Daily Archives: February 6, 2012

ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 5


– ಎನ್.ಎಸ್. ಶಂಕರ್


ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 1
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 2
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 3
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 4

85ರ ಸಾರ್ವತ್ರಿಕ ಚುನಾವಣೆಯಲ್ಲಿ ದಸಂಸ, ಹೆಗಡೆ ಸರ್ಕಾರಕ್ಕೆ ಬಹಿರಂಗ ಬೆಂಬಲ ಘೋಷಿಸಿದ ಮೇಲೆ ಏನಾಯಿತು ಎಂದು ಈಗ ಬಿಡಿಸಿ ನೋಡಿದರೆ, ಮೊಟ್ಟಮೊದಲ ಬಾರಿ ಕುರ್ಚಿಯ ಸಖ್ಯ ಪಡೆದ ದಲಿತ ಚಳವಳಿಯ ಅವಸಾನ ಆ ದಿನವೇ ಆರಂಭವಾದಂತೆ ತೋರುತ್ತದೆ. (ಆದರೆ 83ರಲ್ಲೇ ಜನತಾರಂಗದ ಪರ ನಿಲುವು ತಳೆದಿದ್ದ ರೈತ ಚಳವಳಿಗೆ ಆ ಬಿಕ್ಕಟ್ಟು ಎದುರಾಗಲಿಲ್ಲ.)

ಆವರೆಗೆ ಹೋರಾಟದಲ್ಲೇ ಹಣ್ಣಾಗಿದ್ದ ದಲಿತರು ಈಗ ಅಧಿಕಾರದ ಬೆಚ್ಚನೆ ಸಾಮೀಪ್ಯ ಪಡೆದರು. ಕೈಯಲ್ಲಿ ದುಡ್ಡು ಕಾಸು, ಓಡಾಡಲು ಕಾರು. ಮುಂಚೆ ವಾರಗಟ್ಟಳೆ ಧರಣಿ ಕೂತು ಮಾಡಿಸಬೇಕಿದ್ದ ಕೆಲಸಕ್ಕೆ ಈಗ ಒಂದು ಫೋನು ಸಾಕು… ಈ ಹೊಸ ‘ಅಧಿಕಾರ’ ಕೆಲವರ ಪಾಲಿಗೆ ಜೀವನೋಪಾಯ ಒದಗಿಸತೊಡಗಿದ್ದೂ ಆಶ್ಚರ್ಯವಲ್ಲ. ಅದಕ್ಕೇ ಈವರೆಗೆ ಬೆವರು ಬಸಿಯಬೇಕಾದ ಪ್ರಯಾಸವಾಗಿದ್ದ ಚಳವಳಿ ಈಗ ಲಾಭದ ಸಾಧ್ಯತೆಯಾಗಿ ‘ಅಸ್ತಿ’ಯ ಸ್ವರೂಪ ಪಡೆಯಿತು. ಮುಂದಿನ ಹೆಜ್ಜೆಯಾಗಿ ಸಂಘಟನೆಯಲ್ಲಿ ಮೊಟ್ಟ ಮೊದಲ ಒಡಕು ದನಿ ಹುಟ್ಟಿತು- ‘ದಲಿತ ಚಳವಳಿಯಲ್ಲಿ ದಲಿತೇತರರಿಗೇನು ಕೆಲಸ?’ ಪರಿಣಾಮ ದಲಿತ ಸಂಘಟನೆ ಮೊದಲ ಬಾರಿ ಒಡೆಯಿತು (1986). ಆ ಒಡಕು- ಇನ್ನೊಂದು ಅರ್ಥದಲ್ಲಿ ‘ಆಸ್ತಿ ಹಿಸ್ಸೆ’ಯ ವಿಧಿಯಾಗಿತ್ತು.

ಅಂದರೆ ದಲಿತ ಸಂಘಟನೆಯೂ ಜಾತಿವಾದಿಯಾಗತೊಡಗಿತ್ತು. ಅಂದ ಮೇಲೆ ಈ ಬೆಳವಣಿಗೆ ಮುಂದೊಮ್ಮೆ ‘ಎಡಗೈ- ಬಲಗೈ’ಯಾಗಿ ಸೀಳುವುದು ಅನಿವಾರ್ಯವಾಗಿತ್ತು.

(ದೇವನೂರ ಮಹಾದೇವ ಈಗ ನೆನಪಿಸಿಕೊಂಡಿದ್ದು: ಆ ವೇಳೆಗಾಗಲೇ ಎರಡು ಬಣಗಳಾಗಿತ್ತಲ್ಲ, ಆ ಎರಡೂ ಬಣಗಳು ದಲಿತೇತರರ ಪ್ರಶ್ನೆಯೆತ್ತುತ್ತಿದ್ದುದು- ತಮ್ಮ ಎದುರು ಬಣದ ದಲಿತೇತರರ ವಿಷಯದಲ್ಲಿ ಮಾತ್ರ. ಅಂದರೆ ತಮ್ಮದೇ ಬಣದಲ್ಲಿದ್ದ ದಲಿತೇತರರ ಬಗ್ಗೆ ಅವರ ತಕರಾರಿರಲಿಲ್ಲ. ಅಂಥವರು ತಮ್ಮೊಡನಿದ್ದು ರಾಜಕೀಯವಾಗಿ ಉಪಯೋಗವಾಗುವಂತಿದ್ದರೆ ಆಗಲಿ ಎಂಬ ಧೋರಣೆ…!)

86ರ ಅಂದಿನ ಮೊದಲ ಒಡಕಿನಿಂದ ಸಂಘಟನೆಗೆ ದೊಡ್ಡ ರೀತಿಯ ಧಕ್ಕೆ ಒದಗಲಿಲ್ಲವೇನೋ ಸರಿ. ಆದರೆ ಅಂದು ಆರಂಭವಾದ ವಿಘಟನೆಯ ಇಳಿಹಾದಿಯ ಓಟ, ಅಷ್ಟಕ್ಕೇ ನಿಲ್ಲುವುದೂ ಸಾಧ್ಯವಿರಲಿಲ್ಲ… ಮುಂದಕ್ಕೆ ಏನೆಲ್ಲ ಆಗಿ ಎಷ್ಟೆಲ್ಲ ನಡೆದ ಮೇಲೆ 2002ರಲ್ಲಿ ಕೆಲವು ಗೆಳೆಯರು ‘ದಸಂಸ ಒಡಕುಗಳು- ಒಂದು ಅವಲೋಕನ’ ಎಂಬ ಕಿರುಹೊತ್ತಗೆ ತಂದರು. ಚಳವಳಿಗಳು, ಅದರಲ್ಲೂ ದಲಿತ ಚಳವಳಿ ಛಿದ್ರಗೊಂಡ ಕತೆ ತಿಳಿಯಬೇಕೆನ್ನುವವರು 25 ಪುಟಗಳ ಈ ಪುಟ್ಟ ಪುಸ್ತಕ ಓದಬೇಕು. ಆ ಹೊತ್ತಗೆ ಕೇವಲ ವಿಘಟನೆಯ ಚರಿತ್ರೆಯಲ್ಲ- ಕಳೆದುಹೋದ ಸಾಮ್ರಾಜ್ಯದ ಅವಶೇಷಗಳ ನಡುವೆ ನಿಂತು ಸುರಿಸಿದ ಕಂಬನಿ. ಪಶ್ಚಾತ್ತಾಪದ, ಆತ್ಮಶುದ್ಧಿಯ ಕಣ್ಣೀರು.

**

2002ರ ಏಪ್ರಿಲ್ 26ರಂದು ಬಂಗಾರಪೇಟೆ ತಾಲೂಕಿನ ನಾಗಲಾಪಲ್ಲಿಯಲ್ಲಿ ಜಮೀನು ವಿವಾದದಲ್ಲಿ ದಲಿತ ಮಹಿಳೆ ಯಶೋದಮ್ಮ ಮತ್ತು ಆಕೆಯ ಇಬ್ಬರು ಮಕ್ಕಳ ಬರ್ಬರ ಕಗ್ಗೊಲೆ ನಡೆಯಿತು. ಯಶೋದಮ್ಮನನ್ನು ತುಂಡು ತುಂಡು ಮಾಡಿದ ಹಂತಕರು, ಅಷ್ಟಕ್ಕೂ ಬಿಡದೆ ಆಕೆಯ ಮರ್ಮಾಂಗದಲ್ಲಿ ಕಟ್ಟಿಗೆ ತುರುಕಿದರು. ಅದಕ್ಕೆ ಎರಡೇ ವರ್ಷಗಳ ಹಿಂದೆ ಕಂಬಾಲಪಲ್ಲಿಯಲ್ಲಿ ದಲಿತರ ನರಮೇಧ ನಡೆದಿತ್ತು. ಅವೆರಡೂ ಸಂದರ್ಭಗಳಲ್ಲಿ ದಲಿತ ಚಳವಳಿಗಳು ತೋರಿದ ಕಾಟಾಚಾರದ ಪ್ರತಿಕ್ರಿಯೆಯಿಂದ ದಿಗ್ಭ್ರಮೆಗೊಂಡ ಕೆಲವು ದಲಿತ ಲೇಖಕ ಕಲಾವಿದರು (ದಲೇಕ) ‘ಏನಾದರೂ ಮಾಡಲೇಬೇಕೆಂದು’ ನಾಗಲಾಪಲ್ಲಿಯಲ್ಲೇ ಒಂದು ದಿನದ ಮೌನ ಪ್ರತಿಭಟನೆ ನಡೆಸಿದರು. ‘ಕಗ್ಗೊಲೆಯ ಅಂಗಳದಲ್ಲಿ ಒಂದು ದಿನದ ಮೌನ’ ಎಂಬ ಆ ಕಾರ್ಯಕ್ರಮ- ‘ಮುಂದೇನು?’ ಎಂಬ ಪ್ರಶ್ನೆಗೆ ದಾರಿಯಾಯಿತು. ಆ ಪ್ರಶ್ನೆಗೆ ಉತ್ತರವಾಗಿ ದಲಿತ ಚಳವಳಿಯ ತಾಯಿಬೇರಾದ ‘ದಲಿತ ಲೇಖಕ ಕಲಾವಿದರ’ ಬಳಗಕ್ಕೇ ಮರುಜೀವ ಬಂದಂತೆ ‘ದಲೇಕ’ ಅಸ್ತಿತ್ವಕ್ಕೆ ಬಂತು. ಈ ಹೊತ್ತಗೆಯನ್ನು ಪ್ರಕಟಿಸಿದ್ದು ಅದೇ ‘ದಲೇಕ’.

‘ಒಡಕಿನ ಮೂಲ ಕಾರಣಗಳನ್ನು ಶೋಧಿಸಲು’ ದಲೇಕ, ಎಲ್ಲ ದಲಿತ ಲೇಖಕರು, ಚಿಂತಕರು, ನೇತಾರರು, ಕಾರ್ಯಕರ್ತರು ಹಾಗೂ ಚಳವಳಿ ಬೆಂಬಲಿಗರ ಸಭೆ ಕರೆದು, ಅವರ ಮುಂದೆ ಈ ‘ಅವಲೋಕನ’ ಮಂಡಿಸಿ ಚರ್ಚೆಗೆ ಬಿಟ್ಟಿತು. ಆ ಹೊತ್ತಗೆ ಸಭೆಯ ಹಿನ್ನೆಲೆಯನ್ನು ಕಟ್ಟಿಕೊಟ್ಟಿದ್ದು ಹೀಗೆ:

…ಇದೀಗ ದಿನೇ ದಿನೇ ಚರಿತ್ರೆಯಲ್ಲಿ ಹಿಂದೆಂದೂ ಕಂಡಿರದಷ್ಟು ದಲಿತರ ಮೇಲಿನ ದ್ವೇಷ, ಕ್ರೌರ್ಯ ಪ್ರಕಟಗೊಳ್ಳುತ್ತಿವೆ. ಬೆಲ್ಚಿಯನ್ನು ಮೀರಿಸಿದ ಕಂಬಾಲಪಲ್ಲಿಯ ದಲಿತರ ಸಜೀವದಹನ, ವಣೇನೂರಿನ ಬೆತ್ತಲೆ ಪ್ರಕರಣ… ನಾಗಲಾಪಲ್ಲಿಯ ತಾಯಿ ಮಕ್ಕಳ ಕಗ್ಗೊಲೆ, ದೊಡ್ಡಬೆಲೆಯ ಪ್ರತೀಕಾರದ ಕಗ್ಗೊಲೆಗಳು, ಶಿಡ್ಲಘಟ್ಟದ ಮುತ್ತೂರಿನ ದಲಿತ ಯುವಕನ ಕೊಲೆ, ಹೀಗೆ ಮನುಕುಲವೇ ಬೆಚ್ಚಿ ಬೀಳುವಂತಹ ಬರ್ಬರ ಪ್ರಕರಣಗಳು ಸಂಭವಿಸಿವೆ. ಆದರೂ ಇಂತಹ ಹತ್ಯಾಕಾಂಡಗಳಿಗೆ ಪ್ರಬಲ ಸಾಮೂಹಿಕ ಪ್ರತಿರೋಧ ಕಂಡುಬಂದಿಲ್ಲ. ಇವು ದಲಿತ ಸಮುದಾಯದ ಮೇಲೆ ನಡೆಯುತ್ತಿರುವ ಭೌತಿಕ ಹಲ್ಲೆಯಾದರೆ ಇನ್ನು ದೇಶದ ಬದಲಾಗುತ್ತಿರುವ ಆರ್ಥಿಕ ನೀತಿ ಅವರನ್ನು ಹಸಿವು, ದಾರಿದ್ರ್ಯ, ನಿರುದ್ಯೋಗದ ದವಡೆಗೆ ನೂಕಿದೆ. ಸಾರ್ವಜನಿಕ ಸೇವಾಕ್ಷೇತ್ರಗಳಲ್ಲಿ ಲಭ್ಯವಿದ್ದ ಮೀಸಲಾತಿ ಸೌಲಭ್ಯ ಹೇಳ ಹೆಸರಿಲ್ಲದಂತೆ ಮಾಯವಾಗಿದೆ. ‘ದಲಿತ ಮತ ಬ್ಯಾಂಕ್’ನ ಪರಿಕಲ್ಪನೆಯೇ ಬದಲಾಗಿಹೋಗಿರುವುದರಿಂದ ಹಾಗೂ ದಲಿತ ಚಳವಳಿಯ ನೇತಾರರ ಮುಖ್ಯವಾಹಿನಿ ರಾಜಕಾರಣದ ಮೋಹಿನಿ ಭಸ್ಮಾಸುರ ಆಟದಿಂದಾಗಿ ದಲಿತ ಅಸ್ತಿತ್ವ ರಾಜಕಾರಣದ ಅಡಿಪಾಯವೇ ಸಡಿಲುಗೊಂಡಿದೆ. ಹೀಗಾಗಿ ಕನಿಷ್ಠ ಪ್ರಜಾಸತ್ತಾತ್ಮಕ ಮಾನವ ಹಕ್ಕುಗಳಿಂದಲೂ ದಲಿತ ಸಮುದಾಯ ಇಂದು ವಂಚಿತವಾಗಿದೆ…

ಚಳವಳಿಯ ಆವರೆಗಿನ ಸ್ವರೂಪವನ್ನು ಸಾಕಷ್ಟು ವಿಸ್ತಾರವಾಗಿ, ಭಾರವಾದ ಎದೆಯಿಂದ ನಿರೂಪಿಸುವ ಮುಂದಿನ ಬರಹ, ದಲಿತ ಸಂಘರ್ಷ ಸಮಿತಿಯ ರಾಜಕೀಯ ನಿರ್ಧಾರವನ್ನು ಅವಲೋಕಿಸುವುದು ಹೀಗೆ:

…ಅದಮ್ಯ ಆತ್ಮವಿಶ್ವಾಸದಿಂದ ತುಂಬಿ ತುಳುಕುತ್ತಿದ್ದ ಇವರ (ದಲಿತ ಮುಖಂಡರ) ಕಣ್ಣುಗಳಿಗೆ, ಮುಖ್ಯವಾಹಿನಿಯ ಕಬಂಧಬಾಹುಗಳು ತಮ್ಮತ್ತ ಚಾಚಿ ಬರುತ್ತಿರುವ ಅಪಾಯದ ಸುಳಿವು ಕಾಣದೆ ಹೋಯಿತು. ಅಧಿಕಾರ ರಾಜಕಾರಣದ ಸಂಚಿನ ನೆರಳೊಂದು ಸಂಘಟನೆಯ ಒಳಗೆ ಸುಳಿಯತೊಡಗಿತು. ಅದು ಸಹಜ ಬೆಳವಣಿಗೆಯೂ ಆಗಿತ್ತು. ಅಷ್ಟರಲ್ಲಾಗಲೇ ರಾಜಕೀಯ ಅಧಿಕಾರವೊಂದೇ ಸಮಸ್ತ ದಲಿತ ಸಮಸ್ಯೆಗಳಿಗೆ ಕೀಲಿ ಕೈ ಎಂಬ ಅರಿವು ಸಂಘಟನೆಗಾಗಿತ್ತು. ಆದರೆ ಅದನ್ನು ನಿರ್ವಹಿಸುವ ನಿಟ್ಟಿನಲ್ಲಿ ಸ್ಪಷ್ಟ ನಿಲುವು, ಖಚಿತ ಕಣ್ಣೋಟ ಸಾಧ್ಯವಾಗದೇ ಹೋಯಿತು… (ಇದು) ಸಮೂಹ ರಾಜ್ಯಾಧಿಕಾರದ ಬದಲಿಗೆ ವೈಯಕ್ತಿಕ ರಾಜಕೀಯ ಪ್ರಾತಿನಿಧ್ಯದ ‘ಮೋಹಿನಿ ಭಸ್ಮಾಸುರ’ ಆಟಕ್ಕೆ ನಾಂದಿಯಾಯಿತು…

ಮಹಾದೇವ ತಮ್ಮ ಮುನ್ನೋಟ ಹಾಗೂ ನೈತಿಕ ಬಲದಿಂದ ದಸಂಸದ ರಾಜಕೀಯ ಕ್ರಿಯಾಶೀಲತೆಗೆ ಪ್ರೌಢಿಮೆ ತಂದಿದ್ದೇನೋ ಹೌದು. ಆದರೆ ಅದನ್ನು ನಿರ್ವಹಿಸುವ ನಿಟ್ಟಿನಲ್ಲಿ ಸ್ಪಷ್ಟ ನಿಲುವು, ಖಚಿತ ಕಣ್ಣೋಟ ಸಾಧ್ಯವಾಗದೇ ಹೋದದ್ದರ ಹೊಣೆಯನ್ನೂ ಅವರೇ ಹೊರಬೇಕಾಯಿತು. ಮಹಾದೇವರ ಅಭಿಮಾನಿಗಳೂ ಸೇರಿದಂತೆ, ಎಲ್ಲರೂ ಅವರ ಮೇಲೆ ಇಂದಿಗೂ ಮಾಡುವ ಆಪಾದನೆ ಇದೇ.

ಅವರ ವಿರುದ್ಧದ ತಕರಾರುಗಳು ಇದಿಷ್ಟೇ ಅಲ್ಲ ಕೂಡ. 90ರ ದಶಕದಲ್ಲಿ ಆರಂಭವಾದ ವಿಭಜನೆಯ ವ್ಯಾಧಿಯನ್ನು ತಡೆಯುವುದಿರಲಿ, ತಮ್ಮದೇ ಗೊಂದಲಗಳ ಮೂಲಕ ಮಹಾದೇವ ಅದಕ್ಕೆ ಪರೋಕ್ಷವಾಗಿ ನೀರೆರೆದರು ಎಂಬ ಮಾತುಗಳೂ ಇವೆ. ಅಷ್ಟೇಕೆ, ‘ಎಡಗೈ ಬಲಗೈ ವಿಭಜನೆಗಳು ಮೂಲದಲ್ಲಿ ದೇವನೂರ ಮಹಾದೇವ ಮತ್ತು ಬಿ. ಕೃಷ್ಣಪ್ಪ ಎಂಬ ದಲಿತರೊಳಗಿನ ಎರಡು ಜಾತಿಧ್ರುವಗಳ ನಡುವಣ ಇಬ್ಭಾಗವೇ ಆಗಿತ್ತು’ ಎಂದು ಗೋವಿಂದಯ್ಯ ಬರೆದೂ ಬರೆದರು.

**

ನನ್ನ ಪ್ರಕಾರ ಎಲ್ಲಕ್ಕಿಂತ ಗುರುತರವಾದದ್ದು, ದೇವನೂರರು ರೈತಸಂಘದ ಪುಟ್ಟಣ್ಣಯ್ಯನವರ ಜೊತೆ ಸೇರಿ ಕಟ್ಟಿದ ‘ಸರ್ವೋದಯ ಕರ್ನಾಟಕ’ ಎಂಬ ರಾಜಕೀಯ ಪಕ್ಷ.

ಮುಖ್ಯ, ಸಂಘಟನೆಯಲ್ಲಿ ತಾನು ‘ಪೋಷಕ ನಟ’ ಮಾತ್ರ ಎಂದು ಮಹಾದೇವ ಎಷ್ಟೇ ಹೇಳಿಕೊಂಡರೂ ಒಂದು ದಶಕಕ್ಕೂ ಹೆಚ್ಚು ಕಾಲ ಚಳವಳಿಗೆ ನೈತಿಕ ದಿಕ್ಕು ನೀಡಿದ್ದೇ ಅವರು ಎಂಬುದನ್ನೂ; ಅವರು ಯಾವ ಸ್ಥಾನದಲ್ಲಿರಲಿ ಬಿಡಲಿ, ಇಡೀ ಸಂಘಟನೆ ಮಾರ್ಗದರ್ಶನಕ್ಕಾಗಿ ಅವರತ್ತಲೇ ಕತ್ತೆತ್ತಿ ನೋಡುತ್ತಿದ್ದುದನ್ನೂ ಇಲ್ಲಿ ಕಾಣಿಸಲೇಬೇಕು. ಆದರೆ ಮಹಾದೇವ ಸರ್ವೋದಯ ಕರ್ನಾಟಕ ದ ಮೂಲಕ ಚಳವಳಿ ರಾಜಕಾರಣದ ಸಾಧ್ಯತೆಗಳನ್ನೇ ಮುರುಟಿಸಿಬಿಟ್ಟರು. ಅಂದರೆ ಜನಾಂದೋಲನದ ರಾಜಕಾರಣವನ್ನು ಕುರಿ ಮಾಡಿ, ಅಧಿಕಾರ ರಾಜಕಾರಣದ ಹುಲಿಯ ಬಾಯಿಗೆ ತಂದೊಪ್ಪಿಸಿಬಿಟ್ಟರು. ಚಳವಳಿಯು ಅಧಿಕಾರ ರಾಜಕಾರಣಕ್ಕೆ ಶರಣು ಹೋದದ್ದರ ಪರಿಣಾಮವನ್ನು ‘ದಲೇಕ’ ಹೊತ್ತಗೆಗಿಂತ ಸಮರ್ಪಕವಾಗಿ ವಿವರಿಸಲು ಸಾಧ್ಯವಿಲ್ಲ:

…ಇದರ ಫಲವಾಗಿ ‘ದಸಂಸ’ದ ತುಂಬಿದ ಕೊಡಕ್ಕೆ ಒಂದೆರಡು ಒಡಕಿನ ಸಣ್ಣ ರಂಧ್ರಗಳು ಮೂಡಿ ಅದುವರೆಗೂ ಸಾವಿರಾರು ಜನರ ಶ್ರಮದ ಬೆವರು ತುಂಬಿದ ಕೊಡ ಸೋರತೊಡಗಿತು….

ಹಾಗೆ ‘ಕೊಡ ಸೋರತೊಡಗಿದ್ದು’ ಸರ್ವೋದಯಕ್ಕಿಂತಲೂ ಇನ್ನೂ ತೀರಾ ಹಿಂದೆಯೇ.

ಜನತಾ ಪರಿವಾರದ ಬೆಂಬಲಕ್ಕೆ ನಿಲ್ಲುವ 85ರ ನಿರ್ಧಾರದ ಹಿಂದೆ ಅಮಾಯಕ ನಿಸ್ಪೃಹತೆಯಿತ್ತು. ಆದರೆ ಒಮ್ಮೆ ತಗುಲಿದ ಅಧಿಕಾರ ರಾಜಕಾರಣದ ‘ಸೋಂಕು’ ದಲಿತ ಸಂಘಟನೆಗೆ ಹತ್ತಿದ ಗೆದ್ದಲಾಯಿತು. ರಾಜಕೀಯ ಆಕಾಂಕ್ಷೆಯೆಂಬುದು ಚಪಲವಾಯಿತು, ಗೀಳಾಯಿತು, ಕಡೆಗೆ ಆತ್ಮಘಾತುಕ ವ್ಯಸನವಾಗಿಹೋಯಿತು. ಮುಂದಿನ ಒಂದು ದಶಕದ್ದು- ದಲೇಕ ಬಣ್ಣಿಸಿದಂತೆ- ಮೋಹಿನಿ ಭಸ್ಮಾಸುರ ಆಟದ ಚರಿತ್ರೆಯೇ.

89ರ ಚುನಾವಣೆ ಬಂತು. ಆ ವೇಳೆಗಾಗಲೇ ಮತ್ತು ಅಲ್ಲಿಂದಾಚೆಗೆ, ಸಂಘಟನೆಯಲ್ಲಿ ರಾಜಕೀಯ ಬಿರುಗಾಳಿಯೇ ಬೀಸತೊಡಗಿತು. ಅಷ್ಟೇ ಅಲ್ಲ, ರಾಜಕೀಯ ನೂಕುನುಗ್ಗಲಿನ ಹುರುಪಿಗೆ ಸಮಸಮನಾಗಿ ಸಂಘಟನೆಯಲ್ಲಿ ಬಿರುಕಿನ ವಿಷಮ ಲಕ್ಷಣಗಳೂ ಒಡೆದು ಕಾಣತೊಡಗಿದವು. ಈ ಗುಂಪುಗುಳಿತನದ ವಾತಾವರಣದಲ್ಲೂ ಕೆಲವರು ಚಳವಳಿಯನ್ನು ಮತ್ತೆ ಹಳಿ ಮೇಲೆ ತರುವ ಪ್ರಯತ್ನಗಳನ್ನು ಕೈ ಬಿಟ್ಟಿರಲಿಲ್ಲ.

‘….ಬಿರುಕು ನಿವಾರಣೆಗಾಗಿ ಚಳವಳಿಯು ದಲಿತ ಸಾಂಸ್ಕೃತಿಕ ಪರಂಪರೆಯ ಆಶ್ರಯ ಪಡೆಯಬೇಕೆಂದು ಚಿಂತಿಸಿದ ಹೆಸರಾಂತ ಸಾಂಸ್ಕೃತಿಕ ಚಿಂತಕ ಕೆ. ರಾಮಯ್ಯ ಇದಕ್ಕಾಗಿ 1991ರ ವೇಳೆಗೆ ಬೆಂಗಳೂರಿನಲ್ಲಿ ಐತಿಹಾಸಿಕವಾದ ಬೃಹತ್ ಜನಕಲಾಮೇಳ ನಡೆಸಿದರು ಕೂಡ..’ ಎಂದು ಗೋವಿಂದಯ್ಯನವರ ಲೇಖನ ದಾಖಲಿಸುತ್ತದೆ. ಮುಂದಿನದನ್ನು ದಲೇಕ ಹೊತ್ತಗೆ ಬಣ್ಣಿಸುವುದು ಹೀಗೆ:

…’ಜನಕಲಾಮೇಳದ’ದ ಒಟ್ಟು ಆಶಯ ಇಡೀ ದಲಿತಲೋಕ ತನ್ನೊಳಗೆ ಅಡಗಿರುವ ಅಪಾರವಾದ ಸಾಂಸ್ಕೃತಿಕ ಜಲನಿಧಿಯನ್ನು ಕಂಡುಕೊಳ್ಳುವುದು, ಹಾಗೂ ತನ್ನೊಳಗಿನ ಆ ಜೀವದ್ರವ್ಯವನ್ನೇ ರಕ್ಷಾಕವಚವನ್ನಾಗಿ ಪರಿವರ್ತಿಸಿ ಅವಕಾಶವಾದಿ, ವೈಯಕ್ತಿಕ ಹಿತಾಸಕ್ತಿ ಪ್ರಧಾನ ರಾಜಕೀಯದ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳುವಂತೆ ಮಾಡುವುದೇ ಆಗಿತ್ತು. ಅಷ್ಟೇ ಅಲ್ಲದೆ ಸಮುದಾಯದ ಒಡಲಲ್ಲೇ ಹುದುಗಿರುವ ಸಂಪನ್ಮೂಲಗಳನ್ನೇ ನೀರು ಗೊಬ್ಬರವಾಗಿಸಿ ಬಿಡುಗಡೆಯ ಸಸಿಯೊಂದನ್ನು ಹೆಮ್ಮರವಾಗಿಸುವ ಕನಸಿನದಾಗಿತ್ತು. ಆದರೆ ಇಂತಹ ಸಸಿಯೊಂದನ್ನು ನೆಡಲು ಕೂಡ ಅವಕಾಶವಾಗದಂತೆ ಅವಕಾಶವಾದಿ ರಾಜಕಾರಣ ದಿಕ್ಕು ತಪ್ಪಿಸಿತು… ಈ ಅನಾಹುತದಿಂದಾಗಿ ಚಾರಿತ್ರಿಕ ಸಂದರ್ಭ, ಸಂಘಟನೆಯನ್ನು ಅನಿವಾರ್ಯವಾಗಿ ಪಕ್ಷ ರಾಜಕಾರಣದ ಬಾಗಿಲ ಮುಂದೆ ತಂದು ನಿಲ್ಲಿಸಿತ್ತು….

ಯಾಕೆಂದರೆ ಜನಕಲಾಮೇಳಕ್ಕೆ ರಾಂವಿಲಾಸ್ ಪಾಸ್ವಾನ್ರನ್ನು ಕರೆದು ರಾಜಕೀಯ ಮಸಾಲೆ ಬೆರೆಸಲು ಅದಾಗಲೇ ಕೆಲವರು ತಯಾರಾಗಿ ನಿಂತಿದ್ದರು! ಅಂದರೆ ಮೇಳದ ಯಶಸ್ಸು ಚಳವಳಿಯ ಅಂತಸ್ಥೈರ್ಯ ಹೆಚ್ಚಿಸಿತೋ ಬಿಟ್ಟಿತೋ, ಅದನ್ನು ರಾಜಕೀಯ ಬಂಡವಾಳವಾಗಿ ಬಳಸುವುದರಲ್ಲೇ ಹೆಚ್ಚಿನವರ ಆಸಕ್ತಿಯಿದ್ದಂತೆ ತೋರುತ್ತದೆ. ಅದಕ್ಕೆ ತಕ್ಕಂತೆ 91ರ ಚುನಾವಣೆಗಳಲ್ಲಿ ಕೋಲಾರ ಲೋಕಸಭೆ ಕ್ಷೇತ್ರಕ್ಕೆ ಜನತಾ ಪರಿವಾರದ ಅಭ್ಯರ್ಥಿಯಾಗಿ ದಲಿತ ಸಂಘಟನೆಯ ಪ್ರತಿನಿಧಿಗೆ ಅವಕಾಶವೂ ಸಿಕ್ಕಿತು!

ಆಗ ಇಬ್ಬರು ಸ್ಥಳೀಯ ನಾಯಕರ ಜಟಾಪಟಿ ಬಗೆಹರಿಸಲು ಬಂದ ಬಿ. ಕೃಷ್ಣಪ್ಪನವರು ತಮ್ಮನ್ನೇ ಅಭ್ಯರ್ಥಿ ಎಂದು ಘೋಷಿಸಿಕೊಂಡುಬಿಟ್ಟರು! ಆ ಸಂದರ್ಭದಲ್ಲಿ ಅವರ ನಿರ್ಧಾರ ತಪ್ಪೆಂದು ಮನವರಿಕೆ ಮಾಡಲು ರಾಮಯ್ಯ ಇನ್ನಿಲ್ಲದಂತೆ ಪ್ರಯತ್ನಿಸಿದರು. ಸಾಧಾರಣವಾಗಿ ಹೇಳಿದವರ ಮಾತಿಗೆ ಹ್ಞೂಂಗುಡುತ್ತಿದ್ದ ಹಸುಗೂಸಿನಂಥ ಕೃಷ್ಣಪ್ಪನವರು ಆಗ ಕೇಳಲಿಲ್ಲ. ನಿಂತರು. ಹೀನಾಯವಾಗಿ ಸೋತರು.

ಇಷ್ಟು ಹೊತ್ತಿಗೆ ಪರಿಸ್ಥಿತಿ ಎಲ್ಲರ ಕೈ ಮೀರಿಹೋಗಿತ್ತು. ರಾಜಕೀಯ ಆಕಾಂಕ್ಷೆ ಯಾರ ನಿಯಂತ್ರಣಕ್ಕೂ ಸಿಗದ ಹುಚ್ಚುಕುದುರೆಯಾಗಿಬಿಟ್ಟಿತ್ತು. ಅಷ್ಟಾದರೂ, ಸಂಘಟನೆಯನ್ನು ಮೂಲಸ್ವರೂಪದಲ್ಲಿ ಹೋರಾಟದ ವೇದಿಕೆಯಾಗಿಯೇ ಉಳಿಸಿಕೊಳ್ಳುವ ಹಂಬಲ ಕೆಲವರಿಗಾದರೂ ಇತ್ತು.

(ಮುಂದುವರೆಯುವುದು)