ಸ್ವಾತಂತ್ಯದ ಗಣಪತಿ


– ಡಾ.ಎನ್.ಜಗದೀಶ್ ಕೊಪ್ಪ


ಸ್ವಾತಂತ್ರ್ಯ ಚಳವಳಿಗೆ ಈ ನೆಲದಲ್ಲಿ ಅನೇಕ ಇತಿಹಾಸಗಳಿವೆ. ಅದೇ ರೀತಿ ಅನೇಕ ಆಯಾಮಗಳು ಕೂಡ ಇವೆ. 84 ವರ್ಷಗಳ ಹಿಂದೆ ಬೆಂಗಳೂರಿನ ಸುಲ್ತಾನ್ ಪೇಟೆಯ ಶಾಲೆಯ ಮಕ್ಕಳಿಗೆ ಮಣ್ಣಿನಡಿಯಲ್ಲಿ ಸಿಕ್ಕ ಗಣಪತಿಯ ವಿಗ್ರಹವೊಂದು ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಚಳವಳಿಗೆ ಪರೋಕ್ಷವಾಗಿ ಪ್ರೇರಣೆಯಾದ ಘಟನೆ ಇದೀಗ ಇತಿಹಾಸದ ಗರ್ಭದಲ್ಲಿ ಲೀನವಾಗಿದೆ. ಆದರೆ, ಇವತ್ತಿಗೂ ಇದೇ ಬೆಂಗಳೂರಿನ ಆರ್ಕಾಟ್ ಶ್ರೀನಿವಾಸ್‌ಚಾರ್ ರಸ್ತೆಯ ಸರ್ಕಾರಿ ಶಾಲೆಯ ಅಂಗಳದಲ್ಲಿರುವ ಈ ಮೂರ್ತಿ ಸ್ಕೂಲ್ ಗಣಪ ಎಂಬ ಹೆಸರಿನಿಂದ ಕರೆಸಿಕೊಂಡು ಪೂಜಿಸಿಕೊಳ್ಳುತ್ತಿದ್ದಾನೆ.

ಅದು 1928ರ ಆಗಸ್ಟ್ ತಿಂಗಳ ಸಮಯ. ಸುಲ್ತಾನ್ ಪೇಟೆಯಲ್ಲಿದ್ದ ಖಾಸಗಿ ಶಾಲೆಯೊಂದು ಆ ವರ್ಷ ಆರ್ಕಾಟ್  ಶ್ರೀನಿವಾಸ್‌ಚಾರ್ ರಸ್ತೆಗೆ ಸ್ಥಳಾಂತರಗೊಂಡು, ಸರ್ಕಾರಿ ಮಾಧ್ಯಮಿಕ ಶಾಲೆಯಾಗಿ ಪರಿವರ್ತನೆಗೊಂಡಿತು.

ಶಾಲೆಯ ವಿದ್ಯಾರ್ಥಿಗಳು ಶಾಲೆಯ ಕೈತೋಟ ನಿರ್ಮಿಸುವ ಉದ್ದೇಶದಿಂದ ನೆಲ ಅಗೆಯುತ್ತಿದ್ದಾಗ ಮಣ್ಣಿನಲ್ಲಿ ಹುದುಗಿಹೋಗಿದ್ದ ಗಣಪನ ವಿಗ್ರಹವೊಂದು ವಿದ್ಯಾರ್ಥಿಗಳಿಗೆ ಸಿಕ್ಕಿತು. ಅಚಾನಕ್ಕಾಗಿ ಸಿಕ್ಕ ದೇವರ ಮೂರ್ತಿ ಬಿಸಾಡುವುದು ತರವಲ್ಲ ಎಂದು ತೀರ್ಮಾನಿಸಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಯ ಅಂಗಳದಲ್ಲಿ ಗಣಪತಿಯ ವಿಗ್ರಹವನ್ನಿಟ್ಟು ಪೂಜಿಸತೊಡಗಿದರು.

ಇದೇ ವೇಳೆಗೆ ಗಣೇಶನ ಹಬ್ಬವೂ ಬಂದಿದ್ದರಿಂದ ಸ್ಥಳೀಯ ಯುವಕರು ಕೈಜೋಡಿಸಿ ನೆಲದಲ್ಲಿ ಸಿಕ್ಕ ಗಣಪನ ನೆಪದಲ್ಲಿ 15 ದಿನಗಳ ಕಾಲ ಗಣೇಶೋತ್ಸವವನ್ನು ಆಚರಿಸಿದರು. ಪ್ರತಿ ದಿನ ಸಂಜೆ ಪೂಜೆ, ಪ್ರವಚನ ಹಾಗೂ ಭಾರತ ಸ್ವಾತಂತ್ರ ಹೋರಾಟ ಕುರಿತಂತೆ, ಹೋರಾಟಗಾರರಿಂದ ಭಾಷಣವನ್ನು ಏರ್ಪಡಿಸಲಾಗುತ್ತಿತ್ತು.

ಈ ಶಾಲೆಯ ಮುಂಭಾಗ ಆ ಕಾಲದಲ್ಲಿ ಮುಸ್ಲಿಂ ಸಮುದಾಯದ ನಾಯಕರೂ ಹಾಗೂ ಪ್ರಜಾ ಪ್ರತಿನಿಧಿಗಳ ಸಭೆಯ ಸದಸ್ಯರಾದ ಮಹಮ್ಮದ್ ಅಬ್ಬಾಸ್ ಖಾನರ ಮನೆಯಿತ್ತು. ವಾಸ್ತವವಾಗಿ ಧರ್ಮಾತೀತರು ಮತ್ತು ಜಾತ್ಯಾತೀತರೂ ಆಗಿದ್ದ ಅಬ್ಬಾಸ್ ಖಾನರು ಪ್ರಜಾಪ್ರತಿನಿಧಿ ಸಭೆಯಲ್ಲಿ ಒಳ್ಳೆಯ ವಾಗ್ಮಿಗಳೆಂದು ಹೆಸರು ಪಡೆದಿದ್ದರು.

ಪ್ರತಿ ದಿನ ನಡೆಯುತ್ತಿದ್ದ ಪೂಜೆ, ಭಾಷಣ ಇವುಗಳಿಂದ ಕೆರಳಿದ ಕೆಲವು ಕಟ್ಟಾ ಮುಸ್ಲಿಂರು ಅಬ್ಬಾಸ್ ಖಾನರ ಕಿವಿ ಕಚ್ಚಿದರು. ಇದರ ಪರಿಣಾಮ ಖಾನರು ಅಂದಿನ ಮೈಸೂರು ರಾಜರ ಆಳ್ವಿಕೆಯಲ್ಲಿದ್ದ ಸರ್ಕಾರದ ಮೇಲೆ ಒತ್ತಡ ಹೇರಿ ಗಣಪನ ವಿಗ್ರಹವನ್ನು ಶಾಲೆಯಿಂದ ಎತ್ತಂಗಡಿ ಮಾಡಿ, ಸರ್ಕಾರದ ಕಚೇರಿಯ ಗೋದಾಮು ಸೇರುವಂತೆ ಮಾಡಿದರು.

ಈ ಘಟನೆ ಸಹಜವಾಗಿ ಹಿಂದೂ ಸಮುದಾಯವನ್ನು ಕೆರಳಿಸಿತು. ಏಕೆಂದರೆ, ಇವರಿಗೆ ನೆರೆಯ ಮಹಾರಾಷ್ಟ್ರದ ಪೂನಾದಲ್ಲಿ ಬಾಲಗಂಗಾಧರ ತಿಲಕ್‌ರವರು ಗಣಪತಿ ಉತ್ಸವದ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಜನರನ್ನು ಸಜ್ಜುಗೊಳಿಸುತ್ತಿದ್ದ ರೀತಿ ಪರೋಕ್ಷವಾಗಿ ಪ್ರೇರಣೆಯಾಗಿತ್ತು.

ಹಲವು ದಿನಗಳ ಕಾಲ ನಿರಂತರವಾಗಿ ನಡೆದ ಸ್ವಾತಂತ್ರ್ಯ ಪ್ರೇಮಿಗಳ ಹೋರಾಟ ಮತ್ತು ಪ್ರತಿಭಟನೆ 1929ರ ಜುಲೈ 30 ರಂದು ಬೆಂಗಳೂರಿನಲ್ಲಿ ಹಿಂಸೆಯ ರೂಪ ಪಡೆಯಿತು. ಇದಕ್ಕೆ ಪ್ರಮುಖ ಕಾರಣವೆಂದರೆ, ಮತ್ತೇ ಹತ್ತಿರ ಬರುತ್ತಿದ್ದ ಗಣೇಶನ ಹಬ್ಬ.

ಮತ್ತೇ ಅದೇ ಸ್ಥಳದಲ್ಲಿ ಮೂರ್ತಿ ಪ್ರತಿಷ್ಟಾಪಿಸಬೇಕೆಂಬ ಹಠ ಎಲ್ಲರಲ್ಲಿ ಎದ್ದು ಕಾಣುತ್ತಿತ್ತು. ಆ ದಿನ ಹಿಂದೂ ಯುವಕರು ಮತ್ತು ಮುಸ್ಲಿಂ ಬಾಂಧವರ ನಡುವೆ ಬೀದಿ ಕಾಳಗ ನಡೆಯಿತು. ಹಿಂದೂ ಯುವಕರು ಮುಸ್ಲಿಮರ ಮನೆಗೆ ನುಗ್ಗಿ ಹಲವರನ್ನು ಮನಬಂದವರಂತೆ ಥಳಿಸಿದರು. ಈ ಅನಿರೀಕ್ಷಿತ ಗಲಭೆಯಿಂದ ಬೆಚ್ಚಿ ಬಿದ್ದ ಅಬ್ಬಾಸ್ ಖಾನರು ಪೋಲಿಸ್ ಪಡೆಯನ್ನು ಕರೆಸಿದರು. ಆದರೆ, ಹಿಂದೂ ಯುವಕರು ಮತ್ತು ವಿದ್ಯಾರ್ಥಿಗಳು ಆ ಕಾಲಕ್ಕೆ ಸಿಮೆಂಟ್ ರಸ್ತೆಯಾಗಿದ್ದ ಆರ್ಕಾಟ್ ಶ್ರೀನಿವಾಸ ಚಾರ್ ರಸ್ತೆಯುದ್ದಕ್ಕೂ ವರ್ತಕರ ಪೇಟೆಯಿಂದ ರಾಗಿ ಮೂಟೆಗಳನ್ನು ಹೊತ್ತು ತಂದು ರಾಗಿಯನ್ನು ರಸ್ತೆಯಲ್ಲಿ ಚೆಲ್ಲುವುದರ ಮೂಲಕ ಪೋಲಿಸರು ಸವಾರಿ ಮಾಡಿಕೊಂಡು ಬಂದಿದ್ದ ಕುದುರೆಗಳನ್ನು ಬೀಳುವಂತೆ ಮಾಡಿದರು.

ಇದರಿಂದ ಹೆದರಿದ ಪೊಲೀಸರು ಸೈಕಲ್ ಶಾಪ್ ಒಂದರಲ್ಲಿ ನಿಂತು ಗುಂಡು ಹಾರಿಸಿ ಉದ್ರಿಕ್ತ ಜನರನ್ನು ಚದುರಿಸಿದರು. ಪೊಲೀಸರ ಗುಂಡೇಟಿನಿಂದ ಚಂದ್ರ ರಾಜು ಎಂಬ ವಿದ್ಯಾರ್ಥಿ ತೀವ್ರ ಗಾಯಗೊಂಡನು. ಇದರಿಂದ ಮತ್ತಷ್ಟು ಉದ್ರೇಕಗೊಂಡ ಚಳವಳಿಕಾರರು ಪೋಲಿಸರ ಮೇಲೆ ತಿರುಗಿಬಿದ್ದರು. ಆ ಸಮಯದಲ್ಲಿ ಸ್ಥಳಕ್ಕೆ ಧಾವಿಸಿದ ನಗರದ ನ್ಯಾಯಾಧೀಶರಾಗಿದ್ದ ನಾರಾಯಣಸ್ವಾಮಿನಾಯ್ಡು ಅವರ ಪೇಟವನ್ನು ಕಿತ್ತುಹಾಕಿ ಅವರ ಕೈಯಲ್ಲಿದ್ದ ಬೆತ್ತವನ್ನು ಕಿತ್ತುಕೊಂಡು ಮನಸೋಯಿಚ್ಛೆ ಥಳಿಸಲಾಯಿತು. ಇದನ್ನು ಕಣ್ಣಾರೆ ಕಂಡ ಜಿಲ್ಲಾ ನ್ಯಾಯಾಧೀಶ ತಾಜ್ ಪಿರಾನ್ ಮತ್ತು ಪೋಲೀಸ್ ಇನ್ಸ್‌ಪೆಕ್ಟರ್ ಜನರಲ್ ಹಿರಿಯಣ್ಣಯ್ಯ ಸ್ಥಳದಿಂದ ಓಡಿಹೋದರು.

ಗಲಭೆಯಲ್ಲಿ ಪಾಲ್ಗೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ಜಮಖಂಡಿ ಶ್ರೀ ಭೀಮರಾವ್, ಶ್ರೀ ರಾಮಲಾಲ್ ತಿವಾರಿ, ಶ್ರೀ ಹೆಚ್.ವಿ.ಸುಬ್ರಮಣ್ಯಮ್ ಇವರನ್ನು ಸರ್ಕಾರ ಬಂಧಿಸಿತು. ಈ ನಾಯಕರನ್ನು ಬಿಡುಗಡೆಗೊಳಿಸಲು ಆಗಿನ ಬೆಂಗಳೂರು ನಗರದ ಪ್ರಸಿದ್ಧ ವಕೀಲರಾಗಿದ್ದ ಬೇಲೂರು ಶ್ರೀನಿವಾಸ ಅಯ್ಯಂಗಾರ್ ಮತ್ತು ಪಾಮಡಿ ಸುಬ್ಬರಾಮಶೆಟ್ಟರು ಸರ್ಕಾರದ ಜೊತೆ ನಡೆಸಿದ ಸಂಧಾನ ವಿಫಲವಾಯಿತು. ಗಣಪತಿಯ ನೆಪದಲ್ಲಿ ಆರಂಭವಾದ ಈ ಗಲಭೆ ಜನಸಾಮಾನ್ಯರ ಸ್ವಾತಂತ್ರ್ಯ ಹೋರಾಟವಾಗಿ ಪರಿವರ್ತನೆಗೊಂಡಿತು.

ಚಳವಳಿ ತೀವ್ರಗೊಳ್ಳುತ್ತಿದ್ದಂತೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಹೆಚ್.ಕೆ.ವೀರಣ್ಣಗೌಡ, ಶ್ರೀ ಪಿ.ಆರ್.ರಾಮಯ್ಯ, ಶ್ರೀ ತಿ.ತಾ.ಶರ್ಮ, ಶ್ರೀ ತಗಡೂರು ರಾಮಚಂದ್ರರಾವ್, ಶ್ರೀ ವೀರಕೇಸರಿ ಸೀತಾರಾಮಶಾಸ್ತ್ರಿ ಮತ್ತು ಆನೇಕಲ್ಲಿನ ಶ್ರೀ ಸರ್ವಾಭಟ್ಟರು ಸೇರಿದಂತೆ 92 ಮಂದಿ ನಾಯಕರ ಮೇಲೆ ಸರ್ಕಾರ ಮೊಕದ್ದಮೆ ದಾಖಲಿಸಿತು. ಇದನ್ನು ಪ್ರತಿಭಟಿಸಿದ ಸರ್ಕಾರದ ವಕೀಲರು ಹಾಗೂ ಬ್ರಿಟಿಷರ ಅಧೀನದಲ್ಲಿದ್ದ ಕೋಲಾರ ಚಿನ್ನದ ಗಣಿಯ ವಕೀಲರಾಗಿದ್ದ ಸಂಪಿಗೆ ವೆಂಕಟಪತಯ್ಯ ಇವರನ್ನು ಸರ್ಕಾರ ಸೇವೆಯಿಂದ ವಜಾಗೊಳಿಸಿತು.

ಸರ್ಕಾರದ ಕಠಿಣ ನಿರ್ಧಾರಗಳಿಗೆ ಜಗ್ಗದೆ ಸ್ವಾತಂತ್ರ್ಯ ಚಳವಳಿ ತೀವ್ರವಾಗುತ್ತಿದ್ದಂತೆ ಕೊನೆಗೆ ಜನರ ಒತ್ತಡಕ್ಕೆ ಮಣಿದ ಸರ್ಕಾರ ಅಂತಿಮವಾಗಿ ಸರ್ ಎಂ.ವಿಶ್ವೇಶ್ವರಯ್ಯನವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತು. ಸರ್ಕಾರಕ್ಕೆ ದೂರಾಲೋಚನೆಯ ಹಾಗೂ ಪ್ರಗತಿಪರವಾದ ವರದಿ ನೀಡಿದ ವಿಶ್ವೇಶ್ವರಯ್ಯನವರು, ಆಡಳಿತದಲ್ಲಿ ಜನಸಾಮಾನ್ಯರಿಗೆ ಅಧಿಕಾರ ನೀಡಿ ಅವರ ರಾಜಕೀಯ ದಾಹವನ್ನು ತೃಪ್ತಿಪಡಿಸಬೇಕು, ಇಲ್ಲದಿದ್ದರೆ ಜನರ ಚಳವಳಿಯನ್ನು ಹತ್ತಿಕ್ಕುವುದು ಅಸಾಧ್ಯ, ಮುಂದಿನ ದಿನಗಳಲ್ಲಿ ಸರ್ಕಾರ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಬಹುದು ಎಂದು ಎಚ್ಚರಿಸಿದ್ದರು. ಆದರೆ ಸರ್ಕಾರ ವಿಶ್ವೇಶ್ವರಯ್ಯನವರ ವರದಿಯನ್ನು ಪರಿಗಣಿಸದೆ ಗೌಪ್ಯವಾಗಿಟ್ಟುಕೊಂಡಿತು.

ಈ ಘಟನೆ ಗಣಪತಿ ಗಲಾಟೆ ಎಂಬ ಹೆಸರಿನಲ್ಲಿ ಸಾತಂತ್ರ್ಯ ಹೋರಾಟಗಾರರಿಗೆ ಚಳವಳಿಯ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿತು. ಅನೇಕ ಲಾವಣಿಕಾರರು ಗಣಪತಿ ಗಲಾಟೆಯ ಘಟನಾವಳಿಯನ್ನು ಕುರಿತು ಲಾವಣಿ ಕಟ್ಟಿ ಜನ ಸಮೂಹಗಳ ನಡುವೆ ಅನೇಕ ವರ್ಷಗಳ ಕಾಲ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಬಿ.ನೀಲಕಂಠಯ್ಯ ಎಂಬುವವರು ರಚಿಸಿದ ಬೆಂಗಳೂರು ಗಣಪತಿ ಸತ್ಯಾಗ್ರಹದ ಲಾವಣಿ ಎಂಬ ಹೆಸರಿನ ಸ್ವಾತಂತ್ರ್ಯ ಹೋರಾಟದ ಈ ಹಾಡು ಈಗ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

(ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ಉದಯ ಟಿ.ವಿ.ಪ್ರಸಾರ ಮಾಡುತ್ತಿರುವ ವಿಶೇಷ ಸಾಕ್ಷ್ಯ ಚಿತ್ರಕ್ಕೆ ಸಿದ್ಧ ಪಡಿಸಿದ ವರದಿ.)

Leave a Reply

Your email address will not be published. Required fields are marked *