Daily Archives: May 1, 2013

ಪಕ್ಷೇತರ ಶಕ್ತಿ ಕೇಂದ್ರ ಉಗಮ!

-ಚಿದಂಬರ ಬೈಕಂಪಾಡಿ

ಸಾಕಪ್ಪಾ ಸಾಕು, ಬೇಕಪ್ಪಾ ಬೇಕು ಎನ್ನುವ ಎರಡು ಭಿನ್ನ ಹಾಗೂ ಪರಸ್ಪರ ಸಮರ್ಥಿಸಿಕೊಳ್ಳುವ ಮತದಾರರ ಮನವೊಲಿಕೆಯ ಕಸರತ್ತನ್ನು ಮಾಧ್ಯಮಗಳಲ್ಲಿ ಗಮನಿಸಿರಬಹುದು. ಸಾಮಾನ್ಯ ಮತದಾರ ಯಾಕೆ ಸಾಕು, ಯಾಕೆ ಬೇಕು ಎನ್ನುವುದಕ್ಕಿಂತ ನೀವಿಬ್ಬರೂ ನಮಗೆ ಅನಿವಾರ್ಯವಲ್ಲ ಎನ್ನುವ ಸಂದೇಶ ನೀಡಿದರೆ ಹೇಗೆ ಎಂದು ಯೋಚಿಸುವುದು ಅಪರಾಧವೇ?1111111
ಒಂದು ರಾಜಕೀಯ ಪಕ್ಷ ಸಾಕು ಎನ್ನಲು, ಮತ್ತೊಂದು ಬೇಕು ಎನ್ನಲು  ಅವರದ್ದೇ ಆದ ಕಾರಣಗಳನ್ನು ಕೊಡಬಹುದು. ಇವರಿಬ್ಬರನ್ನೂ ನಿರಾಕರಿಸುವುದಕ್ಕೆ ಸಾಕಷ್ಟು ಕಾರಣಗಳಿವೆ. ನೀವೇ ಯಾಕೆ ಬೇಕು ? ಅವರೇ ಯಾಕೆ ಬೇಡ ? ಎನ್ನುವುದಕ್ಕಿಂತಲೂ ನೀವಿಬ್ಬರೂ ನಮಗೆ ಬೇಡದವರು ಎನ್ನುವುದೇ ಲೇಸು.
ಅಧಿಕಾರ ನಡೆಸುವ ಅವಕಾಶ ಕೊಟ್ಟರೂ ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳದ ಪಕ್ಷ, ಪ್ರತಿಪಕ್ಷದ ಸಾಲಲ್ಲಿ ಕುಳಿತು ಆಡಳಿತ ನಡೆಸುವವರ ಮೇಲೆ ಕಣ್ಣಿಡಿ ಎನ್ನುವ ಅಧಿಕಾರ ಕೊಟ್ಟರೆ ಕಣ್ಣಿದ್ದೂ ಕುರುಡಾದ ಇಬ್ಬರೂ ಮತದಾರರ ಮಟ್ಟಿಗೆ ದೋಷಿಗಳು. ಒಂದು ಆಡಳಿತಾರೂಢ ಪಕ್ಷ ಎಷ್ಟರಮಟ್ಟಿಗೆ ವಿಫಲವಾಗಿದೆಯೋ ಅಷ್ಟೇ ವೈಫಲ್ಯದ ಹೊಣೆ ಪ್ರತಿಪಕ್ಷಕ್ಕೂ ಇದೆ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಂಡಿಲ್ಲ. ಆದ್ದರಿಂದ ನಿಜಕ್ಕೂ ಈಗ ಅತಂತ್ರ ಮತದಾರ.
ಮಾಧ್ಯಮಗಳು ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಬೇರೆ ಆಯಾಮಗಳಿಂದ ಮಾಡಿವೆ. ಮತದಾರರ ನಾಡಿಮಿಡಿತವನ್ನು ಆಧಾರವಾಗಿಟ್ಟುಕೊಂಡು ಫಲಿತಾಂಶದ ಸಾಧ್ಯತೆಗಳ ಮೇಲೆ ಬೆಳಕು ಚೆಲ್ಲಿವೆ. ರಾಜಕೀಯ ಪಂಡಿತರು ವಿದ್ಯುನ್ಮಾನ ಮಾಧ್ಯಮಗಳ ಮುಂದೆ ಕುಳಿತು ಚರ್ಚೆ ಮಾಡಿದ್ದಾರೆ. ಅಂಕಣಕಾರರು ತಮ್ಮ ಅನುಭವದ ಮೂಸೆಯಿಂದ ಮತದಾರರ ಮನದಾಳವನ್ನು ಹೆಕ್ಕಿತೆಗೆದು ಹೇಳಿದ್ದಾರೆ. ಎಲ್ಲರ ಗಮನ ಪಕ್ಷಗಳು ಗಳಿಸುವ ಸ್ಥಾನಗಳು, ಯಾರಿಗೆ ಮುನ್ನಡೆ-ಹಿನ್ನಡೆ ಮತ್ತು ಯಾಕೆ ಎನ್ನುವ ಕುರಿತು ವಿಶ್ಲೇಷಣೆ ಕುರಿತೇ ಆಗಿದೆ. ಆದರೆ ಮಾಧ್ಯಮಗಳು ಅಷ್ಟೊಂದು ಗಂಭೀರವಾಗಿ ಅವಲೋಕಿಸದ ಪಕ್ಷೇತರರ ಸ್ಪರ್ಧೆಯನ್ನು ಗಂಭೀರವಾಗಿ ಗಮನಿಸಬೇಕಾದ ಅನಿವಾರ್ಯತೆ ಬಂದಿದೆ.
ಸಾಮಾನ್ಯವಾಗಿ ಪಕ್ಷೇತರರ ಪಾತ್ರ ಯಾರನ್ನು ಸೋಲಿಸುವುದು ಮತ್ತು ಯಾರಿಗೆ ಲಾಭ ಮಾಡಿಕೊಡುವುದು ಎನ್ನುವಷ್ಟಕ್ಕೆ ಸೀಮಿತವಾಗಿತ್ತು ಒಂದು ಕಾಲದಲ್ಲಿ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅದಕ್ಕೆ 2008ರ ವಿಧಾನಸಭಾ ಚುನಾವಣೆಯಲ್ಲಿ ಆರಿಸಿ ಬಂದಿದ್ದ ಪಕ್ಷೇತರರು ನಿರ್ಣಾಯಕರಾಗುವಷ್ಟರ ಮಟ್ಟಿಗೆ ಬೆಳೆದುಬಿಟ್ಟರು. ಪಕ್ಷ ರಾಜಕಾರಣದಲ್ಲಿ ಪಕ್ಷೇತರರು ಒಂಥರಾ `ಲೆಕ್ಕಕ್ಕುಂಟು ಆಟಕ್ಕಿಲ್ಲ ಎನ್ನುವಂತಿದ್ದರು. ಬಿಜೆಪಿ ಸರಕಾರಕ್ಕೆ  ಜೀವತುಂಬಿದವರು ಇದೇ ಪಕ್ಷೇತರರು ಎನ್ನುವುದನ್ನು ನಿರಾಕರಿಸುವಂತಿಲ್ಲ. ಇಲ್ಲಿಂದ ಪಕ್ಷೇತರರಿಗೂ ರಾಜಕೀಯದಲ್ಲಿ ಮಹತ್ತರ ಪಾತ್ರನಿರ್ವಹಿಸುವುದು ಸಾಧ್ಯ ಎನ್ನುವಂತಾಗಿದೆ.
2013ರ  ವಿಧಾನಸಭಾ ಚುನಾವಣೆಯಲ್ಲಿ ಕಣದಲ್ಲಿರುವ ಪಕ್ಷೇತರರ ಸಂಖ್ಯೆಯನ್ನು ಗಮನಿಸಿದರೆ ರಾಜಕೀಯ ಪಂಡಿತರ ಲೆಕ್ಕಾಚಾರಗಳು ನಿಶ್ಚಿತಕ್ಕೂ ಉಲ್ಟಾಪಲ್ಟಿಯಾಗಲಿವೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಮೇಲೆ ಕಣ್ಣಾಡಿಸಿದರೆ ಒಂದು ಜಿಲ್ಲೆಯಲ್ಲಿ ಒಬ್ಬ ಪಕ್ಷೇತರ ಅಭ್ಯರ್ಥಿ ಖಂಡಿತಕ್ಕೂ ಗೆಲ್ಲುವಂಥ ಸಾಧ್ಯತೆಗಳು ಕಂಡುಬರುತ್ತಿವೆ. ಕೆಲವು ಜಿಲ್ಲೆಗಳಲ್ಲಿ ಎರಡರಿಂದ ಮೂರು ಮಂದಿ ಪಕ್ಷೇತರರು ಆರಿಸಿಬಂದರೂ ಅಚ್ಚರಿಯಿಲ್ಲ ಎನ್ನುವಂಥ ಸ್ಥಿತಿ ಗೋಚರಿಸುತ್ತಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಈ ಬಾರಿ ಪಕ್ಷೇತರರ ಹವಾ ಜೋರಾಗಿಯೇ ಇದೆ.
ಯಾಕೆ ಇಂಥ ವಾತಾವರಣ ನಿಮರ್ಾಣವಾಯಿತು ಎನ್ನುವುದಕ್ಕೆ ಕಾರಣಗಳು ಸುಲಭವಾಗಿ ಅರಿವಿಗೆ ಬರುತ್ತಿವೆ. ಪಕ್ಷಗಳು ಟಿಕೆಟ್ ಹಂಚಿಕೆಯಲ್ಲಿ ಮತದಾರರ ಒಲವಿದ್ದವರನ್ನು ಕಡೆಗಣಿಸಿರುವುದು, ಹಣ ಬಲದ ಮೂಲಕ ಟಿಕೆಟ್ ಗಿಟ್ಟಿಸಿಕೊಂಡಿರುವವರು, ಸ್ವಹಿತಾಸಕ್ತಿಗಾಗಿ ನಾಯಕರು ತಮ್ಮ ಪ್ರಭಾವ ಬೀರಿ ತಮಗೆ ಬೇಕಾದವರನ್ನು ಕಣಕ್ಕಿಳಿಸಿರುವುದು ಹೀಗೆ ಪಟ್ಟಿ ಮಾಡಬಹುದು. ಮತ್ತೆ ಮತ್ತೆ ಹಳೇ ಮುಖಗಳನ್ನೇ ಕಣಕ್ಕಿಳಿಸುವಂಥ ಕೆಟ್ಟ ಪ್ರಯೋಗಕ್ಕೆ ಎಲ್ಲಾ ರಾಜಕೀಯ ಪಕ್ಷಗಳೂ ಶರಣಾಗಿರುವುದು ಕೂಡಾ ಪಕ್ಷೇತರರ ಹಾದಿಯನ್ನು ಸುಗಮಗೊಳಿಸಿದಂತಿದೆ.
ಕಾಂಗ್ರೆಸ್ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವಷ್ಟು ಮಂದಿ ಗೆಲ್ಲುತ್ತಾರೆ ಎನ್ನುವ ವಿಶ್ವಾಸದಿಂದ ಬೀಗುತ್ತಿದೆ. ಅದಕ್ಕೆ ಮುಖ್ಯಕಾರಣ ಸ್ಥಳೀಯ ಸಂಸ್ಥೆಗಳಲ್ಲಿ ಅದು ಮಾಡಿದ ಸಾಧನೆ ಅಂದುಕೊಂಡಿರಬಹುದು. ವಾಸ್ತವ ಅದಲ್ಲ. ಬಿಜೆಪಿ ವಿಭಜನೆ, ಕೆಜೆಪಿ ಉದಯ ಕಾಂಗ್ರೆಸ್ ಪರ ಜನರು ವಾಲುವಂತೆ ಮಾಡಿತು. ಆದರೆ ಇದನ್ನು ಬಳಕೆ ಮಾಡುವಲ್ಲಿ ಕಾಂಗ್ರೆಸ್ ಮುಖಂಡರು ಸಂಪೂರ್ಣವಾಗಿ ವಿಫರಾದರು. ಮುಖ್ಯಮಂತ್ರಿ ಹುದ್ದೆಗೇರುವ ಕುರಿತೇ ಚಿಂತಿಸಿದರೇ ಹೊರತು  ಗೆಲ್ಲುವ ಅಭ್ಯರ್ಥಿಗಳನ್ನು ಗುರುತಿಸಿ ಕಣಕ್ಕಿಳಿಸುವ ಸಾಮೂಹಿಕ ಚಿಂತನೆ ಮಾಡಲಿಲ್ಲ. ಮೂರು-ನಾಲ್ಕು ಮಂದಿ ನಾಯಕರು ತಮ್ಮ ಅಧಿಕಾರದ ಆಸೆ ಈಡೇರಿಸಿಕೊಳ್ಳಲು ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಗಮನಹರಿಸಿದರು ಎನ್ನುವುದನ್ನು ನಿರಾಕರಿಸುವಂತಿಲ್ಲ. ಇದರಿಂದಾಗಿಯೇ ಸರಿ ಸುಮಾರು 20 ಸ್ಥಾನಗಳನ್ನು ಕಾಂಗ್ರೆಸ್ ಕಳೆದುಕೊಂಡಿದೆ.
ಬಿಜೆಪಿಗೆ ನಾಯಕತ್ವದ ಕೊರತೆ ಎದುರಾಗಿದೆ. ಬಿ.ಎಸ್.ಯಡಿಯೂರಪ್ಪ ಅವರಷ್ಟು ಗಟ್ಟಿಯಾಗಿ ನಾಯಕತ್ವ ಕೊಡುವಂಥ ಸಾಮರ್ಥ್ಯವನ್ನು ರೂಢಿಸಿಕೊಳ್ಳಲು ಹೈಕಮಾಂಡ್ ಅವಕಾಶವನ್ನೇ ಕೊಟ್ಟಿರಲಿಲ್ಲ. ನಾಯಕರೊಳಗಿನ ಗುಂಪುಗಾರಿಕೆಯಿಂದಾಗಿ ನಾಯಕತ್ವ ಮೂರು ನಾಲ್ಕು ಗುಂಪುಗಳಾಗಿ ಹಂಚಿಹೋಯಿತು. ಇದರ ಪೂರ್ಣ ಲಾಭ ಪಡೆದುಕೊಂಡಿರುವುದು ಕೆಜೆಪಿ. ಬಿಜೆಪಿ ಸೋತರೆ ಅದಕ್ಕೆ ಸಿಂಹಪಾಲು ಕೆಜೆಪಿಯ ಯಡಿಯೂರಪ್ಪ ಅವರ ವರ್ಚಸ್ಸೇ ಕಾರಣ ಹೊರತು ಅದು ಕಾಂಗ್ರೆಸ್ ಸಾಧನೆಯಲ್ಲ, ಕಾರಣವೂ ಅಲ್ಲ.
ಬಿಜೆಪಿಯನ್ನು ಮಂಡಿಯೂರುವಂತೆ ಮಾಡಿದರೆ ಕೆಜೆಪಿಗೇನು ಲಾಭ ಎನ್ನುವ ಪ್ರಶ್ನೆ ಎದುರಾದರೆ ಉತ್ತರ ಸುಲಭ. ಯಡಿಯೂರಪ್ಪ ಇಲ್ಲದ ಬಿಜೆಪಿಯ ಬಲ ಎಷ್ಟೆಂದು ಹೈಕಮಾಂಡ್ ಗೆ ತೋರಿಸುವುದೇ ಸಿಂಗಲ್ ಪಾಯಿಂಟ್ ಅಜೆಂಡಾ ಯಡಿಯೂರಪ್ಪ ಅವರಿಗೆ, ಅದು ಸಾಕಾರಗೊಳಿಸಿದ ಸಂತೃಪ್ತಿ ಸಿಗಬಹುದು.
ಜೆಡಿಎಸ್ ವಿಚಾರಕ್ಕೆ ಬಂದರೆ ಅದು ಸ್ವಂತ ಶಕ್ತಿಯಿಂದ ಅಧಿಕಾರಕ್ಕೇರುವಂಥ ಸ್ಥಿತಿ ಕರ್ನಾಟಕದಲ್ಲಿ ಖಂಡಿತಕ್ಕೂ ಇಲ್ಲ. ರಾಮಕೃಷ್ಣ ಹೆಗಡೆ ನಿರ್ಗಮಿಸಿದ ಕ್ಷಣದಿಂದಲೇ ರಾಜ್ಯದಲ್ಲಿ ಜೆಡಿಎಸ್ ಬಲ ಕುಗ್ಗಿತು. ಈಗಲೂ ಅದಕ್ಕಿರುವ ಶಕ್ತಿಯೆಂದರೆ ಯಾವುದೇ ಸರಕಾರ ಬಂದರೂ ನಿರ್ಣಾಯಕ ಪಾತ್ರ ನಿರ್ವಹಿಸುವಂಥ ಅನಿವಾರ್ಯವಾದ ಶಕ್ತಿ. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವಷ್ಟರಮಟ್ಟಿಗೆ ಅದು ಸಾಮರ್ಥ್ಯ ಹೊಂದಿದೆ.
ಹಾಗಾದರೆ ಯಾರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎನ್ನುವ ಪ್ರಶ್ನೆ ಧುತ್ತನೆ ಎದುರಾಗುತ್ತದೆ. ಅತಂತ್ರ ಸ್ಥಿತಿ ನಿರ್ಮಾಣವಾದರೆ ಅಚ್ಚರಿಪಡಬೇಕಾಗಿಲ್ಲ. ಈಗಿನ ಲೆಕ್ಕಾಚಾರಗಳನ್ನು ಗಮನಿಸಿದರೆ ಕನಿಷ್ಠ 20 ರಿಂದ 25 ಸ್ಥಾನಗಳನ್ನು ಗೆಲ್ಲುವ ಪಕ್ಷೇತರರು ರಾಜ್ಯದಲ್ಲಿ ಸರಕಾರ ರಚನೆಗೆ ನಿರ್ಣಾಯಕರಾಗುವ ಸಾಧ್ಯತೆಗಳೇ ಹೆಚ್ಚು. ಹೀಗಾದಾಗ ಪಕ್ಷೇತರರ ಶಕ್ತಿಕೇಂದ್ರ ಕರ್ನಾಟಕದಲ್ಲಿ  ಉಗಮವಾಗಲಿದೆ. ಇದು ರಾಜಕೀಯದ ಮಹತ್ತರ ಬೆಳವಣಿಗೆಯಾಗಲಿದೆ, ಕರ್ನಾಟಕವೇ ಇಂಥ ಶಕ್ತಿ ಕೇಂದ್ರದ ಮೂಲಬೇರಾಗಲಿದೆ.