Daily Archives: December 15, 2014

ಜನನುಡಿಯಲ್ಲಿ ದಿನೇಶ್ ಅಮಿನ್ ಮಟ್ಟು ಮತ್ತು ಡಿ.ಉಮಾಪತಿ

ಮಂಗಳೂರು – 14-12-14:

ಬಹುಸಂಖ್ಯಾತ ಹಿಂದೂಗಳ ಕೋಮುವಾದ ಹಾಗೂ ಅಲ್ಪಸಂಖ್ಯಾತರ ಕೋಮುವಾದಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಹಾಗೂ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಭಾನುವಾರ ಅಭಿಪ್ರಾಯಪಟ್ಟರು. ಅವರು ಮಂಗಳೂರಿನಲ್ಲಿ ನಡೆದ ಜನನುಡಿ ಸಮಾವೇಶದಲ್ಲಿ ಮಾತನಾಡಿದರು.

ಹಿಂದೂಗಳ ಕೋಮುವಾದ ತಾವು ಬಹುಸಂಖ್ಯಾತರು ಎಂಬ ಅಹಂಕಾರದಿಂದ ಹುಟ್ಟಿದ್ದು. ಅದರ ದುರುದ್ದೇಶ ಅಲ್ಟಸಂಖ್ಯಾತ ಸಮುದಾಗಳ ಮೇಲೆ ದಾಳಿ ಮಾಡಿ ಅವರನ್ನು ಮಟ್ಟಹಾಕುವುದು. ಆದರೆ ಅಲ್ಪಸಂಖ್ಯಾತರ ಕೋಮುವಾದ ಅಭದ್ರತೆ, ಆತಂಕ ಹಾಗೂ ಅಸಹಾಯಕತೆಗಳಿಂದ ಹುಟ್ಟಿದ್ದು. ತಮ್ಮ ಭದ್ರತೆಗಾಗಿ ಅವರು ಸಂಘಟಿತರಾಗುತ್ತಾರೆ. ಅಂತಹವರಲ್ಲಿ ಕೆಲವರು ಹಿಂಸಾಚಾರದಲ್ಲಿ ತೊಡಗಿರಬಹುದು ಅಷ್ಟೆ. ಹಾಗಾಗಿ ಬಹುಸಂಖ್ಯಾತರ ಕೋಮುವಾದ ಹಾಗೂ ಅಲ್ಟಸಂಖ್ಯಾತರ ಕೋಮುವಾದ ಒಂದೇ ಅಲ್ಲ.

ಆದರೆ ಈ ಎರಡನ್ನೂ ಒಂದೇ ರೀತಿಯಲ್ಲಿ ತಿರಸ್ಕರಿಸಬೇಕು ಎನ್ನುವುದು ಕೆಲವರ ಅಭಿಪ್ರಾಯ. “ನಾನು ಮುಸ್ಲಿಂ ಲೇಖಕಿಯರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದರು. ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದನ್ನು ಇಂದಿಗೂ ನಾನು ಸಮರ್ಥಿಸಿಕೊಳ್ಳುತ್ತೇನೆ. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಬುರ್ಖಾ ತೊಟ್ಟ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿನ ಸಂಘಟಕರನ್ನು ಕೇಳಿದೆ. ಮೊದಲೆಲ್ಲಾ ಮಹಿಳೆಯರು ಸಭಾ ಭವನದ ಮೇಲ್ಭಾಗದಲ್ಲಿ ಕುಳಿತಿರುತ್ತಿದ್ದರು. ಅವರು ಇತರರಿಗೆ ಕಾಣದಂತೆ ಪರದೆ ಹಾಕಲಾಗುತ್ತಿತ್ತು. ಆದರೆ ಈಗೀಗ ಅವರು ಸಭೆಯ ಮುಂದೆ ಕುಳಿತುಕೊಳ್ಳುತ್ತಾರೆ. ಅದು ಒಂದು ಬದಲವಾಣೆ. ಅಷ್ಟೇ ಅಲ್ಲ ಅಲ್ಲಿ ಭಾಗವಹಿಸಿದ್ದ ಮಹಿಳೆಯರ ಪೈಕಿ ಒಬ್ಬರು ನನ್ನಂತಹವನ ಬಗ್ಗೆ ಒಂದು ಕವನವನ್ನು ಬರೆದು ಸಭಿಕರ ಮುಂದೆ ಓದಿದರು. “ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೂ, ನುಡಿಸಿರಿಯಂತ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೂ ವ್ಯತ್ಯಾಸಗಳಿವೆ. ನುಡಿಸಿರಿಗೆ ಬರುವವರಲ್ಲಿ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ. ವಿಶ್ವ ಹಿಂದೂ ಪರಿಷತ್ ನ ಕಾರ್ಯಕ್ರಮದಲ್ಲಿ ಮಾತನಾಡಿ ಅವರನ್ನು ಪರಿವರ್ತಿಸುತ್ತೇವೆ ಎನ್ನುವುದು ಆಗದ ಮಾತು ಎಂದರು.dinesh-amin-umapathi

ಜನನುಡಿ ಸಂಘಟನೆ ಬಗ್ಗೆ ಮಾತನಾಡಿ ಕಾರ್ಯಕ್ರಮ ಆಯೋಜಕರು ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನ ಮಾಡಬೇಕು ಎಂದರು. ‘ಎರಡು ಬಾರಿ ಆಹ್ವಾನ ತಿರಸ್ಕರಿಸಿದ ಮೇಲೂ, ಮೂರನೇ ಬಾರಿಗೂ ನುಡಿಸಿರಿ ಆಯೋಜಕರು ನನ್ನಂತಹವನನ್ನು ಆಹ್ವಾನಿಸುವ ಪ್ರಯತ್ನ ಮಾಡುತ್ತಾರೆ. ಅವರು ಪ್ರತಿವರ್ಷ ಒಂದ್ಹತ್ತು ಜನರಿಗೆ ಗಾಳ ಹಾಕುತ್ತಾರೆ. ಅವರಲ್ಲಿ ಐದು ಜನ ಸಿಕ್ಕರೂ ಸಾಕು. ಆದರೆ ಜನನುಡಿಯ ಸಂಘಟಕರು ಕೋಮು ಸೌಹಾರ್ದ ವೇದಿಕೆಯವರು ಪಿ.ಎಫ್.ಐ ಜೊತೆ ಗುರುತಿಸಿಕೊಂಡಿದ್ದಾರೆ. ಅವರಿಗೆ ಪ್ರವೇಶ ಇಲ್ಲ ಘೋಷಿಸಿ ದೂರ ಇಡುತ್ತಾರೆ. ಅದು ಸರಿಯಲ್ಲ. ಸಣ್ಣಪುಟ್ಟ ವ್ಯತ್ಯಾಸಗಳನ್ನು ಬದಿಗಿಟ್ಟು ಎಲ್ಲರನ್ನೂ ಒಳಗೊಳ್ಳಬೇಕಾದ ಅಗತ್ಯವಿದೆ” ಎಂದರು.

ವಿಜಯ ಕರ್ನಾಟಕ ದೆಹಲಿ ವರದಿಗಾರ ಡಿ.ಉಮಾಪತಿ ತಮ್ಮ ತಣ್ಣನೆಯ, ಮೊನಚಾದ ಮಾತುಗಳಲ್ಲಿ ಮೋದಿ ನೇತೃತ್ವದ ಸರಕಾರ ದೆಹಲಿಯಲ್ಲಿ ಆಡಳಿತಕ್ಕೆ ಬಂದಾಗಿನಿಂದ ಎದುರಿಸುತ್ತಿರುವ ತಲ್ಲಣಗಳನ್ನು ಬಿಚ್ಚಿಟ್ಟರು. ಕೆಂಪು ಕೋಟೆಯಲ್ಲಿ ನಿಂತು ಹತ್ತು ವರ್ಷಗಳ ಕಾಲ ಕೋಮುವಾದಕ್ಕೆ ರಜೆ ಘೋಷಿಸುವ “ಸಾಹೇಬ್ರು”, ತಮ್ಮದೇ ಪಕ್ಷದ ಇತರ ನಾಯಕರು ಕೋಮುಗಲಭೆಗಳನ್ನು ಪ್ರಚೋದಿಸುವ ಹೇಳಿಕೆ ಕೊಟ್ಟಾಗ ಟೀಕಿಸುವುದಿಲ್ಲ. ದೇಶದ ಎಲ್ಲ ಆಗು-ಹೋಗುಗಳಿಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸುವ ಅವರು ತಮ್ಮ ನಾಯಕರ ಹೇಳಿಕೆಗಳ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ. ‘ಸಾಹೇಬರು’ ಜಶೋದಾ ಬೆನ್ ಗೆ ವಿಚ್ಛೇದನ ನೀಡಿಲ್ಲ. ಆ ಮಹಿಳೆ ತನಗೆ ಒಂದೇ ಒಂದು ದೂರವಾಣಿ ಕರೆ ಮಾಡಿದರೂ ಸಾಕು, ಅವರೊಂದಿಗೆ ಹೋಗಿ ಇರಲು ಸಿದ್ಧ ಎಂದು ಹಾತೊರೆಯುವ ಆ ಹೆಣ್ಣಿಗೆ ಯಾವುದೇ ಬೆಲೆ ಇಲ್ಲ. “ದೂರವಾಣಿ ಕರೆ ಬೇಡ ಬಿಡಿ. ಒಂದೇ ಒಂದು ಟ್ವೀಟ್ ಗೂ ಆಕೆ ಅರ್ಹಳಲ್ಲವೇ?” ಎಂದು ಪ್ರಶ್ನಿಸಿದರು.

‘ಸಾಹೇಬರು” ಇಂದು ತಮ್ಮ ಮನ್ ಕೀ ಬಾತ್ ನ ಮೂರನೇ ಕಂತಿನ ಭಾಷಣವನ್ನು ಆಕಾಶವಾಣಿಯಲ್ಲಿ ಮಾಡಿದರು. ಅವರ ಭಾಷಣವನ್ನು 45 ನಿಮಿಷಗಳ ಕಾಲ ಎಲ್ಲಾ ಸುದ್ದಿವಾಹಿನಿಗಳೂ ಕಮರ್ಷಿಯಲ್ ಬ್ರೇಕ್ ಇಲ್ಲದೆ ಪ್ರಸಾರ ಮಾಡಿದವು. ವಿಚಿತ್ರವೆಂದರೆ, ಆಕಾಶವಾಣಿಯಲ್ಲಿ ಪ್ರಸಾರವಾದ ಭಾಷಣಕ್ಕೆಯಾವ ದೃಶ್ಯಗಳಿರಲಿಲ್ಲ (visuals). ಮಾಧ್ಯಮ ಕ್ಷೇತ್ರದಲ್ಲಿರುವವರಿಗೆಲ್ಲಾ ಗೊತ್ತಿರುವ ಸಂಗತಿ ಎಂದರೆ, ಟಿವಿ ಸುದ್ದಿ ಚಾನೆಲ್ ಗಳು ವಿಶುಯಲ್ಸ್ ಇಲ್ಲದೆ ಯಾವುದೇ ಸುದ್ದಿ ಪ್ರಸಾರ ಮಾಡುವುದಿಲ್ಲ. ವಿಶುಯಲ್ಸ್ ಇಲ್ಲದ ಕಾರಣಕ್ಕೆ ಅನೇಕ ಸುದ್ದಿಗಳನ್ನೂ ಕಿಲ್ ಮಾಡಿರುವ ಉದಾಹರಣೆಗಳಿವೆ. “ಆದರೆ ಕಮರ್ಷಿಯಲ್ ಬ್ರೇಕ್ ಇಲ್ಲದೆ 45 ನಿಮಿಷ ಯಾವುದೇ ವಿಶುಯಲ್ಸ್ ಇಲ್ಲದೆ ಸುದ್ದಿ ಮಾಡಿದ್ದು ಅಪರೂಪ. ಹೀಗೆ ಸುದ್ದಿ ಮಾಡಲು ಸುದ್ದಿವಾಹಿನಿಗಳಿಗೆ ಎಲ್ಲಿಂದಲಾದರೂ ಹಣ ಬಂದಿರಬೇಕು ಎನ್ನುವುದು ನನ್ನ ಅನುಮಾನ. ಇದು ನಿಜವೂ ಇರಬಹುದು, ಅಲ್ಲದಿರಬಹುದು ಎಂದರು.

ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿ ಇಡೀ ದೇಶವನ್ನು ಜೈಲನ್ನಾಗಿ ಪರಿವರ್ತಿಸಿದರು. ಅದು ನಿಜವೂ ಕೂಡ. ದೆಹಲಿಯಲ್ಲಿ ಪತ್ರಕರ್ತನಾಗಿರುವ ನನಗೆ ಮುಂದಿನ ದಿನಗಳಲ್ಲಿ ದೇಶ ಮತ್ತೆ ಅಂತಹದೇ ಪರಿಸ್ಥಿತಿ ಎದುರಿಸಬಹುದು ಎನ್ನುವುದು ನನ್ನ ಅನುಮಾನ. “ಇಂದಿರಾಗಾಂಧಿ ಕಾಲದಲ್ಲಿದ್ದ ತುರ್ತು ಪರಿಸ್ಥಿತಿಗೂ ಈಗ ನಾನು ಆತಂಕದಿಂದ ಎದುರು ನೋಡುತ್ತಿರುವ ತುರ್ತು ಪರಿಸ್ಥಿತಿಗೂ ವ್ಯತ್ಯಾಸಗಳಿರುತ್ತವೆ. ಅಂದು ದೇಶ ಜೈಲಾಗಿತ್ತು. ಜೈಲಿನ ಬಾಗಿಲುಗಳ ಕೀಲಿ ಜೈಲರ್ ಗಳ ಜೇಬಿನಲ್ಲಿತ್ತು. ಆದರೆ ಇಂದು ಅಂತಹ ಪರಿಸ್ಥಿತಿ ಎದುರಾದರೆ, ಜೈಲಿನ ಕೀಲಿ ಜೈಲರ್ ಕೈಯಲ್ಲಿರುವುದಿಲ್ಲ. ನಮ್ಮ ಮಧ್ಯೆಯೇ ಇರುವ ಧರ್ಮ ರಕ್ಷಕರ ಜೇಬಿನಲ್ಲಿರುತ್ತದೆ ಎನ್ನುವುದೇ ನನ್ನ ಆತಂಕ” ಎಂದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಲ್. ಹನುಮಂತಯ್ಯ ಹಾಜರಿದ್ದರು.

ಫೋಟೋ ಕೃಪೆ: ಐವಾನ್ ಡಿಸಿಲ್ವಾ.