Daily Archives: April 19, 2014

ಕಬೀರ್ ಸಾವು ಮತ್ತು ಪ್ರಗತಿಪರರ ಮಾರ್ಗದರ್ಶನದ ಸರಕಾರ

Naveen Soorinje


– ನವೀನ್ ಸೂರಿಂಜೆ


 

ದನ ಸಾಗಾಟ ಮಾಡುತ್ತಿದ್ದ ಎಂಬ ಕಾರಣಕ್ಕಾಗಿ ನಕ್ಸಲ್ ನೆಪದಲ್ಲಿ ಪೊಲೀಸರು ಅಮಾಯಕ ಮುಸ್ಲಿಂ ಯುವಕನನ್ನು ಚಿಕ್ಕಮಗಳೂರಿನಲ್ಲಿ ಗುಂಡಿಕ್ಕಿ ಕೊಂದಿದ್ದಾರೆ. ಭಜರಂಗದಳ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಂತೆ ಈ ಘಟನೆ ಕಂಡು ಬರುತ್ತಿದ್ದು ಸಮಗ್ರ ತನಿಖೆಯಾಗಬೇಕಿದೆ. ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಭಜರಂಗದಳದ ಕೆಲಸವನ್ನು ಪೊಲೀಸರೇ ನಿರ್ವಹಿಸುತ್ತಿದ್ದು,  ಈ ರೀತಿಯ ಹಲವಾರು ಘಟನೆಗಳ ಕುರಿತಂತೆ ಅಮೂಲಾಗ್ರವಾದ ತನಿಖೆ ಆಗಬೇಕಿದೆ. ಆದರೆ ತನಿಖೆ ನಡೆಸಲು ಆಗ್ರಹಿಸಬೇಕಾದ ನಮ್ಮ ”ಸಾಕ್ಷಿ ಪ್ರಜ್ಞೆ”ಗಳು ಕಾಂಗ್ರೆಸ್ ಸರಕಾರಕ್ಕೆ ಬಹುಪರಾಕ್ ಕೂಗುವಲ್ಲಿ ನಿರತವಾಗಿವೆ.

ದನವನ್ನು ಅಧಿಕೃತವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆಗಟ್ಟಿದ ಹಿಂದುತ್ವವಾದಿ ಪೊಲೀಸರು ಕಬೀರ್ ನನ್ನು ಕೊಲೆ ಕಬೀರ್ಮಾಡಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಗುಂಡೇಟಿಗೆ ಒಳಗಾಗಿ ಕೊಲೆಯಾದ ಕಬೀರ್ ನ ಕುಟುಂಬ ವಂಶಪರಂಪರ್ಯವಾಗಿ ದನದ ವ್ಯಾಪಾರವನ್ನು ನಡೆಸುತ್ತಿದೆ. ಇವರ ಮೇಲೆ ಈವರೆಗೆ ದನ ಕಳ್ಳತನದ ಆರೋಪವಿಲ್ಲ. ಮೂಲತಃ  ಜೋಕಟ್ಟೆಯ ಕಬೀರ್ ಕುಟುಂಬ ಇತ್ತೀಚೆಗಷ್ಟೇ ಸುರತ್ಕಲ್ ಸಮೀಪದ ಕೃಷ್ಣಾಪುರಕ್ಕೆ ತಮ್ಮ ನಿವಾಸವನ್ನು ಸ್ಥಳಾಂತರಿಸಿತ್ತು. ಅಧಿಕೃತ ದನದ ವ್ಯಾಪಾರವನ್ನು ಮಾಡುತ್ತಿದ್ದ ಕಬೀರ್ ಚುನಾವಣೆಯ ನೀತಿ ಸಂಹಿತೆ ಘೋಷಣೆಯ ನಂತರ ದನದ ವ್ಯಾಪಾರಕ್ಕೆ ಹೋಗಿರಲಿಲ್ಲ. ಅದಕ್ಕೆ ಕಾರಣವೂ ಇದೆ. ಅಧಿಕೃತ ದನದ ವ್ಯಾಪಾರವಾದರೂ ಕೂಡಾ ಅಲ್ಲಲ್ಲಿ ಚೆಕ್ಕಿಂಗ್ ಮಾಡುವ ಪೊಲೀಸರಿಗೆ ಮಾಮೂಲು ಕೊಟ್ಟು ಲಾಭವೇನೂ ಉಳಿಯುವುದಿಲ್ಲ ಎಂಬ ಕಾರಣಕ್ಕೆ ದನದ ವ್ಯಾಪಾರಕ್ಕೆ ಹೋಗಿರಲಿಲ್ಲ. ನಿನ್ನೆ ಸಂಜೆಯವರೆಗೂ ಕೃಷ್ಣಾಪುರದಲ್ಲಿ ಕ್ರಿಕೆಟ್ ಆಡಿಕೊಂಡಿದ್ದ ಕಬೀರ್ ನಿನ್ನೆ ರಾತ್ರಿ ವ್ಯಾಪಾರಕ್ಕೆ ತೆರಳಿದ್ದ.

ತೀರ್ಥಹಳ್ಳಿಯಲ್ಲಿ ದನ ಖರೀದಿ ಮಾಡಿ, ಅಲ್ಲಿಂದ ಶ್ರಂಗೇರಿಗೆ ಬಂದ ಕಬೀರ್ ಇದ್ದಂತಹ ವ್ಯಾಪಾರಿ ತಂಡ ಶ್ರಂಗೇರಿಯಲ್ಲೂ ದನ ಖರೀದಿ ಮಾಡಿದೆ. ತೀರ್ಥ ಹಳ್ಳಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರಿಗೆ ಮಾಮೂಲು ನೀಡಿ ಚೀಟಿಯೊಂದನ್ನು ತೋರಿಸಿ ಶ್ರಂಗೇರಿಗೆ ಬಂದಿದ್ದಾರೆ. ಶ್ರಂಗೇರಿಯಲ್ಲೂ ಪೊಲೀಸರಿಗೆ ಮಾಮೂಲು ನೀಡಿ ಖರೀದಿಯ ಚೀಟಿ ತೋರಿಸಿ ಕಾರ್ಕಳ ಮಾರ್ಗವಾಗಿ ಬರುತ್ತಿದ್ದರು. ಆ ಸಂಧರ್ಭದಲ್ಲಿ ಮಾರ್ಗ ಮಧ್ಯೆ ಎಎನ್ಎಫ್ ಪೊಲೀಸರು ವಾಹನ ನಿಲ್ಲಿಸಿದ್ದಾರೆ. ವಾಹನ ನಿಲ್ಲಿಸಿದ ಕಬೀರ್ ತಂಡ ಎಎನ್ಎಫ್ ಪೊಲೀಸರಿಗೆ ಮಾಮೂಲು ನೀಡಲು ಇಳಿದಿದ್ದಾರೆ. ವಾಹನದಲ್ಲಿ ದನ ಇರುವುದನ್ನು ಗುರುತಿಸಿದ ಪೊಲೀಸನೊಬ್ಬ ಹಿಂಬದಿಯಲ್ಲಿ ಕುಳಿತಿದ್ದ ಕಬೀರನನ್ನು ಇಳಿಯುವಂತೆ ಸೂಚಿಸಿದ್ದಾನೆ. ಕಬೀರ ವಾಹನದಿಂದ ಇಳಿದ ತಕ್ಷಣ ಗುಂಡಿನ ಶಬ್ದ ಕೇಳಿದೆ. ಗುಂಡಿನ ಶಬ್ದ ಕೇಳಿ ಮೂವರು ಪರಾರಿಯಾಗಿದ್ದಾರೆ. ಒಬ್ಬ ಪೊಲೀಸ್ ವಶವಾಗಿದ್ದಾನೆ. ಕಬೀರ ಶವವಾಗಿದ್ದಾನೆ

ಭಜರಂಗದಳ-ಪೊಲೀಸ್ ಜಂಟಿ ಕಾರ್ಯಾಚರಣೆ ?

ಈ ಗುಂಡು ಹಾರಾಟ ಮತ್ತು ಕಬೀರ್ ಸಾವಿನ ಹಿಂದೆ ಹಿಂದುತ್ವವಾದಿ ಸಂಘಟನೆಗಳು ಮತ್ತು ಪೊಲೀಸರ ನಂಟಿನ ವಾಸನೆ ಬರುತ್ತಿದೆ. 10246275_688721334522490_5291328350701068876_nಎಎನ್ಎಫ್ ಸಿಬ್ಬಂದಿಗಳು ವಾಹನ ನಿಲ್ಲಿಸಲು ಹೇಳಿದಾಗ ವಾಹನ ನಿಲ್ಲಿಸಿಲ್ಲ ಎಂಬ ವಾದ ಪೊಲೀಸರದ್ದು. ಮೂವರು ತಪ್ಪಿಸಿಕೊಂಡಿದ್ದು ವಾಹನ ನಿಲ್ಲಿಸಿದ್ದರಿಂದಲೇ ಸಾಧ್ಯವಾಗಿದೆ. ವಾಹನ ನಿಂತ ನಂತರವೂ ಗುಂಡು ಹಾರಿಸುವ ಅಗತ್ಯ ಇರಲಿಲ್ಲ. ಪರಾರಿಯಾಗುತ್ತಿದ್ದ ಆರೋಪಿಗಳ ಬಳಿ ಬಂದೂಕುಗಳು ಕಂಡು ಬಂದಲ್ಲಿ ಗುಂಡು ಹಾರಿಸಿದ್ದನ್ನು ಸಮರ್ಥಿಸಬಹುದಿತ್ತು. ಆದರೆ ಇಂತಹ ಯಾವ ಸಮರ್ಥನೆಗಳಿಗೂ ಇಲ್ಲಿ ಅವಕಾಶವಿಲ್ಲ. ಪೊಲೀಸರು ತಪ್ಪು ಕಲ್ಪನೆಗೆ ಒಳಗಾಗಿ ಶೂಟ್ ಮಾಡಿದರು ಎಂದಿಟ್ಟುಕೊಂಡರೂ ನಂತರ ನಡೆದ ವಿದ್ಯಾಮಾನಗಳು ತೀರಾ ಅಮಾನವೀಯವಾದುದ್ದು.

ಮಾಡದ ತಪ್ಪಿಗೆ ಸಾವನ್ನಪ್ಪಿದ ಹರೆಯದ ಯುವಕ ಕಬೀರ್ ನ ಸಾವಿನಿಂದ ಕಂಗಟ್ಟ ಕುಟುಂಬಕ್ಕೆ ಅವನ ಶವವನ್ನು ಕೊಂಡೊಯ್ಯಲು ಭರಂಗದಳದವರು ಅಡ್ಡಿಪಡಿಸಿದರು. ಕನಿಷ್ಠ ಶವ ಕೊಂಡೊಯ್ಯಲು ಬಂದ ದುಃಖತಪ್ತ ಕಟುಂಬದವರು ಎನ್ನುವ ಕನಿಕರವೂ ಇಲ್ಲದೆ ಶ್ರಂಗೇರಿ ಶವಾಗಾರದಲ್ಲಿರುವ ಶವವನ್ನು ಕೊಂಡೊಯ್ಯಲು ಮಂಗಳೂರಿನಿಂದ ಹೊರಟ ಹೆತ್ತವರ ವಾಹನವನ್ನು ಪುಡಿ ಮಾಡಲಾಯಿತು. ಇವೆಲ್ಲವನ್ನೂ ನೋಡಿದಾಗ ಭಜರಂಗದಳದ ಅಜೆಂಡಾದ ಭಾಗವಾಗಿಯೇ ಶೂಟೌಟ್ ನಡೆದಿರುವಂತೆ ಕಾಣುತ್ತಿದೆ.

ಹೆಚ್ಚುತ್ತಿರುವ ಮುಸ್ಲಿಂ-ದಲಿತ-ಮಹಿಳೆಯರ ಮೇಲಿನ ದಾಳಿ

ಕಾಂಗ್ರೆಸ್ ಸರಕಾರ ಬಂದ ನಂತರ ಮುಸ್ಲೀಮರು, ದಲಿತರು ಮತ್ತು ಮಹಿಳೆಯರ ಮೇಲೆ ದಾಳಿಗಳು ಹೆಚ್ಚಾಗಿವೆ. ಅಂಕಿ ಅಂಶಗಳನ್ನು ಗಮನಿಸಿದರೆ ಬಿಜೆಪಿ ಸರಕಾರ ಅಸ್ತಿತ್ವದಲ್ಲಿ ಇದ್ದಾಗ ನಡೆದ ನೈತಿಕ ಪೊಲೀಸ್ ಗಿರಿಗಿಂತಲೂ ಅಧಿಕ ನೈತಿಕ ಪೊಲೀಸ್ ಗಿರಿಗಳು ಕಳೆದ ಒಂದು ವರ್ಷದಲ್ಲಿ ನಡೆದಿವೆ. ಅಲ್ಪಂಖ್ಯಾತರ ಮೇಲೆ ದಾಳಿಗಳು ನಡೆದಿವೆ. ಇಷ್ಟೆಲ್ಲಾ ಆದರೂ ಯಾವೊಬ್ಬ ಕಾಂಗ್ರೆಸ್ ಜನಪ್ರತಿನಿಧಿಯೂ ದನಿಯೆತ್ತುತ್ತಿಲ್ಲ. ಕೇಳಿದರೆ “ಕಾನೂನು ಅದರ ಕ್ರಮ ಕೈಗೊಳ್ಳುತ್ತದೆ. ನಾವು ಅದರಲ್ಲಿ ಕೈ ಹಾಕುವುದಿಲ್ಲ” ಎನ್ನುತ್ತಾರೆ. ಈ ಮಾತು ಕೇಳಲು ಅಂದವಾಗಿದ್ದರೂ ಅಮಾನವೀಯವಾಗಿದೆ. ಈ ರೀತಿಯ ದೌರ್ಜನ್ಯ ಮತ್ತು ಸಂವೇದನಾ ರಹಿತ ಜನಪ್ರತಿನಿಧಿಗಳನ್ನು ವಿರೋಧಿಸಿಯೇ ಜನರು ಕಾಂಗ್ರೆಸ್ ಗೆ ಮತ ಹಾಕಿದ್ದು ಎಂಬುದನ್ನು ಸರಕಾರ ಮರೆತಂತಿದೆ.

ಒಂದೆಡೆ ಹೆಚ್ಚುತ್ತಿರುವ ನೈತಿಕ ಪೊಲೀಸ್ ಗಿರಿ ಮತ್ತೊಂದೆಡೆ ಭಜರಂಗಿಗಳ ಕೆಲಸವನ್ನು ಮಾಡುತ್ತಿರುವ ಪೊಲೀಸರು. ಮಂಗಳೂರಿನ ಹಲವಾರು ಪ್ರಕರಣಗಳನ್ನು ಅವಲೋಕಿಸಿದಾಗ  ಇವರು ಪೊಲೀಸರೋ ಭಜರಂಗಿಗಳೋ ಎಂಬ ಅನುಮಾನ ಮೂಡುವಂತಿದೆ. ಜನವರಿ-ಫೆಬ್ರವರಿ- ಮಾರ್ಚ್ ಈ ಮೂರು ತಿಂಗಳಲ್ಲಿ 15ಕ್ಕೂ ಅಧಿಕ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಕರಾವಳಿಯಲ್ಲಿ ದಾಖಲಾಗಿದೆ. ಇನ್ನು ಪೊಲೀಸರು ಪ್ರಕರಣ ದಾಖಲಿಸದೆ ಪ್ರೇಮಿಗಳಿಗೇ ಎಚ್ಚರಿಕೆ ಕೊಟ್ಟು, ಭಜರಂಗಿಗಳಿಗೆ ಟೀ ಕೊಟ್ಟು ಕಳುಹಿಸಿದ ಉದಾಹರಣೆಗಳು ಅವೆಷ್ಟೋ ಇವೆ. ಇದಲ್ಲದೆ ನಿರಾತಂಕವಾಗಿ ನಡೆಯುತ್ತಿರುವ ದೇವದಾಸಿ ಪದ್ದತಿ, ಸಿಡಿ ಆಚರಣೆ, ದಲಿತ ದೌರ್ಜನ್ಯ ಪ್ರಕರಣಗಳು… ಇವೆಲ್ಲದರ ಮಧ್ಯೆ ಮುಸ್ಲೀಮರ ಮೇಲಿನ ದಾಳಿ.

ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದ ಸಂಧರ್ಭ ನಾನು ನೂರಾರು ನೈತಿಕ ಪೊಲೀಸ್ ಗಿರಿ, ಅಲ್ಪಸಂಖ್ಯಾತರ ಮೇಲಿನ ದಾಳಿ, ದಲಿತರ ಮೇಲಿನ ದಾಳಿಯನ್ನು ಸುದ್ದಿ ಮಾಡಿದ್ದೆ. artists-campainingಆ ಸಂಧರ್ಭದಲ್ಲಿ ಸುಮಾರು 45 ಜನ ಕೋಮುವಾದಿ ಕಾರ್ಯಕರ್ತರು ಮಂಗಳೂರು ಜೈಲಿನಲ್ಲಿದ್ದರು. ಕೆಲವರು ಒಂದು ವರ್ಷಕ್ಕಿಂತಲೂ ಅಧಿಕ ಜೈಲುವಾಸವನ್ನು ಅನುಭವಿಸಿದರು. ನೀವು ನಂಬಲೇ ಬೇಕು. ಈಗ ಇಷ್ಟೆಲ್ಲಾ ದಾಳಿಯಾಗುತ್ತಿದ್ದರೂ ಒಬ್ಬನೇ ಒಬ್ಬ ಕೋಮುವಾದಿ ಮಂಗಳೂರು ಜೈಲಿನಲ್ಲಿ ಇಲ್ಲ. ಇತ್ತೀಚೆಗೆ ನೈತಿಕ ಪೊಲೀಸ್ ಗಿರಿ ನಡೆಸಿದ, ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಿದ ಹಲವು ಕೋಮುವಾದಿಗಳ ಮೇಲೆ ಒಂದಕ್ಕಿಂತಹ ಅಧಿಕ ಕೊಲೆ ಪ್ರಕರಣಗಳಿವೆ. ಆದರೂ ಒಂದೋ ಬಂಧಿಸಿದ ಎರಡೇ ದಿನದಲ್ಲಿ ಜಾಮೀನು ದೊರೆಯುತ್ತದೆ. ಇಲ್ಲವೇ ಬಂಧನಕ್ಕೊಳಗಾಗುವ ಮೊದಲೇ ಜಾಮೀನು ದೊರೆಯುತ್ತದೆ. ಅಷ್ಟೊಂದು ಕಠಿಣ ಕ್ರಮಗಳನ್ನು ಕಾಂಗ್ರೆಸ್ ಸರಕಾರ ಕೈಗೊಂಡಿದೆ!!

”ಏನ್ ಸಾರ್ ನೀವು… ಆಡಳಿತಗಾರರ ಜೊತೆ ಸೇರ್ಕೊಂಡ್ರಲ್ಲಾ ” ಎಂದು ಕಾಂಗ್ರೆಸ್ ಸರಕಾರ ರಚನೆಯಾದ ಸಂಧರ್ಭ ಪ್ರಗತಿಪರರೊಬ್ಬರನ್ನು ಕೇಳಿದಾಗ ”ನೋಡ್ರಿ ಈ ಚಳುವಳಿಗಳನ್ನೇ ಮಾಡುತ್ತಾ ಕೂರುವುದಲ್ಲ. ಅವಕಾಶ ಸಿಕ್ಕಿದಾಗ ಆಡಳಿತಗಾರರ ಹತ್ತಿರ ಹೋಗಿ ವ್ಯವಸ್ಥೆಯನ್ನು ಸರಿ ಮಾಡುವ ಕೆಲಸ ಮಾಡಬೇಕು” ಎಂದಿದ್ದರು. ಈಗ ನಮ್ಮ ಬಹಳಷ್ಟು ಪ್ರಗತಿಪರರು ಆಡಳಿತಗಾರರ ಅಕ್ಕಪಕ್ಕ ಕಾಣಸಿಗುತ್ತಾರೆ. ಇದೇ ಧೈರ್ಯದಲ್ಲಿ ಪೊಲೀಸರು ಅಲ್ಪಸಂಖ್ಯಾತರು-ದಲಿತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಪ್ರೇಮಿಗಳ ಮೇಲೆ ದಾಳಿ ನಡೆಸಿದ ಭಜರಂಗಿಗಳಿಗೆ ಟೀ ಕೊಟ್ಟು ಕಳುಹಿಸುತ್ತಾರೆ. ಅದೇ ಪ್ರಗತಿಪರರ ಧೈರ್ಯದಲ್ಲಿ ಇಂದು ನಮ್ಮ ಕಬೀರನನ್ನು ಕೊಂದು ಹಾಕಿದ್ದಾರೆ.