ಮತೀಯ ಅಲ್ಪಸಂಖ್ಯಾತರು : ಇಲ್ಲಿರುವುದು ಸುಮ್ಮನೆ, ಎಲ್ಲಿದೆ ನಮ್ಮನೆ?

– ಬಿ.ಶ್ರೀಪಾದ ಭಟ್

ತನ್ನ ದೇಶದ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುತ್ತದೆ ಎನ್ನುವುದರ ಮೇಲೆ ಆ ದೇಶವನ್ನು ಅರಿತುಕೊಳ್ಳಬಹುದು.

– ಮಹಾತ್ಮ ಗಾಂಧಿ

ಇಂಡಿಯಾದಲ್ಲಿ ಮುಸ್ಲಿಂ ಸಮುದಾಯದ ಐಡೆಂಟಿಟಿ, ಪ್ರಶ್ನೆಗಳನ್ನು ಎತ್ತಿಕೊಂಡು ಆ ಮೂಲಕ ಬಹು ಸಂಸ್ಕೃತಿ, ಪ್ರಜಾಪ್ರಭುತ್ವ, ಮತ್ತು ಜಾಗತಿಕ ಪ್ರಜಾಪ್ರಭುತ್ವದೊಂದಿಗೆ ಇಂಡಿಯಾದ ಹೋಲಿಕೆ ಗಳಂತಹ ಮುಖ್ಯ ಸಂಗತಿಗಳನ್ನು ಜೋಯಾ ಹಸನ್, ಅನ್ವರ್ ಆಲಮ್, ಬಾಜಪೇಯಿ, ಬಸರೂರು, ಮಹಾಜನ್ ಮತ್ತು ಜೋಡ್ಕ, ವೋರ ಮತ್ತು ಪಲ್ಶೀಕರ್ ರಂತಹ ಸಂಶೋದಕರು, ಚಿಂತಕರು ಎಣೆಯಿಲ್ಲದಷ್ಟು ಅಧ್ಯಯನ ಮಾಡಿದ್ದಾರೆ, ಬರೆದಿದ್ದಾರೆ. 2006ರಲ್ಲಿ ಸಾರ್ವಜನಿಕವಾಗಿ ಮಂಡಿತವಾದ ಸಾಚಾರ್ ಕಮಿಟಿ (ಇಂಡಿಯಾದಲ್ಲಿ ಮುಸ್ಲಿಂ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಅಧ್ಯಯನದ ಕುರಿತು ಪ್ರಧಾನಮಂತ್ರಿಗಳ ಉನ್ನತ ಮಟ್ಟದ ಕಮಿಟಿ), 2006ರಲ್ಲಿ ಮಂಡಿತವಾದ ರಂಗನಾಥ್ ಮಿಶ್ರ ಕಮಿಟಿ (ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ರಾಷ್ಟ್ರೀಯ ಕಮಿಟಿಯ ವರದಿ) muslim-womanಎನ್ನುವ ಎರಡು ವರದಿಗಳು ಸ್ವಾತಂತ್ರಾನಂತರ ಮುಸ್ಲಿಂ ಸಮುದಾಯದ ಮತ್ತು ಇತರೇ ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ಅತ್ಯಂತ ವೈಜ್ಞಾನಿಕ, ಅಥೆಂಟಿಕ್ ಆದ ಅಧಿಕೃತ ಸಂಶೋಧನೆಗಳು ಎಂದೇ ಪರಿಗಣಿಸಲ್ಪಡುತ್ತದೆ. ಮುಸ್ಲಿಂ ಸಮುದಾಯವು ತಾರತಮ್ಯ ನೀತಿ, ಪ್ರತ್ಯೇಕತೆಯ ತತ್ವಗಳಿಗೆ ಬಲಿಯಾಗಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಸಮುದಾಯವೆಂದು ಈ ಕಮಿಟಿಗಳ ಸಂಶೋಧನೆಯು ವಿವರಿಸುತ್ತದೆ. ಭಾರತ ಸಂವಿಧಾನದ 3ನೇ ಅನುಚ್ಛೇದದಲ್ಲಿ ಮೂಲಭೂತ ಹಕ್ಕುಗಳ ಅಡಿಯಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕವಾಗಿ ಅಲ್ಪಸಂಖ್ಯಾತರಿಗೆ ವಿಶೇಷ ಹಕ್ಕುಗಳನ್ನು ಕಲ್ಪಿಸಲಾಗಿದೆ. ಮುಸ್ಲಿಂರನ್ನು ಒಳಗೊಂಡಂತೆ ಎಲ್ಲಾ ಅಲ್ಪಸಂಖ್ಯಾತರಿಗೆ ಭಾರತದ ಸಂವಿಧಾನವು ಘನತೆ ಮತ್ತು ಸಮಾನತೆಯನ್ನು ಕಲ್ಪಿಸುವ ಮತ್ತು ಅದನ್ನು ಕಾಪಾಡುವ ಜವಾಬ್ದಾರಿಯನ್ನು ಚುನಾಯಿತ ಸರ್ಕಾರ ಮೇಲಿದೆ ಎಂದು ಸ್ಪಷ್ಟವಾಗಿ ಹೇಳಿದೆ.

ಅಲ್ಪಸಂಖ್ಯಾತ ಸಮುದಾಯಗಳಿಗೆ ಭಾರತದ ಸಂವಿಧಾನದ ಅಡಿಯಲ್ಲಿ ಕಲ್ಪಿಸಲಾಗಿರುವ ಕೆಲವು ಪ್ರಮುಖ ಅವಕಾಶಗಳು:

  1. ಕಲಮು 14 : ಕಾನೂನಿನ ಮುಂದೆ ಎಲ್ಲರೂ ಸಮಾನರು ಮತ್ತು ಕಾನೂನು ಸಹ ಸಮಾನ ರಕ್ಷಣೆಯನ್ನು ಕೊಡಬೇಕು
  2. ಕಲಮು 15 : ಧರ್ಮ, ಬಣ್ಣ, ಲಿಂಗ, ಜಾತಿ, ಪ್ರಾದೇಶಿಕ ಆಧಾರಧ ಮೇಲೆ ತಾರತಮ್ಯ ನೀತಿ ಆಚರಿಸುವುದನ್ನು ನಿಷೇಧಿಸಲಾಗಿದೆ
  3. ಕಲಮು 25 : ಪ್ರತಿಯೊಬ್ಬ ನಾಗರಿಕ (ಪುರುಷ ಮತ್ತು ಮಹಿಳೆ)ಗೂ ಧಾರ್ಮಿಕ ಆಚರಣೆಯ ಸ್ವಾತಂತ್ರವನ್ನು ಕೊಡಲಾಗಿದೆ
  4. ಕಲಮು 29 : ಅಲ್ಪ ಸಂಖ್ಯಾತರು ತಮ್ಮ ಭಾಷೆ, ಲಿಪಿ, ಸಂಸ್ಕೃತಿಯನ್ನು ಕಾಪಾಡಿಕೊಳ್ಳುವ ಹಕ್ಕನ್ನು ಕೊಡಲಾಗಿದೆ

1948 ರಲ್ಲಿ ಜಾಗತಿಕ ಮಟ್ಟದಲ್ಲಿ “ಘನತೆ ಮತ್ತು ಹಕ್ಕುಗಳ ನೆಲೆಯಲ್ಲಿ ಎಲ್ಲ ನಾಗರಿಕರೂ ಸಮಾನರು” ಎಂದು ಘೋಷಿಸಲಾಗಿದೆ. 1992 ರಲ್ಲಿ ವಿಶ್ವಸಂಸ್ಥೆಯ ಘೋಷಣೆಯಲ್ಲಿ “ಅಲ್ಪಸಂಖ್ಯಾತರ ಆಸ್ತಿತ್ವ ಮತ್ತು ಐಡೆಂಟಿಟಿಯನ್ನು ಕಾಪಾಡುವ ಜವಾಬ್ದಾರಿ ಆಯಾ ಸರ್ಕಾರಗಳ ಮೇಲಿದೆ ಮತ್ತು ಅವರ ಜೀವನ ಮಟ್ಟವನ್ನು ಉತ್ತಮಗೊಳಿಸುವ ಜವಾಬ್ದಾರಿಯೂ ಸರ್ಕಾರಗಳ ಮೇಲಿದೆ” ಎಂದು ಘೋಷಿಸಲಾಗಿದೆ.

ಇಂಡಿಯಾದ ಮುಸ್ಲಿಂ ಸಮುದಾಯದಲ್ಲಿ ಶೇಕಡಾ 47 ರಷ್ಟು ಮಹಿಳೆಯರು ಮತ್ತು ಶೇಕಡಾ 35 ರಷ್ಟುಚಿತ್ರಕೃಪೆ: ಗಾರ್ಡಿಯನ್ಪುರುಷರು ಅನಕ್ಷರಸ್ತರು. ಶೇಕಡಾ 23 ರಷ್ಟು ಬಾಲಕಿಯರು, ಶೇಕಡಾ 19 ರಷ್ಟು ಬಾಲಕರು ಶಾಲೆಯಿಂದ ಹೊರ ಉಳಿದಿದ್ದಾರೆ. ಶೇಕಡಾ 50 ರಷ್ಟು ಮುಸ್ಲಿಂ ಮನೆಗಳಲ್ಲಿ ಶೌಚಾಲಯ ಸೌಲಭ್ಯವಿಲ್ಲ. ಶೇಕಡಾ 100 ರಷ್ಟು ಮುಸ್ಲಿಂರಿಗೆ ಈ ದೇಶದ ಸಂವಿಧಾನತ್ಮಕವಾದ ಸಮಾನತೆ, ಘನತೆ, ನಾಗರಿಕ ಹಕ್ಕುಗಳನ್ನು ನಿರಾಕರಿಸಲಾಗಿದೆ. ಮುಕ್ತ ಆರ್ಥಿಕ ನೀತಿ ಮತ್ತು ನವ ಉದಾರೀಕರಣದ ಭಾರತದಲ್ಲಿ ಮುಸ್ಲಿಂರು ಮುಖ್ಯವಾಹಿನಿಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ.

ಯಾವುದೇ ಆರ್ಥಿಕ ನೀತಿಗಳು ಮುಸ್ಲಿಂ ಸಮುದಾಯಕ್ಕೆ ಒಳಗೊಳ್ಳುವಿಕೆಯ ಸ್ಪೇಸ್ ಅನ್ನು ಕೊಡಲೇ ಇಲ್ಲ. ಆದರೆ ಕಳೆದ ಅರವತ್ತು ವರ್ಷಗಳಲ್ಲಿನ ಇಂಡಿಯಾದ ರಾಜಕೀಯ, ಸಾಮಾಜಿಕ ವರ್ತನೆಗಳನ್ನು ಅಧ್ಯಯನ ಮಾಡಿದಾಗ ಅಲ್ಪಸಂಖ್ಯಾತರ ಸಂವಿಧಾನಿಕ ಹಕ್ಕುಗಳನ್ನು ಶ್ರೇಣೀಕರಣಗೊಳಿಸಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಅವರ ಬದುಕುವ ಕ್ರಮ ಮತ್ತು ಹಕ್ಕನ್ನು ವರ್ಗೀಕರಿಸಲಾಗಿದೆ. ಈ ವರ್ಗೀಕರಣದಲ್ಲಿ ಮುಸ್ಲಿಂ ಸಮುದಾಯವನ್ನು ಅನ್ಯರನ್ನಾಗಿ ವರ್ಗೀಕರಿಸಿ ಅವರಿಗೆ ಎಲ್ಲಾ ಬಗೆಯ ಸಂವಿಧಾನಿಕ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಲಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ತಂದುಕೊಡುವುದರ ಮೂಲಕ ಭದ್ರತೆಯನ್ನು ಕಲ್ಪಿಸಿಕೊಡಬೇಕಾದ ಸರ್ಕಾರಗಳು ಕಳೆದ 60 ವರ್ಷಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಅಭದ್ರತೆ, ಅಸಹಾಯಕತೆ, ಬಿಕ್ಕಟ್ಟುಗಳನ್ನು ಕೊಡುಗೆಯಾಗಿ ನೀಡಿವೆ. ಇದರ ಎಲ್ಲಾ ಸಂಗತಿಗಳನ್ನು ಸಾಚಾರ್ ಮತ್ತು ರಂಗನಾಥ್ ಮಿಶ್ರ ಕಮಿಷನ್ ನಲ್ಲಿ ವಿವರಿಸಲಾಗಿದೆ. ರಂಗನಾಥ್ ಮಿಶ್ರ ಕಮಿಷನ್ ಅಲ್ಪಸಂಖ್ಯಾತ ಸಮುದಾಯಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹುದ್ದೆಯಲ್ಲಿ ಶೇಕಡಾ 15 ರಷ್ಟು ಮೀಸಲಾತಿಯನ್ನು ಕಲ್ಪಿಸಬೇಕು. ಅದರಲ್ಲಿ ಶೇಕಡ 10 ಮುಸ್ಲಿಂ ಸಮುದಾಯಕ್ಕೆ ಕಲ್ಪಿಸಬೇಕು ಎಂದು ಶಿಫಾರಸ್ಸು ಮಾಡಿದೆ.

“ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಂರಿಗೆ ಧಾರ್ಮಿಕ ಸ್ವಾತಂತ್ರವನ್ನು ಕೊಡಲಾಗಿದ್ದರೂ ಅವರ ಪ್ರಾತಿನಿಧ್ಯದಲ್ಲಿ ಯಾವುದೇ ಸುರಕ್ಷತೆಯನ್ನು ಒದಗಿಸಿಲ್ಲ, ಏಕೆಂದರೆ ಮುಸ್ಲಿಂರು ಗತಕಾಲದಲ್ಲಿ ಅನ್ಯಾಯವನ್ನು ಅನುಭವಿಸಿಲ್ಲ, ಅದಕ್ಕೇ ಎಂದು ಷರಾ ಬರೆಯಲಾಗಿದೆ” Gujarat_muslimಎಂದು ಚಿಂತಕಿ ಜೋಯಾ ಹಸನ್ ಹೇಳುತ್ತಾರೆ. ಹೀಗಾಗಿ ಅವಶ್ಯಕವಾದ ಸಮಾನ ಅವಕಾಶಗಳು ಮುಸ್ಲಿಂ ಸಮುದಾಯಗಳನ್ನು ಒಳಗೊಳ್ಳುವಂತೆ ಸಮಾನವಾಗಿ ಹಂಚಿಕೆ ಆಗಲೇ ಇಲ್ಲ. ಮುಸ್ಲಿಂರಿಗೆ ಈ ಒಳಗೊಳ್ಳುವಿಕೆಯನ್ನು ನಿರಾಕರಿಸಲು ಸಂಘ ಪರಿವಾರಕ್ಕೆ ಅವರು ಇತರೇ ಧರ್ಮದವರು ಮತ್ತು ಪರಕೀಯರು ಎನ್ನುವ ಧೋರಣೆಗಳು ಕಾರಣವಾಗಿದ್ದರೆ ಇತರೇ ರಾಜಕೀಯ ಪಕ್ಷಗಳಿಗೆ ಈ ಒಳಗೊಳ್ಳುವಿಕೆ ಅವಶ್ಯಕ ಎಂದು ಅನಿಸಿಯೇ ಇಲ್ಲ.

ಸ್ವತಂತ್ರ ಬಂದು ಅರವತ್ತೇಳು ವರ್ಷಗಳ ನಂತರವೂ ಸಾಮಾಜಿಕ-ಆರ್ಥಿಕ ಸ್ವಾವಲಂಬನೆ ಮತ್ತು ಮೂಲಭೂತ ಅವಶ್ಯಕತೆಗಳಿಗೆ, ಘನತೆಯುಕ್ತ ಬದುಕಿಗೆ ಹಕ್ಕುದಾರರೆಂದು ಮುಸ್ಲಿಂ ಸಮುದಾಯವನ್ನು ಮಾನ್ಯತೆಯನ್ನು ಸಹ ಮಾಡಲಾಗಿಲ್ಲ. ಅವರಿಗೆ ಸಂವಿಧಾನಿಕವಾದ ನ್ಯಾಯಸಮ್ಮತ ಹಕ್ಕನ್ನು ನಿರಾಕರಿಸಲಾಗಿದೆ. ಮುಸ್ಲಿಂರು ಧರ್ಮ ಮತ್ತು ಬಡತನದ ಆಧಾರದಲ್ಲಿ ಡಬಲ್ ತಾರತಮ್ಯಕ್ಕೆ ಒಳಗಾಗಿದ್ದಾರೆ ಎಂದು ಸಾಚಾರ್ ಕಮಿಟಿಯಲ್ಲಿ ಹೇಳಿದ್ದಾರೆ.

1947 ರಿಂದ 2013 ರವರೆಗಿನ ತನ್ನ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತರ ಮಂತ್ರಿ, ಅಲ್ಪಸಂಖ್ಯಾತರ ರಾಷ್ಟ್ರೀಯ ಕಮಿಷನ್, ಅಲ್ಪಸಂಖ್ಯಾತರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಕಮಿಷನ್, 2006 ರಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 15 ಅಂಶಗಳ ಕಾರ್ಯಕ್ರಮ ಹೀಗೆ ಹಲವಾರು ಯೋಜನೆಗಳನ್ನು ಮತ್ತು ಸಂವಿಧಾನಿಕ ಅವಕಾಶಗಳನ್ನು ರೂಪಿಸಿದೆ. ಆದರೆ ಈ ಎಲ್ಲಾ ಮಂತ್ರಾಲಯಗಳು, ಕಮಿಟಿಗಳ ಚಿಂತನೆಗಳಲ್ಲಿ ಅಲ್ಪಸಂಖ್ಯಾತರಲ್ಲಿ ಬರುವ ಮುಸ್ಲಿಂರನ್ನು ಶ್ರೇಣೀಕರಣಕೊಳ್ಳಪಡಿಸಿ ಅವರನ್ನು ಕೆಳಹಂತದಲ್ಲಿ ನಿಲ್ಲಿಸಲಾಗಿದೆ. ಇಂದಿಗೂ ರಾಜ್ಯ ಸರ್ಕಾರಗಳು ಮುಸ್ಲಿಂರನ್ನು “ಹಿಂದುಳಿದ ವರ್ಗಗಳು” ಎಂದು ಗುರುತಿಸುವಲ್ಲಿ ಅನೇಕ ಅಸಮಾನತೆಗಳು, ತಾರತಮ್ಯ ನೀತಿಗಳಿವೆ. ಫ್ರೊ. ಮನೀಷ್ ಠಾಕೂರ್ ಅವರು’ಸಾಚಾರ್ ಕಮಿಟಿ ವರದಿಯು ಮುಸ್ಲಿಂ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗದಲ್ಲಿ ಗುರುತಿಸಲು ವಿವಿಧ ರಾಜ್ಯಗಳು ರೂಪಿಸಿದ ಕೇರಳ ಮಾಡೆಲ್, ಆಂದ್ರ ಪ್ರದೇಶ ಮಾಡೆಲ್ (ಅವಿಭಜಿತ ರಾಜ್ಯ), ತಮಿಳು ನಾಡು ಮಾಡೆಲ್, ಬಿಹಾರ್ ಮಾಡೆಲ್ ಹೀಗೆ ಅನೇಕ ವಿವಿಧ ಮಾಡೆಲ್‌ಗಳನ್ನು ಆಳವಾಗಿ ಪರಿಶೀಲಿಸಿತು. ಉದಾಹರಣೆಗೆ ಆವಿಭಜಿತ ರಾಜ್ಯವಾಗಿದ್ದ ಸಂದರ್ಭದಲ್ಲಿ ಆಂದ್ರ ಪ್ರದೇಶ ಸರ್ಕಾರ ಮುಸ್ಲಿಂ ಸಮುದಾಯದ ಹಿಂದುಳುವಿಕೆಯನ್ನು ಗುರುತಿಸಿ ಮೀಸಲಾತಿ ನೀಡಲು ನಿರ್ಧರಿಸಿದಾಗ ಸಂವಿಧಾನದ ಸೆಕ್ಯುಲರ್ ತತ್ವದ ಅಡಿಯಲ್ಲಿ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಂಗವು ಮಧ್ಯ ಪ್ರವೇಶಿಸಿ ಅದಕ್ಕೆ ತಡೆಯೊಡ್ಡಿತು. ಮತ್ತೊಂದು ಚಿಂತನೆಯ ಪ್ರಕಾರ ಸಮತಾವಾದವನ್ನು ಪ್ರತಿಪಾದಿಸುವ, ಜಾತಿ ತಾರತಮ್ಯವಿಲ್ಲದ ಧರ್ಮವಾದ ಇಸ್ಲಾಂ ಅನ್ನು ಹಿಂದುಳಿದ ವರ್ಗಕ್ಕೆ ಸೇರಿಸುವುದನ್ನು ಚರ್ಚಿಸಬೇಕು ಎಂದು ಹೇಳುತ್ತಿದ್ದರೆ, ಕೇಂದ್ರದಲ್ಲಿ ಈ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ’ಎಂದು ಹೇಳಿದ್ದಾರೆ.

ಆದರೆ ನ್ಯಾಯಾಂಗ ವ್ಯವಸ್ಥೆಯು ಅಲ್ಪಸಂಖ್ಯಾತ ಸಮುದಾಯವೊಂದು ಹಿಂದುಳಿದಿದೆ ಎನ್ನುವ ವಾಸ್ತವ ಅಂಶವನ್ನು ಮಾನ್ಯ ಮಾಡಲು ಅಡ್ಡಗಾಲು ಹಾಕಿರುವುದು ಒಂದು ವೈರುಧ್ಯವಾದರೆ ಇಂದು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮುಸ್ಲಿಂ ಸಮುದಾಯದ ಕುರಿತಾಗಿ ಯಾವುದೇ ಬಗೆಯ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ. ಅದು ಮುಗಿದ ಕಥೆ. ಹಿಂದುಸ್ತಾನ ಎಂದರೆ ಹಿಂದೂಗಳ ರಾಷ್ಟ್ರ, ಇಂಡಿಯಾದ ರಾಷ್ಟ್ರೀಯತೆ ಎಂದರೆ ಹಿಂದುತ್ವದ ರಾಷ್ಟ್ರೀಯತೆ ಎಂದು ಘೋಷಿಸುವುದರ ಮೂಲಕ ಆರೆಸ್ಸಸ್ ಸರಸಂಚಾಲಕ ಮೋಹನ್ ಭಾಗವತ್ ಬಹು ಸಂಸ್ಕೃತಿ, ವೈವಿಧ್ಯತೆ, ಧರ್ಮ ನಿರಪೇಕ್ಷತೆ ಎನ್ನುವ ಎಲ್ಲಾ ವಿಶ್ಲೇಷಣೆಗಳಿಗೆ ತೆರೆ ಎಳೆದಿದ್ದಾರೆ. 56 ಇಂಚಿನ ಎದೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದಿಗೂ ಇದಕ್ಕೆ ಪ್ರತಿಕ್ರಿಯಿಸಿಲ್ಲ. ನಿರ್ದಿಷ್ಟ ಕೋಮಿನ ಪುರುಷರು ಬಹುಸಂಖ್ಯಾತರ ಧರ್ಮಕ್ಕೆ ಸೇರಿದ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರೆ ಅದನ್ನು ಕಾಕತಾಳೀಯ ಎಂದು ನಂಬಲು ಸಾಧ್ಯವಿಲ್ಲ. ಅದು ಪೂರ್ವಯೋಜಿತ ಸಂಚು ಎಂದೇ ಕರೆಯಬೇಕಾಗುತ್ತದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ ಸಂಘ ಪರಿವಾರದ ಸದಸ್ಯರ ವರ್ತನೆಗಳಿಗೆ ಪೂರಕವಾಗಿ ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷ ಲಕ್ಷ್ಮಿಕಾಂತ್ ಬಾಜಪೇಯಿ ’ಅವರು ಒಂದು ನಿರ್ದಿಷ್ಟ ಕೋಮಿಗೆ ಸೇರಿದವರಾದ ಮಾತ್ರಕ್ಕೆ ನಮ್ಮ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲು, Muslim-women-mosqueಮಹಿಳೆಯರನ್ನು ತಮ್ಮ ಮತಕ್ಕೆ ಮತಾಂತರ ಮಾಡಲು ಅವರಿಗೆ ಉಚಿತ ಸರ್ಟಿಫಿಕೇಟ್ ಕೊಡಲಾಗಿದೆಯೇ? ಯುವಕರು ಈ ’ಲವ್ ಜಿಹಾದ್’ ಕುರಿತು ಎಚ್ಚರದಿಂದರಬೇಕು’ ಎಂದು ಎಚ್ಚರಿಸಿದ್ದಾರೆ. ಫ್ರೊ.ಜೋಯಾ ಹಸನ್ ಅವರು ’ಸಬ್ಕಾ ಸಾಥ್,ಸಬ್ಕಾ ವಿಕಾಸ್’ ಎಂದು ಹೇಳುತ್ತಿರುವ ಮೋದಿ ತನ್ನ ಪರಿವಾರದ ಲುಂಪೆನ್ ಮತೀಯವಾದಿಗಳೊಂದಿಗೆ ಮತ್ತು ಅವರ ಕೋಮುವಾದಿ ಹೇಳಿಕೆಗಳೊಂದಿಗೆ ಇಂದಿಗೂ ಗುರುತಿಸಿಕೊಂಡಿದ್ದಾರೆ. ಯಾವುದನ್ನೂ ನಿರಾಕರಿಸಿಲ್ಲ. ತಮಗೆ ಬಹುಮತ ಗಳಿಸಲು ಕಾರಣರಾದ ಶೇಕಡ 31ರಷ್ಟು ಮತದಾತರಿಗೆ ಮಾತ್ರ ಪ್ರಧಾನ ಮಂತ್ರಿಯಂತೆ ವರ್ತಿಸುತ್ತಿರುವ ಈ ನರೇಂದ್ರ ಮೋದಿ, ’ಅಲ್ಪಸಂಖ್ಯಾತ(ಮುಸ್ಲಿಂ)ರಹಿತ ರಾಜಕೀಯ’ ಎನ್ನುವ ಮಾಡೆಲ್ ಅನ್ನು ನಿರ್ಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ ರಾಜಕೀಯ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಸಾಚಾರ್ ಕಮಿಟಿ ಮತ್ತು ರಂಗನಾಥ್ ಮಿಶ್ರ ಕಮಿಟಿ ವರದಿಗಳನ್ನು ಒಪ್ಪಿಕೊಂಡು ಮುಸ್ಲಿಂ ಸಮುದಾಯದ ಪರವಾಗಿ ಹಂತಹಂತವಾಗಿ ಸುಧಾರಣೆಗಳನ್ನು ಜಾರಿಗೊಳಿಸುವ ರಾಜಕೀಯ ಇಚ್ಛಾಶಕ್ತಿ ಇಂದಿನ ಸಂದರ್ಭದಲ್ಲಿ ಸಂಪೂರ್ಣವಾಗಿ ಗೌಣಗೊಂಡಿದೆ. ಈ ವರದಿಗಳಿಗೆ ಕಾನೂನು ಚೌಕಟ್ಟನ್ನು ಹಾಕಿಕೊಟ್ಟು ಆ ಮೂಲಕ ಜಾರಿಗೊಳಿಸಬಹುದಾದ ಸಾಧ್ಯತೆಗಳೂ ಕ್ಷೀಣವಾಗಿವೆ.

ಇಂಡಿಯಾದಲ್ಲಿ ಬಲು ದೊಡ್ಡ ಅಲ್ಪಸಂಖ್ಯಾತ ರಿಲಿಜನ್ ಆದ ಇಸ್ಲಾಂ ಇಂದು ರಾಜಕೀಯ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳನ್ನು ಒಳಗೊಂಡಂತೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಶೋಷಣೆಗೆ, ದೌರ್ಜನ್ಯಕ್ಕೆ ಒಳಗಾದ ಧರ್ಮವೂ ಹೌದು. ಮುಸ್ಲಿಂರಿಗೆ ಹೊರಗಿನವರಾದ (ಅನೇಕ ಕಾರಣಗಳಿಗೆ) ಬಹುಸಂಖ್ಯಾತ ಹಿಂದೂ ಮತಾಂಧರ ಲುಂಪೆನ್ ಗುಂಪು ಮತ್ತು ಮತೀಯವಾದಿ ಸಂಘ ಪರಿವಾರದವರು ನಡೆಸುವ ದೈಹಿಕ inidan-muslim-womanಹಲ್ಲೆಗಳು, ಮಾನಸಿಕ ಹಿಂಸೆಗಳು, ಅವರನ್ನು ಅನುಮಾನಿತರನ್ನಾಗಿ ಪರಿಭಾವಿಸುವ ಮಧ್ಯಮವರ್ಗದ ಸಂಕುಚಿತ ಮನಸ್ಸು ಮುಸ್ಲಿಂರ ಘನತೆಯನ್ನೇ ನಾಶಗೊಳಿಸಿ ಅವರನ್ನು ದ್ವಿತೀಯ ದರ್ಜೆಯ ನಾಗರಿಕನ್ನಾಗಿಸಿದ್ದರೆ ಒಳಗಿನವರಾದ ಮೂಲಭೂತವಾದಿ ಧಾರ್ಮಿಕ ಗುರುಗಳು ಮತ್ತು ಪಿಎಫ್‌ಐ, ಎಸ್‌ಡಿಪಿಐ ನಂತಹ ಮತೀಯವಾದಿ ರಾಜಕೀಯ ಪಕ್ಷಗಳು ಮುಸ್ಲಿಂರ ಐಡೆಂಟಿಟಿಯನ್ನು ಹೆಚ್ಚೂ ಕಡಿಮೆ ಪ್ರಶ್ನಾರ್ಹವಾಗುವಂತೆ ವರ್ತಿಸುತ್ತಿದ್ದಾರೆ. ಸೆಕ್ಯುಲರ್ ತತ್ವವನ್ನು ಮೈಗೂಡಿಸಿಕೊಂಡಿರುವ ಮುಸ್ಲಿಂ ಸಮುದಾಯದ ಎಲೈಟ್ ಗುಂಪು ತನ್ನನ್ನು ಐಡೆಂಟಿಟಿ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವುದು ದುರಂತವೇ ಸರಿ. ಏಕೆಂದರೆ ಚಿಂತಕ ಅಲಮ್ ಅವರು ’ಈ ಎಲೈಟ್ ಮುಸ್ಲಿಂ ಸಮುದಾಯ ತನ್ನನ್ನು ಅಲಿಘರ್ ಮುಸ್ಲಿಂ ಯೂನಿವರ್‍ಸಿಟಿ, ಉರ್ದು ಭಾಷೆ, ಮುಸ್ಲಿಂ ಪರ್ಸನಲ್ ಲಾ ದಂತಹವುಗಳೊಂದಿಗೆ ಗುರುತಿಸಿಕೊಳ್ಳುತ್ತದೆಯೇ ವಿನಃ ಮುಸ್ಲಿಂ ಸಮುದಾಯದ ಶಿಕ್ಷಣ, ಸಾಮಾಜಿಕ, ಆರ್ಥಿಕ ಸಬಲೀಕರಣಗಳಂತಹ ಸೂಕ್ಷ್ಮ ಮತ್ತು ಪ್ರಮುಖ ವಿಷಯಗಳನ್ನು ನಿರ್ಲಕ್ಷಿಸಿದೆ’ ಎಂದು ಮಾರ್ಮಿಕವಾಗಿ ಹೇಳುತ್ತಾರೆ. ಮಧ್ಯಯುಗೀನ ಕಾಲದಲ್ಲಿ ಮುಸ್ಲಿಂ ದೊರೆಗಳು EGGS 2ನಡೆಸಿದ ಯುಧ್ದಗಳನ್ನು ಮತ್ತು ಆ ಸಂದರ್ಭದಲ್ಲಿನ ಲೂಟಿಗಳನ್ನು ಇತಿಹಾಸದ ವಸ್ತುನಿಷ್ಠ ದೃಷ್ಟಿಕೋನದಿಂದ,ವಿವಿಧ ಆಯಾಮಗಳಿಂದ ಅರ್ಥೈಸಲು ನಿರಾಕರಿಸುವ ಮತೀಯವಾದಿ ಸಂಘ ಪರಿವಾರ ಮತ್ತು ಮಧ್ಯಮವರ್ಗ 700 ವರ್ಷಗಳ ನಂತರವೂ ಇಂದಿನ ಮುಸ್ಲಿಂರನ್ನು ಆ ದಾಳಿಕೋರರೊಂದಿಗೆ ಸಮೀಕರಿಸಿ ಹಂಗಿಸುವುದನ್ನು ಮುಂದುವರೆಸಿದ್ದರೆ ಮುಸ್ಲಿಂ ಮೂಲಭೂತವಾದಿಗಳು ತಮ್ಮ ಪರಂಪರೆಯನ್ನು ಮೊಘಲ ದೊರೆಗಳೊಂದಿಗೆ ವೈಭವೀಕರಿಸಿ ಇಂಡಿಯಾದ ಇಸ್ಲಾಂ ಮತವನ್ನು ಅರೇಬಿಯಾ ರಾಷ್ಟ್ರಗಳ ಧಾರ್ಮಿಕತೆಗೆ ಗಂಟು ಹಾಕಿದ್ದಾರೆ. ಆದರೆ ಅಭಿವೃದ್ಧಿ ಮತ್ತು ಆಧುನಿಕತೆ ಮುಸ್ಲಿಂರ Ghetto ಗಳಿಂದ  ಸಾವಿರಾರು ಮೈಲಿಗಳಷ್ಟು ದೂರದಲ್ಲಿದೆ. ಪ್ರತಿದಿನ ಮುಂಜಾನೆ ಅತ್ಯಂತ ಆತಂಕ ಮತ್ತು ಭಯದಿಂದ ಬಾಗಿಲನ್ನು ತೆರೆಯಬೇಕಾದಂತಹ ಸಂಧಿಗ್ಧತೆ ಮತ್ತು ದುಸ್ಥಿತಿಯಲ್ಲಿರುವ ಇಂಡಿಯಾದ ಮುಸ್ಲಿಂರು ಪ್ರತಿ ಕ್ಷಣವೂ ತಮ್ಮ ರಾಷ್ಟ್ರೀಯತೆ ಮತ್ತು ದೇಶಪ್ರೇಮವನ್ನು ಸಾಬೀತುಪಡಿಸುತ್ತಲೇ ಬದುಕಬೇಕಾದಂತಹ ದುರಂತದಲ್ಲಿದ್ದಾರೆ. ಇಲ್ಲಿಯವರೆಗೆ ಕನಿಷ್ಠ ವೋಟ್ ಬ್ಯಾಂಕ್ ರಾಜಕಾರಣಕ್ಕಾದರೂ ಅವರನ್ನು ಓಲೈಸುತ್ತಿದ್ದ ಇಂಡಿಯಾದ ರಾಜಕಾರಣದ ದಿಕ್ಸೂಚಿ 2014 ರ ಲೋಕಸಭೆ ಚುನಾವಣೆಯ ನಂತರ ಸಂಪೂರ್ಣವಾಗಿ ಬದಲಾಗಿದೆ. ಮುಸ್ಲಿಂರ ಮತದ ಅವಶ್ಯಕತೆ ಇಲ್ಲದೆಯೇ ಸರಳ ಬಹುಮತವನ್ನು ಸಾಧಿಸಿರುವ ಬಿಜೆಪಿ ಪಕ್ಷಕ್ಕೆ ಇಂದು ಮುಸ್ಲಿಂರು ಯಾವುದೇ ಕಾರಣಕ್ಕೂ ಅವಶ್ಯಕತೆ ಇಲ್ಲ. ಮುಸ್ಲಿಂ ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಔಪಾಚಾರಿಕವಾಗಿ ಈದ್ ಶುಭಾಶಯ ಹೇಳದ ಮೊಟ್ಟ ಮೊದಲ ಪ್ರಧಾನಿ ಎಂದರೆ ಈ ನರೇಂದ್ರ ಮೋದಿ. ನೀವು ಇರುವ ಹಾಗಿದ್ದರೆ ಇರಿ ಇಲ್ಲದಿದ್ದರೆ ನಿಮ್ಮಿಷ್ಟ ಎನ್ನುವಂತಹ ಧೋರಣೆಯನ್ನು ವ್ಯಕ್ತಪಡಿಸುತ್ತಿರುವ ಪ್ರಧಾನಿ ಮೋದಿ ಮತ್ತು ಸಂಘ ಪರಿವಾರದ ಆಡಳಿತದಲ್ಲಿ ಮುಸ್ಲಿಂ ಸಮುದಾಯ ಘನತೆಯನ್ನು ಕಳೆದುಕೊಂಡು ಕ್ರಮೇಣ ನಗಣ್ಯವಾಗುವ ಹಂತಕ್ಕೆ ತಲಪುತ್ತಿದ್ದಾರೆ.

ಮತ್ತೊಂದೆಡೆ ಹಿಂದೂ ಧರ್ಮದ ಜಾತಿ ಪದ್ಧತಿಯ ದೌರ್ಜನ್ಯಕ್ಕೆ ನಲುಗಿದ ತಳ ಸಮುದಾಯಗಳು ಸೆಮೆಟಿಕ್ ರಿಲಿಜನ್‌ಗಳಾದ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳಿಗೆ ಮತಾಂತರಗೊಳ್ಳುತ್ತಿರುವುದು ಈ ಸೆಮೆಟಕ್ ರಿಲಿಜನ್‌ಗೆ ತಾತ್ವಿಕವಾಗಿ ಬಲ ತಂದುಕೊಡುವುದರ ಬದಲಾಗಿ ಮತ್ತಷ್ಟು ದ್ವೇಷಕ್ಕೆ ಬಲಿಯಾಗುತ್ತಿರುವುದು ಮತ್ತೊಂದು ದುರಂತ.

ಈ ಮತಾಂತರ ಪ್ರಕ್ರಿಯೆ ರಾಜಕೀಯ ವಾತಾವರಣವನ್ನೇ ಧಗಧಗಿಸುವಂತೆ ಮಾಡಿದೆ. ಇಲ್ಲೊಂದು ನೈಜ ಸತ್ಯವನ್ನು ನಾವು ಅರಿಯಬೇಕು. ತಳ ಸಮುದಾಯಗಳು ಇಂಡಿಯಾದ ಜಾತೀಯತೆಗೆ, ತಾರತಮ್ಯಕ್ಕೆ ಸೆಮೆಟಿಕ್ ರಿಲಿಜನ್‌ಗಳಾದ ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳು ಮಾತ್ರ ಮುಕ್ತಿ ಒದಗಿಸಬಲ್ಲವು ಎಂದು ಮುಗ್ಧವಾಗಿ ನಂಬುತ್ತಾರೆ.  ನಮ್ಮ ಬುದ್ಧಿಜೀವಿಗಳು ಸಹ ಈ ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳನ್ನು ನೋಡುವುದು ಮತ್ತು ಅರ್ಥೈಸಿಕೊಂಡಿರುವುದು ಸಹ ಯುರೋಪಿಯನ್ ಕನ್ನಡಕದ ಮೂಲಕ. ಏಕ ದೈವೋಪಾಸಕ ಮತಗಳಾದ ಸೆಮೆಟಿಕ್ ರಿಲಿಜನ್‌ಗಳು ಕುಲೀನತನದ ಶ್ರೇಷ್ಟತೆಯನ್ನು ತಿರಸ್ಕರಿಸಿ ಜನಸಾಮಾನ್ಯರ ಪರವಾಗಿ ನಿಲ್ಲುತ್ತವೆ ಮತ್ತು ಅವುಗಳ ತತ್ವಗಳು ಜೀವಪರವಾಗಿವೆ, ಸೆಕ್ಯುಲರಿಸಂ ಅಲ್ಲಿನ ಜೀವನ ಕ್ರಮವಾಗಿದೆ ಮತ್ತು  ಈ ಸೆಮೆಟಿಕ್ ರಿಲಿಜನ್‌ಗಳು  ಸಮತಾವಾದವನ್ನು ಧ್ಯಾನಿಸುತ್ತವೆ. ಆದರೆ ವಸಾಹತುಶಾಹಿಯ ದುರಹಂಕಾರಕ್ಕೆ, ನವ ಉದಾರೀಕರಣದ ಬಂಡವಾಳಶಾಹಿಯ ಯಜಮಾನಿಕೆಗೆ ಹಿಂದೂ ಧರ್ಮದಂತೆಯೇ ಬಲು ಸುಲಭವಾಗಿ ಈ ಸೆಮೆಟಿಕ್ ರಿಲಿಜನ್‌ಗಳೂ ಕೂಡ ಬಲಿಯಾಗಿಬಿಡುತ್ತವೆ ಎನ್ನುವ ಅಪಾಯದ ಕುರಿತಾಗಿ ನಮ್ಮ ಬುದ್ಧಿಜೀವಿಗಳ ಬಳಿ ಉತ್ತರವಿದ್ದಂತಿಲ್ಲ. ಪಟ್ಟಭದ್ರ ಹಿತಾಸಕ್ತಿಗಳನ್ನು ಈ ಸೆಮೆಟಿಕ್ ರಿಲಿಜನ್‌ಗಳೂ ಪೋಷಿಸುತ್ತವೆ ಮತ್ತು ದಲಿತರಿಗೆ ವಿಮೋಚನೆಯ ಅಂತಿಮ ಗಮ್ಯ ಸ್ಥಾನವಾಗಿ ತಮ್ಮೊಳಗೆ, ತಮ್ಮ ಸಮಾಜದೆಡೆಗೆ ತುಂಬು ಹೃದಯದಿಂದ, ಮಾನವೀಯತೆಯಿಂದ ಬರ ಮಾಡಿಕೊಂಡ ಈ ಸೆಮೆಟಿಕ್ ರಿಲಿಜನ್‌ಗಳು ಕಡೆಗೆ ದಲಿತರಿಗೆ ಘನತೆ ಮತ್ತು ಆತ್ಮಾಭಿಮಾನವನ್ನು ತಂದು ಕೊಟ್ಟವೇ ಎನ್ನುವುದು ಇಂದಿಗೂ ಚರ್ಚೆಗೆ ಒಳಪಡುತ್ತಿದೆ. ದಲಿತ ಕ್ರಿಶ್ಚಿಯನ್ನರು ನಿಜಕ್ಕೂ ಪಡೆದಿದ್ದೇನು, ಎನ್ನುವ ಪ್ರಶ್ನೆಗೆ ಅತ್ಯಂತ ಸಂಕೀರ್ಣವಾದ ಉತ್ತರಗಳು ದೊರಕುತ್ತವೆ. ಈ ಸೆಮೆಟಿಕ್ ರಿಲಿಜನ್‌ಗಳು ಸಹ ಹಿಂದೂ ಧರ್ಮದಂತೆಯೇ ಅನೇಕ ಬಾರಿ ಪುರುಷಾಧಿಕಾರಕ್ಕೆ ಬಲಿಯಾಗಿಬಿಡುತ್ತವೆ ಎನ್ನುವ ಆರೋಪಗಳಿವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಸಂಘ ಪರಿವಾರವದ “ಘರ್ ವಾಪಸಿ” ಎನ್ನುವ ಹಿಂದೂ ಬಹುಸಂಖ್ಯಾತತ್ವ ಕಾರ್ಯಕ್ರಮ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಬೇರೆ ಧರ್ಮದವರು ಮಾಡಬಹುದಾದರೆ ಹಿಂದೂಗಳು ಯಾಕೆ ಮಾಡಬಾರದು ಎನ್ನುವ ತತ್ವದ ಅಡಿಯಲ್ಲಿ ಈ “ಘರ್ ವಾಪಸಿ” ಅನ್ನು ಸಂಘ ಪರಿವಾರ ಸಮರ್ಥಿಸಿಕೊಳ್ಳುತ್ತಿದೆ. 56 ಇಂಚಿನ ಎದೆಯ ಮೋದಿ ಇಲ್ಲಿಯೂ ಬಾಯಿ ಬಿಟ್ಟಿಲ್ಲ.

ಸಿಎನ್‌ಎನ್ ಛಾನಲ್‌ನ ಫರೀದ್ ಜಕಾರಿಯಾಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಭಾರತದ ಮುಸ್ಲಿಂರು ದೇಶಕ್ಕಾಗಿ ಪ್ರಾಣ ಕೊಡುತ್ತಾರೆ ಎಂದು ಹೇಳಿದ ಮಾತನ್ನು ಕುರಿತಾಗಿ ಹಸನ್ ಸುರೂರ್ ಅವರು ಮುಸ್ಲಿಂರ ಕುರಿತಾಗಿ ಮೋದಿಯ ಈ ಮಾತನ್ನು ಮತ್ತು ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನು ಕೇಳಿದಾಗ “ಮುಸ್ಲಿಂರ ಬದ್ಧತೆಯ ಪ್ರಶ್ನೆ ಈ ಮಟ್ಟದಲ್ಲಿ ರಾಜಕೀಯ ಚರ್ಚೆ ಆಗುತ್ತಿರುವುದು ಇದೇ ಮೊದಲು ಎಂದೆನಿಸುತ್ತಿದೆ. ದೃಶ್ಯ ಮಾಧ್ಯಮಗಳಲ್ಲಿ ಸೆಕ್ಯುಲರಿಸಂ ಅನ್ನು ದೇಶಭಕ್ತ ಹಿಂದೂಗಳು ಒಂದು ಕಡೆ, ಅನುಮಾನಿತ ಮುಸ್ಲಿಂರು ಮತ್ತೊಂದೆಡೆ ಎನ್ನುವ ನೆಲೆಯಲ್ಲಿಯೇ ಚರ್ಚೆಗೊಳಪಡಿಸಲಾಗುತ್ತಿದೆ. ಹಿಂದೂ-ಮುಸ್ಲಿಂರ ಸಂಬಂಧಗಳ ಸ್ವರೂಪವು ಸಂಪೂರ್ಣವಾಗಿ ಧೃವೀಕರಣಗೊಳ್ಳುತ್ತಿದೆ. ಪ್ರತಿ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಶಾಹಿ ಇಮಾಮ್ ಬುಖಾರಿಯ ಫತ್ವವನ್ನು ಬಳಸಿಕೊಳ್ಳುವುದರ ಮೂಲಕ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಬಿಜೆಪಿ ಪಕ್ಷವು ಬಹುಸಂಖ್ಯಾತ ಹಿಂದೂಗಳನ್ನು ಧೃವೀಕರಣಗೊಳಿಸುವಲ್ಲಿ ಯಶಸ್ವಿಯಾಗುವುದಕ್ಕೆ ಸಹಕರಿಸುತ್ತಿವೆ. ಮತ್ತೊಂದೆಡೆ ಶಾಹಿದ್ ಸಿದ್ದಿಕಿಯಂತಹ ಪತ್ರಕರ್ತರು ’ಮುಸ್ಲಿಂರು ಕಾಂಗ್ರೆಸ್. ಸಮಾಜವಾದಿ ಪಕ್ಷಗಳ ಬೋಗಸ್ ಸೆಕ್ಯುಲರಿಸಂನ ಗುಲಾಮರಾಗಿದ್ದಾರೆ. ಈ ಪಕ್ಷಗಳೇ ಮುಸ್ಲಿಂರ ಶತೃಗಳು’ ಎಂದು ಟೀಕಿಸುತ್ತಿದ್ದಾರೆ. ಸಿದ್ದಿಕಿಯಂತಹ ಪತ್ರಕರ್ತರ ಈ ಟೀಕೆಗಳು ಸಂಘಪರಿವಾರದ ’ಸಿಕ್ಯುಲರಿಸ್ಟ್’ ಎನ್ನುವ ಲೇವಡಿ ಮತ್ತು ಟೀಕೆಗಳಿಗೆ ನೀರೆರೆದು ಪೋಷಿಸುತ್ತಿವೆ” ಎಂದು ಬರೆಯುತ್ತಾರೆ. ತಮ್ಮ ಜಪಾನ್ ಪ್ರವಾಸದ ಸಂದರ್ಭದಲ್ಲಿ ನರೇಂದ್ರ ಮೋದಿ ಅಲ್ಲಿನ ಪ್ರದಾನಿಗೆ ಭಗವದ್ಗೀತೆ ಪುಸ್ತಕವನ್ನು ಉಡುಗೊರೆಯಾಗಿ ಕೊಡುತ್ತ “ಭಾರತದಲ್ಲಿ ಸೆಕ್ಯುಲರಿಸ್ಟ್‌ಗಳು ಇದಕ್ಕೆ ಆಕ್ಷೇಪಿಸುತ್ತಾರೆ” ಎಂದು ಲೇವಡಿ ಮಾಡಿದ್ದರು. ನಿಜ. ನೇಪಾಳದ ಪ್ರವಾಸದ ಸಂದರ್ಭದಲ್ಲಿ ಅಲ್ಲಿನ ಅಧ್ಯಕ್ಷರಿಗೆ ಕುರಾನ್ ಅನ್ನು ಉಡುಗೊರೆಯಾಗಿ ಕೊಡುವಷ್ಟು ಬಹುತ್ವದ ಪಾಠವೇ ಗೊತ್ತಿಲ್ಲದಂತಹ ಹಿಂದೂ ರಾಷ್ಟ್ರೀಯವಾದಿ ನರೇಂದ್ರ ಮೋದಿ ಸೆಕ್ಯುಲರಿಸಂ ಕುರಿತಾಗಿ ಮಾತನಾಡುವುದೇ ಒಂದು ವ್ಯಂಗ.

ಕಾರ್ಪೋರೇಟ್ ಶಕ್ತಿಗಳ ಕ್ಯಾಪಿಟಲಿಸಂ ಮತ್ತು ಬಹುಸಂಖ್ಯಾತತ್ವದ ಕೋಮುವಾದಿ ರಾಜಕಾರಣಗಳ ಸಮ್ಮಿಶ್ರ ಸರ್ಕಾರವು ಇಂಡಿಯಾದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಇದೇ ಮೊದಲು. ಮೋದಿ ಪ್ರಧಾನಿ ಆಗುವುದರ ಮೂಲಕ ತನ್ನ ಅಸ್ತಿತ್ವವನ್ನು ಗಳಿಸಿಕೊಂಡ ಬಲಪಂಥೀಯ ಫೆನಟಿಸಂ ಆಧುನಿಕತೆ ಮತ್ತು ಕೋಮು ಸೌಹಾರ್ದತೆಯನ್ನು ಸಂಪೂರ್ಣವಾಗಿ ನಾಶಗೊಳಿಸುವತ್ತ ದಾಪುಗಾಲು ಇಟ್ಟಿದೆ. ಇತ್ತೀಚೆಗೆ ಶೇಖರ್ ಗುಪ್ತ, ಸುಮನ್ ದೇಬ್ ರಂತಹ ಪತ್ರಕರ್ತರು “centre rightists” ಎನ್ನುವ ಹಣೆಪಟ್ಟಿಯೊಂದಿಗೆ  ನರೇಂದ್ರ ಮೋದಿಯೊಂದಿಗೆ ಕೈಜೋಡಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಇವರ ಜನಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ. ಒಂದು ಕಡೆ ಪ್ರಭಾವಶಾಲಿ ಕ್ಯಾಪಿಟಲಿಸ್ಟ್, ಮತ್ತೊಂದು ಕಡೆ ಬಲಪಂಥೀಯ ಫೆನಟಿಸಂ, ಬೆನ್ನ ಹಿಂದೆ “centre rightists” ಕಟ್ಟಿಕೊಂಡಿರುವ ನರೇಂದ್ರ ಮೋದಿಯ ಮಿಷನ್ ಒಂದು ಭಯಾನಕ ಸ್ವಪ್ನದಂತೆ ಪ್ರಜ್ಞಾವಂತರಲ್ಲಿ ಬೆಚ್ಚಿಬೀಳಿಸುತ್ತಿದೆ.

One thought on “ಮತೀಯ ಅಲ್ಪಸಂಖ್ಯಾತರು : ಇಲ್ಲಿರುವುದು ಸುಮ್ಮನೆ, ಎಲ್ಲಿದೆ ನಮ್ಮನೆ?

  1. mahesh

    ಅಮಾಯಕ ಬಡ ಮುಸ್ಲಿಮರ ಕುರಿತು ಖಂಡಿತ ಸಹಾನುಭೂತಿಯಿದೆ. ಭಾರತದಲ್ಲಿ ಮುಸ್ಲಿಂ ಬಿಟ್ಟು ಇನ್ನೂ ಅನೇಕ ಧರ್ಮಗಳಾದ ಕ್ರಿಶ್ಚಿಯನ್, ಬೌದ್ಧ, ಜೈನ, ಸಿಖ್ ಇನ್ನೂ ಅನೇಕ ಅಲ್ಪಸಂಖ್ಯಾತ ಧರ್ಮಗಳಿವೆ. ಈ ಅಲ್ಪಸಂಖ್ಯಾತರಿಗೂ ಮುಸ್ಲಿಮರಷ್ಟೇ ಮಹತ್ವ ದೊರಕಬೇಕಲ್ಲವೇ? ಬಹುಸಂಖ್ಯಾತರು ಆತ್ಮವಿಮರ್ಷೆ ಮಾಡುವದರ ಜೊತೆಗೆ ಮುಸ್ಲಂ ಸಮುದಾಯದಲ್ಲೂ ನಡೆಯಬೇಕಾದ ಕೆಲವು ಆತ್ಮವಿಮರ್ಷೆಗಳ ಕುರಿತೂ ಚರ್ಚೆಗಳು ನಡೆಯಬೇಕು

    Reply

Leave a Reply

Your email address will not be published. Required fields are marked *