ಜೀವನದಿಗಳ ಸಾವಿನ ಕಥನ – 11

– ಡಾ.ಎನ್. ಜಗದೀಶ್ ಕೊಪ್ಪ

ಅಣೆಕಟ್ಟು ಅಥವಾ ಜಲಾಶಯ ನಿರ್ಮಾಣದಿಂದ ಸಂತ್ರಸ್ತರಾದವರಿಗೆ ಆಯಾ ಸರ್ಕಾರಗಳು ನೀಡುತ್ತಿರುವ ಪರಿಹಾರವೆಂಬುದು ಕಪಟ ನಾಟಕ ಎನ್ನುವುದು ಜಗತ್ತಿನೆಲ್ಲೆಡೆ ಸ್ಥಳಪರೀಕ್ಷೆಯಿಂದ ಧೃಡಪಟ್ಟಿದೆ. ವಿಸ್ಮಯವೆಂತೆ  ಈ ಅಣೆಕಟ್ಟುಗಳ ತಾಯಿ ಎನಿಸಿದ ವಿಶ್ವ ಬಾಂಕ್ ಕೂಡ ಹಲವಾರು ಬಾರಿ ತನ್ನ ವಾರ್ಷಿಕ ವರದಿಯಲ್ಲಿ ಸತ್ಯಾಂಶವನ್ನು ಮರೆಮಾಚದೆ ಬಿಚ್ಚಿಟ್ಟಿದೆ.

1986ರಿಂದ 1996ರವರೆಗೆ ತಾನು ಸಾಲ ನೀಡಿರುವ ರಾಷ್ಟ್ರಗಳ ಅಣೆಕಟ್ಟು ಕಾಮಗಾರಿ ಮತ್ತು ಪರಿಹಾರ ಯೋಜನೆಗಳನ್ನು ಪರಾಮರ್ಶಿಸಲು ನೇಮಕಮಾಡಿರುವ ಆಯೋಗದ ವರದಿಯನ್ನು ಆಧರಿಸಿ, ವಿಶ್ವಬಾಂಕ್ ತನ್ನ ವೈಫಲ್ಯತೆಯನ್ನು ತಾನೇ ಎತ್ತಿ ತೋರಿಸಿದ್ದು, ಅದು ಹೀಗಿದೆ:
“ವಿಶ್ವಬ್ಯಾಂಕ್‌ನ ಮೂಲಭೂತ ಗುರಿಗಳಲ್ಲಿ ಅಣೆಕಟ್ಟುಗಳಿಂದ ಸಂತ್ರಸ್ತರಾಗುವ ಜನತೆಯ ಬದುಕನ್ನು ಉನ್ನತಿಗೊಳಿಸಬೇಕೆಂಬುದು ಬ್ಯಾಂಕ್‌ನ ಗುರಿಯಾಗಿತ್ತು. ಆದರೆ ದೊರೆತಿರುವ ಅಂಕಿ ಅಂಶಗಳಿಂದ ಬ್ಯಾಂಕ್ ಈ ದಿಶೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ತಿಳಿಸಲು ವಿಷಾಧವಾಗುತ್ತಿದೆ.”

ಬಹುತೇಕ ಕಡೆ ಸಂತ್ರಸ್ತರಾದವರ ಬಡತನ ಮತ್ತೆ ಶೇ.40ರ ಪ್ರಮಾಣದಷ್ಟು ಹೆಚ್ಚಿರುವುದನ್ನು ಬ್ಯಾಂಕ್ ತನ್ನ ಸಮೀಕ್ಷೆಯಲ್ಲಿ ಧೃಡಪಡಿಸಿದೆ.

1994ರವರೆಗೆ ಜಗತ್ತಿನಾದ್ಯಂತ ಬ್ಯಾಂಕ್ ನೆರವು ನೀಡಿದ್ದ 192 ಅಣೆಕಟ್ಟು ಯೋಜನೆಗಳಲ್ಲಿ ಸಂತ್ರಸ್ತರಿಗೆ ಪರಿಹಾರವನ್ನು ಕೇವಲ ಹಣದ ರೂಪದಲ್ಲಿ ನೀಡಲಾಗಿದೆಯೆ ಹೊರತು ಅವರಿಗೆ ಪರ್ಯಾಯವಾದ ಭೂಮಿ ಅಥವಾ ನಿವೇಶನವನ್ನು ನೀಡದಿರುವುದು ಕಂಡುಬಂದಿದೆ. ಶೇ.70 ಮಂದಿಗೆ ಪರಿಹಾರ ರೂಪದಲ್ಲಿ ಹಣ, ಶೇ.15 ಮಂದಿಗೆ ಭೂಮಿ ನೀಡಿದ್ದರೆ, ಉಳಿದ ಶೆ. 15ರಷ್ಟು ನಿರಾಶ್ರಿತರಿಗೆ ದಾಖಲೆಗಳ ಕೊರತೆಯಿಂದ ಏನನ್ನೂ ನೀಡಲಾಗಿಲ್ಲ ಎಂಬುದನ್ನು ಪರಿಶೀಲನಾ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.

ಪರಿಹಾರಕ್ಕಿಂತ ಮತ್ತೊಂದು ದೊಡ್ಡ ವಂಚನೆ ನಡೆದಿರುವುದು ಅಣೆಕಟ್ಟು ಯೋಜನೆಗೆ ಮುನ್ನ. ನಿರಾಶ್ರಿತರಾಗುವವರ ಕುರಿತು ತಯಾರಿಸಿದ ವರದಿಯಲ್ಲಿ. 192 ಅಣೆಕಟ್ಟುಗಳಿಂದ ಸಂತ್ರಸ್ತರಾಗುವವರ ಸಂಖ್ಯೆ 1 ಕೋಟಿ 34 ಲಕ್ಷ ಎಂದು ತಿಳಿಸಲಾಗಿದೆ. ಆದರೆ ನೈಜವಾಗಿ ಸಂತ್ರಸ್ತರಾದವರ ಸಂಖ್ಯೆ 1 ಕೋಟಿ 96 ಲಕ್ಷದ 50 ಸಾವಿರ. ಇದು ಕೇವಲ ವಿಶ್ವಬ್ಯಾಂಕ್‌ನಿಂದ ಸಾಲದ ನೆರವು ಪಡೆದ ಯೋಜನೆಗಳ ಸಂತ್ರಸ್ತರ ಅಂಕಿ ಅಂಶ. ಆದರೆ ವಿಶ್ವಬ್ಯಾಂಕ್ ಹೊರತುಪಡಿಸಿ, ಇನ್ನಿತರೆ ಹಣಕಾಸು ಸಂಸ್ಥೆ ಹಾಗೂ ಕೆಲವು ಸರಕಾರಗಳು ಸ್ವತಃ ಬಂಡವಾಳ ಹೂಡಿ ನಡೆಸಿದ ಅಣೆಕಟ್ಟು ಯೋಜನೆಗಳಿಂದ ಸ್ಥಳಾಂತರಗೊಂಡವರು ಜಗತ್ತಿನಾದ್ಯಂತ 6 ಕೋಟಿ 25 ಲಕ್ಷ.

ಇಂತಹ ಸುಳ್ಳು ಅಂಕಿ ಅಂಶಗಳನ್ನು ನೀಡುವ ಹಿಂದೆ ಸರಕಾರಗಳ ದೊಡ್ಡ ಹುನ್ನಾರವೇ ಅಡಗಿದೆ. ಅಣೆಕಟ್ಟು ಯೋಜನೆಗಳಿಂದ ಆಗಬಹುದಾದ ಪರಿಣಾಮಗಳು ಅತ್ಯಲ್ಪ ಹಾಗೂ ಯೋಜನೆಗಳಿಂದ ಉಂಟಾಗುವ ಲಾಭವೇ ಅಪಾರ ಎಂಬುದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವ ಉದ್ದೇಶಗಳಿಂದಲೇ ಇಂತಹ ಪೊಳ್ಳು ಯೋಜನಾ ವರದಿಗಳನ್ನು ಸಿದ್ಧಪಡಿಸಲಾಗುತ್ತದೆ. ಇವುಗಳಲ್ಲಿ ಜನತೆಯ ಸ್ಥಳಾಂತರಕ್ಕಿಂತ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ವ್ಯವಸ್ಥಿತವಾಗಿ ಮರೆ ಮಾಚಲಾಗುತ್ತದೆ.

1984 ರಲ್ಲಿ ಆಫ್ರಿಕಾದ ರುವಾಂಡ ದೇಶದಲ್ಲಿ ನಿರ್ಮಿಸಿದ ರುಜಿಜಿ ಎಂಬ ಅಣೆಕಟ್ಟು ನಿರ್ಮಾಣದಿಂದ ಸಂತ್ರಸ್ತರಾಗುವವರು ಕೇವಲ 137 ಮಂದಿ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ವಾಸ್ತವವಾಗಿ ಸಂತ್ರಸ್ತರಾದವರ ಸಂಖ್ಯೆ 15 ಸಾವಿರ ಮಂದಿ. ಅದೇ ರೀತಿ ಕೀನ್ಯಾದಲ್ಲಿ ಟಾನಾ ನದಿಗೆ ಕಟ್ಟಿದ ಅಣೆಕಟ್ಟಿನಿಂದ 1 ಸಾವಿರ ಮಂದಿ ನಿರ್ವಸತಿಗರಾಗುತ್ತಾರೆ ಎಂದು ಸರಕಾರ ತನ್ನ ವರದಿಯಲ್ಲಿ ತಿಳಿಸಿತ್ತು. ವಿಶ್ವಬ್ಯಾಂಕ್ ಪರಿಶಿಲನೆ ಮಾಡಿದಾಗ 7 ಸಾವಿರ ಜನ  ಸ್ಥಳಾಂತರಗೊಂಡಿದ್ದರು.

ಭಾರತದ ಯೋಜನೆಗಳನ್ನು ಅವಲೋಕಿಸಿದಾಗ, ವರದಿಯಲ್ಲಿ ಅಂದಾಜಿಸಿದ್ದ ಸಂಖ್ಯೆಗಿಂತ ಹೆಚ್ಚು ಮಂದಿ ಸ್ಥಳಾಂತರಗೊಂಡಿರುವುದನ್ನು ನಾವು ಕಾಣಬಹುದು.

ಅಂದಾಜು ಸಂಖ್ಯೆ  ಸ್ಥಳಾಂತರಗೊಂಡವರು
ಆಲಮಟ್ಟಿ ಜಲಾಶಯ – ಕರ್ನಾಟಕ 20,000 2,40,000
ಸರ್ದಾರ್ ಸರೋವರ –
ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್
33,000 3,20,000
ಶ್ರೀಶೈಲಂ ನೀರಾವರಿ ಯೋಜನೆ 63,000 1,50,000
ಮಧ್ಯಪ್ರದೇಶ ನೀರಾವರಿ ಯೋಜನೆ 8,000 19,000
ಗುಜರಾತ್ ನೀರಾವರಿ ಯೋಜನೆ 63,600 1,40,370
ಮಹಾರಾಷ್ಟ್ರ ನೀರಾವರಿ ಯೋಜನೆ 8,031 16,080

ವಾಸ್ತವ ಸಂಗತಿಗಳನ್ನು ಹೇಗೆ ಮರೆಮಾಚಬಲ್ಲರು ಎಂಬುದಕ್ಕೆ ಈ ಕೋಷ್ಟಕ ಸಾಕ್ಷಿಯಾಗಿದೆ.

ಅಣೆಕಟ್ಟುಗಳ ನಿರ್ಮಾಣದಿಂದ ಉದ್ಭವಿಸುವ ಸಮಸ್ಯೆ ಕೇವಲ ಪರಿಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಜಲಾಶಯಗಳು ಸೃಷ್ಟಿಸುತ್ತಿರುವ ಹಲವಾರು ಮಾರಕ ರೋಗಗಳು ಸಂತ್ರಸ್ತರು ಹಾಗೂ ಜಲಾಶಯದ ಸುತ್ತ ಮುತ್ತಲಿನ ಜನಗಳ ಪಾಲಿಗೆ ನರಕ ಸದೃಶವಾಗಿದೆ. ಹಾಗಾಗಿ ಅಣೆಕಟ್ಟುಗಳನ್ನು ಹಾಗೂ ಜಲಾಯಗಳನ್ನು ರೋಗ ರುಜಿನಗಳ ತೊಟ್ಟಿಲು ಎಂದು ಕರೆದರೂ ಅತಿಶಯೋಕ್ತಿಯಾಗಲಾರದು.

Three Gorges Dam

Three Gorges Dam

ಜನತೆಯ ಆರೋಗ್ಯಕ್ಕೆ ಮಾರಕವಾಗಿರುವ ರೋಗವೆಂದರೆ ಕಳೆದ 3 ದಶಕಗಳಿಂದ ಮನುಕುಲವನ್ನು ಬಾಧಿಸುತ್ತಿರುವ ಏಡ್ಸ್ ಮಹಾಮಾರಿ. ಅಣೆಕಟ್ಟುಗಳ ನಿರ್ಮಾಣದ ಜೊತೆಜೊತೆಗೆ ಹರಡುತ್ತಿರುವ ಸಾಂಕ್ರಾಮಿಕ ರೋಗಗಳಲ್ಲಿ ಏಡ್ಸ್ ಖಾಯಿಲೆಗೆ ಅಗ್ರ ಸ್ಥಾನ. ಸಾಮಾನ್ಯವಾಗಿ ಅಣೆಕಟ್ಟು ಕಾಮಗಾರಿ ಕೆಲಸಗಳಲ್ಲಿ ಶೇ.80ರಷ್ಟು ಮಂದಿ ಯಾವುದೇ ಕುಶಲ ಕಲೆಯಿಲ್ಲದೆ ದುಡಿಯುವ ಶ್ರಮ ಜೀವಿಗಳು. ಇವರು ದಿನಗೂಲಿ ಆಧಾರದ ಮೇಲೆ ದೇಶದ ವಿವಿಧ ಸ್ಥಳಗಳಿಂದ ಅಣೆಕಟ್ಟು ಸ್ಥಳಕ್ಕೆ ಬಂದು ಕಾರ್ಮಿಕರಾಗಿ ದುಡಿಯುತ್ತಾ ಒಟ್ಟಾಗಿ ವಸತಿ ಕಾಲೋನಿಗಳಲ್ಲಿ ವಾಸಿಸುವುದು ವಾಡಿಕೆ. ಇವರುಗಳು ವಿವಿಧ ವಾತಾವರಣದ ಪ್ರದೇಶಗಳಿಂದ ಬರುವ ಕಾರಣ ಯಾವ ವ್ಯಕ್ತಿ ಯಾವ ರೋಗವನ್ನು ಹೊತ್ತು ತಂದಿರುತ್ತಾನೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಾಗುತ್ತಿಲ್ಲ. ಹೀಗೆ ಸಾಮಾನ್ಯವಾಗಿ ಒಂದೆಡೆ ವಾಸಿಸುವ ಕಾರ್ಮಿಕರಲ್ಲಿ ಕಾಣ ಬರುವ ಖಾಯಿಲೆಗಳೆಂದರೆ, ಸಿಫಿಲಿಸ್(ಲೈಂಗಿಕ ರೋಗ), ಕ್ಷಯ, ಸಿಡುಬು, ಜ್ವರ ಮತ್ತು ಏಡ್ಸ್ ಖಾಯಿಲೆಗಳು ಪ್ರಮುಖವಾದವು.

ಅಣೆಕಟ್ಟು ಕಾಮಗಾರಿ ವರ್ಷಾನುಗಟ್ಟಲೆ ಜರುಗುವುದರಿಂದ ಈ ಕಾರ್ಮಿಕರು ಸ್ಥಳೀಯ ಜನರ ಜೊತೆ ಒಡನಾಟವಿರಿಸಿಕೊಳ್ಳುವುದು ಸಹಜ. ಇದರಿಂದಾಗಿ ಸ್ಥಳೀಯ ನಿವಾಸಿಗಳೂ ಕೂಡ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ 1978 ರಲ್ಲಿ ಬ್ರೆಜಿಲ್ – ಪೆರುಗ್ವೆ ಗಡಿಭಾಗದಲ್ಲಿ ನಿರ್ಮಾಣವಾಗುತ್ತಿದ್ದ ಅಣೆಕಟ್ಟೊಂದರ ಕಾರ್ಮಿಕರ ಬಗ್ಗೆ ಸಮೀಕ್ಷೆ ಮಾಡಿ ವರದಿಯೊಂದನ್ನು ಸಿದ್ಧಪಡಿಸಿತ್ತು. ಕಾಮಗಾರಿ ಸ್ಥಳದಲ್ಲಿ 38 ಸಾವಿರ ಮಂದಿ ದುಡಿಯುತ್ತಿದ್ದು ಪ್ರತಿದಿನ 2 ಸಾವಿರದಷ್ಟು ಕಾರ್ಮಿಕರು ಒಳಹೋಗುವುದು ಅಥವಾ ಹೊರಬರುವುದನ್ನು ಸಮೀಕ್ಷಾ ವರದಿ ಧೃಡಪಡಿಸಿದೆ. ಜೊತೆಗೆ ಇವರೆಲ್ಲಾ ಕಿಕ್ಕಿರಿದ ಕೊಳಚೆಗೇರಿಗಳಂತಹ ಕಾಲೋನಿಗಳಲ್ಲಿ ವಾಸಿಸುತ್ತಿರುವುದನ್ನು ವರದಿ ಉಲ್ಲೇಖಿಸಿತ್ತು. ಇಂತಹ ಸ್ಥಳಗಳಲ್ಲಿ ದುಡಿಮೆಗಾಗಿ ತನ್ನ ಸಂಸಾರವನ್ನು ತೊರೆದು ಹಲವಾರು ತಿಂಗಳುಗಳ ಕಾಲ ಏಕಾಂಗಿಯಾಗಿ ಜೀವಿಸುತ್ತಾ ದುಡಿಯುವ ಕಾರ್ಮಿಕರು ಅತಿ ವೇಗದಲ್ಲಿ ಕುಡಿತ ಮತ್ತು ವೇಶ್ಯಾವಾಟಿಕೆಯಂತಹ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ.

ಏಡ್ಸ್ ರೋಗದ ತವರಾದ ಆಫ್ರಿಕಾ ಖಂಡದ ಹಲವಾರು ರಾಷ್ಟ್ರಗಳಲ್ಲಿ 1990ರ ದಶಕದಲ್ಲಿ ನಿರ್ಮಾಣ ಪ್ರಗತಿಯಲ್ಲಿದ್ದ ಅಣೆಕಟ್ಟು ಕಾರ್ಮಿಕರಲ್ಲಿ ಶೇ.30ರಷ್ಟು ಮಂದಿ ಏಡ್ಸ್ ಖಾಯಿಲೆಗೆ ತುತ್ತಾಗಿದ್ದರು. ಇದಲ್ಲದೆ ಕಾಮಗಾರಿ ಸ್ಥಳಗಳಲ್ಲಿ ನಡೆಯುವ ಅವಘಡಗಳಿಂದಾಗಿ ಅನೇಕ ಕಾರ್ಮಿಕರು ಮೃತಪಡುತ್ತಿದ್ದಾರೆ. ಇಂತಹ ದುರಂತಗಳು ಹೊರಲೋಕಕ್ಕೆ ಸುದ್ದಿಯಾಗುವ ಸಾಧ್ಯತೆ ಬಹುತೇಕ ಕಡಿಮೆ. ಇವರಿಗೆ ಸಿಗುವ ಪರಿಹಾರ ಕೂಡ ಶೂನ್ಯ. ಭಾರತದ ನಾಗಾರ್ಜುನಸಾಗರ ಜಲಾಶಯ ನಿರ್ಮಾಣದಲ್ಲಿ 154 ಮಂದಿ, 1983ರಲ್ಲಿ ಕೊಲಂಬಿಯಾದ ಅಣೆಕಟ್ಟಿನ ಮಣ್ಣಿನ ಕುಸಿತದಿಂದಾಗಿ 300 ಕಾರ್ಮಿಕರು, ಹೀಗೆ ವಾರ್ಷಿಕವಾಗಿ 10 ಸಾವಿರಕ್ಕೂ ಹೆಚ್ಚು ಮಂದಿ ಅಣೆಕಟ್ಟುಗಳ ನಿರ್ಮಾಣದಲ್ಲಿ ತಮ್ಮ ಜೀವವನ್ನು ಬಲಿಕೊಡುತ್ತಿದ್ದಾರೆ. ದೊಡ್ಡ ಅಣೆಕಟ್ಟುಗಳ ಕುರಿತಂತೆ ಅಧ್ಯಯನ ನಡೆಸಿರುವ ಫ್ರಾನ್ಸ್ ಸಂಸ್ಥೆಯೊಂದರ ಪ್ರಕಾರ ಈವರೆಗೆ 2 ಲಕ್ಷ ಮಂದಿ  ಕಾರ್ಮಿಕರು ಅಣೆಕಟ್ಟು ನಿರ್ಮಾಣದಲ್ಲಿ ಅಸುನೀಗಿದ್ದಾರೆ.

ಅಣೆಕಟ್ಟುಗಳಲ್ಲಾಗುವ ಅವಘಡಗಳ ಸಾವಿಗಿಂತ ಭೀಕರವಾದ ಮತ್ತೊಂದು ಸಂಗತಿಯೆಂದರೆ, ಜಲಾಶಯಗಳಲ್ಲಿ ಸಂಗ್ರಹವಾದ ನೀರಿನಲ್ಲಿ ಉತ್ಪತ್ತಿಯಾಗುತ್ತಿರುವ ಕ್ರಿಮಿ ಹಾಗೂ ಜಂತುಗಳು ತಂದು ಹರಡುತ್ತಿರುವ ಸಾಂಕ್ರಾಮಿಕ ಖಾಯಿಲೆಗಳು ಜಾಗತಿಕ ಮಟ್ಟದಲ್ಲಿ ಮನುಕುಲದ ಆರೋಗ್ಯಕ್ಕೆ ಸವಾಲಾಗಿ ಪರಿಣಮಿಸಿದೆ.

1977ರಿಂದ ವಿಶ್ವ ಆರೋಗ್ಯ ಸಂಘಟನೆ ನೀರಿನಿಂದ ಹರಡುವ ಖಾಯಿಲೆಗಳ ನಿಯಂತ್ರಣಕ್ಕೆ ಹಲವಾರು ಯೋಜನೆ ರೂಪಿಸುತ್ತಿದೆ. ಇದಕ್ಕಾಗಿ ವಿಶ್ವಸಂಸ್ಥೆ ಕೂಡ ಧನಸಹಾಯ ನೀಡುತ್ತಲೇ ಬಂದಿದೆ.

ನೀರಿನಲ್ಲಿ ಕೊಳೆತ ಪ್ರಾಣಿ, ಮರಗಳು ಮತ್ತು ಇನ್ನಿತರ ವಸ್ತುಗಳಿಂದ ಸೃಷ್ಟಿಯಾಗುವ ಹಲವಾರು ಜಂತುಗಳು ನೀರಿನಲ್ಲಿರುವ ಕಳೆ ಸಸ್ಯಗಳಲ್ಲಿ ಆಶ್ರಯ ಪಡೆದು, ನೀರಿನ ಮೂಲಕ ಮನುಷ್ಯನ ದೇಹಕ್ಕೆ ಪ್ರವೇಶ ಪಡೆಯುತ್ತವೆ. ಇವುಗಳಲ್ಲಿ ಆಫ್ರಿಕಾ ಮತ್ತು ಮಧ್ಯಪ್ರಾಚ್ಯ ಪ್ರದೇಶದ ಜಲಾಶಯದಲ್ಲಿ ಕಂಡುಬಂದಿರುವ ಸ್ಕಿಸ್ಟೊಸೇಮ ಹೆಮೆಟೋಬಿಯಮ್ ಹಾಗೂ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ಕಾಣಿಸಿಕೊಂಡಿರುವ ಎಸ್.ಮನ್ಸೋನಿ ಎಂಬ ಬ್ಯಾಕ್ಟೀರಿಯಾಗಳು ಪ್ರಮುಖವಾದವು. ಈ ಹುಳುಗಳು ಮನುಷ್ಯನ ಜಠರ ಸೇರಿ ಅಲ್ಲಿ ಪ್ರೌಢವಸ್ಥೆಗೆ ಬಂದು ನಂತರ ದಿನವೊಂದಕ್ಕೆ 3 ಸಾವಿರ ಮೊಟ್ಟೆ ಇಡುವ ಶಕ್ತಿ ಹೊಂದಿವೆ. ಇದೇ ಜಂತು ಮನುಷ್ಯನ ಎಲ್ಲಾ ಅಂಗಾಂಗಳಿಗೆ ಪ್ರವೇಶ ಮಾಡುವುದರ ಜೊತೆಗೆ ಮತ್ತೆ ಆತ ವಿಸರ್ಜಿಸುವ ಮಲದ ಮೂಲಕ ಹೊರಬಂದು ನೀರಿನಲ್ಲಿ ಆಶ್ರಯ ಪಡೆದು, ಮತ್ತೆ ಬೇರೊಬ್ಬ ವ್ಯಕ್ತಿಯ ದೇಹ ಪ್ರವೇಶಿಸುತ್ತವೆ. ಇವುಗಳಿಂದ ಮನುಷ್ಯನ ಮೇಲೆ ಆಗುವ ನೇರ ಪರಿಣಾಮಗಳೆಂದರೆ ವಿವಿಧ ರೀತಿಯ ಅಲರ್ಜಿ, ಜ್ವರ, ಕೆಮ್ಮು, ಚರ್ಮದಖಾಯಿಲೆ, ಕಿಡ್ನಿ ಹಾಗೂ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು. ಈಗಾಗಲೇ ಜಗತ್ತಿನಾದ್ಯಂತ 37 ಕೋಟಿ ಜನರು ನೀರಿನಲ್ಲಿರುವ ಈ ರೀತಿಯ ಬ್ಯಾಕ್ಟೀರಿಯಾಗಳಿಂದ ಹಲವು ಬಗೆಯ ರೋಗಕ್ಕೆ ತುತ್ತಾಗಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಭಾರತದಂತಹ ಉಷ್ಣ ಪ್ರದೇಶದಲ್ಲಿ ಈ ಖಾಯಿಲೆಗಳು ಹೆಚ್ಚಿನ ಮಟ್ಟದಲ್ಲಿ ಕಂಡುಬಂದಿಲ್ಲ. ಆದರೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕೆಲಸಮಾಡುವ ಕಾರ್ಮಿಕರಿಂದಾಗಿ ಈ ರೋಗಗಳು ಸಣ್ಣ ಪ್ರಮಾಣದಲ್ಲಿ ಭಾರತದಲ್ಲೂ ಹರಡಿವೆ. ಭಾರತದಂತಹ ರಾಷ್ಟ್ರಗಳಿಗೆ ಅಣೆಕಟ್ಟಿನ ಪ್ರಭಾವದಿಂದ ಹರಡಿರುವ ಮಲೇರಿಯಾ ದೊಡ್ಡ ಸವಾಲಾಗಿದೆ.

ಜಾಗತಿಕ ಮಟ್ಟದಲ್ಲಿ ಮಲೇರಿಯಾ ರೋಗವನ್ನು ಹೋಗಲಾಡಿಸಲು, ವಿಶ್ವ ಆರೋಗ್ಯ ಸಂಘಟನೆ ಸಮರೋಪಾದಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಸಹ, ಈ ಪಿಡುಗು ಹಲವು ರೂಪದಲ್ಲಿ ಜಗತ್ತಿನಾದ್ಯಂತ ಜನರನ್ನು ಕಾಡುತ್ತಲೇ ಇದೆ. 1990ರ ದಶಕದಲ್ಲಿ 30ಕೋಟಿ ಜನ ಮಲೇರಿಯಾಕ್ಕೆ ತುತ್ತಾಗಿ, ಇದರಲ್ಲಿ 10 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಇಂದಿಗೂ ಕೂಡ ಈ ಮಲೇರಿಯಾ ಖಾಯಿಲೆ ಜಗತ್ತಿನ ಒಂದು ದೊಡ್ಡ ಪಿಡುಗು ಎಂದು ವಿಶ್ವ ಆರೋಗ್ಯ ಸಂಘಟನೆಯ ತಜ್ಞ ಡಾ.ಹಿರೋಷಿವಕಜಿಮ ಅಭಿಪ್ರಾಯ ಪಡುತ್ತಾರೆ.

ಅನಾಫಿಲಿಸ್ ಜಾತಿಯ ಹೆಣ್ಣು ಸೊಳ್ಳೆಯಿಂದ ಹರಡುವ ಈ ರೋಗದ ಲಕ್ಷಣಗಳು 1970ರಲ್ಲಿ ಮೊದಲಬಾರಿಗೆ ಕೀನ್ಯಾದಲ್ಲಿ ಕಾಣಿಸಿಕೊಂಡಿತು. ಕೀನ್ಯಾದ ನೈರುತ್ಯ ಭಾಗದಲ್ಲಿ ನಿರ್ಮಿಸಿರುವ ಅಣೆಕಟ್ಟುಗಳ ನೀರಾವರಿ ಪ್ರದೇಶಗಳಲ್ಲಿ ಸೊಳ್ಳೆಗಳ ಪ್ರಮಾಣ 4 ಪಟ್ಟು ಹೆಚ್ಚಿರುವುದು ತನಿಖೆಯಿಂದ ಧೃಡಪಟ್ಟಿದೆ.

ಅನಾಫಿಲಿಸ್ ಜಾತಿಗೆ ಸೇರಿದ ಸೊಳ್ಳೆಗಳಲ್ಲಿ 4 ವಿಧಗಳಿದ್ದು, ಇವುಗಳಲ್ಲಿ ಗ್ಯಾಂಬಿಯಾ ಎಂಬ ಸೊಳ್ಲೆ ಆಫ್ರಿಕಾದಲ್ಲಿ, ಅರಣ್ಯನಾಶದ ಫಲವಾಗಿ ಇಮ್ಮಡಿಗೊಂಡು ಹಲವಾರು ರಾಷ್ಟ್ರಗಳ ಪಾಲಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದೆ. ಸೂಡಾನ್ ಮೂಲಕ ಈಜಿಪ್ಟಿಗೂ ವ್ಯಾಪಿಸಿದ ಮಲೇರಿಯಾ 1 ಲಕ್ಷದ 30 ಸಾವಿರ ಮಂದಿಯನ್ನು ಬಲಿತೆಗೆದುಕೊಂಡಿದೆ.

ಗ್ಯಾಂಬಿಯಾ ಹೆಸರಿನ ಈ ಸೊಳ್ಳೆ ಸಾಮಾನ್ಯವಾಗಿ ಆಶ್ರಯ ಪಡೆಯುತ್ತಿದ್ದುದು ಅರಣ್ಯಗಳಲ್ಲಿ. ಇದು ಜಾನುವಾರು ಹಾಗು ಕಾಡಿನ ಪ್ರಾಣಿಗಳ ಶರೀರದಲ್ಲಿ ಆಶ್ರಯ ಪಡೆದು ಜೀವಿಸುತ್ತಿತ್ತು. ಯಾವಾಗ ಅರಣ್ಯಪ್ರದೇಶಗಳ ನಡುವೆ ಹರಿಯುತ್ತಿದ್ದ ನದಿಗಳಿಗೆ ಅಣೆಕಟ್ಟುಗಳು ನಿರ್ಮಾಣವಾದವೋ ಆಗ ಹಿನ್ನೀರಿನ ಪ್ರದೇಶದಲ್ಲಿ ಮುಳುಗಿಹೋದ ಅರಣ್ಯ ಮತ್ತು ಜನವಸತಿ, ರಸ್ತೆ, ಕಾಲುವೆಗಳಿಗಾಗಿ ನೆಲಸಮವಾದ ಅರಣ್ಯ ಪ್ರದೇಶ, ಹೀಗೆ ಅರಣ್ಯ ನಾಶದಿಂದಾಗಿ ಅಂತಿಮವಾಗಿ ಈ ಸೊಳ್ಳೆ ಮಾನವನ ರಕ್ತವನ್ನು ಆಶ್ರಯಿಸಿತು. ಕೀನ್ಯಾ ಮತ್ತು ಶ್ರೀಲಂಕಾದಲ್ಲಿ ನಿರ್ಮಿಸಿದ ಅಣೆಕಟ್ಟುಗಳಿಂದಾಗಿ ವಿವಿಧ ಜಾತಿಯ ಸೊಳ್ಳೆಗಳಿಂದ ಹಲವಾರು ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು ಅವುಗಳು ಹಳದಿ ಜ್ವರ, ಡೆಂಗ್ಯೂ ಜ್ವರ ಮುಂತಾದ ರೂಪವನ್ನು ತಾಳುತ್ತಿದೆ. ಸೊಳ್ಳೆಗಳ ನಿರ್ಮೂಲನಕ್ಕೆ ಡಿ.ಡಿ.ಟಿ. ಪೌಡರ್ ಸಿಂಪಡಿಸುವ ಪ್ರಕ್ರಿಯೆ ಈಗ ವಿಫಲವಾಗಿದ್ದು, ಈ ಕೀಟನಾಶಕ ಪುಡಿಯನ್ನು ತಿಂದು ಜೀರ್ಣಿಸಿಕೊಳ್ಳುವ ಶಕ್ತಿಯನ್ನು ಸೊಳ್ಳೆಗಳು ವೃದ್ಧಿಸಿಕೊಂಡಿವೆ.

ಇವುಗಳ ಜೊತೆ ನದಿ ಹಾಗೂ ಕಡಲ ತೀರದಲ್ಲಿನ ಸೊಳ್ಳೆಗಳಿಂದ ಹರಡುವ ಆನೆಕಾಲು ರೋಗ ಜಗತ್ತಿಗೆ ಸವಾಲಾಗಿದೆ. ವಿಶೇಷವಾಗಿ ಏಷ್ಯಾ ರಾಷ್ಟ್ರಗಳಲ್ಲಿ ಜನತೆ ಆನೆಕಾಲು ರೋಗದಿಂದ ಬಳಲುತ್ತಿದ್ದಾರೆ.

ನೀರಿನಲ್ಲಿ ವಾಸಿಸುತ್ತಿರುವ ಬ್ಲಾಕ್ ಪೈ ಎಂಬ ಜಾತಿಯ ಸೊಳ್ಳೆಯಿಂದಾಗಿ ಕುರುಡುತನ ಆವರಿಸಿಕೊಳ್ಳುವ ಖಾಯಿಲೆಯೊಂದು ಆಫ್ರಿಕಾ ಖಂಡದಲ್ಲಿ ಕಾಣಿಸಿಕೊಂಡಿದೆ. ಅಲ್ಲಿನ 26 ರಾಷ್ಟ್ರಗಳಲ್ಲಿ 3 ಕೋಟಿ ಜನ ಈ ಖಾಯಿಲೆಗೆ ತುತ್ತಾಗಿದ್ದು, 16 ಲಕ್ಷ ಮಂದಿ ತಮ್ಮ ದೃಷ್ಟಿ ಕಳೆದುಕೊಂಡಿದ್ದಾರೆ.

ಇದಕ್ಕಿಂತ ಭಿನ್ನವಾದ ಮತ್ತೊಂದು ಸಾಮಾನ್ಯ ಖಾಯಿಲೆಯೆಂದರೆ ಜಲಾಶಯದಲ್ಲಿ ಕೊಳೆತ ಪ್ರಾಣಿಗಳು ಹಾಗೂ ಮರಗಳಿಂದ ಕಲುಷಿತವಾದ ನೀರು ರಾಸಾಯನಿಕ ಸಿಂಪಡಿಸಿದ ಕೃಷಿ ಪ್ರದೇಶಗಳಲ್ಲಿ ಕಾಲುವೆ ಮೂಲಕ ಹಲವಾರು ನಗರಗಳಿಗೆ ಕುಡಿಯಲು ಬಳಕೆಯಾಗುತ್ತಿದ್ದು ಅನೇಕ ಮಂದಿ ಚರ್ಮ ರೋಗಗಳಿಗೆ ತುತ್ತಾಗಿದ್ದಾರೆ. ರಾಜಸ್ಥಾನದ ಒಣ ಪ್ರದೇಶದಲ್ಲಿ ಹರಿಯುತ್ತಿರುವ ಇಂದಿರಾಗಾಂಧಿ ಕಾಲುವೆಯ ನೀರು ಕುಡಿದ ಅಲ್ಲಿನ ಮಕ್ಕಳು ಕರುಳು ಬೇನೆಯಿಂದ ಬಳಲುತ್ತಿದ್ದಾರೆ. ಈ ಕುರಿತಂತೆ ವಿಸ್ತೃತ ಅಧ್ಯಯನ ನಡೆಸಿದ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾನಿಲಯ ನೀರಿನಲ್ಲಿರುವ ಕಲ್ಮಶ ಹಾಗೂ ಮನುಷ್ಯನ ಮಲ ಮೂತ್ರಗಳು ಇದಕ್ಕೆ ಕಾರಣ ಎಂದು ತಿಳಿಸಿದೆ. ಇದೀಗ ನಿರ್ಮಾಣವಾಗುತ್ತಿರುವ ಸರದಾರ್ ಸರೋವರದ ಕುಡಿಯುವ ನೀರಿನ ಯೋಜನೆಗೆ ಇಂತಹದ್ದೇ ಭೀತಿ ಎದುರಾಗಿದೆ. ಒಟ್ಟಾರೆ ಜಲಾಶಯ ಮತ್ತು ಕಾಲುವೆಗಳೆಂದರೆ ಸಾಂಕ್ರಾಮಿಕ ರೋಗಗಳ ವಾಹಕಗಳು ಎಂಬಂತಾಗಿದೆ.

(ಮುಂದುವರಿಯುವುದು)

ಚಿತ್ರಕೃಪೆ: ವಿಕಿಪೀಡಿಯ

Leave a Reply

Your email address will not be published. Required fields are marked *