Category Archives: ರವಿ ಕೃಷ್ಣಾರೆಡ್ಡಿ

ವರ್ತಮಾನ ಬಳಗದ ಪುಟ್ಟ ಸಮಾಗಮ, ಎಸ್.ಆರ್.ಹಿರೇಮಠ್ ಮತ್ತು ಕಥಾಸ್ಪರ್ಧೆಯ ವಿಜೇತರೊಂದಿಗೆ…

ಆತ್ಮೀಯರೇ,

ಮೊನ್ನೆ ನಮ್ಮ ವರ್ತಮಾನ ಬಳಗವರು ಮತ್ತು ಕೆಲವು ಸ್ನೇಹಿತರು ಈ ಬಾರಿಯ (೨೦೧೪) ಗಾಂಧಿ ಜಯಂತಿ ಕಥಾಸ್ಪರ್ಧೆಯಲ್ಲಿ ಬಹುಮಾನಿತ ಕತೆಗಳನ್ನು ಬರೆದಿರುವ ಕೆಲವು ಕತೆಗಾರರೊಂದಿಗೆ ಊಟಕ್ಕೆಂದು ಸೇರಿದ್ದೆವು. ಕಥಾಸ್ಪರ್ಧೆಯ ಮೊದಲ ಮೂರು ಬಹುಮಾನಿತ ಕತೆಗಳನ್ನು ಬರೆದಿರುವ ಕತೆಗಾರರು ಮತ್ತು ಈ ಬಾರಿಯ ತೀರ್ಪುಗಾರರು ಅಂದು ಬೆಂಗಳೂರಿನಲ್ಲಿ ಇರುತ್ತಾರೆ ಎನ್ನುವ ಕಾರಣಕ್ಕೆ ಈ ಪುಟ್ಟ ಸಮಾಗಮ. ಹಾಗೆಯೇ, ನಮ್ಮ ರಾಜ್ಯದ ವರ್ಷದ ವ್ಯಕ್ತಿಯಾಗಿ ನಮ್ಮ ವರ್ತಮಾನ ಬಳಗ ಆಯ್ಕೆ ಮಾಡಿದ್ದ ಎಸ್.ಆರ್.ಹಿರೇಮಠರೂ ನೆನ್ನೆ ಬೆಂಗಳೂರಿನಲ್ಲಿ ಇದ್ದರು. ಸಾಧ್ಯವಾದರೆ ಅವರ ಜೊತೆ ಸ್ವಲ್ಪ ಸಮಯ ಕಳೆದು ನಮ್ಮ ಕತೆಗಾರರಿಗೆ ಅವರಿಂದಲೇ ಬಹುಮಾನ ವಿತರಣೆ ಮಾಡಿಸಬೇಕೆಂದು ಅಂದುಕೊಂಡಿದ್ದೆವು.

ಬೆಂಗಳೂರಿನ ಗಾಂಧಿನಗರದಲ್ಲಿರುವ ಬಸಂತ್ ರೆಸಿಡೆನ್ಸಿ ಹೋಟೆಲ್‌ನಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳದ ರೊಟ್ಟಿ ಊಟ ಸಿಗುತ್ತದೆ. ಅಲ್ಲಿ ಸೇರಿದ್ದೆವು. katha-sprade-2014-223x300ನಮ್ಮ ವರ್ತಮಾನ.ಕಾಮ್‌ನೊಂದಿಗೆ ಮೊದಲಿನಿಂದಲೂ ಬೆನ್ನೆಲುಬಾಗಿ ನಿಂತಿರುವ ನಾಲ್ಕೈದು ಜನ ಬೆಂಗಳೂರಿನ ಹೊರಗೆಯೇ ಇರುವುದರಿಂದ ಅವರು ಪಾಲ್ಗೊಳ್ಳಲಾಗಲಿಲ್ಲ ಮತ್ತು ನಗರದಲ್ಲಿಯೇ ಇರುವ ಇನ್ನೂ ಕೆಲವರು ಕಾರ್ಯಬಾಹುಳ್ಯದಿಂದಾಗಿ ಬರಲಾಗಲಿಲ್ಲ. ಬರಬೇಕಾಗಿದ್ದ ಈ ಬಾರಿಯ ತೀರ್ಪುಗಾರರಾಗಿದ್ದ ಎಸ್.ಗಂಗಾಧರಯ್ಯನವರೂ ಬರಲಾಗಿರಲಿಲ್ಲ. ಅವರನ್ನು ಬಿಟ್ಟರೆ ಒಟ್ಟಾರೆಯಾಗಿ ನಮ್ಮ ಬಳಗದ ಬಹುತೇಕರು ಹಾಜರಿದ್ದರು.

ಊಟದ ನಂತರ ಎಸ್.ಆರ್.ಹಿರೇಮಠರು ಹಾಜರಿದ್ದ ಕರೆಗಾರರಾದ ಟಿ.ಎಸ್.ವಿವೇಕಾನಂದ, ಟಿ.ಕೆ.ದಯಾನಂದ್, ಮತ್ತು ಎಚ್.ಎಸ್.ಅನುಪಮರಿಗೆ ಬಹುಮಾನಗಳನ್ನು ಕೊಟ್ಟರು. ಕಳೆದ ಬಾರಿಯ ತೀರ್ಪುಗಾರರಾಗಿದ್ದ ರಾಮಲಿಂಗಪ್ಪ ಟಿ.ಬೇಗೂರುರವರು ಈ ಸಂದರ್ಭದಲ್ಲಿ ಹಾಜರಿದ್ದು, ಬಹಳ ಆಪ್ತ ವಾತಾವರಣದಲ್ಲಿ, ಒಂದು ರೀತಿಯಲ್ಲಿ ಖಾಸಗಿಯಾಗಿ ಇದು ಮುಗಿಯಿತು.

ಈ ಪುಟ್ಟ ಸಮಾಗಮಕ್ಕೆ ಆಗಮಿಸಿದ್ದ ಎಸ್.ಆರ್.ಹಿರೇಮಠ್, ಡಾ.ರಾಮಲಿಂಗಪ್ಪ ಟಿ.ಬೇಗೂರು, ಟಿ.ಎಸ್.ವಿವೇಕಾನಂದ ಮತ್ತು ಕುಟುಂಬದವರು, ಟಿ.ಕೆ.ದಯಾನಂದ್, ಡಾ.ಎಚ್.ಎಸ್.ಅನುಪಮ, ಬಿ.ಶ್ರೀಪಾದ ಭಟ್, ಜಯಶಂಕರ ಹಲಗೂರು, ಆನಂದ ಯಾದವಾಡ ಮತ್ತು ಕುಟುಂಬದವರು, ರವಿ ಮತ್ತು ಕುಟುಂಬದವರು, ಈಶ್ವರ್ ಮತ್ತು ಕುಟುಂಬದವರು, ಫ್ರಭಾ ಎನ್. ಬೆಳವಂಗಲ, ನವೀನ್ ಸೂರಿಂಜೆ, ತೇಜ ಸಚಿನ್ ಪೂಜಾರಿ, ಡಾ. ಅಶೋಕ್ ಕೆ,ಆರ್., ಅನಂತ ನಾಯ್ಕ, ಶಾಂತಲಾ ದಾಮ್ಲೆ, ಪ್ರಶಾಂತ್ ಹುಲ್ಕೋಡು, ಚಂದ್ರಶೇಖರ ಬೆಳಗೆರೆ, ಬಸವರಾಜು, ಶ್ರೀಧರ್ ಪ್ರಭು, ನಿತಿನ್, ಬಸೂ ಸೂಳಿಬಾವಿ ಮತ್ತವರ ಸ್ನೇಹಿತರು- ಎಲ್ಲರಿಗೂ ವರ್ತಮಾನ ಬಳಗದಿಂದ ಧನ್ಯವಾದ ಮತ್ತು ಕೃತಜ್ಞತೆಗಳು.

ಮತ್ತೊಮ್ಮೆ ಬಂದ ಎಲ್ಲಾ ಸ್ನೇಹಿತರಿಗೂ ಬಳಗದ ಪರವಾಗಿ ಧನ್ಯವಾದಗಳು.

ನಮಸ್ಕಾರ,
ರವಿ
ವರ್ತಮಾನ ಬಳಗದ ಪರವಾಗಿ.

vartamana_spardhe_1

 

vartamana_spardhe_2

ಭಾವ ಬುದ್ಧಿಗಳು ಒಂದಾಗಿ ಮೇಳೈಸಿದೊಡೆ …


 -ಎಸ್.ಗಂಗಾಧರಯ್ಯ


ಗಾಂಧಿ ಜಯಂತಿ ಪ್ರಯುಕ್ತ ವರ್ತಮಾನ ಬಳಗ ಆಯೋಜಿಸಿದ್ದ ಕಥಾ ಸ್ಪರ್ಧೆಗೆ ಬಂದಿದ್ದ ನಲವತ್ತು ಕಥೆಗಳನ್ನು ಓದಲು ನಾನು ತೆಗೆದುಕೊಂಡಿದ್ದು ಬರೋಬ್ಬರಿ ಎರಡು ತಿಂಗಳು.katha-sprade-2014-223x300 ಈ ಹೊತ್ತಿನಲ್ಲಿ ನನಗೆ ಸ್ಪಷ್ಟವಾಗಿದ್ದು- ಖುಷಿಗೆ ಕಥೆಯೊಂದನ್ನು ಓದುವುದಕ್ಕೂ, ವಿಮರ್ಶೆಗಾಗಿ ಕಥೆಯೊಂದನ್ನು ಓದುವುದಕ್ಕೂ, ಇಲ್ಲಾ ಯಾವ ದೃಷ್ಟಿಯಲ್ಲಿ ಇದು ಹೆಚ್ಚು ಪರಿಣಾಮಕಾರಿ ಅಥವಾ ಅದು ಕಥೆಯಾಗಿದೆಯೋ ಇಲ್ಲವೋ ಅನ್ನುವುದನ್ನು ಗುರುತಿಸುದಕ್ಕೂ ಇರಬಹುದಾದ ಹಾಗೂ ಇರಲೇಬೇಕಾದ ಎಚ್ಚರ. ಎಂದೂ ಇಂಥ ಇಕ್ಕಟಿಗೆ ಸಿಲುಕದಿದ್ದ ನಾನು ಅಥವಾ ಇಂಥದ್ದೊಂದು ಶಿಸ್ತಿನ ಓದಿಗೆ ಒಳಪಡಿಸಿಕೊಳ್ಳದಿದ್ದ ನಾನು ಇಲ್ಲಿನ ಅನೇಕ ಕಥೆಗಳನ್ನು ಎರಡು, ಮೂರು ಸರ್ತಿ ಓದಿದ್ದು ಒಂದು ಕಡೆಗಿದ್ದರೆ, ಕೆಲವು ಕಥೆಗಳು ಪ್ರತೀ ಓದಿನಲ್ಲೂ ಬೇರ ಬೇರೆ ರೀತಿಯಲ್ಲಿ ಓದಿಸಿಕೊಳ್ಳತೊಡಗಿದ್ದು ಹಾಗೂ ಕಥೆಯೊಂದಕ್ಕೆ ಇರಬಹುದಾದ ಸಾಧ್ಯತೆಗಳನ್ನು ಹೇಳುತ್ತಲೇ ಅದು ಓದುಗನಾದ ನನ್ನೊಳಗೆ ವಿಸ್ತರಿಸಿಕೊಳ್ಳುತ್ತಾ ಹೋಗುವ ಅಚ್ಚರಿಯ ಪರಿ ಮತ್ತೊಂದು ಕಡೆಗಿತ್ತು. ಭಾವ, ಬುದ್ಧಿಗಳು ಒಂದಾಗಿ ಮೇಳೈಸಿದೊಡೆ ಏನಾಗ ಬಹುದೋ ಅದೆಲ್ಲಾ ಇಲ್ಲಿ ಘಟಿಸಿದೆ. ಹಾಗಾಗಿ ಈ ಅಷ್ಟೂ ಕಥೆಗಳನ್ನು ಓದುವಂಥ ಹೊತ್ತಲ್ಲಿ ಅವು ಉಂಟುಮಾಡಿರುವ ತೀವ್ರತೆ, ಪರಿಣಾಮ ಹಾಗೂ ಹೊಸ ಲೋಕ, ಹೊಸ ಪರಿಭಾಷೆಗಳ ಹಿನ್ನೆಲೆಯೇ ನನ್ನ ಆಯ್ಕೆಗಳ ಹಿನ್ನೆಲೆಯಲ್ಲಿ ಕೆಲಸ ಮಾಡಿದೆ ಅನ್ನುವುದನ್ನು ಹೇಳುತ್ತಲೇ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಹಾಗೂ ಭಾಗವಹಿಸಿದ ಎಲ್ಲಾ ಕಥೆಗಾರರಿಗೂ ಅಭಿನಂದನೆ ಸಲ್ಲಿಸುತ್ತೇನೆ.

ಮೊದಲ ಬಹುಮಾನ ಪಡೆದ ಕಥೆ ‘ಕಾಲ ವ್ಯಾಧಿ’, ಕಾಲವೇ ವ್ಯಾಧಿಯಾಗುವ, ಅದೇ ಮುಂದೊಂದು ದಿನ ಅದೇ ವ್ಯಾಧಿಗೆ ಮದ್ದಾಗುವ ವಿಶೇಷ ಲೋಕವೊಂದನ್ನು ಅನಾವರಣಗೊಳಿಸುತ್ತದೆ. ಹರಿಯುವ ಕಾಲದೊಂದಿಗೆ ದೇಗುವ ಬದುಕು, ಅದರೊಳಗಿನ ಪ್ರೇಮ, ಕಾಮ, ನೆನಪು, ಕನಸು, ವಾಸ್ತವಗಳ ನಡುವೆ ತುಯ್ದಾಡುತ್ತಾ ಏಕ ಕಾಲಕ್ಕೆ ಮನಸ್ಸಿನ ಖಾಯಿಲೆಯಂತೆಯೂ, ದೇಹದ ಖಾಯಿಲೆಯಂತೆಯೂ ಭಾಸವಾಗುತ್ತಾ ತನ್ನ ಕೇಂದ್ರ ಬಿಂದುವನ್ನು ಪ್ರೇಮದ ಸುತ್ತಲೇ ಸುತ್ತಿಸಿದರೂ, ನಿರೂಪಕನ ಹೊಂಗೆ ತೋಪಿನ ನೆನಪಿನೊಂದಿಗೆ ಮತ್ತೊಂದು ಆಯಾಮದಿಂದಲೂ ತನ್ನನ್ನು ಓದುವಂತೆ ನೋಡಿಕೊಳ್ಳುವ ಪರಿಯಲ್ಲಿ ಇದರ ಸಾರ್ಥಕತೆ ಇದೆ.

ಎರಡನೆಯ ಬಹುಮಾನ ಪಡೆದ ‘ಬೋನಿಗೆ ಬಿದ್ದವರು’, ಕಥೆಯ ಶೀರ್ಷಿಕೆಯೇ ಸಾಂಕೇತಿಕವಾಗಿದೆ.ಗಂಗಾಧರಯ್ಯಬದಲಾವಣೆಯ ಗಾಳಿಯಲ್ಲಿ, ಬದುಕಿನ ಅನಿವಾರ್ಯತೆಯಲ್ಲಿ, ಅಪ್ಪಟ ದೇಸಿ ಕಸುಬೊಂದು ಅಥವಾ ದೇಸೀ ಬದುಕೊಂದು ಪಡೆದುಕೊಳ್ಳಬಹುದಾದ ತಿರುವುಗಳನ್ನೂ ಅಸಹಾಯಕತೆಯನ್ನೂ ತನ್ನದೇ ರೀತಿಯ ವ್ಯಂಗ್ಯ, ಸೆಡವು ಮುಂತಾದ ಸಮಾಜಮುಖಿ ಪರಿಕರಗಳೊಂದಿಗೆ ಓದುಗನನ್ನು ಹೊಸದೊಂದು ಅಷ್ಟೊಂದು ಪರಿಚಿತವಲ್ಲದ ಲೋಕದೊಳಗೆ ನಡೆದಾಡಿಸುತ್ತದೆ.ಇಲ್ಲಿ ಕೆಳಸ್ತರದ ಬದುಕೊಂದು ಆಧುನಿಕತೆಯ ದೆಸೆಯಿಂದಾದ ಪಲ್ಲಟಗಳಿಂದಾಗಿ ಚಡಪಡಿಸುವ ಹಾಗೂ ಅನಿವಾರ್ಯವಾಗಿ ತಮ್ಮ ಸಾಂಪ್ರದಾಯಿಕ ಜ್ಞಾನವನ್ನು ಅವಕಾಶವಾದಿತನಕ್ಕೆ ಪರಿವರ್ತಿಸಿಕೊಳ್ಳಬೇಕಾದ ಹೊತ್ತಿನಲ್ಲಿ ಆ ಬದುಕು ತೋರುವ ಸಂಯಮ, ಸಹಕಾರಗಳೆದುರು ಆಧುನಿಕತೆ ಹಾಗೂ ಸರಕಾರದ ಯೋಜನೆಗಳು ಏದುಸಿರು ಬಿಡುತ್ತವೆ.ಇಲ್ಲಿ ಬರುವ ಸರಕಾರಿ ಯೋಜನೆಗಳು, ಅವುಗಳನ್ನು ‘ಗುಳುಂ’ಮಾಡಿಬಿಡುವ ಭ್ರಷ್ಟ ಮನಸ್ಸುಗಳಿಗೆ ಬೇಕಿರುವ ನೈತಿಕ ಚಿಕಿತ್ಸೆಯ ಆಶಯ ಹಾಗೂ ನಶಿಸಿ ಹೋಗುತ್ತಿರುವ ದೇಸೀ ಜ್ಞಾನದ ಬಗೆಗಿನ ಕಾಳಜಿ ಕಥೆಯ ಹೆಚ್ಚುಗಾರಿಕೆ.

ಮೂರನೆಯ ಬಹುಮಾನ ಪಡೆದ ಕಥೆ ‘ಚಿವುಟಿದಷ್ಟೂ ಚಿಗುರು’, ಆಧುನಿಕ ಬದುಕಿನಲ್ಲಿ ಛಿದ್ರಗೊಳ್ಳುತ್ತಿರುವ ಸಂಬಂಧಗಳು ಹಾಗೂ ಅವುಗಳು ಉಂಟು ಮಾಡಬಹುದಾದ ಪರಿಣಾಮಗಳನ್ನು ಹಿಡಿದಿಡಲೆತ್ನಿಸುತ್ತದೆ.ಸಧ್ಯದ ಸ್ಥಿತಿಯಲ್ಲಿ ಸರ್ವೇ ಸಾಮಾನ್ಯವಾಗುತ್ತಿರುವ, ಅದರಲ್ಲೂ ಮಹಾನಗರಗಳಲ್ಲಿ ಇದೊಂದು ಮಹಾ ಸಮಸ್ಯೆಯೇ ಆಗುತ್ತಿರುವಾಗ ಇದರ ವಸ್ತುವೇ ಈ ಕಥೆಗೊಂದು ಸಾರ್ವತ್ರಿಕ ಗುಣ ಒದಗಿಸಿ ಕೊಟ್ಟಿದೆ.ಕೊಂಚ ಸೆಂಟಿಮೆಂಟಲ್ ಅನಿಸಬಹುದಾಗಿದ್ದಂಥ ಹಾಗೂ ಕೊಂಚ ಯಾಮಾರಿದ್ದರೂ ಒಂದು ತೀರಾ ಸಾಮಾನ್ಯ ಕಥೆಯಾಗಿ ಬಿಡಬಹುದಾಗ್ಗಿದ್ದಂಥ ವಸ್ತುವನ್ನು ಕಥೆಗಾರರು ನೀಭಾಯಿಸಿರುವ ರೀತಿಯಿಂದಾಗಿ ಆಲೋಚನೆಗೆ ಹಚ್ಚ ಬಲ್ಲಂಥ ಕಥೆಯಾಗಿ ರೂಪುಗೊಂಡಿದೆ.

ಮೆಚ್ಚಿಗೆ ಪಡೆದ ಕಥೆಗಳಲ್ಲಿ ‘ಹೇ ರಾಮ್’ ತನ್ನ ವಿಡಂಬನಾತ್ಮಕ ಗುಣದಿಂದಾಗಿ ಪರಿಣಾಮಕಾರಿಯಾಗಿದೆ.ಗಾಂಧಿ ಜಯಂತಿಯ ಆಚರಣೆಯ ಕ್ರಮದಲ್ಲಿರುವ ಕೃತಕತೆ, ಪರಸ್ಪರ ಅಪನಂಬಿಕೆ, ತೋರಿಕೆಯ ಗುಣ, ಇಡೀ ಗಾಂಧಿ ತತ್ವಗಳನ್ನು ನಗೆಪಾಟಲಿಗೀಡು ಮಾಡುವಂಥ ವಾತಾವರಣವನ್ನು ಕಟ್ಟಿಕೊಟ್ಟಿದೆ.ಇಲ್ಲಿ ಪತ್ರೆಪ್ಪ ಎಲ್ಲಾ ಜನಸಾಮಾನ್ಯನ ಪ್ರತಿನಿಧಿಯಂತೆ ಕಾಣುತ್ತಾ, ಭ್ರಷ್ಟ ವ್ಯವಸ್ಥೆಯ ಎದುರು ಕುಸಿದು ಹೋಗುವ ಕ್ರಿಯೆಯ ಸಂಕೇತವಾಗಿದ್ದಾನೆ.

ಮತ್ತೊಂದು ಮೆಚ್ಚಿಗೆ ಪಡೆದ ‘ಇಸುಮುಳ್ಳು’ ಒಂದು ನೀಳ್ಗತೆ.ಆಡು ಭಾಷೆ ಮತ್ತು ಗ್ರಾಂಥಿಕ ಭಾಷೆಗಳನ್ನು ಬಳಸಿಕೊಂಡು ಹೇಳಲೆತ್ನಿಸುವ ಹಳ್ಳಿಯ ಕುಟುಂಬವೊಂದರ ಸಂಪ್ರದಾಯ, ನಂಬಿಕೆ, ಹಾದರ, ಅಜ್ಜ ಮೊಮ್ಮಗನ ನಡುವಿನ ಆತ್ಮೀಯ ಸಂಬಂಧದೊಂದಿಗೆ ಅಲ್ಲಿನ ಪರಿಸರವೂ ಪೂರಕವಾಗಿ ಒದಗಿ ಬಂದಿರುವುದರಿಂದ ಇದು ಕಾದಂಬರಿಯ ಭಾಗವೊಂದರಂತೆ ಓದಿಸಿಕೊಳ್ಳುತ್ತದೆ. ಮಾನವೀಯ ಸಂಬಂಧಗಳ ಸಂಕೀರ್ಣತೆಯನ್ನು ಕಥೆಯಾಗಿಸುವ ಕ್ರಮದ ತುಡಿತವೇ ಇದರ ಗಾತ್ರವನ್ನು ಸಹ್ಯಗೊಳಿಸಿದೆ.

ಇನ್ನು ಕೊನೆಯ ಮಾತು : ನನ್ನನ್ನು ಇಂಥದ್ದೊಂದು ಕಥನ ಪರಂಪರೆಗೆ ಮುಖಾಮುಖಿಯಾಗಲು ಅನುವು ಮಾಡಿಕೊಟ್ಟ ಗೆಳೆಯರಾದ ಶ್ರೀಪಾದ ಭಟ್ ಹಾಗೂ ರವಿಕೃಷ್ಣಾರೆಡ್ಡಿಯವರಿಗೆ ವಂದನೆಗಳು.

“ಬೆಂಕಿಪಟ್ಣ” ಸಿನೆಮಾಗೆ ಯಶಸ್ಸನ್ನು ಹಾರೈಸುತ್ತ…

ಆತ್ಮೀಯರೇ,

ಕಳೆದ ಮುವ್ವತ್ತೇಳು ದಿನಗಳಿಂದ ಧರಣಿ ಸತ್ಯಾಗ್ರಹ, ಉಪವಾಸ, ಅನಾರೋಗ್ಯ, ಪಕ್ಷದ ಕೆಲಸ, ಮುಂತಾದ ಕಾರಣಗಳಿಂದಾಗಿ ಅನೇಕ ವಿಷಯಗಳ ಕಡೆ ಗಮನ ಹರಿಸಲು ಆಗುತ್ತಿಲ್ಲ. ಸುಡುತ್ತಿರುವ ಮೈ ಮತ್ತು ದೈಹಿಕ ಅಶಕ್ತಿಯ ಕಾರಣಕ್ಕೆ ಕಳೆದ 37 ದಿನಗಳಲ್ಲಿ ಮೊದಲ ದಿನ ಧರಣಿ ಸಭೆಗೆ ಹೋಗಲು ಆಗುತ್ತಿಲ್ಲ. ಆದರೆ, ಇದನ್ನು ಇಂದು ಬರೆಯಲೇಬೇಕೆಂಬ ಕಾರಣಕ್ಕೆಮನೆಯಲ್ಲಿ ಲ್ಯಾಪ್‌ಟಾಪ್ ಹಿಡಿದಿದ್ದೇನೆ.

ನಮ್ಮ ವರ್ತಮಾನ ಬಳಗಕ್ಕೆ ಮತ್ತು ನಮ್ಮ ವಾರಿಗೆಯ ಅನೇಕ ಕನ್ನಡಿಗರಿಗೆ ಪತ್ರಕರ್ತ ಮತ್ತು ಕವಿ ಎಸ್.ಸಿ. ದಿನೇಶ್‌ಕುಮಾರ್ ಗೊತ್ತು. ವರ್ತಮಾನಕ್ಕೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಹಾಗೆಯೇ, ಕತೆಗಾರ, ಲೇಖಕ, ಸಾಮಾಜಿಕ ಕಾರ್ಯಕರ್ತ ಟಿ.ಕೆ.ದಯಾನಂದ್ ಸಹ. ದಯಾನಂದ್ ಬಹುಮುಖ ಪ್ರತಿಭೆಯ ದೇಸಿ ಪ್ರತಿಭೆ. ನಮ್ಮ ವರ್ತಮಾನ.ಕಾಮ್‍ನ ಗಾಂಧಿ ಜಯಂತಿ ಕಥಾಸ್ಪರ್ಧೆಯಲ್ಲಿ ಈ ಬಾರಿ ಉತ್ತಮ ಕತೆಗಾರರಾಗಿ ಆಯ್ಕೆಯಾಗಿದ್ದಾರೆ. ಪ್ರಜಾವಾಣಿ ಮತ್ತಿತರ ದೀಪಾವಳಿ ಕಥಾಸ್ಪರ್ಧೆಗಳಲ್ಲೂ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. ಅಪಾರ ಕ್ರಿಯಾಶೀಲತೆಯ ಯುವಕ. ಮಲಹೊರುವವರ ಬಗ್ಗೆ ಇವರು ಬಹಳ ಕೆಲಸ, ಹೋರಾಟ ಮಾಡಿದ್ದಷ್ಟೇ ಅಲ್ಲದೆ, ಅದನ್ನು ಜನರ ಮುಂದೆ ಇತ್ತೀಚಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಇಟ್ಟವರು. ವರ್ತಮಾನದ ಮೊದಲ ವರ್ಷದಲ್ಲಿಯೇ ಕೆಜಿಎಫ್‌ನಲ್ಲಿ ಮಲದ ಗುಂಡಿ ಸ್ವಚ್ಚಗೊಳಿಸಲು ಹೋಗಿ ದುರ್ಮರಣಕ್ಕೀಡಾದ ವ್ಯಕ್ತಿಗಳ ಕುಟುಂಬಕ್ಕೆ ಮೂರು ವರ್ಷಗಳ ಹಿಂದೆ ಇದೇ ದಯಾನಂದ್ ಮತ್ತು ದಿನೇಶ್‌ಕುಮಾರ್ ನಮ್ಮ ವರ್ತಮಾನ.ಕಾಮ್ ಮೂಲಕ ಹಣ ಸಂಗ್ರಹಿಸಿ ಸಹಾಯ ಮಾಡಿದ್ದರು.

ಈಗ ದಿನೇಶ್‌ಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿರುವ “ಬೆಂಕಿಪಟ್ಣ” ಸಿನೆಮಾವನ್ನು ತಮ್ಮದೇ ಕತೆ-ಚಿತ್ರಕತೆ-ಸಂಭಾಷಣೆಗಳೊಂದಿದೆ benkipatnaಟಿ.ಕೆ.ದಯಾನಂದ್ ನಿರ್ದೇಶಿಸಿದ್ದಾರೆ. ಈಗಾಗಲೆ ಆ ಸಿನೆಮಾದ ಹಾಡುಗಳು ಮತ್ತು ಟ್ರೈಲರ್ ಅಂತರ್ಜಾಲದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಹುಶಃ ಸಾವಿರಾರು ಅತ್ಯುತ್ತಮ ಮತ್ತು ಕೆಟ್ಟ ಸಿನೆಮಾಗಳನ್ನು ನೋಡಿರುವ ಟಿ.ಕೆ.ದಯಾನಂದ್, ಯಾವುದೇ ನೇರಗುರುವಿನ ಪಾಠವಿಲ್ಲದೆ ಮೊದಲ ಬಾರಿಗೆ ಸಿನೆಮಾ ನಿರ್ದೇಶನ ಮಾಡಿದ್ದಾರೆ. ಸ್ವಯಂಅಭ್ಯಾಸಿಯಾಗಿರುವ ದಯಾನಂದರದು, ಏಕಲವ್ಯ ಪ್ರತಿಭೆ.

ಈಗಾಗಲೆ ಸಾಮಾಜಿಕ ಜಾಲತಾಣಗಳಲ್ಲಿ “ಬೆಂಕಿಪಟ್ಣ”ದ ಹಾಡುಗಳು ಮತ್ತು ಟ್ರೈಲರ್ ಬಗ್ಗೆ ಒಳ್ಳೆಯ ಮಾತುಗಳು ಬರುತ್ತಿವೆ. ಜಯಂತ್ ಕಾಯ್ಕಿಣಿ, ದಿನೇಶ್‌ಕುಮಾರ್, ಯೋಗರಾಜ್ ಭಟ್ಟರು ಹಾಡು ಬರೆದಿದ್ದಾರೆ. ಬಿ.ಸುರೇಶ್, ಅರುಣ್ ಸಾಗರ್, ಸೇರಿದಂತೆ ಅನೇಕ ಅನುಭವಿ ಮತ್ತು ಹೊಸ ಪ್ರತಿಭೆಗಳು ಈ ಸಿನೆಮಾದಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಪ್ರಾಮಾಣಿಕ ಚಿಂತನೆಗಳ ಮತ್ತು ಜೀವಪರ ನಿಲುವಿನ ದಿನೇಶ್‌ಕುಮಾರ್ ಮತ್ತು ದಯಾನಂದರ ಈ ಚೊಚ್ಚಲ ಸಿನೆಮಾ ಪ್ರಯತ್ನ ಯಶಸ್ವಿಯಾಗಲಿ ಮತ್ತು ಕನ್ನಡಿಗರಿಗೆ ಒಳ್ಳೆಯ ಸಿನೆಮಾ ಸಿಗಲಿ, ಹಾಗೂ ಉತ್ತಮ ಅಭಿರುಚಿಯ ಜನ ಹೆಚ್ಚುಹೆಚ್ಚು ಸಿನೆಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡು ನಾಡಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನವನ್ನು ಸಂಪನ್ನಗೊಳಿಸಲಿ ಎಂದು ಆಶಿಸುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ.

ವಿಶ್ವಾಸದಲ್ಲಿ,
ರವಿ


“ಬೆಂಕಿಪಟ್ಣ” ಸಿನೆಮಾದ ಟ್ರೈಲರ್: http://youtu.be/8-3knn5d24c

ಸಿನೆಮಾದ ಎಲ್ಲಾ ಹಾಡುಗಳು ಕೇಳಲು ಇಲ್ಲಿ ಲಭ್ಯವಿದೆ: http://youtu.be/wkutzwqDeW8

ರಾಣೆಬೆನ್ನೂರಿನಲ್ಲಿ “ಯುವಚೈತನ್ಯ ಮತ್ತು ನಾಯಕತ್ವ ತರಬೇತಿ” ಶಿಬಿರ

ಆತ್ಮೀಯರೇ,

ವರ್ತಮಾನದ ಓದುಗರಿಗೆ ಎಸ್.ಆರ್.ಹಿರೇಮಠರ ಪರಿಚಯ ಇದ್ದೇ ಇದೆ. ವರ್ತಮಾನ.ಕಾಮ್‌ನಿಂದ 2013 ರ ವರ್ಷದ ವ್ಯಕ್ತಿಯನ್ನಾಗಿ ಗುರುತಿಸಿದ್ದೂ ಅವರನ್ನೇ ಎಂದು ನಿಮಗೆಲ್ಲ ತಿಳಿದಿದೆ. ಹಿರೇಮಠರು ಖಚಿತ ನಿಲುವುಗಳುಳ್ಳ, ಕಾರ್ಯೋನ್ಮುಖ ಪ್ರವೃತ್ತಿಯ ಪ್ರಗತಿಪರ ಚಿಂತನೆಯ ವ್ಯಕ್ತಿ. ನಮ್ಮಲ್ಲಿ ಪ್ರಗತಿಪರರೆಂದು ಹೇಳಿಕೊಳ್ಳುವ, srhiremathಗುರುತಿಸಿಕೊಳ್ಳುವ ನೂರಾರು ಜನರಿದ್ದಾರೆ. ಆದರೆ, ಅದ್ಯಾವುದನ್ನೂ ಹೇಳಿಕೊಳ್ಳದೆ, ನಮ್ಮಲ್ಲಿಯ ಭ್ರಷ್ಟಾಚಾರ, ಜಾತೀಯತೆ, ಕೋಮುವಾದ, ಪರಿಸರನಾಶ, ಸಾಮಾಜಿಕ ಅನ್ಯಾಯಗಳ ವಿರುದ್ಧ ಸತತವಾಗಿ ಹೋರಾಡುತ್ತ ಬಂದಿರುವವರು ಎಪ್ಪತ್ತರ ವಯಸ್ಸಿನ ಪ್ರಜಾಪ್ರಭುತ್ವವಾದಿ ಎಸ್.ಆರ್.ಹಿರೇಮಠರು. ಅವರ ಮಾತುಗಳಲ್ಲಿರುವ ಕಾವು, ನ್ಯಾಯನಿಷ್ಟುರತೆ, ಆಕ್ರೋಶ, ಆಶಾವಾದ, ಕೆಚ್ಚು, ಇವೆಲ್ಲವನ್ನೂ ಕೇಳುವುದೇ ಒಂದು ಜೀವನ ಪಾಠ. ತಮ್ಮ ಪ್ರತಿ, ಅಥವ ಬಹುತೇಕ ಭಾಷಣಗಳಲ್ಲಿ, ಗಾಂಧಿ, ಅಂಬೇಡ್ಕರ್, ಮತ್ತು ಜಯಪ್ರಕಾಶ ನಾರಾಯಣರ ಉಲ್ಲೇಖವಿಲ್ಲದೆ ಅವರು ಮಾತನಾಡಿದ್ದನ್ನು ನಾನು ಕಂಡಿಲ್ಲ.

ನಿಮಗೆಲ್ಲ ತಿಳಿದಿರುವ ಹಾಗೆ, ಹಿರೇಮಠರು ’ಸಮಾಜ ಪರಿವರ್ತನಾ ಸಮುದಾಯ’ ಎಂಬ ಸರ್ಕಾರೇತರ ಸಂಸ್ಥೆಯಲ್ಲಿ ತೊಡಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಹಾಗೆಯೇ, “ಜನ ಸಂಗ್ರಾಮ ಪರಿಷತ್” ಎಂಬ ಸಂಘಟನೆಯ ಅಧ್ಯಕ್ಷರೂ ಹೌದು. ರಾಜ್ಯದ ಹಲವು ಭಾಗಗಳಲ್ಲಿ “ಜನ ಸಂಗ್ರಾಮ ಪರಿಷತ್” ಜನಪರ ಹೋರಾಟಗಳನ್ನು ರೂಪಿಸುವುದರಲ್ಲಿ, ಚಳವಳಿಗಳನ್ನು ಕಟ್ಟುವುದರಲ್ಲಿ, ತೊಡಗಿಸಿಕೊಂಡಿದೆ. ರಾಘವೇಂದ್ರ ಕುಷ್ಟಗಿ ಇದರ ಕಾರ್ಯಾಧ್ಯಕ್ಷರಾಗಿದ್ದಾರೆ. ನಾಡಿನ ಅನೇಕ ಹೋರಾಟಗಾರರು, ಚಳವಳಿಕಾರರು ಈ ಸಂಘಟನೆಯಲ್ಲಿದ್ದು, ಹೆಚ್ಚಿನ ಸದ್ದುಗದ್ದಲಗಳಿಲ್ಲದೆ ಜನಸಮುದಾಯದ ನಡುವೆ, ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡುವ ಮೂಲಕ, ಕೆಲಸ ಮಾಡುತ್ತಿದ್ದಾರೆ.

ಈ ಸಂಘಟನೆಯ ಆಶ್ರಯದಲ್ಲಿ ಬರುವ ಶನಿವಾರ-ಭಾನುವಾರದಂದು (ಅಕ್ಟೋಬರ್ 18/19) ಎರಡು ದಿನಗಳ ಯುವಚೈತನ್ಯ ಮತ್ತು ನಾಯಕತ್ವ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ರಾಣೆಬೆನ್ನುರಿನಲ್ಲಿರುವ ಸಮಾಜ ಪರಿವರ್ತನ ಸಮುದಾಯದ “ಪರಿವರ್ತನ ಸದನ”ದಲ್ಲಿ ಈ ಶಿಬಿರ ನಡೆಯಲಿದೆ. ಪ್ರಜಾಪ್ರಭುತ್ವ, ಭಾರತ ಮತ್ತು ಕರ್ನಾಟಕದ ಇತಿಹಾಸ, ರಾಜಕೀಯ, ಸಾಮಾಜಿಕ ಸ್ಥಿತಿಗತಿಗಳು, ಸಾಂಸ್ಕೃತಿಕ ಬಂಡಾಯ, ಚಳವಳಿಗಳು, ಸಾಹಿತ್ಯದಲ್ಲಿ ಬಂಡಾಯ, ಜಾಗತಿಕ ತಾಪಮಾನ, ಮಾಹಿತಿ ಹಕ್ಕು ಮತ್ತು ತರಬೇತಿ, ಹಾಡು, ಆಟ, ಪಾಠ; ಹೀಗೆ ಅನೇಕ ವಿಷಯಗಳ ಬಗ್ಗೆ ಎಸ್.ಆರ್.ಹಿರೇಮಠರ ಆದಿಯಾಗಿ ಹಲವಾರು ಹೋರಾಟಗಾರರು, ಪ್ರಾಧ್ಯಾಪಕರು, ಲೇಖಕರು, ಹಾಡುಗಾರರು, ನಡೆಸಿಕೊಡಲಿದ್ದಾರೆ. ವೃಂದಚರ್ಚೆ ಮತ್ತಿತರ ಸಂವಾದಗಳ ಮೂಲಕ ಎಲ್ಲಾ ಶಿಬಿರಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವ, ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ವ್ಯವಸ್ಥೆ ಇದೆ. ತರಬೇತಿಯ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದು, ತುಮಕೂರಿನ ಹಸಿರು ಬಳಗ ಮತ್ತು ಸಿಜ್ಞಾ ತಂಡಗಳು ನಡೆಸಿಕೊಡಲಿವೆ. ಕೇವಲ ಮಾಹಿತಿ ಅಷ್ಟೇ ಅಲ್ಲ, ತಮ್ಮ ಊರು-ನಗರಗಳಲ್ಲಿ ಮುಂದಕ್ಕೆ ಹೇಗೆ ಶಿಬಿರಾರ್ಥಿಗಳು ಜನಪರ ಕಾರ್ಯಕ್ರಮಗಳನ್ನು, ಹೋರಾಟಗಳನ್ನು ರೂಪಿಸಬಹುದು, ನಾಯಕತ್ವ ವಹಿಸಿಕೊಳ್ಳಬಹುದು ಎನ್ನುವುದರ ಬಗ್ಗೆ ತರಬೇತಿ ಕೊಡಲಾಗುತ್ತಿದೆ. ಹಾಗೆಯೇ, ಶಿಬಿರ ಮುಗಿದ ನಂತರವೂ ಆಯೋಜಕರು ಶಿಬಿರಾರ್ಥಿಗಳ ಜೊತೆ ಸಂಪರ್ಕದಲ್ಲಿದ್ದು, ಕಾಲಕಾಲಕ್ಕೆ ಸಹಕಾರ ಮತ್ತು ಮಾರ್ಗದರ್ಶನ ನೀಡುತ್ತಿರುತ್ತಾರೆ.

ಶನಿವಾರ ಬೆಳಗ್ಗೆ ಹತ್ತರ ಸುಮಾರಿಗೆ ಆರಂಭವಾಗುವ ಶಿಬಿರ ಭಾನುವಾರ ಸಂಜೆ ಐದರ ತನಕ ನಡೆಯಲಿದೆ. ರಾಣೆಬೆನ್ನೂರು ಒಂದು ರೀತಿಯಲ್ಲಿ ಇಡೀ ರಾಜ್ಯಕ್ಕೆ ಕೇಂದ್ರ ಸ್ಥಾನದಲ್ಲಿದೆ. (ದಾವಣಗೆರೆಯಿಂದ ಮುವ್ವತ್ತು ಕಿ.ಮೀ. ಉತ್ತರಕ್ಕಿದೆ.) ರಾಜ್ಯದ ಬಹುತೇಕ ಭಾಗಗಳಿಂದ ನಾಲ್ಕೈದು ಗಂಟೆಗಳಲ್ಲಿ ಬಸ್ಸಿನಲ್ಲಿ ತಲುಪಬಹುದು. ಉತ್ತಮ ರೈಲು ಸಂಪರ್ಕವೂ ಇದೆ. (ಬೆಂಗಳೂರಿನಿಂದ ರೈಲು ಟಿಕೆಟ್ ಎಪ್ಪತ್ತು-ಎಂಬತ್ತು ರೂಪಾಯಿ ಇರಬಹುದು.) ಹದಿನೆಂಟರಿಂದ ಮುವ್ವತ್ತೈದು ವಯಸ್ಸಿನ ಯುವಸಮುದಾಯಕ್ಕೆ ಆದ್ಯತೆ. ranebennurಆದರೆ, ಕೆಲವು ಸಂದರ್ಭಗಳಲ್ಲಿ ಆಸಕ್ತರಿಗೆ ರಿಯಾಯಿತಿಯೂ ಇರುತ್ತದೆ. ಶನಿವಾರ ರಾತ್ರಿ ವಸತಿ ಸೌಕರ್ಯವೂ ಇರುತ್ತದೆ. ಶನಿವಾರ ಬೆಳಗ್ಗೆಯಿಂದ ಭಾನುವಾರದ ಸಂಜೆಯ ತನಕ ಊಟ-ತಿಂಡಿ-ಚಹಾ ವ್ಯವಸ್ಥೆ ಇರುತ್ತದೆ. ಇವೆಲ್ಲವಕ್ಕೂ ಸೇರಿ ಶಿಬಿರ ಶುಲ್ಕ ಎಂದು ರೂ.500 ಇರುತ್ತದೆ.

ಶಿಬಿರದಲ್ಲಿ, ಎಸ್.ಆರ್.ಹಿರೇಮಠ್, ಪರಿಸರವಾದಿ ಯತಿರಾಜು, ಶ್ರೀಧರ್ ಕಲ್ಲಹಳ್ಳ, ಜನಸಂಗ್ರಾಮ ಪರಿಷತ್‌ನ ಕಾರ್ಯದರ್ಶಿ ದೀಪಕ್ ನಾಗರಾಜ್, ಸಂಘಟನೆಯ ಶಾಂತಲಾ ದಾಮ್ಲೆ, ತುಮಕೂರಿನ ಸಿಜ್ಞಾ ಎಂಬ ಯುವನಾಯಕತ್ವ ಶಿಬಿರಗಳನ್ನು ಆಯೋಜಿಸುವ ಸಂಸ್ಥೆಯ ಸಿಜ್ಞಾ ಸಿಂಧು ಸ್ವಾಮಿ, ಪ್ರತಿಮಾ ನಾಯಕ್, ಸಾಹಿತಿ-ಪ್ರಾಧ್ಯಾಪಕ ಜಯಶಂಕರ್ ಹಲಗೂರು, ನಾನು, ಮುಂತಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಬರಲಿದ್ದಾರೆ. ನಮ್ಮ ವರ್ತಮಾನದ ಬಳಗದ ಶ್ರೀಪಾದ ಭಟ್ಟರೂ ಬರುವ ಸಾಧ್ಯತೆಗಳಿವೆ.

ಈಗ, ನಿಮ್ಮೆಲ್ಲರಲ್ಲೂ ಒಂದು ಮನವಿ. ಈಗಾಗಲೆ ಈ ಶಿಬಿರಕ್ಕೆ 25 ಕ್ಕೂ ಹೆಚ್ಚು ಜನರು ನೊಂದಾಯಿಸಿಕೊಂಡಿದ್ದಾರೆ. ಇನ್ನೂ ಹತ್ತು-ಹದಿನೈದು ಜನಕ್ಕೆ ಅವಕಾಶವಿದೆ. ದಯವಿಟ್ಟು ಇದನ್ನು ನಿಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುವ ಮೂಲಕ, ನಿಮ್ಮ ಸ್ನೇಹಿತರಿಗೆ ಫೋನ್-ಇಮೇಲ್ ಮುಖಾಂತರ ತಿಳಿಸುವ ಮೂಲಕ, ಸಾಧ್ಯವಾದರೆ ನೀವೂ ಪಾಲ್ಗೊಳ್ಳುವ ಮೂಲಕ ಪ್ರಚಾರ ನೀಡಬೇಕೆಂದು ವಿನಂತಿಸುತ್ತೇನೆ. ನಿಮ್ಮ ಸಂಪರ್ಕದಲ್ಲಿರುವ ಯಾರಿಗಾರದೂ ಇಂತಹ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಒಳ್ಳೆಯದಾಗುತ್ತದೆ ಎನ್ನಿಸಿದರೆ ಅವರಿಗೆ ತಿಳಿಸಿ. ಅಂತಹವರಲ್ಲಿ ಯಾರಿಗಾದರೂ ಶಿಬಿರ ಶುಲ್ಕವಾದ ರೂ.500 ಹಣದ ಅಡಚಣೆ ಇದೆ ಎನ್ನಿಸಿದರೆ ದಯವಿಟ್ಟು ಪ್ರಾಯೋಜಿಸಿ. ಹಾಗೆಯೇ, ಪಾಲ್ಗೊಳ್ಳುವ ಆಸಕ್ತಿ ಇದ್ದು, ಶುಲ್ಕ ಭರಿಸುವುದೇ ಸಮಸ್ಯೆ ಆಗಿದ್ದರೆ, ದಯವಿಟ್ಟು ತಿಳಿಸಿ. ನಮ್ಮಲ್ಲೇ ಯಾರಾದರೂ ಪ್ರಾಯೋಜಕರಿದ್ದರೆ ಅದಕ್ಕೆ ಸ್ಪಂದಿಸಬಹುದು.

ಇನ್ನೂ ಹೆಚ್ಚಿನ ಮಾಹಿತಿಗೆ ಮತ್ತು ತರಬೇತಿಗೆ ನೊಂದಾಯಿಸಿಕೊಳ್ಳಲು 9916601969/ 8867186343 ದೂರವಾಣಿಗೆ ಕರೆ ಮಾಡಿ, ಇಲ್ಲವೇ ಮೆಸೇಜ್ ಮಾಡಿ.

ಈ ಶಿಬಿರ ಆರಂಭ ಮಾತ್ರ. ಇದರ ಯಶಸ್ಸಿನ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಪ್ರತಿ ತಿಂಗಳೂ ಶಿಬಿರಗಳನ್ನೂ ಆಯೋಜಿಸುವ ಯೋಜನೆಗಳಿವೆ. ಆಸಕ್ತರು ಹೆಚ್ಚಿದ್ದಲ್ಲಿ ನಾಲ್ಕು-ಐದು ದಿನಗಳ ವಿಸ್ತೃತ ಶಿಬಿರಗಳನ್ನು ನಡೆಸಲೂ ಬಹುದು.

ನಿಮ್ಮೆಲ್ಲರ ಸಹಕಾರ ಮತ್ತು ಬೆಂಬಲದ ನಿರೀಕ್ಷೆಯಲ್ಲಿ…

– ರವಿ ಕೃಷ್ಣಾರೆಡ್ಡಿ

“ಬಿಳಿಸಾಹೇಬನ ಭಾರತ” ಪುಸ್ತಕವಾಗಿ ಬರುತ್ತಿದೆ. ಅಭಿನಂದನೆಗಳು

ಆತ್ಮೀಯರೇ,

ನಿಮಗೆಲ್ಲರಿಗೂ ತಿಳಿದಿರಬಹುದು; 2011ರ ಡಿಸೆಂಬರ್‌ನಿಂದ 2012 ರ ಜುಲೈ ತನಕ, 29 ವಾರಗಳ ಕಾಲ, ನಮ್ಮ ಪ್ರೀತಿಯ ಲೇಖಕ ಜಗದೀಶ ಕೊಪ್ಪ ವರ್ತಮಾನ.ಕಾಮ್‌ನಲ್ಲಿ “ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ)”ವನ್ನು ಬರೆದರು. ವರ್ತಮಾನ.ಕಾಮ್‌ನ ಆರಂಭದ ದಿನಗಳಲ್ಲಿ ಅನೇಕ ಸರಣಿ ಲೇಖನಗಳನ್ನಷ್ಟೇ ಅಲ್ಲದೆ, ರಾಜಕೀಯ-ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ವಿಚಾರಗಳ ಬಗ್ಗೆ ಜಗದೀಶ ಕೊಪ್ಪರು ನಿರಂತರವಾಗಿ ಬರೆದು ನಮಗೆ ಬೆನ್ನೆಲುಬಾಗಿ ನಿಂತು, ವರ್ತಮಾನ.ಕಾಮ್ ಬೇರೂರಿ ನಿಲ್ಲಲು ನೆರವಾದವರು. ಬಿಳಿ ಸಾಹೇಬನ ಭಾರತ, ನಕ್ಸಲ್ ಕಥನ, ಜೀವನದಿಗಳ ಸಾವಿನ ಕಥನ; ಈ ಮೂರು ಸರಣಿ ಲೇಖನಗಳು ಅಪಾರ ಓದುಗರನ್ನು ಗಳಿಸಿದ್ದವು. ಇದರಲ್ಲಿ ಈಗಾಗಲೆ ’ಜೀವನದಿಗಳ ಸಾವಿನ ಕಥನ’ ಮತ್ತು “ನಕ್ಸಲ್ ಕಥನ”ಗಳು ಇನ್ನೊಂದಷ್ಟು ಲೇಖನ-ಮಾಹಿತಿಗಳ ಜೊತೆಗೆ “ಜೀವನದಿಗಳ ಸಾವಿನ ಕಥನ” ಮತ್ತು “ಎಂದೂ ಮುಗಿಯದ ಯುದ್ಧ”ಗಳಾಗಿ ಪುಸ್ತಕಗಳಾಗಿಯೂ ಹೊರಬಂದಿದೆ.

ಈಗ, “ಬಿಳಿ ಸಾಹೇಬನ ಭಾರತ”ವೂ ಪುಸ್ತಕವಾಗಿ ಬರುತ್ತಿದೆ. ಈ ಸಂದರ್ಭದಲ್ಲಿ ಲೇಖಕ ಜಗದೀಶ ಕೊಪ್ಪರಿಗೆ koppa-Invitation-biLisahebaವರ್ತಮಾನ ಬಳಗದ ಪರವಾಗಿ ಧನ್ಯವಾದ, ಕೃತಜ್ಞತೆ, ಮತ್ತು ಅಭಿನಂದನೆಗಳನ್ನು ತಿಳಿಸುತ್ತೇವೆ. ಈ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಇದೇ ಶನಿವಾರ ಸಂಜೆ 4:30ಕ್ಕೆ ಬೆಂಗಳೂರಿನಲ್ಲಿದೆ. ವಿವರಗಳು ಇಲ್ಲಿ ಲಗತ್ತಿಸಿರುವ ಆಹ್ವಾನ ಪತ್ರಿಕೆಯಲ್ಲಿದೆ. ದಯವಿಟ್ಟು ಭಾಗವಹಿಸಿ.

ವಿಶ್ವಾಸದೊಂದಿಗೆ,
ರವಿ ಕೃಷ್ಣಾರೆಡ್ಡಿ
ವರ್ತಮಾನ ಬಳಗ



jeevanadigaLa-koppa


eMdU-mugiyada-yudda-koppa


biLisaheba-koppa