ದಾನದ ಪಾತ್ರೆ ಪಂಚೆ ಹಾಗೆಯೆ ಗೋವು : ಗಂಗೆ, ಗೌರಿ,.. ಭಾಗ–7

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು
ಭಾಗ – 3: ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು
ಭಾಗ – 4: ನಿಂಗಮ್ಮನ ಹರಕೆ, ಸೂರಿದೇವರ ಗೂಳಿ
ಭಾಗ–5 : ಹೊಳೆಗಟ್ಟಿದ ಶೆಟ್ಟಿ, ದಡಮುಟ್ಟಿಸಿದ ಖಾದರ್
ಭಾಗ–6 : ಕೊರಳಿನ ಕುಂಟಿ, ಮೂತಿಯ ಚುಳ್ಳಿ, ಶೀಲ ಸರ್ಕಸ್

ಭಾಗ–7 : ದಾನದ ಪಾತ್ರೆ ಪಂಚೆ ಹಾಗೆಯೆ ಗೋವು

ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯ ಹೆಗ್ಗುರುತುಗಳೆಂಬಂತೆ ಆಳುವವರ ಚರಿತ್ರೆ ಬರೆಯುವ ಊಳಿಗದ ವಿದ್ವಾಂಸರುಗಳ ಪಾಲಿಗೆ ಇಂದಿಗೂ ಶಾಸನಗಳೆಂದರೆ ಇತಿಹಾಸದ ಅಧಿಕೃತ ಆಕರಗಳು. ಕರ್ನಾಟಕದಲ್ಲಿ ದೊರೆಯುವ ಈ ಪ್ರಭುಕಥನದ ಪರಂಪರೆಯ ಶಾಸನಗಳ ಒಂದು ದೊಡ್ಡ ಭಾಗ ದಾನ ಶಾಸನಗಳದ್ದು! ಹಾಗೆಯೇ ನಮ್ಮ ಪಂಡಿತ ಮಹಾಶಯರುಗಳ ಕಾವ್ಯಗಳಲ್ಲಿಯೂ ದಾನಕ್ಕೆ ಒಂದು ವಿಶೇಷವಾದ ಸ್ಥಾನ. ಒಟ್ಟಿನಲ್ಲಿ ಈ ಎಲ್ಲಾ ನಿರೂಪಣೆಗಳ ಮೂಲಕ ದಾನ ಒಂದು ಮೌಲ್ಯ. “ದಾನ ಕೊಡುವವನು ಸ್ವರ್ಗಕ್ಕೂ, ದಾನವನ್ನು ಪರಿಪಾಲಿಸಿಕೊಂಡು ಬರುವವನು ಅಚ್ಯುತಕಲ್ಪಕ್ಕೂ ಹೋಗುತ್ತಾ”ನೆಂಬ ರೂಢಿ ಪ್ರಜ್ಞೆಯನ್ನು ತಿದ್ದಿತೀಡಿ ಮುಂದುವರೆಸಿಕೊಂಡು ಬಂದ ಸಾಂಸ್ಕೃತಿಕ ಸಂದರ್ಭದಲ್ಲಿ ದಾನದ ಇರುವಿಕೆಯನ್ನು ಅಲ್ಲಗಳೆಯಲಾಗದು. go-pujaಕೊಡುವುದನ್ನು ಮರಳಿಕೊಡಬಾರದಾದಾಗ, ಕೊಡಬೇಕಿಲ್ಲವಾದಾಗ ಅದೆಲ್ಲವೂ ದಾನವಾಗುತ್ತದೆ. ಇಂತಹ ರೀತಿಯಲ್ಲಿ ಮರಳಿ ಕೊಡಬೇಕಿಲ್ಲದಿರುವುದು ನಮ್ಮ ವ್ಯವಸ್ಥೆಯಲ್ಲಿ ಹುಟ್ಟಿನಿಂದಲೇ ಅಂತಹ ಅರ್ಹತೆಯನ್ನು ಪಡೆದಿರತಕ್ಕಂತಹವರೇ ವಿನಹಾ ನಿರ್ಗತಿಕರೋ,ನಿರಾಶ್ರಿತರೋ ಅಲ್ಲ! ಅದು ಸರ್ಕಾರ ತನ್ನ ಜನಪ್ರಿಯ ಯೋಜನೆಗಳ ಭಾಗವಾಗಿ ಆಗಾಗ ಘೋಷಿಸಿಬಿಡುವ ಸಾಲಮನ್ನಾ ಯೋಜನೆಯಂತಲ್ಲ. ಇದೊಂದು ನಿರಂತರ ಮುಂದುವರೆಯುವ ‘ಸಾಂಸ್ಕೃತಿಕ ಫಂಡು’. ಇದಕ್ಕೆ ಮಾನದಂಡ ಹುಟ್ಟು. ಆ ಮೂಲಕ ದಕ್ಕುವ ಪಡೆಯುವ ಹಕ್ಕು/ಪ್ರತಿಗ್ರಹದ ಹಕ್ಕಿದು! ಇಲ್ಲಿಯ ಬಹುಮಟ್ಟಿನ ದಾನಗಳಿಗೂ ಧಾರ್ಮಿಕ ವಿಧಿಗಳಿಗೂ ನಂಟಿದೆ. ಮತ್ತು ಅವುಗಳೂ ಇಚ್ಚಿಸಿ ಕೊಡುವ ದಾನಗಳಾಗಿರದೆ ನಿರ್ದೇಶಿತ ಕಡ್ಡಾಯಾನುಸರಣೆಯ ಸಂವಿಧಾನಗಳು.ಹಾಗಾಗಿ ಇವುಗಳು ಕೊಡುವವನ ಆಯ್ಕೆಗಿಂತ ಪಡೆಯುವವನ ಆಯ್ಕೆ, ಆತನ ನಿರೀಕ್ಷೆಯನ್ನಾಧರಿಸಿದ ನಿರ್ದೇಶನದ ರೂಪಗಳು.

ದಾನ ಎಂದಾಗ ಹಸ್ತಾಂತರವಾಗುವ ವಸ್ತುವಿನ ಹೆಸರಿನಲ್ಲಿಯೇ ದಾನದ ಹೆಸರಿರುವುದರಿಂದ ಅದನ್ನು ಹಾಗೇಯೇ ಕರೆಯುತ್ತಾರೆ. ಉದಾ: – ಕನ್ಯಾದಾನ, ಅನ್ನದಾನ, ಭೂದಾನ, ಗೋದಾನ ಹೀಗೆ ವಸ್ತುರೂಪದಲ್ಲಿ ಕೊಡಲಾಗುವ ಕೆಲವು ದಾನಗಳು ಅದೇ ರೂಪದಲ್ಲಿ ಕರೆಯಲ್ಪಡುತ್ತವೆ. ಅದಲ್ಲದೆ ಈ ವಸ್ತುರೂಪದ ದಾನವಾಗುವ ವಸ್ತುಗಳು ಒಮ್ಮೆಗೆ ಮಾತ್ರ ದಾನವಾಗಿ ಬಳಕೆಯಾಗುತ್ತವೆ ಎಂದೂ ನಂಬಲಾಗುತ್ತದೆ. ಉದಾ:- ಕನ್ಯಾದಾನವು ಪಡೆಯುವವನ ಆಯ್ಕೆ ಅನುಸಾರ ನಡೆದರೂ ಅದು ಬದಲಿವಸ್ತುವಿನ ಮೂಲಕ ದಾನದ ಅಭಿನಯದ ರೂಪದಲ್ಲಿ ನಡೆಯುವುದಿಲ್ಲ. ಆದರೆ ಬಹುಜನರು ಈಗಾಗಲೇ ಸಮ್ಮತಿಸಿ ಆಚರಿಸಿಕೊಂಡು ಬರುತ್ತಿರುವಂತೆ ಕೆಲವು ದಾನಗಳು ಅಭಿನಯರೂಪದಲ್ಲಿ ನಡೆದು ದಾನ ಪಡೆದವನ ತಿಜೋರಿಯ ನಗದಾಗಿ ಪರಿವರ್ತಿಸಲ್ಪಡುತ್ತಿವೆ. ವಿಧಿ ರೂಪದಲ್ಲಿ ಪರಿಹಾರಕ್ಕಾಗಿಯೋ, ಅಭಿವೃದ್ಧಿಗಾಗಿಯೋ ನಡೆಸುವ ಹೋಮ-ಧೂಮಗಳು ‘ಅಡುಗೆಯ ಗುತ್ತಿಗೆಯ’ ತರಹ ಗುತ್ತಿಗೆ ನೀಡಲ್ಪಟ್ಟು, ದಾನದ ಪ್ರಕ್ರಿಯೆಗೆ ಬೇಕಾದ ಸಲಕರಣೆಯನ್ನೆಲ್ಲಾ (ಪುರೋಹಿತರು)ತಾವೇ ತರುವ ತೆರದಲ್ಲಿರುತ್ತವೆ. ಪಾತ್ರೆ, ಪಂಚೆ ಇತ್ಯಾದಿ ವಸ್ತು ರೂಪದ ದಾನಗಳಿಗೆ ಪ್ರತಿಯಾಗಿ ಇಂತಿಷ್ಟು ಹೋಮದ ಖರ್ಚು ಎಂಬಂತೆ ಒಟ್ಟಿಗೆ ‘ಕ್ಯಾಶು ಕಕ್ಕಿಸುವ’ ಈ ಪ್ರತಿಗೃಹಪ್ರವೀಣರು ಹಳೆಯಪಂಚೆ,ಪಾತ್ರೆಗಳನ್ನೇ ಕಾರ್ಯಕ್ರಮದ ಸಂದರ್ಭದಲ್ಲಿ(ಹೊಸಹೋಮಕ್ಕೆ ಹಳೆಸಲಕರಣೆಯನ್ನೆ) ತಂದು ದಾನದ ಅಭಿನಯನಡೆಸಿ, ಮರಳಿ ತಾವೇ ಪಡೆಯುತ್ತಾರೆ.ಇವುಗಳಷ್ಟೇ ಅಲ್ಲದೇ ನಾಗಬನದ ಹೆಸರಲ್ಲಿ ಚಿಕ್ಕ ಪುಟ್ಟ ಸಂಗತಿಗೆಲ್ಲಾ ಬ್ರಾಹ್ಮಣಸಂತರ್ಪಣೆಯ ಕಂಡೀಶನ್ ಹಾಕುವುದು ಸಾಮಾನ್ಯ. ಈ ಊಟದ ಬಾಬ್ತು ಎಡೆಲೆಕ್ಕದಲ್ಲಿ ಹಣವನ್ನು ಪಡೆದು ದಾನವನ್ನು ದಕ್ಕಿತೆನ್ನಿಸುವುದಿದೆ. ಬಹುಶಃ ಈ ನಗದಿನ ಜಗತ್ತಲ್ಲದಿದ್ದರೆ ಅದೇ ಹಳೆಯ ಪಂಚೆ ಪಾತ್ರೆಯನ್ನು ಅವರು ಕೂಡಿಡಬೇಕಾದರೂ ಎಲ್ಲಿ? ಮತ್ತ್ತೆ ಬಟ್ಟೆ ಮಳಿಗೆಗೆ ಮಾರಲಾದೀತೇ? ಪಾತ್ರೆಯಂಗಡಿಗೆ ಹೊತ್ತೊಯ್ಯಲಾದೀತೇ? ಹಾಗೇಯೇ ಊಟವೂ ಹಣದ ರೂಪಕ್ಕೆ ಬಂದರೆ ಅಡುಗೆ,ಊಟ ಎಲ್ಲಾ ಆಯ್ತು ಎಂದು ತಿಳಿದುಕೊಳ್ಳಬಹುದು, ಅದಲ್ಲದೆ ಹಸಿಯದೆ ಉಣಬೇಕಾದರೂ ಹೇಗೆ? ಊಟವನ್ನೇ ಮಾಡಬೇಕೆಂದರೆ ಎಷ್ಟು ಬಾರಿ ಉಣ್ಣಲಾದೀತು?

ದಾನದ ಈ ಮೇಲಿನ ಪ್ರಕಾರಗಳು ಗುತ್ತಿಗೆಯ ಜಗತ್ತಿಗೆ ಸೇರಿ ಕಡಿಮೆ ಗುತ್ತಿಗೆಗೆ ಹರಾಜು ಪಡೆಯುವ ಪೈಪೋಟಿಯ ನಡುವೆ ಸುಲಭವಾಗಿ ಕಾರ್ಯಕ್ರಮವನ್ನು ನಿರ್ವಹಿಸಿಕೊಡುವ ಕಾಂಪಿಟೀಶನ್ ವಾತಾವರಣವೂ ಉಂಟು.ಅದಲ್ಲದೆ ಚೌಕಾಶಿಗೆ ಅವಕಾಶವಿಲ್ಲದಂತೆ ನಿಗಧಿತಬೆಲೆಯಲ್ಲಿ ತಣ್ಣಗೆ ಸ್ವರ್ಗದ ಬಾಗಿಲಿನ ಬೆಳಕನ್ನು ತೋರಿಸಿಬಿಡುವ ದುಬಾರಿವೇದಮೂರ್ತಿಗಳೂ ಇದ್ದಾರೆ!. ಇಂತಹವರ ಜಗತ್ತಿನಲ್ಲಿಯೂ ಕನ್ಯಾದಾನಂತೆಯೇ, ಭೂದಾನ, ಗೋದಾನಗೆಳೆಂಬ ಊಳಿಗಮಾನ್ಯ ದಾನಗಳೆರಡೂ ಇತ್ತೀಚೆಗಿನವರೆಗೂ ವಸ್ತುರೂಪದಲ್ಲಿಯೇ ನಡೆಯುತ್ತಿದ್ದವು. ಭೂಮಿಕೊಡುವವರು ಈ ರಿಯಲ್‌ಎಸ್ಟೇಟ್‌ದಂದೆಯ ಯುಗದಲ್ಲಿ ಕಷ್ಟವಾಗಿರುವ ಕಾರಣಕ್ಕಾಗಿಯೋ, ಕೃಷಿಭೂಮಿ ಪ್ರತಿಗ್ರಹಿಗಳ ಪಾಲಿಗೆ ಆಕರ್ಷಣೀಯವಲ್ಲದ ಕಾರಣಕ್ಕಾಗಿಯೋ ಭೂದಾನಗಳು ಹೆಚ್ಚು ಕೇಳಿಬರುತ್ತಿಲ್ಲ. ಆದರೆ ಗೋದಾನವಂತೂ ಬಹುವಿಧದಲ್ಲಿ ಯಥೇಚ್ಚವಾಗಿ ನಡೆಯುತ್ತಿದೆ. ಬಹುಮುಖ್ಯವಾಗಿ ಈ ದಾನ ನಡೆಯುತ್ತಿರುವುದು ನಾನು ಕಂಡಂತೆ ಸಾವಿನ ಆಚರಣೆಯ 11ನೇ ದಿನದಂದು. ಆಶ್ಚರ್ಯವೆಂದರೆ ಈ ಗೋದಾನವೂ ಈಗ ಗುತ್ತಿಗೆಪದ್ಧತಿಗೆ ಒಳಪಡುತ್ತಿದೆ. cow-donationದನವನ್ನೇ ಕೊಡುವ ಕ್ರಮದ ನಡುವೆ ದನದಿಂದ ಅಭಿನಯ, ದನದ ಹೆಸರಿನಲ್ಲಿ ಅಕ್ಕಿ ತೆಂಗಿನಕಾಯಿಯನ್ನೇ ಇರಿಸಿ ದನದ ಮೌಲು ಪಡೆಯುವ ಕ್ರಮಗಳಷ್ಟೇ ಅಲ್ಲದೆ ಕೊಡುವವರ ಕಿಸೆಯ ಗಾತ್ರಾನುಸಾರವಾಗಿ ಚಿನ್ನ, ಬೆಳ್ಳಿಯ ಹಸು-ಕರುಗಳ ವಿಗ್ರಹಗಳನ್ನೂ ಪಡೆಯುವ ರೂಪದಲ್ಲೂ ನಡೆಯುತ್ತಿದೆ.

ಸಾಮಾನ್ಯವಾಗಿ ಸಾವಿನ ಹನ್ನೊಂದನೇ ದಿನ ಸ್ವಲ್ಪ ಅನುಕೂಲಸ್ಥರು ಮಾತ್ರವೇ ಬ್ರಾಹ್ಮಣನಿಗೆ ಗೋದಾನ ಕೊಡುವ ಈ ಕ್ರಮದಲ್ಲಿ ಕರುವಿರುವ, ಹಾಲು ಕರೆವ ಹಸುವನ್ನು ಕೊಡಬೇಕೆಂಬುದು ವಾಡಿಕೆ. ಈ ವಾಡಿಕೆಯ ಮೇರೆಗೆ ಕೊಡುತ್ತಿದ್ದದು ಮನೆಯಲ್ಲಿಯೇ ಇರುವ, ಇಲ್ಲವೇ ಕೊಂಡುತರುತ್ತಿದ್ದ ದೇಸಿ ತಳಿಯ ಹಸುಗಳನ್ನು. ಅಲ್ಪಮೊತ್ತದ ಹಾಲುಕೊಡುವ, ಕೃತಕಗರ್ಭದಾರಣೆಗೆ ಒಗ್ಗದ ಕಿರುಗಾತ್ರದ ಕರು ಹಾಕುವ, ಅದರಲ್ಲಿಯೂ ಬಿಟ್ಟು ಮೇಯಿಸಬೇಕಾದ ಇವುಗಳು ಯಾರಪಾಲಿಗೂ ಆರ್ಥಿಕತೆಯ ದೃಷ್ಟಿಯಿಂದ ಲಾಭದಾಯಕವಲ್ಲ. ದಾನದ ಹೆಸರಲ್ಲಿ ಅಪರೂಪಕ್ಕೊಮ್ಮೆ ಯಾರೋ ಒಬ್ಬಿಬ್ಬರು ಬಲಾಢ್ಯರಷ್ಟೇ ದಾನಕೊಡುತ್ತಿದ್ದ ಹಿಂದಿನ ಕಾಲದಲ್ಲಿ ಇವುಗಳನ್ನು ಪಡೆಯುವುದು,ಸಾಕುವುದು, ಮೇವು ಹೊಂದಿಸುವುದು ಹೇಗೋ ನಡೆಯುತಿತ್ತು. ಆದರೆ ಯಾವ್ಯಾವುದೋ ಮೂಲದಿಂದ ಹಣಮಾಡಿ, ಸತ್ತವರನ್ನು ಸತ್ತನಂತರ ನೇರವಾಗಿ ಸ್ವರ್ಗಕ್ಕೆ ಕಳುಹಿಸುವ ಪಣ್ಯಾರೋಹಣದ ಮನಸ್ಸು ಹೆಚ್ಚು ಬಲಗೊಳ್ಳುತ್ತಿರುವ ಈ ಕಾಲದಲ್ಲಿ ಗೋದಾನವಾಗಿ ಬರುವ ಈ ‘ಸೊಲಗಿಮಹಾಲಕ್ಷ್ಮೀ’ಯರನ್ನು ಮನೆಗೆ ಕೊಡೊಯ್ದು ತಲೆಮೇಲೆ ಭಾರವನ್ನು ಯಾವ ಬುದ್ಧಿಯಿರುವ ಪುರೋಹಿತ ಹೊತ್ತುಕೊಂಡಾನು? ilayaraja-cow-donationಈ ಸಂಬಂಧವಾಗಿ ಪುರೋಹಿತರು ಹೊಸದಾರಿ ಕಂಡುಕೊಂಡು ನಾಲ್ಕು ಕಾಲಿನ ಹಸುವಿನ ಬದಲು ರಿಸರ್ವ್‌ಬ್ಯಾಂಕಿನ ಮೇಲೆ ಹೆಚ್ಚು ವಿಶ್ವಾಸವಿಡುತ್ತಿದ್ದಾರೆ.

ನನ್ನೂರಿನಲ್ಲಿ ನಡೆದ ಅನೇಕ ದಾನಗಳನ್ನು ಕಂಡು ಅಭ್ಯಾಸವಿದ್ದರೂ ನನ್ನ ಮನೆಯಲ್ಲಿಯೇ ನಡೆದ ಇಂತಹದ್ದೊಂದು ದಾನದ ಪ್ರಸ್ತಾವನೆ, ಪ್ರದರ್ಶನ, ಪ್ರಹಸನವನ್ನು ಹೇಳಿದಲ್ಲಿ ಇದು ಮತ್ತಷ್ಟು ಸ್ಪಷ್ಟವಾಗಬಹುದು. 2008 ರ ಬೇಸಿಗೆಯಲ್ಲಿ ನಡೆದ ಈ ಘಟನೆಗೆ ಪೂರ್ವಬಾವಿಯಾಗಿ ಅಂತಹದ್ದೇ ಪ್ರಹಸನಗಳು ನನ್ನೂರು ಹಾಗೂ ಆಚೀಚೆಗಿನ ಊರುಗಳಲ್ಲಿ ಸಾಕಷ್ಟು ನಡೆದಿವೆ. ಅವುಗಳನ್ನು ನಾನು ಕೇಳಿದ್ದೇನೆ. ನೋಡಿದ್ದೇನೆ. ಆದರೆ ಇದು ನೇರವಾಗಿ ಭಾಗವಹಿಸಿದ ಸುಂದರವಾದ ಅನುಭವ!

ನಮ್ಮ ಮಾವನಾಗಬೇಕಾದ (ಸಂಬಂಧದಲ್ಲಿ ನನ್ನ ಅಮ್ಮನಿಗೆ ದಾಯಾದಿಅಣ್ಣ)ವರೊಬ್ಬರು 2008 ರ ಬೇಸಿಗೆಯಲ್ಲಿ ಸಹಜವಾಗಿಯೇ ಸತ್ತರು. ಎಪ್ಪತ್ತಕ್ಕೂ ಮಿಕ್ಕಿದ ವಯಸ್ಸಿನಲ್ಲಿ ಸತ್ತ ಅವರ ಮಕ್ಕಳು ಆರ್ಥಿಕವಾಗಿ ಸ್ವಲ್ಪ ಅನುಕೂಲಸ್ಥರೇ ಆಗಿದ್ದರು. ಸಹಜವಾಗಿಯೇ ತಂದೆಯ ಉತ್ತರಕ್ರಿಯೆಯನ್ನು ಸ್ವಲ್ಪ ಚೆನ್ನಾಗಿಯೇ ಮಾಡಬೇಕೆಂಬ ಮನಸ್ಸು ಮತ್ತು ತಾಕತ್ತು ಎರಡೂ ಇತ್ತು ಅವರಲ್ಲಿ. ಅಳಿಯಕಟ್ಟಿನ ಕೂಡುಕುಟುಂಬದ ಪದ್ಧತಿಯಂತೆ ಈ ಕ್ರಿಯಾಚರಣೆಗಳು ನಮ್ಮ ಮನೆಯಲ್ಲಿಯೇ ಜರುಗಿದವು. ಹಾಗಾಗಿ ಅದರಲ್ಲಿ ಪಾಲ್ಗೊಳ್ಳುವ ಪೂರ್ಣ ಹೊಣೆಗಾರಿಕೆ ಮತ್ತು ಅವಕಾಶ ನನಗಿದ್ದವು. ಯಥಾಪ್ರಕಾರ ಸುಟ್ಟ ಐದನೇ ದಿನಕ್ಕೆ ಅಲ್ಲಿಂದ (ಅವರ ಹೆಂಡತಿ ಮನೆಯಿಂದ) ಸೊಡ್ಲಿ ಗುಡಿಯ ಬೂದಿ ಒಟ್ಟು ಮಾಡಿಕೊಂಡು ಬೆಳಕಾಗುವ ಮುನ್ನವೇ ತಂದು ಅವರು (ಮೃತರು) ಹುಟ್ಟಿದೂರಿನಲ್ಲಿ ಚಿತೆಯ ಮರು ಆವೃತ್ತಿಯನ್ನು ನಿರ್ಮಿಸಿ ಅದಕ್ಕೆ ಮೋಡ (ತಾರೀಮರದಿಂದ ಮಾಡಿದ ಮಾಡಿನಂತಹ/ಗುಡಿಯಂತಹ ರಚನೆ) ಹಾಕಿ, ಕಾಗೆಗೆ ಕೂಳುಹಾಕುವ ಕೆಲಸಗಳೆಲ್ಲವೂ ಹತ್ತು ದಿನಗಳ ತನಕ ನಡೆದು, ಶುದ್ಧವೂ ನಡೆಯಿತು. ನಮ್ಮಲ್ಲಿ ಬೊಜ್ಜದ ಆಚರಣೆ ಇರುವುದು ಈ ಶುದ್ಧ ಕಳೆದ ಮರುದಿನ ಅಂದರೆ ಹನ್ನೊಂದನೆ ದಿನ. ಸಾವಿನ ಸೂತಕ ಕಳೆದುಕೊಂಡ ಮೇಲೆ ಮಾಡುವ ಅಧಿಕೃತವಾದ ಪಾರಂಪರಿಕ ಕ್ರಮದನ್ವಯದ ಕೊನೆಯ ಊಟವಿದು. ಈ ಊಟಕ್ಕೆ ಮೊದಲು ಸ್ವಚ್ಛಗೊಂಡ ಮನೆಗೆ ಬ್ರಾಹ್ಮಣರನ್ನು ಕರೆಸಿ ಸತ್ತವನ ಸದ್ಗತಿಗಾಗಿ ದಾನಕೊಡುವ ಸಂಪ್ರದಾಯವನ್ನು ಎಂದಿನಿಂದಲೋ ಏನೋ ನಮ್ಮವರು ಅನುಸರಿಸಿಕೊಂಡು ಬರುತ್ತಿದ್ದಾರೆ. ಈ ದಾನದ ಕ್ರಿಯೆಗಳು ಅವರವರ ಅಂತಸ್ತಿನ ದ್ಯೋತಕವೂ ಹೌದು. ಬ್ರಾಹ್ಮಣರು ಮನೆಗೆ ಬಂದ ಮೇಲೆ ಕನಿಷ್ಠ ಒಂದಾದರೂ ಹೋಮವಿದ್ದೇ ಇರುತ್ತದೆ. ಇನ್ನು ಸತ್ತವೇಳೆಯಲ್ಲಿ ದೋಷವಿದೆ ಎಂಬ ತಕರಾರುಗಳಿದ್ದಲ್ಲಿ ವಿಶೇಷತೆರನಾದ ದುಬಾರಿ ಹೋಮಗಳೂ ಇದೇ ಸಂದರ್ಭಲ್ಲಿ ನಡೆಯುತ್ತವೆ. ಹಾಗೆಯೇ 11 ನೇ ದಿನದ ಕಾರ್ಯಕ್ರಮವನ್ನು ನಡೆಸುವ ಸಲುವಾಗಿ ಭಟ್ಟರ ಜತೆಗೆ ಮುಂಚಿತವಾಗಿಯೇ ಮಾತಾಡಿ ಬರಲೆಂದು ಸತ್ತವರ ಮಕ್ಕಳಿಬ್ಬರು, ನಾನು ಹಾಗೂ ನನ್ನೊಬ್ಬ ದಾಯಾದಿ ಮಾವ ಹೀಗೆ ನಾಲ್ಕು ಮಂದಿ ಹೋದೆವು.

ಸುಡಲೇಬೇಕಾದ ಹೋಮ, ಮಾಡಲೇಬೇಕದ ದಾನ ಎಂಬ ಸಾಮಾನ್ಯ ವಿಭಾಗದಡಿ ಬರುವ ಹನ್ನೊಂದರ ಕಾರ್ಯಕ್ರಮದ ಪುರೋಹಿತ ಕರ್ಮದ ಕುರಿತು ಮೊದಲು ಮಾತಿಗೆ ಕುಳಿತೆವು. ಈ ಮಾತುಕತೆ ಶುದ್ಧ ಚೌಕಾಶಿಯದೇ ಆಗಿತ್ತು. ಮತ್ತು ಈಗಾಗಲೇ ಮೇಲೆ ಹೇಳಿದಂತೆ ಗುತ್ತಿಗೆಯ ಮಾದರಿಯದಾಗಿತ್ತು. ಒಂದು ಹೋಮ ಸುಟ್ಟು ದೀಪದ ದಾನ ಮುಂತಾದ ಪರಿಕರಗಳನ್ನು ಅವರೇ ತರುವುದಕ್ಕೆ ಸಂಬಂಧಿಸಿದಂತೆ ಐದು ಸಾವಿರ ರೂಪಾಯಿಗಳ ಮಾತಾಯಿತು. ಈ ಮಾತುಗಳು ಮುಗಿದ ಮೇಲೆ ಭಟ್ಟರು ಗೋದಾನ ಮಾಡಿದರೆ ಒಳ್ಳೆಯದು, ಏನು ಮಾಡುತ್ತೀರಿ? ಎಂದರು. ನಮ್ಮ ಜತೆಯಲ್ಲಿದ್ದ ಸತ್ತವರ ಮಕ್ಕಳಿಬ್ಬರು ‘ಅಪ್ಪಯ್ಯನಿಗೆ ಒಳ್ಳೆಯದಲ್ದ? ಮಾಡುವಾ’ಎಂದರು. ಇಲ್ಲಿಂದ ಮುಂದೆ ನಿರೂಪಣೆಗೊಂಡದ್ದು ಭಟ್ಟರ ಗೋದಾನದ ಕಂಡೀಶನ್‌ಗಳು. ಆ ಇಡಿಯ ಮಾತುಗಳ ಸಾರಾಂಶವೇನೆಂದರೆ- “ಊರದನಗಳು ಬೇಡ, ಹಟ್ಟಿಯಲ್ಲಿ ಅವುಗಳನ್ನು ಕಟ್ಟಿಕೊಳ್ಳಲು ಜಾಗ ಇಲ್ಲ, ಊರೆಲ್ಲಾ ಹುಡುಕಿ ತರುವುದು ನಿಮಗೆ ಸದ್ಯ ಸ್ವಲ್ಪ ಕಷ್ಟವೇ. ಹಾಗಾಗಿ ತಮ್ಮ ಹಟ್ಟಿಯಲ್ಲಿಯೇ ಇರುವ ಹಸುವಿಗೆ ಅದರ ಮೌಲ್ಯ ಕೊಟ್ಟು, ದಾನವಾಗಿ ಕೊಡಬಹುದು. ಸಮಸ್ಯೆಯೆಂದರೆ ಅದನ್ನು ಬೇರೆಯವರು ಹೊಡೆದುಕೊಂಡು ಬರಲು ಕಷ್ಟ. ತಮ್ಮ ಮನೆಯಾಳಿಗೆ ಕೆಲಸ ಇದೆ. ಹಾಗಾಗಿ ದಾನವನ್ನೂ ಇಲ್ಲಿಯೇ ತಮ್ಮ ಮನೆಯೆದುರಲ್ಲಿಯೇ ನಡೆಸಿ ಬಿಡುವ, ಭಟ್ಟರ ಮನೆಗೆ ಬಂದು ದಾನ ನೀಡಿದರೆ ಒಳ್ಳೆಯದೆ. ತೊಂದರೆ ಏನೂ ಇಲ್ಲ.” ಈ ಪ್ರಸ್ತಾವನೆಯಲ್ಲಿ ಮೌಲಿನ ನಿಖರತೆ ಇರಲಿಲ್ಲ. ಮತ್ತು ಹಸುವನ್ನು ಬೊಜ್ಜದ ಮನೆಗೆ ತಾರದೆಯೇ ಭಟ್ಟರ ಮನೆಯಲ್ಲಿಯೇ ನೀಡಬಹುದು ಎಂಬ ಅದ್ಬುತ ಪ್ರಸ್ತಾಪವಿತ್ತು! ಮೌಲ್ಯಕ್ಕೆ ಸಂಬಂಧಿಸಿ 6-8 ಸಾವಿರದ ಬೆಲೆಬಾಳುವ ಆ ಹಸುವಿನ ಬೆಲೆಯನ್ನು ಚರ್ಚೆಗೆ ತಾರದೇ ಒಂದು ಮೌಲ್ಯದ ನಿಖರತೆಯನ್ನು ನೀವೇ ಹೇಳಿಬಿಡಿ ಎಂದು ನಾವು ಚೌಕಾಶಿಗಿಳಿದೆವು. ನಮ್ಮ ಮಾತಿನ ಒಳಾರ್ಥ ಮಾಡಿಕೊಂಡ ಭಟ್ಟರು ಮಾರುಕಟ್ಟೆಯ ಧಾರಣೆಬಿಟ್ಟು ಮೂರುಸಾವಿರ ಕೊಡಿ ಎಂದೂ ಕೊನೆಗೆ ತಾವೇ ಕೇಳಬೇಕಾಯಿತು. ಆದರೆ ಹಸುವನ್ನು ಸಾವಿನ ಮನೆಗೆ ತಾರದೆ ದಾನಮಾಡುವ ಯೋಜನೆಗೆ ನಮ್ಮ ಸಮ್ಮತಿ ಇರಲಿಲ್ಲ. “ಹಸುವಿನ ಮೈಮೇಲೆ 33 ಕೋಟಿದೇವತೆಗಳು ಖಾಯಂ ನೆಲೆಗೊಂಡು, ಅದು ಪಾದ ಊರಿದ ಜಾಗ ಪುನೀತವಾಗುತ್ತದೆ, ಎಷ್ಟೆಷ್ಟೋ ಪುಣ್ಯಗಳೆಲ್ಲವೂ ಸಂದಾಯವಾಗುತ್ತವೆ” ಎಂದು ದಾನ ಪಡೆಯುವ ವೇಳೆ ಅವರೇ ಹೊಡೆಯುತ್ತಿದ್ದ ಡೈಲಾಗ್‌ಗಳ ಸಾರಾಂಶವನ್ನು ನೆನೆದು ಹಸುವನ್ನು ನಿಮ್ಮ ಆಳಿನ ಮೂಲಕ ನಮ್ಮ ಮನೆಗೆ ತಂದೇ ತೆಗೆದುಕೊಂಡು ಹೋಗಿ ಎಂಬ ನಿರ್ಧಾರಕ್ಕೆ ಒಪ್ಪಿಸಿದೆವು. ಕೊನೆಗೂ ನಮ್ಮ ಮಾತಿನಂತೆಯೇ ದಾನದ ನಟನೆಗಾಗಿ ಅವರ ಮನೆಯ ಹಟ್ಟಿಯಲ್ಲಿದ್ದ ಸಂಕರತಳಿಯ (ಕ್ರಾಸ್‌ಬ್ರೀಡ್) ಹಸುವನ್ನು cow-donation-2ದಲಿತಸಮುದಾಯಕ್ಕೆ ಸೇರಿದ ಮನೆಯ ಆಳುಮಗನೊಬ್ಬ್ಟನ ಮೂಲಕ ಬೊಜ್ಜದ ಮನೆಗೆ ಹೊಡೆದುತರುವ ಕುರಿತು ಒಪ್ಪಿದರು.

ದನ ನಾಲ್ಕು ಫರ್ಲಾಂಗು ದೂರಕ್ಕೆ ಆಳುಮಗನ ಜತೆಯಲ್ಲಿ ನಡೆದು ಬಂದು ಮನೆಯೆದುರಿಗಿನ ಅತ್ತಿ ಮರಕ್ಕೆ ಬಿಗಿಯಲ್ಪಡುತ್ತಿದ್ದಂತೆಯೇ ಮೂರ್‍ನಾಲ್ಕು ಮಂದಿ ಭಟ್ಟರುಗಳನ್ನು ಹೇರಿಕೊಂಡು ಅವರ ಓಮಿನಿವ್ಯಾನು ಬೊಜ್ಜದ ಮನೆಯ ವಿಧಿಗಾಗಿ ಬಂದು ತಲುಪಿತು. ಮನೆಯೊಳಗೆ ನಡೆಯಬೇಕಾದ(?) ಹೋಮಸುಟ್ಟು ಆ ಬೆಂಕಿಯೆದುರಿಗೆ ಎಳ್ಳುಕಾಳು, ದೀಪ, ಪಾತ್ರೆ, ಚಾಪೆ, ಬಟ್ಟೆ ಫಲ, ಸಸಿ, ಮೆಟ್ಟು ……… ಹೀಗೆ ಏನೇನೋ ದಾನ ನಡೆದು ಅದರೊಂದಿಗೆ ದಕ್ಷಿಣಿಯೂ ಹರಿದ ಮೇಲೆ ಕೊನೆಯ ದಾನದ ವಿಧಿಗಾಗಿ ಮನೆಯೆದುರಿಗೆ ಕರುಸಮೇತವಾಗಿ ದನವನ್ನು ತಂದು ನಿಲ್ಲಿಸಲಾಯಿತು. ಅಸ್ಪ್ರಶ್ಯ ದಲಿತ ಸಮುದಾಯಕ್ಕೆ ಸೇರಿದ ಆಳುಮಗ ದನವನ್ನು ಅಂಗಣದವರೆಗೆ ತಂದನಾದರೂ, ದಾನ ಕೊಡುವವೇಳೆ ಅಂಗಣದಲ್ಲಿ ಹಸುವಿನ ಬಳ್ಳಿ ಹಿಡಿದುದು ಆತನಾಗಿರಲಿಲ್ಲ!

ಗೋದಾನ ಕೊಡುವ ವೇಳೆ ದಾನಿಗಳಾದ ಸತ್ತವನ ಹೆಂಡತಿ, ಮಕ್ಕಳನ್ನು ಗೋವಿನ ಸುತ್ತ ಪ್ರದಕ್ಷಿಣೆ ಬರುವಂತೆ ಹೇಳಿ, “ಗೋವಿನ ಉಪಸ್ಥಿತಿ, ಗೋಪಾದ ಸ್ಪರ್ಶದ ಫಲಿತ, ಗೋದಾನದಿಂದ ಸತ್ತವನ ಆತ್ಮಕ್ಕೆ ಆಗುವ ಸದ್ಗತಿ ಇತ್ಯಾದಿ”ಗಳನ್ನು ನಿರ್ವಿಕಾರವಾಗಿ ಹೇಳುತ್ತಿರುವ ಭಟ್ಟರನ್ನು ಕಂಡರೆ ತಮ್ಮ ಮನೆಯೆದುರಲ್ಲಿಯೇ ದಾನಕೊಟ್ಟು ಮುಗಿಸಿ ಅಂದವರು ಇವರೇನಾ? ಎಂಬ ಅನುಮಾನ ಬರಬೇಕು! ಅಷ್ಟು ನಿರರ್ಗಳವಾಗಿ ಗೋವಿನ ಪುಣ್ಯಕಥನವಾದಮೇಲೆ, ದಾನದ ಹಸುವಿನ ಬಾಲದಿಂದ ಹಿಡಿದು ಕಾಲು,ತಲೆ,ಕಿವಿ,ಕಣ್ಣು ಹೀಗೆ ಅಂಗಭಾಗಗಳೆಂದು ಗುರುತಿಸಲಾಗುವವುಗಳಲ್ಲಿ ಯಾವುದನ್ನೂ ಬಿಡದೆ ಅವುಗಳನ್ನೆಲ್ಲಾ ಮುಟ್ಟಿಸಿ ದಕ್ಷಿಣೆಯ ರೂಪದಲ್ಲಿ ನೋಟುಗಳನ್ನು ಹಾಕಲು ನಿರ್ದೇಶನ ನೀಡಿದರು. ಕೊನೆಗೆ ಕರು-ಹಸುಗಳನ್ನು ತನಗೆ ಹಸ್ತಾಂತರಿಸುವ ಅಭಿನಯ ನಡೆಸಲು ಹೇಳಿ ಅದಕ್ಕೆ ಸಂಬಂಧಿಸಿದ್ದೆಂಬಂತೆ ಮಂತ್ರೋಚಾರಣೆ ಮಾಡಿದರು. ಪುನಃ ಇಡಿಯಾದ ಗೋವನ್ನು (ಮೊದಲಿನದು ಬಿಡಿಬಿಡಿ ದಕ್ಷಿಣೆ) ಕೊಡುವಾಗ ದಾನದ ಜತೆಗೆ ದಕ್ಷಿಣೆಯಾಗಿ 101 ರೂಪಾಯಿಗಳನ್ನು ಕೊಡುವಂತೆ ಆದೇಶಿಸಿ ಅದರಂತೆಯೇ ಪಡೆದುಕೊಂಡರು. ಇಷ್ಟೆಲ್ಲಾ ಮುಗಿದ ಮೇಲೆ ಅಂಗಣದಿಂದ ಮೇಲಕ್ಕ್ಕೆಬ್ಬಿದ ಹಸುವನ್ನು ಹೊಡೆದುತಂದ ಮನೆಯಾಳು ಭಟ್ಟರ ಮನೆಗೆ ಹೊಡೆದುಕೊಂಡು ಹೋದ. ಹೊಸದಾದ ಮೊದಲ ಗೋದಾನದಂತೆ ಅದ್ಭುತ ಅಭಿನಯಕ್ಕೆ ಮಾಧ್ಯಮವಾದ ಈ ಹಸು ಅದಾಗಲೇ 4-5 ಬಾರಿ ಅಂತಹದೇ ಅಭಿನಯವನ್ನು ಯಶಸ್ವಿಯಾಗಿ ಅದೇ ವರ್ಷ ಮುಗಿಸಿಯಾಗಿತ್ತು. ಪಾಪ ಪಶುವೇನ ಬಲ್ಲುದು?. ತಾನು ದಾನದ ಸರಕಾದುದಾಗಲೀ, ಪರ್‍ಯಾಯದ ದಾರಿಯಾದುದಾಗಲೀ ಆ ಮೂಕ ಪ್ರಾಣಿಗೆ ಏನು ಗೊತ್ತು? ಪುಣ್ಯ ಹೊತ್ತು ತಂದಿದ್ದೇನೆಂದು ತನ್ನೆದುರಲ್ಲಿಯೇ ಬಡಬಡಾಯಿಸುತ್ತಾ ತನ್ನನ್ನು ಎಂಟು ಫರ್ಲಾಂಗು ನಡೆಸಿ, ಮರದಡಿಯಲ್ಲಿ ಕಟ್ಟಿಸಿದ ಪುರೋಹಿತರಿಗೆ ದುಡ್ಡು ದುಡಿಯುವ ಹಳೆಯ ಪಾಣಿ ಪಂಚೆ,ಪಾತ್ರೆಯತೆಯೇ ತನಗರಿವಿಲ್ಲದೇ ಅದು ಪರಿವರ್ತತವಾಗಿತ್ತು. ಒಂದೇ ಹಸು ಒಬ್ಬನೇ ಬ್ರಾಹ್ಮಣನಿಗೆ ಒಂದೇ ವರ್ಷದಲ್ಲಿ ನಾಲ್ಕಾರು ಬಾರಿ ದಾನವಾಗುವ ಮೂಲಕ, ನಾಲ್ಕಾರು ಪುಣ್ಯಾತ್ಮರ ಸ್ವರ್ಗಾರೋಹಣ ದಾರಿಯಲ್ಲಿನ ವೈತರಣಿ ಎಂಬ ಭೀಕರ ನದಿಯನ್ನು ದಾಟಿಸುವ ಸೇತುವೆಯಾಗಿ ಅದು ಮಾರ್ಪಟ್ಟಿತ್ತು! ಅಂತೂ ದಾನ ಮುಗಿಸಿ ಹಸು ಮರಳಿತು.

ಇತ್ತ ಬೊಜ್ಜದ ಬಾಬ್ತು ತಾನು ಮಾಡಿಕೊಂಡ ಗುತ್ತಿಗೆಯಂತೆ ಐದುಸಾವಿರವನ್ನು, ಹಸುವಿನ ಮೌಲಾಗಿ ಮೂರುಸಾವಿರವನ್ನು ನಗದಾಗಿ ಅದೇ ಕ್ಷಣದಲ್ಲಿ ಪಡೆದುದಲ್ಲದೆ ದಾನ್ಯದಾನ, ಫಲದಾನ, ತಂಡುಲದಾನ, ತೈಲದಾನ, ಸಸಿದಾನ ಇನ್ನೂ ಏನೇನೋ ದಾನವೆಂಬ ವಿಪರೀತ ಮಾರ್ಗಗಳಲ್ಲಿ ಸಂಗ್ರಹಿಸಿದ ಅಕ್ಕಿ, ತೆಂಗಿನಕಾಯಿ ಮುಂತಾದುವುಗಳನ್ನು ಗಂಟುಕಟ್ಟಿ ತಾವು ಬಂದ ಮಾರುತಿ ವ್ಯಾನಿಗೆ ತುಂಬಿದರು. ಅದರ ಜತೆಗೆ ಮತ್ತೊಂದು ಬೊಜ್ಜ/ನಾಮಕರಣ/ಶಾಂತಿ ಅಥವಾ ಯಾವುದಾದರೂ ಹೋಮದ ದಾನದ ಸಂಕೇತವಾಗಿ ಕ್ಯಾಶುಪಡೆಯವ ಸರಕುಗಳಾಗಬಹುದಾದ ತಾವೇ ತಂದ ಪಂಚೆ, ಪಾತ್ರೆಗಳನ್ನು ಚೀಲದೊಳಗಡೆ ತುಂಬಿದರು. ಇಷ್ಟೆಲ್ಲವನ್ನು ಧಾರ್ಮಿಕ ವಿಧಿಯ ಹೆಸರಿನಲ್ಲಿ ಸಂಗ್ರಹಿಸಿಕೊಂಡು ಅವರು ವ್ಯಾನುಹತ್ತಿ ಹಾದಿ ಹಿಡಿಯುತ್ತಿದ್ದಂತೆಯೇ ಮಡಿವಾಳ ಅರಿಷ್ಟವೆಲ್ಲವೂ ಹೊರಟುಹೋದುವು/ಹೋಗಲಿ ಎಂಬ ಸಂಕೇತ ತೋರುವಂತೆಯೋ ಏನೋ ಹಾನದ ನೀರನ್ನು ಅವರು ಹೋದದಾರಿಗೆ ಎಸೆದ. brahma-cow-indiaಮನೆ-ಮನಗಳು ಖಾಲಿಯಾದರೂ ಕೊನೆಗೂ ಮುಗಿಯಿತಲ್ಲ ಎಂದು ನಿರುಮ್ಮಳವಾಗಿ ದಾನದ ವಿಮರ್ಶೆಯಲ್ಲಿ ತೊಡಗಿರುವ ಹೊತ್ತಿನಲ್ಲಿಯೇ, ಭಟ್ಟರ ಮನೆಯಿಂದ ದೂರವಾಣಿ ಕರೆಯೊಂದು ಬಂದೇ ಬಿಟ್ಟಿತು! ಈ ಗಡಿಬಿಡಿಯ ನಡುವೆ ತಮ್ಮ ಭಾಗದ ದಾನದಕ್ಷಿಣೆ ಆದೇಶ ನೀಡಿ, ಪಡೆದುದೆಲ್ಲವನ್ನು ಚೀಲಕ್ಕೆ ತುಂಬುವ ಬರದಲ್ಲಿ ದನವನ್ನು ಹೊಡೆದುಕೊಂಡು ಬಂದವನಿಗೆ ಕೊಡಬೇಕಾದುದನ್ನು ಅವರು ಹೇಳಲು ಮರೆತಿದ್ದರಂತೆ! ಹಾಗಾಗಿ ಆ ಬಾಬ್ತು ಅವನಿಗೆ ನೂರುರೂಪಾಯಿ ಕೊಡಬೇಕೆಂದೂ, ಅದನ್ನು ತಮ್ಮ ಮನೆಗೆ ಮುಟ್ಟಿಸಬೇಕೆಂದು ದೈವಾದೇಶ ಮಾಡಿದರು. ಕೊನೆಗೆ ನಾಗ ಮತ್ತು ಬ್ರಾಹ್ಮಣ ವಾಕ್‌ಪಾಶವನ್ನು ನಿರಾಕರಿಸದವರು ಅವನ್ನೂ ನಿರ್ವಹಿಸಿದರು.

ಈ ಗೋದಾನಕ್ಕೆ ಸಂಬಂಧಿಸಿದಂತೆ ಈ ಲೇಖನ ಸಿದ್ಧವಾಗುತ್ತಿದ್ದ ಹೊತ್ತಿಗೆ (ಎರಡು ದಿನಗಳ ಅವಧಿಯಲ್ಲಿ) ಸಂಭವಿಸಿದ ಎರಡು ಪ್ರತ್ಯೇಕ ಸಂದರ್ಭಗಳನ್ನು ಇಲ್ಲಿ ದಾಖಲಿಸಬಯಸುತ್ತೇನೆ. ಮೊದಲನೆಯ ಸಂದರ್ಭ ನನ್ನ ಹೆಂಡತಿಯ ಹತ್ತಿರದ ಸಂಬಂಧಿಯ ಗಂಡನ ತಂದೆಯವರಿಗೆ ಸಂಬಂಧಿಸಿದುದು. ಮತ್ತು ಎರಡನೆಯ ಘಟನೆ ತೀರಿಹೋದ ನನ್ನ ತಂದೆಗೆ ಸಂಬಂಧಿಸಿ ಹಳನಾಡಿನಲ್ಲಿ ನಡೆದುದು. ಈ ಎರಡೂ ಸಾವುಗಳು 2010 ರ ಜೂನ್ 12 ರಂದೇ ಘಟಿಸಿದವಾದರೂ, ತಡರಾತ್ರಿಯಲ್ಲಿ ತೀರಿಹೋದ ನನ್ನ ತಂದೆಯ ದಹನಕ್ರಿಯೆ ಮರುದಿನ ನಡೆಸಬೇಕಾಗಿ ಬಂದುದರಿಂದ ಸೂತಕದ ದಿನಗಳು ಹಿಂದುಮುಂದಾಗಿ ಈ ದಾನದ ಘಟನೆಗಳು ಎರಡು ಪ್ರತ್ಯೇಕ ದಿನಗಳಲ್ಲಿ ನಡೆಯುವಂತಾಯಿತು.

ಚಾಲ್ತಿಯಂತೆ ಪುರೋಹಿತರಿಂದ ಮುಂಗಡವಾಗಿ ದಾನದ ಪರಿಕರಗಳ ಬೇಡಿಕೆ ಪಟ್ಟಿಯನ್ನು ಪಡೆದ ನನ್ನ ಅತ್ತಿಗೆಯ ಗಂಡನ ಮನೆಯವರು ಅದರಲ್ಲಿ ನಮೂದಿತವಾದ ಗೋದಾನಕ್ಕೆಂದು ಗೋವನ್ನೇ ಕೊಡುವುದೆಂದು ‘ಪ್ರಾಮಾಣಿಕವಾಗಿ’ ನಂಬಿದರು ಮತ್ತು ಅದಕ್ಕೆಂದೇ ಊರೆಲ್ಲಾ ಹುಡುಕಿ ಊರ ತಳಿಯ ಚಿಕ್ಕ ಹಸುವೊಂದನ್ನು ರೂಪಾಯಿ ಮೂರುಸಾವಿರ ಕೊಟ್ಟು ಖರೀದಿಸಿದರು. ದಾನದ ದಿನ ಉಳಿದೆಲ್ಲಾ ದಾನಗಳು ಮುಗಿದ ಮೇಲೆ, ಗೋದಾನದ ತಾಲೀಮು ನಡೆಯಿತು. ಹಸುವೆಂದರೇನು? ದಾನದ ಮಹತ್ವವೇನು? ಬ್ರಾಹ್ಮಣನು ಅದನ್ನು ಪಡೆದು ತೃಪ್ತನಾಗುವುದರಿಂದ ಮೃತ ಆತ್ಮ ಅನುಭವಿಸುವ ಸದ್ಗತಿಗೆ ಸನ್ಮಾರ್ಗ ಲಭ್ಯವಾಗುವ ರೀತಿ ಹೇಗೆ? ಇತ್ಯಾದಿಗಳನ್ನೆಲ್ಲ ನಿರೂಪಿಸಿ ಅದರ ಕೋಡು-ಕಾಲು-ಬಾಲ ಹೀಗೆ ಅಂಗಾಂಗಗಳಿಗೂ ದಕ್ಷಿಣೆ ಪಡೆದದ್ದಲ್ಲದೇ, ಇಡಿಯ ಗೋವಿನ ಪರವಾಗಿ ಮತ್ತೆ ದಕ್ಷಿಣೆ ಪಡೆದು ವಿಪ್ರರು ಗೋವನ್ನೂ ಸ್ವೀಕರಿಸಿದರು. ದಾನದ ಪುಣ್ಯವನ್ನು ಬಯಸಿ ನೀಡುವವರಿಗೆ ಭ್ರಮನಿರಸನ ಆಗದಿರಲಿ ಎಂದೋ ಅಥವಾ ಮುಂಚಿತವಾಗಿ ಹೇಳಿದ್ದಲ್ಲಿ ಸಮಸ್ಯೆಯಾಗುವುದು ಬೇಡ ಎಂದೋ ದಾನವೆಲ್ಲಾ ಮುಗಿಯುವ ತನಕ ಸುಮ್ಮನಿದ್ದು, ಗೋದಾನವನ್ನೂ ಸ್ವೀಕರಿಸಿದಂತೆ ಮಾಡಿದ ಪುರೋಹಿತರು ದನವನ್ನು ತಮ್ಮ ಹಟ್ಟಿಗೆ ಒಯ್ಯಲು ಸುತಾರಾಂ ಒಪ್ಪಲಿಲ್ಲ. “ಇದನ್ನೆಲ್ಲ ಸಾಕುವುದುಂಟೇ? ಒಟ್ಟಾರೆ ಧರ್ಮ ತಪ್ಪಬಾರದೆಂದು ದಾನ ಹಿಡಿದೆ. ಅದಿರಲಿ ಈ ದನದ ಮೌಲು ಕೊಡಿ, ದನ ನಿಮ್ಮ ಮನೆಯಲ್ಲಿಯೇ ಇರಲಿ” ಎಂದು ರಾಗ ತೆಗೆದರು. ಇದನ್ನು ನಿರೀಕ್ಷಿಸಿರದ ಮತ್ತು ದಾನಕ್ಕೆಂದೇ ಊರೆಲ್ಲಾ ಹುಡುಕಿ ಚೌಕಾಶಿ ಮಾಡಿ ಒಂದು ಸಾಮಾನ್ಯ ದನವನ್ನು ತಂದ, ಊರಿನಲ್ಲಿರುವ ತಮ್ಮ ಹೊಲಮನೆಯನ್ನೇ ನಿಂತುನೋಡುವಷ್ಟೂ ವ್ಯವದಾನವಿರದ ಮನೆಯವರಿಗೆ ಇದು ಹೊಸ ಸಮಸ್ಯೆಯಾಯಿತು. ಮನೆಯ ಹಟ್ಟಿಯನ್ನೇ ಖಾಲಿಮಾಡಿಕೊಳ್ಳುತ್ತಿರುವ ಈ ಗಳಿಗೆಯಲ್ಲಿ ಪುಣ್ಯದ ಸಂಪಾದನೆಗೆಂದು ತಂದ ಈ ನಾಟಿ ಹಸುವನ್ನು ಕಟ್ಟಿಕೊಂಡು ಏಗಬೇಕಾದ ಹೊರೆ ಹೊರಿಸಿದ್ದಲ್ಲದೇ, ಅದರ ಮೌಲು ಕೇಳುವ ಮೂಲಕ ಉಭಯ ಪರಿಯಲ್ಲಿ ಬರೆಯೆಳೆಯುವ ಕೆಲಸ ಮಾಡಿದ ಪುರೋಹಿತರ ನಡೆ ಅವರಿಗೆ ಹಿತವೆನಿಸಲಿಲ್ಲ. ಹಾಗಿದ್ದೂ ಊರಮನೆಯ ನಾಗ, ಬೊಬ್ಬರ್ಯ, ದೈವಭೂತಗಳಿಗೆ ಕಾಯಿ ಒಡೆಯಲು ಬೇಕಾದ ಪುರೋಹಿತರನ್ನು ಕಳೆದುಕೊಳ್ಳಲಾರದೇ ಮತ್ತು ಬರುವಹೊರೆಯನ್ನು ಸ್ವಲ್ಪವಾದರೂ ಕಡಿಮೆಮಾಡಿಕೊಳ್ಳೋಣವೆಂದು ಅಂದಾಜು ಬೆಲೆಯಲ್ಲದ, ಗೋದಾನವೆಂಬ ವಿಧಿಯ ಪರವಾದ ಒಂದು ಮೊತ್ತವನ್ನು ಹೇಳುವಂತೆ ಅವರನ್ನೇ ಕೇಳಿ ಆದೇಶಕ್ಕಾಗಿ ಕಾದರು. ಸಂಕಟಕ್ಕೆ ಬಿದ್ದ ಪುರೋಹಿತರು ದನವನ್ನು ಬೇಡ ಎಂದು ಹೇಳಿದಷ್ಟೇ ಸುಲಭದಲ್ಲಿ ಮೌಲ್ಯವನ್ನು ಹೇಳದಾದರು. ಅದಕ್ಕೆ ಕೊಟ್ಟ ಬೆಲೆಯನ್ನೇ ಕೊಡಿ ಎಂದರೆ ನೀವೇ ಮಾರಿಕೊಳ್ಳಿ ಎಂಬ ಉತ್ತರ ಬಂದೀತೆಂದು ಮುನ್ನೆಚ್ಚರಿಕೆವಹಿಸಿ ಸ್ವಲ್ಪ ದಾಕ್ಷಣ್ಯಪರರಾದ (ಈಗಾಗಲೆ ದಾನವಾಗಿ ಸಾಕಷ್ಟು ಕೊಂಡುದರಿಂದ)ಅವರು ಲೋಕಜ್ಞಾನವನ್ನಾಶ್ರಯಿಸಿ ಅಳೆದೂ ಸುರಿದು 600 ರೂಪಾಯಿ ಕೊಡುವಂತೆ ಆದೇಶ ನೀಡಿದರು. ಪುರೋಹಿತರ ಮಾತಿಗೆ ಎದುರಾಡದೇ, ಆ ಮೊತ್ತವನ್ನು ಕೊಡುತ್ತಲೇ, ದನವನ್ನು ಮುಟ್ಟಿ “ಇದನ್ನು ನಾನು ಪಡೆದಿದ್ದೇನೆ, ದಾನ ಸಂದಾಯವಾಗಿದೆ” ಎಂದು ಅಪ್ಪಣೆ ಕೊಡಿಸಿದರು. ಭಟ್ಟರಿಗಾಗಿ ತಂದ ದನ ಆರುನೂರರ ಅಗ್ಗದಸರಕಾಗಿ ಶೆಟ್ಟರ ಮನೆಯಲ್ಲಿಯೇ ಉಳಿದು ಹೋಯಿತು!

ನನ್ನ ತಂದೆಯ ಬೊಜ್ಜ (11ನೇ ದಿನ)ದ ದಿನದ ಕಥೆ ಇನ್ನೂ ಕುತೂಹಲಕರ.ದಾನಕ್ಕೆಂದು ಪೂರ್ವಭಾವಿಯಾಗಿ ನಮಗೂ ಕೂಡಾ ನನ್ನ ತಂದೆಯಮನೆಯ ಊರಿನ ಪುರೋಹಿತರು ನಾವು ಕೇಳದೆಯೇ ದೀರ್ಘವಾದ ಪಟ್ಟಿಯನ್ನೇ ಕೊಟ್ಟುಬಿಟ್ಟಿದ್ದರು. ಇದು ಪರಿಕರಗಳನ್ನು ತಂದು ಹಣಕೇಳುವ ಬದಲಿಗೆ ಬೇಕಾದುದನ್ನು ನಮ್ಮಿಂದಲೇ ತರುವಂತೆ ನೀಡಲಾದ ಪಟ್ಟಿ. ಆ ದಾನದ ಇಂಡೆಂಟ್ ಹೇಗಿತ್ತೆಂದರೆ ಅದರಲ್ಲಿ ಚಿನ್ನ,ಬೆಳ್ಳಿ,ಕಾಳು,ಕೋಲು,ಚಪ್ಪಲಿ ಇವೆಲ್ಲವುಗಳ ಹೆಸರುಗಳು ಸಂಸ್ಕೃತ-ಕನ್ನಡಗಳೆರಡರಲ್ಲಿಯೂ ಬರೆಯಲ್ಪಟ್ಟಿದ್ದವು. ಬಹುಶಃ ಸಂಸ್ಕೃತ ಅವರಿಗೆ, ಕನ್ನಡ ನಮಗೆ ಎಂಬ ಕಾರಣಕ್ಕಾಗಿರಬಹುದು!? ಈ ಪಟ್ಟಿಯಲ್ಲಿ ‘ಗೋದಾನ ಮತ್ತು ಭೂದಾನದ ಬಾಬ್ತು ದುಡ್ಡು’ ಎಂಬ ಒಂದು ಸಾಲಿನ ಅರ್ಥವಾಗದ ಕನ್ನಡವೂ ಇತ್ತು. ಅಚ್ಚರಿಯೆಂಬಂತೆ ಕಬ್ಬಿಣವನ್ನೂ ದಾನದ ಐಟಂ ಆಗಿ ನಮೂದಿಸಲಾಗಿತ್ತು! ಅವರು ಕೊಟ್ಟ ಪಟ್ಟಿಯಂತೆ ಚಿನ್ನ ಬೆಳ್ಳಿಗಳನ್ನು ಹೊರತಾಗಿಸಿ ಉಳಿದ ಪಾತ್ರೆ, ಪರಡಿ, ಮೆಟ್ಟು, ಕೊಡೆ ಇತ್ಯಾದಿಗಳೆಲ್ಲವನ್ನೂ ಖರೀದಿಸುವುದಾದರೆ ಅವುಗಳ ಬೆಲೆ ಐದು ಸಾವಿರಕ್ಕೂ ಮೀರುತ್ತಿತ್ತು. ಚಿನ್ನ,ಬೆಳ್ಳಿಯನ್ನು ಹೆಸರಿಗೆ ಎಂಬಂತೆ ಖರೀದಿಸಿ, ಪಟ್ಟಿಯಲ್ಲಿ ಸಾಕಷ್ಟು ಖೋತ ಮಾಡಿ ಒಟ್ಟು ಮೂರುಸಾವಿರ ರೂಪಾಯಿಗಳ ದಾನದ ಸರಕನ್ನು ತಂದೆವು. ದಾನ ನೀಡಬೇಕಾದ ದಿನ ಇರುವ ಪರಿಕರಗಳಿಗೆ ಅಕ್ಕಿ-ಕಾಯಿ, ಅದೂ, ಇದು, ಹಾಕಿ ಪುರೋಹಿತರು ಆದೇಶಿಸಿದಂತೆ ನೀಡಿ ಕೃತಾರ್ಥರಾಗುತ್ತಿದ್ದ ನನ್ನ ಬಂಧುಗಳ ಕೈಗೆ ದಾನದ ತರವಾಯದ ದಕ್ಷಿಣೆಗಾಗಿ ಚಿಲ್ಲರೆ ಕಾಸು ಇಕ್ಕುವ ಹೊಣೆಗಾರಿಕೆ ನನ್ನದಾಗಿತ್ತು. ದಾನದ ಪಟ್ಟಿಯಲ್ಲಿನ ಖೋತಾ, ದಕ್ಷಿಣೆಯ ಚಿಲ್ಲರೆ ಕಾಸುಗಳನ್ನು ನೋಡಿಯೇ ಪುರೋಹಿತರ ಆದೇಶಗಳು ಉರುಬು/ತೂಕ ಕಳೆದುಕೊಂಡಿದ್ದವು!

ಸಾಕಷ್ಟು ಗೋದಾನಗಳ ನಾಟಕ ಕಂಡಿದ್ದ ನನಗೆ ಆ ದಾನದ ಬಗ್ಗೆ ಇಂದಿಗೂ ಗೌರವವಿಲ್ಲ. ಅದರ ಜೊತೆಗೆ ದಾನ ಕೊಡುವವನ ಇಷ್ಟಕ್ಕೆ ಬಿಡದೆ ಆದೇಶಿಸಿ ಕಸಿಯುವ ಈ ಕ್ರಮ ಸಾವಿನ ಮನೆಯ ಸಾವಿನ ದುಃಖವನ್ನು ಮರೆಸುವಷ್ಟು ಹಿಂಸೆಯೇ ಸರಿ ಎಂದು ನಂಬಿದವನು ನಾನು. ಈ ಕಾರಣದಿಂದ ಗೋದಾನಕ್ಕಾಗಿ ನಾವು ಗೋವನ್ನೂ ತಂದಿರಲಿಲ್ಲ ಮತ್ತು ಆ ಸಂಬಂಧವಾಗಿ ಪ್ರಸ್ತಾಪವನ್ನೂ ಮಾಡಿರಲಿಲ್ಲ. ಹಾಗಾಗಿ ಗೋದಾನ ಬರ್ಖಾಸ್ತುಗೊಂಡಂತೆಯೇ ಎಂದು ನಾನು ಭಾವಿಸಿದ್ದೆ. decorated-bullಆದರೆ ಆಶ್ಚರ್ಯವೆನ್ನುವಂತೆ ದಾನ ಪ್ರಕ್ರಿಯೆ ಇನ್ನೇನು ಮುಗಿಯಿತು ಎನ್ನುವಾಗ, ಅಚ್ಚೇರು (1/2 ಸೇರು) ಬಿಳಿಯಕ್ಕಿ ಹಾಕಿ, ಅದರ ಮೇಲೆ ತೆಂಗಿನಕಾಯಿಯೊಂದನ್ನು ಇರಿಸುವಂತೆ ಹೇಳಿ, ‘ಗೋದಾನದ ಬಾಬ್ತು ಮೌಲು ಹಾಕಿ’ ಎಂದು ಆದೇಶಿಸಿದರು. ನಾಟಕದ ದನವೂ ಇಲ್ಲದೇ, ಗರಿಕೆತೂರಿದ ಸಗಣಿಯನ್ನೇ ಗಣೇಶನೆನ್ನುವಂತೆ ತೆಂಗಿನಕಾಯಿಯಿರಿಸಿದ ಅಚ್ಚೇರುಅಕ್ಕಿ ಇರುವ ಹರಿವಾಣವನ್ನೇ ಗೋದಾನವಾಗಿ ಹೆಸರಿಸಿ, ಮೌಲನ್ನೇ ಮಾಲನ್ನಾಗಿ (ಸರಕನ್ನಾಗಿ) ಪರಿಭಾವಿಸಿ ಪ್ರತಿಗ್ರಹಿಸುವ ಅವರ ಜಾಣ್ಮೆ, ಸರಳತೆ ನನಗೆ ಕೌತುಕ ಮೆಚ್ಚುಗೆಗಳನ್ನು ಉಂಟುಮಾಡಿತು. ಆದರೂ, ‘ರಿಸರ್ವ್ ಬ್ಯಾಂಕ್ ನೋಟಿನ ಮೇಲಿನ ಅವರ ಮಮಕಾರ’ಕ್ಕೆ ಸ್ವಲ್ಪ ಕಡಿವಾಣ ಇರಲಿ ಎಂದು ಕೇವಲ ಐವತ್ತು ರೂಪಾಯಿ ನೋಟನ್ನು ಮಾತ್ರ ಇರಿಸಿದೆ. ಆಚೀಚೆಯವರು ನನ್ನ ಮುಖವನ್ನೊಮ್ಮೆ ನೋಡಿದರು. ನಾನು ಕಸಿವಿಸಿಗೊಳ್ಳಲಿಲ್ಲ. ಜೀವಮಾನದುದ್ದಕ್ಕೂ ಹಸುಕರು ಕಸಗೊಬ್ಬರದ ಜೊತೆಗೆ ಜೀವತೇದ, ಹಸುಕರುಗಳನ್ನು ಚೆನ್ನಾಗಿ ನೋಡಿಕೊಂಡ ಹಾಗೂ ಪ್ರೀತಿಸಿದ ಉಳುಮೆಗಾರನಾದ ನನ್ನಪ್ಪನನ್ನು ಸ್ವರ್ಗಕ್ಕೆ ಕಳುಹಿಸಲು ಈ ಪಾತ್ರೆ ಪರಡಿ ಮತ್ತು ನೋಟುಗಳಿಂದ ಖಂಡಿತಾ ಸಾಧ್ಯವಿಲ್ಲ ಎಂಬ ದೃಢನಿಶ್ಚಯದೊಂದಿಗೆ ಮತ್ತು ಮಣ್ಣಿನಲ್ಲಿ ಹಣ್ಣಾದ ನನ್ನಪ್ಪನಿಗೆ ಮಣ್ಣಿಲ್ಲದ ಸ್ವರ್ಗವೂ ಬೇಡ ಎಂಬ ನಿಲುವಿನೊಂದಿಗೆ ಕೇವಲ ಹುಸಿನಗೆಯೊಂದನ್ನೇ ನಕ್ಕು ಸುಮ್ಮನಾದೆ. ಪುರೋಹಿತರಿಗೆ ಏನು ಅರ್ಥವಾಯಿತೋ? ಗೋದಾನದ ಮೌಲ್ಯವಾಗಿ ಇರಿಸಿದ ಹಣ ಅವರಿಗೆ ನೆಮ್ಮದಿ ನೀಡಿದಂತೆ ಕಾಣದಿದ್ದರೂ, ಅದನ್ನೆತ್ತಿ ಪಂಚೆಗಂಟಿಗೆ ಸಿಕ್ಕಿಸಲು ಅವರು ಮರೆಯಲಿಲ್ಲ. ಅಂತೂ ತೆಂಗಿನಕಾಯಿ, ಅಕ್ಕಿ, ಹಣ ಇರಿಸಿದ ಹರಿವಾಣ ಎತ್ತಿಕೊಡುವಂತೆ ಹೇಳಿ ನನ್ನ ಅಪ್ಪನ ಬೊಜ್ಜದಲ್ಲೂ ಪುರೋಹಿತರು ಗೋದಾನದ ಹೆಸರುಳಿಸಿದರು. ಗೋದಾನವನ್ನು ಒಲ್ಲೆನೆನ್ನುತ್ತಿದ್ದ ನಾನು ನನ್ನವರ ಮೂಲಕ ಐವತ್ತು ರೂಪಾಯಿಯನ್ನು ಹಸ್ತಾಂತರಿಸಿ ಆ ಭಾಷಿಕ ರಚನೆಯನ್ನು ನಿಜಗೊಳಿಸುವಂತಾಯಿತು.

ಕುಟುಂಬಗಳು ಕಿರಿದುಗೊಳ್ಳುತ್ತಾ ಕೃಷಿ ಚಟುವಟಿಕೆಗಳು ಅಂಚಿಗೆ ಸರಿದು ಹಸು ಸಾಕಣೆಯೇ ಕ್ಷೀಣಗೊಳ್ಳುತ್ತಿರುವ ಗಳಿಗೆಯಲ್ಲಿ ವಿಕ್ರಯ ಮತ್ತು ಪಾಲನೆಯ ಬಾಗಿಲುಗಳು ಮುಚ್ಚುತ್ತಾ ಬರುತ್ತಿವೆ. ಈ ನಡುವೆ ಧಾರ್ಮಿಕ ಕಾರಣಕ್ಕಾಗಿ ಇರುವ ಅವಕಾಶದಲ್ಲಿಯೂ ವಿಕ್ರಯಶೂನ್ಯತೆ ಮತ್ತು ತತ್ಪರಿಣಾಮದ ಉತ್ಪಾದನಾ ಶೂನ್ಯತೆಗೆ ಕೊಡುಗೆ ನೀಡುವಂತೆ ಪರಿಕರವನ್ನು ಅಪ್ರಸ್ತುತಗೊಳಿಸಿ ಪದವನ್ನಷ್ಟೇ ಬಳಸುವ ರೂಢಿ ಜಾರಿಗೆ ಬರುತ್ತಿದೆ. ಈ ರೂಢಿಯನ್ನು ವಿಸ್ತರಿಸುತ್ತಾ ತಾಂತ್ರಿಕ ಅನಿವಾರ್ಯವೆನಿಸುವಂತಹ ಸ್ಥಿತಿಯೂ ಸ್ಥಾಯೀಗೊಳ್ಳುತ್ತಿದೆ. ಈ ತಾಂತ್ರಿಕ ಅನಿವಾರ್ಯತೆಯ ನಿರ್ಮಿತಿ ಮತ್ತು ವಿಸ್ತರಣೆಯಲ್ಲಿ ಶ್ರಮವಿಲ್ಲದ ನಿರಂತರ ಆದಾಯದ ಒಳಹರಿವು ಮತ್ತು ಸಂಗೋಪನೆಯ ಹೊಣೆಗಾರಿಕೆಯ ಮುಕ್ತಿಗಳೆರಡೂ ಸಾಧ್ಯವಾಗುತ್ತಿದೆ. ಇದರ ನಿರಂತರತೆಗಾಗಿ ಪರಿಕರಗಳನ್ನು ಅಪ್ರಸ್ತುತಗೊಳಿಸಿಯೂ ಪದವನ್ನು ಬಳಕೆಯಲ್ಲಿ ಇರಿಸುವ ಸಾಂಸ್ಕೃತಿಕ ಹುನ್ನಾರಗಳು ಬೇರೆ ಬೇರೆ ಮಾದರಿಯ ಅಭಿಯಾನಗಳ ಮೂಲಕ ಚಾಲ್ತಿಗೆ ಬರುತ್ತಿವೆ. ಬುದ್ಧ ಕಿಸಾಗೋತಮಿಯಲ್ಲಿ ತರಲು ಹೇಳಿದ ‘ಸಾವಿರದ ಮನೆಯ ಸಾಸಿವೆಯನ್ನು’ ಈ ಯೋಜನೆಯ ಮೂಲಕ ಗುಡ್ಡೆಹಾಕಿಕೊಂಡಂತಿದೆ. ಇಲ್ಲಿಯ ಹಸು ಹುಟ್ಟುವುದಿಲ್ಲ-ಸಾಕಬೇಕಾಗಿಲ್ಲ-ಸಾವಂತೂ ಇಲ್ಲವೇ ಇಲ್ಲ! ಭಾಷೆ ಅಜರಾಮರ ಅಲ್ಲವೇ!?

ಹಸುವಿನ ದಾನ ದಾನದ ಅಭಿನಯವಷ್ಟೇ ಎಂದು ತಿಳಿದೂ ಅದು ತಮ್ಮ ಮನೆಯಲ್ಲಿಯೇ ನಡೆಯಬೇಕೆಂದು ಬಯಸುವ ಆಸ್ತಿಕತೆ, holy-cowಕೊಟ್ಟದ್ದನ್ನು ಪಡೆಯುವ ಬದಲು ಇಂತಹದನ್ನೇ ದಾನವಾಗಿ ಕೊಡಬೇಕೆಂಬ ಆದೇಶ ನೀಡಿ ಕಸಿಯುವುದನ್ನು ದಾನವೆಂದು ಒಪ್ಪಿಸಿರುವುದು, ದಾನ ಕೊಡುವಾಗಲೂ ಮೌಲ್ಯದ ಕುರಿತಾಗಿ ನಡೆಸುವ ಚೌಕಾಶಿಯ ಜಗತ್ತಿನಲ್ಲಿಯ ಆಯ-ವ್ಯಯದ ಪ್ರಶ್ನೆ, ಹಸುವೂ ಕೂಡ ನಿರ್ಜೀವವಾದ ಪಾತ್ರೆ, ಪಂಚೆಯಂತೆ ಸರಕಾಗಿ ಬಳಸಿಯೂ ಭಾವನಾವಲಯವನ್ನು ಆಳುವಂತೆ ನಡೆಸುವ ಅದ್ಭುತ ಕಥನ ಮತ್ತು ನಟನೆ ಇವೆಲ್ಲವೂ ಈ ದಾನದ ಜತೆಗೇ ನಡೆಯುತ್ತಿರುತ್ತವೆ. ಕೊಡುವವರಿಗೂ ಗೊತ್ತಿದೆ ಇದು ನಿರರ್ಥಕವೆಂದು. ಹಾಗೆಯೇ ಪಡೆಯುವವರಿಗೆ ಬಹಳ ಸ್ಪಷ್ಟವಾಗಿ ಗೊತ್ತಿಗೆ ಅವಕಾಶ ಸಿಕ್ಕಾಗ ಬಾಚಿಕೊಳ್ಳಬೇಕು ಎಂದು. ಕೊಡುವ-ಪಡೆಯುವ ಇಬ್ಬರಿಗೂ ಪೂರ್ಣನಂಬಿಕೆಯಿಲ್ಲದೆಯೂ ನಂಬಿಕೆಯ ಜಗತ್ತೊಂದನ್ನು ಆಳುವ ಸರಕಾಗಿ ನಿರೂಪಿತವಾದ ಹಸು ಕಾಲಕಾಲಕ್ಕೆ ತನ್ನ ಚಹರೆಗಳಲ್ಲಿಯೂ ಅನುಕೂಲ ಸಿಂಧುವಾದ ಬದಲಾವಣೆಗಳನ್ನು ಕಂಡಿದೆ. ಒಂದು ಕಡೆಯಿಂದ ದೇಸೀ ತಳಿಯನ್ನು ಉಳಿಸಬೇಕೆಂದು ಹಗಲಿರುಳು ದನಕಾಯುವ ಕಾಯಕದಲ್ಲಿ ಈ ದೇಶದ ಮೇಲಿನ ಭಕ್ತಿ ಸಾಬೀತುಗೊಳ್ಳಬಲ್ಲುದು ಎಂದು ಬೊಬ್ಬೆ ಹಾಕುವವರೇ ದಾನದ ಸರಕಾಗಿ ಹೈಬ್ರೀಡ್‌ಸಂತತಿ (ಸಂಕರ ಸಂತತಿ)ಯ ಮಿಶ್ರತಳಿವನ್ನು ಬಯಸುತ್ತಾ ಊರಹಸುಗಳು ಬೇಡ ಎನ್ನುತ್ತಿದ್ದಾರೆ! ಹಸುವನ್ನು ದಾನಮಾಡಿ ಪುಣ್ಯ ಕಟ್ಟಿಕೊಳ್ಳಬಯಸುವವರೂ ಅದರ ರೇಟಿಗೆ ಸಂಬಂಧಿಸಿ ವ್ಯಾವಹಾರಿಕವಾಗಿಯೇ ಚರ್ಚೆ ನಡೆಸಬಲ್ಲವರು.ಹಾಗೆಯೇ ತಮ್ಮ ಹಟ್ಟಿಗೆ ದಾನದರೂಪದಲ್ಲಿ ಸಾಕಣೆಯ ಹೊರೆ ಬರದಂತೆ (ಊರದನದ ಸಾಕಣೆಯ ಹೊರೆಬೀಳದಂತೆ) ಜಾಗರೂಕತೆವಹಿಸಿ ಬಂಡವಾಳವನ್ನು ಪೀಕಿಕೊಳ್ಳುವಷ್ಟು ಪುರೋಹಿತರೂ ಗಟ್ಟಿಗರೇ.ಇಬ್ಬರಿಗೂ ಗೋವಿನ ಸಾಕುವ ಭಾರಕ್ಕಿಂತ ಅಭಿನಯವೇ ಹೆಚ್ಚು ಅನುಕೂಲಕರ.

ಹಸುವಿನ ಈ ತೆರನಾದ ಅಭಿನಯ ಗೃಹ ಪ್ರವೇಶವೆಂದೇ ಪರಿಚಿತವಾದ ಮನೆಯೊಕ್ಕಲ ವೇಳೆಯಲ್ಲಿಯೂ ನಡೆಯುತ್ತದೆ. ನಗರಕ್ಕೆ ಹೊಂದಿಕೊಂಡ ಹೊಸ ಬಡಾವಣೆಗಳಲ್ಲಿ ಮನೆ ಕಟ್ಟುವವರು ಸಹಜವಾಗಿಯೇ ಪ್ಯಾಕೇಟು ಹಾಲು ನೋಡುವವರು. ಆದರೆ ಅಪಾರವಾದ ಗೋ-ಭಕ್ತರಾದ ಇವರುಗಳಿಗೆ ಮನೆಯ ಸಕಲೈಶ್ವರ್ಯವನ್ನು ಒಳಬರುವಂತೆ ಮಾಡುವ ಹಸುವನ್ನು ಮನೆಪ್ರವೇಶಮಾಡಿಸಿ ಒಂದಿಷ್ಟು ಉಚ್ಚೆ, ಒಂದಿಟ್ಟು ಸೆಗಣಿ ಹಾಕಿಸಿದರೇನೆ ತೃಪ್ತಿ. ಈ ತೃಪ್ತಿಗಾಗಿ ಜೀವಮಾನದುದ್ದಕ್ಕೂ ಖಂಡಿತಾ ಅವರು ಶ್ರಮವಹಿಸಲಾರರು. ಹಾಗಾಗಿಯೇ ಒಂದು ಗಂಟೆಯ ಮಟ್ಟಿಗೆ ಇಲ್ಲಿ ಹಸು ಬಾಡಿಗೆ ಹಸುವಾಗಿ ಮನೆಯೊಕ್ಕಲ ಗೋಪ್ರವೇಶದ ನಾಟಕವಾಡುತ್ತದೆ! ಪಾಪ ಅದೇನು ಆಡೀತು? ನಾವು ಆಡಿಸುತ್ತೇವೆ. ಹೊಸಮಾದರಿಯ ತರಾವರಿ ನೆಲದ ಮೇಲೆ ಕಾಲಿಡುವ ಸಂಕಟದ ಜೊತೆಗೆ ಒಂದು ಕ್ಷಣದಮಟ್ಟಿಗೆ ಏನೇನೋ ತಿನ್ನಿಸಿ ಗೋಭಕ್ತಿ ಮೆರೆಯುವ ಮನೆಯ ವಾರೀಸುದಾರರು,ಹಸುವಿನ ಬಗೆಬಗೆಯ ಬಂಗಿಯನ್ನು ಕ್ಲಿಕ್ಕಿಸುವ ಫೋಟೋಗ್ರಾಫರ್, ವೇದೋಕ್ತವೆನ್ನುವ ಆದರೆ ಹಸುವಿಗೆ ಅರ್ಥವಾಗದ ಮಂತ್ರಪಠಿಸಿ ಆರತಿ ಎತ್ತುವ ಪುರೋಹಿತರುಗಳ ಕರಾಮತ್ತಿಗೆ ಹೆದರಿ ಅದು ಉಚ್ಛೆ-ಸಗಣಿ ಎರಡೂ ಮಾಡಿಕೊಳ್ಳುತ್ತದೆ. ಹಸುವಿನ ಆಕ್ಷಣದ ಭಯವನ್ನೇ ಏನೇನೋ ಆಗಿ ಅರ್ಥೈಸಿ ವಿವರಿಸಿಕೊಳ್ಳಲೆಂದು ಇರಿಸಿಕೊಳ್ಳುವ ಭಾವಚಿತ್ರದ ಹೊರತಾಗಿ ಇವರ್‍ಯಾರೂ ಹಸುಸಾಕಿ ಸೆಗಣಿಮುಟ್ಟಿ ಸುಖಪಡುವವರಲ್ಲ. ಹಸು ಹೊಡೆದುಕೊಂಡು ಬಂದವನಿಗೆ ಆರೋ-ಮೂರೋ ಕಾಸನ್ನು ಭಿಕ್ಷೆಯ ತರಹ ಕೊಟ್ಟುಬೀಗುವ ದೊಡ್ಡವರಿವರು. ನಗರಗಳು ಬೆಳೆದಂತೆ ಇಂತಹ ಗೋವಿನ ನಾಟಕ, ಗೋವಿನ ಮೇಲಿನ ನಾಟಕದ ಪ್ರೀತಿ, ಅಭಿಮಾನ/ದುರಭಿಮಾನ ಎಲ್ಲವೂ ಬೆಳೆಯುತ್ತಿದೆ. ಗೋವಿನ ಸಂಖ್ಯೆ ಮಾತ್ರ ಕರುಗುತ್ತಿದೆ. ಕ್ಷೀರಕ್ಷಾಮವೆಂದರೆ ಇದೇ ಅಲ್ಲವೇ.

(ಮುಂದುವರೆಯುವುದು…)

One thought on “ದಾನದ ಪಾತ್ರೆ ಪಂಚೆ ಹಾಗೆಯೆ ಗೋವು : ಗಂಗೆ, ಗೌರಿ,.. ಭಾಗ–7

  1. Ananda Prasad

    ಪುರೋಹಿತಶಾಹಿಗಳು ಯಾವ ರೀತಿ ಜನರ ಅಜ್ಞಾನ, ನಂಬಿಕೆಗಳನ್ನು ಬಂಡವಾಳ ಮಾಡಿಕೊಂಡು ಜನತೆಯನ್ನು ಸುಲಿಯುತ್ತಾರೆ ಎಂಬ ಒಂದು ಒಳನೋಟವನ್ನು ಈ ಲೇಖನ ನೀಡುತ್ತದೆ. ಬೊಜ್ಜದ ಹಲವಾರು ಆಚರಣೆಗಳು ಪುರೋಹಿತಶಾಹಿಗಳ ಸುಲಿಗೆಗೆಂದೇ ರೂಪುಗೊಂಡಿರುವುದು ಕಂಡುಬರುತ್ತದೆ. ಹೀಗಿದ್ದರೂ ಸಮಾಜ ಇವುಗಳನ್ನು ಕಣ್ಣುಮುಚ್ಚಿ ಅನುಸರಿಸುತ್ತಿರುವುದು ವಿದ್ಯಾವಂತರಾದರೂ ನಮ್ಮ ಜನರಲ್ಲಿ ವಿಚಾರವಂತಿಕೆ ಬೆಳೆಯಲಿಲ್ಲ ಎಂಬುದನ್ನು ಎತ್ತಿ ತೋರಿಸುತ್ತದೆ. ಪುರೋಹಿತಶಾಹೀ ಕಂದಾಚಾರಗಳಿಂದ ಬಿಡುಗಡೆ ಪಡೆಯಬೇಕಾದರೆ ಸಮಾಜ ಒಟ್ಟಾಗಿ ಪ್ರಯತ್ನಿಸಬೇಕಾಗುತ್ತದೆ. ಉನ್ನತ ವಿದ್ಯಾಭ್ಯಾಸ ಪಡೆದ ಜನ ಪುರೊಹಿತಶಾಹೀ ಆಚರಣೆಗಳ ಔಚಿತ್ಯವನ್ನು ಪ್ರಶ್ನಿಸಿ ಕಂದಾಚಾರಗಳನ್ನು ಸ್ವಲ್ಪ ಸ್ವಲ್ಪವೇ ಕಡಿಮೆ ಮಾಡುತ್ತಾ ಬರಬೇಕು. ಹೀಗಾದಾಗ ಇವುಗಳು ಕಾಲಾಂತರದಲ್ಲಿ ಕಡಿಮೆಯಾಗುತ್ತಾ ಬರುತ್ತವೆ.

    Reply

Leave a Reply

Your email address will not be published. Required fields are marked *