ಪುಸ್ತಕ ಪರಿಚಯ – ಬುಕ್ ಆಫ್ ಟೀ

– ರಮೇಶ್ ಕುಣಿಗಲ್

ಹಲವರಿಗೆ ಟೀ ಚಟ. ಈಗಷ್ಟೆ ಕುಡಿದು ಕಪ್ ಕೆಳಗಿಡುವ ಮೊದಲೇ ಇನ್ನೊಂದು ಕಪ್ ಟೀಗೆ ಆರ್ಡರ್ ಮಾಡುವ ಮಹಾನುಭಾವರಿದ್ದಾರೆ. ಕೆಲವೊಮ್ಮೆ ಹೊಟೇಲ್ ಮಾಣಿಗಳಿಗೆ ಅಚ್ಚರಿಯಾಗಿ ‘ನಮ್ಮ ಹೋಟೆಲ್ ಟೀ ಇಷ್ಟು ಚೆನ್ನಾಗಿದೆಯಾ’ ಎಂದು ಹುಬ್ಬೇರಿಸಿದ್ದೂ ಇದೆ. ಆದರೆ ಈ ಚಟದವರಿಗೆ ಟೀ ಟೇಸ್ಟ್ ಗಿಂತ ಟೀ ಕುಡಿಯುವದಷ್ಟೇ ಮುಖ್ಯವಾಗಿರುತ್ತೆ. ಹೆಚ್ಚು ಕಡಿಮೆ ಇಂಥದೇ ಚಾಳಿ ಬೆಳಸಿಕೊಂಡಿರುವ ಕುಮಾರ್ ಎಸ್. ತನ್ನ ಟೀ ಗೀಳನ್ನು ಶೋಧಿಸುತ್ತಾ ಶೋಧಿಸುತ್ತಾ ಒಂದು ಪುಸ್ತಕಕ್ಕೆ ಆಗುವಷ್ಟು ಸಾಮಗ್ರಿ ಸಂಗ್ರಹಿಸಿದ್ದರು. ನಂತರ ಅದನ್ನು ಒಪ್ಪವಾಗಿ ಜೋಡಿಸಿ ಇದೇ ನನ್ನ ‘ಬುಕ್ ಆಫ್ ಟೀ’ ಎಂದು ಹೊರತಂದಿದ್ದಾರೆ. ಇದರ ಹಿಂದೆ ಇನ್ನು ಮುಂದೆ ‘ಯಾಕೆ ಇಷ್ಟು ಟೀ ಕುಡಿತೀಯ?’ ಎಂದು ಯಾರೂ ಕೇಳಬಾರದು ಎಂಬ ಉದ್ದೇಶವೂ ಇದ್ದಂತಿದೆ.

ಇದು ಆಕಾರದಲ್ಲಿ ಮತ್ತು ಹೂರಣದಲ್ಲಿ ಭಿನ್ನ ಪುಸ್ತಕ. ಟೀ ಬಗ್ಗೆ ಇರುವ ನಂಬಿಕೆಗಳು, ಇತಿಹಾಸ ಜೊತೆ ಜೊತೆಗೆ ಸೃಜನಶೀಲ ಲೇಖಕರು ಟೀಯನ್ನು ಕಂಡ ಬಗೆಯೂ ಈ ಪುಸ್ತಕದಲ್ಲಿವೆ. ಓದುತ್ತಾ ಹೋದಂತೆ ಟೀ ಬಗ್ಗೆ ಮೋಹ ಹೆಚ್ಚಾಗಬಹುದು, ಹೆಚ್ಚೆಚ್ಚು ಟೀ ಕುಡಿಯಲು ಪ್ರೇರಣೆಯಾಗಬಹುದು. (ಆ ಮೂಲಕ ನಿಮ್ಮ ಇನ್ನಿತರೆ ಹಾಟ್ ಡ್ರಿಂಕ್ ಗಳಿಂದ ದೂರ ಇರಲು ಸಹಾಯವೂ ಆಗಬಹುದು!). ಟೀ, ಟೀ ಜೊತೆಗೆ ಬೆರೆತ ಕತೆ, ಕವಿತೆ, ಝೆನ್ ಕತೆ, ಹೈಕು ಎಲ್ಲಾ ಇಲ್ಲಿದೆ. ಪಲ್ಲವ ಪ್ರಕಾಶನದ ವೆಂಕಟೇಶ್ ವಿಶೇಷ ಆಸಕ್ತಿ ವಹಿಸಿ ಈ ಪುಸ್ತಕ ಹೊರತಂದಿದ್ದಾರೆ. ಮೊದಲ ನೋಟಕ್ಕೇ ಸೆಳೆಯುವ ಮುಖಪುಟವನ್ನು ಸ್ವತಃ ಲೇಖಕ ಕುಮಾರ್ ಸಿದ್ಧ ಮಾಡಿದ್ದಾರೆ. ಪುಸ್ತಕದ ಒಟ್ಟು ಅಂದಕ್ಕೆ ಒಪ್ಪವಾಗುವಂತಹ ಹಲವು ಚಿತ್ರಗಳಿವೆ.

ಇದರಾಚೆಗೆ ಟೀ ಒಂದು ಉದ್ಯಮ. ಅಲ್ಲಿ ಶ್ರೀಮಂತ ಎಸ್ಟೇಟು ಮಾಲೀಕರಿದ್ದಾರೆ, ಹಾಗೆಯೇ ಬಡ ಕೂಲಿಯವರಿದ್ದಾರೆ. ಟೀ ಉದ್ಯಮವನ್ನು ವಿಶ್ಲೀಷಿಸುವಂತಹ ಬರಹಗಳು ಇಲ್ಲ. ಜೊತೆಗೆ ಕಾರ್ಮಿಕರ ನೋವು ನಲಿವಿನ ಚಿತ್ರಣಗಳಿಲ್ಲ. ಈ ಪುಸ್ತಕವೇನು ಟೀ ಸುತ್ತಲಿನ ಬದುಕಿನ ಸಮಾಜೋ-ಆರ್ಥಿಕ ಅಧ್ಯಯನ ಅಲ್ಲದಿರುವುದರಿಂದ ಅದೆಲ್ಲ ಇಲ್ಲದಿರುವುದಕ್ಕೆ ಲೇಖಕರಲ್ಲಿ ದೋಷ ಹುಡುಕುವ ಅಗತ್ಯವೇನಿಲ್ಲ. ಮುಂದೊಂದು ದಿನ ಈ ಲೇಖಕರು ಆ ಬಗ್ಗೆ ಆಸಕ್ತಿ ಬೆಳಸಿಕೊಂಡು ಒಂದು ಪರಿಪೂರ್ಣ ಅಧ್ಯಯನ ಆಧಾರಿತ ಪುಸ್ತಕ ಹೊರತಂದರೆ ಮತ್ತಷ್ಟು ಖುಷಿ ಪಡೋಣ.

ಈ ಪುಸ್ತಕವನ್ನೊಮ್ಮೆ ಕೈಗೆತ್ತಿಕೊಂಡು ಓದಿ ನೋಡಿ. ಡೋಂಟ್ ವರಿ, ಓದಿ ಮುಗಿಸಲು ಹೆಚ್ಚು ಸಮಯವೇನು ಬೇಕಿಲ್ಲ.

ಬುಕ್ ಆಫ್ ಟೀ
ಲೇಖಕ: ಕುಮಾರ್ ಎಸ್.
ಪುಟ: 106
ಬೆಲೆ: ರೂ 100
ಪಲ್ಲವ ಪ್ರಕಾಶನ, ಚನ್ನಪಟ್ಟಣ ಅಂಚೆ (ವಯಾ ಎಮ್ಮಿಗನೂರು),
ಬಳ್ಳಾರಿ – 583 113 ದೂ: 94803 53507

Leave a Reply

Your email address will not be published. Required fields are marked *