Daily Archives: October 2, 2013

ರಾಹುಲ್ ಮತ್ತು ಅಧ್ಯಾದೇಶ : ಯಾರ ಮೌನಕ್ಕೆ ಯಾವ ಅರ್ಥ?


– ಚಿದಂಬರ ಬೈಕಂಪಾಡಿ


 

ದೇಶದ ಜನ ಅದೆಷ್ಟು ರೋಸಿ ಹೋಗಿದ್ದಾರೆ ಎನ್ನುವುದಕ್ಕೆ ಕಳಂಕಿತರನ್ನು ರಕ್ಷಿಸುವ ಉದ್ದೇಶದಿಂದ ಯುಪಿಎ ಸರ್ಕಾರ ಅಧ್ಯಾದೇಶ ಜಾರಿಗೆ ತಂದಾಗ ವ್ಯಕ್ತವಾದ ಪ್ರತಿಕ್ರಿಯೆಗಳೇ ಸಾಕ್ಷಿ. ಸದಾ ಮಗುಮ್ಮಾಗಿರುವ ದೇಶದ ಪ್ರಧಾನಿ ಕೂಡಾ ಒಂದು ಕ್ಷಣಕ್ಕೆ ಸೆಟೆದಂತೆ ಕಂಡು ಬಂದರು. ಅದಕ್ಕೆ rahul-gandhi-ordinanceರಾಹುಲ್ ಹರಿಹಾಯ್ದದ್ದೇ ಕಾರಣ. ಬೇರೆ ಯಾರಾದರೂ ಅದ್ಯಾದೇಶವನ್ನು ಹರಿದು ಹಾಕಲು ಲಾಯಕ್ಕು ಎಂದಿದರೆ ಪ್ರಧಾನಿ ಗಡ್ಡದ ಮರೆಯಲ್ಲಿ ನಕ್ಕು ಹಗುರಾಗುತ್ತಿದ್ದರೇನೋ?

ರಾಹುಲ್ ಸರ್ಕಾರದ ಅಧ್ಯಾದೇಶ ಹೊರಬೀಳುವ ತನಕವೂ ಸುಮ್ಮನಿದ್ದು ಕಾಂಗ್ರೆಸ್ ಪಕ್ಷದ ನಾಯಕನಾಗಿ ಚೀರಾಡಿರುವುದನ್ನು ಬುದ್ಧುವಂತಿಕೆ ಅನ್ನಿ, ದಡ್ಡತನ ಅಂತಾದರೂ ಕರೆಯಿರಿ, ಆದರೆ ಕಳಂಕಿತರನ್ನು ರಕ್ಷಿಸುವ ಪ್ರಕ್ರಿಯೆಗೆ ತಡೆಬಿತ್ತು ಎನ್ನಲು ಅಡಿಯಿಲ್ಲ. ಯಾಕೆಂದರೆ ರಾಹುಲ್ ಅವರನ್ನು ಹೀರೋ ಎಂದಾಕ್ಷಣ ಕೆಲವರು ಮೈಮೇಲೆ ದೆವ್ವ ಬಂದಂತೆ ಪ್ರತಿಕ್ರಿಯಿಸಿ ತಮ್ಮ ಒಂದು ಸಾಲಿನ ಅನಿಸಿಕೆ ಮೂಲಕ ಘನಂಧಾರಿ ಚಿಂತಕರೆನಿಸಿಕೊಳ್ಳುತ್ತಾರೆ. ಆದರೆ ತಮ್ಮ ಪ್ರತಿಕ್ರಿಯೆ ವಿದೂಷಕ ಹಾಸ್ಯಕ್ಕಿಂತಲೂ ಕನಿಷ್ಠದ್ದು ಎನ್ನುವ ಅರಿವಿಯೇ ಇಲ್ಲ ಎನ್ನುವುದು ಮಾತ್ರ ವಾಸ್ತವ.

ರಾಹುಲ್ ಯಾಕೆ ಸರ್ಕಾರದ ವಿರುದ್ಧ ಹರಿಹಾಯ್ದರು ಎನ್ನುವುದನ್ನು ತಮ್ಮ ವಿವೇಚನೆ ಮೂಲಕ ಮತ್ತಷ್ಟು ಒಳನೋಟ ಕೊಡುವ ಬುದ್ಧಿವಂತಿಕೆ ತೋರಿಸಿದರೆ ಸಾಮಾಜಿಕ ತಾಣಗಳಲ್ಲಿ ಬರುವ ಬರಹಗಳಿಗೂ ಹೆಚ್ಚು ಅರ್ಥಬರುತ್ತದೆ.

ಒಂದು ವೇಳೆ ರಾಹುಲ್ ಗಾಂಧಿ ಮೌನವಾಗಿರುತ್ತಿದ್ದರೆ ಇಷ್ಟುಹೊತ್ತಿಗೆ ಅಧ್ಯಾದೇಶದ ಪ್ರಯೋಜನವನ್ನು ಕಳಂಕಿತರು ಪಡೆದುಕೊಳ್ಳುತ್ತಿರಲಿಲ್ಲವೇ ಎನ್ನುವುದು ಮುಖ್ಯವೇ ಹೊರತು ಅವರ ನಡೆಯಲ್ಲಿ ಬುದ್ಧಿವಂತಿಕೆಯೋ, ಕುಟಿಲ ತಂತ್ರವೋ ಎನ್ನುವುದು ಚರ್ಚೆಗೆ ಸೂಕ್ತವಾದ ವಿಚಾರ. ಕಳಂಕಿತರು ಎನ್ನುವ ಪದಕ್ಕೇ ಸರಿಯಾದ ವಿವರಣೆ ಇನ್ನೂ ಸಿಕ್ಕಿಲ್ಲ. lalu_prasad_yadavಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ಉಲ್ಲೇಖಿಸಿರುವ ಅಂಶಳನ್ನು ಮಾತ್ರ ಪ್ರಸ್ತಾಪಿಸಿ ಹೇಳುವುದಾದರೆ ಸಧ್ಯಕ್ಕೆ ಸಮಾಧಾನಪಟ್ಟುಕೊಳ್ಳಬಹುದು.

ಸಂಸತ್ ಸದಸ್ಯರಾಗಿ, ಶಾಸಕರಾಗಿ ಒಂದು ಅವಧಿ ಮುಗಿಸುವಷ್ಟರಲ್ಲಿ ಅವರ ಆದಾಯದ ಮೂಲಗಳಲ್ಲಿ ಹಲವು ಟಿಸಿಲುಗಳು ಕಾಣಿಸಿಕೊಂಡು ಬಿಡುತ್ತವೆ. ಚುನಾವಣೆ ಕಾಲದಲ್ಲಿ ಘೋಷಣೆ ಮಾಡಿದ್ದ ಒಟ್ಟು ಸಂಪತ್ತಿನ ಗಾತ್ರ ಮೂರು ಪಟ್ಟಾಗಿರುತ್ತದೆ. ಇದು ಹೇಗೆ ಸಾಧ್ಯವಾಗುತ್ತದೆ ಎನ್ನುವ ಮೂಲವನ್ನು ಶೋಧಿಸಿದರೆ ಭ್ರಷ್ಟಾಚಾರದ ವಾಸನೆ ಮೂಗಿಗೆ ಬಡಿಯದೆ ಇರಲಾರದು. ಕ್ರಿಮಿನಲ್ ಎನ್ನುವುದೂ ಕೂಡಾ ಈಗಿನ ರಾಜಕಾರಣದಲ್ಲಿ ತೀರಾ ಸಹಜ ಎನ್ನುವಂತಾಗಿದೆ. ಈಗಿನ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಹಣ ಹೊಂದಿಸಿಕೊಳ್ಳುವುದು ಕಷ್ಟದ ಕೆಲಸ ಎನ್ನುವ ಅಭಿಪ್ರಾಯ ಕೊಡುವ ರಾಜಕಾರಣಿಗಳೂ ಇದ್ದಾರೆ. ಅವರ ಮನಸ್ಥಿತಿಯನ್ನು ತಳ್ಳಿಹಾಕುವಂತಿಲ್ಲ. ಚುನಾವಣಾ ಆಯೋಗ ಕೈಗೊಳ್ಳುವ ಕಠಿಣ ಕಣ್ಗಾವಲಿನ ಹೊರತಾಗಿಯೂ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುವುದು ಕಣದಲ್ಲಿದ್ದವರಿಗೆ ಅನಿವಾರ್ಯ ಹಾಗೂ ಅವರು ಅಂಥ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಾರೆ. ಹಣ ಖರ್ಚು ಮಾಡುವ ವಿಚಾರದಲ್ಲಿ ಯಾವುದೇ ರಾಜಕೀಯ ಪಕ್ಷ ಹಿಂದೆ ಬೀಳುವುದು ಈಗಿನ ಚುನಾವಣೆ ವ್ಯವಸ್ಥೆಯಲ್ಲಿ ಅಸಾಧ್ಯ ಎನ್ನುವುದನ್ನು ನಿರಾಕರಿಸುವಿರಾ?

ರಾಜಕೀಯ ಸಮಾಜ ಸೇವೆಗೆ ಎನ್ನುವ ಕಾಲ ಇದಲ್ಲ. ಬಹುತೇಕ ಮಂದಿಗೆ ರಾಜಕೀಯ ಒಂದು ವೃತ್ತಿ, ಅದುವೇ ಅವರ ಉದ್ಯೋಗವಾಗಿದೆ. ಸಾಮಾಜಿಕವಾಗಿ, ರಾಜಕೀಯವಾಗಿ ಹೊಸ ವ್ಯವಸ್ಥೆಯನ್ನು ಹುಟ್ಟು ಹಾಕಲು ಮುಂದಾದ ಅಣ್ಣಾ ಹಜಾರೆ ಕೂಡಾ ಕೆಲವೇ ತಿಂಗಳುಗಳಲ್ಲಿ ಹತಾಶರಾದರು ಯಾಕೆ? ಅಣ್ಣಾ ಅವರ ಯೋಚನೆ, ಚಿಂತನೆ, ಸೈದ್ಧಾಂತಿಕ ನಿಲುವು ಛಿದ್ರವಾಗುವುದಕ್ಕೆ ಕಾರಣಗಳು ಹಲವು. ಬಾಬಾ ರಾಮ್‌ದೇವ್ ಅಣ್ಣಾ ಅವರ ಜೊತೆ ಕೈಜೋಡಿಸಲು ಮುಂದಾದಾಗ ಏನಾಯಿತು? ಪರಸ್ಪರ ಅಪನಂಬಿಕೆ, ಗುಮಾನಿಯಿಂದ ನೋಡುವ ಸನ್ನಿವೇಶ ನಿರ್ಮಾಣವಾಯಿತು.

ಭ್ರಷ್ಟಾಚಾರವನ್ನು ತೊಡೆದು ಹಾಕುವುದು, ಕ್ರಿಮಿನಲ್‌ಗಳನ್ನು ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಪ್ರತ್ಯೇಕಿಸುವುದು rasheed-masood-first-lawmaker-to-be-disqualified-from-parliamentಸುಲಭದ ಕೆಲಸವಲ್ಲ ಎನ್ನುವುದು ನನ್ನ ಅನಿಸಿಕೆ. ಇದಕ್ಕೆ ನನಗಿರುವ ಮಿತಿಯೂ ಕಾರಣವಿರಬಹುದು ಅಥವಾ ಬೌದ್ಧಿಕವಾಗಿ ಆಸ್ಥಾನ ಪಂಡಿತರಿಗೆ ಇರುವ ಚಾಣಾಕ್ಷತೆಯ ಕೊರತೆಯೂ ಇರಬಹುದು. ಆದರೆ ಅನಿಸಿಕೆ ಹೇಳಿಕೊಳ್ಳಲು ಸರ್ವ ಸ್ವತಂತ್ರ ಎನ್ನುವುದನ್ನು ಬೇರೆಯವರು ಹೇಳಬೇಕಾಗಿಲ್ಲ.

ಈ ಮಾತು ರಾಹುಲ್ ಗಾಂಧಿ ಅವರ ನಡೆಯ ಬಗ್ಗೆ ನಾನು ಹೇಳುವ ಮಾತಿಗೂ ಅನ್ವಯಿಸುತ್ತದೆ. ರಾಹುಲ್ ಗಾಂಧಿ ಈ ದೇಶದ ಮಹಾನ್ ನಾಯಕರ ವ್ಯಕ್ತಿತ್ವಕ್ಕೆ ಸರಿಸಮಾನ ಎನ್ನುವಷ್ಟು ಮೂರ್ಖತನವನ್ನು ಯಾರೂ ಪ್ರದರ್ಶಿಸಬಾರದು. ಆದರೆ ರಾಜಕೀಯವಾಗಿ ಅವರ ಇಂಥ ನಡೆಗಳನ್ನು ಒಪ್ಪಿಕೊಳ್ಳಲೇಬೇಕು ಎನ್ನುವುದಾಗಲೀ, ಅದನ್ನು ಚರ್ಚೆಗೆ ಒಳಪಡಿಸಬಾರದು ಎನ್ನುವುದಾಗಲೀ ಸರಿಯಲ್ಲ. ಅಧ್ಯಾದೇಶವನ್ನು ತಿರಸ್ಕರಿಸಲಾಗದೇ, ಒಪ್ಪಿಕೊಳ್ಳುವುದಕ್ಕೂ ಆಗದೆ ಸಂಕಟಪಟ್ಟುಕೊಳ್ಳುತ್ತಿದ್ದ ರಾಜಕೀಯ ನಾಯಕರನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?

ಅಧ್ಯಾದೇಶ ಸರ್ಕಾರದ ನಿಲುವು, ರಾಹುಲ್ ಗಾಂಧಿ ಅವರ ಅನಿಸಿಕೆ ಪಕ್ಷದ್ದು ಎನ್ನುವ ಮೂಲಕ ಎರಡನ್ನೂ ಪ್ರತೇಕಿಸುವ ಈಗಿನ ಪ್ರಯತ್ನವನ್ನು ಬುದ್ಧಿವಂತರು ಚರ್ಚಿಸಬೇಕಾಗಿದೆ.

ರಾಹುಲ್ ಹೊರತಾಗಿ ಬೇರೆ ಯಾರೇ ಆದರೂ ಅಧ್ಯಾದೇಶದ ವಿರುದ್ಧ ಧ್ವನಿಎತ್ತಿದ್ದರೆ ಇಷ್ಟು ಹೊತ್ತಿಗೆ ಅವರ ಸ್ಥಿತಿ ಏನಾಗುತ್ತಿತ್ತು ಕಾಂಗ್ರೆಸ್ ಪಕ್ಷದಲ್ಲಿ? ಅಥವಾ ಯುಪಿಎ ಸರ್ಕಾರದಲ್ಲಿ? ಪಕ್ಷ ಮತ್ತು ಸರ್ಕಾರ ಎರಡರಲ್ಲೂ ರಾಹುಲ್ ಗಾಂಧಿಗೆ ಹಿಡಿತವಿದೆ ಎನ್ನುವುದು ಅಪರಾಧವಲ್ಲ. ಪ್ರತಿಪಕ್ಷಗಳು ಧ್ವನಿ ಎತ್ತಿದ್ದರೂ ಯುಪಿಎ ಸರ್ಕಾರ ತನ್ನ ನಿಲುವು ಸಡಿಲಿಸುತ್ತಿತ್ತು ಎನ್ನಲಾಗದು. ಅಂಥ ಧ್ವನಿ ದುರಾದೃಷ್ಟಕ್ಕೆ ಪ್ರತಿಪಕ್ಷಗಳಿಂದ ಕೇಳಿಬರಲಿಲ್ಲ. ಹಾಗಾದರೆ ಈ ಮೌನದ ಅರ್ಥವೇನು?

ಕಳಂಕಿತರನ್ನು ರಕ್ಷಿಸುವಂಥ ಅಧ್ಯಾದೇಶವನ್ನು ಕಸದ ಬುಟ್ಟಿಗೆ ಹಾಕಿಸುವುದಕ್ಕೆ ಯಾರ ಪಾತ್ರ ಎಷ್ಟು ಎನ್ನುವುದನ್ನು ಚರ್ಚಿಸಲು ಇದು ಸಕಾಲವಲ್ಲವೇ?

ಗಾಂಧಿ ಜಯಂತಿ ಕಥಾ ಸ್ಪರ್ಧೆ – ಫಲಿತಾಂಶ ವಿಳಂಬವಾಗುತ್ತಿದೆ. ಕ್ಷಮೆ ಇರಲಿ…

ಸ್ನೇಹಿತರೇ,
katha-sprade-2013
ಕೆಲವು ತಾಂತ್ರಿಕ ಕಾರಣಗಳಿಗಾಗಿ ಮತ್ತು ಸೂಕ್ತ ಸಮಯದಲ್ಲಿ ನಮ್ಮ ತೀರ್ಪುಗಾರರಿಗೆ ಮುದ್ರಿತ ಕತೆಗಳನ್ನು ತಲುಪಿಸಲಾಗದ ನನ್ನ ಅಶಕ್ತತೆಯ ಕಾರಣವಾಗಿ ಗಾಂಧಿ ಜಯಂತಿ ಕಥಾ ಸ್ಪರ್ಧೆ – 2013 ರ ಫಲಿತಾಂಶ ಎರಡು-ಮೂರು ದಿನಗಳು ತಡವಾಗಲಿದೆ. ಇದಕ್ಕಾಗಿ ಕ್ಷಮೆ ಯಾಚಿಸುತ್ತ ತೀವ್ರ ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ಆದಷ್ಟು ಈ ವಾರಾಂತ್ಯ ಮುಗಿಯುವುದರೊಳಗೆ ಫಲಿತಾಂಶ ಪ್ರಕಟಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಲೇಖಕರು ಮತ್ತು ಓದುಗರು ಸಹಕರಿಸಬೇಕೆಂದು ಕೋರುತ್ತೇನೆ.

ನಮಸ್ಕಾರ,
ರವಿ ಕೃಷ್ಣಾರೆಡ್ದಿ
ವರ್ತಮಾನ.ಕಾಮ್