Monthly Archives: March 2012

ವಾಗ್ವಾದಗಳೂ, ಹೋರಾಟಗಳೂ ಗರ್ಭಪಾತಗೊಂಡಂತಹ ಸಂದರ್ಭದಲ್ಲಿ…


-ಬಿ. ಶ್ರೀಪಾದ ಭಟ್


 

ನಿಡುಮಾಮಿಡಿ ಮಠದ ಹಿಂದಿನ ಸ್ವಾಮಿಗಳಾದ ಜ.ಚ.ನಿ. ಅವರು ಬಸವಣ್ಣನವರ “ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಾ”, “ಇವನಾರವ ಇವನಾರವ ಎನ್ನದಿರು ಇವ ನಮ್ಮವ ಇವ ನಮ್ಮವ ಎನ್ನಯ್ಯ” ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟವರು. ವೈದಿಕರ ಪುರೋಹಿತಶಾಹಿ ತತ್ವಗಳಿಂದ ಹೊರ ಬಂದ ಜ.ಚ.ನಿ. ಅವರು ಇಲ್ಲಿ ಜ್ಞಾನವನ್ನು ಸಕಲ ಜೀವ ರಾಶಿಗಳಿಗೂ ನೀಡಬೇಕೆನ್ನುವ ಜೀವಪರ ತತ್ವಕ್ಕೆ ಇಂಬು ಕೊಟ್ಟರು. ಆ ಮೂಲಕ ನಿಡುಮಾಮಿಡಿ ಮಠವನ್ನು ಪ್ರಗತಿಪರ ಕ್ಷೇತ್ರವನ್ನಾಗಿರಿಸಿದರು. ಬಸವಣ್ಣನ ಕಾಯಕ ತತ್ವದಲ್ಲಿ ಅಪಾರ ನಂಬುಗೆ ಇಟ್ಟು ಅದೇ ರೀತಿ ನುಡಿದಂತೆ ನಡೆದವರು. (ಜ.ಚ.ನಿ. ಸ್ವಾಮಿಗಳ ಬಗ್ಗೆ ಮಾತನಾಡುವಾಗ ನನಗೆ ಮಲ್ಲಾಡಿಹಳ್ಳಿಯ ಗುರುಗಳಾದ “ತಿರುಕ” ನೆನಪಾಗುತ್ತಾರೆ. ಇವರೂ ಸಹ ಕಾಯಕ ತತ್ವವಾದಿ. ಸಣ್ಣವನಿದ್ದಾಗಿನಿಂದಲೂ ಇವರನ್ನು ನಾನು ಹತ್ತಿರದಿಂದ ನೋಡಿದ್ದೆ.)

ನಂತರ ಬಂದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿಯವರು ತಮ್ಮ ಗುರುಗಳ ನೀತಿಗಳನ್ನೇ ಮುಂದುವರೆಸುತ್ತಾ ಪ್ರಗತಿಪರ ಧೋರಣೆಗಳಿಗೆ, ಜಾತ್ಯಾತೀತ ನಿಲುವಿಗೆ ಸದಾ ಬದ್ಧರಾಗಿರುತ್ತಾ ನಿಡುಮಾಮಿಡಿ ಮಠವನ್ನು ಮತ್ತೊಂದು ಸ್ತರಕ್ಕೆ ಕೊಂಡೊಯ್ದರು. ಕಳೆದ 25 ವರ್ಷಗಳಲ್ಲಿ ಕರ್ನಾಟಕದ ಹಿಂದುಳಿದ ವರ್ಗಗಳ, ದಲಿತರ ಆತಂಕಗಳು, ತಲ್ಲಣಗಳು ಹಾಗೂ ಅವಶ್ಯಕತೆಗಳನ್ನು ತಳ ಮಟ್ಟದಲ್ಲಿ ಅರಿತಿದ್ದ ವೀರಭದ್ರ ಚೆನ್ನಮಲ್ಲ ಸ್ವಾಮಿಗಳು ಅದಕ್ಕೆ ಸ್ಪಂದಿಸಿದ್ದೂ ಕೂಡ ಅನನ್ಯವಾಗಿತ್ತು. ಎಲ್ಲರಿಗೂ ಅಂದರೆ ಜನಸಾಮಾನ್ಯರಿಗೂ ಹಾಗೂ ಇತರ ಶೂದ್ರ ಮಠದ ಸ್ವಾಮಿಗಳಿಗೂ ಮಾದರಿಯಾಗಿತ್ತು.

ಇಂದು ರಾಜ್ಯದ ಬ್ರಾಹ್ಮಣ ಹಾಗೂ ಲಿಂಗಾಯಿತ ಜಾತಿಯ ಬಹುಪಾಲು ಮಠಗಳು ಹಾಗೂ ಅದರ ಸ್ವಾಮಿಗಳು ಪ್ರತಿಪಾದಿಸುತ್ತಿರುವ ಸ್ವಚ್ಛಂದ, ನಿರ್ಲಜ್ಜ ಕೀಳು ಮಟ್ಟದ ಜಾತೀಯತೆ, ಭೋದಿಸುತ್ತಿರುವ ಧಾರ್ಮಿಕ, ಮೂಢಕಂದಾಚಾರಗಳು, ಬೆಳೆಸುತ್ತಿರುವ ಅನೈತಿಕ ಪರಂಪರೆ, ಕುಗ್ಗಿಸುತ್ತಿರುವ ಮೌಲ್ಯಗಳು ಸರ್ವರಿಗೂ ಗೊತ್ತಿರುವಂತಹದ್ದು. ನಮ್ಮ ಮೂಲಭೂತ ಚಿಂತನೆಗಳಾದ ವೈದಿಕತೆ ಹಾಗೂ ಪುರೋಹಿತಶಾಹಿಯನ್ನೇ, ಅಲ್ಪಸಂಖ್ಯಾತರ ತುಚ್ಛೀಕರಣವನ್ನೇ ಸಂಘ ಪರಿವಾರ ಕೂಡ ಎತ್ತಿ ಹಿಡಿಯುತ್ತದೆ ಎನ್ನುವಂತೆ ವರ್ತಿಸುವ ಬಹುಪಾಲು ಬ್ರಾಹ್ಮಣ ಮಠಗಳು, ಯಡಿಯೂರಪ್ಪ ತಮ್ಮ ಜಾತಿಯವನು ಹಾಗೂ ಜನರ ಹಣವನ್ನು ತಮಗೆಲ್ಲ ಸಂವಿಧಾನ ಬಾಹಿರವಾಗಿ ಬಿಟ್ಟಿಯಾಗಿ ಕೊಟ್ಟಿದ್ದಾರೆ ಎನ್ನುವ ಅನೈತಿಕ, ಭ್ರಷ್ಟಾಚಾರದ ಹಂಗಿನಲ್ಲಿ ರಾಜ್ಯದ ಬಹುಪಾಲು ಲಿಂಗಾಯತ ಮಠದ ಸ್ವಾಮಿಗಳು ಎಲ್ಲಾ ಆದರ್ಶಗಳು, ಮೌಲ್ಯಗಳನ್ನು ಗಾಳಿಗೆ ತೂರಿ ಕಡು ಭ್ರಷ್ಟಚಾರದ ಅಪಾದನೆಯನ್ನು ಹೊತ್ತಿರುವ ಕಳಂಕಿತ ಯಡಿಯೂರಪ್ಪರವರನ್ನು ನಿರ್ಲಜ್ಜವಾಗಿ ಬೆಂಬಲಿಸುತ್ತಿರುವುದೂ ಕನ್ನಡಿಗರಿಗೆಲ್ಲರಿಗೂ ದಿನನಿತ್ಯದ ಸುದ್ದಿಯಾಗಿ ಹಳಸಲಾಗಿದೆ. (ಬರು ಬರುತ್ತಾ ಜನತೆ ಇದನ್ನು ಅಯ್ಯೋ ಮಾಮೂಲಿ ಬಿಡಿ ಹೊಸತೇನಿದೆ ಎನ್ನುವ ಹಂತಕ್ಕೆ ತಲುಪುವ ಅಪಾಯವಿದೆ.)

ಜನತೆ ಈಗ ಇವರನ್ನೆಲ್ಲಾ ಸಾರ್ವಜನಿಕವಾಗಿ ಬಹಿಷ್ಕರಿಸಬೇಕು. ಈಗ ಉಳಿದಿರುವುದು ಇದೊಂದೇ ಮಾರ್ಗ. ಆದರೆ ಗಂಟೆ ಕಟ್ಟುವವರಾರು? ಈ ಸ್ವಾಮಿಗಳ ಸಾಲಿನಲ್ಲಿ ಶತಾಯುಷಿಯಾಗಿರುವ ಸೋಕಾಲ್ಡ್ ನಡೆದಾಡುವ ದೇವರು ಸೇರಿಕೊಂಡಿರುವುದಕ್ಕೆ ನಮಗೆಲ್ಲಾ ಅಂತಹ ಆಶ್ಚರ್ಯವಿರಲಿಲ್ಲ. ಇದನ್ನು ನಾವೆಲ್ಲಾ ಎಂದೋ ನಿರೀಕ್ಷಿಸಿದ್ದೆವು. ಆದರೆ ಈ ಸಾಲಿನಲ್ಲಿ ನಮ್ಮ ಪ್ರೀತಿಯ ಮುರುಘಾಮಠದ ಶರಣರು ಸೇರಿಕೊಂಡಿದ್ದು ನಿಜಕ್ಕೂ ಕನ್ನಡದ ಪ್ರಜ್ಞಾವಂತರಿಗೆ ಅಘಾತವನ್ನುಂಟು ಮಾಡಿತ್ತು. ಕೇವಲ ಚಿಂತನೆಗಳಲ್ಲಿ, ವಿಚಾರಸಂಕಿರಣಗಳಲ್ಲಿ, ಚರ್ಚೆಗಳಲ್ಲಿ ಪ್ರತಿಪಾದಿಸುತ್ತಿದ್ದ ವಿಷಯಗಳನ್ನು ಜಾರಿಗೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನದಲ್ಲಿಯೂ ಹರಸಾಹಸ ಪಡುತ್ತಿದ್ದ, ಈ ನಿಟ್ಟಿನಲ್ಲಿ ಅಲ್ಪಸ್ವಲ್ಪ ಯಶಸ್ಸನ್ನೂ ಕಂಡ ಮುರುಘಾಮಠದ ಶರಣರು ಸಾಮೂಹಿಕ ಸರಳ ವಿವಾಹಗಳನ್ನು ರಾಹು ಕಾಲದಲ್ಲಿ ನಡೆಸಿ, ಅಂತರ್ಜಾತೀಯ ವಿವಾಹಗಳನ್ನು ಮನಪೂರ್ವಕವಾಗಿ ಪ್ರೋತ್ಸಾಹಿಸುತ್ತಾ, ನಿಜದ ಹೋರಾಟಗಾರರನ್ನು, ಪ್ರಾಮಾಣಿಕ ಪ್ರಗತಿಪರ ಚಿಂತಕರನ್ನು ಗುರುತಿಸಿ ಅವರಿಗೆ ಬಸವಶ್ರೀ ಪ್ರಶಸ್ತಿಯ ಮೂಲಕ ಗೌರವಿಸುತ್ತಿದ್ದರು, ಉಪಮಠಗಳಿಗೆ ದಲಿತರನ್ನು ಸ್ವಾಮಿಗಳಾಗಿ ನೇಮಿಸುವ ಕ್ರಾಂತಿಕಾರಿ ಪರಿಪಾಠಗಳ ಮೂಲಕ ಕನ್ನಡ ನಾಡಿಗೆ ಜೀವಂತ ಮಾದರಿಯಾಗಿದ್ದರು, ಪ್ರಗತಿಪರ ಹೋರಾಟಗಾರರಿಗೆ, ಚಿಂತಕರಿಗೆ ಆಪ್ತ ಸ್ನೇಹಿತರಂತಿದ್ದರು, ಹಿತಚಿಂತಕರಾಗಿದ್ದರು. ಸಮಾಜದಲ್ಲಿ ನಿಜಕ್ಕೂ ಒಂದು ಧನಾತ್ಮಕ ಘಟ್ಟವನ್ನು ತಲುಪಿ ನಮ್ಮನ್ನೆಲ್ಲ ನೀವೂ ಕೂಡ ಕೇವಲ ಮಾತನಾಡುವುದನ್ನು ಬಿಟ್ಟು ಚಿಂತನೆಗಳನ್ನು ಕಾರ್ಯಗತಗೊಳಿಸುತ್ತಾ ಆ ಘಟ್ಟಕ್ಕೆ ಬಂದು ತಲುಪಿ ಎನ್ನುವಷ್ಟರ ಮಟ್ಟಿಗೆ ಎಲ್ಲಾ ತಲೆಮಾರಿಗೆ ಆದರ್ಶಪ್ರಾಯರಾಗಿದ್ದರು.

ಇಂತಹ ಜೀವಪರ ಮುರುಘಾಮಠದ ಸ್ವಾಮಿಗಳು “ಪಾಯಸ ತಿಂದಾಗ ಹೆಸರು ಕೆಡಸಿಕೊಳ್ಳಲಿಲ್ಲ, ಆದರೆ ನೊಣವನ್ನು ನೆಕ್ಕಿ ಸಿಕ್ಕಿ ಹಾಕಿಕೊಂಡ” ಎನ್ನುವ ಗಾದೆ ಮಾತಿನಂತೆ ಯಡಿಯೂರಪ್ಪನವರ ಅನಗತ್ಯ ಹೊಗಳಿಕೆಯ ಮೂಲಕ ಕಳೆದ 15 ವರ್ಷಗಳ ತಮ್ಮ ಮಾದರಿ ಬದುಕಿಗೆ ಕಪ್ಪು ಹಚ್ಚಿಕೊಂಡರು. ತೀರಾ ನೋವಿನ ಸಂಗತಿ ಎಂದರೆ 15 ವರ್ಷಗಳು ಪ್ರಗತಿಪರರಾಗಿ, ಜಾತ್ಯಾತೀತರಾಗಿ ನಿರಂತರವಾಗಿ ಜೀವಿಸುವುದಕ್ಕೇ ತುಂಬಾ ದೀರ್ಘವಾಯಿತೇ? ಹೌದೆನ್ನುವುದಾದರೆ ಮುಂದಿನ ದಿನಗಳನ್ನು ನೆನಸಿಕೊಂಡು ಮೈನಡುಗುತ್ತದೆ. ಇಂದು ಸಂಘಟನೆಗಳು ವಿಘಟನೆಗೊಂಡು ಸೃಜನಶೀಲ ಸಂವಾದಗಳು, ವಾಗ್ವಾದಗಳೂ ಹಾಗೂ ಎಲ್ಲಾ ಹೋರಾಟಗಳೂ ಸ್ಥಗಿತಗೊಂಡಂತಹ, ಗರ್ಭಪಾತಗೊಂಡಂತಹ ಇಂದಿನ ದಿನಗಳಲ್ಲಿ ನಾವೇನಾದರೂ ಪ್ರತಿಭಟನೆಯನ್ನಾಗಲಿ, ಸರಣಿ ಅಥವಾ ಸಾಂಕೇತಿಕವಾಗಿ ಒಂದು ದಿನದ ನಿರಶನವನ್ನಾಗಲಿ ಮಾಡುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ. ಈ ಬೀದಿ ಹೋರಾಟಗಳಿಗೆ, ನಿರಶನಗಳಿಗೆ ಸಾಮಾನ್ಯ ಜನಬೆಂಬಲಗಳಿಸಿಕೊಳ್ಳುವುದರಿಂದ ಹಿಡಿದು ಅವರನ್ನು ಬೀದಿಗೆ ಕರೆತರುವಷ್ಟರಲ್ಲಿ ಅರ್ಧ ಆಯಸ್ಸು ಕಳೆದಿರುತ್ತದೆ. ಇನ್ನು ಈ ಮಟ್ಟದ ಜಾತಿಹೀನ, ಕ್ರಿಯಾತ್ಮಕ ಚಳವಳಿಗಳಿಗೆ, ಧಾರ್ಮಿಕತೆಯ ಬೆಂಬಲವಿಲ್ಲದ ಚಳವಳಿಗಳಿಗೆ ಪ್ರಭುತ್ವವಂತೂ ಕವಡೆ ಕಾಸಿನ ಕಿಮ್ಮತ್ತು ನೀಡುವುದಿಲ್ಲ. ನಮ್ಮ ಕಡೆಗೆ ತಿರುಗೀ ಸಹ ನೋಡುವುದಿಲ್ಲ. ನಾವೆಲ್ಲಾ ಅಂತೂ ನಾವು ಕೂಡ ಬೀದಿಗಿಳಿದೆವು ಎಂದು ಇತಿಹಾಸವಾಗುವಷ್ಟಕ್ಕೆ ತೃಪ್ತಿ ಪಡಬೇಕಾಗಿದೆ. ಆದರೆ ಅನೇಕ ವೇಳೆ ಇದು ಅರಣ್ಯರೋದನವಾಗುತ್ತದೆ. ಇದು ಇಂದಿನ ಕಟು ವಾಸ್ತವ. ಮಾತಿಗೂ ಕೃತಿಗೂ ಸಾಗರದಷ್ಟು ಅಂತರವಿದೆ.

ಇತ್ತೀಚೆಗೆ ಢೋಂಗಿ ಗುರು ರವಿಶಂಕರ್ ಸರ್ಕಾರಿ ಶಾಲೆಗಳನ್ನು ನಕ್ಸಲೀಯರನ್ನು ತಯಾರಿಸುವ ಕೇಂದ್ರ ಎನ್ನುವ ದೇಶದ್ರೋಹಿ ಹೇಳಿಕೆ ಕೊಟ್ಟಾಗ ನಮ್ಮ ಅನೇಕ ಪ್ರಜ್ಞಾವಂತರಲ್ಲಿ ಇದು ತಳಮಳವನ್ನಾಗಲಿ, ಕ್ರೋಧವನ್ನಾಗಿ ಹುಟ್ಟುಹಾಕಲೇ ಇಲ್ಲ. ಕಡೆಗೆ SFI ನ ಗೆಳೆಯರು ಕೆಲವು ಜಿಲ್ಲಾ ಕೇಂದ್ರಗಳಲ್ಲಿ ರವಿಶಂಕರ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಬೇಕಾಯಿತು.

ಇಷ್ಟೆಲ್ಲ ಪೀಠಿಕೆ ಏಕೆಂದರೆ ನಿಡುಮಾಮಿಡಿ ಮಠದ ಸ್ವಾಮಿಗಳಾದ ವೀರಭದ್ರ ಚೆನ್ನಮಲ್ಲ ಸ್ವಾಮಿಗಳ ನೇತೃತ್ವದಲ್ಲಿ ಸುಮಾರು 30 ಹಿಂದುಳಿದ, ದಲಿತ ಮಠಗಳ ಸ್ವಾಮಿಗಳು ಹಾಗೂ ಗದುಗಿನ ತೋಂಟದಾರ್ಯ ಸ್ವಾಮಿಗಳು ಮತ್ತು ಪ್ರಗತಿಪರ ಚಿಂತಕರು ಹಾಗೂ ದಲಿತ ಸಂಘಟನೆಗಳು ಮಡೆಸ್ನಾನ ಹಾಗೂ ಪಂಕ್ತಿಭೇದ ನೀಷೇಧದ ವಿರುದ್ದ ನಿರಶನ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ನಾವೆಲ್ಲಾ ಕೂಡ ಇದರಲ್ಲಿ ಪಾಲ್ಗೊಂಡಿದ್ದೆವು. ವಿಶೇಷವೇನೆಂದರೆ ಅಲ್ಲಿ ಭಾಷಣ ಮಾಡಿದ ಬಹುಪಾಲು ಸ್ವಾಮಿಗಳು ಅತ್ಯಂತ ಕ್ರಾಂತಿಕಾರಿಯಾಗಿ ಮಾತನಾಡಿದ್ದು. ನಿಜಗುಣ ಸ್ವಾಮಿಗಳು, ಬಸವಲಿಂಗ ಪಟ್ಟದೇವರು ಸ್ವಾಮಿಗಳು ಪ್ರತಿ ನುಡಿಗೂ ಬಸವಣ್ಣನ ಕ್ರಾಂತಿಕಾರೀ ವಚನಗಳನ್ನು ಬಳಸಿಕೊಳ್ಳುತ್ತ ವರ್ಣಾಶ್ರಮ ವ್ಯವಸ್ಥೆಯನ್ನು ಎತ್ತಿಹಿಡಿಯುತ್ತಿರುವ ಮೇಲ್ಜಾತಿ ಮಠಗಳನ್ನು, ಪೇಜಾವರ ಸ್ವಾಮಿಗಳ ಜಾತೀಯತೆಯನ್ನು ಕಟುವಾಗಿ ಟೀಕಿಸಿದರು. ಜಾತಿರಹಿತ ಸಮಾಜ ಕಟ್ಟುವುದು ನಮ್ಮ ಮುಂದಿನ ಗುರಿ ಎಂದು ಘೋಷಿಸಿಯೇ ಬಿಟ್ಟರು. ಇವರು ಜಾತಿವಾದದ ವಿರುದ್ಧ, ಶೋಷಣೆಯ ವಿರುದ್ಧ, ಇಂದಿನ ಲಿಂಗಾಯತ ಸ್ವಾಮಿಗಳ ನಡತೆಗಳ ವಿರುದ್ಧ ಗುಡುಗಿದ್ದು ನಮ್ಮಲ್ಲಿ ಇನ್ನಿಲ್ಲದ ಅತ್ಯಂತ ಅಚ್ಚರಿ ಹಾಗೂ ಆಶಾವಾದ ಮೂಡಿಸಿತ್ತು. ಅಲ್ಲದೆ ಸ್ವತಃ ಮುಖ್ಯಮಂತ್ರಿಗಳೇ ಬಂದು ಮಡೆಸ್ನಾನ ಹಾಗೂ ಪಂಕ್ತಿಭೇಧ ನಿಷೇದಿಸುತ್ತೇವೆ ಎಂದು ಹೇಳಿಕೆ ಕೊಡದಿದ್ದರೆ ಸಂಜೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ನಿಡುಮಾಮಿಡಿ ಸ್ವಾಮಿಗಳು ಗುಡುಗಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಸಂಜೆ ಪ್ರತಿಭಟನೆಯ ಸ್ಥಳವಾದ ಸ್ವಾತಂತ್ರ್ಯ ಉದ್ಯಾನಕ್ಕೆ ಸ್ವತಃ ಸದಾನಂದ ಗೌಡರೇ ಬಂದು ಇನ್ನೆರೆಡು ತಿಂಗಳೊಳಗೆ ಮಡೆಸ್ನಾನ ನಿಷೇಧಕ್ಕೆ ಸದನದೊಳಗೆ ವಿಧೇಯಕವನ್ನು ತಂದು ಈ ನೀಷೇಧ ಪ್ರಕ್ರಿಯೆಗೆ ಚಾಲನೆ ಕೋಡುತ್ತೇವೆ ಎಂದು ಒಪ್ಪಿಕೊಂಡರು.

ಇದು ನಿಜಕ್ಕೂ ಪ್ರಗತಿಪರ ಚಳವಳಿಗಳ ಜಯ. ಒಂದು ವೇಳೆ ಇದು ಜಾರಿಗೊಂಡರೆ ಅದರ ಯಶಸ್ಸು ನಿಡುಮಾಮಿಡಿ ಸ್ವಾಮಿಗಳಿಗೆ ಸಲ್ಲುತ್ತದೆ. ಕಳೆದ ನಾಲ್ಕು ತಿಂಗಳಿಂದ ಇದನ್ನು ನಿರಂತರವಾಗಿ ಸಂವಾದದ ರೂಪದಲ್ಲಿ ಜೀವಂತವಾಗಿಟ್ಟದ್ದು ನಿಡುಮಾಮಿಡಿ ಸ್ವಾಮಿಗಳು.

ಅಂತಿಮವಾಗಿ ಇದು ಏನನ್ನು ಸೂಚಿಸುತ್ತದೆ? ಜನಸಾಮಾನ್ಯರ, ಬಡವರ, ದಲಿತರ ಅಳಲುಗಳನ್ನು, ಮೂಲಭೂತ ಹಕ್ಕುಗಳ ಪರವಾದ, ಶೋಷಣೆಗಳ ವಿರುದ್ಧದ ಅಹಿಂಸಾತ್ಮಕ ಹೋರಾಟವನ್ನು ನಡೆಸಬೇಕಾದರೆ, ಈ ಅಹಿಂಸಾತ್ಮಕ ಹೋರಾಟಕ್ಕೆ ಪ್ರಭುತ್ವವನ್ನು ಬಗ್ಗುವಂತೆ ತರಬೇಕಾದರೆ, ಸ್ವಃತಹ ಮುಖ್ಯಮಂತ್ರಿಗಳೇ ನಿರಶನ ಸ್ಥಳಕ್ಕೆ ಕರೆಸುವಷ್ಟರ ಮಟ್ಟಿಗೆ ಪ್ರಭಾವಶಾಲಿಯಾದ ಅಹಿಂಸಾತ್ಮಕ ಚಳವಳಿಯನ್ನು ಕಟ್ಟಬೇಕೆಂದರೆ ಅದು ಇಂದು ಮಠಗಳ ಕೈಯಲ್ಲಿ ಮಾತ್ರ ಸಾಧ್ಯ ಎಂಬುದು ಇಂದು ಸಂಪೂರ್ಣವಾಗಿ ಸಾಬೀತಾಗುತ್ತಿದೆ. ಈ ಸ್ವಾಮಿಗಳಿಗೆ ಮಾತ್ರ ಮುಖ್ಯಮಂತ್ರಿಗಳನ್ನು ತಾವಿದ್ದ ಸ್ಥಳಕ್ಕೆ ಓಡೋಡಿ ಬರುವಂತೆ ಮಾಡುವ ತಾಕತ್ತಿದೆ ಎಂದು ಪುರಾವೆ ಸಹಿತ ಸಾಬೀತಾಗಿದೆ (ಇದು ಅತಿರೇಕವೆಂದು ಗೊತ್ತಿದೆ).

ಅಂದು ಚಿಂತಕ ಕೆ. ಮರಳುಸಿದ್ಧಪ್ಪನವರು ಕೂಡ ಹೇಳಿದ್ದು “ಕೇವಲ ಮಡೆಸ್ನಾನ ನಿಷೇಧ ಮಾತ್ರವಲ್ಲದೆ ಇನ್ನಿತರ ಅನಿಷ್ಟಗಳಾದ ಅಂತರ್ಜಾತೀಯ ವಿವಾಹಿತರ ಬರ್ಬರ ಹತ್ಯೆಗಳು, ಸರ್ಕಾರದ ಭ್ರಷ್ಟಾಚಾರ ಹಾಗೂ ಕೋಮುವಾದ ಇವುಗಳೆಲ್ಲದರ ವಿರುದ್ಧ ನೀವು ಅಂದರೆ ಪ್ರಗತಿಪರ ಸ್ವಾಮಿಗಳು ಮುಂಚೂಣಿಯಲ್ಲಿದ್ದರೆ ನಾವೆಲ್ಲ ಅಂದರೆ ಪ್ರಗತಿಪರ ಹೋರಾಟಗಾರರು ಹಾಗೂ ಚಿಂತಕರು ನಿಮ್ಮ ಹಿಂದೆ ಇರುತ್ತೇವೆ”. ಅಂದರೆ ಇಂದು ದಲಿತ, ಪ್ರಗತಿಪರ ಸಂಘಟನೆಗಳು ಮುಂದಿನ ದಿನಗಳಲ್ಲಿ ಮೇಲ್ಕಾಣಿಸಿದ ಸ್ವಾಮಿಗಳ ನೇತೃತ್ವದಲ್ಲಿ ಹೋರಾಟ ನಡೆಸಬೇಕು, ಇದು ಬಿಟ್ಟರೆ ಬೇರೆ ದಾರಿಯೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಇಂದಿನ ಹೋರಾಟ ತನ್ನ ದಿಕ್ಕನ್ನು ಗುರುತಿಸಿಕೊಂಡಿದೆಯೇ? ಇದನ್ನು ಅತ್ಯಂತ ಹುಷಾರಾಗಿ ಜವಬ್ದಾರಿಯಿಂದ ಹಾಗೂ ಪ್ರಜ್ಞಾಪೂರಕವಾಗಿ ಕೇಳಿಕೊಳ್ಳುತ್ತಿದ್ದೇನೆ. (ಇದು ಅತಿರೇಕವೆಂದು ಗೊತ್ತಿದೆ).

ಅಲ್ಲದೆ ಇಂದಿನ ಪ್ರತಿಭಟನೆಯಲ್ಲಿ ಕಂಡುಬಂದ ಮತ್ತೊಂದು ವಿಶೇಷವೆಂದರೆ ವಿಭಜನೆಗೊಂಡ ಮೂರು ಪ್ರಮುಖ ದಲಿತ ಸಂಘಟನೆಯ ಸಂಚಾಲಕರು ಇಂದಿನ ಸಮಾನ ವೇದಿಕೆಯಲ್ಲಿ ಭಾಗವಹಿಸಿದ್ದು. ಇದು ನನ್ನ ಕೆಲವು ದಲಿತ ಸಂಚಾಲಕ ಗೆಳೆಯರಲ್ಲಿ ಅತ್ಯಂತ ಭಾವಾವೇಶವನ್ನು ಉಂಟು ಮಾಡಿತು.

ಆದರೆ ನಮ್ಮೆಲ್ಲರ ಸಾಕ್ಷೀಪ್ರಜ್ಞೆಯಾಗಿದ್ದ ಲಂಕೇಶ್ ಈ ಅತಿರೇಕದ, ಪ್ರಗತಿಪರ ಸ್ವಾಮೀಜಿಗಳ ಬಗ್ಗೆ ಕಟುವಾದ ಗುಮಾನಿಯ ಎಚ್ಚರಿಕೆಯನ್ನು, ಸದಾಕಾಲ ತಮ್ಮಲ್ಲಿ ಪ್ರಜ್ವಲವಾಗಿ ಇರುವಂತೆ ಚಿಂತಿಸುತ್ತಿದ್ದರು. ಅದನ್ನು ತಮ್ಮ ಅತ್ಯುತ್ತಮ ಗ್ರಹಿಕೆಯ ಮೂಲಕ ನಮಗೂ ತಲುಪಿಸುತ್ತಿದ್ದರು. ನಮ್ಮ ಪ್ರಜ್ಞೆಯ ಆಳದಲ್ಲಿ, ನಮ್ಮ ಚಿಂತನೆಗಳ ಅಂಬೆಗಾಲಿನಲ್ಲಿ ಈ ಭಾವಾವೇಶದಲ್ಲಿ ಆ ಮೇಲ್ಕಾಣಿಸಿದ ಲಂಕೇಶ್ ಪ್ರಜ್ಞೆ ನಮ್ಮಲ್ಲಿದ್ದರೆ ಮಾತ್ರ ನಾವೆಲ್ಲ ಬಚಾವ್. ಇಲ್ಲವೆಂದರೆ ನಾವೆಲ್ಲ ಕುರಿಗಳಂತೆ ಹಳ್ಳಕ್ಕೆ ಬೀಳುವುದು ಗ್ಯಾರಂಟಿ. ಏಕೆಂದರೆ ಧರ್ಮ ಅರ್ಥಾತ್ ಧಾರ್ಮಿಕತೆ ಮತ್ತು ಆಧ್ಯಾತ್ಮಿಕದ ಮಧ್ಯೆ ಸಾಕಷ್ಟು ಅಂತರವಿದೆ. ಅನೇಕ ಭಿನ್ನತೆಗಳಿವೆ. ಆಧುನಿಕ ಭಾರತದಲ್ಲಿ ಇದನ್ನು ಮೊಟ್ಟಮೊದಲು ಅರ್ಥ ಮಾಡಿಕೊಂಡವರು ರಾಮಕೃಷ್ಣ ಪರಮಹಂಸರು. ಪರಮಹಂಸರು ಆಧ್ಯಾತ್ಮವನ್ನು ಧಾರ್ಮಿಕತೆಯಿಂದ ಬಿಡುಗಡೆಗೊಳಿಸಿ ದೈವತ್ವಕ್ಕೆ ಕೊಂಡೈಯ್ದಿದ್ದರು. ಈ ನಿಟ್ಟಿನಲ್ಲಿ ಪರಮಹಂಸರು ನಡೆಸಿದ ಪ್ರಯೋಗಗಳು ನಮ್ಮೆಲ್ಲರ ಊಹೆಗಳನ್ನೂ ಮೀರಿದ್ದು. ಆದರೆ ಕಡೆಗೆ ಆಧುನಿಕ ಭಾರತದ ಅತ್ಯಂತ ಶ್ರೇಷ್ಠ ಆಧ್ಯಾತ್ಮಿಕ ಗುರುವೆಂದರೆ ಅವರು ರಾಮಕೃಷ್ಣ ಪರಮಹಂಸರು. ಆದರೆ ಪರಮಹಂಸರ ಈ ಮಾರ್ಗ ಅತ್ಯಂತ ಕ್ಲಿಷ್ಟಕರವಾದದ್ದು. ಅದಕ್ಕೆಂದೇ ಇದನ್ನು ಸರಳಗೊಳಿಸಲು ವಿವೇಕಾನಂದರನ್ನು ತರಬೇತುಗೊಳಿಸಿದರು. ಆದರೆ ಇಂದು ವಿವೇಕಾನಂದರಿಗೆ ಬಂದೊದಗಿದ ಗತಿ ಎಲ್ಲರಿಗೂ ಗೊತ್ತು. ಸಂಘ ಪರಿವಾರ ವಿವೇಕಾನಂದರನ್ನು ಮರಳಿ ಧಾರ್ಮಿಕ ವ್ಯಕ್ತಿಯನ್ನಾಗಿ ಸ್ವಾಮಿಯ ಪಟ್ಟಕೊಟ್ಟು ಕೂರಿಸಿದೆ.

ಇದಕ್ಕೆ ಮೂಲಭೂತ ಕಾರಣ ಧರ್ಮದ ಹಾಗೂ ಆಧ್ಯಾತ್ಮದ ಬಗ್ಗೆ ನಮ್ಮ ಮಠಗಳಲ್ಲಿರುವ ಅತ್ಯಂತ ಸೀಮಿತ ಗ್ರಹಿಕೆ. ಇದು ಅತ್ಯಂತ ಸರಳೀಕೃತಗೊಂಡ ಮಾದರಿ. ನೀನು ಈಶ್ವರನಲ್ಲಿ ನಂಬಿಕೆ ಇಡು ಅವನು ಮರಳಿ ನಿನಗೆ ಒಳ್ಳೆಯದನ್ನು ಮಾಡುತ್ತಾನೆ ಎನ್ನುವಂತಹ ಅತ್ಯಂತ ಸರಳೀಕೃತ ಚಿಂತನೆ ಕಾಲಕ್ರಮೇಣ ಜಡವಾಗುತ್ತದೆ.

ಆದರೆ ಇಂದು ಅತ್ಯಂತ ಜಾತ್ಯಾತೀತರಾಗಿ ಕಾಯಕವನ್ನೇ ನೆಚ್ಚೋಣ ಮತ್ತೇನನ್ನು ಅಲ್ಲ ಎಂದು ಹೇಳುತ್ತಿರುವ ಮೇಲಿನ ಸ್ವಾಮಿಗಳು ಈ ಧರ್ಮ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳದಿದ್ದರೆ ಈ ಅಪಾಯ ಪ್ರಗತಿಪರ ಸ್ವಾಮಿಗಳಿಗೂ ತಪ್ಪಿದ್ದಲ್ಲ. ಏಕೆಂದರೆ ಬಹಿರಂಗವಾಗಿ ಎಷ್ಟೇ ಪ್ರಗತಿಪರವಾಗಿ, ಜಾತ್ಯಾತೀತರಾಗಿ ಘೋಷಿಸಿಕೊಂಡರೂ ಸ್ಥಾವರಗೊಂಡ ಅವರ ಮಠಗಳು ಅವರನ್ನು ಈ ನಿಟ್ಟಿನಲ್ಲಿ ಮುನ್ನಡೆಯಲು ಬಿಡುತ್ತವೆಯೇ? ಒಂದು ವೇಳೆ ಆಯ್ಕೆಯ ಪ್ರಶ್ನೆ ಬಂದಾಗ ಇವರೆಲ್ಲ ತಮ್ಮ ಚಿಂತನೆಗಳಿಗೆ ತೊಡರುಗಾಲಾಗುವ ಮೌಢ್ಯದ ಜಾತೀವಾದದ ತಮ್ಮ ಮಠಗಳನ್ನು ಧಿಕ್ಕರಿಸುವಷ್ಟು ಎದೆಗಾರಿಕೆ ಹಾಗೂ ಸಮಯಪ್ರಜ್ಞೆ ಹೊಂದಿರುತ್ತಾರೆಯೇ? ಇವು ಮೂಲಭೂತ ಪ್ರಶ್ನೆಗಳು.

ಇಂತಹ ಸಂದಿಗ್ಧತೆಯ ಬಗ್ಗೆ ತೊಂಬತ್ತರ ದಶಕದಲ್ಲಿ ಶೂದ್ರ ಏರ್ಪಡಿಸಿದ್ದ “ಧರ್ಮ ಸಂವಾದ” ವಿಚಾರ ಸಂಕಿರಣದಲ್ಲಿ ಖ್ಯಾತ ಚಿಂತಕ ದಿವಂಗತ ಡಿ.ಆರ್. ನಾಗರಾಜ್ ಬಹು ಮಾರ್ಮಿಕವಾಗಿ ಈ ಕೆಳಗಿನಂತೆ ಹೇಳಿದ್ದರು:

“ದೇವಾಲಯಗಳು ಅಧಿಕಾರದ ಅಟ್ಟಹಾಸಗಳಾದಾಗ ಅವನ್ನು ನಿರಾಕರಿಸಿ ಮಾನವನನ್ನು ಎತ್ತಿ ಹಿಡಿಯಲಾಯಿತು. ಗುರು ಮಠಗಳು ಗಾಢಾಂದಕಾರದ ಗವಿಗಳಾದಾಗ ಅವನ್ನು ಅಪಾಯಕಾರಿ ಬಿಲಗಳೆಂದು ಕರೆಯಲಾಯಿತು. ಎಲ್ಲ ಧರ್ಮಗಳಿಗೂ ಉಜ್ವಲ ಪ್ರಾರಂಭ ಇರುತ್ತವೆ. ಕ್ರಮೇಣ ಕೊಳೆಯುವುದು ಧರ್ಮಗಳ ಶರೀರ ಗುಣ. ತಮ್ಮ ಪ್ರಾರಂಭದ ಉಜ್ವಲತೆಗೆ ಮರಳಲು ಆಗಾಗ ಆ ಧರ್ಮದ ಪರಿಭಾಷೆಯಲ್ಲಿ ನಂಬಿಕೆ ಇರುವ ಮಂದಿ ತೀವ್ರವಾಗಿ ಪ್ರಯತ್ನಿಸುತ್ತಾರೆ. ಉಜ್ವಲ ಪ್ರಾರಂಭದ ನಂತರ ಕೊಳೆಯುವುದು ಹೇಗೆ ಧರ್ಮಗಳ ಮೂಲ ಗುಣವೋ ಹಾಗೆಯೇ ಶುದ್ದೀಕರಣದ ಹಂಬಲ ಕೂಡಾ. ಈ ಶುದ್ದೀಕರಣದ ಹಂಬಲ ಕೆಲವೊಮ್ಮೆ ಸುಧಾರಣೆಗೆ, ಕೆಲವೊಮ್ಮೆ ಅಪಾಯಕಾರಿಯಾದ ಮೂಲಭೂತವಾದಕ್ಕೇ ಎಡೆ ಮಾಡುತ್ತದೆ. ಅದಕ್ಕಾಗಿಯೇ ಧರ್ಮಗಳ ಚಾರಿತ್ರಿಕ ನಿರಂತರತೆಯ ಬಗ್ಗೆ ಹುಚ್ಚು ವ್ಯಾಮೋಹ ಬಿಡಬೇಕಾಗುತ್ತದೆ. ಧರ್ಮದ ಉಜ್ವಲ ಪ್ರಾರಂಭ ಅಥವಾ ಕೇಂದ್ರದರ್ಶನಗಳ ಅಂತರಂಗೀಕರಣ ನಡೆದಾಗ ಧರ್ಮಕ್ಕೆ ಬೇರೆಯೇ ಅರ್ಥ ಬಂದು ಬಿಡುತ್ತದೆ.”

ಡಿ.ಆರ್. ನಾಗರಾಜ್ ಅವರ ಈ ಮಾತುಗಳನ್ನು ನಮ್ಮ ಪ್ರಗತಿಪರ ಸ್ವಾಮಿಗಳು ಮನನ ಮಾಡಿಕೊಂಡರೆ ನಿಜಕ್ಕೂ ನಮಗೆಲ್ಲ ಮುಂದೆ ಒಳ್ಳೆಯ ದಿನಗಳು ಕಾದಿವೆ ಎಂದರ್ಥ. ಏಕೆಂದರೆ ಇನ್ನು ಕೆಲವೇ ತಿಂಗಳುಗಳಲ್ಲಿ ಕರ್ನಾಟಕದಲ್ಲಿ ಸಾರ್ವತ್ರಿಕ ಚುನಾವಣೆಯ ನಡೆಯುವ ಅನೇಕ ಸಾಧ್ಯತೆಗಳಿವೆ. ಇಲ್ಲವೆಂದರೂ ಮುಂದಿನ ವರ್ಷದಲ್ಲಿ ಚುನಾವಣೆ ನಡೆಯಲೇಬೇಕು. ಅಂದರೆ ಇನ್ನೂ ಕೇವಲ ಎಂಟು ತಿಂಗಳು ಮಾತ್ರ. ಆಗ ನಾವು ಬೇಕಾದರೆ ಕರ್ನಾಟಕದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಗಳಲ್ಲಿ ಕೋಮುವಾದಿ, ಭ್ರಷ್ಟ ಅಭ್ಯರ್ಥಿಗಳ ವಿರುದ್ಧ ಪ್ರಗತಿಪರ ಸ್ವಾಮಿಗಳನ್ನೇ ಅಭ್ಯರ್ಥಿಗಳನ್ನಾಗಿ ನಿಲ್ಲಲು ಒತ್ತಾಯಿಸಬಹುದು. ಆಗ ಪರ್ಯಾಯ ಪರಿಕಲ್ಪನೆಗೆ ಇಲ್ಲಿಂದ ಒಂದು ಚಾಲನೆ ಸಿಗಬಹುದೇ? ಏಕೆಂದರೆ ಈಗ ಬದಲಾವಣೆಗೆ ಹದಗೊಂಡಿರುವ ಕರ್ನಾಟಕಕ್ಕೆ “ರಾಜೀವ, ರಾಚೂತಪ್ಪ, ಸಿದ್ಧಲಿಂಗಯ್ಯ, ಜಿ.ಕೆ. ವೆಂಕಟೇಶ್ Combinationನ “ಬಂಗಾರದ ಮನುಷ್ಯ” ತಂಡ ಬೇಕಾಗಿದೆ.

ಕಟ್ಟೆಚ್ಚರ: ನ್ಯಾಯ, ನೀತಿ, ಮೌಲ್ಯ, ಆಶಾವಾದಗಳಿಗೆ….

– ರವಿ ಕೃಷ್ಣಾರೆಡ್ಡಿ

ಸಂಪಾದಕೀಯ ಬ್ಲಾಗ್‌ನಲ್ಲಿ ಟಿ.ಕೆ. ದಯಾನಂದ್‌ರ ಪತ್ರವೊಂದು ಪ್ರಕಟವಾಗಿದೆ. ನೆನ್ನೆ ಸುವರ್ಣ ನ್ಯೂಸ್ ಚಾನಲ್‌ನಲ್ಲಿ ತುಂಬಾ ಹೊಣೇಗೇಡಿಯಾಗಿ ಆಶ್ಲೀಲ ಕಾರ್ಯಕ್ರಮವೊಂದು ಪ್ರಸಾರವಾದ ಬಗ್ಗೆ ಬರೆದ ಪತ್ರ ಅದು. ಅದರಲ್ಲಿ ಅವರು ಕೆಲವೊಂದು ವ್ಯಕ್ತಿಗಳನ್ನು ತೀಕ್ಷ್ಣವಾಗಿ ವಿಮರ್ಶಿಸಿದ್ದಾರೆ. ಆದರೆ, ಇಲ್ಲಿ ವ್ಯಕ್ತಿಗಳ ವಿಮರ್ಶೆಯಿಂದ ಮತ್ತು ಅವರು ಸರಿಹೋಗುವುದರಿಂದ ಈ ಸ್ಥಿತಿಗಳೇನೂ ಬದಲಾಗುವುದಿಲ್ಲ ಎನ್ನಿಸುತ್ತದೆ. ಬದಲಾಗುವ ಹಾಗಿದ್ದರೆ ಇಷ್ಟೊತ್ತಿಗೆ ಎಂದೋ ಬದಲಾಗಬೇಕಿತ್ತು.

ಕೇವಲ ವ್ಯಕ್ತಿಗಳು ಮಾತ್ರ ಕೆಟ್ಟಿದ್ದರೆ ಅದೊಂದು ಸಹಿಸಬಹುದಾಗಿದ್ದ ವಿದ್ಯಮಾನ. ಅವರ ಗುಂಪೂ ಸಣ್ಣದಿರುತ್ತಿತ್ತು. ಆದರೆ ಪ್ರಸ್ತುತ ಸಂದರ್ಭದಲ್ಲಿ ಇಡೀ ವ್ಯವಸ್ಥೆ ಮತ್ತು ಸಮಾಜವೇ ಕೆಟ್ಟಿದೆ. ಆಗುತ್ತಿರುವುದು ಏನೆಂದರೆ, ತಾವು ಉಳಿಯಲು ಅಥವ ಯಶಸ್ವಿಯಾಗಲು ವ್ಯಕ್ತಿಗಳು ಯಾವ ಹಂತಕ್ಕೂ ಇಳಿಯುತ್ತಾರೆ. ಯಾರನ್ನು ಬೇಕಾದರೂ ಬಳಸಿಕೊಂಡು ಬಿಸಾಡಬಲ್ಲವರಾಗಿದ್ದಾರೆ. ತಂದೆತಾಯಿಯರ ಕಚ್ಚೆಹರುಕತನವನ್ನೂ ಬಯಲಲ್ಲಿ ಹರಡುತ್ತಾರೆ. ತಮ್ಮದೇ ಅಸಹ್ಯಗಳನ್ನು ಹೇಳಿಕೊಳ್ಳುತ್ತಾರೆ, ತಮ್ಮ ಮನೆಯ ಹೆಣ್ಣುಮಕ್ಕಳ ಮಾನವನ್ನೂ ಹರಾಜು ಹಾಕುತ್ತಾರೆ. ಸಮಸ್ಯೆ ಏನೆಂದರೆ ಇಂದಿನ ಸಮಾಜ ಅದನ್ನು ನೋಡಿಕೊಂಡು ಪೋಷಿಸುತ್ತದೆ. ನಾಲ್ಕಾರು ನಿಮಿಷ ಟಿವಿಯಲ್ಲಿ ಕಾಣಿಸಿಕೊಳ್ಳಲು ಜನ ಏನು ಬೇಕಾದರೂ ಹೇಳಲು, ಮಾಡಲು ಸಿದ್ದವಾಗಿದ್ದಾರೆ.

ಮತ್ತು ಇಂತಹ ಜನರ ಅವಿವೇಕತನವನ್ನು ಶೋಷಿಸಿ ತಾವು ತಮ್ಮ ರಂಗದಲ್ಲಿ ಉಳಿಯಲು ನಮ್ಮ ಮಾಧ್ಯಮ ಮಂದಿ ಯಾವೊಂದು ಮೌಲ್ಯ, ನೀತಿ, ನಾಚಿಕೆ, ಸಂಕೋಚ, ಇಲ್ಲದೆ ಸಿದ್ಧವಾಗಿದ್ದಾರೆ.

ಕಳೆದ ಒಂದೂವರೆ ದಶಕದಿಂದೀಚೆಗೆ ಕಾಣಿಸಿಕೊಂಡ ಪರಮಸ್ವಾರ್ಥಿ ಪತ್ರಕರ್ತ-ಬರಹಗಾರರ ಗುಂಪೊಂದು ತಮ್ಮ ಉಳಿವಿಗಾಗಿ ಏನೆಲ್ಲ ಮಾಡಲೂ ಸಿದ್ದವಾಗಿದ್ಡಾರೆ. ಮತ್ತು ಅವರು ಯಶಸ್ವಿಯೂ ಆಗಿದ್ದಾರೆ. ನ್ಯಾಯ-ನೀತಿ-ಧರ್ಮದ ಬಗ್ಗೆ ಸುರರ ಮಕ್ಕಳಂತೆ ಬರೆಯುವ ಈ ಜನ ಅದಕ್ಕೆ ವಿರುದ್ಧವಾದ ವ್ಯಭಿಚಾರದಲ್ಲೂ ತೊಡಗಿಕೊಂಡಿದ್ದಾರೆ. ಅದು ಕೇವಲ ಹೊಟ್ಟೆಪಾಡಿಗಾಗಿಯಷ್ಟೇ ನಡೆಸುವ ಅಕ್ಷರವ್ಯಭಿಚಾರ ಮಾತ್ರವಲ್ಲ. ಇವರು ರಾಜಕಾರಣಿಗಳ ದಲ್ಲಾಳಿಗಳಾಗಿದ್ದಾರೆ. ರಿಯಲ್‌ಎಸ್ಟೇಟ್ ಏಜೆಂಟರಾಗಿದ್ದಾರೆ. ಗಣಿ ಮಾಫಿಯಾದವರಿಂದ ಪಾಲು ತೆಗೆದುಕೊಂಡಿದ್ದಾರೆ. ತಮಗೊಂದು ತಮ್ಮವರಿಗೊಂದು ಎಂದು ಸರ್ಕಾರಿ ಸೈಟು ಹೊಡೆದುಕೊಳ್ಳುತ್ತಾರೆ. ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಧಿಕಾರಸ್ಥರನ್ನು ಮತ್ತು ತಮ್ಮ ಕ್ಲೈಂಟ್‌ಗಳನ್ನು ಶಾಮೀಲು ಮಾಡುತ್ತಾರೆ. ಬೇಕಾದವರ ಪರ, ಬೇಡದವರ ವಿರುದ್ಧ ಜನಾಭಿಪ್ರಾಯ ರೂಪಿಸಬಲ್ಲವರಾಗಿದ್ದಾರೆ. ಭ್ರಷ್ಟಾಚಾರಗಳನ್ನು ದುಡ್ಡು ತೆಗೆದುಕೊಂಡು ಮುಚ್ಚಿ ಹಾಕುತ್ತಾರೆ. ಸುಳ್ಳು ಆರೋಪಗಳನ್ನೂ ಸಾಬೀತು ಮಾಡುತ್ತಾರೆ. ಕಾಮಾತುರರಿಗೆ ವೇಶ್ಯಾಗೃಹಗಳ ವಿಳಾಸ ಮತ್ತು ನಂಬರ್‌ಗಳನ್ನು ತಮ್ಮ ಟಿವಿ ಮತ್ತು ಪತ್ರಿಕೆಗಳಲ್ಲಿ ರೋಚಕವಾಗಿ ಒದಗಿಸುತ್ತಾರೆ. Deccan Herald - Mining Paymentsತಮ್ಮ ಬಳಿಗೆ ಬರುವ ಗಂಡು-ಹೆಣ್ಣುಗಳನ್ನು ಬಳಸಿಕೊಳ್ಳುತ್ತಾರೆ. ಇನ್ನೊಬ್ಬರಿಗೆ ಬಳಸಿಕೊಳ್ಳಲು ಕಳುಹಿಸಿಕೊಡುವಷ್ಟು ಉದಾರತೆ ಮೆರೆಯುತ್ತಾರೆ. ಪೋಲಿಸರ ಪಟ್ಟಿಯಲ್ಲಿ ಇವರಿರುತ್ತಾರೆ. ಇವರ ಪಟ್ಟಿಯಲ್ಲಿ ಪೋಲಿಸರಿರುತ್ತಾರೆ.

ಇವರು ಎಂದೆಂದೂ ತಮ್ಮ ಅಪರಾಧಗಳಿಗೆ ಶಿಕ್ಷೆಗೊಳಗಾಗುವುದಿಲ್ಲ. ಕಾಣಿಸಿಕೊಳ್ಳಬೇಕಾದ ಸಮಯದಲ್ಲಿ ಧರ್ಮಧುರಂಧರರಂತೆ ಕಾಣಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಫಲಾನುಭವಿಗಳ ಮೊದಲ ಸಾಲಿನಲ್ಲಿ ಇವರಿದ್ದಾರೆ. ವ್ಯವಸ್ಥೆಯನ್ನು ಕೆಡಿಸಿದ್ದಾರೆ, ಇಲ್ಲವೇ ಕೆಟ್ಟ ವ್ಯವಸ್ಥೆಯಲ್ಲಿ ಏಳಿಗೆ ಕಂಡಿದ್ದಾರೆ.

ಇದು ನಮ್ಮ ಸಮಾಜಕ್ಕೇನೂ ಗೊತ್ತಿಲ್ಲದೆ ಇಲ್ಲ. ಇದೇ ಜನ ಬೀದಿಗೆ ಬಂದರೆ ಇವರಿಗೆ ಜೈಕಾರ ಹಾಕುವುದಕ್ಕೂ ಹಿಂದುಮುಂದು ನೋಡದಷ್ಟು ವಿವೇಚನಾಹೀನರೂ, ಸಮಯಸಾಧಕರೂ ಆಗಿದ್ದಾರೆ ಜನ. ಅವಕಾಶ ಸಿಕ್ಕರೆ ಇದೇ ಜನಗಳ ತಪ್ಪನ್ನು ತಾವೂ ಮಾಡಲು ಸಿದ್ಧರಾಗಿದ್ದಾರೆ. ಇವನಲ್ಲದಿದ್ದರೆ ಇನ್ನೊಬ್ಬ ಮಾಡಲು ಕಾಯುತ್ತಿದ್ದಾನೆ. ಮಾಡಲು ಸಿದ್ಧವಿಲ್ಲದವರು ಇಂದಿನ ವರ್ತಮಾನದಲ್ಲಿ ಅಪ್ರಸ್ತುತರಾಗುತ್ತ ಸೋಲುತ್ತ ಹೋಗುತ್ತಿದ್ದಾರೆ.

ಸಮಸ್ಯೆ ಇಷ್ಟೇ ಅಲ್ಲ. ಇದು ಇಂದು ಕೆಲವರಿಗೆ ಅಥವ ಕೆಲವೊಂದು ಗುಂಪಿಗೆ ಮಾತ್ರ ಸೀಮಿತವಾಗಿಲ್ಲ. ನಮ್ಮ ಜೊತೆ ಇರುವವನೆ, ನಮ್ಮ ಸಮಾನಮನಸ್ಕನೇ, ಅವಕಾಶ ಸಿಕ್ಕಾಗ ಮೇಲೆ ಹೇಳಿದ ಜನರ ರೀತಿಯೇ “ಉಳಿವಿಗಾಗಿ” ಬದಲಾಗುತ್ತಿದ್ದಾನೆ. ಅಂತಹ ಸಮಯದಲ್ಲಿ ನಮ್ಮ ವಿವೇಚನೆಗಳೂ ಸೋಲುತ್ತಿವೆ. ಸ್ನೇಹವನ್ನು ಬಿಡಲಾಗದವರಾಗಿ ಒಳ್ಳೆಯವರು ಆತ್ಮದ್ರೋಹವನ್ನೂ ಮಾಡಿಕೊಳ್ಳುತ್ತಿದ್ದಾರೆ. ಎಲ್ಲಿ ಯಾರನ್ನು ಹೇಗೆ ಎದುರಿಸೋಣ? ಸೈತಾನ ಮನಸ್ಸುಗಳ ಮೇಲೆ ಅಧಿಪತ್ಯ ಸಾಧಿಸಿಬಿಟ್ಟಿದ್ದಾನೆ, ಮತ್ತು ಪ್ರತಿಕ್ಷಣವೂ ಅವನಿಗೆ ಹೊಸಮನಸ್ಸುಗಳು ಸಿಗುತ್ತಲೇ ಇವೆ.

ಹಾಗಾಗಿ, ಇಲ್ಲಿ ವ್ಯಕ್ತಿಯೊಬ್ಬ ತೊಲಗಿದಾಗ ಅಥವ ಬದಲಾದಾಗ ಎಲ್ಲವೂ ಬದಲಾಗಿಬಿಡುವ ಸಾಧ್ಯತೆ ಇಲ್ಲವೇ ಇಲ್ಲ. ವ್ಯವಸ್ಥೆಯನ್ನು ಹೇಗೆ ಬೇಕಾದರೂ, ಎಷ್ಟು ಬೇಕಾದರೂ ದುರುಪಯೋಗಪಡಿಸಿಕೊಳ್ಳುವ ಕಲೆ ಮತ್ತು ಅದನ್ನು ದಕ್ಕಿಸಿಕೊಳ್ಳುವ ತಾಕತ್ತು ದುರುಳರಿಗಿದೆ. ಇದೊಂದು ರಕ್ತಬೀಜಾಸುರ ಸಂತತಿ. ಅವು ತಾವೇತಾವಾಗಿ ನಶಿಸುವುದಿಲ್ಲ. ಅದಕ್ಕೊಂದು ನಿರ್ಣಾಯಕ ಗಳಿಗೆ ಬರಬೇಕು. ಮತ್ತು ಅದು ಹತ್ತಿರದಲ್ಲೆಲ್ಲೂ ಇರುವ ಹಾಗೆ ಕಾಣಿಸುವುದಿಲ್ಲ.

ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ,
ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ತನುವಿನಲಿ ಹುಸಿ ತುಂಬಿ,
ಮನದಲ್ಲಿ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ಕೂಡಲಸಂಗಮದೇವ.
– ಬಸವಣ್ಣ

ಇಂತಹ ಸಂದರ್ಭದಲ್ಲೂ ಒಡ್ದಬಹುದಾದ ದೊಡ್ಡ ಪ್ರತಿರೋಧವೆಂದರೆ ನಾವು ಕ್ರಿಯಾಶೀಲರಾಗಿರುವುದು. ಅಂತಹವರಿಗೆಲ್ಲ ನಮನಗಳು.

ಕೈವಾರ ತಾತಯ್ಯನ ಮಠ ಮಾದರಿಯಾಗಬೇಕು

-ಡಾ.ಎಸ್.ಬಿ.ಜೋಗುರ

ಮಠಗಳು ಧರ್ಮಕಾರಣದಿಂದ ವಿಚಲಿತವಾಗಿ ರಾಜಕಾರಣಕ್ಕೆ ಹತ್ತಿರವಾಗುವ ಪರಿಪಾಠ ಕಳೆದ ಐದಾರು ವರ್ಷಗಳಿಂದ ಹೆಚ್ಚಾಗುತ್ತಿದೆ. ಎಲ್ಲವನ್ನೂ ವರ್ಜಿಸುವ ತಾತ್ವಿಕತೆಯ ತಳಹದಿಯಲ್ಲಿ ಪ್ರತಿಷ್ಠಾಪನೆಯಾದ ಮಠ ಸಂಸ್ಕೃತಿ ಅದು ಹೇಗೆ ಮತ್ತು ಯಾವಾಗ ಐಹಿಕ ಅಬ್ಯುದಯದ ಸಹವಾಸಕ್ಕೆ ಬಂದವೋ ತಿಳಿಯದು. ಎಲ್ಲ ಭೌತಿಕ ಸುಖಗಳು ಸುತ್ತ ಸುರಿಯುವಂತೆ ಬದುಕಬೇಕೆನ್ನುವ ಹಂಬಲ ಹನಿಯುವವರೇ ಮಠಾದೀಶರಾದರೆ ಕಾರ್ಯ ನಿರ್ವಹಣೆಯ ಕ್ಷೇತ್ರಗಳೇ ಅದಲು ಬದಲಾಗುವ ಅಪಾಯಗಳಿವೆ. ಮಠಗಳು ತನ್ನ ಅನುಯಾಯಿಗಳ ಮಾನಸಿಕ ಸ್ಥೈರ್ಯ ಮತ್ತು ನೈತಿಕತೆಯ ಬೆಂಗಾವಲಾಗಬೇಕೇ ಹೊರತು ಒಂದು ಉದ್ಯಮದ ಹಾಗೆ ವ್ಯಾಪಿಸುವ ಅವಶ್ಯಕತೆಯಿಲ್ಲ. ಪ್ರತಿಯೊಂದು ಜಾತಿಯ ಮಠಗಳಲ್ಲಿ ಆ ಮಠದ ಅನುಯಾಯಿಗಳ ಕಷ್ಟಕೋಟಲೆಗಳಿಗೆ ಕೊನೆಯಂತೂ ಇಲ್ಲ. ಧರ್ಮಗಳು ಇಂದು ಶಕ್ತಿ ಪ್ರದರ್ಶನದ ಅಖಾಡಗಳಾಗುತ್ತಿರುವ ವೇಳೆಯಲ್ಲಿ ಅನುಯಾಯಿಗಳನ್ನು ಸರಿಯಾದ ರಹದಾರಿಗೆ ತರುವಲ್ಲಿ ಈ ಮಠಗಳು ಯತ್ನಿಸಬೇಕು. ಇಡೀ ಸಾಮಾಜಿಕ ವ್ಯವಸ್ಥೆ ಕುಸಿಯುತ್ತಿದೆ, ಮೌಲ್ಯಗಳ ಅಧ:ಪತನವಾಗುತ್ತಿದೆ ಎಂದು ಬೊಬ್ಬಿರಿದರೂ ಯಾವ ಮಠಗಳಿಗೂ ಅದನ್ನು ಸರಿಪಡಿಸುವುದು ಸಾಧ್ಯವಾಗುತ್ತಿಲ್ಲ.

ಮಠ ಎನ್ನುವುದು ಸ್ವಸ್ಥ ಸಮಾಜದ ಸ್ಥಾಪನೆಯಲ್ಲಿ ಹೆಣಗಬೇಕಾದ ಒಂದು ಪ್ರಮುಖ ಸಂಸ್ಥೆ. ವಾಸ್ತವದಲ್ಲಿ ಇಂದು ಮಠಗಳು ನಿರ್ವಹಿಸುತ್ತಿರುವ ಕಾರ್ಯಬಾಹುಳ್ಯ ಎಂಥದು ಎನ್ನುವುದು ಆಯಾ ಮಠಗಳಿಗೂ ಮತ್ತು ಆ ಮಠದ ಅನುಯಾಯಿಗಳಿಗೂ ತಿಳಿದಿದೆ. ಕೆಲವು ಮಠಗಳು ಈಗಲೂ ತಮ್ಮ ಮೂಲ ಧೋರಣೆಯಿಂದ ವಿಚಲಿತವಾಗದೇ ಉಳಿದು ಅಪ್ಪಟ ಧಾರ್ಮಿಕ ಮತ್ತು ಮೌಲ್ಯ ಪ್ರಸಾರದ ಕಾರ್ಯವನ್ನೇ ಮಾಡುತ್ತಿವೆ. ಅಂಥಾ ಮಠಗಳ ಬಗ್ಗೆ ನಾನು ಮಾತನಾಡುತ್ತಿಲ್ಲ. ಒಬ್ಬ ರಾಜಕಾರಣಿ ಎಲ್ಲ ರೀತಿಯಲ್ಲಿಯೂ ಭ್ರಷ್ಟ ಎನ್ನುವುದನ್ನು ಒಂದು ಸಮಾಜ ಗುರುತಿಸಿ ತಿರಸ್ಕರಿಸುವ ಹಂತದಲ್ಲಿರುವಾಗಲೂ ಅಂಥವನನ್ನು ಹೊಗಳುವುದಾಗಲೀ.. ಬೆಂಬಲಿಸಿ ಮಾತನಾಡುವ ಮಠಗಳ ಧೋರಣೆ ಸರಿಯಲ್ಲ.

ಬಜೆಟ್ ಮಂಡನೆಯನ್ನು ಕಣ್ಣ್‌ಅಗಲಿಸಿ ಕಾಯುವವರ, ಕಿವಿ ನಿಮಿರಿಸಿ ಕೇಳುವವರ ಸಾಲಲ್ಲಿ ಮಠಗಳು ನಿಲ್ಲಬಾರದು. ಅವುಗಳ ಕಾರ್ಯ ನಿರ್ವಹಣೆ ಅತ್ಯಂತ ಮೌಲಿಕವಾಗಿರಬೇಕು. ರಾಜಕೀಯ ಮುಖಂಡರುಗಳು ನೀಡುವ ಹಣದಲ್ಲಿ ಮಠದ ಭೌತಿಕ ಸ್ವರೂಪ ಬದಲಾಗಬಹುದೇ ಹೊರತು ಆಂತರಿಕ ತತ್ವಾದರ್ಶಗಳಲ್ಲ. ಇತ್ತೀಚಿನ ಬಜೆಟ್ ಮಂಡನೆಯಲ್ಲಿ ಕೈವಾರ ತಾತಯ್ಯನ ಮಠಕ್ಕೆ ನೀಡಲಾದ ಒಂದು ಕೋಟಿ ಅನುದಾನವನ್ನು ಆ ಮಠ ಅತ್ಯಂತ ಸ್ಥಿತಪ್ರಜ್ಞೆಯಿಂದ ಹಿಂದಿರುಗಿಸಿ ತನ್ನ ಹಿರಿಮೆಯನ್ನು ಮೆರೆಯುವ ಜೊತೆಗೆ ಕೆಲ ಮಠಗಳಾದರೂ ಇಂದಿಗೂ ತನ್ನತನವನ್ನು ಉಳಿಸಿಕೊಂಡಿವೆ ಎನ್ನುವುದನ್ನು ತೋರಿಸಿಕೊಟ್ಟಿದೆ. ಮೇಲ್ನೊಟಕ್ಕೆ ಯಾವುದೋ ಒಂದು ಜಾತಿಗೆ ಸೀಮಿತವಾಗಿರುವ ಮಠ ಇದಾದರೂ ಸಾಧ್ಯವಾದ ಮಟ್ಟಿಗೆ ಜಾತ್ಯಾತೀತ ನಿಲುವನ್ನು ಕಾಪಾಡಿಕೊಂಡು ಬಂದಿರುವುದಿದೆ. ಈ ಮಠದ ಧರ್ಮಾಧಿಕಾರಿ ಎಮ್.ಆರ್. ಜಯರಾಮ ಹಾಗೆ ಮಾಡುವ ಮೂಲಕ ರಾಜ್ಯದ ಮಿಕ್ಕ ಮಠಗಳಿಗೆ ಮಾದರಿಯಾಗಿದ್ದಾರೆ. ರಾಜಕೀಯ ಹಂಗಿನಿಂದ ಹೊರಗುಳಿದ ಮಠಗಳಿಂದ ಮಾತ್ರ ನಾವು ತತ್ವನಿಷ್ಠ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ರೂಪಿಸುವಲ್ಲಿ ನೆರವಾಗಬಹುದು. ಕೈವಾರ ತಾತಯ್ಯನ ಮಠ ಅನೇಕ ವರ್ಷಗಳಿಂದಲೂ ತನ್ನ ಅನುಭಾವಿ ಪರಂಪರೆಯ ಮೂಲಕ ಹೆಸರುವಾಸಿಯಾದುದು. ಈಗ ಒಂದು ಮಹತ್ತರವಾದ ತೀರ್ಮಾನವನ್ನು ತೆಗೆದುಕೊಳ್ಳುವ ಮೂಲಕ ತನ್ನದೇಯಾದ ಪರಿಶುದ್ಧತೆಯನ್ನು ಅದು ಉಳಿಸಿಕೊಂಡಿದೆ.

ಮಠಗಳ ಬೆಳವಣಿಗೆ ಎನ್ನುವುದು ಆಧ್ಯಾತ್ಮಿಕವಾಗಿರಬೇಕೆ ಹೊರತು ಭೌತಿಕವಾಗಿ ಅಲ್ಲ. ನಮ್ಮದೇ ರಾಜ್ಯದ ಕೆಲವು ಮಠಗಳು ಅನೇಕ ಬಗೆಯ ಪ್ರಗತಿಪರ ಚಟುವಟಿಕೆಗಳನ್ನು ರಾಜಕಾರಣಿಗಳ ಹಂಗಿಲ್ಲದೇ ನಡೆಯಿಸಿಕೊಂಡು ನಡೆದಿವೆ. ಗ್ರಂಥ ಪ್ರಕಾಶನ ಕಾರ್ಯವಿರಬಹುದು, ದಾಸೋಹದ ಕಾರ್ಯವಿರಬಹುದು, ಶಿಕ್ಷಣ ನೀಡುವ, ಧಾರ್ಮಿಕ ವಿಚಾರಗಳನ್ನು ತಾರ್ಕಿಕವಾಗಿ ಪ್ರಸರಣ ಮಾಡುವ ಕಾರ್ಯದಲ್ಲಿಯೂ ಸ್ವತಂತ್ರ್ಯವಾಗಿ ತೊಡಗಿರುವುದಿದೆ. ಈ ಬಗೆಯ ಮಠಗಳ ಬಗೆಗೆ ಅದರ ಅನುಯಾಯಿಗಳಲ್ಲಿ ಗೌರವ ಇದ್ದೇ ಇದೆ. ಚಿತ್ರದುರ್ಗದ ಮುರಘಾ ಶರಣರ ಬಗ್ಗೆ ಅಪಾರವಾದ ಗೌರವವಿರುವವರ ಸಾಲಲ್ಲಿ ನಾನೂ ಒಬ್ಬನಾಗಿದ್ದೆ. ಇತ್ತೀಚಿನ ಒಂದು ಸಮಾರಂಭವೊಂದರಲ್ಲಿ ಅವರ ಸಂಕುಚಿತ ಮಾತುಗಳು ನನ್ನನ್ನು ಘಾಸಿಗೊಳಿಸಿದವು. ಇಂಥಾ ಸ್ವಾಮಿಗಳು ನಮ್ಮ ನಡುವೆ ಕೆಲವರಾದರೂ ಇದ್ದಾರಲ್ಲ..? ಎಂದುಕೊಳ್ಳುವಾಗಲೇ ಇವರೂ ಎಲ್ಲರಂತಾದದ್ದು ನನ್ನಂಥಾ ಅನೇಕರಿಗೆ ಬೇಸರ ತಂದಿರುವುದಿದೆ. ಮಠಗಳು ರಾಜಕೀಯದಿಂದ ದೂರ ಉಳಿಯಬೇಕು. ಅವರು ಕೊಡಮಾಡುವ ಅನುದಾನವನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಬಾರದು. ಮಠದ ಸಂಪನ್ಮೂಲಗಳನ್ನು ವಿಸ್ತರಿಸಿಕೊಳ್ಳುವ ಮೂಲಕ ಮಠಗಳು ಬೆಳೆಯಬೇಕೇ ಹೊರತು ರಾಜಕಾರಣಿಗಳ ಅನುದಾನದಿಂದ ಅಲ್ಲ. ಕೈವಾರ ತಾತಯ್ಯನವರ ಮಠ ಆ ದಿಶೆಯಲ್ಲಿ ಒಂದು ಮಾದರಿಯಾಗಬೇಕು.

ಯೋಗ ಗುರು ಸುದ್ದಿಯಲ್ಲಿದ್ದಾರೆ

– ದಿನೇಶ್ ಕುಮಾರ್ ಎಸ್.ಸಿ.

ಯೋಗ ಗುರು ಸುದ್ದಿಯಲ್ಲಿದ್ದಾರೆ. ತಮ್ಮ ಆರಾಧಕರಿಂದ ಶ್ರೀ.ಶ್ರೀ… ಎಂದು ಕರೆಯಲ್ಪಡುವ ಆಧ್ಯಾತ್ಮ-ಯೋಗ ಗುರು ರವಿಶಂಕರ್ ಗುರೂಜಿ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಎಲ್‍ಟಿಟಿಇ ಜತೆ ಮಾತುಕತೆ ಮಾಡುತ್ತೇನೆ ಎಂದು ಅವರು ಒಂದಷ್ಟು ದಿನ ಸುದ್ದಿ ಮಾಡಿದ್ದರು. ಎಲ್ಲೆಲ್ಲಿ ಭಯೋತ್ಪಾದಕರು ಇದ್ದಾರೋ ಅಲ್ಲಿಗೆ ತೆರಳಿ ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಹೇಳುವುದು ಅವರ ಇತ್ತೀಚಿನ ಅಭ್ಯಾಸ. ಮೊನ್ನೆಮೊನ್ನೆಯಷ್ಟೆ ತಾಲಿಬಾನ್ ಜತೆ ಮಾತುಕತೆಗೆ ನಾನು ಸಿದ್ಧ ಎಂದು ಗುರೂಜಿ ಹೇಳಿಕೊಂಡಿದ್ದರು. ಈ ತರಹದ ಹೇಳಿಕೆಗಳೇ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹತೆಯನ್ನು ತಂದು ಕೊಡುತ್ತದೆ ಎಂದು ಹಲವರು ಭಾವಿಸಿರಬಹುದು. ರವಿಶಂಕರರೂ ಅದೇ ಆಸೆಯಲ್ಲಿ ಈ ಥರದ ಕೃಷ್ಣಸಂಧಾನದ ಲೊಳಲೊಟ್ಟೆ ಮಾತುಗಳನ್ನು ಆಡುತ್ತಿರಬಹುದು. ಆ ವಿಷಯ ಒತ್ತಟ್ಟಿಗಿರಲಿ, ಸದ್ಯಕ್ಕೆ ಅವರು ಸರ್ಕಾರಿ ಶಾಲೆಗಳನ್ನು ಕುರಿತು ನೀಡಿರುವ ಬೀಸು ಹೇಳಿಕೆಯೊಂದು ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈಗಾಗಲೇ ರವಿಶಂಕರರ ಹೇಳಿಕೆ ವಿರುದ್ಧ ಸಾಕಷ್ಟು ಚರ್ಚೆಗಳೂ ನಡೆದಿವೆ.

ರಾಜಸ್ಥಾನದ ಜೈಪುರದಲ್ಲಿ ನಡೆದ ಸಭೆಯೊಂದರಲ್ಲಿ ರವಿಶಂಕರ ಗುರೂಜಿ ಸರ್ಕಾರಿ ಶಾಲೆಗಳ ಬಗ್ಗೆ ಮಾತನಾಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ನಕ್ಸಲೈಟ್‍ರಾಗುತ್ತಾರೆ, ಹಿಂಸಾತ್ಮಕ ಮನೋಭಾವ ರೂಢಿಸಿಕೊಳ್ಳುತ್ತಾರೆ. ಹೀಗಾಗಿ ಸರ್ಕಾರಿ ಶಾಲೆಗಳನ್ನು ಬರಕಾಸ್ತು ಮಾಡಿ ಅವುಗಳನ್ನು ಖಾಸಗಿ ಸಂಸ್ಥೆಗಳ ಸುಪರ್ದಿಗೆ ಒಪ್ಪಿಸಬೇಕು ಎಂಬುದು ರವಿಶಂಕರರ ಹೇಳಿಕೆಯ ತಾತ್ಪರ್ಯ. ಕೇಂದ್ರ ಸಚಿವರಿಂದ ಹಿಡಿದು ಸಮಾಜದ ಎಲ್ಲ ವಲಯಗಳಿಂದಲೂ ಈ ಹೇಳಿಕೆಗೆ ತೀವ್ರ ವಿರೋಧ ಕಂಡುಬಂದ ಹಿನ್ನೆಲೆಯಲ್ಲಿ ರವಿಶಂಕರರು ತಮ್ಮ ಹೇಳಿಕೆಗೆ ಒಂದಷ್ಟು ಸ್ಪಷ್ಟನೆಯ ರೂಪದ ತಿದ್ದುಪಡಿಯನ್ನೂ ನೀಡಬೇಕಾಯಿತು. ಅವರ ತಿದ್ದುಪಡಿಯ ಪ್ರಕಾರ ಅವರ ಹೇಳಿಕೆ ನಕ್ಸಲ್ ಪೀಡಿತ ಪ್ರದೇಶಗಳಿಗೆ ಮಾತ್ರ ಅನ್ವಯಿಸುತ್ತದೆ. ಒಂದು ವೇಳೆ ಈ ತಿದ್ದುಪಡಿಯಾದ ಮಾತನ್ನೇ ವಿಶ್ಲೇಷಣೆಗೆ ಒಳಪಡಿಸುವುದಾದರೂ ರವಿಶಂಕರರು ಮತ್ತೂ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ.

ರವಿಶಂಕರರ ಮೂಲ ಹೇಳಿಕೆಯನ್ನು ಗಮನಿಸುವುದಾದರೆ ಸರ್ಕಾರಿ ಶಾಲೆಗಳು ನಕ್ಸಲೈಟ್‍ರನ್ನು ಸೃಷ್ಟಿಸುವ ಕಾರ್ಖಾನೆಗಳಾಗಿದ್ದರೆ ಈ ದೇಶದ ತುಂಬೆಲ್ಲ ನಕ್ಸಲೈಟ್‍ಗಳೆ ತುಂಬಿರಬೇಕಿತ್ತು. ಅಥವಾ ದೇಶವಾಸಿಗಳ ಪೈಕಿ ಶೇ.90 ರಷ್ಟು ಜನ ಹಿಂಸಾತ್ಮಕ ಮನೋಭಾವದವರೇ ಆಗಿರಬೇಕಿತ್ತು. ಯಾಕೆಂದರೆ ದೇಶದ ಶೇ.90 ರಷ್ಟು ಜನರು ಒಂದಿಲ್ಲೊಂದು ಸರ್ಕಾರಿ ಶಾಲೆಗಳಲ್ಲಿ ಕಲಿತವರೇ ಆಗಿರುತ್ತಾರೆ. ಇದು ಸುಳ್ಳಾದ್ದರಿಂದ ರವಿಶಂಕರರ ಹೇಳಿಕೆ ಮೂರ್ಖತನದ್ದು ಎಂದು ಶಾಲಾ ಬಾಲಕರೇ ಸುಲಭವಾಗಿ ನಿಶ್ಚಯಿಸಿಬಿಡಬಹುದು. ಇನ್ನು ಸರ್ಕಾರಿ ಶಾಲೆಗಳು ನಕ್ಸಲೈಟ್‍ರನ್ನು ಸೃಷ್ಠಿಸುತ್ತಿವೆ ಎನ್ನುವ ರವಿಶಂಕರರು ಅದಕ್ಕೆ ಆಧಾರಗಳನ್ನು ಒದಗಿಸುವ ಗೋಜಿಗೆ ಹೋಗಿಲ್ಲ. ಇದು ಒಂದು ಬಗೆಯ ಬೀಸು ಹೇಳಿಕೆಯಾದ್ದರಿಂದ ರವಿಶಂಕರರ ಇಂಗಿತ ಏನೆಂಬುದನ್ನು ನಾವೇ ಊಹಿಸಬೇಕಾಗುತ್ತದೆ. ಸರ್ಕಾರಿ ಶಾಲೆಗಳು ನಕ್ಸಲೈಟ್‍ರನ್ನು ಸೃಷ್ಠಿಸುತ್ತಿವೆ ಎನ್ನುವುದಾದರೆ ಸರ್ಕಾರಿ ಶಾಲೆಗಳ ಬಡಪಾಯಿ ಶಿಕ್ಷಕರು ಮಕ್ಕಳಿಗೆ ಹಿಂಸಾತ್ಮಕಗೊಳ್ಳುವಂಥ ಶಿಕ್ಷಣವನ್ನು ನೀಡುತ್ತಿದ್ದಾರೆ ಎಂದಾಗುತ್ತದೆ. ಇದು ಸಾರಾಸಗಟಾಗಿ ದೇಶದ ಲಕ್ಷಾಂತರ ಶಿಕ್ಷಕ ಸಮೂಹವನ್ನು ಅಪಮಾನಿಸುವ, ನಿಂದಿಸುವ ಹೇಳಿಕೆಯಾಗಿ ಬಿಡುತ್ತದೆ.

ರವಿಶಂಕರರ ಇದೇ ಹೇಳಿಕೆಯಲ್ಲಿ ಖಾಸಗಿ ಕ್ಷೇತ್ರದ ಗುಣಗಾನವನ್ನೂ ನಾವು ಗುರುತಿಸಬಹುದು. ಸರ್ಕಾರಿ ಅಲ್ಲದ್ದೆಲ್ಲವೂ ಅವರಿಗೆ ಶ್ರೇಷ್ಠವಾಗಿ ಕಂಡಿರಬಹುದು. ಆಧುನಿಕ ಜಗತ್ತಿನಲ್ಲಿ ಸಿರಿವಂತ ಮತ್ತು ಅತಿ ಸಿರಿವಂತ ಸಮುದಾಯದ ಸ್ವಭಾವವನ್ನೇ ರವಿಶಂಕರರು ಪ್ರದರ್ಶಿಸಿದ್ದಾರೆ. ಸರ್ಕಾರಿ ಶಾಲೆಗಳನ್ನು ಅನಾಮತ್ತಾಗಿ ಖಾಸಗಿಯವರಿಗೆ ವಹಿಸಿಕೊಡಬೇಕು ಎಂದು ಹೇಳುವ ರವಿಶಂಕರರಿಗೆ ಖಾಸಗಿ ಕ್ಷೇತ್ರದ ಮೇಲಿರುವ ಅಪರಿಮಿತ ವಿಶ್ವಾಸ ಎದ್ದು ಕಾಣುತ್ತದೆ.

ಹೇಳಿಕೇಳಿ ರವಿಶಂಕರರು ಆಧ್ಯಾತ್ಮ ಗುರು ಎನಿಸಿಕೊಂಡವರು. ಅವರನ್ನು ಯೋಗದ ವ್ಯಾಪಾರಿ ಎಂದು ಸಹ ಅವರ ಟೀಕಾಕಾರರು ಕರೆಯುತ್ತಾರೆ. ಆಧ್ಯಾತ್ಮವನ್ನು, ಯೋಗವನ್ನು ವ್ಯಾಪಾರದ ಮಟ್ಟಕ್ಕೆ ಇಳಿಸಿದವರಿಗೆ ಶಿಕ್ಷಣವನ್ನು ವ್ಯಾಪಾರಿಗಳ ತೆಕ್ಕೆಗೆ ವಹಿಸುವ ಹಂಬಲ ಇರುವುದನ್ನು ಆಶ್ಚರ್ಯದಿಂದೇನೂ ನೋಡಬೇಕಾಗಿಲ್ಲ. ಗುರೂಜಿಯವರು ನಡೆಸುವ ಸತ್ಸಂಗಕ್ಕೂ ದುಬಾರಿ ಫೀಜು ಇರುವುದರಿಂದ ಮಕ್ಕಳ ಶಿಕ್ಷಣಕ್ಕೆ ಫೀಜು-ಡೊನೇಷನ್ನು ಇರುವುದು ಅತ್ಯಂತ ಸಹಜವೇ ಅಲ್ಲವೇ?

ಗುರೂಜಿಯವರ ಇಂಥ ಹೇಳಿಕೆಗೆ ಸಮರ್ಥಕರು ಇರುವುದೂ ನಿಜ. ಮಧ್ಯಮ- ಮೇಲ್ ಮಧ್ಯಮ ಸಮುದಾಯವೂ ಇಂಥ ಸಿನಿಕ ಹಳಹಳಿಕೆಗಳನ್ನು ಆಗಾಗ ಪ್ರದರ್ಶಿಸುವುದುಂಟು. ವಿಶೇಷವೆಂದರೆ ಇವು ಸರ್ಕಾರಿ ಶಾಲೆ, ಆಸ್ಪತ್ರೆಗಳ ಲಾಭ ಪಡೆದ ವಲಯವೂ ಹೌದು. ಆದರೆ ಮಾತಿಗೆ ನಿಂತಾಗ ಇವರಿಗೆ ಖಾಸಗಿ ಕ್ಷೇತ್ರವೇ ಆಪ್ಯಾಯಮಾನವಾಗಿ ಕಾಣುತ್ತದೆ. ಸರ್ಕಾರಿ ಶಾಲೆಗಳು ನೋಡ್ರೀ, ಅಲ್ಲಿ ಶಿಕ್ಷಕರೇ ಇಲ್ಲ, ಇದ್ದರೂ ಕಟ್ಟಡ ಇರೋದಿಲ್ಲ, ಕಟ್ಟಡ ಇದ್ರೂ ಶೌಚಾಲಯ ಇಲ್ಲ. ಕಂಪ್ಯೂಟರ್ ಇಲ್ಲ. ಇಂಥವು ಇರೋದಕ್ಕಿಂತ ಅವುಗಳನ್ನು ಖಾಸಗಿಯವರಿಗೆ ಒಪ್ಪಿಸೋದು ಒಳ್ಳೇದಲ್ವೇ ಎನ್ನುವುದು ಈ ಜನರುಗಳ ತರ್ಕ. ಆದರೆ ಇದನ್ನು ಅಷ್ಟು ಸರಳೀಕರಿಸಿ ನೋಡಲಾಗುವುದಿಲ್ಲ. ದೇಶದ ನಿರ್ಗತಿಕ, ಬಡ, ಕೆಳ ಮಧ್ಯಮ ವರ್ಗದ ಬಹುಸಂಖ್ಯಾತ ಜನತೆಗೆ ಈಗಲೂ ಸರ್ಕಾರಿ ಶಾಲೆಗಳೇ ಶಿಕ್ಷಣ ಕೊಡಬಲ್ಲ ಏಕೈಕ ಸಾಧನಗಳು. ಅದಕ್ಕೆ ಹೊರತಾಗಿ ಈ ಜನವರ್ಗಕ್ಕೆ ಅನ್ಯಮಾರ್ಗವಿಲ್ಲ. ಒಂದು ಹೊತ್ತಿನ ಊಟ ಸಿಗುತ್ತದೆಂಬ ಕಾರಣಕ್ಕೆ ಎಷ್ಟೋ ಮಂದಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಾರೆ ಎಂದು ಹೇಳಿದರೆ ಇವರುಗಳಿಗೆ ಅದು ಅರ್ಥವೇ ಆಗುವುದಿಲ್ಲ. ಯಾಕೆಂದರೆ ಆ ನೋವನ್ನು ಇವರು ಅನುಭವಿಸಿ ಗೊತ್ತಿರುವುದಿಲ್ಲ.

ರವಿಶಂಕರರ ಈ ಅಸಹನೆಯ ಹೇಳಿಕೆಗೆ ಕಾರಣವೇನು ಎಂದು ಹಲವರು ಚಿಂತಿತರಾಗಿರುವುದನ್ನು ನಾನು ಗಮನಿಸಿದ್ದೇನೆ. ರವಿಶಂಕರರ ಗ್ರಾಹಕರು ಬಂಡವಾಳಶಾಹಿಗಳು, ಸಿರಿವಂತರು, ಅತಿ ಶ್ರೀಮಂತರೇ, ಧಾರ್ಮಿಕ ವಲಯದ ಮೂಲಭೂತವಾದಿಗಳು ಆಗಿದ್ದಾರೆ. ಅವರುಗಳ ಹಿತಾಸಕ್ತಿಗಳನ್ನು ರಕ್ಷಿಸುವ ಹೊಣೆಯೂ ಗುರೂಜಿಯವರದ್ದಾಗಿರಬಹುದು. ಹೀಗಾಗಿ ಖಾಸಗೀಕರಣವೇ ಎಲ್ಲ ಸಮಸ್ಯೆಗಳಿಗೂ ಮದ್ದು ಎಂದು ಅವರು ಡಂಗೂರ ಹೊಡೆಯುವ ಅನಿವಾರ್ಯತೆಗೆ ಸಿಲುಕಿರಬಹುದು.

ಆದರೆ ಈ ಹೇಳಿಕೆ ದೇಶದ ಸಮಸ್ತ ಮಕ್ಕಳಿಗೂ ಶಿಕ್ಷಣವನ್ನು ನೀಡುವ ನಮ್ಮ ಸಂವಿಧಾನ ಮತ್ತು ಸರ್ಕಾರಗಳ ಹೊಣೆಗಳನ್ನು ಸಾರಾಸಗಟಾಗಿ ತಿರಸ್ಕರಿಸುವುದರಿಂದ ಸಂವಿಧಾನ ವಿರೋಧಿಯೇ ಆಗಿರುತ್ತದೆ. ದೇಶದ ಎಲ್ಲ ಶಾಲೆಗಳೂ ಖಾಸಗಿಯವರ ಕೈಗೆ ಹೋದರೆ ದೇಶದ ಬಡ, ಅತಿ ಬಡವ ತನ್ನ ಮಕ್ಕಳಿಗೆ ಶಿಕ್ಷಣ ನೀಡಲಾರನಾದ್ದರಿಂದ ಇದು ಜೀವ ವಿರೋಧಿ, ಮಕ್ಕಳ ಹಕ್ಕುಗಳನ್ನು ನಿರಾಕರಿಸುವಂಥ ಹೇಳಿಕೆಯಾಗುತ್ತದೆ. ಇನ್ನು ಸರ್ಕಾರಿ ಶಾಲೆಗಳು ಮಕ್ಕಳಲ್ಲಿ ಹಿಂಸೆಯನ್ನು ಪ್ರಚೋದಿಸುತ್ತವೆ ಎಂಬ ಮಾತುಗಳಿಗೆ ಯಾವ ನೆಲೆಯಲ್ಲೂ ಸಮರ್ಥನೆಯಿಲ್ಲವಾದ್ದರಿಂದ ಇದು ಅತ್ಯಂತ ಅವಿವೇಕದ, ಮುಠ್ಠಾಳತನದ ಹೇಳಿಕೆ ಎಂದೇ ಪರಿಗಣಿಸಬೇಕಾಗುತ್ತದೆ.

ಒಂದು ವೇಳೆ ರವಿಶಂಕರರ ತಿದ್ದುಪಡಿಯಾದ ಹೇಳಿಕೆಯನ್ನೇ ಪರಿಗಣಿಸುವುದಾದರೂ ನಕ್ಸಲೈಟ್‍ರ ವ್ಯಾಪ್ತಿಯ ಸರ್ಕಾರಿ ಶಾಲೆಗಳು ನಕ್ಸಲೈಟ್‍ರನ್ನು ಸೃಷ್ಟಿಸುತ್ತಿವೆ ಎಂಬುದು ಮತ್ತೊಂದು ಮೂರ್ಖತನದ, ಆಧಾರ ರಹಿತ ಹೇಳಿಕೆಯಾಗುತ್ತದೆ. ಆ ಸರ್ಕಾರಿ ಶಾಲೆಗಳೂ ಇಲ್ಲದಿದ್ದರೆ ನಕ್ಸಲೈಟ್‍ರ ಪ್ರಮಾಣ ಇನ್ನಷ್ಟು ಹೆಚ್ಚಿರುತ್ತಿತ್ತು ಎಂಬುದನ್ನಾದರೂ ರವಿಶಂಕರರು ಗುರುತಿಸಬಹುದಿತ್ತು.

ನೊಬೆಲ್ ಪ್ರಶಸ್ತಿಗಾಗಿ ಕೈ ಚಾಚಿ ನಿಂತಿರುವ ರವಿಶಂಕರರು ತಮ್ಮ ಜೈಪುರ ಘೋಷಣೆಯನ್ನು ಸಾರಾಸಗಟಾಗಿ ವಾಪಾಸು ಪಡೆದು ದೇಶದ ನಾಗರಿಕರ ಕ್ಷಮೆ ಕೋರುವುದು ಅವರಿಗೆ ಎಲ್ಲ ರೀತಿಯಲ್ಲೂ ಶ್ರೇಯಸ್ಕರವಾದ ಕ್ರಿಯೆ. ಇಲ್ಲವಾದಲ್ಲಿ ತನ್ನನ್ನು ತಾನು ಶಾಂತಿಯ ರಾಯಭಾರಿ ಎಂತಲೋ, ಧರ್ಮ ಪ್ರವರ್ತಕ ಎಂತಲೋ, ಗುರೂಜಿ ಎಂತಲೋ, ಶ್ರೀ ಶ್ರೀ ಎಂತಲೋ ಅಥವಾ ಇನ್ನೇನೋ ಹಾಳುಮೂಳು ವಿಶೇಷಣಗಳನ್ನು ಅಂಟಿಸಿಕೊಳ್ಳುವುದನ್ನಾದರೂ ಅವರು ಕೈಬಿಡಬೇಕಾಗುತ್ತದೆ.

ರವಿಶಂಕರರು ಸರ್ಕಾರಿ ಶಾಲೆಗಳು ನಕ್ಸಲೈಟ್‍ರನ್ನು ಸೃಷ್ಟಿಸುತ್ತಿವೆ ಎಂದು ಹೇಳಿದ್ದಾರೆ. ಅವರು ಸರ್ಕಾರಿ ಶಾಲೆಗಳು ತಮ್ಮಂಥ ಯೋಗ ವ್ಯಾಪಾರಿಗಳನ್ನು ಸೃಷ್ಟಿಸುತ್ತಿವೆ ಎಂದು ಹೇಳಿದ್ದರೆ ಅದು ಹೆಚ್ಚು ಅನಾಹುತಕಾರಿ ಹೇಳಿಕೆಯಾಗಿರುತ್ತಿತ್ತು. ಯಾಕೆಂದರೆ ನಕ್ಸಲೈಟ್‍ರಾದರೋ ಸಾಮಾಜಿಕ ಅಸಮಾನತೆ, ಶೋಷಣೆಗಳ ವಿರುದ್ಧ ಬಂಡೆದ್ದು ಅಸ್ತ್ರ ಹಿಡಿದವರು. ಆದರೆ ರವಿಶಂಕರರಂಥವರು ಊಧ್ರ್ವಮುಖಿಯಾಗಬೇಕಾದ ಸಮಾಜವನ್ನು ಹಾಳುಗೆಡಹುತ್ತ ಬರುತ್ತಾರೆ. ಇಂಥವರೇ ಇವತ್ತು ಅತಿ ಹೆಚ್ಚು ಅಪಾಯಕಾರಿ ಜನರು.

ನಕ್ಸಲ್ ಕಥನಕ್ಕೊಂದು ಮುನ್ನುಡಿ

ಸ್ನೇಹಿತರೆ,

ಕನ್ನಡಕ್ಕೆ ಓದುಗರಿಗೆ ಅಷ್ಟೇನೂ ಪರಿಚಿತವಲ್ಲದ ಅಧ್ಯಾಯವೊಂದನ್ನು ಸಂಪೂರ್ಣವಾಗಿ ಪರಿಚಯಿಸಲು ನಮ್ಮ ಪ್ರೀತಿಯ ಜಗದೀಶ್ ಕೊಪ್ಪರವರು ಸಿದ್ಧವಾಗಿದ್ದಾರೆ. ಹಲವಾರು ತಿಂಗಳುಗಳ ಕರ್ನಾಟಕ ಮತ್ತು ಭಾರತದ ಹಲವು ಕಡೆಗಳ ಓಡಾಟ, ಅಧ್ಯಯನ, ಮಾತುಕತೆಗಳ ಫಲ ಇದು.

ನಕ್ಸಲ್ ಚಳವಳಿ ರಕ್ತಸಿಕ್ತ ಚಳವಳಿ. ಅದೊಂದು ಸಾಮಾಜಿಕ ಮತ್ತು ರಾಜಕೀಯ ಹೋರಾಟವೂ ಹೌದು. ಆದರೆ ಅದು ನಮ್ಮ ರಾಷ್ಟ್ರನಿರ್ಮಾತೃಗಳು ಒಪ್ಪಿಕೊಂಡ ಪ್ರಜಾಪ್ರಭುತ್ವ ಸಿದ್ಧಾಂತಕ್ಕೆ ಪೂರಕವಾಗಿಲ್ಲ. ಆದರೆ, ಭಾರತದಂತಹ ಅಸಮಾನ ಮತ್ತು ಶೋಷಣೆಯ ಸಮಾಜದಲ್ಲಿ, ಪ್ರಜಾಪ್ರಭುತ್ವ ಮತ್ತು ಆಧುನಿಕ ವಿಚಾರಧಾರೆಗಳು ಬೇರೂರದಂತಹ ಕಗ್ಗಾಡುಗಳಲ್ಲಿ, ಪಾಳೆಯಗಾರಿಕೆ ಪರಿಸರದಲ್ಲಿ, ಶೋಷಣೆ ಮತ್ತು ಅನ್ಯಾಯ ಮುಂದುವರೆಯುತ್ತಲೇ ಇದೆ. ಮಾನವ ಹಕ್ಕುಗಳ ದಮನವಾಗುತ್ತಲೇ ಇದೆ. ಜಮೀನ್ದಾರರ ಮತ್ತು ಶೋಷಕರ ವಿರುದ್ಧ ಸಿಗುವ ಕ್ಷಣಿಕ ಮತ್ತು ತಕ್ಷಣದ ನ್ಯಾಯವನ್ನೇ ನ್ಯಾಯ ಎಂದು ಭಾವಿಸುವಂತಹ ಸ್ಥಿತಿಯಲ್ಲಿ ನಾವಿದ್ದೇವೆ. ಆದರೆ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಪಡೆದುಕೊಳ್ಳುವ ನ್ಯಾಯ ಮತ್ತು ಸುಧಾರಣೆಗಳೇ ದೀರ್ಘಕಾಲೀನವಾದವು; ಸಾರ್ವಕಾಲಿಕವಾದವು; ಮತ್ತು ಅಹಿಂಸಾತ್ಮಕವಾದವು.

ವರ್ತಮಾನದಲ್ಲಿ ಅಪ್ರಸ್ತುತವಾಗಬೇಕಿದ್ದ ಈ ನಕ್ಸಲ್ ಚಳವಳಿ ಭಾರತದಲ್ಲಿ ಹಬ್ಬುತ್ತಲೇ ಇದೆ. ಒಂದೆಡೆ ನಕ್ಸಲರ ಎನ್‌ಕೌಂಟರ್ ಆಗುತ್ತಿದ್ದರೆ ಮತ್ತೊಂದೆಡೆ ಅವರೂ ಸಹ ಅಪಹರಣ ಮತ್ತು ಕಗ್ಗೊಲೆಗಳಲ್ಲಿ ತೊಡಗಿದ್ದಾರೆ. ಒಡಿಶಾದಲ್ಲಿ ಒಬ್ಬ ಶಾಸಕ ಮತ್ತು ಒಬ್ಬ ವಿದೇಶಿ ಪ್ರಜೆ ನಕ್ಸಲರಿಂದ ಅಪಹರಣಕ್ಕೊಳಗಾಗಿದ್ದಾರೆ. ಈ ಸಂದರ್ಭದಲ್ಲಿ ಜಗದೀಶ್ ಕೊಪ್ಪರವರು ಈ ಚಳವಳಿಯ ಇತಿಹಾಸ ಮತ್ತು ವರ್ತಮಾನವನ್ನು ಅದರೆಲ್ಲ ಮಗ್ಗಲುಗಳೊಂದಿಗೆ ನಮಗೆ ಪರಿಚಯಿಸ ಹೊರಟಿದ್ದಾರೆ.

ಇಂದಿನಿಂದ ಈ ಮಾಲಿಕೆ ಪ್ರತಿ ಗುರುವಾರದಂದು ಪ್ರಕಟವಾಗುತ್ತದೆ.

ಈ ಮಾಲಿಕೆ ಆರಂಭಿಸುತ್ತಿರುವ ಕೊಪ್ಪರವರಿಗೆ ವರ್ತಮಾನದ ಬಳಗದಿಂದ ಪ್ರೀತಿಯ ಧನ್ಯವಾದಗಳು ಮತ್ತು ಕೃತಜ್ಞತೆಗಳು. ಎಂದಿನಂತೆ ನಿಮ್ಮ ಅಭಿಪ್ರಾಯ ಮತ್ತು ಟಿಪ್ಪಣಿಗಳು ಬರುತ್ತಿರಲಿ.

– ರವಿ ಕೃಷ್ಣಾರೆಡ್ಡಿ– ಡಾ.ಎನ್. ಜಗದೀಶ್ ಕೊಪ್ಪ  


ಇದು ಕಳೆದ ಎಂಟು ವರ್ಷದ ಹಿಂದಿನ ಒಂದು ಘಟನೆ, ಮೂಲತಃ ಅರ್ಥಶಾಸ್ತ್ರದ ವಿದ್ಯಾರ್ಥಿಯಾದ ನಾನು ಜಾಗತೀಕರಣ ಮತ್ತು ಗ್ರಾಮಭಾರತ ಎಂಬ ಶೀರ್ಷಿಕೆಯಡಿ ಡಾಕ್ಟರೇಟ್ ಪದವಿಗಾಗಿ ಜಾಗತೀಕರಣ ಕುರಿತಂತೆ ಅಧ್ಯಯನ ಕೈಗೊಂಡಿದ್ದ, ಸಂದರ್ಭದಲ್ಲಿ ದೆಹಲಿಯ ‘ಡೆಲ್ಲಿ ಸ್ಕೂಲ್ ಆಫ್ ಎಕಾನಾಮಿಕ್ಸ್’ ಕೇಂದ್ರಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ಗ್ರಂಥಾಲಯದಲ್ಲಿ ಕಾಶ್ಮೀರದ ಸ್ಥಿತಿ ಗತಿ ಬಗ್ಗೆ ಎಮ್.ಫಿಲ್. ಅಧ್ಯಯನ ಮಾಡಿದ್ದ ವಿದ್ಯಾರ್ಥಿನಿಯೋರ್ವಳು ತನ್ನ ಸಂಶೋಧನಾ ಪ್ರಬಂಧದಲ್ಲಿ ಭಯೋತ್ಪಾದನೆ ಮತ್ತು ಬಡತನ ಕುರಿತು ಬರೆದಿದ್ದ ಒಂದು ಅಧ್ಯಾಯ ನನ್ನ ಗಮನ ಸೆಳೆಯಿತು.

ಕಾಶ್ಮೀರದ ಬಡ ಮುಸ್ಲಿಂ ಕುಟುಂಬಗಳ ಯುವಕರಿಗೆ ಪಾಕಿಸ್ತಾನದ ಐ.ಎಸ್,ಐ ಏಜೆಂಟರು ತಲಾ ಎರಡರಿಂದ ಮೂರು ಲಕ್ಷ ರೂ ಹಣ ನೀಡಿ, ಅವರಿಗೆ ಜೆಹಾದ್ ಹೆಸರಿನಲ್ಲಿ ಭಯೋತ್ಪಾದನೆ ಚಟುವಟಿಕೆ ಕುರಿತು ತರಬೇತಿ ನೀಡುವುದನ್ನು ದಾಖಲಿಸಿದ್ದಳು.

ಮನೆಯಲ್ಲಿ ಬೆಳೆದು ನಿಂತ ತಮ್ಮ ಸಹೋದರಿಯರ ಮದುವೆ ಖರ್ಚಿಗಾಗಿ ಕಾಶ್ಮೀರದ ಅಮಾಯಕ ಯುವಕರು ಇಂತಹ ಸಂಚಿಗೆ ಬಲಿಯಾಗುತ್ತಿರುವ ಬಗ್ಗೆ ಕ್ಷೇತ್ರ ಕಾರ್ಯದ ಮೂಲಕ ಸಮೀಕ್ಷೆ ಮಾಡಿ, ಪೋಲಿಸರಿಂದ ಬಂಧಿತರಾದ ಯುವಕರನ್ನು ಭೇಟಿಯಾಗಿ ಅಧಿಕೃತವಾಗಿ ಅಂಕಿ ಅಂಶಗಳನ್ನು ದಾಖಲಿಸಿದ್ದಳು. ಅಲ್ಲಿಯವರೆಗೆ ನಾನು ಬಡತನ ಮತ್ತು ಹಿಂಸೆ ಹಾಗೂ ಭಯೋತ್ಪಾದನೆ ನಡುವೆ ಹೀಗೊಂದು ಸಾವಯವ ಸಂಬಂಧ ಇದೆ ಎಂದು ಊಹಿಸಿರಲಿಲ್ಲ.

ಚಿಕ್ಕಂದಿನಿಂದಲೂ ದೇವರು, ಧರ್ಮ, ಮೂಢನಂಬಿಕೆ, ಕಂದಾಚಾರ ಇವುಗಳ ಆಚೆಗೆ ಬೆಳೆದು ಬಂದ ನಾನು. ಕಾಲೇಜು ದಿನಗಳಲ್ಲಿ ಎಡಪಂಥೀಯ ವಿಚಾರಗಳಿಂದ ಪ್ರಭಾವಿತನಾದವನು. ಇವುಗಳ ನಡುವೆಯೂ, ಅತಿಯಾದ ಎಡಪಂಥೀಯ ಅಥವಾ ಬಲಪಂಥೀಯ ವಿಚಾರಧಾರೆಗಳು ಮತೀಯವಾದದಷ್ಟೇ ಅಪಾಯಕಾರಿ ಎಂದು ನಂಬಿದವನು. ಹಾಗಾಗಿ ಗಾಂಧಿ ಮತ್ತು ಲೋಹಿಯಾ, ಅಂಬೇಡ್ಕರ್ ವಿಚಾರಗಳಲ್ಲಿ ನಂಬಿಕೆಯಿಟ್ಟುಕೊಂಡು ವರ್ತಮಾನದ ಎಲ್ಲಾ ವಿದ್ಯಾಮಾನಗಳನ್ನು ಈವರೆಗೆ ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದೇನೆ.

ಮುಂದಿನ ವರ್ಷದ ಮೇ ತಿಂಗಳಿಗೆ 45 ವರ್ಷ ತುಂಬುವ ನಕ್ಸಲ್ ಚಳವಳಿಯ ಹೋರಾಟವನ್ನು 1978 ರಿಂದ ಅವಲೋಕಿಸುತ್ತಾ ಅವರ ಹಿಂಸೆಯ ಹಾದಿಯೊಂದನ್ನು ಹೊರತುಪಡಿಸಿ, ಹಲವು ಸಂದರ್ಭಗಳಲ್ಲಿ ಅವರ ವಿಚಾರಧಾರೆಗೆ ಪರೋಕ್ಷವಾಗಿ ಬೆಂಬಲಿಸುತ್ತಾ ಬಂದಿದ್ದೇನೆ ಆದರೆ, ನಕ್ಸಲ್ ಹೋರಾಟದ ಏಳು ಬೀಳಿನ ಇತಿಹಾಸ ದಾಖಲಿಸುವ ಯಾವುದೇ ಆಸೆಯಾಗಲಿ, ಕನಸಾಗಲೀ ಕಳೆದ ನವಂಬರ್‌ವರೆಗೆ ನನ್ನಲ್ಲಿ ಇರಲಿಲ್ಲ.

ಕಾಶ್ಮೀರದ ಹಾಗೆ ನಕ್ಸಲ್ ಚಳವಳಿಯಲ್ಲಿ ಬಡತನ ಮತ್ತು ಹಿಂಸೆಯ ನಡುವೆ ಸಂಬಂಧವಿರಬಹುದೇ ಎಂಬ ಕುತೂಹಲ ಮಾತ್ರ ನನ್ನಲ್ಲಿತ್ತು. ಇವೆಲ್ಲಕ್ಕಿಂತ ಹೆಚ್ಚಾಗಿ ದೆಹಲಿಯ ಜವಹರಲಾಲ್‍ನೆಹರೂ ವಿ.ವಿ. ಹಾಗೂ ಕೊಲ್ಕತ್ತದ ಪ್ರೆಸಿಡೆನ್ಸಿ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ  ಕಾಣೆಯಾಗಿ ನಕ್ಸಲ್ ಚಳವಳಿಗೆ ಸೇರ್ಪಡೆಯಾಗುತ್ತಿರುವುದನ್ನು ಗಮನಿಸುತ್ತಾ ಬಂದಿದ್ದೆ. ಇವರಲ್ಲಿ ಐ.ಎ.ಎಸ್, ಐ.ಪಿ.ಎಸ್. ಅಧಿಕಾರಿಗಳ ಮಕ್ಕಳು ಸೇರಿರುವುದು ನನ್ನ ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ದೇಶಾದ್ಯಂತ ನಡೆಯುತ್ತಿದ್ದ ನಕ್ಸಲ್‍ರ ಹಿಂಸಾಚಾರ, ಪೋಲಿಸರ ಎನ್‍ಕೌಂಟರ್ ಇವುಗಳನ್ನು ಗಮನಿಸುತ್ತಿದ್ದ ನನಗೆ 2011 ರ ನವಂಬರ್ 24 ರಂದು ಪಶ್ಚಿಮ ಬಂಗಾಳದ ಪೋಲಿಸರು ನಕ್ಸಲಿಯರ ನಾಯಕ ಕಿಶನ್‍ಜಿಯನ್ನು ಬಲೆಗೆ ಕೆಡವಿ, ಕೊಂದುಹಾಕಿದ ಘಟನೆ ಮತ್ತು ಆನಂತರದ ಬೆಳವಣಿಗೆಗಳು ನನ್ನ ಈ ಕಥನಕ್ಕೆ ಪ್ರೇರಣೆಯಾದವು.

34 ವರ್ಷಗಳ ಹಿಂದೆ ಆಂಧ್ರದ ಕರೀಂನಗರ ಜಿಲ್ಲೆಯ ತನ್ನ ಹುಟ್ಟೂರನ್ನು ತೊರೆದ ಕಿಶನ್‍ಜಿ (ಮೂಲಹೆಸರು ಮಲ್ಲೋಜಲ ಕೋಟೇಶ್ವರರಾವ್) ನಂತರ ಆಂಧ್ರ, ಒಡಿಸ್ಸಾ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಛತ್ತೀಸ್‍ಘಡ್, ಮಹಾರಾಷ್ಟ್ರ ರಾಜ್ಯಗಳ 16 ಸಾವಿರ ಹಳ್ಳಿಗಳನ್ನು ತನ್ನ ಮನೆಯನ್ನಾಗಿ ಮಾಡಿಕೊಂಡು ಮಾವೋವಾದಿ ನಕ್ಸಲರ ನಾಯಕನಾಗಿ ಬೆಳೆದು ನಿಂತವನು. ಈ ಎಲ್ಲಾ ರಾಜ್ಯಗಳ ಗುಡ್ಡಗಾಡು ಜನರ ಪ್ರೀತಿಯ ಆರಾಧ್ಯ ದೈವವಾಗಿದ್ದ ಕಿಶನ್‍ಜಿ, ಪೋಲಿಸರಿಗೆ ಮತ್ತು ಕೇಂದ್ರ ಸರ್ಕಾರದ ನಕ್ಸಲ್ ನಿಗ್ರಹ ಪಡೆಗೆ ತನ್ನ ಮೊಬೈಲ್ ನಂಬರ್ ನೀಡಿ ತನ್ನನ್ನು ಬಂಧಿಸುವಂತೆ ಸವಾಲೆಸೆದ ಸಾಹಸಿ ಈತ. ಇದು ಸಾಲದೆಂಬಂತೆ ಮಾಧ್ಯಮದವರನ್ನು ತನ್ನ ಅಡಗುದಾಣಕ್ಕೆ ಕರೆಸಿಕೊಂಡು ಪತ್ರಿಕಾಗೋಷ್ಠಿ ನಡೆಸುತ್ತಾ ಸರ್ಕಾರದ ನೀತಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ. ಅಂತಿಮವಾಗಿ ಪೋಲಿಸರು ಆತನ ಸಹಚರರಾದ ನಕ್ಸಲಿಯರಿಗೆ ಹಣದ ಆಮಿಷ ಒಡ್ಡಿ ಕಿಶನ್‍ಜಿಯ ಚಲನವಲನದ ಮಾಹಿತಿ ಪಡೆದು ಕಳೆದ ನವಂಬರ್ 24 ರಂದು ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಆರಣ್ಯ ಪ್ರದೇಶದ ಅಡಗು ತಾಣದಲ್ಲಿ ಅವನನ್ನು ಜೀವಂತ ಹಿಡಿದುದಲ್ಲದೆ, ಸ್ಥಳದಲ್ಲೇ ಕೊಂದು ಹಾಕಿ, ಇಡೀ ಘಟನೆಯನ್ನು ಎನ್‍ಕೌಂಟರ್ ಎಂದು ಪ್ರತಿಬಿಂಬಿಸಿದರು.

‘ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ’ (ಮಾವೋವಾದಿ) ಸಂಘಟನೆಯ ಪ್ರಮುಖ ನಾಯಕನಾಗಿದ್ದ ಕಿಶನ್‍ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನಜಿ ಕರೆ ನೀಡಿದ್ದ, ಶಾಂತಿಯುತ ಮಾತುಕತೆಗೆ ಒಲವು ತೋರಿದ್ದ. ಆದರೆ ತನ್ನ ಸಂಗಡಿಗರ ಕುತಂತ್ರಕ್ಕೆ ಬಲಿಯಾದ. ಐದು ದಿನಗಳ ನಂತರ ಆಂಧ್ರದ ಅವನ ಹುಟ್ಟೂರಿಗೆ ಶವವನ್ನು ತಂದಾಗ 34 ವರ್ಷಗಳ ನಂತರ ಶವವಾಗಿ ಬಂದ ಮಗನ ಮುಖವನ್ನು ನೋಡಿದ 89 ವರ್ಷದ ಅವನ ತಾಯಿ ಸದ್ದಿಲ್ಲದೆ ಕಣ್ಣೀರಿಟ್ಟಳು. ಕಿಶನ್‍ಜಿಯ ಅಂತ್ಯ ಸಂಸ್ಕಾರದ ದೃಶ್ಯಗಳನ್ನು ತೆಲುಗು ಸುದ್ಧಿ ಚಾನಲ್‍ಗಳು ನೇರ ಪ್ರಸಾರ ಮಾಡಿದವು. ಇದನ್ನು ವೀಕ್ಷಿಸುತ್ತಾ ಕುಳಿತ್ತಿದ್ದ ನಾನು. ಆಕೆ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯನ್ನು ನೋಡಿ ಆ ಕ್ಷಣಕ್ಕೆ ದಂಗಾಗಿ ಹೋದೆ.

“ಈ ದಿನ ನನ್ನ ಮಗ ಸತ್ತಿರಬಹುದು ಆದರೆ, ನನಗೆ ಈ ನೆಲದಲ್ಲಿ ಸಾವಿರಾರು ಕೋಟೇಶ್ವರರಾವ್‍ನಂತಹ (ಕಿಶನ್‍ಜಿ) ಮಕ್ಕಳಿದ್ದಾರೆ,” ಎನ್ನುವ ಆ ವೃದ್ಧೆಯ ಮಾತಿನ ಹಿಂದಿನ ಸಿಟ್ಟು ನೋವು, ಸಂಕಟ ಈ ಎಲ್ಲಾ ಭಾವನೆಗಳು ಏಕಕಾಲಕ್ಕೆ ಅನೇಕ ಅರ್ಥಗಳನ್ನು ಹೊರಹಾಕುತ್ತಿದ್ದವು. ಇಡೀ ನಕ್ಸಲ್ ಚಳವಳಿಯ ಇತಿಹಾಸವನ್ನು ಗಮನಿಸಿದರೆ, ಅದರ ನಾಯಕತ್ವ ವಹಿಸಿದ ಬಹುತೇಕ ನಾಯಕರು ಸಾಮಾನ್ಯ ವ್ಯಕ್ತಿಗಳಲ್ಲ, ನಮ್ಮ ಕರ್ನಾಟಕದ ಸಾಕೇತ್‍ರಾಜನ್‍ನಿಂದ ಹಿಡಿದು, ಕಿಶನ್‍ಜಿ, ಅಜಾದ್, ಚಾರುಮುಜಮ್ದಾರ್, ಕನುಸನ್ಯಾಲ್, ಸತ್ಯನಾರಾಯಣ, ಕೊಂಡಪಲ್ಲಿ ಸೀತಾರಾಮಯ್ಯ, ಗಣಪತಿ, ನಾಗಭೂಷಣ ಪಟ್ನಾಯಕ್, ಸುನೀತಿಘೋಷ್, ದತ್ತ ಸರೋಜ್, ಅಸೀಮ್ ಚಟರ್ಜಿ, ರಾಜೇಂದ್ರಕುಮಾರ್ ಇವರೆಲ್ಲಾ ಪದವೀಧರರು ಮತ್ತು ಇಂಜಿನಿಯರ್‍‍ಗಳು, ಇದಲ್ಲದೇ ಪತ್ರಿಕೋದ್ಯಮ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಇವರುಗಳು ಸಮಾಜದ ಮುಖ್ಯ ವಾಹಿನಿಯಲ್ಲಿದ್ದರೆ ಈ ನಾಡಿಗೆ, ಈ ನೆಲಕ್ಕೆ ಆಸ್ತಿಯಾಗಬಲ್ಲವರಾಗಿದ್ದರು. ಇವೆರೆಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದ ಸಂಗತಿಯೆಂದರೆ, ಗುಡ್ಡಗಾಡಿನ ಬುಡಕಟ್ಟು ಜನಾಂಗವನ್ನು ಇನ್ನಿಲ್ಲದಂತೆ ಶೋಷಣೆ ಮಾಡಿದ ಜಮೀನುದಾರರು, ಅರಣ್ಯಾಧಿಕಾರಿಗಳು, ಮತ್ತು ಪೋಲಿಸರ ಅಮಾನುಷ ವರ್ತನೆ. ಬಾಯಿಲ್ಲದವರ ಶೋಷಿತರ ಸಂಘಟನೆಗೆ ಮುಂದಾಗಿ, ಅವರಿಗೆಲ್ಲಾ ನೆಮ್ಮದಿಯ ಬದುಕು ಕಟ್ಟಿಕೊಡಲು ಹೋಗಿ, ಅರಿವಿಲ್ಲದಂತೆ ತಮ್ಮ ಬದುಕನ್ನು ಬೀದಿಗೆ ಬಿಸಾಕಿ ಪೊಲೀಸರ ಗುಂಡಿಗೆ ಬಲಿಯಾಗಿ ಅನಾಥ ಹೆಣವಾದ ನತದೃಷ್ಟರು ಇವರು.

ಅಂದಿನ ದಿನಗಳ ಆ ಕಾಲಘಟ್ಟದಲ್ಲಿ ಇವರ ಹೋರಾಟ ನಿಜಕ್ಕೂ ಅತ್ಯಗತ್ಯವಾಗಿತ್ತು. ಆದರೆ, ಇವತ್ತಿನ ಈ ಸಂದರ್ಭಕ್ಕೆ ನಕ್ಸಲಿಯರ ಈ ಕದನ ಅಪ್ರಸ್ತುತ. ವರ್ತಮಾನದಲ್ಲಿ ನಾವು ಕಾಣುತ್ತಿರುವ ನಕ್ಸಲಿಯರ ಹೋರಾಟ ಏನಿದ್ದರೂ ತಮ್ಮ ಅಸ್ತಿತ್ವದ ಉಳಿವಿಗಾಗಿ ಎಂಬಂತಾಗಿದೆ. ಅಂದು ಅವರ ಕೈಯಲ್ಲಿ ಕೇವಲ ಬಿಲ್ಲು ಬಾಣಗಳಿದ್ದವು. ಈಗ ಅದೇ ಕೈಗಳಿಗೆ ಬಂದೂಕು, ಬಾಂಬುಗಳು ಬಂದಿವೆ.

1917 ರಲ್ಲಿ ರಷ್ಯಾ ಕ್ರಾಂತಿಗೆ ನಾಂದಿ ಹಾಡಿದ ಲೆನಿನ್ ಮತ್ತು ಚೀನಾದ ಸಾಮಾಜಿಕ ಕ್ರಾಂತಿಗೆ ಕಾರಣಕರ್ತನಾದ ಮಾವೋತ್ಸೆ ತುಂಗನ ವಿಚಾರಧಾರೆಗಳನ್ನು ನಂಬಿಕೊಂಡು ಭಾರತದಲ್ಲಿ ಕ್ರಾಂತಿ ಮಾಡುತ್ತೇವೆ ಎನ್ನುವುದು ನಕ್ಸಲಿಯರ ಭ್ರಮೆಯಷ್ಟೇ ಮಾತ್ರವಲ್ಲ, ಹುಚ್ಚುತನದ ಪರಮಾವಧಿ ಎಂದು ಕೂಡ ವಿಶ್ಲೇಷಿಸಬಹುದು. ಚೀನಾ ಮತ್ತು ರಷ್ಯಾ ಈ ಎರಡು ರಾಷ್ಟ್ರಗಳು ತಮ್ಮ ಕಮ್ಯೂನಿಷ್ಟ್ ಸಿದ್ಧಾಂತಗಳನ್ನು ಈಗಾಗಲೇ ಗಾಳಿಗೆ ತೂರಿ ಜಾಗತೀಕರಣವೆಂಬ ವಿಟ ಪುರುಷನಿಗೆ ಸೆರಗು ಹಾಸಿ ಮಲಗಿರುವಾಗ, ಭಾರತದಂತಹ ಬಹು ಸಂಸ್ಕೃತಿಯ ಈ ನೆಲದಲ್ಲಿ ಕ್ರಾಂತಿ ಸಾಧ್ಯವೆ? ಒಮ್ಮೆ ತಣ್ಣಗೆ ಕುಳಿತು ಯೋಚಿಸಿ ನೋಡಿ. ಆದರೆ, ನಕ್ಸಲಿಯರು ಇದನ್ನು ನಂಬುವುದಿಲ್ಲ. ಏಕೆಂದರೆ, ಅವರ ಜೊತೆಗಿನ ಮಾತುಕತೆಯ ಸಂದರ್ಭದಲ್ಲಿ ನನಗೆ ಇವರು ಮೆದುಳು ತೊಳೆಸಿಕೊಂಡವರು (Brain washed people) ಎಂಬ ಭಾವನೆ ಗಟ್ಟಿಯಾಗಿದೆ.

ಸದ್ಯದ ಸ್ಥಿತಿಯಲ್ಲಿ ಸರ್ಕಾರ ಮತ್ತು ನಕ್ಸಲಿಯರ ಹೋರಾಟಕ್ಕೆ ಅಂತ್ಯವೆಂಬುದು ಕನಸಾಗಿದೆ ಹಾಗಾಗಿ ಎಂದೂ ಮುಗಿಯದ ಯುದ್ಧ ಎಂಬ ಶೀರ್ಷಿಕೆಯ ಈ ಹೋರಾಟದ ಕಥನಕ್ಕಾಗಿ ಕಳೆದ ಜನವರಿಯಲ್ಲಿ ನಾನು ಆಂಧ್ರ, ಪಶ್ಚಿಮಬಂಗಾಳ, ಒಡಿಸ್ಸಾ, ಮಹಾರಾಷ್ಟ್ರ ರಾಜ್ಯಗಳ ಹದಿನೆಂಟು ನಕ್ಸಲ್‍ಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಅವರ ಅಡಗು ತಾಣಕ್ಕೆ ಭೇಟಿ ನೀಡಿ, ಮಾಜಿ ನಕ್ಸಲಿಯರು ಮತ್ತು ಮಾವೋವಾದಿ ಕಮ್ಯೂನಿಷ್ಟರ ಜೊತೆ ಮಾತನಾಡಿ, ಅವರಿಂದ ಸಂಗ್ರಹಿಸಿದ ಅಂಕಿ ಅಂಶ, ಮಾಹಿತಿ ಇವೆಲ್ಲವನ್ನು ಕ್ರೂಢೀಕರಿಸಿ ನಕ್ಸಲರ ಇತಿಹಾಸವನ್ನು ಕಥನ ರೂಪದಲ್ಲಿ ಇಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದೀನಿ.

ನಕ್ಸಲಿಯರ ಹೋರಾಟಕ್ಕೆ ಹಲವಾರು ಮಗ್ಗಲುಗಳಿವೆ. ಇದಕ್ಕೆ ಕೇವಲ ಒಂದು ದೃಷ್ಟಿಕೋನ ಸಾಲದು ಎಂಬ ನಂಬಿಕೆಯ ಆಧಾರದ ಮೇಲೆ ಈ ವಯಸ್ಸಿನಲ್ಲಿ, ಅದೂ ದಿನಕ್ಕೆ ಎರಡು ಬಾರಿ ಇನ್ಸುಲಿನ್ ತೆಗೆದುಕೊಳ್ಳುವ ಮಧುಮೇಹಿ ರೋಗಿಯಾಗಿ ರಿಸ್ಕ್ ಎನ್ನುವಂತಹ ಪ್ರವಾಸ ಕೈಗೊಂಡೆ.

ಹೈದರಾಬಾದ್‍ನಗರದ ಪೊಟ್ಟಿ ಶ್ರಿರಾಮುಲು ತೆಲುಗು ವಿ.ವಿ.ಯ ಮುಖ್ಯದ್ವಾರದಿಂದ ನನ್ನನ್ನು ಕರೆದೊಯ್ದ ನಕ್ಸಲ್ ಮಿತ್ರರು ಆಂಧ್ರದ ಕರೀಂ ನಗರ, ನಲ್ಗೊಂಡ, ವಿಜಯವಾಡ, ರಾಜಮಂಡ್ರಿ, ಶ್ರೀಕಾಕುಳಂ ಜಿಲ್ಲೆ ಹಾಗೂ ಒಡಿಸ್ಸಾದ ಗಂಜಾಂ ಜಿಲ್ಲೆಗಳಲ್ಲಿ ತಿರುಗಾಡಿಸಿ ಅಂತಿಮವಾಗಿ ಚಿಲ್ಕಾ ಸರೋವರದ ಬಳಿಯ ರೈಲು ನಿಲ್ದಾಣಕ್ಕೆ ಸುರಕ್ಷಿತವಾಗಿ ತಲುಪಿಸಿದರು. ಜೊತೆಗೆ ಪಶ್ಚಿಮ ಬಂಗಾಳದ ಹಾಗೂ ಮಹಾರಾಷ್ಟ್ರದ ಲಿಂಕ್ ದೊರಕಿಸಿಕೊಟ್ಟರು. ಇದೆಲ್ಲಾ ಸಾಧ್ಯವಾದದ್ದು, ಆಂಧ್ರದ ಪ್ರಮುಖ ದಿನಪತ್ರಿಕೆಯಲ್ಲಿ ಸುದ್ಧಿ ಸಂಪಾದಕನಾಗಿ ಸೇವೆ ಸಲ್ಲಿಸಿ ಈಗ ನಿವೃತ್ತನಾಗಿರುವ ನನ್ನ ಮಿತ್ರನಿಂದ. ಆತ ಮೂಲತಃ ಶ್ರೀಕಾಕುಳಂ ಜಿಲ್ಲೆಯ ಹಳ್ಳಿಯಿಂದ ಬಂದವನು, ಅವನ ಬಾಲ್ಯದ ಗೆಳೆಯರೆಲ್ಲಾ ನಕ್ಸಲ್ ಹೋರಾಟಗಾರರಾಗಿದ್ದವರು, ನಂತರದ ದಿನಗಳಲ್ಲಿ. ಭ್ರಮನಿರಶನಗೊಂಡವರು.

1967 ರಲ್ಲಿ ಪ್ರಪಥಮವಾಗಿ ಆಂಧ್ರದಲ್ಲಿ ಪೀಪಲ್ಸ್ ವಾರ್‍‌ಗ್ರೂಪ್ (ಪ್ರಜಾ ಸಮರಂ) ಎಂಬ ನಕ್ಸಲಿಯರ ಹೋರಾಟಕ್ಕೆ ನಾಂದಿ ಹಾಡಿದ ಪ್ರದೇಶವೆಂದರೆ,  ಶ್ರೀಕಾಕುಳಂ ಜಿಲ್ಲೆ. ಆದರೆ ಈಗ ಇಲ್ಲಿನ ಜನರಿಗೆ ಅದೊಂದು ಇತಿಹಾಸವೆನೋ ಎಂಬಾಂತಾಗಿದೆ. (ಈ ಬಗ್ಗೆ ಕಥನದಲ್ಲಿ ವಿವರಾಗಿ ಪ್ರಸ್ತಾಪಿಸಿದ್ದೇನೆ) ಕೊಲ್ಕತ್ತ ನಗರದಲ್ಲಿ ನಾನು ಉಳಿದಿದ್ದ ನಾಲ್ಕು ದಿನಗಳಲ್ಲಿ ಅಲ್ಲಿನ ಅನೇಕ ಕಮ್ಯೂನಿಷ್ಟ್ ಗೆಳೆಯರು ನನಗೆ ನಕ್ಸಲ್ ಇತಿಹಾಸ ಕುರಿತು ಸಮಗ್ರ ಮಾಹಿತಿ ಒದಗಿಸಿಕೊಟ್ಟರು, ಪ್ರತಿ ಗಂಟೆಗೊಮ್ಮೆ ಅವರ ಜೊತೆಗಿನ ಚಹಾ, ಸಿಗರೇಟು, ಮತ್ತು ರಾತ್ರಿಯ ಪಾರ್ಟಿಯಲ್ಲಿ ಅವರೊಂದಿಗೆ ನಡೆಸಿದ ಅಂತ್ಯವನ್ನೇ ಕಾಣದ ಚರ್ಚೆ ಇವೆಲ್ಲವೂ ನನ್ನ ಪಶ್ಚಿಮ ಬಂಗಾಳ ಒರಿಸ್ಸಾ ಪ್ರವಾಸವನ್ನು ನೆನಪಿನಲ್ಲಿ ಉಳಿಯುವಂತೆ ಮಾಡಿವೆ.

ಅಲ್ಲಿಂದ ಬಂದವನು ಮಾರ್ಚ್ ಮೊದಲವಾರ ಕರ್ನಾಟಕದ ನಕ್ಸಲ್ ಪೀಡಿತ ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣಕನ್ನಡ ಜಿಲ್ಲೆಯ ಕಾಡುಗಳಲ್ಲಿ ಅಲೆದು ಬಂದೆ. ಕೇವಲ 20 ರಿಂದ 25 ಮಂದಿಯಷ್ಟು ಇರುವ ಕರ್ನಾಟಕದ ನಕ್ಸಲಿಯರು ಇವತ್ತು ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಎಷ್ಟೋ ವೇಳೆ ಅಲ್ಲಿನ ಪ್ರಮುಖ ದೇವಸ್ಥಾನಗಳಲ್ಲಿ ನಡೆಯುತ್ತಿರುವ ಅನ್ನ ಸಂತರ್ಪಣೆಯಲ್ಲಿ ಭಕ್ತರಂತೆ ಭಾಗವಹಿಸಿ ಹೊಟ್ಟೆ ತುಂಬಿಸಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಈ ಪ್ರದೇಶಗಳ ಗ್ರಾಮಸ್ಥರ ಸ್ಥಿ ತಿ ಹೇಳತೀರದಾಗಿದೆ. ಹಸಿದು ಬಂದು ಅನ್ನ ಕೇಳಿದವರಿಗೆ ಊಟ ಕೊಟ್ಟರೆ, ನಕ್ಸಲ್ ಬೆಂಬಲಿಗರೆಂಬ ಹಣೆಪಟ್ಟಿಯೊಂದಿಗೆ ಜೈಲು ಸೇರುವ ಸ್ಥಿತಿ, ಕೊಡದಿದ್ದರೆ, ನಕ್ಸಲಿಯರ ಬಂದೂಕಿನ ಭಯ ಅತ್ತ ಹಳ್ಳ, ಇತ್ತ ಹುಲಿ ಎಂಬಂತಿದೆ.

ನಾನು ಕರ್ನಾಟಕದ ಕಾಡುಗಳಲ್ಲಿ ಅಲೆಯುತ್ತಿದ್ದಾಗಲೇ ಪಶ್ಚಿಮ ಬಂಗಾಳದಲ್ಲಿ ತೀವ್ರತರವಾದ ಘಟನೆಗಳು ಜರುಗಿದವು. ಕಿಶನ್‍ಜಿ ನಂತರ ಸಂಘಟನೆಯ ಉಸ್ತುವಾರಿ ಹೊತ್ತಿದ್ದ ಆರ್,ಕೆ. ಹೆಸರಿನ ರಾಮಕೃಷ್ಣನನ್ನು ನಕ್ಸಲ್ ನಿಗ್ರಹ ಪಡೆ ಬಂಧಿಸಿದೆ. ಆಂಧ್ರ ಮೂಲದ ರಾಮಕೃಷ್ಣ ಮೆಕಾನಿಕಲ್ ಇಂಜಿನಿಯರ್ ಪದವೀಧರನಾಗಿದ್ದು, ಶಸ್ರಾಸ್ತ್ರಗಳ ತಯಾರಿಕೆಯಲ್ಲಿ ನಿಪುಣನಾಗಿದ್ದ. ಈತನ ಬಂಧನ ನಕ್ಸಲ್ ಹೋರಾಟದ ಬೆನ್ನು ಮೂಳೆಯನ್ನು ಮುರಿದಂತಾಗಿದೆ. ಇದಕ್ಕೆ ಪೂರಕವಾಗಿ ಹಲವು ಕಿಶನ್‍ಜಿ ಬೆಂಬಲಿಗರು ಇದೇ ಮಾರ್ಚ್ ಎಂಟರಂದು ಕೊಲ್ಕತ್ತ ನಗರದಲ್ಲಿ ಮಮತಾ ಬ್ಯಾನರ್ಜಿ ಎದುರು ಶರಣಾಗತರಾಗುವುದರ ಮೂಲಕ ಸಮಾಜದ ಮುಖ್ಯವಾಹಿನಿಯತ್ತ ಮುಖ ಮಾಡುತ್ತಿದ್ದಾರೆ. ಇದು ನಿಜಕ್ಕೂ ನೆಮ್ಮದಿಯ ಸಂಗತಿ.

(ಮುಂದುವರೆಯುವುದು)