ಆಮ್ ಆದ್ಮಿ ಪಕ್ಷ ಜನತೆಯ ಆಶೋತ್ತರ ಕಡೆಗಣಿಸದಿರಲಿ

– ಆನಂದ ಪ್ರಸಾದ್

ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಅಧಿಕಾರಕ್ಕೇರಿದ ನಂತರ ಅದರ ಕಾರ್ಯವೈಖರಿಯನ್ನು ಇಡೀ ದೇಶ ಕುತೂಹಲದಿಂದ ಗಮನಿಸುತ್ತಿದೆ. ಹೀಗಾಗಿ ಆಮ್ ಆದ್ಮಿ ಪಕ್ಷದ ದಿನ ದಿನದ ಚಟುವಟಿಕೆಗಳೂ ಸುದ್ದಿ ವಾಹಿನಿಗಳಲ್ಲಿ ಅದರಲ್ಲೂ ಮುಖ್ಯವಾಗಿ ಹಿಂದಿ ಸುದ್ದಿ ವಾಹಿನಿಗಳಲ್ಲಿ ವಿಮರ್ಶೆಗೆ, ಚರ್ಚೆಗೆ ಒಳಗಾಗುತ್ತಿವೆ. ಆಮ್ ಆದ್ಮಿ ಪಕ್ಷದ ಪ್ರತಿಯೊಂದು ನಡೆಯನ್ನೂ ಭೂತಗನ್ನಡಿ ಹಿಡಿದು ಟಿವಿ ಮಾಧ್ಯಮಗಳು ಪ್ರತಿ ದಿನದ ಆಧಾರದಲ್ಲಿ ವಿಮರ್ಶೆಗೆ ಒಳಪಡಿಸುತ್ತಿರುವುದರಿಂದ ಈ ಪಕ್ಷವು ದೇಶದಲ್ಲಿ ಅಪಾರ ಭರವಸೆಯನ್ನು ಹುಟ್ಟು ಹಾಕಿದೆ ಎಂಬುದು ಕಂಡುಬರುತ್ತದೆ. ಈ ಹಿಂದಿನ ಯಾವ ಸರ್ಕಾರದ ನಡೆಯನ್ನೂ ಈ ರೀತಿ ಭೂತಗನ್ನಡಿ ಹಿಡಿದು ದೈನಂದಿನ ಆಧಾರದಲ್ಲಿ ವಿಮರ್ಶಿಸುವ ಕೆಲಸ ನಡೆದಿರಲಿಲ್ಲ. ಭಾರೀ ಸಾಧನೆಗೈದ ಸರ್ಕಾರ ಎಂದು ಹೇಳಲ್ಪಡುವ ಮೋದಿಯ ಗುಜರಾತ್ ಸರ್ಕಾರದ ನಡೆಯನ್ನು ಕೂಡ ಮಾಧ್ಯಮಗಳು ದೈನಂದಿನ ಆಧಾರದಲ್ಲಿ ವಿಮರ್ಶಿಸುವ ಕೆಲಸ ಮಾಡಿರಲಿಲ್ಲ. ಇದರ ಅರ್ಥವಿಷ್ಟೇ. ದೇಶದಲ್ಲಿ ಬದಲಾವಣೆಯ ತುಡಿತ ಇದೆ. kejriwal_aap_pti_rallyದೇಶವು ಪರ್ಯಾಯಕ್ಕಾಗಿ, ಜವಾಬ್ದಾರಿಯುತ ಹಾಗೂ ದಕ್ಷ ಆಡಳಿತ ನೀಡಬಲ್ಲ ಜನರಿಗಾಗಿ ಕಾಯುತ್ತಿದೆ. ಹೀಗಾಗಿ ಈ ಪಕ್ಷವು ಬಹಳ ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡಬೇಕಾಗಿರುವುದು ಅಗತ್ಯವಾಗಿದೆ. ದೆಹಲಿಯಲ್ಲಿ ಮುಖ್ಯ ವಿರೋಧ ಪಕ್ಷವಾದ ಬಿಜೆಪಿ ಆಮ್ ಆದ್ಮಿ ಪಕ್ಷದ ಸರಕಾರದ ಕಾರ್ಯವೈಖರಿಯನ್ನು ವಿಮರ್ಶೆ ಮಾಡಲು ಹಾಗೂ ಟೀಕಿಸಲು ತುದಿಗಾಲಿನಲ್ಲಿ ನಿಂತಿದ್ದು ಅತ್ಯಾತುರ ತೋರಿಸುತ್ತಿದೆ. ಯಾವುದೇ ಸರ್ಕಾರವಾದರೂ ಅದರ ಕಾರ್ಯವೈಖರಿಯನ್ನು ಅಳೆಯಲು, ಅಂದಾಜು ಮಾಡಲು ಕನಿಷ್ಠ ಆರು ತಿಂಗಳನ್ನಾದರೂ ನೀಡಬೇಕು. ಬೀಜವು ಬಿತ್ತಿದ ಕೂಡಲೇ ಗಿಡವಾಗಿ ಫಲ ನೀಡುವುದಿಲ್ಲ. ಬೀಜವು ಹುಟ್ಟಿದ ಕೂಡಲೇ ಫಲ ನೀಡಬೇಕೆಂದು ಆಗ್ರಹಿಸುವುದು ಸೂಕ್ತವಲ್ಲ. ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಅಧಿಕಾರಕ್ಕೆ ಬಂದು ಕೆಲವೇ ದಿನಗಳಷ್ಟೇ ಆಗಿವೆ. ಆಡಳಿತ ಯಂತ್ರವನ್ನು ಹಿಡಿತಕ್ಕೆ ತರಲು ಆರಂಭದಲ್ಲಿ ಕೆಲವು ದಿನಗಳು ಹಿಡಿಯುತ್ತವೆ ಏಕೆಂದರೆ ಹದಿನೈದು ವರ್ಷಗಳಿಂದ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರವಿದ್ದ ಕಾರಣ ಎಲ್ಲ ಆಯಕಟ್ಟಿನ ಸ್ಥಾನಗಳಲ್ಲಿ ಆ ಪಕ್ಷಕ್ಕೆ ನಿಷ್ಠರಾದ ಅಧಿಕಾರಿ ವರ್ಗ ಗಟ್ಟಿಯಾಗಿ ಬೇರೂರಿರುತ್ತದೆ. ಆಮ್ ಆದ್ಮಿ ಪಕ್ಷವು ಎಷ್ಟೇ ಪ್ರಾಮಾಣಿಕವಾಗಿ ನಡೆದುಕೊಂಡರೂ ದೈನಂದಿನ ಆಡಳಿತ ಕಾರ್ಯವು ಕಾರ್ಯಾಂಗದ ಮೂಲಕ ಅಂದರೆ ಅಧಿಕಾರಿವರ್ಗದ ಮೂಲಕವೇ ನಡೆಯಬೇಕು. ಈ ಅಧಿಕಾರಿವರ್ಗದ ಮನಸ್ಥಿತಿಯನ್ನು ರಾತ್ರಿ ಬೆಳಗಾಗುವುದರಲ್ಲಿ ಬದಲಾಯಿಸಲು ಸಾಧ್ಯವಿಲ್ಲ. ಇದಕ್ಕೆ ಸಾಕಷ್ಟು ಸಮಯವೇ ಹಿಡಿಯಬಹುದು. ಸರ್ಕಾರೀ ನೌಕರ ವರ್ಗಕ್ಕೆ ಭಾರತದಲ್ಲಿ ಅತಿಯಾದ ನೌಕರಿಯ ಭದ್ರತೆ ಇರುವ ಕಾರಣ ಅವರನ್ನು ಬೇಕಾದಂತೆ ಪಳಗಿಸುವುದು ಅಷ್ಟು ಸುಲಭವಲ್ಲ. ಕೆಲಸ ಮಾಡದ ಸೋಮಾರಿ ಹಾಗೂ ಭ್ರಷ್ಟ ಸರ್ಕಾರೀ ನೌಕರರನ್ನು ಖಾಸಗಿ ಸಂಸ್ಥೆಗಳು ತೆಗೆದು ಬಿಸಾಡಿದಂತೆ ಬಿಸಾಡಲು ಯಾವುದೇ ಸರ್ಕಾರಕ್ಕೂ ಆಗುವುದಿಲ್ಲ. ಹೀಗಾಗಿ ಸರ್ಕಾರೀ ನೌಕರರ ಸೋಮಾರಿತನ, ಭ್ರಷ್ಟತೆಯನ್ನು ರಾತ್ರಿ ಹಗಲಾಗುವುದರೊಳಗೆ ಬದಲಾಯಿಸಲು ಸಾಧ್ಯವಿಲ್ಲ. ಇರುವ ಸರ್ಕಾರಿ ಅಧಿಕಾರಿಗಳಲ್ಲಿಯೇ ದಕ್ಷ ಹಾಗೂ ಪ್ರಾಮಾಣಿಕರನ್ನು ಹುಡುಕಿ ಪ್ರಮುಖ ಹುದ್ದೆಗಳಿಗೆ ನೇಮಿಸಿ ಆಡಳಿತ ಯಂತ್ರವನ್ನು ಚುರುಕುಗೊಳಿಸಬೇಕಾಗುತ್ತದೆ. ಹೊಸ ಸರ್ಕಾರ ಬಯಸಿದರೂ ಹಿಂದಿದ್ದ ಭ್ರಷ್ಟ ಸರ್ಕಾರಕ್ಕೆ ಬದ್ಧರಾಗಿದ್ದ ಅಧಿಕಾರಿಗಳು ಹೊಸ ಸರ್ಕಾರದ ಜೊತೆ ಸಹಕರಿಸುವುದಿಲ್ಲ. ಹೀಗಾಗಿ ಹೊಸ ಸರ್ಕಾರಕ್ಕೆ ಸಮಯ ಕೊಡಬೇಕಾಗಿರುವುದು ಅಗತ್ಯ.

ಬಿಜೆಪಿ ಪಕ್ಷದ ನಾಯಕರು ಹಿಂದಿನ ಸರ್ಕಾರದ ಭ್ರಷ್ಟತೆಯ ಬಗ್ಗೆ ತನಿಖೆ ಮಾಡಲು ಆಮ್ ಆದ್ಮಿ ಪಕ್ಷದ ನಾಯಕರು ಮುಂದಾಗುತ್ತಿಲ್ಲ ಎಂದು ದೂರುತ್ತಿದ್ದಾರೆ. aap-kejriwal-yogendra-yadavಬಹುಶ: ಇದಕ್ಕೆ ಸ್ವಲ್ಪ ಸಮಯ ಹಿಡಿಯಬಹುದು. ಇದನ್ನು ನಡೆಸಲು ದೆಹಲಿಯಲ್ಲಿ ಸೂಕ್ತ ತನಿಖಾ ಸಂಸ್ಥೆಯನ್ನು ಅಥವಾ ವ್ಯವಸ್ಥೆಯನ್ನು ರೂಪಿಸಬೇಕಾಗುತ್ತದೆ. ಹಾಗೆ ಮಾಡದೆ ಹಿಂದಿನ ಸರ್ಕಾರದ ಭ್ರಷ್ಟತೆಯ ಬಗ್ಗೆ ಹಿಂದಿನ ಸರ್ಕಾರದ ಭ್ರಷ್ಟ ಅಧಿಕಾರಿಗಳ ಮೂಲಕವೇ ತನಿಖೆ ನಡೆಸಿದರೆ ಹಿಂದಿನ ಸರ್ಕಾರದ ಎಲ್ಲ ಭ್ರಷ್ಟಾಚಾರಗಳನ್ನೂ ಮುಚ್ಚಿ ಹಾಕುವ ಸಾಧ್ಯತೆ ಇದೆ. ದೆಹಲಿಗೆ ಹೊಸ ಜನಲೋಕಪಾಲ್ ಅಥವಾ ಲೋಕಾಯುಕ್ತ ವ್ಯವಸ್ಥೆಯನ್ನು ಆಮ್ ಆದ್ಮಿ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಹದಿನೈದು ದಿನಗಳಲ್ಲಿ ತರುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಇಂಥವುಗಳನ್ನು ರೂಪಿಸಲು ಕಾನೂನಿನ ಪ್ರಕ್ರಿಯೆ ಸಾಂವಿಧಾನಿಕವಾಗಿ ನಡೆಯಬೇಕಾಗಿರುವ ಕಾರಣ ಇದು ಸಾಕಷ್ಟು ಸಮಯ ತೆಗೆದುಕೊಳ್ಳಬಹುದು. ಹೀಗಾಗಿ ಹೊಸ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರಮಣಕಾರಿಯಾಗಿ ಅದರ ಮೇಲೆ ಮುಗಿಬೀಳುವ ಧೋರಣೆ ಸಮಂಜಸವಲ್ಲ. ಹೊಸ ಸರ್ಕಾರದ ಇದುವರೆಗಿನ ಕೆಲಸ ನೋಡಿದರೆ ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಕಂಡುಬರುತ್ತಾ ಇದೆ. ಹೀಗಿದ್ದರೂ ಅದೇ ಪಕ್ಷದ ವಿನೋದ್ ಕುಮಾರ್ ಬಿನ್ನಿ ಎಂಬ ಮಾಜಿ ಕಾಂಗ್ರೆಸ್ಸಿಗ ಪಕ್ಷದ ವಿರುದ್ಧ ಭುಗಿಲೆದ್ದಿರುವುದು ಅಧಿಕಾರದಾಹದಿಂದ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇಂಥ ಬೇರೆ ಪಕ್ಷಗಳ ಅಧಿಕಾರದಾಹಿಗಳನ್ನು ಆಮ್ ಆದ್ಮಿ ಪಕ್ಷವು ತೆಗೆದುಕೊಂಡು ತಪ್ಪು ಮಾಡಿದೆ. ಈಗ ಅಧಿಕಾರ ಸಿಕ್ಕದೆ ಇದ್ದಾಗ ಅಂಥವರು ಭುಗಿಲೇಳುತ್ತಿದ್ದಾರೆ. ಇನ್ನು ಮುಂದಾದರೂ ಬೇರೆ ಪಕ್ಷಗಳ ಅಧಿಕಾರದಾಹಿಗಳನ್ನು ಆಮ್ ಆದ್ಮಿ ಪಕ್ಷವು ತೆಗೆದುಕೊಳ್ಳದೆ ರಾಜಕೀಯ ಕ್ಷೇತ್ರಕ್ಕೆ ಹೊಸಬರಾದ ಅಧಿಕಾರದ ಬಗ್ಗೆ ತೆವಲು ಇಲ್ಲದ ಜನರನ್ನು ತೆಗೆದುಕೊಳ್ಳುವುದು ಅದರ ವಿಶ್ವಾಸಾರ್ಹತೆಯ ದೃಷ್ಟಿಯಿಂದ ಅಗತ್ಯ. ಇಲ್ಲದೆ ಹೋದರೆ ಪಕ್ಷದ ವಿಶ್ವಾಸಾರ್ಹತೆಯ ಮೇಲೆ ಜನರ ಅಪನಂಬಿಕೆ ಬೆಳೆಯಲು ಆರಂಭವಾಗಿ ಪಕ್ಷದ ರಾಷ್ಟ್ರವ್ಯಾಪಿ ಬೆಳವಣಿಗೆಗೆ ಧಕ್ಕೆಯಾದೀತು.

ಭ್ರಷ್ಟಾಚಾರದ ವಿರುದ್ಧ ಆಮ್ ಆದ್ಮಿ ಪಕ್ಷವು ದೃಢ ನಿಲುವನ್ನು ತೆಗೆದುಕೊಂಡು ಹಿಂದಿನ ಸರ್ಕಾರದ ಭ್ರಷ್ಟತೆಯ ವಿರುದ್ಧ ಸೂಕ್ತ ಕ್ರಮ Kejriwal-janata-durbarಕೈಗೊಳ್ಳದೆ ಹೋದರೆ ಅದು ಭ್ರಷ್ಟತೆಯ ವಿರುದ್ಧ ರಾಜಿ ಮಾಡಿಕೊಂಡು ಅಧಿಕಾರಕ್ಕೆ ಅಂಟಿಕೊಳ್ಳುತ್ತಿದೆ ಹಾಗೂ ಉಳಿದ ಪಕ್ಷಗಳಿಗಿಂತ ಭಿನ್ನ ಅಲ್ಲ ಎಂಬ ಸಂದೇಶ ದೇಶಕ್ಕೆ ಹೋಗುವುದು ಖಚಿತ. ಇಂಥ ಸಂದೇಶ ದೇಶಕ್ಕೆ ಹೋದರೆ ಆಮ್ ಆದ್ಮಿ ಪಕ್ಷದ ದೇಶವ್ಯಾಪಿ ಬೆಳವಣಿಗೆಗೆ ತೀವ್ರ ಪೆಟ್ಟು ಬೀಳಬಹುದು. ಇಂಥ ಒಂದು ಸನ್ನಿವೇಶ ನಿರ್ಮಾಣ ಆಗಲಿ ಎಂದು ಬಿಜೆಪಿ, ಕಾಂಗ್ರೆಸ್ ಹಾಗೂ ಇನ್ನಿತರ ಪಕ್ಷಗಳು ಕಾಯುತ್ತಿವೆ ಹಾಗೂ ಆ ಕುರಿತು ಪ್ರಚಾರ ಮಾಡಲು ಹಾತೊರೆಯುತ್ತಿವೆ. ಹೀಗಾಗಿ ದೆಹಲಿಯ ಸರ್ಕಾರ ಬಿದ್ದು ಹೋದರೂ ಭ್ರಷ್ಟತೆಯ ವಿರುದ್ಧ ತಮ್ಮ ದೃಢ ಸಮರ ಮುಂದುವರಿಯಲಿದೆ ಎಂಬ ಸಂದೇಶ ದೇಶಕ್ಕೆ ನೀಡುವುದು ಆಮ್ ಆದ್ಮಿ ಪಕ್ಷದ ದೇಶವ್ಯಾಪಿ ಬೆಳವಣಿಗೆಯ ದೃಷ್ಟಿಯಿಂದ ಅಗತ್ಯವಾಗಿದೆ. ಆಮ್ ಆದ್ಮಿ ಪಕ್ಷವು ಮುಂದಿನ ಲೋಕಸಭಾ ಚುನಾವಣೆಗೆ ಸೀಮಿತ ಸಂಖ್ಯೆಯ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿದೆ. ಅದು ಲೋಕಸಭಾ ಚುನಾವಣೆಗಳಲ್ಲಿ ಕಾರ್ಯ ಸಾಧ್ಯವಲ್ಲದ ಆಶ್ವಾಸನೆಗಳನ್ನು ನೀಡುವ ತಪ್ಪು ಮಾಡಬಾರದು. ಈಗಾಗಲೇ ಅದು ದೇಶದ ಗಮನ ಸೆಳೆದಿರುವ ಕಾರಣ ಇನ್ನು ದೇಶದ ಗಮನ ಸೆಳೆಯಲು ಯಾವುದೇ ಗಿಮಿಕ್ ಮಾಡಬೇಕಾದ ಅಗತ್ಯ ಇಲ್ಲ. ದಕ್ಷ, ಪ್ರಾಮಾಣಿಕ ಹಾಗೂ ಸ್ಪಂದನಶೀಲ ಆಡಳಿತದ ಭರವಸೆ ನೀಡಿದರೂ ಸಾಕು. ದೇಶದಲ್ಲಿ ಇಂದು ಕಾಂಗ್ರೆಸ್ ವಿರೋಧಿ ಅಲೆ ಇದೆ, ಆದರೆ ಹಾಗೆಂದು ಬಿಜೆಪಿ ಪರ ಅಲೆಯೇನೂ ಇಲ್ಲ. ಕಾಂಗ್ರೆಸ್ಸಿನ ವಿರುದ್ಧ ದೇಶಾದ್ಯಂತ ಸಿಟ್ಟಿಗೆದ್ದಿರುವ ಮತದಾರರು ಬೇರೆ ಪರ್ಯಾಯ ಇಲ್ಲದೆ ಬಿಜೆಪಿಯ ಕಡೆ ಹಾಗೂ ಮೋದಿಯ ಕಡೆ ಮುಖ ಮಾಡಿದ್ದಾರೆ. ಇಂಥ ಸನ್ನಿವೇಶದಲ್ಲಿ ಕಾಂಗ್ರೆಸ್ಸಿನ ಜೊತೆ ಪರಿಸ್ಥಿತಿಯ ಅನಿವಾರ್ಯತೆಗೆ ಸಿಲುಕಿ ಕಾಂಗ್ರೆಸ್ಸಿನ ಬಾಹ್ಯ ಬೆಂಬಲದಿಂದ ದೆಹಲಿಯಲ್ಲಿ ಇಷ್ಟವಿಲ್ಲದಿದ್ದರೂ ಸರ್ಕಾರ ಮಾಡಿರುವ ಆಮ್ ಆದ್ಮಿ ಪಕ್ಷದ ನಿಲುವನ್ನು ಜನ, ಬಿಜೆಪಿಯ ಬೆಂಬಲಿಗರನ್ನು ಹೊರತುಪಡಿಸಿ, ಒಪ್ಪಿಕೊಳ್ಳಬಲ್ಲರು ಆದರೆ ಅಧಿಕಾರದ ಮಾಯೆಗೆ ಬಿದ್ದು ಹಿಂದಿನ ಕಾಂಗ್ರೆಸ್ ಸರ್ಕಾರದ ಭ್ರಷ್ಟತೆಯ ಬಗ್ಗೆ ಮೃದು ಧೋರಣೆ ತಳೆದರೆ ಒಪ್ಪಿಕೊಳ್ಳಲಾರರು. ಅಂಥ ಮೃದು ಧೋರಣೆಯನ್ನು ಆಮ್ ಆದ್ಮಿ ಪಕ್ಷ ತಳೆದರೆ ದೇಶದಾದ್ಯಂತ ಕವಿದಿರುವ ಕಾಂಗ್ರೆಸ್ ವಿರೋಧಿ ಅಲೆಯ ದುಷ್ಪರಿಣಾಮ ಆಮ್ ಆದ್ಮಿ ಪಕ್ಷದ ಲೋಕಸಭಾ ಅಭ್ಯರ್ಥಿಗಳ ಚುನಾವಣಾ ಸಾಧನೆಯ ಮೇಲೆಯೂ ಬೀಳಬಹುದು. ಅಂಥ ದುಷ್ಪರಿಣಾಮ ಬೀಳದಂತೆ ವಿವೇಕದ ನಡೆಯನ್ನು ಆಮ್ ಆದ್ಮಿ ಪಕ್ಷ ಅಳವಡಿಸಿಕೊಳ್ಳಬೇಕಾಗಿದೆ.

ದೆಹಲಿಯಂಥ ಸಣ್ಣ ರಾಜ್ಯದಲ್ಲಿ ಪಕ್ಷವನ್ನು ಬೆಳೆಸುವಾಗ ಸಾಮಾಜಿಕ, ಆರ್ಥಿಕ, ವಿದೇಶಾಂಗ ಮೊದಲಾದ ವಿಷಯಗಳ ಬಗ್ಗೆ ಸ್ಪಷ್ಟ ಧೋರಣೆ ಅಗತ್ಯ ಇಲ್ಲದೆ ಇರಬಹುದು, ಆದರೆ ದೇಶವ್ಯಾಪಿ ಪಕ್ಷವನ್ನು ಬೆಳೆಸುವಾಗ ಸ್ಪಷ್ಟ ಧೋರಣೆಗಳನ್ನು ಇಂಥ ವಿಷಯಗಳಲ್ಲಿ ತೆಗೆದುಕೊಳ್ಳುವುದು ಉತ್ತಮ. ಇಲ್ಲದೆ ಹೋದರೆ ಪಕ್ಷದೊಳಗೆ ವಿವಿಧ ಸದಸ್ಯರ ನಡುವೆ ಮುಂದೆ ಭಿನ್ನಮತ ಹಾಗೂ ಗೊಂದಲ ತಲೆದೋರಬಹುದು. ಇಂಥ ಬೆಳವಣಿಗೆಗಳನ್ನು ತಪ್ಪಿಸಲು ಸೂಕ್ತ ಸಾಮಾಜಿಕ, ಆರ್ಥಿಕ, ವಿದೇಶಾಂಗ ಮೊದಲಾದ ನೀತಿಗಳನ್ನು ಆಮ್ ಆದ್ಮಿ ಪಕ್ಷ ಅಳವಡಿಸಿಕೊಳ್ಳುವುದು ಸೂಕ್ತವಾಗಿದೆ. ಇಂಥವುಗಳನ್ನು ಈಗಲೇ ಅಳವಡಿಸಿದರೆ ಅದಕ್ಕೆ ಹೊಂದಿಕೊಂಡವರು ಪಕ್ಷದೊಳಗೆ ಬರುತ್ತಾರೆ, ಅದಕ್ಕೆ ಹೊಂದಿಕೊಳ್ಳದವರು ಹೊರಗೆ ನಿಲ್ಲುತ್ತಾರೆ. ಇದು ಮುಂದೆ ಉಂಟಾಗಬಹುದಾದ ಗೊಂದಲಗಳನ್ನು ತಡೆಯಲು ಅಗತ್ಯ.

ಕೈಗಾರಿಕೆ, ವಾಣಿಜ್ಯ, ಉದ್ಯಮ ಸ್ನೇಹಿ ನೀತಿಗಳನ್ನು ಯಾವುದೇ ಸರ್ಕಾರವಾದರೂ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದು ಇದೆ. ಹೀಗಾಗಿ ಉದಾರೀಕರಣ, ಖಾಸಗೀಕರಣ, ಜಾಗತೀಕರಣಗಳನ್ನು ಯಾವ ಸರ್ಕಾರ ಬಂದರೂ ತಡೆಯಲಾಗದ ಅನಿವಾರ್ಯತೆ ಇದೆ. Tilling_Rice_Fieldsಇದು ದೇಶದ ಜನರ ಜೀವನ ಶೈಲಿಯನ್ನು ಅವಲಂಬಿಸಿದೆ. ಜನ ಇಂದು ಸರಳ ಜೀವನದಲ್ಲಿ ತೃಪ್ತಿ ಪಡುವ ಪ್ರವೃತ್ತಿ ಹೊಂದಿಲ್ಲ. ಹೀಗಿರುವ ಪರಿಸ್ಥಿತಿಯಲ್ಲಿ ಜಾಗತೀಕರಣ, ಉದಾರೀಕರಣ, ಖಾಸಗೀಕರಣಕ್ಕೆ ತೆರೆದುಕೊಳ್ಳದೆ ವಿಧಿ ಇಲ್ಲ. ಹೀಗೆ ಮಾಡುವಾಗ ಕೃಷಿಕರು, ಕಾರ್ಮಿಕರು, ತಳಸಮುದಾಯದ ಜನವರ್ಗದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರದ ರೀತಿಯಲ್ಲಿ ಸರ್ಕಾರ ನೋಡಿಕೊಳ್ಳಬೇಕಾಗುತ್ತದೆ. ದೇಶದ ಅಗತ್ಯಕ್ಕೆ ಅನುಗುಣವಾಗಿ ಗಣಿಗಾರಿಕೆ ಮಾಡಲೇಬೇಕಾಗುತ್ತದೆ. ಗಣಿ ಸಂಪತ್ತಿನ ಲಾಭ ದೇಶದ ಬೊಕ್ಕಸಕ್ಕೆ ಆಗುವ ರೀತಿಯಲ್ಲಿ ನೀತಿಗಳನ್ನು ರೂಪಿಸಬೇಕಾದ ಅಗತ್ಯ ಇದೆ. ಇಂದು ಇರುವ ನೀತಿಗಳು ದೇಶದ ಗಣಿ ಹಾಗೂ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆದು ಖಾಸಗಿ ಖಜಾನೆ ತುಂಬಿಸಿಕೊಳ್ಳುವವರಿಗೆ ಅನುಕೂಲಕರವಾಗಿವೆ. ಇದನ್ನು ದೇಶದ ಬೊಕ್ಕಸ ತುಂಬಿಸುವ ರೀತಿ ಬದಲಾಯಿಸಬೇಕಾಗಿದೆ ಹಾಗೂ ಹಾಗೆ ಪಡೆದ ಹಣದಿಂದ ಪರಿಸರ ಸ್ನೇಹಿ ತಂತ್ರಜ್ಞಾನ ಅಳವಡಿಸಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷವು ಸೂಕ್ತ ನೀತಿಗಳನ್ನು ತರುವ ಕುರಿತು ಚಿಂತನೆ ನಡೆಸಬೇಕಾಗಿದೆ. ದೇಶದಲ್ಲಿ ಕೃಷಿ ಕ್ಷೇತ್ರವು ಅತೀ ಹೆಚ್ಚು ಜನರಿಗೆ ಜೀವನಾಧಾರವಾಗಿ ಇಂದಿಗೂ ಉಳಿದುಕೊಂಡಿದೆ. ಹೀಗಾಗಿ ಕೃಷಿ ಕ್ಷೇತ್ರದ ಸುಧಾರಣೆಗೆ ಯಾವ ಹಾಗೂ ಕೃಷಿ ಲಾಭದಾಯಕವಾಗಿ ರೂಪುಗೊಳ್ಳಲು ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ಚಿಂತಕರ, ಪ್ರತಿಭಾವಂತರ ಸಲಹೆಗಳನ್ನು ಆಮ್ ಆದ್ಮಿ ಪಕ್ಷವು ಆಹ್ವಾನಿಸಿ ತನ್ನ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಹೀಗೆ ಮಾಡುವಾಗ ಕೂಡ ಯಾವುದೇ ಕಾರ್ಯಸಾಧ್ಯವಲ್ಲದ ಆಶ್ವಾಸನೆಗಳನ್ನು ನೀಡಲೇಬಾರದು. ನೀಡಿದರೆ ಮುಂದೆ ಅದನ್ನು ಪೂರೈಸುವುದು ಕಷ್ಟವಾದರೆ ಜನ ಭ್ರಮನಿರಸನಕ್ಕೆ ಒಳಗಾಗುತ್ತಾರೆ ಎಂಬ ಎಚ್ಚರ ಇದ್ದರೆ ಒಳ್ಳೆಯದು. ವಿದ್ಯಾವಂತರು ಹಾಗೂ ಪ್ರತಿಭಾವಂತರು ಇಂದು ಕೃಷಿ ಕ್ಷೇತ್ರದಿಂದ ದೂರವಾಗುತ್ತಿದ್ದಾರೆ. ಅವರನ್ನು ಮತ್ತೆ ಕೃಷಿ ಕ್ಷೇತ್ರಕ್ಕೆ ಬರುವಂತೆ ಮಾಡುವ ನೀತಿ ರೂಪಿಸಿದರೆ ದೇಶದ ಕೃಷಿ ಕ್ಷೇತ್ರ ಬಹಳಷ್ಟು ಜನರಿಗೆ ಉದ್ಯೋಗ ನೀಡಬಲ್ಲುದು. ಈ ಕುರಿತು ಆಮ್ ಆದ್ಮಿ ಪಕ್ಷದ ಪ್ರತಿಭಾವಂತರು ಯೋಚಿಸಬೇಕಾದ ಅಗತ್ಯ ಇದೆ.

2 thoughts on “ಆಮ್ ಆದ್ಮಿ ಪಕ್ಷ ಜನತೆಯ ಆಶೋತ್ತರ ಕಡೆಗಣಿಸದಿರಲಿ

  1. Srinivasamurthy

    CIA ಯು Ford Foundation ಸಂಸ್ತೆಯನ್ನು ಬೆಂಬಲಿಸುತ್ತಿದೆ ಮತ್ತು Ford Foundation AAP ಗೆ ದುಡ್ಡಿನ ನೆರವು ನೀಡಿದೆ. ಇಲ್ಲಿ ನಮ್ಮ ದೇಶದ ಸುದಾರಣೆಗೆ ಬೇರೆ ದೇಶದ ದುಡ್ಡು ಬೇಕೆ?
    “ಯಾವುದೇ ಸರ್ಕಾರವಾದರೂ ಅದರ ಕಾರ್ಯವೈಖರಿಯನ್ನು ಅಳೆಯಲು, ಅಂದಾಜು ಮಾಡಲು ಕನಿಷ್ಠ ಆರು ತಿಂಗಳನ್ನಾದರೂ ನೀಡಬೇಕು. ಬೀಜವು ಬಿತ್ತಿದ ಕೂಡಲೇ ಗಿಡವಾಗಿ ಫಲ ನೀಡುವುದಿಲ್ಲ. ಬೀಜವು ಹುಟ್ಟಿದ ಕೂಡಲೇ ಫಲ ನೀಡಬೇಕೆಂದು ಆಗ್ರಹಿಸುವುದು ಸೂಕ್ತವಲ್ಲ.”
    ಈ ಹಿಂದೆ ನೀವು AAP ಕುರಿತು ಬರೆದಿದ್ದಾಗ ನಾನು ನಿಮಗೆ ಕಾಯ್ದು ನೋಡುವ ಬಗ್ಗೆ ಹೇಳಿದ್ದೆ ಅಲ್ಲವೆ?
    ಈಗಲೂ ಅಶ್ಟೆ ಅದನ್ನೇ ಹೇಳುತ್ತೇನೆ.

    Reply
  2. Ananda Prasad

    ಫೋರ್ಡ್ ಫೌ೦ಡೆಶನ್ ಎಎಪಿ ಪಕ್ಷಕ್ಕೆ ನೆರವು ನೀಡಿಲ್ಲ. ಈ ಹಿಂದೆ ಕೇಜ್ರಿವಾಲ್ ನಡೆಸುತ್ತಿದ್ದ ಸಮಾಜ ಸೇವಾ ಸಂಸ್ಥೆಗೆ ಅದು ಸಮಾಜ ಸೇವೆಗೆ (ಮಾಹಿತಿ ಹಕ್ಕು ಕಾಯ್ದೆಯ ಹೋರಾಟಕ್ಕೆ ಸಂಬಂಧಿಸಿ) ಧನಸಹಾಯ ನೀಡಿದೆ ಎಂದು ಅಂತರ್ಜಾಲ ಮಾಹಿತಿಗಳು ತಿಳಿಸುತ್ತವೆ. ಇದರಲ್ಲಿ ಏನು ತಪ್ಪು ಇದೆ ಎಂದು ಗೊತ್ತಾಗುವುದಿಲ್ಲ. ಬಿಲ್ ಗೇಟ್ಸ್ ಫೌಂಡೆಶನ್ ಭಾರತಕ್ಕೆ ಕೋಟ್ಯಂತರ ರೂಪಾಯಿಗಳನ್ನು ಸಮಾಜ ಸೇವೆಗೆ ದಾನವಾಗಿ ನೀಡುತ್ತದೆ (ಏಡ್ಸ್ ನಿಯಂತ್ರಣ ಕಾರ್ಯಕ್ರಮ ಇತ್ಯಾದಿಗಳಿಗೆ). ಅದನ್ನು ಪಡೆಯುವುದು ತಪ್ಪಲ್ಲದಿದ್ದರೆ ಕೇಜ್ರಿವಾಲ್ ಸಮಾಜಸೇವೆಗೆ ವಿದೇಶದಿಂದ ನೆರವು ಪಡೆದದ್ದು ಹೇಗೆ ತಪ್ಪಾಗುತ್ತದೆ? ನಮ್ಮ ದೇಶದ ಸುಧಾರಣೆಗೆ ಶ್ರೀಮಂತ ದೇಶಗಳು ದುಡ್ಡು ಕೊಟ್ಟರೆ ಅದನ್ನು ಪಡೆಯುವುದರಲ್ಲಿ ತಪ್ಪಿಲ್ಲ. ನಮ್ಮ ದೇಶದಲ್ಲಿಯೇ ಶ್ರೀಮಂತರು ದೇಶದ ಸುಧಾರಣೆಗೆ ದುಡ್ಡು ಕೊಟ್ಟರೆ ವಿದೇಶಗಳಿಂದ ಪಡೆಯುವ ಅಗತ್ಯವಿಲ್ಲ. ಆದರೆ ನಮ್ಮ ದೇಶದ ಶ್ರೀಮಂತರು ಸಮಾಜ ಸೇವೆಗಳಿಗೆ ದುಡ್ಡು ಕೊಡುವುದರಲ್ಲಿ ತುಂಬಾ ಹಿಂದೆ. ಹೀಗಿರುವಾಗ ವಿದೇಶಗಳ ಶ್ರೀಮಂತರು ಒಳ್ಳೆಯ ಉದ್ಧೇಶಕ್ಕೆ ದಾನ ಕೊಟ್ಟರೆ ಅದನ್ನು ಪಡೆಯುವುದರಲ್ಲಿ ತಪ್ಪಿಲ್ಲ.

    Reply

Leave a Reply

Your email address will not be published. Required fields are marked *