ಅಕ್ಷೀ – ಒಂದು ಸೀನಿನ ವೃತ್ತಾಂತ…

ಮೂಲ: ಆಂಟೊನ್ ಚೆಕೊವ್
ಅನುವಾದ: ಜೆ.ವಿ.ಕಾರ್ಲೊ

ಅದೊಂದು ಸುಂದರ ಸಂಜೆ. ಒಂದು ಸರಕಾರಿ ಧಫ್ತರಿನಲ್ಲಿ ಕಾರಕೂನನಾಗಿದ್ದ ದಿಮಿಟ್ರಿಚ್ ಚೆರ್ವಾಕ್ಯೊವ್ ರಂಗಮಂದಿರದ ಎರಡನೇ ಸಾಲಿನಲ್ಲಿ ಕುಳಿತುಕೊಂಡು ಒಂದು ಸಂಗೀತ ನಾಟಕವನ್ನು ನೋಡುವುದರಲ್ಲಿ ತಲ್ಲೀನನಾಗಿದ್ದ. ಅವನು ತುಂಬಾ ಹರ್ಷಚಿತ್ತನಾಗಿದ್ದ. ಆದರೆ, ಇದ್ದಕ್ಕಿದ್ದಂತೆ… ಹೌದು, ಸಾಮಾನ್ಯವಾಗಿ ಈ ಇದ್ದಕ್ಕಿದ್ದಂತೆ ಎನ್ನುವ ಪದ ಹೆಚ್ಚಾಗಿ ಕತೆ ಪುಸ್ತಕಗಳಲ್ಲಿ ಧುತ್ತನೇ ನಮ್ಮೆದುರು ಎದ್ದು ನಿಲ್ಲುತ್ತದೆ! ಈ ಲೇಖಕರು ಹೇಳುವುದೂ ದಿಟವೇ. ಜಿವನದಲ್ಲಿ ಏನೆಲ್ಲಾ ಅನೀರಿಕ್ಷಿತ ತಿರುವುಗಳು!

ಹೌದು, ಇದ್ದಕ್ಕ್ಕಿದ್ದಂತೆ ದಿಮಿಟ್ರಿಚಿಯ ಕಣ್ಣುಗಳು ಕಿರಿದಾದವು. ಹಣೆಯ ಮೇಲೆ ನೆರಿಗೆಗಳು ಮೂಡಿದವು. ಒಂದು ಕ್ಷಣ ಉಸಿರೇ ನಿಂತು ಹೋದಂತೆ… ಅವನು ಶಿರವನ್ನು ಬಾಗಿಸಿ.. “ಅಕ್ಷೀ..” ಎಂದು ಭಯಂಕರವಾಗಿ ಸೀನಿದ!

ಸೀನುವುದೇನು ಮಹಾಪರಾಧವಲ್ಲ. ಎಲ್ಲರೂ ಸೀನುತ್ತಾರೆ. ಎಲ್ಲೆಂದರಲ್ಲಿ ಸೀನುತ್ತಾರೆ. ರೈತನಿಂದಿಡಿದು ಪೋಲಿಸ್ ಅಧಿಕಾರಿ, ರಾಜಕಾರಣಿವರೆಗೆ ಎಲ್ಲರೂ ಸೀನುತ್ತಾರೆ. ಸೀನುವ ಕ್ರಿಯೆಯಲ್ಲಿ ನಾಚಿಕೆಪಡುವಂತದೇನಿರಲಿಲ್ಲ. ಜೇಬಿನಿಂದ ಕರವಸ್ತ್ರವನ್ನು ಹೊರತೆಗೆದು ಚೆರ್ವಾಕ್ಯೊವ್ ಮುಖವನ್ನು ಒರೆಸಿದ. ಅವನೊಬ್ಬ ಸುಸಂಸ್ಕೃತ ಮನುಷ್ಯನಾದುದರಿಂದ ತನ್ನ ಅನೀರಿಕ್ಷಿತ ಸೀನಿನಿಂದ ಯಾರಿಗಾದರೂ ತೊಂದರೆಯಾಯ್ತೇನೋ ಎಂಬ ದಿಗಿಲಿನಿಂದ ಸುತ್ತಲೂ ಒಮ್ಮೆ ಕಣ್ಣಾಡಿಸಿದ..

ತನ್ನ ಮುಂದಿನ ಸಾಲಿನಲ್ಲಿ ಕುಳಿತಿದ್ದ ವೃದ್ದನೊಬ್ಬ ವಟಗುಟ್ಟುತ್ತಾ ಕರವಸ್ತ್ರದಿಂದ ತನ್ನ ಬೋಳು ತಲೆಯನ್ನು ಒರೆಸಿಕೊಳ್ಳುತ್ತಿರುವುದು ಅವನ ಗಮನಕ್ಕೆ ಬಂತು. ಆ ಮುದುಕ ಸಾರಿಗೆ ಇಲಾಖೆಯ ಮುಖ್ಯಾಧಿಕಾರಿ ಜನರಲ್ ಬ್ರಿಜ್ಝಾಲೊವ್ ಎಂದು ಗುರುತು ಹಿಡಿಯಲು ಚೆರ್ವಾಕ್ಯೊವಾನಿಗೆ ತಡವಾಗಲಿಲ್ಲ.

‘ನನ್ನ ಸೀನು ಖಂಡಿತಾ ಅವನ ಮೇಲೆ ಹಾರಿದೆ!’ ಚೆರ್ವಾಕ್ಯೊವ್ ದಿಗಿಲುಗೊಂಡ. ‘ಅವನು ನನ್ನ ಇಲಾಖೆಯ ಅಧಿಕಾರಿಯಲ್ಲದಿದ್ದರೂ ಕ್ಷಮೆ ಕೇಳುವುದು ಶಿಷ್ಠಾಚಾರ..’

ಚೆರ್ವಾಕ್ಯೊವ್ ಮುಂದಕ್ಕೆ ಬಾಗಿ, ಅಪರಾಧಿ ಪ್ರಜ್ಞೆಯಿಂದ ಜನರಲ್ ಬ್ರಿಜ್ಝಾಲೊವಾನ ಬಲಗಿವಿಯಲ್ಲಿ ಮೆಲ್ಲಗೆ ಉಸುರಿದ:
“ಸರ್, ದಯವಿಟ್ಟು ಕ್ಷಮಿಸಿ. ಅನೀರಿಕ್ಷಿತವಾಗಿ ಸೀನಿದ್ದು ನಿಮ್ಮ ಮೇಲೆ ಹಾರಿತು.”
“ಪರವಾಯಿಲ್ಲ..ಪರವಾಯಿಲ್ಲಾ!” ಜನರಲ್ ಉತ್ತರಿಸಿದ.
“ಸರ್.. ಖಂಡಿತವಾಗಿಯೂ ನಾನು…”
“ಛೆ!.. ಏನಿದು? ನನಗೆ ನಾಟಕ ನೋಡಲು ಬಿಡುವೆಯಾ?” ಮುದುಕ ಕಿರಿಕಿರಿಗೊಂಡು ಬೈದ.

ಚೆರ್ವಾಕ್ಯೊವ್ ಲಜ್ಜೆಯಿಂದ ಮುದುರಿಕೊಂಡ. ಅವನು ಬಲವಂತದಿಂದ ರಂಗ ಮಂಚದ ಕಡೆಗೆ ದೃಷ್ಟಿ ಹರಿಸಿದ. ಅವನ ಖುಷಿ ಮಾಯವಾಗಿತ್ತು. ಅವನು ಮಾನಸಿಕವಾಗಿ ನರಳತೊಡಗಿದ. ಮಧ್ಯಂತರದ ವೇಳೆಯಲ್ಲಿ ಅವನು ಎದ್ದು ಜನರಲ್ ಬ್ರಿಜ್ಝಾಲೊವಾನ ಬಳಿ ಎದ್ದು ಹೊದ. ಲಜ್ಜೆಯನ್ನು ಅದುಮಿಡುತ್ತಾ,

“ಸರ್, ನಾನು ನಿಮ್ಮ ಮೇಲೆ ಸೀನಿದೆ…ಆದರೆ ನನ್ನ ಉದ್ದೇಶ..” ಎಂದು ಶುರು ಮಾಡಿದ.

ಜನರಲ್ ಬ್ರಿಜ್ಝಾಲೊವ್ ಕೈಯನ್ನು ಮೇಲೆತ್ತುತ್ತಾ, “ಆದದ್ದು ಆಗಿ ಹೋಯ್ತು. ನೀನು ಸುಖಾಸುಮ್ಮನೆ ನನ್ನ ಗೋಳು ಹುಯ್ಕೋಬೇಡ.. ನಾನಾಗಲೇ ಅದನ್ನು ಮರೆತುಬಿಟ್ಟಿದ್ದೇನೆ.” ಎಂದರು ಖಾರವಾಗಿ. ಅವರು ಸಹನೆ ಕಳೆದುಕೊಳ್ಳುವ ಹಂತದಲ್ಲಿದ್ದರು.

’ಮುದುಕ ಅಷ್ಟರಲ್ಲೇ ಮರೆತುಬಿಟ್ಟಿದ್ದಾನಂತೆ! ಆದರೆ ಅವನ ಕಣ್ಣುಗಳಲ್ಲಿ ಹಾಗೆ ಕಾಣುತ್ತಿಲ್ಲ. ಸಿಟ್ಟಿನ ಜ್ವಾಲೆ ಇನ್ನೂ ಉರಿಯುತ್ತಿದೆ! ಆದರೂ ಮಾತನಾಡಲು ಮುದುಕನಿಗೆ ಏನೋ ಬಿಗುಮಾನ! ನಾನು ಅವನಿಗೆ ಸರಿಯಾಗಿ ಮನದಟ್ಟು ಮಾಡಿಕೊಡಬೇಕು. ಸೀನುವುದು ಒಂದು ಪ್ರಾಕೃತಿಕ ಘಟನೆ. ಯಾರಿಂದ ತಡೆಯಲು ಸಾಧ್ಯ? ಈ ಕ್ಷಣ ಮದುಕನಿಗೆ ಇದು ಅನುಚಿತವೆಂದು ತೋರುತ್ತಿಲ್ಲದಿರಬಹುದು. ಆದರೆ ಮನೆಗೆ ಹೋದ ನಂತರ ಅವನ ಅಭಿಪ್ರಾಯ ಬದಲಾಗುವುದಿಲ್ಲವೆಂದು ಏನು ಖಾತ್ರಿ.’

ಅಂದು ರಾತ್ರಿ ಚೆರ್ವಾಕ್ಯೊವ್ ರಂಗಮಂದಿರದಲ್ಲಿ ಘಟಿಸಿದ ಸಂಗತಿಯನ್ನು ಮಡದಿಯ ಬಳಿ ಕೂಲಂಕುಷವಾಗಿ ತಿಳಿಸಿದ. ಮೊದಲಿಗೆ ಅವಳು ಇಂತ ಕ್ಷುಲ್ಲಕ ಸಂಗತಿಯನ್ನು ತನ್ನ ಗಂಡ ಅನಾವಶ್ಯವಾಗಿ ದೊಡ್ಡದು ಮಾಡುತ್ತಿದ್ದಾನೆ ಎಂದುಕೊಂಡಳಾದರೂ, ಮುದುಕ, ಜನರಲ್ ಎಂದು ಗೊತ್ತಾದಾಕ್ಷಣ ಸಹಜವಾಗಿ ಆತಂಕಗೊಂಡಳು. ಮುದುಕ ಬೇರೊಂದು ಇಲಾಖೆಯ ಜನರಲ್ ಎಂದು ತಿಳಿದಾಗ ಕೊಂಚ ನಿರಾಳಳಾದಳು.

“ಏನಾದರೂ ಆಗಲಿ. ನಾಳೆ ಮತ್ತೊಮ್ಮೆ ಕಂಡು ಅವನ ಕ್ಷಮೆ ಕೇಳಿ. ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕೆಂದು ಅರಿಯದ ಅನಾಗರಿಕ ಎಂದುಕೊಂಡಾನು.” ಎಂದಳು.

“ನಿಜ ಕಣೆ! ನಾನು ಹಾಗೇ ಅಂದುಕೊಂಡೆ. ಅವನೊಬ್ಬ ವಿಕ್ಷಿಪ್ತ ಮನುಷ್ಯ. ನಾನು ಎಷ್ಟೊಂದು ಭಾರಿ ಕ್ಷಮೆ ಕೇಳಿಕೊಂಡರೂ ಅವನ ಪ್ರತಿಕ್ರಿಯೆ ನನಗ್ಯಾಕೋ ಸರಿ ಕಾಣಬರಲಿಲ್ಲ.”

ಮರುದಿನ ನೀಟಾಗಿ ಶೇವ್ ಮಾಡಿಕೊಂಡು, ಗರಿಗರಿಯಾಗಿ ಇಸ್ತ್ರಿ ಮಾಡಿದ ಸಮವಸ್ತ್ರವನ್ನು ಧರಿಸಿ ಚೆರ್ವಾಕೊವ್ ಜನರಲ್ ಬ್ರಿಜ್ಝಾಲೋವನ ಕಚೇರಿಗೆ ಹೋದ. government-clerkಜನರಲನ ಕಚೇರಿ ಅಹವಾಲು ಸಲ್ಲಿಸುವ ಜನರಿಂದ ಕಿಕ್ಕಿರಿದು ತುಂಬಿತ್ತು. ಕೊನೆಗೂ ಜನರಲ್ ಬ್ರಿಜ್ಝಾಲೊವಾನ ದೃಷ್ಟಿ ಚೆರ್ವಾಕ್ಯೊವಾನ ಮೇಲೆ ಹರಿಯಿತು. ಏನೆಂಬಂತೆ ಜನರಲ್ ಹುಬ್ಬು ಏರಿಸಿದರು.

“ಸರ್..” ಚೆರ್ವಾಕೊವ್ ಶುರುವಿಟ್ಟುಕೊಂಡ. “ನಿನ್ನೆ ಸಂಜೆ ಆಕಸ್ಮಿಕವಾಗಿ ನಾನು ನಿಮ್ಮ ಮೇಲೆ ಸೀನಿದೆ ಸರ್,.. ಖಂಡಿತವಾಗಿಯೂ ನಾನು ಉದ್ದೇಶಪೂರ್ವಕವಾಗಿ.. ಸರ್, ನನ್ನನ್ನು ನಂಬಿ. ಖಂಡಿತವಾಗಿಯೂ ಇದೊಂದು ಆಕಸ್ಮಿಕ..”

ಜನರಲ್‌ನ ವದನ ಕೆಂಪಗಾಗತೊಡಗಿತು. “ಓಹ್..” ಅವನು ಅವಡುಗಚ್ಚಿದ. “ಇನ್ಯಾರಾದರೂ ಇದ್ದಾರೆಯೇ?” ಸುತ್ತಾ ದೃಷ್ಟಿ ಹರಿಸುತ್ತಾ ಅವನು ಕೇಳಿಕೊಂಡ.

’ಜನರಲ್ ಸಾಹೇಬರು ಮುನಿಸಿಕೊಂಡಿದ್ದಾರೆ!’ ಚೆರ್ವಾಕ್ಯೊವ್ ತನ್ನಷ್ಟಕ್ಕೆ ಹೇಳಿಕೊಂಡ. ಅವನು ಹತಾಶನಾದ. ಇಷ್ಟಕ್ಕೆ ಬಿಡಬಾರದು. ಅವನಿಗೆ ಸರಿಯಾಗಿ ಅರ್ಥ ಮಾಡಿಸಬೇಕು. ಚೆರ್ವಾಕ್ಯೊವ್ ನಿಶ್ಚಯಿಸಿದ.

ಜನರಲ್ ಕಟ್ಟ ಕಡೆಯ ಮನುಷ್ಯನೊಬ್ಬನ ಅಹವಾಲನ್ನು ಕೇಳಿ ಎದ್ದು ತನ್ನ ಖಾಸಗಿ ಕಛೇರಿಯ ಕಡೆ ಹೆಜ್ಜೆ ಹಾಕತೊಡಗಿದ. ಚೆರ್ವಾಕ್ಯೊವ್ ಸರಸರನೆ ಹೆಜ್ಜೆ ಹಾಕುತ್ತಾ, ಜನರಲನ ಬಳಿಗೆ ಧಾವಿಸಿದ.

“ಸರ್.., ನಿಜವಾಗಿಯೂ ಹೇಳುತ್ತಿದ್ದೇನೆ.. ನನ್ನನ್ನು ನಂಬಿ..”

ಜನರಲ್ ಬ್ರಿಜ್ಝಾಲೊವ್ ಹತಾಶೆಯಿಂದ ತಲೆಯನ್ನಾಲ್ಲಾಡಿಸಿದ.

“ಸರ್.. ನೀವು ನನ್ನನ್ನು ಅಣಕಿಸುತ್ತಿದ್ದೀರಿ!..” ಜನರಲ್ ಬ್ರಿಜ್ಝಾಲೊವ್ ಕಚೇರಿಯ ಬಾಗಿಲನ್ನು ರಪ್ಪನೇ ಅವನ ಮುಖದ ಮೇಲೆಂಬಂತೆ ಅಪ್ಪಳಿಸಿದಾಗ ಚೆರ್ವಾಕ್ಯೊವ್ ಅವಲತ್ತುಕೊಂಡ.

ಚೆರ್ವಾಕೊವ್ ನಖಶಿಖಾಂತ ಕಂಪಿಸುತ್ತಿದ್ದ. ’ಮುದುಕ ನನ್ನ ಮಾತು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಅವನಿಗೆ ದೈಯ್ಯ ಹೊತ್ತುಕೊಂಡು ಹೊಗಲಿ!.. ಅವನಿಗೊಂದು ಪತ್ರ ಬರೆಯುತ್ತೇನೆ.. ಸುಮ್ಮನೇ ಕೂರುವವನಲ್ಲ ನಾನು.. ನಾಳೆ ಮತ್ತೆ ಭೇಟಿಯಾಗುತ್ತೇನೆ..’ ಹೀಗೆಂದುಕೊಳ್ಳುತ್ತಾ ಚೆರ್ವಾಕ್ಯೊವ್ ಆ ಸಂಜೆ ಮನೆಗೆ ಹೋದ.

ಎಷ್ಟು ತಲೆಕೆಡಿಸಿಕೊಂಡರು ಪತ್ರವನ್ನು ಹೇಗೆ ಆರಂಬಿಸುವುದೆಂದೇ ಅವನಿಗೆ ಗೊತ್ತಾಗಲಿಲ್ಲ. ನಾಳೆ ಜನರಲನಿಗೆ ಭೇಟಿಯಾಗುವುದೇ ಲೇಸೆಂದು ನಿರ್ಧರಿಸಿದ.

“ಸರ್.., ದಯವಿಟ್ಟು ನಿಮ್ಮನ್ನು ಗೇಲಿ ಮಾಡುತ್ತಿದ್ದೇನೆಂದು ಭಾವಿಸಬೇಡಿ…” ಮಾರನೆಯ ಬೆಳಿಗ್ಗೆ ಜನರಲ್‌ನ ಆಫೀಸಿಗೆ ಕಾಲಿಡುತ್ತಿದ್ದಂತೆಯೇ ಚೆರ್ವಾಕ್ಯೊವ್ ಹೇಳತೊಡಗಿದ. “ನಿಮ್ಮ ಮೇಲೆ ಆಕಸ್ಮಿಕವಾಗಿ ಸೀನಿದ ನನ್ನನ್ನು ದಯವಿಟ್ಟು ಕ್ಷಮಿಸಬೇಕು..”

“ತೊಲಗಾಚೆ ಮೂರ್ಖ!! “ಜನರಲ್ ಬ್ರಿಜ್ಝಾಲೊವ್ ಸಿಟ್ಟಿನಿಂದ ಕಿರುಚಿದ. ಅವನು ಕಂಪಿಸುತ್ತಿದ್ದ. ಅವನ ಮುಖ ಕಪ್ಪಿಟ್ಟಿತ್ತು.

“ಸರ್..!!” ಚೆರ್ವಾಕ್ಯೊವಾನ ಬಾಯಿಂದ ಮಾತುಗಳೇ ಹೊರಡಲಿಲ್ಲ.

“ತೊಲಗಾಚೆ..!!” ಜನರಲ್ ನೆಲಕ್ಕೆ ಕಾಲನ್ನು ಗುದ್ದುತ್ತಾ ಮತ್ತೊಮ್ಮೆ ಅರಚಿದ.

ಚೆರ್ವಾಕ್ಯೊವಾನ ಹೊಟ್ಟೆ ತೊಳಸಿದಂತಾಯ್ತು. ಅವನು ತೂರಾಡುತ್ತಾ ಹೊರಬಂದ. ಅವನ ದೃಷ್ಟಿ ಮಂದವಾಗಿತ್ತು. ಕಿವಿಗಳು ಕೇಳಿಸುತ್ತಿರಲಿಲ್ಲ. ಅವನು ಹೇಗೆ ಮನೆಯನ್ನು ತಲುಪಿದ ಎನ್ನುವುದೇ ಆಶ್ಚರ್ಯದ ವಿಷಯ. ಸಮವಸ್ತ್ರವನ್ನು ಧರಿಸಿಕೊಂಡೇ ಅವನು ಸೋಫಾದ ಮೇಲೆ ಅಡ್ಡಾದ. ಹಾಗೆಯೇ ಸತ್ತು ಹೋದ.

***

(Anton Chekov ನ ‘The Death of a Government Clerk’ ಕತೆಯ ಅನುವಾದ)

Leave a Reply

Your email address will not be published.