ಸರ್ವಕಾರಣಗಳ ಹಿಂದೆಯೂ ರಾಜಕಾರಣ

– ಡಾ.ಎಸ್.ಬಿ.ಜೋಗುರ

ರಾಜಕಾರಣ ಎನ್ನುವದು ಎಲ್ಲ ಕಾರಣಗಳು, ಸಂದರ್ಭಗಳೊಂದಿಗೆ ತೂರಿಕೊಳ್ಳಬೇಕಿಲ್ಲ. ಮಾಡಬಾರದ ವಿಷಯಗಳಲ್ಲಿ ರಾಜಕಾರಣ ಮಾಡುವದು ಪ್ರಬುದ್ಧ ರಾಜಕಾರಣಿಯ ಲಕ್ಷಣವೂ ಅಲ್ಲ. ಎಲ್ಲ ಬಗೆಯ ವೃತ್ತಿಗಳಲ್ಲಿಯೂ ಒಂದು ಬಗೆಯ ನೈತಿಕತೆ ಅಡಕವಾಗಿರಬೇಕು. ಗಾಳಿ ಬಿಟ್ಟಾಗ ತೂರಿಕೊಳ್ಳುವ ಸೂತ್ರ ದವಸ ಧಾನ್ಯಗಳಿಗೆ ಅನ್ವಯವಾಗಬೇಕೇ ಹೊರತು ಹಾಳೂರಿನ ಮಣ್ಣು ತೂರುವದಕ್ಕಾಗಿ ಅಲ್ಲ. ಉತ್ತರಾಖಂಡದಲ್ಲಿ ಜನ ಅತ್ಯಂತ ಕ್ಷುದ್ರ ಜೀವಜಂತುಗಳಂತೆ ಸಾಯುತ್ತಿದ್ದಾರೆ. uttarakhand-floodsಸತ್ತವರ ಸಂಖ್ಯೆ 5 ಸಾವಿರ ದಾಟಿದೆ ಎನ್ನುವ ವರದಿಗಳೇ ಇಡೀ ದೇಶವೇ ತತ್ತರಿಸುವಂತೆ ಮಾಡಿದೆ. ರವಿವಾರ ಒಂದೇ ದಿನ ಹತ್ತು ಸಾವಿರದಷ್ಟು ಸಂಕಷ್ಟದಲ್ಲಿ ಸಿಲುಕಿದವರನ್ನು ಪಾರು ಮಾಡಿರುವ ರೀತಿಯನ್ನು ಗಮನಿಸಿದರೆ ಅದರ ಭೀಕರತೆಯ ಅರಿವಾಗುತ್ತದೆ. ಮನುಷ್ಯನಲ್ಲಿಯ ಎಂಪೆಥೆಟಿಕ್ ಸೆನ್ಸ್ ಜಾಗೃತವಾಗುವ ಹೊತ್ತಿನಲ್ಲಿಯೇ ಆತನ ಬೇರುಮಟ್ಟದ ನೀಚತನವೂ ಬಯಲಾಗುವದು ಇಂಥಾ ಸಂದರ್ಭಗಳಲ್ಲಿಯೇ.. ಇಡೀ ವಿಶ್ವಕ್ಕೆ ಸಾಂಸ್ಕೃತಿಕ ಮೌಲ್ಯಗಳ ವಿಷಯವಾಗಿ ನಮ್ಮ ದೇಶ ಗುರುವಿನ ಸ್ಥಾನದಲ್ಲಿದೆ ಎಂದಿರುವ ಕವಿವರ್ಯ ರವಿಂದ್ರನಾಥ ಟಾಗೂರರ ಹೇಳಿಕೆ ಪ್ರಸ್ತುತ ಸಂದರ್ಭದಲ್ಲಿ ಕೇವಲ ಹಳಹಳಿಕೆಯ ಹೇಳಿಕೆಯಾಗಿ ಬಿಂಬಿತವಾಗುತ್ತಿದೆ. ಮನುಷ್ಯನೊಬ್ಬ ರಣಹದ್ದುಗಳಾಗುವ ಸನ್ನಿವೇಶ ಈ ಬಗೆಯ ಪ್ರವಾಹ, ಅಪಘಾತದ ಸಂದರ್ಭದಲ್ಲಿ ಸೃಷ್ಟಿಯಾಗುವ ರೀತಿಯೇ ಅತ್ಯಂತ ಅಸಹ್ಯ ಎನಿಸುವಂಥದ್ದು. ಒಮ್ಮೊಮ್ಮೆ ಹೀಗೂ ಅನಿಸುತ್ತದೆ. ಮನುಷ್ಯನ ಜೀವಾಳದ ಅಸಲೀಯತ್ತೇ ಹೀಗಿರಬಹುದೇ..?

ಇಂಥಾ ನೈಸರ್ಗಿಕ ಅವಘಡಗಳ ಸಂದರ್ಭಗಳಲ್ಲಿ ಎಲ್ಲ ರಾಜ್ಯಗಳು ಅದರಲ್ಲೂ ಈ ಉತ್ತರಾಖಂಡದ ನೆರೆಯ ರಾಜ್ಯಗಳು ಪ್ರಜ್ಞಾತೀತವಾಗಿ ನೆರವು ನೀಡಬೇಕಿದೆ. ಮಾಡಿದೆನೆನ್ನುವದೇ ಈ ಸಂದರ್ಭದಲ್ಲಿ ಮಹಾನ್ ವ್ಯಂಗ್ಯ. ಅದರಲ್ಲೂ ನಾನೇ ಮಾಡಿದ್ದು, ನೆರವು ನೀಡಿದ್ದು ಎನ್ನುವ ಮಾತು ಇನ್ನೂ ಸಣ್ಣತನದ್ದು. ಇಲ್ಲಿ ಮಾಡಿದೆ ಎನ್ನುವದು ಶರಣರು ಹೇಳುವ ಹಾಗೆ ಮನದಲ್ಲೂ ಹೊಳೆಯಬಾರದು. ಹಾಗೆ ನೆರವಿಗೆ ಬರುವ ಜನಪ್ರತಿನಿಧಿಗಳ ಅಗತ್ಯತೆಯಿದೆ. ಮಾಧ್ಯಮಗಳ ಮೂಲಕ ಸದ್ದಾಗುವ, ಸುದ್ದಿಯಾಗುವ ಹಂಬಲದಲ್ಲಿ ಇಂಥಾ ಕಾರ್ಯಗಳನ್ನು ಮಾಡುವಂತಿಲ್ಲ. ಕೆಲವು ರಾಜಕೀಯ ಪಕ್ಷಗಳು ಅದಾಗಲೇ ನಾ ಮುಂದು, ತಾ ಮುಂದು ಎಂದು ಕ್ರೆಡಿಟ್‌ಗಾಗಿ ಪೈಪೋಟಿಗಿಳಿದಂತೆ ಮಾಡುವದನ್ನು ನೋಡಿದರೆ ಸೂತಕದ ಮನೆಯಲ್ಲೂ ರಾಜಕಾರಣ ಬೇಕೆ..? ಎನ್ನುವ ಪ್ರಶ್ನೆ ಕಾಡುತ್ತದೆ.

One thought on “ಸರ್ವಕಾರಣಗಳ ಹಿಂದೆಯೂ ರಾಜಕಾರಣ

  1. nagraj.harapanahalli

    ನಿಜ. ಕೇದಾರನಾಥ ದುರಂತದಲ್ಲಿ ಪ್ರಚಾರದ ಗೀಳು ಹಿಡಿದದ್ದು ಮೋದಿ `ಭಜನಾ ಮಂಡಳಿ’ಗೆ ಮೊದಲು ……

    Reply

Leave a Reply

Your email address will not be published. Required fields are marked *