Monthly Archives: October 2013

“ಗಾಂಧಿ ಜಯಂತಿ ಕಥಾ ಸ್ಪರ್ಧೆ – 2013″ರ ಫಲಿತಾಂಶ

ಸ್ನೇಹಿತರೇ,

“ಗಾಂಧಿ ಜಯಂತಿ ಕಥಾ ಸ್ಪರ್ಧೆ – 2013″ರ ಫಲಿತಾಂಶ ಮೂರು ದಿನ ತಡವಾಗಿ ಪ್ರಕಟಿಸುತ್ತಿರುವುದಕ್ಕೆ ವಿಷಾದವಿದೆ. ಈ ಬಾರಿ ಸುಮಾರು 50+ ಕತೆಗಳು katha-sprade-2013ಬಂದಿದ್ದವು. ಕಳೆದ ಸಾರಿಗೆ ಹೋಲಿಸಿದರೆ ಒಂದಿಪ್ಪತ್ತು ಕಮ್ಮಿ. ಆದರೆ ಕಳೆದ ಬಾರಿ ನಮ್ಮ ಕಥಾ ಸ್ಪರ್ಧೆಯ ಪ್ರಕಟಣೆ ಮತ್ತು ಕತೆಗಳ ಆಹ್ವಾನ ಪ್ರಜಾವಾಣಿ, ಕನ್ನಡ-ಒನ್‌ಇಂಡಿಯಾ, ಅವಧಿ ಒಳಗೊಂಡಂತೆ ಇತರೆ ಒಂದೆರಡು ಕಡೆ ಪ್ರಕಟವಾಗಿತ್ತು. ಕೆಲವೊಂದು ಕಡೆ, ವಿಶೇಷವಾಗಿ ಮುದ್ರಣ ಮಾಧ್ಯಮದಲ್ಲಿ, ನಿಯಮಗಳು ಸ್ಪಷ್ಟವಾಗಿ ಪ್ರಕಟವಾಗಿಲ್ಲದಿದ್ದ ಕಾರಣ ಆಗ ಅನೇಕ ಕತೆಗಳು ಕಾಗದದಲ್ಲಿ ಅಂಚೆಯ ಮೂಲಕ ಬಂದವುವಾಗಿದ್ದವು ಮತ್ತು ಅವು ನಮಗೆ ಒಂದಷ್ಟು ತಾಂತ್ರಿಕ ಸಮಸ್ಯೆಗಳನ್ನು ತಂದೊಡ್ಡಿದ್ದವು. ಹಾಗಾಗಿ ಈ ಬಾರಿ ಪ್ರಕಟಣೆಯನ್ನು ಎಲ್ಲಿಯೂ ಕಳುಹಿಸಲಿಲ್ಲ. ಈ ಸಾರಿ ಬಂದ ಎಲ್ಲಾ ಕತೆಗಳೂ ಇಮೇಲ್‌ನಲ್ಲಿ ಬಂದ ಸಾಫ್ಟ್‌ಕಾಪಿಗಳು.

ಕತೆಗಳು ಕಮ್ಮಿ ಸಂಖ್ಯೆಯಲ್ಲಿ ಬಂದಿದ್ದರೂ, ಬಂದ ಬಹುತೇಕ ಎಲ್ಲಾ ಕತೆಗಳು ಉತ್ತಮವಾಗಿವೆ ಎಂದು ನನಗೆ ಮೊದಲ ದಿನದಿಂದಲೇ ಅನ್ನಿಸಿತ್ತು. ನಮ್ಮ ಬಳಗದ ಶ್ರೀಪಾದ ಭಟ್ಟರು ಮತ್ತು ನಾನು ಒಂದು ದಿನ ಕುಳಿತು ಕತೆಗಳತ್ತ ಕಣ್ಣಾಡಿಸಿದೆವು. ಒಳ್ಳೆಯ ಕತೆಗಳು ಬಂದಿವೆ ಎಂದು ನಮಗೆ ಮೇಲ್ನೋಟಕ್ಕೇ ಗೊತ್ತಾಯಿತು. ನಾವಿಬ್ಬರೂ ಸೇರಿ ಕಥಾ ಸ್ಪರ್ಧೆಯ ನಿಬಂಧನೆಗಳಿಗೆ ಒಳಪಡದ ಮತ್ತು ಪಕ್ಕಕ್ಕಿಡಬಹುದು ಎನ್ನಿಸಿದ ಕೆಲವನ್ನು ಪ್ರತ್ಯೇಕಿಸಿ ಒಟ್ಟು 39 ಕತೆಗಳನ್ನು ತೀರ್ಪುಗಾರರಾದ ಸಾಹಿತಿ ಮತ್ತು ಪ್ರಾಧ್ಯಾಪಕ ರಾಮಲಿಂಗಪ್ಪ ಬೇಗೂರುರವರಿಗೆ ಮುದ್ರಿಸಿ ಕಳುಹಿಸಿದೆವು. ತೀರ್ಪುಗಾರರ ಇಚ್ಚೆಯಂತೆ ಅವರಿಗೆ ಕಳುಹಿಸಿದ ಕತೆಗಳಲ್ಲಿ ಯಾವುದರಲ್ಲೂ ಲೇಖಕರ ಹೆಸರುಗಳು ಇರಲಿಲ್ಲ. ಇಂದು ಅಂತಿಮವಾಗಿ ತೀರ್ಪುಗಾರರು ಫಲಿತಾಂಶ ಕಳುಹಿಸಿದ್ದಾರೆ.

ಮೊದಲ ಬಹುಮಾನ : “ಮಹಾತ್ಮ” – ವಿಶ್ವಾಸ್ ಭಾರದ್ವಾಜ್
ಎರಡನೆಯ ಬಹುಮಾನ : “ಗಲೀಜು” – ಗಿರಿ ರಾಜ್
ಮೂರನೆಯ ಬಹುಮಾನ : “ಬೆಂದಕಾಳೂರು” – ವಿಜಯ್ ಹೂಗಾರ್
ಪ್ರೋತ್ಸಾಹಕ ಬಹುಮಾನಗಳು :
ಮುಗಿಲ ಮಾಯೆಯ ಕರುಣೆ” – ಪಿ. ಮಂಜುನಾಥ
ಹುಲಿ ಸಾಕಣೆ” – ಗೋಪಿನಾಥ ರಾವ್

ಕಥಾ ಸ್ಪರ್ಧೆಗೆ ಕತೆಗಳನ್ನು ಕಳುಹಿಸಿದ ಎಲ್ಲಾ ಕತೆಗಾರರಿಗೂ ಧನ್ಯವಾದಗಳು ಮತ್ತು ಕೃತಜ್ಞತೆಗಳು. ಮತ್ತು ವಿಜೇತರಿಗೆ ಅಭಿನಂದನೆಗಳು. ತೀರ್ಪುಗಾರರಾದ ರಾಮಲಿಂಗಪ್ಪ ಬೇಗೂರುರವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಕಥಾ ಸ್ಪರ್ಧೆಯ ಆಯೋಜನೆಯಲ್ಲಿ ವಿಶೇಷವಾಗಿ ಸಹಕರಿಸಿದ ಶ್ರೀಪಾದ ಭಟ್ಟರಿಗೆ ಮತ್ತು ದೀಪಕ್ ಸಿ.ಎನ್.ರಿಗೆ ಧನ್ಯವಾದಗಳು.

ತೀರ್ಪುಗಾರರ ಅಭಿಪ್ರಾಯದ ಲೇಖನವನ್ನು ಸೋಮವಾರ ಪ್ರಕಟಿಸಲಾಗುವುದು.

ಬಹುಮಾನಿತ ಕತೆಗಳನ್ನು ಮುಂದಿನ ದಿನಗಳಲ್ಲಿ ವಾರಕ್ಕೊಂದರಂತೆ ಪ್ರಕಟಿಸಲಾಗುವುದು.

ಮತ್ತೊಮ್ಮೆ ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಮತ್ತು ವಿಜೇತರಿಗೆ ಅಭಿನಂದನೆಗಳು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ
ವರ್ತಮಾನ.ಕಾಮ್.

ಕಳಂಕಿತರಿಗೆ ಆಕಸ್ಮಿಕ ಹಿನ್ನಡೆ


– ಚಿದಂಬರ ಬೈಕಂಪಾಡಿ


 

ಕಳಂಕಿತರನ್ನು ರಕ್ಷಿಸುವ ಪ್ರಯತ್ನದಲ್ಲಿ ಕೇಂದ್ರ ಯುಪಿಎ ಸರ್ಕಾರ ಎಡವಟ್ಟು ಮಾಡಿಕೊಂಡಿತು. ತಾನೇ ಅವಸರವಾಗಿ ಜಾರಿಗೆ ತರಲುದ್ದೇಶಿಸಿದ್ದ ಅಧ್ಯಾದೇಶವನ್ನು ಹಿಂದಕ್ಕೆ ಪಡೆಯುವ ಮೂಲಕ ಸೋಲೊಪ್ಪಿಕೊಂಡಿದೆ.

ನಿಜಕ್ಕೂ ಕಳಂಕಿತರಿಗೆ ಯುಪಿಎ ಸರ್ಕಾರದ ಈ ನಡೆ ಹಿನ್ನಡೆಯಾಗಿದೆ. ಹೇಗಾದರೂ ಸರಿ ತಾವು ಅಧಿಕಾರದಲ್ಲೇ ಉಳಿಯಬೇಕೆಂಬ ಧಾವಂತದ ಜೊತೆಗೆ ತಾವು ಏನೇ ಮಾಡಿದರೂ ಪ್ರಶ್ನಿಸುವಂತಿಲ್ಲ ಎನ್ನುವಂಥ ಮನಸ್ಥಿತಿಗೆ ಕಡಿವಾಣ ಬಿದ್ದಿದೆ.

ಪ್ರಧಾನಿ ಡಾ.ಮನಮೋಹನ್ ಸಿಂಗ್ ಜಾಗತಿಕ ಮಟ್ಟದಲ್ಲಿ ಒಳ್ಳೆಯ ಹೆಸರಿರುವ ಅರ್ಥಶಾಸ್ತ್ರಪಂಡಿತರು ಹೊರತು ರಾಜಕೀಯ ಪಂಡಿತರಲ್ಲ obama-manamohansinghಎನ್ನುವುದು ಕೂಡಾ ಜಾಗತಿಕವಾಗಿ ಗೊತ್ತಿರುವ ಸಂಗತಿ. ಸೋನಿಯಾ ಗಾಂಧಿ ಅವರ ಇಶಾರೆಯಂತೇ ಕೆಲಸ ಮಾಡುವ ನಿಷ್ಠಾವಂಥರಲ್ಲಿ ಡಾ.ಮನಮೋಹನ್ ಮುಂಚೂಣಿಯಲ್ಲಿದ್ದಾರೆ. ಪ್ರಧಾನಿ ಪಟ್ಟವನ್ನು ಮನಮೋಹನ್ ಸಿಂಗ್ ಅವರ ಬದಲು ಅವರದ್ದೇ ಪಕ್ಷದ ಬೇರೆ ಯಾರಿಗಾದರೂ ಕಟ್ಟುತ್ತಿದ್ದರೆ ಇಷ್ಟುಹೊತ್ತಿಗೆ ಸ್ವತ: ಸೋನಿಯಾ ಅವರನ್ನು ಜೈಲಿಗೆ ಕಳುಹಿಸುತ್ತಿದ್ದರೇನೋ ಎನ್ನುವುದು ಅತಿಶಯೋಕ್ತಿಯಲ್ಲ. ಪ್ರಧಾನಿಯಂಥ ಒಂದೇ ಒಂದು ಅವಕಾಶ ಸಿಕ್ಕಿದರೆ ಅಮರಿಕೊಳ್ಳುತ್ತಿದ್ದರು. ನೆಲ, ಜಲವನ್ನು ಕೊಳ್ಳೆಹೊಡೆಯುವ ಈಗಿನ ಕಾಲದಲ್ಲಿ ಚಿನ್ನದಂಥ ಅವಕಾಶ ಸಿಕ್ಕಿದ್ದರೆ ಇನ್ನಷ್ಟು ಹಗರಣಗಳಿಗೇನೂ ಕೊರತೆಯಾಗುತ್ತಿರಲಿಲ್ಲ. ಆ ಮಟ್ಟಿಗೆ ಸೋನಿಯಾ ಕುಟುಂಬ ಬಚಾವ್ ಮನಮೋಹನ್ ಸಿಂಗ್ ಅವರಿಂದಾಗಿ.

ಕೇಂದ್ರ ಸರ್ಕಾರ ಅಧ್ಯಾದೇಶವನ್ನು ಹಿಂದಕ್ಕೆ ಪಡೆದಿರುವುದು ಒತ್ತಡದ ಕಾರಣಕ್ಕೆ, ಅದರಲ್ಲೂ ಕಾಂಗ್ರೆಸ್ ಯುವರಾಜನ ಕಾರಣಕ್ಕೆ ಎನ್ನುವುದು ಸ್ಪಷ್ಟ. ಈ ನಡೆಯಿಂದ ಯಾರು ಗೆದ್ದರು, ಯಾರು ಬಿದ್ದರು ಎನ್ನುವುದು ಬಹಳ ಮುಖ್ಯವೆನಿಸುತ್ತಿಲ್ಲ. ದೇಶದ ಜನರ ಮುಂದೆ ಕಳಂಕಿತರ ಮುಖಗಳು ಕೊನೆಗೂ ಅನಾವರಣವಾಗಲು ಸಾಧ್ಯವಾಯಿತು.

ಒಂದು ವೇಳೆ ಅಧ್ಯಾದೇಶವನ್ನು ಹಿಂದಕ್ಕೆ ಪಡೆಯದೇ ಇದ್ದಿದ್ದರೆ ಎರಡು ಅನಾಹುತಗಳು ಸಂಭವಿಸುತ್ತಿದ್ದವು. Rahul_Gandhi_Ajay_Makenಕಳಂಕಿತರನ್ನು ಮಟ್ಟ ಹಾಕುವುದು ಅಸಾಧ್ಯವಾಗುತ್ತಿತ್ತು. ಕಳಂಕಿತರನ್ನು ರಕ್ಷಣೆ ಮಾಡಿದ ಅಪಕೀರ್ತಿಗೆ ಯುಪಿಎ ಸರ್ಕಾರ ಭಾಗಿಯಾಗುತ್ತಿತ್ತು. ಕಳಂಕಿತರನ್ನು ಚುನಾವಣೆಯಿಂದ ದೂರ ಇಡಬೇಕೆಂದು ಚಿಂತನೆ ಮಾಡಿದ ರಾಜಕಾರಣಿಗಳು ಬಹುಬೇಗ ನೇಪಥ್ಯ ಸೇರಿಕೊಂಡಿದ್ದಾರೆ. ಕಳಂಕಿತರು ತಮ್ಮನ್ನು ದೂರ ಇಡುವ ಮನಸ್ಥಿತಿಯವರನ್ನು ಎಂದೆಂದಿಗೂ ಸಹಿಸುವುದಿಲ್ಲ. ಇದಕ್ಕೆ ಯಾರೂ ಹೊರತಲ್ಲ.

ಯಾವ ರಾಜ್ಯದ ಯಾವ ಪಕ್ಷದ ರಾಜಕಾರಣಿಯ ಚರಿತ್ರೆಯನ್ನು ಅವಲೋಕಿಸಿದರೂ ಒಂದಷ್ಟು ಕಪ್ಪು ಚುಕ್ಕೆಗಳು ಗೋಚರಿಸುತ್ತವೆ. ಖಾದಿಯಷ್ಟೇ ಶುಭ್ರ ಅವರ ಚಾರಿತ್ರ್ಯ ಅಂದುಕೊಳ್ಳುವುದು ಸುಲಭ ಸಾಧ್ಯವಿಲ್ಲ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಕ್ರಿಮಿನಲ್ ಚಟುವಟಿಕೆಗಳು ರಾಜಕೀಯದಲ್ಲಿ ಚಲಾವಣೆಯಲ್ಲಿರಬೇಕಾದರೆ ಅನಿವಾರ್ಯ ಎನ್ನುವ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಹಸಿವೆಯನ್ನು ಸಹಿಸಿಕೊಂಡು ಸುಮ್ಮನಿದ್ದರೂ ಎಂಜಲು ಕೈಯನ್ನು ಮೂತಿಗೆ ಒರೆಸಿ ಹೊಟ್ಟೆತುಂಬಾ ಉಂಡಿರಬೇಕು ಎನ್ನುವಂತೆ ಮಾಡಿಬಿಡುತ್ತಾರೆ ಸ್ವಲ್ಪ ಯಾಮಾರಿದರೂ, ಇದಕ್ಕೆ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಮೇಲಿನ ಆಪಾದನೆಗಳೇ ಸಾಕ್ಷಿ. ಹಾಗೆಂದು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಸರಿಯಲ್ಲ, ಅದು ಈ ಬರಹದ ಉದ್ದೇಶವೂ ಅಲ್ಲ. ಜಿ ಕೆಟಗರಿ ಸೈಟಿನಿಂದ ಹಿಡಿದು ಅರಣ್ಯ, ಕೆರೆ, ಗೋಮಾಳ ಒತ್ತುವರಿ ತನಕ ತಮ್ಮವರ ಹೆಸರಲ್ಲಿ ಕಬ್ಜ ಮಾಡಿಕೊಂಡಿರುವ ರಾಜಕಾರಣಿಗಳನ್ನು ಮತ್ತೆ ಮತ್ತೆ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಟ್ಟರೆ ಮುಂದೊಂದು ದಿನ ಈ ದೇಶದ ಪ್ರತಿಯೊಂದು ಇಂಚು ಭೂಮಿಯೂ ರಾಜಕಾರಣಿಗಳ ಕುಟುಂಬದವರ ಪಾಲಾಗಿರುತ್ತದೆ. ಭೂಮಿತಿ ಕಾಯಿದೆಯನ್ನು ಜಾರಿಗೆ ತಂದಿದ್ದರೆ ರಾಜಕಾರಣಿಗಳ ಬಣ್ಣ ಬಯಲಾಗುತ್ತಿತ್ತು, ಆದ ಕಾರಣವೇ ಅಂಥ ಕಾಯಿದೆ ಯಾರ ತಲೆಯೊಳಗೆ ಸುಳಿಯದಂತೆ ಮಾಡಿದ್ದಾರೆ. ಸಮಾಜದ ಕಟ್ಟ ಕಡೆಯ ದಟ್ಟ ದರಿದ್ರರ ಭೂಮಿಯನ್ನು ಕಬ್ಜ ಮಾಡಿಕೊಂಡವರು ಮಾಧ್ಯಮಗಳ ಬೆಳಕಲ್ಲಿ ಹೊಳೆಯುತ್ತಾರೆ, ಅವರೂ ಸಾಮಾಜಿಕ ನ್ಯಾಯದ ಬಗ್ಗೆ ನೀತಿ ಪಾಠ ಹೇಳುತ್ತಾರೆ. ಇಂಥವರನ್ನು ಅಧ್ಯಾದೇಶ ಜಾರಿಗೆ ತಂದು ರಕ್ಷಣೆ ಮಾಡಿದರೆ ದೇವರು ಮುನಿಸಿಕೊಳ್ಳುತ್ತಿದ್ದ ಖಂಡಿತಕ್ಕೂ. ಯಾಕೆಂದರೆ ದೇವಸ್ಥಾನವನ್ನೇ ಕಬ್ಜ ಮಾಡಿಕೊಂಡ ಉದಾಹರಣೆಗಳು ಕಣ್ಣಮುಂದಿವೆಯಲ್ಲವೇ?

ಪಕ್ಷದ ಅಂಗಿತೊಟ್ಟುಕೊಂಡಿರುವವರು ಅದನ್ನು ಕಳಚಿ ಯೋಚಿಸಿದರೆ ಕಾಂಗ್ರೆಸ್, ಬಿಜೆಪಿ ಅಥವಾ ಮತ್ತೊಂದು ಪಕ್ಷದ ನಡುವೆ shettar-yed-sada-eshwar-ananthಭ್ರಷ್ಟಾಚಾರ, ಸ್ವಜನಪಕ್ಷಪಾತ, ಕ್ರಿಮಿನಲ್ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿಕೆ ಇಂಥ ವಿಚಾರಗಳಲ್ಲಿ ಅಷ್ಟೇನೂ ವ್ಯತ್ಯಾಸ ಗುರುತಿಸಲಾಗದು. ಯಾಕೆಂದರೆ ಎಲ್ಲರ ಗುರಿ ಒಂದೇ. ವೇಗದಲ್ಲಿ ವ್ಯತ್ಯಾಸವಿರಬಹುದೇ ಹೊರತು ಸಾಗುವ ದಿಕ್ಕು ಎಲ್ಲರದ್ದೂ ಒಂದೇ ಆಗಿರುತ್ತದೆ. ಸಾಮಾಜಿಕ ನ್ಯಾಯ, ಸರ್ವರಿಗೂ ಸಮಪಾಲು, ಸಮಬಾಳು. ಹಂಚಿ ತಿಂದರೆ ಸ್ವರ್ಗ ಸುಖ ಎನ್ನುವುದನ್ನು ಎಲ್ಲರೂ ಅರಿತಿದ್ದಾರೆ. ಆದ್ದರಿಂದಲೇ ದಿಲ್ಲಿಯಿಂದ ಹಿಡಿದು ಬೆಂಗಳೂರು ತನಕ ಅದೆಷ್ಟು ಜನ ರಾಜಕಾರಣಿಗಳು ಜೈಲಲ್ಲಿ ರಾತ್ರಿ ಕಳೆದು ಬರುತ್ತಿದ್ದಾರೆ, ಕೋರ್ಟ್ ಮೆಟ್ಟಿಲು ಹತ್ತಿ-ಇಳಿಯುತ್ತಿದ್ದಾರೆ. ಇಂಥವರನ್ನು ಪ್ರಶ್ನೆ ಮಾಡಬಾರದು, ಪ್ರಶ್ನೆ ಮಾಡುವುದು ತಪ್ಪು ಎನ್ನುವ ಮನಸ್ಥಿತಿಯರನ್ನು ಏನೆಂದು ಕರೆಯಬೇಕು?

ಈ ಅಧ್ಯಾದೇಶ ರದ್ಧಾದ ಕ್ರೆಡಿಟ್ ಯಾರು ತೆಗೆದುಕೊಳ್ಳುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಕಳಂಕಿತರನ್ನು ರಕ್ಷಿಸಬೇಕಿತ್ತು ಎನ್ನುವ ಜನರನ್ನು ತುಂಬಾ ಜಾಗರೂಕರಾಗಿ ನೋಡಿ. ಇವರು ಕಳಂಕಿತರಿಗಿಂತಲೂ ಅಪಾಯಕಾರಿಗಳು.

ರಾಹುಲ್ ಮತ್ತು ಅಧ್ಯಾದೇಶ : ಯಾರ ಮೌನಕ್ಕೆ ಯಾವ ಅರ್ಥ?


– ಚಿದಂಬರ ಬೈಕಂಪಾಡಿ


 

ದೇಶದ ಜನ ಅದೆಷ್ಟು ರೋಸಿ ಹೋಗಿದ್ದಾರೆ ಎನ್ನುವುದಕ್ಕೆ ಕಳಂಕಿತರನ್ನು ರಕ್ಷಿಸುವ ಉದ್ದೇಶದಿಂದ ಯುಪಿಎ ಸರ್ಕಾರ ಅಧ್ಯಾದೇಶ ಜಾರಿಗೆ ತಂದಾಗ ವ್ಯಕ್ತವಾದ ಪ್ರತಿಕ್ರಿಯೆಗಳೇ ಸಾಕ್ಷಿ. ಸದಾ ಮಗುಮ್ಮಾಗಿರುವ ದೇಶದ ಪ್ರಧಾನಿ ಕೂಡಾ ಒಂದು ಕ್ಷಣಕ್ಕೆ ಸೆಟೆದಂತೆ ಕಂಡು ಬಂದರು. ಅದಕ್ಕೆ rahul-gandhi-ordinanceರಾಹುಲ್ ಹರಿಹಾಯ್ದದ್ದೇ ಕಾರಣ. ಬೇರೆ ಯಾರಾದರೂ ಅದ್ಯಾದೇಶವನ್ನು ಹರಿದು ಹಾಕಲು ಲಾಯಕ್ಕು ಎಂದಿದರೆ ಪ್ರಧಾನಿ ಗಡ್ಡದ ಮರೆಯಲ್ಲಿ ನಕ್ಕು ಹಗುರಾಗುತ್ತಿದ್ದರೇನೋ?

ರಾಹುಲ್ ಸರ್ಕಾರದ ಅಧ್ಯಾದೇಶ ಹೊರಬೀಳುವ ತನಕವೂ ಸುಮ್ಮನಿದ್ದು ಕಾಂಗ್ರೆಸ್ ಪಕ್ಷದ ನಾಯಕನಾಗಿ ಚೀರಾಡಿರುವುದನ್ನು ಬುದ್ಧುವಂತಿಕೆ ಅನ್ನಿ, ದಡ್ಡತನ ಅಂತಾದರೂ ಕರೆಯಿರಿ, ಆದರೆ ಕಳಂಕಿತರನ್ನು ರಕ್ಷಿಸುವ ಪ್ರಕ್ರಿಯೆಗೆ ತಡೆಬಿತ್ತು ಎನ್ನಲು ಅಡಿಯಿಲ್ಲ. ಯಾಕೆಂದರೆ ರಾಹುಲ್ ಅವರನ್ನು ಹೀರೋ ಎಂದಾಕ್ಷಣ ಕೆಲವರು ಮೈಮೇಲೆ ದೆವ್ವ ಬಂದಂತೆ ಪ್ರತಿಕ್ರಿಯಿಸಿ ತಮ್ಮ ಒಂದು ಸಾಲಿನ ಅನಿಸಿಕೆ ಮೂಲಕ ಘನಂಧಾರಿ ಚಿಂತಕರೆನಿಸಿಕೊಳ್ಳುತ್ತಾರೆ. ಆದರೆ ತಮ್ಮ ಪ್ರತಿಕ್ರಿಯೆ ವಿದೂಷಕ ಹಾಸ್ಯಕ್ಕಿಂತಲೂ ಕನಿಷ್ಠದ್ದು ಎನ್ನುವ ಅರಿವಿಯೇ ಇಲ್ಲ ಎನ್ನುವುದು ಮಾತ್ರ ವಾಸ್ತವ.

ರಾಹುಲ್ ಯಾಕೆ ಸರ್ಕಾರದ ವಿರುದ್ಧ ಹರಿಹಾಯ್ದರು ಎನ್ನುವುದನ್ನು ತಮ್ಮ ವಿವೇಚನೆ ಮೂಲಕ ಮತ್ತಷ್ಟು ಒಳನೋಟ ಕೊಡುವ ಬುದ್ಧಿವಂತಿಕೆ ತೋರಿಸಿದರೆ ಸಾಮಾಜಿಕ ತಾಣಗಳಲ್ಲಿ ಬರುವ ಬರಹಗಳಿಗೂ ಹೆಚ್ಚು ಅರ್ಥಬರುತ್ತದೆ.

ಒಂದು ವೇಳೆ ರಾಹುಲ್ ಗಾಂಧಿ ಮೌನವಾಗಿರುತ್ತಿದ್ದರೆ ಇಷ್ಟುಹೊತ್ತಿಗೆ ಅಧ್ಯಾದೇಶದ ಪ್ರಯೋಜನವನ್ನು ಕಳಂಕಿತರು ಪಡೆದುಕೊಳ್ಳುತ್ತಿರಲಿಲ್ಲವೇ ಎನ್ನುವುದು ಮುಖ್ಯವೇ ಹೊರತು ಅವರ ನಡೆಯಲ್ಲಿ ಬುದ್ಧಿವಂತಿಕೆಯೋ, ಕುಟಿಲ ತಂತ್ರವೋ ಎನ್ನುವುದು ಚರ್ಚೆಗೆ ಸೂಕ್ತವಾದ ವಿಚಾರ. ಕಳಂಕಿತರು ಎನ್ನುವ ಪದಕ್ಕೇ ಸರಿಯಾದ ವಿವರಣೆ ಇನ್ನೂ ಸಿಕ್ಕಿಲ್ಲ. lalu_prasad_yadavಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ಉಲ್ಲೇಖಿಸಿರುವ ಅಂಶಳನ್ನು ಮಾತ್ರ ಪ್ರಸ್ತಾಪಿಸಿ ಹೇಳುವುದಾದರೆ ಸಧ್ಯಕ್ಕೆ ಸಮಾಧಾನಪಟ್ಟುಕೊಳ್ಳಬಹುದು.

ಸಂಸತ್ ಸದಸ್ಯರಾಗಿ, ಶಾಸಕರಾಗಿ ಒಂದು ಅವಧಿ ಮುಗಿಸುವಷ್ಟರಲ್ಲಿ ಅವರ ಆದಾಯದ ಮೂಲಗಳಲ್ಲಿ ಹಲವು ಟಿಸಿಲುಗಳು ಕಾಣಿಸಿಕೊಂಡು ಬಿಡುತ್ತವೆ. ಚುನಾವಣೆ ಕಾಲದಲ್ಲಿ ಘೋಷಣೆ ಮಾಡಿದ್ದ ಒಟ್ಟು ಸಂಪತ್ತಿನ ಗಾತ್ರ ಮೂರು ಪಟ್ಟಾಗಿರುತ್ತದೆ. ಇದು ಹೇಗೆ ಸಾಧ್ಯವಾಗುತ್ತದೆ ಎನ್ನುವ ಮೂಲವನ್ನು ಶೋಧಿಸಿದರೆ ಭ್ರಷ್ಟಾಚಾರದ ವಾಸನೆ ಮೂಗಿಗೆ ಬಡಿಯದೆ ಇರಲಾರದು. ಕ್ರಿಮಿನಲ್ ಎನ್ನುವುದೂ ಕೂಡಾ ಈಗಿನ ರಾಜಕಾರಣದಲ್ಲಿ ತೀರಾ ಸಹಜ ಎನ್ನುವಂತಾಗಿದೆ. ಈಗಿನ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಹಣ ಹೊಂದಿಸಿಕೊಳ್ಳುವುದು ಕಷ್ಟದ ಕೆಲಸ ಎನ್ನುವ ಅಭಿಪ್ರಾಯ ಕೊಡುವ ರಾಜಕಾರಣಿಗಳೂ ಇದ್ದಾರೆ. ಅವರ ಮನಸ್ಥಿತಿಯನ್ನು ತಳ್ಳಿಹಾಕುವಂತಿಲ್ಲ. ಚುನಾವಣಾ ಆಯೋಗ ಕೈಗೊಳ್ಳುವ ಕಠಿಣ ಕಣ್ಗಾವಲಿನ ಹೊರತಾಗಿಯೂ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುವುದು ಕಣದಲ್ಲಿದ್ದವರಿಗೆ ಅನಿವಾರ್ಯ ಹಾಗೂ ಅವರು ಅಂಥ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಾರೆ. ಹಣ ಖರ್ಚು ಮಾಡುವ ವಿಚಾರದಲ್ಲಿ ಯಾವುದೇ ರಾಜಕೀಯ ಪಕ್ಷ ಹಿಂದೆ ಬೀಳುವುದು ಈಗಿನ ಚುನಾವಣೆ ವ್ಯವಸ್ಥೆಯಲ್ಲಿ ಅಸಾಧ್ಯ ಎನ್ನುವುದನ್ನು ನಿರಾಕರಿಸುವಿರಾ?

ರಾಜಕೀಯ ಸಮಾಜ ಸೇವೆಗೆ ಎನ್ನುವ ಕಾಲ ಇದಲ್ಲ. ಬಹುತೇಕ ಮಂದಿಗೆ ರಾಜಕೀಯ ಒಂದು ವೃತ್ತಿ, ಅದುವೇ ಅವರ ಉದ್ಯೋಗವಾಗಿದೆ. ಸಾಮಾಜಿಕವಾಗಿ, ರಾಜಕೀಯವಾಗಿ ಹೊಸ ವ್ಯವಸ್ಥೆಯನ್ನು ಹುಟ್ಟು ಹಾಕಲು ಮುಂದಾದ ಅಣ್ಣಾ ಹಜಾರೆ ಕೂಡಾ ಕೆಲವೇ ತಿಂಗಳುಗಳಲ್ಲಿ ಹತಾಶರಾದರು ಯಾಕೆ? ಅಣ್ಣಾ ಅವರ ಯೋಚನೆ, ಚಿಂತನೆ, ಸೈದ್ಧಾಂತಿಕ ನಿಲುವು ಛಿದ್ರವಾಗುವುದಕ್ಕೆ ಕಾರಣಗಳು ಹಲವು. ಬಾಬಾ ರಾಮ್‌ದೇವ್ ಅಣ್ಣಾ ಅವರ ಜೊತೆ ಕೈಜೋಡಿಸಲು ಮುಂದಾದಾಗ ಏನಾಯಿತು? ಪರಸ್ಪರ ಅಪನಂಬಿಕೆ, ಗುಮಾನಿಯಿಂದ ನೋಡುವ ಸನ್ನಿವೇಶ ನಿರ್ಮಾಣವಾಯಿತು.

ಭ್ರಷ್ಟಾಚಾರವನ್ನು ತೊಡೆದು ಹಾಕುವುದು, ಕ್ರಿಮಿನಲ್‌ಗಳನ್ನು ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಪ್ರತ್ಯೇಕಿಸುವುದು rasheed-masood-first-lawmaker-to-be-disqualified-from-parliamentಸುಲಭದ ಕೆಲಸವಲ್ಲ ಎನ್ನುವುದು ನನ್ನ ಅನಿಸಿಕೆ. ಇದಕ್ಕೆ ನನಗಿರುವ ಮಿತಿಯೂ ಕಾರಣವಿರಬಹುದು ಅಥವಾ ಬೌದ್ಧಿಕವಾಗಿ ಆಸ್ಥಾನ ಪಂಡಿತರಿಗೆ ಇರುವ ಚಾಣಾಕ್ಷತೆಯ ಕೊರತೆಯೂ ಇರಬಹುದು. ಆದರೆ ಅನಿಸಿಕೆ ಹೇಳಿಕೊಳ್ಳಲು ಸರ್ವ ಸ್ವತಂತ್ರ ಎನ್ನುವುದನ್ನು ಬೇರೆಯವರು ಹೇಳಬೇಕಾಗಿಲ್ಲ.

ಈ ಮಾತು ರಾಹುಲ್ ಗಾಂಧಿ ಅವರ ನಡೆಯ ಬಗ್ಗೆ ನಾನು ಹೇಳುವ ಮಾತಿಗೂ ಅನ್ವಯಿಸುತ್ತದೆ. ರಾಹುಲ್ ಗಾಂಧಿ ಈ ದೇಶದ ಮಹಾನ್ ನಾಯಕರ ವ್ಯಕ್ತಿತ್ವಕ್ಕೆ ಸರಿಸಮಾನ ಎನ್ನುವಷ್ಟು ಮೂರ್ಖತನವನ್ನು ಯಾರೂ ಪ್ರದರ್ಶಿಸಬಾರದು. ಆದರೆ ರಾಜಕೀಯವಾಗಿ ಅವರ ಇಂಥ ನಡೆಗಳನ್ನು ಒಪ್ಪಿಕೊಳ್ಳಲೇಬೇಕು ಎನ್ನುವುದಾಗಲೀ, ಅದನ್ನು ಚರ್ಚೆಗೆ ಒಳಪಡಿಸಬಾರದು ಎನ್ನುವುದಾಗಲೀ ಸರಿಯಲ್ಲ. ಅಧ್ಯಾದೇಶವನ್ನು ತಿರಸ್ಕರಿಸಲಾಗದೇ, ಒಪ್ಪಿಕೊಳ್ಳುವುದಕ್ಕೂ ಆಗದೆ ಸಂಕಟಪಟ್ಟುಕೊಳ್ಳುತ್ತಿದ್ದ ರಾಜಕೀಯ ನಾಯಕರನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?

ಅಧ್ಯಾದೇಶ ಸರ್ಕಾರದ ನಿಲುವು, ರಾಹುಲ್ ಗಾಂಧಿ ಅವರ ಅನಿಸಿಕೆ ಪಕ್ಷದ್ದು ಎನ್ನುವ ಮೂಲಕ ಎರಡನ್ನೂ ಪ್ರತೇಕಿಸುವ ಈಗಿನ ಪ್ರಯತ್ನವನ್ನು ಬುದ್ಧಿವಂತರು ಚರ್ಚಿಸಬೇಕಾಗಿದೆ.

ರಾಹುಲ್ ಹೊರತಾಗಿ ಬೇರೆ ಯಾರೇ ಆದರೂ ಅಧ್ಯಾದೇಶದ ವಿರುದ್ಧ ಧ್ವನಿಎತ್ತಿದ್ದರೆ ಇಷ್ಟು ಹೊತ್ತಿಗೆ ಅವರ ಸ್ಥಿತಿ ಏನಾಗುತ್ತಿತ್ತು ಕಾಂಗ್ರೆಸ್ ಪಕ್ಷದಲ್ಲಿ? ಅಥವಾ ಯುಪಿಎ ಸರ್ಕಾರದಲ್ಲಿ? ಪಕ್ಷ ಮತ್ತು ಸರ್ಕಾರ ಎರಡರಲ್ಲೂ ರಾಹುಲ್ ಗಾಂಧಿಗೆ ಹಿಡಿತವಿದೆ ಎನ್ನುವುದು ಅಪರಾಧವಲ್ಲ. ಪ್ರತಿಪಕ್ಷಗಳು ಧ್ವನಿ ಎತ್ತಿದ್ದರೂ ಯುಪಿಎ ಸರ್ಕಾರ ತನ್ನ ನಿಲುವು ಸಡಿಲಿಸುತ್ತಿತ್ತು ಎನ್ನಲಾಗದು. ಅಂಥ ಧ್ವನಿ ದುರಾದೃಷ್ಟಕ್ಕೆ ಪ್ರತಿಪಕ್ಷಗಳಿಂದ ಕೇಳಿಬರಲಿಲ್ಲ. ಹಾಗಾದರೆ ಈ ಮೌನದ ಅರ್ಥವೇನು?

ಕಳಂಕಿತರನ್ನು ರಕ್ಷಿಸುವಂಥ ಅಧ್ಯಾದೇಶವನ್ನು ಕಸದ ಬುಟ್ಟಿಗೆ ಹಾಕಿಸುವುದಕ್ಕೆ ಯಾರ ಪಾತ್ರ ಎಷ್ಟು ಎನ್ನುವುದನ್ನು ಚರ್ಚಿಸಲು ಇದು ಸಕಾಲವಲ್ಲವೇ?

ಗಾಂಧಿ ಜಯಂತಿ ಕಥಾ ಸ್ಪರ್ಧೆ – ಫಲಿತಾಂಶ ವಿಳಂಬವಾಗುತ್ತಿದೆ. ಕ್ಷಮೆ ಇರಲಿ…

ಸ್ನೇಹಿತರೇ,
katha-sprade-2013
ಕೆಲವು ತಾಂತ್ರಿಕ ಕಾರಣಗಳಿಗಾಗಿ ಮತ್ತು ಸೂಕ್ತ ಸಮಯದಲ್ಲಿ ನಮ್ಮ ತೀರ್ಪುಗಾರರಿಗೆ ಮುದ್ರಿತ ಕತೆಗಳನ್ನು ತಲುಪಿಸಲಾಗದ ನನ್ನ ಅಶಕ್ತತೆಯ ಕಾರಣವಾಗಿ ಗಾಂಧಿ ಜಯಂತಿ ಕಥಾ ಸ್ಪರ್ಧೆ – 2013 ರ ಫಲಿತಾಂಶ ಎರಡು-ಮೂರು ದಿನಗಳು ತಡವಾಗಲಿದೆ. ಇದಕ್ಕಾಗಿ ಕ್ಷಮೆ ಯಾಚಿಸುತ್ತ ತೀವ್ರ ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ಆದಷ್ಟು ಈ ವಾರಾಂತ್ಯ ಮುಗಿಯುವುದರೊಳಗೆ ಫಲಿತಾಂಶ ಪ್ರಕಟಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಲೇಖಕರು ಮತ್ತು ಓದುಗರು ಸಹಕರಿಸಬೇಕೆಂದು ಕೋರುತ್ತೇನೆ.

ನಮಸ್ಕಾರ,
ರವಿ ಕೃಷ್ಣಾರೆಡ್ದಿ
ವರ್ತಮಾನ.ಕಾಮ್

ಜೈಲಿನಲ್ಲಿ ಮಾಜಿ ಮುಖ್ಯಮಂತ್ರಿಗಳು – ಸಂಪೂರ್ಣ ಪತನದಿಂದ ಹಿಂದೆ ಸರಿಯುತ್ತಿರುವ ಭಾರತ


– ರವಿ ಕೃಷ್ಣಾರೆಡ್ದಿ


 

ಹದಿನೇಳು ವರ್ಷಗಳ ಹಿಂದೆ ಬಯಲಿಗೆ ಬಂದ ಹಗರಣ. ಈಗ ಶಿಕ್ಷೆಯಾಗುತ್ತಿದೆ. ಓಮ್ ಪ್ರಕಾಶ್ ಚೌತಾಲ, ಲಾಲೂ ಪ್ರಸಾದ್ ಯಾದವ್; ದೇಶದ ಎರಡು ಮಾಜಿ ಮುಖ್ಯಮಂತ್ರಿಗಳು ಈಗ ಜೈಲಿನಲ್ಲಿದ್ದಾರೆ. ಜಗನ್ನಾಥ್ ಮಿಶ್ರಾ; ಮೂರನೆಯ ಮಾಜಿ ಆಸ್ಪತ್ರೆ-ಆರೋಗ್ಯ ಎಂದು ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ. ತಾವು ಎಂತಹವರನ್ನು ಆರಿಸಿ ಕಳುಹಿಸುತ್ತಿದ್ದೇವೆ ಎಂದು ಜನ ಗಂಭೀರವಾಗಿ lalu_prasad_yadavಯೋಚಿಸಲು ಆರಂಭಿಸಿ ದಶಕಗಳೇ ಆಗಬೇಕಿತ್ತು. ಆಗಲಿಲ್ಲ. ಆಗಿದ್ದಿದ್ದರೆ ಮುಂದಿನ ದಿನಗಳಲ್ಲಿ ಜೈಲಿನ ಹೊಸ್ತಿಲಲ್ಲಿರುವ ಜಯಲಲಿತ, ಯಡ್ಡಯೂರಪ್ಪ, ಇಂತಹವರೆಲ್ಲ ಮತ್ತೊಮ್ಮೆ ಆರಿಸಿ ಬರುತ್ತಿರಲಿಲ್ಲ. ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಅನಿಲ್ ಲಾಡ್, ಶ್ರೀರಾಮುಲು, ಸಂತೋಷ್ ಲಾಡ್, ಜಗನ್ ಮೋಹನ್ ರೆಡ್ಡಿ, ಕರುಣಾನಿಧಿ ಮತ್ತವರ ಸಂತತಿ, ದೇವೇಗೌಡರ ಮನೆಯ ಒಂದಿಬ್ಬರು, ಇತ್ಯಾದಿ ಇತ್ಯಾದಿ ಅನೇಕ ಜನ ಇಂದು ಮಾಜಿಗಳಾಗಬೇಕಿತ್ತು. ಆಗಿಲ್ಲ ಎಂದುಕೊಂಡರೂ ಇದು ಹೀಗೆಯೇ ಮುಂದುವರೆಯುತ್ತದೆ ಎಂದುಕೊಳ್ಳುವುದು ಬೇಡ.

ಹಿಂದೂಸ್ಥಾನದ ಕ್ರೂರ ಮತ್ತು ಅಮಾನವೀಯ ಜಾತಿವ್ಯವಸ್ಥೆಯಲ್ಲಿ ದಲಿತ, ಹಿಂದುಳಿದ, ಬ್ರಾಹ್ಮಣೇತರ ಜಾತಿಗಳಲ್ಲಿ ಸ್ವಾಭಿಮಾನದ ಕಿಚ್ಚು ಮತ್ತು ಕೀಳರಿಮೆಯಿಲ್ಲದ ಮನೋಭಾವ ಹುಟ್ಟಿಸಿದವರು ಎನ್ನುವ ಕಾರಣಕ್ಕೆ ಲಾಲೂ ಪ್ರಸಾದ್ ಯಾದವ್, ಮಾಯಾವತಿ, ಮುಲಾಯಮ್ ಸಿಂಗ್ ಯಾದವ್, ಇನ್ನಿತರರು ಒಂದು ಸಂದರ್ಭದಲ್ಲಿ ದೇಶದಲ್ಲಿ ಸಮಾನತೆ ಬಯಸುವ, ಪ್ರಗತಿಪರ ಆಲೋಚನೆಗಳ, ಪ್ರಜಾಪ್ರಭುತ್ವವಾದಿ ಜನರಲ್ಲಿ ಹೆಮ್ಮೆ ಹುಟ್ಟಿಸಿದ್ದು ನಿಜ. ಚಳವಳಿಗಳ ಮೂಲಕ, ವೈಚಾರಿಕತೆಯ ಮೂಲಕ, ಜನಬೆಂಬಲದ ಮೂಲಕ ಅಧಿಕಾರಕ್ಕೆ ಬಂದ ಈ ಜನ ತಮ್ಮ ಮೊದಲ ಚುನಾವಣೆಗಳಲ್ಲಿ ಹಣಬಲವಿಲ್ಲದೆಯೇ ಅಧಿಕಾರಕ್ಕೆ ಬಂದವರು. ಆದರೆ, ಅಧಿಕಾರಕ್ಕೆ ಬಂದನಂತರ ತಾವು ಅಲ್ಲಿಯವರೆಗೆ ಯಾರನ್ನು ಮತ್ತು ಯಾವುದನ್ನು ವಿರೋಧಿಸುತ್ತ ಬಂದಿದ್ದರೋ ಅದನ್ನೇ ತಾವೂ ಪಾಲಿಸಲು ಆರಂಭಿಸಿದ್ದು ಅಕ್ಷಮ್ಯ. ಹಣವಿಲ್ಲದೇ ಗೆದ್ದವರು ಮುಂದಿನ ಚುನಾವಣೆಗಳಲ್ಲಿ ಗೆಲ್ಲಲು ಮತ್ತು ತಮ್ಮ ವೈಯಕ್ತಿಕ ಆಸ್ತಿ ಹೆಚ್ಚಿಸಿಕೊಳ್ಳಲು ಅಧಿಕಾರ ದುರುಪಯೋಗಕ್ಕೆ ಮತ್ತು jds-kumaraswamy-anita-devegowdaಭ್ರಷ್ಟಾಚಾರಕ್ಕೆ ಇಳಿದಿದ್ದು ಅವರ ವೈಯಕ್ತಿಕ ಪತನ ಮಾತ್ರವಲ್ಲ, ದೇಶ ಮುಂದುವರೆಯಲು ಮತ್ತು ಬದಲಾಗಲು ಇದ್ದ ಅತ್ಯುತ್ತಮ ಅವಕಾಶವನ್ನು ಕಳೆದುಹಾಕಿದ ದೌರ್ಭಾಗ್ಯ ಸಹ. ಈ ಕಾರಣಕ್ಕೆ ಅವರು ತಮ್ಮ ಮೇಲಿರುವ ಮೊಕದ್ದಮೆಗಳ ಕಾರಣವಾಗಿ ಕಾನೂನಿನ ಪ್ರಕಾರವೇ ಅಪರಾಧಿಗಳು ಮಾತ್ರವಲ್ಲ, ದೇಶದ ನೈತಿಕತೆಯ ದೃಷ್ಟಿಯಿಂದಲೂ ಅಪರಾಧಿಗಳು.

ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ದೇಶದ ಬಹುತೇಕ ಜಾತಿವಾದಿ ಮನಸ್ಸುಗಳು ತಮ್ಮ ಜಾತಿಯ ರಾಜಕೀಯ ನಾಯಕರನ್ನಾಗಿ ಆರಿಸಿಕೊಂಡಿರುವ ಜನರ ಹೆಸರು ಕೇಳಿದರೆ ವಾಕರಿಕೆ ಬರುತ್ತದೆ. ತಮ್ಮದೇ ಆದ ಪರಿವಾರ ಮತ್ತು ಸಾಮ್ರಾಜ್ಯವನ್ನು ಕಟ್ಟಿದ, ಪಕ್ಷವನ್ನು ತಮ್ಮ ಮನೆಯ ಆಸ್ತಿ ಮಾಡಿಕೊಂಡಿರುವ ದೇವೇಗೌಡರು ಒಕ್ಕಲಿಗರ ನಾಯಕ. ಕರ್ನಾಟಕ ಕಂಡರಿಯದ ಭ್ರಷ್ಟಾಚಾರ ಎಸಗಿ ವಿಚಾರಣಾಧೀನ ಕೈದಿಯಾಗಿಯೂ ಇದ್ದುಬಂದ ಯಡ್ಡಯೂರಪ್ಪ ಲಿಂಗಾಯತರ ನಾಯಕ. ನ್ಯಾಯ ಮತ್ತು ನೀತಿಯ ಪರಿಜ್ಞಾನಗಳಿರದಿದ್ದ, ಮದತುಂಬಿದ ಮಾತುಗಳನ್ನಾಡುತ್ತಿದ್ದ ಜನಾರ್ಧನ ರೆಡ್ಡಿ ರೆಡ್ಡಿಗಳ ನಾಯಕ. ಪಕ್ಕದ ಆಂಧ್ರದಲ್ಲಿ ಬಹುಶಃ ಇಡೀ ದೇಶದಲ್ಲಿ ಯಾವೊಬ್ಬ ರಾಜಕಾರಣಿಯೂ ಮಾಡದಷ್ಟು ಅಧಿಕಾರ ದುರುಪಯೋಗ ಮಾಡಿಕೊಂಡು YS-Jagan-Mohan-Reddy-in-Jailಹತ್ತಾರು ಸಾವಿರ ಕೋಟಿ ರೂಪಾಯಿಗಳ ಆಸ್ತಿ ಮಾಡಿದ ಜಗನ್ ಮೋಹನ್ ರೆಡ್ಡಿ ರೆಡ್ಡಿಗಳ ಪರಮೋಚ್ಚ ನಾಯಕ. ತನ್ನ ಅಧಿಕಾರಾವಧಿಯಲ್ಲಿ ಸಾವಿರಾರು ಕೋಟಿ ಆಸ್ತಿ ಮಾಡಿದ ಆರೋಪಗಳಿರುವ ಚಂದ್ರಬಾಬು ನಾಯ್ಡು ಕಮ್ಮರ ನಾಯಕ. ಉತ್ತರದಲ್ಲಿ ಪ್ರಜಾಪ್ರಭುತ್ವ ಎಂದರೆ ನನ್ನ ಮನೆಯ ವಂಶಪಾರಂಪರ್ಯ ಆಡಳಿತ ಎನ್ನುವ ಮುಲಾಯಮ್, ಲಾಲೂ, ಯಾದವರ ನಾಯಕರು ಮತ್ತು ಸಾಬೀತಾದ ಭ್ರಷ್ಟರು. ಮರಾಠರ ನಾಯಕ ಪವಾರ್. ಹೀಗೆ, ಯಾವುದೇ ರಾಜ್ಯಕ್ಕೆ ಹೋಗಿ ಅಲ್ಲಿಯ ಬಲಿಷ್ಟ ಜಾತಿಗಳ ನಾಯಕರನ್ನು ನೋಡಿ, ದುಷ್ಟರು, ಭ್ರಷ್ಟರು, ಕಿಡಿಗೇಡಿಗಳು, ಅಪ್ರಬುದ್ಧರು, ಅನಾಗರೀಕರೇ ಆಯಾಯ ಜಾತಿಗಳ ಬಲಿಷ್ಟ ನಾಯಕರಾಗಿದ್ದಾರೆ. ಮೂರ್ನಾಲ್ಕು ದಶಕಗಳ ಹಿಂದೆ ಹೀಗೆ ಇರಲಿಲ್ಲ. ತಮ್ಮ ಜಾತಿಯ ಬಗ್ಗೆ ಹೇಳಬಹುದಾದ/ಹೇಳಿಕೊಳ್ಳಲಾಗದ ಕಾರಣಕ್ಕೆ ಒಲವಿದ್ದ, ನಿಷ್ಠೆಯಿದ್ದ ಜನ ಆದಷ್ಟು ಒಳ್ಳೆಯವರನ್ನು, ಸಜ್ಜನರನ್ನು ತಮ್ಮ ಜಾತಿ-ನಾಯಕನನ್ನಾಗಿ ಒಪ್ಪಿಕೊಳ್ಳುತ್ತಿದ್ದರು.

ಐನ್ ರ್‍ಯಾಂಡ್ ಎನ್ನುವ ಅಮೆರಿಕದ ಲೇಖಕಿ 1957 ರಲ್ಲಿ ಹೀಗೆ ಹೇಳುತ್ತಾಳೆ: “ಯಾವಾಗ ನೀವು ಉತ್ಪಾದನೆ ಮಾಡಲು ಏನನ್ನೂ ಉತ್ಪಾದಿಸದ ಜನರಿಂದ ಒಪ್ಪಿಗೆ ಪಡೆಯಬೇಕಿದೆಯೋ, ಯಾವಾಗ ಹಣವು ವಸ್ತುಗಳ ಮಾರಾಟಗಾರರಿಗೆ ಬದಲಾಗಿ ಅನೈತಿಕವಾಗಿ ಅನುಗ್ರಹಗಳನ್ನು ಮಾರಾಟಮಾಡುವವರತ್ತ ಹರಿಯುತ್ತದೆಯೋ, Ayn-Randಯಾವಾಗ ಜನ ತಮ್ಮ ದುಡಿಮೆಗೆ ಬದಲಾಗಿ ಲಂಚ ಮತ್ತು ತಮಗಿರುವ ಪ್ರಭಾವದ ಕಾರಣಕ್ಕಾಗಿ ಶ್ರೀಮಂತರಾಗುತ್ತಾರೋ, ಮತ್ತು ಯಾವಾಗ ನಿಮ್ಮ ಕಾನೂನುಗಳು ನಿಮ್ಮನ್ನು ಅಂತಹವರಿಂದ ರಕ್ಷಿಸುವುದಿಲ್ಲವೋ. ಮತ್ತು ಅದೇ ಕಾನೂನುಗಳು ಅವರನ್ನು ನಿಮ್ಮಿಂದ ರಕ್ಷಿಸುತ್ತವೆಯೋ, ಯಾವಾಗ ಭ್ರಷ್ಟಾಚಾರಕ್ಕೆ ಪುರಸ್ಕಾರಗಳು ದೊರೆತು ಪ್ರಾಮಾಣಿಕತೆ ಎನ್ನುವುದು ತನ್ನನ್ನೇ ತಾನು ಹಾಳುಮಾಡಿಕೊಳ್ಳುವುದು ಎಂದು ತೋರುತ್ತದೋ, ಅಂದು ಆ ನಿಮ್ಮ ಸಮಾಜ ಪತನವಾಗುತ್ತಿದೆ ಎನ್ನುವುದು ನಿಮಗೆ ಗೊತ್ತಿರಲಿ.”

ನಮ್ಮ ಸಮಾಜ ಪತನದತ್ತ ಬಿರುಸಿನಿಂದ ನಡೆಯಲು ಆರಂಭಿಸಿ ದಶಕಗಳೇ ಆಗಿವೆ. ಆದರೆ, ಕಳೆದ ಎರಡು ಮೂರು ವರ್ಷಗಳಿಂದ ದೇಶದಲ್ಲಿ ನಡೆಯುತ್ತಿರುವ ಅನೇಕ ಪರ್ಯಾಯ ವಿದ್ಯಮಾನಗಳು ಅದನ್ನು ಸಂಪೂರ್ಣ ಪತನದಿಂದ ತಡೆಯಲು ಪ್ರಯತ್ನಿಸುವ ಹೋರಾಟಗಳಾಗಿವೆ. ಬುದ್ಧ, ಬಸವಣ್ಣ, ಗಾಂಧಿ, ಪಟೇಲ್, ಅಂಬೇಡ್ಕರ್, ನೆಹರೂ, ಲೋಹಿಯಾ, ಜಯಪ್ರಕಾಶ್ ನಾರಾಯಣರ ಈ ದೇಶ ಅಷ್ಟು ಸುಲಭವಾಗಿ ಕುಬ್ಜತೆಗೆ ಮಂಡಿಯೂರದು. ದಮನಿಸಲಾಗದ ಆತ್ಮಸ್ಥೈರ್ಯ ಈ ದೇಶವನ್ನು ಸಹಸ್ರಾರು ವರ್ಷಗಳಿಂದ ಮಾನವನ ಸಾಮಾಜಿಕ ವಿಕಾಸದ ಯಾತ್ರೆಯಲ್ಲಿ ಬಹುದೊಡ್ಡ ಭಾಗವಾಗುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಬರುವ ಮತ್ತು ಬದಲಾಗುವ ಕಾನೂನುಗಳು, ಜೈಲಿಗೆ ಹೋಗುವ ದುಷ್ಟರು, ಒಳ್ಳೆಯದರ ಪರ ನಿಲ್ಲುವ ಮನುಷ್ಯನ ಮೂಲಭೂತ ಮನಸ್ಥಿತಿ, ಈ ದೇಶ ಪತನದಿಂದ ಸಂಪೂರ್ಣ ವಿರುದ್ಧ ದಿಕ್ಕಿಗೆ ತಿರುಗುವಂತೆ ಮಾಡುತ್ತವೆ. ದೇಶದ ಆರ್ಥಿಕ ಮತ್ತು ಸಾಮಾಜಿಕ ಚಲನೆ ರಾಜಕೀಯವನ್ನೂ ಮೇಲೆತ್ತಲಿದೆ. ಒಂದು ಸಂಪೂರ್ಣ ನೈತಿಕ ಕ್ರಾಂತಿಗೆ ದೇಶ ಮುಂದಾಗಲಿದೆ.

ಇಂದು ವಾಸ್ತವ ಏನೇ ಇರಲಿ, ಭಾರತದ ಭವಿಷ್ಯದ ಬಗ್ಗೆ ನನ್ನದೊಂದು ಭವಿಷ್ಯವಿದೆ. ಇವತ್ತು ಯಾರೇ ಮೆರೆಯುತ್ತಿರಲಿ, ಇನ್ನು ಹತ್ತು ವರ್ಷಗಳಿಗೆಲ್ಲ ಜೈಲಿಗೆ ಹೋಗಿಬಂದ ನಾಯಕರುಗಳು ಮತ್ತು ಅವರ ಪರಿವಾರವನ್ನು, ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಮೊಕದ್ದಮೆಗಳಿರುವ ಜನಪ್ರತಿನಿಧಿಗಳು ಮತ್ತವರ ಪರಿವಾರವನ್ನು ಜನ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸುತ್ತಾರೆ. ಇಡೀ ಸಮಾಜ ಆ ನಿಲುವಿನತ್ತ ವಿಕಾಸವಾಗುತ್ತಿದೆ. ಮುಂದೆಯೂ ಹೀಗೆಯೆ ಎಂದುಕೊಂಡ ಭ್ರಷ್ಟರು ಮತ್ತು ದುಷ್ಟರಿಗೆ ಭವಿಷ್ಯ ಭಯಾನಕವಾಗಿರುತ್ತದೆ. ಆದರೆ, ಅವರ ಸ್ಥಾನಗಳಿಗೆ ಬರುವವರು ಒಳ್ಳೆಯವರಷ್ಟೇ ಅಲ್ಲ, ಸಮರ್ಥರೂ ಆಗಿರುವಂತೆ ನೋಡಿಕೊಳ್ಳುವುದೇ ನಮ್ಮ ಆಗಿನ ಸವಾಲು.