Daily Archives: September 12, 2014

ಹುಷಾರು, ನಾನು ಹಿಂದೂ ಆಗಿ ಮತಾಂತರಗೊಳ್ಳುತ್ತೇನೆ

ಇಂಗ್ಲೀಷ್ : ಹಸನ್ ಸುರೂರ್
ಅನುವಾದ : ಬಿ.ಶ್ರೀಪಾದ ಭಟ್ 

ಮುಸ್ಲಿಂ ತುಚ್ಛೀಕರಣವು ಕೆಲಸ ಮಾಡುತ್ತಿಲ್ಲ, ಆರೆಸಸ್ ಮುಖ್ಯಸ್ಥರಿಗೆ ಒಂದು ಬಹಿರಂಗ ಪತ್ರ

ಪ್ರೀತಿಯ ಶ್ರೀ ಮೋಹನ್ ಭಾಗವತ್‌ಜೀ,

ನಮಸ್ಕಾರ. ಎಲ್ಲಾ ಭಾರತೀಯರನ್ನು ಹಿಂದೂಗಳೆಂದೇ ಪರಿಗಣಿಸಿ ಎಂದು ಕರೆ ಕೊಟ್ಟ ನಿಮ್ಮ ಹೇಳಿಕೆಯನ್ನು ಅತ್ಯಂತ ಎಚ್ಚರಿಕೆಯಿಂದ ಪರಮಾರ್ಶಿಸಿದ ನಂತರ ನಿಮಗೆ ಖುಷಿಯ ವಿಚಾರವೊಂದನ್ನು ತಿಳಿಸಬೇಕೆಂದಿದ್ದೇನೆ. ಅದೇನು ಗೊತ್ತೆ ನಾನು ಹಿಂದೂ ಆಗಲು ನಿರ್ಧರಿಸಿದ್ದೇನೆ.ಇದನ್ನು ಸೆಕ್ಯುಲರ್ ಇಂಡಿಯಾದಲ್ಲಿನ ಮೊಟ್ಟ ಮೊದಲ “ಹಿಂದೂ ಮುಸ್ಲಿಂ” ಎಂದು ಕರೆಯಬೇಕೆ ಅಥವಾ ಅದು “ಮುಸ್ಲಿಂ ಹಿಂದೂ” ಎಂದಿರಬೇಕಿತ್ತೆ ಸರ್ ? ದಯವಿಟ್ಟು ನೀವು ನನಗೆ ಮಾರ್ಗದರ್ಶನ ಮಾಡಿ. ಏಕೆಂದರೆ ಇಂದಿನ ದಿನಗಳಲ್ಲಿ ನಿಮ್ಮ ಮಾತೇ ಕಡೆಯ ವಾಕ್ಯ. ಪ್ರಧಾನಮಂತ್ರಿಯಾಗಿ ನೀವು ತಂದು ಕೂಡಿಸಿರುವ ಈ ಮೋದಿ ಎನ್ನುವ ವ್ಯಕ್ತಿ ಕಚ್ಚುವುದರ ಬದಲಾಗಿ ಕೇವಲ ಗುರುಗುಟ್ಟುತ್ತಾನೆ. bhagvat-gadkari-modiನೀವೇ ನಿಜವಾದ ವ್ಯಾಪಾರಸ್ಥ.

ಸಾಂಸ್ಕೃತಿಕ ರಾಷ್ಟ್ರೀಯತೆಯಂತಹ ಸಂಕೀರ್ಣ ವಿಷಯವನ್ನು ತುಂಬಾ ಸರಳೀಕರಣಗೊಳಿಸಿರುವ ನೀವೆಂತಹ ಬುದ್ಧಿವಂತರು ಸ್ವಾಮಿ. ಇದಕ್ಕಾಗಿ ನೀವು ಬಳಸಿರುವ ಭಾಷೆ ಮತ್ತು ಆ ಭಾಷೆ ಕೊಡುವ ಅರ್ಥವಾದರೂ ಎಂತದ್ದು ಸ್ವಾಮಿ !

ಆದರೆ ಭಾಗವತ್‌ಜೀ ನನ್ನ ನಿರ್ಧಾರವನ್ನು ಆರೆಸಸ್‌ನ, ನಿಮ್ಮ ಜಯವೆಂದು ನೀವು ಜಂಬ ಕೊಚ್ಚಿಕೊಳ್ಳುವುದಕ್ಕಿಂತ ಮೊದಲು ಸ್ವಲ್ಪ ತಡೆಯಿರಿ, ನಾನು ನಿಮ್ಮ ಅದೇಶಕ್ಕೆ ತಲೆಬಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆಂದು ಭಾವಿಸಬೇಡಿ. ಇದು ಸಾಧ್ಯವೇ ಇಲ್ಲ. ಅದನ್ನು ಒಂದು ಸುಳ್ಳು ನೆಪವೆಂದೇ ಕರೆಯಲಿಚ್ಚಿಸುತ್ತೇನೆ. ಏಕೆಂದು ಹೇಳುತ್ತೇನೆ, ಕೇಳಿ. ಎಲ್ಲರಿಗೂ ಗೊತ್ತಿರುವಂತೆ ಆರೆಸಸ್ ಒಂದು ಬಗೆಯ ಬೋಗಸ್ ಆದ ಸಾಂಸ್ಕೃತಿಕ ಯುದ್ಧವನ್ನು ಸಾರಿದೆ. ಈ ಯುದ್ಧದ ಮೂಲ ಉದ್ದೇಶವೇ ಅಲ್ಪಸಂಖ್ಯಾತರನ್ನು ಅದರಲ್ಲೂ ಮುಸ್ಲಿಂರನ್ನು ಸದಾಕಾಲ ಭಯದ ನೆರಳಿನಲ್ಲಿ ಬದುಕುವಂತೆ ಮಾಡುವುದು. ನಾವೆಲ್ಲ ಸೆಕ್ಯಲರಿಸಂನ ಹೆಸರಿನಲ್ಲಿ, ಸಾಂಸ್ಕೃತಿಕ ವೈವಿಧ್ಯತೆಯ ಹೆಸರಿನಲ್ಲಿ ಇದನ್ನು ವಿರೋಧಿಸಿ ಎಷ್ಟೇ ಜೋರಾಗಿ ಕಿರುಚಿದಷ್ಟೂ,ಪ್ರತಿಭಟಿಸಿದಷ್ಟೂ, ಬೇಡಿಕೊಂಡಷ್ಟೂ ಆ ಆರೆಸಸ್ ಪ್ರಣಾಳಿಕೆ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಒಂದು ವೇಳೆ ನಾವು ಪ್ರತಿಭಟಿಸುವುದನ್ನು, ಕಿರುಚುವುದನ್ನು, ಬೇಡಿಕೊಳ್ಳುವುದನ್ನು ನಿಲ್ಲಿಸಿದರೆ ? ಬದಲಾಗಿ ಈ ಆಟವನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ನಟಿಸತೊಡಗಿದರೆ?

ದಶಕಗಳ ಕಾಲ ಈ ಮುಸ್ಲಿಂ ಐಡೆಂಟಿಟಿ ಎನ್ನುವುದು ಆರೆಸಸ್‌ಗೆ ಅವರನ್ನು ದ್ವೇಷಿಸಲು ಒಂದು ಫಲವತ್ತಾದ ಭೂಮಿಕೆಯನ್ನೇ ನಿರ್ಮಿಸಿದೆ. RSS-mohanbhagwatಆದರೆ ಸರ್, ಮುಸ್ಲಿಂರು ಇಂದು ಸಾಕಷ್ಟು ಚೂಟಿಯಾಗಿದ್ದಾರೆ, ಮಸಲ ಒಂದು ವೇಳೆ ಇಂದು ನಾನು ನಿಮ್ಮ ಸ್ಥಾನದಲ್ಲಿದ್ದರೆ, ಒಂದು ಸಂಸ್ಥೆಯನ್ನು ಮುನ್ನಡೆಸುತ್ತಿದ್ದರೆ ಮತ್ತು ಆ ಸಂಸ್ಥೆಯ ಆಸ್ತಿತ್ವದ ಸಮರ್ಥನೆಯು ಮುಸ್ಲಿಂರನ್ನು ಪ್ರಚೋದಿಸಿ, ಕೆರಳಿಸಿ ಅದಕ್ಕೆ ಮತ್ತಷ್ಟು ಗಾಳಿ ಹಾಕುವ ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿದ್ದರೆ ನಾನು ಚಿಂತಿತನಾಗುತ್ತಿದ್ದೆ. ಏಕೆಂದರೆ ಮುಸ್ಲಿಮರೇ ಸ್ವತಃ ಹಿಂದೂ ಟೆಂಟ್‌ನೊಳಗಿದ್ದಾಗ ಮೇಲಿನ ಸಾಧ್ಯತೆಗಳಿಗೆ ಅವಕಾಶ ಎಲ್ಲಿದೆ ಹೇಳಿ? ಬದಲಾಗಿ ಇದು ಒಂದು ಅರ್ಥದಲ್ಲಿ ಆರೆಸಸ್‌ಗೆ ಅದರ ಧ್ಯೇಯವು ತನ್ನ ಗುರಿ ಮುಟ್ಟಿದೆ ಎಂದೇ ಅರ್ಥ. ಏಕೆಂದರೆ ಇಲ್ಲಿ ಶತೃವನ್ನು ಪಳಗಿಸಲಾಗಿದೆ, ಹಿಂದೂಕರಣಗೊಳಿಸಲಾಗಿದೆ. ಅಂಗಡಿಯನ್ನು ಮುಚ್ಚಿ ಮನೆಗೆ ಹೋಗುವ ಕಾಲ ಬಂದಿದೆ ಅಷ್ಟೇ.

ಭಾಗವತ್‌ಜೀ, ನೀವೇನು ಹೇಳುತ್ತಿದ್ದೀರೆಂದು ನನಗೆ ಗೊತ್ತಿದೆ, ನನಗೆ ಗೊತ್ತಿದೆ. ಈ ದುರಹಂಕಾರಿ ಮುಸ್ಲಿಂರನ್ನು (ಕ್ಷಮಿಸಿ, ಬಾಬರ್ ಕಿ ಔಲಾದ್) ಪಳಗಿಸಲು, ಹದ್ದುಬಸ್ತಿನಲ್ಲಿಡಲು ಆರೆಸಸ್ ಸತತ ಪ್ರಯತ್ನದಲ್ಲಿದೆಯೆಂದು ನನಗೆ ಗೊತ್ತಿದೆ. ಮಿಕ್ಕೆಲ್ಲವೂ ಸರಿಯಾಗಿದ್ದರೆ ತನ್ನ ಕಾರ್ಯಸೂಚಿಗಳನ್ನು ಸದಾ ಜಾರಿಯಲ್ಲಿಡಲು ಅದು ಮತ್ತೊಂದು ಯೋಜನೆಯೊಂದಿಗೆ ಮಂದೆ ಬರುತ್ತದೆ (ಬಹುಶ ಮತ್ತಷ್ಟು ಪ್ರಚೋದನಕಾರಿ ಘೋಷಣೆಗಳೊಂದಿಗೆ). 1992 ರಲ್ಲಿ ಕೈಯಲ್ಲಿ ಹಾರೆ, ಗುರಾಣಿಗಳನ್ನು ಝಳಪಿಸುತ್ತ ನಿಮ್ಮ ಕಾಲಾಳುಗಳು ಅಯೋಧ್ಯೆಯಲ್ಲಿ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡರು. ಸಂವಿಧಾನದ ವಿಧಿ ವಿಧಾನಗಳಿಗೆ ಕವಡೆಯಷ್ಟೂ ಕಿಮ್ಮತ್ತನ್ನು ಕೊಡದೆ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದರು. ಆದರೆ ಇದನ್ನು ನಿಮ್ಮ ಕಾಲ ಮೇಲೆ ನೀವೆ ಕಲ್ಲು ಕಲ್ಲು ಹಾಕಿಕೊಂಡಿರೆಂದೇ ಕರೆದರು. ಯಾಕೆ ಗೊತ್ತೆ, ಸದಾ ಏನಾದರೊಂದು ಮಾಡುತ್ತಾರೆ ಎನ್ನುವ ಭಯದ ವಾತಾವರಣವೇ ಹೆಚ್ಚು ಶಕ್ತಿಶಾಲಿಯೇ ಹೊರತು ಅದನ್ನು ಸಾಧಿಸಿ ತೋರಿಸಿ ಬಿಡುವುದಲ್ಲ. ಆದರೆ ದಶಕಗಳ ನಂತರ ನೀವು ಇನ್ನೂ ಇಲ್ಲಿಯೇ ಇದ್ದೀರಿ. ಮೊದಲಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿ, ಮತ್ತಷ್ಟು ಸ್ಪಷ್ಟವಾಗಿ.

ಒಪ್ಪಿಕೊಂಡೆ. ಬಾಬರಿ ಮಸೀದಿಯೇ ಧ್ವಂಸಗೊಂಡ ನಂತರ ರಾಮ ಮಂದಿರದ ಪ್ರಶ್ನೆ ತನ್ನ ಹಿಂದಿನ ತೀವ್ರತೆಯನ್ನು ಕಳೆದುಕೊಂಡಿದೆ. ಇದನ್ನು ನೀವೂ ಒಪ್ಪಿಕೊಳ್ಳುತ್ತೀರಿ. ಇದು ಮುಸ್ಲಿಂರಿಗೆ ಭಾವನಾತ್ಮಕ ವಿಷಯವಾಗಿಯೂ ಉಳಿದಿಲ್ಲವೆಂದು ನಿಮಗೂ ಗೊತ್ತು. babri_masjid_demolitionಇನ್ನು ಅಳಿದುಳಿದಿರುವ ಅವಶೇಷಗಳೊಂದಿಗೆ ನೀವೇನು ಮಾಡಲಿದ್ದೀರೆಂದು ಇಂದು ಯಾರೊಬ್ಬರಿಗೂ ಆಸಕ್ತಿಯಿಲ್ಲ. ಭಾಗವತ್‌ಜೀ ಬಹುಶಃ ಸಂಘಪರಿವಾರ ಇದನ್ನು ಗಮನಿಸಲಿಲ್ಲವೇನೋ. ಏಕೆಂದರೆ ಇಂದು ನೀವು ಪ್ರಚೋದಿಸಿದಷ್ಟೂ ಆವೇಶಗೊಳ್ಳುವ ಗೂಳಿಯ ಮನಸ್ಥಿತಿಯಲ್ಲಿ ಮುಸ್ಲಿಮರಿಲ್ಲ. ಏಕೆಂದರೆ ಈ ರೀತಿಯ ಪ್ರಚೋದನೆಗೆ ಒಳಗಾಗದಿರುವಂತೆ ಮುಸ್ಲಿಮರು ಸಾಕಷ್ಟು ಕಲಿತಿದ್ದಾರೆ. ನಿಮ್ಮ ಇತ್ತೀಚಿನ ಈ ಹಿಂದೂ ಹೇಳಿಕೆಗೆ ನೀವು ನಿರೀಕ್ಷಿಸಿದಷ್ಟು ಅವರು ಪ್ರತಿಕ್ರಯಿಸಲೇ ಇಲ್ಲ ಎನ್ನವುದು ಇತ್ತೀಚಿನ ದಿನಗಳಲ್ಲಿ ಅವರ ಪ್ರತಿಕ್ರಿಯೆಗಳನ್ನು ನೀವು ತುಂಬಾ ಹತ್ತಿರದಿಂದ ಗಮನಿಸಿದರೆ ಗೊತ್ತಾಗುತ್ತದೆ, ಆದರೆ ಇದಕ್ಕೆ ಸೆಕ್ಯುಲರ್ ಹಿಂದೂಗಳ ಆಕ್ರೋಶ ಜೋರಾಗಿತ್ತು.

ನಾನು ನಿಮ್ಮ ಮೇಲೆ ಯಾವ ರೀತಿಯ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದೇನೆಂದರೆ ಮುಸ್ಲಿಂರು ಇಂದು ಚಾಣಾಕ್ಷರಾಗುತ್ತಿದ್ದಾರೆ, ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದಾರೆ. ಬಹುಸಂಖ್ಯಾತ ತತ್ವವನ್ನು ಅತಿಯಾಗಿ ಬಳಸಿ ಅದರ ಮೊನಚೇ ಮೊಂಡಾಗಿದೆ. ಮೊದಲಿನ ಹರಿತವಿಲ್ಲ. ಇಂತಹ ಪ್ರಚೋದನೆಗಳನ್ನು ನಿರ್ಲಕ್ಷಿಸುವುದರ ಮೂಲಕ ಮುಸ್ಲಿಂರು ಅತಿ ಜಾಣತನದಿಂದ ವರ್ತಿಸುತ್ತಿದ್ದಾರೆ, ನಿಮ್ಮ ಆರೆಸಸ್ ಮಂದಿಯೇ ಕಾಲದಲ್ಲಿ ಹೂತು ಹೋಗಿದ್ದಾರೆ, ಮುಸ್ಲಿಂರು ಆರೆಸಸ್‌ನ ಕುರಿತಾದ ಹಳೆಯ ಭಯದಿಂದ ಮುಕ್ತರಾಗುತ್ತಿದ್ದಾರೆ. ಏಕೆಂದರೆ ಹೊಸ ತಲೆಮಾರಿನ ಮುಸ್ಲಿಂ ಯುವಕರಿಗೆ ಇಂದಿನ ಇಂಡಿಯಾದಲ್ಲಿ ತಮ್ಮ ಸ್ಥಾನವೇನೆಂದು ಗೊತ್ತಾಗಿ ಹೋಗಿದೆ. ಆರೆಸಸ್‌ಗೆ ನಿರಂತರ ಆಹಾರ ಒದಗಿಸುತ್ತಿದ್ದ ಮುಸ್ಲಿಂ ಮೂಲಭೂತವಾದಿಗಳ ಶಕ್ತಿಯೂ ಇಂದು ಕುಂದಿ ಹೋಗಿದೆ. ಈ ಮೂಲಕ ಮುಸ್ಲಿಂರ ಪ್ರಚೋದನೆಗಳಿಗೆ ಹಿಂದೂಗಳ ಪ್ರತಿಕ್ರಿಯೆ ಎನ್ನುವ ವಾತಾವರಣವೂ ಕ್ಷೀಣಿಸುತ್ತಿದೆ. ನೋಡುತ್ತಿರಿ ಭಾಗವತ್‌ಜೀ ಹಿಂದೂ ಹಕ್ಕುಗಳ ಏಕಮೇದ್ವತೀಯ ವಾರಸುದಾರ ಎನ್ನುವ ಪಟ್ಟವೂ ಆರೆಸಸ್‌ನಿಂದ ಕಳಚಿಕೊಳ್ಳುತ್ತಿದೆ. ನೀವು ನಿಮ್ಮ ಮುಂದಿನ ರಾಜಾಜ್ಞೆಯನ್ನು ಹೊರಡಿಸುವ ಮೊದಲು ಇಂದು ಇಸ್ಲಾಮೋಫೋಬಿಯಾಗೆ ಮೊದಲಿನ ಹಾಗೆ ಗ್ರಾಹಕರು ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ನೀವು ಎಚ್ಚರಿಕೆಯಿಂದ ಇರದಿದ್ದರೆ ನೀವು ಈ ವ್ಯವಹಾರದಲ್ಲಿ ನಿಮ್ಮ ಸ್ಥಾನವನ್ನೇ ಕಳೆದುಕೊಳ್ಳುತ್ತೀರಿ. ಆದರೆ ಈಗ ಸಧ್ಯಕ್ಕೆ “ಜೈ ಹಿಂದೂ”.