ಪ್ರಭುತ್ವ ಮತ್ತು ಅದರ ದಮನಕಾರಿಗುಣ


– ಡಾ.ಎಸ್.ಬಿ. ಜೋಗುರ


 

ಪ್ರಭುತ್ವ ಬಹುತೇಕವಾಗಿ ಜನಜಾಗೃತಿಯನ್ನು, ಆಂದೋಲನವನ್ನು ಸಹಿಸುವದಿಲ್ಲ. ಅದರಲ್ಲೂ ಬಂಡುಕೋರರು ಬೀದಿಗಿಳಿದು ಅರಾಜಕತೆಗೆ ಕಾರಣರಾದವರ ಹೆಸರಿಡಿದು ಕೂಗುತ್ತಾ ಪ್ರತಿಭಟಿಸುವವರನ್ನು ಮೊದಲು ಸಹಿಸುವದಿಲ್ಲ. ಪ್ರಜಾಸತ್ತೆಯನ್ನು ಅಣಕಿಸಲೆಂಬಂತೆ ಅದರ ಗರ್ಭದಲ್ಲಿಯೇ ಸರ್ವಾಧಿಕಾರಿ ಧೋರಣೆಯ ಬೀಜಗಳು ನಿಧಾನವಾಗಿ ಆವೀರ್ಭವಿಸುವುದು ಬಹುದೊಡ್ಡ ವಿಪರ್ಯಾಸ. ಹಿಂದೆ 1988 ರ ಸಂದರ್ಭದಲ್ಲಿ ತಿಕ್ಕಲು ಸರ್ವಾಧಿಕಾರಿ ಸದ್ದಾಂ ಹುಸೇನ ವಿಷಕಾರಿ ಅಸ್ತ್ರಗಳನ್ನು ಬಂಡುಕೋರರ ಮೇಲೆ ಬಳಸುವ ಮೂಲಕ, ಐದಾರು ಸಾವಿರ ಜನರ ಸಾವಿಗೆ ಕಾರಣವಾಗಿ ಇಡೀ ಜಗತ್ತಿನಲ್ಲಿಯೇ ಒಂದು ಬಗೆಯ ನಿಶೇಧಾತ್ಮಕ ಪ್ರತಿಕ್ರಿಯೆಯನ್ನು ಪಡೆಯಬೇಕಾಗಿ ಬಂದಿತ್ತು. syria-chemical-attackಈಗ 24 ವರ್ಷಗಳ ನಂತರ ಮತ್ತೆ ಅಂತಹದೇ ರಾಸಾಯನಿಕ ಅಸ್ತ್ರದ ಬಳಕೆ ಸಿರಿಯಾದಲ್ಲಿ ಸರ್ವಾಧಿಕಾರಿ ಬಸರ್ ಅಲ್-ಅಸದ್ ಆಳ್ವಿಕೆಯಲ್ಲಿ ನಾಗರಿಕ ಹೋರಾಟಗಾರರ ಮೇಲೆ ಪ್ರಯೋಗಿಸಲಾಗಿದೆ. ಸಾವಿರಾರು ಜನ ಬಂಡುಕೋರರ ಜೊತೆಯಲ್ಲಿ ಯಾವುದೇ ವಿದ್ಯಮಾನಗಳನ್ನು ಅರಿಯದ ಅಸಂಖ್ಯಾತ ಎಳೆಯ ಜೀವಗಳು ಈ ರಾಸಾಯನಿಕ ಅಸ್ತ್ರದ ಬಳಕೆಗೆ ಬಲಿಯಾಗಿವೆ. ಕಣ್ಣು ಊದಿರುವ, ಬಾಯಿಗೆ ನೊರೆ ಮೆತ್ತಿರುವ, ಮುಖ ಊದಿ ವಿಕಾರವಾಗಿ ಅಸು ನೀಗಿರುವ ಶರೀರಗಳು ರಾಶಿ ರಾಶಿಯಾಗಿ ಡಮಾಸ್ಕಸ್ ಸುತ್ತಮುತ್ತಲೂ ಬಿದ್ದಿರುವದಿತ್ತು. ಆ ಸನ್ನಿವೇಶ ಇಡೀ ಜಗತ್ತನ್ನೇ ಒಂದು ಸಾರಿ ಕಂಪಿಸುವಂತೆ ಮಾಡಿತು. ಅತ್ಯಂತ ಅಮಾನವೀಯ ಎನ್ನಬಹುದಾದ ಈ ಆಯ್ಕೆ ಮತ್ತು ತೀರ್ಮಾನಕ್ಕೆ ಇಡೀ ಜಗತ್ತೇ ಖಂಡಿಸಿತು. ಹಾಗೆ ನೋಡಿದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಬಗೆಯ ಜೈವಿಕ ಇಲ್ಲವೇ ರಸಾಯನಿಕ ಶಸ್ತ್ರಗಳನ್ನು ಯಾವುದೇ ಕಾರಣಕ್ಕೂ ಬಳಸುವಂತಿಲ್ಲ. ಹಾಗೆ ಒಂದೊಮ್ಮೆ ತೀರಾ ಅನಿವಾರ್ಯವಾಗಿ ಬಳಸಲೇಬೇಕು ಎಂದಾಗ ಹೇಗ್ ನಲ್ಲಿರುವ ಅದಕ್ಕೆ ಸಂಬಂಧಿಸಿದ ಸಂಸ್ಥೆಯೊಂದರ ಅನುಮತಿಯನ್ನು ಪಡೆಯಬೇಕು. ಇಂಥಾ ಯಾವುದೇ ಬಗೆಯ ಅನುಮತಿಗಳಿಲ್ಲದೇ ಹೀಗೆ ಬೇಕಾಬಿಟ್ಟಿಯಾಗಿ ರಸಾಯನಿಕ ಅಸ್ತ್ರದ ಪ್ರಯೋಗವಾಗಿರುವುದು ಅಸದ್ ಆಡಳಿತ ಜಗತ್ತಿನ ಪ್ರಮುಖ ರಾಷ್ಟ್ರಗಳಿಂದ ಟೀಕೆಗೆ ಒಳಗಾಗಬೇಕಾಯಿತು.

ಈಗಾಗಲೇ ಸಿರಿಯಾದ ಅಧ್ಯಕ್ಷನ ಆಡಳಿತ ವೈಖರಿ ಮತ್ತು ತೀರ್ಮಾನಗಳ ಬಗ್ಗೆ ಸಂಯುಕ್ತ ರಾಷ್ಟ್ರ ಸಂಘ ಕೆಂಡಾಮಂಡಲವಾಗಿದೆ. Basharal-Assad-syrianಸುಮಾರು 35 ರಾಷ್ಟ್ರಗಳ ಈ ಒಕ್ಕೂಟದಲ್ಲಿ ಫ಼್ರಾನ್ಸ್ ಮತ್ತು ಇಂಗ್ಲಂಡದಂಥ ರಾಷ್ಟ್ರಗಳೂ ಇವೆ. ಸಂಯುಕ್ತ ರಾಷ್ಟ್ರ ಸಂಘದ ಸೆಕ್ರೆಟರಿ ಜನರಲ್ ಬನ್-ಕಿ-ಮೂನ್ ಅವರು ಈ ಬಗೆಯ ರಸಾಯನಿಕ ಅಸ್ತ್ರಗಳ ಬಳಕೆ ಇಡೀ ಮನುಕುಲಕ್ಕೆ ಮಾರಕ, ಅದನ್ನು ಇಡೀ ವಿಶ್ವವೇ ಖಂಡಿಸುತ್ತದೆ, ಈ ವಿಷಯವಾಗಿ ತಡ ಮಾಡದೇ ತನಿಖೆಯಾಗಬೇಕು ಎಂದು ಒಕ್ಕೂಟದಲ್ಲಿಯ ಕೆಲ ಪ್ರಮುಖ ರಾಷ್ಟ್ರಗಳು ಆಗ್ರಹಿಸುತ್ತಿವೆ ಎಂದು ಹೇಳಿರುವದಿದೆ. ಈಗಾಗಲೇ ವಿಶ್ವ ಸಂಸ್ಥೆ ತನಿಖೆಗಾಗಿ ಸಿರಿಯಾ ತಲುಪಿರುವದಿದೆ. ಕುಟುಂಬದ ರಾಜಕಾರಣ ಮತ್ತು ಅಧಿಕಾರವನ್ನು ಪ್ರಶ್ನಿಸುವದೇ ಮಹಾಪ್ರಮಾದ ಎನ್ನುವ ವಾತಾವರಣ ಇಂದಿಗೂ ಕೆಲ ಮುಸ್ಲಿಂ ರಾಷ್ಟ್ರಗಳಲ್ಲಿ ಇದ್ದದ್ದೇ ಒಂದು ದೊಡ್ಡ ವಿಪರ್ಯಾಸ. ಪ್ರಜಾಪ್ರಭುತ್ವದ ಬಗೆಗಿನ ಹಂಬಲವೇ ಅನೇಕ ಕಡೆಗಳಲ್ಲಿ ಈ ಬಗೆಯ ಬಂಡುಕೋರರನ್ನು ಹುಟ್ಟುಹಾಕಿರುವದಿದೆ. ಸಿರಿಯಾದ ಅಧ್ಯಕ್ಷ ಅಸದ್ ಕುಟುಂಬ ಕಳೆದ ನಾಲ್ಕು ದಶಕಗಳಿಂದಲೂ ರಾಜಕೀಯ ಸತ್ತೆಯನ್ನು ತನ್ನ ಕೈಯಲ್ಲಿಟ್ಟುಕೊಂಡು ನಿಯಂತ್ರಿಸುತ್ತಾ, ನಿಭಾಯಿಸುತ್ತಾ ಬಂದದ್ದಿದೆ. ಈಜಿಪ್ತ ಮತ್ತು ಇರಾಕ್ ಗಳಲ್ಲಿ ಪ್ರಜಾಪ್ರಭುತ್ವದ ಹಂಬಲಕ್ಕಾಗಿ ನಡೆದ ಹೋರಾಟದ ಪ್ರಭಾವದ ಹಿನ್ನೆಲೆಯಲ್ಲಿ ಸಿರಿಯಾದಲ್ಲಿಯೂ ಆ ಬಗೆಯ ಹೋರಾಟ ಆರಂಭವಾಯಿತು. ನಾಗರಿಕರು ದೊಡ್ದ ಪ್ರಮಾಣದಲ್ಲಿ ಬೀದಿಗಿಳಿದು ಆ ಬಗ್ಗೆ ಹೋರಾಟ ಆರಂಭಿಸಿದ್ದೇ ತಡ ಮಿಲಿಟರಿ ನೆರವಿನೊಂದಿಗೆ ಈ ರಸಾಯಕ ಅಸ್ತ್ರ ಪ್ರಯೋಗದ ಅಹಿತಕರವಾದ ತೀರ್ಮಾನವನ್ನು ಕೈಗೊಳ್ಳಲಾಯಿತು ಎನ್ನುವುದು ಮಾಧ್ಯಮಗಳ ವರದಿಯಾದರೆ, ರಷ್ಯಾ ಮಾತ್ರ ಈ ಬಗೆಯ ರಸಾಯನಿಕ ಅಸ್ತ್ರದ ಬಳಕೆಯ ಹಿಂದೆ ಬಂಡುಕೋರ ಹೋರಾಟಗಾರರ ಕೈವಾಡವಿದೆ, ಆದಾಗ್ಯೂ ಸಂಯುಕ್ತ ರಾಷ್ಟ್ರ ಸಂಘದ ತನಿಕೆಗೆ ಸಿರಿಯಾದ ಅಧ್ಯಕ್ಷ ಅಸದ್ ಸಹಕರಿಸಬೇಕು ಎಂದು ಕರೆ ನೀಡಿರುವದಿದೆ. ಇದರೊಂದಿಗೆ ವಿಶ್ವದ ಬೇರೆ ಬೇರೆ ರಾಷ್ಟ್ರಗಳು ಸಿರಿಯಾದ ಮೆಲೆ ಕ್ರಮ ಜರುಗಿಸುವಂತೆ ಒತ್ತಡವನ್ನೂ ಹೇರುತ್ತಿರುವುದೂ ಸತ್ಯ. obamaಇದರ ಹಿಂದೆ ಯಾರ ಕೈವಾಡ ಇದೆಯೋ.. ಗೊತ್ತಿಲ್ಲ. ಒಟ್ಟಾರೆ ಸಾವಿರಾರು ಜನ ಅಮಾಯಕರು ಹೆಣವಾದದ್ದು, ಲಕ್ಷಾನುಗಟ್ಟಲೆ ಮಕ್ಕಳು ನಿರಾಶ್ರಿತರಾದದ್ದು ಮಾತ್ರ ಸುಳ್ಳಲ್ಲ. ಸುಮಾರು 1 ದಶಲಕ್ಷ ಮಕ್ಕಳು ನಿರಾಶ್ರಿತರಾಗಿ ಲೆಬಿನಾನ್, ಜೋರ್ಡಾನ್, ಟರ್ಕಿ, ಇರಾಕ್ , ಈಜಿಪ್ತ, ಉತ್ತರ ಆಫ್ರಿಕಾ ಹಾಗೂ ಯುರೋಪ ಮುಂತಾದ ಕಡೆಗೆ ತೆರಳಿರುವದಿದೆ. ಲೆಬಿನಾನಂತೂ ನಿರಾಶ್ರಿತರ ಪಾಲಿನ ಮುಖ್ಯ ತಾಣ.

ಸಿರಿಯಾ ನಾಗರಿಕ ಹೋರಾಟದ ಸಂದರ್ಭದಲ್ಲಿ ಈ ಬಗೆಯ ಅಸ್ತ್ರಗಳನ್ನು ಯಾವುದೇ ಕಾರಣಕ್ಕೆ ಬಳಸಬಾರದೆಂದು ಅಂತರರಾಷ್ಟ್ರೀಯ ಮಟ್ಟದ ಒಪ್ಪಂದಕ್ಕೆ ಸಹಿ ಹಾಕಿದ್ದರೂ ಆ ರೆಡ್‌ಲೈನ್ ನ್ನು ದಾಟಿರುವದಿದೆ. ಆಮೂಲಕ ಮಾನವ ಹಕ್ಕುಗಳ ಉಲ್ಲಂಘನೆಗೂ ಅದು ಕಾರಣವಾಗಿದೆ. ಸಿರಿಯಾದ ಲಕ್ಷಾನುಗಟ್ಟಲೆ ಜನರು ಈ ಬಗೆಯ ರಸಾಯನಿಕ ಅಸ್ತ್ರದ ಧಾಳಿಗೆ ಹೆದರಿ ಇರಾಕನ ಖುರ್ದಿಸ್‌ನಲ್ಲಿ ನಿರಾಶ್ರಿತರಾಗಿ ಆಶ್ರಯಪಡೆದಿರುವದಿದೆ. 2011 ರ ಮಾರ್ಚ್ ತಿಂಗಳಿನಿಂದಲೂ ಈ ನಾಗರಿಕ ಹೋರಾಟ ಸರ್ವಾಧಿಕಾರಿ ಆಡಳಿತದ ವಿರುದ್ಧ ನಡದೇ ಇತ್ತು. ಹಾಗೆಯೇ ಅದನ್ನು ದಮನ ಮಾಡಲು, ಹತ್ತಿಕ್ಕಲು ಅನೇಕ ಬಗೆಯ ಹಲ್ಲೆಗಳು ನಡೆಯುತ್ತಲೇ ಬಂದಿವೆ. ಈ ಬಗೆಯ ಹೋರಾಟದಲ್ಲಿ ಅಲ್ಲಿಂದ ಇಲ್ಲಿಯವರೆಗೆ ಸಿರಿಯಾದಲ್ಲಿ ಸುಮಾರು 1 ಲಕ್ಷ ಹೋರಾಟಗಾರರು ಸಾವು ನೋವುಗಳನ್ನು ಅನುಭವಿಸಬೇಕಾಯಿತು. ಸದ್ಯದ ಸಂದರ್ಭದಲ್ಲಿ ಇಡೀ ಗ್ಲೋಬ್ ತೀರಾ ಗರಂ ಆಗಿರುವ ಸ್ಥಿತಿಯಲ್ಲಿದೆ. ಗ್ಲೋಬಿನ ಯಾವುದೇ ಬದಿಗೆ ನೀವು ಬೆರಳು ತಾಗಿಸಿದರೂ ಚುರ್ ಎನ್ನುವಷ್ಟು ಗರಂ ಆಗಿರುವ ಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. syria-chemical-attacksಹೀಗಿರುವಾಗ ಯಾವುದೇ ಒಂದು ರಾಷ್ಟ್ರದ ಸರ್ವಾಧಿಕಾರಿ ಧೋರಣೆ ಇಲ್ಲವೇ ಹೇಗಾದರೂ ಸರಿ ತನ್ನ ಇಜಂ ನ್ನು ಬಲಪಡಿಸಿಕೊಳ್ಳಲೇಬೇಕು ಎಂಬ ಹುಂಬತನದಿಂದ ಇಂಥಾ ಮಾರಕ ಅಸ್ತ್ರಗಳನ್ನು ಬಳಸುತ್ತಾ ನಡೆದರೆ ಭವಿಷ್ಯದಲ್ಲಿ ಭೂಮಿಯ ಮೇಲೆ ಬರೀ ವಿಷಪೂರಿತ ಕಲ್ಲು, ಮಣ್ಣು ಮಾತ್ರ ಉಳಿಯುವ ಸಾಧ್ಯತೆಯಿದೆ. ಮನುಷ್ಯನನ್ನು ಅತ್ಯಂತ ತುಚ್ಚವಾದ ಕ್ರಿಮಿಗಳನ್ನು ಒರೆಸಿಹಾಕುವಂತೆ ಸಾಯಿಸಲು ಬಳಸಲಾಗುವ ಈ ಬಗೆಯ ಅಸ್ತ್ರಗಳ ಸೃಷ್ಟಿಗಾಗಿಯೇ ನಾಗರಿಕತೆ ಎನ್ನುವುದು ಜನ್ಮ ತಾಳಿರಲಿಕ್ಕಿಲ್ಲ. ಇಂಥಾ ಅಸ್ತ್ರಗಳ ಬಳಕೆಯನ್ನು ಜೀವಪರ ಹಂಬಲ ಮತ್ತು ಖಾಳಜಿ ಇರುವ ಯಾರೂ ಸಹಿಸುವದಿಲ್ಲ. ಜಾಗತೀಕರಣದ ಸಂದರ್ಭದಲ್ಲಿ ಇಡೀ ಜಗತ್ತನ್ನು ಗ್ಲೋಬಲ್ ವಿಲೇಜ್ ಎಂದು ಸಂಬೋಧಿಸುವ ನಮಗೆ ಈ ಬಗೆಯ ಮಾರಣಹೋಮ ಭೂಮಂಡಲದ ಮೇಲೆ ಎಲ್ಲಿಯೇ ಜರುಗಿದರೂ ಈ ಗ್ಲೋಬಲ್ ವಿಲೇಜನ್ನು ಮಾನಸಿಕವಾಗಿ ಬಾಧಿಸುತ್ತದೆ. ಹೀಗೆ ಪ್ರಭುತ್ವ ಜನರ ಹೋರಾಟವನ್ನು ದಮನ ಮಾಡುವಲ್ಲಿ ತನ್ನ ಅಸಹಾಯಕತೆಯ ಸಾಧನವಾಗಿ ಇಂಥಾ ರಸಾಯನಿಕ ಅಸ್ತ್ರಗಳ ಬಳಕೆಯನ್ನು ಯಾವುದೇ ಕಾರಣಕ್ಕೂ ಮಾಡಬಾರದು.

3 thoughts on “ಪ್ರಭುತ್ವ ಮತ್ತು ಅದರ ದಮನಕಾರಿಗುಣ

  1. ಜೆ.ವಿ.ಕಾರ್ಲೊ, ಹಾಸನ

    ವಿಷಾನಿಲದ ಪ್ರಯೋಗ ಎಂದಾಕ್ಷಣ ನೆನಪಿಗೆ ಬರುವುದು ಭೋಪಾಲ್ ವಿಷಾನಿಲ ದುರಂತ. ಸಿರಿಯಾದಲ್ಲಿ ಅಸುನೀಗಿದವರಿಗೂ ಭೋಪಾಲ್ ನಲ್ಲಿ ಅಸುನೀಗಿದವರಿಗೂ ವ್ಯತ್ಯಾಸ ಕಾಣುತ್ತಿಲ್ಲ. ಒಂದು ಕೈಗಾರಿಕ ದುರಂತವೆಂದಾದರೆ, ಮತ್ತೊಂದು ಪ್ರಭುತ್ವದ (?) ಅಟ್ಟಹಾಸ. ನೈತಿಕವಾಗಿ ಆಕ್ರೋಶ ವ್ಯಕ್ತಪಡಿಸಿ ಸಿರಿಯಾಕ್ಕೆ ಬುದ್ಧಿ ಕಲಿಸಲು ಹೊರಟಿರುವ ಅಮೆರಿಕ ಮಾತ್ರ ಭೋಪಾಲ್ ಮಟ್ಟಿಗೆ ಖಳನಾಯಕ!

    Reply
  2. Naveen_H

    ಸಿರಿಯಾದ ಸರ್ವಾಧಿಕಾರಿ ಮಾಡಿದ ಈ ಕೆಲಸ ಅತ್ಯಂತ ನೀಚ ಹಾಗೂ ಹೇಯ ಕಾರ್ಯ. ತನ್ನದೇ ದೇಶದ ಜನರನ್ನು ಹಾಗೂ ನಿಷ್ಪಾಪಿ ಜನರನ್ನು ರಾಸಾಯನಿಕ ವಿಷದ ಗಾಳಿಗೆ ಸಿಲುಕಿಸಿ ಮುಂದಿನ ಮೂರು ತಲೆಮಾರು ಜನ ಈ ಹೇಯ ಕೃತ್ಯವನ್ನು ನೆನೆಯುವಂತೆ ಮಾಡಿದ್ದು ಈ ಶತಮಾನದ ಅವಘದಗಳಲ್ಲಿ ಒಂದು ಎನ್ನಬಹುದು. ಸದ್ದಾಂ ಹುಸೇನ್ ನ ಅಥವಾ ಇನ್ನಿತರೇ ಸರ್ವಾಧಿಕಾರಿಗಳ ದುರಾಡಳಿತವನ್ನು ಕಾಣದ ಇಂದಿನ ತಲೆಮಾರಿನ ಜನಕ್ಕೆ ಇದೊಂದು ದೊಡ್ಡ ಪಾಠ ಎಂದೇ ಹೇಳಬಹುದು.

    ಇನ್ನು ಅಮೇರಿಕಾ ಹಾಗೂ ಇತರೆ ಪ್ರಥಮ ರಾಷ್ಟ್ರಗಳಿಗೆ ಇದೊಂದು ವಿನ್ ವಿನ್ ಸಂಧರ್ಭ ಎಂದೇ ಹೇಳಬಹುದು. ತನ್ನದೇ ನೂರೆಂಟು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ ಈ ರಾಷ್ಟ್ರಗಳ ಅರ್ಥಿಕ ಪರಿಸ್ಥಿತಿ, ನಿರೋದ್ಯೋಗ ಮೇರೆ ಮೀರಿದ್ದರೂ ಇಂದು ಜನರ ಗಮನ ಬೇರೆಡೆ ಸೆಳೆಯುವ ಒಂದು ಅಪೂರ್ವ ಅವಕಾಶ! ಇದೂ ಕೂಡ ಏನು ಸಿರಿಯಾ ಜನರ ಒಳಿತಿಗಾಗಿ ಏನೂ ಅಲ್ಲ. ಯಾವದೋ ಒಂದು ಸಂಪತ್ತೋ, ಇಲ್ಲಾ ಇನ್ಯಾರನ್ನೋ ಹನಿಯುವ ವೇದಿಕೆಯೂ ಹೀಗೆ ಯಾವದೋ ಒಂದು ಉದ್ದೇಶವಂತೂ ಇದ್ದೇ ಇರತ್ತೆ.

    ಎಲ್ಲಕ್ಕಿಂತ ಕೆಟ್ಟ ಪರಿಸ್ತಿತಿ ಎಂದರೆ ಸಿರಿಯಾದ ಸಾಮಾನ್ಯ ಜನರದ್ದು. ಇತ್ತ ದರಿ ಅತ್ತ ಪುಲಿ ಎಂಬಂತೆ ಒಂದು ಕಡೆ ವಿಷ ಕಾರಿ ವಿಷ ಉಣಿಸುತ್ತಿರುವ ತನ್ನದೇ ದೇಶದ ಸರ್ವಾಧಿಕಾರಿ ಇನ್ನೊಂದು ಕಡೆ ಈ ಬೆಂಕಿಯಲ್ಲಿ ಯಾವ ರೀತಿ ಕಡಲೆ ಸುಟ್ಟು ತಿನ್ನಬಹುದೆಂದು ಹೊಂಚು ಹಾಕುತ್ತಿರುವ ವಿಶ್ವದ ದೊಡ್ಡಣ್ಣ!! ಇಬ್ಬರ ಮಧ್ಯ ಸಿರಿಯಾದ ಪ್ರಜೆ ನುಜ್ಜುಗಾಯಿ!!

    Reply
  3. Srini

    My only question to America is, why Pakistan which produced global terrorism is still their best friend? Why is only they prefer to target Oil producing countries?

    Reply

Leave a Reply

Your email address will not be published. Required fields are marked *