ಕೀಳರಿಮೆಯಿಂದ ಕನ್ನಡದ ಕಡೆಗಣನೆ ಸಲ್ಲ – ಕ್ಷಮೆ ಕೇಳಬೇಕಿಲ್ಲ…

– ಸೂರ್ಯ ಮುಕುಂದರಾಜ್
ವಕೀಲ, ಬೆಂಗಳೂರು

ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಮಗನಿಗೆ ಕ್ಷಮಿಸು ಎಂದು (ಪ್ರಜಾವಾಣಿಯ ಸಂಗತದಲ್ಲಿ ಪ್ರಕಟವಾಗಿರುವ ಲೇಖನ) ಕೇಳುತ್ತಿರುವ ಸಹನಾ ಕಾಂತಬೈಲು ಅವರಂತಹ ತಾಯಂದಿರ ಪರಿಸ್ಥಿತಿ ಮತ್ತು ನಮ್ಮಲ್ಲಿರುವ ಭಾಷಾ ಕೀಳರಿಮೆ ಅರ್ಥವಾಗುವಂತಹುದೆ. ಆದರೆ ಭಾಷೆ ಒಂದು ಅಭಿವ್ಯಕ್ತಿ. ಹಾಗಾಗಿ ಸಂವಹನಕ್ಕೆ ಮಾತೇ ಬೇಕಂತಿಲ್ಲ. ಈ ಕಂಪ್ಯೂಟರ್ ಯುಗದಲ್ಲೂ ಕೂಡ ಎಷ್ಟೋ ಜನ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಂದ ಎಂಟನೇ ತರಗತಿ ಓದಿರುವ ಯಲಹಂಕದ ವಿ.ಆರ್.ಕಾರ್ಪೆಂಟರ್ ಎಂಬ ಕವಿಯವರೆಗೆ ಕಂಪ್ಯೂಟರ್‌ನಲ್ಲೂ ಕನ್ನಡವನ್ನು ಪಸರಿಸುತ್ತಿದ್ದಾರೆ. ಅಷ್ಟೇ ಯಾಕೆ ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿದ್ದ ನನಗೆ ಅಲ್ಲಿನ ಉಸಿರು ಕಟ್ಟುವ ವಾತಾವರಣದಿಂದ ಮುಕ್ತಿ ದೊರಕಿದ್ದು ನನ್ನನ್ನು govt-school-kidsನಾಗರಬಾವಿಯ ಸರ್ಕಾರಿ ಶಾಲೆಗೆ ಸೇರಿಸಿದ ಮೇಲೆಯೇ. ಸರ್ಕಾರಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ. ಕನ್ನಡದ ಕವಿಯಾಗಿದ್ದ ನನ್ನ ತಂದೆ ಬೆಂಗಳೂರಿನಲ್ಲಿದ್ದುಕೊಂಡು ನನ್ನನ್ನು ಸರ್ಕಾರಿ ಶಾಲೆಗೆ ಸೇರಿಸಿದಾಗ ಅವರಿಗೆ ಎಲ್ಲರೂ ’ನಿಮ್ಮ ಮಗನ ಭವಿಷ್ಯವನ್ನ ಹಾಳು ಮಾಡುತ್ತಿದ್ದೀರಿ, ಮೊದಲು ಯಾವುದಾದರೂ ಇಂಗ್ಲಿಷ್ ಮೀಡಿಯಂ ಸ್ಕೂಲಿಗೆ ಸೇರಿಸಿ’ ಎಂದು ಸಲಹೆ ಕೊಟ್ಟವರೇ ಹೆಚ್ಚು. ಬೆಂಗಳೂರಿನಂತಹ ಹೈಟೆಕ್ ಯುಗಕ್ಕೆ ಕಾಲಿಡುತ್ತಿದ್ದ ಅಂದಿನ ಸಂದರ್ಭದಲ್ಲಿ ಮೇಷ್ಟ್ರ ಮಗನಾಗಿ ಸರ್ಕಾರಿ ಶಾಲೆಗೆ ಹೋಗುವವನೆಂದು ನನ್ನ ಸುತ್ತಲಿನವರು ನನ್ನನ್ನು ಯಾರೋ ಅನ್ಯಗ್ರಹದ ಜೀವಿಯೇನೋ ಎಂದು ನೋಡುತ್ತಿದ್ದರು.

ನಾನು ಇಂದು ಏನಾಗಿದ್ದೇನೋ ಅದಕ್ಕೆ ಕಾರಣ ಸರ್ಕಾರಿ ಶಾಲೆ. ಸಹನಾ ಕಾಂತಬೈಲುರಂತಹ ತಿಳಿದವರು ಯಾವುದೋ ಮಾಲ್‌ನಲ್ಲಿ ಎಸ್.ಎಸ್.ಎಲ್.ಸಿ ಫೇಲಾದ ಇಂಗ್ಲಿಷ್ ಕಲಿತು ಅಂಗಡಿಯಲ್ಲಿ ಸಂಬಳಕ್ಕಿರುವವನೊಂದಿಗೆ ಇಂಗ್ಲಿಷ್ ಮಾತನಾಡಲು ಸಾಧ್ಯವಾಗದಿರುವ ಬಗ್ಗೆ ಪೇಚಾಡುತ್ತಿದ್ದಾರೆಂದರೆ ಕಾರಣ ಕೀಳರಿಮೆ. ನಾನು ಇಂದಿಗೂ ಕೂಡ ಯಾವುದೇ ಮಾಲ್‌ಗೆ ಹೋದರೂ ಕನ್ನಡದಲ್ಲೇ ವ್ಯವಹರಿಸುತ್ತೇನೆ, ಹಣ ಕೊಡುವ ಗ್ರಾಹಕನಿಗೆ ಅನುಕೂಲವಾಗುವಂತೆ ನಡೆದುಕೊಳ್ಳಬೇಕಾದ ಅನಿವಾರ್ಯತೆ ಮಾಲ್‌ನ ಅಂಗಡಿಗಳ ಮಾಲೀಕರಿಗಿದೆ ಹೊರತು ಇಂಗ್ಲಿಷ್ ಕಲಿತು ಸಾಮಾನು ಕೊಳ್ಳುವ ದರ್ದು ನಮಗಿರಬೇಕಿಲ್ಲ.

ಠಸ್ ಪುಸ್ ಎಂದು ಇಂಗ್ಲಿಷ್ ಮಾತನಾಡುವವರು ಮಾತ್ರ ಬದುಕಲು ಸಾಧ್ಯ ಇಲ್ಲದಿದ್ದೆರೇ ಇಲ್ಲಿ ಜೀವನ ಮಾಡುವುದೇ ದುಸ್ತರ surya-with-govindegowdaಎಂಬ ಸನ್ನಿವೇಶವನ್ನು ನಿಮ್ಮಂತವರು ಏಕೆ ಸೃಷ್ಟಿಸುತ್ತಿದ್ದೀರ ಅನ್ನುವುದು ಅರ್ಥವಾಗುತ್ತಿಲ್ಲ. ಸಣ್ಣ ಪುಟ್ಟ ಮೊಬೈಲ್ ಸಂದೇಶ ಕಳುಹಿಸಲು ನೀವು ಶಬ್ಧಕೋಶದ ಮೊರೆ ಹೋಗುತ್ತೀರೆಂದರೆ ನಿಜಕ್ಕೂ ಅದು ನಿಮ್ಮ ಕಲಿಕೆಯ ಕೊರತೆಯಷ್ಟೇ ಹೊರತು ಕಿರು ಸಂದೇಶಕ್ಕೆ ಶಬ್ದಕೋಶದ ಅವಶ್ಯಕತೆಯಿಲ್ಲ. ಇಂಗ್ಲಿಷ್‌ನಲ್ಲಿ ಬರುವ ಕಿರು ಸಂದೇಶಗಳು ಇಂಗ್ಲಿಷ್ ಶಬ್ಧಗಳನ್ನು ತುಂಡರಿಸಿ ಕಳುಹಿಸುವುದರಿಂದ ನಿಮಗೆ ಹಾಗೆ ಅನ್ನಿಸಿದ್ದರೆ ಆಶ್ಚರ್ಯವಿಲ್ಲ. ಇಂದು ಗೂಗಲ್‌ನಂತಹ ಸಂಸ್ಥೆಗಳು, ನೋಕಿಯಾ, ಸಾಮ್‌ಸ್ಯಾಂಗ್‌ನಂತಹ ದೈತ್ಯ ಮೊಬೈಲ್ ಕಂಪೆನಿಗಳೂ ಕೂಡ ಸ್ಥಳೀಯ ಬಾಷೆಯನ್ನು ಗ್ರಾಹಕರಿಗೆ ದೊರುಕವಂತೆ ಮಾಡಿದ್ದಾರೆ ಎಂಬ ಅರಿವು ತಮಗಿಲ್ಲವೆನ್ನಿಸುತ್ತದೆ.

ನಿಮ್ಮ ಬರಹದಲ್ಲೇ ನೀವು ಸುತ್ತಲಿನ ಮಕ್ಕಳು ಮಾತನಾಡುವ ಇಂಗ್ಲಿಷ್ ನಿಮ್ಮ ಮಗನಿಗೆ ಬರುವುದಿಲ್ಲವೆಂಬ ಕೀಳರಿಮೆ ವ್ಯಕ್ತಪಡಿಸಿದ್ದೀರಿ. 7ನೇ ತರಗತಿವರೆಗೆ ಕನ್ನಡ ಶಾಲೆಯಲ್ಲಿ ಓದಿ 8ನೇ ತರಗತಿಗೆ ಮನೆ ಹತ್ತಿರದಲ್ಲಿ ಯಾವುದೇ ಸರ್ಕಾರಿ ಪ್ರೌಢ ಶಾಲೆಯಿಲ್ಲದೆ ಇದ್ದ ಕಾರಣ ನಾನು ಇಂಗ್ಲಿಷ್ ಮೀಡಿಯಂಗೆ ಸೇರಿದೆ. ಈ ಶಾಲೆಯಲ್ಲಿ ಪ್ರಾರಂಭದಲ್ಲಿ ನನಗೆ ಅನುಕೂಲವಾಗಲಿಯೆಂದು ಇಂಗ್ಲಿಷ್ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರ ಬರೆಯಲು ಬಿಟ್ಟಿದ್ದರು. ಎರಡೇ ತಿಂಗಳಲ್ಲಿ ನಾನು ಇಂಗ್ಲಿಷ್‌ನಲ್ಲಿ ವಾಕ್ಯ ರಚನೆ ಮಾಡುವುದನ್ನು ಕಲಿತೆ. ಎಲ್.ಕೆ.ಜಿಯಿಂದ ಇಂಗ್ಲಿಷ್ ಮೀಡಿಯಂನಲ್ಲಿ ಓದಿಕೊಂಡು ಬಂದಿದ್ದ ಎಷ್ಟೋ ಜನ ಸಹಪಾಠಿಗಳು ಇಂಗ್ಲಿಷ್‌ನಲ್ಲಿ ಬರೆಯಲು ಸ್ಪೆಲ್ಲಿಂಗ್ ಗೊತ್ತಾಗದೆ ನನ್ನ ಹತ್ತಿರ ಕಾಪಿ ಹೊಡೆಯುತ್ತಿದ್ದರು. ನಾನು ಕೀಳರಿಮೆಯಿಂದ ಬಳಲಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.

ನನ್ನ ಜೊತೆ ಓದಿದ ಕನ್ನಡ ಶಾಲೆಯ ಬಡ ಕುಟುಂಬದ ಮಕ್ಕಳಿಂದ ನಾನು ಒಬ್ಬ ಕಟ್ಟಕಡೆಯ ಮನುಷ್ಯನ ಜೀವನ ಹೇಗಿರುತ್ತದೆಯೆಂದು ಕಂಡೆ. ಬೆಳಿಗ್ಗೆ ಎದ್ದು ಪೇಪರ್ ಹಾಕಿ, ಮನೆ ಕೆಲಸ ಮಾಡಿ, ಸಂಜೆಯಾದರೆ ತಳ್ಳೋಗಾಡಿ ಹೋಟೆಲ್, ಬಾರ್‌ಗಳಲ್ಲಿ ದುಡುದು ಓದುತ್ತಿದ್ದ ಈ ಹುಡುಗರಿಂದ ಕಲಿತ್ತದ್ದು ಅಪಾರ. ಅದೇ ಇಂಗ್ಲಿಷ್ ಮೀಡಿಯಂನ ಈ ಸೊಫಿಸ್ಟಿಕೇಟೆಡ್ ಕುಟುಂಬಗಳಿಂದ ಬಂದು ಕೇವಲ ಮಾತನಾಡುವುದಕ್ಕೆ ಇಂಗ್ಲಿಷ್ ಕಲಿಯಲು ಲಕ್ಷಾಂತರ ಹಣ ಚೆಲ್ಲುವ ತಂದೆ ತಾಯಿರ ದುಡ್ಡಿನಿಂದ ಮಜಾ ಉಡಾಯಿಸುತ್ತಿದ್ದ ಎಷ್ಟೋ ಜನ ಸಹಪಾಠಿಗಳು ಬದುಕಿನಲ್ಲಿ ಸೋತಿರುವುದನ್ನೂ ಕಂಡಿದ್ದೇನೆ. ಕನ್ನಡ ಶಾಲೆಯಲ್ಲಿ ಓದಿ ಕಾನೂನು ಪದವಿಗೆ ಸೇರಿ ಕನ್ನಡದಲ್ಲಿ ಪರೀಕ್ಷೆ ಬರೆದು ಪದವಿ ಪಡೆದು ವಕೀಲನಾಗಿದ್ದೇನೆ. ನನ್ನ ಕನ್ನಡದ ಮೇಲಿನ ಹಿಡಿತವೇ ಇಂದು ಇಂಗ್ಲಿಷ್ ಅನ್ನು ಅರಗಿಸಿಕೊಳ್ಳಲು ಶಕ್ತಿ ಕೊಟ್ಟಿರುವುದು. ಇಂದು ಕರ್ನಾಟಕದ chhanumantarayaಖ್ಯಾತ ವಕೀಲರಾದ ಸಿ.ಎಚ್.ಹನುಮಂತರಾಯ ಅವರ ಬಳಿ ಕಿರಿಯ ಸಹೋದ್ಯೋಗಿಯಾಗಿರುವ ನನಗೆ ಅವರ ಅನುಭವಗಳೆ ಆಗಾಗ ಹೆಚ್ಚಿನ ಸಾಧನೆ ಮಾಡುವಂತೆ ಹುರಿದುಂಬಿಸುತ್ತಿರುತ್ತದೆ. ಹಳ್ಳಿಯಲ್ಲಿ ಕನ್ನಡ ಕಲಿತು ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿಗೆ ಪಿ.ಯು.ಸಿಗೆ ಸೇರಿದಾಗ ಅದು ಅವರ ಕಲ್ಪನೆಯ ಇಂಗ್ಲೆಂಡ್‌ನಂತೆ ಎನ್ನಿಸುತ್ತದೆ. ಸೇಂಟ್ ಜೋಸೆಫ್ ಕಾಲೇಜು ಪ್ರಿನ್ಸಿಪಾಲ್‌ರು ಹನುಮಂತರಾಯರನ್ನು ಕೇಳುತ್ತಾರೆ ’ವಾಟ್ ಈಸ್ ಯುವರ್ ಫಾದರ್?’ ಆ ಪ್ರಶ್ನೆಗೆ ಕೂಡಲೇ ಏನು ಹೇಳಬೇಕೆಂದು ತೋಚದೆ ಅವರು ’ಮೈ ಫಾದರ್ ಈಸ್ ಮ್ಯಾನ್’ ಎಂದು ಬಿಡುತ್ತಾರೆ. ಅವರ ಅನುಭವ ಕೇಳಿದಾಗ ಈ ಕೀಳರಿಮೆ ಸರ್ವಕಾಲಿಕ, ಆದರೆ ಅದನ್ನು ಮೆಟ್ಟಿನಿಲ್ಲಬೇಕೆಂಬ ಛಲ ನಮ್ಮಲಿರಬೇಕು ಅಷ್ಟೆ ಎನ್ನಿಸುತ್ತದೆ. ಇಂದು ಅವರ ಕನ್ನಡದ ಮೇಲಿನ ಹಿಡಿತ ಕಮ್ಮಿಯಿಲ್ಲ/ ಹಾಗೆಯೇ ಅವರ ಇಂಗ್ಲಿಷ್‌ನ ಮಾತುಗಳನ್ನು ಕೇಳಿದರೆ ಆ ಭಾಷಾ ಪ್ರೌಡಿಮೆಗೆ ಗೌರವವೂ ಉಂಟಾಗುತ್ತದೆ. ಅದಕ್ಕಿರುವ ಕಾರಣ ಇಂದಿಗೂ ಅವರು ಗಂಟೆಗಟ್ಟಲೇ ಪ್ರಪಂಚವೇ ಮರೆತವರಂತೆ ಡಿಕ್ಷನರಿಯಲ್ಲಿ ಮುಳಿಗಿರುವುದು.

ಮೊದ ಮೊದಲು ನನಗೂ ನನ್ನ ಕಡಿಮೆ ದರ್ಜೆಯ ಇಂಗ್ಲಿಷ್‌ನಿಂದ ನಾನೆಲ್ಲೋ ಕಳೆದು ಹೋಗುತ್ತಿದ್ದೀನಾ ಎಂದೆನಿಸುತ್ತಿತ್ತು. ಆದರೆ, ನನ್ನ ಕನ್ನಡ ಯಾವತ್ತೂ ಕೈ ಕೊಡಲಿಲ್ಲ. ಕನ್ನಡ ಚೆನ್ನಾಗಿ ತಿಳಿದಿದ್ದರಿಂದ ಇಂಗ್ಲಿಷ್ ಕಲಿಯುವುದು ನನಗೆ ಕಷ್ಟವಾಗಲಿಲ್ಲ. ಸರ್ಕಾರಿ ಶಾಲೆಗೆ ನಿಮ್ಮ ಮಗನನ್ನು ಸೇರಿಸಿ ನಿಜಕ್ಕೂ ನೀವು ನಿಮ್ಮ ಮಗನಿಗೆ ಒತ್ತಡವಿಲ್ಲದ ಬಾಲ್ಯ ಕೊಟ್ಟಿದ್ದೀರಾ. ನೀವು ಕ್ಷಮೆಕೋರುವ ಬದಲು ಅವನಿಗೆ ಇಂಗ್ಲಿಷ್ ಅನ್ನು ಓದುವ ಬರೆಯುವ ಮೂಲಕ ಅಭ್ಯಾಸ ಮಾಡಿದರೆ ಖಾಸಗಿ ಶಾಲೆಯವರನ್ನೂ ಮೀರುವ ಜ್ಞಾನ ಸಂಪಾದಿಸುವುದರಲ್ಲಿ ಸಂಶಯವಿಲ್ಲ. ದಿನ ನಿತ್ಯದ ಬದುಕಿನಲ್ಲಿ ವ್ಯವಹರಿಸಲು ಇಂಗ್ಲಿಷ್ ತಿಳಿಯದಿದ್ದರೆ ಬದುಕುವುದು ದುಸ್ತರ ಎಂಬ ಸನ್ನಿಗೆ ಒಳಗಾಗದೆ ಮೊದಲು ಕನ್ನಡದ ಮೇಲೆ ಹಿಡಿತ ಸಾಧಿಸಿಕೊಳ್ಳವುದು ಅವಶ್ಯ ಕನ್ನಡ ಕಲಿತರೆ ಜಗತ್ತಿನ ಯಾವುದೇ ಬಾಷೆಯನ್ನು ಸುಲಭವಾಗಿ ಕಲಿಯಬಹುದು. ನನ್ನ ಓರಗೆಯ ಎಷ್ಟೋ ಜನ ಗೆಳೆಯರಿಗೆ ಕನ್ನಡದ ಪದಗಳ ಅರ್ಥ ತಿಳಿಯದೆ ಪೇಚಾಡುವುದನ್ನು ನೋಡಿದಾಗ ನನ್ನ ಕನ್ನಡ ಜ್ಞಾನದ ಬಗ್ಗೆ ಹೆಮ್ಮೆಯಾಗುತ್ತದೆ.

3 thoughts on “ಕೀಳರಿಮೆಯಿಂದ ಕನ್ನಡದ ಕಡೆಗಣನೆ ಸಲ್ಲ – ಕ್ಷಮೆ ಕೇಳಬೇಕಿಲ್ಲ…

 1. Ananda Prasad

  ಇಂಗ್ಲಿಷ್ ಮಾತೃಭಾಷೆ ಅಲ್ಲದವರು ಮಾತಾಡುವಾಗ ತಡವರಿಸುವುದು ಸಹಜ. ಇದು ಇಂಗ್ಲಿಷ್ ಮಾತ್ರವಲ್ಲ ಮಾತೃಭಾಷೆ ಅಥವಾ ಪರಿಸರದ ಭಾಷೆ ಅಲ್ಲದ ಎಲ್ಲ ಭಾಷೆಗಳ ವಿಷಯದಲ್ಲಿಯೂ ಸತ್ಯ. ಇದರಿಂದ ಕೀಳರಿಮೆ ಹೊಂದಬೇಕಾಗಿಲ್ಲ. ಇಂಗ್ಲಿಷ್ ಮಾತಾಡುವುದನ್ನು ಒಂದು ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡಾಗ ಇಂಥ ಕೀಳರಿಮೆ ಉದ್ಭವವಾಗುತ್ತದೆ. ನಮ್ಮ ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ಮಾಧ್ಯಮಗಳಲ್ಲಿ ಕನ್ನಡದಲ್ಲಿ ಮಾತಾಡುವುದು ಹೆಮ್ಮೆಯ ವಿಷಯವಾಗಬೇಕು. ತಮ್ಮ ಮಾತಿನಲ್ಲಿ ಮುಕ್ಕಾಲು ಪಾಲು ಇಂಗ್ಲಿಷ್ ಬೆರೆಸಿ ಕಾಲು ಭಾಗ ಕನ್ನಡ ಮಾತಾಡುವುದನ್ನು ಶ್ರೇಷ್ಠತೆ, ಪ್ರತಿಷ್ಠೆ ಎಂದು ಕನ್ನಡಿಗರು ತಿಳಿದುಕೊಂಡಿದ್ದಾರೆ. ಇಂಥ ಗುಲಾಮಗಿರಿಯ ಮನೋಭಾವ ತೊಲಗಿ ಶುದ್ಧ ಕನ್ನಡದಲ್ಲಿ ಮಾತಾಡುವುದೇ ಶ್ರೇಷ್ಠತೆ ಎಂಬ ಮನೋಭಾವ ಬೆಳೆಸಬೇಕಾದ ಅಗತ್ಯ ಇದೆ.

  Reply
 2. ಸಂತೋಷ ಗುಡ್ಡಿಯಂಗಡಿ

  ಸಹನಾ ಕಾಂತಬೈಲು ಅವರು ಇಂತಹ ಅತಿರೇಕದ ಪತ್ರಗಳನ್ನು ಆಗಾಗ ಪ್ರಜಾವಾಣಿಗೆ ಬರೆಯುತ್ತಾರೆ. ಮೊನ್ನೆಯ ಅವರ ಪತ್ರದ ತಲೆಬರಹವೇ ಬಹಳ ಅತಿರೇಕದ್ದು.
  ಮುದ್ದು ತೀರ್ಥಹಳ್ಳಿ ಎಂಬ ಹತ್ತನೇ ತರಗತಿಯಲ್ಲಿ ಓದುತ್ತಿರುವ ಕನ್ನಡದ ಅದ್ಭುತ ಪುಟಾಣಿಯಿದ್ದಾಳೆ. ಅನುಕೂಲಸ್ಥರೇ ಆದ ಅವಳ ಪೋಷಕರು ಇಂಗ್ಲಿಶ್ ಮಾಧ್ಯಮದ ಶಾಲೆಗೆ ಸೇರಿಸುತ್ತಾರೆ. ಆ ಮಗುವಿಗೆ ಕನ್ನಡದಲ್ಲಿ ಪತ್ರಿಕೆ ಮಾಡುವ ಆಸೆ. ಎರಡು ಸೈಕಲ್ ನಿಲ್ಲಿಸಿ ಮೇಲೊಂದು ರಟ್ಟನ್ನಿಟ್ಟು ಕೋಣೆ ಮಾಡಿಕೊಂಡು ಅದಕ್ಕೊಂದು ಮಂದಾನಿಲ ಪತ್ರಿಕಾ ಕಛೇರಿ ಎಂಬ ಬೋರ್ಡು ತಗುಲಿಸಿ ಎನ್ನನ್ನೋ ಗೀಚುವುದಕ್ಕೆ ತೊಡುಗುತ್ತಾಳೆ. ಮೂರನೇ ತರಗತಿಗೇ ಇಂತಹದ್ದೊಂದು ಆಸೆಯ ಬೆನ್ನಟ್ಟಿದ್ದ ಆ ಮಗು ಆರನೇ ತರಗತಿಗೆ ಬರುವ ಹೊತ್ತಿಗೆ ಮಂದಾನಿಲ ಎಂಬ ಕೈಬರಹದ ಪತ್ರಿಕೆಯನ್ನ ತಿಂಗಳ ಮೊದಲಿಗೆ ತಂದು ಅಕ್ಕನಿಗೆ ಓದಲು ಕೊಡುತ್ತಾಳೆ. ಒಂಚೂರು ಧೈರ್ಯ ಮಾಡಿ ತನ್ನ ಶಿಕ್ಷಕರಿಗೆ ಕೊಡುತ್ತಾಳೆ. ಆ ಧೂರ್ತ ಶಿಕ್ಷಕರು ಕನ್ನಡದಲ್ಲಿ ಬರೆದಿರುವ ಒಂದೇ ಕಾರಣಕ್ಕೆ ಆ ಮಗುವಿನ ಮುಂದೆಯೇ ಆ ಪತ್ರಿಕೆಯನ್ನು ಎಸೆಯುತ್ತಾರೆ. ಆ ಪುಟ್ಟ ಮನಸ್ಸಿಗೆ ಆಘಾತವಾಗದಿರುತ್ತದೆಯೇ!
  ತಾನು ಆ ಶಾಲೆಯಲ್ಲಿ ಓದುವುದಿಲ್ಲ ಎಂದು ಪೋಷಕರ ಮುಂದೆ ಹಟ ಹಿಡಿದು ಮುಂದೆ ಸರ್ಕಾರಿ ಶಾಲೆಗೆ ಸೇರುತ್ತಾಳೆ. ಇಂದು ತೀರ್ಥಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಳೆ.
  ಕನ್ನಡ ಸಾಹಿತ್ಯ ವಲಯದಲ್ಲಿ ಮುದ್ದುವಿನ ಹೆಸರು ಕೇಳದಿರುವವರೆ ಅಪರೂಪ. ತನ್ನ ಮಂದಾನಿಲ ಪತ್ರಿಕೆ, ತನ್ನ ವಿಶಿಷ್ಟ ಕವಿತೆ, ಬರಹಗಳ ಮೂಲಕ ಮುದ್ದುವಿನ ಹೊಸ ಕಾದಂಬರಿ ಅಚ್ಚಿಗೆ ಅಣಿಯಾಗಿದೆ.
  ಕನ್ನಡದಲ್ಲೇ ಓದಿ ಐ.ಎ.ಎಸ್. ಮಾಡಿ ಬಡ ಜನರಿಗೆ ನೆರವಾಗಬೇಕು ಎಂದು ಕನಸುಕಟ್ಟಿಕೊಂಡಿರುವ ಈ ಮಗುವಿಗೆ ಯಾವ ಹಿಂಜರಿಕಯೂ ಇಲ್ಲ.
  ತಮಗಿರುವ ಹಿಂಜರಿಕೆಯ ಭಯವನ್ನು ಮಾಧ್ಯಮದ ಮೂಲಕ ತೋಡಿಕೊಂಡು ಭ್ರಮನಿರಸನ ಹೊಂದುವ ಮಂದಿಗೆ ನಮ್ಮ ನಡುವಿನ ಮುದ್ದುವಿನಂತಹ ಚಿಕ್ಕ ಚಿಕ್ಕ ಉದಾಹರಣೆಗಳು ಅರ್ಥವಾಗಬೇಕು.

  Reply
 3. Mahesh

  ಇಂಗ್ಲಿಷ್ ಮಾಧ್ಯಮ ಮುಂದಿನ ತಲೆಮಾರಿಗೆ ಯಾವುದೇ ಕಾಂಪಿಟೇಟಿವ್ ಎಡ್ಜ್ ನೀಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಅಟೋಮ್ಯಾಟಿಕ್ ಟ್ರಾನ್ಸಲೇಟರ್ ಗಳು ತಮ್ಮ ಪ್ರತಿಭೆಯನ್ನು ಅಪಾರವಾಗಿ ಹೆಚ್ಚಿಸಿಕೊಳ್ಳಲಿವೆ. ಅವುಗಳ ಸಹಾಯದಿಂದ ಇಂಗ್ಲಿಷ್ ನ ಒಂದಕ್ಷರ ಗೊತ್ತಿಲ್ಲದವನೂ ಇಂಗ್ಲಿಷರ ಜೊತೆ ಸರಾಗವಾಗಿ ಮಾತನಾಡಬಹುದು. ಭಾಷೆ ಎಂಬುದು ಅಡೆತಡೆಯಾಗುವುದು ಮುಂದಿನ ದಿನಗಳಲ್ಲಿ ಸಾಧ್ಯವಿಲ್ಲದ ಮಾತು. ಆದರೆ ನಮ್ಮಲ್ಲಿ ಕಾಗ್ನಿಟಿವ್ ಸ್ಕಿಲ್ ಇಲ್ಲದೇ ಹೋದರೆ ಅದು ನಮ್ಮನ್ನು ಹಿಂದುಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

  Reply

Leave a Reply

Your email address will not be published.