Daily Archives: July 2, 2013

ಜ್ಯೋತಿಷ್ಯಕ್ಕೆ ಭವಿಷ್ಯ ಉಂಟೆ? ಅದು ವಿಜ್ಞಾನವೇ?

– ಬಿ.ಜಿ.ಗೋಪಾಲಕೃಷ್ಣ

ಹಿಂದಿನ ದಿನಗಳಲ್ಲಿ ಜ್ಯೋತಿಷ್ಯವನ್ನು ಕೇಳಿ ಅದರ ಫಲಾಫಲಗಳನ್ನು ಒರೆಹಚ್ಚಿ ನೋಡದೆ ಮರೆತು ಬಿಡುತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೇಳಿದ ಜ್ಯೋತಿಷ್ಯವನ್ನು ಕಾಲದ ಆಗುಹೋಗುಗಳೊಡನೆ ತಾಳೆಹಾಕಿ ನೋಡುವ ಪ್ರವೃತ್ತಿ ಬೆಳೆಯುತ್ತಿದೆ. ಈ ಪ್ರವೃತ್ತಿಯೇ ಮುಂದೊಂದು ದಿನ ಜ್ಯೋತಿಷ್ಯಕ್ಕೆ ಚ್ಯುತಿಯಾಗಲಿದೆ. ಜ್ಯೋತಿಷ್ಯ ನಿಜವಾಗಿಯೂ ವಿಜ್ಞಾನದ ರೀತಿ ಕರಾರುವಾಕಾಗಿದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲ್ಲಿಲ್ಲವೇನೊ.

ಜ್ಯೋತಿಷ್ಯ ಒಂದು ರೀತಿ ಕೆಟ್ಟು ನಿಂತ ಗಡಿಯಾರದಂತೆ. ಕೆಟ್ಟು ನಿಂತ ಗಡಿಯಾರವೂ ದಿನಕ್ಕೆರೆಡು ಬಾರಿ ಸರಿಯಾದ ಸಮಯ ತೋರುವಂತೆ. ಜ್ಯೋತಿಷಿಗಳು ಹೇಳಿದ ಭವಿಷ್ಯಗಳಲ್ಲಿ ಅಗೂಂದು ಈಗೂಂದು ಕಾಕತಾಳಿಯವೆಂಬಂತೆ ನಿಜವಾಗಿ ಬಿಡಬಹುದು. ಇದೇ ವಿಷಯ ಊರೆಲ್ಲಾ ಪ್ರಚಾರ ಪಡೆದು ಆ ಜ್ಯೋತಿಷಿಯೇ ಪ್ರಖ್ಯಾತಿ ಹೊಂದಿ ಅವಿದ್ಯಾವಂತ ಮುಗ್ಧ ಅಸಹಾಯಕರನ್ನು ಶೋಷಣೆಮಾಡಲು ಪ್ರಾರಂಬಿಸಿಯೇ ಬಿಡುತ್ತಾರೆ. ನಿಜ ಬಣ್ಣ ಬಯಲಾಗುವುದರೊಳಗೆ ಅವರ ಅಂತಸ್ತು ಬೇರೆಯದೇ ಆಗಿರುತ್ತದೆ.

ಜ್ಯೋತಿಷಿಗಳ ಪ್ರಕಾರ ಬ್ರಹ್ಮ ಬರೆದ ಹಣೆಬರಹidiotic-brahmanda ಬದಲಾಯಿಸಲು ಸಾಧ್ಯವಿಲ್ಲ. ಹಾಗಿದ್ದ ಮೇಲೆ ಜ್ಯೋತಿಷ್ಯವನ್ನೇಕೆ ಕೇಳಬೇಕು? ಜ್ಯೋತಿಷ್ಯ ಕೇಳಿ ಭಯದಿಂದ ಶಾಂತಿ, ಹೋಮ ಹವನಗನ್ನೇಕೆ ಮಾಡಿಸಬೇಕು? ಶಾಂತಿ, ಹೋಮ ಹವನಗಳಿಗೆ ಭವಿಷ್ಯವನ್ನು ಬದಲಾಯಿಸುವ ಶಕ್ತಿಯಿದೆಯೆ? ಅಥವಾ ಹೋಮ, ಹವನ ಯಾರನ್ನು ಸಂಪ್ರೀತಿಗೊಳಿಸುವ ಸಲುವಾಗಿ? ದೇವರು ನಮ್ಮನ್ನು ಅದು ಬೇಕು, ಇದು ಬೇಕೆಂದು ಕೇಳುವನೇ? ಜ್ಯೋತಿಷ್ಯ ದುರ್ಬಲ ಮನಸ್ಸುನ್ನು ಮತ್ತಷ್ಟು ದುರ್ಬಲಗೊಳಿಸಿ ಭಯವನ್ನು ಹೆಚ್ಚಿಸುತ್ತದೆಯೇ ಹೊರತು ಮತ್ತೇನನ್ನೂ ಮಾಡಲು ಸಾಧ್ಯವಿಲ್ಲಾ.

ಜ್ಯೋತಿಷ್ಯಶಾಸ್ತ್ರ ಗಣಿತದ ಲೆಕ್ಕಾಚಾರಗಳನ್ನು ಹೊಂದಿರುವ ವಿಜ್ಞಾನವೆಂದು ಪ್ರತಿಪಾದಿಸಲು ಸಾಧ್ಯವೇ? ಜ್ಯೋತಿಷ್ಯ ಶಾಸ್ತ್ರದಲ್ಲಿ ಗಣಿತವನ್ನು ಬಳಸಿದ ಮಾತ್ರಕ್ಕೆ ಅದು ವಿಜ್ಞಾನವಾಗುವುದಿಲ್ಲಾ. ವಿಜ್ಞಾನವೆಂದರೆ ಪಂಚೇಂದ್ರಿಯಗಳ ಅನುಭವಕ್ಕೆ ಬರುವಂತಿರಬೇಕು. ನಮ್ಮ ಅನುಭವಗಳನ್ನು ಬೇರೆಯವರ ಮುಂದೆ ಪ್ರಕಟಪಡಿಸಿ, ಅವರ ಅನುಭವಕ್ಕೂ ಬರುವಂತಿದ್ದು ನೂರಲ್ಲಾ ಸಾವಿರ ಬಾರಿ ಬೇರೆ ಬೇರೆಯವರು ಪ್ರಯತ್ನಿಸಿದರೂ ಒಂದೇ ಫಲಿತಾಂಶವಿರಬೇಕು. ಇದುವೇ ವಿಜ್ಞಾನ.

ಆದರೆ ಇಬ್ಬರು ಬೇರೆ ಬೇರೆ ಜ್ಯೋತಿಷಿಗಳು ಹೇಳುವ ಒಂದೇ ವ್ಯಕ್ತಿಯ ಜ್ಯೋತಿಷ್ಯದ ಫಲಾಫಲಗಳು ಬೇರೆ ಬೇರೆಯದೇ ಹಾದಿಯಲ್ಲಿರುತ್ತವೆ. ಅಂದ ಮೇಲೆ ಜ್ಯೋತಿಷ್ಯ ಶಾಸ್ತ್ರ ವಿಜ್ಞಾನದೊಂದಿಗೆ ತಳುಕು ಹಾಕಿಕೊಳ್ಳಲು ಪ್ರಯತ್ನಿಸುವುದೇಕೆ? ಅದೇ ಒಂದು ಸ್ವತಂತ್ರ ಶಾಸ್ತ್ರವಾಗಿ ಮುಂದುವರಿಯಬಾರದೇಕೆ? ಅಥವಾ ವಿಜ್ಞಾನವೇ ಅಂತಿಮ ಸತ್ಯವಾಗಿರುವುದರಿಂದಲೇ?

ವಿಜ್ಞಾನದಲ್ಲಿ ಅಂದುಕೊಂಡಿದ್ದು ಸಂಭವಿಸಿಯೇ ತೀರುತ್ತದೆಯೇ ಹೋರತು, 2012ರ ಪ್ರಳಯದ ರೀತಿ ಹೆದರಿ ಮುಂದೆ ಹೋಗುವುದಾಗಲೀ, ಸಂಭವಿಸದೇ ಇವುದಾಗಲೀ ಸಾಧ್ಯವಿಲ್ಲ. ವಿಜ್ಞಾನದ ಪ್ರಸಕ್ತ ಕಲ್ಪನೆಗೆ ನಿಲುಕದ ಅನೇಕ ನೈಸರ್ಗಿಕ ವಿಸ್ಮಯಗಳು ನೆಡೆಯುತ್ತಿವೆ, ಆದುದರಿಂದಲೇ ಪ್ರತಿದಿನ, ಪ್ರತಿಕ್ಷಣ ಸಂಶೋಧನೆಗಳು ನಡೆಯುತ್ತಿರುವುದು.

ತಮ್ಮ ಭವಿಷ್ಯವನ್ನೇ ತಿಳಿಯದ ಜ್ಯೋತಿಷಿಗಳು, ಅಸ್ತಿತ್ವದಲ್ಲಿ ಇರದವುಗಳನ್ನೆಲ್ಲಾ ಗಣನೆಗೆ ತೆಗೆದುಕೊಂಡು (ಉದಾಹರಣೆಗೆ ರಾಹು ಮತ್ತು ಕೇತು), jyotishaಕೆಲವನ್ನು ತಪ್ಪಾಗಿ ಗ್ರಹಿಸಿ (ನಕ್ಷತ್ರವಾದ ಸೂರ್ಯ ಮತ್ತು ಭೂವಿಯ ಉಪಗ್ರಹ ಚಂದ್ರನನ್ನು ಗ್ರಹಗಳೆಂದು ಪರಿಗಣಿಸಿ), ಗ್ರಹಗಳ ಚಲನೆಯನ್ನು ಲೆಕ್ಕಾಚಾರ ಮಾಡಿ, ಪ್ರಾಣಿಗಳ (ಮನುಷ್ಯ ಸಹ ಒಂದು ಪ್ರಾಣಿ) ಅಥವಾ ದೇಶದ ಭವಿಷ್ಯವನ್ನು ಹೇಳಲು ಸಾಧ್ಯವೇ? ಗ್ರಹಗತಿಗಳ ಅಧ್ಯಯನ ಕರಾರುವಾಕ್ಕಾಗಿ ಖಗೋಳ ವಿಧ್ಯಮಾನಗಳನ್ನು ತಿಳಿಸಬಹುದೇ ಹೋರತು. ಯಾವುದೇ ಪ್ರಾಣಿಯ ಭವಿಷ್ಯವನ್ನಲ್ಲ.

‘ಗುರು ಆ ಮನೆಗೆ ಬಂದರೆ, ಶುಕ್ರ ಈ ಮನೆಗೆ ಬಂದರೆ’ ಎಂಬ ಸಂಭವನೀಯತೆಗಳ ಮೇಲೆ ಭವಿಷ್ಯ ಹೇಳುವುದಾದರೆ. ನಿಮ್ಮ ಗ್ರಹಗತಿಗಳ ಲೆಕ್ಕಾಚಾರದಲ್ಲಿ ಮಾಡಿದ್ದೇನು? ನೀವೇ ಹೇಳಿದ ಭವಿಷ್ಯದ ಗತಿಯೇನು? ಹೇಳಿದ ಭವಿಷ್ಯ ತಪ್ಪಾದರೆ. ಪೂರ್ವಜನ್ಮದ ಕರ್ಮ ಸಿದ್ಧಾಂತದ ಹೆಚ್ಚುವರಿ ಇತಿಹಾಸ ಬೇರೆ. ಹಾಗಾದರೆ ಸ್ವರ್ಗ ಅಥವಾ ನರಕಗಳ ಪರಿಕಲ್ಪನೆಗಳು ನಮ್ಮ ಪೂರ್ವಜನ್ಮದ ಪಾಪವನ್ನು ತೊಳೆಯದೆ ಮಾಡಿದ್ದೇನನ್ನು?

ಜಾತಕ ಫಲ , ರಾಶಿ, ನಕ್ಷತ್ರ , ಹೆಸರುಬಲಗಳೆಲ್ಲವನ್ನು ನೋಡಿ ಸರಿಯಾದ ಮುಹರ್ತದಲ್ಲೇ ಮದುವೆಯಾದ ಪತಿಪತ್ನಿಯರು ಮನಸ್ತಾಪವಿಲ್ಲದೆ ಅಥವಾ ಸಮಸ್ಯೆಗಳಿಲ್ಲದೆ ಬದುಕಿ ಬಾಳಿದ್ದಾರೆಯೇ? ಸಂಸಾರವೆಂದ ಮೇಲೆ ವಿರಸ, ಮನಸ್ತಾಪ ಸಮಸ್ಯೆ ಸಾಮಾನ್ಯವೆಂದಾದರೆ ಜಾತಕ ನೊಡೇನು ಉಪಯೋಗ? ವಧು-ವರರ ಕುಟುಂಬಗಳ ನಡುವೆ ಒಪ್ಪಿಗೆಯಾದ ಮದುವೆಗೆ ವಧು-ವರರ ಗಣಕೂಟ ಕೂಡಿಬರಲಿಲ್ಲಾವಾದಲ್ಲಿ ಹೆಸರು ಬದಲಾಯಿಸಿ ಕೂಡಿಸಿದರೆ ಹಟ್ಟಿದ ನಕ್ಷತ್ರಗಳು ಬದಲಾಗುತ್ತವೆಯೇ?

ಜ್ಯೋತಿಷಿಗಳ ಭವಿಷ್ಯ ನಿಜವೇ ಆಗುವುದಾದರೆ, ನಮ್ಮ ದೇಶದ ಅವಘಡಗಳ ಭವಿಷ್ಯ ಈಗಲೇ ಹೇಳಿಬಿಡಿ! ಈ ವರ್ಷ ಏಲ್ಲೆಲ್ಲಿ ಸಾರಿಗೆ ಅಪಘಾತಗಳು ಸಂಭವಿಸುತ್ತವೆ? ಭೂಕಂಪವಾಗುವ ಸ್ಥಳಗಳಾವುವು? ಜ್ಯಾಲಾಮುಖಿಗಳು ಎಲ್ಲೆಲ್ಲಿ ಬಾಯ್ದೆರೆಯುತ್ತವೆ? ಯಾವ ಯಾವ ಪ್ರದೇಶಗಳಲ್ಲಿ ಬರಗಾಲ ಬರಲಿದೆ? ಸುನಾಮಿ ಅಪ್ಪಳಿಸಲಿರುವ ಕರಾವಳಿ ತೀರಗಳಾವುವು? ಎಂಬುದನ್ನು ಒಮ್ಮೆಲೇ ಹೇಳಿಬಿಡಿ.

ಸಾಧ್ಯವಾಗದಿದ್ದಲ್ಲಿ 2012ರ ಪ್ರಳಯದಂತೆ ಮುಗ್ಧ, ಬಡ ಜನರಲ್ಲಿ ಅಂಧಶ್ರದ್ಧೆಯನ್ನು ಬಿತ್ತಿ ಅವರ ಗೋಳಾಟದಲ್ಲಿ ನಿಮ್ಮ ಹೊಟ್ಟೆ ಹೊರೆಯಬೇಡಿ, ಪ್ಲೀಸ್.