ಗಂಗೂರಿನ ದಲಿತರ ಪಾಲಿಗಂತೂ ಇಲ್ಲ!

  1. Ananda Prasad

    ಹಿಂದುಳಿದ ವರ್ಗದವರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಿರುವಾಗ ದಲಿತರ ಮೇಲೆ ಈ ರೀತಿಯ ದೌರ್ಜನ್ಯ ನಡೆಯುತ್ತಿರುವುದು ನಾಚಿಕೆಗೇಡು. ದಲಿತರ ಮೇಲೆ ವಿನಾಃ ಕಾರಣ ಕೇಸು ದಾಖಲಿಸಿ ಬಂಧಿಸುವುದರ ಹಿಂದೆ ಅಧಿಕಾರಶಾಹಿಯ ಮೇಲ್ವರ್ಗದ ಪರವಾದ ಮನೋಭಾವ ಕೆಲಸಮಾಡಿದೆ. ಮೇಲ್ವರ್ಗದವರ ಹಾಗೂ ಶೋಷಕರ ಪರ ಅಧಿಕಾರಶಾಹಿ ಮಾತ್ರವಲ್ಲ ದೇಶದ ನ್ಯಾಯಾಂಗ ವ್ಯವಸ್ಥೆಯೂ ನಿಂತಿದೆ ಎಂಬುದು ನ್ಯಾಯಾಲಯದ ಯಥಾಸ್ಥಿತಿವಾದವನ್ನು ಎತ್ತಿ ಹಿಡಿಯುವ ಕೆಲವು ತೀರ್ಪುಗಳಿಂದ ಕಂಡುಬರುತ್ತದೆ. ಇದಕ್ಕೆ ಕಾರಣ ನ್ಯಾಯಾಂಗ ವ್ಯವಸ್ಥೆಯಲ್ಲಿ ತುಂಬಿಕೊಂಡಿರುವ ಮೇಲ್ವರ್ಗದ ನ್ಯಾಯಾಧೀಶರುಗಳೇ ಆಗಿದ್ದಾರೆ. ಹೀಗಾಗಿ ಈ ದೇಶದಲ್ಲಿ ದಲಿತರಿಗೆ ನ್ಯಾಯ ಸಿಗುವುದು ಕನಸಿನ ಮಾತು. ಇಂದು ದೇಶದಲ್ಲಿ ಕಂಡುಬರುವ ನ್ಯಾಯಾಧೀಶರಿಗೆ ಬಡ ಜನರ, ದಲಿತರ, ಕೃಷಿಕರ, ಕಾರ್ಮಿಕರ ನೋವಿನ ಅರಿವು ಇಲ್ಲ. ಹೀಗಾಗಿ ನ್ಯಾಯಾಂಗದಿಂದ ಮೇಲ್ವರ್ಗದ, ಶ್ರೀಮಂತರ ಪರವಾದ ತೀರ್ಪುಗಳೇ ಹೆಚ್ಚಾಗಿ ಬರುತ್ತಿರುವುದನ್ನು ಕಾಣಬಹುದಾಗಿದೆ. ನ್ಯಾಯಾಧೀಶರುಗಳಿಗೆ ಸ್ವಾಮಿ ವಿವೇಕಾನಂದರ ಚಿಂತನೆಗಳ ಅರಿವು ಬಹಳ ಕಡಿಮೆ ಇದೆ/ಅಥವಾ ಇಲ್ಲವೆಂದರೂ ಸರಿ. ಹೀಗಾಗಿ ದೇಶದ ನ್ಯಾಯಾಧೀಶರುಗಳು ಬಹಳ ದೊಡ್ಡ ಸಂಬಳ ಎಣಿಸುತ್ತಾ ಯಥಾಸ್ಥಿತಿವಾದವನ್ನು ಎತ್ತಿ ಹಿಡಿಯುವ ತೀರ್ಪುಗಳನ್ನು ನೀಡಿ ಕೈತೊಳೆದುಕೊಳ್ಳುವುದು ಕಂಡುಬರುತ್ತದೆ.

    ದಲಿತರ ಮೇಲೆ ವಿನಾಃಕಾರಣ ಕೇಸು ದಾಖಲಿಸಿ ಬಂಧಿಸುತ್ತಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು. ದಲಿತರ ಮಕ್ಕಳ ಜೊತೆ ತಮ್ಮ ಮಕ್ಕಳ ಹೇರ್ಕಟ್ಟಿಂಗ್ ಮಾಡಿದ್ದು ಅಪರಾಧ ಎಂದು ಹೇಳುವ ಮೇಲ್ವರ್ಗದ ಜನ ಮನುಷ್ಯರೆಂದು ಹೇಳಲು ಅರ್ಹರಲ್ಲ. ಅವರೆಲ್ಲ ಅನಾಗರಿಕ ಕಾಡುಮನುಷ್ಯರೆಂದು ಹೇಳಬಹುದು

    Reply
    1. Anonymous

      ನನ್ನದೊಂದು ಪ್ರಶ್ನೆ ?
      1.ಈ ಎಲ್ಲಾ ಗೊಂದಲಗಳು, ಘಟನೆಗಳಿಗೆ, ಕಾರಣ ಯಾರು ?
      2. ಅಷ್ಟಕ್ಕೂ ಆ ಕಿರುತರೆ ನಟ ಮುತ್ತುರಾಜನನ್ನ ಕರೆಹಿಸಿದವವರಾರು ?
      3. ಅವನನ್ನು ಗಂಗೂರಿಗೆ ಕರೆತಂದು ವಿಚಾರಣೆ ಮಾಡಿದ್ರೆ.. ಅಪರಾಧಿ ಯಾರು ? ನಿರಪರಾಧಿ ಯಾರು ಎಂಬುದು ತಿಳಿಯುತ್ತದೆ.
      4. ಜೊತೆಗೆ ಈ ಘಟನೆಯ ಎಲ್ಲಾ ಮಜಲುಗಳು ಕೂಡಾ ಬಿಚ್ಚಿಕೊಳ್ಳುತ್ತವೆ.

      ಯಾರೋ ಒಬ್ಬರು ಮಾಡಿದ ತಪ್ಪಿಗೆ ಎಲ್ಲಾ ಮೇಲ್ವರ್ಗದ ಜನರು ಮನುಷ್ಯರಲ್ಲ ಎಂದೇಳುವುದು ತಪ್ಪು.
      1. ಹಾಸನದ ಹಾಸನಾಂಬೆ ದೇವಾಲಯಕ್ಕೆ ಎಲ್ಲಾ ಜನಾಂಗದ ಮಂದಿಗೂ ಅವಕಾಶವಿಲ್ಲವೇ ?
      2. ಬೆಂಗಳೂರಿನ ತಿರುಮಲ ದೇವಾಲಯದಲ್ಲಿ ಜಾತಿ-ಜನಾಂಗ ನೋಡಿ ಒಳಗೆ ಬಿಡುತ್ತಿದ್ದಾರೆಯೇ ?
      3. ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೂ ಕೂಡಾ ದಲಿತರಿಗೆ ಅವಕಾಶ ನೀಡಿಲ್ಲವೇ ?
      4.ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ತಿರುಪತಿ ದೇವಾಲಯ, ಹೀಗೆ ಎಲ್ಲಾಕಡೆಯಲ್ಲಿಯೂ ಕೂಡಾ ದೇವಾಲಯದಲ್ಲಿ ಅವಕಾಶವಿಲ್ಲವೇ ?
      5. ಹಳ್ಳಿಗಳಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರಾದಾಯ. ಹಾಗಾಗಿ ಕೆಲವು ದಲಿತರ ಸ್ನೇಹಿತರು, ಆತ್ಮಿಯರು ಇಂದಿಗೂ ಆ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿರುತ್ತಾರೆ ಅಷ್ಟೆ.
      6. ಚುನಾವಣೆ ಸಮೀಪಿಸುತ್ತಿರುವಾಗಿ ಕೆಲವು ರಾಜಕೀಯ ಪುಡಾರಿಗಳು ಹಿಂದೆ ನಿಂತುಕೊಂಡು ಅಮಾಯಕರುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅಂತಹ ಪುಂಡರನ್ನು ಮೊದಲು ಗುರುತಿಸಿ ಶಿಕ್ಷೆ ನೀಡಿ ಸ್ವಾಮಿ…..

      ದಲಿತರು ನಮ್ಮ ಹೇರ್ ಕಟಿಂಗ್ ಮಾಡಿದ್ರೆ ಅಪರಾಧವೆಂದು ಹೇಳುತ್ತಿರಲ್ಲ. ನಿಮ್ಮನ್ನ ನೀವೇ ಪ್ರಶ್ನೆ ಮಾಡಿಕೊಳ್ಳಿ.
      1. ಕಟಿಂಗ್ ಮಾಡಿಸಿಕೊಂಡ ಮೇಲೆ ನೀವು ಮನೆಗೆ ಹೋಗಿ ಸ್ನಾನ ಮಾಡುತ್ತೀರಾ ? ಯಾಕೆ ?
      2. ಮಂಗಳವಾರ ಕಟಿಂಗ್ ಶಾಪ್ ಮಾಲೀಕರು ಯಾವ ಕಾರಣಕ್ಕೂ ಮಂಗಳವಾರ ಕಟಿಂಗ್ ಶಾಪ್ ತೆರೆಯುವುದೇ ಇಲ್ಲ.

      Reply
      1. Ananda Prasad

        ಲೇಖನದಿಂದ ತಿಳಿದುಬರುವಂತೆ ಮುತ್ತುರಾಜರನ್ನು ಯಾರೂ ಕರೆದದ್ದು ಅಲ್ಲ. ಪತ್ರಿಕೆ, ಮಾಧ್ಯಮಗಳಲ್ಲಿ ಬಂದ ವರದಿ ನೋಡಿ ಅವರು ತಾವಾಗಿಯೇ ಗಂಗೂರಿಗೆ ಬಂದಿದ್ದಾರೆ ಹಾಗೂ ದಲಿತರ ತಲೆಕೂದಲು ಕತ್ತರಿಸುವ ಮೂಲಕ ಸಾಮಾಜಿಕ ಜಾಗೃತಿಗೆ ಪ್ರಯತ್ನಿಸಿದ್ದಾರೆ. ಇದರಲ್ಲಿ ಪ್ರಚಾರದ ಬಯಕೆಯೂ ಇದ್ದಿರಬಹುದು. ಮುತ್ತುರಾಜ್ ಅವರು ಶಾಲೆಗೆ ತೆರಳಿ ಕೆಲವು ದಲಿತ ಹುಡುಗರ ಜೊತೆ ಮೇಲ್ವರ್ಗದ ಹುಡುಗರ ಕೂದಲು ಕತ್ತರಿಸಿದ್ದು ಮಹಾಪರಾಧ ಎಂದು ಹೇಳುವ ಮೇಲ್ವರ್ಗದ ಕೆಲವರು ಮಾನವರೆನಿಸಿಕೊಲ್ಲಲು ಯೋಗ್ಯರಲ್ಲ. ಇಲ್ಲಿ ಅಂಥ ಮಹಾಪರಾಧವೇನೂ ಆಗಿಲ್ಲ. ದಲಿತ ಹುಡುಗರ ಜೊತೆ ಮೇಲ್ವರ್ಗದವರ ಕೂದಲು ಕತ್ತರಿಸಿದರೆ ಏಡ್ಸ್ ನಂಥ ಕಾಯಿಲೆಯೇನಾದರೂ ಹರಡುತ್ತದೆಯೇ? ಮತ್ಯಾಕೆ ಇಂಥ ಸಿಟ್ಟು ಹಾಗೂ ಆಕ್ರೋಶ? ಇದು ಇನ್ನೂ ಇವರು ನಾಗರಿಕತೆ ಬೆಳೆಸಿಕೊಂಡಿಲ್ಲ ಎಂಬುದನ್ನು ತೋರಿಸುತ್ತದೆ. ತನ್ನಂತೆ ಇತರರೂ ಮನುಷ್ಯರು ಎಂದು ತಿಳಿದುಕೊಳ್ಳದವರು ನಾಗರಿಕರೆನಿಸಿಕೊಳ್ಳಲು ಯೋಗ್ಯರೇ ಎಂಬುದು ಯೋಚಿಸಬೇಕಾದ ವಿಚಾರ. ಮಂಗಳವಾರ ಕೂದಲು ತೆಗೆಸಬಾರದು ಎಂಬ ಸಂಪ್ರದಾಯವಿದ್ದರೆ ಅಥವಾ ಕೂದಲು ಧರ್ಮಸ್ಥಳಕ್ಕೆ ಮುಡಿ ಬಿಟ್ಟಿದ್ದರೆ ಆ ಬಗ್ಗೆ ಕೂದಲು ತೆಗೆಸಿಕೊಂಡ ವಿದ್ಯಾರ್ಥಿಗಳು ಹೇಳಬೇಕಾಗಿತ್ತು, ಹೇಳಿದ್ದರೆ ಬಲವಂತವಾಗಿ ಮುತ್ತುರಾಜ್ ಕೂದಲು ಕತ್ತರಿಸುತ್ತಿರಲಿಲ್ಲ. ಈ ವಿಚಾರ ಹೇಳದೆ ಪರ ಊರಿನ ಮುತ್ತುರಾಜ್ ಅವರಿಗೆ ತಿಳಿಯಲು ಸಾಧ್ಯವಿಲ್ಲ. ಮುತ್ತುರಾಜ್ ಕೂದಲು ಕತ್ತರಿಸಿದ್ದಕ್ಕೆಗಂಗೂರಿನ ದಲಿತರ ಮೇಲೆ ಕೇಸು ಹಾಕಿ ಬಂಧಿಸುವುದು ಅನ್ಯಾಯ, ದೌರ್ಜನ್ಯ ಹಾಗೂ ದಬ್ಬಾಳಿಕೆಯ ಪರಮಾವಧಿ. ಇದನ್ನು ಯಾವುದೇ ನಾಗರೀಕ ಸಮಾಜ ಒಪ್ಪಲಾರದು, ಒಪ್ಪಲೂಬರದು.

        Reply

Leave a Reply

Your email address will not be published. Required fields are marked *