’ವರ್ತಮಾನ’ಕ್ಕೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ…

ಸ್ನೇಹಿತರೇ,

ಇಂದಿಗೆ ವರ್ತಮಾನ.ಕಾಮ್‌ಗೆ ಎರಡು ವರ್ಷ ತುಂಬುತ್ತದೆ. ಹೋದ ವರ್ಷಕ್ಕಿಂತ ಈ ವರ್ಷ ವರ್ತಮಾನ.ಕಾಮ್ ಹಲವು ಏರುಪೇರುಗಳನ್ನು ಕಂಡಿತು. ಸರಾಸರಿಯಾಗಿ ಲೆಕ್ಕ ಹಾಕುವುದಾದರೆ ಅತಿ ಹೆಚ್ಚು ಹಿಟ್ಸ್ (ವೆಬ್‌ಸೈಟ್ ಸಂದರ್ಶಿಸುವವರ) ಮತ್ತು ಅತಿ ಕಡಿಮೆ ಹಿಟ್ಸ್ ಪಡೆದುಕೊಂಡ ತಿಂಗಳುಗಳು ಈ ವರ್ಷದ ಅವಧಿಯಲ್ಲಿಯೇ ಇದ್ದವು. 2012 ರ ಸೆಪ್ಟೆಂಬರ್ ಮತ್ತು ನವೆಂಬರ್ ಅವಧಿಯಲ್ಲಿ ಈ ವೇದಿಕೆ ಅತಿ ಹೆಚ್ಚು ಸಕ್ರಿಯವಾಗಿದ್ದರೆ vartamaana-2-yearsಈ ವರ್ಷದ ಮೇ-ಜೂನ್ ತಿಂಗಳಿನಲ್ಲಿ ಅದು ಇಳಿಯುತ್ತಾ ಬಂದಿತ್ತು. ಕಳೆದ ತಿಂಗಳಿನಿಂದೀಚೆಗೆ ಮತ್ತೆ ಅದು ಏರುತ್ತಿದೆ.

ಆದರೆ, ಹಲವು ವಿಚಾರಗಳಲ್ಲಿ ವರ್ತಮಾನ.ಕಾಮ್ ಅದೇ ಅನನ್ಯತೆ ಮತ್ತು ಪರಿಣಾಮವನ್ನು ಉಳಿಸಿಕೊಂಡು ಬಂದಿದೆ ಮತ್ತು ಬೆಳೆಸಿಕೊಂಡಿಯೂ ಇದೆ. ನಾನು ರಾಜಕೀಯವಾಗಿ ಸಕ್ರಿಯವಾದ ಕಾರಣದಿಂದಾಗಿ ಹೊಸ ಲೇಖಕರನ್ನು ಈ ವೇದಿಕೆಗೆ ಕರೆದುಕೊಂಡುಬರುವ ಮತ್ತು ಪರಿಚಯಿಸುವ ಕಾರ್ಯ ಬಹಳ ಹಿನ್ನೆಲೆಗೆ ಸರಿದುಬಿಟ್ಟಿತು. ಆದರೂ ಹಲವಾರು ಲೇಖಕರು ಈ ವರ್ಷ ಮೊದಲ ಬಾರಿಗೆ ನಮಗೆ ಬರೆದರು. ಹಿರಿಯ ಪತ್ರಕರ್ತರಾದ ಜಗದೀಶ್ ಕೊಪ್ಪರ “ನಕ್ಸಲ್ ಕಥನ”ದ ಎರಡನೆಯ ಭಾಗ “ಪ್ರಜಾ ಸಮರ” 19 ವಾರಗಳ ಕಾಲ ಸರಣಿಯಾಗಿ ಈ ವರ್ಷ ಪ್ರಕಟವಾಯಿತು. ಮಂಗಳೂರಿನ ಹೋಮ್‌ಸ್ಟೇ ದಾಳಿಯ ಪ್ರಕರಣದಲ್ಲಿ ನವೀನ್ ಸೂರಿಂಜೆಯವರ ಬಂಧನವಾಗಿದ್ದನ್ನು ವಿರೋಧಿಸಿ ಮತ್ತು ಅವರ ಬಿಡುಗಡೆಗೆ ಆಗ್ರಹಿಸಿ ನಡೆದ ಒಂದು ಮಟ್ಟಿನ ಪ್ರಯತ್ನದಲ್ಲಿ ವರ್ತಮಾನ.ಕಾಮ್‌ನ ಸಂಪೂರ್ಣ ಬಳಗ ಮತ್ತು ಓದುಗರು-ಹಿತೈಷಿಗಳು ಪಾಲ್ಗೊಂಡರು. ವರ್ತಮಾನ.ಕಾಮ್‌ನ ಓದುಗರ ಸಂಖ್ಯೆಯ ಏರಿಕೆ ಮಾತ್ರವಲ್ಲ, ಇಂತಹ ಪ್ರಯತ್ನವೊಂದರ ಬಗ್ಗೆ ಗುಣಾತ್ಮಕವಾಗಿ ಸ್ಪಂದಿಸಿ ಬೆಂಬಲಿಸುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿರುವುದು ನನ್ನ ಗಮನಕ್ಕೆ ಬಂದಿದೆ.

ಇನ್ನು, ನಾವು ಯಾವುದೇ ಲೇಖಕರಿಗೆ ಬಲವಂತ ಪಡಿಸದೆ ಮತ್ತು ಅವರ ಬರವಣಿಗೆಗೆ ಯಾವುದೇ ರೀತಿಯ ಸಂಭಾವನೆಯನ್ನೂ ಕೊಡದೆ ಮಾಧ್ಯಮ ವಲಯದಲ್ಲಿ ಸೀಮಿತವಾದರೂ ಒಂದು ಗುರುತಿಸಬಹುದಾದ ಅಸ್ಮಿತೆ ಸಾಧಿಸಿದ್ದೇವೆ ಎಂದರೆ ಅದು ಕಮ್ಮಿ ಅಲ್ಲ ಎಂದು ನಾನು ಭಾವಿಸಿದ್ದೇನೆ. ಈ ನಿಟ್ಟಿನಲ್ಲಿ ನಮಗೆ ಲೇಖನ ಬರೆದ ಪ್ರತಿಯೊಬ್ಬರೂ ಇದರಲ್ಲಿ ಸಮಾನ ಪಾಲುದಾರರೇ. ನಮಗೆ ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿಯೇ ಕಳುಹಿಸಬೇಕಾದ ಸಂದರ್ಭದಲ್ಲಿಯೂ ಇಷ್ಟೊಂದು ಸಮಾನಮನಸ್ಕ ಮತ್ತು ಬದ್ಧತೆಯುಳ್ಳ ಲೇಖಕರು ಬರೆದಿದ್ದಾರೆ ಮತ್ತು ಬರೆಯುತ್ತಿದ್ದಾರೆ ಎಂದರೆ ಕರ್ನಾಟಕದಲ್ಲಿ ಪ್ರಗತಿಪರ ಮನೋಧರ್ಮದ ಚಿಂತಕ ಮತ್ತು ಲೇಖಕರ ಗುಂಪು ಎಷ್ಟು ದೊಡ್ಡದಿದೆ ಎಂದು ನಿಮಗೆ ಅರಿವಾಗುತ್ತದೆ.

ಅಂದ ಹಾಗೆ ಈ ವರ್ಷದಲ್ಲಿ ಕರ್ನಾಟಕದ ವಿಧಾನಸಭೆಗೆ ಚುನಾವಣೆಯೂ ನಡೆದು ರಾಜ್ಯದ ರಾಜಕೀಯ ಇನ್ನೊಂದು ಮಗ್ಗುಲಿಗೆ ಹೊರಳಿದೆ. ಕಳೆದ ಐದು ವರ್ಷಗಳ ಬಿಜೆಪಿ ಆಡಳಿತ ನಿಜಕ್ಕೂ ಅಧ್ವಾನವಾಗಿತ್ತು; ಅವಮಾನಕಾರಿಯಾಗಿತ್ತು; ಹೇಸಿಗೆ ಪಟ್ಟುಕೊಳ್ಳುವಂತಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಅಷ್ಟು ಕೆಳಹಂತಕ್ಕೆ ಜಾರುವುದಿಲ್ಲ ಎಂಬ ವಿಶ್ವಾಸ ಬಹುತೇಕರಲ್ಲಿದೆ. ಆದರೆ ಗುಣಾತ್ಮಕವಾದ ಬದಲಾವಣೆಗಳು ಆಗುತ್ತವೆಯೇ ಎನ್ನುವುದರ ಬಗ್ಗೆ ಗಟ್ಟಿಯಾದ ವಿಶ್ವಾಸ ಮೂಡುತ್ತಿಲ್ಲ. ಆಡಳಿತ ನಿರ್ವಹಣೆ ಉತ್ತಮವಾಗಬಹುದಾದರೂ ನಮ್ಮ ರಾಜ್ಯದ ರಾಜಕೀಯ ವಾತಾವರಣ ಉತ್ತಮಗೊಳ್ಳುತ್ತದೆ ಎನ್ನುವ ವಿಶ್ವಾಸ ನನಗಿಲ್ಲ. ಎರಡು ಲೋಕಸಭೆ ಮತ್ತು ಮೂರು ವಿಧಾನಪರಿಷತ್ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ನಮ್ಮ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ನಡೆದುಕೊಳ್ಳುತ್ತಿರುವ ರೀತಿ ಮತ್ತು ಅವರು ನಿಲ್ಲಿಸಿರುವ ಆಭ್ಯರ್ಥಿಗಳನ್ನು ನೋಡಿದರೆ ಈ ರಾಜಕೀಯ ವಾತಾವರಣ ಈ ಪಕ್ಷಗಳಿಂದ ಮತ್ತು ಇವುಗಳ ನಾಯಕರುಗಳಿಂದ ಒಳ್ಳೆಯದರ ಕಡೆಗೆ ಬದಲಾಗುತ್ತದೆ ಎಂದು ಹೇಳಲಾಗುತ್ತದೆಯೇ? ಹಾಗೆಯೇ ಸಾಮಾಜಿಕವಾಗಿ ಪ್ರಗತಿಪರ ವಿಚಾರಗಳಿಗೆ ಬಲ ಮತ್ತು ಬೆಂಬಲ ಸಿಗಬೇಕಿದ್ದರೆ ನಮ್ಮ ರಾಜಕಾರಣಿಗಳು ಅದರ ಬಗ್ಗೆ ಒಂದು ಸ್ಪಷ್ಟತೆ ಮತ್ತು ನಿಲುವು ಬೆಳೆಸಿಕೊಂಡು ಅದನ್ನು ಬೇರೆಬೇರೆ ವೇದಿಕೆಗಳಲ್ಲಿ ಎತ್ತಿ, ಜನರ ಬಳಿಗೆ ತೆಗೆದುಕೊಂಡು ಹೋಗದಿದ್ದಲ್ಲಿ ಕಷ್ಟವಿದೆ. ಇಂತಹ ಸಂದರ್ಭದಲ್ಲಿ ವಿಶ್ವಾಸಾರ್ಹ ಮತ್ತು ಬದ್ಧತೆಯ ಲೇಖಕರ, ಮಾಧ್ಯಮ ಸಂಸ್ಥೆಗಳ ಮತ್ತು ವರ್ತಮಾನ.ಕಾಮ್‌ನಂಥ ಸ್ವತಂತ್ರ ವೇದಿಕೆಗಳ ಜವಾಬ್ದಾರಿ ಮತ್ತು ಅವಶ್ಯಕತೆಯೂ ಹೆಚ್ಚುತ್ತದೆ ಎಂಬ ಭಾವನೆ ನನಗಿದೆ.

ಇಡೀ ವಿಶ್ವದಲ್ಲಿ ಇಂದು ಮುದ್ರಣ ಮಾಧ್ಯಮ ನಿಧಾನವಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತ ಬರುತ್ತಿದೆ. ಮುದ್ರಣ ಮಾಧ್ಯಮದ ಪರಿಣಾಮಕಾರತೆಯನ್ನು ಮತ್ತು ಜನರ ಜ್ಞಾನದ ನೆಲೆಗಳನ್ನು ವಿಸ್ತರಿಸುವ ಸಾಧ್ಯತೆಗಳನ್ನು ಟಿವಿ ಮಾಧ್ಯಮ ಪಡೆದುಕೊಳ್ಳಲು ಅಸಾಧ್ಯ. ಹಾಗಾಗಿ ಮುದ್ರಣ ಮಾಧ್ಯಮದ ಪುನರಾವತಾರ ಇಂಟರ್ನೆಟ್ ಮಾಧ್ಯಮದ ರೂಪದಲ್ಲಿ ಆಗಲಿದೆ. ಅಮೆರಿಕದಲ್ಲಿ ನಾಲ್ಕಾರು ದಶಕಗಳ ಕಾಲ ಪ್ರಭಾವಶಾಲಿಯಾಗಿದ್ದ ’ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಗಿಂತ ಏಳೆಂಟು ವರ್ಷಗಳ ಹಿಂದೆ ಆರಂಭವಾದ ’ದಿ ಹಫ್ಫಿಂಗ್ಟನ್ ಪೋಸ್ಟ್’ ವೆಬ್‍ಸೈಟ್ ಇಂದು ಹೆಚ್ಚು ಪ್ರಭಾವಶಾಲಿಯೂ, ಹೆಚ್ಚು ಬೆಲೆಯುಳ್ಳದ್ದೂ, ಹೆಚ್ಚು ಲಾಭದಾಯಕವಾದದ್ದೂ ಆಗಿದೆ. ಕಳೆದ ವಾರ ಅಮೆಜಾನ್.ಕಾಮ್‌ನ ಮುಖ್ಯಸ್ಥ ಜೆಫ್ ಬೆಜೋಸ್ ನಷ್ಟದಲ್ಲಿದ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯನ್ನು 25 ಕೋಟಿ ಡಾಲರ್‌ಗೆ ಕೊಂಡುಕೊಂಡ. ಆದರೆ ಏಳೆಂಟು ವರ್ಷಗಳ ಹಿಂದೆ ಆರಂಭವಾದ ‘ದಿ ಹಫ್ಫಿಂಗ್ಟನ್ ಪೋಸ್ಟ್’ ಅನ್ನು ಎರಡು ವರ್ಷಗಳ ಹಿಂದೆಯೇ AOL ಕಂಪನಿ 31.5 ಕೋಟಿ ಡಾಲರ್‌ಗೆ ಕೊಂಡುಕೊಂಡಿತ್ತು.

ಆದರೆ ಇಂತಹ ಬದಲಾವಣೆಗಳನ್ನು ಭಾರತದ ಸಂದರ್ಭದಲ್ಲಿ ನೋಡಲು ಇನ್ನೂ ಹಲವಾರು ವರ್ಷ ಕಾಯಬೇಕಿದೆ. vartamaana-2 years-verticalಭಾರತೀಯ ಭಾಷಾ ಪತ್ರಿಕೆಗಳ ವಿಚಾರಕ್ಕೆ ಬಂದರೆ ಅದು ಇನ್ನೂ ನಿಧಾನವಾಗಬಹುದು ಮತ್ತು ಅಮೆರಿಕದಲ್ಲಿ ಮುದ್ರಣ ಮಾಧ್ಯಮದಲ್ಲಿ ಆಗುತ್ತಿರುವಷ್ಟು disruptive ಆಗದೇ ಇರಬಹುದು. ಆದರೂ, ಭಾರತದ ಮಾಧ್ಯಮ ಜಗತ್ತು ಇನ್ನೊಂದು ದಶಕದೊಳಗೆ ಇಂದು ಇರುವುದಕ್ಕಿಂತ ಬಹಳ ಭಿನ್ನವಾಗಿರುತ್ತದೆ ಮತ್ತು ಆ ಬದಲಾವಣೆ ವೇಗವಾಗಿಯೂ ಇರುತ್ತದೆ. ವರ್ತಮಾನ.ಕಾಮ್ ಎಲ್ಲಿಯವರೆಗೆ ಇರುತ್ತದೆ ಎನ್ನುವುದು ಗೊತ್ತಿಲ್ಲ ಮತ್ತು ಅದು ಮುಖ್ಯವೂ ಅಲ್ಲ. ಆದರೆ, ಇಂತಹ ವೇದಿಕೆಗಳು ಮತ್ತು ಪ್ರಯತ್ನಗಳು ಬಹುಶಃ ಇನ್ನೂ ದೊಡ್ಡ ನೆಲೆಯಲ್ಲಿ ಮತ್ತು ವ್ಯವಸ್ಥಿತವಾಗಿ, ಇನ್ನೂ ಹೆಚ್ಚಿನ ಸಂಪನ್ಮೂಲಗಳೊಂದಿಗೆ ಆರಂಭವಾಗುವುದನ್ನು ನಾವು ಬರಲಿರುವ ವರ್ಷಗಳಲ್ಲಿ ನೋಡಲಿದ್ದೇವೆ.

ಅಂದ ಹಾಗೆ, ಈ ವರ್ಷ ಹೋದ ವರ್ಷ ಆದಷ್ಟು ಹಣ ವ್ಯಯವಾಗಿಲ್ಲ. ಒಬ್ಬ ಸಹಾಯಕರಿಗೆ ಕೊಟ್ಟ ಐದಾರು ತಿಂಗಳುಗಳ ಅಲ್ಪಮೊತ್ತದ ಸಂಬಳ ಮತ್ತು ವೆಬ್‌‍ಸೈಟ್‌ನ ತಾಂತ್ರಿಕ ವಿಷಯಕ್ಕೆ ಸಂಬಂಧಪಟ್ಟ ಶುಲ್ಕ, ಎಲ್ಲವೂ ಸೇರಿ ಸುಮಾರು ರೂ. 35000 ಖರ್ಚಾಗಿರಬಹುದು. ಆದರೆ ಈ ವರ್ಷ ಅದು ಹೆಚ್ಚಾಗುತ್ತದೆ, ಹೆಚ್ಚಾಗಲೇಬೇಕು. ಆ ನಿಟ್ಟಿನಲ್ಲಿ ಕೆಲವೊಂದು ಖರ್ಚುಗಳನ್ನು ವಹಿಸಿಕೊಳ್ಳಲು ಸಮಾನಮನಸ್ಕ ಪ್ರಾಯೋಜಕರು ಮುಂದೆ ಬಂದರೆ ಅವರಿಗೆ ಖಂಡಿತ ಸ್ವಾಗತವಿದೆ.

ಮತ್ತು ಈ ವರ್ಷ ಒಂದಷ್ಟು ಸೆಮಿನಾರ್ ತರಹದ ಕಾರ್ಯಕ್ರಮಗಳನ್ನು ವರ್ತಮಾನ.ಕಾಮ್ ವತಿಯಿಂದ ಇತರ ಸಮಾನಮನಸ್ಕ ಗುಂಪು/ಸಂಸ್ಥೆಗಳ ಜೊತೆಗೂಡಿ ಆಯೋಜಿಸಬೇಕು ಎಂಬ ಯೋಜನೆಗಳಿವೆ. ಬರಹಗಾರರ ಬಳಗವನ್ನು ವಿಸ್ತರಿಸಲು ಕೆಲವೊಂದು ಸಭೆ ಮತ್ತು ಪ್ರವಾಸಗಳನ್ನು ಮಾಡಬೇಕೆಂತಲೂ ಅಂದುಕೊಳ್ಳುತ್ತಿದ್ದೇನೆ. ನನ್ನ ಹಲವು ವೈಯಕ್ತಿಕ ಅಶಿಸ್ತು ಮತ್ತು ನಿರಾಸಕ್ತಿಯ ಫಲವಾಗಿ ಹಲವಾರು ಯೋಜನೆಗಳು ಕಾರ್ಯರೂಪಕ್ಕೇ ಬರುತ್ತಿಲ್ಲ. ಕೆಲವೊಮ್ಮೆ ಮಾತನಾಡಲೇಬೇಕಾದವರ ಜೊತೆಯೂ, ಸಂಪರ್ಕದಲ್ಲಿರಬೇಕಾದವರ ಜೊತೆಯೂ ಫೋನ್ ಸಹ ಮಾಡದೆ ಇನ್ನೇತರದಲ್ಲಿಯೋ ವ್ಯಸ್ತನಾಗಿರುತ್ತೇನೆ. ಆ ವೈಯಕ್ತಿಕ ಅಶಿಸ್ತು ಮತ್ತು ದೌರ್ಬಲ್ಯಗಳನ್ನು ಕಳೆದುಕೊಂಡರೆ ವರ್ತಮಾನ.ಕಾಮ್ ಇನ್ನೂ ಸಕ್ರಿಯವಾಗುತ್ತದೆ. ಆದರೆ ಅದೇ ಸಂದರ್ಭದಲ್ಲಿ ಈ ಪ್ರಯತ್ನಕ್ಕೆ ಪೂರಕವಾಗಿರುವವರು ಮತ್ತು ನಮ್ಮ ಲೇಖಕ ಬಳಗದ ಮಿತ್ರರು–ವಿಶೇಷವಾಗಿ ನನಗಿರುವಂತಹ ದೌರ್ಬಲ್ಯಗಳಿಲ್ಲದವರು–ಹೆಚ್ಚು ಸಕ್ರಿಯರಾದರೆ ಇದು ತನ್ನಂತಾನೆ ವಿಸ್ತರಿಸಿಕೊಳ್ಳುತ್ತದೆ. ನೀವೆಲ್ಲರೂ ನಿಮ್ಮ ಸಕ್ರಿಯತೆಯನ್ನು ಇನ್ನಷ್ಟು ಹೆಚ್ಚಿಸುತ್ತೀರ ಎನ್ನುವ ನಂಬುಗೆಯಲ್ಲಿ ಇದ್ದೇನೆ.

ಕೊನೆಯದಾಗಿ, ಈ ವರ್ಷದ ಪ್ರಯತ್ನದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಾಯ ಮಾಡಿದವರಿಗೆ ಧನ್ಯವಾದ ಮತ್ತು ಕೃತಜ್ಞತೆ ಹೇಳಬೇಕಾಗಿರುವುದು. ಹಲವಾರು ಜನರಿದ್ದಾರೆ. ಕೆಲವರ ಹೆಸರು ತೆಗೆದುಕೊಳ್ಳಬಹುದು, ಕೆಲವರದು ಆಗದು. ಹಾಗಾಗಿ ಈ ವರ್ಷ ಅನೇಕ ಸಂದರ್ಭಗಳಲ್ಲಿ ಜೊತೆನಿಂತ, ಕೈಜೋಡಿಸಿದ ಮಿತ್ರರಾದ ಶ್ರೀಪಾದ್ ಭಟ್ಟರನ್ನು ಎಲ್ಲರಿಗೂ ಪ್ರಾತಿನಿಧಿಕವಾಗಿ ಇಟ್ಟುಕೊಂಡು ಧನ್ಯವಾದ ಅರ್ಪಿಸುತ್ತೇನೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ


ವರ್ತಮಾನ.ಕಾಮ್ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಬರೆದಿದ್ದ ಲೇಖನ : ವರ್ಷ ತುಂಬಿದ ಸಂದರ್ಭದಲ್ಲಿ ವರ್ತಮಾನದ ಪ್ರಸ್ತುತತೆ….

www.vartamaana.com 1st-anniversary

4 thoughts on “’ವರ್ತಮಾನ’ಕ್ಕೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ…

 1. Ananda Prasad

  ಭಾರತದಲ್ಲಿ ಕಂಪ್ಯೂಟರ್ ಸಾಕ್ಷರತೆ ಕಡಿಮೆ ಇದೆ. ಭಾರತದಲ್ಲಿ ಇಂಟರ್ನೆಟ್ ಸಂಪರ್ಕ ಹೊಂದಿದವರ ಪ್ರಮಾಣ ಜನಸಂಖ್ಯೆಯ 12%. ಅಮೇರಿಕಾದಲ್ಲಿ (ಯು.ಎಸ್.ಎ.) ಇದರ ಪ್ರಮಾಣ 81 %. ಹೀಗಾಗಿ ಅಮೇರಿಕಾದಲ್ಲಿ ಮುದ್ರಣ ಮಾಧ್ಯಮ ಹಿನ್ನಡೆಗೆ ಸರಿಯುತ್ತಿದೆ. ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಪ್ರಮಾಣ 50% ಅಥವಾ ಅದಕ್ಕಿಂತ ಹೆಚ್ಚು ಆದಾಗ ಇಂಟರ್ನೆಟ್ ಪತ್ರಿಕೆಗಳು ಜನಜಾಗೃತಿ ಮೂಡಿಸುವಲ್ಲಿ ಮಹತ್ತರ ಪಾತ್ರ ವಹಿಸುವುದು ಖಚಿತ. ಇದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ತೀವ್ರವಾಗಿ ನೆರವಾಗಲಿದೆ. ಆದರೆ ಭಾರತದಲ್ಲಿ ಇಂಟರ್ನೆಟ್ ಸಂಪರ್ಕ ಹೊಂದಿದವರ ಪ್ರಮಾಣ 50% ದಾಟಲು ಹಲವಾರು ವರ್ಷಗಳೇ ಹಿಡಿಯುವ ಸಂಭವ ಇದೆ. ಸದ್ಯ ಭಾರತದಲ್ಲಿ ಇಂಟರ್ನೆಟ್ ಬಳಸುವವರು ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದವರೇ ಹೆಚ್ಚಾಗಿದ್ದಾರೆ. ಹೀಗಾಗಿ ಇಂಟರ್ನೆಟ್ ಪತ್ರಿಕೆಗಳು ಭಾರತದ ಬಹಳ ದೊಡ್ಡ ಜನಸಂಖ್ಯೆಯನ್ನು ತಲುಪುತ್ತಿಲ್ಲ. ಇದು ಹೆಚ್ಚು ಹೆಚ್ಚು ಜನಸಾಮಾನ್ಯರನ್ನು ತಲುಪುವ ಪರಿಸ್ಥಿತಿ ಬಂದಾಗ ಇಂಟರ್ನೆಟ್ ಪತ್ರಿಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಲು ಮಹತ್ತರ ಕೊಡುಗೆ ನೀಡುವ ಸಂಭವ ಇದೆ.

  Reply
 2. vageesh kumar

  ಪ್ರಿಯ ರವಿಕೃಷ್ಣ ರೆಡ್ಡಿಯವರೆ, ಮುದ್ರಣ ಮಾಧ್ಯಮ ಪರಿಣಾಮಕಾರತೆಯನ್ನು ಬಗ್ಗೆ ಹೇಳಿದ್ದೀರಿ. ಆದರೆ ಕನ್ನಡದ ಮುದ್ರಣ ಮಾಧ್ಯಮದಲ್ಲಿ ಅದರ ಕೊರತೆ ಎದ್ದು ಕಾಣುತ್ತದೆ. ಇದಕ್ಕೆ ಕಾರಣ ಸುದ್ದಿಯನ್ನು ಪ್ರಸ್ತುತ ಪಡಿಸುವ ರೀತಿ. ವಿದ್ಯುನ್ಮಾನ ಮಾಧ್ಯಮದ ಬಗ್ಗೆ ಹೇಳುವುದೇ ಬೇಡ. ಹೇಳಿz ಹೇಳು ಕಿಸಿಬಾಯಿದಾಸ ಎಂಬಂತಿದೆ ಅದು. ಒಂದು ಉದಾಹರಣೆ ಕೊಡುವುದಿದ್ದರೆ ಮೊನ್ನೆ ಬೆಂಗಳೂರಿನಲ್ಲಿ ಕ್ಯಾಂಟರ್ ಡಿಕ್ಕಿ ಹೊಡೆದು ನಾಲ್ಕು ಜನ ಸತ್ತು ಹೋದರು. ಅದನ್ನು ಟೈಂಸ್ ಆಫ್ ಇಂಡಿಯಾ ಬರೆದ ರೀತಿ, ಅದಕ್ಕೆ ಕೊಟ್ಟ ಮಹತ್ವ ಹಾಗೂ ಕನ್ನಡ ಪತ್ರಿಕೆಗಳು ಅದನ್ನು ಬರೆದ ರೀತಿ ನೋಡಿದರೆ ಇದು ಅರ್ಥವಾಗಬಹುದು. ಮೊನ್ನೆ ಯಾವುದೋ ಸಮಾರಂಭದಲ್ಲಿ ಇದನ್ನೇ ನಾನು ಹೇಳಿದೆ. ಡೆಟ್ರಾಯಿಟ್ ದೀವಾಳಿಯಾದರೆ ನಮಗೆ ಅದು ಸುದ್ದಿ ಅಲ್ಲ, ಬದಲಾಗಿ ಸುದ್ದಿಯ ಮೂಲ. ಅದನ್ನು ಇಟ್ಟುಕೊಂಡು ಇಲ್ಲಿಯ ವಸ್ತುಸ್ಥಿತಿಯನ್ನು ಬರೆಯಬಹುದು ಎಂದು. ಆದರೆ ಬಹುತೇಕ ಪತ್ರಕರ್ತರು ಒಮ್ಮೆ ದಿನದ ಕೆಲಸ ಮುಗಿದರೆ ಸಾಕು ಎಂಬ ಮನಸ್ತಿತಿಯಲ್ಲಿರುತ್ತಾರೆ. ಅದರ ಬದಲಾಗಿ ತಾವು ಮಾಡಿದ ಕೆಲಸವಷ್ಟು ತಮಗೆ ತೃಪ್ತಿ ತಂದಿದೆ ಎಂದು ಯೋಚಿಸುವುದೆ ಕಚೇರಿಯ ಬೇಡದ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡುತ್ತಾರೆಯೇ ವಿನಾಃ ದಿನ ನಿತ್ಯದ ಆಗು ಹೋಗುಗಳ ಬಗ್ಗೆ ಒಂದು ಗ್ಲಾನ್ಸ್ ಕೂಡ ಮಾಡುವುದಿಲ್ಲ. ನನಗೆ ಗೊತ್ತಿದ್ದಂತೆ ಕಚೇರಿಗೆ ಬರುವ ಮೊದಲು ಒಂದು ರೌಂಡ್ ಕನ್ನಡ, ಇಂಗ್ಲೀಷ್ ಚಾನೆಲ್‌ಗಳನ್ನು ಒಮ್ಮೆ ಗ್ಲಾನ್ಸ್ ಮಾಡಿ ಬರುವವರ ಸಂಖ್ಯೆ ತೀರಾ ಕಡಿಮೆಯಿದೆ. ಇಂಟರ್‌ನೆಟ್ ಅಂತೂ ನೋಡುವುದಿಲ್ಲ. ಕಾಪಿ ಎಡಿಟರ್‌ನಿಂದ ಹಿಡಿದು ರಿಪೋರ್ಟರ್ ತನಕ, ಚೀಫ್ ರಿಪೋರ್ಟರ್‌ನಿಂದ ಹಿಡಿದು ಎಡಿಟರ್‌ತನಕ ಇದು ಅಗತ್ಯ. ಅದಾದರೆ ಮಾತ್ರ ಕನ್ನಡ ಪತ್ರಿಕೆಗಳು ಉಳಿಯಲು ಸಾಧ್ಯ. ಅದು ಬಿಟ್ಟು ಒಬ್ಬೊಬ್ಬರು ಒಂದೊಂದು ’ಇಸಂ’ ಗಳ ಮೊರೆ ಹೋದರೆ ಕೊನೆಗೆ ಪತ್ರಿಕೆಯೂ ಮುಳುಗುತ್ತದೆ. ಜೊತೆಗೆ ವೃತ್ತಿ ಭದ್ರತೆಯಿಲ್ಲದ ಪತ್ರಕರ್ತನ ಸೃಜನಶೀಲತೆ, ಕ್ರಿಯಾಶೀಲತೆಯೂ ನಾಶವಾಗುತ್ತದೆ.

  Reply
 3. Prabhakar M. Nimbargi

  Hearty congratulations!. May you continue your efforts in the future too! The published articles are on different aspects and are of immense value to the readers. A lazy mind gets awakened to the stark realities of life. Please keep it up.

  Reply

Leave a Reply

Your email address will not be published.