Daily Archives: September 8, 2014

ಬಿ.ಎಂ. ಬಶೀರರ ಬಾಡೂಟದ ಜೊತೆಗೆ ದಿನೇಶ್ ಅಮೀನ್ ಮಟ್ಟು ಭಾಷಣ

ಮಂಗಳೂರಿನಲ್ಲಿ ದಿನಾಂಕ 05-09-14 ರಂದು ನಡೆದ ಪತ್ರಕರ್ತ ಹಾಗೂ ಲೇಖಕ ಬಿ.ಎಮ್ ಬಶೀರ್ ಅವರ “ಬಾಡೂಟದ ಜೊತೆಗೆ ಗಾಂಧೀಜಯಂತಿ” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಹಾಗೂ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಮಾಡಿದ ಭಾಷಣದ ಬರಹರೂಪ.

ನನಗೆ ಇತ್ತೀಚೆಗೆ ಮಾತನಾಡೊದಕ್ಕೆ ಸ್ವಲ್ಪ ಹಿಂಜರಿಕೆಯಾಗುತ್ತಿದೆ. ನಾನು ವಿವಾದದ ವಿಷಯಗಳನ್ನು ಎತ್ತಿಕೊಂಡು ಮಾತನಾಡುತ್ತಿದ್ದೇನೋ ಅಥವಾ ನಾನು ಮಾತನಾಡಿದ್ದೆಲ್ಲವೂ ವಿವಾದವಾಗುತ್ತೋ ಗೊತ್ತಿಲ್ಲ. ಹಿಂದೆ ಮಾತನಾಡೋದಕ್ಕೆ ಬರುವಾಗ ನಾನು ಏನು ಮಾತನಾಡಬೇಕು ಎಂದು ಯೋಚನೆ ಮಾಡಿಕೊಂಡು ಬರುತ್ತಿದ್ದೆ. ಆದರೆ ಈಗ ನಾನು ಏನು ಮಾತನಾಡಬಾರದು ಎಂದು ಯೋಚನೆ ಮಾಡಿಕೊಂಡು ಬರುವಂತಾಗಿದೆ. basheer-book-release-dinesh-1ಇದು ಅಭಿವ್ಯಕ್ತಿ ಸ್ವಾತಂತ್ರದ ಕೊಡುಗೆನೋ ಅಥವಾ ಹರಣನೋ ಗೊತ್ತಾಗುತಿಲ್ಲ. ಅದಕ್ಕಾಗಿ ಎರಡು ವಿಚಾರಗಳ ಕುರಿತಾಗಿ ನಾನು ಮಾತನಾಡುವುದಿಲ್ಲ ಎಂದುಕೊಂಡಿದ್ದೇನೆ. ಆದರೂ ಆ ಮಾತುಗಳು ನನ್ನ ಭಾಷಣದ ನಡುವೆ ಬರಬಹುದು. ಒಂದು ದೇಶದ ಪ್ರಧಾನಿ ನರೇಂದ್ರ ಮೋದಿ ಬಗ್ಗೆಯಾದರೆ ಮತ್ತೊಂದು ನಮ್ಮದೇ ಪತ್ರಿಕೋದ್ಯಮದ ಬಗ್ಗೆ. ಯಾಕೆಂದರೆ ಇತ್ತೀಚೆಗೆ ಒಂದು ಕಡೆ ಮಾಧ್ಯಮದ ಬಗ್ಗೆ ಮಾತನಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ನಾನು ಕಲಿತಿರುವ ಇಂಗ್ಲಿಷ್‌ನಲ್ಲಿ ’ಪ್ಯಾಕೇಜ್’ ಎಂಬ ಪದಕ್ಕೆ ಹಣ ಎಂಬ ಅರ್ಥ ಯಾವ ನಿಘಂಟಿನಲ್ಲೂ ಇಲ್ಲ. ನಾನು ಭಾಷಣದಲ್ಲಿ ಬಳಸಿದ “ಪ್ಯಾಕೇಜ್” ಎಂಬ ಪದವನ್ನು ’ಪತ್ರಕರ್ತರಿಗೆ ಹಣದ ಆಮಿಷ ಒಡ್ಡಿ ನರೇಂದ್ರ ಮೋದಿಯವರು ಪ್ರಚಾರ ಪಡೆದುಕೊಂಡಿದ್ದಾರೆ’ ಎಂಬ ರೀತಿಯಲ್ಲಿ ಸುದ್ದಿಯನ್ನು ತಿರುಚಿ ನನ್ನ ಮೇಲೆ ದಾಳಿ ನಡೆಯಿತು. ಈ ರೀತಿ ಸುದ್ದಿ ಪ್ರಕಟಿಸಿದ ಮಾಧ್ಯಮಗಳ ಅಜ್ಞಾನದ ಬಗ್ಗೆ ನನಗೆ ಕನಿಕರವಿದೆ. ನಾನೊಬ್ಬ ಪತ್ರಕರ್ತ. ಪುರಾವೆಗಳಿಲ್ಲದೆ ನಾನು ಯಾವುದನ್ನೂ ಮಾತನಾಡೋದಿಲ್ಲ. ಟಿವಿ ಚಾನಲ್‌ಗಳಲ್ಲಿ ಪ್ಯಾಕೇಜ್ ಎಂಬ ಪದ ಸಾಮಾನ್ಯ, ಪ್ಯಾಕೇಜ್ ಎಂದರೆ ಸುದ್ದಿಯ ಬಗೆಗೆ ಬಳಸುವಂತಹಾ ಪರಿಭಾಷೆ. ನ್ಯೂಸ್ ಪ್ಯಾಕೇಜ್‌ಗಳ ರೀತಿಯಲ್ಲೇ ’ಜಾಹಿರಾತು ಪ್ಯಾಕೇಜ್’ಗಳೂ ಕೂಡಾ ಇವೆ. ಆದರೆ ಪ್ಯಾಕೇಜ್ ಎಂಬ ಪದದ ಅರ್ಥ ’ಹಣದ ಆಮಿಷ’ ಎಂಬುವುದು ನನಗೆ ಈ ವಿವಾದ ಹುಟ್ಟಿದಾಗಲೇ ಗೊತ್ತಾಗಿದ್ದು.

ಬರೆಯುವುದು ಬಹಳ ಕಷ್ಟ. ಆದರೆ ಸೃಜನಶೀಲ ಬರವಣಿಗೆಗಳಾದ ಕಥೆ, ಕವನ, ಕಾದಂಬರಿಗಳನ್ನು ಬರೆಯುವುದು ಸುಲಭ. ಅದನ್ನು ಬರೆಯುವವರ ಕ್ಷಮೆ ಕೋರಿ ಈ ಮಾತನ್ನು ಹೇಳುತ್ತಿದ್ದೇನೆ. ಆದರೆ ಸೃಜನಶೀಲೇತರ ಬರವಣಿಗೆ ಬರೆಯೋದು ಕಷ್ಟ. ಸೃಜನಶೀಲ ಬರವಣಿಗೆಯಲ್ಲಿ ಅತ್ಯಂತ ವಿವಾದಾತ್ಮಕ ವಿಷಯಗಳನ್ನು basheer-book-release-dinesh-2ರೂಪಕಗಳ ಮೂಲಕ , ಉಪಮೆಗಳ ಮೂಲಕ ತೇಲಿಬಿಡಬಹುದು. ಆದರೆ ಸೃಜನಶೀಲೇತರ ಬರವಣಿಗೆಯಾಗಿರುವ ಪತ್ರಿಕೆಗಳ ಬರವಣಿಗೆಯಲ್ಲಿ ಏನು ಹೇಳಬೇಕೋ ಅದನ್ನು ನೇರವಾಗಿ, ಸ್ಪಷ್ಟವಾಗಿ, ನಿಷ್ಠುರವಾಗಿ ಹೇಳಬೇಕಾಗುತ್ತದೆ. ಅದರಿಂದ ಈ ರೀತಿಯ ಬರವಣಿಗೆ ಕಷ್ಟ. ಅದರಲ್ಲೂ ಪತ್ರಕರ್ತರ ಬರವಣಿಗೆ ಇನ್ನೂ ಕಷ್ಟ. ಅದರಲ್ಲೂ ಮುಸ್ಲಿಮ್ ಪತ್ರಕರ್ತನಾಗಿ ಬರೆಯೋದು ಮತ್ತಷ್ಟೂ ಕಷ್ಟದ ಕೆಲಸ. ಪತ್ರಕರ್ತನ ಕಷ್ಟ ಅಲ್ಲಿಗೆ ನಿಲ್ಲೋದಿಲ್ಲ. ಒಬ್ಬ ಸಾಮಾನ್ಯ ಮನುಷ್ಯನ ಕಣ್ಣಿಗೆ ಕಾಣದೇ ಇರುವಂತಹಾ, ಕಿವಿಗೆ ಕೇಳದೇ ಇರುವಂತಹಾ ವಿಚಾರಗಳು ಒಬ್ಬ ಪತ್ರಕರ್ತನ ಕಣ್ಣಿಗೆ ಕಾಣುತ್ತದೆ ಹಾಗೂ ಕಿವಿಗೆ ಕೇಳುತ್ತದೆ. ಆದರೆ ಕಣ್ಣಿಗೆ ಕಂಡದ್ದೆಲ್ಲಾ, ಕಿವಿಗೆ ಕೇಳಿದ್ದೆಲ್ಲಾ ಅವನು ವರದಿ ಮಾಡುವ ಸ್ಥಿತಿಯಲ್ಲಿರುವುದಿಲ್ಲ , ಯಾಕೆಂದರೆ ಅದಕ್ಕೆ ಪುರಾವೆಗಳ ಅಗತ್ಯತೆ ಇದೆ. ಅದರಿಂದಾಗಿ ಅದು ಒಳಗೊಳಗಡೇ ಆತನನ್ನು ದಹಿಸುತ್ತಿರುತ್ತದೆ. ಆದುದರಿಂದಲೇ ಬಹಳಷ್ಟು ಮಂದಿ ಪತ್ರಕರ್ತರು ವಯಸ್ಸಾದ ನಂತರ ಸಿನಿಕರಾಗಿಬಿಡುತ್ತಾರೆ. ನಾನು ಮುಂಗಾರು ಪತ್ರಿಕೆಯಲ್ಲಿ ಪ್ರಾರಂಭದ ದಿನಗಳಲ್ಲಿದ್ದಾಗ ಬಹಳಷ್ಟು ಮಂದಿ ಹಿರಿಯ ಪತ್ರಕರ್ತರು ಸಿನಿಕತೆಯ ಹಂತದಲ್ಲಿದ್ದರು. ನನಗೂ ಕೆಲವೊಮ್ಮೆ ನಾನೊಬ್ಬ ಸಿನಿಕ ಪತ್ರಕರ್ತನಾಗುವ ಕೆಟ್ಟ ಕನಸು ಬೀಳುತಿತ್ತು. ನನಗೆ ಮುಖ್ಯಮಂತ್ರಿಯ ’ಮಾಧ್ಯಮ ಸಲಹೆಗಾರ’ ಹುದ್ದೆಯ ಆಹ್ವಾನ ಬಂದಾಗ ನನಗೆ ಎರಡು ರೀತಿಯ ಪ್ರತಿಕ್ರಿಯೆಗಳು ಬಂದವು. ಹಿರಿಯ ಪತ್ರಕರ್ತ ಮಿತ್ರರು ಪತ್ರಿಕೋದ್ಯಮ ಕ್ಷೇತ್ರ ಬಿಟ್ಟು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಹುದ್ದೆಯ ಆಹ್ವಾನ ಸ್ವೀಕರಿಸುವಂತೆ ಸಲಹೆ ನೀಡಿದರು. ಆದರೆ ಯುವ ಪತ್ರಕರ್ತರು ನನ್ನನ್ನು ಈ ಕ್ಷೇತ್ರ ಬಿಟ್ಟು ಹೋಗದಂತೆ ಒತ್ತಾಯ ಮಾಡಿದರು. ಈಗಲೂ ವಾಪಾಸು ಬರುವಂತೆ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಕಾರಣ, ನನಗೆ ತಿಳಿದುಬಂದ ಅನೇಕ ವಿಚಾರಗಳನ್ನು ಸುದ್ದಿ ಮಾಡಲು ಸಾಧ್ಯವಾಗುವುದಿಲ್ಲ ಎಂಬುವುದು. ಇದನ್ನೆಲ್ಲವನ್ನೂ ಆತ ನಿತ್ಯ ಅನುಭವಿಸಬೇಕಾಗುತ್ತದೆ. ಆದ್ದರಿಂದ ಬರೆಯುವುದು ಕಷ್ಟ, ಸೃಜನಶೀಲೇತರ ಬರವಣಿಗೆ ಇನ್ನೂ ಕಷ್ಟ, ಅದರಲ್ಲೂ ಮುಖ್ಯವಾಗಿ ಒಬ್ಬ ಮುಸ್ಲಿಮನಾಗಿ ಬರೆಯುವುದು ಇತ್ತೀಚಿನ ದಿನಗಳಲ್ಲಿ ಬಹಳ ಕಷ್ಟ.

ಬರಹಗಾರನಿಗೆ ತನ್ನ ಬರಹ ತಟ್ಟುವುದು ಆತ ಹೃದಯದಿಂದ ಬರೆದಾಗ ವಿನಹಃ ಬುದ್ದಿಯಿಂದ ಬರೆದಾಗಲ್ಲ. ಇತ್ತೀಚೆಗೆ ಸ್ವಾತಂತ್ರ ದಿನಾಚರಣೆಯಂದು ಒಬ್ಬ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯ ಭಾಷಣಗಳ ಪೈಕಿ ಯಾರದ್ದು ಸಪ್ಪೆ ಯಾರದ್ದು ಸ್ಫೂರ್ತಿದಾಯಕ ಎಂದು ಮಾದ್ಯಮಗಳು ಹೋಲಿಕೆ ಮಾಡುತ್ತಿದ್ದವು. dinesh-aminmattuನಾನು ದೆಹಲಿಯಲ್ಲಿದ್ದಾಗ ಮಹಾತ್ಮ ಗಾಂಧಿಯ ಭಾಷಣದ ರೆಕಾರ್ಡಿಂಗ್‌ಗಳನ್ನು ಆಲಿಸುತ್ತಿದ್ದೆ. ಮಹಾತ್ಮ ಗಾಂಧಿಯ ಭಾಷಣ ಕೇಳಿದರೆ ಅದು ಅತ್ಯಂತ ಪೀಚಲು ಮತ್ತು ಅತ್ಯಂತ ಕೀರಲು ಧ್ವನಿ. ಆದರೆ ಗಾಂಧಿ ಒಂದು ಕರೆ ಕೊಟ್ಟ ಕೂಡಲೇ ಲಕ್ಷಾಂತರ ಮಂದಿ ಬಂದು ಗುಂಡಿಗೆ ಎದೆಕೊಡುತ್ತಿದ್ದರು. ಲಾಠಿಗೆ ತಲೆ ಕೊಡುತ್ತಿದ್ದರು. ಯಾಕೆಂದರೆ ಆ ಮನುಷ್ಯನ ಮಾತಿಗೂ ಕೃತಿಗೂ ಸಂಬಂಧವಿತ್ತು. ಆವರು ಹೃದಯದಿಂದ ಮಾತನಾಡುತ್ತಿದ್ದರು ವಿನಹಃ ಬುದ್ದಿಪೂರ್ವಕವಾಗಿ ಮಾತನಾಡುತ್ತಿರಲಿಲ್ಲ. ಆದರೆ ಇತ್ತೀಚಿನ ಬಹಳಷ್ಟು ನಾಯಕರು ಹೃದಯದಿಂದ ಮಾತನಾಡುತ್ತಿಲ್ಲ ಬದಲಾಗಿ ಬುದ್ದಿಪೂರ್ವಕವಾಗಿ ಮಾತನಾಡುತ್ತಾರೆ. ಆದರೆ ಒಬ್ಬ ಪತ್ರಕರ್ತ ಹೃದಯದಿಂದ ಮಾತನಾಡುತ್ತಾನೆ. ಆದರೆ ಇವತ್ತಿನ ಪತ್ರಿಕೋದ್ಯಮದ ಬಹಳ ದೊಡ್ಡ ಸಮಸ್ಯೆ ಅಂದರೆ ಪತ್ರಕರ್ತರು ಇನ್‌ಸೆನ್ಸಿಟ್ವಿವ್ ಆಗಿದ್ದಾರೆ. ಅದಕ್ಕೆ ಕಾರಣ ವೃತ್ತಿ ಜೀವನದ ಸಂಪರ್ಕ. ಪತ್ರಕರ್ತರಿಗೆ ಒಳ್ಳೆಯವರಿಗಿಂತ ಕೆಟ್ಟವರ ಜೊತೆಗೇ ಹೆಚ್ಚಿನ ಸಂಪರ್ಕ. ಇಂಥವರ ಜೊತೆ ಆಟವಾಡುತ್ತಾ ನಾವೇ ಆಟದ ಮೈದಾನದೊಳಗೆ ಸೇರಿಬಿಡುತ್ತಿದ್ದೇವೆ. ಪತ್ರಕರ್ತರು ಇನ್‌ಸೆನ್ಸಿಟಿವ್ ಆಗುತ್ತಿರುವುದರಿಂದಲೇ ಆತನಿಗೆ ಯಾವುದೋ ಅಪಘಾತದಲ್ಲಿ ಆದ ಒಬ್ಬನ ಸಾವಿಗಿಂತಲೂ ಹತ್ತು ಜನರ ಸಾವು ಸಂಭ್ರಮವನ್ನು ಕೊಡುತ್ತದೆ. ಆತ ಹತ್ತು ಸಾವು ಆಗಬೇಕು ಎಂದು ಖಂಡಿತಾ ಬಯಸಿಲ್ಲ. ಇಂಥಹಾ ಪರಿಸ್ಥಿತಿಗಳನ್ನು ನೋಡಿ ನೋಡಿ ಪತ್ರಕರ್ತ ಸೂಕ್ಷತೆಯನ್ನು, ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದಾನೆ. ಯಾವ ಬರವಣಿಗೆಯಲ್ಲಿ ಸಂವೇದನಾಶೀಲತೆ ಇರುವುದಿಲ್ಲವೋ ಅದು ಒಣ ಬರವಣಿಗೆಯಾಗಿರುತ್ತದೆ. ನಾನು ಇದನ್ನು ಯಾಕೆ ಪ್ರಸ್ತಾಪ ಮಾಡಿದ್ದೇನೆ ಎಂದರೆ, ಬಿ.ಎಮ್. ಬಶೀರ್ ಇಷ್ಟು ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿದ್ದೂ ಕೂಡಾ ಆ ಸಂವೇದನಾಶೀಲತೆಯನ್ನು ಉಳಿಸಿಕೊಂಡಿದ್ದಾರೆ. ಅದಕ್ಕಾಗಿ ಅವರಿಗೆ ಇಂತಹ ಬರಹ ಸಾಧ್ಯವಾಗಿದೆ. ನಮ್ಮಲ್ಲಿರುವ ಬಹಳಷ್ಟು ಕವಿಗಳು, ಸಾಹಿತಿಗಳು ಪತ್ರಕರ್ತರಾದ ಕೂಡಲೇ ಅವರ ಸೃಜನಶೀಲ ಬರವಣಿಗೆಯಿಂದ ಹಿಂದಕ್ಕೆ ಸರಿಯುತ್ತಾರೆ. ಆದರೆ ಬಶೀರ್ ಅವರು ಇವತ್ತಿಗೂ ಉತ್ತಮ ಕವಿತೆಗಳನ್ನು ಬರೆಯುತ್ತಾರೆ. ಒಬ್ಬ ಪತ್ರಕರ್ತನಿಗೆ ಮುಖ್ಯವಾಗಿ ಬೇಕಾಗಿರುವುದು ಸಂವೇದನಾಶೀಲತೆ. ಅಂದರೆ ಸಾಮಾಜಿಕ ಜವಾಬ್ದಾರಿ.

ನನಗೆ ಇನ್ನೊಂದು ಆಶ್ಚರ್ಯ ಏನೆಂದರೆ, ಮುಸ್ಲಿಮ್ ಲೇಖಕರಲ್ಲಿ ಬಹಳಷ್ಟು ಮಂದಿ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ. sara abubakarಬೊಳುವಾರು, ಪಕೀರ್ ಮುಹಮ್ಮದ್ ಕಟ್ಪಾಡಿ, ಸಾರಾ ಅಬೂಬಕ್ಕರ್, ಮುಹಮ್ಮದ್ ಕುಳಾಯಿ, ಬಿ.ಎಮ್. ಬಶೀರ್ ಇವರೆಲ್ಲರೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದವರು. ಮುಸ್ಲಿಮರಲ್ಲಿ ಸಾಕ್ಷರತೆ ಕಡಿಮೆ. ಮಾತೃ ಭಾಷೆ ಬ್ಯಾರಿ. ಹಾಗೂ ಸಾಹಿತ್ಯ ವಲಯದ ಪರಿಸರದಲ್ಲೂ ಬೆಳೆದು ಬಂದವರಲ್ಲ. ಇಂಥಹಾ ಪರಿಸ್ಥಿತಿಯಲ್ಲೂ ಕನ್ನಡದಲ್ಲಿ ಮಹತ್ವದ ಲೇಖಕರಾಗಿ ಹೇಗೆ ಬೆಳೆದು ಬಂದರು ಎಂಬುವುದು ಆಶ್ಚರ್ಯದ ಸಂಗತಿ. ಇದು ಗಮನಾರ್ಹವೂ ಆಗಿದೆ. ಇದಲ್ಲದೆ ಸಾಕಷ್ಟು ಯುವ ಮುಸ್ಲಿಮ್ ಲೇಖಕರು ಕೂಡಾ ಬೆಳೆದುಬರುತ್ತಿದ್ದಾರೆ. ’ಮುಸ್ಲಿಮ್ ಲೇಖಕರ ಸಂಘ’ವನ್ನೂ ಕಟ್ಟಿಕೊಂಡಿದ್ದಾರೆ. ’ಮುಸ್ಲಿಮ್ ಲೇಖಕರ ಸಂಘ’ದ ಬಗ್ಗೆ ಮಾತನಾಡಿದರೆ ಅದೊಂದು ವಿವಾದದ ವಿಚಾರವಾಗುತ್ತದೆಯಾದ್ದರಿಂದ ಅದರ ಬಗ್ಗೆ ಮಾತನಾಡಲು ಹೋಗೋದಿಲ್ಲ. ಮುಸ್ಲಿಮ್ ಲೇಖಕರಲ್ಲಿ ನಾನು ಇನ್ನೊಂದು ಸಂಗತಿಯನ್ನು ಗಮನಿಸಿದ್ದೇನೆ, 80 ರ ದಶಕಗಳಲ್ಲಿ ಬೊಳುವಾರು ಮುಹಮ್ಮದ್ ಕುಂಙಯವರ ಕಥೆಗಳು, ಕಾದಂಬರಿ ಒಂಥರಾ ಸೆನ್ಸೇಶನಲ್ ಆಗಿದ್ದವು. ಆದರೆ ಅದರ ನಂತರ ಅಂದರೆ 90ರ ದಶಕಗಳಲ್ಲಿ ಇದ್ದಕ್ಕಿದ್ದಾಗೆ ಸಾಹಿತ್ಯ ವಲಯದ ಮುಸ್ಲಿಮ್ ಧ್ವನಿಗಳು ಸ್ಥಬ್ಧವಾಗಿವೆ ಎಂಬ ಅಭಿಪ್ರಾಯ ನಮ್ಮಲ್ಲಿದೆ.

ಬೊಳುವಾರು ಒಂದು ಚಳುವಳಿಯ ರೂಪದಲ್ಲಿ ಬರೆದರು. ಆದರೆ ಇನ್ನೂ 80, 90 ವರ್ಷಗಳವರೆಗೂ ಅವರೇ ಬರೆಯಬೇಕು ಎಂಬುವುದನ್ನು ನಾವು ನಿರೀಕ್ಷೆ ಮಾಡಬಾರದು. ಬಹಳಷ್ಟು ಮಂದಿ ಚಳುವಳಿ ಅಥವಾ ಹೋರಾಟವನ್ನು ಒಂದು ಪ್ರಾಜೆಕ್ಟ್ ಎಂದು ತಿಳಿದುಕೊಂಡಿರುತ್ತಾರೆ. ಚಳುವಳಿಗಳು ಒಂದು ಪ್ರಾಜೆಕ್ಟ್ ಅಲ್ಲ. ಅದೊಂದು ಪ್ರಕ್ರಿಯೆ ಎಂದು ನಾವು ಮೊದಲು ಅರಿಯಬೇಕು. ಬೊಳುವಾರರು ರಿಲೇ ಬ್ಯಾಟನ್ ಹಿಡಿದುಕೊಂಡು ಒಂದಷ್ಟು ದೂರ ಓಡಿಕೊಂಡು ಬಂದಿದ್ದಾರೆ. ಅದರ ನಂತರ ಆ ಬ್ಯಾಟನ್ ಹಿಡಿದುಕೊಂಡು ಮುಂದಿನ ತಲೆಮಾರು ಓಡಬೇಕಿದೆ. ಯಾವುದೇ ಚಳುವಳಿಯು ಸ್ಥಬ್ಧವಾಗಿದೆ ಎಂದು ಅನ್ನಿಸಲು ಕಾರಣ ಆ ಬ್ಯಾಟನ್ ಹಿಡಿದುಕೊಂಡು ಹೋಗುವ ಮುಂದಿನ ತಲೆಮಾರುಗಳು ನಿಷ್ಕ್ರಿಯವಾದಾಗ. ಬೊಳುವಾರು, ಫಕೀರ್ ಮುಹಮ್ಮದ್ ಕಟ್ಪಾಡಿ ಮತ್ತು ಸಾರಾ ಅಬೂಬಕ್ಕರ್ ಪರಂಪರೆ ಎಲ್ಲೋ ನಿಂತ ಹಾಗೆ ನಮಗೆ ಯಾಕೆ ಅನ್ನಿಸುತ್ತದೆ ಅಂದರೆ, ಅದರ ನಂತರ ಅವರಷ್ಟೇ ತೀವ್ರವಾಗಿ ಅನುಭವಿಸಿ, ಅಷ್ಟೇ ತೀಕ್ಷವಾಗಿ ಬರೆಯುವ ಲೇಖಕರು ನಮಗೆ ಕಾಣಿಸುತ್ತಿಲ್ಲ. ಇದಕ್ಕೆ ಬಹಳ ಮುಖ್ಯವಾದ ಕಾರಣನೂ ಇದೆ. ಬಾಬರೀ ಮಸೀದಿ ಧ್ವಂಸದ ನಂತರ ಎದ್ದ ಹಿಂದುತ್ವದ ಅಲೆ ಅಬ್ಬರದಲ್ಲಿ ಇವರ ಧ್ವನಿಗಳು ಉಡುಗಿ ಹೋಯಿತು. ಮುಖ್ಯವಾಗಿ ಬೊಳುವಾರು ಹಾಗೂ ಸಾರಾ ಅಬೂಬಕ್ಕರ್ ಸಾಹಿತ್ಯವನ್ನು ನೋಡಿದರೆ, ಅವರು ಉಳಿದವರ ಬಗ್ಗೆ ಬರೆಯಲೇ ಇಲ್ಲ. ಅವರು ಅವರೊಳಗಿದ್ದದ್ದನ್ನು ಬರೆದರು. ಒಂದು ಆತ್ಮವಿಮರ್ಶನಾ ದಾಟಿಯಲ್ಲಿ ಬರೆದರು. ಮುಸ್ಲಿಮ್ ಸಮುದಾಯದ ಒಳಗಿನ ಕಂದಾಚಾರಗಳ ಬಗ್ಗೆ, ಅಲ್ಲಿರುವ ಪುರೋಹಿತಶಾಹಿಗಳ ಬಗ್ಗೆ ಬರೆದರು. ಆದರೆ ಬಾಬರೀ ಮಸೀದಿ ಧ್ವಂಸದ ನಂತರದ ಬೆಳವಣಿಗೆಯು ಈ ರೀತಿ ಮುಸ್ಲಿಂ ಸಮುದಾಯದೊಳಗಿನ ಕಂದಾಚಾರಗಳ ಬಗ್ಗೆ ಬರೆದರೂ ಕೂಡಾ ಅದನ್ನು ಬೇರೆ ಯಾರೋ ಬಂಡವಾಳ ಮಾಡಿಕೊಳ್ಳುತ್ತಾರೆ ಎಂಬ ಭಯ ಆವರಿಸಲಾರಂಭಿಸಿತು. 90 ರ ದಶಕದ ನಂತರ ಭುಗಿಲೆದ್ದ ಕೋಮುವಾದಿ ವಾತಾವರಣವು ಬಹಳಷ್ಟು ಪ್ರಗತಿಪರ ಮುಸ್ಲಿಂ ಲೇಖಕರ ಬಾಯನ್ನು ಮುಚ್ಚಿಸಿತು.

ಮುಖ್ಯವಾಗಿ ದಕ್ಷಿಣ ಕನ್ನಡದಲ್ಲಿ ಒಂದಂತೂ ಬಹಳ ವಿಚಿತ್ರ. ದಕ್ಷಿಣ ಕನ್ನಡದಲ್ಲಿ ಬಹಳಷ್ಟು ಕಟ್ಟರ್ ಕೋಮುವಾದಿಗಳು ಇದ್ದಾರೆ. ಇಲ್ಲಿರುವಷ್ಟು ಕಟ್ಟರ್ ಕೋಮುವಾದಿಗಳು ಬಹುಷಃ ಬೇರೆ ರಾಜ್ಯಗಳಲ್ಲಿ ಇಲ್ಲ ಎಂದು ನನಗನಿಸುತ್ತದೆ. ಆದರೆ ಇಲ್ಲಿ ಅತ್ಯಂತ ಕಟ್ಟರ್ ಸೆಕ್ಯುಲರ್ ವಾದಿಗಳೂ ಕೂಡಾ ಇದ್ದಾರೆ. ಇತ್ತಿಚೆಗೆ ಬೆಂಗಳೂರಿನಲ್ಲಿ ಜನಶಕ್ತಿ ವಾರಪತ್ರಿಕೆಯ ಸೆಮಿನಾರ್‌ನಲ್ಲಿ ಭಾಗವಹಿಸಿದ್ದೆ. ಅಲ್ಲಿ ಪತ್ರಿಕೋದ್ಯಮದ ಬಗ್ಗೆ ಮಾತನಾಡಲಿಕ್ಕೆ ಇದ್ದವರು ಎಂದರೆ, ನಾನು, ಎನ್.ಎ.ಎಮ್. ಇಸ್ಲಾಯಿಲ್ ಮತ್ತು ನವೀನ್ ಸೂರಿಂಜೆ. ಒಂದು ಕಡೆ ದಕ್ಷಿಣ ಕನ್ನಡವನ್ನು ಹಿಂದುತ್ವದ ಪ್ರಯೋಗ ಶಾಲೆ ಮಾಡಿದವರು ಇಲ್ಲಿನ ಪತ್ರಿಕೋದ್ಯಮವನ್ನೂ ಪ್ರಯೋಗ ಶಾಲೆ ಮಾಡಿದ್ದಾರೆ ಎನ್ನುವ ಆರೋಪ ಇದೆ. ಕೊನೆಗೆ ಅದರ ವಿರುದ್ಧ ಮಾತನಾಡಲಿಕ್ಕೆ ಮಂಗಳೂರು ಮೂಲದ ಪತ್ರಕರ್ತರನ್ನೇ ಆರಿಸುವಂತಹಾ ಪರಿಸ್ಥಿತಿ. ಇದು ಬಹಳ ದೊಡ್ಡ ಸಂಘರ್ಷ.

ಬಹು ಸಂಸ್ಕೃತಿ ಬಹಳ ದೊಡ್ಡ ಶಕ್ತಿ. ಬಹುಸಂಸ್ಕೃತಿ ಎಷ್ಟು ದೊಡ್ಡ ಶಕ್ತಿಯೋ ಅಷ್ಟೇ ದೊಡ್ಡ ದೌರ್ಬಲ್ಯ ಕೂಡಾ ಹೌದು. ನಾನು ಬಹಳ ಹಿಂದೆ ದಕ್ಷಿಣ ಕನ್ನಡದ ಕೋಮುವಾದದ ಬಗ್ಗೆ ಅಂಕಣ ಬರೆದಿದ್ದೆ. ಮಾಜಿ ಸಚಿವ ಬಿ.ಎಮ್. ಮೊಯ್ದಿನ್ ಅವರು ಈಗಲೂ ಅದನ್ನು ನೆನಪಿಸಿಕೊಂಡು ಮಾತನಾಡುತ್ತಿರುತ್ತಾರೆ. ಇಲ್ಲಿಯ ಈ ಬಹುಸಂಸ್ಕೃತಿಯನ್ನು ಹಿಂದುಗಳು, ಮುಸ್ಲಿಮರು, ಕೈಸ್ತ್ರರು ಕೂಡಿ ಕಟ್ಟಿದ್ದರು. ನಾನು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾಗ ಮತ್ತು ಅದರ ನಂತರದ ವಿದ್ಯಾರ್ಥಿ ದೆಸೆಯಲ್ಲಿಯೂ ಕೂಡಾ ನನಗೆ ಬಹಳ ಮಂದಿ ಮೊಗವೀರ ಸಮುದಾಯದ ಮಿತ್ರರಿದ್ದರು. ನೀವು ಕರಾವಳಿಯ ಮತ್ಸ್ಯೋಧ್ಯಮವನ್ನು ಗಮನಿಸಿ. ಸಮುದ್ರಕ್ಕೆ ಹೋಗಿ ಮೀನು ಹಿಡಿಯುವವರು ಮೊಗವೀರರು. ಮೊಗವೀರರು ಹಿಡಿದು ತಂದ ಮೀನನ್ನು ಮಾರಾಟ ಮಾಡುವುದು ಬ್ಯಾರಿಗಳು. ಇದು ಬಹಳ ವರ್ಷಗಳ ಕಾಲದಿಂದ ನಡೆದುಕೊಂಡು ಬಂದಿದೆ. ಮಂಗಳೂರು ಮಲ್ಲಿಗೆ ವ್ಯಾಪಾರವೂ ಇಂತಹುದೇ ರೀತಿಯದ್ದು. ಮಲ್ಲಿಗೆಯನ್ನು ಬಹುತೇಕ ಬೆಳೆಯುವವರು ಕ್ರೈಸ್ತರು. ಮಾರಾಟ ಮಾಡುವವರು ಮುಸ್ಲಿಮರು. ಮಲ್ಲಿಗೆಯ ಗ್ರಾಹಕರು ಮಾತ್ರ ಹಿಂದೂ ಮಹಿಳೆಯರು. ಇವೆಲ್ಲಾ ಬಹು ದೊಡ್ಡ ಬಹುಸಂಸ್ಕೃತಿಯ- ಸಾಮರಸ್ಯದ ಸಂಕೇತವಾಗಿದೆ. ವಿಪರ್ಯಾಸವೆಂದರೆ ಈ ಸಾಮರಸ್ಯದ ಪ್ರಸಂಗವನ್ನಿಟ್ಟುಕೊಂಡೇ ಇಲ್ಲಿ ಕೋಮುವಾದ ಬೆಳೆದಿರುವುದು. ಮೊಗವೀರರು ಹಾಗೂ ಮುಸ್ಲಿಮರ ನಡುವಿನ ಬಾಂಧವ್ಯದಲ್ಲಿ ಮಹಿಳೆಯರ ವಿಷಯವನ್ನು ಮುಂದಿಟ್ಟುಕೊಂಡು ಯುವಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸಿ ಅವರ ನಡುವೆ ಒಂದು ರೀತಿಯ ಒಡಕನ್ನು ಉಂಟುಮಾಡಲಾಯಿತು.

ಇರಲಿ, ನನಗಿಂತ ಕಿರಿಯರಾಗಿರುವ ಪತ್ರಕರ್ತ, ಸಾಹಿತಿ ಬಿ.ಎಮ್. ಬಶೀರ್ ಅವರು ತಪ್ಪು ತಿಳಿದುಕೊಳ್ಳುವುದಿಲ್ಲ basheer-book-release-dinesh-3ಎಂದು ಭಾವಿಸಿಕೊಳ್ಳುತ್ತಾ ಅವರಿಗೆ ಕೆಲವು ಮಾತುಗಳನ್ನು ಸಲಹೆ ರೂಪದಲ್ಲಿ ಹೇಳುವುದಕ್ಕೆ ಬಯಸುತ್ತೇನೆ. ಬಿ.ಎಂ. ಬಶೀರ್ ಅವರ ಅಂಕಣಗಳನ್ನು ಓದಿದಾಗ, ಅದು ’ಸಾಫ್ಟ್ ಕಾರ್ನರ್’ನಲ್ಲಿದೆ ಎನಿಸುತ್ತದೆ. ಅವರು ಅಂಕಣಗಳನ್ನು ಇನ್ನಷ್ಟು ದಿಟ್ಟತನ, ನಿಷ್ಠುರತೆಯಿಂದ ಬರೆಯಬೇಕಾಗಿದೆ. ಹತ್ತು ವರ್ಷಗಳ ಹಿಂದಿನ ಬಶೀರ್‌ಗೂ ಈಗಿನ ಬಶೀರ್‌ಗೂ ಸಾಕಷ್ಟು ವ್ಯತ್ಯಾಸವಿದೆ. ಬಶೀರ್ ಇವತ್ತು ಸಾಹಿತ್ಯ, ಪತ್ರಿಕಾ ವಲಯದಲ್ಲಿ ಚಿರಪರಿಚಿತರು. ಅವರು ಸಾಹಿತ್ಯ ವಲಯದಲ್ಲಿ ಮತ್ತು ಪತ್ರಿಕೋದ್ಯಮದಲ್ಲಿ ತನ್ನದೇ ಆದ ವರ್ಚಸ್ಸನ್ನು ಹೊಂದಿದ್ದಾರೆ. ನಾನು ಆಗಲೇ ಹೇಳಿದಂತೆ ಬೊಳುವಾರು, ಪಕೀರ್ ಮಹಮ್ಮದ್ ಕಟ್ಪಾಡಿ ಹಾಗೂ ಸಾರಾ ಅಬೂಬಕ್ಕರ್ ಒಂದಷ್ಟು ದೂರ ಓಡಿ ಬಂದಿದ್ದಾರೆ. ಅವರ ಆ ಓಟವನ್ನು ಇವತ್ತು ಮುಂದುವರಿಸಬೇಕಾಗಿದೆ. ಬಶೀರ್ ಅವರ ಈ ಪುಸ್ತಕವನ್ನು ತೆಗೆದು ನೋಡಿದರೆ, ನಾನು ಏನನ್ನು ಹುಡುಕುತ್ತಿದ್ದೇನೋ ಅದು ಸಿಗುತ್ತಿಲ್ಲ. ಒಬ್ಬ ಮುಸ್ಲಿಮ್ ಲೇಖಕನ ಪುಸ್ತಕವನ್ನು ಎತ್ತಿಕೊಂಡಾಗ ನಾನು ಅದರಲ್ಲಿ ಓದಿ ತಿಳಿದುಕೊಳ್ಳಲು ಬಯಸುವುದು ನಮ್ಮ ಅರಿವಿಗೆ ಬಾರದ ಮುಸ್ಲಿಂ ಲೋಕವನ್ನು. ಆದರೆ ಬಿ.ಎಂ. ಬಶೀರ್ ಬರೆದಿರುವ ಈ ಪುಸ್ತಕದಲ್ಲಿ ಅವ್ಯಾವುದೂ ಇಲ್ಲ. ಮುಸ್ಲಿಂ ಸಮುದಾಯದೊಳಗಿನ ತಲ್ಲಣಗಳು, ಸಮುದಾಯದ ಕಷ್ಟ ಸುಖಗಳು, ಕಂದಾಚಾರಗಳು, ಮೂಲಭೂತವಾದದ ಸಮಸ್ಯೆಗಳು ಬಶೀರ್ ಬರವಣಿಗೆಯಲ್ಲಿ ಕಾಣುತ್ತಿಲ್ಲ. ಉದಾಹರಣೆಗೆ ಕಳೆದ 10 ವರ್ಷಗಳಲ್ಲಿ ಮಂಗಳೂರಿನಲ್ಲಿ ಅಲ್ಪಸಂಖ್ಯಾತರನ್ನು ಹೆಚ್ಚು ಸಂಕಷ್ಟಕ್ಕೆ ಸಿಲುಕಿಸಿದ್ದು ಮತ್ತು ಮುಸ್ಲೀಮರನ್ನು ಅಪನಂಬಿಕೆಗೆ ಒಳಪಡಿಸಿದ್ದು ’ಲವ್ ಜಿಹಾದ್’ ಎಂಬ ಸುಳ್ಳು ವಿಚಾರ ಮತ್ತು ನೈತಿಕ ಪೊಲೀಸ್‌ಗಿರಿ. ನೂರಾರು ಸಂಖ್ಯೆಯಲ್ಲಿ ನಡೆದ ನೈತಿಕ ಪೊಲೀಸ್‌ಗಿರಿ, ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಬಶೀರ್ ಪುಸ್ತಕದಲ್ಲಿ ಕಾಣುತ್ತಿಲ್ಲ. ಇದಲ್ಲದೆ ಇವತ್ತಿಗೆ ಮುಸ್ಲಿಮರಲ್ಲೂ ಕೂಡಾ ಮೂಲಭೂತವಾದಿ ಸಂಘಟನೆಗಳು ಹುಟ್ಟಿಕೊಂಡಿವೆ. ಮುಸ್ಲಿಂ ಮೂಲಭೂತವಾದ ಮತ್ತು ಕೋಮುವಾದದ ಬಗ್ಗೆ ನೀವು ಬರೆಯಬೇಕಾಗುತ್ತದೆ. ನಮ್ಮಂತವರು ನಿಮ್ಮ ಜೊತೆ ನಿಲ್ಲೋದಕ್ಕಾಗಿಯಾದರೂ ನೀವು ಬರೆಯಬೇಕಾಗುತ್ತದೆ. ನಾನು ಸ್ವಾಮಿ ವಿವೇಕಾನಂದರ ಬಗ್ಗೆ ಬರೆದಾಗ ನನಗೆ ಬೆದರಿಸಿ ಬಂದ ಬಹುತೇಕ ಕರೆಗಳಲ್ಲಿ ಕೇಳಿದ ಒಂದೇ ಒಂದು ಪ್ರಶ್ನೆ — ಸೂ…. ಮಗನೇ, ನೀನು ವಿವೇಕಾನಂದರ ಬಗ್ಗೆ ಬರೀತಿಯಾ. ನಿನಗೆ ಧೈರ್ಯವಿದ್ದರೆ ಮುಹಮ್ಮದ್ ಪೈಗಂಬರ ಬಗ್ಗೆ ಬರಿ.— ಬಶೀರ್‌ರವರಂತಹ ಲೇಖಕರು ಪ್ರವಾದಿ ಬಗ್ಗೆ ಬರೆಯಬೇಕೆಂದು ಹೇಳೋದಲ್ಲ. ಮುಸ್ಲಿಮರ ಒಳಗೇ ಇರುವಂತಹಾ ಮೂಲಭೂತವಾದ, ಪುರೋಹಿತಶಾಹಿಗಳ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಮೂಲಭೂತವಾದವಾದವು ನಿಮ್ಮ ಅಭಿವ್ಯಕ್ತಿಯ ಶಕ್ತಿಯನ್ನೇ ಭ್ರಷ್ಟಗೊಳಿಸುತ್ತದೆ. ಮೂಲಭೂತವಾದವೆಂದರೆ ಕೇವಲ ಹಿಂದೂ ಮುಸ್ಲೀಮರ ಜಗಳ ಎಂದು ನೀವು ತಿಳಿದುಕೊಳ್ಳಬೇಡಿ. ಮೂಲಭೂತವಾದವು ಅದನ್ನೂ ಮೀರಿದ್ದಾಗಿರುತ್ತದೆ. ಆದರೂ ಮಂಗಳೂರಿನ ಮಹಮ್ಮದ್ ಇರ್ಷಾದ್‌ನಂತಹ ಮುಸ್ಲಿಂ ಯುವ ಲೇಖಕರು, ಪತ್ರಕರ್ತರು ಈಗಲೂ ದಿಟ್ಟತನದಿಂದ ಬರೆಯುತ್ತಾರೆ. ನನ್ನ ಜೊತೆಗೂ ಯುವ ಲೇಖಕರು ಪತ್ರಕರ್ತರು ಈ ಬಗ್ಗೆ ಜಗಳ ಮಾಡುತ್ತಾರೆ. ನಾನು ಇತ್ತೀಚೆಗೆ ಮಂಗಳೂರಿನ ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮಕ್ಕೆ ಹೋಗಿ ಭಾಷಣ ಮಾಡಿದಾಗ ನನ್ನ ಮೇಲೆ ದಾಳಿ ನಡೆಸೋ ರೀತಿಯಲ್ಲಿ ಲೇಖನಗಳನ್ನು ಬರೆದ ಮಹಮ್ಮದ್ ಇರ್ಷಾದ್, ನವೀನ್ ಸೂರಿಂಜೆ ಈಗಲೂ ಉತ್ತಮ ಸ್ನೇಹಿತರು. ಇದೆಲ್ಲಾ ನೋಡಿದಾಗ ಖುಷಿಯಾಗುತ್ತದೆ. ಮುಸ್ಲಿಂ ಸಮುದಾಯದೊಳಗಿನ ತಲ್ಲಣಗಳು, ಕಂದಾಚಾರಗಳು, ಮೂಲಭೂತವಾದಗಳ ಬಗ್ಗೆ ಬರೆಯುವ ಲೇಖಕರ ಸಂಖ್ಯೆ ಹೆಚ್ಚಾಗಬೇಕಿದೆ.

ಡಾ. ಯು.ಆರ್. ಅನಂತಮೂರ್ತಿ ನಿಧನದ ನಂತರ ಫೇಸ್‌ಬುಕ್‌ನಲ್ಲಿ ನಾನೊಂದು ಸ್ಟೇಟಸ್ ಅಪ್‌ಡೇಟ್ ಮಾಡಿದ್ದೆ. ನಮ್ಮ ಸಮಾಜದಲ್ಲಿ ಸಜ್ಜನರು ಬಹುಸಂಖ್ಯೆಯಲ್ಲಿದ್ದಾರೆ. ಜಾತ್ಯಾತೀತವಾಗಿ ಯೋಚನೆ ಮಾಡುವವರು ಬಹುಸಂಖ್ಯೆಯಲ್ಲಿದ್ದಾರೆ. ದುಷ್ಟರು ಕೋಮುವಾದಿಗಳು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಸಮಸ್ಯೆ ಏನಂದರೆ ಸಜ್ಜನರು ಹಾಗೂ ಜ್ಯಾತ್ಯಾತೀತವಾದಿಗಳು ಸದಾ ಮೌನಿಗಳಾಗಿರುತ್ತಾರೆ. ಕೋಮುವಾದಿಗಳು ಹಾಗೂ ದುಷ್ಟರು ಕೂಗುಮಾರಿಗಳಾಗಿದ್ದಾರೆ. ಅವರ ಕೂಗಿನ ಮುಂದೆ ನಾವೇ ಅಲ್ಪಸಂಖ್ಯಾತರು ಎಂಬ ಆತಂಕ ನಮ್ಮನ್ನು ಕಾಡುತ್ತದೆ. ಆ ಆತಂಕವನ್ನು ಹೋಗಲಾಡಿಸಬೇಕಾದರೆ ನಾವು ಈ ಮೌನವನ್ನು ಮುರಿದು ಮಾತನಾಡಬೇಕು. ಎಲ್ಲಾ ಸಮುದಾಯದಲ್ಲಿರುವ ಪ್ರಗತಿಪರ ಮನಸ್ಸುಗಳೂ ಮೌನ ಮುರಿದು ಮಾತನಾಡಬೇಕು. ಮುಸ್ಲಿಂ ಜನಾಂಗದ ಲೇಖಕರೂ ಕೂಡಾ ದಿಟ್ಟತನದಿಂದ, ನಿಷ್ಠುರವಾಗಿ ಅವರ ಒಳಗಿನ ಸಂಕಟಗಳ ಬಗ್ಗೆ ಧ್ವನಿ ಎತ್ತಬೇಕು.

ಮುಸ್ಲಿಂ ಸಮುದಾಯದಲ್ಲಿ ಬುರ್ಕಾ ವಿಚಾರವು ಚರ್ಚೆಗೆ ಅರ್ಹವಾದ ವಿಚಾರ. ಶಿವಮೊಗ್ಗ ಜಿಲ್ಲೆಯಲ್ಲಿ ಗಲಾಟೆಯಾದಾಗ “ಮುಸ್ಲಿಮರಿಗೆ ಉದಾರವಾದಿ ನಾಯಕನೊಬ್ಬ ಸಿಗಲಿ ಎಂದು ಹಾರೈಸುತ್ತಾ” ಎಂದು ಒಂದು ಲೇಖನ ಬರೆದಿದ್ದೆ. ಬಹಳಷ್ಟು ಮುಸ್ಲಿಮ್ ಸಿನಿಮಾ ನಟಿಯರು ಬುರ್ಖಾ ಹಾಕೋದೆ ಇಲ್ಲ. ಬೆನಜಿರ್ ಬುಟ್ಟೋ ತಲೆಗೆ ಸ್ಕಾರ್ಪ್ ಹಾಕುತ್ತಿದ್ದರೇ ವಿನಹಃ ಬುರ್ಖಾ ತೊಡುತ್ತಿರಲಿಲ್ಲ. ಬಾಂಗ್ಲಾ ದೇಶದ ಶೇಕ್ ಹಸೀನಾ ಕೂಡಾ ಬುರ್ಖಾ ಹಾಕುತ್ತಿರಲಿಲ್ಲ. ಬುರ್ಕಾದ ಕಾರಣಕ್ಕಾಗಿ ಅವರ ವಿರುದ್ಧ ಜನ ದಂಗೆಯೇನೂ ಎದ್ದಿರಲಿಲ್ಲ. ಬದಲಾಗಿ ಅವರು ನಾಯಕರಾದರು. ಬುರ್ಖಾವನ್ನ ಹಿಂದೂ ಸಂಘಟನೆಗಳು ವಿರೋಧಿಸಿದಾಗ ಅದಕ್ಕೆ ಪ್ರತಿಕ್ರಿಯೆಯಾಗಿ ನಾವು ಕೂಡಾ ಅದನ್ನು ವಿರೋಧ ಮಾಡಿದರೆ ಅವರ ಒತ್ತಡಕ್ಕೆ ನಾವು ಬಲಿಯಾದಂತಾಗುತ್ತದೆ. ಹಿಂದೂ ಸಂಘಟನೆಗಳು ಮಾತನಾಡುವುದಕ್ಕೂ ಮೊದಲೇ ನಾವು ಮಾತನಾಡಬೇಕು. 25 ರಿಂದ 30 ವರ್ಷದೊಳಗಿನ ಮುಸ್ಲಿಮ್ ಮಹಿಳೆಯರನ್ನು ಬುರ್ಖಾ ಬೇಕೋ ಬೇಡವೋ ಎಂದು ರಹಸ್ಯ ಮತದಾನ ನಡೆಸಿದರೆ ಬಹುಸಂಖ್ಯೆಯ ಮಹಿಳೆಯರು ಬುರ್ಕಾ ಬೇಡ ಅನ್ನಬಹುದು. ಬಹಿರಂಗವಾಗಿ ಬುರ್ಕಾ ಬೇಡ ಎನ್ನಲು ಮುಸ್ಲಿಂ ಮಹಿಳೆಯರಿಗೆ ಧೈರ್ಯವಿರುವುದಿಲ್ಲ. ಒಬ್ಬ ಲೇಖಕ ಈ ರೀತಿ ಒಳ ಧ್ವನಿಗಳಿಗೆ ಧ್ವನಿಯಾಗಬೇಕು. ಮುಸ್ಲಿಮರ ಒಳಗಿರುವ ಕಂದಾಚಾರಗಳು, ಅವರೊಳಗಿನ ಸಂಕಟಗಳಿಗೆ ಧ್ವನಿಯಾಗಬೇಕು. ಹಾಗಾದಾಗ ನಾವೊಂದು ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಗೆಳೆಯ ಬಿ.ಎಂ. ಬಶೀರ್ ಅವರ ಮುಂದಿನ ಬರವಣಿಗೆಗೆಳು ಈ ದಿಕ್ಕಿನಲ್ಲಿ ಸಾಗಲಿ ಎಂದು ಹಾರೈಸುತ್ತೇನೆ. ನಮಸ್ಕಾರ.