ದಿಲ್ಲಿ ಚುನಾವಣೆ ಕಾವು: ಸದ್ಯಕ್ಕೆ ಇಬ್ಬರದ್ದೂ ಸಮಪಾಲು!

– ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ.]

ದಿಲ್ಲಿಯ ವಿಧಾನಸಭೆ ಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಇಲ್ಲಿನ ವಾತಾವಣ ಅಕ್ಷರಶಃ ಬಿಸಿಯಾಗುತ್ತಿದೆ. ಕಳೆದ ವಾರವಿಡೀ ಬೀಸುತ್ತಿದ್ದ ತಣ್ಣನೆಯ ಗಾಳಿ ಮತ್ತು ಕೊರೆಯುವ ಚಳಿ ಶನಿವಾರದಿಂದ ಈಚೆಗೆ ಕಮ್ಮಿಯಾಗಿದೆ. ದೇಶದ ರಾಜಧಾನಿಯ ಶಕ್ತಿಪೀಠಕ್ಕಾಗಿ ವರ್ಷದ ಅಂತರದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‍ ಕಣದಲ್ಲಿದೆ. ಆದರೆ, ಇದರ ಅಭ್ಯರ್ಥಿಗಳು modi-kejriwalಜನರ ಗಮನ ಸೆಳೆಯುವಲ್ಲಿ ಎಲ್ಲಾ ರೀತಿಯಿಂದಲೂ ವಿಫಲರಾಗಿದ್ದಾರೆ. ಸಾಮಾನ್ಯ ಜನರ ಪ್ರತಿನಿಧಿ ಎಂಬ ಬ್ರಾಂಡ್‍ ವ್ಯಾಲ್ಯೂವನ್ನು ಕಾಂಗ್ರೆಸ್‍ನಿಂದ ಕಿತ್ತುಕೊಂಡಿರುವ ಆಮ್ ಆದ್ಮಿ ಪಕ್ಷ ಹಾಗೂ ಮೋದಿ ಅಲೆಯ ಮೇಲೆ ಇಡೀ ದೇಶವನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವ ಭರವಸೆಯಲ್ಲಿರುವ ಬಿಜೆಪಿ ಪಕ್ಷಗಳು ದಿಲ್ಲಿಯ ‘ಸುಲ್ತಾನೇಟ್’ಗಾಗಿ ಅಂತಿಮ ಹಂತದ ಹಣಾಹಣಿ ನಡೆಸುತ್ತಿವೆ. ಇದು ಪುಟ್ಟ ರಾಜ್ಯವೊಂದರ ವಿಧಾನಸಭೆ ಚುನಾವಣೆ ಮಾತ್ರವೇ ಆಗಿದ್ದರೂ, ಇಲ್ಲಿ ಮೂಡುವ ಫಲಿತಾಂಶ ಇಡೀ ದೇಶದ ರಾಜಕೀಯ ಭವಿಷ್ಯದ ಮೇಲೆ ಮುಂದಿನ ದಿನಗಳಲ್ಲಿ ಭಾರಿ ಪ್ರಭಾವವನ್ನು ಬೀರಲಿದೆ. ಹೀಗಾಗಿಯೇ, ದೇಶಾದ್ಯಂತ ದಿಲ್ಲಿಯ ಈ ಚುನಾವಣೆ ಕುರಿತು ಭಾರಿ ಕುತೂಹಲವೊಂದು ಮೂಡಿದೆ. ಹೀಗಾಗಿಯೇ ಇದು ಕೇವಲ ಅಧಿಕಾರದ ಗದ್ದುಗೆಗಾಗಿ ನಡೆಯುತ್ತಿರುವ ಚುನಾವಣೆ ಮಾತ್ರವಾಗಿ ಕಾಣುತ್ತಿಲ್ಲ. ಸಿದ್ಧಮಾದರಿಯ ಚುನಾವಣೆ ಸೂತ್ರಗಳನ್ನು ಪಕ್ಕಕ್ಕೆ ತಳ್ಳಿ, ಹೊಸ ತಲೆಮಾರಿ ಕದನಗಳಿಗೆ ಸಾಧ್ಯತೆಯೊಂದು ಇಲ್ಲಿ ಸದ್ದಿಲ್ಲದೆ ರೂಪುಗೊಳ್ಳುತ್ತಿದೆ.

ದಿಲ್ಲಿಯ ಜನ ನಿಜಕ್ಕೂ ಪ್ರಜ್ಞಾವಂತರು. ಇಲ್ಲಿನ ಸಾಮಾನ್ಯ ಜನರಲ್ಲಿ ಇರುವಷ್ಟು ರಾಜಕೀಯ ಪ್ರಜ್ಷೆ ಹಾಗೂ ಸುತ್ತಲಿನ ಬೆಳವಣಿಗೆಗಳ ಕುರಿತು ಆಸಕ್ತಿ ದೇಶದ ಇನ್ಯಾವುದೇ ಭಾಗಗಳಲ್ಲಿ ಕಾಣಸಿಗುವುದರ ಕುರಿತು ಅನುಮಾನಗಳಿವೆ. ಆಟೋ ಚಾಲಕರಿಂದ ಆರಂಭವಾಗಿ, ಬೀದಿ ಬದಿಯ ಕುರಕಲು ತಿಂಡಿಗಳನ್ನು ಮಾರುವ ವ್ಯಾಪಾರಿಗಳವರೆಗೆ ದಿಲ್ಲಿಯ ರಾಜಕೀಯದ ಕುರಿತು ಮಾಹಿತಿ ಇದೆ. ಇಲ್ಲಿನ ಬೆಳವಣಿಗೆಗಳ ಕುರಿತು ಅವರಿಗೆ ತಮ್ಮದೇ ಆದ ಅಭಿಪ್ರಾಯಗಳಿವೆ. ಅಷ್ಟೇಕೆ, ನಮ್ಮ ಕರ್ನಾಟಕದ ರಾಜಕೀಯ ಬೆಳವಣಿಗೆಗಳು ಹಾಗೂ ಸಿದ್ದರಾಮಯ್ಯ ಸರಕಾರದ ಯೋಜನೆಗಳ ಕುರಿತು ಇಲ್ಲಿನ ಆಟೋ ಚಾಲಕರೊಬ್ಬರು ತಿಳಿವಳಿಕೆಯಿಂದ ಮಾತನಾಡಿದ್ದು ಅಚ್ಚರಿ ಮೂಡಿಸುವಂತಿತ್ತು. “ನಿಮ್ಮಲ್ಲಿನ ಕಾಂಗ್ರೆಸ್‍ ದಿಲ್ಲಿಯ ಕಾಂಗ್ರೆಸ್‍ನಂತೆ ಅಲ್ಲ. ಅನ್ನಭಾಗ್ಯ ತರುವ ಮೂಲಕ ಬಡಜನರ ಹಸಿವಿನ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಬಹುಶಃ ಅದನ್ನು ಇಲ್ಲಿ ಮಾಡಿದ್ದರೆ ದಿಲ್ಲಿ ಕಾಂಗ್ರೆಸ್‍ ಜುಗ್ಗಿ (ಕೊಳೆಗೇರಿ)ಗಳಿಂದ ಕಣ್ಮರೆಯಾಗುತ್ತಿರಲಿಲ್ಲ. arvind-kejriwal-delhi-electionsಇಲ್ಲಿನ ಕಾಂಗ್ರೆಸ್‍ಗೆ ಈ ಬಾರಿ ನಿಮ್ಮಿಂದಲೇ ಹಣ ಬಂದಿರಬಹುದು,’’ ಎಂದ ಆಟೋ ಚಾಲಕರೊಬ್ಬರ ಹೆಸರು ರಾಮ್‍ಜಿ. ಉತ್ತರ ಪ್ರದೇಶದ ಇವರು ದಿಲ್ಲಿಯ ಪಹಾಡ್‍ಗಂಜ್ ಎಂಬ ಪ್ರದೇಶದಲ್ಲಿ ವಾಸವಾಗಿದ್ದಾರೆ. ಪತ್ನಿ ಮತ್ತು ಒಬ್ಬರು ಪುಟ್ಟ ಮಕ್ಕಳ ಚೊಕ್ಕ ಸಂಸಾರ ಅವರದ್ದು.

ರಾಮ್‍ಜಿ ಹಾಗೆಯೇ ಸುಮಾರು ಎರಡು ಲಕ್ಷ ಆಟೋ ಚಾಲಕರು ದಿಲ್ಲಿಯಲ್ಲಿದ್ದಾರೆ. ಇವರಲ್ಲಿ ಬಹುತೇಕರು ಒಂದು ಕಾಲಕ್ಕೆ ಕಾಂಗ್ರೆಸ್‍ ಪಕ್ಷದ ಮತದಾರರಾಗಿದ್ದವರು. ಆಮ್‍ ಆದ್ಮಿ ಪಕ್ಷದ 49 ದಿನಗಳ ಆಡಳಿತದಲ್ಲಿ ವಿದ್ಯುತ್ ಹಾಗೂ ನೀರಿನ ಮಾಸಿಕ ಬಿಲ್‍ನಲ್ಲಿ ತಂದ ಬದಲಾವಣೆ ಇವರಲ್ಲಿ ಹೊಸ ಆಶಯದ ಅಲೆಯನ್ನು ಎಬ್ಬಿಸಿದೆ. ಜತೆಗೆ ಸಿಎನ್‍ಜಿ ಗ್ಯಾಸ್‍ನ ಬೆಲೆಯಲ್ಲಿ ಆದ ಇಳಿಕೆಯ ನೇರ ಫಲಾನುಭವಿಗಳು ಇವರು. ಹೀಗಾಗಿ, ಆಮ್‍ ಆದ್ಮಿ ಪಕ್ಷ ನಿರಾಯಾಸವಾಗಿ ಈ ವರ್ಗದಲ್ಲಿ ನೆಲೆಯೂರಿದೆ. ಇದರ ಪರಿಣಾಮ ಕಾಂಗ್ರೆಸ್‍ ಮತ್ತು ಬಿಜೆಪಿ ಈ ಬಾರಿಯ ತಮ್ಮ ಚುನಾವಣೆ ಪ್ರಣಾಳಿಕೆಗಳಲ್ಲಿ ಬಡಜನರನ್ನು ಆಕರ್ಷಿಸಲು ವಿದ್ಯುತ್‍ ಬಿಲ್‍ನಲ್ಲಿ ಇಳಿಕೆ, ಉಚಿತ ನೀರಿನ ಸೌಕರ್ಯದ ಭರವಸೆ ನೀಡಿವೆ. ವಿಶೇಷವಾಗಿ ಕಾಂಗ್ರೆಸ್‍ನ ಪ್ರಣಾಳಿಕೆ ಆಪ್‍ನ ಮಕ್ಕಿ ಕಾ ಮಕ್ಕಿ ಎಂಬ ಟೀಕೆಗಳು ವ್ಯಕ್ತವಾಗಿವೆ.

ಇನ್ನೊಂದು ಆಯಾಮದಲ್ಲಿ ದಿಲ್ಲಿ ಚುನಾವಣೆ ಇಬ್ಬರು ವ್ಯಕ್ತಿಗಳ ನಡುವಿನ ನೇರ ಕದನದಂತೆ ಬಿಂಬಿತವಾಗುತ್ತಿದೆ. ಶನಿವಾರ ಬಹಿರಂಗ ಸಭೆಯಲ್ಲಿ ಮಾತನಾಡಿದ ಮೋದಿ ತಮ್ಮ ಭಾಷಣದ ಅವಧಿಯ ಬಹುತೇಕ ಭಾಗವನ್ನು ಮೀಸಲಿಟ್ಟಿದ್ದು ಆಮ್ ಆದ್ಮಿ ಪಕ್ಷದ ಟೀಕೆಗಾಗಿ. ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಬಿಜೆಪಿಯ ಒಟ್ಟಾರೆ ಪ್ರಚಾರದ ಶ್ರಮ ಆಪ್‍ನ ಟೀಕೆ ಮಾಡುವುದಕ್ಕೆ ವ್ಯರ್ಥವಾಗತ್ತಿರುವಂತೆ ಕಾಣಿಸುತ್ತಿದೆ. ಕೀರ್ತಿನಗರದ ಮೆಟ್ರೊ ರೈಲು ನಿಲ್ದಾಣದಲ್ಲಿ ಸಿಕ್ಕ ಮುಂಬೈ ಮೂಲದ ಖಾಸಗಿ ಚುನಾವಣಾ ಸಮೀಕ್ಷಕ ಅಭಿಷೇಕ್ ಭಟ್‍ ಎಂಬುವವರು ತಮ್ಮ ಅನುಭವಗಳನ್ನು ಹಂಚಿಕೊಂಡರು. “ನಾನು ಆರ್‍ಎಸ್‍ಎಸ್‍ನ ಪ್ರಾಂಥ್ಯ ಪ್ರಮುಖ್‍ ಒಬ್ಬರನ್ನು ಭೇಟಿ ಮಾಡಿದ್ದೆ. ಅವರಿಗೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಎಂಪಿಗಳು ಹಾಗೂ ಕೆಲವು ಸಚಿವರ ನಡಳಿಕೆಯಲ್ಲಿ ಆದ ಬದಲಾವಣೆ ಕುರಿತು ಅಸಮಾಧಾನ ಇದೆ. ನೈತಿಕವಾಗಿ ಅವರು ಹಾಳಾಗಿ ಹೋಗಿದ್ದಾರೆ ಎಂದು ಅಸಮಾಧಾನ ಹಂಚಿಕೊಂಡರು,’’ ಎಂದರು. kejriwal_aap_pti_rallyಇದು ಬಿಜೆಪಿಯ ಕಾರ್ಯಕರ್ತರ ,ಮಟ್ಟದಲ್ಲೂ ಇದೆ. ಮಂಗೋಲ್‍ಪುರಿಯ ಗಲ್ಲಿಯೊಂದರಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದ ಸೋನಾಲಿ ಮತ್ತವರ ತಂಡದವರ ಮಾತುಗಳಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗಿತ್ತು. “ನಮ್ಮವರನ್ನು ಗೆಲ್ಲಿಸಿ ಕಳುಹಿಸಿದರೂ ಅವರು ಕೆಲಸ ಮಾಡುವುದು ಇಷ್ಟರಲ್ಲೇ ಇದೆ. ಆದರೆ ಈ ಚುನಾವಣೆಯಲ್ಲಿ ನಾವು ಸೋತರೆ ಮೋದಿ ಅಂತಹ ನಾಯಕರಿಗೆ ಅವಮಾನ ಮಾಡಿದಂತೆ ಆಗುತ್ತದೆ. ಅದಕ್ಕಾದರೂ ನಾವು ಕಷ್ಟಪಡಬೇಕಿದೆ,’’ ಎಂದರು ಸೋನಾಲಿ. ಅವರ ಪಕ್ಕದಲ್ಲಿದ್ದ ನಾತುರಾಮ್ ಠಾಕೂರ್‍ ಎಂಬ ಯುವಕ, “ಈ ಆಮ್ ಆದ್ಮಿಗಳು ಎಂದು ಹೇಳಿಕೊಳ್ಳುವವರೂ ಅಧಿಕಾರಕ್ಕೆ ಬಂದ ನಂತರ ಇನ್ನೋವಾದಲ್ಲಿ ಸುತ್ತುತ್ತಿದ್ದರು. ಬಹುಶಃ ಇನ್ನಷ್ಟು ಕಾಲ ಅಧಿಕಾರದಲ್ಲಿ ಇದ್ದಿದ್ದರೆ ಅವರೇನು ಎಂಬುದು ಜನರಿಗೆ ಗೊತ್ತಾಗುತ್ತಿತ್ತು. ಈಗ ಅವರ ಮುಖವಾಡ ಜನರ ಮುಂದೆ ಬಯಲು ಮಾಡುವುದು ಕಷ್ಟವಾಗುತ್ತಿದೆ,’’ ಎಂದ.

ಸದ್ಯ ಇಲ್ಲಿನ ತಳಮಟ್ಟದ ಪ್ರಚಾರ ವೈಖರಿಗಳು, ಜನರ ಅಭಿಪ್ರಾಯಗಳು ಹಾಗೂ ಮೇಲ್ನೋಟಕ್ಕೆ ಕಾಣಿಸುವ ಅಂಶಗಳನ್ನು ಮಾತ್ರವೇ ಇಟ್ಟುಕೊಂಡು ಹೇಳುವುದಾದರೆ, ದಿಲ್ಲಿ ಗದ್ದುಗೆ ಬಿಜೆಪಿ ಮತ್ತು ಆಪ್‍ಗೆ ಸಮಾನ ಅಂತರದಲ್ಲಿವೆ. ಒಂದು ಕಡೆ ಮೋದಿ ಮತ್ತೊಂದೆಡೆ ಕೇಜ್ರಿವಾಲ್‍ ತಮ್ಮ kejriwal-modiಕಾರ್ಯಕರ್ತರಿಂದ ಹಿಡಿದು ಜನರವರೆಗೆ ಪ್ರಭಾವ ಬೀರುತ್ತಿದ್ದಾರೆ. ಹೀಗಾಗಿ ಆಯಾ ಕ್ಷೇತ್ರದ ಅಭ್ಯರ್ಥಿಗಳಿಗಿಂತ ಹೆಚ್ಚಾಗಿ ಇಬ್ಬರು ನಾಯಕರ ಚಿನ್ಹೆಗಳಿಗೆ ಮತಗಳು ಬೀಳಲಿವೆ. ಇನ್ನೂ ಒಂದು ವಾರದ ಬಹಿರಂಗ ಪ್ರಚಾರ ಬಾಕಿ ಇದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಆಗಬಹುದಾದ ಬದಲಾವಣೆಯೇ ಚುನಾವಣೆ ಫಲಿತಾಂಶವನ್ನು ನಿರ್ಧರಿಸಲಿದೆ. ಅಲ್ಲಿವರೆಗೂ ಇಲ್ಲಿ ನಡೆಯುವ ಪ್ರತಿ ಬೆಳವಣಿಗೆಗಳೂ ಒಂದೊಂದು ಕತೆಯನ್ನು ಹೇಳುತ್ತವೆ.

One thought on “ದಿಲ್ಲಿ ಚುನಾವಣೆ ಕಾವು: ಸದ್ಯಕ್ಕೆ ಇಬ್ಬರದ್ದೂ ಸಮಪಾಲು!

  1. Ananda Prasad

    ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವು ಗೆಲ್ಲುವುದು ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯು ವಿಕಾಸ ಹೊಂದುವ ನಿಟ್ಟಿನಲ್ಲಿ ಅತ್ಯಗತ್ಯವಾಗಿದೆ ಏಕೆಂದರೆ ಚುನಾವಣಾ ವೆಚ್ಚಕ್ಕಾಗಿ ಆಮ್ ಆದ್ಮಿ ಪಕ್ಷವು ಪಾರದರ್ಶಕ ನಿಧಿ ಸಂಗ್ರಹ ವ್ಯವಸ್ಥೆಯನ್ನು ಹೊಂದಿದೆ ಮತ್ತು ಪಕ್ಷಕ್ಕಾಗಿ ಹಣ ನೀಡಿದವರ ಸಂಪೂರ್ಣ ಪಟ್ಟಿಯನ್ನು ಸಾರ್ವಜನಿಕವಾಗಿ ತನ್ನ ವೆಬ್ ಸೈಟಿನಲ್ಲಿ ತೋರಿಸುತ್ತಿರುವ ಭಾರತದ ಏಕೈಕ ರಾಜಕೀಯ ಪಕ್ಷವಾಗಿದೆ. ಆರ್ಥಿಕವಾಗಿ ಆಮ್ ಆದ್ಮಿ ಪಕ್ಷವು ಜನತೆಯ ನೆರವಿನಿಂದ ನಡೆಯುತ್ತಿರುವ ಕಾರಣ ಜನರಿಗಾಗಿ ಸೂಕ್ತ ಕಾನೂನುಗಳನ್ನು ರೂಪಿಸುವ ನೈತಿಕ ಬಲವನ್ನು ಹೊಂದಿದೆ. ಬಂಡವಾಳಶಾಹಿಗಳ, ಕಪ್ಪು ಹಣದ ಖದೀಮರ ಹಂಗಿನಲ್ಲಿರುವ ರಾಜಕೀಯ ಪಕ್ಷಗಳಿಂದ ಜನಪರವಾದ ಕಾನೂನು ರೂಪಿಸುವಿಕೆ ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿಯೂ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವು ಗೆಲ್ಲುವುದು ಭಾರತದ ರಾಜಕೀಯ ವ್ಯವಸ್ಥೆಯ ಬದಲಾವಣೆಯ ನಿಟ್ಟಿನಲ್ಲಿ ಹೊಸ ತಿರುವನ್ನು ಪಡೆದುಕೊಳ್ಳುವಲ್ಲಿ ಸಹಾಯಕವಾಗಲಿದೆ.

    ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ಸಹಭಾಗಿಯಾಗಿ ಕೇಜರಿವಾಲ್ ರಾಜಕೀಯ ಪಕ್ಷ ಸ್ಥಾಪಿಸುವುದನ್ನು ಬಲವಾಗಿ ವಿರೋಧಿಸಿದ್ದ ಕಿರಣ್ ಬೇಡಿ ಬಿಜೆಪಿ ಪಕ್ಷವನ್ನು ಸೇರಿದ್ದು ಬಹಳ ದೊಡ್ಡ ವ್ಯಂಗ್ಯವಾಗಿದೆ. ಇವರಿಗೆ ನಿಜವಾಗಿ ರಾಜಕೀಯದಲ್ಲಿ ಬದಲಾವಣೆ ತರುವ ತುಡಿತ ಇದ್ದರೆ ಆಮ್ ಆದ್ಮಿ ಪಕ್ಷವನ್ನು ಸೇರುವುದು ನೈತಿಕವಾಗಿ ಸರಿಯಾದ ನಿರ್ಧಾರವಾಗುತ್ತಿತ್ತು. ಇದುವರೆಗಿನ ಬೆಳವಣಿಗೆಗಳನ್ನು ನೋಡಿದರೆ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವು ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುವ ಸಂಭವ ನಿಚ್ಚಳವಾಗಿದೆ. ದೆಹಲಿಯ ಮತದಾರರು ಹೊಸ ನೈತಿಕ ರಾಜಕೀಯಕ್ಕೆ ಬೆಂಬಲ ನೀಡುತ್ತಾರೆ ಎಂದು ಆಶಿಸೋಣ.

    Reply

Leave a Reply

Your email address will not be published. Required fields are marked *