ಅತ್ಯಾಚಾರ ಮತ್ತು ಅರ್ಧ ಕಿಲೋ ರಿವಾಲ್ವರ್..!


– ಡಾ.ಎಸ್.ಬಿ. ಜೋಗುರ


 

ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಅಪವರ್ತಿಗಳು ಇದ್ದೇ ಇದ್ದಾರೆ. ಇವರ ಮನೋವ್ಯಾಪಾರಗಳು ವಿಚಿತ್ರವಾಗಿರುವಂತೆಯೇ ಅಪಾಯಕಾರಿಯೂ ಹೌದು. ಯಾವುದೇ ಮನೋವಿಜ್ಞಾನಿಯ ಕ್ಯಾಲಕ್ಯುಲೇಶನ್ ಗೂ ಸಿಗದ ಇಂಥವರ ಮನ:ಸ್ಥಿತಿಯ ಅಧ್ಯಯನ ಮಾಡಹೊರಟರೆ ಸಿಗ್ಮಂಡ್ ಫ಼್ರಾಯಿಡ್ ಥರಾ ಕೊಕೇನ್ ದಾಸರಾಗಬೇಕಾಗುತ್ತದೆಯೇನೋ.. ಸಾರ್ವಜನಿಕ ಬದುಕಿನಲ್ಲಿ ಭಯ ಬಿತ್ತುವ, ಬೆಳೆಯುವ ಕಟಾವು ಮಾಡುವ, ಅದನ್ನೇ ಮಾರುವ ಈ ಮನೋವಿಕ್ಷಿಪ್ತರು ಕೇವಲ ಒಂದೇ ಒಂದು ಮೂರನೇ ದರ್ಜೆಯ ಬಾಟಲ್ ವಿಸ್ಕಿಗಾಗಿ ಮರ್ಡರ್ ಮಾಡುವಲ್ಲಿಯೂ ಹಿಂದೇಟು ಹಾಕಲಾರರು. ಈ ಅಪವರ್ತಿಗಳು ಕದಿಯುವ, ಕಸಿಯುವ, ಕೊಲ್ಲುವ, ಅತ್ಯಾಚಾರಗೈಯುವ ಮೂಲಕ ಸಮಾಜದ ನೈತಿಕ ಸ್ವಾಸ್ಥ್ಯವನ್ನು ಕುಲಗೆಡಿಸುವ, ಮತ್ತೆ ಮತ್ತೆ ಸಮಾಜ ಬಯಸದಿರುವ ಸ್ಥಿತಿಯನ್ನು ನಿರ್ಮಿಸುವ ರೇಜಿಗೆಗೆ ಕಾರಣರಾಗುವ ಇಂಥವರನ್ನು ತಿದ್ದಲು ಮಾಡುವ ಪ್ರಯತ್ನಗಳು, ಪ್ರಯೋಗಗಳು, ಚಿಕಿತ್ಸೆಗಳು ಕೆಟ್ಟ ಮೇಲಿನ ಬುದ್ದಿಯ ಮುಲಾಮಾಗುವುದೇ ಒಂದು ಬಹುದೊಡ್ದ ವಿಪರ್ಯಾಸ..! ಈ ಬಗೆಯ ವಿಕ್ಷಿಪ್ತರ ಮನ:ಸ್ಥಿತಿಯನ್ನು ಬೇರುಮಟ್ಟದಿಂದ ಕಿತ್ತು ಹಾಕುವುದು ಕಷ್ಟ. ಯಾಕೆಂದರೆ ಯಾವುದೇ ಒಂದು ಮರ ಬಲಿತಾದ ಮೇಲೆ ಅದರ ಟೊಂಗೆ, ಎಲೆಗಳನ್ನು ಕತ್ತರಿಸುವದರಿಂದ ಅದರ ಅಸ್ಥಿತ್ವವನ್ನು ಇಲ್ಲವಾಗಿಸಲಾಗುವದಿಲ್ಲ. ಬೇರು ಹಾಗೇ ಉಳಿದಿರುತ್ತದೆ. ಹೀಗೆಲ್ಲಾ ಹೇಳುವ ಮೂಲಕ ನಾನು ನಮ್ಮ ದೇಶದ ಮೂಲೆಮೂಲೆಗಳಲ್ಲಿ ನಡೆಯುತ್ತಿರುವ ಲೈಂಗಿಕ ಅತ್ಯಾಚಾರದ ಕುರಿತು ಕೆಲವು ಸಂಗತಿಗಳನ್ನು ಚರ್ಚಿಸಬಯಸುತ್ತೇನೆ. rape-illustrationನಿಮಗೆಲ್ಲಾ ಗೊತ್ತಿರುವ ಹಾಗೆ ಡಿಶೆಂಬರ್ 16, 2012 ನಿಮಗಿನ್ನೂ ನೆನಪಿರಬಹುದು. ನಿರ್ಭಯಾ ಎನ್ನುವ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಅತ್ಯಂತ ತುಚ್ಚವಾಗಿ ಚಲಿಸುವ ಬಸ್ಸಿನಲ್ಲಿ ಅತ್ಯಾಚಾರ ಎಸಗಲಾಯಿತು. ಅದರಲ್ಲಿ ಒಬ್ಬಾತ 18 ವರ್ಷ ವಯೊಮಿತಿಯ ಒಳಗಿನ ಬಾಲಾರೋಪಿಯೂ ಇದ್ದ. ಆ ಘಟನೆಯಿಂದ ಆಕೆ ಸಾವನ್ನಪ್ಪಿದ್ದು ಆಕೆಯ ಹೆಸರಲ್ಲಿ ಕೋಟಿಗಟ್ಟಲೆ ಹಣವನ್ನು ಮೀಸಲಿಟ್ಟಿದ್ದು, ಅದರಲ್ಲಿ ಒಂದೇ ರೂಪಾಯಿಯನ್ನು ಬಳಸದೇ ಇದ್ದದ್ದು ಈಗ ಹಳೆಯ ಮಾತಾಯಿತು. ಹೊಸ ಮಾತು ಏನೆಂದರೆ ಡಿಶೆಂಬರ್ 16, 2013 ಕ್ಕೆ ಬರೊಬ್ಬರಿ ಒಂದು ವರ್ಷ. ಈ ದೇಶದಲ್ಲಿ ನಿರ್ಭಯಾಳಿಂದ ಆರಂಭವಾದ ಅತ್ಯಾಚಾರದ ಪ್ರಕರಣಗಳು ತಮ್ಮ ನಿರಂತರತೆಯನ್ನಂತೂ ಕಾಪಾಡಿಕೊಂಡಿವೆ. ಈಗ ಪ್ರತಿ ಅರ್ಧಘಂಟೆಗೊಂದು ಅತ್ಯಾಚಾರದ ಪ್ರಕರಣಗಳು ನಮ್ಮಲ್ಲಿ ಜರುಗುವದಿದೆ. ಕಳೆದ ಡಿಶೆಂಬರ್ 16, 2013 ರಂದು ದೆಹಲಿಯಲ್ಲಿ ಮಹಿಳೆಯ ಮೇಲಿನ ದೌರ್ಜನ್ಯದ ವಿಷಯವಾಗಿ ಒಟ್ಟು 38 ದೂರುಗಳು ದಾಖಲಾಗಿದ್ದು ಅದರಲ್ಲಿ ಮೂರು ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳು. ಕಳೆದ ವರ್ಷದ ಅತ್ಯಾಚಾರದ ಪ್ರಕರಣಗಳಲ್ಲಿ ತೀರಾ ತುಚ್ಚವಾದ, ಹೇಯವಾದ ಪ್ರಕರಣಗಳೇ ಜಾಸ್ತಿ. ಅಂಥವುಗಳಲ್ಲಿ ಕೋಲ್ಕತ್ತಾದ ಒಂದು ಶಾಲೆಯ ಮುಖ್ಯೋಪಾಧ್ಯಾಯಿನಿಯ ಗಂಡ ಚಿಕ್ಕ ಬಾಲಕಿಯನ್ನು ತನ್ನ ಕಾಮಪಿಪಾಸುತನಕ್ಕೆ ಬಳಸಿಕೊಂಡದ್ದು ಈಗಲೂ ಮನ ಕಂಪಿಸುವಂತೆ ಮಾಡುತ್ತದೆ. ಇನ್ನು ಅಗಮ್ಯಗಮನ ಸಂಬಂಧಗಳಲ್ಲಿಯೂ ಜರುಗಿದ ಅತ್ಯಾಚಾರಗಳಿಗೂ ಕೊರತೆಯಿಲ್ಲ. ಮೂರು ವರ್ಷದ ಮಗುವಿನಿಂದ ಹಿಡಿದು ವಯಸ್ಸಾದ ವಿಧವೆಯವರೆಗೂ ಅಸಹ್ಯ ಹುಟ್ಟಿಸಬಹುದಾದ ರೀತಿಯ ಅತ್ಯಾಚಾರದ ಪ್ರಕರಣಗಳು ಬಯಲಾದವು.

ನಮ್ಮ ಸಾಮಾಜಿಕ ವ್ಯವಸ್ಥೆ ಎಷ್ಟು ದೋಷಪೂರ್ಣವಾಗಿದೆಯೆಂದರೆ ಯಾರೋ ಮಾಡಿದ ತಪ್ಪಿಗೆ ಇನ್ನಾರೋ ಶಿಕ್ಷೆ ಅನುಭವಿಸುವ ಪ್ರಕರಣಗಳೂ ನಮ್ಮಲ್ಲಿ ರಾಶಿ ರಾಶಿ. ಬಿಜಾಪುರ ಜಿಲ್ಲೆಯ ತಾಲೂಕು ಒಂದರಲ್ಲಿ ಆಕೆಯ ಮಗ ಮಾಡಿದ ತಪ್ಪಿಗೆ ಅವನ ತಾಯಿಯನ್ನು ಬೆತ್ತಲೆ ಮಾಡಿದ ಪ್ರಸಂಗ ಮನುಷ್ಯರಾದವರು ನಾಚುವಂತಿತ್ತು. ಇನ್ನು ಮಹಿಳೆಯ ಮೇಲಿನ ಅತ್ಯಾಚಾರದ ಪ್ರಕರಣಗಳು ಇಡೀ ವಿಶ್ವದಾದ್ಯಂತ ಜರುಗುತ್ತವಾದರೂ ನಮ್ಮಲ್ಲಿ ಈ ಬಗೆಯ ಅತ್ಯಾಚಾರದ ಪ್ರಕರಣಗಳು ಪರೋಕ್ಷವಾಗಿ ಹೆಣ್ಣು ಮಗುವಿನ ಜನನದಲ್ಲಿ ವರದಕ್ಷಿಣೆಯನ್ನು ಮೀರಿ ಒಂದು ಹೊಸ ಬಗೆಯ ದಿಗಿಲನ್ನು ಸೃಷ್ಟಿಸಿದಂತಾಯಿತು. ಹೇಗೆ ಮಾಡುವುದು..? ಏನು ಮಾಡುವುದು..? Sowjanya-Rape-Murderಎನ್ನುವುದು ಹೆಣ್ಣು ಹೆತ್ತವರ ಅಳಲಾದರೆ ಇದನ್ನು ಹೇಗೆ ತಡೆಯಬೇಕು ಎನ್ನುವ ವಿಚಾರವಾಗಿ ಸಾಕಷ್ಟು ಸಲಹೆಗಳೂ ಬಂದವು. ಝಾಡಿಸಿ ಸೊಂಟದ ಕೆಳಗೆ ಒದೆಯುವದರಿಂದ ಹಿಡಿದು, ಖಾರದ ಪುಡಿ ಎರಚುವ, ಇಲೆಕ್ಟ್ರಿಕ್ ಶಾಕ್ ನೀಡುವ ಜಾಕೆಟ್ ಧರಿಸುವವರೆಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆಯಾದವು. ಇವೆಲ್ಲವನ್ನೂ ಮೀರಿ ಪುರುಷರ ಮನ:ಪರಿವರ್ತನೆಯೇ ಅತ್ಯುತ್ತಮ ಮಾರ್ಗ ಎನ್ನುವ ಮಾತುಗಳೂ ಕೇಳಿಬಂದವು. ಈ ಬಗೆಯ ಸಲಹೆಗಳಿಗೆ ಬೆನ್ನು ಮಾಡಿ ಆಕೆ ಆ ಬಗೆಯ ಟೀ ಶರ್ಟ್ ಯಾಕೆ ಧರಿಸಬೇಕಿತ್ತು..? ಅವಳು ಅವನ ಕಾಲಿಗೆ ಬಿದ್ದು ಅಣ್ಣಾ ಎಂದು ಗೋಗರೆಯಬೇಕಿತ್ತು ಎನ್ನುವ ತೀರಾ ಚಿಲ್ಲರೆ ವಿಚಾರಗಳೂ ಕೇಳಿ ಬಂದವು.

ಈಗ ಇವೆಲ್ಲವುಗಳನ್ನು ಮೀರಿ ಅತ್ಯಾಚಾರಿಗಳನ್ನು ಎದುರಿಸಲು ಮಹಿಳೆಯ ಕೈಗೆ ನೀಡಲು ಇಂಡಿಯನ್ ಆರ್ಡಿನನ್ಸ್ ಫ಼್ಯಾಕ್ಟರಿ ಅರ್ಧ ಕಿಲೋ ತೂಕದ ಗನ್ ಒಂದನ್ನು ರೆಡಿ ಮಾಡಿದೆ. ಅದಕ್ಕೆ ನಿರ್ಭೀಕ ಎಂದು ನಾಮಕರಣವೂ ಮಾಡಿ ಆಗಿದೆ. 7.55 ಎಮ್.ಎಮ್ 32 ರಿವಾಲ್ವರ್ ನ್ನು ಮಹಿಳೆಯರು ಸುಲಭವಾಗಿ ಹ್ಯಾಂಡಲ್ ಮಾಡುವಂತೆ ರೂಪಿಸಲಾಗಿದೆ. ಈ ರಿವಾಲ್ವರ್ ಸಾಮಾನ್ಯ ಮಹಿಳೆಯರಿಗಂತೂ ಅಲ್ಲ. ಅವರಿಗೆ ಸೆಂಟರ್ ಪಾಯಿಂಟ್ ಮೇಲೆ ಝಾಡಿಸಿ ಒದೆಯುವುದೇ ಸರಿಯಾದ ಸೂತ್ರ ಎಂದು ನನಗನಿಸುತ್ತದೆ. ಯಾಕೆಂದರೆ ಈ ಗನ್ ಬೆಲೆ 1 ಲಕ್ಷ 22 ಸಾವಿರ ರೂಪಾಯಿ. ಅಡುಗೆ ಮನೆಯಲ್ಲಿ ಒಂದು ಸಣ್ಣ ಅಡುಗೆ ಯಂತ್ರ ತರಲು ಐದಾರು ವರ್ಷ ಕನಸು ಕಾಣುವ, ಕಾಯುವ ನಮ್ಮ ಮಧ್ಯಮ ವರ್ಗದ ಮಹಿಳೆ ಆ ಮೊತ್ತದ ಗನ್ ಅನ್ನು ತನ್ನ ರಕ್ಶಣೆಗಾಗಿ ಖರೀದಿಸುತ್ತಾಳೆ ಎನ್ನುವ ಯೋಚನೆಯೇ ಸರಿಯಿಲ್ಲ. ಸುಲಭವಾದ ಕಂತುಗಳಲ್ಲಿ ಕೊಟ್ಟರೂ ಅದು ಸಾಧ್ಯವಿಲ್ಲ. ಅದೇನಿದ್ದರೂ ಅಪಾರ ಪ್ರಮಾಣದ ಕಮಾಯಿಯಿರುವ ಮಹಿಳಾಮಣಿಗಳು ಮಾತ್ರ ಖರೀದಿಸಲು ಸಾಧ್ಯ. ಇನ್ನು ಬರೀ ಗನ್ ಖರೀದಿಸಿದರೆ ಸಾಕೆ..? ಅದನ್ನು ಚಲಾಯಿಸುವುದು ಹೇಗೆ.. ಎನ್ನುವ ತಾಲೀಮು ಬೇಡವೇ..? india-rapeಅತ್ಯಾಚಾರಿಯೊಬ್ಬ ಮೈಮೇಲೆ ಪಶುವಿನಂತೆ ಎರಗಿದಾಗ ಆ ಗನ್ ತೆಗೆದು ಅವನ ಮೇಲೆ ಚಲಾಯಿಸುವಷ್ಟು ಚಾಕಚಕ್ಯತೆ ಸಾಧ್ಯವೇ..? ಎನ್ನುವ ಪ್ರಶ್ನೆಯೂ ಹುಟ್ಟುತ್ತದೆ. ಇವೆಲ್ಲವುಗಳನ್ನು ಮೀರಿಯೂ ಆಕೆ ತೊಂದರೆಗೆ ಸಿಲುಕುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ನಾವೀಗ ಬದುಕುತ್ತಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರ ಎಷ್ಟು ಕೊಳಕಾಗಿದೆ ಎಂದರೆ ಯಾವ ಗಳಿಗೆಯಲ್ಲೂ ಏನು ಬೇಕಾದರೂ ಕೆಟ್ಟದ್ದು ಘಟಿಸಬಹುದು. ಹೀಗಿರುವಾಗ ಗಂಡಿರಲಿ ಹೆಣ್ಣಿರಲಿ ನಮ್ಮ ಬಳಿ ಗನ್ ಇರುವುದು ಒಂದು ಸಮಾಧಾನವೇ ಹೊರತು ಪರಿಹಾರವಲ್ಲ. ಇಂದು ಬೇರೆ ಬೇರೆ ರಾಷ್ಟ್ರಗಳಲ್ಲಿ ಮಹಿಳೆ ಹೇಗೆ ತನ್ನನ್ನು ತಾನು ಸಂರಕ್ಷಣೆ ಮಾಡಿಕೊಳ್ಳಬೇಕು ಎನ್ನುವ ಸಂವಾದ, ಚರ್ಚೆಗಳನ್ನು ನಡೆಸಲಾಗುತ್ತದೆ. ನಮ್ಮಲ್ಲಿ ಆ ಬಗೆಯ ವಿಚಾರ ಸಂಕಿರಣಗಳು ಜರುಗಿದ ಬಗ್ಗೆ ನಾನಂತೂ ಕೇಳಿಲ್ಲ. ಡೆರೆನ್ ಲಾರ್ ಮತ್ತು ಬೆತ್ ಲಾರ್ ಎನ್ನುವ ದಂಪತಿಗಳು ’ಟೊಟಲ್ ಅವೇರನೆಸ್’ ಎನ್ನುವ ಕೃತಿಯೊಂದನ್ನು ರಚಿಸಿದ್ದಾರೆ. ಅದರಲ್ಲಿ ಅವರು ಮಹಿಳೆ ತನ್ನ ರಕ್ಷಣೆಗಾಗಿ ಅನುಸರಿಸಬೇಕಾದ ಹತ್ತು ಸೂತ್ರಗಳನ್ನು ಗುರುತಿಸಿದ್ದಾರೆ:

  • ನಮ್ಮ ಸುತ್ತಮುತ್ತಲಿನ ಸಾಮಾಜಿಕ ಪರಿಸರದ ಬಗ್ಗೆ ನಮಗೆ ತಿಳುವಳಿಕೆಯಿರಬೇಕು
  • ನಿಮ್ಮ ಆರನೇ ಇಂದ್ರಿಯವನ್ನು ಸರಿಯಾಗಿ ಬಳಸಿಕೊಳ್ಳಿ
  • ಸ್ವರಕ್ಷಣಾ ತಂತ್ರಗಳ ಬಗ್ಗೆ ತರಬೇತಿ
  • ಪಾರಾಗಿ ಓಡುವ ಚುರುಕತನವಿರಲಿ
  • ಮರುದಾಳಿ ಅನಿವಾರ್ಯ
  • ಖಾರದ ಪುಡಿ ಎರಚುವಾಗ ಕಣ್ಣನ್ನೇ ಗುರಿಯಾಗಿಡಿ
  • ನಿಮ್ಮ ಬಳಿ ಇರುವ ಎಲ್ಲ ಆಯುಧಗಳಿಗಿಂತಲೂ ನಿಮ್ಮ ಜಾಣ್ಮೆಯೇ ಮುಖ್ಯ
  • ಅಪರಿಚಿತರಿಗೆ ಮನೆ ಬಾಗಿಲನ್ನು ತೆರೆಯಬೇಡಿ ಪೋಲಿಸರ ವೇಷ ಧರಿಸಿಯೂ ಅಪರಾಧ ಎಸಗಿರುವದಿದೆ
  • ಕಾರನ್ನು ನಿಲ್ಲಿಸಿದಾಗ ಕಿಡಕಿಯ ಗಾಜುಗಳನ್ನು ಕೆಳಗಿಳಿಸಬೇಡಿ
  • ಲಾಜಿಂಗ್ ಲ್ಲಿರುವಾಗ ಒಬ್ಬರೇ ಇರುವಾಗ ಬಾಗಿಲನ್ನು ತೆಗೆಯಬೇಡಿ
  • ಇಂಟರ್ ನೆಟ್ ಬಳಕೆಯಲ್ಲಿ ಹುಷಾರಾಗಿರಿ. ಎಲ್ಲರಿಗೂ ನಿಮ್ಮ ನಿಜವಾದ ಹೆಸರು, ಆಯ್.ಡಿ. ಗೊತ್ತಾಗಲು ಬಿಡಬೇಡಿ

ಈ ಸಲಹೆಗಳು ಅಡುಗೆ ಪುಸ್ತಕ ಓದಿ ಅಡುಗೆ ಮಾಡುವಷ್ಟೇ ಸಾಮಾನ್ಯ ಸೂತ್ರಗಳು. ಇವುಗಳಿಂದ ಮಹಿಳೆ ಲೈಂಗಿಕ ಅತ್ಯಾಚಾರದ ವಿಷಯವಾಗಿ ಸಂಪೂರ್ಣ ಸುರಕ್ಷಿತ ಎಂದರ್ಥವಲ್ಲ. ಆದಾಗ್ಯೂ ಇವುಗಳ ಬಗ್ಗೆ ತಿಳಿದಿರುವುದು ಕ್ಷೇಮ. ಮೊನ್ನೆ ತಾನೆ ಒಬ್ಬ ದುರುಳ ಓರ್ವ ಯುವತಿಯನ್ನು ಪ್ರೀತಿಸುವದಾಗಿ ನಂಬಿಸಿ ಆಕೆಯ ಬೆತ್ತಲೆ ದೃಶ್ಯಗಳ ಫ಼ೋಟೊ ತೆಗೆದು ಫ಼ೇಸಬುಕ್‌ಗೆ ಅಪಲೋಡ್ ಮಾಡಿದ್ದು ನೀಚತನದ ವಿಶ್ವಾಸ ದ್ರೋಹ. ಯಾವ ಹುಡುಗಿಯರೂ ಇಂಥಾ ಕ್ಷುದ್ರ ಮನ:ಸ್ಥಿತಿಯವರ ಪಾಲಾಗಬಾರದು. ನೀವು ಎಷ್ಟೇ ಹುಷಾರಾಗಿದ್ದೀರಿ ಎಂದರೂ ಈ ಕೊಳಕರು ಮೋಸ ಮಾಡುವುದರಲ್ಲಿ ನಿಮಗಿಂತಲೂ ತುಸು ಜಾಸ್ತಿ ಚಾಲಾಕಿಗಳು.

2 thoughts on “ಅತ್ಯಾಚಾರ ಮತ್ತು ಅರ್ಧ ಕಿಲೋ ರಿವಾಲ್ವರ್..!

  1. Naveen

    If you are boarding an auto, cab, car, taxi, any vehicle, first note down the number in such a way that driver notices it. and call someone and inform him that you are coming in so n so reg no auto.Now not only avoiding harming you, the driver will have the burden of reaching you safely

    Reply

Leave a Reply

Your email address will not be published. Required fields are marked *