Daily Archives: July 16, 2013

ಪ್ರಜಾಪ್ರಭುತ್ವದ ಸಡಿಲ ಕೊಂಡಿಗಳು ಮತ್ತು ಜೀವವಿರೋಧಿ ರಾಜಕೀಯ ಭಾಷೆ?

– ಬಿ. ಶ್ರೀಪಾದ ಭಟ್

“ನಾನು ಈಗ ಬರೆಯುತ್ತಿರುವಂತಹ ಸಂದರ್ಭದಲ್ಲಿ ಆಧುನಿಕ, ಶಿಕ್ಷಿತ ನಾಗರಿಕರು ನನ್ನನ್ನು ಕೊಲ್ಲುವುದಕೋಸ್ಕರವಾಗಿಯೇ ನನ್ನ ತಲೆಯ ಮೇಲೆ ಹಾರಾಡುತ್ತಿದ್ದಾರೆ,” ಎಂದು ಒಂದು ಕಡೆ ಅರ್ವೆಲ್ ಬರೆಯುತ್ತಾನೆ ( ಸುಮಾರು 1940). ಮುಂದುವರೆದು, “ರಾಜಕೀಯ ಭಾಷೆಯನ್ನು ಹಸಿಯಾದ ಸುಳ್ಳುಗಳು ಎಲ್ಲರೂ ನಂಬುವಂತಹ ಸತ್ಯವನ್ನಾಗಿ ಮಾರ್ಪಡಿಸಿ ಹಾಗೆಯೇ ಮುಂದೊಂದು ದಿನ ಕೊಲೆಗಾರನನ್ನಾಗಿ ರೂಪಿತಗೊಳ್ಳುವಂತೆ ಡಿಸೈನ್ ಮಾಡಲಾಗುತ್ತದೆ. ಅದು ಹೀಗೆಯೇ ಮುಂದುವರೆದು ಒಂದು ನಿರ್ದಿಷ್ಟ ಬಗೆಯ, ಸಂಬಂಧಪಟ್ಟ ಜನಾಂಗದ ಸಾಲಿಡಾರಿಟಿ ಶಕ್ತಿಯಾಗಿ ತಯಾರಾಗುತ್ತದೆ,” George_Orwellಎಂದು ಮಾರ್ಮಿಕವಾಗಿ ನುಡಿಯುತ್ತಾನೆ. ಅರ್ವೆಲ್‌ನ “1984” ಕಾದಂಬರಿಯಲ್ಲಿ ಭಾಷಾತಜ್ಞ ಸಿಮೆ “ನಾವು ನೂರಾರು ಶಬ್ದಗಳನ್ನು ನಾಶಪಡಿಸುತ್ತಿದ್ದೇವೆ. ನಾವು ಶಬ್ದಗಳನ್ನು ಮೂಳೆಯ ಹಂದರಗಳ ಮಟ್ಟಕ್ಕೆ ಇಳಿಸುತ್ತಿದ್ದೇವೆ. ಅಂದರೆ ನಮ್ಮೆಲ್ಲೆರ ಮಾತುಗಾರಿಕೆಯೆಂದರೆ ಆಲೋಚನೆಯ ವ್ಯಾಪ್ತಿಯನ್ನೇ ಸಂಕುಚಿತಗೊಳಿಸುವುದು,” ಎಂದು ಗೊಣಗುತ್ತಾನೆ. ಹಾಗೆಯೇ ಮತ್ತೊಂದು ಕಡೆ ಸಿಮೆ “ರಾಜಕೀಯ ಭಾಷೆಯು ಸಮರ್ಪಕವಾಗಿ, ಮೌಲ್ಯಾಧರಿತವಾಗಿ ಪರಿಪೂರ್ಣವಾಗಿದ್ದಾಗ ಮಾತ್ರ ಕ್ರಾಂತಿಯ ಉದ್ದೇಶ ಈಡೇರುತ್ತದೆ” ಎಂದು ಉದ್ಗರಿಸುತ್ತಾನೆ. ಅರ್ವಲ್‌ನ ಪ್ರಕಾರ “ರಾಜಕೀಯ, ಸ್ವಾತಂತ್ರ್ಯ ಮತ್ತು ಭಾಷೆಯು ಒಂದಕ್ಕೊಂದು ಅವಲಂಬಿತಗೊಂಡಿರುತ್ತವೆ. ಅವನ್ನು ಬೇರ್ಪಡಿಸಲಾಗುವುದಿಲ್ಲ. ಒಂದು ವೇಳೆ ಅವೇನಾದರೂ ಬೇರ್ಪಟ್ಟರೆ ಅವುಗಳ ಸಾವು ನಿಶ್ಚಿತ. ಇಲ್ಲಿ ಭಾಷೆಯು ಚಿಂತನೆಯನ್ನು ಭ್ರಷ್ಟಗೊಳಿಸಿದೆಯೆಂದರೆ, ಚಿಂತನೆಯೂ ಸಹ ಭಾಷೆಯನ್ನು ಭ್ರಷ್ಟಗೊಳಿಸುವಷ್ಟು ಶಕ್ತವಾಗಿದೆಯೆಂದರ್ಥ.”

ದುರ್ಬಲರ, ಬಡವರ, ನಿರ್ಗತಿಕರ ರಕ್ಷಣೆಯ ಗುರಾಣಿಯಾಗಬೇಕಾಗಿದ್ದ ರಾಜಕೀಯ ಭಾಷೆಯು ಇಂದು ಇಂಡಿಯಾದಲ್ಲಿ ರಾಜಕಾರಣಿಗಳು ಮತ್ತು ಪೋಲೀಸರ ಕೈಯಲ್ಲಿ ಪೂರ್ವ ನಿರ್ಧರಿತ ಶತ್ರುಗಳನ್ನು ನಾಶಪಡಿಸಲು, ಕೊಲೆ ಮಾಡಲು ಬಳಕೆಯಾಗುತ್ತಿದೆ. ಎಪ್ಪತ್ತು ಮತ್ತು ಎಂಬತ್ತರ ದಶಕಗಳಲ್ಲಿ ಕೆಲವೇ ರಾಜ್ಯಗಳಲ್ಲಿ ಸೀಮಿತಗೊಂಡಿದ್ದ ಈ ಮಾದರಿಯ ಕೊಲೆಗಾರಿಕೆಯು ಇಪ್ತತ್ತೊಂದನೇ ಶತಮಾನದಲ್ಲಿ ದೇಶವ್ಯಾಪಿ ಹರಡಿಕೊಂಡಿದೆ. ನಕಲಿ, ಮೋಸದ ಅಭಿವೃದ್ಧಿಯ ನೇತಾರ ನರೇಂದ್ರ ಮೋದಿಯ ಹತ್ತು ವರ್ಷಗಳ ಸರ್ವಾಧಿಕಾರದ ಅವಧಿಯ ಗುಜರಾತ್‌ಲ್ಲಿ 2002 ರಲ್ಲಿ ಸಾವಿರಾರು ಮುಸ್ಲಿಂರ ಹತ್ಯೆಯಾಯಿತು. 2002-2006 ರ ಅವಧಿಯಲ್ಲಿ ಮೋದಿ ಆಳ್ವಿಕೆಯಲ್ಲಿ ಗುಜರಾತ್‌ನಲ್ಲಿ ಜರುಗಿದ 22 ನಕಲಿ ಎನ್‌ಕೌಂಟರ್‌ಗಳ ಕುರಿತಾಗಿ ತನಿಖೆ ನಡೆಸಲು ಸುಪ್ರೀಂ ಕೋರ್ಟ ಆದೇಶಿಸಿದೆ. ಅವುಗಳಲ್ಲಿ ಇಶ್ರಾತ್ ಜಹಾನ್, ಸೊಹ್ರಾಬುದ್ದೀನ್, ಪ್ರಜಾಪತಿ ನಕಲಿ ಎನ್‌ಕೌಂಟರ್‌ಗಳು ಇಂದು ತೀವ್ರ ಸ್ವರೂಪದಲ್ಲಿ ಚರ್ಚೆಗೊಳಗಾಗುತ್ತಿದೆ. Modiಹಲವಾರು ಪೋಲೀಸ್ ಅಧಿಕಾರಿಗಳು ಬಂಧನಕ್ಕೊಳಗಾಗಿದ್ದಾರೆ. ಗುಜರಾತ್ ರಾಜ್ಯದಲ್ಲಿ ಮೋದಿಯ ಕುಪ್ರಸಿದ್ದ ಹತ್ತು ವರ್ಷಗಳ ಸರ್ವಾಧಿಕಾರದ ಅವಧಿಯಲ್ಲಿ ಈ ಮಟ್ಟದಲ್ಲಿ ನಡೆದ ಸಾಮಾಜಿಕ, ರಾಜಕೀಯ ಹತಕಾಂಡಗಳು ಸ್ವತಂತ್ರ ಭಾರತದ ಇತಿಹಾಸದಲ್ಲಿ ಹೊಸ ದಾಖಲೆ. ಒಂದು ರಕ್ತ ಚರಿತ್ರೆ. ಈ ಹತ್ಯೆಗಳ ಸಂಚನ್ನು ಮೋದಿ ಮತ್ತವರ ಸಹಚರರು ರಾಜಕೀಯ ಭಾಷೆ ಮತ್ತು ಸ್ವಾತಂತ್ರ್ಯವನ್ನು ಅತ್ಯಂತ ಋಣಾತ್ಮಕ ಮಟ್ಟದಲ್ಲಿ, ಭ್ರಷ್ಠತೆಯ ನೆಲೆಯಲ್ಲಿ ಬಳಸಿಕೊಂಡು ರೂಪಿಸಿದರು. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವೆಂದು ಬಿಂಬಿತಗೊಂಡಿರುವ ಇಂಡಿಯಾದಲ್ಲಿ ಇಂದು ಈ ರಾಜಕೀಯ ಹತ್ಯೆಗಳ ಕುರಿತಾದ ವಿಚಾರಣೆ ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿದೆ. ಭಾರತವು ವಿಶ್ವದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವವಾದ್ದರಿಂದ ಮೇಲಿನ ಕೊಲೆಗಳ ಸಂಚನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ಆಪಾದನೆಗೊಳಗಾಗಿರುವ ಮೋದಿಯು ಇಂದು ಈ ದೇಶದ ಭವಿಷ್ಯದ ಪ್ರಧಾನಿ ಅಭ್ಯರ್ಥಿ. ಇದನ್ನು ಸಾಧ್ಯವಾಗಿಸಿದ್ದು ನಮ್ಮ ಪ್ರಜಾಪ್ರಭುತ್ವದ ಸಡಿಲ ಕೊಂಡಿಗಳನ್ನು ದುರ್ಬಳಕೆ ಮಾಡಿಕೊಂಡ ಸಂಘ ಪರಿವಾರವು ಕಳೆದ ಇಪ್ಪತ್ತೈದು ವರ್ಷಗಳಿಂದ ರಾಜಕೀಯ ಭಾಷೆಯನ್ನು ಕೊಲೆಗಾರನ ಮಟ್ಟಕ್ಕೆ ಇಳಿಸಿ ಇದನ್ನು ಒಂದು ಜನಾಂಗದ ಸಾಲಿಡಾರಿಟಿ ಶಕ್ತಿಯನ್ನಾಗಿ ಪರಿವರ್ತಿಸಿರುವುದರಿಂದ.

ಇತಹುದೇ ಮಾದರಿಯ ಸಾಲಿಡಾರಿಟಿಯ ಶಕ್ತಿಯ ಬಲದಿಂದಲೇ ಇಂದು ಪ್ರಭಾವಿ ಬಲಿಷ್ಠ ಜಾತಿಗೆ ಸೇರಿದ ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು “ಒಕ್ಕಲಿಗರ ಸಮುದಾಯವನ್ನು ಅಗೌರವದಿಂದ ನಡೆಸಿಕೊಂಡರೆ ಮೌನಕ್ಕೆ ಶರಣಾಗಿ ಸುಮ್ಮನೆ ಕೂರುವುದಿಲ್ಲ,” vokkaliga-meet-hinduಎಂದು ಹಿಂದುಳಿದ ಜಾತಿಗೆ ಸೇರಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಗುಡುಗಿದ್ದಾರೆ. ( ಪ್ರಜಾವಾಣಿ : 9 ಜುಲೈ 2013).

ಇದೇ ಮಾದರಿಯ ಸಾಲಿಡಾರಿಟಿ ಶಕ್ತಿಯ ಬಲದಿಂದಲೇ ತಮಿಳುನಾಡಿನ ಪಿಎಂಕೆ ಪಕ್ಷದ ಸ್ಥಾಪಕ ಮತ್ತು ಬಲಿಷ್ಠ ವಣ್ಣಿಯಾರ್ ಜಾತಿಯ ಸ್ವಘೋಷಿತ ನೇತಾರ ಎಸ್. ರಾಮದಾಸ್ “ದಲಿತರು ಇಂದು ಜೀನ್ಸ್ ಪ್ಯಾಂಟ್, ಟೀ ಷರ್ಟ್, ತಂಪು ಕನ್ನಡಕಗಳನ್ನು ಧರಿಸುತ್ತಿದ್ದಾರೆ. ಬೈಕುಗಳಲ್ಲಿ ಅಡ್ಡಾಡುತ್ತಿದ್ದಾರೆ,” ಎಂದು ಗುಡುಗಿದ್ದು. ಈ ಗುಡುಗಿನ ಫಲವಾಗಿ ಧರ್ಮಪುರಿ ಜಿಲ್ಲೆಯಲ್ಲಿ 250 ದಲಿತರ ಮನೆಗಳನ್ನು ಸುಡಲಾಯಿತು. ದಲಿತರು ವಣ್ಣಿಯಾರ್ ಹೆಣ್ಣು ಮಕ್ಕಳನ್ನು ಅಪಹರಿಸಿಕೊಂಡು ಹೋಗುತ್ತಿದ್ದಾರೆ ಎನ್ನುವ ರಾಜಕೀಯ ಭಾಷೆಯಿಂದಾಗಿ ಜುಲೈ 4, 2013 ರಂದು ದಲಿತ ಯುವಕ ಇಲವರಸನ್‌ನ ಕೊಲೆಯಾಯ್ತು. ಏಕೆಂದರೆ ಇಲವರಸನ್ ಮತ್ತು ವಣ್ಣಿಯಾರ್ ಜಾತಿಗೆ ಸೇರಿದ ದಿವ್ಯ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು.

ಈ ರಾಜಕೀಯ ಭಾಷೆ ಮತ್ತು ಬಲಿಷ್ಠ ಜಾತಿಗಳ ಸಾಲಿಡಾರಿಟಿಯ ಮಾದರಿಯಿಂದಾಗಿ ಖೈರ್ಲಾಂಜಿಯಲ್ಲಿ, ಕಂಬಾಲಪಲ್ಲಿಯಲ್ಲಿ ದಲಿತರ ಕುಂಟುಂಬಗಳ ಹತ್ಯೆಯಾಯ್ತು. ಇಂದಿಗೂ ಉತ್ತರ ಭಾರತದ ರಾಜ್ಯಗಳಲ್ಲಿ ಖಾಪ್ ಪಂಚಾಯ್ತಿಯ ಹೆಸರಿನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳನ್ನು ನಾಶಪಡಿಸಲಾಗುತ್ತಿದೆ ಮತ್ತು ಹುಡುಗರನ್ನು ಹತ್ಯೆಗೈಯಲಾಗುತ್ತಿದೆ.

1990 ರ ನಂತರ ರಾಜಕೀಯವಾಗಿ ಮತ್ತು ಜಾತೀಯವಾಗಿ ಬಲಿಷ್ಠಗೊಂಡ ಮಂಡಲ್ ಮತ್ತು ಮಂದಿರದ ಶಕ್ತಿಗಳು ತಮ್ಮ ಸಾಲಿಡಾರಿಟಿಯ ಹಿರಿಮೆಗಾಗಿ ಈ ಬಗೆಯ ಹತ್ಯಾಕಾಂಡಗಳನ್ನು ರೂಪಿಸಿದ್ದು ಮಾತ್ರ ಅತ್ಯಂತ ದುರಂತ. ಏಕೆಂದರೆ ಮಂಡಲ್ ಶಕ್ತಿಗಳು ಬಲಗೊಂಡರೆ ಮಂದಿರದ ಮತೀಯವಾದಿ ಫೆನೆಟಿಸಂ ಗುಂಪನ್ನು ಮತ್ತಷ್ಟು ಸಶಕ್ತವಾಗಿ ಎದುರಿಸಬಹುದೆಂದು ನಂಬಿದ್ದ ಈ ದೇಶದ ಪ್ರಜ್ಞಾವಂತ ಜನತೆಗೆ ಇಂದು ಇದೇ ಮಂಡಲ್ ಗುಂಪಿನ ಇಂದಿನ ನವ ಬ್ರಾಹ್ಮಣಶಾಹೀ ವ್ಯಕ್ತಿತ್ವದ ಧೋರಣೆಗಳು ಮರೆಯಲಾಗದಂತಹ ಪೆಟ್ಟನ್ನು ನೀಡಿದೆ. ಧರ್ಮಪುರಿಯ ದಲಿತ ಇಲವರಸನ್‌ನ ಕೊಲೆ ಮುಂದಿನ ದಿನಗಳ ಕರಾಳತೆಯ ಮುನ್ಸೂಚನೆ. ಕಾನೂನು ನೀಡಿದ ಸಮಾನತೆಯನ್ನು ಧಿಕ್ಕರಿಸುವ ಶಕ್ತಿಗಳ ಅಪಾಯಕಾರಿ ಚಲನಶೀಲತೆಗೆ ಆತ್ಮವಂಚನೆಗೆ ಬಲಿಯಾದ ನಾವೆಲ್ಲ ಸಾಕ್ಷಿಯಾಗಬೇಕಾಗಿದೆ.

ಧರ್ಮವನ್ನು ಕೇವಲ ಆಧ್ಯಾತ್ಮಿಕ ಮಟ್ಟದಲ್ಲಿ, ವೈಯಕ್ತಿಕ ಹಿನ್ನೆಲೆಯಲ್ಲಿ ನೋಡುವುದನ್ನು ಕೈಬಿಟ್ಟು ಅದನ್ನು ರಾಜಕೀಯವಾಗಿ, ಸಾಮಾಜಿಕವಾಗಿ, ಸಾರ್ವಜನಿಕವಾಗಿ ಸಂಭ್ರಮದಿಂದ ಆಚರಿಸಿದ ಇಂಡಿಯಾದ ಶಿಕ್ಷಿತ ಜನರ ಬೌದ್ಧಿಕ ದಿವಾಳಿತನ ಈ ಅಮಾನವೀಯ ವ್ಯವಸ್ಥೆಗೆ ಮೂಲಭೂತ ಕಾರಣ. ಪ್ರಜಾಪ್ರಭುತ್ವವು ಬಹುಸಂಖ್ಯಾತ ಪದ್ಧತಿಯ ಮೇಲೆ ನಿಂತಿದ್ದರು ಸಹ ಆ ಬಹುಸಂಖ್ಯಾತ ಪರಿಕಲ್ಪನೆಯು ಯಾರನ್ನು ಹೆಚ್ಚಾಗಿ ಓಲೈಸುತ್ತದೆ ಎactivism-alice-walkerನ್ನುವುದನ್ನು ಸಹ ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸಬಹುದು. ಪ್ರಜಾಪ್ರಭುತ್ವವೆಂದರೆ ಪ್ರಜೆಗಳು ಅಜ್ಞಾನದಿಂದ, ಪರಸ್ಪರ ಸಂಬಂಧವಿಲ್ಲದಂತೆ ಬದುಕುವುದಲ್ಲ. ಬದಲಾಗಿ ಅಪಾರ ತಿಳುವಳಿಕೆಯನ್ನು, ಪ್ರಶ್ನಿಸುವ ಮನೋಭೂಮಿಕೆಯನ್ನು ಹೊಂದಬೇಕಾಗುತ್ತದೆಂದು ಜನತೆಗೆ ವಿವರಿಸಬೇಕಾಗುತ್ತದೆ. ಈ ಕಾರ್ಯವನ್ನು ನಮ್ಮ ಸಮಾಜ ವಿಜ್ಞಾನಿಗಳು ಮತ್ತು ಅಕಡೆಮಿಕ್ ಬುದ್ಧಿಜೀವಿಗಳು ತಮ್ಮ ದಂತಗೋಪುರದಿಂದ ಹೊರಬಂದು ಭೌತಿಕ ಆಕ್ಟಿವಿಸಂನಿಂದ (physical activism) ತಲೆಮಾರುಗಳನ್ನು ರೂಪಿಸಬೇಕಾದಂತಹ ಇಂದಿನ ತುರ್ತಿನ ಸಂದರ್ಭದಲ್ಲಿ ತಮ್ಮ ಪ್ರಚಂಡ ಪ್ರಬಂಧಗಳು, ಅಸ್ಖಲಿತ ಪಾಂಡಿತ್ಯಪೂರ್ಣ ಭಾಷಣಗಳು ತಂದು ಕೊಟ್ಟ ಜನಪ್ರಿಯತೆಯ ರೋಮಾಂಚನಕ್ಕೆ ತಾವೇ ಮೈಮರೆತು ಈ ಜನಪ್ರಿಯತೆ ತಂದುಕೊಡುವ ವೇದಿಕೆಗಳು, ಖ್ಯಾತಿಯ ಕನವರಿಕೆಗಳಲ್ಲಿ ಮುಳುಗಿದ್ದು ನಮ್ಮ ವ್ಯವಸ್ಥೆಯಲ್ಲಿ ವೈಚಾರಿಕತೆ ಮತ್ತು ಮಾನವೀಯತೆಯ ಸೋಲಿಗೆ ಕಾರಣ. ನಮ್ಮ ಬುದ್ಧಿಜೀವಿಗಳು ಭೌತಿಕ ಆಕ್ಟಿವಿಸಂಗೆ ತಿಲಾಂಜಲಿ ನೀಡಿದ್ದು ದಿಗ್ಭ್ರಮೆ ಮೂಡಿಸುತ್ತದೆ. ಇವರು ಮೌಲಿಕವಾದ ರಾಜಕೀಯ ಭಾಷೆಯನ್ನು ಮಾತನಾಡುವುದನ್ನು ಸಹ ಕೈಬಿಟ್ಟಿದ್ದಾರೆ.

ನಮಗೆಲ್ಲ ಇನ್ನು ಮುಂದಿರುವುದು ಪೆರಿಯಾರ್, ಅಂಬೇಡ್ಕರ್, ಗಾಂಧಿ ಮಾರ್ಗಗಳು. ಸಮಾನಮನಸ್ಕರು ಅಸಂಘಟಿತರಾಗಿ ಪರಸ್ಪರ ಸಂಬಂಧವಿಲ್ಲದಂತೆ ಬದುಕುವುದನ್ನು ಕೈ ಬಿಟ್ಟು ಹೊಸ ಮೌಲ್ಯಗಳ ರಚನೆಗೆ ಪರಸ್ಪರ ಕೈ ಜೋಡಿಸಬೇಕಾದಂತಹ ಕಾಲವಿದು.