ಗಾಂಧೀಜಿ, ನಮ್ಮನ್ನು ಕ್ಷಮಿಸಿ ಬಿಡಿ


-ಚಿದಂಬರ ಬೈಕಂಪಾಡಿ


 

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ದೇಶದ ಜನರು ತೇಲಾಡುತ್ತಿದ್ದಾರೆ. ಬ್ರಿಟೀಷರ ದಾಸ್ಯದಿಂದ ಮುಕ್ತಗೊಂಡು ಅಹಿಂಸಾ ಚಳುವಳಿಯ ಮೂಲಕ ಮಹಾತ್ಮಾ ಗಾಂಧೀಜಿ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟರು ಎಂದು ಗುಣಗಾನ ಮಾಡುತ್ತೇವೆ. ಎಲ್ಲಿ ನೋಡಿದರೂ ಸಭೆ, ಸಮಾರಂಭ, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಕೆ, ಸನ್ಮಾನ ಹೀಗೆ ಚಟುವಟಿಕೆಗಳು ನಡೆಯುತ್ತಿವೆ. ಇಂಥ ಸಂದರ್ಭದಲ್ಲಿ ಗಾಂಧೀಜಿ ನೆನಪಾಗುವಷ್ಟು ಬೇರೆ ಯಾರೂ ನೆನಪಾಗುವುದಿಲ್ಲ. ಯಾಕೆಂದರೆ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದವರು ಎನ್ನುವುದಕ್ಕಿಂತಲೂ ಅಹಿಂಸಾತ್ಮಕ ಹೋರಾಟದ ಮೂಲಕವೂ ಗೆಲ್ಲಬಹುದು ಎನ್ನುವುದನ್ನು ಜಗತ್ತಿಗೇ ತೋರಿಸಿಕೊಟ್ಟಿರುವ ಕಾರಣಕ್ಕೆ.

ಬಂದೂಕಿನಿಂದ ಚಿಮ್ಮುವ ಗುಂಡುಗಳು, ಹರಿತವಾದ ಚೂರಿ, ಚಾಕು, ಲಾಂಗು, ಮಚ್ಚು, ದೊಣ್ಣೆಗಳು ಬಹುಬೇಗ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುತ್ತವೆ ಎನ್ನುವ ನಂಬಿಕೆಯಿದ್ದವರು ಆಗಲೂ ಇದ್ದರು. ಆದರೆ ಗಾಂಧೀಜಿ ಮಾತ್ರ ಇವುಗಳಿಗೆ ಒಪ್ಪಿರಲಿಲ್ಲ. ಉಪವಾಸ, ಅಸಹಕಾರ, ಧರಣಿ ಮುಂತಾದ ಸರಳ ಸೂತ್ರಗಳನ್ನು ಮುಂದಿಟ್ಟುಕೊಂಡು ಬ್ರಿಟೀಷರನ್ನು ಮಣಿಸಿದರು. ಅಂಥ ಅಹಿಂಸಾವಾದಿಯ ನೆಲದಲ್ಲಿ ಈಗ ನೆತ್ತರಿನ ಕೋಡಿ ಹರಿಯುತ್ತಿದೆ. ಲಾಟಿ, ಬೂಟುಗಳು ಮಾತನಾಡುತ್ತವೆ. ಲಾಂಗು, ಮಚ್ಚು, ಪಿಸ್ತೂಲುಗಳು ಹೋರಾಟದ ಮುಂಚೂಣಿಯಲ್ಲಿವೆ. ಬಿಳಿ ಉಡುಪು ಧರಿಸುತ್ತಿದ್ದ ಅಂದಿನ ಸ್ವಾತಂತ್ರ್ಯ ಹೋರಾಟಗಾರರ ನೈತಿಕತೆಯೂ ಅವರು ಧರಿಸುತ್ತಿದ್ದ ಉಡುಪಿನಷ್ಟೇ ಬಿಳುಪಾಗಿತ್ತು. ಈಗ ಏನಾಗಿದೆ?

ಅಂದು ಗಾಂಧಿ ‘ಬ್ರಿಟೀಷರೇ, ದೇಶಬಿಟ್ಟು ತೊಲಗಿ ’ ಎಂದು ಕರೆ ನೀಡಿದ್ದರು. ದೇಶದ ಜನರಲ್ಲೂ ಈ ಸಂದೇಶವನ್ನು ಬೆಳೆಸಿದ್ದರು. ಆಗ ಗಾಂಧಿ ಯಾವುದನ್ನು ವಿರೋಧಿಸಿದ್ದರೋ ಅದನ್ನೇ ಈಗ ನಾವು ಬೆಂಬಲಿಸುತ್ತಿದ್ದೇವೆ. ವಿದೇಶಿಗರನ್ನು ದೇಶದಿಂದ ಹೊರದಬ್ಬಿದ ನಮ್ಮ ಹಿರಿಯರನ್ನು ನೆನಪಿಸಿಕೊಂಡು ನಾವು ವಿದೇಶಿಗರೇ ಬನ್ನಿ ಭಾರತಕ್ಕೆ, ನೆಲ, ನೀರು ಕೊಡುತ್ತೇವೆ ಹೂಡಿಕೆ ಮಾಡಿ ಬಂಡವಾಳ ಎಂದು ರತ್ನಗಂಬಳಿ ಹಾಸಿ ವಿದೇಶಗಳನ್ನು ಆಹ್ವಾನಿಸುತ್ತಿದ್ದೇವೆ. ಇದಕ್ಕೆ ನಾವು ಕೊಟ್ಟುಕೊಳ್ಳುವ ಸಮರ್ಥನೆಯೂ ನಾಜೂಕಾಗಿದೆ.

ನಾವು ಅನುಭವಿಸುತ್ತಿರುವುದು ರಾಜಕೀಯ ಸ್ವಾತಂತ್ರ್ಯವನ್ನು ಮಾತ್ರ. ಆರ್ಥಿಕ ಸಮಾನತೆ ಸಿಕ್ಕಿಲ್ಲ. ಆರ್ಥಿಕ ಶಕ್ತಿ ಬಲಪಡಿಸಿಕೊಳ್ಳಲು ಜಾಗತೀಕರಣ, ಉದಾರೀಕರಣಗಳ ಬಾಗಿಲುಗಳನ್ನು ತೆರೆದಿಟ್ಟಿದ್ದೇವೆ. ಅದು ಅನಿವಾರ್ಯ ಎನ್ನುವ ವಾದ ಮಂಡಿಸಿ ಸಮಾಧಾನಪಟ್ಟುಕೊಳ್ಳುತ್ತೇವೆ. ವಿದೇಶಿ ಬಂಡವಾಳದ ಹೊಳೆ ಹರಿಸಲು ರಾಜ್ಯಗಳು ಫಲವತ್ತಾದ ಭೂಮಿಯನ್ನು ಮುಂದಿಟ್ಟುಕೊಂಡು ವಿದೇಶಗಳಿಗಾಗಿ ಕಾಯುತ್ತಿರುವುದು ವಿಪರ್ಯಾಸವೇ ಸರಿ. ಸ್ವದೇಶಿ ವಸ್ತುಗಳನ್ನೇ ಬಳಸಿ ಎನ್ನುವ ಸಂದೇಶ ಕೊಟ್ಟಿದ್ದ ಗಾಂಧೀಜಿ ವಿದೇಶಿ ವಸ್ತುಗಳಿಗೆ ಬೆಂಕಿ ಹಚ್ಚಿಸಿದ್ದರು. ಆದರೆ ನಾವು ಈಗೇನು ಮಾಡುತ್ತಿದ್ದೇವೆ?

ಜಪಾನ್, ಚೀನಾ, ಥೈವಾನ್, ಸಿಂಗಾಪುರ, ಅಮೇರಿಕಾದಲ್ಲಿ ತಯಾರಾದ ಉತ್ಪನ್ನಗಳನ್ನೇ ಬಯಸುತ್ತಿದ್ದೇವೆ. ಮಾನಮುಚ್ಚುವ ಒಳಉಡುಪಿನಿಂದ ಹಿಡಿದು ತಿನ್ನುವ ಆಹಾರದವರೆಗೆ ವಿದೇಶಿ ಉತ್ಪನ್ನಗಳೇ ಆಗಬೇಕು ಎನ್ನುವಷ್ಟರಮಟಿಗೆ ಅವುಗಳ ದಾಸರಾಗಿಬಿಟ್ಟಿದ್ದೇವೆ. ನಮ್ಮ ಸುತ್ತಮುತ್ತಲೂ ಸಿಗುವ ಕಚ್ಛಾವಸ್ತುಗಳನ್ನೇ ಬಳಕೆ ಮಾಡಿಕೊಂಡು ವಿದೇಶಿ ಕಂಪೆನಿಗಳು ತಯಾರಿಸುವ ಸರಕೆಂದರೆ ನಮಗೆ ಆಪ್ಯಾಯಮಾನ. ನಮ್ಮತನವನ್ನು ನಾವು ಕಳೆದುಕೊಂಡಿದ್ದೇವೆ ಎನ್ನುವ ಕಲ್ಪನೆಯೂ ಬರದಂಥ ಸ್ಥಿತಿಯಲ್ಲಿದ್ದೇವೆ. ವಿದೇಶಿ ಕಲೆ, ಸಂಸ್ಕೃತಿಯೆಂದರೆ ಸೂಜಿಗಲ್ಲಿನಂತೆ ಆಕರ್ಷಿತರಾಗುತ್ತಿದ್ದೇವೆ. ದೇಸಿ ಕಲೆಗಳು, ಸಂಸ್ಕೃತಿಯೆಂದರೆ ಅಲರ್ಜಿ. ನಮ್ಮದಲ್ಲದ ಚಿಂತನೆಗಳು ನಮ್ಮ ತಲೆ ತುಂಬಿಕೊಳ್ಳುತ್ತಿವೆ.

ಇಷ್ಟಾದರೂ ನಾವು ಎಚ್ಚೆತ್ತುಕೊಂಡಿಲ್ಲ ಅಥವಾ ಎಚ್ಚೆತ್ತುಕೊಳ್ಳಬೇಕೆಂಬ ಅನಿವಾರ್ಯತೆ ಕಾಡುತ್ತಿಲ್ಲ. ಇಲ್ಲಿ ಗಳಿಸಿದ್ದನ್ನೆಲ್ಲಾ ವಿದೇಶಗಳಲ್ಲಿ ಹೂಡಿಕೆ ಮಾಡಿಯೋ, ಠೇವಣಿ ಇರಿಸಿಯೋ ಹಾಯಾಗಿದ್ದೇವೆ. ಅದನ್ನೇ ಕಪ್ಪು ಹಣವೆಂದು ಹೆಸರಿಸಿ ಒಂದು ಹೋರಾಟಕ್ಕೂ ಕಾರಣವಾಗಿದ್ದೇವೆ. ಗಾಂಧಿ, ನೆಹರೂ ಮೈದಾನಗಳು ಹೋರಾಟಕ್ಕೆ ಸೀಮಿತವಾಗಿವೆ ಹೊರತು ಅವರ ಹೋರಾಟವನ್ನು ಸ್ಮರಿಸುವುದಕ್ಕಾಗಿ ಅಲ್ಲ ಎನ್ನುವುದು ದುರಂತ. ಭ್ರಷ್ಟಾಚಾರ ಸ್ವಾತಂತ್ರ್ಯ ಬಂದ ಮೇಲೆ ನಮ್ಮನ್ನು ಆವರಿಸಿಕೊಂಡುಬಿಟ್ಟಿದೆ. ನೆಲ, ಜಲ ಮಾರಾಟದಲ್ಲೂ ನಮ್ಮನ್ನು ಮೀರಿಸಲು ಯಾರಿಗೂ ಸಾಧ್ಯವಿಲ್ಲ.

ಭಯೋತ್ಪಾದನೆ ನಾವು ಬದುಕುವ ಸ್ವಾತಂತ್ರ್ಯವನ್ನೇ ಕಸಿದುಕೊಂಡಿದೆ. ಹೆಣ್ಣುಮಕ್ಕಳು ದಾರಿಯಲ್ಲಿ ಹಗಲು ಹೊತ್ತು ನಿರ್ಭಯವಾಗಿ ನಡೆದಾಡುವಂಥ ಅದೆಷ್ಟು ಸುರಕ್ಷಿತ ನಗರಗಳಿವೆ?

ಗಾಂಧೀಜಿ ಮಲಹೊರುವುದು ಅನಿಷ್ಟವೆಂದರು. ಪಂಕ್ತಿಭೇದ ಅಸಮಾನತೆಯ ಪ್ರತಿರೂಪವೆಂದರು. ಈಗಲೂ ಮಲಹೊರುವುದಿಲ್ಲವೇ? ಮಲದ ಗುಂಡಿಗಿಳಿದು ಕೊಳಚೆ ಬಾಚುವ ಕೈಗಳಿಂದಲೇ ಅವರು ಆಹಾರ ತಿನ್ನುತ್ತಿಲ್ಲವೇ? ದೇವಸ್ಥಾಗಳು ಸಹಭೋಜನ, ಸಮಾನತೆಯನ್ನು ಪ್ರೋತ್ಸಾಹಿಸುತ್ತಿವೆಯೇ? ಧಾರ್ಮಿಕ ಮುಖಂಡರು, ಸನ್ಯಾಸಿಗಳು ವರ್ಣವ್ಯವಸ್ಥೆಯನ್ನು ಪಾಲನೆ ಮಾಡುತ್ತಿಲ್ಲವೇ?

ಮಹಾತ್ಮಾ ಗಾಂಧೀಜಿ ಸ್ವಾತಂತ್ರ್ಯ ಚಳುವಳಿಗಾಗಿ ತೊಡಗಿಸಿಕೊಂಡಿದ್ದ ಕಾಂಗ್ರೆಸ್ ಸ್ವಾತಂತ್ರ್ಯ ಬಂದ ನಂತರವೂ ವಿಸರ್ಜನೆಯಾಗದೆ ಉಳಿದುಕೊಂಡಿತಲ್ಲಾ, ಅದರ ಮೂಲ ಸ್ವರೂಪ ಉಳಿದಿದೆಯೇ?. ಅಣ್ಣಾ ಹಜಾರೆ ಸ್ವಾತಂತ್ರ್ಯ ಸಿಕ್ಕಿದ ನಂತರ ಮಾಡಿದ ಭಾಷಣದ ಹಿಂದಿ ಪ್ರತಿಯನ್ನು ತಮ್ಮ ಬೆಂಬಲಿಗರಿಗೆ ಹಂಚಿ ಅಣ್ಣಾ ತಂಡವೂ ವಿಸರ್ಜನೆಯಾಗಬೇಕೆಂದು ಹೇಳಬೇಕಾಯಿತು. ಆದರೆ ತಂಡ ವಿಸರ್ಜನೆಯಾಯಿತು, ರಾಜಕೀಯ ಪಕ್ಷವಾಗಿ ರೂಪತಳೆಯಿತು,್. ಗಾಂಧಿವಾದಿ ಹೇಳಲಾಗದೆ ತಳಮಳಗೊಳ್ಳುತ್ತಿರುವುದು ವಾಸ್ತವ ಅಲ್ಲವೇ?

ಗಾಂಧೀಜಿ ಅವರ ಕಲ್ಪನೆಯ ಸ್ವಾತಂತ್ರ್ಯ ನಾವು ಈಗ ಅನುಭವಿಸುತಿರುವುದಲ್ಲ. ಇದು ನಮ್ಮದೇ ಸ್ವಾತಂತ್ರ್ಯ. ಗಾಂಧೀಜಿ ಈಗ ನಮ್ಮ ನಡುವೆ ಬದುಕಿದ್ದರೆ ನಿಜಕ್ಕೂ ವ್ಯಥೆ ಪಡುತ್ತಿದ್ದರು ನಮ್ಮ ಸ್ವಾತಂತ್ರ್ಯದ ಸುಖಕಂಡು. ಗಾಂಧಿ ಮಹಾತ್ಮಾ ನಮ್ಮನ್ನು ಕ್ಷಮಿಸಿ ಬಿಡು ಎನ್ನುವ ಕೋರಿಕೆ. ಯಾಕೆಂದರೆ ಅವರು ಹೇಳಿದ್ದು ಅದನ್ನೇ, ಆದ್ದರಿಂದಲೇ ನಮ್ಮನ್ನು ಕ್ಷಮಿಸುತ್ತಾರೆ ಎನ್ನುವ ವಿಶ್ವಾಸವಿದೆ.

Leave a Reply

Your email address will not be published. Required fields are marked *