Daily Archives: August 29, 2012

ಸಾಮಾಜಿಕ ಚಳವಳಿ ಮತ್ತು ವರ್ತಮಾನದ ಸವಾಲುಗಳು


– ಡಾ.ಎನ್.ಜಗದೀಶ್ ಕೊಪ್ಪ


 

ಕಳೆದ ಒಂದು ವರ್ಷದ ಅವಧಿಯಲ್ಲಿ ಭಾರತದ ಸಾಮಾಜಿಕ ಮತ್ತು ರಾಜಕೀಯ ರಂಗದಲ್ಲಿ ಕ್ಷಿಪ್ರ ಗತಿಯಲ್ಲಿ ಸಂಭವಿಸಿದ ಘಟನೆಗಳು ಮತ್ತು ಉಂಟಾದ ಪಲ್ಲಟಗಳು ಪ್ರಜ್ಞಾವಂತರ ಎದೆಯಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಈ ದೇಶದ ಅವಿಭಾಜ್ಯ ಅಂಗದಂತಿರುವ ಭ್ರಷ್ಟಾಚಾರದ ಬಗ್ಗೆ ಅಣ್ಣಾ ಹಜಾರೆ ಎತ್ತಿದ ನೈತಿಕ ಪ್ರಶ್ನೆಗಳು ಹಾಗೂ ಹುಟ್ಟುಹಾಕಿದ ಚಳವಳಿ ಹೊಸ ತಲೆಮಾರಿಗೆ ಭರವಸೆಯನ್ನು ಹುಟ್ಟುಹಾಕಿದ್ದು ನಿಜ. ಆದರೆ, ಅಣ್ಣಾ ಚಳವಳಿ ಒಂದು ಚಂಡಮಾರುತದಂತೆ ಅಪ್ಪಳಿಸಿ ಮರೆಯಾದದ್ದು ಏಕೆ? ಎಂಬ ಪ್ರಶ್ನೆಗೆ ನಾವೀಗ ಉತ್ತರ ಕಂಡುಕೊಳ್ಳಬೇಕಾಗಿದೆ. ಅದೇ ರೀತಿ ಈಗ ಕಪ್ಪು ಹಣದ ಬಗ್ಗೆ ಧ್ವನಿ ಎತ್ತಿರುವ ಯೋಗ ಗುರು ಬಾಬಾ ರಾಮ್ ದೇವ್ ಇವರ ಚಳವಳಿ ಕೂಡ ಮೂಲೆ ಗುಂಪು ಸೇರಲು ಬಹಳ ದಿನ ಬೇಕಾಗಿಲ್ಲ, ಎನಿಸುತ್ತಿದೆ.

ಭಾರತದ ಹೋರಾಟದ ಇತಿಹಾಸ ಬಲ್ಲವರು ಅಣ್ಣಾ ಮತ್ತು ರಾಮ್ ದೇವ್ ಹುಟ್ಟು ಹಾಕಿದ ಚಳವಳಿಗಳ ಬಗ್ಗೆ ಈ ಮೊದಲೇ ಸಂಶಯ ವ್ಯಕ್ತ ಪಡಿಸಿದ್ದರು. ಯಾವುದೇ ಒಂದು ಹೋರಾಟ ತಳ ಮಟ್ಟದಿಂದ ರೂಪುಗೊಳ್ಳಬೇಕೆ ಹೊರತು, ಮೇಲಿನಿಂದ ಅಲ್ಲ.

ಭ್ರಷ್ಟಾಚಾರದ ವಿರುದ್ಧದ ಹೋರಾಟಗಳು ಭಾರತದಲ್ಲಿ ಏಕೆ ವಿಫಲವಾಗುತ್ತಿವೆ ಎಂಬುದಕ್ಕೆ ನಾವು ಇತಿಹಾಸದತ್ತ ಗಮನ ಹರಿಸಲೇಬೇಕು. ಏಕೆಂದರೆ, ಇತಿಹಾಸವೆಂದರೆ ಕೇವಲ ಭೂತಕಾಲದ ದಾಖಲೆ ಅಷ್ಟೇ ಅಲ್ಲ, ಅದು ಮನುಷ್ಯನ ತಪ್ಪುಗಳ ಸರಮಾಲೆಯ ಗ್ರಂಥವೂ ಹೌದು. ಎಚ್ಚರಿಕೆಯ ಗಂಟೆಯೂ ಹೌದು.

ಅಣ್ಣಾ ಹಜಾರೆಯ ಹೋರಾಟಕ್ಕೆ ಸಿಕ್ಕ ಮಾಧ್ಯಮಗಳ ಬೆಂಬಲ ಮತ್ತು ಅಸಂಖ್ಯಾತ ಯುವ ಜನತೆಯ ಸ್ಪೂರ್ತಿ ಕಾಲಕ್ರಮೇಣ ಏಕೆ ಕರಗಿಹೋಯಿತು? ಭಾರತದಲ್ಲಿ ಕ್ರಾಂತಿ ಜರುಗಿ ಹೋಯಿತು ಎಂದು ಹಗಲು, ರಾತ್ರಿ ಗಂಟಲು ಹರಿದುಕೊಂಡ ನಮ್ಮ ದೃಶ್ಯ ಮಾಧ್ಯಮಗಳು, ಅದೇ ಅಣ್ಣಾ ತಂಡದ ಸದಸ್ಯರ ಜಾತಕವನ್ನು ಜಾಲಾಡಿ, ಅವರ ನೈತಿಕತೆಯನ್ನು ಏಕೆ ಕುಗ್ಗಿಸಿದವು ಎಂಬುದನ್ನು ಅರ್ಥಮಾಡಿಕೊಂಡರೆ, ನಮ್ಮ ಸಾಮಾಜಿಕ ಚಳವಳಿಯ ರೂಪು ರೇಷೆ ಹೇಗಿರಬೇಕೆಂಬ ಆಲೋಚನೆಗಳು ಹೊಳೆಯುತ್ತವೆ.

1920-30 ರ ದಶಕದಲ್ಲಿ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಸಮರ ಸಾರಿದ ಗಾಂಧೀಜಿಗೆ ಅಂದಿನ 30 ಕೋಟಿ ಜನತೆಯ ಬೆಂಬಲ ಹೇಗೆ ದೊರೆಯಿತು ಎಂಬುದು ಅರ್ಥವಾದರೆ, ನಮ್ಮ ಮುಂದಿನ ಚಳವಳಿಯ ಸ್ವರೂಪ ಕೂಡ ಸ್ವಷ್ಟವಾಗ ಬಲ್ಲದು.

ಅನಕ್ಷರಸ್ಥರ ನಾಡಾದ ಭಾರತದಲ್ಲಿ , ಯಾವ ಪ್ರಭಾವಿ ಮಾಧ್ಯಮಗಳ ಬೆಂಬಲವಿಲ್ಲದೆ ಗಾಂಧೀಜಿಯ ಸಂದೇಶಗಳು ನಾಡಿನ ಮೂಲೆ ಮೂಲೆಗೆ ತಲುಪುತಿದ್ದವು. ಗಾಂಧೀಜಿಯ ಕರೆಗೆ ಓಗೊಟ್ಟು ತಮ್ಮ ಮನೆ ಮಠಗಳನ್ನು ತೊರೆದು ಜನ ಬೀದಿಗೆ ಬರುತಿದ್ದರು. ಏಕೆ? ಗಾಂಧೀಜಿ ಒಬ್ಬ ಸಂತನಾಗಿರಲಿಲ್ಲ, ಅಥವಾ ಪ್ರವಾದಿಯಾಗಿರಲಿಲ್ಲ. ಕೇವಲ ನಮ್ಮ ನಿಮ್ಮಂತೆ ಎಲ್ಲಾ ದೌರ್ಬಲ್ಯಗಳನ್ನು ಉಳ್ಳ ನಾಯಕರಾಗಿದ್ದರು. ಆದರೆ, ಅವರ ಪಾರದರ್ಶಕತೆಯ ಬದುಕು, ಅವರನ್ನು ಮಹಾತ್ಮನನ್ನಾಗಿಸಿತು. ಯಾವುದೇ ಒಂದು ಜನನಾಯಕನಿಗೆ ಒಂದು ಸಮುದಾಯದ ಇಲ್ಲವೇ ಒಂದು ನಾಡಿನ ನೋವನ್ನು ತನ್ನದೆಂದು ಪರಿಭಾವಿಸುವ ಮಾತೃ ಹೃದಯವಿರಬೇಕು. ಅಂತಹ ಹೃದಯ ಭಾರತದ ನೆಲದಲ್ಲಿ ಗಾಂಧೀಜಿಗಿತ್ತು, ಅಂಬೇಡ್ಕರ್ ಗಿತ್ತು. ಇಂತಹ ವ್ಯಕ್ತಿಗಳ ಮಾದರಿಯನ್ನು ವರ್ತಮಾನದ ಭಾರತದಲ್ಲಿ ನಾವು ಯಾರಲ್ಲಿ ಕಾಣೋಣ?

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎಷ್ಟೋ ಬಾರಿ ಗಾಂಧೀಜಿ ಹಾದಿ ತಪ್ಪಿದ್ದುಂಟು. ಇಂತಹ ವೇಳೆಯಲ್ಲಿ ಅವರನ್ನು ಕಟು ಮಾತುಗಳಲ್ಲಿ ಟೀಕೆ ಮಾಡಿ ಸರಿ ದಾರಿಗೆ ತರಲು ಅಂಬೇಡ್ಕರ್ ಇದ್ದರು, ಲೋಹಿಯಾ ಇದ್ದರು, ಈಗ ಯಾರಿದ್ದಾರೆ? ಅಂತಹ ನೈತಿಕತೆ ಭಾರತದ ರಾಜಕೀಯದಲ್ಲಿ ಯಾರು ಉಳಿಸಿಕೊಂಡಿದ್ದಾರೆ?

ಅಣ್ಣಾ ಹಜಾರೆ ಶುದ್ಧ ಚಾರಿತ್ರ್ಯವುಳ್ಳ ವ್ಯಕ್ತಿ ನಿಜ. ಇದೊಂದೇ ಅರ್ಹತೆ ಬಹು ಸಂಸ್ಕೃತಿ, ಬಹು ಧರ್ಮಗಳ ನಾಡಾದ ಭಾರತಕ್ಕೆ ಸಾಲದು. ನಮ್ಮನ್ನು ಆಳುವ ಸರ್ಕಾರಗಳು ಯಾವುವೇ ಇರಲಿ, ತಮ್ಮ ಹಾದಿಗೆ ಮುಳ್ಳಾಗುವ ಯಾವುದೇ ಹೋರಾಟವನ್ನು ಬಗ್ಗು ಬಡಿಯುವ ಕೌಶಲ್ಯಗಳನ್ನು ಅವು ಕರಗತ ಮಾಡಿಕೊಂಡಿವೆ. ಸರ್ಕಾರಗಳ ಜೊತೆ ಭ್ರಷ್ಟಾಚಾರಕ್ಕೆ ಕೈ ಜೋಡಿಸಿರುವ, ಈಸ್ಟ್ ಇಂಡಿಯಾ ಕಂಪನಿಯ ಮುಂದುವರಿದ ಸಂತತಿಯಂತಿರುವ ಆಧುನಿಕ ಕಾರ್ಪೋರೇಟ್ ಜಗತ್ತು ತೆರೆ ಮೆರೆಯಲ್ಲಿ ಕ್ರಿಯಾಶೀಲವಾಗಿದೆ. ಇಂತಹ ಅಗೋಚರ ಶಕ್ತಿಗಳನ್ನು ಮಣಿಸುವುದು ವರ್ತಮಾನದ ಚಳವಳಿಗಳಿಂದ ಸಾಧ್ಯವಿಲ್ಲ. ಅರೆಬೆಂದ ಮನಸ್ಥಿತಿಯ ಮಧ್ಯಮ ವರ್ಗದ ಜನತೆ ಮತ್ತು ಈ ನಾಡಿನ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಯಾವುದೇ ತಿಳುವಳಿಯಿಲ್ಲದೆ, ಒಂದು ಮೂಗುತಿಗೆ, ಒಂದು ಬಾಟಲ್  ಅಗ್ಗದ ಸಾರಾಯಿಗೆ, ಐನೂರು ರೂಪಾಯಿ ನೋಟಿಗೆ ಪ್ರಾಮಾಣಿಕತೆಯಿಂದ ಮತವನ್ನು ದಾನ ಮಾಡುವ ಗ್ರಾಮಾಂತರ ಜನತೆಯನ್ನು ನಾವು ಪರಿರ್ತಿಸದೆ, ಹೋರಾಟ ಮಾಡಲು ಸಾಧ್ಯವೆ?

ಅಧಿಕಾರ ವಿಕೇಂದ್ರೀಕರಣದ ಪ್ರತಿಪಲವಾಗಿರುವ ನಮ್ಮ ಗ್ರಾಮ ಪಂಚಾಯಿತಿಗಳ ಭ್ರಷ್ಟಾಚಾರ ನಿಗ್ರಹಕ್ಕೆ ಸಾಮರ್ಥ್ಯವಿಲ್ಲದ ವ್ಯವಸ್ಥೆಯಲ್ಲಿ ಯಾವ ಚಳವಳಿಗಳ ಬಗ್ಗೆ ತಾನೆ ನಂಬಿಕೆ ಇಡಲು ಸಾಧ್ಯ? ಕಳೆದ ಮೂರು ವರ್ಷಗಳ ಹಿಂದೆ ಪಂಚಾಯಿತಿಗಳಿಗೆ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳಾಗಿ ನೇಮಕಗೊಂಡ 1800 ಯುವ ಪ್ರಾಮಾಣಿಕ ಪದವೀಧರರು ಏಕೆ ಹುದ್ದೆ ತೊರೆದು ಹೋಗುತಿದ್ದಾರೆ, ಅಥವಾ ಆತ್ಮಹತ್ಯೆಗೆ ಏಕೆ ಶರಣಾಗುತಿದ್ದಾರೆ? ಇವುಗಳ ಬಗ್ಗೆ ನಾವು ಎಂದಾದರೂ ಆತ್ಮಕ್ಕೆ ಪ್ರಶ್ನೆ ಹಾಕಿಕೊಂಡುದ್ದು ಉಂಟಾ?

ಕಪ್ಪು ಹಣದ ಬಗ್ಗೆ ಮಾತನಾಡುವ ಬಾಬಾ ರಾಮ್‌ದೇವ್‌ಗೆ ಕಳೆದ 2004ರ ಲೋಕಸಭೆಯಲ್ಲಿ ಇದ್ದ ಸದಸ್ಯರಲ್ಲಿ ಕೇವಲ 19 ಮಂದಿ ಕೋಟ್ಯಾಧಿಪತಿಗಳು ಇದ್ದರು, ಈಗಿನ ಲೋಕ ಸಭೆಯಲ್ಲಿ ಇವರ ಸಂಖ್ಯೆ 328 ಕ್ಕೆ ಹೇಗೆ ಏರಿದೆ ಎಂಬುದು ಮೊದಲು ತಿಳಿಯಬೇಕಿದೆ. ಬಿ.ಜೆ.ಪಿ. ಸದಸ್ಯರಿಗೆ ವೇದಿಕೆ ಮೇಲೆ ಹಾರ ಹಾಕಿ ಬರಮಾಡಿಕೊಳ್ಳುವ ಯೋಗ ಗುರು ವಿದೇಶದಲ್ಲಿ ಇರುವ ಕಪ್ಪು ಹಣ ತರುವ ಮೊದಲು ಇದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ.

ಕರ್ನಾಟಕದಲ್ಲಿ ನಾಯಕರ ಸ್ವಾರ್ಥ ಮನೋಭಾವದಿಂದ ನೆಲಕಚ್ಚಿರುವ, ಅಥವಾ ರೋಲ್ ಕಾಲ್ ಸಂಘಟನೆಗಳಾಗಿ ಪರಿವರ್ತನೆಗೊಂಡಿರುವ ರೈತಸಂಘ, ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳನ್ನು ನೋಡಿದರೆ, ಯಾವ ಚಳವಳಿಯ ಬಗ್ಗೆ ಜನ ನಂಬಿಕೆ ಇಡಬೇಕು? ನೀವೆ ನಿರ್ಧರಿಸಿ.