ಜಾನಪದ ಕಲಾ ಉತ್ಸವದಲ್ಲಿ ಮಾಂಸಾಹಾರ : ಅಸಹನೆ ಏಕೆ?

– ಎಚ್.ಕೆ.ಶರತ್

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ “ಜಾನಪದ ಕಲಾ ಉತ್ಸವ”ದ ವೇಳೆ ಹಂದಿ ಮಾಂಸ ಭೋಜನ ವ್ಯವಸ್ಥೆ ಮಾಡಿದ್ದಕ್ಕೆ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿ ಸಾಹಿತ್ಯ ಪರಿಷತ್ತಿನ ಪಾವಿತ್ರ್ಯತೆಗೆ ಧಕ್ಕೆಯಾಗಿದೆ ಅಂತೆಲ್ಲ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಮಾಂಸಾಹಾರ ಅದರಲ್ಲೂ ಹಂದಿ ಮಾಂಸ ಸೇವಿಸುವುದು ಕೆಲವರ ಕಣ್ಣಿಗೆ ಅಸಹ್ಯಕರವಾಗಿ ಗೋಚರಿಸಬಹುದು. ಇದು ತಿನ್ನುವವರ ಸಮಸ್ಯೆಯಲ್ಲ. ಎಲ್ಲಾ ಬಗೆಯ ಆಹಾರ ಪದ್ಧತಿಯನ್ನೂ ಸಮಾನವಾಗಿ ಪರಿಗಣಿಸದೆ, ಸಸ್ಯಾಹಾರ ಶ್ರೇಷ್ಠವೆಂಬ ಸಂಕುಚಿತ ಮನಸ್ಥಿತಿ ಇಲ್ಲಿ ಪ್ರಭಾವ ಬೀರುತ್ತಿರುವುದು ಸ್ಪಷ್ಟ.

ಜಾನಪದ ಕಲಾ ಉತ್ಸವದಲ್ಲಿ ಮಾಂಸಾಹಾರ ಸೇವನೆಗೆ ವೇದಿಕೆ ಕಲ್ಪಿಸಿಕೊಟ್ಟ ಕಾರ್ಯಕ್ರಮದ ಸಂಘಟಕರ ವಿರುದ್ಧ ದನಿ ಎತ್ತುತ್ತಿರುವವರ ಮನಸ್ಥಿತಿ ಎಂತಹದ್ದಿರಬಹುದು? ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ನಡೆಯುವ ಬಹುತೇಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿರುತ್ತದೆ. ಪರಿಷತ್ತಿನ ಆವರಣದಲ್ಲಿ ಸಸ್ಯಾಹಾರ ಸೇವನೆ ಸ್ವೀಕಾರಾರ್ಹ. ಅದೇ ಮಾಂಸಾಹಾರ ಸೇವಿಸಿದರೆ ಅದೊಂದು ಮಹಾ ಅಪರಾಧ ಎಂದು ಗುಲ್ಲೆಬ್ಬಿಸುತ್ತಿರುವವರ ಧೋರಣೆ ಆರೋಗ್ಯಕರವಾದುದಲ್ಲ.

ಮಾಂಸಾಹಾರ ಸೇವಿಸುವ ಕೆಲವರಲ್ಲೂ ಹಂದಿ ಮಾಂಸವೆಂದರೆ ಕೀಳೆಂಬ ಮನೋಭಾವ ಮನೆ ಮಾಡಿದೆ. pig_mutton_stallಹಂದಿ ಮಾಂಸ ಸೇವಿಸುವ ಎಷ್ಟೋ ಮಂದಿ, ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು, ಹೇಳಿಕೊಳ್ಳಲು ಹಿಂಜರಿಯುತ್ತಾರೆ.

ಶಾಲಾ ದಿನಗಳಲ್ಲಿ ನಾವೇನಾದರೂ ಮಾಂಸಾಹಾರವನ್ನು ಬಾಕ್ಸಿಗೆ ಹಾಕಿಕೊಂಡು ಹೋಗಿ ಮಧ್ಯಾಹ್ನ ತಿನ್ನಲು ಕುಳಿತರೆ, ಉಳಿದ ವಿದ್ಯಾರ್ಥಿಗಳೆಲ್ಲ, ನಾವೇನೊ ಮಾಡಬಾರದ್ದನ್ನು ಮಾಡುತ್ತಿದ್ದೇವೆ ಎಂಬಂತೆ ನೋಡುತ್ತಿದ್ದರು. ಕೆಲವರು ಹಂಗಿಸಿಯೂ ಮಾತನಾಡುತ್ತಿದ್ದರು. ಇಂದಿಗೂ ಅದೇ ಮನಸ್ಥಿತಿ ಕೆಲವರಲ್ಲಿ ಬೇರು ಬಿಟ್ಟಿರುವುದರಿಂದ ಮಾಂಸಾಹಾರ ಸೇವನೆ ಕುರಿತು ಈ ಪರಿ ಅಸಹನೆ ವ್ಯಕ್ತವಾಗುತ್ತಿದೆ.

ಸಾಹಿತ್ಯ ಪರಿಷತ್ತು ಎಲ್ಲರನ್ನೂ ಒಳಗೊಂಡಿರುವ ಮತ್ತು ಒಳಗೊಳ್ಳಬೇಕಾದ ಸಂಸ್ಥೆ. ಇದು ಯಾವುದೋ ಒಂದು ಜಾತಿಗೆ ಅಥವಾ ಮತಕ್ಕೆ ಸೀಮಿತವಾದ ಪವಿತ್ರ(?) ದೇಗುಲವಲ್ಲ. ಹೀಗಿರುವಾಗ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಮಾಂಸಾಹಾರ ಸೇವಿಸಬಾರದೆಂದು ನಿರ್ಬಂಧ ವಿಧಿಸುವುದು ಪುರೋಹಿತಶಾಹಿ ಮನಸ್ಥಿತಿಯ ಹೇರಿಕೆಯಂತೆ ತೋರುತ್ತದೆ.

ಎಲ್ಲರಿಗೂ ತಮ್ಮದೇ ಆದ ಆಹಾರ ಪದ್ಧತಿ ಆರಿಸಿಕೊಳ್ಳುವ ಸ್ವಾತಂತ್ರ್ಯವಿದೆ. ಸಸ್ಯಾಹಾರವೇ ಪರಮಶ್ರೇಷ್ಠವೆಂದು ಪ್ರತಿಪಾದಿಸುವ ಕೆಲ ಮೇಲ್ಜಾತಿಗಳಿಗೆ ಸೇರಿದವರು ಕೂಡ ಇಂದು ಮಾಂಸಾಹಾರ ಮಾಡುತ್ತಿದ್ದಾರೆ. ನಿರ್ದಿಷ್ಟ ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ಮಾಂಸಾಹಾರ ಸೇವಿಸುವಂತಿಲ್ಲ ಅಥವಾ ಸೇವಿಸಲೇಬೇಕೆಂಬ ನಿಯಮ ಪಾಲಿಸುವುದು, ವಿಧಿಸುವುದು ಮೂರ್ಖತನ.

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಟೊಂಕ ಕಟ್ಟಿ ನಿಂತಿರುವವರು, ಹಂದಿ ಮಾಂಸ ಸೇವಿಸಿದ ಮಾತ್ರಕ್ಕೆ ಪರಿಷತ್ತಿನ ಪಾವಿತ್ರ್ಯತೆಗೆ “ಅದ್ಹೇಗೆ ಧಕ್ಕೆಯಾಯಿತು” ಎಂಬ ಕುರಿತು ಎಲ್ಲರಿಗೂ ಮನದಟ್ಟು ಮಾಡಿಕೊಡಬೇಕಿದೆ.

4 thoughts on “ಜಾನಪದ ಕಲಾ ಉತ್ಸವದಲ್ಲಿ ಮಾಂಸಾಹಾರ : ಅಸಹನೆ ಏಕೆ?

  1. jagadishkoppa

    ಶರತ್, ಹದಿನಾಲ್ಕು ವರ್ಷಗಳ ಹಿಂದೆ ಹಂಪಿಯ ಕನ್ನಡ ವಿಶ್ವ ವಿದ್ಯಾಲಯ ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ ನೊಂದಿಗೆ ( ರಾಮಸ್ವಾಮಿ ಎಂಬುವರು ಅಧ್ಯಕ್ಷರಾಗಿದ್ದನೆನಪು) ದೇಶಿ ಸಮ್ಮೆಳನವನ್ನು ಆಯೋಜಿಸಿತ್ತು. ಎರಡು ದಿನಗಳ ಸಮ್ಮೆಳನದಲ್ಲಿ ನಾನೂ ಪ್ರಬಂಧಕಾರನಾಗಿ ಭಾಗವಹಿಸಿದ್ದೆ. ಆ ಸಮಯದಲ್ಲಿ ಜಾನಪದ ಅ
    ಅಡುಗೆ ಕುರಿತು ಪ್ರದರ್ಶನವಿತ್ತು. ಅಲ್ಲಿ ತರಾವರಿ ಮಾಂಸ ಹಾರದ ಪದಾರ್ಥಗ:ಳಿದ್ದವು. ವಿಶೇಷವಾಗಿ ಹಂದಿ ಮಾಂಸದ ಅಡುಗೆ ಮತ್ತು ಅಕ್ಕಿ ರೊಟ್ಟಿ ನಮ್ಮಂತಹವರ ಪಾಲಿಗೆ ಆಕರ್ಷಣಿಯವಾಗಿದ್ದವು. ಈ ಸಂದರ್ಭ ನನ್ನ ಗೆಳೆಯನೊಬ್ಬ( ಜಾನಪದ ಗಾಯಕ) ಕಂಠಪೂರ್ತಿ ಹಂದಿ ಮಾಂಸ ತಿಂದು, ಸ್ವಲ್ಪ ಪ್ರಮಾಣದಲ್ಲಿ ತೀರ್ಥವನ್ನೂ ಸಹ ಸೇವಿಸಿ ” ಮಲ್ಲಿದರು ಚೆಲ್ಲಿಗೆಯಾ,,, ಎಂದು ವೇದಿಕೆ ಹತ್ತಿ ನರಸಿಂಹ ಸ್ವಾಮಿಯವರ ಕವಿತೆ ಹಾಡಿ ನಮ್ಮ ತಲೆಯೊಳಕ್ಕೆ ಹುಳ ಬಿಟ್ಟಿದ್ದ..” ಚೆಲ್ಲಿದರು ಮಲ್ಲಿಗೆಯಾ ಸರೀನಾ? ಅಥವಾ ಮಲ್ಲಿದರು ಚೆಲ್ಲಿಗೆಯಾ ಸರೀನಾ? ಯಾವುದು ಸರಿ? ಎಂದು ನಾವು ಒಂದಿಷ್ಟು ಗೆಳೆಯರು ಪೂರಾ ಕನ್ ಪ್ಯೂಸ್ ಆಗಿ, ಅಂತಿಮ ತೀರ್ಮಾನಕ್ಕೆ ಬರಲು ನಾವೂ ಸಹ ಒಂದು ಪೂರ್ತಿ ಬಾಟಲ್ ವಿಸ್ಕಿಯೊಂದಿಗೆ ಒಂದು ಹಂದಿ ಮಾಂಸದ ಹೋಟೆಲ್ ಹೊಕ್ಕಿದ್ದೆವು.

    Reply
  2. nagaraj hettur

    ಹಾಗೇ ದನದ ಮಾಂಸದ ಬಗ್ಗೆಯೂ ಪ್ರಸ್ತಾಪಿಸಬೇಕಿತ್ತು ಶರತ್…

    Reply
  3. prasad raxidi

    “ಆಹಾರ ತನ್ನದು ಮಾತು ಪರರದ್ದು” (ಗಾದೆ) ಜನಪದರ ಈ ವಿವೇಕ ನಮಗೆ ಬಂದರೆ ಯಾವ ಆಹಾರವೂ ಮೇಲೂ ಅಲ್ಲ ಕೀಳೂ ಅಲ್ಲವೆಂಬ ಅರಿವು ಬಂದೀತು. ಸಾಹಿತ್ಯ ಪರಿಷತ್ ಆವರಣದಲ್ಲಿ ಮಾಂಸ ತನ್ನಬಾರದೆಂಬ ವಿಚಾರ ಹಾಸ್ಯಾಸ್ಪದ…

    Reply
  4. chalam

    ತಿನ್ನುವ ಾಹಾರದಿಂದ ಯಾರೂ ಮೇಲೂ ಅಥವಾ ಕೀಳು ಆಗುವುದಿಲ್ಲ.ಹಾಗಂದುಕೊಂಡವರ ಮನಸ್ಥಿತಿ ಕೀಳಾಗುತ್ತದೆ ಅಷ್ಟೆ..

    Reply

Leave a Reply

Your email address will not be published. Required fields are marked *