Daily Archives: December 12, 2014

ಇದು ಖರೆ ಖರೆ ಕಲಿಯುಗ..!


– ಡಾ.ಎಸ್.ಬಿ. ಜೋಗುರ


 

ಅದೊಂದು ಕಾಲವಿತ್ತು ಅಲ್ಲಿ ‘ಲೈಂಗಿಕತೆ’ ಮತ್ತು ‘ಪಾಪ’ ಎನ್ನುವ ಪರಿಕಲ್ಪನೆಗಳನ್ನು ಅವಳಿ ಜವಳಿ ಶಿಶುಗಳಂತೆ ಪರಿಗಣಿಸುತ್ತಿದ್ದರು. ನಾನು ಹೇಳುತ್ತಿರುವುದು ತೀರಾ ಪ್ರಾಚೀನ ಕಾಲದ ಹಕೀಕತ್ ಅಲ್ಲ, 19 ನೇ ಶತಮಾನದ ಆರಂಭವನ್ನು ಕುರಿತು. ಆಗ ಚರ್ಚುಗಳು ಪಶ್ಚಿಮದ ರಾಷ್ಟ್ರಗಳಲ್ಲಿಯ ಎಲ್ಲ ನಡಾವಳಿಯನ್ನು ಕರಾರುವಕ್ಕಾಗಿ ನಿಯಂತ್ರಿಸುತ್ತಿದ್ದ ಸಂದರ್ಭದಲ್ಲಿ ಲೈಂಗಿಕತೆಯ ಬಗ್ಗೆ ಮಾತನಾಡುವವನನ್ನು ಮತ್ತು ಬರೆಯುವವನನ್ನು ಒಬ್ಬ ನಾಸ್ತಿಕವಾದಿಯನ್ನು ದಿಟ್ಟಿಸುವ ಮಟ್ಟದಲ್ಲಿಯೇ ಕೆಂಗಣ್ಣಿನಿಂದ ಕೆಕ್ಕರಿಸಿ ಕುಕ್ಕುತ್ತಿದ್ದರು. ತೀರಾ ಸಾಮಾನ್ಯನಂತೂ ಆ ಬಗ್ಗೆ ಮಾತನಾಡುವುದು ದೂರ, ಕೇಳುವುದು ಕೂಡಾ ಮಹಾ ಪಾಪ..! ಎಂದು ಭಾವಿಸುತ್ತಿದ್ದ ಸಂದರ್ಭವದು. ಆ ದಿನಮಾನಗಳಲ್ಲಿಯೂ ಸಮಾಜದ ಕೆಂಗಣ್ಣಿನ ಕಾವನ್ನೂ ಲೆಕ್ಕಿಸದೇ ಅದರಲ್ಲಿ ಛಳಿ ಕಾಯಿಸಿಕೊಂಡವರೂ ಇದ್ದರು. ಅಂಥವರ ಸಾಲಲ್ಲಿ ಅಗ್ರಗಣ್ಯನಾದವನು ಇಂಗ್ಲಂಡದ ಬಹುದೊಡ್ಡ ಚಿಂತಕ ಬರ್ಟಂಡ್ ರಸಲ್.. ಆ ಕಾಲದಲ್ಲಿ ಅಂದರೆ 1929 ರಲ್ಲಿ ‘ಮ್ಯಾರೇಜ್ ಆಂಡ್ ಮಾರಲ್ಸ್’ ಎನ್ನುವ ಕೃತಿಯನ್ನು ಬರೆದು ಅಪಾರ ಜನಮನ್ನಣೆಯನ್ನು ಗಳಿಸುವ ಜೊತೆಗೆ abstract-painting-sexಲೈಂಗಿಕತೆಯ ಬಗ್ಗೆ ಹೀಗೆ ಇಷ್ಟೊಂದು ಮುಕ್ತವಾಗಿ ಬರೆಯಬಹುದೇ..? ಎನ್ನುವ ಪ್ರಶ್ನೆ ಮತ್ತು ಚರ್ಚೆ ಹುಟ್ಟಲು ಕಾರಣನಾದ. ಆತ ರಸ್ತೆಯಲ್ಲಿ ಹೋಗುವಾಗ ಕೆಲ ಕರ್ಮಠರು ಅವನೆಡೆಗೆ ಕೈ ಮಾಡಿ ನೋಡಲ್ಲಿ ‘ನಾಯಿ’ ಹೋಗುತ್ತಿದೆ ಎನ್ನುತ್ತಿದ್ದರು ಎನ್ನುವದನ್ನು ಸ್ವತ: ರಸಲ್ ಖುದ್ದಾಗಿ ಬರೆದುಕೊಂಡಿರುವದಿದೆ. ವಾಸ್ತವ ಏನೆಂದರೆ ರಸಲ್ ಆಗ ಲೈಂಗಿಕ ವಿಷಯವಾಗಿ ಬರೆದದ್ದು ಕೇವಲ ಒಂದು ಪ್ರತಿಶತ ಆದರೆ ಜನಸಾಮಾನ್ಯ ಮಾತ್ರ ಅದನ್ನೇ ತೊಂಬತ್ತು ಪ್ರತಿಶತ ಎಂದು ಭಾವಿಸಿರುವದಿತ್ತು. ರಸಲ್ ಗೆ 1950 ರ ಸಂದರ್ಭದಲ್ಲಿ ನೋಬೆಲ್ ಪ್ರಶಸ್ತಿ ಬಂದಾಗ ಅನೇಕರು ಇಂಥಾ ಪಶುವಿಗೂ ಪ್ರಶಸ್ತಿಯೇ..? ಎಂದು ಹುಬ್ಬೇರಿಸಿರುವದಿತ್ತು. ಲೈಂಗಿಕತೆಯ ವಿಷಯದ ಬಗ್ಗೆ ಬರೆಯುವುದು ಮಾತನಾಡುವುದು ತಪ್ಪು ಎನ್ನುವ ವಿಚಾರ ಲೈಂಗಿಕತೆ ಎನ್ನುವುದು ಒಂದು ;ಸಿನ್’ ಎನ್ನುವ ಪ್ರಜ್ಞೆ ಆಗ ಹೆಚ್ಚೆಚ್ಚು ವ್ಯಾಪಕವಾಗಿತ್ತು ಎನ್ನುವುದನ್ನು ಮರೆಯುವಂತಿಲ್ಲ.

ಈಗ ಕಾಲ ಸಿಕ್ಕಾಪಟ್ಟೆ ಬದಲಾಗಿದೆ. ಎಷ್ಟು ಬದಲಾಗಿದೆ ಎಂದರೆ ಲೈಂಗಿಕತೆ ಎನ್ನುವುದು ಒಂದು ಕಮಾಡಿಟಿ ಆಗಿ ಬಿಟ್ಟಿದೆ. ‘ಡರ್ಟಿ ಪಿಕ್ಚರ್’ ಎನ್ನುವ ಹೆಸರಿನ ಸಿನೇಮಾಗಳು ಕೂಡಾ ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಗೆಲ್ಲುತ್ತಿವೆ. ಟಿ.ವಿ.ಯೊಳಗಿನ ಸುಗಂಧ ದ್ರವ್ಯದ ಜಾಹೀರಾತುಗಳಷ್ಟೇ ಸಾಕು, ಮತ್ಯಾವ ನೀಲಿ ಚಿತ್ರಗಳನ್ನೂ ನೋಡುವ ಅವಶ್ಯಕತೆಯಿಲ್ಲ. ಬೀದಿ ಬೀದಿಗಳಲ್ಲಿ ಕಿಸ್ ಮಸ್ತಿಗೆ ಅವಕಾಶಕೊಡಿ ಎನ್ನುವ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಾಕಾಷ್ಟೆ ಅನಾವರಣಗೊಳ್ಳುತ್ತಿದೆ. ಇಂಥವನ್ನೇ ಬದಲಾವಣೆ ಎನ್ನುವದಾದರೆ ಕಿಸ್ ನಂತರದ ಹಂತಕ್ಕೆ ಇಳಿಯುವ ದಿನಗಳು ದೂರಿಲ್ಲ ಎನಿಸುತ್ತದೆ. ಒಂದು ಕಾಲ ನಮ್ಮನ್ನು ಹೇಗೆ ಪ್ರಭಾವಿಸುತ್ತದೆ ಎನ್ನಲಿಕ್ಕೆ ಇವೆಲ್ಲವೂ ಸಾಕ್ಷಿಗಳೇ.. ನಾವು ಚಿಕ್ಕವರಿದ್ದಾಗ ತಂದೆಯ ಎದುರು ನಿಂತು ತೀರಾ ಮಿನಿಮಮ್ ಬೇಡಿಕೆಗಳನ್ನು ಸಲ್ಲಿಸಲೂ ಹಿಂದೇಟು ಹಾಕುತ್ತಿದ್ದೆವು. ಅಶ್ಲೀಲ ಮಾತು, ProtectingChildrenfromSexTraffickingಸಿನೇಮಾ ಆಗ ಅಸಾಧ್ಯ. ಈಗ ಮೊಬೈಲ್ ಅನ್ನೋ ಇಂಚು ಪರದೆಯಲ್ಲಿ ಬೆರಳ ತುದಿಯಲ್ಲೇ ನೀಲಿ ಚಿತ್ರಗಳು ಓಡಾಡುತ್ತವೆ. ಈಗಿನ ಬಾಲಿವುಡ್ ಸಿನೇಮಾಗಳಂತೂ ಪೂರ್ತಿ ಮಸಾಲಾ ಮಯ. ಸಿನೇಮಾ ಬಿಟ್ಟು ಹೊರಬಂದರೆ ಮನಸು ನೆಟ್ಟಗಿರುತ್ತದೆ ಎನ್ನುವ ಗ್ಯಾರಂಟಿ ಕೊಡದಷ್ಟು ಅಶ್ಲೀಲ ದೃಶ್ಯಗಳು. ಇನ್ನು ನಮ್ಮ ಮನೆಗಳಲ್ಲಿರುವ ಕಿರುತೆರೆಯ ಪರಾಕ್ರಮ ಸಾಧಾರಣವಲ್ಲ. ಒಂದು ಉದಾಹರಣೆ ನೋಡಿ, ಅದೊಂದು ಚಾಕಲೇಟ್ ಜಾಹೀರಾತು. ತಂದೆಯಾದವನು ಮಗಳ ಜೊತೆಗೆ ಜಾಗಿಂಗ್ ಮಾಡುವ ಸನ್ನಿವೇಶವದು. ತಂದೆ ಮಗಳಿಗೆ ತಾನು ಇನ್ನೂ ಒಂದು ಸುತ್ತು ಹಾಕುತ್ತೇನೆ ಎಂದಾಗ ಮಗಳು ತೀರಾ ಖುಷಿಯಾಗಿ ಆಯ್ತು ಎನ್ನುತ್ತಾಳೆ. ಅಪ್ಪ ಆ ಕಡೆ ಹೋದದ್ದೇ ಈ ಹುಡುಗಿ ಸಿಳ್ಳು ಹೊಡೆದು ತನ್ನ ಬಾಯ್ ಫ಼್ರೆಂಡ್ ನನ್ನು ಕೂಗುತ್ತಾಳೆ. ಅಂದರೆ ಅಪ್ಪನಿಗೆ ಮಗಳಾದವಳು ಮೋಸ ಮಾಡುವದು ಕೂಡಾ ಒಂದು ಕಿಲಾಡಿತನವೇ ಎನ್ನುವಂತೆ ಜಾಹೀರಾತು ರೂಪಿಸಿರುವ ಮನ:ಸ್ಥಿತಿಯ ಅರಿವಾಗದೇ ಇರದು. ಇಂಥಾ ಒಂದೇ ಎರಡೇ.. ಇಡೀ ನಮ್ಮ ಸಾಮಾಜಿಕ ಪರಿಸರವೇ ವಿಕ್ಷಿಪ್ತವಾದ ಅನುಭವ ಬರುವಂತಿದೆ.

ಈ ನಡುವೆ ಮನುಷ್ಯ ಸಂಬಂಧಗಳು ಅದರಲ್ಲೂ ಗಂಡ-ಹೆಂಡತಿ, ತಂದೆ-ಮಗಳು, ಅಣ್ಣ ತಂಗಿ, ಚಿಕ್ಕಪ್ಪ, ದೊಡ್ಡಪ್ಪ ಇಂಥಾ ಸಂಬಂಧಗಳು ಮನುಷ್ಯ ಸಮಾಜಕ್ಕೆ ಶ್ರೇಷ್ಟತೆಯನ್ನು ತಂದು ಕೊಟ್ಟಂತವುಗಳು. ಈಗೀಗ ಆ ಸಂಬಂಧಗಳಲ್ಲಿಯ ಬಿಗಿತನವೂ ಜಿಗಿ ಸಾಯುತ್ತಿರುವ ಲಕ್ಷಣಗಳು ತೋರುತ್ತಿವೆ. ಪರಿಣಾಮವಾಗಿ ಅತ್ಯಾಚಾರ ಎನ್ನುವುದು ಯೋಚಿಸದಷ್ಟು, ಮಾತನಾಡದಷ್ಟು ರೇಜಿಗೆಯ ವಿಷಯವಾಗಿ ಪರಿಣಮಿಸಿದೆ. ಯಾಕೆಂದರೆ ನಮ್ಮ ಆಲೋಚನೆ ಮತ್ತು ಮಾತಿನ ವೇಗವನ್ನು ಮೀರಿ ಅದು ಜರುಗುತ್ತಿರುತ್ತದೆ. ನಮ್ಮ ಮಾತು ಮುಗಿಯುವದರೊಳಗೆ ಮತ್ತಷ್ಟು ಅತ್ಯಾಚಾರಗಳು ಘಟಿಸಿ ಒಂದು ಬಗೆಯ ವಿಷಣ್ಣತೆಯ ಭಾವ ಆವರಿಸಿಬಿಡುತ್ತದೆ. ಬೇಲಿಯೇ ಎದ್ದು ಹೊಲ ಮೇಯುವಂತೆ, ತಾಯಿಯ ಮೊಲೆ ಹಾಲು ನಂಜಾಗುವಂತೆ, ಬಿತ್ತಿದ ಬೀಜವನ್ನು ಭೂಮಿಯೇ ನಿಗಟುವಂತೆ.. ಎನ್ನುವ ಮಾತುಗಳು ಕಲಿಯುಗದಲ್ಲಿ ಖರೆ ಖರೆಯಾಗತೊಡಗಿವೆ. ಈಚೆಗೆ ದೆಹಲಿಯ ಪೋಲಿಸರು ದೆಹಲಿಯ ಹೈಕೋರ್ಟಿಗೆ ಕಳೆದ ಹತ್ತು ತಿಂಗಳ ಅವಧಿಯಲ್ಲಿ ಕೇವಲ ದೆಹಲಿಯಲ್ಲಿ ಮಾತ್ರ ಜರುಗಿದ ಅತ್ಯಾಚಾರದ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಒದಗಿಸಿತು. ಆ ಅಂಕಿ ಅಂಶಗಳನ್ನು ಗಮನಿಸಿದರೆ ಯಾರಿಗಾದರೂ ಶಾಕ್ ಆಗುವಂತಿದೆ. ಈ ವರ್ಷದ [2014] ಆರಂಭದ ಹತ್ತು ತಿಂಗಳ ಅವಧಿಯಲ್ಲಿ ಜರುಗಿದ ಅತ್ಯಾಚಾರಗಳ ಸಂಖ್ಯೆ 1704. ಇದಕ್ಕಿಂತಲೂ ಭಯಂಕರವಾದ ಮಾಹಿತಿ ಇನ್ನೊಂದಿದೆ. ಈ ಬಗೆಯ ಒಟ್ಟು ಅತ್ಯಾಚಾರಗಳಲ್ಲಿ ಸುಮಾರು 215 ಅತ್ಯಾಚಾರದ ಪ್ರಕರಣಗಳು ಅಗಮ್ಯಗಮನ [Incest Relations] ಸಂಬಂಧಗಳಲ್ಲಿಯೇ ಜರುಗಿರುವದಿದೆ. ಅಂದರೆ ಮನೆಯೊಳಗೆ, ನೆರೆಹೊರೆಯಲ್ಲಿ, ಸ್ನೇಹಿತರೆನಿಸಿಕೊಂಡವರು, ಸಹೋದರ ಸಂಬಂಧಗಳಲ್ಲಿ ಈ ಬಗೆಯ ಅತ್ಯಾಚಾರದ ಪ್ರಕರಣಗಳು ಜರುಗಿವೆ. ಈ ಪ್ರಮಾಣ ಹಿಂದೆಂದಿಗಿಂತಲೂ ಹೆಚ್ಚು ಅತ್ಯಾಚಾರಗಳು ಜರುಗಿದ ಬಗ್ಗೆ ಮಾಹಿತಿಯನ್ನು ಒದಗಿಸುತ್ತವೆ. ಅತ್ಯಂತ ಶ್ರೇಷ್ಟ ಎಂದು ಕರೆಯಿಸಿಕೊಳ್ಳುವ ಮನುಷ್ಯ ಸಂಬಂಧಗಳು ಕೂಡಾ ಇಂದು ಅರ್ಥ ಕಳೆದುಕೊಳ್ಳುತ್ತಿವೆ ಎನ್ನುವ ಸಂಗತಿ ಆ ಮೂಲಕ ಮನದಟ್ಟಾಗುತ್ತದೆ. ಈ ಬಗೆಯ ಅಗಮ್ಯಗಮನ ಸಂಬಂಧಗಳಲ್ಲಿ ಅತ್ಯಂತ ಬೇಸರದ ಸಂಗತಿಯೆಂದರೆ ತಂದೆ ಎನಿಸಿಕೊಳ್ಳುವ child-rapeಪ್ರಾಣಿಯಿಂದಲೇ ಅತ್ಯಚಾರಕ್ಕೆ ಒಳಗಾದ ಪ್ರಕರಣಗಳು ಸುಮಾರು 43 ರಷ್ಟಿವೆ. ಅಂಕಲ್ ಎಂದು ಕರೆಯಿಸಿಕೊಳ್ಳುತ್ತ, ಚಿಕ್ಕಪ್ಪ ಎಂದು ಗುರುತಿಸಿಕೊಂಡವರಿಂದ ಜರುಗಿದ ಅತ್ಯಾಚಾರದ ಪ್ರಕರಣಗಳು ಸುಮಾರು 36 ರಷ್ಟಿವೆ. ಸಹೋದರ ಸಂಬಂಧಗಳಲ್ಲಿ ಜರುಗಿದ ಅತ್ಯಾಚಾರದ ಪ್ರಕರಣಗಳ ಸಂಖ್ಯೆ 27, ಮಲತಂದೆ ಎನಿಸಿಕೊಂಡವನು ನಡೆಯಿಸಿದ ಅತ್ಯಾಚಾರದ ಪ್ರಮಾಣ 23 ಇನ್ನು ನೆರೆಹೊರೆಯವರು ಮತ್ತು ಕುಟುಂಬದ ಸ್ನೇಹಿತರು ಎನ್ನುವ ರಿಯಾಯತಿ ಪಡೆದು ಅತ್ಯಾಚಾರ ಎಸಗಿದವರ ಸಂಖ್ಯೆ 83. ಇನ್ನೊಂದು ವಿಷಾದದ ಸಂಗತಿಯೆಂದರೆ ಅಮಾಯಕ ಮುಗ್ದ ಮಕ್ಕಳನ್ನು ತಮ್ಮ ಕಾಮಪಿಪಾಸೆಗೆ ಬಳಸಿಕೊಳ್ಳುವ ಈ ದುರುಳರ ಮನ;ಸ್ಥಿತಿ ಒಂದರ್ಥದಲ್ಲಿ ವಿಕೃತವಾದುದೇ ಹೌದು. ಈ ಬಗೆಯ 1704 ಅತ್ಯಾಚಾರದ ಪ್ರಕರಣಗಳಲ್ಲಿ ಕೇವಲ 2 ವರ್ಷ ವಯೋಮಾನದ ಕೆಳಗಿನ ಮಕ್ಕಳು ನಾಲ್ಕು ಜನರಿದ್ದಾರೆ. 2-7 ವರ್ಷ ವಯೋಮಿತಿಯ ಮಕ್ಕಳು 115 ರಷ್ಟಿದ್ದಾರೆ. 7-12 ವರ್ಷ ವಯೋಮಿತಿಯ ಒಳಗಿನ ಸುಮಾರು 127 ಮಕ್ಕಳಿದ್ದಾರೆ. ಇವೆಲ್ಲ ಅಂಕಿ ಅಂಶಗಳು ಮನುಷ್ಯನಲ್ಲಿಯ ಮೃಗಾಲಯವನ್ನು ಪರಿಚಯಿಸುವ ಜೊತೆಗೆ, ಮನುಷ್ಯ ಸಂಬಂಧಗಳು ಯಾವ ರೀತಿಯ ಅನರ್ಥ ಮಾರ್ಗದಲ್ಲಿ ಹೊರಳುತ್ತಿವೆ ಎನ್ನುವ ಬಗ್ಗೆ ಮನದಟ್ಟಾಗುತ್ತದೆ.

ಈ ಬಗೆಯ ಅಗಮ್ಯಗಮನ ಸಂಬಂಧ ಇಂದು ನೆನ್ನೆಯದಲ್ಲ, ತೀರಾ ಪ್ರಾಚೀನ ಕಾಲದಿಂದಲೂ ಇವೆಯಾದರೂ ಈ ಪ್ರಮಾಣದಲ್ಲಿ ಹಿಂದೆಂದೂ ಇರಲಿಲ್ಲ. The_Bulgarian_rapeಎಲ್ಲೋ ಒಂದೋ ಎರಡೋ ಪ್ರತಿಶತದಲ್ಲಿ ಈ ಬಗೆಯ ಅಗಮ್ಯಗಮನ ಸಂಬಂಧಗಳು ಬೆಳಕು ಕಾಣುವದಿತ್ತು. ಅದೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಈ ಬಗೆಯ ಅತ್ಯಾಚಾರದ ಪ್ರಕರಣಗಳು ಹೆಚ್ಚಿದ್ದವು. ಈಗ ನಮ್ಮಲ್ಲಿ ಅವರನ್ನು ಮೀರಿಸುವ ಹಾಗೆ ಒಟ್ಟು ಪ್ರಮಾಣದಲ್ಲಿ ಸುಮಾರು 20 ಪ್ರತಿಶತದಷ್ಟು ಈ ಬಗೆಯ ಅಗಮ್ಯಗಮನ ಸಂಬಂದಗಳು ದಾಖಲಾಗುತ್ತಿರುವದನ್ನು ಗಮನಿಸಿದರೆ ಮನುಷ್ಯ ಸಂಬಂಧಗಳ ಬಗ್ಗೆ ಖಾಳಜಿ ಮತ್ತು ಗೌರವ ಇರುವ ಯಾರಿಗೇ ಆದರೂ ತಾತ್ಸಾರವಾಗುತ್ತದೆ.ದು ಕೇವಲ ರಾಜಧಾನಿಗೆ ಸಂಬಂಧ ಪಟ್ಟಂತೆ ಮಾತ್ರ ಎನ್ನುವದನ್ನೂ ನಾವು ಮರೆಯುವಂತಿಲ್ಲ. ಯಾವುದೇ ಬಗೆಯ ಅತ್ಯಾಚಾರಗಳಿರಲಿ ಅವು ಪೂರ್ಣ ಪ್ರಮಾಣದಲ್ಲಿ ಪೋಲಿಸ್ ಸ್ಟೇಷನ್ ಮೇಟ್ಟಿಲೇರಿ ದಾಖಲಾಗುವದಿಲ್ಲ. ಇನ್ನು ಅಗಮ್ಯಗಮನ ಸಂಬಂಧಗಳಲ್ಲಿ ಜರುಗುವ ಅತ್ಯಾಚಾರಗಳು ಬೆಳಕಿಗೆ ಬರುವುದೇ ತೀರಾ ಕಡಿಮೆ. ಹೀಗಿರುವಾಗಲೂ 215 ಪ್ರಕರಣಗಳು ಈ ಬಗೆಯ ಅಗಮ್ಯಗಮನ ಸಂಬಂಧಗಳಲ್ಲಿ ದಾಖಲಾಗಿರುವುದು ಬೆಚ್ಚಿ ಬೀಳಿಸುವಂತಹ ಸಂಗತಿ. ದೆಹಲಿ ಪೋಲಿಸರು ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಹಿಂದೆಂದಿಗಿಂತಲೂ ವಸ್ತುನಿಷ್ಟವಾಗಿ ದಾಖಲಿಸುತ್ತಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಬಾಲಕಿ ಪೋಲಿಸ್ ಸ್ಟೇಷನ್ ಗೆ ಬರಬೇಕೆಂದೆನೂ ಇಲ್ಲ, ಮಹಿಳಾ ಪೋಲಿಸರೇ ಸಮವಸ್ತ್ರ ಧರಿಸದೇ ಅವರ ಬಳಿ ತೆರಳಿ ವಿವರವಾದ ಮಾಹಿತಿ ಪಡೆಯುವದಿದೆ. ಹೀಗೆ ಮಾಡುವ ಮೂಲಕ ಪೋಲಿಸ್ ಇಲಾಖೆಯನ್ನು ಜನಸ್ನೇಹಿ ವ್ಯವಸ್ಥೆಯನ್ನಾಗಿ ರೂಪಿಸುವತ್ತ ಯತ್ನಿಸಲಾಗುತ್ತಿದೆ.

ಎಲ್ಲ ಜೀವಿಗಳಲ್ಲಿ ಮಾನವ ಜೀವಿ ಶ್ರೇಷ್ಟ ಅದಕ್ಕೆ ಕಾರಣ ಆತ ರೂಪಿಸಿಕೊಂಡ ಸಂಸ್ಕೃತಿ ಮತ್ತು ಸಾಮಾಜಿಕ ವ್ಯವಸ್ಥೆ. ಇನ್ನು ಈ ಸಾಮಾಜಿಕ ವ್ಯವಸ್ಥೆಗೆ ಜೀವ ಮತ್ತು ಮೌಲ್ಯ ಬಂದದ್ದೇ ಮನುಷ್ಯ ಸಂಬಂಧಗಳಿಂದಾಗಿ. ಇಂಥಾ ಸಾಮಾಜಿಕ ಸಂಬಂಧಗಳನ್ನು ಧಿಕ್ಕರಿಸಿ ವ್ಯವಹರಿಸುವವರ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅದಕ್ಕೆ ಅತಿ ಮುಖ್ಯವಾದ ಕಾರಣ ನೈತಿಕ ಅಧ:ಪತನ ಮತ್ತು ಬದಲಾಗುತ್ತಿರುವ ಸಾಮಾಜಿಕ ಜೀವನ. ಸಂಬಂಧಗಳಲ್ಲಿಯ ಸತ್ವ ಮತ್ತು ಶಕ್ತಿಯನ್ನು ಕುರಿತು ಯೋಚಿಸುವ ಮತ್ತು ಅದನ್ನು ಮನದಟ್ಟು ಮಾಡಿಸುವ ಪರಿಸರದ ಕೊರತೆಯೂ ಹೀಗೆಲ್ಲಾ ಆಗಲು ಮುಖ್ಯ ಕಾರಣ. ಮನುಷ್ಯ ಸಂಬಂಧಗಳು ಮಾರ್ಗ ಬದಲಿಸುತ್ತಿವೆ. ಅದರ ಪರಿಣಾಮವಾಗಿ ಮಾನವನಲ್ಲಿಯೇ ಪಶುಸದೃಶವಾದ ವರ್ತನೆಗಳು ಮತ್ತೆ ಮತ್ತೆ ಗೋಚರವಾಗತೊಡಗಿವೆ. ಸರಿ ತಪ್ಪುಗಳ ಬಗ್ಗೆ ಪಾಠ ಹೇಳಿಕೊಡುವ ನೆಲದಲ್ಲಿಯೇ ಅತ್ಯಾಚಾರಗಳು ಜರುಗುತ್ತಿವೆ. ಒಳ್ಳೆಯ ಸಂಸ್ಕಾರವನ್ನು ಹೇಳಿಕೊಡಬೇಕಾದ ಕುಟುಂಬದಲ್ಲಿಯೇ ಈ ಬಗೆಯ ಘಟನೆಗಳು ನಡೆಯುತ್ತಿರುವದು ವಿಷಾದನೀಯ. rape-illustrationಮಕ್ಕಳು ತಪ್ಪು ಮಾಡಿದಾಗ ಪಾಲಕರು ಬುದ್ದಿ ಮಾತನ್ನು ಹೇಳುವುದು ವಾಡಿಕೆ. ಇನ್ನು ಪಾಲಕರೇ ತಪ್ಪು ಮಾಡಿದರೆ..? ಇಲ್ಲಿ ಜರುಗಿದ ಅತ್ಯಾಚಾರಗಳಲ್ಲಿ ಸುಮಾರು 43 ರಷ್ಟು ಅಪರಾಧಿಗಳು ತಂದೆಯ ಸ್ಥಾನದಲ್ಲಿದ್ದವರು. ಅವರಲ್ಲಿ 23 ರಷ್ಟು ಜನ 50 ವರ್ಷದ ಗಡಿ ದಾಟಿದವರು. ಇವೆಲ್ಲವನ್ನು ನೋಡಿದಾಗ ನಮ್ಮ ಸಾಮಾಜಿಕ ವ್ಯವಸ್ಥೆ ಬದಲಾವಣೆ ಹೊಂದುತ್ತಿರುವ ರೀತಿ ಮಾತ್ರ ನೆಟ್ಟಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅತ್ಯಂತ ಅಸಹ್ಯ ಮತ್ತು ತುಚ್ಚ ಎನ್ನಬಹುದಾದ ಈ ಅಗಮ್ಯಗಮನ ಸಂಬಂಧಗಳನ್ನು ಸಹಿಸಿಕೊಳ್ಳುವಷ್ಟು ನಮ್ಮ ಸಮಾಜ ಉದಾರವಾಗುವ ಅವಶ್ಯಕತೆಯಿಲ್ಲ ಎನಿಸುತ್ತದೆ.

ಈ ಲೇಖನ ಬರೆದು ಮುಗಿಸುವ ಹೊತ್ತಿಗೆ ಹುಡುಗಿಯರನ್ನು ಚುಡಾಯಿಸುವ ಖಯಾಲಿಯ ಹುಡುಗರನ್ನು ಹರಿಯಾಣದ ರೋಹ್ಟಕ್ ನಲ್ಲಿ ಮತ್ತು ನಮ್ಮದೇ ನಾಡಿನ ಮೈಸೂರಿನಲ್ಲಿ ಆ ಟೀಜಿಂಗ್ ಗೆ ಒಳಗಾದ ಹುಡುಗಿಯರೇ ಖುದ್ದಾಗಿ ಕಪಾಳ ಮೋಕ್ಷ ಮಾಡಿ ಮೆಚ್ಚುಗೆ ಬಹುಮಾನ ಪಡೆದ ಸುದ್ದಿಗಳು ಬರುತ್ತಿವೆ. ಇದು ನಿಜವಾಗಿಯೂ ಒಳ್ಳೆಯ ಬೆಳವಣಿಗೆಯೇ.. ಹೀಗೆ ಮತ್ತೆ ಮತ್ತೆ ಇಂಥಾ ತದಕುವ ಸುದ್ಧಿಗಳು ಬಯಲಾಗಬೇಕಿದೆ. ಅವರ ತಂಟೆಗೆ ಹೋಗುವುದೇ ಬೇಡ ಎನ್ನುವಂತಾಗುವವರೆಗೆ ಅತ್ಯಾಚಾರದ ಪ್ರಕರಣಗಳು ಕಡಿಮೆಯಾಗುವುದಿಲ್ಲ.