ಡಿಕೆ ರವಿ ಪ್ರಕರಣ : ಕಾಲಿಗೆ ಗುಂಡು ಕಟ್ಟಿಕೊಂಡು ನೀರಿಗಿಳಿದವರ ಪ್ರಲಾಪಗಳು…


– ರವಿ 


ಒಂದು ಅಸಹಜ ಸಾವಾಗಿದೆ. ಅದು ಆತ್ಮಹತ್ಯೆಯೊ ಕೊಲೆಯೋ? ಸತ್ಯ ಕೆಲವರಿಗಷ್ಟೇ ಗೊತ್ತು. ಜನಸಾಮಾನ್ಯರು ಕೊಲೆ ಎಂದು ಸಂಶಯ ಪಡುತ್ತಿದ್ದಾರೆ, ಯಾಕೆಂದರೆ ಸತ್ತ ವ್ಯಕ್ತಿ ದಕ್ಷನಾಗಿದ್ದ, ಪ್ರಾಮಾಣಿಕನಾಗಿದ್ದ, ಮತ್ತು ಪಟ್ಟಭದ್ರರನ್ನು ಎದುರು ಹಾಕಿಕೊಂಡಿದ್ದ. ಇದೆಲ್ಲವೂ ಮಾಧ್ಯಮಗಳಲ್ಲಿ ವರದಿಯಾಗಿತ್ತು, ಮತ್ತು ಮಾಧ್ಯಮಗಳುDKRavi_Kolar_PG ಹಾಗೆಯೇ ಜನಾಭಿಪ್ರಾಯ ರೂಪಿಸಿದ್ದವು. ಆತ್ಮಹತ್ಯೆ ಆಗಿದ್ದರೂ ಆತ ಕೇವಲ ವೈಯಕ್ತಿಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡಿರಲಾರ, ಯಾರೋ ಆತನನ್ನು ಅಂತಹ ಒಂದು ಪರಿಸ್ಥಿತಿಗೆ ದೂಡಿರಬಹುದು. ಹಾಗಿದ್ದರೆ ಅವರು ಯಾರು? ಇನ್ನು ಅದು ಕೇವಲ ವೈಯಕ್ತಿಕ ಕಾರಣಗಳಿಗೆ ಆಗಿರುವ ಆತ್ಮಹತ್ಯೆ ಆದರೆ ಏನದು ವೈಯಕ್ತಿಕ ವಿಚಾರ? ಕೊಲೆಯೋ, ಪ್ರಚೋದಿತ ಅತ್ಮಹತ್ಯೆಯೋ, ಸರಳ ಆತ್ಮಹತ್ಯೆಯೋ? ಮೂರನೆಯ ಕಾರಣದಿಂದ ಆಗಿದ್ದರೆ ಜನ ಬೇಸರ ವ್ಯಕ್ತಪಡಿಸಿ ಸುಮ್ಮನಾಗುತ್ತಾರೆ. ಮೊದಲೆರಡು ಕಾರಣದಿಂದ ಅಗಿದ್ದಾದಲ್ಲಿ ಅದು ಅವರಿಗೆ ವ್ಯವಸ್ಥೆಯ ಮೇಲೆ ಸಿಟ್ಟು ತರಿಸುತ್ತದೆ, ಅವಿಶ್ವಾಸ ಮೂಡಿಸುತ್ತದೆ, ಭ್ರಷ್ಟರ ಕಬಂಧ ಬಾಹುಗಳು ಎಲ್ಲಿಯವರೆಗೂ ಚಾಚಿರುವ ಪರಿ ನೋಡಿ ಬೆಚ್ಚಿ ಬೀಳುತ್ತಾರೆ.

ಇಂತಹ ಸಂಶಯದ ಸಮಯದಲ್ಲಿ ಸರ್ಕಾರಗಳು ತಮ್ಮ ಮೇಲೆ ಜನರ ವಿಶ್ವಾಸ ಬೆಳೆಯುವ ರೀತಿಯಲ್ಲಿ ನಡೆದುಕೊಳ್ಳಬೇಕು.

ಆದರೆ, ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಮೊದಲ ದಿನದಿಂದಲೂ ತನ್ನ ವಿಶ್ವಾಸಾರ್ಹತೆಯನ್ನು ತಾನೇ ಹಾಳುಮಾಡಿಕೊಳ್ಳುವ ಕೆಲಸವನ್ನು ಪ್ರಜ್ಞಾಪೂರ್ವಕವಾಗಿ ಮಾಡುತ್ತಲೇ ಬಂತು. ಅದನ್ನು ಸರಿಪಡಿಸಲು ಅಧಿಕಾರವಾಗಲಿ, ಶಕ್ತಿಯಾಗಲಿ ಇಲ್ಲದ ಕೆಲವು ಸರ್ಕಾದ ಪರ ವಕ್ತಾರರು ಈಗ ತಮ್ಮ ಸರ್ಕಾರದ ಮತ್ತು ಪಕ್ಷದ ತಪ್ಪಿಗೆ ಬೇರೆಯವರ ಮೇಲೆ ಆರೋಪ, ಅವಿಶ್ವಾಸ, ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಅಯೋಗ್ಯತೆಗೆ, ತಪ್ಪಿಗೆ ಇನ್ನೊಬ್ಬರು ಊರುಗೋಲಾಗಬೇಕೆಂದು ಬಯಸುತ್ತಿದ್ದಾರೆ. ದೇಶದಲ್ಲಿ ಉಳಿದಿರುವ ಕಾಂಗ್ರೆಸ್ ಆಡಳಿತದ ದೊಡ್ಡ ರಾಜ್ಯ ಇದೊಂದೇ, ಇದನ್ನು ದುರ್ಬಲಗೊಳಿಸಬೇಡಿ ಎಂದು ಬೇಡುತ್ತಿದ್ದಾರೆ. ರಾಷ್ಟ್ರದಲ್ಲಿ ಅಮಿತ್ ಶಾ ಮತ್ತು ಮೋದಿಯನ್ನು ಎದುರುಗೊಳ್ಳುವುದು ಎಂದರೆ ರಾಜ್ಯದಲ್ಲಿ ಸರ್ಕಾರ ಉಳಿಸಿಕೊಳ್ಳುವುದು ಎನ್ನುವ “ಅಂತಿಮ ಸತ್ಯ”ಕ್ಕೆ ಇವರು ಶರಣಾಗಿಬಿಟ್ಟಿದ್ದಾರೆ. ನಿಜವೇ?

ವೈಯಕ್ತಿಕವಾಗಿ ನನಗೆ ಸಿದ್ಧರಾಮಯ್ಯನವರ ಬಗ್ಗೆ ಗೌರವವಿದೆ. ಅದನ್ನು ಹಲವು ವೇದಿಕೆಗಳಲ್ಲಿ ಬಹಿರಂಗವಾಗಿ ಹೇಳಿದ್ದೇನೆ. dkravi-kolar-dalitsಅದೇ ರೀತಿ ಅವರಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಲೇ ಬಂದಿದ್ದೇನೆ. (ಅವರಿಗೆ ನನ್ನ ಪರಿಚಯ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮಂಡೂರಿನ ವಿಚಾರಕ್ಕೊಮ್ಮೆ ಮತ್ತು ಹಾರೋಹಳ್ಳಿಯ ವಿಚಾರಕ್ಕೊಮ್ಮೆ ಅವರ ಬಳಿ ಮಾತನಾದಲು ಎಚ್.ಎಸ್.ದೊರೆಸ್ವಾಮಿಯವರು ನನ್ನನ್ನೂ ಕರೆದೊಯ್ದಿದ್ದರು. ಆದರೆ, ಅವರಿಗೆ ನನ್ನನ್ನು ಪರಿಚಯಿಸಿದ ನೆನಪಿಲ್ಲ. ಈ ಮನುಷ್ಯನಿಗೆ ಕಾಳಜಿಗಳಿರುವುದು ನಿಜ.) ಅದರೆ ಅವರು ನಾನು ನಿರೀಕ್ಷಿಸಿದಷ್ಟು ಮತ್ತು ನಿರೀಕ್ಷಿಸಿದ್ದನ್ನು ಮಾಡುತ್ತಿದ್ದಾರೆ ಎಂದು ಹೇಳಲಾರೆ. ಹಲವು ಒಳ್ಳೆಯ ತೀರ್ಮಾನಗಳನ್ನು (ಕೆಪಿಎಸ್‌ಸಿ, ಮಂಡೂರು, ಹಲವು ಜನಪರ ಯೋಜನೆಗಳು ಮತ್ತು ಭಾಗ್ಯಗಳು, ಇತ್ಯಾದಿ) ಕೈಗೊಂಡಿದ್ದಾರೆ. ಹಾಗೆಯೆ ಹಲವು ಕೆಟ್ಟ (ಡಿಕೆ ಶಿವಕುಮಾರ್, ದಿನೇಶ್ ಗುಂಡೂರಾವ್, ಮಹದೇವಪ್ಪ, ರೋಷನ್ ಬೇಗ್, ದೇಶಪಾಂಡೆ ಯಂತಹ ಭ್ರಷ್ಟ ಮಂತ್ರಿಗಳ ರಕ್ಷಣೆ, ಕೆಪಿಎಸ್‌ಸಿ ಹಗರಣವನ್ನು ನಿಭಾಯಿಸಿದ ರೀತಿ, ಅರ್ಕಾವತಿ ಪ್ರಕರಣ ಮತ್ತು ಗಣಿ ಲೈಸನ್ಸ್ ನೀಡಿಕೆಯಲ್ಲಿಯ ಸಂಶಯಗಳು, ಲೋಕಾಯುಕ್ತವನ್ನು ಬಲಹೀನ ಮಾಡಲು ಹೋಗಿದ್ದು, ಅಧಿಕಾರಿಗಳ ನೇಮಕಾತಿಯಲ್ಲಿ ಲೋಪಗಳು, ಸರ್ಕಾರದಲ್ಲಿ ಮುಂದುವರಿದ ಮತ್ತು ಹೆಚ್ಚಿದ ಭ್ರಷ್ಟತೆ, ಇತ್ಯಾದಿ) ತೀರ್ಮಾನಗಳನ್ನೂ ತೆಗೆದುಕೊಂಡಿದ್ದಾರೆ. ಆದರೆ, ಇವರು ತಾವು ಮಾಡುತ್ತಿರುವ ತಪ್ಪಿಗಿಂತ ಹೆಚ್ಚಾಗಿ ತಮ್ಮ ಆಪ್ತರ ತಪ್ಪುಗಳನ್ನು ಪೋಷಿಸುತ್ತಿದ್ದಾರೆ. ಹಾಗೆಂದು ಜನರೂ ಭಾವಿಸುತ್ತಿದ್ದಾರೆ. ಇದಕ್ಕೆ ಸಿದ್ಧರಾಮಯ್ಯನವರೇ ಹೊಣೆಯೇ ಹೊರತು ಬೇರೆಯವರಲ್ಲ.

ಡಿಕೆ ರವಿ ಪ್ರಕರಣಕ್ಕೆ ವಾಪಸು ಬರುವುದಾದರೆ, ಈಗಾಗಲೆ ಈ ತನಿಖೆಯನ್ನು ಸಿಐಡಿ ಯವರು ನಡೆಸುತ್ತಿದ್ದಾರೆ. ಅದರೆ ರಾಜ್ಯದ ಬಹುತೇಕ ಜನ ಸಿಬಿಐ ಬೇಕು ಎಂದರು. ಯಾಕೆಂದರೆ ಈ ಪ್ರಕರಣದಲ್ಲಿ ಕೆಲವು ಪ್ರಭಾವಿ ಮಾಫಿಯಾಗಳ, ಸರ್ಕಾರದ ಕೆಲವು ಮಂತ್ರಿಗಳ, ಆಡಳಿತ ಪಕ್ಷದ ಕೆಲವು ಶಾಸಕರ ಪಾತ್ರ ಇರಬಹುದು ಎಂಬ ಗುಮಾನಿ ಜನರಿಗೆ ಬಂತು. ಅದರಲ್ಲಿ ಕೆಲವು ಗುಮಾನಿಗಳನ್ನು ಮಾಧ್ಯಮದ ಒಂದು ವರ್ಗ ಹಬ್ಬಿಸಿದ್ದೇ ಆಗಿರಬಹುದು. ಅದನ್ನು ಎಂದಿನಂತೆ ಈ ಸರ್ಕಾರ ಸತ್ಯ ಮತ್ತು ಪ್ರಾಮಾಣಿಕತೆಯ ಹಾದಿಯಲ್ಲಿ ನಿಭಾಯಿಸಲು ಸೋತೂ ಹೋಯಿತು. (ರಾಜ್ಯದ ಆಡಳಿತ ನಡೆಸುವವರು ಕೇವಲ ಸರ್ಕಾರವನ್ನು ಭ್ರಷ್ಟತೆಯಿಂದ ಮುಕ್ತವಾಗಿಡುವ ಕೆಲಸ ಮಾಡಿದರಷ್ಟೇ ಸಾಲದು; ಸಮಾಜವನ್ನು ಕೆಲವು ಭ್ರಷ್ಟತೆಗಳಿಂದ ಮುಕ್ತ ಮಾಡುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಅದಕ್ಕೆ ತೊಡರುಗಾಲುಗಳು ಸಹಜ. ಸರ್ಕಾರದ ಮೌಲ್ಯಗಳು ಜನರ ಮೌಲ್ಯಗಳಾಗದಿದ್ದಲ್ಲಿ ಸರ್ಕಾರಕ್ಕೆ ಜನಬೆಂಬಲ ಕ್ಷೀಣಿಸುತ್ತದೆ. ತನ್ನ ಮೌಲ್ಯಗಳನ್ನು ಅಪಮೌಲ್ಯಗಳನ್ನಾಗಿ ತಿರುಚಿ ವರದಿ ಮಾಡುವ ಮಾಧ್ಯಮಗಳ ಕೆಲವು ಭ್ರಷ್ಟರನ್ನು ಗೊತ್ತಿದ್ದೂ ಈ ಸರ್ಕಾರ ಪೋಷಿಸುತ್ತಾ ಬಂದಿದೆ. ಅವರ ಅಕ್ರಮಗಳಲ್ಲಿ ತಾನೂ ಪಾಲು ಪಡೆದುಕೊಂಡಿದೆ. ಅಂತಹವರನ್ನೇ ಆರಿಸಿ ತನ್ನ ಸಲಹೆಗಾರರನ್ನಾಗಿಯೂ ಮಾಡಿಕೊಳ್ಳುತ್ತದೆ. dkravi-cm-siddharamaiahತಾನೇ ನೈತಿಕವಾಗಿ ಶುದ್ಧವಾಗಿರದ ಮನುಷ್ಯ ಬೇರೆಯವರನ್ನು ಶುದ್ಧ ಮಾಡುವುದು ಕಠಿಣ ಸವಾಲು.)

ಎಂದಿನಂತೆ ಜನಾಭಿಪ್ರಾಯದ ವಾಸನೆ ಹಿಡಿದ ವಿರೋಧ ಪಕ್ಷಗಳು, ಈ ಸಾವಿನಲ್ಲಿಯ ಸಂಶಯಗಳು ಸರ್ಕಾರದ ಮಂತ್ರಿಗಳ ತನಕವೂ ಹೋಗಬಹುದು ಎಂದು ಗೊತ್ತಾದಾಗ ಸರ್ಕಾರವನ್ನು ಮುಜುಗರಪಡಿಸುವ ಕಾರಣಕ್ಕೆ ಸಿಬಿಐ ತನಿಖೆ ಆಗಲೇಬೇಕು ಎಂದು ಧರಣಿ ಕೂತವು. ಆದರೆ ಸರ್ಕಾರ ಸಿಬಿಐ ಸಾಧ್ಯವೇ ಇಲ್ಲ ಎಂದಿತು. ಅದು ಸಹಜ. ಆದರೆ ಅದು ಪಟ್ಟು ಹಿಡಿದ ರೀತಿ, ಕೊಟ್ಟ ಕಾರಣಗಳು, ತೇಲಿಬಿಟ್ಟ ಮಾತುಗಳು, ಸಾಕ್ಷ್ಯಗಳನ್ನು ಕಳ್ಳತನದಲ್ಲಿ ಸೋರಿಕೆ ಮಾಡಿದ ರೀತಿ, ಕೆಲವು ಮಾಧ್ಯಮಗಳಲ್ಲಿ ನೆಟ್ಟಿಸಿದ ಸುದ್ದಿಗಳು, ಇವೆಲ್ಲವೂ ಸರ್ಕಾರದ ಬಗ್ಗೆ ಅವಿಶ್ವಾಸವನ್ನು ಬೆಳೆಸುತ್ತಲೇ ಹೋದವು. ಉಗುರಲ್ಲಿ ಹೋಗುವುದಕ್ಕೆ ಕೊಡಲಿ ಬಳಸಬೇಕಾಗಿ ಬಂದಿದೆ.

ಈ ಸರ್ಕಾರದ ಅತಿ ಅದಕ್ಷ ಮಂತ್ರಿಗಳಲ್ಲಿ ಗೃಹಮಂತ್ರಿ ಕೆ.ಜೆ. ಜಾರ್ಜ್ ಸಹ ಒಬ್ಬರು. ಅವರ ಮೇಲೆ ಭ್ರಷ್ಟಾಚಾರದ ನೇರ ಅರೋಪಗಳಿಲ್ಲದಿದ್ದರೂ ದಕ್ಷತೆಯಿಂದ ಕೆಲಸ ಮಾಡಿ ತೋರಿಸಿದ್ದನ್ನು ಈ ರಾಜ್ಯದ ಜನತೆ ಕಂಡಿಲ್ಲ. ಹಾಗೆಯೇ ಅವರೊಬ್ಬ ರಾಜಕೀಯಕ್ಕೆ ಬಂದನಂತರ ಹೆಚ್ಚು ಶ್ರೀಮಂತರಾಗಿರುವವರು ಎಂಬ ಭಾವನೆಯೂ ಇದೆ. ಅವರ ಖಾತೆಗೆ ಸಂಬಂಧಿಸಿದ ಅನೇಕ ಪ್ರಕರಣಗಳಲ್ಲಿ ಗಂಭೀರವಾಗಿ ಎಡವಿ ಜನರ ಮುಂದೆ ನಗೆಪಾಟಲಿಗೀಡಾಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅವರು ರಾಜ್ಯದ ಜನತೆಯ ವಿಶ್ವಾಸ ಕಳೆದುಕೊಂಡಿದ್ದಾರೆ. ಜನತೆಯ ವಿಶ್ವಾಸ ಕಳೆದುಕೊಂಡ ಮಂತ್ರಿಯನ್ನು ತನ್ನ ಸಂಪುಟದಲ್ಲಿಟ್ಟುಕೊಳ್ಳುವ ಮುಖ್ಯಮಂತ್ರಿ ಸಹಜವಾಗಿ ತಾವೂ ಆ ವಿಶ್ವಾಸದ ಕೊರತೆಯನ್ನು ಎದುರಿಸುತ್ತಾರೆ. ಇನ್ನು ಡಿಕೆ ಶಿವಕುಮಾರ್ ಎನ್ನುವ ಇನ್ನೊಬ್ಬ ಮಂತ್ರಿಯ ಬಗ್ಗೆ ಹೇಳುವುದೇ ಬೇಡ. ಸುಮಾರು ಒಂದು ದಶಕದ ಅವಧಿಯಲ್ಲಿ ಸಹಸ್ರಾರು ಕೋಟಿ ರೂಗಳ ಒಡೆಯರಾಗಿದ್ದಾರೆ ಅವರು. ಬಹುಶಃ ಇಪ್ಪತ್ತೈದರ ವಯಸ್ಸಿಗೆಲ್ಲ ಜನಪ್ರತಿನಿಧಿಯಾಗಿ ಆಯ್ಕೆಯಾದ ಇವರು ಅಲ್ಲಿಂದ ಇಲ್ಲಿಯತನಕ ಜನಪ್ರತಿನಿಧಿಯಾಗಿಯೇ ಮುಂದುವರೆದಿದ್ದಾರೆ. ಎಲ್ಲಿಯೂ ಬ್ರೇಕ್ ಇಲ್ಲ. ಆದರೂ ಹೇಳಿಕೊಳ್ಳುವುದು “ತಾನೊಬ್ಬ ಬ್ಯುಸಿನೆಸ್ ಮ್ಯಾನ್” ಎಂದು. ಧಂಧೆ ಮಾಡುವ ಜನ ಧಂಧೆ ಮಾಡಬೇಕೆ ಹೊರತು ಸಂಪುಟದಲ್ಲಿರಬಾರದು. ಇಟ್ಟುಕೊಂಡವರ್ಯಾರು, ಸಹಿಸಿಕೊಂಡವರ್ಯಾರು? ಡಿಕೆ ರವಿಯ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಜನರ ರೊಚ್ಚು ಡಿಕೆ ಶಿವಕುಮಾರರ ಮೇಲೆ ತಿರುಗಿತ್ತು ಮತ್ತು ಅವರನ್ನು ಅಲ್ಲಿ ಸೇರಿದ್ದ ಜನ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಮಾಧ್ಯಮ ಮಿತ್ರರು ಹೇಳುತ್ತಾರೆ. ಆ ಉಗಿತದ ಅಂತಿಮ ನಿಲ್ದಾಣ ಮುಖ್ಯಮಂತ್ರಿಯ ಹೆಗಲು. ಹೀಗೆ ಇನ್ನೂ ಹಲವು ಭ್ರಷ್ಟ-ಕಳಂಕಿತ ಮಂತ್ರಿಗಳ ಪಟ್ಟಿ ಕೊಡಬಹುದು. ಇನ್ನು ಅದಕ್ಷ ಮಂತ್ರಿಗಳ ಪಟ್ಟಿಯಂತೂ ಬಹಳ ದೊಡ್ಡದಿದೆ. ತನ್ನ ಸಂಪುಟದಲ್ಲಿರುವ ಒಳ್ಳೆಯ ಸಚಿವರ ಕೆಲಸದ ಕ್ರೆಡಿಟ್ ಮುಖ್ಯಮಂತ್ರಿಗಳಿಗೆ ಸಲ್ಲುವುದು ಅಪರೂಪ. ಅದರೆ ಅದಕ್ಷ ಮತ್ತು ಭ್ರಷ್ಟ ಸಚಿವರ ಕಳಂಕಗಳು ಅವರು ಸಂಪುಟದಲ್ಲಿರುವ ತನಕ ಮುಖ್ಯಮಂತ್ರಿಗಳಿಗೇ ಅಂಟಿಕೊಳ್ಳುತ್ತಿರುತ್ತದೆ. ಈ ಮುಖ್ಯಮಂತ್ರಿ ಕಾಲಿಗೆ ಗುಂಡುಕಲ್ಲುಗಳನ್ನು ಕಟ್ಟಿಕೊಂಡು ಆಳದ ಹೊಳೆಯಲ್ಲಿ ಈಜಲು ಇಳಿದಿದ್ದಾರೆ. ಬಹುತೇಕ ಸಂದರ್ಭದಲ್ಲಿ ಅದು ಅವರದೇ ಆಯ್ಕೆ ಅಗಿದೆ. ಅದು ಅವರ ಆಯ್ಕೆ ಅಲ್ಲ, ಅದು ಹೇರಿಕೆ ಎಂದು ಹೇಳುವವರು ಆತ್ಮದ್ರೋಹ ಮಾಡಿಕೊಳ್ಳುತ್ತಿದ್ದಾರೆ.

ಸರ್ಕಾರದಲ್ಲಿರುವ ಕೆಲವರು ಮತ್ತವರ ಬೆಂಬಲಿಗರು ಕಳೆದ ಎರಡು ಮೂರು ದಿನಗಳಿಂದ ಡಿಕೆ ರವಿಯ ಸಾವು ಸಂಪೂರ್ಣವಾಗಿ ವೈಯಕ್ತಿಕ ನೆಲೆಯದ್ದು ಎಂದು ಹೇಳುತ್ತಿದ್ದಾರೆ ಮತ್ತು ಸಿಬಿಐ ತನಿಖೆ ಬೇಡ ಎನ್ನುತ್ತಿದ್ದಾರೆ. ಸಿಬಿಐಗೆ ಕೊಟ್ಟರೆ ಸಿಐಡಿ ಪೋಲಿಸರ ಸ್ಥೈರ್ಯ ಕುಗ್ಗುತ್ತದೆ ಎನ್ನುವ ಮಾತೂ ಅಡುತ್ತಿದ್ದಾರೆ. ಮತ್ತು ಅದೇ ಸಂದರ್ಭದಲ್ಲಿ ಬಿಜೆಪಿಯವರು ಸಿಬಿಐ ಅನ್ನು ದುರುಪಯೋಗ ಪಡಿಸಿಕೊಂಡು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಸಂಚಕಾರ ತರುತ್ತಾರೆ ಎನ್ನುವ ಭಯಾತಂಕಗಳನ್ನೂ ತೋಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಸಿಐಡಿ ಪೋಲಿಸರ ಸ್ಥೈರ್ಯ ಕುಗ್ಗುತ್ತದೆ ಎನ್ನುವ ಮಾತಂತೂ ದುರ್ಬಲ ವಾದ. ಎಷ್ಟು ನಿಷ್ಪಕ್ಷಪಾತ ಸಿಐಡಿ ತನಿಖಾ ವರದಿಗಳನ್ನು ಈ ಸರ್ಕಾರ ಒಪ್ಪಿಕೊಂಡಿದೆ ಮತ್ತು ಎಷ್ಟು ತನಿಖೆಗಳಲ್ಲಿ ಮಂತ್ರಿ-ಮುಖ್ಯಮಂತ್ರಿಗಳು ಪ್ರಭಾವ ಬೀರದೆ ಅವರ ಸ್ಥೈರ್ಯ ಮತ್ತು ಪ್ರಾಮಾಣಿಕತೆ ಹೆಚ್ಚಿಸಿದ್ದಾರೆ? ಎಷ್ಟು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಈ ಸರ್ಕಾರ ಉತ್ತೇಜಿಸಿದೆ ಮತ್ತು ಎಷ್ಟು ಭ್ರಷ್ಟ ಮತ್ತು ಅದಕ್ಷ ಅಧಿಕಾರಿಗಳನ್ನು ಈ ಸರ್ಕಾರ ಶಿಕ್ಷಿಸಿದೆ ಅಥವ ಸರಿದಾರಿಗೆ ತಂದಿದೆ?

ಇವರ ಏಕೈಕ ಭಯ ಇರುವುದು ಸಿಬಿಐ ತನಿಖೆಗೆ ಕೊಟ್ಟರೆ ಬಿಜೆಪಿಯವರು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಎನ್ನುವುದು. dkravi-parents-siddharamaiahಮೊಟ್ಟಮೊದಲಿಗೆ ಅಂತಹ ಭಯಕ್ಕೆ ಕಾರಣಕರ್ತರು ಯಾರು? ಕೇಂದ್ರದಲ್ಲಿ ಇತ್ತೀಚೆಗೆ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ನವರೇ ತಾನೆ? ಕೇಂದ್ರ ಸರ್ಕಾರದ ಆಡಳಿತ ಪಕ್ಷ ಸಿಬಿಐ ಅನ್ನು ದುರುಪಯೋಗ ಪಡಿಸಿಕೊಳ್ಳದಂತೆ ಕಾನೂನು ತನ್ನಿ ಎಂದು ಕಾಂಗ್ರೆಸ್ ಮೇಲೆ ಇಡೀ ದೇಶದಲ್ಲಿ ಎಷ್ಟು ಒತ್ತಡ ಇರಲಿಲ್ಲ? ಆ ಬೇಡಿಕೆ ಕೆಟ್ಟ ಬೇಡಿಕೆ ಆಗಿತ್ತೆ? ಜನವಿರೋಧಿ ಆಗಿತ್ತೆ? ಅಪ್ರಜಾಸತ್ತಾತ್ಮಕ ಆಗಿತ್ತೇ? ಅನೈತಿಕವಾದದ್ದಾಗಿತ್ತೆ? ಆಗಿಲ್ಲದಿದ್ದಲ್ಲಿ ಯಾಕೆ ಮಾಡಲಿಲ್ಲ? ನೀವು ಮಾತ್ರ ಅದರ ದುರುಪಯೋಗದ ಉಪಯೋಗ ಪಡೆಯಬೇಕು. ಬೇರೆಯವರು ಅದನ್ನೇ ಪಡೆಯಲು ಹೋದಾಗ ಅಗ ನಿಮಗೆ ಭೂತಕಾಲದ ನಿಮ್ಮ ಅಕೃತ್ಯಗಳು ಮತ್ತು ಜವಾಬ್ದಾರಿಹೀನತೆ ಮರೆತುಹೋದವೇ? ಹೋಗಲಿ, ನಿಮ್ಮ ಪಕ್ಷದ ಕೇಂದ್ರದ ನಾಯಕರ ವಿಚಾರ ಬೇಡ. ಇಲ್ಲಿ ರಾಜ್ಯದಲ್ಲಿ ನೀವು ಸ್ವತಂತ್ರ ತನಿಖಾ ಸಂಸ್ಥೆಯನ್ನೇನಾದರೂ ಕಟ್ಟಲು ಮುಂದಾಗಿದ್ದೀರಾ? ಇದೇ ಸಿದ್ಧರಾಮಯ್ಯನವರು ಈಗ ಅಷ್ಟಿಷ್ಟು ಸ್ವತಂತ್ರವಾಗಿರುವ ಲೋಕಾಯುಕ್ತ ಸಂಸ್ಥೆಯನ್ನೇ ಬಲಹೀನ ಮಾಡುವ ನೀಚಕೃತ್ಯಕ್ಕೆ ಮುಂದಾಗಿದ್ದರು. ನೀವೆಂದಾದರೂ ಪ್ರಬಲ, ಬಲಿಷ್ಟ, ಸ್ವತಂತ್ರ, ಪ್ರಜಾಸತ್ತಾತ್ಮಕ, ಸಂವಿಧಾನಾತ್ಮಕ ಸಂಸ್ಥೆಗಳನ್ನು ಕಟ್ಟಲಾಗಲಿ, ಬಲಗೊಳಿಸಲಾಗಲಿ ಮುಂದಾಗಿದ್ದೀರಾ? ನೀವು ದಾರಿ ತೋರಿಸಿದ್ದರೆ, ಇನ್ನೊಬ್ಬರ ಅನೈತಿಕತೆ ಮತ್ತು ಅಕ್ರಮಗಳನ್ನು ಎತ್ತಿ ತೋರಿಸುವ ನೈತಿಕತೆ ಇರುತ್ತಿತ್ತು. ಜನ ನಿಮ್ಮ ಮಾತುಗಳನ್ನು ವಿನಾಕಾರಣ ಸಂಶಯಪಡದೆ ನಂಬುತ್ತಿದ್ದರು. ನಿಮ್ಮ ವಿಶ್ವಾಸಾರ್ಹತೆ ಕುಗ್ಗಲು ಕಾರಣ ಯಾರು?

ಇನ್ನು ಬಿಜೆಪಿಯವರು ಸಿಬಿಐ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂತಲೇ ಇಟ್ಟುಕೊಳ್ಳೋಣ. ಹೇಗೆ? ನೀವು ತಪ್ಪೇ ಮಾಡಿಲ್ಲ ಎನ್ನುತ್ತಿದ್ದೀರಿ. ಹಾಗಿದ್ದಲ್ಲಿ ಯಾವ ರೀತಿಯ ದುರುಪಯೋಗ ಆಗಬಹುದು? ಕೆಜೆ ಜಾರ್ಜ್‌ರನ್ನು, ಡಿಕೆ ಶಿವಕುಮಾರರನ್ನು, ಕೊನೆಗೆ ಮುಖ್ಯಮಂತ್ರಿಯನ್ನೂ ಸಮನ್ ಮಾಡಬಹುದು ಎನ್ನುವುದಲ್ಲವೇ ನಿಮ್ಮ ಭಯ? ಹಾಗಿದ್ದಲ್ಲಿ, ಡಿಕೆ ರವಿ ತಾನು ಮುಖ್ಯಮಂತ್ರಿಯ ಅಧೀನದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಜಂಟಿ ಕಮಿಷನರ್ ಅಗಿದ್ದಾಗ ಕೆಜೆ ಜಾರ್ಚ್‌ರಿಗೆ ಸಂಬಂಧಿಸಿದ ಕಂಪನಿಯ ಮೇಲೆ ದಾಳಿ ಮಾಡಿದ್ದು ನಿಜ ತಾನೆ? ಆ ದಾಳಿಯ ಮೊದಲು ಅಥವ ನಂತರ ಜಾರ್ಜ್‌ರವರು ರವಿಯ ಮೇಲೆ ಅಕ್ರಮ ಒತ್ತಡಗಳನ್ನು ತರದೇ ಇದ್ದಲ್ಲಿ ಭಯ ಏಕೆ? ಅವರು ಹಾಗೆ ಮಾಡಿದ್ದೇ ಆದಲ್ಲಿ ಅವರಿಗೆ ಶಿಕ್ಷೆಯಾಗಬೇಕೆ ಬೇಡವೆ? ಇದೇ ಪ್ರಶ್ನೆಯನ್ನು ನಾವು ಡಿಕೆ ಶಿವಕುಮಾರರ ವಿಚಾರಕ್ಕೂ ಕೇಳಬಹುದು. ಇನ್ನು ತನ್ನ ಅಧೀನ ಅಧಿಕಾರಿಯಾಗಿದ್ದ ಮನುಷ್ಯ ಅಸಹಜ ಸಾವು ಅಪ್ಪಿದಾಗ ಮೇಲಧಿಕಾರಿಗಳನ್ನೂ ವಿಚಾರಣೆ ಮಾಡುವುದು ಸಹಜ ಪ್ರಕ್ರಿಯೆ. ಹಾಗಾಗಿ ಮುಖ್ಯಮಂತ್ರಿಯನ್ನೂ ಈ ಕಾರಣಕ್ಕೆ ಕರೆದು ವಿಚಾರಣೆ ಮಾಡಿದರೆ ಅದನ್ನು ತಪ್ಪೆಂದು ಭಾವಿಸಬಾರದು. ಸಿಐಡಿ ಸಂಸ್ಥೆಯು ಸ್ವತಂತ್ರವಾಗಿದ್ದ ಪಕ್ಷದಲ್ಲಿ ಅದು ಈಗಾಗಲೆ ಮುಖ್ಯಮಂತ್ರಿಯವರ ಹೇಳಿಕೆಯನ್ನೂ ಪಡೆಯುತ್ತಿತ್ತು. ಪಡೆಯದೇ ಇದ್ದರೆ, ನೀವು ನ್ಯಾಯಪಕ್ಷಪಾತಿಯಾಗಿದ್ದಲ್ಲಿ ಅದನ್ನು ಒತ್ತಾಯಿಸುತ್ತೀರಿ ಸಹ. ನಮ್ಮ ಫ್ಯೂಡಲ್ ವ್ಯವಸ್ಥೆಯ ಅಧಿಕಾರದ ಮದದಿಂದಲೋ, ಅಥವ ದುರುಪಯೋಗದಿಂದಲೋ, ಅಥವ ತನಿಖಾಧಿಕಾರಿಗಳಿಗೇ ಸ್ವತಃ ಧೈರ್ಯ ಇರದೇ ಇರುವುದರಿಂದಲೋ ಇಲ್ಲಿ ಆ ಸಹಜ ಪ್ರಕ್ರಿಯೆ ಸಾಧ್ಯವಾಗಿಲ್ಲ. ಮಾಡಬೇಕಾದ ಕೆಲಸವನ್ನು ಸಿಬಿಐ ಮಾಡಿದರೆ ಅದನ್ನು ದುರುಪಯೋಗ ಎಂದೇಕೆ ಹೇಳಬೇಕು? (ಇನ್ನು ಡಿಕೆ ರವಿಯವರನ್ನು ಕೋಲಾರದಿಂದ ಬೆಂಗಳೂರಿಗೆ ಅವಧಿಗೆ ಮುಂಚೆಯೇ ವರ್ಗ ಮಾಡಲು ಇದ್ದ ಕಾರಣಗಳೇನು, ಆಯಾಮಗಳೇನು ಎನ್ನುವುದೂ ಬಯಲಾಗಬೇಕು. ಅವರು ವರ್ಗಾವಣೆ ಅಗುವುದಕ್ಕೆ ಮೊದಲು ಮತ್ತು ಸಾಯುವ ಮೊದಲು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅವರು ಕೈಗೆ ತೆಗೆದುಕೊಂಡಿದ್ದ ಕೆಲಸಗಳೇನು ಎನ್ನುವುದೂ ಅ ವಿಚಾರಣೆಯಲ್ಲಿ ದಾಖಲಾಗಬೇಕು. ಇವೆಲ್ಲವೂ ಸೋಮವಾರ ಬಹಿರಂಗವಾಗಲಿರುವ ಸಿಐಡಿಯ ಪ್ರಾಥಮಿಕ ತನಿಖಾವರದಿಯಲ್ಲಿ ಇರುತ್ತದೆಯೇ? ಇಲ್ಲವೇ ಇಲ್ಲ. ಅದರೆ ಸಿಬಿಐ ಇದನ್ನು ಮಾಡುತ್ತದೆ ಎನ್ನುವ ವಿಶ್ವಾಸ ನನಗಿದೆ.)

ಇನ್ನು ಇದೇ ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳ ಉಸ್ತುವಾರಿಯಲ್ಲಿ ಬಹಳ ನೀಚವೂ, ಅನೈತಿಕವೂ, ಅಕ್ರಮವೂ, ಗಂಭೀರವೂ ಆದ ಲೋಪವೊಂದನ್ನು ಎಸಗಲಾಗಿದೆ. ತನಿಖೆ ಪ್ರಗತಿಯಲ್ಲಿ ಇರುವಾಗಲೇ ಸತ್ತ ವ್ಯಕ್ತಿಯ ಫೋನ್ ಕರೆಗಳ ವಿವರಗಳನ್ನು ಮತ್ತು ಫೋನ್ ಹಾಗೂ ವಾಟ್ಸ್ಯಾಪ್ ಸಂದೇಶಗಳ ಪ್ರತಿಯನ್ನು ಎಲ್ಲಾ ಮಾಧ್ಯಮ ಸಂಸ್ಥೆಗಳಿಗೆ ತಲುಪಿಸಲಾಗಿದೆ ಎಂಬ ಮಾಹಿತಿ ಇದೆ. ಕೆಲವು ಪತ್ರಕರ್ತರು ಅದರಲ್ಲಿಯ ಕೆಲವು ಭಾಗಗಳನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಕೆಲವು ಪತ್ರಿಕೆಗಳೂ ಪ್ರಕಟಿಸಿವೆ. ಇವೆಲ್ಲಾ ಯಾಕಾಗಿ? ಯಾಕಾಗಿ ಇದನ್ನು ಬಹಿರಂಗ ಪಡಿಸುತ್ತಿದ್ದೀರಾ? ಸತ್ತಿರುವ ಮನುಷ್ಯ ನೀವೆಂದುಕೊಂಡಷ್ಟು ದೊಡ್ಡ ಮನುಷ್ಯ ಅಲ್ಲ, ಹಾಗಾಗಿ ಸಿಐಡಿ ತನಿಖೆ ಸಾಕು, ಸಿಬಿಐ ಬೇಕಾಗಿಲ್ಲ ಎಂದಲ್ಲವೇ ನಿಮ್ಮ ವಾದ? ಆ ಮನುಷ್ಯ ಸತ್ತಿದ್ದು ವೈಯಕ್ತಿಕ ಕಾರಣಕ್ಕೆ ಎಂದು ಕೆಲವರು ಈಗಾಗಲೆ ಷರಾ ಬರೆದುಬಿಟಿದ್ದಾರೆ. ಅದನ್ನು ಹೇಳುವುದಕ್ಕೆ ಮೊದಲು ನೀವು ಫೋರೆನ್ಸಿಕ್ ರಿಪೋರ್ಟ್ ನೋಡಿರುತ್ತೀರಿ ಎಂದು ಭಾವಿಸುತ್ತೇನೆ. ಯಾಕೆಂದರೆ ಎಲ್ಲಕ್ಕಿಂತ ಮೊದಲು ನಾವು ಪ್ರಾಥಮಿಕವಾಗಿ ಪರಿಗಣಿಸಬೇಕಾದ ವಿವರಗಳು ಅದರಲ್ಲಿರುತ್ತವೆ. ಹಾಗಿದ್ದಲ್ಲಿ ಅದು ನಿಮಗೆ ಸಿಕ್ಕಿದೆಯೇ? ಹೇಗೆ ಸಿಕ್ಕಿತು? ಅಥವ ಅದರಲ್ಲಿ ಇದೇ ಇರುತ್ತದೆ ಎಂದು ನಿಮಗೆ ಹೇಗೆ ಗೊತ್ತು? ನೀವೇ ಬರೆಸಿದ್ದೀರಾ? ಇಂತಹ ಪ್ರಶ್ನೆಗಳು ಎದ್ದಾಗ ನಿಮ್ಮ ವಿಶ್ವಾಸಾರ್ಹತೆ ಕುಗ್ಗುತ್ತದೆ ಎನ್ನುವ ಕಲ್ಪನೆಯಾದರೂ ಈ ಪತ್ರಕರ್ತ ಮಿತ್ರರಿಗೆ ಇದೆಯೇ? ಯಾರಿಗಾಗಿ ಇವರು ತಮ್ಮ ವೈಯಕ್ತಿಕ ಗೌರವ ಮತ್ತು ನಂಬಿಕೆಯನ್ನು ಪಣಕ್ಕೊಡ್ಡುತ್ತಿದ್ದಾರೆ? ಜಾರ್ಜ್, ಡಿಕೆ ಶಿವಕುಮಾರ್, ಸಿದ್ಧರಾಮಯ್ಯ,??? (ಇನ್ನು ಮುಖ್ಯಮಂತ್ರಿಗಳು ಪೊಸ್ಟ್‌ಮಾರ್ಟಮ್ ವರದಿಯನ್ನು ಮಾರ್ಪಡಿಸಲು ಹೆಣವನ್ನು ನೋಡುವ ನೆಪದಲ್ಲಿ ವಿಕ್ಟೋರಿಯ ಆಸ್ಪತೆಗೆ ಹೋಗಿದ್ದರು ಎನ್ನುವ ಮಾತನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಇದು ಅತ್ಯಂತ ಬಾಲಿಶ, ಬೇಜವಬ್ದಾರಿಯ, ಕೀಳು ಅಭಿರುಚಿಯ ಮಾತು. ಎಂತೆಂತಹ ಅನರ್ಹರು, ಅಪ್ರಬುದ್ಧರು, ಅಯೋಗ್ಯರು, ಭ್ರಷ್ಟರು, ಕ್ರಿಮಿನಲ್‌ಗಳು ನಮ್ಮ ಮುಖ್ಯಮಂತ್ರಿಗಳಾಗಿದ್ದರು ಎಂದರೆ, ಈಗ ಕರ್ನಾಟದಲ್ಲಿ ಜೀವಂತ ಇರುವ ಎಂಟು ಮಾಜಿ ಮುಖ್ಯಮಂತ್ರಿಗಳ ಪಟ್ಟಿ ನೋಡಿದರೆ ಸಾಕು; ಗಾಬರಿಯಾಗುತ್ತದೆ, ದುಸ್ವಪ್ನದಂತೆ ಕಾಣಿಸುತ್ತದೆ.)

ಇದೇ ಸಂದರ್ಭದಲ್ಲಿ ಕೆಲವರು ಈ ಇಡೀ ಪ್ರಕರಣವನ್ನು ಆರೆಸ್ಸೆಸ್ ಮತ್ತು ಬಿಜೆಪಿಯವರು ಅಂತರ್ಜಾಲದಲ್ಲಿ ಮತ್ತು ಎಸ್ಸೆಮ್ಮೆಸ್‌ಗಳಲ್ಲಿ ಸುಳ್ಳು ಸುದ್ಧಿಗಳನ್ನು ಹಬ್ಬಿಸುವ ಮೂಲಕ ಉದ್ಧೀಪಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಅದಕ್ಕೆ ಅಮಾಯಕ ಜನ ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಪ್ರಶ್ನೆಗಳನ್ನು ಕೇಳುತ್ತಿರುವವರಲ್ಲಿ ಬಹುತೇಕರು ಕಾಂಗ್ರೆಸ್ಸಿಗರು ಮತ್ತವರ ಬೆಂಬಲಿಗರು. ಅವರಿಗೆ ನನ್ನ ಒಂದು ಪ್ರಶ್ನೆ, ಇಂತಹ ಒಂದು ದಾಳಿಯನ್ನು ಎದುರಿಸಲು ನಿಮ್ಮ ಸಿದ್ಧತೆಗಳೇನು? ನಿಮ್ಮ ಹೋರಾಟವನ್ನು ಅನ್ಯರು ಬಂದು ನಿಮಗಾಗಿ ಏಕೆ ಮಾಡಬೇಕು? ಇಂತಹ ದೈನೇಸಿ ಸ್ಥಿತಿಗೆ ಕಾರಣಗಳೇನು? ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೆ ಕನಿಷ್ಟ ಎಂದರೂ ಹತ್ತಾರು ಸಾವಿರ ರೂಪಾಯಿ ಜಾಹಿರಾತು ಕೊಟ್ಟು ನಿಮ್ಮದೇ ಪಕ್ಷದ ಈ ರಾಜ್ಯದ ಪರಮಭ್ರಷ್ಟ ಸಚಿವರೊಬ್ಬರು ಕ್ರಿಯಾಶೀಲರಾಗಿರುವುದು ನಿಮಗೆ ಗೊತ್ತಿಲ್ಲವೇ? ಅವರು ಅಲ್ಲಿ ಎಂದಾದರೂ ಪಕ್ಷವನ್ನಾಗಲಿ ಸರ್ಕಾರವನ್ನಾಗಲಿ ಸಮರ್ಥಿಸಿದ್ದನ್ನು ನೋಡಿದ್ದೀರಾ? ನಿಮ್ಮ ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗದೇ ಇರುವುದಕ್ಕೆ ಕಾರಣಗಳೇನು? ನಿಮ್ಮ ಸರ್ಕಾರದ ಎಡವಟ್ಟು ಕೆಲಸಗಳನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಳ್ಳುವುದು ಎಷ್ಟೊಂದು ಹಿಂಸೆಯ ಕೆಲಸ ಎಂದು ನಿಮಗೆ ಗೊತ್ತಿದೆಯೆ? (ಇದು ಕೆಲವರಿಗೆ ಗೊತ್ತಿದೆ. ಗೊತ್ತಿರಬೇಕಾದವರಿಗೆ ಗೊತ್ತಿಲ್ಲ.)

ಹೀಗೆ ಇಲ್ಲಿಯ ಕಾಂಗ್ರೆಸ್‍ನವರು ಮತ್ತು ಅವರ ಸರ್ಕಾರ ಕಾಲಿಗೆ ಗುಂಡುಕಲ್ಲುಗಳನ್ನು ಕಟ್ಟಿಕೊಂಡು ಹೊಳೆ ದಾಟುವ ಧೈರ್ಯದಲ್ಲಿ ತುಂಬಿದ ಹೊಳೆಗೆ ಹಾರಿದ್ದಾರೆ. ಉಸಿರುಕಟ್ಟುವ ಮುನ್ನ ಅವರು ಅವುಗಳಿಂದ ಕಳಚಿಕೊಂಡು ಮೇಲೆ ಬಂದರೆ ಉಳಿಯುತ್ತಾರೆ. ಇಲ್ಲದಿದ್ದಲ್ಲಿ ಅವರನ್ನು ಯಾರೂ ಕಾಪಾಡಲಾರರು. ಮತ್ತು ಇಂತಹ ಮೂರ್ಖರ ಅಗತ್ಯ ಈ ರಾಜ್ಯದ ಜನತೆಗೆ ಇಲ್ಲ. ಪ್ರಜಾಪ್ರಭುತ್ವದಲ್ಲಿ ಮೂರ್ಖರನ್ನು, ಭ್ರಷ್ಟರನ್ನು, ಅದಕ್ಷರನ್ನು, ಕ್ರಿಮಿನಲ್‌ಗಳನ್ನು ಜನ ಹೊಳೆಗೆ ಎಸೆಯುತ್ತಾರೆ, ಇಲ್ಲವೆ ಕಲ್ಲುಕಟ್ಟಿಕೊಂಡು ಹೊಳೆಗೆ ಇಳಿದವರನ್ನು ಅಲ್ಲಿಯೇ ಸಾಯಲು ಬಿಡುತ್ತಾರೆ. ಅಂತಹವರ ಬಗ್ಗೆ ಕನಿಕರದ ಅಗತ್ಯ ಇಲ್ಲ.

ಆದರೆ, ಈಗಲೂ ನಾನು ಸಿದ್ಧರಾಮಯ್ಯನವರ ಪರ ಆಶಾವಾದಿಯಾಗಿದ್ದೇನೆ. ಅವರಿಗೆ ಮತ್ತು ಅವರ ಪಕ್ಷಕ್ಕೆ ಇನ್ನೂ ಮೂರು ವರ್ಷಗಳ ಅವಧಿ ಇದೆ. ಸಿದ್ಧರಾಮಯ್ಯನವರು ಆ ಮೂರು ವರ್ಷದ ಅವಧಿ ಪೂರೈಸುತ್ತಾರೋ ಇಲ್ಲವೋ ಎನ್ನುವುದು ಕಾಂಗ್ರೆಸ್‌ಗೆ ಬಿಟ್ಟದ್ದು. ಆದರೆ ಮೂರು ವರ್ಷಗಳ ಒಳಗೆಯೇ ಇಲ್ಲಿ ಕಾಂಗ್ರೆಸ್ ಸರ್ಕಾರ ಹೋದರ ಅದು ಖಡಾಖಂಡಿತವಾಗಿ ಸ್ವಯಂಕೃತಾಪರಾಧ. ಆ ಪಕ್ಷದ ಬಗ್ಗೆ ನನಗೆ ನಂಬಿಕೆಯಿಲ್ಲ. ಸಿದ್ಧರಾಮಯ್ಯನವರು ಇನ್ನು ಬಹುಶಃ ಇದಕ್ಕಿಂತ ದೊಡ್ಡ ಹುದ್ದೆಗೆ ಏರಲಾರರು. ಹಾಗಾಗಿ ಇರುವಷ್ಟು ದಿನಗಳ ಕಾಲವಾದರೂ ನಾವು ಅವರ ಪರ ಸದ್ಭಾವನೆ ಉಳಿಸಿಕೊಳ್ಳುವಂತೆ ನಡೆದುಕೊಳ್ಳುವುದು ಸಿದ್ಧರಾಮಯ್ಯನವರಿಗೆ ಬಿಟ್ಟದ್ದು. ಇದನ್ನು ಅವರ ಹಿತೈಷಿಗಳು ಮತ್ತು ಸಲಹೆಕಾರರು ಅವರಿಗೆ ಮುಟ್ಟಿಸುತ್ತಾರೆ ಎನ್ನುವ ಕ್ಷೀಣ ವಿಶ್ವಾಸ ನನ್ನದು.

36 comments

 1. ಮಾನ್ಯ ರವಿ ಕೃಷ್ಣಾರೆಡ್ಡಿಯವರ ಲೇಖನ ಒಬ್ಬ ಮಾಮೂಲೀ ಪೂರ್ವಾಗ್ರಹಪೀಡಿತ ಜನಸಾಮಾನ್ಯನ ಮಾತಿನಂತೆ ಇದೆಯೇ ವಿನಹ ಒಂದು “ರಾಜಕೀಯ ವಿಶ್ಲೇಷಣೆ”ಯಿಂದ ವಿಮುಖವಾಗಿರುವುದನ್ನು ಗಮನಿಸಬೇಕು. ನಕ್ಸಲೈಟರು ಒಬ್ಬ ಪೋಲಿಸ್ ಅಧಿಕಾರಿಯನ್ನು ಗುಂಡಿಟ್ಟು ಕೊಂದರು ಎಂದಿಟ್ಟುಕೊಳ್ಳೋಣ. ಅದರಿಂದ ಪೋಲಿಸ್ ವ್ಯವಸ್ಥೆ ನಾಶವಾಗುತ್ತದೆಯೇನು?. ಆದರೆ ಈ ವ್ಯವಸ್ಥೆಯು ಮನಸ್ಸು ಮಾಡಿದ್ದಲ್ಲಿ ನಕ್ಸಲರನ್ನು ನಿರ್ನಾಮ ಮಾಡಬಹುದು. ಆದರೆ ಬೂರ್ಷ್ವಾ ವ್ಯವಸ್ಥೆಯಲ್ಲಿ “ಖಾಸಗೀ ಮಾಫಿಯಾ”ಗಳ ಕೃಪಾಕಟಾಕ್ಷದಲ್ಲೇ ಇರುವ ಬೂರ್ಷ್ವಾ ಪಕ್ಷಗಳು ಮಾಫಿಯಾ ಸಾಮ್ರಾಜ್ಯದ ವಿರುದ್ಧ ಹೋರಾಡುತ್ತವೆಯೇನು?.
  ಡಿ.ಕೆ.ರವಿಯವರ ಸಾವಾಗಿದೆ. ಅವರ ಸಾವು ಭ್ರಷ್ಟ ವ್ಯವಸ್ಥೆ( ಮಾಫಿಯಾದವರು ಹಾಗೂ ಅವರ ಕೃಪಾಕಟಾಕ್ಷದಲ್ಲಿ ಜೀವಿಸುವವರು)ಯಿಂದ ಆಯಿತೋ ಅಥವಾ ಕೆಲವು ವೈಯುಕ್ತಿಕ ಒತ್ತಡಗಳಿಂದ ನಡೆಯಿತೋ ಎನ್ನುವುದು ಇಲ್ಲಿಯ ಮೂಲಭೂತ ಪ್ರಶ್ನೆ. ಇದು ಮಾಫಿಯಾಪ್ರೇರಿತವಾಗಿದ್ದಲ್ಲಿ ಸಿ.ಬಿ.ಐ.ಯಿಂದಲೂ ಏನೂ ಮಾಡಲು ಸಾಧ್ಯವಿಲ್ಲ, ಸಿ.ಐ.ಡಿ.ಯಿಂದಲೂ ಏನೂ ಮಾಡಲು ಸಾಧ್ಯವಿಲ್ಲ. ಈ ಮಾಫಿಯಾಗಳ ಜೊತೆ ನಿಕಟ ಸಂಬಂಧವುಳ್ಳ ಕೆಲವು ರಾಜಕಾರಣಿಗಳು ದಂಡತೆರಬೇಕಾಗಬಹುದೇ ವಿನಹ ಅದಕ್ಕಿಂತ ಹೆಚ್ಚುನದು ಏನೂ ನಡೆಯದು. ಮಾಫಿಯಾ ಸಾಮ್ರಾಜ್ಯ ನಿರಂತರವಾಗಿ ಮುಂದುವರೆಯುವುದು ಹಾಗೂ ಇನ್ನೂ ಅನೇಕ ಡಿ.ಕೆ.ರವಿಯಂತಹವರು ಬಲಿಪಶುಗಳಾಗುವುದು ನಡೆಯುತ್ತಿರುತ್ತದೆ.
  ಆದ್ದರಿಂದ ಮೂಲಭೂತ ಸವಾಲು ಈ ಮಾಫಿಯಾ ವ್ಯವಸ್ಥೆಯನ್ನು(ಇದು ಖಾಸಗೀ ಒಡೆತನದ ಪರಿಣಾಮವೆಂಬುದನ್ನು ಗಮನಿಸಬೇಕು) ನಿರ್ಮೂಲನಗೊಳಿಸುವುದರ ಕುರಿತು ಇರಬೇಕೇ ವಿನಹ ಯಾವುದೋ ಒಂದು ಬೂರ್ಷ್ವಾ ಪಕ್ಷವನ್ನು ಹೀಗಳೆದ ಮಾತ್ರಕ್ಕೆ ಸಮಸ್ಯೆ ಪರಿಹಾರವಾಗುವುದಿಲ್ಲ.
  ಸಿದ್ಧರಾಮಯ್ಯ ಹಾಗೂ ಅವರ ಸರ್ಕಾರದ ಕುರಿತು ಜನರಲ್ಲಿ ಕೆಟ್ಟ ಅಭಿಪ್ರಾಯವನ್ನು ರೂಪಿಸುವ ಕಾರ್ಯತಂತ್ರವನ್ನು ಬಿ.ಜೆ.ಪಿ.ಹಾಗೂ ಜೆ.ಡಿ.(ಎಸ್)ಗಳು ನಿರಂತರವಾಗಿ ರೂಪಿಸುತ್ತ ಬಂದಿದ್ದು, ಇದರ ಕುರಿತು ಇವರಿಬ್ಬರ ನಡುವೆ ಗುಪ್ತ-ಒಪ್ಪಂದ ಆಗಿರುವ ಹಾಗೇ ತೋರುತ್ತದೆ. ಡಿ.ಕೆ.ರವಿಯವರ ಸಾವಿನ ಕುರಿತು ಸಿ.ಐ.ಡಿ.ಯು ತನ್ನ ಪ್ರಾಥಮಿಕ ವರದಿ ನೀಡುವ ಮೊದಲೇ ಇದನ್ನು ಸಿ.ಬಿ.ಐ.ಗೆ ವಹಿಸಬೇಕು ಎನ್ನುವುದರ ಕುರಿತು ಈ ಎರಡು ಪಕ್ಷಗಳೂ ನಡೆಸುತ್ತಿರುವ ಕಾರ್ಯತಂತ್ರಗಳನ್ನು ನೋಡಿದರೆ ಸಾಕು ಅವರ ಮನದಲ್ಲಿರುವುದೇನು ಎನ್ನುವುದು ಗೊತ್ತಾಗುತ್ತದೆ. ಇದನ್ನು ಅರಿತಿರುವ ಸಿದ್ಧರಾಮಯ್ಯನವರು ಮೊದಲು ಸಿ.ಐ.ಡಿ. ವರದಿ ಬರಲಿ ಆಮೇಲೆ ನೋಡೋಣ ಎನ್ನುವ ನಿಲುವನ್ನು ತಳೆದಿರುವುದು ಸರಿಯಾದ ನಿಲುವಾಗಿದ್ದು ಇದರ ಕುರಿತು “ರಾಜಕೀಯ ಜ್ಞಾನ”ವುಳ್ಳವರು ಗೊಂದಲಕ್ಕೆ ಬೀಳಬಾರದು.
  ಎಮ್.ಸಿ. ಡೋಂಗ್ರೆ

  1. ಸರ್ಕಾರದ ಚುಕ್ಕಾಣಿ ಹಿಡಿದಿರುವವರ ಪಾತ್ರವಿಲ್ಲವೇ ಇಲ್ಲ ಎಂದಾದಲ್ಲಿ ತನಿಖೆ ಸಿ.ಬಿ.ಐ ಮಾಡಿದರೆ ಯಾಕೆ ಅಂಜಬೇಕು ಎಂಬುದೇ ಮೂಲಭೂತ ಪ್ರಶ್ನೆ. ತನಿಖೆ ಯಾರೇ ಮಾಡಲಿ ಇಲ್ಲಿರುವುದು ತನಿಖಾದಿಗಳ ವಿಶ್ವಾಸಾಹರತೆಯ ಪ್ರಶ್ನೆ. ಇಲ್ಲಿ ಯಾರು ಯಾರನ್ನೂ ಸಮರ್ಥಿಸುವ ಅಗತ್ಯವಿಲ್ಲ. ಸತ್ತಿರುವ ವ್ಯಕ್ತಿ ಒಬ್ಬ ಜಿಲ್ಲ ಅಧಿಕಾರಿ ಮತ್ತು ಮಾಜಿಸ್ಟ್ರೇಟ್ ಮತ್ತು ಆ ಸಾವಿನ ಸಂಧರ್ಭದಲ್ಲಿ ಪ್ರಮುಖ ಹೆಚ್ಚುವರಿ ಆಯುಕ್ತ ಆಗಿರುವುದರಿಂದ , ಸಾವಿಗೆ ಮೊದಲು ಇಲಾಖಾ ಸಖ್ಯಗಳನ್ನೇ ಬಿಟ್ಟು ಸತ್ತಿರುವದರಿಂದ ಆ ಸಾಕ್ಷ್ಯಗಳು ಅಥವಾ ಸಾವಿಗೆ ಸಂಭಂದಿಸಿದ ಬುಧ್ಧಿವಂತ ಸಾಕ್ಷಿಗಳು ಸರ್ಕಾರ ಮತ್ತಷ್ಟು ತಪ್ಪು ಮಾಡುವದನ್ನೇ ಕಾಯುತ್ತಿರಬಹುದು. ಇದನ್ನು ಅರಿಯದೆ ಸಿದ್ಧರಾಮಯ್ಯನವರು ತನಿಖೆಯನ್ನು ಯಾರಿಗೆ ವಹಿಸಲಿ ಮತ್ತು ಈಗಾಗಲೇ ಅಧಿಕಾರಿಗಳು ಎಲ್ಲಾ ಹಂತದಲ್ಲಿ ಎಡವಿರುವುದರಿಂದ ಕೇಸ್ ನ್ಯಾಯಾಲಯದ ಹಂತ ತಲುಪಿದ ಮೇಲೆ , ತನಿಖೆ ಸಿ.ಬಿ.ಐ ಯಾದರು ಮಾಡಿರಲಿ , ಸಿ.ಓ.ಡಿ.ಯಾದರು ಮಾಡಿರಲಿ, ನನ್ನ ಆಡಳಿತ ಅನುಭವದ ಪ್ರಕಾರ, ಹಲವಾರು ಅಧಿಕಾರಿಗಳಿಗೆ, ಇಲಾಖ ಮುಖ್ಯಸ್ಥರು ಮತ್ತು ಹಿರಿಯ ರಾಜಕಾರಣಿಗಳ ಪಾಲಿಗೆ ನುಂಗಲಾರದ ತುತ್ತು ಮತ್ತು ಭಾಗಿಯಾಗಿರಲಿ ಇಲ್ಲದರಲಿ ಕೆಲವು ರಾಜಕಾರಣಿಗಳ ರಾಜಕೀಯ ಜೀವನಕ್ಕೆ ಕೊನೆ ಹಾಡಲಿದೆ. ಈ ಪ್ರಕರಣ ಸಿಧ್ಧರಾಮಯ್ಯನವರ ರಾಜಕೀಯ ಜೀವನದ ಪಾಲಿಗೆ ಕಪ್ಪು ಚುಕ್ಕೆಯಾಗಲಿದೆ ಮತ್ತು ಅಷ್ಟೇ ಅಲ್ಲ ಇಲ್ಲಿಂದ ಅವರು ಅಧಿಕಾರದ ಮೆಟ್ಟಿಲನ್ನು ಕೆಳಗಿಳಿಯಲಾರಂಬಿಸಿರುವುದು ದ್ರುಗ್ಗೋಚರವಾಗುತ್ತಿದೆ ; ಕಾಂಗ್ರೆಸ್ಸನ್ನು ಇನ್ನು ಕಾಪಾಡುವವರು ಯಾರು ಇಲ್ಲ. ಆದರೆ ಈ ಪರಿಸ್ಥಿತಿಯ ಲಾಭ ಪಡೆಯುವ ಸ್ಥಿತಿಯಲ್ಲಿ ಬಿ.ಜೆ.ಪಿ. ನಾಯಕರಿಲ್ಲ ಮತ್ತು ಜನರ ವಿಶ್ವಾಸ ಕಳೆದುಕೊಂಡಿರುವ ಜೆ.ಡಿ.ಎಸ ನಂಬುವ ಸ್ಥಿತಿಗೆ ಇನ್ನೂ ನಮ್ಮ ಜನ ತಲುಪಿಲ್ಲ. ನೋಡಬೇಕು , ಮುಂದೇನಾಗ್ವುದೋ?

 2. ಈಗ ಮಾಧ್ಯಮಗಳಲ್ಲಿ ಬಯಲಾದ ಮಾಹಿತಿಗಳನ್ನು ನಂಬುವುದಾದರೆ ಡಿ ಕೆ ರವಿ ಅವರ ಸಾವು ಆತ್ಮಹತ್ಯೆಯಂತೆ ಕಂಡುಬರುತ್ತದೆ ಮತ್ತು ಇದು ವೈಯಕ್ತಿಕ ಕಾರಣದಿಂದ ನಡೆದಿರುವ ಸಂಭವವೇ ಕಂಡುಬರುತ್ತದೆ. ಯಾವುದೇ ಮಾಫಿಯಾ ಅಥವಾ ಅಧಿಕಾರಸ್ಥರ ಒತ್ತಡ, ಬೆದರಿಕೆ ಆತ್ಮಹತ್ಯೆಗೆ ಕಾರಣವಾಗಲಾರದು. ಒಂದು ವೇಳೆ ಅಂಥ ಒತ್ತಡ ಕಾರಣವಾಗಿದ್ದರೆ ಕನಿಷ್ಠ ಒಂದು ಡೆತ್ನೋಟ್ ಇಟ್ಟಿರುತ್ತಿದ್ದರು. ಇದು ಕೊಲೆ ಎಂದು ನಂಬಲು ಸೂಕ್ತ ಸಾಕ್ಷ್ಯಗಳು ಕಂಡುಬರುತ್ತಿಲ್ಲ ಏಕೆಂದರೆ ರವಿಯವರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಲಾಕ್ ಆದ ಕೋಣೆಯೊಳಗೆ ಕಂಡುಬಂದಿದೆ. ಕೊಲೆಗಾರರಿಗೆ ಲಾಕ್ ಆದ ಕೋಣೆಯೊಳಗೆ ಪ್ರವೇಶ ಹೇಗೆ ಸಾಧ್ಯ ಮತ್ತು ಅವರು ಕೊಲೆ ಮಾಡಿ ದೇಹವನ್ನು ನೇಣು ಹಾಕಿದ ಸ್ಥಿತಿಯಲ್ಲಿ ಇಟ್ಟು ಒಳಗಿನಿಂದ ಲಾಕ್ ಮಾಡಿದ ಸ್ಥಿತಿಯಲ್ಲಿ ಹೊರಗೆ ಹೋಗಲು ಹೇಗೆ ಸಾಧ್ಯ? ಮಾಫಿಯಾಗಳು ಹಾಗೂ ಭೂಗತ ಲೋಕದ ಪಾತಕಿಗಳು ಕೊಲ್ಲುವುದಾದರೆ ನೇರವಾಗಿ ಗುಂಡಿಟ್ಟು ಕೊಲ್ಲುವುದೇ ಕಂಡುಬರುವುದು. ರವಿಯವರಿಗೆ ಕಾರ್ಯನಿರ್ವಹಿಸಲು ಅಸಾಧ್ಯವಾದ ಒತ್ತಡ ಮಾಫಿಯಾಗಳಿಂದ ಅಥವಾ ಅಧಿಕಾರಸ್ಥರಿಂದ ಇದ್ದಿರಲಾರದು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಅಂಥ ಬೆದರಿಕೆ ಇದ್ದರೆ ಅವರು ಅದನ್ನು ಮಾಧ್ಯಮಗಳ ಮುಂದೆ ಹೇಳಿಕೊಳ್ಳದೆ ಇರುತ್ತಿರಲಿಲ್ಲ. ಅಧಿಕಾರಸ್ಥರು ದಿಟ್ಟ ಅಧಿಕಾರಿಗಳನ್ನು ಹೆಚ್ಚೆಂದರೆ ವರ್ಗ ಮಾಡಬಹುದಷ್ಟೆ, ಕೆಲಸದಿಂದ ತೆಗೆದುಹಾಕಲು ಸಾಧ್ಯವಿಲ್ಲ. ಹೀಗಾಗಿ ಅಧಿಕಾರಸ್ಥರ ಒತ್ತಡ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಇರುವ ಸಾಧ್ಯತೆ ಇಲ್ಲ. ಹೆಚ್ಚೆಂದರೆ ಇದರಿಂದ ರೋಸಿಹೋಗಿ ಸರ್ಕಾರೀ ಕೆಲಸಕ್ಕೆ ರಾಜೀನಾಮೆ ಕೊಡುವ ಹಾಗೂ ಬದುಕಿಗೆ ಬೇರೆ ಮಾರ್ಗಗಳನ್ನು ಕಂಡುಕೊಳ್ಳುವ ಆಯ್ಕೆ ಇದ್ದೇ ಇರುತ್ತದೆ. ಈಗ ಬಹಿರಂಗವಾಗಿರುವ ವಿಚಾರಗಳನ್ನು ಗಮನಿಸಿದರೆ ಇದು ವೈಯಕ್ತಿಕ ಜೀವನದ ವಿಫಲತೆಯ ಕಾರಣದಿಂದ ಉಂಟಾಗಿರುವ ತಡೆಯಲಾಗದ ಖಿನ್ನತೆಯ ಕಾರಣದಿಂದ ನಡೆದು ಹೋದ ಆತ್ಮಹತ್ಯೆಯಂತೆ ಕಂಡುಬರುತ್ತದೆ.

  ಸದ್ಯ ರಾಜ್ಯದ ಆಡಳಿತವು ಭ್ರಷ್ಟಾಚಾರವನ್ನು ಹತ್ತಿಕ್ಕುವಲ್ಲಿ ವಿಫಲವಾದ ವಿಚಾರದ ಬಗ್ಗೆ ಹೇಳುವುದಾದರೆ ಇದು ನಮ್ಮ ವ್ಯವಸ್ಥೆಯ ವೈಫಲ್ಯ. ಬಿತ್ತಿದಂತೆ ಬೆಳೆ ಪ್ರಕೃತಿ ನಿಯಮ. ಬೇವನ್ನು ಬಿತ್ತಿ ಮಾವನ್ನು ಪಡೆಯಲು ಸಾಧ್ಯವಿಲ್ಲ. ಅದೇ ರೀತಿ ರಾಜಕೀಯ ಪಕ್ಷಗಳನ್ನು ನಿರ್ವಹಿಸಲು ಹಾಗೂ ಚುನಾವಣೆ ಎದುರಿಸಲು ವಿವಿಧ ಮಾಫಿಯಾಗಳ, ಲಾಬಿಗಳ ಹಣವನ್ನು ಬಳಸುತ್ತಿರುವವರೆಗೆ ಎಷ್ಟೇ ಒಳ್ಳೆಯ ವ್ಯಕ್ತಿ ಅಧಿಕಾರಕ್ಕೆ ಬಂದರೂ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ. ಪಕ್ಷಕ್ಕೆ ಹಾಗೂ ಚುನಾವಣೆಗೆ ಹಣ ಕೊಟ್ಟ ಮಾಫಿಯಾಗಳು, ಲಾಬಿಗಳು ಹಾಗೂ ಬಂಡವಾಳಶಾಹಿಗಳು ಒಳ್ಳೆಯ ಆಡಳಿತ ನಡೆಸಲು ಬಿಡುವುದಿಲ್ಲ. ಅವರನ್ನು ಮೀರಿ ಆಡಳಿತ ನಡೆಸಲು ಮುಂದಾದರೆ ಅಂಥ ವ್ಯಕ್ತಿಗಳನ್ನು ಹೇಗೆ ಕೆಳಗೆ ಇಳಿಸಬೇಕೆಂದು ಮಾಫಿಯಾಗಳಿಗೆ, ಲಾಬಿಗಳಿಗೆ ಹಾಗೂ ಬಂಡವಾಳಶಾಹಿಗಳಿಗೆ ಚೆನ್ನಾಗಿ ಗೊತ್ತಿರುತ್ತದೆ. ಹೀಗಾಗಿ ಜನರಿಗೆ ಉತ್ತಮ ಆಡಳಿತ ಹಾಗೂ ಉತ್ತಮ ಪರಿಸರ ಬೇಕು ಎನ್ನುವುದಾದರೆ ವ್ಯವಸ್ಥೆಯನ್ನು ಬದಲಾಯಿಸಲು ಏನು ಮಾಡಬೇಕು ಎಂಬ ಬಗ್ಗೆ ಯೋಚಿಸಬೇಕು.

  ಸಿಬಿಐ ತನಿಖೆಯ ಬಗ್ಗೆ ಹೇಳುವುದಾದರೆ ಧರ್ಮಸ್ಥಳದ ಸುಕನ್ಯ ಅತ್ಯಾಚಾರ ಹಾಗೂ ಕೊಲೆಯ ತನಿಖೆಯನ್ನು ಸಿಬಿಐಗೆ ಕೊಟ್ಟು ಎಷ್ಟು ಸಮಯ ಕಳೆದುಹೋಗಿದೆ, ಆ ತನಿಖೆಯ ಪರಿಣಾಮ ಏನು ಎನ್ನುವುದು ಯಾರಿಗಾದರೂ ತಿಳಿದಿದೆಯೇ ? ಆ ವಿಚಾರ ಈಗ ಗಾಳಿಯಲ್ಲಿ ಲೀನವಾಗಿ ಹೋಗಿದೆ.

 3. ರವಿಯ ಲೇಖನ ಸತ್ಯಕ್ಕೆ ಹತ್ತಿರವಾಗಿದೆ.
  ಇಲ್ಲಿ ಪ್ರಮುಖವಾದ ವಿಷಯವೇನೆ೦ದರೆ ಒ೦ದು ಸರ್ಕಾರ ಜನತೆಯ ಆಶಯಗಳ ಪರವಾಗಿದೆಯೋ, ಇಲ್ಲವೋ? ಎನ್ನುವುದು ಮಾತ್ರ.. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಸ೦ಪೂರ್ಣವಾಗಿ ಸೋತಿದ್ದಾರೆ.
  ಸಿದ್ದರಾಮಯ್ಯನವರ ಸರ್ಕಾರ ಈಗಲಾದರೂ ಹಟ ಬಿಟ್ಟು ಸಾಮನ್ಯ ಜನರ ಭಾವನೆಗಳಿಗೆ ಗೌರವ ಕೊಡಲಿ.

 4. ಆನಂದಪ್ರಸಾದ್ ಅವರಿಗೆ— ನಿಮ್ಮ ಪ್ರತಿಕ್ರಿಯೆಯಲ್ಲಿ ಕನ್ನಡದ ಒಂದು ಟಾಬ್ಲ್ಯಾಡ್ ನ ವರದಿಯ ಗಾಢ ಪ್ರಭಾವ ಎದ್ದು ಕಾಣುತ್ತಿದೆ.ಪತ್ರಿಕೆಗಳಲ್ಲಿ ಬರೆಯುವವರು ತಾವೇ ಜಾಣ ಜಾಣೆಯರು ಎಂದುಕೊಂಡಿರಬಹುದು. ಆದರೆ ಓದುವವರು ಕಿವಿಯಲ್ಲಿ ಹೂವಿಟ್ಟು ಕೊಂಡರೆ ಕಷ್ಟ.

  1. @ ಶ್ರೀರಂಗ – ನೀವು ಹೇಳಿದ ಟ್ಯಾಬ್ಲಾಯ್ಡ್ ಪತ್ರಿಕೆಯಲ್ಲಿ ಬಂದ ವಿಷಯ ಏನು ಎಂದು ನನಗೆ ಗೊತ್ತಿಲ್ಲ. ನಾನು ಬೇರೆ ಕೆಲವು ಪತ್ರಿಕೆಗಳಲ್ಲಿ ಹಾಗೂ ವೆಬ್ ಸೈಟುಗಳಲ್ಲಿ ಬಂದ ವಿಷಯ ಆಧರಿಸಿ ನನ್ನ ಅನಿಸಿಕೆ ಹೇಳಿದ್ದೇನೆ. ಗೂಗಲ್ ನ್ಯೂಸ್ ವೆಬ್ತಾಣದಲ್ಲಿ ಡಿ ಕೆ ರವಿಯವರ ಐಎಎಸ್ ತರಬೇತಿ ಅವಧಿಯಲ್ಲಿ ಬ್ಯಾಚ್ಮೇಟ್ ಆಗಿದ್ದ ಮಹಿಳಾ ಐಎಎಸ್ ಅಧಿಕಾರಿಯ ಹೆಸರನ್ನು ಹಾಕಿ ನೋಡಿ ಬರುವ ಹುಡುಕುವಿಕೆಯನ್ನು ನೋಡಿ. ಈ ವಿಷಯ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪತ್ರಿಕೆ, ವೆಬ್ಸೈಟುಗಳಲ್ಲಿ ಬಂದಿದೆ. ಇದನ್ನು ಹೈಕೋರ್ಟ್ ಆಗಲಿ, ಸುಪ್ರೀಂಕೋರ್ಟ್ ಆಗಲಿ ತಡೆಯಲು ಸಾಧ್ಯವಿಲ್ಲ. ವಿಷಯವನ್ನು ತಿಳಿಯುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆಯ ಹಕ್ಕು. ಇದನ್ನು ನ್ಯಾಯಾಂಗ ತಡೆಯುವಂತಿಲ್ಲ. ಜನಸಮೂಹದ ಉನ್ಮಾದವೇ ಸತ್ಯ ಎಂದು ಹೇಳಲು ಸಾಧ್ಯವಿಲ್ಲ. ಜನಸಮೂಹ ವಿವೇಕದಿಂದ ವರ್ತಿಸುತ್ತದೆ ಎಂದು ಕೂಡ ಹೇಳುವಂತಿಲ್ಲ. ಧಾರ್ಮಿಕ ವಿಷಯಗಳಲ್ಲಿ ಜನಸಮೂಹ ವದಂತಿಗಳನ್ನು ನಂಬಿ ಅತ್ಯಂತ ಉದ್ರೇಕದಿಂದ ವರ್ತಿಸಿ ಭಾರೀ ಹಿಂಸಾಚಾರಕ್ಕೂ ಕಾರಣವಾಗುವುದು ಇದೆ. ಈಗ ರಾಜ್ಯದಲ್ಲಿ ಉಂಟಾಗಿರುವ ಉದ್ರೇಕವೂ ಇದೇ ರೀತಿಯ ಒಂದು ಉದ್ರೇಕವೇ ಆಗಿದೆ.

   ಫೋನ್ ಕರೆ, ಎಸ್ಎಂಎಸ್, ಮಿಂಚಂಚೆ, ವಾಟ್ಸಪ್ ನಂಥ ದಾಖಲೆಗಳನ್ನು ತಿರುಚಲು ಸಾಧ್ಯವಿಲ್ಲ. ಇಂಥ ಆಧಾರಗಳನ್ನು ಇಟ್ಟುಕೊಂಡು ಪೊಲೀಸರು ತನಿಖೆ ನಡೆಸುತ್ತಿರುವಾಗ ಮತ್ತು ಅದರ ಆಧಾರದಲ್ಲಿ ವಾಸ್ತವ ಸಂಗತಿಗಳನ್ನು ಹೇಳುತ್ತಿರುವಾಗ ರಾಜ್ಯದಲ್ಲಿ ಉದ್ರೇಕದ ಸ್ಥಿತಿ ನಿರ್ಮಾಣ ಮಾಡಲು ಹಾಗೂ ಅದರ ರಾಜಕೀಯ ಲಾಭ ಪಡೆಯಲು ಹವಣಿಸುವುದು ಸೂಕ್ತವಲ್ಲ.

   ಕೊಲೆ ಮಾಡುವವರು ಭಾರೀ ಭದ್ರತೆ ಇರುವ, ಸಿಸಿ ಕ್ಯಾಮೆರಾ ಅಳವಡಿಸಿರುವ ಅಪಾರ್ಟ್ಮೆಂಟ್ ಅನ್ನು ಆಯ್ಕೆ ಮಾಡುತ್ತಾರೆ ಎಂದು ನನಗೆ ಅನಿಸುವುದಿಲ್ಲ. ನಾವು ವೈಜ್ಞಾನಿಕವಾಗಿ ಯೋಚಿಸಿದರೆ ಉನ್ಮಾದ ಹಾಗೂ ಸಮೂಹಸನ್ನಿಗೆ ಒಳಗಾಗುವ ಪ್ರಮೇಯ ಬರುವುದಿಲ್ಲ.

   1. “ಕೊಲೆ ಮಾಡುವವರು ಭಾರೀ ಭದ್ರತೆ ಇರುವ, ಸಿಸಿ ಕ್ಯಾಮೆರಾ ಅಳವಡಿಸಿರುವ ಅಪಾರ್ಟ್ಮೆಂಟ್ ಅನ್ನು ಆಯ್ಕೆ ಮಾಡುತ್ತಾರೆ ಎಂದು ನನಗೆ ಅನಿಸುವುದಿಲ್ಲ.”

    Are u a crime branch investigating officer? Or are you speaking from your own experience?

    1. ಆನಂದ ಪ್ರಸಾದ್ ಅವರೇ, ಸೀ ಬೀ ಐ ನವರಿಂದ ನಿಷ್ಪಕ್ಷಪಾತವಾದ ತನಿಖೆ ನಡೆಯಲಿ, ಆಗ ಸತ್ಯ ಏನೆಂದು ಎಲ್ಲರಿಗೂ ಗೊತ್ತಾಗುತ್ತದೆ. ಅಲ್ಲಿಯವರೆಗೆ ತಮ್ಮ ಊಹಾಪೋಹಗಳಿಗೆ ಕಡಿವಾಣ ಹಾಕಿ ತಮ್ಮ ಬುದ್ಧಿವಂತಿಕೆಯನ್ನು ಬೇರೆ ವಿಷಯಗಳ ಮೇಲೆ ಬಳಸಿ.

     1. ಸಿಬಿಐ ತನಿಖೆ ಆಗಲಿ, ಆದರೆ ಮುಗಿಯಲು ಎಷ್ಟು ವರ್ಷ ಬೇಕೋ ಯಾರಿಗೆ ಗೊತ್ತು? ಅಷ್ಟರವರೆಗೆ ಜನರ ಬಾಯಿಗೆ ಬೀಗ ಹಾಕಲು ಸಾಧ್ಯವಿಲ್ಲ. ಹೀಗಾಗಿ ಊಹಾಪೋಹಗಳು ಸಹಜ. ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಸಿಬಿಐ ತನಿಖೆಗೆ ವಹಿಸಿ ಸುಮಾರು ಸಮಯ ಆಯಿತು. ಅದು ಮುಗಿದಿದೆಯೇ, ಮುಗಿದಿದ್ದರೆ ಅದರ ಫಲಿತಾಂಶ ಏನು, ಮುಗಿಯದಿದ್ದರೆ ಇನ್ನು ಎಷ್ಟು ವರ್ಷ ಬೇಕಾದೀತು ಎಂದು ಮಾಧ್ಯಮಗಳು ತಿಳಿಸಿದರೆ ಉಪಕಾರವಾದೀತು.

     2. “ಹೀಗಾಗಿ ಊಹಾಪೋಹಗಳು ಸಹಜ”

      Your guesswork has no significance other than being laughing stock. Why make someone’s death a subject of your time pass? There are more important subjects to discuss, for example, article 370.

   2. ಜನಸಮೂಹದ ಉನ್ಮಾದವೇ ಸತ್ಯ ಎಂದು ಹೇಳಲು ಸಾಧ್ಯವಿಲ್ಲ. ಜನಸಮೂಹ ವಿವೇಕದಿಂದ ವರ್ತಿಸುತ್ತದೆ ಎಂದು ಕೂಡ ಹೇಳುವಂತಿಲ್ಲ. ಧಾರ್ಮಿಕ ವಿಷಯಗಳಲ್ಲಿ ಜನಸಮೂಹ ವದಂತಿಗಳನ್ನು ನಂಬಿ ಅತ್ಯಂತ ಉದ್ರೇಕದಿಂದ ವರ್ತಿಸಿ ಭಾರೀ ಹಿಂಸಾಚಾರಕ್ಕೂ ಕಾರಣವಾಗುವುದು ಇದೆ. ಈಗ ರಾಜ್ಯದಲ್ಲಿ ಉಂಟಾಗಿರುವ ಉದ್ರೇಕವೂ ಇದೇ ರೀತಿಯ ಒಂದು ಉದ್ರೇಕವೇ ಆಗಿದೆ.-
    ಅದ್ಭುತ ಗುರುವೇ

 5. CBI should be a independent investigation agency and it should not come under Central govt, that is when one can trust the outcome of their investigation .

  Ravi you summarized everything in the following sentence, I am sure sidharamiah realizes his mistake now .
  ಉಗುರಲ್ಲಿ ಹೋಗುವುದಕ್ಕೆ ಕೊಡಲಿ ಬಳಸಬೇಕಾಗಿ ಬಂದಿದೆ.

  Its a shame that opposition party is taking advantage of the situation to settle scores with there rivals and they are using innocent people as pawns (including DK Ravi’s old parents).

 6. ಮಾನ್ಯರೇ,
  ಅಗಲಿದ ಅಧಿಕಾರಿಯ ಮೃತ್ಯುವಿನ ಕುರಿತು ನಿಷ್ಪಕ್ಷಪಾತ ತನಿಖೆ ಆಗತಕ್ಕದ್ದು, ಸಿ ಓ ಡಿ ಆಗಲಿ ಸಿ ಬಿ ಐ ಆಗಲಿ. ಹಾಗೂ ತನಿಖೆಯಲ್ಲಿ ರಾಜಕಾರಣಿಗಳು ತಲೆ ಹಾಕಕೂಡದು, ಆಡಳಿತ ಪಕ್ಷದವರಾಗಲಿ ವಿರೋಧ ಪಕ್ಷದವರಾಗಲಿ. ವೈಯಕ್ತಿಕ ಜೀವನದ ಖಾಸಗಿ ವಿಷಯಗಳನ್ನು ಚರ್ಚೆ ಮಾಡಕೂಡದು, ಮಾಧ್ಯಮಗಳಾಗಲಿ ಬ್ಲಾಗುಗಳ ಓದುಗರಾಗಲಿ.

 7. ರವಿಯವರ ಸಾವು ಕೊಲೆಯೋ ಆತ್ಮಹತ್ಯೆಯೋ ಅಂತೂ ಒಬ್ಬ ದಕ್ಷ ಜನಪರ ಅಧಿಕಾರಿಯನ್ನು ಕಳೆದುಕೊಂಡಿದ್ದೇವೆ. ರಾಜಕೀಯ ಪಕ್ಷಗಳು ಹೀಗಲ್ಲದೆ ಬೇರೆ ರೀತಿ ಪ್ರತಿಕ್ರಿಸುತ್ತಾವೆಂದು ನಿರೀಕ್ಷಿಸುವದೇ ಬೇಡ ಇದಕ್ಕೆ ಭಾರತದ ಯಾವ ರಾಜಕೀಯ ಪಕ್ಷವೂ ಹೊರತಲ್ಲ (ಎಎಪಿಗೆ ಸಧ್ಯಕ್ಕೆ ರಿಯಾಯಿತಿ ನೀಡಿದ್ದೇನೆ..!) ಮಾದ್ಯಮಗಳು ಉಧ್ಯಮಗಳಾಗಿರುವುದರಿಂದ ಆತಿರಂಜನೆ ಟಿಆರ್ಪಿಗಳಲ್ಲಿ ಅನ್ನ ಕಾಣುತ್ತಿವೆ,
  ಆದರೆ ನಮ್ಮಂತವರ ತಕರಾರಿರುವುದು ಸಿದ್ಧರಾಮಯ್ಯನವರ ಸರ್ಕಾರ ಈ ಸಂಧರ್ಭವನ್ನು ನಿರ್ವಹಿಸಿದ ರೀತಿಗೆ. ತನ್ನ ಅಪ್ರಭುದ್ಧ ಅವಸರದ ಹೇಳಿಕೆಗಳಿಂದ ಜನರಲ್ಲಿ ಅನುಮಾನಕ್ಕೆ ಕಾರಣವಾಗಿ ಸಮಸ್ಯೆಯನ್ನು ಮೈಮೇಲೆಳೆದುಕೊಂಡ ರೀತಿಗೆ

 8. ಈ ಲೇಖನ ಶುದ್ದ ಪೂರ್ವಾಗ್ರಹ ಪೀಡಿತ ಮತ್ತು ಇದಕ್ಕೆ ಪೂರಕವಾಗಿ ಬಂದ ಕೆಲವು ಕಮೆಂಟುಗಳು ಸಹಾ ! ದಿ! ರವಿಯವರಿಗೆ ನನ್ನ ಹಾರ್ದಿಕ ಶ್ರದ್ದಾಂಜಲಿ ,ಅವರ ಪ್ರಾಮಾಣಿಕತೆಗೆ ,ದಕ್ಸತೆಗೆ ಒಂದು ಸಲ್ಯೂಟ್ . ಇನ್ನು ಇಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ ಇದರಲ್ಲಿ ರಾಜಕೀಯ ಆಡುತ್ತಿದೆ . ಯಾವುದೇ ಸರಕಾರದ ನೋರ್ಮನಂತೆ ಸಿದ್ದರಾಮಯ್ಯ ಸಿ.ಎಯ್ .ಡಿ ತನಿಖೆಗೆ ಪ್ರಖರಣವನ್ನು ಒಪ್ಪಿಸಿದ್ದಾರೆ . ಪ್ರಾಥಮಿಕ ವರದಿ ಬರುವ ವರೆಗಾದರೂ ಕಾಯದೆ ,ಸಿ.ಬಿ.ಎಯ್ ಎಂದು ಎಲ್ಲರೂ ಹುಚ್ಚು ಕುಣಿತ ಸುರು ಮಾಡಿದ್ದಾರೆ .ಎಲ್ಲಾ ತನಿಖಾ ಪ್ರಕರಣವನ್ನು ಸಿ.ಬಿ.ಎಯ್ ಗೆ ಒಪ್ಪಿಸುದಾದರೆ ರಾಜ್ಯ ಸರಕಾರದ ತನಿಖಾ ಏಜೆನ್ಸಿ ಗಳು ಯಾತಕ್ಕೆ ? ಎಲ್ಲಾ ಆಳುವ ಸರಕಾರಗಳೂ ಸಿ.ಬಿ.ಎಯ್ ನ್ನು ತಮ್ಮ ದಾಳವಾಗಿ ಬಳಸಿದ್ದು ಸಿದ್ದರಾಮಯ್ಯ ನವರಿಗೆ ಚೆನ್ನಾಗಿ ಗೊತ್ತು . ಬಿಜೆಪಿ ಸರಕಾರ ಸಹಾ ಈ ಸಿಕ್ಕಿದ ಅವಕಾಶವನ್ಕಳೆದುಕೊಳ್ಳದೆ,ಸಿದ್ದರಾಮಯ್ಯನವರಿಗೆ ಟಾಂಗು ಕೊಡಲು ಕಾದು ನಿಂತಿದೆ . ಆ ಬಲೆಗೆ ಬೀಳದೇ ತಪ್ಪಿಸಲು ಅವರು ಹೆಣಗಾಡುತ್ತಾ ಇದ್ದಾರೆ . ಶಶಿ ತರೂರ್ರನ್ನು ಯಾವ ರೀತಿ ಕೇಂದ್ರ ಕುಣಿಸುತ್ತಾ ಇದೆ ಎಂಬುದು ಎಲ್ಲರಿಗೂ ಭೋದ್ಯ ಕರ್ನಾಟಕ ಸರಕಾರ ಕೆಲವೊಂದು ವ್ಯ್ಪಪಲ್ಯ ಗಳ ಹೊರತಾಗಿಯೂ ಒಂದು ಒಳ್ಳೆಯ ಜನಪರ ಆಡಳಿತವನ್ನು ನೀಡುತ್ತಿದೆ . ಇಲ್ಲಿ ಸಲೀಸಾಗಿಯೇ ಈಜುತ್ತಾ ಇರುವಾಗ ,ಕಾಲಿಗೆ ಗುಂಡು ಕಟ್ಟಿದ್ದಾರೆ ಎಂದರೆ ಏನರ್ಥ ! ಪಟ್ಟಭದ್ರರು ಈ ಸರಕಾರವನ್ನು ಯಾವುದೇ ವಾಮ ಮಾರ್ಗದಿಂದಲಾದರೂ ಉರುಳಿಸಲು ಅತೀವ ಪ್ರಯತ್ನ ಪಡುತ್ತಿದ್ದಾರೆ . ಅದು ಪಲಪ್ರದ ವಾಗದಿರಲಿ ಎಂದು ನನ್ನ ಹಾರಯ್ಕೆ

 9. ಸಿದ್ಧರಾಮಯ್ಯನವರ ಸರ್ಕಾರ ದ ಬದಲಿಗೆ ಜೆಡಿಸ್ ಬಿಜೆಪಿ ಅಥವಾ ಇನ್ನಾವುದೇ ಸರ್ಕಾರ ಇದ್ದಿದ್ದರೂ ಈ ಪರಿಸ್ಥಿತಿ ಬದಲಾಗುತ್ತಿರಲಿಲ್ಲ. ಭಾರತಧ ಹೆಚ್ಚಿನ ಎಲ್ಲಾ ರಾಜಕೀಯ ಪಕ್ಷಗಳೂ ಮಾಫಿಯಾ ಪೋಷಿತವೇ, ಜನಪರ ಸರ್ಕಾರ (ಹಾಗೊಂದಿದ್ದರೆ) ಅದು ವಿರೋಧ ಪಕ್ಷಗಳಿಗಿಂತಲೂ ಮೊದಲು ಮಾಫಿಯಾದ ವಿರುದ್ಧ ನಿಲ್ಲಬೇಕಲ್ಲವೇ, ಈವಿಚಾರದಲ್ಲಿ ಇಂದಿನ ಕರ್ನಾಟಕದ ವಿರೋಧ ಪಕ್ಷಗಳಿಗಿಂತ (ಅವುಗಳಿಂದ ಹೆಚ್ಚಿನದನ್ನು ನಿರೀಕ್ಷಿಸವದು ಬೇಢ) ಹೆಚ್ಚನದನ್ನು ಖಂಡಿತ ಜನರು ಸಿದ್ಧರಾಮಯ್ಯನವರ ಸೆರ್ಕಾರದಿಂದ ನಿರೀಕ್ಷೆ ಮಾಡಿದ್ದರು ಮಾಢಿದ್ದಾರೆ . ಆದ್ದರಿಂದ ಅವರ ಜವಾಬ್ದಾರಿ ಹೆಚ್ಚು .ರವಿ ಸಾವಿನ ದಿನವೇ ಅವರ ಸರ್ಕಾರದ ಸದಸ್ಯರು ಮತ್ತು ಅಧಿಕಾರಿಗಳು ನೀಡಿದ ಅವಸರದ ಹೇಳಿಕೆಗಳು, ಜನರಲ್ಲಿ ಅನುಮಾನವನ್ನುಂಟು ಮಾಡಿದವು, ಹಾಗೇ ಇನ್ನೊಂದು ವಿಚಾರ ಮರಳು ಮಾಫಿಯಾದ ಬಗ್ಗೆ ಸರಿಯಾದ ತನಿಖೆ ನಡೆದರೆ ಅದು ಯಾರೆಲ್ಲರ ಬುಡಕ್ಕೆ ಬರುತ್ತದೆನ್ನುವುದು ರಹಸ್ಯವೇನಲ್ಲ ಆದ್ದರಿಂದ ನಿಜವಾದ ತನಿಖೆ -ಹೋರಾಟ ಯಾವ ರಾಜಕೀಯ ಪಕ್ಷಕ್ಕೂ ಬೇಡ ತಮಗೆ ಸಿಗಬಹುದಾದ ರಾಜಕೀಯ ಲಾಭದ ಮೇಲಷ್ಟೇ ಅವುಗಳ ಆಸಕ್ತಿ

 10. ಸಲಾಂ ಬಾವ ಅವರಿಗೆ– ನಾವು ಪ್ರಜಾಪ್ರಭುತ್ವ ಸರ್ಕಾರದ ಆಡಳಿತ ವ್ಯವಸ್ಥೆಯನ್ನು ಒಪ್ಪಿಕೊಂಡ ಮೇಲೆ ರಾಜಕೀಯ ಪಕ್ಷಗಳ ರಾಜಕಾರಣವನ್ನೂ ಅನಿವಾರ್ಯವಾಗಿ ಸಹಿಸಿಕೊಳ್ಳಬೇಕು. . ಬೇರೆ ದಾರಿ ಇಲ್ಲ. ಈಗ ಆಡಳಿತದಲ್ಲಿರುವ ಪಕ್ಷಗಳು ವಿರೋಧಪಕ್ಷವಾಗಿದ್ದಾಗ ಅಂದು ಆಡಳಿತದಲ್ಲಿದ್ದ ಪಕ್ಷವನ್ನು ಪೇಚಿಗೆ ಸಿಕ್ಕಿಸುವ ಅವಕಾಶಕ್ಕಾಗಿ ಹೊಂಚುಹಾಕುತ್ತಿದ್ದುದ್ದನ್ನು ನಾವು ಮರೆಯಬಾರದು. ಇದರಿಂದ ಆಡಳಿತ ಪಕ್ಷಕ್ಕೆ ಒಂದು ರೀತಿಯ ನೈತಿಕ ಭಯ, ಅಧಿಕಾರ ಕಳೆದು ಕೊಳ್ಳುವ ಲೌಕಿಕ ಭಯ ಇರುವುದರಿಂದ ಜನತೆಗೆ ಅನುಕೂಲವಾಗಲೂಬಹುದು. ಆದ್ದರಿಂದ ಸರ್ಕಾರಕ್ಕೆ ಅನುಕೂಲವಾದಾಗ ಪ್ರಜಾಪ್ರಭುತ್ವ ಇರಲಿ; ಅನಾನುಕೂಲವಾದಾಗ ಸರ್ವಾಧಿಕಾರ ಬೇಕು ಎಂಬ ಮನೋಭಾವ ತಪ್ಪು.

  1. “ಆದ್ದರಿಂದ ಸರ್ಕಾರಕ್ಕೆ ಅನುಕೂಲವಾದಾಗ ಪ್ರಜಾಪ್ರಭುತ್ವ ಇರಲಿ; ಅನಾನುಕೂಲವಾದಾಗ ಸರ್ವಾಧಿಕಾರ ಬೇಕು ಎಂಬ ಮನೋಭಾವ ತಪ್ಪು”

   ಈ ವಾಕ್ಯ ವನ್ನು ಅಥವಾ ಅದೇ ಅರ್ಥ ಬರುವಂತದ್ದನ್ನು ನಾನು ಎಲ್ಲಿಯೂ ಉಚ್ಹರಿಸಿಲ್ಲ ! ಇದು ನಿಮ್ಮ ಸ್ವಂತ ತಯಾರಿಕೆ !ಇನ್ನು ನೀವೆಲ್ಲಾ ಆಶಿಸಿದ ಹಾಗೆ ಸರಕಾರ ಸಿ.ಬಿ.ಎಯ್ ಗೆ ಈ ಪ್ರಕರಣವನ್ನು ಒಪ್ಪಿಸಿದೆ . ನೀವು ಹೇಳಿದ ಹಾಗೆ ವಿರೋದ ಪಕ್ಷದ ಪ್ರತಿಭಟ ನೆಗಳು ಜನರ ಆತಂಕವನ್ನು ಪ್ರತಿನಿದಿಸುತ್ತಿರಲಿಲ್ಲ ,ಅವರು ಕೇವಲ ಸರಕಾರವನ್ನು ಅಭದ್ರಗೊಳಿಸುವ ಉದ್ದೇಶದಿಂದ ತನಿಖೆಯ ದಾರಿಯನ್ನು ತಪ್ಪಿಸುವ ಪ್ರಯತ್ನ ಪಡುತ್ತಿದ್ದರು ಅಷ್ಟೇ !
   ಸೋಮವಾರದಂದು ಎಲ್ಲಾ ಸತ್ಯ ವನ್ನು ಜನರ ಮುಂದಿಡುತ್ತೀನೆ ಎಂದು ಸಿದ್ಧರಾಮಯ್ಯನವರು ಹೇಳಿಕೆ ಕೊಟ್ಟರೋ ,ಸೋಮವಾರವೇ ಹೈಕೋರ್ಟ್ ಅವರ ಭಾಯಿಗೆ ಬೀಗ ಜಡಿಯಿತು . ತನಿಖೆ ಎಲ್ಲಿಯ ವರೆಗೆ ಮುಟ್ಟಿದೆ ಎಂದು ತಿಳಿಯುವ ಅವಕಾಶದಿಂದ ದುಃಖ ತ್ರಪ್ತ ಜನತೆ ವಂಚಿತವಾಯಿತು . ಆದರೆ ಒಂದು ಪ್ರಶ್ನೆ ಉಳಿಯುತ್ತದೆ ? ಮೀಡಿಯಾ ,ವಿರೋಧ ಪಕ್ಷ ಮತ್ತು ತಮ್ಮಂಥ ಬುದ್ದಿ ಜೀವಿಗಳು “ಸಿ ಅಯ್ ಡಿ ಪ್ರಾಥಮಿಕ ವರದಿ ಏನು ಹೇಳುತ್ತದೆ ಎನ್ನುವುದನ್ನು ತಿಳಿಯುವ ಮೊದಲೇ ಸಿಬಿಯ್ ಗೆ ಪ್ರಕರಣ ಒಪ್ಪಿಸಲು ಆತುರ ತೋರಿದ್ದೇಕೆ ?
   ಇದರಲ್ಲಿ ಸಿದ್ದರಾಮಯ್ಯ ನವರನ್ನು ಇಕ್ಕಟ್ಟಿಗೆ ಸಿಲುಕಿಸಿ ರಾಜಿನಾಮೆ ಕೊಡಿಸುವ ಹುನ್ನಾರ ಹೊರತು -ನೈತಿಕ ,ಲೌಕಿಕ ಭಯದ ಅಥವಾ ರವಿಯವರಂಥಾ ಓರ್ವ ಪ್ರಾಮಾಣಿಕ ,ದಕ್ಷ ಅಧಿಕಾರಿಗೆ ಮತ್ತು ಅವರ ಕುಟುಂಬಕ್ಕೆ ನ್ಯಾಯ ದೊರಕಿಸಲು ಹೋರಾಟದ ಒಂದು ಸಣ್ಣ ಕುರುಹು ಸಹಾ ಕಾಣಿಸಲಿಲ್ಲ !

 11. ಸಲಾಂ ಬಾವ ಅವರಿಗೆ–(೧) ಇನ್ನು ಇಲ್ಲಿ “ಎಲ್ಲಾ” ರಾಜಕೀಯ ಪಕ್ಷಗಳೂ ಇದರಲ್ಲಿ ರಾಜಕೀಯ ಆಡುತ್ತಿವೆ.
  (೨) “ಎಲ್ಲಾ” ಆಳುವ ಸರ್ಕಾರಗಳೂ ಸಿಬಿಐ ಅನ್ನು ತಮ್ಮ ದಾಳವಾಗಿ ಬಳಸಿದ್ದು ಸಿದ್ದರಾಮಯ್ಯ ನವರಿಗೆ ಚೆನ್ನಾಗಿ ಗೊತ್ತು.
  ನಿಮ್ಮ ಈ ವಾಕ್ಯಗಳ ಹಿಂದಿನ ಧ್ವನಿ, ಮನೋಭಾವವನ್ನು ನಾನು ಬೇರೆ ಪದಗಳಲ್ಲಿ ಹೇಳಿದ್ದೇನೆ ಅಷ್ಟೇ. ಅವು ನನ್ನ ಸ್ವಂತ ತಯಾರಿಕೆ ಅಲ್ಲ. ತಾವು ಉತ್ಪಾದಿಸಿದ main productನ byproduct ಅಷ್ಟೇ. ನಾನು ಬುದ್ಧಿಜೀವಿ ಅಲ್ಲ. ಆದರೆ ಹಾಗೆಂದು ೨೪X೭ ಪೋಸು ಕೊಡುವ ನಮ್ಮ ರಿಯಲ್ ಬುದ್ಧಿಜೀವಿಗಳು, ಮಾನವ ಹಕ್ಕು ಹೋರಾಟಗಾರರು ಕಳೆದ ಒಂದು ವಾರದಲ್ಲಿ ಏಕೆ ಒಂದೂ ಮಾತಾಡಲಿಲ್ಲ? (ದೇವನೂರು ಮಹಾದೇವ ಅವರು ಒಂದು ಪತ್ರಿಕಾ ಹೇಳಿಕೆ ಕೊಟ್ಟಿದ್ದರು. ಉಳಿದವರೆಲ್ಲಾ ರಜೆಯ ಮೇಲಿದ್ದರೆ?) ನಕ್ಸಲೈಟರು ಮುಖ್ಯ ವಾಹಿನಿಗೆ ಬಂದಾಗ ಅವರನ್ನು ಹಾರ ಹಾಕಿ ಸ್ವಾಗತಿಸುವುದಕ್ಕೆ ಸಮಯವಿದೆ. ಆದರೆ ಡಿ ಕೆ ರವಿಯವರ ಕುಟುಂಬದವರಿಗೆ ಸ್ವಾಂತನ ಹೇಳಲು ಸಮಯವಿಲ್ಲವೇ? ಸಿ ಐ ಡಿ ವರದಿಯನ್ನು ಸದನದಲ್ಲಿ ಮಂಡಿಸದಂತೆ ಹೈಕೋರ್ಟು ತಡೆ ಹಾಕಿದ ಕ್ರಮ ಸರಿಯಾಗಿದೆ. ಈ ಬಗ್ಗೆ ತಾವು ಪತ್ರಿಕೆಗಳಲ್ಲಿ,ಸುದ್ದಿವಾಹಿನಿಗಳಲ್ಲಿ ಬಂದ ವರದಿಯನ್ನು ಗಮನಿಸಿರುತ್ತೀರಿ ಎಂದು ನಾನು ಭಾವಿಸುತ್ತೇನೆ. ಕೊನೆಯದಾಗಿ ನಮ್ಮ ಮುಖ್ಯಮಂತ್ರಿಗಳಿಗೆ ಅವರ ಪಕ್ಷದೊಳಗಿನ ಭಿನ್ನಾಭಿಪ್ರಾಯವನ್ನು ಶಮನ ಮಾಡುವುದೇ ಕಷ್ಟವಾಗುತ್ತಿದೆ. ಅದಕ್ಕೆ ಹೋಲಿಸಿದರೆ ವಿರೋಧ ಪಕ್ಷಗಳ ರಾಜಕೀಯ ಏನೇನೂ ಅಲ್ಲ. .

 12. ಬುದ್ಧಿಜೀವಿಗಳು ಡಿಕೆ ರವಿ ಪ್ರಕರಣದಲ್ಲಿ ಪ್ರತಿಭಟನೆಯ ಸೊಲ್ಲೆತ್ತಿಲ್ಲ ಎಂಬ ಒಂದು ಆಕ್ಷೇಪ ಕೇಳಿಬರುತ್ತಿದೆ. ನನಗೆ ಅನಿಸುವಂತೆ ಡಿಕೆ ರವಿ ಸಾವು ಮೇಲ್ನೋಟಕ್ಕೇ ಆತ್ಮಹತ್ಯೆಯಂತೆ ಕಂಡುಬಂದುದರಿಂದ ಬುದ್ಧಿಜೀವಿಗಳು ಪ್ರತಿಭಟನೆಯ ಸೊಲ್ಲೆತ್ತಿಲ್ಲ. ಒಬ್ಬ ವ್ಯಕ್ತಿ ಆತ ದಕ್ಷ, ಧೀಮಂತ ವ್ಯಕ್ತಿಯೇ ಆಗಿದ್ದರೂ ತನ್ನ ವೈಯಕ್ತಿಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಬುದ್ಧಿಜೀವಿಗಳು ಪ್ರತಿಭಟನೆ ಮಾಡಬೇಕಾದ ಅಗತ್ಯವೇನೋ ಗೊತ್ತಾಗುವುದಿಲ್ಲ. ಡಿಕೆ ರವಿಯವರ ಸಾವು ಕೊಲೆ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದರೆ ಖಂಡಿತ ಬುದ್ಧಿಜೀವಿಗಳು ಪ್ರತಿಭಟನೆಯ ಸೊಲ್ಲು ಎತ್ತುತ್ತಿದ್ದರು. ರವಿಯವರ ಮೃತ ದೇಹ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಬೀಗ ಹಾಕಿದ ಕೋಣೆಯೊಳಗೆ ಕಂಡುಬಂದಿದೆ ಮತ್ತು ರವಿಯವರ ಪತ್ನಿಯೇ ತನ್ನ ಬಳಿ ಇದ್ದ ಇನ್ನೊಂದು ಕೀಯಿಂದ ಕೊನೆಯ ಬಾಗಿಲು ತೆಗೆದು ಒಳಹೋಗಿದ್ದಾರೆ ಎಂಬುದು ವರದಿಗಳಲ್ಲಿ ಬಂದಿದೆ. ಇದು ಕೊಲೆ ಎಂದು ಸಂಶಯ ಬರಬೇಕಾದರೆ ಕೋಣೆಗೆ ಬೇಗ ಹಾಕಿರಬಾರದು. ಆದರೆ ಇಲ್ಲಿ ಕೋಣೆಗೆ ಬೇಗ ಹಾಕಿದ ಸ್ಥಿತಿಯಲ್ಲಿತ್ತು. ಕೋಣೆಯ ಬೀಗದ ಕೈ ಕೋಣೆಯ ಒಳಗೇ ಇತ್ತು ಎಂದು ನಾನು ಭಾವಿಸುತ್ತೇನೆ ಏಕೆಂದರೆ ಕೋಣೆಯ ಬೀಗದ ಕೈ ಕಾಣೆಯಾಗಿತ್ತು ಎಂದು ಇದುವರೆಗೆ ಯಾರೂ ಹೇಳಿಲ್ಲ. ಹೀಗಿರುವಾಗ ಕೊಲೆಗಾರರು ಹೊರಗಿನಿಂದ ಕೋಣೆಗೆ ಬೇಗ ಹಾಕಿ ಹೋಗಲು ಹೇಗೆ ಸಾಧ್ಯ? ಇದು ಸಾಧ್ಯವಾಗಬೇಕಾದರೆ ಅವರ ಬಳಿ ಡೂಪ್ಲಿಕೇಟ್ ಬೀಗದ ಕೈ ಇದ್ದರೆ ಮಾತ್ರ ಸಾಧ್ಯ ಏಕೆಂದರೆ ಕೋಣೆಯ ಹೊರಗಿನಿಂದ ಬೀಗದ ಕೈ ಇಲ್ಲದೆ ಬೇಗ ಹಾಕಲು ಸಾಧ್ಯವಾಗುವಂತೆ ಇರುವುದಿಲ್ಲ. ಕೊಲೆಗಾರರ ಬಳಿ ಡೂಪ್ಲಿಕೇಟ್ ಬೀಗದ ಕೈ ಇರಬೇಕಾದರೆ ಅವರಿಗೆ ಒರಿಜಿನಲ್ ಬೀಗದ ಕೈ ಸಿಕ್ಕಿರಬೇಕು ಇಲ್ಲದೆ ಇದ್ದರೆ ನಕಲಿ ಕೀ ಮಾಡಿಸುವುದು ಸಾಧ್ಯವಿಲ್ಲ. ಒರಿಜಿನಲ್ ಕೀ ರವಿ ಹಾಗೂ ಅವರ ಪತ್ನಿಯ ಬಳಿ ಮಾತ್ರ ಇತ್ತು. ಇದು ಕೊಲೆಯ ಥಿಯರಿಯನ್ನು ಒಪ್ಪಿಕೊಳ್ಳದೆ ಇರುವಂತೆ ಮಾಡುತ್ತದೆ.

  ಇನ್ನೊಂದು ಅಂಶ ಎಂದರೆ ರವಿಯವರು ಆಫೀಸಿನ ಕೆಲಸದ ಮಧ್ಯೆ ಮನೆಗೆ ಹೇಗೆ ಬಂದರು? ಕೊಲೆಗಾರರು ರವಿಯವರನ್ನು ಮನೆಗೆ ಬರಿಸುವಂತೆ ಮಾಡಬೇಕಾದರೆ ಅವರ ಮೊಬೈಲಿಗೆ ಫೋನ್ ಮಾಡಿ ಬರಿಸಿರಬೇಕು. ಅಪರಿಚಿತರು ಫೋನ್ ಮಾಡಿದರೆ ಯಾರಾದರೂ ತನ್ನ ಆಫೀಸಿನ ಕೆಲಸ ಬಿಟ್ಟು ಮನೆಗೆ ಹೋಗಲು ಸಾಧ್ಯವೇ? ಒಂದು ವೇಳೆ ಯಾರಾದರೂ ಫೋನ್ ಮಾಡಿದ್ದರೆ ಅದು ರವಿಯವರ ಮೊಬೈಲಿನಲ್ಲಿ ದಾಖಲಾಗಿರಲೇಬೇಕು. ಅಂಥ ಅಪರಿಚಿತರ ಕರೆ ಬಂದಿದ್ದರೆ ಅದನ್ನು ಅಳಿಸಿಹಾಕಲು ಸಾಧ್ಯವಿಲ್ಲ. ಮೊಬೈಲ್ ಕಾಲ್ ಡೀಟೇಲ್ನಲ್ಲಿ ಅದು ಬಂದೇ ಬರುತ್ತದೆ. ಅಂಥದ್ದೇನೂ ಕಂಡು ಬಂದ ಬಗ್ಗೆ ವರದಿಯಾಗಿಲ್ಲ.

  ಇದು ಒಂದು ಕೊಲೆ ಎಂದು ಕಂಡುಬಂದರೆ ಖಂಡಿತವಾಗಿಯೂ ಬುದ್ಧಿಜೀವಿಗಳು ಪ್ರತಿಭಟನೆಯ ಸೊಲ್ಲು ಎತ್ತುತ್ತಾರೆ. ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಅದೂ ವೈಯಕ್ತಿಕ ಕಾರಣಗಳಿಂದ ನಡೆದುದು ಎಂಬುದಕ್ಕೆ ಪೂರಕವಾದ ರವಿಯರವ ವೈಯಕ್ತಿಕ ಪೂರ್ವಜೀವನದ ವಿಷಯಗಳು ಬಂದಿರುವುದರಿಂದ ಇಲ್ಲಿ ಪ್ರತಿಭಟನೆ ಮಾಡಲು ವಿವೇಚನೆ ಇರುವವರಿಗೆ ಏನೂ ಉಳಿಯುವುದಿಲ್ಲ. ಅದರಿಂದಾಗಿ ಪ್ರತಿಭಟನೆ ಮಾಡಿಲ್ಲ ಎಂದು ನನ್ನ ಭಾವನೆ. ನಾನು ಈ ವಿಷಯದಲ್ಲಿ ಬರೆಯಬಾರದು ಎಂದಿದ್ದೆ ಆದರೆ ಇದೀಗ ಬುದ್ಧಿಜೀವಿಗಳ ಬಗ್ಗೆ ಕೆಲವು ಕಡೆ ಆಕ್ಷೇಪ ವ್ಯಕ್ತವಾಗಿರುವ ಕಾರಣ ಬರೆಯುತ್ತಿದ್ದೇನೆ.

  ಇನ್ನೂ ಒಂದು ವಿಚಾರ ನಾನು ಹೇಳಬಯಸುತ್ತೇನೆ. ನಾನು ವರ್ತಮಾನ ವೆಬ್ ಸೈಟಿಗೆ ನನ್ನ ಅನಿಸಿಕೆ ಬರೆಯಲು ಪ್ರಯತ್ನಿಸಿದಾಗಲೆಲ್ಲ ಇತ್ತೀಚೆಗೆ ಈ ವೆಬ್ಸೈಟ್ ಬರುತ್ತಿಲ್ಲ ಅಥವಾ ಅದಕ್ಕೆ ಬರೆದ ಪ್ರತಿಕ್ರಿಯೆ ಪ್ರಕಟವಾಗದಂತೆ ತಡೆಯುವ ಪ್ರಯತ್ನಗಳು ನಡೆಯುತ್ತಿವೆ. ನಾನು ಬಿಎಸ್ಸೆನ್ನೆಲ್ ಇಂಟರ್ನೆಟ್ ಕನೆಕ್ಷನ್ ಹೊಂದಿರುವುದರಿಂದ ಇದನ್ನು ಯಾರೋ ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿರುವ ಸಾಧ್ಯತೆ ಇದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಲ್ಲದೆ ಮತ್ತೇನೂ ಅಲ್ಲ.

  1. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಕಂಡುಬಂದರೆ ಖಂಡಿತವಾಗಿಯೂ ಬುದ್ಧಿಜೀವಿಗಳು ಪ್ರತಿಭಟನೆಯ ಸೊಲ್ಲು ಎತ್ತುತ್ತಾರೆ. So u need not worry.

 13. “ಇದನ್ನು ಯಾರೋ ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿರುವ ಸಾಧ್ಯತೆ ಇದೆ”

  This is very serious! takshanave Police complaint kodi, agatyabiddare CBI tanikhege kooda ottaaya maadona.

 14. ಆನಂದಪ್ರಸಾದ್ ಅವರಿಗೆ—ತಮಗೆ ಕೆಲವೊಮ್ಮೆ ‘ವರ್ತಮಾನ’ ವೆಬ್ ಸೈಟ್ open ಆಗದೆ ಇರಲು ಕಾರಣ ನಿಮಗೆ ಇಂಟರ್ನೆಟ್ ಕನೆಕ್ಷನ್ ಕೊಟ್ಟಿರುವ ಬಿ ಎಸ್ ಎನ್ ಎಲ್ ನ ತಾಂತ್ರಿಕ ದೋಷ. ಯಾವ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಇಲ್ಲ. ನನಗೂ ಮೂರ್ನಾಲಕ್ಕು ದಿನ ಒಂದು ವೆಬ್ಸೈಟ್ ಓಪನ್ ಆಗುತ್ತಿರಲ್ಲಿಲ್ಲ. ಆದರೆ ನಾನು complaint ಮಾಡಿದ ನಲವತ್ತೆಂಟು ಗಂಟೆಗಳ ಒಳಗಾಗಿ ನಾನು ಹಾಕಿಸಿಕೊಂಡಿರುವ ಖಾಸಗಿ ಇಂಟರ್ನೆಟ್ ಸರ್ವಿಸ್ ಸಂಸ್ಥೆಯ ಇಂಜಿನಿಯರ್ ಮನೆಗೆ ಬಂದು ರಿಪೇರ್ ಮಾಡಿಕೊಟ್ಟರು. ತಾವು ಬಿ ಎಸ್ ಎನ್ ಎಲ್ ನ ಕಾಲ್ ಸೆಂಟರ್ ಗೆ ಫೋನ್ ಮಾಡಿ ಕಂಪ್ಲೇಂಟ್ ಮಾಡಿ. ಮೂರ್ನಾಲಕ್ಕು ದಿನದಲ್ಲಿ ರಿಪೇರ್ ಮಾಡುತ್ತಾರೋ ಏನೋ ನೋಡೋಣ.
  ಇನ್ನು ಬುದ್ಧಿಜೀವಿಗಳ ಪರವಾಗಿ ತಮ್ಮ ವಕಾಲತ್ತಿಗೆ ನಾನೇನೋ ಹೇಳುವುದಿಲ್ಲ. ನಿಮ್ಮ ಮಾನಸಿಕ ಕಕ್ಷಿದಾರರ ಹಿತ ಕಾಯುವುದು ನಿಮ್ಮ ಧರ್ಮ. ಯಾರು ತಮ್ಮ ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮವೇ ರಕ್ಷಿಸುತ್ತದೆ.

  1. ಕೆಲವು ರಾಜಕೀಯ ಹಿತಾಸಕ್ತ ಸಂಘಟನೆಗಳು ಅಂತರ್ಜಾಲದಲ್ಲಿ ಗೂಢಚರ್ಯೆ ನಡೆಸುತ್ತಿರುವ ಗುಮಾನಿ ಇದೆ. ವಿಚಿತ್ರ ಎಂದರೆ ವರ್ತಮಾನ ವೆಬ್ಸೈಟ್ ಮಾತ್ರ ಹೀಗಾಗುತ್ತಿದೆ. ನಾನು ಬರೆದ ಪ್ರತಿಕ್ರಿಯೆ ವೆಬ್ ಸೈಟಿಗೆ ಅಪ್ಲೋಡ್ ಆಗುವ ಹಂತದಲ್ಲಿ ತುಂಬಾ ಹೊತ್ತು ತೆಗೆದುಕೊಳ್ಳುತ್ತದೆ ಮತ್ತು ಅದು ಅಪ್ಲೋಡ್ ಆಗುವುದೇ ಇಲ್ಲ. ಬೇರೆಲ್ಲಾ ವೆಬ್ ಸೈಟುಗಳು ಬರುತ್ತವೆ, ವರ್ತಮಾನ ವೆಬ್ ಸೈಟು ಒಂದು ಮಾತ್ರ ಬರುವುದಿಲ್ಲ ಎಂದರೆ ಅಂತರ್ಜಾಲದಲ್ಲಿ ಯಾರೋ ತಮಗೆ ವಿರುದ್ಧವಾದ ಅಭಿಪ್ರಾಯ ವ್ಯಕ್ತವಾಗುವುದನ್ನು ತಡೆಯಲು ಪ್ರಯತ್ನಿಸುತ್ತಿರುವ ಸಂಭವ ಕಂಡುಬರುತ್ತದೆ. ಇದು ಕೇಂದ್ರದಲ್ಲಿ ಅಧಿಕಾರ ಬದಲಾದ ನಂತರ ಉಂಟಾಗುತ್ತಿರುವ ವಿದ್ಯಮಾನವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದ ಅವಧಿಯಲ್ಲಿ ಹೀಗೆ ಒಂದು ಸಲವೂ ಆಗುತ್ತಿರಲಿಲ್ಲ. ಅಂತರ್ಜಾಲ ಸ್ವಾತಂತ್ರ್ಯವನ್ನೂ ಕೆಲವರು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿರುವುದು ಶೋಚನೀಯ. ನಾನು ವರ್ತಮಾನಕ್ಕೆ ಮಿಂಚಂಚೆ ಮೂಲಕ ಕಳುಹಿಸಿದ ಒಂದು ಲೇಖನವೂ ಒಮ್ಮೆ ಸೂಚಿತ ವಿಳಾಸಕ್ಕೆ ಹೋಗದೆ ನನಗೆ ವಾಪಸ್ ಬಂದಿತ್ತು ಮತ್ತು ಅದಕ್ಕೆ ಕಾರಣ ಮಿಂಚಂಚೆ ವಿಳಾಸದಾರರ ಮೇಲ್ ಬಾಕ್ಸ್ ಭರ್ತಿಯಾಗಿದ್ದು ಎಂದು ಸೂಚಿಸಿತ್ತು. ಇದೇ ವೇಳೆ ನಾನು ನನ್ನ ಇನ್ನೊಂದು ಕಂಪನಿಯ ಮಿಂಚಂಚೆ ಮೂಲಕ ಪರೀಕ್ಷೆಗೆಂದು ಕಳುಹಿಸಿದ ಮಿಂಚಂಚೆ ಮೇಲ್ ಬಾಕ್ಸ್ ಭರ್ತಿ ಎಂದು ಸೂಚಿಸುತ್ತಿದ್ದ ವರ್ತಮಾನ ವಿಳಾಸಕ್ಕೆ ಅದೇ ಅವಧಿಯಲ್ಲಿ ಡೆಲಿವರಿ ಆಗಿತ್ತು.

   1. Oh God! You are probably perceived by some nefarious elements of the society as dangerous and hence they could be monitoring your movements. If they’re blocking your mails who knows what they’ll do in the future!! You should be careful and take the help of Karnataka police. If necessary you can request UN Human Rights organization for intervention. For the time being, send your comments and articles to Vartamaana by postal service and don’t write your address on the back side of the envelope.

 15. “ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಲ್ಲದೆ ಮತ್ತೇನೂ ಅಲ್ಲ.”

  This is very scary! Looks like someone has hatched a sinister plan to play mischief with you with the intention of suppressing your views. Who are these people? What is their intention? What is their next step? What is,their connection with international mafia? All these questions can be answered only by a thorough CID/CBI investigation. Karnataka police should immediately give you maximum police protection 24 hours 365 days. And government must not spare any one who’s behind the conspiracy.

 16. ಅಂತರ್ಜಾಲ ಸ್ವಾತಂತ್ರ್ಯವನ್ನು ಕಸಿದು ಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಎರಡು ಮೂರು ಕಾಮೆಂಟುಗಳಲ್ಲಿ ಬರೆದುಕೊಂಡಿರುವ “ಆನಂದಪ್ರಸಾದರು” ವರ್ತಮಾನದ ಓದುಗರಿಗೆಲ್ಲಾ ತಮ್ಮ ಉತ್ತಮ ಕಾಮೆಂಟ್ಸ್ ನಿಂದ ( ಅದನ್ನು ನಾವು ಒಪ್ಪುವುದು ಬಿಡುವುದು ಬೇರೆ ಪ್ರಶ್ನೆ) ಪರಿಚಿತವಾಗಿರುವ ಅಸಲಿ ಆನಂದಪ್ರಸಾದರಲ್ಲ ಎಂದು ನನಗನ್ನಿಸುತ್ತಿದೆ. ಅವರ ಹೆಸರಿನಲ್ಲಿ ಬರೆಯುತ್ತಿರುವ “ನಕಲಿ” ಆನಂದಪ್ರಸಾದರು ಎಂದು ನನಗೆ ಬಲವಾದ ಗುಮಾನಿ. ಆ ಮಹಾಶಯರೂ ವರ್ತಮಾನದ ಓದುಗರಿಗೆ ಪರಿಚಿತರೆ. ಒಂದೊಂದು ಬ್ಲಾಗ್ ನಲ್ಲಿ ಒಂದೊಂದು ಹೆಸರಿನಲ್ಲಿ ಪ್ರತಿಕ್ರಿಯೆ ಬರೆಯುವ ಆ ಮಹಾಶಯರು ‘ವರ್ತಮಾನ’ ದಲ್ಲಿ ೧೨ನೆ ಶತಮಾನದ ಹಿರಿಯರ ಹೆಸರಿನಲ್ಲಿ ಕಾಮೆಂಟ್ಸ್ ಬರೆಯುತ್ತಾರೆ. ಏನೇ ಇರಲಿ ಅಸಲಿ ಯಾ ನಕಲಿ ಆನಂದ ಪ್ರಸಾದರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತಿದೆ ಎಂದು ಆತಂಕ ಪಡುವ ಅಗತ್ಯವಿಲ್ಲ. ಏಕೆಂದರೆ ಸುಪ್ರೀಂ ಕೋರ್ಟು ಇತ್ತೀಚಿಗೆ ಅಂತರ್ಜಾಲಕ್ಕೆ ಸಂಬಂಧಿಸಿದ ೬೬ ಐ ಟಿ act ಅನ್ನು ಅನೂರ್ಜಿತಗೊಳಿಸಿದೆ.

  1. ಶ್ರೀರಂಗ ಅವರೆ, ನಿಮ್ಮ ಅನುಮಾನ ಮೊದಲು ನಗೆ ಹುಟ್ಟಿಸಿತು. ಆದರೆ ಆನಂದ ಪ್ರಸಾದ್ ಅವರ ಸಮಸ್ಯೆಯನ್ನು ಪ್ರಗತಿಪರ ಕಮೆಂಟಿಗರ ಹಣಿಯುವಿಕೆಗೆ ಬಳಸಿಕೊಳ್ಳುವ ನಿಮ್ಮ ಹುನ್ನಾರ ಬಹಳ ಸ್ಪಷ್ಟವಾಗಿ ನನಗೆ ಕಂಡಿದೆ! ಆನಂದ ಪ್ರಸಾದ್ ಅವರ ಕಮೆಂಟುಗಳನ್ನೂ ಈಮೇಲುಗಳನ್ನೂ ಹ್ಯಾಕ್ ಮಾಡುತ್ತಿರುವವರು ನೀವೇ ಇರಬಹುದು ಅಂತ ಕೂಡ ಅನ್ನಿಸಿದೆ. ನಿಮ್ಮ ಬಗ್ಗೆ ಗೌರವ ಇತ್ತು ನೀವೊಬ್ಬ ದುಡಿಯುವ ವರ್ಗದ ವ್ಯಕ್ತಿ, ವಚನಕಾರರು ಪ್ರತಿಪಾದಿಸಿದ ಕಾಯಕ ತತ್ವದ ಬಗ್ಗೆ ಬದ್ಧತೆ ಇರುವವರು ಅಂತ. ಆದರೆ ಪ್ರಗತಿಪರರನ್ನು ಶತಾಯ ಗತಾಯ ನಿರ್ನಾಮ ಮಾಡಬೇಕೆಂಬ ನಿಮ್ಮ ಹಠಸಾಧನೆ ನಿಮ್ಮ ಅಸಲೀ ವ್ಯಕ್ತಿತ್ವವನ್ನು ಬಯಲು ಮಾಡಿದೆ.

  2. @ ಶ್ರೀರಂಗ – ಆನಂದ ಪ್ರಸಾದ್ ಎಂಬ ಹೆಸರಿನಲ್ಲಿ ಈ ಹಿಂದೆ ಅನಿಸಿಕೆ/ಅಭಿಪ್ರಾಯ ವ್ಯಕ್ತಪಡಿಸಿದ್ದು ಒರಿಜಿನಲ್ ನಾನೇ. ನನ್ನ ಹೆಸರಿನಲ್ಲಿ ಬೇರೆ ಯಾರೋ ೧೨ನೇ ಶತಮಾನದ ಮಹನೀಯರ ಹೆಸರಿನವರು ವ್ಯಕ್ತಪಡಿಸಿದ್ದು ಅಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ಇದೇ ಹೆಸರಿನಲ್ಲಿ ಬೇರೆ ಜನರು ಅಭಿಪ್ರಾಯ ವ್ಯಕ್ತಪಡಿಸಬಾರದೆಂದೇನೂ ಇಲ್ಲ ಆದರೆ ಅಭಿಪ್ರಾಯ ವ್ಯಕ್ತಪಡಿಸುವ ಮುನ್ನ ಮಿಂಚಂಚೆ ಹಾಗೂ ಹೆಸರನ್ನು ನೀಡಬೇಕಾದ ವ್ಯವಸ್ಥೆ ವರ್ತಮಾನ ವೆಬ್ ಸೈಟಿನಲ್ಲಿದೆ. ಹೀಗಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದು ಒರಿಜಿನಲ್ ವ್ಯಕ್ತಿಯೋ ಅಥವಾ ಅದೇ ಹೆಸರಿನಲ್ಲಿ ಬರೆಯುತ್ತಿರುವ ಮತ್ಯಾರೋ ಎಂಬುದು ವರ್ತಮಾನದ ನಿರ್ವಾಹಕರಿಗೆ ತಿಳಿಯುತ್ತದೆ. ಒಂದೇ ಹೆಸರು ಬರೆಯಬಹುದು ಆದರೆ ಅದರ ಜೊತೆಗೆ ನೀಡಬೇಕಾದ ಮಿಂಚಂಚೆ ವಿಳಾಸ ಬೇರೊಬ್ಬ ವ್ಯಕ್ತಿಗೆ ತಿಳಿಯುವ ಸಾಧ್ಯತೆ ಇಲ್ಲ.

   ಇನ್ನು ಅಂತರ್ಜಾಲದ ಸ್ವಾತಂತ್ರ್ಯದ ಬಗ್ಗೆ ಹೇಳುವುದಾದರೆ ಇಂದಿಗೂ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಬ್ರಾಡ್ಬ್ಯಾಂಡ್ ಅಂತರ್ಜಾಲ ನೀಡುವುದರಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಬಿಎಸ್ಸೆನ್ನೆಲ್ ಸಂಸ್ಥೆಯ ಏಕಸ್ವಾಮ್ಯವೇ ಇದೆ. ಯಾವುದೇ ಖಾಸಗಿ ಮೊಬೈಲ್ ಸಂಸ್ಥೆಗಳು ಇಂದಿಗೂ ೩ಜಿ ಮೊಬೈಲ್ ವ್ಯವಸ್ಥೆಯನ್ನು ಭಾರತದ ಗ್ರಾಮೀಣ ಪ್ರದೇಶಗಳಿಗೆ ತಲುಪಿಸಿ ಬಿಎಸ್ಸೆನ್ನೆಲ್ ಸಂಸ್ಥೆಯ ಏಕಸ್ವಾಮ್ಯವನ್ನು ಹೋಗಲಾಡಿಸುವ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಭಾರತದ ಗ್ರಾಮೀಣ ಭಾಗಗಳ ಜನ ಬಿಎಸ್ಸೆನ್ನೆಲ್ ಸಂಸ್ಥೆಯ ಕಳಪೆ ಸೇವೆಯನ್ನು ಸಹಿಸಲೆಬೇಕಾದ ಕರ್ಮ ನಮ್ಮದಾಗಿದೆ. ಹೀಗಿರುವಾಗ ಅಂತರ್ಜಾಲ ಸ್ವಾತಂತ್ರ್ಯ ಎಂಬುದು ಮರೀಚಿಕೆಯೇ ಸರಿ. ಬಿಎಸ್ಸೆನ್ನೆಲ್ ಬೇಡ ಅದರ ಸೇವೆ ಉತ್ತಮವಾಗಿಲ್ಲ, ಬೇರೆ ಸಂಸ್ಥೆಯ ಸೇವೆಗೆ ಬದಲಾಯಿಸೋಣ ಎಂದರೆ ಆಯ್ಕೆಗಳೇ ಇಲ್ಲ. ಭಾರತದ ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿರುವ ನನಗೆ ಚೀನಾದಂಥ ಅಂತರ್ಜಾಲದ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲದ ದೇಶದಲ್ಲಿ ಇರುವ ಅನುಭವ ಆಗುತ್ತಿದೆ. ವರ್ತಮಾನ ವೆಬ್ ಸೈಟ್ ಬರದಂತೆ ಅಥವಾ ಅದಕ್ಕೆ ಅಭಿಪ್ರಾಯ ವ್ಯಕ್ತಪಡಿಸದಂತೆ ತಡೆಯುವ ನಿರಂತರ ಪ್ರಯತ್ನ ನಡೆಯುತ್ತಿದೆ. ನಾನು ವರ್ತಮಾನಕ್ಕೆ ಒಂದು ಅಭಿಪ್ರಾಯ ವ್ಯಕ್ತಪಡಿಸಬೇಕಾದರೆ ಬಹಳ ಶ್ರಮಪಡಬೇಕಾದ ಪರಿಸ್ಥಿತಿ ಬಂದಿದೆ. ಪುನಃ ಪುನಃ ಒಂದು ಅಭಿಪ್ರಾಯವನ್ನು ಪ್ರಕಟಿಸಲು ನಿರಂತರ ಪ್ರಯತ್ನ ಮಾಡಬೇಕಾಗಿ ಬರುತ್ತಿದೆ.

 17. ಅಭಿನವ ಚನ್ನಬಸವಣ್ಣ ಆಲಿಯಾಸ್ ನಾಗಶೆಟ್ಟಿ ಶೆಟ್ಕರ್ ಅವರಿಗೆ— ಆನಂದ ಪ್ರಸಾದ್ ಅವರಿಗಿಂತ ಮುಂಚೆ ತಾವು ನನ್ನ ಪ್ರತಿಕ್ರಿಯೆಗೆ ಉತ್ತರಿಸಿದ್ದು ಸೋಜಿಗವಾಗಿದೆ!! ತಾವು ಎರಡೆರೆಡು ಹೆಸರಿನಲ್ಲಿ comment ಮಾಡುವ ವಿಷಯ ಈಗ ವರ್ತಮಾನದ ಓದುಗರಿಗೆಲ್ಲಾ ತಿಳಿದಿರುವಂತಹುದೇ. ನನಗಿಂತಲೂ ಮೊದಲೇ ಇಬ್ಬರು ಓದುಗರು ಈ ವಿಷಯ ಹೇಳಿದ್ದಾರೆ. ‘ವರ್ತಮಾನ’ದ ನಿರ್ವಾಹಕರಾದ ಶ್ರೀ ರವಿ ಅವರ ಬಗ್ಗೆ ನನಗೆ ತುಂಬಾ ಗೌರವವಿದೆ. ಅವರು ಓದುಗರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅವರೇ ಹೇಳಿರುವಂತೆ ‘ವರ್ತಮಾನ’ ಬ್ಲಾಗ್ ಪ್ರಾರಂಭಿಸಿದಾಗಿನಿಂದ ಇದುವರೆಗೆ ಕೇವಲ ಮೂರ್ನಾಲಕ್ಕು ಪ್ರಕ್ತಿಕ್ರಿಯೆಗಳನ್ನು delete ಮಾಡಿದ್ದಾರಂತೆ. ಅವು ಸಭ್ಯ ಭಾಷೆಯಲ್ಲಿ ಇಲ್ಲದ ಕಾರಣಕ್ಕೆ. ಅಷ್ಟೇ ಹೊರತು ಅವು ಬಲ/ಎಡಪಂಥೀಯ, ಅಥವಾ ಪ್ರಗತಿಪರ/ಪ್ರತಿಗಾಮಿ , ಅಥವಾ ಇನ್ನ್ಯಾವುದೇ ಕಾರಣಕ್ಕಲ್ಲ. ನನ್ನ ಅನುಭವದ ಪ್ರಕಾರವೇ ಹೇಳುವುದಾದರೆ ಈವರೆಗೆ ನನ್ನ ಒಂದೇ ಒಂದು ಕಾಮೆಂಟ್ ಡಿಲೀಟ್ ಆಗಿಲ್ಲ. ಇನ್ನು ಹ್ಯಾಕಿಂಗ್ ವಿಷಯ. ನನಗೆ ಕಂಪ್ಯೂಟರ್ ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಟೈಪ್ ಮಾಡುವುದನ್ನು ಬಿಟ್ಟು ಇನ್ನ್ಯಾವ ತಾಂತ್ರಿಕ ವಿಷಯಗಳೂ ಗೊತ್ತಿಲ್ಲ. ಹೀಗಾಗಿ ಆನಂದಪ್ರಸಾದರಿಗೆ ತೊಂದರೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
  ಆನಂದಪ್ರಸಾದ್ ಅವರಿಗೆ– ನಿಮ್ಮ ಸಮಸ್ಯೆ ಬಗ್ಗೆ ನನಗೆ ವಿಷಾದವಿದೆ. ನಾನೂ ಗ್ರಾಮಾಂತರ ಪ್ರದೇಶಗಳಲ್ಲಿ ಇದ್ದವನೇ. ಅಲ್ಲಿ ಬಿ ಎಸ್ ಎನ್ ಎಲ್ ನವರ ನಿರ್ಲಕ್ಷ್ಯದಿಂದ ತೊಂದರೆ ಅನುಭವಿಸಿದ್ದರಿಂದ ಈಗ ಅವರ ಫೋನು,ಇಂಟರ್ನೆಟ್ ಸಂಪರ್ಕದಿಂದ ಮುಕ್ತಿ ಪಡೆದಿದ್ದೇನೆ.

  1. ಶ್ರೀರಂಗ ಅವರೇ, ಆನಂದ ಪ್ರಸಾದ್ ಅವರ ಸ್ಪಷ್ಟೀಕರಣ ಸಾಕಲ್ಲವೇ ನಿಮ್ಮ ಅನುಮಾನ ಸರಿಯಲ್ಲ ಹಾಗೂ ಅದು ದುರುದ್ದೇಶಪೂರಿತವಾದದ್ದು ಎಂದು ಸಾಬೀತು ಪಡಿಸಲು? ನಿಮ್ಮ ಜಾಗದಲ್ಲಿ ಸಭ್ಯರು ಯಾರೇ ಇದ್ದಿದ್ದರೂ ಅನಗತ್ಯವಾಗಿ ನನ್ನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಕ್ಕೆ ನನ್ನ ಕ್ಷಮೆ ಕೇಳುತ್ತಿದ್ದರು.

 18. ಆನಂದ್ ಪ್ರಸಾದರೆ ವೆಬ್‌ಸ್ಟರ್ ಸೈಟ್ ನಲ್ಲಿ ಕ್ಯಾಕ್ ಎಂದು ಇರುತ್ತೆ. ಅಂದರೆ ತಾವು ತೆರೆಯುವ ವೆಬ್ ಸೈಟ್ ಗಳ ತಾತ್ಕಾಲಿಕ ಜಾಗ. ತುಂಬಾ ವೆಬ್ ಸೈಟ್ ಗಳನ್ನು ತೆರೆದಲ್ಲಿ ಈ ಕ್ಯಾಕ್ ನ ಪೋಲ್ಡರ್ ಭರ್ತಿಯಾಗಿ ಒಮ್ಮೊಮ್ಮೆ ತಮ್ಮ ವೆಬ್ ಸೈಟ್ ಗಳು ಒಪನ್ ಆಗಲ್ಲ. ಆದ್ದರಿಂದ ತಮ್ಮ ಕಂಪೂಟರ್ ಆಥವಾ ಲ್ಯಾಪ್ ಟಾಪ್ ನ ಕ್ಯಾಕ್ ಮೆಮೊರಿಯನ್ನು ಕ್ಲಿಯರ್ ಮಾಡಬೇಕಾಗಿ ವಿನಂತಿ.

 19. @ನವೀನ್ – ಕ್ಯಾಶ್ (cache) ಮೆಮೊರಿ ನಾನು ದಿನಾಲೂ ಸಿಸಿಕ್ಲೀನರ್ ಎಂಬ ಸಾಫ್ಟ್ವೇರ್ ಬಳಸಿ ಕ್ಲೀನ್ ಮಾಡುತ್ತೇನೆ. ಅದರಿಂದಾಗಿ ವರ್ತಮಾನ ವೆಬ್ಸೈಟ್ ಬರದಿರುವುದು ಅಲ್ಲ ಎಂದು ನನ್ನ ಅನಿಸಿಕೆ. ಮುಖ್ಯವಾಗಿ ನಾನು ವರ್ತಮಾನಕ್ಕೆ ಪ್ರತಿಕ್ರಿಯೆ ಕಳುಹಿಸಬೇಕೆಂದಿರುವಾಗ ವೆಬ್ಸೈಟ್ ಬರುವುದಿಲ್ಲ, ತುಂಬಾ ಪ್ರಯತ್ನದ ನಂತರ ಬಂದರೂ ಪ್ರತಿಕ್ರಿಯೆ ಪ್ರಕಟವಾಗುವುದಿಲ್ಲ, ಬದಲಿಗೆ ನಿಮ್ಮ ಕನೆಕ್ಷನ್ ರಿಸೆಟ್ ಆಗಿದೆ ಎಂದು ಪದೇ ಪದೇ ಬರುತ್ತದೆ. ಇದು ವರ್ತಮಾನ ವೆಬ್ಸೈಟ್ ವಿಷಯದಲ್ಲಿ ಮಾತ್ರ ಹೀಗಾಗುವುದು.

 20. ಡಿ.ಕೆ.ರವಿಯ ಸಾವಿನ ಪ್ರಕರಣದಂತಹ ಪ್ರಕರಣಗಳನ್ನು ತನಿಖೆ ಮಾಡಲು ಸಿ.ಬಿ.ಐ ಅಥವಾ ಸಿ.ಐ.ಡಿ. ಅನ್ನುವುದಕ್ಕಿಂತ ಯಾವುದೇ ಪ್ರಭಾವಕ್ಕೂ ಒಳಪಡಲು ಸಾಧ್ಯವಿಲ್ಲದಂತಹ ಒಂದು ಕೇಂದ್ರ ತನಿಖಾ ದಳವನ್ನೇ ನಿರ್ಮಿಸಬೇಕು. ಯಾವುದೇ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಕೈ ಆಡಿಸದೆ ಪ್ರಕರಣದ ಗಂಭಿರತೆಯ ಮೇಲೆ ಅದಾಗಿ ಅದೇ ಇಂತಹ ತನಿಖಾ ದಳದ ವ್ಯಾಪ್ತಿಗೆ ನೇರವಾಗಿ ಒಳಪಡಬೇಕು. ಹಾಗಾದಾಗ ಮಾತ್ರ ಇಂತಹ ಪ್ರಕರಣಗಳಿಗೆ ನಿಜವಾಗಿ ನ್ಯಾಯ ಸಿಲು ಸಾಧ್ಯವಾಗಬಹುದೇನೋ.
  ನರೇಶ್.

 21. why people are wasting time, this case is already given to CBI, let us hope good result will come with TRUTH ?

Leave a Reply

Your email address will not be published.