ಸ್ಥಳೀಯ ಸಂಸ್ಥೆ : ಮತಗಟ್ಟೆಯತ್ತ ಮುಖ ಮಾಡಬೇಕು


-ಚಿದಂಬರ ಬೈಕಂಪಾಡಿ


 

ರಾಜ್ಯದ ಸ್ಥಳೀಯ ಸಂಸ್ಥೆಗಳ ಆಡಳಿತದ ಚುಕ್ಕಾಣಿಯನ್ನು ಯಾರು ಹಿಡಿಯಬೇಕು ಎನ್ನುವುದನ್ನು ನಿರ್ಧರಿಸಲು ಜನತೆಗೆ ಪ್ರಜಾಪ್ರಭುತ್ವದಲ್ಲಿ ಪರಮಾಧಿಕಾರ ಸಿಕ್ಕಿದೆ. ಅದನ್ನು ಈಗ ಚಲಾಯಿಸುವ ಹೊಣೆಗಾರಿಕೆ ಜನರದ್ದು. ಮುಂದಿನ ಐದು ವರ್ಷಗಳ ಅವಧಿಯಲ್ಲಿ ತಮ್ಮನ್ನು ಯಾರು ಆಳಬೇಕು ಎನ್ನುವುದನ್ನು ಮತದಾರ ಮತ ಚಲಾಯಿಸುವ ಮೂಲಕ ನಿರ್ಧರಿಸಬೇಕಾಗಿದೆ. ಸ್ಥಳೀಯ ಸಂಸ್ಥೆಗಳು ಜನರ ದಿನನಿತ್ಯದ ಬದುಕಿಗೆ ತೀರ ಹತ್ತಿರವಾದವು. ವಿಧಾನಸಭೆ, ಲೋಕಸಭೆ ಚುನಾವಣೆಗಿಂತಲೂ ಹೆಚ್ಚು ಜನರಿಗೆ ಹತ್ತಿರವಾದವು. ಜನಸಾಮಾನ್ಯರು ತಮ್ಮ ದೈನಂದಿನ ಆವಶ್ಯಕತೆಗಳಿಗೆ ಅವಲಂಬಿಸಿರುವುದೂ ಕೂಡಾ ಸ್ಥಳೀಯ ಸಂಸ್ಥೆಗಳನ್ನೇ. ಆದ್ದರಿಂದ ಈ ಚುನಾವಣೆಯನ್ನು ಅವಗಣನೆ ಮಾಡುವಂತಿಲ್ಲ.

ಮತದಾರರ ಮುಂದೆ ಅಭ್ಯರ್ಥಿಗಳು ಕಾಣಿಸಿಕೊಂಡಿದ್ದಾರೆ. ಹಿಂದಿನವರ್ಷವೂ ಇವರೇ ಕಾಣಿಸಿಕೊಂಡಿರಬಹುದು, voteಈ ವರ್ಷವೂ ಅವರೇ ಮತ್ತೆ ನಿಮ್ಮ ಮತಗಳಿಗಾಗಿ ಕಾತುರರಾಗಿರಬಹುದು. ಆದರೆ ಅವರ ಭವಿಷ್ಯ ನಿರ್ಧರಿಸುವವರು ನೀವು. ನಿಮ್ಮ ಅವಶ್ಯಕತೆಗಳನ್ನು ಪೂರೈಸಬಲ್ಲ, ನಿಮಗೆ ಸಾದಾ ನೆರಳಾಗಿ ನಿಲ್ಲಬಲ್ಲವರೇ ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು.

ಜನ ಸಾಮಾನ್ಯರಿಗೆ ಬೇಕಾಗಿರುವುದು ಜನರ ಸೇವೆ ಮಾಡುವಂಥ ಉತ್ಸಾಹಿಗಳು. ಕುಡಿಯುವ ನೀರು, ನಡೆದಾಡಲು ವ್ಯವಸ್ಥಿತ ರಸ್ತೆ, ದಾರಿದೀಪ, ಚರಂಡಿ ವ್ಯವಸ್ಥೆ, ನೈರ್ಮಲ್ಯ ಕಾಪಾಡುವುದು ಹೀಗೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿದರೆ ಸಾಕು, ಜನ ಮತ್ತೇನನ್ನೂ ಕೇಳುವುದಿಲ್ಲ. ಕೇವಲ ತಮ್ಮ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳುವಂಥ ಸುಲಲಿತ ವ್ಯವಸ್ಥೆಗಳನ್ನು ಜನಪ್ರತಿನಿಧಿ ಮಾಡಿದರೆ ಜನ ನಿಶ್ಚಿತಕ್ಕೂ ಬೆಂಬಲಿಸುತ್ತಾರೆ, ಬೆಂಬಲಿಸಬೇಕು.

ಜನರಿಗೆ ಸದಾಕಾಲ ಬಯಸಿದಾಗ ಸಿಗುವಂಥ ಮನುಷ್ಯ ಜನರ ಒಲವು ಗಳಿಸುತ್ತಾನೆ. ಸಾಮಾನ್ಯವಾಗಿ ಮತದಾರ ಇಂಥ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅನಾಸಕ್ತಿಯೇ ಹೆಚ್ಚು. ಮತಗಟ್ಟೆಗೆ ಹೋಗಿ ಮತ ಚಲಾಯಿಸುವುದೆಂದರೆ ಆಲಸ್ಯ. ಇದು ಕೇವಲ ಸ್ಥಳೀಯ ಸಂಸ್ಥೆಗಳಿಗೆ ಮಾತ್ರವಲ್ಲ ಸಾರ್ವತ್ರಿಕ ಚುನಾವಣೆಯಲ್ಲೂ ಇದನ್ನೇ ಕಾಣುತ್ತಿದ್ದೇವೆ. ಮತದಾರನ ನಿರಾಸಕ್ತಿಗೂ ಕಾರಣವಿರಬಹುದು. ಅದೇನೆಂದರೆ ತಮ್ಮ ಜನಸೇವೆ ಮಾಡುವವನು ಅಸಮರ್ಥ ಅಥವಾ ನಿರುಪಯುಕ್ತ ಎನ್ನುವ ಕಾರಣವೋ, ಅಭ್ಯರ್ಥಿಯನ್ನು ಬೆಂಬಲಿಸುವ ಬದಲು ನಿರ್ಲಕ್ಷ್ಯ ಮಾಡುವುದೇ ಒಳ್ಳೆಯದು ಎನ್ನುವ ಕಾರಣವೋ ಏನೋ? ಅಂತೂ ಮತದಾರ ತಾನು ಚಲಾಯಿಸುವ ಮತದ ಬಗ್ಗೆ ಗಂಭೀರವಾಗಿ ಯೋಚಿಸದಿರುವುದು ಅಪಾಯಕಾರಿ.

ಯಾವುದೇ ಚುನಾವಣೆಯನ್ನು ಗಮನಿಸಿ ಚಲಾವಣೆಯಾಗುವ ಮತಗಳ ಅಂಕಿ ಅಂಶಗಳ ಮೇಲೆ ಕಣ್ಣಾಡಿಸಿದರೆ ಮತದಾರರ ನಿರಾಸಕ್ತಿ ಅರಿವಿಗೆ ಬರುತ್ತದೆ. ಸರಾಸರಿ 55 ರಿಂದ 60 ಶೇ. ಮತದಾನವಾಗುವ ಪರಂಪರೆ ಅನೇಕ ದಶಕಗಳಿಂದ ಕಂಡು ಬರುತ್ತಿದೆ. ಸ್ಥಳೀಯ ಸಂಸ್ಥೆಯಾಗಲೀ, ವಿಧಾನಸಭೆ, ಲೋಕಸಭೆ, ಯಾವುದೇ ಚುನಾವಣೆಯಲ್ಲೂ ಮತದಾನದ ಪ್ರಮಾಣ ಹೆಚ್ಚಾಗುತ್ತಿಲ್ಲ. ಆದರೆ ಮತದಾರರ ಸಂಖ್ಯೆ ಹೆಚ್ಚುತ್ತಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಮತದಾರರ ಸಂಖ್ಯೆಯ ಅನುಪಾತದಲ್ಲಿ ಮತದಾನ ಆಗದಿರುವುದು ಕಳವಳಕಾರಿ.

ಮತಗಟ್ಟೆ ಹೋಗಿ ಮತ ಚಲಾಯಿಸುವುದು ಹಕ್ಕು ಮಾತ್ರವಲ್ಲ ಕರ್ತವ್ಯ ಕೂಡಾ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಸಿಕ್ಕಿರುವ ಪರಮಾಧಿಕಾರವನ್ನು ಚಲಾಯಿಸದಿರುವುದೇ ಈಗಿನ ಎಲ್ಲಾ ಅವಾಂತರಗಳಿಗೆ ಮೂಲ ಕಾರಣ. ನಮಗೆ ಯಾರು ಹಿತವರು ಎನ್ನುವುದನ್ನು ಜನಸೇವೆಗೆ ಮುಂದಾಗುವವರಿಗೆ ತಿಳಿಸಿ ಹೇಳಲು ಇದೊಂದೇ ಸೂಕ್ತ ಅವಕಾಶ. ಯಾರೇ ಕಣಕ್ಕಿಳಿದರೂ, ಎಷ್ಟೇ ಆಮಿಷ ಒಡ್ಡಿದರೂ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿರುವ ಚುನಾವಣೆಯಲ್ಲಿ ಮತದಾರ ಮೌನವಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಶಿಥಿಲಗೊಳಿಸುವ ಅಪಾಯವಿದೆ.

ಶೇ. 55 ಮಂದಿ ಮಾತ್ರ ಮತ ಚಲಾಯಿಸಿ ಶೇ.45 ರಷ್ಟು ಮಂದಿ ದೂರ ಉಳಿದರೆ ಅದು ಅನರ್ಹರು ಆಯ್ಕೆಯಾಗಲು ಕಾರಣವಾಗುತ್ತದೆ. ಅದಕ್ಕೆ ಆಯ್ಕೆಯಾದವನು ಹೊಣೆಯಲ್ಲ, ಮತ ಹಾಕದವರೇ ಹೊಣೆಯಾಗುತ್ತಾರೆ. ಮತದಾನ ಮಾಡದಿರುವುದರಿಂದ ಆಕಾಶ ಕಳಚಿ ಬೀಳುವುದಿಲ್ಲ ಎನ್ನುವವರಿದ್ದಾರೆ. ತಾನೊಬ್ಬ ಮತ ಹಾಕದಿದ್ದರೆ ಅವನು ಗೆದ್ದು ಬರುವುದಿಲ್ಲವೇ? ಎನ್ನುವವರೂ ಇದ್ದಾರೆ. ಹೀಗೆಯೇ ಶೇ. 45 ರಷ್ಟು ಮಂದಿ ಯೋಚಿಸಿದರೆ ಪರಿಣಾಮ ಏನಾಗಬಹುದು ಊಹಿಸಿ.

ಪಕ್ಷ ವ್ಯಕ್ತಿಗಳನ್ನು ದೂರುವುದು ಸುಲಭ. ಆದರೆ ಅವರನ್ನು ಸರಿದಾರಿಗೆ ತರಬಲ್ಲ ಅಸ್ತ್ರ ಚುನಾವಣೆ, ಜನರಿಗಿರುವ ಮತದಾನದ ಹಕ್ಕು. ಅದನ್ನು ಚಲಾಯಿಸದಿದ್ದಾಗ ಸಹಜವಾಗಿಯೇ ಉತ್ತಮ ಅಭ್ಯರ್ಥಿ ಆರಿಸಿ ಬರದೇ ಹೋಗಬಹುದು, ಅದಕ್ಷ, ಅಪ್ರಾಮಾಣಿಕ ಆರಿಸಿ ಬರಬಹುದು. ಮತ್ತೆ ಐದು ವರ್ಷ ಅವರ ದುರಾಡಳಿತವನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಜನರದ್ದಾಗುತ್ತದೆ.

18 ರಿಂದ 30 ರ ಒಳಗಿನ ಯುವಕ, ಯುವತಿಯರು ಈಗ ಮತಚಾಲಾಯಿಸಲು ಹೆಚ್ಚು ಉತ್ಸಾಹ ತೋರುತ್ತಿದ್ದಾರೆ. INDIA-ELECTION35 ರಿಂದ 45 ರೊಳಗಿನವರಲ್ಲಿ ನಿರಾಸಕ್ತಿಯೇ ಹೆಚ್ಚು. 50 ರ ಮೇಲ್ಪಟ್ಟವರು ತಮ್ಮ ಹಕ್ಕು ಚಲಾಯಿಸುತ್ತಾರೆ. ಅದರಲ್ಲೂ ಆತಂಕಕಾರಿ ಅಂಶವೆಂದರೆ ಸುಶಿಕ್ಷಿತರು, ಸರ್ಕಾರಿ, ಅರೆಸರ್ಕಾರಿ ಕಚೇರಿಗಳಲ್ಲಿ ದುಡಿಯುವ ಮಧ್ಯಮವರ್ಗದ ಜನ ಮತಗಟ್ಟೆಗೆ ಹೋಗುವುದಕ್ಕೆ ಹಿಂಜರಿಯುತ್ತಾರೆ. ಮತದಾನ ಮಾಡಲೆಂದೇ ಕಚೇರಿಗಳಿಗೆ ರಜೆ ಸೌಲಭ್ಯವಿದ್ದರೂ ಆದಿನ ಮನೆಯಲ್ಲಿ ಆಯಾಗಿ ವಿಶ್ರಾಂತಿ ತೆಗೆದುಕೊಂಡು ಮೋಜು, ಮಸ್ತಿಯಲ್ಲಿ ಕಾಲ ಕಳೆಯಲು ಹಾತೊರೆಯುವಂಥ ಪ್ರವೃತ್ತಿ ಹೆಚ್ಚಾಗಿ ಕಾಣುತ್ತಿದೆ. ಮತದಾನಕ್ಕೆ ಸಿಕ್ಕ ರಜೆಯನ್ನು ಉಂಡು ಮಲಗುವುದಕ್ಕೆ ಬಳಕೆ ಮಾಡುವವರಿದ್ದಾರೆ ಎನ್ನುವುದನ್ನು ನಿರಾಕರಿಸುವಂತಿಲ್ಲ. ಈ ಪ್ರವೃತ್ತಿ ಅತ್ಯಂತ ಅಪಾಯಕಾರಿಯಾದುದು.

ಪಕ್ಷ, ಪಂಗಡವನ್ನು ಬೆಂಬಲಿಸುವುದು, ವ್ಯಕ್ತಿಯನ್ನು ಗುರುತಿಸುವುದು ಅವರವರ ವಿವೇಚನೆಗೆ ಬಿಟ್ಟ ವಿಚಾರ. ಆದರೆ ಮತಗಟ್ಟೆಗೆ ಹೋಗಿ ಮತ ಚಲಾಯಿಸುವುದು ಅಗತ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಕೊಟ್ಟಿರುವ ಹಕ್ಕನ್ನು ಚಲಾಯಿಸದಿರುವುದು ಅನರ್ಹ ಆಯ್ಕೆಯಾಗುವುದಕ್ಕಿಂತಲೂ ಅಪಾಯಕಾರಿ. ಆದ್ದರಿಂದ ಈ ಸಲವಾದರೂ ಗರಿಷ್ಠ ಮತದಾನವಾಗಬೇಕು. ಜನ ಮತಗಟ್ಟೆಯತ್ತ ಮುಖಮಾಡಿದರೆ ಮಾತ್ರ ವ್ಯವಸ್ಥೆಯಲ್ಲಿ ಬದಲಾವಣೆ ನಿರೀಕ್ಷಿಸಲು ಸಾಧ್ಯ.

Leave a Reply

Your email address will not be published. Required fields are marked *