ಕಸಾಯಿ ಖಾನೆ ವಿರೋಧಿ ಹೋರಾಟದಲ್ಲಿ ಧರ್ಮಸೂಕ್ಷ್ಮ : ಎಚ್.ಎಸ್.ದೊರೆಸ್ವಾಮಿ

– ಎಚ್.ಎಸ್.ದೊರೆಸ್ವಾಮಿ

ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಹಾರೋಹಳ್ಳಿಯಲ್ಲಿ 400 ಎಕರೆ ಪ್ರದೇಶದಲ್ಲಿ ಕೈಗಾರಿಕಾ ನಗರವನ್ನು ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ ನೂರಾರು ಕಾರ್ಖಾನೆಗಳು ಈಗಾಗಲೆ ತಲೆ‌ಎತ್ತಿದ್ದು ಹತ್ತು ಸಾವಿರ ಜನ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕೈಗಾರಿಕಾ ನಗರದ ಮಧ್ಯೆ ಒಂದು ಸ್ವಯಂಚಾಲಿತ ಕಸಾಯಿ ಖಾನೆಯನ್ನು ಆರಂಭಿಸಲು harohalli-slaughter-house-areaಬೆಂಗಳೂರು ಮಹಾನಗರ ಪಾಲಿಕೆಯು ಕೆಐಎಡಿಬಿಯಿಂದ ಸುಮಾರು 40 ಎಕರೆ ಜಮೀನನ್ನು ಕ್ಯಾಪ್ರಿ ಮೀಟ್ ಹೌಸ್ ಪ್ರೈವೇಟ್ ಲಿಮಿಟೆಡ್ ಎನ್ನುವ ಖಾಸಗಿ ಕಂಪನಿಗೆ ಮಂಜೂರು ಮಾಡಿಸಿಕೊಟ್ಟಿದೆ.

ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರಿನ ತನ್ನ ವ್ಯಾಪ್ತಿಯಲ್ಲಿ ಈ ಕಸಾಯಿ ಖಾನೆಯನ್ನು ಕಟ್ಟುವುದನ್ನು ಬಿಟ್ಟು ತನ್ನ ವ್ಯಾಪ್ತಿಗೆ ಬರದ ಹಾರೋಹಳ್ಳಿಯಲ್ಲಿ ಈ ಕಸಾಯಿ ಖಾನೆಯನ್ನು ಕಟ್ಟಲು ಹೊರಟಿರುವುದು ಬೆಂಗಳೂರು ಶ್ರೀಮಂತರ ನಗರ, ಅದರ ಪ್ರಜೆಗಳ ಆರೋಗ್ಯ ಭಾಗ್ಯವನ್ನು ಕೆಡಿಸುವುದು ಬೇಡ, ಆದ್ದರಿಂದ ಈ ಅನಿಷ್ಠ ಕಸಾಯಿ ಖಾನೆಯನ್ನು ಹಾರೋಹಳ್ಳಿಯಲ್ಲಿ ಕಟ್ಟಿ ಅಲ್ಲಿಯ ಕಾರ್ಮಿಕರ ಮತ್ತು ಜನತೆಯ ಆರೋಗ್ಯವನ್ನು ಕೆಡಿಸುವ ಹುನ್ನಾರ ಮಾಡಲು ಹೊರಟಿದೆ.

ಈ ಕಸಾಯಿ ಕಾರ್ಖಾನೆ ಆರಂಭವಾಗುವುದೆಂಬ ಸುಳಿವು ಸಿಕ್ಕಿದ ದಿನದಿಂದ ಹಾರೋಹಳ್ಳಿಯ ಜನ ಇದರ sheep-at-slaughter-houseವಿರುದ್ಧ ದನಿ ಎತ್ತುತ್ತಲೇ ಇದ್ದಾರೆ. ನಾಲ್ಕಾರು ಸಾರಿ ಧರಣಿ ಸತ್ಯಾಗ್ರಹವನ್ನು ನಡೆಸಿ ತಮ್ಮ ಪ್ರತಿಭಟನೆಯನ್ನೂ, ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಸ್ವಯಂಚಾಲಿತ ಕಸಾಯಿ ಖಾನೆ ಸ್ಥಾಪಿಸಲು ಹೊರಟಿರುವ ಉದ್ಯಮಿಗಳು ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕೆಐಎಡಿಬಿ ವಿರುದ್ಧ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಖಟ್ಲೆ ಹೂಡಿದರು. ಹೈಕೋರ್ಟು, 10 ದಿನಗಳಲ್ಲಿ ಕೆಐಎಡಿಬಿ ಸಂಸ್ಥೆ ನೆಲವನ್ನು ಕಾರ್ಖಾನೆಯವರ ವಶಕ್ಕೆ ನೀಡಬೇಕೆಂದೂ, ಅವರು ಕಾಮಗಾರಿ ನಡೆಸಲು ಪೋಲೀಸ್ ರಕ್ಷಣೆಯನ್ನು ನೀಡಬೇಕೆಂದೂ ತೀರ್ಪಿತ್ತಿತು. ಈ ತೀರ್ಪು ಹೊರಬಿದ್ದು ಒಂದು ವರ್ಷವೇ ಕಳೆದಿದ್ದರೂ ಕೆಐಎಡಿಬಿಯು ಭೂಮಿಯನ್ನು ಹಸ್ತಾಂತರಿಸಿರಲಿಲ್ಲ. ಹಾರೋಹಳ್ಳಿ ಜನತೆಯ ಅವಿರತ ಹೋರಾಟವೇ ಈ ಪ್ರಕ್ರಿಯೆ ಕಾರ್ಯಗತವಾಗಲು ಅಡ್ಡಿಯಾಯಿತು.

ಈಗ ಇದ್ದಕ್ಕಿದ್ದಂತೆ ಬಿಬಿಎಂಪಿ, ಕೆಐಎಡಿಬಿ, ಮತ್ತು ಪೋಲೀಸರು ಮೈಕೊಡವಿಕೊಂಡು Workers process chickens at a slaughterhouse, Newmarket, Kolkata, India.ಎದ್ದು ಕಸಾಯಿ ಖಾನೆಯ ಕಾಮಗಾರಿ ಆರಂಭವಾಗಲು ನೆರವಾಗಿದ್ದಾರೆ. ಹತ್ತು ದಿನದ ಒಳಗಾಗಿ ಜಮೀನನ್ನು ಹಸ್ತಾಂತರಿಸಬೇಕೆಂದು ಮಾಡಿದ ಹೈಕೋರ್ಟ್ ಆಜ್ಞೆಯನ್ನು ನೆನೆಗುದಿಗೆ ಹಾಕಿದ್ದ ಈ ಮೊದಲು ಹೇಳಿದ ಸರ್ಕಾರಿ ಸಂಸ್ಥೆಗಳು ಇದ್ದಕ್ಕಿದ್ದಂತೆ ಒಂದು ವರ್ಷದ ನಂತರ ಕಾರ್ಯನಿರತವಾಗಿರುವುದನ್ನು ನೋಡಿದರೆ ಅನೀತಿಯುತ ವ್ಯವಹಾರಗಳು ಬಿಬಿಎಂಪಿ, ಕೆಐಎಡಿಬಿ, ಮತ್ತು ಕಸಾಯಿ ಖಾನೆ ನಿರ್ಮಾಪಕರ ಮಧ್ಯೆ ನಡೆದಿರಬಹುದೇ ಎಂಬ ಸಂಶಯ ಮೂಡುತ್ತದೆ.

ಹಾರೋಹಳ್ಳಿಯ ಜನತೆ ಈ ಪರಿಸ್ಥಿತಿಯಿಂದ ಕಂಗಾಲಾಗಿದ್ದಾರೆ. ಹೋರಾಟವನ್ನು ಮುಂದುವರೆಸುವುದು ಅನಿವಾರ್ಯ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಆದರೆ ಅವರನ್ನು ಈಗ ಧರ್ಮಸೂಕ್ಷ್ಮ ಕಾಡುತ್ತಿದೆ. ಚಳುವಳಿಯನ್ನು ಆರಂಭಿಸುವುದಾದರೆ ಹೈಕೋರ್ಟಿನ ತೀರ್ಮಾನ ಎದುರಾಗುತ್ತದೆ. ಹೋರಾಟ ಆರಂಭಿಸಿದರೆ ಕೋರ್ಟ್ ನಿಂದನೆ ಕಾರಣ ಒಡ್ಡಿ ಪೋಲೀಸರು ಕೋರ್ಟಿನ ಮೆಟ್ಟಲೇರಬಹುದು. ಹೈಕೋರ್ಟು ಜನ ಹೈಕೋರ್ಟ್ ಆಜ್ಞೆಯನ್ನು ಉಲ್ಲಂಘಿಸಿದ್ದಾರೆಂದು ಕೋರ್ಟ್ ನಿಂದನೆ ಆಪಾದನೆಗಾಗಿ ಸತ್ಯಾಗ್ರಹಿಗಳಿಗೆ ಶಿಕ್ಷೆ ವಿಧಿಸಬಹುದು.

ಸತಾಗ್ರಹ ಸಧ್ಯಕ್ಕೆ ಬೇಡ, ಹೈಕೋರ್ಟಿಗೆ ತಮ್ಮ ತೀರ್ಪನ್ನು ಪುನಃ ಪರಿಶೀಲಿಸಬೇಕೆಂದು ಅಪೀಲ್ ಹಾಕೋಣವೆಂದರೆ ಜನತೆಯ ವಿರುದ್ಧವಾದ ತೀರ್ಪು ಹೊರಬೀಳಬಹುದು. ಆ ಸಂದರ್ಭದಲ್ಲಿ ಚಳುವಳಿಯನ್ನು ಕೈಬಿಡುವುದು ಅನಿವಾರ್ಯ ಆಗಬಹುದು. ಅದರ ಫಲವಾಗಿ ಕಸಾಯಿ ಖಾನೆಯ ಕಾರ್ಯಾಚರಣೆ ಆರಂಭವಾಗಿ ಹಾರೋಹಳ್ಳಿ ಜನತೆಯ ಮತ್ತು ಕೈಗಾರಿಕಾ ನಗರದ ಹತ್ತಾರು ಸಾವಿರ ಜನರ ಆರೋಗ್ಯ ಕೆಟ್ಟು, ಅದರಿಂದ ಅನೇಕ ಸಾವುನೋವುಗಳು, ಖಾಯಿಲೆ ಕಸಾಯಲೆಗಳು ಈ ಅಮಾಯಯಕರನ್ನು ಕಾಡಬಹುದು.

ಈ ದ್ವಂದ ಪರಿಸ್ಥಿತಿಯಲ್ಲಿ ಹಾರೋಹಳ್ಳಿಯ ಜನ ಕೈಕಟ್ಟಿ ಕೂತುಕೊಂಡು ಆಗುವ ನೋವನ್ನು ಮೂಕಪ್ರೇಕ್ಷಕರಂತೆ ನೋಡುತ್ತಾ ಕೂಡಬೇಕೇ?

ಹೀಗಾಗಿ ಹಾರೋಹಳ್ಳಿಯ ಜನ ಎದುರಿಸುತ್ತಿರುವ ಸವಾಲು ಎಂದರೆ ಅವರು ತಮ್ಮ ಅಂತರಾತ್ಮ ಹೇಳಿದಂತೆ ಕೇಳಬೇಕೆ, ಇಲ್ಲವೇ ಕೋರ್ಟಿನ ಆಜ್ಞೆಯನ್ನು ಪಾಲಿಸಬೇಕೇ ಎಂಬುದು.

ಜನರ ಅಂತರಾತ್ಮ ಹಾರೋಹಳ್ಳಿಯ ಜನರ ಸ್ವಾಸ್ಥ್ಯ ಕೆಡಿಸುವ ಕಸಾಯಿ ಖಾನೆಯ ವಿರುದ್ಧ ದನಿKarnataka High Courtಎತ್ತುತ್ತೀಯಾ ಇಲ್ಲವೇ ಹೈಕೋರ್ಟಿನ ತೀರ್ಮಾನಕ್ಕೆ ತಲೆ ಬಾಗುತ್ತೀಯಾ ಎಂಬುದು. ಊರಿನ ಜನರ ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯವಾಗಿರುವುದರಿಂದ, ನ್ಯಾಯಾಲಯದ ತೀರ್ಪನ್ನು ಮೀರಿ ನಡೆಯುವುದು ಅನಿವಾರ್ಯವಾದೀತಲ್ಲವೇ ಎಂಬ ಯಕ್ಷಪ್ರಶ್ನೆ ಹಾರೋಹಳ್ಳಿಯ ಸತ್ಯಾಗ್ರಹಿಗಳನ್ನು ಇಂದು ಕಾಡುತ್ತಿದೆ.

ಇದು ಧರ್ಮಸೂಕ್ಷ್ನದ ವಿಚಾರ. ನಮ್ಮ ಧರ್ಮಗ್ರಂಥಗಳು ಹೇಳುತ್ತವೆ, ಇಂತಹ ಧರ್ಮಸೂಕ್ಷ್ಮಗಳು ನಮ್ಮನ್ನು ಎದುರಾದಾಗ ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕೆಂದು.

ಹಾರೋಹಳ್ಳಿಯ ನಾವು ಸತ್ಯಾಗ್ರಹಿಗಳು ಧರ್ಮಗ್ರಂಥಗಳು ತಿಳಿಸುವಂತೆ ನಮ್ಮ ಅಂತರಾತ್ಮ ಹೇಳುವ ರೀತಿ ನಡೆದುಕೊಳ್ಳಬೇಕಲ್ಲವೇ?

Leave a Reply

Your email address will not be published. Required fields are marked *