ಅಮಲಿನಲ್ಲಿರುವವರಿಗೆ ಕಳಕಳಿಯ ಮನವಿ ಅಣಕದಂತೆ ಕಂಡಿತೆ?

– ರಂಜನ್ ರಾಗಿಗುಡ್ಡ

ಸಿಯೆರಾ ಲಿಯೋನ್ ನಲ್ಲಿ ನಡೆದ (1999) ಬಂಡುಕೋರರ ದಾಳಿಯಲ್ಲಿ ಅನೇಕ ಅಮಾಯಕರು ಸತ್ತರು. ಮಕ್ಕಳನ್ನೂ ಕೊಂದರು. ಬಂಡುಕೋರರ ತಂಡದ ನಾಯಕನೊಬ್ಬ ಬಿಬಿಸಿಗೆ ಸಂದರ್ಶನ ನೀಡಿದ. ಸಂದರ್ಶಕ, ‘ಹೆಣ್ಣು ಮಕ್ಕಳು..ಮಕ್ಕಳು ನಿಮ್ಮನ್ನು ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ ಎಂದು ಕೇಳಿದಾಗಲೂ ನಿಮಗೆ ಏನೂ ಅನ್ನಿಸುತ್ತಿರಲಿಲ್ಲವೆ’ ಎಂದು ಕೇಳುತ್ತಾನೆ. ಬಂಡುಕೋರ ಹೇಳುತ್ತಾನೆ.. “ನಾವು ದಾಳಿ ಮಾಡುವಾಗ ಮಾದಕ ವಸ್ತು ಸೇವಿಸಿರುತ್ತಿದ್ದ ಕಾರಣ ಅಮಲಿನಲ್ಲಿರುತ್ತಿದ್ದೆವು. ಯಾರಾದರೂ ಪ್ಲೀಸ್ ಎಂದು ಬೇಡಿಕೊಂಡರೆ ನಮಗೆ ಅವರ ಕೋರಿಕೆ ನಮ್ಮನ್ನು ಅಣಕ ಮಾಡಿದಂತೆ ಎನಿಸುತ್ತಿತ್ತು. ನಾವು ಆಗ ಮತ್ತಷ್ಟು ಹಿಂಸೆ ಮಾಡಲು ಪ್ರಚೋದಿತರಾಗುತ್ತಿದ್ದೆವು..”

ಮಂಗಳೂರಿನ ವರದಿಗಾರ ಮಿತ್ರ ನವೀನ್ ಸೂರಿಂಜೆ ವಿರುದ್ದ ದುರುದ್ದೇಶದಿಂದ ಕೇಸು ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ, ದಯವಿಟ್ಟು ಅವನ ವಿರುದ್ಧದ ಸುಳ್ಳು ಕೇಸುಗಳನ್ನು ಹಿಂದಕ್ಕೆ ಪಡೆಯಿರಿ ಎಂದು ಕೇಳುವಾಗಲೂ.. naveen-soorinjeಬಹುಶಃ ಈ ಅಮಲಿನಲ್ಲಿರುವ ವ್ಯವಸ್ಥೆಗೆ ಅಣಕ ಮಾಡಿದಂತೆ ಕಾಣಿಸಬಹುದು. ವ್ಯವಸ್ಥೆ ಎಂದರೆ ಕೇವಲ ಆಡಳಿತದಲ್ಲಿರುವ ಸರಕಾರ ಮಾತ್ರ ಅಲ್ಲ. ಸರಕಾರವನ್ನು ಆಡಿಸುತ್ತಿರುವ ಕೈಗಳು, ಮಹಿಳೆಯರ ಉಡುಪನ್ನು ನಿರ್ಧರಿಸುವ ಸಂಘ ಸಂಸ್ಥೆಗಳು ಮತ್ತು ಇಂಥ ಘಾತುಕ ಶಕ್ತಿಗಳನ್ನು ಬೆಂಬಲಿಸುವ ಮನಸ್ಸುಗಳು – ಎಲ್ಲವೂ ಅಮಲಿನಲ್ಲಿಯೇ ಇವೆ ಎಂದೆನಿಸುತ್ತದೆ.

ಕೃಷ್ಣ ಜೆ. ಪಾಲೆಮಾರ್ ಎಂಬ ಮಾಜಿ ಮಂತ್ರಿಗೆ ನವೀನ್ ಸೂರಿಂಜೆ ವಿರುದ್ಧದ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದು ಸಮ್ಮತವಲ್ಲ. ಅವರ ಕಡೆಯ ಅನೇಕ ಅಮಾಯಕರೂ ಇದೇ ಪ್ರಕರಣದಲ್ಲಿ ಸಿಕ್ಕಿ ಜೈಲಿನಲ್ಲಿದ್ದಾರಂತೆ..ಅವರ ಬಿಡುಗಡೆಯೂ ಆಗುವುದಾದರೆ ಮಾತ್ರ ಸೂರಿಂಜೆಯನ್ನು ಬಿಡುಗಡೆ ಮಾಡಬೇಕಂತೆ. ಮತ್ತೊಬ್ಬ ಘನ ಮಂತ್ರಿ ತನ್ನ ಅಸಹಾಯಕತೆಯನ್ನು ಆಪ್ತರ ಬಳಿ ತೋಡಿಕೊಂಡಿದ್ದಾರೆ. ಇದೆಲ್ಲದರ ಹಿಂದೆ ಮಂಗಳೂರು ಭಾಗದಲ್ಲಿ ಕೋಮುವಾದದ ಅಮಲನ್ನು ಹಂಚುತ್ತಿರುವ ಕಲ್ಲು ಹೃದಯದವರೊಬ್ಬರ ಪ್ರಭಾವ ನಿಚ್ಚಳವಾಗಿ ಕಾಣುತ್ತಿದೆ.

ಮಂಗಳೂರಿನ ಕಾರಾಗೃಹದಲ್ಲಿ ನವೀನ್ ಸೂರಿಂಜೆ ಬಂಧಿತನಾಗಿರುವುದು ಮುಸಲ್ಮಾನ ಮಿತ್ರರು ಇರುವಂತಹ ಕೋಣೆಯಲ್ಲಿ. ಹೋಮ್ ಸ್ಟೇ ಪ್ರಕರಣದಲ್ಲಿ ಬಂಧಿಗಳಾಗಿರುವ ಇತರರು ಪ್ರತ್ಯೇಕ ಕೋಣೆಯಲ್ಲಿದ್ದಾರೆ. ಹೋಮ್ ಸ್ಟೇ ದಾಳಿಯ ಸಂಚಿನಲ್ಲಿ ಸೂರಿಂಜೆಯ ಪಾತ್ರ ಇಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಲು ನವೀನ್ ಮತ್ತು ಪ್ರಕರಣದ ಇತರರು ಮುಖಾಮುಖಿಯಾಗುವುದನ್ನು ತಡೆಯುವ ಸಲುವಾಗಿ ಬೇರೆ ಬೇರೆ ಕೋಣೆಯಲ್ಲಿ ಇರಿಸಲಾಗಿದೆ ಎಂಬ ಸಂಗತಿಯಷ್ಟೇ ಸಾಕು,

ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳದಷ್ಟು ಮೂರ್ಖರಲ್ಲ ಮಿಸ್ಟರ್ ಜಗದೀಶ್ ಶೆಟ್ಟರ್. Jagadish Shettarಆದರೆ ಅವರು ಬಹುಶಃ ಸಂಘ ಪರಿವಾರ ಹಂಚಿರುವ ಮಾದಕ ಸಿದ್ಧಾಂತದ ಪರಿಣಾಮ ಉಂಟಾಗಿರುವ ಅಮಲಿನಲ್ಲಿದ್ದಾರೆ. ಇಲ್ಲವಾದರೆ ಹಿಂದಿನ ಕ್ಯಾಬಿನೆಟ್ ತೀರ್ಮಾನದ ನಂತರವೂ ಸಹಿ ಹಾಕಲು ಹಿಂಜರಿಯುತ್ತಿರಲಿಲ್ಲ. ಸಚಿವ ಸುರೇಶ್ ಕುಮಾರ್ ಕ್ಯಾಬಿನೆಟ್ ಮೀಟಿಂಗ್ ನಂತರದ ಪತ್ರಿಕಾ ಗೋಷ್ಟಿಯಲ್ಲಿ ಸೂರಿಂಜೆ ವಿರುದ್ಧದ ಪ್ರಕರಣ ಹಿಂಪಡೆಯಲು ಮಂತ್ರಿ ಮಂಡಲ ತೀರ್ಮಾನಿಸಿದೆ ಎಂದು ಘೋಷಿಸಿದ್ದರು. ಆದರೆ ಇದುವರೆಗೂ ಮುಖ್ಯಮಂತ್ರಿ ಅದಕ್ಕೆ ಅಧಿಕೃತ ಮುದ್ರೆ ಒತ್ತಿಲ್ಲ.

ನವೆಂಬರ್ 7 ರಂದು ಜೈಲು ಸೇರಿದ ನವೀನ್ ಸೂರಿಂಜೆ ಈಗಾಗಲೆ ಹತ್ತಿರ ಹತ್ತಿರ ನಾಲ್ಕು ತಿಂಗಳ ಕಾಲ ಶಿಕ್ಷೆ ಅನುಭವಿಸಿದ್ದಾರೆ. ನವೀನ್ ಒಬ್ಬ ವರದಿಗಾರನಾಗಿ ಮುಖವಾಡ ಕಳಚಿದ್ದ ಅನೇಕರಿಗೆ ಇದು ಖುಷಿಯ ಸಂಗತಿ. ಅಷ್ಟೇ ಏಕೆ, ಮಂತ್ರಿಯೊಬ್ಬರು ಆಪ್ತರೊಬ್ಬರ ಹತ್ತಿರ ಮಾತನಾಡುತ್ತಾ ಸರಕಾರದ ಹೆಸರಿಗೇ ಮಸಿ ಬಳಿಯಲು ಪ್ರಯತ್ನಪಟ್ಟವನನ್ನು ಸುಮ್ಮನೆ ಬಿಡಲು ಸಾಧ್ಯವೇ.. ಎಂದಿದ್ದರು.

ಅದಕ್ಕೆ ಪದೇ ಪದೇ ಅನ್ನಿಸುತ್ತೆ – ಇವರೆಲ್ಲಾ ಅಮಲಿನಿಂದ ಹೊರಬರೋದು ಯಾವಾಗ?

One thought on “ಅಮಲಿನಲ್ಲಿರುವವರಿಗೆ ಕಳಕಳಿಯ ಮನವಿ ಅಣಕದಂತೆ ಕಂಡಿತೆ?

  1. Ananda Prasad

    ಸಂಘ ಪರಿವಾರದ ಕಪಿಮುಷ್ಟಿಯಲ್ಲಿರುವ ಬಿಜೆಪಿ ಸರ್ಕಾರ ನವೀನ ಸೂರಿಂಜೆಯವರನ್ನು ಬಿಡುಗಡೆ ಮಾಡುವ ಸಂಭವ ಇಲ್ಲ. ಸಂಘ ಪರಿವಾರವು ಭಯೋತ್ಪಾದರು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಒತ್ತೆ ಇರಿಸಿಕೊಳ್ಳುವಂತೆ ನವೀನ ಸೂರಿಂಜೆಯವರನ್ನು ಜೈ ಲಿಗೆ ಹಾಕಿಸಿದೆ. ನವೀನ ಸೂರಿಂಜೆಯವರನ್ನು ಬಿಡಬೇಕಿದ್ದರೆ ದಾಳಿಯಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ಬಿಡಬೇಕು ಎಂಬ ಷರತ್ತನ್ನು ಬಿಗಿಯಾಗಿ ಹಿಡಿದಿದೆ. ಚುನಾವಣಾ ನಂತರ ಬೇರೆ ಪಕ್ಷದ ಸರ್ಕಾರ ಬಂದರೆ ನವೀನರ ಬಿಡುಗಡೆ ಆದೀತೋ ಏನೋ ಅಥವಾ ಸುಪ್ರೀಂ ಕೋರ್ಟಿನಲ್ಲಿ ಜಾಮೀನು ಸಿಕ್ಕಿದರೆ ಬಿಡುಗಡೆ ಆಗಬಹುದು. ಸಂವಿಧಾನಬಾಹಿರ ಶಕ್ತಿಗಳು ಅಧಿಕಾರ ನಡೆಸುವ ಪರಿಸ್ಥಿತಿ ಬಂದರೆ ಇಂಥ ಫ್ಯಾಸಿಸ್ಟ್ ಸಂಸ್ಕೃತಿಯೇ ವಿಜ್ರಂಭಿಸುವುದು. ಭ್ರಷ್ಟ ಹಾಗೂ ದೇಶಕ್ಕೆ ಹಿಡಿದ ಗೆದ್ದಲು ಎಂದು ಬಿಜೆಪಿಯವರು ಹೇಳುವ ಕಾಂಗ್ರೆಸ್ ಪಕ್ಷವು ಕೂಡಾ ಈ ರೀತಿ ಪತ್ರಕರ್ತರನ್ನು ನಿರ್ಲಜ್ಜೆಯಿಂದ ಜೈಲಿಗೆ ತಳ್ಳಿದ ಹಾಗೂ ಇಷ್ಟು ಕೆಳಮಟ್ಟಕ್ಕೆ ಇಳಿದ ಉದಾಹರಣೆ ರಾಜ್ಯದಲ್ಲಿ ಇಲ್ಲ. ಬಿಜೆಪಿ ಸರ್ಕಾರ ಈ ಹಿಂದೆ ವಿನಾಯಕ್ ಸೇನ್ ಅವರನ್ನು ಛತ್ತೀಸ್ಗಢ ರಾಜ್ಯದಲ್ಲಿ ಬಂಧಿಸಿ ನಂತರ ಸುಪ್ರೀಂ ಕೋರ್ಟ್ ಜಾಮೀನು ನೀಡಿ ಬಿಡುಗಡೆ ಮಾಡಿತ್ತು. ಕನಿಷ್ಠ ಮಾನವೀಯತೆಯನ್ನೂ ಉಳಿಸಿಕೊಳ್ಳದ ಬಿಜೆಪಿ ಹಾಗೂ ಸಂಘ ಪರಿವಾರದ ಮಂದಿ ಆಸ್ತಿಕರ ವೇಷ ಹಾಕಿರುವ ನಾಸ್ತಿಕರು ಎಂದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ. ಯಾವುದೇ ಆಸ್ತಿಕನೂ ಈ ರೀತಿ ನಡೆದುಕೊಳ್ಳಲು ಸಾಧ್ಯವಿಲ್ಲ.

    Reply

Leave a Reply

Your email address will not be published. Required fields are marked *