ಸಮಾಜ ಸೇವೆ ಮಾಡೋಕೆ, ಪತ್ರಿಕಾ ಸಂಸ್ಥೆ ಮೊದಲು ಬದುಕಿರಬೇಕಲ್ಲ? : ಕೆ.ಎನ್.ಶಾಂತಕುಮಾರ್

ಪ್ರಜಾವಾಣಿ ಸಂಪಾದಕ ಹಾಗೂ ಡೆಕ್ಕನ್ ಹೆರಾಲ್ಡ್ ಸಮೂಹದ ಮಾಲೀಕರಲ್ಲಿ ಒಬ್ಬರಾದ ಕೆ.ಎನ್.ಶಾಂತಕುಮಾರ್ ಇತ್ತೀಚೆಗೆ ಹಾಸನದ ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. (ಅದಕ್ಕೆ ಪೂರ್ವಭಾವಿಯಾಗಿ ಮಾಡಿದ ಭಾಷಣದ ಕೆಲವು ಮುಖ್ಯಾಂಶಗಳು ವರ್ತಮಾನ.ಕಾಮ್‌ನಲ್ಲಿ ಈಗಾಗಲೆ ಪ್ರಕಟವಾಗಿದೆ.) ಸಂವಾದದಲ್ಲಿ ಪತ್ರಿಕಗಳ ನಡುವಿನ ಪೈಪೋಟಿ, ಪತ್ರಕರ್ತರ ಪ್ರಾಮಾಣಿಕತೆ, ಪತ್ರಿಕಾಲಯಗಳ ಸಿದ್ಧಾಂತಗಳ ಬಗ್ಗೆ ವಿದ್ಯಾರ್ಥಿಗಳಿಂದ ಪ್ರಶ್ನೆಗಳು ಬಂದವು. ಶಾಂತಕುಮಾರ್ ಅವರು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. ಕನ್ನಡದ ಪತ್ರಿಕೋದ್ಯಮದ ಪ್ರಸ್ತುತ ಸಂದರ್ಭದಲ್ಲಿ ಈ ಸಂವಾದದಲ್ಲಿ ಹೊರಹೊಮ್ಮಿದ ಕೆಲ ಅಂಶಗಳು ಬಹುಮುಖ್ಯ. ಸಂವಾದದ ಆಯ್ದಭಾಗಗಳು ವರ್ತಮಾನದ ಓದುಗರಿಗಾಗಿ ಇಲ್ಲಿವೆ.

ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳಿಂದ ಒತ್ತಡ ಬಂದರೆ ಏನು ಮಾಡುತ್ತೀರಿ?
ಶಾಂತಕುಮಾರ್: ಸಂಪಾದಕರಿಗೆ ಹೋಲಿಸಿದರೆ, ಸಾಮಾನ್ಯವಾಗಿ ಸ್ಥಳೀಯ ವರದಿಗಾರರಿಗೆ ಹೆಚ್ಚು ಒತ್ತಡಗಳು ಬರುತ್ತವೆ. ಅಂತಹ ಸಂದರ್ಭಗಳಲ್ಲಿ ಇಗ್ನೋರ್ (ನಿರ್ಲಕ್ಷ್ಯ) ಮಾಡಬೇಕು ಅಷ್ಟೆ. ನಾವು ಮಾಡುತ್ತಿರುವ ಕೆಲಸ ಸರಿ KN-Shanthakumar-prajavani-Hasana-2ಅನ್ನುವ ವಿಶ್ವಾಸ ಇರುವಾಗ, ತಲೆ ಕೆಡಿಸಿಕೊಳ್ಳುವ ಅಗತ್ಯ ಇರುವುದಿಲ್ಲ. ಅದರ ಪರಿಣಾಮ ಬೇರೆ ಏನೋ ಆಗಬಹುದು.
ಚುನಾವಣೆಯ ಸಂದರ್ಭಗಳಲ್ಲಿ ನಾವು ತುಂಬಾ ಎಚ್ಚರಿಕೆಯಿಂದ ಇರುತ್ತೇವೆ. ದುಡ್ಡು ಪಡೆದುಕೊಂಡು ಸುದ್ದಿ ಹಾಕುವ ಕ್ರಮ ನಮ್ಮಲ್ಲಿಲ್ಲ. ಹಾಗೆ ಯಾರಾದರೂ ಪತ್ರಿಕೆ ಹೆಸರು ಹೇಳಿಕೊಂಡು ದುಡ್ಡು ಕೇಳಿದರೆ ಮಾಹಿತಿ ಕೊಡಬೇಕೆಂದು ಪ್ರಕಟಣೆ ಕೊಡುತ್ತೇವೆ. ಕೆಲವು ದೂರುಗಳು ಬಂದಿವೆ. ಇದರ ಪರಿಣಾಮ ಒಬ್ಬರು-ಇಬ್ಬರು ಕೆಲಸ ಕಳೆದುಕೊಂಡಿದ್ದಾರೆ. ಎಚ್ಚರಿಕೆ ಕೊಟ್ಟಿದ್ದೇವೆ. ಹೀಗೆಲ್ಲಾ ಇರುತ್ತೆ. ನಾವು ಒತ್ತಡಗಳಿಗೆ ಮಹತ್ವ ಕೊಡದೆ, ನಮ್ಮ ಕೆಲಸ ನಾವು ಮಾಡಿಕೊಂಡು ಹೋಗಬೇಕು.

ಪತ್ರಿಕೋದ್ಯಮದಲ್ಲಿ ಪದವಿ ಗಳಿಸೋದು ವೃತ್ತಿಗೆ ಬಂದ ನಂತರ ಎಷ್ಟರಮಟ್ಟಿಗೆ ಸಹಕಾರಿ?
ಶಾಂತಕುಮಾರ್: ಪತ್ರಿಕೋದ್ಯಮ ಪಾಠ ಮಾಡುವ ಕಾಲೇಜಿನಲ್ಲಿ ನಿಂತು ಕೆಲವು ಮಾತುಗಳುನ್ನು ಹೇಳಬೇಕು. ನನ್ನ ಅಭಿಪ್ರಾಯದಲ್ಲಿ ಈ ಕಾಲೇಜುಗಳು, ಅಲ್ಲಿ ಪಾಠ ಮಾಡುವವರು ತೀವ್ರಗತಿಯಲ್ಲಿ ಬದಲಾಗುತ್ತಿರುವ ದಿನಗಳ ಜೊತೆಗೆ ಹೆಜ್ಜೆ ಹಾಕುತ್ತಿಲ್ಲ. ಹಿಂದೆ ಇದ್ದಾರೆ. ನನ್ನ ಮಗ ಕೊಲಂಬಿಯಾ ವಿ.ವಿಯಲ್ಲಿ ಪತ್ರಿಕೋದ್ಯಮ ಕಲಿತ. ಹಾಗಾಗಿ ನನಗೆ ಗೊತ್ತಿರುವಂತೆ, ಅಲ್ಲಿನ ಪಠ್ಯದಲ್ಲಿ ಪ್ರಾಕ್ಟಿಕಲ್ಸ್ ಗೆ ಹೆಚ್ಚಿನ ಮಹತ್ವ ಇದೆ. ಅಲ್ಲಿನ ವಿದ್ಯಾರ್ಥಿಗಳು ಡಿಜಿಟಲ್ ಪತ್ರಿಕೋದ್ಯಮದ ಬಗ್ಗೆ ಕಲಿತಾರೆ. ವೆಬ್ ಸೈಟ್ ತಯಾರಿಕೆ ಬಗ್ಗೆ ಕಲಿತಾರೆ.
ನಮ್ಮ ಕಾಲೇಜುಗಳಲ್ಲಿ ಆ ಕೊರತೆ ಇದೆ. ನಿಮ್ಮ ಕಾಲೇಜಿನ ಪ್ರಾಯೋಗಿಕ ಸಂಚಿಕೆಗಳನ್ನು ನೋಡಿದೆ. ಅದರಲ್ಲಿ ಬಹುತೇಕ ಕಾರ್ಯಕ್ರಮಗಳ ವರದಿಗಳಿವೆ. ಆದರೆ ವರದಿಗಾರಿಕೆ ಅಂದರೆ ಅಷ್ಟೇ ಅಲ್ಲ. ನೀವು ಹೊರಗೆ ಹೋಗಬೇಕು, ಜನರ ಸಮಸ್ಯೆ ಬಗ್ಗೆ ತಿಳಿದುಕೊಳ್ಳಬೇಕು, ಜನರೊಂದಿಗೆ ಮಾತನಾಡಬೇಕು ವರದಿ ಮಾಡಬೇಕು.

ನೀವು ಸಂಪಾದಕರು ಹಾಗೂ ಫೋಟೋ ಜರ್ನಲಿಸ್ಟ್ ಕೂಡ ಹೌದು. ನೀವು ನಿಮ್ಮ ಪತ್ರಿಕೆಯಲ್ಲಿ ಯಾವುದಕ್ಕೆ ಹೆಚ್ಚಿನ ಸ್ಪೇಸ್ ಕೊಡ್ತೀರಾ – ಫೋಟೋಗಾ..ಸುದ್ದಿಗಾ? ಏಕೆಂದರೆ, ಒಂದು ಫೋಟೋ ಸಾವಿರ ಪದಗಳಿಗೆ ಸಮ ಅಂತಾರಲ್ಲ..
ಶಾಂತಕುಮಾರ್: ಎಲ್ಲಾ ಫೋಟೋಗಳೂ ಸಾವಿರ ಪದಗಳಿಗೆ ಸಮ ಅಲ್ಲ. ಕೆಲವು ಫೋಟೋಗಳು ಮಾತ್ರ. ಫೋಟೋಗಳ ಬಳಗೆ ಸುದ್ದಿಯ ಮೇಲೆ ಅವಲಂಬಿತವಾಗಿರುತ್ತೆ. ಇತ್ತೀಚೆಗೆ ನಡೆದ ಏರೋ ಶೋ ಬಗ್ಗೆ ಸುದ್ದಿಯ ಜೊತೆಗೆ ಹೆಚ್ಚು ಫೋಟೋಗಳಿರಬೇಕು ಅಂತ ಜನ ಬಯಸುತ್ತಾರೆ. ಅದೇರೀತಿ ಸಿನಿಮಾ, ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ಸುದ್ದಿಗಳು, ಕ್ರೀಡಾ ಸುದ್ದಿಗಳಗಲ್ಲಿ ಸಹಜವಾಗಿ ಫೋಟೋಗಳು ಹೆಚ್ಚು ಬಳಕೆಯಾಗುತ್ತವೆ.

ಪ್ರಜಾವಾಣಿ ಇತರೆ ಪತ್ರಿಕೆಗಳೊಂದಿಗೆ ಯಾವ ರೀತಿಯ ಸ್ಪರ್ಧೆ ಎದುರಿಸುತ್ತಿದೆ?
ಶಾಂತಕುಮಾರ್: ಯಾವ ರೀತಿ..ಅಂದರೆ…ಎಲ್ಲಾ ರೀತಿಯಲ್ಲೂ ಸ್ಪರ್ಧಿಸಬೇಕು. ಮುದ್ರಣ ಗುಣಮಟ್ಟ ಚೆನ್ನಾಗಿರಬೇಕು. ವರದಿಗಾರಿಕೆ ಚೆನ್ನಾಗಿರಬೇಕು. ಆದರೆ ಕೆಲವೊಮ್ಮೆ ಒತ್ತಡ ಬರುತ್ತೆ. ಪತ್ರಿಕೋದ್ಯಮದ ಮೂಲಭೂತ ತತ್ತ್ವಗಳನ್ನು ಬಿಟ್ಟು, ಅಂದರೆ ಉಪ್ಪು-ಕಾರ ಹಾಕಿ ಸುದ್ದಿ ಮಾಡುವವರು ಇರ್ತಾರೆ. ಎಲ್ಲರೂ ಅಲ್ಲ. ಕೆಲವರು. ಆಗ ನಾವೂ ಹಾಗೇ ಮಾಡಬೇಕು ಎನ್ನುವ ಒತ್ತಡಗಳು ಬರುತ್ತಿರುತ್ತೆ. ಆದರೆ ನಾವು ಅಂತಹ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತೆ.
ಅಲ್ಲದೆ ಪತ್ರಿಕೆಗಳ ಪ್ರಸರಣದಲ್ಲಿ ಪೈಪೋಟಿ ಇದೆ. ಎಲ್ಲಾ ಕಡೆ ಬೆಳಗ್ಗೆ 6 ಗಂಟೆ ಪತ್ರಿಕೆಗಳು ತಲುಪಬೇಕು. ಮಾರ್ಕೆಟಿಂಗ್, ಜಾಹೀರಾತು ವಿಭಾಗಗಳಲ್ಲಿ ಪೈಪೋಟಿ ಇದೆ. ಅವೆಲ್ಲಾ ಸಹಜ. ಬದಲಾಗಬೇಕಾಗುತ್ತದೆ. ನಮ್ಮ ದೃಢವಾದ ನಿಲುವು ಏನೆಂದರೆ, ಪತ್ರಿಕೋದ್ಯಮದ ಮೂಲಭೂತ ತತ್ತ್ವಗಳನ್ನು ಬಿಡದೆ, ಬದಲಾಗಬೇಕು ಎನ್ನುವುದು.

ಸಣ್ಣ ಪತ್ರಿಕೆಗಳು ದೊಡ್ಡ ಪತ್ರಿಕೆಗಳಿಂದ ಸಾಕಷ್ಟು ಪೈಪೋಟಿ ಎದುರಿಸುತ್ತಿವೆಯಲ್ಲ?
ಶಾಂತಕುಮಾರ್: ಎಲ್ಲಾ ಪತ್ರಿಕೆಗಳಿಗೂ, ಎಲ್ಲಾ ರೀತಿಯ ಪತ್ರಿಕೆಗಳಿಗೂ ಅದರದೇ ಆದ ಸ್ಥಾನ ಇದೆ. ಪೀತ ಪತ್ರಿಕೆಗಳಿವೆ. ಆದರೆ ಅವನ್ನೂ ಓದುವ ಜನರಿದ್ದಾರಲ್ಲ? ಎಲ್ಲಾ ಪತ್ರಿಕೆಗಳೂ ಪ್ರಜಾವಾಣಿ ತರಹವೇ ಇರಬೇಕು ಎಂದರೆ, ಈ ಪ್ರಪಂಚ ಎಷ್ಟು ಬೋರಿಂಗ್ ಆಗಿರುತ್ತೆ ಅಲ್ಲವಾ?
ಎಲ್ಲದಕ್ಕೂ ಅದರದೇ ಸ್ಥಾನಮಾನ, ಬೇಡಿಕೆ ಇದ್ದೇ ಇರುತ್ತೆ. ಒಂದ ಸಣ್ಣ ಊರಿನ ಸಮುದಾಯವನ್ನು ಆಳವಾಗಿ ಪ್ರತಿನಿಧಿಸಲು ಸಣ್ಣ ಪತ್ರಿಕೆಗೆ ಸಾಧ್ಯವಾಗುವಂತೆ, ದೊಡ್ಡ ಪತ್ರಿಕೆಗೆ ಸಾಧ್ಯವಾಗದೇ ಇರಬಹುದು.

ಪತ್ರಕರ್ತರು ವೃತ್ತಿಯಲ್ಲಿದ್ದಾಗ ಸಾವು-ನೋವು ಅನುಭವಿಸಿದರೆ ನೀವು ಅವರ ಕುಟುಂಬಕ್ಕೆ ಹೇಗೆ ನೆರವು ಕೊಡ್ತೀರಿ?
ಶಾಂತಕುಮಾರ್: ನಾನು ನಮ್ಮ ಸಂಸ್ಥೆಯಲ್ಲಿರುವ ವ್ಯವಸ್ಥೆ ಬಗ್ಗೆ ಹೇಳಬಹುದು. ಬೇರೆ ಸಂಸ್ಥೆಗಳ ಬಗ್ಗೆ ಹೇಳಲಾಗುವುದಿಲ್ಲ. ನಮ್ಮ ಸಂಸ್ಥೆಯಲ್ಲಿ ಕೆಲಸದಲ್ಲಿರುವವರು ಅಪಘಾತಕ್ಕೆ ಈಡಾದಾಗ ಅವರು ವೈದ್ಯಕೀಯ ವೆಚ್ಚ ಭರಿಸಿದ್ದೇವೆ. ಅವರ ಅನಾರೋಗ್ಯದ ದಿನಗಳಲ್ಲೂ ಸಂಬಳ ನೀಡಿದ್ದೇವೆ. ಎರಡು ವರ್ಷಗಳ ಹಿಂದೆ ಡೆಕ್ಕನ್ ಹೆರಾಲ್ಡ್ ವರದಿಗಾರರೊಬ್ಬರು ಪೊಲೀಸರ ತಪ್ಪಿನಿಂದಾಗಿ ಭಯೋತ್ಪಾದಕನೆಂಬ ಹಣೆಪಟ್ಟಿ ತೊಟ್ಟು KN-Shanthakumar-prajavani-Hasana-1ನ್ಯಾಯಾಂಗ ಬಂಧನದಲ್ಲಿದ್ದ. ಆ ನಂತರ ಅವರ ವಿರುದ್ಧ ಯಾವುದೇ ಸಾಕ್ಷಿಗಳು ದೊರಕದೆ ಬಿಡುಗಡೆಯಾದರು. ವರದಿಗಾರ ಬಂಧನದಲ್ಲಿದ್ದ ಅಷ್ಟೂ ದಿನಗಳ ಸಂಬಳವನ್ನು ಸಂಸ್ಥೆ ನೀಡಿದೆ. ಆ ವರದಿಗಾರ ಇಂದಿಗೂ ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಓಳ್ಳೆ ಪತ್ರಕರ್ತ ಅಂದ್ರೆ ಇರಬೇಕಾದ ಮುಖ್ಯ ಗುಣಗಳೇನು..?
ಶಾಂತಕುಮಾರ್: ಮೊದಲನೆಯದು ಪ್ರಾಮಾಣಿಕತೆ. ಪ್ರಶ್ನೆ ಮಾಡದೆ ಏನನ್ನೂ ಒಪ್ಪಬಾರದು. ಇತ್ತೀಚಿನ ದಿನಗಳಲ್ಲಿ ಯುವ ಪತ್ರಕರ್ತರಲ್ಲಿ ಕಾಣುತ್ತಿರುವ ಕೊರತೆಗಳು ಅಂದರೆ ಭಾಷಾ ಜ್ಞಾನ ಕೊರತೆ. ಲೋಪದೋಷಗಳಿಲ್ಲದೆ, ಕಾಗುಣಿತ ತಪ್ಪಿಲ್ಲದೆ ಬರೆಯುವುದು ಮುಖ್ಯ. ಬಹಳ ಮುಖ್ಯವಾಗಿ ಸಾಮಾನ್ಯ ಜ್ಞಾನ ಇರಬೇಕು. ಅದಕ್ಕಾಗಿ ಹೆಚ್ಚೆಚ್ಚು ಓದಬೇಕು. ಕೇವಲ ಸಾಹಿತ್ಯ ಓದಿ ಅಂತ ಹೇಳೋಲ್ಲ. ಎಲ್ಲವನ್ನೂ ಓದಬೇಕು. ಅದು ದಿನಚರಿಯ ಭಾಗವಾಗಬೇಕು. ಹೆಚ್ಚೆಚ್ಚು ತಿಳಿದುಕೊಳ್ಳಬೇಕು ಎನ್ನುವು ಉತ್ಸಾಹ ಇರಬೇಕು.

ಸಾಮಾಜಿಕ ನ್ಯಾಯ ಕೊಡಿಸುವುದು, ಸಮಾಜ ಸೇವೆ ಮಾಡೋದು ಪತ್ರಿಕೆಗಳ ಮುಖ್ಯ ಉದ್ದೇಶ. ಆದರೆ ಇತ್ತೀಚೆಗೆ ಕೇವಲ ಲಾಭ ಮಾಡುವುದೇ ಉದ್ದೇಶ ಆಗಿದೆ ಎನ್ನುವ ಆರೋಪಗಳಿವೆಯಲ್ಲ..?
ಶಾಂತಕುಮಾರ್: ಸಮಾಜ ಸೇವೆ ಮಾಡಬೇಕು ಎಂದರೆ, ಪತ್ರಿಕಾ ಸಂಸ್ಥೆ ಮೊದಲು ಜೀವಂತವಾಗಿರಬೇಕು. ನಮ್ಮ ಪತ್ರಿಕೆಯ ಆರ್ಥಿಕ ಸ್ಥಿತಿಗತಿ ಬಹಳ ಮುಖ್ಯ. ನಷ್ಟ ಮಾಡಕೊಳ್ತಾನೇ ಇದ್ರೆ, ನಷ್ಟ ಅನುಭವಿಸಿ..ಒಂದು ದಿನ ಮುಚ್ಚಿ ಹೋಗ್ತೇವೆ ಅಷ್ಟೆ. ಕೇವಲ ಸಮಾಜ ಸೇವೆ ಮಾಡೋಕೆ ಇದು ಆಶ್ರಮ ಅಲ್ಲ. ಇದೂ ಒಂದು ಬುಸಿನೆಸ್. ಸುತ್ತೂರು ಮಠ ಅಥವಾ ಇನ್ನೊಂದು ಮಠ ಆದರೆ, ಅದಕ್ಕೆ ಭಕ್ತರು ಇರ್ತಾರೆ. ಅವರು ದಾನ ಕೊಡ್ತಾರೆ. ಅಲ್ಲಿ ಸಮಾಜ ಸೇವೆ ನಡೆಯುತ್ತೆ. ಆದರೆ ನಮ್ಮದು ಹಾಗಲ್ಲ. ಇಲ್ಲಿ ಬಂಡವಾಳ ಹೂಡಿಕೆ ಆಗಿದೆ. ಹೂಡಿಕೆ ಮಾಡಿದವರಿಗೆ ನಾವು ಹಿಂತಿರುಗಿಸಿ ಕೊಡಬೇಕಾಗುತ್ತದೆ. ಹಾಗಾಗಿ ಪತ್ರಿಕಾ ಸಂಸ್ಥೆ ಆರ್ಥಿಕವಾಗಿ ಸದೃಢವಾಗಿರಬೇಕು. ಅದರ ಜೊತೆಗೆ ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು. ಎರಡರ ನಡುವೆ ಸಮತೋಲನೆ ಇರಬೇಕು. ದುಡ್ಡು ಮಾಡೋದು ಒಂದೇ ಉದ್ದೇಶ ಆಗಬಾರದು.

ಪತ್ರಿಕಾ ಸಂಸ್ಥೆಗಳು ಪತ್ರಿಕೋದ್ಯಮ ಕಾಲೇಜುಗಳ ಜೊತೆ ಕೈ ಜೋಡಿಸಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಮಾಡಿದರೆ ಒಳ್ಳೆಯದಲ್ಲವಾ?
ಶಾಂತಕುಮಾರ್: ಮಾಡಬಹುದು. ನಾನು ಕೆಲವು ಸಂಸ್ಥೆಗಳ ಜೊತೆಗೆ ಇಂತಹ ಆಫರ್ ಮಾಡಿದ್ದೇನೆ. ಆದರೆ..ಇಷ್ಟು ಮಾತ್ರ ಹೇಳಬಹುದು ಅಂದರೆ, ನಾವು ಇಂತಹ ಪ್ರಯತ್ನಗಳಿಗೆ ತಯಾರಾಗಿದ್ದೇವೆ. ಕಲಿಕೆಯಲ್ಲಿ ಉದ್ಯಮದ ಸಹಭಾಗಿತ್ವ ಇರಬೇಕು.

ಒಂದು ಪತ್ರಿಕೆಗೆ ಸಂಪಾದಕ ಹಾಗೂ ಮಾಲೀಕ ಒಬ್ಬರೇ ಆಗಿರುವುದು ಒಳ್ಳೆಯದಾ..? ಅಥವಾ..?
ಶಾಂತಕುಮಾರ್: ಅದನ್ನು ನೀವು ಹೇಳಬೇಕು. ನಾವು ಕೆಲವು ಮಾಲೀಕರು-ಸಂಪಾದಕರುಗಳು ಸಂಪೂರ್ಣವಾಗಿ ಹ್ಯಾಂಡ್ಸ್-ಆನ್ ಎಡಿಟರ್ಸ್ ಅಲ್ಲ. ನಾವು ದಿನನಿತ್ಯ ಬರೆಯುವುದಿಲ್ಲ. ಸೂಪರ್ವೈಸ್ ಮಾಡ್ತೀವಿ. ನಾಯಕತ್ವ ಕೊಡ್ತೀವಿ. ಕೆಲವು ಸಂಸ್ಥೆಗಳಲ್ಲಿ prajavaniವ್ಯತ್ಯಾಸಗಳಿವೆ. ಉದಾಹರಣೆಗೆ ದಿ ಹಿಂದು. ಅಲ್ಲಿ ಮಾಲೀಕರು-ಸಂಪಾದಕರುಗಳು ಪರಿಪೂರ್ಣವಾಗಿ ಕೆಲಸ ತೊಡಗಿಸಿಕೊಂಡವರು. ದಿನನಿತ್ಯ ಕೆಲಸ ಮಾಡ್ತಾರೆ. ಅವರ ಹೊರತಾಗಿ, ಉಳಿದ ಬಹುತೇಕರು ಪಾರ್ಟ್ ಟೈಮರ್ಸ್. ಅದರಿಂದ ನನಗಂತೂ ಏನೂ ಸಮಸ್ಯೆ ಕಾಣುವುದಿಲ್ಲ. ಏನಾದ್ರೂ ಇದ್ದರೆ..ನೀವು ಹೇಳಬೇಕು.

ಪತ್ರಿಕೆಗಳು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದಿರಿ. ಆದರೆ ಒಂದೊಂದು ಪತ್ರಿಕೆಯೂ ಒಂದೊಂದು ಸಿದ್ಧಾಂತಕ್ಕೆ (ಐಡಿಯಾಲಜಿಗೆ) ಅಥವಾ ಪಕ್ಷಕ್ಕೆ ಕಟ್ಟುಬಿದ್ದರೆ, ಸತ್ಯ ಮರೆಮಾಚಿದಂತಾಗುವುದಿಲ್ಲವೆ..?
ಶಾಂತಕುಮಾರ್: ಪ್ರಜಾವಾಣಿಯ ಐಡಿಯಾಲಜಿ ಏನು..ನಿಮ್ಮ ಪ್ರಕಾರ.

ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಗುವುದನ್ನು ನೋಡಿದರೆ, ಪ್ರಜಾವಾಣಿಯಲ್ಲಿ ಪ್ರಕಟವಾಗು ಅಂಕಣಗಳೆಲ್ಲಾ ಎಡಪಂಥೀಯ ಚಿಂತನೆಗೆ ಹತ್ತಿರವಾಗಿವೆ ಎಂಬ ಅಭಿಪ್ರಾಯ ಇದೆ.
ಶಾಂತಕುಮಾರ್: ನೀವು ಹೇಳಿದ್ದು ಸ್ವಲ್ಪಮಟ್ಟಿಗೆ ಸರಿ ಇರಬಹುದು. ಆದರೆ ಸಂಪೂರ್ಣವಾಗಿ ಅಲ್ಲ. ಈ ಮೊದಲು ಸ್ವಲ್ಪ ಹೆಚ್ಚು ಇತ್ತು ಅನ್ಸುತ್ತೆ. ಈಗ ಸ್ವಲ್ಪ ಬದಲಾಗಿದೆ. ನನಗಿರುವ ಒಂದು ಸಮಸ್ಯೆ ಎಂದರೆ, ನಮ್ಮನ್ನು ಈ ತರಹ ಲೇಬಲ್ ಮಾಡಿ ಬಿಡ್ತಾರೆ. ಹೀಗೆ ಎಡಪಂಥೀಯರು ಎಂದು ಲೇಬಲ್ ಮಾಡಿಬಿಟ್ಟರೆ, ಬಲಪಂಥೀಯರು ನಮಗೆ ಬರೆಯೋಕೆ ಮುಂದೆ ಬರೋಲ್ಲ. ನಾನು ಒಂದು ಬ್ಯಾಲೆನ್ಸ್ ತರಬೇಕು ಅಂತ ಹುಡುಕ್ತಾ ಇದೀನಿ. ಹಾಗಂತ ನಾವು ರಾಡಿಕಲ್ ಬಲಪಂಥೀಯರನ್ನಾಗಲಿ, ರಾಡಿಕಲ್ ಎಡಪಂಥೀಯರನ್ನಾಗಲಿ ಸೇರಿಸಿಕೊಳ್ಳಲ್ಲ. ಬಲಪಂಥೀಯರಲ್ಲಿ. ಪತ್ರಿಕೆಗಳಲ್ಲಿ ಎಲ್ಲದಕ್ಕೂ ಸ್ಪೇಸ್ ಇರಬೇಕು.
ಆದರೆ ತಾನು ಯಾವ ಸಿದ್ಧಾಂತಕ್ಕೂ ಬದ್ಧನಲ್ಲ, ನಿಷ್ಪಕ್ಷಪಾತವಾಗಿ ಪತ್ರಿಕೆ ನಡೆಸುತ್ತೇನೆ ಎಂದು ಹೇಳಿಕೊಂಡು, ಒಳಗೊಳಗೇ.. ಮುಸುಕು ಹಾಕಿಕೊಂಡು ನಿಗೂಢವಾಗಿ ಪಕ್ಷಪಾತಿಯಾಗಿ ಕೆಲಸ ಮಾಡುತ್ತಿದ್ದರೆ.. ಅದು ಅಪಾಯಕಾರಿ. ಆದರೆ ಮುಕ್ತವಾಗಿದ್ದರೆ.. ಏನೂ ತೊಂದರೆ ಇಲ್ಲ. ಕೆಲವೆಡೆ ಪಾರ್ಟಿ ಮುಖವಾಣಿಗಳಿವೆ. ಅದು ಸರಿ. ತಪ್ಪೇನಿಲ್ಲ. ಜನರಿಗೆ ಅದ ಯಾರ ಪತ್ರಿಕೆ ಎನ್ನುವುದು ಸ್ಪಷ್ಟವಾಗಿ ಗೊತ್ತಿರುತ್ತೆ.

4 thoughts on “ಸಮಾಜ ಸೇವೆ ಮಾಡೋಕೆ, ಪತ್ರಿಕಾ ಸಂಸ್ಥೆ ಮೊದಲು ಬದುಕಿರಬೇಕಲ್ಲ? : ಕೆ.ಎನ್.ಶಾಂತಕುಮಾರ್

  1. Anonymous

    ಪ್ರಶ್ನೆಗಳು ಪ್ರಬುದ್ಧವಾಗಿವೆ. ಉತ್ತರಗಳು ಪ್ರಾಮಾಣಿಕವಾಗಿವೆ.

    Reply
  2. Arkalgud Jayakumar

    MR Shanthakumar,
    ಪತ್ರಿಕೆಗಳಲ್ಲಿ ಎಲ್ಲದಕ್ಕೂ ಸ್ಪೇಸ್ ಇರಬೇಕು.
    ಆದರೆ ತಾನು ಯಾವ ಸಿದ್ಧಾಂತಕ್ಕೂ ಬದ್ಧನಲ್ಲ, ನಿಷ್ಪಕ್ಷಪಾತವಾಗಿ ಪತ್ರಿಕೆ ನಡೆಸುತ್ತೇನೆ ಎಂದು ಹೇಳಿಕೊಂಡು, ಒಳಗೊಳಗೇ.. ಮುಸುಕು ಹಾಕಿಕೊಂಡು ನಿಗೂಢವಾಗಿ ಪಕ್ಷಪಾತಿಯಾಗಿ ಕೆಲಸ ಮಾಡುತ್ತಿದ್ದರೆ.. ಅದು ಅಪಾಯಕಾರಿ. ಎಂಬ ನಿಮ್ಮ ಮಾತು ಪ್ರಜಾವಾಣಿಯ ಮಟ್ಟಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಅನ್ವಯಿಸುತ್ತಿದೆ ಅನಿಸುತ್ತಿದೆ. ನನ್ನ ಬಾಲ್ಯದ ದಿನಗಳಿಂದಲೂ ಪ್ರಜಾವಾಣಿಯನ್ನು ಓದಿಕೊಂಡೆ ಬಂದವನು, ನನ್ನ ಚಿಂತನಾ ಕ್ರಮಗಳನ್ನು ರೂಪಿಸಿದ್ದು ಪ್ರಜಾವಾಣಿ ಎಂಬ ಹೆಮ್ಮೆ ಇದೆ ಆದರೆ ಇತ್ತೀಚಿನ ದಿನಗಳಲ್ಲಿ ಪತ್ರಿಕೆ ನಿಮ್ಮ ಹಿಡಿತ ತಪ್ಪಿದೆ ಎಂದು ಅನಿಸಲು ಶುರುವಾಗಿದೆ.
    ಮಿತ್ರ ಸತೀಶ್ ಶಿಲೆ ಪ್ರಶ್ನೋತ್ತರವನ್ನು ಅವಗಾಹನೆಗೆ ತಂದಿದ್ದಕ್ಕೆ ಥ್ಯಾಂಕ್ಸ್

    Reply

Leave a Reply

Your email address will not be published. Required fields are marked *