Daily Archives: October 21, 2013

ಧರ್ಮಸ್ಥಳದಲ್ಲಿ ಭಯಭೀತಿ ತೊಲಗಲಿ, ನೆಲದ ಕಾನೂನು ನೆಲೆಗೊಳ್ಳಲಿ…


– ರವಿ ಕೃಷ್ಣಾರೆಡ್ದಿ


ಕಳೆದ ಎರಡು ದಿನ ಮಂಗಳೂರು-ಉಡುಪಿ ಜಿಲ್ಲೆಗಳಲ್ಲಿ ಇದ್ದೆ. ಎರಡು ರಾತ್ರಿ ಮಂಗಳೂರು ಜಿಲ್ಲೆಯಲ್ಲಿ ಉಳಿದುಕೊಂಡಿದ್ದೆ. ನೆನ್ನೆ ಉಡುಪಿ-ಕಾರ್ಕಳ-ಮೂಡುಬಿದ್ರೆಯ ಮೂಲಕ ಬೆಂಗಳೂರಿಗೆ ಹೊರಟಾಗ ಯಾವ ದಾರಿ ಸೂಕ್ತ (ಶಿರಾಡಿ ಘಟ್ಟ ರಸ್ತೆಯೊ, ಚಾರ್ಮಾಡಿ ಘಟ್ಟ ರಸ್ತೆಯೋ) ಎಂದಿದ್ದಕ್ಕೆ ಅಲ್ಲಿಯ ಸೇಹಿತರೊಬ್ಬರು, ’ಬೆಳ್ತಂಗಡಿ ಮತ್ತು ಉಜಿರೆಯಿಂದ ನೇರವಾಗಿ ಚಾರ್ಮಾಡಿ ಘಟ್ಟದ ರಸ್ತೆಯಲ್ಲಿ ಹೋಗಿ. ಹಾಗೆ ಹೋದರೆ ನಿಮಗೆ ಧರ್ಮಸ್ಥಳದ ಮೂಲಕ ಹೋಗುವುದೂ ತಪ್ಪುತ್ತದೆ. ಅಲ್ಲಿ ಗೊತ್ತಲ್ಲ ಏನೇನಾಗುತ್ತಿದೆ ಎಂದು, ಜಾಗ ಸರಿ ಇಲ್ಲ,’ ಎಂದರು. ಆರೋಗ್ಯಕರ ಹಾಸ್ಯಪ್ರವೃತ್ತಿ ಇರುವ ಅವರು ಅದನ್ನು ತಮಾಷೆಯಿಂದ ಹೇಳಿದ್ದು. ಆದರೆ ಹೊರಗಿನವನಾದ ನನಗಿಂತ ಹೆಚ್ಚಿಗೆ ಅವರಿಗೆ ಗೊತ್ತಿತ್ತು, ಅದು ಕೇವಲ ತಮಾಷೆಯಲ್ಲ ಎಂದು.

ಇಲ್ಲಿಯವರೆಗೂ ಕರ್ನಾಟಕದಲ್ಲಿ ಪ್ರಶ್ನಾತೀತ ವ್ಯಕ್ತಿಯಾಗಿದ್ದವರೊಬ್ಬರು ಕೆಲ ತಿಂಗಳುಗಳಿಂದ ಪ್ರಶ್ನಾತೀತರಾಗಿ ಉಳಿದಿಲ್ಲ. ಬಹುಶಃ ನನ್ನ ತಂದೆ-ತಾಯಿಯ ಎರಡೂ ಕಡೆಯ ಪೂರ್ವಿಕರೆಲ್ಲರೂ ಸೇರಿ ಧರ್ಮಸ್ಥಳವನ್ನು ಸಂದರ್ಶಿಸಿದ್ದಕ್ಕಿಂತ ಹಲವು ಪಟ್ಟು ಹೆಚ್ಚಿಗೆ ಮಂಜುನಾಥನನ್ನು ಸಂದರ್ಶಿಸಿರುವ ಬಯಲುಸೀಮೆಯ Dharmasthala_Templeನನ್ನಂತಹವರಿಗೆ ಧರ್ಮಸ್ಥಳದ ಬಗ್ಗೆ ಒಂದು ಭಯ-ಭಕ್ತಿ ಇದೆ. ಇಲ್ಲಿ ಭಕ್ತಿಗಿಂತಲೂ ಹೆಚ್ಚಾಗಿ ಕೆಲವು ಕಟ್ಟುಕತೆಗಳ ಮೂಲಕ (ವ್ಯವಸ್ಥಿತವಾಗಿ?) ಮೌಢ್ಯ ಮತ್ತು ದೈವಭಯವನ್ನು ಹುಟ್ಟು ಹಾಕಲಾಗಿದೆ.

ಈ ಸಾರಿಯ ನನ್ನ ಪ್ರಯಾಣದಲ್ಲಿ ಕಂಡಹಾಗೆ ಬೆಳ್ತಂಗಡಿ ಮತ್ತು ಸುತ್ತಮುತ್ತಲ ಜನಕ್ಕೆ ನಮಗಿಂತ ಹೆಚ್ಚಿನ ವಾಸ್ತವದ ಪರಿಚಯ ಇದೆ, ಮತ್ತು ಇಲ್ಲಿಯವರೆಗೆ ಬಹುತೇಕ ಎಲ್ಲರೂ ಭಯದಿಂದ ಹಾಗೂ ಏನು ಮಾಡಿದರೂ ಉಪಯೋಗವಿಲ್ಲ ಎನ್ನುವ ಕಾರಣಕ್ಕೆ ಬಾಯಿಮುಚ್ಚಿಕೊಂಡೇ ಇದ್ದರು. ಈಗ ಅವರು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು, ಕೋಪವನ್ನು ಹೊರಹಾಕಲು ಸೌಜನ್ಯ ಎನ್ನುವ ಆ ಮಣ್ಣಿನ ಒಬ್ಬ ಹೆಣ್ಣುಮಗಳ ಬಲಿ ಮೂಲವಾದದ್ದು ಮಾತ್ರ ದುರಂತ.

ಅಂದ ಹಾಗೆ, ಬೆಳ್ತಂಗಡಿ ಸುತ್ತಮುತ್ತಲ ಅನೇಕ ಪ್ರಜ್ಞಾವಂತರಿಗೆ ಸೌಜನ್ಯಾಳ ಮೇಲಿನ ಅತ್ಯಾಚಾರ ಮತ್ತು ಕೊಲೆ ಧಿಗ್ಭ್ರಾಂತಿ ಮೂಡಿಸಿದ ಘಟನೆ ಅಲ್ಲ. ಇಂತಹವು ಅಲ್ಲಿ ಆಗಾಗ್ಗೆ ಬಲಿಷ್ಟರಿಂದ ನಡೆಯುತ್ತಿದ್ದ, ಕಾಲಗರ್ಭದಲ್ಲಿ ಮುಚ್ಚಿಹೋಗುತ್ತಿದ್ದ ಘಟನೆಗಳೆ. ಆದರೆ ಅವರಿಗೆ ನಿಜಕ್ಕೂ ಶಾಕ್ ಆಗಿರುವುದು, ಹೀಗೂ ಆಗಲು ಸಾಧ್ಯವೇ ಎನ್ನಿಸುತ್ತಿರುವುದು, ಈ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮುಚ್ಚಿಹೋಗದೆ “ಖಾವಂದ”ರಿಗೆ ಬೆವರಿಳಿಯುವಂತೆ ಆಗಿರುವುದು.

ನನಗೆ ದಕ್ಷಿಣ ಕನ್ನಡದಲ್ಲಿ ಹಲವಾರು ಸಜ್ಜನ ಸ್ನೇಹಿತರಿದ್ದಾರೆ. ಕೆಲವು ಬಂಡುಕೋರ, ರಾಜಿಯಿಲ್ಲದ ಯುವ ಸ್ನೇಹಿತರಂತೆ, ಪ್ರಬುದ್ಧ, ಮಿತಭಾಷಿಕ, ಮಧ್ಯವಯಸ್ಕ ಸ್ನೇಹಿತರೂ ಇದ್ದಾರೆ. ಆದರೆ ಈ ಎಲ್ಲಾ ಸ್ನೇಹಿತರಿಗೆ ಧರ್ಮಸ್ಥಳದ ವಿಚಾರಕ್ಕೆ ಬಂದಾಗ ತಕರಾರುಗಳಿವೆ. ಇವರ್‍ಯಾರೂ ವೈಯಕ್ತಿಕ ದ್ವೇಷದಿಂದ ಮಾತನಾಡುವವರಲ್ಲ. ವರ್ತಮಾನ.ಕಾಮ್‌ನಲ್ಲಿ ವಾರದ ಹಿಂದೆ “ಪ್ರಶ್ನೆಗಳಿರುವುದು ಡಿ. ವೀರೇಂದ್ರ ಹೆಗ್ಗಡೆಗೆ!” ಎನ್ನುವ ಲೇಖನ ಬಂದಾಗ ನಾನದನ್ನು ಫೆಸ್‌ಬುಕ್‌ನಲ್ಲಿ ಶೇರ್ ಮಾಡಿಕೊಳ್ಳುತ್ತ ಆ ಹಿನ್ನೆಲೆಯಲ್ಲಿ ಈ ಟಿಪ್ಫಣಿ ಬರೆದಿದ್ದೆ:

“ನಾನು ನಂಬುವ ಸ್ನೇಹಿತರ ಪ್ರಕಾರ ಧರ್ಮಸ್ಥಳ ಮತ್ತು ಅದರ ಸುತ್ತಮುತ್ತ ನಡೆಯುವ ಅನೇಕ ಘಟನೆಗಳು ಅಲ್ಲಿಯ ವ್ಯವಸ್ಥೆಯ ಬಗ್ಗೆ ಸಂಶಯ ಮತ್ತು ಭಯ ಹುಟ್ಟಿಸುವಂತಹವು. ಒಂದು ರೀತಿಯಲ್ಲಿ ಪರ್ಯಾಯ ಸರ್ಕಾರವೇ ಅಲ್ಲಿ ಅಸ್ತಿತ್ವದಲ್ಲಿದೆ ಎನ್ನುತ್ತಾರೆ. ನಾಲ್ಕಾರು ಮರಣದಂಡನೆಗಳಿಗಾಗುವಷ್ಟು ತಪ್ಪು ಮಾಡಿರುವವರು ಅಥವ ಅದರ ಪೋಷಕರು ಅಲ್ಲಿ “ದೊಡ್ಡವರ” ವೇಷದಲ್ಲಿ ಇದ್ದಾರೆ ಎಂದು ಜನ ಹೇಳುತ್ತಾರೆ. ಸೌಜನ್ಯ ಎನ್ನುವ ಹೆಣ್ಣುಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಅಪರಾಧಿಗಳು ಹೊರಗಿದ್ದಾರೆ, ಅಮಾಯಕ ಮತ್ತು ಮಾನಸಿಕ ಅಸ್ವಸ್ಥನೊಬ್ಬ ಈ ಕೇಸಿನಲ್ಲಿ ಫಿಕ್ಸ್ ಆಗಿ ಬಂದಿಯಾಗಿದ್ದಾನೆ ಎಂದು ವರ್ಷದಿಂದಲೂ ಕೆಲವು ಜನ ಹೇಳುತ್ತಾ, ನ್ಯಾಯಕ್ಕಾಗಿ ಹೋರಾಡುತ್ತ ಬಂದಿದ್ದಾರೆ.

ಜನ ವ್ಯಕ್ತಿಪೂಜೆಯನ್ನು ಬದಿಗಿಟ್ಟು ಸತ್ಯವನ್ನಷ್ಟೇ ನೋಡಲು ಪ್ರಯತ್ನಿಸಬೇಕು ಮತ್ತು ಮತೀಯ ಅಥವ ಆಸ್ತಿಕ ಕಾರಣಗಳಿಗಾಗಿ ಭಾವಾವೇಶಕ್ಕೆ ಒಳಗಾಗಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ನಿರಾಕರಣೆ ಮಾಡುವಂತಹ ಹಂತಕ್ಕೆ ತಮ್ಮ ಭಕ್ತಿ ಮತ್ತು ಆಸ್ತಿಕತೆಯನ್ನು ಬಲಿಕೊಡಬಾರದು ಎನ್ನುವುದು ನನ್ನ ಮನವಿ. ಗಾಂಧಿ ಹೇಳುತ್ತಾರೆ, “ಎಲ್ಲಾ ಧರ್ಮಗಳೂ ಮನುಷ್ಯ ನಿರ್ಮಿತ; ಹಾಗಾಗಿಯೇ ಅವು ಅಪೂರ್ಣ.” ಹಾಗಾಗಿ ಮತಾಂಧತೆಗೆ ಒಳಗಾಗದೆ, ದೇವರು ಮತ್ತು ನಮ್ಮ ನಡುವೆ ಇರುವ ಪೂಜಾರಿಯನ್ನು ಮನುಷ್ಯನೆಂದೇ ಪರಿಗಣಿಸಿ ಆತನನ್ನೂ ವಿಮರ್ಶಿಸುವ, ಪ್ರಶ್ನಿಸುವ, ಸಾಕ್ಷಿಗಳು ಇರುವಾಗ ಸಂಶಯಿಸುವ, ಅಂತಿಮವಾಗಿ ಅವನನ್ನು ನಿರಾಕರಿಸುವ ಹಕ್ಕನ್ನು ಉಳಿಸಿಕೊಳ್ಳಬೇಕು.

ಈ ಸಂದರ್ಭದಲ್ಲಿ ನಮ್ಮ ಎಲ್ಲಾ ಮುಖ್ಯವಾಹಿನಿ ಮಾಧ್ಯಮಗಳು ಸೌಜನ್ಯ ಎಂಬ ಈ ನೆಲದ ಹೆಣ್ಣುಮಗಳಿಗೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸಿ ನಡೆಸಲಾಗುತ್ತಿರುವ ಹೋರಾಟವನ್ನು ಮುಚ್ಚಿಡದೆ ಜನರ ಮುಂದೆ ಇಡಬೇಕೆಂದು ವಿನಂತಿಸುತ್ತೇನೆ.”

ಇದಾದ ನಂತರವೇ ನಾನು ಮಂಗಳೂರಿಗೆ ಹೋಗಿದ್ದು. ಅಲ್ಲಿ ಮೇಲಿನದಕ್ಕಿಂತ ಹೆಚ್ಚು ಅಸಹ್ಯ ಹುಟ್ಟಿಸುವ, ಗಾಬರಿಯಾಗಿಸುವ ಮಾತುಗಳನ್ನು ಕೇಳಿದೆ. ಸ್ವತಃ ಈಗಿನ ಧರ್ಮಾಧಿಕಾರಿಯವರ ಸಜ್ಜನೆ ತಾಯಿಯವರು ಎರಡು-ಮೂರು ದಶಕಗಳ ಹಿಂದೆ ದುರ್ಮರಣಕ್ಕೀಡಾದ ಘಟನೆ ಅಪಘಾತವೋ ಅಥವ ಆಯೋಜಿತ ಕೊಲೆಯೋ sowjanya-heggadeಎನ್ನುವ ಸಂಶಯಗಳಿಂದ ಹಿಡಿದು. ಧರ್ಮಸ್ಥಳದ ಸಂಸ್ಥೆ ನಡೆಸುವ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಬೇಕಿದ್ದ ಶ್ರೀಮತಿ ಹರಳೆಯವರನ್ನು ಪೆಟ್ರೋಲ್ ಹಾಕಿ ಸುಟ್ಟ ಕೊಲೆಯ ಬಗ್ಗೆಯೂ ಜನ ಬೇಸರ ಖಿನ್ನತೆಯಿಂದ ಮಾತನಾಡುತ್ತಾರೆ. ಉಜಿರೆಯಲ್ಲಿ ಅವರ ಸಂಸ್ಥೆಯಲ್ಲಿ ಓದಿದ ಕೆಲವು ಪ್ರಾಮಾಣಿಕ ಮತ್ತು ಸಂಯಮಿ ಮನಸ್ಸುಗಳು ಸಹ ಹೆಗ್ಗಡೆಯವರ ಕುಟುಂಬದವರು ತಮ್ಮ ಕೆಳಗಿನ ನೌಕರರನ್ನು ನಡೆಸಿಕೊಳ್ಳುವ ದರ್ಪ ದೌರ್ಜನ್ಯದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ಆ ಕುಟುಂಬದ ಕೆಲವು ದುರಂತಗಳನ್ನು ನೆನೆದು ಬಹುಶಃ ಇದು ನಿಸರ್ಗ ನ್ಯಾಯವೇನೋ ಎನ್ನುತ್ತಾರೆ.

ಹಾಗೆಯೇ, ’ಅವರ ಒಡೆತನದಲ್ಲಿರುವ ತನಕ ನಾನು ಆ ದೇವಸ್ಥಾನಕ್ಕೆ ಹೋಗುವುದಿಲ್ಲ. ಸರ್ಕಾರ ಅದನ್ನು ವಹಿಸಿಕೊಂಡ ದಿನ ಮಂಜುನಾಥನ ದರ್ಶನಕ್ಕೆ ಹೋಗುತ್ತೇನೆ,’ ಎಂದು “ಹರಕೆ” ಹೊತ್ತಿರುವ ಆಸ್ತಿಕರೂ ಇದ್ದಾರೆ.

ವಿಷಯ ದಿನದಿಂದ ದಿನಕ್ಕೆ ಗಂಭೀರವಾಗುತ್ತ ಹೋಗುತ್ತಿದೆ. ನಿಸರ್ಗ ನ್ಯಾಯಕ್ಕಿಂತ ಹೆಚ್ಚಾಗಿ ಈ ನೆಲದ ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಿದೆ. ಇಲ್ಲದಿದ್ದರೆ ನಾವು ಇಂತಹ ವ್ಯವಸ್ಥೆ ಕಟ್ಟಿಕೊಂಡದ್ದಕ್ಕೆ ಅರ್ಥವಾದರೂ ಏನಿರುತ್ತದೆ? ಸೌಜನ್ಯಾಳ ಕೊಲೆ ಪ್ರಕರಣ ಮಾತ್ರವಲ್ಲ, ಇಲ್ಲಿ ಹತ್ತಾರು ವರ್ಷಗಳಿಂದ ದಾಖಲಾಗುತ್ತ ಬಂದಿದ್ದ ಅನಾಥ ಶವಗಳ ಹಿನ್ನೆಲೆ ಏನು, ಅಷ್ಟೊಂದು ಪ್ರಮಾಣದಲ್ಲಿ ಇಲ್ಲಿ ಅಸಹಜ ಸಾವುಗಳು ಘಟಿಸಲು ಕಾರಣವೇನು, ಮತ್ತು ಇದ್ದಕ್ಕಿದ್ದಂತೆ ವರ್ಷದಿಂದೀಚೆಗೆ ಅನಾಥ ಶವಗಳು ಸಿಗದೆ ಹೋಗುತ್ತಿರಲು ಕಾರಣವೇನು ಎನ್ನುವುದರ ತನಿಖೆಯೂ ಆಗಬೇಕು. ರಾಜ್ಯ ಸರ್ಕಾರದ ಸಿಐಡಿ ತನಿಖೆ ಎಂದರೆ ಅದು ಬಹಳಷ್ಟು ಸಲ JusticeForSowjanya(ಪಟ್ಟಭದ್ರರು ಮತ್ತು ಪ್ರಭಾವಿಗಳು ಪಾಲ್ಗೊಂಡಿರುವ ಕೇಸುಗಳಲ್ಲಿ) ಮೊದಲೇ ವರದಿ ಸಿದ್ಧಪಡಿಸಿ ನಂತರ ತನಿಖೆಯ ನಾಟಕ ಆಡುವುದು. ಸ್ಥಳೀಯ ಕಾಂಗ್ರೆಸ್ ಶಾಸಕರನ್ನು ಹೊರತುಪಡಿಸಿ ರಾಜ್ಯದ ಅನೇಕ ಕಾಂಗ್ರೆಸ್ ನಾಯಕರು ಮಂಡಿಯೂರಿ ಜೈಕಾರ ಹಾಕುತ್ತಿರುವಾಗ ಸಿಬಿಐ ತನಿಖೆಯಿಂದಲಾದರೂ ಸತ್ಯ ಹೊರಬರುತ್ತದೆ ಎನ್ನುವುದು ಸಂದೇಹಾಸ್ಪದ. ಬಹುಶಃ ಕೆಲವು ಸಂಘಸಂಸ್ಥೆಗಳು ಮತ್ತು ಮಾಧ್ಯಮಗಳೇ ಇದನ್ನು ಮಾಡಬೇಕಿದೆ.

ಈಗ ಹೊರಗುತ್ತಿಗೆಯ ಕಾಲ. ಸರ್ಕಾರದ ಕರ್ತವ್ಯವಾಗಿರುವ ಮತ್ತು ಅದು ಮಾಡಲೇಬೇಕಿರುವ ಕೆಲವು ಸಾಮಾಜಿಕ ಮತ್ತು ಶೈಕ್ಷಣಿಕ ಕೆಲಸಗಳನ್ನು ಕೆಲವು ವ್ಯಕ್ತಿ ಮತ್ತು ಸಂಸ್ಥೆಗಳೇ ಮಾಡಿದಾಕ್ಷಣ ನಾವು ಆ ವ್ಯಕ್ತಿ ಮತ್ತು ಸಂಸ್ಥೆಗಳನ್ನು ವೈಭವೀಕರಿಸಲು ಆರಂಭಿಸಿದರೆ ಸಮಸ್ಯೆ ನಮ್ಮ ತಿಳಿವಳಿಕೆಯದ್ದಾಗುತ್ತದೆ. ಯೋಗ್ಯ ಜನಪ್ರತಿನಿಧಿಗಳನ್ನು ಆರಿಸಿಕೊಳ್ಳದ ನಮ್ಮ ಅಯೋಗ್ಯತನದ್ದಾಗುತ್ತದೆ. ಇದೆಲ್ಲವನ್ನೂ ತಿಳಿದುಕೊಳ್ಳದೆ, ನಮ್ಮ ಜವಾಬ್ದಾರಿಗಳನ್ನು ನಿರಾಕರಿಸಿಕೊಂಡು ಕೆಲವು ಸ್ವಾರ್ಥ ಮತ್ತು ಕಪಟಿ ವ್ಯಕ್ತಿಗಳು ಮಾಡುವ ’ಸಮಾಜಮುಖಿ ಕೆಲಸ’ಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಅನಗತ್ಯವಾದ ವ್ಯಕ್ತಿನಿಷ್ಟೆ ಮತ್ತು ಆರಾಧನಾ ಮನೋಭಾವ ಬೆಳೆಸಿಕೊಳ್ಳುವುದು ಬೇಡ ಎಂದು ನನ್ನ ಯುವಮಿತ್ರರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಪ್ರಬುದ್ಧ ಮತ್ತು ನೈತಿಕ ಮೂಲದ ವ್ಯವಸ್ಥೆ ನಮ್ಮದಾಗಲಿ.

ಪ್ರಜಾಪ್ರಭುತ್ವ ವ್ಯವಸ್ಥೆ ಬಲಾಢ್ಯರ ಪಕ್ಷಪಾತಿ ಆಗಬಹುದೇ?

– ಎಚ್.ಕೆ.ಶರತ್

ಒಡಲೊಳಗೆ ಮನುಷ್ಯತ್ವ ಕಾಪಿಟ್ಟುಕೊಂಡ ವ್ಯವಸ್ಥೆಯೊಂದು ಬಲಿಪಶುವಿನ ಪಕ್ಷಪಾತಿಯಾಗಬೇಕೊ ಅಥವಾ ಬೇಟೆಗಾರರ ಪಕ್ಷಪಾತಿಯಾಗಬೇಕೊ?

ಉಜಿರೆಯ ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸುತ್ತಿರುವವರನ್ನು ಈ ಪ್ರಶ್ನೆ ಕಾಡದಿರದು.

ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆಯ ಹಿಂದೆ ಯಾರೆಲ್ಲರ ಕೈವಾಡವಿದೆ ಎಂಬ ಪ್ರಶ್ನೆಗೆ ಪ್ರಕರಣದ ಸಮಗ್ರ ತನಿಖೆಯ ನಂತರವಷ್ಟೇ ಉತ್ತರ ಸಿಗಲಿದೆ. ಪ್ರಕರಣ ನಡೆದು ಒಂದು ವರ್ಷ ಕಳೆದರೂ ನಿಜವಾದ ಅಪರಾಧಿಗಳ ಬಂಧನವಾಗಿಲ್ಲವೆಂಬ ಆರೋಪ ಕೇಳಿಬರುತ್ತಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಹತ್ತಿರದ ಸಂಬಂಧಿ ಕೂಡ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ sowjanya-rape-murderಎಂಬ ಆರೋಪ ಹೊರ ಬಿದ್ದಿದ್ದೇ ತಡ ಪ್ರಕರಣ ಇಡೀ ರಾಜ್ಯಾದ್ಯಂತ ಸದ್ದು ಮಾಡಲಾರಂಭಿಸಿದೆ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು ಧರ್ಮಸ್ಥಳದ ಕೆಲ ಭಕ್ತಾಧಿಗಳು ಹಾಗು ಹೆಗ್ಗಡೆ ಅವರ ಮೇಲೆ ಅಪಾರ ಅಭಿಮಾನ ಇಟ್ಟುಕೊಂಡವರು ದೂರುತ್ತಿದ್ದಾರೆ.

ಸೌಜನ್ಯ ಎಂಬ ಅಮಾಯಕ ಹುಡುಗಿಯ ಮೇಲಿನ ಅತ್ಯಾಚಾರ ಮತ್ತು ಕೊಲೆಗಿಂತ ಇವರಿಗೆ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ರೂಪುಗೊಂಡವರ ಕುಟುಂಬದ ವಿರುದ್ಧ ಕೆಲವರು ಹೊರಿಸುತ್ತಿರುವ ಆರೋಪವೇ ದೊಡ್ಡ ಪ್ರಮಾದವಾಗಿ ತೋರುತ್ತಿರುವುದು ವಿಪರ್ಯಾಸವೇ ಸರಿ.

ಭವಿಷ್ಯದ ಕುರಿತು ಅಸಂಖ್ಯ ಕನಸುಗಳನ್ನು ಕಟ್ಟಿಕೊಂಡಿದ್ದ ಜೀವವೊಂದನ್ನು ಕೆಲ ವಿಕೃತ ಮನಸ್ಸುಗಳು ತಮ್ಮ ತೆವಲಿಗಾಗಿ ಹೊಸಕಿ ಹಾಕಿವೆ. ವಿಕೃತಿ ಮೆರೆದವರ ವಿರುದ್ಧ ತಿರುಗಿ ಬೀಳಬೇಕಿದ್ದ ವ್ಯವಸ್ಥೆಯೊಂದು ತನ್ನೊಳಗೆ ಇನ್ನಿಲ್ಲದ ಗೊಂದಲ ಸೃಷ್ಟಿಸಿಕೊಂಡು, ಹೀನ ಕೃತ್ಯ ಎಸಗಿದವರು ತೆರೆಮರೆಯಲ್ಲಿ ಮೆರೆಯಲು ಬಿಟ್ಟಿರುವುದು ದುರಂತ.

ಮನುಷ್ಯತ್ವವುಳ್ಳ ಮನಸ್ಸುಗಳು ಮಿಡಿಯಬೇಕಿರುವುದು ಬಲಿಪಶುವಿನ ಕೂಗಿಗೋ ಅಥವಾ ಬೇಟೆಗಾರರ ಮೊಸಳೆ ಕಣ್ಣೀರಿಗೋ?

ಪ್ರಕರಣದ ಕುರಿತು ಸಮಗ್ರ ತನಿಖೆಯಾಗದೆ ಯಾರಿಗೂ ಅಪರಾಧಿ ಅಥವಾ ನಿರಪರಾಧಿ ಪಟ್ಟ ಕಟ್ಟಲಾಗದು. ಅದರಲ್ಲೂ ಬಲಾಢ್ಯರನ್ನು ಸಕಾರಣವಿಲ್ಲದೆ ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸಲಂತೂ ಸಾಧ್ಯವೇ ಇಲ್ಲ.

ವಾಸ್ತವ ಹೀಗಿದ್ದರೂ, ‘ವೀರೇಂದ್ರ ಹೆಗ್ಗಡೆ ಅವರ ಕುಟುಂಬಕ್ಕೆ ಕಳಂಕ ತರುವ ಸಲುವಾಗಿಯೇ ಅವರ ಸಂಬಂಧಿ ಪ್ರಕರಣದಲ್ಲಿ ಭಾಗಿಯಾದ್ದಾನೆ ಎಂದು ಆರೋಪಿಸಲಾಗುತ್ತಿದೆ. ಈ ಪ್ರಕರಣದಿಂದ ಹೆಗ್ಗಡೆ ಕುಟುಂಬವನ್ನು ಹೊರಗಿಡಬೇಕು’ ಎಂದು ಆಗ್ರಹಿಸಿ ಒಂದು ಗುಂಪು ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಿದೆ.

ಸೌಜನ್ಯ ಹತ್ಯೆ ನಡೆದ ನಂತರ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಡೆಯದಷ್ಟು ಪ್ರತಿಭಟನೆಗಳು ಇದೀಗ ವೀರೇಂದ್ರ ಹೆಗ್ಗಡೆ ಅವರ ಕುಟುಂಬ ಸದಸ್ಯನ ಹೆಸರು ಪ್ರಸ್ತಾಪವಾದ ಮಾತ್ರಕ್ಕೆ ಆ ಕುಟುಂಬದ ಘನತೆ ಕಾಪಾಡುವ ಸಲುವಾಗಿ ನಡೆಯುತ್ತಿರುವುದು ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತದೆ?

ವೀರೇಂದ್ರ ಹೆಗ್ಗಡೆ ಮತ್ತವರ ಕುಟುಂಬ ಸದಸ್ಯರು ಎಲ್ಲ ರೀತಿಯಿಂದಲೂ ಬಲಾಢ್ಯರಾಗಿದ್ದಾರೆ. ಅಗತ್ಯವಿದ್ದರೆ ಕಾನೂನು ನೆರವು ಪಡೆಯುವುದು dharmasthala-veernedra-heggadeಅವರಿಗೆ ಕಷ್ಟವಾಗಲಾರದು. ಪ್ರಕರಣದಲ್ಲಿ ಅವರ ಕುಟುಂಬ ಸದಸ್ಯರ ಕೈವಾಡ ಇರದಿದ್ದರೆ, ತನಿಖೆಯಿಂದ ಯಾವುದೇ ಸಮಸ್ಯೆಯಂತೂ ಆಗುವುದಿಲ್ಲ. ಹೀಗಿರುವಾಗ ಹೆಗ್ಗಡೆ ಅವರ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂಬ ನೆಪ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವುದು ಏನನ್ನು ಸೂಚಿಸುತ್ತಿದೆ?

ವ್ಯವಸ್ಥೆಗಿಂತ ಯಾವುದೇ ವ್ಯಕ್ತಿ ದೊಡ್ಡವರಲ್ಲ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡವರು ಯಾರೇ ಆಗಿರಲಿ, ಅವರು ಪ್ರಶ್ನಾತೀತರಲ್ಲ. ಲಕ್ಷಾಂತರ ಜನರಿಗೆ ಮಾರ್ಗದರ್ಶನ ನೀಡುವ ವ್ಯಕ್ತಿಯೊಬ್ಬರು, ತಮ್ಮ ಹಾಗು ಕುಟುಂಬ ಸದಸ್ಯರ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಪರಿ ಮತ್ತು ಟೀಕೆಗಳನ್ನು ಜೀರ್ಣಿಸಿಕೊಳ್ಳಲು ಹೆಣಗುತ್ತಿರುವ ರೀತಿ ಗಮನಿಸಿದರೆ, ಇಲ್ಲಿ ಎಲ್ಲವೂ ಅಂದುಕೊಂಡಷ್ಟು ಸರಳವಾಗಿಲ್ಲ ಎಂಬುದು ಮನದಟ್ಟಾಗುತ್ತದೆ.

ಸೌಜನ್ಯ ಎಂಬ ಹುಡುಗಿಗಾಗಿ ದನಿ ಎತ್ತದ ಕೆಲ ಶಾಸಕರು, ಸಚಿವರು ಹಾಗು ರಾಜಕಾರಣಿಗಳು ಇದೀಗ ವೀರೇಂದ್ರ ಹೆಗ್ಗಡೆ ಅವರಿಗಾಗಿ ರಂಗಪ್ರವೇಶ ಮಾಡಿರುವುದು ಪ್ರಕರಣದ ಹಿಂದಿರಬಹುದಾದ ಒಳಸುಳಿಗಳಿಗೆ ಕನ್ನಡಿ ಹಿಡಿಯುತ್ತಿರುವಂತೆ ಭಾಸವಾಗುತ್ತಿದೆ.