Daily Archives: November 7, 2014

ಬಲಿಷ್ಠ ಯಜಮಾನ್ಯ ವ್ಯವಸ್ಥೆ : ಪ್ರತಿರೋಧದ ಮಾಡೆಲ್ ಗಳಾವುವು?


– ಬಿ. ಶ್ರೀಪಾದ ಭಟ್


ಅದು ಎಂಬತ್ತರ ದಶಕದ ಆರಂಭದ ವರ್ಷಗಳು. ಕರ್ನಾಟಕದಲ್ಲಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ದುರಾಡಳಿತದಿಂದ rape-illustrationಚುನಾವಣೆಯಲ್ಲಿ ಸೋಲನ್ನನುಭವಿಸಿ ರಾಮಕ್ರಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷವೆನ್ನುವ ಜನಪ್ರಿಯ ಸರ್ಕಾರವು ಆಡಳಿತದಲ್ಲಿತ್ತು. ಆಗ ರಾಯಚೂರು ಜಿಲ್ಲೆಯಲ್ಲಿನ ಕುದುರೆಮೋತಿ ಸ್ವಾಮಿ ಎನ್ನುವ ಲಿಂಗಾಯಿತ ಮಠಾದೀಶರೊಬ್ಬರು ದಲಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದರು. ಈ ದುಷೃತ್ಯವು ಬಹಿರಂಗಗೊಂಡು ರಾಜ್ಯಾದ್ಯಾಂತ ಪ್ರತಿಭಟನೆಗಳು ನಡೆದವು. ಹೋರಾಟಗಾರರ ಒತ್ತಾಯಕ್ಕೆ ಮಣಿದ ಆಗಿನ ಹೆಗಡೆ ಸರ್ಕಾರ ತನಿಖೆಗಾಗಿ ಒಂದು ಸದನ ಸಮಿತಿಯನ್ನು ನೇಮಿಸಿತ್ತು. ಆದರೆ ಎಂತಹ ವೈರುಧ್ಯವೆಂದರೆ ಆರು ಮಂದಿ ಶಾಸಕರ ಸಮಿತಿಯಲ್ಲಿ ಐವರು ಸದಸ್ಯರು ಲಿಂಗಾಯಿತ ಜಾತಿಗೆ ಸೇರಿದವರಾಗಿದ್ದರು. ಅಲ್ಲಿಗೆ ಆ ಸದನ ಸಮಿತಿಯ ಹಣೆಬರಹವೇ ಹೆಚ್ಚೂ ಕಡಿಮೆ ನಿರ್ಧಾರವಾದಂತಾಯ್ತು. ಇನ್ನು ಅದರ ವರದಿಯ ಕುರಿತಾಗಿ ಪ್ರಜ್ಞಾವಂತರಲ್ಲಿ ಆಸಕ್ತಿಯೇ ಉಳಿಯಲಿಲ್ಲ. ಜಾತಿ ಎನ್ನುವುದು ಹೇಗೆ ಬಹಿರಂಗವಾಗಿ ಪ್ರಭಾವಿಸುತ್ತದೆ ಮತ್ತು ಅದೇ ಸಂದರ್ಭದಲ್ಲಿ ಅಂತರ್ಗತವಾಗಿಯೂ ಪ್ರವಹಿಸುತ್ತಿರುತ್ತದೆ ಎಂದು ಆಗ ವಿದ್ಯಾರ್ಥಿಗಳಾಗಿದ್ದ ನಮಗೆಲ್ಲಾ ಗೊತ್ತಾಗಿತ್ತು.

ಅನೇಕ ಮಠಾಧೀಶರ ಮೇಲೆ ಈ ಬಗೆಯ ಲೈಂಗಿಕ ದೌರ್ಜನ್ಯಗಳ ಆರೋಪಗಳು ಹೊಸದಲ್ಲವೆನ್ನುವಂತೆಯೇnithyananda_2 ಎಲ್ಲಾ ಬಲಿಷ್ಠ ಜಾತಿಗಳ ಭಕ್ತರು ತಮ್ಮ ತಮ್ಮ ಜಾತಿ ಮಠಗಳ ಸ್ವಾಮಿಗಳ ಕುರಿತಾಗಿ ಬೇಕೆಂತಲೇ ಮುಗ್ಧರಾಗಿ ವರ್ತಿಸುತ್ತಿರುತ್ತಾರೆ. ಸ್ನೇಹಿತರೊಬ್ಬರು ಹೇಳುತ್ತಿದ್ದರು “ಪ್ರತಿಯೊಂದು ಮಠದಲ್ಲಿನ ಖಾಸಗಿ ಕೋಣೆಯಲ್ಲಿ ಒಂದು ತೊಟ್ಟಿಲಿರುತ್ತದೆ. ಎಲ್ಲವನ್ನೂ ಪರಿತ್ಯಜಿಸಿದ್ದೇವೆ ಎಂದೇ ಬೊಗಳೆ ಬಿಡುವ ಹಲವಾರು ಸ್ವಾಮಿಗಳು ಖಾಸಗಿಯಾಗಿ ಮತ್ತು ಗುಟ್ಟಾಗಿ ಸಂಸಾರಗಳನ್ನು ನಡೆಸುತ್ತಿರುವ ವಿಚಾರಗಳೂ ಆಯಾ ಭಕ್ತರಿಗೂ ಗೊತ್ತಿರುತ್ತದೆ. ಮತ್ತು ಆ ಮಠದ ಸುತ್ತಮುತ್ತಲಿನ ಸಮಾಜಕ್ಕೂ ಗೊತ್ತಿರುತ್ತದೆ. ಅನೇಕ ಸ್ವಾಮಿಗಳ ಲೈಂಗಿಕ ಅತ್ಯಾಚಾರಗಳೂ ಈ ಭಕ್ತರಿಗೆ, ಸಮಾಜಕ್ಕೆ ಗೊತ್ತಿರುತ್ತದೆ. ಆದರೆ ಆ ಸ್ವಾಮಿಯು ಬದುಕಿರುವುವರೆಗೂ ಯಾರೂ ಇದರ ಕುರಿತಾಗಿ ಬಾಯ್ಬಿಡುವುದಿಲ್ಲ. ನಿಗೂಢವಾಗಿ ಜಾಣ ಕಿವುಡು, ಜಾಣ ಕುರುಡರಂತೆ ವರ್ತಿಸುತ್ತಿರುತ್ತಾರೆ. ಸತ್ತ ನಂತರ ನೋಡಿದಿರಾ ದೇವರು ಇಂತಹವರನ್ನು ಕ್ಷಮಿಸುವುದಿಲ್ಲ ಎಂದು ಆಡಿಕೊಳ್ಳುತ್ತಾರೆ!! ಕಡೆಗೂ ಈ ಭಕ್ತರು ಮತ್ತು ಸಮಾಜ ಸ್ವಾಮಿಯನ್ನು ದೂಷಿಸುವುದಿಲ್ಲ ಬದಲಾಗಿ ದೇವರ ಮಹಿಮೆಯನ್ನು ಕೊಂಡಾಡುತ್ತಾರೆ”.

ಇಡೀ ಭಕ್ತ ಸಮೂಹವನ್ನೇ ಧಾರ್ಮಿಕತೆಯ, ಜಾತಿಯ ಹೆಸರಿನಲ್ಲಿ ಮಾನಸಿಕವಾಗಿ ತಮ್ಮ ಅಡಿಯಾಳಾಗಿಸಿಕೊಳ್ಳುವ ಅನೇಕ ಮಠಾಧೀಶರು ಇದೇ ಜಾತಿ ಮತ್ತು ಹಣದ ಬಲದಿಂದ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ತಮ್ಮ ಹಂಗಿನಲ್ಲಿರಿಸಿಕೊಂಡಿರುತ್ತಾರೆ. ಜಾತಿ, ಧರ್ಮ, ಹಣದ ಈ ಚಕ್ರವ್ಯೂಹವು ಜನಸಾಮಾನ್ಯರಿಗೆ ಅರ್ಥವಾಗುತ್ತದೆ. ಆದರೆ ಅದರ ಒಳಸುಳಿಗಳು ಅರ್ಥವಾಗಿರುವುದಿಲ್ಲ. ಇತ್ತೀಚಿನ ಈ ಹವ್ಯಕ ಮಠದ ಸ್ವಾಮಿ ರಾಘವೇಶ್ವರ ವಿರುದ್ಧ ಇರುವ ಲೈಂಗಿಕ ದೌರ್ಜನ್ಯದ ಆರೋಪ ಮತ್ತು ಅದರ ಒಟ್ಟಾರೆ ಇತಿಹಾಸ ಮತ್ತು ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ವಿದ್ಯಾಮಾನಗಳು ಮೇಲಿನ ಸಂಗತಿಗಳಿಗೆ ಸಾಕ್ಷಿಯಾಗಿವೆ.

ರಾಮಚಂದ್ರಾಪುರ ಮಠದ ಸ್ವಾಮಿ ರಾಘವೇಶ್ವರರು ಗೋಸ್ವಾಮಿಗಳೆಂದೇ ಪ್ರಸಿದ್ಧಿ ಹೊಂದಿದ್ದಾರೆ. ಈ ಸ್ವಾಮಿಯ ಗೋರಕ್ಷಣೆಯ ಹೆಸರಿನ ಅನ್ಯ ಧರ್ಮದ ವಿರುದ್ಧದ ಪ್ರಚೋದನಾತ್ಮಕ ಕಾರ್ಯಕ್ರಮಗಳು ಸ್ವಜಾತಿ ಭಕ್ತರ ಸುಪ್ತಪ್ರಜ್ಞೆಯೊಳಗೆ ಆಳವಾಗಿ ಬೇರೂರಿರುವ Raghweshwara_Bharathi_gurujiಧಾರ್ಮಿಕತೆಯ ಅಮಾನವೀಯ ನಂಬಿಕೆಯನ್ನು ಗಟ್ಟಿಗೊಳಿಸುವಲ್ಲಿ ಯಶಸ್ವಿಯಾದವು. ಈ ಬಗೆಯ ಧಾರ್ಮಿಕ ಪ್ರಲೋಭನೆಯ ಮೂಲಕವೇ ರಾಘವೇಶ್ವರ ಸ್ವಾಮಿ ಕ್ಷಿಪ್ರಗತಿಯಲ್ಲಿ ಬ್ರಾಹ್ಮಣ ಭಕ್ತರ ನಡುವೆ ಜನಪ್ರಿಯನಾಗಿಬಿಟ್ಟರು. ಈ ಜನಪ್ರಿಯತೆಯನ್ನು ನಂಬಿ ರಾಘವೇಶ್ವರ ಸ್ವಾಮಿ ಯಡಿಯೂರಪ್ಪವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಗೋಕರ್ಣೇಶ್ವರ ಮಠವನ್ನು ವಶಪಡಿಸಿಕೊಳ್ಳುವ ವಿಫಲ ಪ್ರಯತ್ನಕ್ಕೆ ಕೈ ಹಾಕಿದ್ದರು. ಸ್ವತ ಬ್ರಾಹ್ಮಣ ಸಮಾಜದ ಇತರೇ ಮಠಾಧೀಶರು ಅಸೂಯೆ ಪಡುವಷ್ಟು ರಾಘವೇಶ್ವರ ಸ್ವಾಮಿ ತನ್ನ ಬುಡವನ್ನು ಭದ್ರಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಮತ್ತು ಆ ಇಡೀ ಪ್ರಕ್ರಿಯೆಯು ಕಾನೂನಿನ ಆಶಯಕ್ಕೆ ಅನುಗುಣವಾಗಿ ತನಿಖೆಗೆ ಅರ್ಹವಾಗಿದೆ. ಸದರಿ ಸ್ವಾಮಿಯು ಇತರೇ ಬಹುತೇಕ ಬ್ರಾಹ್ಮಣ ಮಠಗಳ ಸ್ವಾಮಿಗಳಂತೆಯೇ ಸಂಘ ಪರಿವಾರದೊಂದಿಗೆ ನಿಕಟ ಭಾಂದವ್ಯವನ್ನು ಹೊಂದಿದ್ದರೆ. ತಾವೆಲ್ಲಾ ಹಿಂದೂ ಧರ್ಮೋಧ್ಧಾರಕರು ಎಂದೇ ನಂಬಿರುವ, ಸನಾತನ ಪರಂಪರೆ, ಬ್ರಾಹ್ಮಣ್ಯದ ಯಜಮಾನ್ಯ ಮತ್ತು ಶ್ರೇಣಿಕೃತ ವರ್ಣಾಶ್ರಮದ ಸಮಾಜವನ್ನು ಭವ್ಯ ಭಾರತದಲ್ಲಿ ಮರಳಿ ಪ್ರತಿಷ್ಠಾಪಿಸಲು ಕಂಕಣಬದ್ಧರಾಗಿರುವ, ಜೀವ ವಿರೋಧಿ ಲೋಕದೃಷ್ಟಿಯನ್ನು ಹೊಂದಿರುವ ವಿವಿಧ ಮಠಗಳ ಬಹುಪಾಲು ಬ್ರಾಹ್ಮಣ ಸ್ವಾಮಿಗಳು ಇದಕ್ಕಾಗಿ ಸಂಘ ಪರಿವಾರವನ್ನು ಸಂಪೂರ್ಣವಾಗಿ ಆಶ್ರಯಿಸಿದ್ದಾರೆ. ನೇರವಾಗಿಯೇ ಬಲಪಂಥೀಯ ರಾಜಕಾರಣದೊಂದಿಗೆ ಗುರುತಿಸಿಕೊಂಡಿದ್ದಾರೆ. ಬಿಜೆಪಿಯನ್ನು ಬೆಂಬಲಿಸುವ ಅನೇಕ ಭಾರತೀಯರಿಗಿಂತಲೂ ಸದರಿ ಸ್ವಾಮಿಗಳಿಗೆ ಬಲಪಂಥೀಯ ರಾಜಕೀಯದ ಸಿದ್ಧಾಂತಗಳು ಚೆನ್ನಾಗಿ ಗೊತ್ತಿದೆ. ಇಡೀ ಬಿಜೆಪಿಯನ್ನು ಸನಾತನವಾದಿ ಧಾರ್ಮಿಕತೆಗೆ ಗಂಟು ಹಾಕುವಲ್ಲಿ ದೇಶಾದ್ಯಾಂತ ಹರಡಿರುವ ಅನೇಕ ಬ್ರಾಹ್ಮಣ ಸ್ವಾಮಿಗಳ ಪಾಲು ಸಾಕಷ್ಟಿದೆ. ಆದರೆ ದುರಂತವೆಂದರೆ ನ್ಯಾಯ, ನೀತಿಯ ಕುರಿತಾಗಿ ನಿರರ್ಗಳವಾಗಿ ಮಾತನಾಡುವ ಬಿಜೆಪಿಯ ಅಭಿಮಾನಿ ವಿದ್ಯಾವಂತರು ಮೇಲಿನ ಸಂವಿಧಾನ ವಿರೋಧಿ ಸ್ವರೂಪಗಳ ಕುರಿತು ಕಿಂಚಿತ್ತೂ ಬಾಯ್ಬಿಡುವುದಿಲ್ಲ. ಮತ್ತು ಇತರೇ ಪಕ್ಷಗಳ ರಾಜಕಾರಣಿಗಳು ಸಹ ಜಾತಿ ಮತ್ತು ಹಣದ ಕಾರಣಕ್ಕಾಗಿ ಈ ಸ್ವಾಮಿಗಳೊಂದಿನೆ ನೇರವಾಗಿ ಅಥವಾ ಪರೋಕ್ಷವಾಗಿ ಪಕ್ಷಾತೀತರಾಗಿ ಗುರುತಿಸಿಕೊಂಡಿರುತ್ತಾರೆ.

ಧರ್ಮ ಮತ್ತು ಜಾತಿ ಅಂತಿಮವಾಗಿ ಸಮಾಜ ಮತ್ತು ರಾಜಕೀಯವನ್ನು ನಿಯಂತ್ರಿಸಬೇಕು ಎನ್ನುವ ಉದ್ದೇಶವನ್ನು ಹೊಂದಿರುವ ಬಹುಪಾಲು ಬ್ರಾಹ್ಮಣ ಮಠಾಧೀಶರು ಬ್ರಾಹ್ಮಣದ ವೈದಿಕತೆಯ ಶ್ರೇಷ್ಠತೆಯ ಗರ್ವ ಆ ಮೂಲಕ ಅಸಮಾನತೆ, ತಾರತಮ್ಯ, ಪ್ರತ್ಯೇಕತೆ ಮತ್ತು ಜಾತಿ ಕ್ರೌರ್ಯವನ್ನು ಸದಾ ಹಿಂದೂ ಧರ್ಮದ ಮುಂಚೂಣಿಯಲ್ಲಿ ಪ್ರತಿಷ್ಠಾಪಿಸಬೇಕೆಂದು ಅನೇಕ ಬ್ರಾಹ್ಮಣ ಮಠಾದೀಶರು ಬಹಿರಂಗವಾಗಿಯೇ ಪ್ರಚಾರ ಮಾಡುತ್ತಾ ತಮ್ಮ ಜಾತಿ, ಉಪಪಂಗಡಗಳೊಳಗೆ ಪ್ರಭಾವಶಾಲಿಗಳಾಗಿ ಬೆಳೆಯುತ್ತಿದ್ದಾರೆ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಸಹ ಬಹಿರಂಗವಾಗಿ ಈ ಸ್ವಾಮಿಗಳೊಂದಿಗೆ ಗುರುತಿಸಿಕೊಂಡಿರುವುದು ಇಡೀ ವ್ಯವಸ್ಥೆಯಲ್ಲಿ ಎಲ್ಲಾ ಬಗೆಯ ಕಾನೂನು, ಕಟ್ಟಳೆ, ನಿಯಮಗಳಿಗೆ ಅತೀತರಾದ ಅತ್ಯಂತ ಬಲಿಷ್ಠವಾದ ಯಜಮಾನ್ಯದ ವ್ಯವಸ್ಥೆ ರೂಪುಗೊಳ್ಳುವುದಕ್ಕೆ ಕಾರಣವಾಗಿದೆ. ಇಲ್ಲಿ ಕೇವಲ ಬ್ರಾಹ್ಮಣದ ಮಠಾಧೀಶರು ಮಾತ್ರವಲ್ಲ, ಈ ರಾಜ್ಯದ ಎಲ್ಲಾ ಬಲಿಷ್ಠ ಜಾತಿಯ ಮಠಾದೀಶರೂ ಸಹ ಈ ಸಂವಿಧಾನ ವಿರೋಧಿ ಯಜಮಾನ್ಯದ ಭಾಗವಾಗಿಯೇ ನೆಲೆಗೊಂಡಿದ್ದಾರೆ. ಈ ಯಜಮಾನ್ಯವನ್ನು ಸಂವಿಧಾನಬದ್ಧವಾಗಿ ವಿರೋಧಿಸಿ ಈ ನೆಲದ ಕಾನೂನಿಗೆ ನೀವೆಲ್ಲರೂ ಒಳಪಡುತ್ತೀರಿ ಎಂದು ಪ್ರಜ್ಞಾವಂತರು ಪ್ರತಿರೋಧ ತೋರಿಸಿದರೆ ಅಲ್ಲಿಗೆ ಆ ಪ್ರಜ್ಞಾವಂತರಿಗೆ ಕೇಡುಗತಿ ಬಂದಿದೆಯೆಂದೇ ಅರ್ಥ.

ತೀರಾ ಇತ್ತೀಚೆಗೆ ಬೆಂಗಳೂರಿನ ಆರ್ಕಿಡ್ ಶಾಲೆಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದಡಿ ಅಲ್ಲಿನ ಶಿಕ್ಷಕ ಗುಂಡಪ್ಪ ಎನ್ನುವವರನ್ನು ಬಂಧಿಸಲಾಯಿತು. ಕೆಲವು ತಿಂಗಳ ಹಿಂದೆ ಮತ್ತೊಂದು ಶಾಲೆಯಲ್ಲಿ ಇದೇ ಲೈಂಗಿಕ ದೌರ್ಜನ್ಯದ ಆರೋಪದ ಅಡಿಯಲ್ಲಿ ಜೈಶಂಕರ್ ಎನ್ನುವ ಶಿಕ್ಷಕನನ್ನು ಬಂಧಿಸಲಾಯಿತು. ಆದರೆ ದುದುಷ್ಟವಶಾತ್ ಮೇಲಿನ ಬಲಿಷ್ಠraghava_swamiji ಯಜಮಾನ್ಯದ ವ್ಯವಸ್ಥೆಯ ಕುರಿತಾಗಿ ಅರಿವಿಲ್ಲದಯೇ ರಾಮಚಂದ್ರಾಪುರ ಮಠದ ಭಕ್ತರು ಮತ್ತು ಆ ಮಠದ ರಾಮಕಥಾ ತಂಡದ ಗಾಯಕಿಯೂ ಆಗಿದ್ದ ಪ್ರೇಮಲತಾ ಎನ್ನುವವರು ರಾಘವೇಶ್ವರ ಸ್ವಾಮಿಯ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ಪೋಲಿಸರಿಗೆ ದೂರು ಕೊಟ್ಟಾಗ ಪೋಲೀಸರು ಬಂಧಿಸಿದ್ದು ಆರೋಪಕ್ಕೆ ಗುರಿಯಾದ ರಾಘವೇಶ್ವರ ಸ್ವಾಮಿಯಲ್ಲ. ಬದಲಾಗಿ ದೌರ್ಜನ್ಯಕ್ಕೆ ಒಳಗಾದ ಪ್ರೇಮಲತಾ ಅವರನ್ನು. ಇದಕ್ಕೆ ಕಾರಣ ಸದರಿ ಸ್ವಾಮಿ ಪ್ರೇಮಲತಾ ಮತ್ತು ದಿವಾಕರ್ ಶಾಸ್ತ್ರಿ ದಂಪತಿಗಳ ಮೇಲೆ ಕೊಟ್ಟ ಬೋಗಸ್ ದೂರನ್ನು ಆಧರಿಸಿ ಪ್ರೇಮಲತ ಅವರನ್ನು ಬಂಧಿಸುತ್ತಾರೆ. ಆರೋಪಿಗಳಾಗಿರುವ ಗುಂಡಪ್ಪ ಮತ್ತು ಜೈಶಂಕರ್ ನನ್ನು ಈ ನೆಲದ ಕಾನೂನಿನಂತೆ ಬಂಧಿಸುವ ಪೋಲೀಸ್ ವ್ಯವಸ್ಥೆ ಅತ್ಯಾಚಾರದ ಆರೋಪಿ ರಾಘವೇಶ್ವರ ಸ್ವಾಮಿಯ ವಿಚಾರದಲ್ಲಿ ಹಿಂಜರಿಯುತ್ತಿರುವುದು ಬಲಿಷ್ಠ ಯಜಮಾನ್ಯದ ವ್ಯವಸ್ಥೆಯ ಪ್ರಭಾವವನ್ನು ಸೂಚಿಸುತ್ತದಷ್ಟೆ. ದಿವಾಕರ ಶಾಸ್ತ್ರಿಯವರ ತಮ್ಮ ಶಾಮ ಶಾಸ್ತ್ರಿ ಮಠದ ಪರವಾಗಿ ನಿಲ್ಲಬೇಕೆಂಬ ಬೆದರಿಕೆಯ ಕರೆಗಳಿಗೆ ಭಯಗೊಂಡು ಆತ್ಮಹತ್ಯೆ ಸಹ ಮಾಡಿಕೊಳ್ಳುತ್ತಾರೆ. ಮಠದ ಕಡೆಯಿಂದ ಪ್ರೇಮಲತ ಅವರು ನೀಡಿದ ದೂರನ್ನು ಸ್ವೀಕರಿಸಬೇಡಿ ಎನ್ನುವ ಒತ್ತಡವೂ ಪೋಲೀಸರ ಮೇಲೆ ಇತ್ತಂತೆ. ಮಾಧ್ಯಗಳಿಗೆ ಈ ಅತ್ಯಾಚಾರದ ಕುರಿತಾಗಿ ವರದಿ ಮಾಡಬೇಡಿ ಎನ್ನುವ ತಾಕೀತನ್ನು ಮಾಡಲಾಯಿತು. ಚಾತುರ್ಮಾಸ್ಯವೆನ್ನುವ ಧಾರ್ಮಿಕ ವಿಧಿಯನ್ನು ಮುಂದೊಡ್ಡಿ ಸ್ವಾಮಿಯ ಬಂಧನವನ್ನು ತಡೆಹಿಡಿದಿದ್ದು ನ್ಯಾಯಾಂಗ ನಿಂದನೆಯಾಗುತ್ತದೆ. ಆದರೆ ಇದೂ ಸಹ ಅರಣ್ಯರೋಧನವಾಗಿಬಿಡುವುದು ಈ ಬಲಿಷ್ಠ ಯಜಮಾನ್ಯ ವ್ಯವಸ್ಥೆಯ ಪ್ರಭಾವವನ್ನು ಸೂಚಿಸುತ್ತದೆ.

ಇನ್ನು ಸಮಾಜದ ಪ್ರತಿಕ್ರಿಯೆ ನೋಡಿ. ಬ್ರಾಹ್ಮಣ ಸಮಾಜದ ಅನೇಕ ಮಹಿಳಾ ಭಕ್ತರು ಎರಡೂ ಕಡೆ ತಪ್ಪಿದೆಯಲ್ಲ ಎಂದು ರಾಗ ಎಳೆಯುತ್ತಿದ್ದಾರಂತೆ!! ಪ್ರೇಮಲತ ಅವರ ನೈತಿಕತೆಯನ್ನು ಆಡಿಕೊಳ್ಳುತಿದ್ದಾರಂತೆ!! ಆದರೆ ಈ ವಿದ್ಯಾವಂತರಿಗೆ ಸ್ವಾಮಿಯ ಅನೈತಿಕತೆ ಇವರಲ್ಲಿ ಹೇಸಿಗೆ ಹುಟ್ಟಿಸಿಲ್ಲ. ಇವರಿಗೆ ಸರ್ವಸಂಗ ಪರಿತ್ಯಾಗಿಯೆಂದು ಘೋಷಿಸಿಕೊಳ್ಳುವ ಸ್ವಾಮಿ ಈ ರೀತಿ ಅತ್ಯಾಚಾರದ ಆರೋಪಕ್ಕೆ ಸಿಲುಕಿರುವುದು ಅಘಾತಕಾರಿಯಾಗಬೇಕಿತ್ತು. ಆದರೆ ಭಕ್ತರು ಅನುಮಾನ ಪಡುತ್ತಿರುವುದು ಪ್ರೇಮಲತ ಇಷ್ಟು ವರ್ಷಗಳ ಕಾಲ ಸುಮ್ಮನಿದ್ದು ಈಗ ದೂರು ಕೊಡುತ್ತಿರುವುದರ ವಿಷಯದಲ್ಲಿ. ಇದು ಪ್ರತಿಬಾರಿಯೂ ವಿಚಾರಣೆಗೆ ಹಾಜರಾಗಲು ಅನೇಕ ತಗಾದೆಗಳನ್ನು ತಗೆಯುತ್ತಿರುವ ಈ ಸ್ವಾಮಿಗೆ ಮಾನಹಾನಿ ಮಾಡಲು ಪಿತೂರಿ ನಡೆಯುತ್ತಿದೆ ಎಂದು ಈ ಸ್ವಜಾತಿ ಭಕ್ತಗಣವು ಆರೋಪಿಸುತ್ತಿರುವುದು ಮತ್ತು ಈ ಸ್ವಾಮಿಯ ಅನೈತಿಕತೆಯನ್ನು ಬೆಂಬಲಿಸುತ್ತಿರುವ ಈ ಬ್ರಾಹ್ಮಣ ಸಮಾಜದ ವಿದ್ಯಾವಂತರ ನೈತಿಕ ಅದಪತನವನ್ನು ತೋರಿಸುತ್ತದೆ ಅಷ್ಟೇ. ಡಬಲ್ ಡಿಗ್ರಿಗಳನ್ನು ಪಡೆದ ಬ್ರಾಹ್ಮಣ ವಿದ್ಯಾವಂತರಿಗೆ ತಮ್ಮ ಪ್ರಜ್ಞೆಯೊಳಗೆ ಬೇರುಬಿಟ್ಟಿರುವ ಜಾತಿವಾದವನ್ನು ಮೀರಲು ಸಾಧ್ಯವಾಗುತ್ತಿಲ್ಲ ಎನ್ನುವದಕ್ಕಿಂತಲೂ ಎಲ್ಲವನ್ನೂ ಜೀರ್ಣಿಸಿಕೊಳ್ಳಲು ಹವಣಿಸುವ ವೈದಿಕತೆ ಮತ್ತೆ ಚಲಾವಣೆಗೆ ಬರಲು ಸಹಕರಿಸಲು ಇವರೆಲ್ಲ ಉತ್ಸುಕರಾಗಿದ್ದಾರೆ ಎಂದೇ ವಿಶ್ಲೇಷಿಸಬೇಕಾಗುತ್ತದೆ. ಭಯೋತ್ಪಾದನೆ ಧಾಳಿ ನಡೆದಾಗ ಯಾಕೆ ನೀವು ಖಂಡಿಸುತ್ತಿಲ್ಲ ಎಂದು ಮುಸ್ಲಿಂ ಸಮುದಾಯದ ಕಡೆಗೆ ಗೋಣು ತಿರುಗಿಸುವ ಈ ಸೋ ಕಾಲ್ಡ್ ವಿದ್ಯಾವಂತರು ಇಂದು ಅತ್ಯಾಚಾರದ ಆರೋಪಕ್ಕೆ ಗುರಿಯಾದ ತಮ್ಮ ಜಾತಿಯ ಸ್ವಾಮಿಯ ಕೃತ್ಯವನ್ನು ಖಂಡಿಸುವುದಿರಲಿ ಒಂದು ಪಾಪ ಪ್ರಜ್ಞೆಯ ಸಣ್ಣ ಅಂಶವೂ ಇವರಲ್ಲಿ ಕಾಣುತ್ತಿಲ್ಲ.

ಜಾತಿ ಸಮಾಜ ಮತ್ತು ಜಾತಿ ಮಠಗಳ ಸನಾತನವಾದದ ಮೂಲಭೂತವಾದಿ ಹಸಿವಿಗೆ ಮೈಯೆಲ್ಲಾ ಬಾಯಿ. ಬುದ್ಧನನ್ನು ವಿಷ್ಣುವಿನ ಹತ್ತನೇ ಅವತಾರವೆಂದು ಬಿಂಬಿಸಿ ಬೌದ್ಧ ಧರ್ಮವನ್ನು ಆಪೋಶನ ತೆಗೆದುಕೊಳ್ಳಲು ವಿಫಲ ಯತ್ನ ನಡೆಸಿದ ಈ ವೈದಿಕಶಾಹಿ ವಚನ ಚಳುವಳಿಯನ್ನು, ಗಾಂಧಿಯನ್ನು, ಅಂಬೇಡ್ಕರ್ ಅವರನ್ನೂ ಬಿಟ್ಟಿಲ್ಲ. ಹಿಂದುತ್ವದ ಚರ್ಚೆಯನ್ನು ಸನಾತನವಾದಕ್ಕೆ ಗಂಟು ಹಾಕುವ ಈ ಪುರೋಹಿತಶಾಹಿಯನ್ನು ಮೌನವಾಗಿ ಬೆಂಬಲಿಸುವ ಇಲ್ಲಿನ ವಿದ್ಯಾವಂತರು ಕ್ರಿಯಾಶೀಲ ಜಾತಿವಾದಿಗಳು. ಅಮೇರಿಕಾ, ಯುರೋಪಿಯನ್ ರಾಷ್ಟ್ರಗಳಿಗೆ ಹಾರಲು ತವಕದಲ್ಲಿರುವ ಈ ವಿದ್ಯಾವಂತರು ಆರೆಸಸ್ ಮಾದರಿಯ ರಾಷ್ಟ್ರೀಯವಾದದ ಪ್ರತಿಪಾದಕರು. ಜೊತೆಗೆ ನವಬ್ರಾಹ್ಮಣ್ಯವಾದದ ವಕ್ತಾರರೂ ಹೌದು. ಅನಿವಾಸಿ ಭಾರತೀಯರಾಗಿ ಇವರು ಈ ರಾಘವೇಶ್ವರ, ಕಂಚಿ ಕಾಮಕೋಟಿ, ಪೇಜಾವರ, ಶೃಂಗೇರಿ, ರವಿಶಂಕರ ಇನ್ನೂ ಮುಂತಾದ ಸ್ವಾಮಿಗಳನ್ನು ಒಳಗೊಳ್ಳುವಂತಹ ವೈದಿಕಶಾಹಿ ರಾಷ್ಟ್ರೀಯತೆಯನ್ನು ವಿದೇಶಗಳಲ್ಲಿ ಪ್ರತಿಪಾದಿಸುತ್ತಾರೆ. ಬ್ರಾಹ್ಮಣ್ಯವಾದದ ವೈದಿಕಶಾಹಿಯನ್ನು ಪ್ರತಿಪಾದಿಸುವ ಭರಾಟೆಯಲ್ಲಿರುವ ಈ ವಿದ್ಯಾವಂತರಿಗೆ ಸಂತ ಕಬೀರನ ಪರಂಪರೆ, ಉದಾರವಾದಿ ನೆಲೆಯ ಅನೇಕ ಭಕ್ತಿಪಂಥದ, ಅವಧೂತ ಪರಂಪರೆಯ ಜನಪರ ಮಾದರಿಗಳ ಪರಿಚಯವೂ ಇಲ್ಲ ಅಥವಾ ಗೊತ್ತಿದ್ದರೂ ಚಾಣಾಕ್ಷತೆಯಿಂದ ಮರೆಮಾಚುತ್ತಾರೆ.