ಬುರ್ಖಾದೊಳಗಿನ ಅವಳ ಮೌನಕ್ಕೆ ಧ್ವನಿಯಾದಾಗ…


-ಇರ್ಷಾದ್


 

 

 

“ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಂಗಳೂರಿನಲ್ಲಿ  ’ಬಾಡೂಟದ ಜೊತೆಗೆ ಗಾಂಧೀ ಜಯಂತಿ’ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಮಾತನಾಡುತ್ತಾbasheer-book-release-dinesh-1 “ ಬುರ್ಖಾ ಬೇಕೋ ಬೇಡವೋ ಎಂದು 25 ರಿಂದ 30 ವರ್ಷದೊಳಗಿನ ಮುಸ್ಲಿಮ್ ಮಹಿಳೆಯರ ರಹಸ್ಯ ಮತದಾನ ಮಾಡಿದ್ದಲ್ಲಿ ಬಹುಸಂಖ್ಯಾತ ಮಹಿಳೆಯರು ಬುರ್ಖಾ ಬೇಡ ಎನ್ನಬಹುದು. ಪಾಪ ಬಹಿರಂಗವಾಗಿ ಅವರಿಗೆ ಬುರ್ಖಾವನ್ನು ವಿರೋಧಿಸಲು ಧೈರ್ಯವಿಲ್ಲದಿರಬಹುದು” ಅಂದಿದ್ದಾರೆ. ಅಮೀನ್ ಮಟ್ಟು ಅವರ ಈ ಮಾತುಗಳನ್ನು ದಿನಪತ್ರಿಕೆಗಳಲ್ಲಿ ಓದಿದಾಗ ನನ್ನ ಒಳ ಮನಸ್ಸಿನ ಮೂಲೆಯಲ್ಲಿ ಆಸೆಯೊಂದು ಚಿಗುರಿತು. ಬುರ್ಖಾ ಬೇಕೋ ಬೇಡವೋ ಎಂಬ ರಹಸ್ಯ ಮತದಾನದಲ್ಲಿ ನನ್ನ ಮತವನ್ನು ಹಾಕುವ ಹಂಬಲ ಮನದಲ್ಲಿ ಮೂಡಿತು. ತಕ್ಷಣ ಮನೆಯ ತೆರದಿದ್ದ ಕಪಾಟಿನ್ನು ನೋಡಿದಾಗ ಅಲ್ಲಿ ತೂಗು ಹಾಕಿದ್ದ ಕಪ್ಪು ಬಣ್ಣದ ಬುರ್ಖಾ ನನ್ನನ್ನೇ ದಿಟ್ಟಿಸುವಂತೆ ನನಗೆ ಭಾಸವಾಯಿತು. ಎರಡು ತಿಂಗಳ ಹಿಂದೆಯಷ್ಟೇ ಉಪವಾಸ ಹಿಡಿದು ಈದ್ ಉಲ್ ಫಿತರ್ ಹಬ್ಬ ಆಚರಿಸಿದ್ದೆವು. ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಹಬ್ಬಕ್ಕೆ ಮಂಗಳೂರಿನ ಪೇಟೆಗೆ ಹೊಸ ಬಟ್ಟೆ ಖರೀದಿ ಮಾಡಲು ಅಪ್ಪ ಅಮ್ಮನ ಜೊತೆ ಹೋಗಿದ್ದೆ. ನನ್ನ ತಮ್ಮನಿಗಿಂತ ಹೆಚ್ಚು ಬೆಳೆಬಾಳುವ ಸಲ್ವಾರ್ ನನಗೆ ಖರೀದಿಸಲು ಅಪ್ಪ ಅಮ್ಮ ಮುಂದಾದರು. ಅವರ ಪ್ರೀತಿಯ ಮಗಳು ಚೆನ್ನಾಗಿ ಕಾಣಬೇಕು, ಖುಷಿಯಾಗಿ ಇರಬೇಕು ಎಂಬ ಬಯಕೆ ಅವರದ್ದು. ನಾನು ಹೇಳಿದೆ ಅಮ್ಮಾ ನನಗೆ ಈ ಬೆಳೆಬಾಳುವ ಸಲ್ವಾರ್ ಗಿಂತ ಬೇರೆ ಬಣ್ಣದ ಬುರ್ಖಾ ಖರೀದಿಸಿ ಕೊಡು. ಈ ಸುಡು ಬಿಸಿಲಿಗೆ ಕಪ್ಪು ಬಣ್ಣದ ಬುರ್ಖಾ ತೊಟ್ಟು ಸಾಕಾಗಿದೆ. ಅಮ್ಮ ನನ್ನ ಮುಖವನ್ನು ನೋಡಿ ಒಮ್ಮ ನಕ್ಕು ಸುಮ್ಮನಾದರು. ಆಮ್ಮನ ಆ ನಗುವಿನಲ್ಲಿ ಎಲ್ಲ ಅರ್ಥವೂ ತುಂಬಿಕೊಂಡಿತ್ತು. ನಾನು ಸುಮ್ಮನಾದೆ.

ಮರುದಿನ ಮನೆಯಲ್ಲಿ ಹಬ್ಬ. ತನ್ನ ಸಹೋದರ ರಿಜ್ವಾನ್ ಗೆ ಸಂಭ್ರವೋ ಸಂಭ್ರಮ. ಹೊಸ ಬಟ್ಟೆ ತೊಟ್ಟು ಎಲ್ಲಾ ಗೆಳೆಯರಿಗೂ ತೋರಿಸಿ ಸ್ನೇಹಿತರ ಹೊಗಳಿಕೆಯಿಂದ ಗಾಳಿಯಲ್ಲಿ ಹಾರಾಡುತ್ತಿದ್ದ. burka-girlsಅಮ್ಮ ಅಪ್ಪ ಖರೀದಿಸಿ ಕೊಟ್ಟ ಸಲ್ವಾರನ್ನು ನಾನು ತೊಟ್ಟು ನನ್ನ ಸ್ನೇಹಿತೆಯರಿಗೆ ತೋರಿಸಿ ಅವನಷ್ಟೇ ಸಂಭ್ರಮ ಪಡಬೇಕು ಎಂದು ನನ್ನ ಮನಸ್ಸೂ ಹಂಬಲಿಸುತಿತ್ತು. ಅಯ್ಯೋ ಅದು ಸಾಧ್ಯಾನಾ? ಮನೆಯ ಹೊರಗಡೆ ಹಾಗೆಲ್ಲಾ ಕಾಲಿಡುವ ಹಾಗಿಲ್ಲ ನಾನು. ಒಂದು ವೇಳೆ ಕಾಲಿಡುವುದಾದರೆ ಮತ್ತದೇ ಹಳೇ ಕಪ್ಪು ಬುರ್ಖಾ ಧರಿಸಬೇಕು. ಸ್ನೇಹಿತೆಯ ಮನೆಗೆ ಹೋದರೂ ಅಲ್ಲೂ ನೆಂಟರು. ಅವರ ಮುಂದೆ ಬುರ್ಖಾ ತೆಗೆಯುವಂತಿಲ್ಲ. ಮನೆಯ ಒಳಗಿನ ಕೋಣೆಗೆ ಹೋಗಿ ಬುರ್ಖಾ ತೆಗೆದು ನಾನು ಧರಿಸಿದ ಹೊಸ ಬಟ್ಟೆಯನ್ನು ಸ್ನೇಹಿತೆಗೆ ತೋರಿಸಿ ಖುಷಿ ಪಡುವುದಕ್ಕಿಂದ ನನ್ನನ್ನು ನಾನೇ ಕನ್ನಡಿ ಮುಂದೆ ನಿಂತು ನೋಡಿ ಖುಷಿ ಪಟ್ಟೆ. ಇನ್ನೇನು ಮುಂದಿನ ತಿಂಗಳು ಕಾಲೇಜಿನಲ್ಲಿ ನಡೆಯಲಿರುವ ಕಾಲೇಜ್ ಡೇ ಕಾರ್ಯಕ್ರಮದಲ್ಲಾದರೂ ಈ ಹೊಸ ಬಟ್ಟೆ ಧರಿಸಿ ಖುಷಿ ಪಡಬೇಕು ಎಂದೆನಿಸಿ ಸುಮ್ಮನಾದೆ. ಆದರೆ ಕಾಲೇಜ್ ಡೇ ಕಾರ್ಯಕ್ರಮದಲ್ಲಿ ಮನೆಯಿಂದ ಹೊರಡುವಾಗಲೇ ಅಮ್ಮ ಅಪ್ಪನ ಎಚ್ಚರಿಕೆಯ ಸಂದೇಶ. ಮತ್ತೆ ಈ ಕಪ್ಪು ಬುರ್ಖಾ ವನ್ನು ದ್ವೇಷಿಸುವಂತಾಯಿತು. “ರಜಿಯಾ ಕಾಲೇಜಿನಲ್ಲಿ ಬುರ್ಖಾ ಇಲ್ಲದೆ ತಿರುಗಾಡಬೇಡ ಮತ್ತೆ ಯಾರಾದರೂ ನೋಡಿದರೆ ನಿಮ್ಮ ಮಗಳೇಕೆ ಹಿಂದೂ ಹುಡುಗಿಯರ ತರ ಎಂದು ನನ್ನನ್ನು ಬೈತಾರೆ” ಎಂದು ಎಚ್ಚರಿಸಿದರು ಅಪ್ಪ. ಕಾಲೇಜು ಡೇ ಗೆ ಬೇಡದ ಮನಸ್ಸಿನಲ್ಲಿ ಹಬ್ಬದ ಬೆಳೆಬಾಳುವ ಬಟ್ಟೆಯನ್ನು ಒಳಗೆ ಧರಿಸಿಕೊಂಡು ಅದರ ಮೇಲೆ ಕಪ್ಪು ಬುರ್ಖಾ ಧರಿಸಿಕೊಂಡು ಹೋದೆ. ಎಲ್ಲಾ ನನ್ನ ಇತರ ಧರ್ಮದ ಸ್ನೇಹಿತೆಯರು ಹೊಸ ಹೊಸ ಬಟ್ಟೆಯನ್ನು ಧರಿಸಿ ಅತ್ತಿತ್ತ ಓಡಾಡುತ್ತಿದ್ದರು. ನಾನು ಮಾತ್ರ ಕಪ್ಪು ಬುರ್ಖಾದಲ್ಲೇ ಬಂಧಿಯಾಗಿದ್ದೆ. ಅಬ್ಬಾ ಸಾಕು ಈ ಬುರ್ಖಾ ಸಹವಾಸ ಎಂದು ಬುರ್ಖಾ ತೆಗೆದು ಬಿಡಬೇಕು ಎನ್ನುವಷ್ಟರಲ್ಲಿ ನನ್ನಂತೆಯೇ ಆಸೆಯನ್ನು ಹತ್ತಿಕ್ಕಲಾರದೆ ಬುರ್ಖಾ ತೆಗೆದು ಇತರ ಹೆಣ್ಣುಮಕ್ಕಳ ಜೊತೆ ತಿರುಗಾಡುತ್ತಿದ್ದ ಆಯಿಷಾಳಿಗೆ ಜೀನ್ಸ್ ಪ್ಯಾಂಟ್ ಹಾಗೂ ಟೀ ಶರ್ಟ್ ತೊಟ್ಟು ಸ್ಟೈಲ್ ಆಗಿ ಬೈಕಲ್ಲಿ ಸುತ್ತಾಡುತ್ತಿರುವ ಮುಸ್ಲಿಮ್ ಹುಡುಗರು ಬೈಯುತ್ತಿದ್ದರು. “ಏನೇ ನೀನು ಮುಸ್ಲಿಮ್ ಅಲ್ವಾ? ಬುರ್ಖಾ ಹಾಕಲು ನಿನಗೇಕೆ ಸಂಕಟ” ಪಾಪ ಅವರ ಬೈಗುಳಕ್ಕೆ ಭಯಗೊಂಡ ಆಯಿಷಾ ಮತ್ತೆ ಬುರ್ಖಾ ತೊಟ್ಟು ನನ್ನ ಪಕ್ಕದಲ್ಲೇ ಕುಳಿತುಕೊಂಡಳು.

ಅಷ್ಟಕ್ಕೆ ನನಗೆ ದಿನೇಶ್ ಅಮೀನ್ ಮಟ್ಟು ಹೇಳಿದ ಮತ್ತೊಂದು ಮಾತು ನೆನಪಾಯಿತು. ಸಾಕಷ್ಟು ಮುಸ್ಲಿಮ್ ಸಿನಿಮಾ ನಟಿಯರು ಬುರ್ಖಾನೇ ಧರಿಸುವುದಿಲ್ಲ. taslima-nasreenಬಾಂಗ್ಲಾ ದೇಶದ ದಿಟ್ಟ ಮಹಿಳೆ ಶೇಖ್ ಹಸೀನಾ ಯಾವತ್ತೂ ಬುರ್ಖಾ ಧರಿಸಿಲ್ಲ, ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನೆಜೀರ್ ಬುಟ್ಟೂ ಬುರ್ಖಾ ಧರಸಲೇ ಇಲ್ಲ. ಹೌದಲ್ವಾ ಎಂದು ಯೋಚಿಸಲಾರಂಭಿಸಿದಾಗ ಬುರ್ಖಾ ಬೇಡ ಎಂದ ಇನ್ನು ಕೆಲವು ಮುಸ್ಲಿಮ್ ಮಹಿಳೆಯರು ನನ್ನ ಕಣ್ಣ ಮುಂದೆ ಸುಳಿದಾಡಲಾರಂಭಿಸಿದರು. ಮುಸ್ಲಿಮ್ ಪುರೋಹಿತಶಾಹಿ, ಮೂಲಭೂತವಾದ ಧಿಕ್ಕರಿಸಿದ ಸಾರಾ ಅಬೂಬಕ್ಕರ್, ತಸ್ಲೀಮಾ ನಸ್ರೀನಾ, ಶರೀಫಾ, ಜೊಹರಾ ನಿಸಾರ್ ಹೀಗೆ ಹತ್ತು ಹಲವು ಮಹಿಳೆಯರು ಬುರ್ಖಾ ಪದ್ದತಿಯ ವಿರುದ್ದ ಧ್ವನಿ ಎತ್ತಿದಕ್ಕಾಗಿ ಅವರು ಅನುಭವಿಸಿದ ನೋವುಗಳು, ಅವಮಾನಗಳು, ಅಡ್ಡಿ ಆತಂಕಗಳು ಹಾಗೆ ಕಣ್ಣ ಮುಂದೆ ಸುಳಿದಾಡಿದವು. ಈ ಸುಳಿದಾಟದಲ್ಲಿ ಸಾರಾ ಅಬೂಬಕ್ಕರ್ ಅವರ ’ಚಪ್ಪಲಿಗಳು’ ಪುಸ್ತಕದ ಪ್ರತಿಯೊಂದು ಪ್ಯಾರಾ ನೆನಪಾಗತೊಡಗಿತು. ಅದು ಭಯಾನಕ ಎಂದನಿಸಿತು. ಇದರ ನಡುವೆ ಬುರ್ಖಾ ಮಹಿಳೆಯನ್ನು ಅತ್ಯಾಚಾರದಂತಹಾ ದೌರ್ಜನ್ಯದಿಂದ ತಡೆಯುತ್ತದೆ ಎಂಬ ಪುರುಷ ಪ್ರಧಾನ ಸಮಾಜದ ಗರ್ವದ ಮಾತುಗಳು ನನ್ನನ್ನು ಇರಿಯತೊಡಗಿದವು. ಸ್ವಾಮೀ, ಅತ್ಯಾಚಾರಿಗೆ ಬುರ್ಖಾ ತೊಟ್ಟ ಹೆಣ್ಣಾದರೇನು? ಬುರ್ಖಾ ತೊಡದ ಹೆಣ್ಣಾದರೇನು? ಆತನ ಕಣ್ಣಿಗೆ ಎಲ್ಲ ಹೆಣ್ಣು ನಗ್ನವಾಗಿಯೇ ಕಾಣುತ್ತಾಳೆ. ಆ ಕಾರಣಕ್ಕಾಗಿ ನನಗೆ ಬುರ್ಖಾ ತೊಡಿಸಬೇಡಿ. ಬದಲಾಗಿ ಎಲ್ಲಾ ಸ್ತ್ರೀಯರಲ್ಲೂ ನಗ್ನತೆಯನ್ನು ಕಾಣುವ ಅವನ ಕಣ್ಣುಗಳಿಗೆ ಬುರ್ಖಾ ತೊಡಿಸಿ ಎಂದೆ. ಅದಕ್ಕೆ ಯಾರಲ್ಲೂ ಉತ್ತರವಿರಲಿಲ್ಲ. ಬಹುಷಃ ಬುರ್ಖಾದೊಳಗಿನ ನನ್ನ ಮಾತು ಅವರಿಗೆ ಕೇಳಿಸಿರಲಿಕ್ಕಿಲ್ಲ. ಮತ್ತೆ ನಾನು ಕಪ್ಪು ಬುರ್ಖಾವನ್ನು ದಿಟ್ಟಿಸಿ ನೋಡಿ ಸುಮ್ಮನಾದೆ.

ಆಯ್ಯೋ, ಬುರ್ಖಾ ಧರಿಸದಿದ್ದರೆ ನನ್ನನ್ನು ನೋಡುವ ದೃಷ್ಟಿಕೋನ ಒಂದಾದರೆ ಬುರ್ಖಾ ಧರಿಸಿದ ನನ್ನಂತಹಾ ಹೆಣ್ಣುಮಗಳನ್ನು ನೋಡುವ ದೃಷ್ಟಿಕೋನ ಬೇರೆಯದ್ದೇ. ಬುರ್ಖಾ sara abubakarತೊಟ್ಟು ಕಾಲೇಜಿಗೆ ಹೋದರೆ ಕಲವರು ನೋಡುವ ರೀತಿಯೇ ಬೇರೆ. ಪ್ರಚಂಚದ ಯಾವ ಮೂಲೆಯಲ್ಲಾದರೂ ಬಾಂಬ್ ಸ್ಟೋಟವಾದರೆ ಎಲ್ಲರ ಕಣ್ಣಿನ ನೋಟ ನನ್ನತ್ತ ಸುಳಿಯುತ್ತಿರುತ್ತದೆ. ಒಂದು ದಿನ ಕಾಲೇಜಿನ ಮೇಷ್ಟ್ರು ಇದ್ಯಾವುದಮ್ಮಾ ಹಳೆಯ ವೇಷ, ಕಾಲೇಜಿಗೆ ಬರುವಾಗ ಬುರ್ಖಾ ಧರಿಸಬೇಡ ಎಂದರು. ಈ ವಿಚಾರ ಮನೆಗೆ ಗೊತ್ತಾಗಿ, ಅಬ್ಬಾ ಮನೆಯಲ್ಲಿ ಕೊಲಾಹಲ ಎದ್ದುಬಿಟ್ಟಿತು. ದೂರದ ಪ್ರಾನ್ಸ್ ನಲ್ಲಿ ಬುರ್ಖಾ ಧರಿಸಲು ಅಲ್ಲಿಯ ಸರ್ಕಾರ ಅನುಮತಿ ನೀಡದಕ್ಕಾಗಿ ಅಲ್ಲಿಯ ಮುಸ್ಲಿಮ್ ವಿದ್ಯಾರ್ಥಿನಿಯರು ಕಾಲೇಜಿಗೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ. “ನೀನು ಅಷ್ಟೇ ಬುರ್ಖಾ ಹಾಕಿ ಕಾಲೇಜಿಗೆ ಹೋಗೋದು ಬೇಡವಾದರೆ ನೀನು ಶಿಕ್ಷಣ ಮುಂದುವರಿಸುವುದೇ ಬೇಡ” ಎಂದ ನನ್ನ ಸಹೋದರ ರಿಜ್ವಾನ್. ನನ್ನ ಅಸಹನೆ ಮೀರಿ ಹೋಗಿತ್ತು, ಲೋ, ರಿಜ್ವಾನ್ ಇಸ್ಲಾಮ್ ರಾಷ್ಟ್ರವಾದ ಸೌದಿ ಅರೇಬಿಯಾದಲ್ಲಿರುವ ಎಲ್ಲಾ ಧರ್ಮದ ಮಹಿಳೆಯರಿಗೂ ಕಡ್ಡಾಯ ಬುರ್ಖಾ ಧರಿಸಬೇಕೆಂದು ಅಲ್ಲಿಯ ಸರ್ಕಾರ ಆದೇಶ ಮಾಡಿರುವಾಗ ಪ್ರಾನ್ಸ್ ನಲ್ಲಿ ಬುರ್ಖಾ ನಿಶೇಧದ ಕುರಿತಾಗಿ ಮಾತನಾಡುವ ನೈತಿಕತೆ ನಿನಗೆಲ್ಲಿದೆ ಎಂದು. ಮತ್ತೆ ಕಪ್ಪು ಬುರ್ಖಾವನ್ನು ದಿಟ್ಟಿಸುತ್ತಾ ಸುಮ್ಮನಾದೆ.

ಇಲ್ಲ! ದಿನೇಶ್ ಅಮೀನ್ ಮಟ್ಟು ಅವರೇ, ನೀವು ರಹಸ್ಯ ಮತದಾನ ಮಾಡಿದರೂ ಮುಸ್ಲಿಮ್ ಮಹಿಳೆಯರು ಬುರ್ಖಾ ಬೇಡ ಅನ್ನೋದಿಲ್ಲ. ಯಾಕೆಂದರೆ ಅವರು greenಅದಕ್ಕೆ ಒಗ್ಗಿಕೊಂಡು ಹೋಗಿದ್ದಾರೆ. ಬುರ್ಖಾದೊಳಗೇ ಪ್ರಪಂಚವನ್ನು ನೋಡುವುದನ್ನು ಅವರು ಕಂಡುಕೊಂಡಿದ್ದಾರೆ. 7 ನೇ ತರಗತಿಗೆ ಕಾಲಿಡುತ್ತಿದ್ದಂತೆ ಅಮ್ಮಾ ನನಗೆ ಬುರ್ಖಾ ತೊಡಿಸು ಎಂದು ಮಗಳೇ ಒತ್ತಾಯಿಸುತ್ತಾಳೆ. ಸಮಾಜ, ಧರ್ಮ ಆ ಎಳೆ ಮನಸ್ಸನ್ನು ಆ ರೀತಿಯಲ್ಲಿ ಬದಲಾವಣೆ ಮಾಡಿದೆ. ಮನೆಯ ಮಗ ಧರ್ಮ ಮೀರಿ ಯಾವ ರೀತಿಯ ವಸ್ತ್ರನೂ ಧರಿಸಬಹುದು, ಆದರೆ ನಾನು ಮಾತ್ರ ಧರ್ಮದ ಇಂಚು ಇಂಚುಗಳನ್ನೂ ಪಾಲಿಸಬೇಕು. ಇದನ್ನು ಪ್ರಶ್ನಿಸಿದರೆ ಅಪ್ಪ ಪದೇ ಪದೇ ಧರ್ಮದ ಈ ಶ್ಲೋಕಗಳನ್ನು ನೆನಪಿಸುತ್ತಿರುತ್ತಾರೆ. “ನಿಮ್ಮಮನೆಗಳಲ್ಲೇ ಇದ್ದುಕೊಳ್ಳಿರಿ. ಗತಕಾಲದ ಅಜ್ಞಾನ ಕಾಲದಂತಹ ಸೌಂದರ್ಯ ಪ್ರದರ್ಶನ ಮಾಡುತ್ತಾ ತಿರುಗಾಡಬೇಡಿರಿ” ( ಪವಿತ್ರ ಕುರ್ ಆನ್ 33:33 ), “ಮಹಿಳೆ ಬುದ್ದಿ ಮತ್ತು ಧರ್ಮ ಎರಡೂ ವಿಧದಲ್ಲಿ ದುರ್ಬಲರಾಗಿರುತ್ತಾರೆ” ( ಬುಖಾರಿ ) “ನಿಮ್ಮ ಸ್ರೀಯರಿಂದ ಆಜ್ಞೋಲಂಘನೆಯ ಅಶಂಕೆ ನಿಮಗಿದ್ದರೆ ಅವರಿಗೆ ನೀವು ಉಪದೇಶ ನೀಡಿರಿ. ಮಲಗುವಲ್ಲಿಂದ ಅವರಿಂದ ದೂರವಿರಿ ಮತ್ತು ಅವರಿಗೆ ಹೊಡೆಯಿರಿ.” ಪವಿತ್ರ ಕುರ್ ಆನ್ ( 4:34 ). ಇವುಗಳನ್ನು ಅಪ್ಪನ ಬಾಯಿಂದ ಕೇಳುತ್ತಿದ್ದಂತೆ ನಾನು ಮತ್ತೆ ಸುಮ್ಮನಾದೆ. ನನ್ನಂತೆ ಲಕ್ಷಾಂತರ ಮಂದಿ ಹೀಗೆ ಮೌನಿಗಳಾಗಿದ್ದಾರೆ.

ನಾವೇ ಹೀಗಿರುವಾಗ, ದಿನೇಶ್ ಅಮೀನ್ ಮಟ್ಟು ನೀವ್ಯಾಕೆ ಸುಮ್ಮನೆ ನಿಷ್ಠುರರಾಗುತ್ತೀರಾ ಎಂದನಿಸುತ್ತದೆ. ಅದರ ಜೊತೆಗೆ ನನ್ನ ಮೌನಕ್ಕೆ ಧ್ವನಿಯಾದಿರಲ್ಲಾ ಎಂಬburkha sielence ಸಂತಸವೂ ಆಗುತ್ತಿದೆ. ಅಂದು ಕೆಟ್ಟ ಉದ್ದೇಶಕ್ಕಾಗಿ ಬುರ್ಖಾ ಬ್ಯಾನ್ ಮಾಡಲು ಹೊರಟ ಸಂಘಪರಿವಾರದ ನಿಲುವನ್ನು ನೀವು, ಮಂಗಳೂರಿನಲ್ಲಿ ನವೀನ್ ಸೂರಿಂಜೆ ಹಾಗೂ ಸಮಾನ ಮನಸ್ಕ ಪತ್ರಕರ್ತರು ವಿರೋಧಿಸಿದಾಗ ನಮ್ಮವರಿಗೆಲ್ಲಾ ನೀವು ನಮ್ಮೊಳಗಿನವರಾಗಿ ಕಂಡಿರಿ. ಆದರೆ ಇಂದು ಒಳ್ಳೆಯ ಉದ್ದೇಶಕ್ಕಾಗಿ ಮೌನಿಯಾಗಿರುವ ನನ್ನ ಮನದೊಳಗಿನ ಧ್ವನಿಗೆ ಧ್ವನಿಯಾಗುತ್ತಿರುವ ಕೆಲವೇ ಕೆಲವರಲ್ಲಿ ಒಂದು ಧ್ವನಿಯಾಗಿ ಸೇರಿಕೊಂಡ ನೀವು ನಮ್ಮವರಿಗೆಲ್ಲಾ ಇಸ್ಲಾಮ್ ವಿರೋಧಿಯಾಗಿ ಕಾಣುತ್ತಿದ್ದೀರಿ. ನೀವು ನಿಮ್ಮ ಧರ್ಮದ ಕಂದಾಚಾರ, ಪುರೋಹಿತಶಾಹಿ ವ್ಯವಸ್ಥೆ, ಕೋಮುವಾದ, ಮೂಲಭೂತವಾದದ ಬಗ್ಗೆ ಧ್ವನಿ ಎತ್ತಿದ್ದಾಗ ನಿಮ್ಮ ವಿರುದ್ಧ ಆ ವರ್ಗದ ಜನರು ಮುಗಿಬಿದ್ದಾಗ ನನ್ನ ಧರ್ಮದ ಮೂಲಭೂತವಾದಿಗಳು ನಿಮ್ಮನ್ನು ಜ್ಯಾತ್ಯಾತೀತ ಮನೋಭಾವದ ಉತ್ತಮ ವ್ಯಕ್ತಿಯಂತೆ ಕಂಡರು. ಆದರೆ ಇಂದು ನೀವು ನನ್ನ ಧರ್ಮದ ಬುರ್ಖಾ, ಮೂಲಭೂತವಾದದ ಕುರಿತಾಗಿ ಧ್ವನಿ ಎತ್ತಿದಕ್ಕಾಗಿ ಅಂದು ನಿಮ್ಮನ್ನು ಬೆಂಬಲಿಸಿದ ನನ್ನವರು ಇಂದು ನಿಮ್ಮ ಮೇಲೆ ಮುಗಿಬೀಳುತ್ತಿದ್ದಾರೆ. ಅದಕ್ಕಾಗಿ ನಾನು ಕ್ಷಮೆ ಕೋರುತ್ತೇನೆ. ನಿಮಗೆ ಬೆಂಬಲವನ್ನು ಸೂಚಿಸಲು ನನ್ನಂತಹಾ ಸಾವಿರಾರು ಧ್ವನಿಗಳು ನಿಮ್ಮೊಂದಿಗಿದೆ. ಆದರೆ ಏನು ಮಾಡೋಣ, ನನ್ನಂತಹಾ ಮಹಿಳೆಯರ ಮೌನಿ ಧ್ವನಿಗಳು ಯಾರಿಗೂ ಕೇಳಿಸುತಿಲ್ಲವಲ್ಲ”

13 comments

 1. ಎದೆಗೆ ನಾಟುವಂತಹ ಬರಹ. ನಿಜವಾಗಿಯೂ ಇಂತಹ ಸಂವೇದನಾಶೀಲ ಬರಹಗಳು ಬುರ್ಖಾದೊಳಗೆ ಬಂದಿಯಾಗಿದ್ದೂ, ದಾಕ್ಶಿಣ್ಯಕ್ಕಾಗಿ ಅದನ್ನು ಒಪ್ಪಿಕೊಳ್ಳುವವರು ಚಿಂತಿಸುವಂತೆ ಮಾಡುತ್ತವೆ. ಗೆಳೆಯ ಬಿ.ಎಂ. ಬಶೀರ್ ತಮ್ಮ ಬ್ಲಾಗ್ ನಲ್ಲಿ ದಿನೇಶ್ ಅಮೀನ್ ಮಟ್ಟು ಸರ್ ಗೆ ಉತ್ತರವಾಗಿ ಬುರ್ಖಾದ ಬಗ್ಗೆ ಮಾತಾಡುವುದು ಸೆರಗಿಗೆ ಕೈ ಹಾಕಿದಂತೆ ಎಂಬರ್ಥದಲ್ಲಿ ಬರೆದಿದ್ದಾರೆ. ಆವಗಲೇ ನನಗನಿಸಿತ್ತು, ಬುರ್ಖಾ ಧರಿಸುವುದು ಮೈ ಮುಚ್ಚುವುದಕ್ಕಲ್ಲ ಬದಲಾಗಿ ಹೆಣ್ಣಿನ ಸ್ವಾತಂತ್ರ್ಯವನ್ನು ಮುಚ್ಚುವದಕ್ಕಾಗಿ ಎಂದು. ಯಾಕೆಂದರೆ ಬುರ್ಖಾದೊಳಗೊಂದು ಸುಂದರ ಬಣ್ಣಗಳ ಉಡುಪಿರುತ್ತದೆ. ಈ ಚಿಂತನೆಯನ್ನು ವಿಸ್ತರಿಸಿದ ಇರ್ಷಾದ್ ರವರಗೆ ವಂದನೆ ಗಳು.
  -ವಿಲ್ಸನ್, ಕಟೀಲ್

 2. ನಿಜಕ್ಕು ನೈಜ, ಸೋಗಿಲ್ಲದ, ಬಚ್ಚಿಡುವ ಹ೦ಬಲವಿಲ್ಲದ ಬರಹ ಇರ್ಶಾದ್… ಬಶೇರ್ ಸೋಗಲಾಡಿ “ವಿಚಾರವಾದ”ಕ್ಕಿ೦ತ ನಿಮ್ಮ ಬರಹದ ಮೂಲಕ ವ್ಯಕ್ತವಾದ “ವಾಸ್ತವವಾದ” ಮನ ತಟ್ಟಿತು.. ಹಿ೦ದೂ -ಮುಸ್ಲಿಮ್ …ಕ್ರಿಸ್ಟ್ ..ನಾವೆಲ್ಲ , ಎಲ್ಲ ನಮ್ಮ ನಮ್ಮ ಧರ್ಮದ ಕಬ೦ಧ ಬಾಹು ಬಾಳ್ವೆಯ ಸಹಜ ಸ್ವಾತ೦ತ್ರ್ಯದ ಮೇಲೆ ದಿಗ್ಬ೦ಧನ ಹೇರದ೦ತೆ ನೋಡಿಕೊಳ್ಳಬೇಕಿದೆ..ಮೂಲಭೂತವಾದಿ ಮನಸ್ಸು ಯಾವ ಧರ್ಮದ್ದೇ ಇರಲಿ, ಅಥವಾ ಬಶೇರ್ ನ೦ತಹ ಇತರರ ಮೇಲೆ ಧಾಳಿ ನಡೆಸಿ ತನ್ನನ್ನು ಬಚ್ಚಿಡುವ ವೈಚಾರಿಕ ಮೂಲಭೂತವಾದಿತ್ವ ಇರಲಿ ಖ೦ಡನೇಯ ವೇ ಸರಿ! ಅದರಲ್ಲು ವೈಚಾರಿಕತೆ ಯ ಹೆಸರಲ್ಲಿ ಇತರರ ಮೇಲೆ ಧಾಳಿ ನಡೆಸುತ್ತಾ ತನ್ನ ಕಾಲಡಿಗೆ ನೀರು ಹರಿದಾಗ ಧರ್ಮದ, ಸ೦ವೇದನೆಯ, ಅಡಗಲೆತ್ನಿಸುವ ವೈಚಾರಿಕ ಮೂಲಬೂತವಾದಿ ಹೆಚ್ಚು ಅಪಾಯಕಾರಿ. . ಹೇಗೆ ಹಿ೦ದು ಮೂಲಭೂತವಾದ ವಿರುದ್ದ ದಿನೇಶ್ ಅಮೀನ್ ಧ್ವನಿ ಯೆತ್ತುತ್ತಿರುವರೋ ಆ ಕೆಲಸವನ್ನಿಲ್ಲಿ ನೀವೆ ಯಾಕೆ ಯೆತ್ತಿಕೊಳ್ಳಬಾರದು? ಅದಕ್ಕೆ ಬಶೀರ್ ರ೦ತೆ ಕಾವ್ಯದ ಬಲ ಬೇಕೆ೦ದೇನೂ ಇಲ್ಲ.. ಸಜ್ಜನಿಕೆಯ,ಪೂರ್ವಾಗ್ರಹ ರಹಿತ , ವಾಸ್ತವವಾದಿ ಮನಸ್ಸು ಸಾಕು!

  ಪಿ ಎ೦ ಕತ್ತಲ್ ಸಾರ್ ಮು೦ಬಯಿ

  1. +1 ಅತ್ಯುತ್ತಮವಾಗಿ ಕಮೆಂಟ ಮಾಡಿದ್ದೀರಿ. ಕತ್ತಲ್ ಸಾರ್ ನಮ್ಮನ್ನು ಕತ್ತಲೆಯಿಂದ ಬೆಳಕಿಗೆ ತಂದಿದ್ದೀರಿ.

 3. well written and it is for every religion to understand that we are living in 21st century. Let all of us follow our religions but with a human touch and love.

 4. -ಇರ್ಷಾದ್ ಅವರಿಗೆ ನಮಸ್ಕಾರಗಳು………… ನಿಮ್ಮ ಲೇಖನಿ ಕಟುಸತ್ಯವನ್ನು ಪ್ರತಿಬಿಂಬಿಸುವ ಕನ್ನಡಿಯಂತೆ ಇದೆ….. ನಿಮ್ಮ ಬರಹವನ್ನು ನೊಡಿ B M BASHEER….. ಅವರ ಎದೆಗೆ ಬೆಂಕಿಬಿದ್ದಿರುವುದಂತು ಸತ್ಯ….. ಯಾವುದಕ್ಕೂ ಸ್ವಲ್ಪ ಎಚ್ಚರಿಕೆಯಿಂದಿರಿ……..

 5. ಇರ್ಷಾದ್ ಅವರ ಬರಹಕ್ಕೆ, ಧೈರ್ಯಕ್ಕೆ ಹ್ಯಾಟ್ಸಾಫ್. ಒಟ್ಟಾಗಿ ಶೋಷಣೆಯ ವಿರುದ್ಧದ ದನಿ ಆಗಬೇಕು. ಧರ್ಮ, ಪಂಗಡ, ಕುಲ ಎಲ್ಲ ಬಿಟ್ಟು ಬಿಡಬೇಕು.

 6. ಇರ್ಷಾದ್ ಅವರ ಈ ಬರಹ ಕೇವಲ ಒಂದು ಧರ್ಮದ ಸಂಬಂಧಪಟ್ಟ ಹೆಣ್ಣಿನ ಅಂತರಾಳದ ದನಿಯಲ್ಲ! ಇದು ಎಲ್ಲ ಧರ್ಮದಲ್ಲೂ ಮಾತು ಕಳೆದುಕೊಂಡು ಮೌನವಾಗಿರುವ ಹೆಣ್ಣಿನ ದನಿಗೆ ಸಂಕೇತವಾಗಿದೆ. ಬರಹ ಎಲ್ಲರ ಎದೆಯನ್ನೂ ತೋಯಿಸುವಂತಿದೆ. ಎಲ್ಲ ಧರ್ಮದಲ್ಲಿರುವ ಮೂಲಭೂತವಾದಿಗಳಿಗೂ ಈ ಬರಹದಲ್ಲಿರುವ ನೋವು ತಾಕಲಿ ಎಂಬುದೇ ನನ್ನ ಹಾರೈಕೆ.

 7. ಚಂದದ ಬರಹ. ತುಂಬಾ ಇಷ್ಟವಾಯಿತು. ಇರ್ಷಾದ್‍…

 8. ಬಿ.ಎಂ.ಬಶಿರ್ ರವರ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಒಂದು ಸಮಾಜದ ಹಿತೈಶಿಯಾಗಿ ದಿನೇಶ್ ಆಡಿದ ಮಾತುಗಳು ವಿಪರೀತ ಅರ್ಥಗಳಿಗೆ ಕಾರಣವಾಗಿದ್ದು ದುರಂತ.ನಾವು ಅರ್ಥ ಮಾಡುವಲ್ಲಿ ಸೋಲುತ್ತೇವೆಯೋ,ನಮ್ಮ ಪೂರ್ವಗ್ರಹಗಳು ನಮ್ಮ ಗ್ರಹಿಕೆಯನ್ನು ಮೊಂದಾಗಿಸುತ್ತಿದೆಯೋ,ಅಂತೂ ನಾವು ಬದಲಾವಣೆಗಳಿಗೆ ಮುಕ್ಕಾಗಿದ್ದೇವೆ.
  ಅಂತಹ ಸಂದರ್ಬದಲ್ಲಿ ಇರ್ಷಾದ್ ಬರಹ ಹಲವು ಮಹಿಳೆಯರ ಕನಸುಗಳಿಗೆ ನೀರೆರೆಯಬಲ್ಲುದು.

 9. ಎಂಥ ಮಾರ್ಮಿಕವಾದ ದನಿಯೊಡನೆ ಮೂಡಿರುವ ಬರಹ ಇರ್ಷಾದ್! ನಿಜಕ್ಕೂ ನಿಮ್ಮ ಭಾಾಷೆ, ಹೇಳುವ ಕ್ರಮದಲ್ಲೇ ಮೂಡಿರುವ ವಿಷಾದ ಅಸಹಾಯಕತೆ, ಒಟ್ಟು ಬರಹ ಚಂದ….ಚಂದ..- ಜಯಶಂಕರ್ ಹಲಗೂರ್

 10. ಅದ್ಭುತ ಲೇಖನ. ಮುಸ್ಲಿಂ ಮೂಲಭೂತವಾದಿಗಳು ಅಪರಾತಪ್ರಾ ಧರ್ಮದೊಳಗಿನ ಕಂದಾಚಾರಗಳನ್ನು ಆಚರಣೆ ರೂಪದಲ್ಲಿ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲಭೂತವಾದಿಗಳ ಬದುಕಿಗಾಗಿ ಧರ್ಮದಲ್ಲಿ ಅಳಿಸಲು ಸಾದ್ಯವಾಗದ ಮಾದರಿಯಲ್ಲಿ ಕಂದಾಚಾರಗಳು ಮೇಳೈಸುತ್ತಿದೆ. ಮುಸ್ಲೀಮರು ಇದನ್ನು ಅರ್ಥ ಮಾಡಿಕೊಳ್ಳುವ ಮೂಲಕ ಮುನ್ನಡೆದರೆ ಅದೇ ಪುಣ್ಯ. ಹೆಣ್ಣಿನ ಸ್ವಾತಂತ್ರ್ಯವನ್ನು ಕಿತ್ತು ಸಂತಸಪಡುವ ಮಂದಿಗೆ ಇದು ಕಹಿ ಗುಳಿಗೆಯಾಗಬಹುದು.

 11. ಆತ್ಮೀಯ ಇರ್ಶಾದ್ರವರೆ
  ಇಲ್ಲಿ ಸಮಸ್ಯೆ ಇರುವುದು ಮುಸ್ಲಿಂ ಮಹಿಳೆಯರು ಧರಿಸುವ ಮೇಲು ಕವಚವಾದ ಬುರ್ಖಾ ಎಂಬ ವಸ್ತ್ರಧಾರಣೆ ಅಲ್ಲ ಪರಂತು ನಿಮಗೆ ಮತ್ತು ನಿಮ್ಮಂತಹ ಅನೇಕ ಜನಗಳಿಗೆ ಇಸ್ಲಾಮಿನ ಅರಿವು ಇಲ್ಲದಿರುವುದೇ ಆಗಿದೆ.ಇಸ್ಲಾಮಿನ ಅರಿವು ಇಲ್ಲದೆ ಆನೆಯನ್ನು ಗ್ರಹಿಸಿದ ಕುರುಡರ ಹಾಗೆ ಆಗದಿರಿ ಇಸ್ಲಾಮಿನ ಅರಿವು ಆಗಬೇಕಿದ್ದರೆ ಇಸ್ಲಾಮಿನ ಕುರಿತು ಎಡ ಪಂಥೀಯ ವಿಚಾರಧಾರೆಯ ವ್ಯಕ್ತಿಯೋ. ಬಲಪಂಥೀಯ ಒಲವು ಇರುವವನೋ ಪ್ಯಾಸಿಸ್ಟ್ ಚಿಂತಕನೋ, ನಾಸ್ತಿಕವಾದಿಯೋ,ಅಥವಾ ಪುರೋಹಿತಶಾಹಿತ್ವದ ಹಿಂಬಾಲಕನೊ ಬರೆದ ಪುಸ್ತಕ ಓದಿದರೆ ನಿಜ ಅರ್ಥ ಸಿಗಲಾರದು.
  ಅದಕ್ಕಾಗಿ ಖುರ್ಆನ್ ನ ಅಧ್ಯಯನ (ವ್ಯಾಖ್ಯಾನ ಟಿಪ್ಪಣಿ) ಗಳೊಂದಿಗೆ ಪ್ರವಾದಿ ಜೀವನ ಅಥವಾ ಪ್ರವಾದಿಚರ್ಯೆಗಳ ಬಗ್ಗೆ ಅಧಿಕೃತ ಹದೀಸ್ ಗಳ ಆಧಾರದಲ್ಲಿ ರಚಿಸಿದ ಗ್ರಂಥಗಳನ್ನು ಮನನ ಮಾಡಿದರೆ ತಮ್ಮ ಈ ಮೇಲಿನ ಎಲ್ಲ ಸಮಸ್ಯೆಗಳ ಪರಿಹಾರ ಲಭಿಸುವುದು.
  ಇಸ್ಲಾಂ ಮಹಿಳೆಯರಲ್ಲಿ ನೀವು ಬಿಸಿಲಿನ ಬೇಗೆಯನ್ನು ಸಹಿಸಲಸಾಧ್ಯವಾದ ಕಪ್ಪು ಬಣ್ಣದ ಬುರ್ಖಾವನ್ನು ಧರಿಸದೆ ಮನೆಯ ಹೊರಗೆ ಹೋಗದಿರಿ ಎಂದು ತಾಕೀತು ಮಾಡಿದೆ ಎಂದು ನೀವು ತಿಳಿದಿದ್ದರೆ ಅದು ನಿಮಗೆ ಇಸ್ಲಾಮಿನ ಬಗ್ಗೆ ನಿಮ್ಮಲ್ಲಿರುವ ಅಜ್ಞಾನವೆ ಹೊರತು ಇಸ್ಲಾಮಿನ ಭೋದನೆ ಖಂಡಿತಾ ಅಲ್ಲ ಎಂಬ ಸತ್ಯವನ್ನು ಅರಿತು ಮುಂದಿನ ಬರಹ ಆರಂಭಿಸುವಿರಾಗಿ ವಿನಮ್ರ ಅಪೇಕ್ಷೆ.
  ಇನ್ನು ಸಂಕ್ಷಿಪ್ತತೆಯಲ್ಲಿ ನಿಮ್ಮ ಅರಿವಿಗಾಗಿ ಇಸ್ಲಾಂ, ಪೂರ್ಣ ಮೈ ಮುಚ್ಚುವ ಗೌರವದ ವಸ್ತ್ರವನ್ನು ಧರಿಸಲು ಮಹಿಳೆಯರಿಗೆ ಆದೇಶಿಸಿದೆ. ಪೂರ್ಣ ಮೈ ಮುಚ್ಚುವ ವಸ್ತ್ರವನ್ನು ಧರಿಸುವ ಈ ರೀತಿಯ ಸಂಪ್ರದಾಯ ಭಾರತೀಯ ರಜಪೂತ ಸಮುದಾಯದಲ್ಲಿ ಕ್ರೈಸ್ತ ಕನ್ಯಾ ಸ್ತ್ರೀಯರಲ್ಲಿಯೂ ಚಾಲ್ತಿಯಲ್ಲಿದೆ ಆದರೆ ಮುಸ್ಲಿಮರಲ್ಲಿ ಅದು ಬುರ್ಖಾ ರೂಪದಲ್ಲಿ ಪ್ಯಾಶನ್ ಅವತಾರದಲ್ಲಿ ಬಳಕೆಗೆ ಬಂದಿದ್ದು ಕೆಲವು ಆಧುನಿಕವಾದ ಈ ರೀತಿಯ ಮಾಡೆಲ್ ಬುರ್ಖಗಳು ಧರಿಸಿದರೂ ಅದರ ಉದ್ದೇಶ ಈಡೇರದ ರೀತಿಯಲ್ಲಿರುವುದು ವಿಪರ್ಯಾಸವೂ ಶೋಚನೀಯವೂ ಆಗಿದೆ.ಅದಕ್ಕಿಂತಲೂ ಪೂರ್ಣ ಮೈ ಮುಚ್ಚುವ ಅದಾವ ವಸ್ತ್ರವಿದ್ದರೂ ಹೆಚ್ಚು ಉತ್ತಮ. ಅದು ಶಲ್ವಾರ್ ಕಮೀಸ್ ರೂಪದಲ್ಲಿರಬಹುದು ಯಾವ ಬಣ್ಣದಲ್ಲಿಯೂ ಇರಬಹುದು.ಇನ್ನು ಅದನ್ನು ತೊಡಲು ಒಪ್ಪದ ನಿಮ್ಮ ಅಕ್ಕ ತಂಗಿ ಅಮ್ಮ ಅಥವಾ ಅದಾವುದೇ ಸಹೋದರಿ (ಲೇಖನದಲ್ಲಿ ನಾನು ನನ್ನ ಬುರ್ಖಾ ಇತ್ಯಾದಿಯಾಗಿ ಸ್ವಯಂ ಪಾತ್ರಧಾರಿಯಾಗಿ ಬರೆದಿದ್ದರೂ ಆ ಹೆಣ್ಣು ತನ್ನ ಹೆಸರು ತಿಳಿಸಲು ಬಯಸದೆ ನಿಮ್ಮ ಮುಖಾಂತರ ಆ ಸ್ತ್ರೀ ಪಾತ್ರವನ್ನು ನಿರ್ವಹಿಸಲು ಕೇಳಿಕೊಂಡು ತಾವು ಸ್ತ್ರೀ ಪಾತ್ರಧಾರಿಯಾಗಿ ಬರೆದ ಲೇಖನ ಇರಲೂ ಬಹುದು) ಅದೇನಿದ್ದರೂ ಆ ನಿಮ್ಮ ಅದಾವುದೋ ಸಹೋದರಿ ಇದ್ದಲ್ಲಿ ಅವರಿಗೆ ಮೈಮುಚ್ಚುವ ವಸ್ತ್ರ ತೊಡುವ ಮನಸಿಲ್ಲದೇ ಇದ್ದು ಬಲವಂತ ಅದನ್ನು ತೊಡುವುದಾದರೆ ಪ್ರಥಮತಃ ಅದರ ಗೌರವ ತಿಳಿಸಿರಿ ಇನ್ನೂ ಸುತಾರಾಂ ಮನಸಾ ಸಿದ್ದರಿಲ್ಲ ಎಂದಾದಲ್ಲಿ ಧರ್ಮದಲ್ಲಿ ಬಲಾತ್ಕಾರ ಇಲ್ಲ ಎಂಬ ಇಸ್ಲಾಮಿನ ಆದೇಶ ತಿಳಿಸಿರಿ ಈಗ ಅವರು ಇಸ್ಲಾಮಿನ ಈ ಆದೇಶದಂತೆ ತಮಗೆ ಮನ ತೋಚಿದ ವಸ್ತ್ರ ಅದು ಮೊಣಕಾಲು ನಗ್ನ ಇರಿಸಿರಬಹುದು ತಮ್ಮ ಎದೆಯ ಮತ್ತು ಬೆನ್ನಿನ ಹೆಚ್ಚಿನ ಭಾಗ ಪ್ರದರ್ಶನಕ್ಕೆ ನೀಡಿ ಇರಬಹುದು ಅಥವಾ ಇನ್ನಷ್ಟು ಪ್ರಗತಿಪರರಾಗಿ ಮುಂದುವರಿದ ಪಾಶ್ಚಾತ್ಯ ರಾಷ್ಟ್ರದಲ್ಲಿನ ಕೆಲವರ ಉಡುಗೆಯಂತೆ ಕೇವಲ ಬಿಕಿನಿ ಮತ್ತು ಬ್ರಾ ಮಾತ್ರ ಧರಿಸಿಯೂ ಸಾಕು ಎಲ್ಲಿವರೆಗೆ ಭಾರತೀಯ ಕಾನೂನು ಅನುಮತಿ ನೀಡುವುದೋ ಅಲ್ಲಿಯವರೆ ಧರಿಸಿ ಸಾರ್ವಜನಿಕವಾಗಿ ತಿರುಗಾಡಲಿ ಇಸ್ಲಾಮಿನ ಕಾನೂನು ಖಂಡಿತಾ ಅವರಿಗೆ ಭಾದಕವಲ್ಲ. ದಯವಿಟ್ಟು ಅದಕ್ಕೆ ಅವಕಾಶ ನೀಡುವಂತೆ ನಿಮ್ಮರಕ್ಷಕರ ( ಪ್ರಾಯಶ ಏಕೋದರ ಸಹೋದರಿ ಅಲ್ಲವಾದಲ್ಲಿ ) ಅವರ ರಕ್ಷಕರ ಮನವೊಲಿಸಿ ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿದೆ ಯಾಕೆಂದರೆ ಇತ್ಯಾದಿ ಮಹಿಳೆಗೆ ಇಸ್ಲಾಂ ಯಾವ ಕಾನೂನನ್ನು ವಿಧಿಸಿಲ್ಲ.ಧರ್ಮದಲ್ಲಿ ಒತ್ತಡಪೂರ್ವಕ ಅನುಸರಣೆಯ ಅಗತ್ಯ ಇಲ್ಲ ಎಂದು ಎಲ್ಲಾ ಮುಸ್ಲಿಮರೂ ತಿಳಿದಿರಲಿ.

  ಅಬ್ದುಲ್ ಖಾದರ್ ಕುಕ್ಕಾಜೆ

Leave a Reply

Your email address will not be published.