Daily Archives: August 3, 2012

ಒಕ್ಕಲಿಗರು ಬೌದ್ಧರೇ?

– ಪ್ರೊ. ಕೆ. ಎಸ್. ಭಗವಾನ್

[1982ರಿಂದ ಇಲ್ಲಿಯವರೆಗೆ 15 ಮುದ್ರಣಗಳನ್ನು ಕಂಡಿರುವ “ಶಂಕರಾಚಾರ್ಯ ಮತ್ತು ಪ್ರತಿಗಾಮಿತನ” ಪುಸ್ತಕದ ಲೇಖಕರಾದ ಪ್ರೊ. ಕೆ.ಎಸ್. ಭಗವಾನ್‌ರವರು, ಆ ಪುಸ್ತಕದ ಮತ್ತು ಲೇಖನ-ಗ್ರಂಥಗಳ ಮೂಲಕದ ಕಳೆದ ಮೂರು ದಶಕಗಳಲ್ಲಿ ಕನ್ನಡದ ವೈಚಾರಿಕ ಪ್ರಜ್ಞೆಯನ್ನು ವಿಸ್ತರಿಸುವಲ್ಲಿ ಪ್ರಯತ್ನಪಟ್ಟವರು. ತಮ್ಮ ಬರವಣಿಗೆಗೆಳಲ್ಲಿ ಜಾತ್ಯತೀತತೆಯನ್ನು ಎತ್ತಿಹಿಡಿದವರು. ಸ್ವಾಮಿ ವಿವೇಕಾನಂದ ಮತ್ತು ಕುವೆಂಪುರವರನ್ನು ಆಳವಾಗಿ ಅಧ್ಯಯನ ಮಾಡಿದವರು. ಹಿಂದೂ ಸಮಾಜದಲ್ಲಿನ ಜಾತೀಯತೆ. ಶ್ರೇಣೀಕೃತ ವ್ಯವಸ್ಥೆ, ಶೋಷಣೆಗಳ ವಿರುದ್ಧ, ವೇದಗಳ ಸಂಕುಚಿತತೆ ಮತ್ತು ಉಪನಿಷದ್‌ಗಳ ಆದರ್ಶಗಳ ಬಗ್ಗೆ ಸಾಧಾರಸಮೇತ ಬರೆದವರು.]

ಒಕ್ಕಲಿಗರ ಬೃಹತ್ ಸಮಾವೇಶ ’ಗುರುವಂದನೆ’ಯ ರೂಪದಲ್ಲಿ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ (03-06-2012) ಜರುಗಿತು. ಇದನ್ನು ಆಯೋಜಿಸಿದ್ದು ’ಒಕ್ಕಲಿಗರ ಸಂಘ’ ಬೆಂಗಳೂರು. ಅದು ಜನಾಂಗಿಕ ಒಗ್ಗಟ್ಟನ್ನು ತೋರಿಸಿದರೂ ಸಾಮಾಜಿಕ ಶೈಕ್ಷಣಿಕ ಸಾಂಸ್ಕೃತಿಕ ಅಭಿವೃದ್ಧಿಯ ಮುನ್ನೋಟವನ್ನು ನೀಡಲಿಲ್ಲ. ಮುಂಗಾಣ್ಕೆ ಇಲ್ಲದ ಜನಾಂಗ ಮಂದಗಾಮಿ ಆಗುವುದು ಸಹಜ. ಹಳ್ಳಿಗಾಡಿನ ಒಕ್ಕಲಿಗರು ಬೇಸಾಯಗಾರರು; ಬಹುತೇಕ ಬಡವರು; ಕೆಲವರು ಕಡುಬಡವರು. ರೈತರು ಬೆಳೆಯುವ ಉತ್ಪನ್ನಗಳಿಗೆ ಅವರ ಖರ್ಚು ಮತ್ತು ಶ್ರಮಗಳಿಗೆ ತಕ್ಕಂತೆ ವೈಜ್ಞಾನಿಕ ಬೆಲೆಗಳನ್ನು ಸರ್ಕಾರ ನಿರ್ಧರಿಸದೆ ಇರುವುದರಿಂದ ಅವರು ಸದಾ ಬಡವರಾಗಿಯೇ ಇದ್ದಾರೆ. ಕಾರ್ಖಾನೆಗಳಲ್ಲಿ ತಯಾರಾಗುವ ವಸ್ತುಗಳ ಧಾರಣೆಗಳನ್ನು ನಿಗದಿಪಡಿಸುವವರು ಕೈಗಾರಿಕೋದ್ಯಮಿಗಳು. ಹಳ್ಳಿಯಿಂದ ಬರುವ ಪದಾರ್ಥಗಳೆಲ್ಲ ಅಗ್ಗ; ಪಟ್ಟಣದಿಂದ ಹಳ್ಳಿಗೆ ಹೋಗುವ ಸರಕುಗಳೆಲ್ಲ ತಗ್ಗು. ಗ್ರಾಮಗಳನ್ನು ನಗರಗಳು ಹೆಬ್ಬಾವಿನಂತೆ ನುಂಗುತ್ತಿವೆ. ಆದುದರಿಂದ ಅವರ ಆರ್ಥಿಕ ಸಬಲತೆಯ ಬಗ್ಗೆ ಸಮಾವೇಶ ಚಿಂತಿಸದೇ ಹೋದದ್ದು ದೊಡ್ಡ ಕೊರತೆ. ಜನರ ಗರೀಬತನವನ್ನು ಅಳಿಸದೆ ಅವರ ಮುಗ್ಧತೆಯನ್ನು ಬಳಸಿಕೊಳ್ಳುವುದು ಅನುಚಿತವಾಗುತ್ತದೆ. ಬಡವರನ್ನು ಪ್ರೌಢರನ್ನಾಗಿ ಮಾಡದೆ ಮೂಢರನ್ನಾಗಿ ಇಡುವುದು ನಡತೆಯಲ್ಲ್ಲ. ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಪದ್ಮಭೂಷಣ ಡಾ| ಬಾಲಗಂಗಾಧರನಾಥ ಸ್ವಾಮೀಜಿ ಅವರು ಈ ಜನಾಂಗದವರ ಐಕ್ಯತೆಯನ್ನು ಸಾಧಿಸುವಲ್ಲಿ ಬಹುಪಾಲು ಸಫಲರಾಗಿದ್ದಾರೆ. ನಾನಾ ಬಣಗಳು, ಒಳಪಂಗಡಗಳು, ವಿವಿಧ ರಾಜಕೀಯ ಪಕ್ಷದವರು, ಎಲ್ಲರನ್ನೂ ಒಂದೆಡೆ ಸೇರಿಸಿದ್ದು ನಿಜಕ್ಕೂ ವಿಸ್ಮಯಕರ ಸಾಧನೆಯೆ! ಇದರಿಂದ ರಾಜ್ಯದಲ್ಲಿನ ಎರಡನೆಯ ಮಹಾಸಂಖ್ಯಾ ಬಲದ ಕೋಮಿನ ಏಕತೆಯ ಸಂಕೇತವಾಗಿದ್ದಾರೆ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು. ಇವರ ಕಾಲದಲ್ಲಿ ಆಗಿರುವಷ್ಟು ಶೈಕ್ಷಣಿಕ ಸಾಧನೆಗಳು, ವಿದ್ಯಾಸಂಸ್ಥೆಗಳ ಸ್ಥಾಪನೆ, ಹಿಂದೆಂದೂ ಆಗಿರಲಿಲ್ಲ. ಶ್ರೀಕ್ಷೇತ್ರದಲ್ಲಿ ಅವರು ನಿರ್ಮಿಸಿರುವ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಸ್ಥಾನ ಐತಿಹಾಸಿಕ ಸುಪ್ರಸಿದ್ಧ ದೇವಾಲಯಗಳ ಸಾಲಿಗೆ ಸೇರುತ್ತದೆ. ಅದನ್ನು ನೋಡಿದರೆ ಬೇಲೂರು, ಹಳೇಬೀಡು, ತಲಕಾಡು ಇತ್ಯಾದಿ ಸ್ಥಳಗಳ ನಿರ್ಮಾಣಗಳು ನೆನಪಾದರೆ ಅದು ಯಥೋಚಿತವಲ್ಲದೆ ಸೋಜಿಗ ಎನ್ನಿಸುವುದಿಲ್ಲ. ಹೊಯ್ಸಳರು, ಗಂಗರು, ಮುಂತಾದ ರಾಜಮಹಾರಾಜರುಗಳ ಶ್ರೇಣಿಯಲ್ಲಿ ಬಾಲಗಂಗಾಧರನಾಥರು ವಿರಾಜಿಸುತ್ತಾರೆ.

ಆ ಬೃಹತ್ ಸಮ್ಮೇಳನವನ್ನು ರಾಜ್ಯದ ಮುಖ್ಯಮಂತ್ರಿ ಶ್ರೀ ಡಿ. ವಿ. ಸದಾನಂದಗೌಡರು ಉದ್ಘಾಟಿಸಿದರು. ಮಾನ್ಯ ಗೌಡರು ಮುಖ್ಯಮಂತ್ರಿ ಪದವಿಗ್ರಹಣ ಮಾಡಿದ ನಂತರ ಶ್ರೀಗಳನ್ನು ಕಾಣಲು ಹೋಗಿ ಆಶೀರ್ವಾದ ಪಡೆದಾಗ, “ಸದಾನಂದ ಅವರೇ, ನೀವು ಆರುವರೆ ಕೋಟಿ ಪ್ರಜೆಗಳ ಏಳಿಗೆಯನ್ನು ಮಾಡಬೇಕು. ಅವರು ಕೊಂಡಾಡುವಂತೆ ನೀವು ಆಡಳಿತ ನಡೆಸಿ” ಎಂದು ಹೇಳಿದ್ದನ್ನು ನೆನಪಿಸಿಕೊಂಡರು. ಆ ಮಾತುಗಳು ಸ್ವಾಮೀಜಿ ಅವರ ಉದಾತ್ತ ಹೃದಯ ಮತ್ತು ವಿಶಾಲ ಮನೋಭಾವನೆಗಳನ್ನು ಸೂಚಿಸುತ್ತವೆ ಎನ್ನಬಹುದು. ಭಾರತದ ವಿದೇಶಾಂಗ ಸಚಿವರಾದ ಸಂಯಮ ಮೂರ್ತಿ ಎಸ್. ಎಂ. ಕೃಷ್ಣರವರು, ದವಸಧಾನ್ಯಗಳನ್ನು ಬೆಳೆಯುವ “ಒಕ್ಕಲಿಗರು ಯಾವಾಗಲೂ ನೀಡಿದವರು, ಪಡೆದವರಲ್ಲ” ಎಂದರು. ನಿಜ. ಆದರೆ ರೈತರ ಕೆಲಸಕ್ಕೆ ಬೇಕಾದ ನೇಗಿಲು ನೊಗ ಕುಂಟೆ ಹಲುಬೆ ಮಾಡುವವರು, ಹಾರೆ ಗುದ್ದಲಿ ಪಿಕಾಸಿ ಕುಡುಗೋಲು ಕೊಡಲಿ ಎರೆಗತ್ತಿ ಕಡಕತ್ತಿ ಮುಂತಾದ ಹತಾರಗಳನ್ನೆಲ್ಲ ತೋಳಿಸಿ ಕೊಡುವವರು ಕಮ್ಮಾರರು; ಅವರಿಗೆ ಗಾಡಿಗಳನ್ನು ಹೂಡಿ ಕೊಡುವವರು ಬಡಗಿಗಳು; ಅವರು ಒಪ್ಪ ಓರಣವಾಗಿ ಷೋಕಿಯಾಗಿ ಕಾಣುವಂತೆ ಕೇಶ ಶೃಂಗಾರ ಮಾಡುವವರು ನಾಯಿಂದರು; ಅವರು ಬಯಸುವ ಸೈಕಲ್ ಸ್ಕೂಟರ್ ಮೋಟಾರ್ ಬೈಕ್; ಅವರು ಪ್ರಯಾಣಿಸುವ ಬಸ್ ರೈಲು ಇತ್ಯಾದಿಗಳನ್ನು ಅವರೇ ತಯಾರಿಸುವುದಿಲ್ಲ; ಅಷ್ಟೇ ಅಲ್ಲ; ಅವರು ಉಡುವ ಬಟ್ಟೆಬರೆಗಳು ಮತ್ತು ತೊಡುವ ಸೀರೆ ಕುಪ್ಪಸಗಳಿಗಾಗಿ ಬೇರೆಯವರನ್ನು ಅವಲಂಬಿಸಬೇಕು; ಕುಲಾಲರು ಮಡಿಕೆ ಕುಡಿಕೆ ಮಾಡಿ ಕೊಡದೆ ಇದ್ದರೆ ಅಥವಾ ಕಂಚುಗಾರರು ಪಾತ್ರೆ ಮಾಡದೆ ಹೋದರೆ ಅವರು ಅಡಿಗೆ ಮಾಡಿಕೊಂಡು ಉಣ್ಣಲು ಆಗಲಾರದು. ಪ್ರತಿಯೊಂದು ಜನಾಂಗವೂ ಇನ್ನೊಂದು ಜನಾಂಗದವರ ಕಸುಬಿನ ನೆರವು ಅಥವಾ ಸೇವೆ ಅಥವಾ ಕೊಡುಗೆಯ ಮೇಲೆ ಅವಲಂಬಿತವಾಗಿದೆ. ಪರಸ್ಪರ ಅಂತರವಲಂಬನೆ ಸಾಮಾಜಿಕ ನಿಯಮ ಮತ್ತು ಕರ್ತವ್ಯ. ಒಂದು ವೃತ್ತಿಯವರು ಇನ್ನೊಂದು ಕಸುಬಿನವರು ಉತ್ಪಾದಿಸಿದ ಅಗತ್ಯ ವಸ್ತುಗಳನ್ನು ಪಡೆಯದೆ ಬದುಕು ಸಾಗಿಸುವುದು ಸಾಧ್ಯವಿಲ್ಲ. ಹಳ್ಳಿಯಲ್ಲಿ ದಲಿತರು ಓಲಗ ಕೊಂಬು ಊದದೆ ಹೋದರೆ ’ದೇವರು ಬರು’ವುದಿಲ್ಲ, ತೇರು ಹರಿಯುವುದಿಲ್ಲ. ತೀರ ಕ್ವಚಿತ್ತಾಗಿ ಜಾತಿ ಜಗಳಗಳಾದರೂ, ವರ್ಗ ಕಲಹಗಳು ಭಾರತದಲ್ಲಿ ಆಗದಿರುವುದಕ್ಕೆ ಪರಸ್ಪರ ಪೂರಕ ಮತ್ತು ತಾರಕ, ಹಾಗೂ ಕೆಲವೇಳೆ ಮಾರಕ, ಆಶ್ರಯವೇ ಪ್ರಮುಖ ಕಾರಣ ಎನಿಸುತ್ತದೆ. ಇದು ಬರಿ ಆರ್ಥಿಕ ವ್ಯವಹಾರವಾಗಿರದೆ, ಮದುವೆ ಹಬ್ಬಹರಿದಿನಗಳಲ್ಲಿ ಭಾಗವಹಿಸಿ ಊಟೋಪಚಾರ ನಡೆಯುವುದರಿಂದ ಆತ್ಮೀಯ ಮಾನವ ಸಂಬಂಧವಾಗಿದೆ. ಹೀಗೆಂದರೆ ಇದು ಜಾತಿವ್ಯವಸ್ಥೆಯ ಬೆಂಬಲ ಎಂದು ಖಂಡಿತ ತಿಳಿಯಬಾರದು. ಹೆಣ್ಣು ಕೊಡುವುದೂ ತರುವುದೂ ನಡೆದರೆ ಕಾಲಾಂತರದಲ್ಲಿ ಜಾತಿಪದ್ಧತಿ ನಿರ್ನಾಮವಾಗುವುದರಲ್ಲಿ ಅನುಮಾನವಿಲ್ಲ.

ಶ್ರೀ ಆದಿಚುಂಚನಗಿರಿ ಮಠ ಬಿಟ್ಟರೆ ಒಕ್ಕಲಿಗರಿಗೆ ಬೇರಾವ ಧಾರ್ಮಿಕ ಸಂಸ್ಥೆ ಇಲ್ಲ. ಶ್ರೀ ಚಂದ್ರಶೇಖರನಾಥ ಸ್ವಾಮೀಜಿಗಳ ವಿಶ್ವ ಒಕ್ಕಲಿಗರ ಮಠ ಕೆಂಗೇರಿಯಲ್ಲಿ ಇದ್ದರೂ ಅದು ಚುಂಚನಗಿರಿಗೆ ಸೇರಿದಂತೆಯೇ ಇದೆ, ಇತ್ತೀಚೆಗೆ. ಒಕ್ಕಲಿಗರಿಗೆ ತಮ್ಮದೇ ಆದ ಸಿದ್ಧಾಂತ, ಮತ ಅಥವಾ ಆಧ್ಯಾತ್ಮಿಕ ಆದಿಪುರುಷ ಇಲ್ಲ. ಯಾದವರಿಗೆ ಶ್ರೀಕೃಷ್ಣ, ಜೈನರಿಗೆ ಮಹಾವೀರ, ಬೌದ್ಧರಿಗೆ ಬುದ್ಧದೇವ, ಪಾರಸೀಕರಿಗೆ ಜ಼ರತುಷ್ಟ್ರ, ಯಹೂದಿಗಳಿಗೆ ಮೋಸೆಸ್, ಕ್ರೈಸ್ತರಿಗೆ ಯೇಸು, ಮುಸ್ಲಿಮರಿಗೆ ಮಹಮ್ಮದ್ ಪೈಗಂಬರ್, ಲಿಂಗಾಯಿತರು ಅಥವಾ ವೀರಶೈವರಿಗೆ ಬಸವಣ್ಣ, ಸಿಕ್ಕರಿಗೆ ಗುರು ನಾನಕ್, ಹಾಲುಮತದವರಿಗೆ ಕನಕದಾಸರು, ದಲಿತರಿಗೆ ಭಾರತರತ್ನ ಅಂಬೇಡ್ಕರ್ ಇನ್ನೊಂದು ಸಮುದಾಯಕ್ಕೆ ರವಿದಾಸರು ಇಲ್ಲವೆ ಬಾಬುಜಗಜೀವನರಾಮ್, ಬ್ರಾಹ್ಮಣರಲ್ಲಿ ಸ್ಮಾರ್ತರಿಗೆ ಶಂಕರಾಚಾರ್ಯ, ಶ್ರೀವೈಷ್ಣವರು ಅಥವಾ ಐಯ್ಯಂಗಾರರಿಗೆ ರಾಮಾನುಜಾಚಾರ್ಯ, ದ್ವೈತಿಗಳಿಗೆ ಮಧ್ವಾಚಾರ್ಯ, ಬೇಡ ನಾಯಕರಿಗೆ ಮಹರ್ಷಿ ವಾಲ್ಮೀಕಿ, ಗಂಗಾಮತಸ್ಥರಿಗೆ ವ್ಯಾಸ ಋಷಿ, ಉಪ್ಪಾರರಿಗೆ ಭಗೀರಥ ಚಕ್ರವರ್ತಿ ಇದ್ದಾರೆ. ಹೀಗೆ ಒಂದೊಂದು ಸಮುದಾಯಕ್ಕೆ ಅವರವರು ನಂಬಿರುವಂತೆ ಒಬ್ಬೊಬ್ಬ ಮಹಾಪುರುಷ, ಅತಿಮಾನವ, ಅವತಾರಿ, ಮತಸ್ಥಾಪಕ ಇದ್ದಾನೆ.

ಈ ದೃಷ್ಟಿಯಿಂದ ನೋಡಿದಾಗ ಒಕ್ಕಲಿಗರಿಗೆ ಅವರದೇ ಆದ ಆಧ್ಯಾತ್ಮ ನಾಯಕ, ಧರ್ಮಗುರು, ಅಧಿನಾಯಕ ಅಥವಾ ಆದಿಪುರುಷ ಇಲ್ಲ. ಇದರಿಂದ ಅವರಿಗೆ ಅನುಕೂಲವೂ ಇದೆ; ಅನಾನುಕೂಲವೂ ಇದೆ. ಅನುಕೂಲ ಎಂದರೆ ಅವರು ಸಂಕುಚಿತ ಮನಸ್ಸಿನವರಾಗದೆ ಅಥವಾ ಅಷ್ಟೊಂದು ಜಾತ್ಯಾಂಧರಾಗದಂತೆ ಮಾಡಿದೆ. ಅಲ್ಲದೆ ಅವರನ್ನು ಇದು ಅನೈಕ್ಯತೆವುಳ್ಳ ಅಸಂಘಟಿತ ಜನಾಂಗವನ್ನಾಗಿ ರೂಪಿಸಿರುವುದು ಗಮನೀಯ ಸಂಗತಿ. ಅವರು ಆಗೊಮ್ಮೆ, ಈಗೊಮ್ಮೆ ಸಂಘಟಿತರಾಗಬಹುದು ಇಲ್ಲವೆ ಸಂಘಟಿತರೆಂಬಂತೆ ತೋರಿಸಬಹುದು, ಮೊನ್ನೆ (03-06-2012) ಆದಂತೆ. ಒಂದು ಪಕ್ಷ ಅವರು ಸಮುದಾಯದ ಪರ ಒಟ್ಟಿಗೆ ನಿಂತರೆ ಅದು ಅವರ ಭಾವುಕತೆಯಿಂದಲೇ ಹೊರತು ಸೈದ್ಧಾಂತಿಕ ಮನವರಿಕೆಯಿಂದಾಗಲಿ ಇಲ್ಲವೆ ಬೌದ್ಧಿಕ ನಿಲುವಿನಿಂದಾಗಲಿ ಅಲ್ಲ. ಸಂಕುಚಿತ ಸಿದ್ಧಾಂತದಿಂದ ಆಗುವಷ್ಟು ಅನಾಹುತ ಭಾವುಕತೆಯಿಂದ ಆಗಲಾರದು. ಏಕೆಂದರೆ ಭಾವುಕತೆ ತಾತ್ಕಾಲಿಕ, ಮನವರಿಕೆಯಾದರೋ ದೀರ್ಘಕಾಲಿಕ ಆದರೆ ಅದು ಮಾನವಕಲ್ಯಾಣಕಾರಿ ಅಲ್ಲದಿದ್ದರೆ ಅನರ್ಥಕಾರಿ. ಒಕ್ಕಲಿಗರಿಗೆ ಮೂಲಪುರುಷ ಇಲ್ಲದಿರುವುದರಿಂದ ಅವರಲ್ಲಿ ಜಾತ್ಯಾಂಧತೆ, ಮತಾಂಧತೆ ಇಲ್ಲವಾಗಿದೆ. ಆದರೆ ಈಚೆಗೆ ಸ್ವಲ್ಪ ಮಠಾಂಧತೆ ಕಂಡುಬರಬಹುದು. ಪರಂತು ಅದು ಇತರ ಮಠಗಳಂತೆ ಮೂಲಭೂತವಾದಿ ಧೋರಣೆಯನ್ನು ಇನ್ನೂ ಅಷ್ಟಾಗಿ ತಾಳಿಲ್ಲ. ಮತಾಂಧತೆ ಮರಣಾನಂದವೇ ಸರಿ.

ಒಕ್ಕಲಿಗರ ಸಂಘದ ಕರಪತ್ರ ಹಾಗೂ ಆಹ್ವಾನ ಪತ್ರಿಕೆ ಮುಖ ಪುಟದಲ್ಲಿ ರಾಷ್ಟ್ರಕವಿ ಕುವೆಂಪು ಭಾವಚಿತ್ರ ಮುದ್ರಿಸಿದ್ದಾರೆ. ಕುವೆಂಪು ನಮ್ಮವರೆಂದುಕೊಂಡರೆ ಪ್ರಯೋಜನವಿಲ್ಲ. ಕುವೆಂಪು ಜಾತಿಮತಗಳನ್ನು ಮೀರಿದ್ದರು. ಅಂಧಾಭಿಮಾನ ಅಪಾಯಕಾರಿಯಾದುದು. ಕುರುಡು ಹೆಮ್ಮೆಗೆ ಹುರುಡು ಕಮ್ಮಿ. ಆದ್ದರಿಂದ ಭಾವಚಿತ್ರ ಹಾಕಿರುವುದಕ್ಕೆ ಬೆರಳೆಣಿಕೆ ಜನರು (’ಪ್ರಜಾವಾಣಿ’ 05-06-2012 ರಂದು ಇಬ್ಬರು ಮತ್ತು 06-06-2012 ರಂದು ನಾಲ್ವರು) ತೀಕ್ಷ್ಣವಾಗಿ ವಿರೋಧಿಸಿದ್ದಾರೆ. ಅವರ ಆತಂಕ ಮತ್ತು ಆಕ್ಷೇಪ ತೀರ ಕೊಂಚಮಟ್ಟಿಗೆ ಸರಿ ಎನಿಸಬಹುದು. ಆದರೆ ವಿಶಾಲ ದೃಷ್ಟಿಯಿಂದ ನೋಡಿದಾಗ ಅದು ನಿಲ್ಲಲಾರದು. ಕುವೆಂಪು ಸಾಹಿತ್ಯವನ್ನು ಒಕ್ಕಲಿಗರಲ್ಲಿ ಶೇಕಡ ಎರಡು ಮಂದಿಯೂ ಓದಿಲ್ಲ ಎನ್ನಿಸುತ್ತದೆ. ಏಕೆಂದರೆ ಪದವೀಧರರೇ ಸರಿಯಾಗಿ ಕುವೆಂಪು ಅವರನ್ನು ಓದಿ ಅರ್ಥೈಸಿಕೊಂಡಿಲ್ಲ. ರಾಜಕಾರಣಿಗಳಂತೂ ಅವರನ್ನು ಓದಿಯೇ ಇಲ್ಲ ಎನ್ನಬೇಕು. ನನಗೆ ತಿಳಿದಂತೆ ಕೆಂಗಲ್ ಹನುಮಂತಯ್ಯ, ಕರ್ನಾಟಕ ರಾಜ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದ ಹೆಚ್. ಹೊಂಬೇಗೌಡ, ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡ, ವೈ. ಕೆ. ರಾಮಯ್ಯ ಓದಿದ್ದರು. ಹಾಲಿ ಸಂಸದರಾದ ಡಿ. ಬಿ. ಚಂದ್ರೇಗೌಡರು, ವಿಧಾನ ಪರಿಷತ್ತಿನ ಮಾಜಿ ಅಧ್ಯಕ್ಷ ಬಿ. ಎಲ್. ಶಂಕರ್, ಕುವೆಂಪು ಸಾಹಿತ್ಯವನ್ನು ಓದಿದ್ದಾರೆ. ಅಂಥದ್ದರಲ್ಲಿ ಯಾವ ಯಾವ ಉದ್ದೇಶಕ್ಕೋ ಬೃಹತ್ ಸಮ್ಮೇಳನವನ್ನು ಏರ್ಪಡಿಸುವ ಸಂಘದ ಎಷ್ಟು ಮಂದಿ ಓದಿದ್ದಾರೆ? ಎಂದು ವಿಚಾರಿಸಬೇಕು. ಈ ಮೊದಲೇ ಹೇಳಿದಂತೆ, ಒಕ್ಕಲಿಗರಿಗೆ ’ಧರ್ಮಗುರು’ ಇಲ್ಲದಿರುವುದರಿಂದ ತಮಗೊಬ್ಬ ಬೇಕು ಎಂದು ಅವರಿಗೆ ಅನ್ನಿಸಿರಬಹುದೇನೋ! ಅದನ್ನು ಅವರು ತಾತ್ವಿಕವಾಗಿ ತೆಗೆದುಕೊಂಡಿದ್ದಾರೋ? ಇಲ್ಲವೋ? ಎಂದು ಪರಿಶೀಲಿಸುವುದು ಎಲ್ಲರ ಕರ್ತವ್ಯ. ಅವರು ಕುವೆಂಪು ಫೋಟೊ ಹಾಕಿಕೊಂಡು ಅವರ ತತ್ವಗಳನ್ನು ಅನುಷ್ಠಾನ ಮಾಡದಿದ್ದರೆ ಆಗ ಅವರನ್ನು ಟೀಸಿಸುವುದು ನ್ಯಾಯವಾದೀತು. ಕುವೆಂಪು ಫೋಟೊ ಹಾಕಿಕೊಳ್ಳಲು ನಿಮಗೆ ನೈತಿಕತೆ ಇಲ್ಲ, ಹಕ್ಕಿಲ್ಲ ಎಂದು ಅವರ ಮೇಲೆ ಖಂಡನೆಯ ಕೆಂಡದ ಮಳೆ ಸುರಿಸಬಹುದು. ಇದು ಜನತೆಯನ್ನು ಶಿಸ್ತಿಗೆ ಒಳಪಡಿಸಿ ಬೆಳೆಸುವ ವಿಧಾನ. ಮೊದಲೇ ನಿಂದಿಸುವುದು, ಬೆಳಕು ಕಾಣಬಯಸುವವರಿಗೆ ಅದು ಸಿಗದಂತೆ ಮಾಡಿದಂತಾಗುತ್ತದೆ. ಕೊಳಕಿನಲ್ಲಿ ಇರುವವರಿಗೆ ಬೆಳಕು ತಿಳಿಯುವುದಿಲ್ಲ.

ಕುವೆಂಪು ಭಾವಚಿತ್ರ ಹಾಕಿಕೊಂಡದ್ದಕ್ಕಾಗಿ ಒಕ್ಕಲಿಗರ ಸಂಘವನ್ನು ದೂಷಿಸುವುದು, ನನ್ನ ದೃಷ್ಟಿಯಲ್ಲಿ ತರವಲ್ಲ. ಏಕೆಂದರೆ ಒಂದು ವರ್ಗದ ಕೆಲವು ಲೇಖಕರು ವಿಮರ್ಶೆಯ ಹೆಸರಿನಲ್ಲಿ ಕುವೆಂಪು ಸಾಹಿತ್ಯವನ್ನು ಉದ್ದಕ್ಕೂ ಟೀಕಿಸುತ್ತಾ ಬಂದರು. ಪುರೋಹಿತಶಾಹಿ ವಿರುದ್ಧದ ಕುವೆಂಪು ವಿಚಾರಗಳು ಹರಡಿದರೆ ಹಿಂದುಳಿದ ವರ್ಗದವರು ದಲಿತರು ಒಟ್ಟಾರೆ ಎಲ್ಲ ಅಬ್ರಾಹ್ಮಣ ವರ್ಗದವರು ಕುವೆಂಪು ಕಡೆ ವಾಲಬಹುದೆಂದು ಅದನ್ನು ತಡೆಗಟ್ಟುವುದು ಅವರ ಹಿಕಮತ್ತಾಗಿತ್ತು. ಈ ಕಾರಣದಿಂದ ನವ್ಯ ಸಾಹಿತ್ಯ ಎಂಬ ಹುಸಿ ಚಳವಳಿಯನ್ನು ಪ್ರಾರಂಭಿಸಿದರು. ನವ್ಯವು ಬ್ರಾಹ್ಮಣವಾದ ಮತ್ತು ಪುರೋಹಿತಶಾಹಿಯ ಪುನರುತ್ಥಾನವಾಗಿದೆ. ಕುವೆಂಪು ಎಂಥ ದೊಡ್ಡ ಕ್ರಾಂತಿಕಾರಿ ಸಾಹಿತಿ ಎಂಬುದನ್ನು ನನ್ನ ಬರಹಗಳಲ್ಲಿ (ಬದಲಾವಣೆ – 1982; ಕುವೆಂಪು ಯುಗ – 1990) ವಿಶ್ಲೇಷಿಸಿದ ನಂತರ ಅವರು ಮೌನಿಗಳಾದರು. ಈ ಪಕ್ಷಪಾತಿ ವಿಮರ್ಶಕರು ಎತ್ತಿಹಿಡಿಯುವ ಲೇಖಕರಿಗಿಂತ ಕುವೆಂಪು ಬಹಳ ದೊಡ್ಡ ಸೃಜನಶೀಲ ಸಾಹಿತಿ ಎಂದು ತೌಲನ ವಿಮರ್ಶೆಯಲ್ಲಿ ನಾನು ಸಾಧಾರವಾಗಿ ಪ್ರತಿಪಾದಿಸಿದಮೇಲೆ ಅವರು ನಿರುತ್ತರರಾದರು. ತಮ್ಮ ಎಡವಟ್ಟನ್ನು ತಿದ್ದಿಕೊಳ್ಳುವ ಸಲುವಾಗಿ ಕುವೆಂಪು ಸಾಹಿತ್ಯವನ್ನು ಮೆಚ್ಚಿ ಬರೆಯತೊಡಗಿದರು. ಕವಿಯನ್ನು ಕುವೆಂಪು ’ಅಗ್ನಿಮುಖಿ ಪ್ರಲಯ ಶಿಖಿ’ (ಸಮಗ್ರ ಕಾವ್ಯ, ಸಂ.1, ಪುಟ 141) ಎಂದು ವರ್ಣಿಸಿ ತಾನು ಏನೆಂದು ಪರೋಕ್ಷವಾಗಿ ನಿರ್ದೇಶಿಸಿದ್ದಾರೆ. ಅವರ ಪ್ರತಿಭೆ ಅಗ್ನಿಯಾಗಿ ಎಲ್ಲ ಮತಮೌಢ್ಯಗಳನ್ನು ಭಸ್ಮಮಾಡಿದೆ; ಜಾತಿ ವ್ಯವಸ್ಥೆಯ ಅಸಮಾನತೆಗಳನ್ನು ಅಮಾನುಷ ಭೇದಭಾವನೆಗಳನ್ನು ವಿನಾಶಗೊಳಿಸಿದೆ. ಆದ್ದರಿಂದ ಕತ್ತಲೆಯಲ್ಲಿರುವ ಜನರಿಗೆ ಬೆಳಕಿನ ಆವಶ್ಯಕತೆ ಇದೆ. ಕುವೆಂಪು ಸಾಹಿತ್ಯದಲ್ಲಿ ಅಪಾರ ಬೆಳಕುಂಟು. ಅವರ ಫೋಟೋ ಹಾಕಿಕೊಂಡಿರುವ ಒಕ್ಕಲಿಗರ ಸಂಘ ಅವರ ತತ್ವಗಳನ್ನು ಒಪ್ಪಿಕೊಂಡು ಪ್ರಚಾರ ಮಾಡುವಂತೆ ಒತ್ತಾಯ ಹಾಕಬೇಕು. ಅವರು ಜೀವನದಲ್ಲಿ ಪರಿಪಾಲಿಸಬೇಕಾದ ಜಾತ್ಯತೀತತೆ, ಅಂತರ್‌ಜಾತಿ ವಿವಾಹ, ಜಾತಿ ವಿನಾಶ, ಮೂಢನಂಬಿಕೆಯ ನಿರ್ಮೂಲನೆ, ಅಸಮಾನತೆಯ ತೆರವು, ಯಜ್ಞಯಾಗಗಳ ಉಚ್ಛಾಟನೆ ವೈಜ್ಞಾನಿಕ ಮನೋಭಾವ, ವೈಚಾರಿಕ ಬುದ್ಧಿ, ಪ್ರಗತಿಪರ ಜೀವನ ವಿಧಾನ, ನಿರಂಕುಶಮತಿ, ಮಂತ್ರಮಾಂಗಲ್ಯ, ಪುರೋಹಿತಶಾಹಿಯ ಮೂಲೋತ್ಪಾಟನೆ – ಮುಂತಾದ ಕುವೆಂಪು ಆದರ್ಶಗಳನ್ನು ಅಳವಡಿಸಿಕೊಂಡರೆ ಮಾತ್ರ ಒಕ್ಕಲಿಗರಿಗೆ ಮತ್ತು ಅವರ ಸಂಘಕ್ಕೆ ನೈತಿಕ ಹಕ್ಕು ಮತ್ತು ಶಕ್ತಿ ಬರಲು ಸಾಧ್ಯ. ಇಲ್ಲವಾದರೆ ಈಗಿನಂತೆ ಬೌದ್ಧಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಅವರು ರಿಕ್ತರಾಗಿರಬೇಕಾಗುತ್ತದೆ. ಕೇವಲ ಪ್ರಾಪಂಚಿಕ ಮತ್ತು ರಾಜಕೀಯ ಹಿತಾಸಕ್ತಿಗಳ ರಕ್ಷಣೆಗೆ ಹಾಗೂ ಸಾಮಾಜಿಕ ಲಾಭಕೋರತನಗಳಿಗಾಗಿ ಆಗೊಮ್ಮೆ ಈಗೊಮ್ಮೆ ಸಮಾವೇಶ ಏರ್ಪಡಿಸುವುದು ಆಂತರಿಕವಾಗಿ ಹೆಚ್ಚು ಪ್ರಯೋಜನಕಾರಿಯಾಗಲಾರದು. ಏಕೆಂದರೆ ಬಹಿರಂಗದಲ್ಲಿ ಬಲಿಷ್ಠರಂತೆ ಕಂಡುಬಂದರೂ ಆಂತರಂಗಿಕವಾಗಿ ದುರ್ಬಲವಾಗುತ್ತಾರೆ, ಸಾಹಿತ್ಯ, ಸಂಸ್ಕೃತಿ ಜ್ಞಾನ ವಿಜ್ಞಾನಗಳ ಬೆಳವಣಿಗೆ ಇಲ್ಲದೆ. ಮನುಷ್ಯನ ವ್ಯಕ್ತಿತ್ವಕ್ಕೆ ದೊಡ್ಡತನ ಬರುವುದು ಸಂಸ್ಕೃತಿಯ ಸತ್ವದಿಂದಲೇ ಹೊರತು ರಾಜಕೀಯ ಅಧಿಕಾರದಿಂದಲ್ಲ. ಅಪರಾಧ ಮಾಡಿದ ವ್ಯಕ್ತಿಗೆ ಅಳುಕು ಇರುತ್ತದೆ. ತಪ್ಪು ಮಾಡದವನಿಗೆ ಎಂಥ ಸಮಯದಲ್ಲೂ ಭೀತಿ ಇರುವುದಿಲ್ಲ. ಇದು ಅಸಂಸ್ಕೃತಿ ಮತ್ತು ಸಂಸ್ಕೃತಿಗೆ ಇರುವ ವ್ಯತ್ಯಾಸ.

ಈ ಸಮಾವೇಶದ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಇರುವುದನ್ನು ನೋಡಿ ಕೆಲವರು ನನಗೆ ಫೋನು ಮಾಡಿದರು. “ಜಾತಿ ವ್ಯವಸ್ಥೆ ವಿರುದ್ಧ ಇರುವ ಮತ್ತು ಬರೆಯುವ ನೀನು ಹೇಗೆ ಅಲ್ಲಿಗೆ ಹೋಗುತ್ತೀ?” ಎಂದು ಅವರ ಪ್ರಶ್ನೆ. ಇನ್ನು ಕೆಲಮಿತ್ರರು, “ನೀನು ಹೋಗುವುದು ಸೂಕ್ತ. ನೀನು ಹೇಳಬೇಕಾದುದನ್ನು ಹೇಳು. ಏಕೆಂದರೆ ಬಹುಪಾಲು ಮಂದಿಗೆ ವಿಚಾರನೇ ಗೊತ್ತಿಲ್ಲ” ಎಂದು ಸೂಚನೆ ಇತ್ತರು. ಅದಕ್ಕೆ ನಾನು, “ನನಗೆ ಇನ್ನೂ ಆಹ್ವಾನ ಪತ್ರಿಕೆ ಬಂದಿಲ್ಲ. ಅದರಲ್ಲಿ ನನ್ನ ಹೆಸರು ಹಾಕಿರುವುದು ನನಗೆ ತಿಳಿಯದು. ಈ ಬಗ್ಗೆ ಒಕ್ಕಲಿಗರ ಸಂಘ ನನಗೆ ಏನೂ ತಿಳಿಸಿಲ್ಲ” ಎಂದೆ. ವಿಚಾರವಂತ ಪ್ರೊ. ಎಂ. ಕೆ. ಹರಿಚರಣ ತಿಲಕ ಮತ್ತು ಕವಿ ಎಲ್. ಎನ್. ಮುಕುಂದರಾಜ, “ನೀವು ಸಮಾರಂಭಕ್ಕೆ ಹೋಗುವುದು ಒಳ್ಳೆಯದು. ನಿಮ್ಮ ವಿಚಾರವನ್ನು ಅಲ್ಲಿ ಮಂಡಿಸಿ” ಎಂದು ಸಲಹೆ ನೀಡಿದರು. ಅದಾಗದುದಕ್ಕೆ ಈ ಲೇಖನ.
’ಒಕ್ಕಲಿಗರ ಬೃಹತ್ ಸಮಾವೇಶ’ದ ಕರಪತ್ರ ಈ ಮಾತುಗಳಿಂದ ಪ್ರಾರಂಭವಾಗುತ್ತದೆ:

“ಪ್ರಪಂಚದ ಎಲ್ಲ ನಾಗರಿಕತೆ ಪ್ರಾರಂಭವಾದದ್ದೇ ಒಕ್ಕಲುತನದಿಂದ… ಒಕ್ಕಲಿಗರು ಪ್ರಪಂಚದ ಮೊದಲ ಜನಾಂಗವಾಗಿ ರೂಪುಗೊಂಡರು. ಪ್ರಪಂಚದ ಎಲ್ಲ ದೇಶಗಳಲ್ಲಿ ಒಕ್ಕಲಿಗರು ಪ್ರಧಾನವಾಗಿ ಹಾಗೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ನೆಲಸಿದ್ದಾರೆ. ನಮ್ಮ ದೇಶದಲ್ಲಿ ವಿಶೇಷವಾಗಿ ಕರ್ನಾಟಕ ರಾಜ್ಯದಲ್ಲಿ ಇವರನ್ನು ’ಒಕ್ಕಲಿಗರು’, ’ಗೌಡರು’ ಎಂದು ಕರೆದರೆ, ತಮಿಳುನಾಡಿನಲ್ಲಿ ಇವರನ್ನು ’ವೆಲ್ಲಾಳರು’, ’ಗೌಂಡರ್’ಗಳೆಂದೂ, ಕೇರಳದಲ್ಲಿ ’ನಾಯರ್’, ’ಪಿಳ್ಳೈ’ಗಳೆಂದೂ, ಆಂಧ್ರದಲ್ಲಿ ’ರೆಡ್ಡಿ’, ’ಕಾಪು’ಗಳೆಂದೂ ಕರೆಯುತ್ತಾರೆ. ಉತ್ತರಭಾರತದಲ್ಲಿ ಅದರಲ್ಲೂ ಹರಿಯಾಣ, ಉತ್ತರಪ್ರದೇಶದಲ್ಲಿ ’ಜಾಟ್’ಗಳೆಂದೂ, ಬಿಹಾರ, ಉತ್ತರಪ್ರದೇಶಗಳಲ್ಲಿ ’ಠಾಕೂರ್’ಗಳೆಂದೂ, ಬಂಗಾಳ ಮತ್ತು ಒಡಿಸ್ಸಾದಲ್ಲಿ ’ಸೇನ್’ರೆಂದೂ, ರಾಜಸ್ಥಾನ್, ಮಧ್ಯಪ್ರದೇಶದಲ್ಲಿ ’ರಜಪೂತ್’ರೆಂದೂ, ಗುಜರಾತ್, ಮಹಾರಾಷ್ಟ್ರಗಳಲ್ಲಿ ’ಪಟೇಲ್’ರೆಂದೂ, ಮಹಾರಾಷ್ಟ್ರ, ಗೋವಾಗಳಲ್ಲಿ ’ಮರಾಠ’, ’ಕುರ್ಮಿ’ಗಳೆಂದೂ ಕರೆಯುತ್ತಾರೆ. ಒಟ್ಟಾರೆ ನಮ್ಮ ಇಡೀ ದೇಶದಲ್ಲಿ ’ಒಕ್ಕಲಿಗರು’ ಸುಮಾರು 200 ಉಪಪಂಗಡಗಳಾಗಿ ವಿಭಜನೆ ಹೊಂದಿ ಆಯಾ ಪ್ರದೇಶದ ಪರಿಸರಕ್ಕೆ ಅನುಗುಣವಾಗಿ ಸಂಸ್ಕೃತಿ-ಸಂಪ್ರದಾಯಗಳನ್ನು ರೂಢಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಒಕ್ಕಲಿಗರು ಸುಮಾರು ಶೇ. 20 ರಷ್ಟಿದ್ದಾರೆ. ಅವರು ಇಡೀ ರಾಜ್ಯದ ಜನಸಂಖ್ಯೆಯಲ್ಲಿ ಎರಡನೆಯ ಸ್ಥಾನವನ್ನು ಅಲಂಕರಿಸಿದ್ದಾರೆ.”

ಭಾರತೀಯ ಸಂಸ್ಕೃತಿ ಮೂಲತಃ ಬೇಸಾಯ ಸಂಸ್ಕೃತಿ. ಹಾಗೆಯೇ ಪ್ರಪಂಚದ ಎಲ್ಲ ನಾಗರಿಕತೆಗಳು ಸಹ ಆಗಿರುವುದರಿಂದ ರಾಷ್ಟ್ರದ ಸರ್ವ ಕೃಷಿಕರ ಜೊತೆ ಒಕ್ಕಲಿಗರ ಸಂಘ ಗುರುತಿಸಿಕೊಂಡಿರುವುದು ಸಂತೋಷದ ಸಂಗತಿ. ಆದರೆ ಅಷ್ಟೇ ಆದರೆ ಸಾಲದು. ಇದು ಹೆಮ್ಮೆಪಡುವ ವಿಷಯ ಆಗಬೇಕಾದರೆ ಅವರು ಮೇಲೆ ಹೆಸರಿಸಿದ ಎಲ್ಲಾ ರಾಜ್ಯಗಳ ಬೇಸಾಯಗಾರರ ಜೊತೆ ಮದುವೆ ಸಂಬಂಧ ರೂಢಿಸಿಕೊಳ್ಳುವುದು ಅಗತ್ಯವಾಗಿದೆ; ಇದು ಅತ್ಯಂತ ವಿಹಿತವಾದುದು. ನೆಂಟೇ ನಿಜವಾದ ಅಂಟು. ಮಾನವತನವನ್ನು ಸ್ಥಾಪಿಸುವ ಮತ್ತು ವೃದ್ಧಿಸುವ ಪ್ರಥಮ ಮತ್ತು ಪರಮೋಚ್ಚ ಸಾಧನ ನೆಂಟಸ್ತನ. ಅಂತರ್ಜಾತಿ ಮತ್ತು ಮತಗಳ ವಿವಾಹ ಸಂಬಂಧಗಳಿಂದ ದೇಶದ ಐಕ್ಯತೆ ಮತ್ತು ಅಖಂಡತೆಗೆ ಭದ್ರ ಬುನಾದಿ ಏರ್ಪಡುತ್ತದೆ. ಈ ಭಾವಬಂಧನದಿಂದ ರಾಷ್ಟ್ರ ಬಲಿಷ್ಠವೂ ಸಮೃದ್ಧವೂ ಆಗುವುದು. ನಮ್ಮ ರಾಷ್ಟ್ರದ ಯಾವುದೇ ರಾಜ್ಯದ ಯಾವುದೇ ಕೃಷಿಕ ಪಂಗಡಕ್ಕೆ ಮೂಲ ಧಾರ್ಮಿಕ ವ್ಯಕ್ತಿ, ಗುರು, ಸಿದ್ಧಾಂತ, ಮತ ಇಲ್ಲದೇ ಇರುವುದರಿಂದ ಇವರೆಲ್ಲರೂ ಒಬ್ಬ ಸಮಾನ ಗುರುವನ್ನು ಸರ್ವ ಸಮ್ಮತವಾಗಿ ಸ್ವೀಕರಿಸಬೇಕಾದ ಅನಿವಾರ್ಯತೆಯನ್ನು ಕಂಡುಕೊಳ್ಳಬೇಕು. ಆದರ್ಶಗಳಿಲ್ಲದ ಜನಾಂಗ ಅಭಿವೃದ್ಧಿ ಆಗುವುದಿಲ್ಲ. ಆದರ್ಶಗಳು ಆತ್ಮಪೋಷಕ ಅನ್ನಾಂಗಗಳು.

ಈ ವಿಷಯವಾಗಿ ನನ್ನ ಅಧ್ಯಯನದ ಮಿತಿಯಲ್ಲಿ ನನಗೆ ಕಂಡು ಬರುವ ಒಬ್ಬನೇ ಒಬ್ಬ ಮಹಾಪುರುಷ ಬುದ್ಧ ಎನ್ನಿಸಿದೆ. ಏಕೆಂದರೆ ಬುದ್ಧ ಒಬ್ಬ ರೈತನ ಮಗ! ಎಂದರೆ ಬಹಳ ಮಂದಿ ನಕ್ಕಾರು, ಸೋಜಿಗಪಟ್ಟಾರು! ಆದರೆ ಇದು ನಿಜ. ಆತನ ತಂದೆ ಶುದ್ಧೋದನ ರೈತ, ದೊಡ್ಡ ಜಮೀನುದಾರ. ತನಗಿದ್ದ ಭೂಮಿಯನ್ನು ಉಳುಮೆ ಮಾಡಲು ಅವನು ಒಂದು ಸಾವಿರ ಆರುಗಳನ್ನು ಕಟ್ಟುತ್ತಿದ್ದ. ಶಾಕ್ಯರು ದೊಡ್ಡ ಹಬ್ಬ ಮಾಡುತ್ತಿದ್ದರು. ಅದರ ಹೆಸರು ’ವಪ್ರಮಂಗಳ’ (ವಪ್ರ – ಮಣ್ಣಿನ ಗುಡ್ಡೆ; ಹೊಲ, ಗದ್ದೆ, ಮೊದಲಾದ ಕೃಷಿಭೂಮಿ. ಮಂಗಲ – ಅಭಿವೃದ್ಧಿ ಕಾರ್ಯ). ’ವಪ್ರಮಂಗಳ’ ಎಂದರೆ ’ಭೂಮಿ ಪೂಜೆ’ ಎನ್ನಬಹುದು. ಇದು ಅಲ್ಲಿನ ರೈತರು ಬೀಜ ಬಿತ್ತುವ ದಿವಸ ಮಾಡುತ್ತಿದ್ದ ಉತ್ಸವ. ಈ ದಿವಸ ಪ್ರತಿಯೊಬ್ಬ ಶಾಕ್ಯ ಗಂಡಸೂ ನೇಗಿಲ ಮೇಣಿ ಹಿಡಿದು ಹೊಲ ಉಳಬೇಕೆಂದು ಅವರಲ್ಲಿ ಕಡ್ಡಾಯದ ಕಟ್ಟುಪಾಡಿತ್ತು. ಶ್ರೀಮಂತ ಅಥವಾ ರಾಜನ ಮಗನಾಗಿದ್ದ ಸಿದ್ಧಾರ್ಥನೂ ಇದಕ್ಕೆ ಹೊರತಾಗಿರಲಿಲ್ಲ. ಅವನು ಈ ನಿಯಮವನ್ನು ಯಾವಾಗಲೂ ಪಾಲಿಸಿದ. ವಿದ್ಯಾವಂತನಾದ ಸಿದ್ಧಾರ್ಥ ದೈಹಿಕ ಶ್ರಮವನ್ನು ಎಂದೂ ನಿರಾಕರಿಸಲಿಲ್ಲ (ಡಾ. ಬಾಬಾಸಾಹೇಬ ಅಂಬೇಡ್ಕರ್ : ’ದ ಬುದ್ಧ ಅಂಡ್ ಹಿಸ್ ಧಮ್ಮ’ ಪು. 10; 1992). ಸಿದ್ಧಾರ್ಥ ಸ್ವತಃ ಉಳುಮೆ ಮಾಡಿದ್ದರ ಫಲವಾಗಿ ಮುಂದೆ ಅವನು ಬುದ್ಧನಾಗಿ ನೀಡಿದ ಉಪದೇಶಗಳಲ್ಲಿ ವ್ಯವಸಾಯಕ್ಕೆ ಸಂಬಂಧಪಟ್ಟ ಹೋಲಿಕೆಗಳು ಅಥವಾ ರೂಪಕಗಳು ಬಂದಿರುವುದನ್ನು ಕಾಣಬಹುದು. ರೈತರದು ಹಂಚುಣ್ಣುವ ಸಂಸ್ಕೃತಿ. ಆದುದರಿಂದ ಬುದ್ಧ ತನ್ನ ಅಪೂರ್ವ ಜ್ಞಾನವನ್ನು ಎಲ್ಲರಿಗೂ ನೀಡಿದ. ಜ್ಞಾನದಾನ ಅತ್ಯಂತ ಶ್ರೇಷ್ಠ ದಾನ.

ಸಿದ್ಧಾರ್ಥ ರೈತನಾಗಿ ಗೇಯುತ್ತಿದ್ದ ಎಂದು ಓದಿ, ರಾಜ ಮಹಾರಾಜರು ಮತ್ತು ರಾಜಕುಮಾರರು ನೇಗಿಲ ಮೇಣಿ ಹಿಡಿದು ಉಳುತ್ತಿದ್ದರೆ? ಎಂದು ಸಂದೇಹ ಪಡುವುದು ಸಹಜ. ಕೈಗಾರಿಕೆಗಳಿಲ್ಲದಿದ್ದ ಪ್ರಾಚೀನ ಕಾಲದಲ್ಲಿ ಆರಂಭವೇ ಆದಾಯದ ಉದ್ಯಮವಾಗಿತ್ತು. ಹಾಗೆಯೇ ಗೋಸಂಪತ್ತು ಸಹ. ಜನಕ ಮಹಾರಾಜ ಸ್ವತಃ ಹೊಲ ಉಳುತ್ತಿದ್ದನೆಂದು ಆದಿಕವಿ ವಾಲ್ಮೀಕಿ ವರ್ಣಿಸಿದ್ದಾನೆ. ಈ ಉಲ್ಲೇಖ ಬುದ್ಧನ ಬಗೆಗೆ ಸಮಾನಾಂಶವುಳ್ಳ ಪ್ರಾಚೀನ ಪುರಾವೆಯಾಗಿದೆ:

ಅಥ ಮೇ ಕೃಷತಃ ಕ್ಷೇತ್ರಂ ಲಾಂಗಲಾತ್ ಉತ್ಥಿತಾ ಮಮ.
ಕ್ಷೇತ್ರಂ ಶೋಧಯತಾ ಲಬ್ಧಾ ನಾಮ್ನಾ ಸೀತೇತಿ ವಿಶ್ರುತಾ
ಭೂತಲಾತ್ ಉತ್ಥಿತಾ ಸಾ ತು ವ್ಯವರ್ಧತ ಮಮಾತ್ಮಜಾ.

ಶ್ರೀಮದ್ ವಾಲ್ಮೀಕಿ ರಾಮಾಯಣ, ಬಾಲಕಾಂಡ, ಸರ್ಗ 66, ಶ್ಲೋಕ 13-14

“ನಾನು ಭೂಮಿಯನ್ನು ಉಳುತ್ತಿದ್ದೆನು. ಉಕ್ಕೆ ಸೀಳಿನಲ್ಲಿ ಒಂದು ಹೆಣ್ಣು ಮಗು ಸಿಕ್ಕಿತು. ಅದಕ್ಕೆ ಸೀತೆ (ಉಕ್ಕೆತೆರೆ) ಎಂದು ಹೆಸರಿಟ್ಟೆ. ಭೂಮಿಯಲ್ಲಿ ಲಭಿಸಿದ ಈ ಕುಮಾರಿ ನನ್ನ ಮಗಳಾಗಿ ಬೆಳೆದಳು” ಎಂದು ಜನಕ ಮಹಾರಾಜನು ಬ್ರಹ್ಮರ್ಷಿ ವಿಶ್ವಾಮಿತ್ರನಿಗೆ ಹೇಳುತ್ತಾನೆ. ಈ ಜನಕ ಮಹಾರಾಜ ವೈದಿಕ ಕರ್ಮಕಾಂಡದ ವಿರುದ್ಧ ನಡೆದ ಉಪನಿಷತ್ ಚಳವಳಿಯ ನೇತಾರನಾಗಿದ್ದನು. ಹಾಗಾಗಿ ಕುವೆಂಪು ಕೃತ ಕರ್ನಾಟಕ ನಾಡಗೀತೆಯಲ್ಲಿ “ಜನಕನ ಹೋಲುವ ದೊರೆಗಳ ಧಾಮ” ಎಂದು ಜನಕನ ನಾಮಸ್ಮರಣೆ ಬಂದಿದೆ.

ಆಗ ಕಪಿಲವಸ್ತು ಪ್ರಾಂತ್ಯದಲ್ಲಿ ರಾಜ ಪದವಿ ಪಾಳಿ ಆಧಾರದ ಮೇಲೆ ನಡೆಯುತ್ತಿತ್ತು. ಆ ಪದ್ಧತಿಗೆ ಅನುಸಾರವಾಗಿ ಶುದ್ಧೋದನ ರಾಜನಾಗಿದ್ದನು. ಸಿದ್ಧಾರ್ಥ ಹುಟ್ಟಿದ್ದು ಅಂಥ ದಿನಗಳಲ್ಲಿ. ಬುದ್ಧನ ಸಂಸಾರ ತ್ಯಾಗ ಮತ್ತು ರಾಜ್ಯ ಪರಿತ್ಯಾಗಗಳನ್ನು ದೊಡ್ಡದು ಮಾಡಲು ಚರಿತ್ರಕಾರರು ಅವನನ್ನು ಚಕ್ರವರ್ತಿಯ ಪುತ್ರನೆಂದು ಚಿತ್ರಿಸಿದ್ದಾರೆ ಎನ್ನಿಸಬಹುದು. ಆದರೆ ಯಾವ ದೃಷ್ಟಿಯಿಂದ ನೋಡಿದರೂ ಬುದ್ಧನದು ಮಹಾತ್ಯಾಗ ಎನ್ನುವುದರಲ್ಲಿ ಅನುಮಾನವಿಲ್ಲ.

ಶ್ರೀಮಂತರು ಬಡವರು, ರಾಜರು ಪ್ರಜೆಗಳು, ಅಧಮರು ಉತ್ತಮರು, ಅಕ್ಷರಸ್ಥರು ಅನಕ್ಷರಿಗಳು, ವೇಶ್ಯೆಯರು ಸುಶೀಲೆಯರು, ಪಾಪಿಗಳು ಪುಣ್ಯಾತ್ಮರು – ಎಂಬ ತಾರತಮ್ಯ ಮಾಡದೆ ಎಲ್ಲರಿಗೂ ತನ್ನ ಅಸದೃಶ ಜ್ಞಾನಭಂಡಾರವನ್ನು ನೀಡಿದ ಬುದ್ಧ ಅಪ್ರತಿಮ ಮಹಾತ್ಮ. ಬುದ್ಧ ತಾನು ದೇವರ ಅವತಾರ ಎಂದು ಹೇಳಿಕೊಳ್ಳಲಿಲ್ಲ. ಆದರೆ ಬುದ್ಧನ ಪ್ರಭಾವ ತಪ್ಪಿಸಲು ಅಥವಾ ಅವನನ್ನು ಮುಗಿಸಲು ಸಾಧ್ಯವಾಗದೇ ಹೋದಾಗ ಅಥವಾ ಅವನನ್ನು ಒಳಗೆ ಸೆಳೆದುಕೊಳ್ಳಲು ಅವನು ವಿಷ್ಣುವಿನ ಒಂಬತ್ತನೆಯ ಅವತಾರ ಎಂದು ಹೇಳಿ ಆರಾಧಿಸತೊಡಗಿದರು. ಏಸುಕ್ರಿಸ್ತ ತಾನು ದೇವಪುತ್ರ ಎಂದು ತನ್ನ ಅನುಯಾಯಿಗಳನ್ನು ನಂಬಿಸಿದ್ದಾನೆ. ಮಹಮ್ಮದ್ ಪೈಗಂಬರ್ ತಾನು ಅಲ್ಲಾನ ಪ್ರವಾದಿ ಎಂದು ಹೇಳಿರುವನು. ಶ್ರೀಕೃಷ್ಣ ತಾನು ದೇವರ ಅವತಾರ ಎಂದೇ ಪ್ರಬಲವಾಗಿ ದೃಢಪಡಿಸಿ ಪ್ರತಿಪಾದಿಸಿದ್ದಾನೆ. ಹೀಗೆ ಪ್ರತಿಯೊಂದು ಮತದ ವಕ್ತಾರ, ಆಚಾರ್‍ಯ ಅಥವಾ ಸ್ಥಾಪಕ ತಾನು ದೇವರ ಅಂಶ ಎಂದು ನಂಬಿಸಲು ಯಾವುದೇ ಸಂಕೋಚಪಟ್ಟಿಲ್ಲ. ದೇವರ ವಿಷಯದಲ್ಲಿ ಹೆದರಿಸದೆ ಇದ್ದರೆ ಜನ ನಂಬುವುದಿಲ್ಲ ಎಂದು ಏನೇನೋ ಹೇಳುವರು. ಇದಕ್ಕೆ ಅತ್ಯುತ್ತಮ ಉದಾಹರಣೆ ’ಭಗವದ್‌ಗೀತೆ’ಯ ೧೧ನೇ ಅಧ್ಯಾಯದಲ್ಲಿ ಬರುವ ’ವಿಶ್ವರೂಪ ದರ್ಶನ’. ಗುಮ್ಮ ಬರುತ್ತದೆ ಎಂದು ಹೇಳಿ ಮಕ್ಕಳನ್ನು ಹೆದರಿಸುವಂತೆ, ವಿಶ್ವರೂಪ ತೋರಿಸಿ ಅರ್ಜುನನಿಗೆ ಶ್ರೀಕೃಷ್ಣ ಭಯ ಹುಟ್ಟಿಸುತ್ತಾನೆ (ಗೀತೆ 11. 45.; 49-50). ನಂಬುವವರು ಇರುವವರೆಗೆ ನಂಬಿಸುವವರು ಇದ್ದೇ ಇರುತ್ತಾರೆ. ಆದರೆ ಈ ಯಾವುದನ್ನೂ ಹೇಳದವನು ಬುದ್ಧ ಮಾತ್ರ. “ನಿಮ್ಮ ಹಾಗೆ ನಾನೂ ಒಬ್ಬ ಮನುಷ್ಯ. ನಾನು ಈ ದಾರಿಯಲ್ಲಿ ಹೋಗಿ ಈ ಸತ್ಯಗಳನ್ನು ಕಂಡುಕೊಂಡಿದ್ದೇನೆ. ಈ ಮಾರ್ಗದಲ್ಲಿ ನೀವೂ ಹೋಗಿ ನೋಡಿ. ನನ್ನ ತತ್ವಗಳು ನಿಜ ಎಂದು ಕಂಡುಬಂದರೆ ಒಪ್ಪಿಕೊಳ್ಳಿ, ಇಲ್ಲದಿದ್ದರೆ ತಿರಸ್ಕರಿಸಿ”. ಇದು ವಿನಯದ ತುತ್ತ ತುದಿ. ಹೀಗೆ ತನ್ನ ಅನುಯಾಯಿಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟಿರುವವನು ಬುದ್ಧ ಒಬ್ಬನೇ, ಇನ್ನಾರೂ ಇಲ್ಲ. ಇಂಥ ಅಪರೂಪದ ಸ್ವಾತಂತ್ರ್ಯ ಕೊಟ್ಟ ಬುದ್ಧ ಜನರನ್ನು ದೇವರ ಹೆಸರಿನಲ್ಲಿ ಸಂಕೋಲೆಯಲ್ಲಿಡಲು ಹಾಗೂ ಪುರೋಹಿತರ ಪ್ರಾಬಲ್ಯಕ್ಕೆ ಒಪ್ಪಿಸಲು ಹೋಗದುದು ಮಾನವರ ಮೇಲೆ ಅವನಿಗೆ ಇದ್ದ ಅಪಾರ ಪ್ರೇಮ ಮತ್ತು ಜೀವಕಾರುಣ್ಯವನ್ನು ತೋರಿಸುತ್ತದೆ. ಏಕೆಂದರೆ ಎಲ್ಲ ದಬ್ಬಾಳಿಕೆಗಿಂತ ಧಾರ್ಮಿಕ ದಬ್ಬಾಳಿಕೆ ಘೋರವಾದುದು. ಸೇನೆ ಅಥವಾ ರಾಜಕೀಯ ನಿರಂಕುಶ ಆಡಳಿತ ಪ್ರಜೆಗಳ ದೈಹಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದರೆ ಪುರೋಹಿತ ದಬ್ಬಾಳಿಕೆ ಜನರ ಅಂತಶ್ಚೇತವನ್ನು ಹಾಗೂ ಬೆಳಣಿಗೆಯನ್ನು ಧ್ವಂಸಮಾಡುತ್ತದೆ. ಈ ಕಾರಣಕ್ಕಾಗಿಯೇ ಪುರೋಹಿತ ವರ್ಗದವರು ಅವನನ್ನು ದೂರೀಕರಿಸಿದ್ದಾರೆ.

ಬುದ್ಧನಿಗೆ ಮೊದಲು ಮತ್ತು ನಂತರ ಅನೇಕ ಜನ ಧರ್ಮ ಪ್ರವರ್ತಕರು ಹಾಗೂ ಪ್ರಸಾರಕರು ಬಂದು ಹೋಗಿರುವುದನ್ನು ಲೋಕ ಬಲ್ಲದು. ಇವರೆಲ್ಲಾ ದೇವರು ಸ್ವರ್ಗ ನರಕ ಮುಕ್ತಿ ಎಂದೆಲ್ಲ ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಿದ್ದಾರೆ. ಅವರಿಗೆ ಮಂಕುಬೂದಿ ಎರೆಚಿರುವರು. ಇಡೀ ಇತಿಹಾಸದಲ್ಲಿ ಜೀವನ ಮತ್ತು ಜಗತ್ತಿನ ಬಗ್ಗೆ ಸತ್ಯ ಹೇಳಿರುವವನು ಬುದ್ಧ ಮಾತ್ರ. ಇರುವುದು ಇದೊಂದೇ ಲೋಕ, ಇಲ್ಲಿ ನಾವೆಲ್ಲರೂ ಸೌಹಾರ್ದತೆಯಿಂದ ಸುಖವಾಗಿ ಶಾಂತಿಯಿಂದ ಬದುಕಬೇಕು ಎಂದನು. ಕಾಣದ ದೇವರು ನಾಕ ನರಕ ಕುರಿತು ಅವನು ಮೌನಿಯಾದ. ಕಾರಣ ವಾದ ವಿವಾದಗಳಿಗೆ ವಿರಾಮವಿಲ್ಲ. ವಿಜ್ಞಾನಕ್ಕೆ ಇವಿನ್ನೂ ಕಾಣಿಸಿಲ್ಲ. ದೇವರು ಸ್ವರ್ಗ ಪಾತಾಳ ಮುಂತಾದವುಗಳ ಇರುವಿಕೆಯಿಂದ ಅಥವಾ ಇಲ್ಲದಿರುವಿಕೆಯಿಂದ ಮಾನವನ ಬಾಳು ಸಂತೋಷಕರವಾಗಲಿ ಇಲ್ಲವೇ ದುಃಖಮಯವಾಗಲೀ ಆಗುವುದಿಲ್ಲ. ಶೋಷಣೆ ರಹಿತ ಒಳ್ಳೆಯ ಜೀವನ ನಡೆಸುವುದರಿಂದ ಮಾತ್ರ ಮನುಷ್ಯ ನೆಮ್ಮದಿಯಿಂದ ಇರಲು ಸಾಧ್ಯ. ನನ್ನ ಉಪದೇಶವನ್ನು ವಿಮರ್ಶಿಸಿ, ಅದು ಸತ್ಯವಲ್ಲದಿದ್ದರೆ ತಿರಸ್ಕರಿಸಿ ಎಂದಿರುವುದಂತೂ ಬುದ್ಧನನ್ನು ಅಸಾಧಾರಣ ವಿಶ್ವಗುರುವನ್ನಾಗಿ ಮಾಡಿದೆ. ಆತನ ಬೋಧನೆ ವಿಶ್ವಧರ್ಮವಾಗಿರುವುದು. ಸ್ವಂತ ಚಿಂತನೆ ಮತ್ತು ಅನುಭಾವಕ್ಕೆ ಬುದ್ಧ ಪ್ರಾಮುಖ್ಯತೆ ನೀಡಿದ್ದಾನೆ. ಈ ಕಾರಣಕ್ಕಾಗಿಯೇ ಬುದ್ಧಿ ಜ್ಞಾನ ಅನುಕಂಪ ಪರಿಶುದ್ಧಿ ಪಾವಿತ್ರ್ಯದಲ್ಲಿ ಬುದ್ಧನಿಗೆ ಸರಿಸಾಟಿ ಆಗುವ ಇನ್ನೊಬ್ಬ ಧರ್ಮಗುರು ಸಿಗಲಾರನು ಎಂದರೆ ಅತಿಶಯೋಕ್ತಿಯಾಗುವುದಿಲ್ಲ. ಏಕೆಂದರೆ ಇದುವರೆಗಿನ ಇತಿಹಾಸದಲ್ಲಿ ಆತನನ್ನು ಸರ್ವ ರೀತಿಯಲ್ಲೂ ಮೀರಿಸುವ ಇನ್ನೊಬ್ಬ ಉದಯಿಸಿಲ್ಲದಿರುವುದೇ ಆಗಿದೆ. ಬುದ್ಧ ಅತ್ಯಂತ ಸ್ವೋಪಜ್ಞ ಚಿಂತಕ.

ವಿಶ್ವದ ಇತಿಹಾಸದಲ್ಲೇ ಅತ್ಯಂತ ಮಹಿಮಾವಂತರಾದ ಬುದ್ಧ ಮತ್ತು ಸಾಮ್ರಾಟ್ ಅಶೋಕ – ಈ ಇಬ್ಬರನ್ನು ಭಾರತದ ಇತಿಹಾಸದಿಂದಲೇ ಸುಮಾರು ಒಂದು ಸಾವಿರ ವರ್ಷಗಳ ಕಾಲ ಹಿಂದೂವಾದಿ ವಿದ್ವಾಂಸರು ತೆಗೆದುಹಾಕಿದ್ದರು. ಅಂಥ ಬುದ್ಧನನ್ನು ಕುರಿತು ಮೊದಲಿಗೆ ಮಾತನಾಡಿದವರು ತೇಜಃಪುಂಜರಾದ ಸ್ವಾಮಿ ವಿವೇಕಾನಂದರು ಅಮೆರಿಕಾದ ಚಿಕಾಗೊದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ 26-09-1893 ರಂದು. “ನೀವು ಕೇಳಿರುವಂತೆ ನಾನು ಬೌದ್ಧನಲ್ಲ, ಆದರೆ ನಾನೊಬ್ಬ ಬೌದ್ಧ” (’ದ ಕಂಪ್ಲೀಟ್ ವರ್ಕ್ಸ್’ , ಸಂ. 1, ಪು. 21; 1970) ಎಂದು ಹೇಳಿದ್ದಾರೆ ಹೆಮ್ಮೆಯಿಂದ. ಹಿಂದೆ ಭಾರತದ ಜನಸಂಖ್ಯೆಯಲ್ಲಿ ಮೂರನೇ ಎರಡು ಭಾಗ ಬೌದ್ಧರಾಗಿದ್ದರು ಎಂದು ವಿವೇಕಾನಂದರು ಹೇಳುತ್ತಾರೆ (’ಸಂ. 3, ಪು. 166, 511; 1964). ಇದಕ್ಕೆ ಪೂರಕ ಆಧಾರ ಮತ್ತು ಸಮರ್ಥನೆಯಾಗಿ ಪ್ರತಿ ಹಳ್ಳಿಯಲ್ಲಿ ಅರಳಿಮರ ಇರುವುದನ್ನು ಕಾಣಬಹುದು. ನಮ್ಮ ಹುಣಸೂರು ತಾಲ್ಲೂಕಿನ ಹಳ್ಳಿಗಳಲ್ಲಿ ’ಹುಟ್ಟಿದ ನಿರ್ವಾಣ’ ಎಂಬ ನುಡಿಗಟ್ಟು ಬಳಕೆಯಲ್ಲಿದೆ. ನಮ್ಮ ಊರಿನ ಪಕ್ಕದ ಗ್ರಾಮ ಚಿಟಿಕ್ಯಾತನಹಳ್ಳಿಯಲ್ಲಿ ಒಬ್ಬ ರೈತನಿಗೆ ನಿರ್ವಾಣಿಗೌಡ ಎಂಬ ಹೆಸರಿತ್ತು. ಬುದ್ಧ ದಮ್ಮದ ಸಾರಸರ್ವಸ್ವ ಮತ್ತು ತುಟ್ಟ ತುದಿಯಾದ ’ನಿರ್ವಾಣ’ ಎಂಬ ಅತ್ಯಂತ ಮುಖ್ಯ ಪದ ಹಳ್ಳಿಗಳಲ್ಲಿ ಪ್ರಚಲಿತವಾಗಿರಬೇಕಾದರೆ ಬುದ್ಧ ಧಮ್ಮ ಇಲ್ಲೆಲ್ಲ ಹಬ್ಬಿರಬೇಕೆಂದು ಅನ್ನಿಸುತ್ತದೆ. “ಭಾರತದ ಜನಸಾಮಾನ್ಯರಲ್ಲೆಲ್ಲ ಬುದ್ಧ ಧಮ್ಮ ಹರಡಿತ್ತು” ಎಂದು ಸ್ವಾಮಿ ವಿವೇಕಾನಂದರು (ಸಂ. 7, ಪು. 39; 1964) ಹೇಳುತ್ತಾರೆ. ಕಾಲಾಂತರದಲ್ಲಿ ಬೆಂಬಲವಿಲ್ಲದೆ ನಾನಾ ಆಘಾತಗಳಿಂದ (ವಿವರಣೆಗೆ ನನ್ನ ಕೃತಿ ಶಂಕರಾಚಾರ್ಯ ಮತ್ತು ಪ್ರತಿಗಾಮಿತನ, 15ನೇ ಮುದ್ರಣ, 2011 ನೋಡಿದರೆ) ಬುದ್ಧ ಧಮ್ಮ ಮರೆಯಾಗಿರಲಿಕ್ಕೆ ಕಾರಣಗಳು ತಿಳಿಯುವುವು. ಬುದ್ಧ ತಪಸ್ಸಿಗೆ ಅರಳಿ ಮರದ ಅಡಿಯಲ್ಲಿ ಕುಳಿತಾಗ ಜ್ಞಾನೋದಯ ಪಡೆದುದರಿಂದ ಅದು ಬೋಧಿ ವೃಕ್ಷ ಎಂದು ಪ್ರಖ್ಯಾತವಾಯಿತು. ಇದರಿಂದ ಪ್ರೇರಿತರಾದ ಸಂಸ್ಕೃತ ಸಾಹಿತಿಗಳು ಅದನ್ನು ಅಶ್ವತ್ಥ ವೃಕ್ಷ ಎಂದರು. ಬುದ್ಧ ಆದಮೇಲೆ ಬಂದ ಭಗವದ್‌ಗೀತೆ (ಸು. ಕ್ರಿ. ಶ. 1 ಶತ)ಯಲ್ಲಿ ಕೃಷ್ಣ “ಅಶ್ವತ್ಥಃ ಸರ್ವ ವೃಕ್ಷಾಣಾಂ – ಮರಗಳಲ್ಲೆಲ್ಲ ನಾನು ಅರಳಿಮರ” (ಗೀತೆ 10. 26.) ಎಂದು ಅದರ ಪಾರಮ್ಯವನ್ನು ಘೋಷಿಸಿದ್ದಾನೆ. ಇದನ್ನು “ಊರ್ಧ್ವ ಮೂಲಂ ಅಧಃ ಶಾಖಂ ಅಶ್ವತ್ಥಂ ಪ್ರಾಹುಃ ಅವ್ಯಯಂ – ಮೇಲೆ ಬುಡ ಕೆಳಗೆ ಶಾಖೆಗಳುಳ್ಳ ಅಶ್ವತ್ಥವೃಕ್ಷ ಅಮರ” (15. 1.) ಎಂದು ಗೀತೆ ಕೊಂಡಾಡುತ್ತದೆ. ಶಿಶು ಶ್ರೀಕೃಷ್ಣ ಅರಳಿ ಎಲೆಯ ಮೇಲೆ ಮಲಗಿರುವುದನ್ನು ವರ್ಣಶಿಲ್ಪಿಗಳು ಚಿತ್ರಿಸಿದ್ದಾರೆ.

ಆದ್ದರಿಂದ ಒಕ್ಕಲಿಗರು ವಿವೇಕಶಾಲಿಗಳಾಗಿ ತಮ್ಮ ಮೂಲ ಪುರುಷ ಬುದ್ಧನನ್ನು ಸ್ವೀಕರಿಸಿದರೆ ಅವರು ಅಖಿಲ ಭಾರತ ಜನಾಂಗವಾಗುತ್ತಾರೆ. ಅಷ್ಟೇ ಅಲ್ಲದೆ ಅವರು ಅಂತಾರಾಷ್ಟ್ರೀಯ ಜನಾಂಗವಾಗುತ್ತಾರೆ. ಅವರು ನಿಜಕ್ಕೂ ವಿಶ್ವಮಾನವರಾಗಲು ಹಾದಿ ಸುಗಮವಾಗುತ್ತದೆ. ಈ ಕುರಿತು ಒಕ್ಕಲಿಗ ಸಂಘ ತಾತ್ವಿಕ ಚಿಂತನೆ ಹಾಗೂ ಚರ್ಚೆಗಳನ್ನು ವ್ಯಾಪಕವಾಗಿ ನಡೆಸುವುದು ಯೋಗ್ಯ ಮತ್ತು ಅಗತ್ಯ.

ಇದೆಲ್ಲವನ್ನು ಓದುವುದರಿಂದ ಅಥವಾ ಕೇಳುವುದರಿಂದ ಕೃಷಿಕರು ಗಾಬರಿಗೆ ಒಳಗಾಗುವುದು ಸಹಜ. ಕಾರಣ: ಸಾವಿರಾರು ವರ್ಷಗಳಿಂದ ತಮ್ಮದಲ್ಲದ ಧರ್ಮವನ್ನು ತಮ್ಮದೆಂದು ಅವರು ನಂಬಿಕೊಂಡು ಬಂದಿದ್ದಾರೆ. ತಮ್ಮ ದನ ಎಮ್ಮೆ ಆಡು ಕುರಿ ಕೋಳಿ ನಾಯಿ, ಹೊಲ ಗದ್ದೆ ತೋಟ, ಗಿಡ ಮರ ಅಡಿಕೆ ತೆಂಗು ವೀಳ್ಯದ ಹಂಬು, ಕೆರೆ ಕಟ್ಟೆ ಹೊಳೆ ಬೆಟ್ಟ ಗುಡ್ಡಗಳ ಜೊತೆ ಅವರ ಬಾಂಧವ್ಯ ಬೆಳೆದುಕೊಂಡಿರುತ್ತದೆ. ಇವೆಲ್ಲವನ್ನೂ ತಮ್ಮಂತೆ, ತಮ್ಮ ಜೀವದ ಭಾಗ ಎಂಬಂತೆ, ತಮ್ಮ ಜೀವದ ಜೀವವಾಗಿ ಅವರು ಕಾಣುವರು. ಇವುಗಳ ಜೊತೆ ಅವರ ಭಾವತಂತು ಬಲವಾಗಿ ಬಿಗಿದುಕೊಂಡಿರುತ್ತದೆ. ಒಕ್ಕಲಿಗರು ಗಾಢವಾಗಿ ಪ್ರೀತಿಸುವ ಜನರು. ಮಹಾ ಸ್ವಾಭಿಮಾನಿಗಳು. ಹಠ ಮತ್ತು ದ್ವೇಷದಲ್ಲಿ ಅವರದು ಕೌರವ ಸ್ವಭಾವ. ಒಕ್ಕಲಿಗರ ಸಿದ್ಧಾಂತ ಸ್ವಭಾವವಾದ, ಸಹಜವಾದ ಅಥವಾ ಪ್ರಕೃತಿವಾದ ಎನ್ನಬಹುದು. ಒಕ್ಕಲಿಗರಿಗೆ ಹುಟ್ಟಿನಿಂದ ಸಾಯುವವರೆಗೆ ಯಾವುದೇ ಮತೀಯ ಸಂಸ್ಕಾರಗಳು ಮತ್ತು ಸಂಪ್ರದಾಯಗಳು ಇಲ್ಲ. ಇವರು ಇಂಥ ಜಾತಿ ಮತದವರೆಂದು ಗುರುತಿಸುವಂತ ಲಾಂಛನಗಳಾಗಲೀ, ಗುರುತುಗಳಾಗಲಿ ಅವರಲ್ಲಿ ಕಾಣದು. ಒಕ್ಕಲಿಗರದು ಪ್ರಕೃತಿ ಸಹಜ ಬದುಕು, ಪ್ರಕೃತಿ ಜೊತೆ ಒಡನಾಟ. ಹಾಗೆಯೆ ಬುದ್ಧನದು ಪ್ರಕೃತಿವಾದ. ಅವರು ತಮ್ಮನ್ನು ತುಳಿಯುವ ಧರ್ಮ ಮತ್ತು ದೇವರುಗಳನ್ನು ಗೊತ್ತಿಲ್ಲದೆ ಅನುಸರಿಸಿಕೊಂಡು ಬದುಕುತ್ತಿದ್ದಾರೆ. ಚಾತುರ್ವರ್ಣದ ಕಟ್ಟಳೆಗಳೆಲ್ಲ ವಿಕೃತವಾದವುಗಳು. ಇವೆಲ್ಲದರಿಂದ ಪಾರಾಗಲು ಇರುವ ಅತ್ಯಂತ ಒಳ್ಳೆಯ ಮಾರ್ಗ ರೈತನ ಮಗನಾಗಿ ನೇಗಿಲು ಹಿಡಿದು ಉಳುಮೆ ಮಾಡಿದ್ದ ಬುದ್ಧನನ್ನು ಒಪ್ಪಿಕೊಳ್ಳುವುದರಲ್ಲಿ ಇದೆ.

ಕುವೆಂಪು ಅವರ ಆಧ್ಯಾತ್ಮ ಎಲ್ಲವನ್ನೂ ಎಲ್ಲರನ್ನೂ ಒಳಗೊಂಡ ಆದ್ಯಾತ್ಮ. ಅದರಲ್ಲಿ ಪ್ರತ್ಯೇಕತೆ ಇಲ್ಲ. ವಾಸ್ತವವಾಗಿ ಅದು ಪ್ರತ್ಯೇಕತೆಯ ವಿರೋಧಿ. ಪ್ರತ್ಯೇಕತೆ ಇರುವಂತೆ ಭ್ರಮೆಯಲ್ಲಿ ಕಂಡರೆ, ಅದು ವೈದ್ಯ ಕಾಣುವ ಕಾಯಿಲೆಯಂತೆ, ವಾಸಿಯಾಗದ ರೋಗಿಷ್ಠ ಭಾಗವನ್ನು ಶಸ್ತ್ರಚಿಕಿತ್ಸೆಯಿಂದ ಕತ್ತರಿಸಿ ತೆಗೆದುಹಾಕುವ ಹಾಗೆ ಎಂದು ತಿಳಿಯಬೇಕು. ಇದು ಆರೋಗ್ಯವನ್ನು ಪುನರ್ ಸ್ಥಾಪಿಸುವ ಪ್ರಕ್ರಿಯೆ. ವಾಲ್ಮೀಕಿ ರಾಮಾಯಣದ ಉತ್ತರಕಾಂಡದಲ್ಲಿ ಬರುವ ಶಂಬೂಕ ವಧೆ ಪ್ರಸಂಗವನ್ನು ’ಶೂದ್ರತಪಸ್ವಿ’ ನಾಟಕದಲ್ಲಿ ಕಸಿ ಮಾಡಿರುವ ಕ್ರಮದಲ್ಲಿ ಅದನ್ನು ಕಾಣಬಹುದು. ಮೂಲದಲ್ಲಿ ಶಂಬೂಕನನ್ನು ಕೊಲ್ಲಿಸಲಾಗಿದೆ. ಕುವೆಂಪು ಇಲ್ಲಿ ಯಾರನ್ನೂ ಅಳಿಸದೆ ಎಲ್ಲರನ್ನೂ ಉಳಿಸಿದ್ದಾರೆ. ಅವರು ಹೊಸಕಿಹಾಕಿರುವುದು ಅವಿವೇಕತನವನ್ನು, ಅಮಾನುಷತೆಯನ್ನು. ಸ್ಥಾಪಿಸಿರುವುದು – ಮನುಷ್ಯರೆಲ್ಲ ಸಮಾನರು, ಭೇದಭಾವ ಸಲ್ಲದು: “ಆರಾದರೇನ್ ಆರಾಧ್ಯರ್ ತಪೋಧನರ್” ಎಂಬ ದರ್ಶನವನ್ನು ತಿಳಿವಳಿಕೆಯ ಮೂಲಕ ಬೆಳೆಸುವುದಾಗಿದೆ. ಅವರ ’ವಿಶ್ವಮಾನವ’ ತತ್ವಕ್ಕೆ ಅವರ ಸಾಹಿತ್ಯದಲ್ಲಿ ಎಲ್ಲೂ ಊನ ಬಂದಿಲ್ಲ.

ಇನ್ನು ಬುದ್ಧನಿಗೂ ಕುವೆಂಪುವಿಗೂ ಏನು ಸಂಬಂಧ? ಎಂದು ಕೇಳಬಹುದು. ಇದು ಕುವೆಂಪು ಸಾಹಿತ್ಯವನ್ನು ಓದಿದವರು ಹಾಕುವ ಪ್ರಶ್ನೆಯಾಗುವುದಿಲ್ಲ. ಅವರ ಮಹಾಕಾದಂಬರಿ ’ಕಾನೂರು ಹೆಗ್ಗಡತಿ’ ನಾಯಕ ಹೂವಯ್ಯ ಭೇದಭಾವನೆ ಮಾಡುವ ಆರ್ಯಧರ್ಮ, ಹಿಂದೂಮತ ಅಥವಾ ಬ್ರಾಹ್ಮಣ ಧರ್ಮವನ್ನು ತ್ಯಜಿಸಿ ಆನುಭಾವಿಕ ಸಮಾನತೆಯ ಬುದ್ಧನನ್ನು ಸ್ವೀಕರಿಸುತ್ತಾನೆ. ಕೊನೆಯಲ್ಲಿ ಕ್ರಾಂತಿಗಾನ ನಡೆಯುತ್ತದೆ. (’ಕಾನೂರು ಹೆಗ್ಗಡಿತಿ’ 1936. ಬಾಬಾಸಾಹೇಬ ಅಂಬೇಡ್ಕರ್ 1956 ರಲ್ಲಿ ಬುದ್ಧಧಮ್ಮವನ್ನು ಅಪ್ಪಿಕೊಂಡರು). ಸಿದ್ಧಾರ್ಥನ ಮಹಾತ್ಯಾಗವನ್ನು ’ಮಹಾರಾತ್ರಿ’ ನಾಟಕದಲ್ಲಿ ಸ್ಫೂರ್ತಿಯುತವಾಗಿ ಚಿತ್ರಿಸಿದ್ದಾರೆ ಕುವೆಂಪು. ’ಬುದ್ಧದೇವ’ ಎಂಬ ಸುನೀತದಲ್ಲಿ ಎಲ್ಲವನ್ನೂ ದಾಟಿ ಹೋಗುವ ಸನ್ಮತಿ ಶಕ್ತಿಯ ಜಗನ್ಮೂರ್ತಿಯಾಗಿ ಬುದ್ಧನನ್ನು ಅವರು ದರ್ಶಿಸಿದ್ದಾರೆ:

… ಮತದ ಮತಿಹೀನತೆಯು
ಸಾಕೆಮಗೆ; ಬೇಕು ಸನ್ಮತಿಯ ನಾಗರಿಕತೆಯು:
ನರನ ಸನ್ಮತಿಗಿಂತ ಬೇರೆಯ ಜಗದ್ಗುರುವೆ.

ಕುವೆಂಪು : ಸಮಗ್ರ ಕಾವ್ಯ, ಸಂ. 1, ಪು. 513.

ಸನ್ಮತಿ – ಇದು ಕುವೆಂಪು ಸಾಹಿತ್ಯದ ಸಾರ ಸಂದೇಶ ಎನ್ನಬಹುದು. ಸನ್ಮತಿಯೇ ಜಗದ್ಗುರು. ಆದರೆ ಜಗದ್ಗುರು ಎಂದುಕೊಂಡವರು ಅಥವಾ ಅನ್ನಿಸಿಕೊಂಡವರು ಸನ್ಮತಿಯನ್ನು ಗಳಿಸಿದ್ದಾರೆಯೇ? ಎಂದು ಜನತೆ ಕೇಳಿಕೊಳ್ಳಬೇಕು. ಸನ್ಮತಿಯು ಸದ್ಭಾವನೆ, ಸದಾಚಾರ, ನಿಸ್ವಾರ್ಥತೆ, ಜಾತಿ ಮತ ಮೀರಿದ ಲೋಕಹಿತದಲ್ಲಿ ಇರುವಂಥದ್ದು.

ಮಹಾಕಾವ್ಯ ’ಶ್ರೀ ರಾಮಾಯಣ ದರ್ಶನಂ’ ಪ್ರಾರಂಭದಲ್ಲಿ “ಬುಧರೊಲಿದ ಸಮದರ್ಶನವನೊಪ್ಪಿ” ಎಂಬ ನುಡಿಯಿಂದ ಕುವೆಂಪು ತಮ್ಮ ಸಾಹಿತ್ಯ ರಚನೆಯ ಉದ್ದೇಶವನ್ನು ಪ್ರಕಾಶಪಡಿಸಿರುವರು. ’ಬುಧ’ ಎಂದರೆ ಜ್ಞಾನಿ. ಪ್ರಪಂಚದಲ್ಲಿ ಮೊಟ್ಟಮೊದಲು ಸಮಾನತಾಧರ್ಮವನ್ನು ಹರಡಿದವನು ಬುದ್ಧ. ಬೋಧಿಜ್ಞಾನದ ಪ್ರಭಾವ ಕುವೆಂಪು ಸಾಹಿತ್ಯದ ಮೇಲೆ ವ್ಯಾಪಕವಾಗಿ ಗಾಢವಾಗಿದೆ.

ಬುದ್ಧನನ್ನು ಕುವೆಂಪು ಆಧ್ಯಾತ್ಮಿಕ ಶಕ್ತಿಯನ್ನಾಗಿ ದರ್ಶಿಸಿದ್ದಾರೆ. ಇದರ ಜೊತೆಗೆ ಬುದ್ಧನನ್ನು ಮಾನವಶಾಸ್ತ್ರೀಯವಾಗಿ, ಸಮಾಜಶಾಸ್ತ್ರೀಯವಾಗಿ, ಅರ್ಥಶಾಸ್ತ್ರೀಯವಾಗಿ ತಾತ್ವಿಕವಾಗಿ ಶಾಶ್ವತ ಪ್ರಭಾವಕಾರಿ ಸತ್‌ಶಕ್ತಿಯಾಗಿ ಕಾಣುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

ಸಿದ್ಧಾರ್ಥ ಸಿಂಹಾಸನ ಕಿರೀಟ ತ್ಯಾಗಮಾಡಿ ಜ್ಞಾನಾರ್ಥಿಯಾಗಿ ಹೊರನಡೆದ. ಅವನು ಜ್ಞಾನೋದಯ ಹೊಂದಿ ಪ್ರಪಂಚದ ನಿಜವಾದ ಜ್ಞಾನಚಕ್ರರ್ತಿಯಾಗಿದ್ದಾನೆ. ಇದನ್ನು ಅರಿಯದ ಜಗದ್ಗುರುಗಳು ಕಿರೀಟ ಧಾರಣೆ ಮಾಡುವುದರಿಂದ ಅಥವಾ ಮಾಡಿಸಿಕೊಳ್ಳುವುದರಿಂದ ತಾವು ಜಗದ್ಗುರುಗಳೆಂದು ಬೀಗುತ್ತಿದ್ದಾರೆ. ಕಿರೀಟ ಅರಿವಿನ ಕೊರತೆಯನ್ನು ಮರೆಸುವ ಮತ್ತು ಅಹಂಕಾರವನ್ನು ಮೆರೆಸುವ ಮೆರಗು; ಅದರಿಂದ ಅವರ ಭಕ್ತರಿಗೆ ಬೆರಗು; ಅಂಧಕಾರವನ್ನೇ ಆಧ್ಯಾತ್ಮ, ಅಜ್ಞಾನವನ್ನೇ ಜ್ಞಾನ ಎಂದು ಭಾವಿಸಿದ್ದಾರಲ್ಲಾ ಎಂದು ವಿಚಾರವಾದಕ್ಕೆ ಕೊರಗು. ಕಿರೀಟ ತೊಟ್ಟ ಇವರ್‍ಯಾರೂ ಖಂಡಿತ ಜಗದ್ಗುರುಗಳಲ್ಲ. ಇವರು ಹೆಚ್ಚು ಅಂದರೆ ತಮ್ಮ ತಮ್ಮ ಜಾತಿಯ ಜಗದ್ಗುರುಗಳು, ಮಹಾಸ್ವಾಮಿಗಳು! ಆದರೆ ವಿಶ್ವವಿಜಯಿಯಾದ ಸ್ವಾಮಿ ವಿವೇಕಾನಂದರು ಕೇವಲ ಸ್ವಾಮಿ, ಮಹಾಸ್ವಾಮಿ ಅಲ್ಲ. ಜಗದ್ಗುರು ಎಂದು ಕರೆಸಿಕೊಂಡವರು ತಮ್ಮ ಜಾತಿಯಾಚೆಗೆ ಪ್ರಭಾವ ಬೀರಲು ಆಗಿಲ್ಲ. ಏಕೆಂದರೆ ಇವರಲ್ಲಿ ಜ್ಞಾನರವಿ ಉದಯಿಸಿಲ್ಲ. ಬುದ್ಧ ಮತ್ತು ವಿವೇಕಾನಂದರಿಗೆ ಉದಯಿಸಿದಂತೆ.

ಬುದ್ಧ ಧಮ್ಮ ಸಂಪೂರ್ಣ ಪ್ರಜಾಪ್ರಭುತ್ವ, ಪರಿಪೂರ್ಣ ಮಾನವತಾವಾದ, ವಿಚಾರ ಮತ್ತು ವಿಜ್ಞಾನಗಳಿಗೆ ಸದಾ ಮುಕ್ತವಾಗಿದೆ. ಮಧ್ಯವರ್ತಿಗಳಿಗೆ ಇಲ್ಲಿ ಜಾಗವಿಲ್ಲ. ಪ್ರತಿ ವ್ಯಕ್ತಿ ಸ್ವತಃ ಅನುಷ್ಠಾನ ಮಾಡಿ ಸಾಕ್ಷಾತ್ಕಾರ – ನಿಬ್ಬಾಣವನ್ನು – ಪಡೆದುಕೊಳ್ಳುವ ಪಥ ಇದು. ಇಲ್ಲಿ ರಹಸ್ಯವಿಲ್ಲ.

“ಬುದ್ಧ ನನ್ನ ಇಷ್ಟದೇವತೆ” (ಸಂ. 6, ಪು.227; 1964); “ಪ್ರಪಂಚದಲ್ಲಿ ಬಂದ ಅತ್ಯಂತ ಮಹತ್ವದ ವ್ಯಕ್ತಿ ಬುದ್ಧ ಎಂದು ಮಾನವ ಇತಿಹಾಸ ತೋರಿಸುತ್ತದೆ” (ಸಂ. 1, ಪು. 117 ; 1970); “ಬುದ್ಧ ಪೂರ್ವಕ್ಕೆ ಸಂದೇಶ ಕೊಟ್ಟಂತೆ, ನಾನು ಪಶ್ಚಿಮಕ್ಕೆ ಸಂದೇಶ ಕೊಡಲು ಬಂದಿದ್ದೇನೆ” (ಸಂ. 5, ಪು 314 ; 1964) – ಈ ಮಾತುಗಳಲ್ಲಿ ವಿವೇಕಾನಂದರ ಉಜ್ವಲ ಬುದ್ಧಪ್ರೇಮ ಗೊತ್ತಾಗುತ್ತದೆ. ವಿವೇಕಾನಂದರು ಬುದ್ಧನನ್ನು ಪ್ರೀತಿಸಿ ಆರಾಧಿಸಿ ಪ್ರಚಾರ ಮಾಡಿರುವಷ್ಟು ಬೇರೆ ಯಾರನ್ನೂ ಮಾಡಿಲ್ಲ. ಇಂಥ ವಿವೇಕಾನಂದರಿಂದ ಸ್ಫೂರ್ತರಾದವರು ಕುವೆಂಪು. ಬುದ್ಧನನ್ನು ಒಪ್ಪಿಕೊಳ್ಳುವುದರಿಂದ ವಿವೇಕಾನಂದ, ಇವರ ಗುರು ಶ್ರೀ ರಾಮಕೃಷ್ಣ ಪರಮಹಂಸರು, ವಿವೇಕಾನಂದರಿಂದ ಪ್ರಭಾವಿತರಾದ ಶ್ರೀಅರವಿಂದರು – ಮುಂತಾದ ಮಹಾನ್ ದಾರ್ಶನಿಕರಿಂದ ಜನರ ಅಂತಃಶಕ್ತಿ ಹೆಚ್ಚಿ, ಅವರ ಭಾವ ಮತ್ತು ಬೌದ್ಧಿಕ ಬದುಕು ತುಂಬಾ ಸಮೃದ್ಧವಾಗುತ್ತದೆ. ಆರ್ಥಿಕ ಶ್ರೀಮಂತಿಕೆಗಿಂತ ಬೌದ್ಧಿಕ ಮತ್ತು ಹೃದಯ ಶ್ರೀಮಂತಿಕೆ ಶ್ರೇಷ್ಠ ಮತ್ತು ಶಾಶ್ವತವಾದುದು.

ಇದನ್ನು ಸಂಘ ಮತ್ತು ಮುಖಂಡರು ಚಿಂತಿಸಿ ಕೂಡಲೇ ಕಾರ್ಯಪ್ರವೃತ್ತರಾಗುತ್ತಾರೆಂದು ಆಸಿಸುತ್ತೇನೆ. ಹೊಸ ವಿಚಾರಗಳು ಬಂದಾಗ ವಿರೋಧಿಸುವುದು, ಬೇಗ ಒಪ್ಪಿಕೊಳ್ಳದಿರುವುದು ಸಾಮಾನ್ಯ. ಆಮೇಲೆ ಅವೇ ಆದರಣೀಯವಾಗಿ ಅಗ್ರಮಾನ್ಯ ಆಗುತ್ತವೆ.

ಆರೋಗ್ಯಕರವಾಗಿ ಬೆಳೆಯಲು ವಿಚಾರ ವಿಮರ್ಶೆ ಅನಿವಾರ್ಯ ಮತ್ತು ಅಮೂಲ್ಯ.

(08-06-2012)

 [ಈ ಲೇಖನ ಬರೆದ ನಂತರ ಇನ್ನೂ ಕೆಲವು ಮಾಹಿತಿಗಳು ನಿರ್ವಾಣ ಶಬ್ದಕ್ಕೆ ಸಂಬಂಧಿಸಿದಂತೆ ಲಭಿಸಿವೆ. ಚಿಕ್ಕಮಂಗಳೂರು ತಾಲ್ಲೂಕು ಮತ್ತು ಜಿಲ್ಲೆಯ ಸಕ್ಕರೆ ಪಟ್ಟಣದ ಹತ್ತಿರ ನಿರ್ವಾಣೇಶ್ವರ ದೇವಸ್ಥಾನವಿದೆ. ಕನಕಪುರ ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ನಿರ್ವಾಣ ಸ್ವಾಮಿ ಮಠ ಇದೆ. ಮಾಜಿ ಪ್ರಧಾನಿ ದೇವೇಗೌಡರ ಹತ್ತಿರದ ಸಂಬಂಧಿಯ ಹೆಸರು ನಿರ್ವಾಣೇಗೌಡ, ನಿವೃತ್ತ ಇಂಜಿನಿಯರ್. ಇವರು ಹಾಸನ ತಾಲ್ಲೂಕು ಮತ್ತು ಜಿಲ್ಲೆ, ಕಟ್ಟಾಯ ಹೋಬಳಿ ಅಸನಹಳ್ಳಿಯವರು. ಹಾಸನದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ನಿರ್ವಾಣೇಗೌಡ ಎಂಬುವವರು ಸಹಪ್ರಾಧ್ಯಾಪಕರಾಗಿದ್ದಾರೆ.

ಮಾಹಿತಿಗಳನ್ನು ಒದಗಿಸಿದವರು ಮೈಸೂರು ಮಹಾರಾಣಿ ಕಾಲೇಜಿನ ಸ್ನಾಗಕೋತ್ತರ ವಿಭಾಗದ ಡಾ. ಅಣ್ಣೇಗೌಡ, ಮತ್ತು ನಿವೃತ್ತ ಇಂಜಿನಿಯರ್ ನಿರ್ವಾಣೇಗೌಡರು.]