ಆಮ್ ಆದ್ಮಿ ಪಕ್ಷ ಭಿನ್ನಾಭಿಪ್ರಾಯ ಹತ್ತಿಕ್ಕದಿರಲಿ

– ಆನಂದ ಪ್ರಸಾದ್

ಭಿನ್ನ ಅಭಿಪ್ರಾಯಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳ. ಭಿನ್ನ ಅಭಿಪ್ರಾಯಗಳನ್ನು ದಮನಿಸುವುದು ಸರ್ವಾಧಿಕಾರಿ ಧೋರಣೆಯನ್ನು ಉತ್ತೇಜಿಸಿದಂತೆ ಆಗುತ್ತದೆ. ಹೀಗಾಗಿ ದೇಶದಲ್ಲಿ ಬಹಳಷ್ಟು ಕುತೂಹಲ ಉಂಟುಮಾಡಿರುವ ಆಮ್ ಆದ್ಮಿ ಪಕ್ಷದ ನಡವಳಿಕೆಯ ಬಗ್ಗೆ ದೇಶಾದ್ಯಂತ ಜನ ಗಮನಿಸುತ್ತಿದ್ದಾರೆ. ಇತ್ತೀಚೆಗೆ ಆಮ್ ಆದ್ಮಿ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಮಧು ಭಾದುರಿ ಪಕ್ಷದ ಬಗ್ಗೆ ಭ್ರಮನಿರಸನ ಹೊಂದಿ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇದರ ಬಗ್ಗೆ ಆಮ್ ಆದ್ಮಿ ಪಕ್ಷದ ನಾಯಕರು ಮರುಚಿಂತನೆ ನಡೆಸಬೇಕಾದುದು ಅಗತ್ಯ. ಮಧು ಭಾದುರಿ ಅವರು ಯಾವುದೇ ಅಧಿಕಾರ ಸ್ಥಾನಕ್ಕಾಗಿ ಆಗ್ರಹಿಸಿ ಅದು ದೊರಕದೆ ಹತಾಶರಾಗಿ ಪಕ್ಷದಿಂದ ಹೊರನಡೆದದ್ದು ಅಲ್ಲ. ಹೀಗಾಗಿ ಇದರ ಬಗ್ಗೆ ಪಕ್ಷದ ನಾಯಕರು ಅವರಿಗೆ AAP-Madhu-Bhaduriನಿಜವಾಗಿಯೂ ಪ್ರಜಾಪ್ರಭುತ್ವ ಹಾಗೂ ಮೌಲ್ಯಗಳ ಬಗ್ಗೆ ಕಾಳಜಿ ಇರುವುದು ನಿಜವಾದರೆ ಪುನಃ ಯೋಚಿಸಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವುದು ಒಳ್ಳೆಯದು. ಇಲ್ಲದೆ ಹೋದರೆ ದೇಶಾದ್ಯಂತ ಪಕ್ಷದ ಬಗ್ಗೆ ತಪ್ಪು ಕಲ್ಪನೆಗಳು ಹಾಗೂ ಅಭಿಪ್ರಾಯಗಳು ಬೆಳೆಯಲು ಕಾರಣವಾದೀತು. ಮಧು ಭಾದುರಿ ಇತ್ತೀಚೆಗೆ ನಡೆದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಒಂದು ನಿರ್ಣಯ ಮಂಡಿಸುವ ಕುರಿತು ಮೊದಲೇ ಪಕ್ಷಕ್ಕೆ ಸೂಚನೆ ಸಲ್ಲಿಸಿದ್ದರು ಎಂದೂ ಆದರೆ ಪಕ್ಷದ ಕಾರ್ಯಕಾರಿಣಿಯಲ್ಲಿ ಅದಕ್ಕೆ ಅವಕಾಶ ನೀಡದೆ ತಮ್ಮನ್ನು ಹತ್ತಿಕ್ಕಲಾಯಿತೆಂದು ಅವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಅವರು ಸಭೆಯಲ್ಲಿ ಮಂಡಿಸಲು ಬಯಸಿದ ಗೊತ್ತುವಳಿ ಇತ್ತೀಚೆಗೆ ದೆಹಲಿ ಸರ್ಕಾರದ ಕಾನೂನು ಸಚಿವ ಸೋಮನಾಥ್ ಭಾರತಿ ವಿದೇಶಿ ಮಹಿಳೆಯರ ಮೇಲೆ ತನ್ನ ಬೆಂಬಲಿಗರೊಡಗೂಡಿ ಕಾನೂನನ್ನು ಕೈಗೆತ್ತಿಕೊಂಡು ಕಾನೂನುಬಾಹಿರವಾಗಿ ನಡೆದುಕೊಂಡ ಬಗ್ಗೆ ಖಂಡಿಸಿ ಹಾಗೂ ಇದರ ಬಗ್ಗೆ ಪಕ್ಷವು ಜನತೆಯ ಕ್ಷಮೆ ಯಾಚಿಸಬೇಕೆಂಬ ಬೇಡಿಕೆ ಹೊಂದಿತ್ತು. ಇದಕ್ಕೆ ಅವಕಾಶ ಕೊಡದ ರೀತಿಯಲ್ಲಿ ಆಮ್ ಆದ್ಮಿ ಪಕ್ಷವು ನಡೆದುಕೊಂಡಿದ್ದರೆ ಅದು ತಪ್ಪು ನಡವಳಿಕೆಯಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಪಾರದರ್ಶಕತೆಗೆ ಒತ್ತು ಕೊಡುವ ಹಾಗೂ ಇತರ ಪಕ್ಷಗಳಿಗಿಂಥ ಭಿನ್ನ ಎಂದು ಹೇಳಿಕೊಳ್ಳುವ ಆಮ್ ಆದ್ಮಿ ಪಕ್ಷ ಇದನ್ನು ಹತ್ತಿಕ್ಕಬೇಕಾಗಿರಲಿಲ್ಲ. ಪಕ್ಷದ ವತಿಯಿಂದ ತಪ್ಪಾಗಿದ್ದರೆ ಅದನ್ನು ಒಪ್ಪಿಕೊಳ್ಳುವುದರಿಂದ ಹಾಗೂ ವಿನೀತವಾಗಿ ಕ್ಷಮೆ ಯಾಚಿಸುವುದರಿಂದ ಪಕ್ಷದ ವರ್ಚಸ್ಸು ಹೆಚ್ಚಾಗುತ್ತದೆಯೇ ವಿನಃ ಕಡಿಮೆ ಆಗಲಾರದು.

ಮಧು ಭಾದುರಿ ಅವರು ಮಹಿಳೆಯರ ವಿಷಯದಲ್ಲಿ ಆಮ್ ಆದ್ಮಿ ಪಕ್ಷ ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆಯೂ ಭ್ರಮನಿರಸನಗೊಂಡಿದ್ದಾರೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇದು ಕೂಡ ಆಮ್ ಆದ್ಮಿ ಪಕ್ಷ ಚಿಂತಿಸಬೇಕಾದ ಗಂಭೀರ ವಿಚಾರವೇ ಆಗಿದೆ. AAP-Somnath-Bhartiಮಹಿಳೆಯರ ಬಗ್ಗೆ ಸಮಾಜದಲ್ಲಿ ಇರುವ ರೂಢಿಗತ ವಿಚಾರಗಳ ಪರವಾಗಿ ಭಾವನಾತ್ಮಕವಾಗಿ ಜನರನ್ನು ಕೆರಳಿಸಿ ಅದರ ಪ್ರಯೋಜನ ಪಡೆಯುವುದು ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ. ಉದಾಹರಣೆಗೆ ಹರ್ಯಾಣದಲ್ಲಿ ಖಾಪ್ ಪಂಚಾಯತಿಗಳ ಬೆಂಬಲವನ್ನು ಆಮ್ ಆದ್ಮಿ ಪಕ್ಷ ಕೇಳಿದೆ. ಮಹಿಳೆಯರು ಮೊಬೈಲ್ ಹೊಂದುವುದನ್ನು ನಿಷೇಧಿಸುವ ಹಾಗೂ ಅಂತರ್ಜಾತಿ ಪ್ರೇಮ ವಿವಾಹಗಳಲ್ಲಿ ಪ್ರೇಮಿಗಳಿಗೆ ಮರಣದಂಡನೆ ವಿಧಿಸುವ ಖಾಪ್ ಪಂಚಾಯತಿಗಳ ಬೆಂಬಲ ಪಡೆಯುವುದು ಎಷ್ಟರ ಮಟ್ಟಿಗೆ ಸಮಂಜಸ ಎಂಬುದು ಅವರ ಪ್ರಶ್ನೆಯಾಗಿದೆ. ಅವರು ಪಕ್ಷದ ಬಗ್ಗೆ ಭ್ರಮನಿರಸನಗೊಳ್ಳಲು ಕಾರಣವಾದ ಇನ್ನೊಂದು ಅಂಶ ದೆಹಲಿಯಲ್ಲಿ ನಿರಾಶ್ರಿತರಿಗೆ ಚಳಿಯಿಂದ ರಕ್ಷಣೆ ನೀಡಲು ಸರ್ಕಾರ ವಿಫಲವಾಗಿ ನೂರಕ್ಕೂ ಅಧಿಕ ಜನ ಸತ್ತದ್ದು ಮತ್ತು ಇದರ ಬಗ್ಗೆ ಸರ್ಕಾರ ಅವರು ನೀಡಿದ ಸಲಹೆಯನ್ನು ಪರಿಗಣಿಸಲಿಲ್ಲ ಎಂಬುದು. ಅವರು ನಿರಾಶ್ರಿತರಿಗೆ ಚಳಿಯಿಂದ ರಕ್ಷಣೆ ನೀಡಲು ಸೂಕ್ತ ಆಶ್ರಯ ತಾಣ ನಿರ್ಮಿಸುವವರೆಗೆ ಅವರಿಗೆ ರಾತ್ರಿಯ ವೇಳೆ ಶಾಲೆಗಳಲ್ಲಿ ಆಶ್ರಯ ನೀಡುವ ಸಲಹೆಯನ್ನು ಅವರು ಪಕ್ಷಕ್ಕೆ ನೀಡಿದ್ದರು, ಅದನ್ನು ಪಕ್ಷ ಪರಿಗಣಿಸಲಿಲ್ಲ ಎಂದೂ ಇದರ ಪರಿಣಾಮವಾಗಿ ನೂರಕ್ಕೂ ಅಧಿಕ ನಿರಾಶ್ರಿತರು ಸತ್ತರು ಎಂಬುದು ಅವರ ಬೇಸರಕ್ಕೆ ಕಾರಣ. ಒಬ್ಬ ಒಳ್ಳೆಯ ನಾಯಕ ಎಲ್ಲರಿಂದಲೂ ಸಲಹೆಗಳನ್ನು ತೆಗೆದುಕೊಳ್ಳುತ್ತಾನೆ ಮತ್ತು ತೆಗೆದುಕೊಳ್ಳಬೇಕು ಕೂಡ. ಹೀಗಾಗಿ ಮಧು ಭಾದುರಿಯಂಥ ಹಿರಿಯರು ಸಲಹೆ ನೀಡಿದರೆ ಅದನ್ನು ಕಡೆಗಣಿಸುವುದು ಸೂಕ್ತ ಎನಿಸುವುದಿಲ್ಲ. ಪಕ್ಷ ಈ ಬಗ್ಗೆ ಚಿಂತನೆ ನಡೆಸಲಿ. ಮಹಾತ್ಮಾ ಗಾಂಧಿಯವರು ಎಲ್ಲರಿಂದಲೂ ಅದರಲ್ಲೂ ಮುಖ್ಯವಾಗಿ ಜನಸಾಮಾನ್ಯರಲ್ಲಿ ಸಾಮಾನ್ಯರಿಂದಲೂ ಸಲಹೆಗಳನ್ನು ಪಡೆಯುತ್ತಿದ್ದರು ಮತ್ತು ಅದರ ಬಗ್ಗೆ ಚಿಂತನೆ ನಡೆಸುತ್ತಿದ್ದರು. ಹೀಗಾಗಿಯೇ ಅವರು ಇಡೀ ದೇಶ ಮೆಚ್ಚುವ (ಕೆಲವು ಪ್ರತಿಗಾಮಿ ಕರ್ಮಠ ಜನರನ್ನು ಹೊರತುಪಡಿಸಿ) ಹಾಗೂ ಬಹಳ ದೊಡ್ಡ ಜನಸಮುದಾಯವನ್ನು ಪ್ರಭಾವಿಸುವ ನಾಯಕರಾಗಿ ಬೆಳೆಯಲು ಸಾಧ್ಯವಾಯಿತು. ಮಾಧ್ಯಮಗಳಲ್ಲಿ ಪಕ್ಷದ ನಾಯಕರ ಬಗ್ಗೆ ಹಾಗೂ ಪಕ್ಷದ ನಿಲುವುಗಳ ಬಗ್ಗೆ ಬರುವ ಟೀಕೆ ಟಿಪ್ಪಣಿಗಳನ್ನು ಗಂಭೀರವಾಗಿ ಅವಲೋಕಿಸುತ್ತಾ ತಾವು ಎಲ್ಲಿ ತಪ್ಪಿದ್ದೇವೆ ಎಂಬುದನ್ನು ಆಮ್ ಆದ್ಮಿ ಪಕ್ಷ ಮನಗಾಣಬೇಕು ಮತ್ತು ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಿರಬೇಕು. ಜನರ ಬೆಂಬಲ ಪಡೆಯಬೇಕಾದರೆ ಆಮ್ ಆದ್ಮಿ ಪಕ್ಷವು ಇತರ ಸಾಂಪ್ರದಾಯಿಕ ಪಕ್ಷಗಳಿಗಿಂಥ ಭಿನ್ನವಾಗಿ ಮತ್ತು ಪಾರದರ್ಶಕವಾಗಿ ನಡೆದುಕೊಳ್ಳುವುದು ಅತ್ಯಗತ್ಯ. ಅರವಿಂದ ಕೇಜ್ರಿವಾಲ್ ಹಾಗೂ ಸಂಗಡಿಗರು ತಮ್ಮ ಉನ್ನತ ಹುದ್ಧೆಗಳನ್ನು ಬಿಟ್ಟು ವ್ಯವಸ್ಥೆ ಪರಿವರ್ತನೆ ಮಾಡಲು ರಾಜಕೀಯಕ್ಕೆ ಬಂದದ್ದು, ಅಧಿಕಾರಕ್ಕಾಗಿ ಅಲ್ಲ ಎಂಬುದನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಹಾಗೂ ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಚಿಂತನೆಗಳನ್ನು ಸದಾ ಗಮನದಲ್ಲಿರಿಸಿಕೊಳ್ಳಬೇಕು. ಇದು ಅಧಿಕಾರದ ಅಮಲಿನಿಂದ ದಾರಿ ತಪ್ಪುವುದನ್ನು ತಡೆಯಬಲ್ಲದು.

ಇತ್ತೀಚೆಗಿನ ಆಮ್ ಆದ್ಮಿ ಪಕ್ಷದ ನಡವಳಿಕೆಗಳು ಪಕ್ಷವು ಸರಿಯಾದ ದಾರಿಯಲ್ಲಿ ಸಾಗುತ್ತಾ ಇಲ್ಲ ಎಂಬ ಭಾವನೆಯನ್ನು ದೇಶದಲ್ಲಿ ಉಂಟು ಮಾಡಿವೆ. ಪಕ್ಷದ ಉನ್ನತ ನಾಯಕತ್ವ ಈ ಬಗ್ಗೆ ಗಮನ ಹರಿಸಿ ತಿದ್ದಿಕೊಳ್ಳದೆ ಹೋದರೆ ಪಕ್ಷದ ಬೆಳವಣಿಗೆಯ ಮೇಲೆ ಗಂಭೀರ ಋಣಾತ್ಮಕ ಪರಿಣಾಮಗಳು ಆಗಬಹುದು. ಸೋಮನಾಥ್ ಭಾರತಿ ಅವರ ವಿಷಯದಲ್ಲಿ ಪಕ್ಷವು ನಡೆದುಕೊಂಡ ಅಸಮರ್ಪಕ ನೀತಿಯ ನಂತರ ಹಾಗೂ ದೆಹಲಿಯಲ್ಲಿ ಸರ್ಕಾರದ ಮಂತ್ರಿಗಳು ಹಾಗೂ ಮುಖ್ಯಮಂತ್ರಿಯೇ ಕಾನೂನು ಉಲ್ಲಂಘಿಸಿ ಧರಣಿ ಕುಳಿತ ನಂತರ ಪಕ್ಷಕ್ಕೆ ಬರುತ್ತಿದ್ದ ಜನತೆಯ ದೇಣಿಗೆಯ ಪ್ರಮಾಣದಲ್ಲಿ ಕುಸಿತವಾಗಿದೆ ಎಂದು ಮಾಧ್ಯಮಗಳು ಹೇಳುತ್ತಿವೆ. ಮಾಧ್ಯಮಗಳಲ್ಲಿ ಬರುತ್ತಿರುವ ಹೆಚ್ಚಿನ ಜನತೆಯ ಪ್ರತಿಕ್ರಿಯೆಗಳು ಕೂಡ ಪಕ್ಷದ ನಡವಳಿಕೆಯನ್ನು ಟೀಕಿಸಿಯೇ ಬರುತ್ತಿವೆ. ಇದು ಪಕ್ಷವು ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎಂಬುದರ ಸೂಚನೆಯೇ ಆಗಿದೆ. ವಿವೇಕದಿಂದ ಯೋಚಿಸಿದರೆ ಇದು ಪಕ್ಷದ ನಾಯಕರಿಗೆ ಅರ್ಥವಾದೀತು. ಆಮ್ ಆದ್ಮಿ ಪಕ್ಷವು ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವನ್ನು ಗೌರವಿಸಬೇಕಾಗಿದೆ. ಇಲ್ಲದೆ ಹೋದರೆ ಉಳಿದ ಪಕ್ಷಗಳಿಗೂ ಅದಕ್ಕೂ ಏನು ವ್ಯತ್ಯಾಸ ಎಂದು ಜನ ಕೇಳುವಂತಾಗುತ್ತದೆ. ಪಕ್ಷದೊಳಗೆ ಬಹುಮತದ ಆಧಾರದಲ್ಲಿ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವುದು ಪ್ರಜಾಪ್ರಭುತ್ವದ ಲಕ್ಷಣ. ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ ನಾಯಕರನ್ನು ಕಡೆಗಣಿಸುವುದು, ಮೂಲೆಗುಂಪು ಮಾಡುವುದು ಸಲ್ಲದು. ಇಂಥ ನಡವಳಿಕೆಗಳು ಸರ್ವಾಧಿಕಾರಿ ಪ್ರಭುತ್ವ, ರಾಜಪ್ರಭುತ್ವ, ಕುಟುಂಬ ರಾಜಕಾರಣದ ಪ್ರಭುತ್ವಗಳಲ್ಲಿ ಸಾಮಾನ್ಯ. ಇತರರಿಗಿಂತ ಭಿನ್ನ ಎಂದು ಹೇಳಿಕೊಳ್ಳುವ ಪಕ್ಷಗಳಲ್ಲಿ ಇಂಥ ನಡವಳಿಕೆಗಳು ಕಂಡುಬಂದರೆ ಪಕ್ಷದ ಬೆಳವಣಿಗೆಗೆ ತೊಂದರೆಯಾಗಲಿರುವುದು ಖಚಿತ.

Leave a Reply

Your email address will not be published.