ಪ್ರಜಾಪ್ರಭುತ್ವ ವ್ಯವಸ್ಥೆ ಬಲಾಢ್ಯರ ಪಕ್ಷಪಾತಿ ಆಗಬಹುದೇ?

– ಎಚ್.ಕೆ.ಶರತ್

ಒಡಲೊಳಗೆ ಮನುಷ್ಯತ್ವ ಕಾಪಿಟ್ಟುಕೊಂಡ ವ್ಯವಸ್ಥೆಯೊಂದು ಬಲಿಪಶುವಿನ ಪಕ್ಷಪಾತಿಯಾಗಬೇಕೊ ಅಥವಾ ಬೇಟೆಗಾರರ ಪಕ್ಷಪಾತಿಯಾಗಬೇಕೊ?

ಉಜಿರೆಯ ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸುತ್ತಿರುವವರನ್ನು ಈ ಪ್ರಶ್ನೆ ಕಾಡದಿರದು.

ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆಯ ಹಿಂದೆ ಯಾರೆಲ್ಲರ ಕೈವಾಡವಿದೆ ಎಂಬ ಪ್ರಶ್ನೆಗೆ ಪ್ರಕರಣದ ಸಮಗ್ರ ತನಿಖೆಯ ನಂತರವಷ್ಟೇ ಉತ್ತರ ಸಿಗಲಿದೆ. ಪ್ರಕರಣ ನಡೆದು ಒಂದು ವರ್ಷ ಕಳೆದರೂ ನಿಜವಾದ ಅಪರಾಧಿಗಳ ಬಂಧನವಾಗಿಲ್ಲವೆಂಬ ಆರೋಪ ಕೇಳಿಬರುತ್ತಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಹತ್ತಿರದ ಸಂಬಂಧಿ ಕೂಡ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ sowjanya-rape-murderಎಂಬ ಆರೋಪ ಹೊರ ಬಿದ್ದಿದ್ದೇ ತಡ ಪ್ರಕರಣ ಇಡೀ ರಾಜ್ಯಾದ್ಯಂತ ಸದ್ದು ಮಾಡಲಾರಂಭಿಸಿದೆ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು ಧರ್ಮಸ್ಥಳದ ಕೆಲ ಭಕ್ತಾಧಿಗಳು ಹಾಗು ಹೆಗ್ಗಡೆ ಅವರ ಮೇಲೆ ಅಪಾರ ಅಭಿಮಾನ ಇಟ್ಟುಕೊಂಡವರು ದೂರುತ್ತಿದ್ದಾರೆ.

ಸೌಜನ್ಯ ಎಂಬ ಅಮಾಯಕ ಹುಡುಗಿಯ ಮೇಲಿನ ಅತ್ಯಾಚಾರ ಮತ್ತು ಕೊಲೆಗಿಂತ ಇವರಿಗೆ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ರೂಪುಗೊಂಡವರ ಕುಟುಂಬದ ವಿರುದ್ಧ ಕೆಲವರು ಹೊರಿಸುತ್ತಿರುವ ಆರೋಪವೇ ದೊಡ್ಡ ಪ್ರಮಾದವಾಗಿ ತೋರುತ್ತಿರುವುದು ವಿಪರ್ಯಾಸವೇ ಸರಿ.

ಭವಿಷ್ಯದ ಕುರಿತು ಅಸಂಖ್ಯ ಕನಸುಗಳನ್ನು ಕಟ್ಟಿಕೊಂಡಿದ್ದ ಜೀವವೊಂದನ್ನು ಕೆಲ ವಿಕೃತ ಮನಸ್ಸುಗಳು ತಮ್ಮ ತೆವಲಿಗಾಗಿ ಹೊಸಕಿ ಹಾಕಿವೆ. ವಿಕೃತಿ ಮೆರೆದವರ ವಿರುದ್ಧ ತಿರುಗಿ ಬೀಳಬೇಕಿದ್ದ ವ್ಯವಸ್ಥೆಯೊಂದು ತನ್ನೊಳಗೆ ಇನ್ನಿಲ್ಲದ ಗೊಂದಲ ಸೃಷ್ಟಿಸಿಕೊಂಡು, ಹೀನ ಕೃತ್ಯ ಎಸಗಿದವರು ತೆರೆಮರೆಯಲ್ಲಿ ಮೆರೆಯಲು ಬಿಟ್ಟಿರುವುದು ದುರಂತ.

ಮನುಷ್ಯತ್ವವುಳ್ಳ ಮನಸ್ಸುಗಳು ಮಿಡಿಯಬೇಕಿರುವುದು ಬಲಿಪಶುವಿನ ಕೂಗಿಗೋ ಅಥವಾ ಬೇಟೆಗಾರರ ಮೊಸಳೆ ಕಣ್ಣೀರಿಗೋ?

ಪ್ರಕರಣದ ಕುರಿತು ಸಮಗ್ರ ತನಿಖೆಯಾಗದೆ ಯಾರಿಗೂ ಅಪರಾಧಿ ಅಥವಾ ನಿರಪರಾಧಿ ಪಟ್ಟ ಕಟ್ಟಲಾಗದು. ಅದರಲ್ಲೂ ಬಲಾಢ್ಯರನ್ನು ಸಕಾರಣವಿಲ್ಲದೆ ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸಲಂತೂ ಸಾಧ್ಯವೇ ಇಲ್ಲ.

ವಾಸ್ತವ ಹೀಗಿದ್ದರೂ, ‘ವೀರೇಂದ್ರ ಹೆಗ್ಗಡೆ ಅವರ ಕುಟುಂಬಕ್ಕೆ ಕಳಂಕ ತರುವ ಸಲುವಾಗಿಯೇ ಅವರ ಸಂಬಂಧಿ ಪ್ರಕರಣದಲ್ಲಿ ಭಾಗಿಯಾದ್ದಾನೆ ಎಂದು ಆರೋಪಿಸಲಾಗುತ್ತಿದೆ. ಈ ಪ್ರಕರಣದಿಂದ ಹೆಗ್ಗಡೆ ಕುಟುಂಬವನ್ನು ಹೊರಗಿಡಬೇಕು’ ಎಂದು ಆಗ್ರಹಿಸಿ ಒಂದು ಗುಂಪು ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಿದೆ.

ಸೌಜನ್ಯ ಹತ್ಯೆ ನಡೆದ ನಂತರ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಡೆಯದಷ್ಟು ಪ್ರತಿಭಟನೆಗಳು ಇದೀಗ ವೀರೇಂದ್ರ ಹೆಗ್ಗಡೆ ಅವರ ಕುಟುಂಬ ಸದಸ್ಯನ ಹೆಸರು ಪ್ರಸ್ತಾಪವಾದ ಮಾತ್ರಕ್ಕೆ ಆ ಕುಟುಂಬದ ಘನತೆ ಕಾಪಾಡುವ ಸಲುವಾಗಿ ನಡೆಯುತ್ತಿರುವುದು ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತದೆ?

ವೀರೇಂದ್ರ ಹೆಗ್ಗಡೆ ಮತ್ತವರ ಕುಟುಂಬ ಸದಸ್ಯರು ಎಲ್ಲ ರೀತಿಯಿಂದಲೂ ಬಲಾಢ್ಯರಾಗಿದ್ದಾರೆ. ಅಗತ್ಯವಿದ್ದರೆ ಕಾನೂನು ನೆರವು ಪಡೆಯುವುದು dharmasthala-veernedra-heggadeಅವರಿಗೆ ಕಷ್ಟವಾಗಲಾರದು. ಪ್ರಕರಣದಲ್ಲಿ ಅವರ ಕುಟುಂಬ ಸದಸ್ಯರ ಕೈವಾಡ ಇರದಿದ್ದರೆ, ತನಿಖೆಯಿಂದ ಯಾವುದೇ ಸಮಸ್ಯೆಯಂತೂ ಆಗುವುದಿಲ್ಲ. ಹೀಗಿರುವಾಗ ಹೆಗ್ಗಡೆ ಅವರ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂಬ ನೆಪ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವುದು ಏನನ್ನು ಸೂಚಿಸುತ್ತಿದೆ?

ವ್ಯವಸ್ಥೆಗಿಂತ ಯಾವುದೇ ವ್ಯಕ್ತಿ ದೊಡ್ಡವರಲ್ಲ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡವರು ಯಾರೇ ಆಗಿರಲಿ, ಅವರು ಪ್ರಶ್ನಾತೀತರಲ್ಲ. ಲಕ್ಷಾಂತರ ಜನರಿಗೆ ಮಾರ್ಗದರ್ಶನ ನೀಡುವ ವ್ಯಕ್ತಿಯೊಬ್ಬರು, ತಮ್ಮ ಹಾಗು ಕುಟುಂಬ ಸದಸ್ಯರ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಪರಿ ಮತ್ತು ಟೀಕೆಗಳನ್ನು ಜೀರ್ಣಿಸಿಕೊಳ್ಳಲು ಹೆಣಗುತ್ತಿರುವ ರೀತಿ ಗಮನಿಸಿದರೆ, ಇಲ್ಲಿ ಎಲ್ಲವೂ ಅಂದುಕೊಂಡಷ್ಟು ಸರಳವಾಗಿಲ್ಲ ಎಂಬುದು ಮನದಟ್ಟಾಗುತ್ತದೆ.

ಸೌಜನ್ಯ ಎಂಬ ಹುಡುಗಿಗಾಗಿ ದನಿ ಎತ್ತದ ಕೆಲ ಶಾಸಕರು, ಸಚಿವರು ಹಾಗು ರಾಜಕಾರಣಿಗಳು ಇದೀಗ ವೀರೇಂದ್ರ ಹೆಗ್ಗಡೆ ಅವರಿಗಾಗಿ ರಂಗಪ್ರವೇಶ ಮಾಡಿರುವುದು ಪ್ರಕರಣದ ಹಿಂದಿರಬಹುದಾದ ಒಳಸುಳಿಗಳಿಗೆ ಕನ್ನಡಿ ಹಿಡಿಯುತ್ತಿರುವಂತೆ ಭಾಸವಾಗುತ್ತಿದೆ.

3 comments

  1. ಮುಗ್ದ ಜೀವ ಸೌಜನ್ಯಳ ಸಾವಿನಲ್ಲು ರಾಜಕೀಯ ಮಾಡುವುದನ್ನು ಬಿಟ್ಟು ತನಿಕೆ ಆದೇಶ ನೀಡುವಂತೆ ಜನಪ್ರತಿನಿಧಿಗಳು ಮುಂದಾಗಬೇಕು, ಹೆಗ್ಗಡೆ ಅವರ ಕುಟುಂಬಕ್ಕಾಗಿ ತನಿಕೆ ಮಾಡದಿರುವಂತ ಸ್ಥಿತಿ ಬೇಡ

  2. ಬಹುಷ ಆ ಧರ್ಮಸ್ಥಳ ಮಂಜುನಾಥನೆ ಬಂದು ನ್ಯಾಯ ಕೊಡಿಸಬೇಕೆನೋ !

  3. ಧರ್ಮಸ್ಥಳದ ಮಂಜುನಾಥನ ಸನ್ನಿಧಿಯ ಹತ್ತಿರದಲ್ಲಿಯೇ ಸೌಜನ್ಯಳಂಥ ನಿಷ್ಪಾಪಿ, ಮುಗ್ಧ ಹುಡುಗಿಯನ್ನು ಪಾತಕಿಗಳು ಅತ್ಯಾಚಾರ ಮಾಡಿ ಕೊಲ್ಲುವಾಗ ಅದನ್ನು ತಡೆಯದೆ ಮಂಜುನಾಥನು ಮೂಕಪ್ರೇಕ್ಷನಾಗಿ ನಿಂತದ್ದು ಏನನ್ನು ಸೂಚಿಸುತ್ತದೆ? ಮಂಜುನಾಥನ ಮಹಿಮೆ ನಿಜವೇ ಆಗಿದ್ದರೆ ಪಾತಕಿಗಳು ಆಗಲೇ ರಕ್ತ ಕಾರಿ ಸಾಯಬೇಕಾಗಿತ್ತು. ಆದರೆ ಹಾಗಾಗಿಲ್ಲ. ಕಾರಣವೇನು? ಭಕ್ತರು ಈ ಬಗ್ಗೆ ಆಲೋಚಿಸಬೇಕಾದ ಅಗತ್ಯ ಇದೆ.

Leave a Reply

Your email address will not be published.