ನೀಚ ಪತ್ರಕರ್ತರು ಹೆಚ್ಚಾಗುತ್ತಲೇ ಇದ್ದಾರೆ

ರವಿ ಕೃಷ್ಣಾರೆಡ್ಡಿ

ಇಂದಿಗೆ ನವೀನ್ ಸೂರಿಂಜೆ ಜೈಲಿಗೆ ಹೋಗಿ ನಾಲ್ಕು ತಿಂಗಳಾಯಿತು. ಒಬ್ಬ ಅಯೋಗ್ಯ ಮತ್ತು ನ್ಯಾಯಪ್ರಜ್ಞೆ ಇಲ್ಲದ ಮುಖ್ಯಮಂತ್ರಿಯ ಕಾರಣದಿಂದಾಗಿ ಸೂರಿಂಜೆ ಇನ್ನೂ ಬಿಡುಗಡೆ ಆಗಿಲ್ಲ. ಅಮೇಧ್ಯದಲ್ಲಿ ಅಧಿಕಾರ ಮತ್ತು ದುಡ್ಡು ಸಿಕ್ಕರೂ ಅದನ್ನು ನಾಲಿಗೆಯಲ್ಲಿ ನೆಕ್ಕಿ ಬಾಚಿಕೊಳ್ಳುವವರೆಲ್ಲ ನಮ್ಮ ರಾಜಕೀಯ ನಾಯಕರಾಗಿರುವಾಗ ಬಹುಶಃ ಇದಕ್ಕಿಂತ ಬೇರೆಯದನ್ನು ನಿರೀಕ್ಷಿಸುವುದು ಅಸಮಂಜಸವೇನೊ.

ಇದೇ ಸಮಯದಲ್ಲಿ ರಾಜ್ಯದ ಪತ್ರಕರ್ತರ ಸಂಘಟನೆಗಳೂ ಮಾಡಬೇಕಾದಷ್ಟು ಮಾಡಲೇ ಇಲ್ಲ. naveen-soorinjeನಾಯಕತ್ವ ತೆಗೆದುಕೊಳ್ಳುವುದಕ್ಕೆ ಸಿದ್ದರಿಲ್ಲದವರೇ ಅಲ್ಲಿ ತುಂಬಿಕೊಂಡಿರುವಾಗ ಇನ್ನೇನನ್ನು ನಿರೀಕ್ಷಿಸಬಹುದು? ಹಾಗೆಂದು ಇವರ್ಯಾರಿಗೂ ಅಧಿಕಾರ ಇಲ್ಲವೆಂದಾಗಲಿ, ಸಂಪರ್ಕಜಾಲ ಇಲ್ಲವೆಂದಾಗಲಿ ಅಲ್ಲ. ಈ ಸಂಘಟನೆಗಳ ಅಧಿಕಾರ ಸ್ಥಾನದಲ್ಲಿರುವ ಬಹುತೇಕರು ಬಹಳ ಶಕ್ತಿಶಾಲಿಗಳು, ನೇರವಾಗಿ ಒಬ್ಬ ಮಂತ್ರಿ ಅಥವ ಮುಖ್ಯಮಂತ್ರಿಯ ಬಳಿಗೆ ಹೋಗಿ ತಮಗೆ ಬೇಕಾದ ಕೆಲಸ ಮಾಡಿಸಿಕೊಂಡು ಬರುವವರು. ಆದರೆ, ತಮ್ಮವನೇ ಆದ ಒಬ್ಬ ಪತ್ರಕರ್ತ ನಿರಪರಾಧಿಯಾಗಿದ್ದರೂ ಜೈಲಿನಲ್ಲಿ ಕೊಳೆಯುತ್ತಿರುವಾಗ, ಆತನ ಮೇಲಿನ ಸುಳ್ಳು ಆರೋಪಗಳನ್ನು ಕ್ಯಾಬಿನೆಟ್ ಕೈಬಿಡುವ ನಿರ್ಧಾರ ಮಾಡಿದ ಮೇಲೂ ಮುಖ್ಯಮಂತ್ರಿ ಅದಕ್ಕೆ ನಾಮಕಾವಸ್ಥೆ ಸಹಿ ಮಾಡುವುದನ್ನು ಮಾಡದೇ ಇರುವಾಗ ಈ ಸಂಘಟನೆಗಳಿಗೆ ಮುಖ್ಯಮಂತ್ರಿಯ ಮೇಲೆ ಒತ್ತಡ ತರಲಾಗುವುದಿಲ್ಲ ಎಂದರೆ, ಅದು ಅವರಿಗೆ ಬೇಕಾಗಿಲ್ಲ ಎಂದೇ ಅರ್ಥ. ನಮ್ಮ ಸಮಾಜದಲ್ಲಿ ರಾಜಕೀಯ ಕ್ಷೇತ್ರ ಮಾತ್ರವೇ ಕೆಟ್ಟಿಲ್ಲ. ಸಮಾಜದ ಪ್ರತಿಯೊಂದು ವಿಭಾಗದಲ್ಲೂ ಅರ್ಬುದ ರೋಗ ಒಳಗಿನಿಂದಲೇ ಕೊಲ್ಲುತ್ತಿದೆ.

ಹಾಸನದ “ದಿ ಹಿಂದೂ” ಪತ್ರಿಕೆಯ ವರದಿಗಾರರಾದ ಸತೀಶ ಜಿ.ಟಿ. ನನಗೆ ವೈಯಕ್ತಿವಾಗಿಯೂ ಪರಿಚಿತರು. ಸಾಮಾಜಿಕ ಕಳಕಳಿಯುಳ್ಳ ಪ್ರಾಮಾಣಿಕ ಮತ್ತು ಆದರ್ಶವಾದಿ ಪತ್ರಕರ್ತ. ಈ ಹಿಂದೆ ಅವರು ಡೆಕ್ಕನ್ ಹೆರಾಲ್ಡ್‌ನಲ್ಲಿದ್ದಾಗ ಬಿಡಿಎದ ಅಕ್ರಮ ಜಿ-ಕೆಟಗರಿ ಸೈಟುಗಳ ಬಗ್ಗೆ, ಮನೆ-ಸೈಟು ಇರುವ ಶಾಸಕ-ಸಂಸದರೆಲ್ಲ ನಮಗೆ ಬೆಂಗಳೂರಿನಲ್ಲಿ ಮನೆ-ಸೈಟಿಗೆ ಗತಿ ಇಲ್ಲ ಎಂದು ಅಕ್ರಮ ಅಫಿಡವಿಟ್ ಸಲ್ಲಿಸಿ ನಾಲ್ಕೈದು ಕೋಟಿ ರೂಪಾಯಿ ಬೆಲೆಯ ಸೈಟುಗಳನ್ನು ಏಳೆಂಟು ಲಕ್ಷಗಳಿಗೆ ಹೊಡೆದುಕೊಂಡಿದ್ದರ ಬಗ್ಗೆ ವಿಸ್ತೃತವಾಗಿ ವರದಿ ಮಾಡಿದ್ದರು. ನಾಲ್ಕು ವರ್ಷದ ಹಿಂದೆ ಉತ್ತರ ಕರ್ನಾಟಕದಲ್ಲಿ ಅಸಾಮಾನ್ಯವಾದ ಮಳೆ ಬಂದು ಪ್ರವಾಹ ಉಕ್ಕೇರಿ ಜನರ ಬದುಕುಗಳು ನೆರೆಯಲ್ಲಿ ಕೊಚ್ಚಿ ಹೋದಾಗ ಅದರ ಬಗ್ಗೆ ವಾರಗಟ್ಟಲೆ ಪ್ರವಾಸ ಮಾಡಿ ವರದಿ ಮಾಡಿದ್ದರು. ಈಗ ಸುಮಾರು ಎರಡು ವರ್ಷಗಳಿಂದ ಈ ಪ್ರತಿಭಾವಂತ ಪತ್ರಕರ್ತ ಹಾಸನದಲ್ಲಿದ್ದಾರೆ. ಇಂತಹ ಒಬ್ಬ ಪತ್ರಕರ್ತ ತಮ್ಮ ನಡುವೆ ಇರುವುದೇ ಒಂದು ಹೆಮ್ಮೆ ಎಂದು ಭಾವಿಸದ ಅಲ್ಲಿನ ಪತ್ರಕರ್ತರ ಸಂಘ ಮತ್ತು ಅದರ ಅಧ್ಯಕ್ಷರು ಸತೀಶ್ ತಮ್ಮ ವಿರುದ್ದ ಸಕಾರಣವಾಗಿ ನೀಡಿದ ದೂರಿನ ಕಾರಣಕ್ಕೆ ವೈಯಕ್ತಿಕ ದ್ವೇಷದಿಂದ ಸಂಘವನ್ನು ದುರುಪಯೋಗಪಡಿಸಿಕೊಂಡು ನೋಟಿಸ್ ಕೊಡುತ್ತಾರೆ. ಸತ್ಯ ಹೇಳಿದ್ದಕ್ಕೆ ಬೇಷರತ್ತಾಗಿ ಕ್ಷಮೆ ಕೇಳಬೇಕು ಎನ್ನುತ್ತಾರೆ. Satish_GTಒಬ್ಬ ಪತ್ರಕರ್ತನಿಗೆ ಪತ್ರಿಕಾಗೋಷ್ಟಿಗೆ ಬರಬೇಡಿ ಎನ್ನುವ ಅಹಂಕಾರ ಮತ್ತು ದರ್ಪ ತೋರಿಸುತ್ತಾರೆ. ಬಹಿಷ್ಕಾರದ ಮಾತನ್ನಾಡುತ್ತಾರೆ. ಇವರೆಂತಹ ಪತ್ರಕರ್ತರು? ಈ ಮನೋಭಾವವೊಂದೇ ಸಾಕು ಈ ಅಧ್ಯಕ್ಷೆ ಪ್ಯಾಕೇಜ್-ನ್ಯೂಸ್, ಪೇಯ್ಡ್ ನ್ಯೂಸ್‌ನಲ್ಲಿ ಮುಂದಿದ್ದಾರೆ ಎಂದು ಭಾವಿಸಿಕೊಳ್ಳಲು. ಅಷ್ಟೇ ಅಲ್ಲ, ಇವರಿಗೆ ಕನಿಷ್ಟ ಸಾಮಾನ್ಯ ಜ್ಞಾನವೂ ಇದ್ದಂತಿಲ್ಲ. ತಪ್ಪು ಮಾಡಿ ಸಿಕ್ಕಿಹಾಕಿಕೊಂಡಾಗ ಅದನ್ನು ಮತ್ತಷ್ಟು ಬಯಲುಗೊಳಿಸಿಕೊಳ್ಳದೇ ಪಶ್ಚಾತ್ತಾಪದ ಮೂಲಕವೇ ಸರಿಪಡಿಸಿಕೊಳ್ಳೋಣ ಎನ್ನುವ ಜ್ಞಾನವಿಲ್ಲದ ಮತಿಹೀನರೆಲ್ಲ ಸಂಘಗಳ ಮುಖ್ಯಸ್ಥರಾಗಿಬಿಡುತ್ತಾರೆ, ಪದಾಧಿಕಾರಿಗಳಾಗಿಬಿಡುತ್ತಾರೆ.

ಇನ್ನು ಈ ಹಾಸನದ ಪತ್ರಕರ್ತರ ಸಂಘದ ಉಳಿದ ಪದಾಧಿಕಾರಿಗಳಾದರೂ ಎಂತಹವರು? ಅವರೂ ತಮ್ಮ ಅಧ್ಯಕ್ಷೆಯ ಅಭಿಪ್ರಾಯವನ್ನು ಅನುಮೋದಿಸುವವರೇ ಆದರೆ, ಅವರೂ ನಾಚಿಕೆಪಟ್ಟುಕೊಳ್ಳಬೇಕು. ಹಾಗೆಯೇ, ಆ ಸಂಘದ ಸದಸ್ಯರು ಕಟು ಪ್ರತಿಭಟನೆಯ ಮೂಲಕ ಸಂಘದ ಅಯೋಗ್ಯ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಂದ ರಾಜೀನಾಮೆ ಕೊಡಿಸಿ ತಮ್ಮ ಪ್ರಾಮಾಣಿಕತೆ, ವೃತ್ತಿಪರತೆ, ನ್ಯಾಯಪರತೆಯನ್ನು ನಿರೂಪಿಸಬೇಕು. ಆ ಜವಾಬ್ದಾರಿ ಅಲ್ಲಿಯ ಸಂಘದ ಸದಸ್ಯರ ಮೇಲೆಯೇ ಇದೆ.

ಇನ್ನು, ವಿಷುಯಲ್ ಮೀಡಿಯಾದ ಪತ್ರಕರ್ತರ ಬಗ್ಗೆ. ನಮ್ಮ ಭಾಷೆಯ ಅನೇಕ ಟಿವಿ ನಿರೂಪಕರು ಅಹಂಕಾರಿಗಳು, ಅಜ್ಞಾನಿಗಳು, ಭ್ರಷ್ಟರು. ಇದು ಬಹುತೇಕರಿಗೆ ಗೊತ್ತಿರುವ ವಿಚಾರವೇ. ಆದರೆ ಇದಿಷ್ಟೇ ಅಲ್ಲ. ಇವರಲ್ಲಿ ಕೆಲವರು ಕೊಲೆ ಮಾಡಿಸಲು ಸುಪಾರಿ ಕೊಡುವಂತಹ ಕ್ರಿಮಿನಲ್‌ಗಳೂ ಇದ್ದಾರೆ. ಈ ವಿಚಾರ ನೆನ್ನೆಯ “ದಿ ಹಿಂದೂ” ಪತ್ರಿಕೆಯಲ್ಲಿ ಬಂದಿದೆ. ಅವರು ಆ ವ್ಯಕ್ತಿಯ ಹೆಸರು ಮತ್ತು ಆತ ಕೆಲಸ ಮಾಡುತ್ತಿದ್ದ ಚಾನಲ್‌ನ ಬಗ್ಗೆ ಹೇಳಿಲ್ಲ. ಆದರೆ ಈ ವಿಷಯ ಬಹುಶಃ ಕನ್ನಡದ ಯಾವುದೇ ಪತ್ರಿಕೆಯಲ್ಲಿ ಬಂದ ಹಾಗೆ ಕಾಣುವುದಿಲ್ಲ. ನಮ್ಮ ಕನ್ನಡ ಪತ್ರಿಕೆಗಳಿಗೆ ಏಕಿಷ್ಟು ಭಯವೋ ಅರ್ಥವಾಗುತ್ತಿಲ್ಲ.

ನನಗೆ ಗೊತ್ತಾದ ಹಾಗೆ ಆ ಕ್ರಿಮಿನಲ್ ಪತ್ರಕರ್ತನ ಕ್ರೌರ್ಯದ ಕೈಗಳು ಬಹಳ ಉದ್ದವಿವೆ. ಆತನಿಗೆ ಮಾಜಿ ಮುಖ್ಯಮಂತ್ರಿ, ಹಾಲಿ ಮಂತ್ರಿಗಳೆಲ್ಲ ಆಪ್ತರಂತೆ. ಈತನ ಅಪ್ಪನಿಗೆ ಈ ಪತ್ರಕರ್ತ ತಮ್ಮ ಚೇಲಾ ಎಂಬ ಕಾರಣಕ್ಕೆ, ತನ್ನ ಜಾತಿಯವ ಎನ್ನುವ ಕಾರಣಕ್ಕೆ ಮಾಜಿ hindu_tv_anchor_060313ಮುಖ್ಯಮಂತ್ರಿ ಜಿ-ಕೆಟಗರಿ ಸೈಟು ಕೊಟ್ಟು ಪುರಸ್ಕರಿಸಿದ್ದಾರಂತೆ. ಇಲ್ಲೆಲ್ಲ ನಾನು “ಅಂತೆ” ಎಂದು ಬರೆಯುತ್ತಿದ್ದರೂ ಇವೆಲ್ಲ ಅಂತೆಕಂತೆಗಳೇನೂ ಅಲ್ಲ. ಇಂತಹ ಕ್ರಿಮಿನಲ್ ಪತ್ರಕರ್ತ ನಮ್ಮ ರಾಜ್ಯದ ನಂಬರ್ ಒನ್ ಚಾನಲ್‌ನಲ್ಲಿ ಮುಖ್ಯ ನಿರೂಪಕನಾಗಿ ಕಾಣಿಸಿಕೊಳ್ಳುತ್ತಾನೆ ಎಂದರೆ ಅದು ನಮ್ಮ ಮಾಧ್ಯಮಲೋಕದ ಅಧೋಗತಿಗೆ ಸಾಕ್ಷಿ. ಈತ ಇಷ್ಟರಲ್ಲೇ ಸೆರೆ ಆಗಬಹುದು ಎನ್ನುತ್ತವೆ ಮೂಲಗಳು. ಆದರೆ ಆತ ಬಚಾವಾಗಲೂಬಹುದು, ಅಷ್ಟು ಪ್ರಭಾವಶಾಲಿ ಎನ್ನುತ್ತಾರೆ ನನಗೆ ತಿಳಿದವರು.

ನಮ್ಮ ರಾಜಕೀಯ ಕ್ಷೇತ್ರದ ಬಹುಶಃ ಇನ್ನೊಂದು ಐದು-ಹತ್ತು ವರ್ಷಗಳಲ್ಲಿ ಶುದ್ಧವಾಗಬಹುದು ಎನ್ನುವ ನಂಬಿಕೆ ನನಗಿದೆ. ಆದರೆ, ರಾಜ್ಯದ ಮಾಧ್ಯಮಲೋಕ ಶುದ್ದವಾಗುತ್ತದೆ ಎನ್ನುವ ನಂಬಿಕೆ ಇಲ್ಲ. ಬಹುಶಃ ಇಲ್ಲಿಯೇ ವರ್ತಮಾನ.ಕಾಮ್‌ನ ಹೆಚ್ಚುವರಿ ಜವಾಬ್ದಾರಿ ಇದೆ ಎನ್ನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಮಾಧ್ಯಮ ಲೋಕದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ನಮ್ಮಷ್ಟು ಕನ್ನಡಿ ಹಿಡಿದವರು ಯಾರೂ ಇರಲಿಕ್ಕಿಲ್ಲ. ಪ್ರಾಮಾಣಿಕ ಪತ್ರಕರ್ತರು ಸಾಂಘಿಕವಾಗಿ ಈ ಕೆಲಸಕ್ಕೆ ಕೈಜೋಡಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ. ನೀಚ ಪತ್ರಕರ್ತರನ್ನು ವ್ಯವಸ್ಥೆಯಿಂದ ನಿವಾರಿಸಿಕೊಳ್ಳುವ ಅನಿವಾರ್ಯತೆ ಈ ಸಮಾಜಕ್ಕೆ ಸೃಷ್ಟಿಯಾಗಿದೆ.

7 thoughts on “ನೀಚ ಪತ್ರಕರ್ತರು ಹೆಚ್ಚಾಗುತ್ತಲೇ ಇದ್ದಾರೆ

  1. j

    ರವೀ ಇದೇ ಛಾನಲ್ ವರದಿಗಾರ್ತಿ ಬೆಂಗಳೂರಿನ ಮಹಾನಗರ ಪಾಲಿಕೆಯ ಭ್ರಷ್ಟಾಚಾರ ಮುಚ್ಚು ಹಾಕಲು 50 ಲಕ್ಷ ರೂಪಾಯಿ ಕೇಳಿ ಇದೇ ವಾರ ತಗುಲಿ ಹಾಕಿಕೊಂಡಿದ್ದಾಳೆ. ಕಳೆದ ಐದು ವರ್ಷಗಳಲ್ಲಿ ಈ ಛಾನಲ್ ಮೂಲಕ ಸೃಷ್ಟಿಯಾಗಿ ಅಪಾಯಕಾರಿ ಪತ್ರಕರ್ತರಾಗಿ ಬೆಳೆದು ನಂತರ ಕೆಲಸ ಕಳೆದುಕೊಂಡವರ ಬಗ್ಗೆ ಒಂದು ಧಾರವಾಹಿ ಮಾಡಬಹುದು.

    Reply
  2. prasad raxidi

    ಅಪಾಯಕಾರಿ ಸಂಗತಿಯೆಂದರೆ ಮೇಲೆ ಹೇಳಿದಂತ ಅವ್ಯವಹಾರಗಳಲ್ಲೇ ಮುಳುಗಿರುವ ‘ಮಾಧ್ಯಮಿ’ ಗಳು ಸತೀಶ್ ರಂತವರ ಬೆಂಬಲಕ್ಕೆ ನಿಂತವರಂತೆ ಫೋಸ್ ಕೊಡುತ್ತ ತಿರುಗುವುದು, ಮತ್ತು ತಾವೇ ಅಂತವರ ನಾಯಕರೆಂದು ಬಿಂಬಿಸಿಕೊಳ್ಳುವುದು

    Reply
  3. prashanth

    sir nivu helida hagee yaruu aa janapriya channel na pathrakarthana hesaru balasilla antha heliddira adre nivu avara hesarannu prakatisabahuditthu adare nivu adannu madilla.. adre ondu online media davaru hesarannu prakatisiddare.. enee irali anthavarannu bayalige thandre olledu…

    Reply
    1. malli

      online media dalli idannadru madidare. andahage nivu hesarina bagge kutohaldalliddiri. herasranna helidare media yavudu anta helabekaagilla alve? vishaya adalla avaru enu madidare annodu mukya. panchaayiti katteyalli mukthaya adroo aschrya illa.

      Reply
  4. Ananda Prasad

    ಒಂದು ದೇಶದ ಅಥವಾ ಒಂದು ನಾಡಿನ ನಾಗರಿಕತೆಯ ಮಟ್ಟವನ್ನು ಆ ಪ್ರದೇಶದ ಪತ್ರಕರ್ತರ ಹಾಗೂ ಮಾಧ್ಯಮದ ಮಂದಿಯ ನ್ಯಾಯ ನಿಷ್ಠುರತೆ, ಪ್ರಾಮಾಣಿಕತೆ, ಸಂವೇದನಾಶೀಲತೆಯಿಂದ ತಿಳಿಯಬಹುದು. ಪತ್ರಕರ್ತರಲ್ಲಿ ಹಾಗೂ ಮಾಧ್ಯಮದ ಮಂದಿಯಲ್ಲಿ ಇಂಥ ಗುಣಗಳು ಇದ್ದಾಗ ಹೆಚ್ಚಿನ ಅನ್ಯಾಯ, ಅಸಡ್ಡೆ, ಭ್ರಷ್ಟತೆ ನಡೆಯಲು ಸಾಧ್ಯವಿಲ್ಲ. ನಡೆದರೆ ಅದನ್ನು ಬದಲಾಯಿಸಿ ವ್ಯವಸ್ಥೆಯನ್ನು ಸರಿದಾರಿಗೆ ತರುವ, ಆ ಕುರಿತು ಜನರನ್ನು ಜಾಗೃತಗೊಳಿಸುವ ಅಗಾಧ ಸಾಮರ್ಥ್ಯ ಮಾಧ್ಯಮಕ್ಕೆ ಇದೆ. ಈ ನಿಟ್ಟಿನಿಂದ ನೋಡುವುದಾದರೆ ಕರ್ನಾಟಕದ ಮಾಧ್ಯಮ ಮಂದಿಯ ನ್ಯಾಯ ನಿಷ್ಠುರತೆ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ ಎಂಬುದು ಕಂಡುಬರುತ್ತದೆ. ತಮ್ಮ ಸಹೋದ್ಯೋಗಿಯೊಬ್ಬ ಪ್ರಾಮಾಣಿಕವಾಗಿ ತನ್ನ ಕೆಲಸ ನಿರ್ವಹಿಸಿದ್ದಕ್ಕಾಗಿ ಕಳೆದ ಕೆಲವು ತಿಂಗಳುಗಳಿಂದ ಜೈಲಿನಲ್ಲಿ ಕೊಳೆಯುತ್ತಿರುವಾಗ ಸ್ಪಂದಿಸದ ಪತ್ರಕರ್ತರು ಮನುಷ್ಯರು ಎಂದು ಹೇಳಿಕೊಳ್ಳಲು ಯೋಗ್ಯರೋ ಎಂಬ ಪ್ರಶ್ನೆ ಎದ್ದು ನಿಲ್ಲುತ್ತಾ ಇದೆ. ಬೇರೇನೂ ಮಾಡುವುದು ಬೇಡ ಕನಿಷ್ಠ ‘ವರ್ತಮಾನ’ ರೂಪಿಸಿದ ಅಂತರ್ಜಾಲ ಪತ್ರ ಅಭಿಯಾನಕ್ಕೆ ಸಹಿ ಹಾಕಲೂ ನಮ್ಮ ಪತ್ರಕರ್ತರಿಗೆ ಸಾಧ್ಯವಾಗುವುದಿಲ್ಲ ಎಂದರೆ ನಮ್ಮ ರಾಜ್ಯದ ಪತ್ರಿಕೋದ್ಯಮದ ಸ್ಥಿತಿ ಎಷ್ಟು ಪಾತಾಳಕ್ಕೆ ಮುಟ್ಟಿದೆ ಎಂದು ತಿಳಿಯುತ್ತದೆ. ಇದಕ್ಕೆ ಇದುವರೆಗೆ ಸಹಿ ಹಾಕಿದವರ ಸಂಖ್ಯೆ ೧೪೫. ನಮ್ಮ ರಾಜ್ಯದ ಪತ್ರಕರ್ತೆಲ್ಲರನ್ನೂ ಸೇರಿಸಿದರೆ ಸಾವಿರಗಳ ಸಂಖ್ಯೆಯಲ್ಲಿ ಸಹಿ ಮಾಡಬೇಕಾಗಿತ್ತು. ನಮ್ಮ ಪತ್ರಕರ್ತರಿಗೆ ಇಂಥ ಒಂದು ವೆಬ್ಸೈಟ್ ಇದೆ ಎಂಬುದೇ ತಿಳಿದಿಲ್ಲ ಎಂದು ನಂಬಲು ಸಾಧ್ಯವಿಲ್ಲ.

    Reply
  5. Bedre Manjuanth

    ನಕಲಿ ಪಾಸ್‌ಪೋರ್ಟ್ ದಂಧೆ: TV9 ಶಿವಪ್ರಸಾದ್ ಬಂಧನ

    ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಕರ್ನಾಟಕದ ನಂ.1 ಸುದ್ದಿವಾಹಿನಿ ಟಿವಿ9 ಕನ್ನಡದ ಜನಪ್ರಿಯ ನಿರೂಪಕ ಟಿ.ಆರ್.ಶಿವಪ್ರಸಾದ್‌ರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಕಲಿ ಪಾಸ್‌ಪೋರ್ಟ್ ತಯಾರಿಸಿ ಕೊಡುವ ಜಾಲದಲ್ಲಿ ಸಕ್ರಿಯರಾಗಿರುವ ಗುರುತರ ಆರೋಪವನ್ನು ಶಿವಪ್ರಸಾದ್ ಮೇಲೆ ಹೊರಿಸಲಾಗಿದೆ!

    ಈ ಪ್ರಕರಣ ಬಯಲಿಗೆ ಬಂದಿರುವುದು ಸ್ವತಃ ಟಿವಿ9 ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ. ಸ್ಟಿಂಗ್ ಆಪರೇಷನ್ ಹಿನ್ನೆಲೆಯಲ್ಲಿ ಟಿವಿ9 ವರದಿಗಾರರಿಗೆ ಬರುತ್ತಿದ್ದ ಕೊಲೆ ಬೆದರಿಕೆ ಜಾಡು ಹಿಡಿದ ಪೊಲೀಸರಿಗೆ ಅದೇ ವಾಹಿನಿಯ ಶಿವಪ್ರಸಾದ್ ವಿರೋಧಿ ತಂಡದಲ್ಲಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಶಿವಪ್ರಸಾದ್ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ.

    ಕಾರ್ಯಾಚರಣೆ ಹೀಗಿತ್ತು:
    ಲಕ್ಷಗಟ್ಟಲೆ ಹಣ ಕೊಟ್ಟರೆ ನಕಲಿ ಪಾಸ್‌ಪೋರ್ಟ್ ತಯಾರಿಸಿ ಕೊಡಲಾಗುತ್ತದೆ ಎಂಬ ಮಾಹಿತಿ ಪಡೆದಿದ್ದ ಟಿವಿ9ನ ವರದಿಗಾರ ಶಂಕರ್ ಮತ್ತು ಇನ್ನೊಬ್ಬ ವರದಿಗಾರ ಕೆಲವು ತಿಂಗಳುಗಳ ಹಿಂದೆಯೇ ರಹಸ್ಯ ಕಾರ್ಯಾಚರಣೆ ನಡೆಸಿ, ನಕಲಿ ದಂಧೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ಆದರೆ ಆ ವರದಿ ಪ್ರಸಾರ ಆಗುವ ಮೊದಲೇ ಅಪರಿಚಿತರಿಂದ ವರದಿಗಾರರಿಗೆ ಜೀವ ಬೆದರಿಕೆ ಕರೆಗಳು ಬರಲಾರಂಭಿಸಿದವು. ವರದಿಯನ್ನು ಪ್ರಸಾರ ಮಾಡಿದರೆ ಸುಮ್ಮನಿರುವುದಿಲ್ಲ ಎಂಬ ಬೆದರಿಕೆ ಬಂತು.

    ಇದರಿಂದ ಗಾಬರಿಗೊಂಡ ವರದಿಗಾರರು ಎಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದರು. ಅಲ್ಲಿಂದ ಪ್ರಕರಣ ಸಿಸಿಬಿಗೆ ವರ್ಗಾವಣೆಗೊಂಡಿತ್ತು. ವರದಿಗಾರರಿಗೆ ಬಂದ ಬೆದರಿಕೆ ಕರೆಗಳ ದಾಖಲೆ ಪರಿಶೀಲಿಸಿದಾಗ, ಶಿವಪ್ರಸಾದ್ ಮೊಬೈಲ್‌ನಿಂದ ಕರೆ ಹೋಗಿರುವುದು ಪತ್ತೆಯಾಯಿತು. ರಹಸ್ಯ ಕಾರ್ಯಾಚರಣೆ ಕುರಿತ ವರದಿ ಪ್ರಸಾರವಾಗುವ ಮೊದಲೇ ಈ ಕುರಿತು ದಂಧೆಯ ಮಂದಿಗೆ ಮಾಹಿತಿ ನೀಡಿದ್ದು ಶಿವಪ್ರಸಾದ್ ಎನ್ನುವುದು ಪೊಲೀಸರ ಆರೋಪ.

    ಶಿವಪ್ರಸಾದ್ ಜತೆಗೆ ಟಿವಿ9 ಕನ್ನಡದ ಇನ್ನೊಬ್ಬ ಹಿರಿಯ ವರದಿಗಾರನೂ ನಕಲಿ ಪಾಸ್‌ಪೋರ್ಟ್ ತಯಾರಕರಿಗೆ ಬೆಂಬಲ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಈ ಇಬ್ಬರು ಪತ್ರಕರ್ತರು ಮತ್ತು ನಕಲಿ ಪಾಸ್‌ಪೋರ್ಟ್ ಜಾಲದ ಆರೋಪಿಗಳನ್ನು ಬಂಧಿಸಲಾಗಿದೆ.

    ನಕಲಿ ಪಾಸ್‌ಪೋರ್ಟ್ ಜಾಲದಲ್ಲಿ ಪ್ರಮುಖರು ಭಾಗಿಯಾಗಿರುವ ಕಾರಣ, ಪ್ರಕರಣ ಸೂಕ್ಷ್ಮವೆಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸುತ್ತಿದ್ದಾರೆ. ಅಲ್ಲದೆ, ಶಿವಪ್ರಸಾದ್ ಮತ್ತು ಇನ್ನೊಬ್ಬ ಪತ್ರಕರ್ತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ವಿಚಾರಣೆ ನಡೆಸುತ್ತಿದ್ದೇವೆ. ಇನ್ನೂ ಬಂಧಿಸಿಲ್ಲ. ಜಾಲದ ಪ್ರಮುಖ ಆರೋಪಿಗಳನ್ನು ಮಾತ್ರ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
    ನಕಲಿ ಪಾಸ್ಪೋರ್ಟ್ ಹಗರಣ, ಟಿವಿ9 ನಿರೂಪಕ, ಟಿವಿ9 ಶಿವಪ್ರಸಾದ್, ಕನ್ನಡ ಸುದ್ದಿ ವಾಹಿನಿ, ಕರ್ನಾಟಕ

    Reply

Leave a Reply

Your email address will not be published. Required fields are marked *