ಪುಗಸಟ್ಟೆ ಪವರ್ ಎಂಬೋ ಪುಂಗಿ ಪುರಾಣ ಅಥವಾ ರೈತರು ಯಾರಪ್ಪನ ಮನೆದೂ ತಿನ್ನುತ್ತಿಲ್ಲ


– ಶ್ರೀಧರ್ ಪ್ರಭು


ನಮ್ಮ ದೇಶದ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಲ್ಲಿ ಸಾರ್ವಜನಿಕರು ಜಮೆ ಮಾಡಿರುವ ಹಣ ಸರಿ ಸುಮಾರು ೭೫,೦೦೦ ಕೋಟಿ ರೂಪಾಯಿಯಷ್ಟು. ಹಾಗೆಯೇ, ಈ ದೇಶದ ನಾನೂರು ಗಣ್ಯ ಉದ್ಯಮಿಗಳು ಸೇರಿ ಇದೇ ಬ್ಯಾಂಕುಗಳಿಗೆ ತಿಕ್ಕಿರುವ ಉಂಡೆ ನಾಮದ ಮೊತ್ತ ೭೦,೩೦೦ ಕೋಟಿ ರೂಪಾಯಿ. ನಮ್ಮ ದೇಶದ ಸರಕಾರಗಳು ಮತ್ತು ಕಾನೂನು ರೀತ್ಯ ಜವಾಬ್ದಾರಿ ಇರುವ ರಿಸರ್ವ್ ಬ್ಯಾಂಕ್ ಈ ಅಂಕಿ ಅಂಶಗಳನ್ನು ಚಿದಂಬರ ರಹಸ್ಯದಂತೆ ಕಾಪಾಡಿಕೊಂಡು ಬಂದಿವೆ. ಆದರೆ ಹೀಗೆ ದೇಶದ ಸಂಪತ್ತು ಕೊಳ್ಳೆಹೋಗುತ್ತಿರುವುದನ್ನು ಧೈರ್ಯವಾಗಿ ಸಾರ್ವಜನಿಕಗೊಳಿಸುತ್ತಿರುವುದು ಬ್ಯಾಂಕ್ ನೌಕರರ ಸಂಘಟನೆಯೇ (AIBEA) ಹೊರತೂ, ಸರಕಾರ ಅಥವಾ ರಿಸರ್ವ್ ಬ್ಯಾಂಕ್ ಅಲ್ಲ ಎಂಬುದು ಗಮನಾರ್ಹ.

ಇದಕ್ಕಿಂತ ಗಮನಾರ್ಹವೆಂದರೆ, ಹೀಗೆ ಸಾರ್ವಜನಿಕವಾಗಿ ಅವರ ವಿವರಗಳು ಫೋಟೋ ಸಮೇತ ಹೊರಬಿದ್ದಾಗ, bankersಬ್ಯಾಂಕುಗಳಿಗೆ ಟೋಪಿ ಹಾಕಿರುವ ಯಾವ ಉದ್ಯಮಿಯೂ, ಇದುವರೆಗೂ, ಆತ್ಮಹತ್ಯೆ ಮಾಡಿಕೊಂಡ್ಡಿದ್ದು ಹಾಗಿರಲಿ, ಕನಿಷ್ಠ ಬೇಜಾರು ಮಾಡಿಕೊಂಡ ಪ್ರಸಂಗವೂ ಇಲ್ಲ. ಇನ್ನೊಂದೆಡೆ, ಜುಜುಬಿ ಹಣದ ಮೇಲೆ ಮೀಟರ್ ಬಡ್ಡಿ ಹಾಕಿಸಿಕೊಂಡು, ಸಾಲ ತೀರಿಸಲಾಗಲಿಲ್ಲ ಎಂಬ ಕೊರಗಿನಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟಾರೆ, ಅದು ಐದ್ಹತ್ತು ರೂಪಾಯಿಯೇ ಆಗಲಿ, ‘ಸಾಲಗಾರ’ ಎಂದು ಆರೋಪ ಹೊತ್ತು ಬದುಕುವುದರ ಬದಲು ರೈತ ಸಾವನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವುದು ದುರಂತಮಯ.

ಈ ‘ಸಾಲಗಾರ’ ಎಂಬ ಆರೋಪಕ್ಕಿಂತ ‘ಪುಕ್ಕಟೆ ಕೂಳು ತಿನ್ನುವವ’ ಎಂಬ ಆರೋಪ ಇನ್ನೂ ಹೀನಾಯವಾದ್ದು. ಬೆಳಿಗ್ಗೆ ಹೊತ್ತು ಗಂಟೆಗೆ ಮೂರು ಬಾರಿ ವಿದ್ಯುತ್ ಕಡಿತ ಜೊತೆಗೆ ನಂಜಿಕೊಳ್ಳಲು ವೋಲ್ಟೇಜ್ ಸಮಸ್ಯೆ ಹಾಗೇ ರಾತ್ರಿ ಹೊತ್ತು ಹಾವು-ಚೇಳು ಕಚ್ಚಿಸಿಕೊಂಡು ದಿನವೂ ಸತ್ತು ಸತ್ತು ಬದುಕುತ್ತಿರುವ ರೈತರು ಖಡಾ ಖಂಡಿತವಾಗಿ ನಂಬಿರುವ ಸತ್ಯವೇನೆಂದರೆ: ವಿದ್ಯುತ್ ಸರಬರಾಜು ಕಂಪನಿಗಳು ಅವರಿಗೆ ಉಚಿತ ವಿದ್ಯುತ್ ಸರಬರಾಜು ಮಾಡುತ್ತಿವೆ. ಈ ಅಪರಾಧಿ ಪ್ರಜ್ಞೆ ರೈತರನ್ನು ಅತಿಯಾಗಿ ಕಾಡುತ್ತಿದೆ. ರೈತರಿಗೆ ಎಂದಲ್ಲ, ಸಾಮುದಾಯಿಕವಾಗಿ ಎಲ್ಲರೂ ನಂಬಿರುವ ಸತ್ಯವೂ ಇದೇನೇ. ಆದರೆ ಇದು ನಿಜಕ್ಕೂ ನಿಜವೇ? ನೀವೇ ತೀರ್ಮಾನಿಸಿ.

ಮೊದಲಿಗೊಂದು ನಿದರ್ಶನ.

ನೀವು ನಿಮ್ಮ ಮಗನೊಂದಿಗೆ ಹೋಟೆಲ್ ಗೆ ಹೋಗಿ ಎರಡು ಪ್ಲೇಟ್ ಇಡ್ಲಿ ವಡೆ ಆರ್ಡರ್ ಮಾಡಿದಿರಿ ಎಂದುಕೊಳ್ಳಿ. ಬಿಲ್ ಕೊಡುವುದು ನೀವೇ ಎಂದು ಸುಲಭವಾಗಿ ತೀರ್ಮಾನಿಸಿದ ಮಾಣಿ ನಿಮಗೆ ಮಾತ್ರ ಇಡ್ಲಿ ವಡೆ ಆದರೆ ನಿಮ್ಮ ಮಗನಿಗೆ ಬರಿ ಇಡ್ಲಿ (ಚಟ್ನಿ ಕೂಡ ಇಲ್ಲದ್ದು) ಕೊಟ್ಟು, ಬಿಲ್ ಮಾತ್ರ ಎರಡು ಪ್ಲೇಟ್ ಇಡ್ಲಿ ವಡೆಗೇ ಕೊಟ್ಟರೆ ಏನು ಮಾಡುತ್ತೀರಿ? ಹೀಗೇ ಸಾಗಿರುವುದು ಈ ಉಚಿತ ವಿದ್ಯುತ್ ಗಾಥೆ.

ಹೇಗೆ ಅಂತೀರಾ?

೨೦೦೩ ರ ವಿದ್ಯುತ್ ಶಕ್ತಿ ಕಾಯಿದೆಯ ಪ್ರಕಾರ ರೈತರಿಗೂ ಸೇರಿದಂತೆ ಯಾರಿಗೂ ಪುಕ್ಕಟೆಯಾಗಿ ಅಥವಾ ಸರಬರಾಜಿನ ಖರ್ಚಿಗಿಂತ ಕಡಿಮೆ ದರದಲ್ಲಾಗಲಿ ವಿದ್ಯುತ್ ಸರಬರಾಜು ಮಾಡುವುದು ಕಾನೂನುಬಾಹಿರ. ಈ ಕಾನೂನು ಪ್ರಕಾರ ವಿದ್ಯುತ್ ದರ ಅಥವಾ ಸರಬರಾಜು ಅವಧಿಯನ್ನು ತೀರ್ಮಾನಿಸುವ ಹಕ್ಕಿರುವುದು ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗಕ್ಕೆ ಮಾತ್ರ. electricity-linesಸರಕಾರಕ್ಕೆ ಯಾವ ಅಧಿಕಾರವೂ ಇಲ್ಲ. ಹಾಗೊಂದು ವೇಳೆ ಸರಕಾರ ರೈತರಿಗೋ ಇಲ್ಲ ಇನ್ನೊಂದು ವರ್ಗಕ್ಕೋ ಉಚಿತ ವಿದ್ಯುತ್ ನೀಡಲು ನೀತಿ ನಿರೂಪಿಸಿದರೆ, ಸರಬರಾಜು ಕಂಪನಿಗಳಿಗೆ ಉಚಿತ (ಅಥವಾ ಕಡಿಮೆ ದರದ) ವಿದ್ಯುತ್ ಸರಬರಾಜು ಮಾಡಲು ತಗಲುವ ಸಂಪೂರ್ಣ ಖರ್ಚು ವೆಚ್ಚವನ್ನು ಸರಕಾರ ಪೂರ್ತಿಯಾಗಿ ಭರಿಸಿ ಕೊಡಬೇಕು. ಹೀಗಾಗಿ, ರೈತರಿಗೆ ಉಚಿತ ವಿದ್ಯುತ್ ಕೊಡುವುದರಿಂದ, ವಿದ್ಯುತ್ ಕಂಪನಿಗಳಿಗೆ ದಮಡಿ ಕಾಸಿನ ನಷ್ಟವೂ ಆಗುವುದಿಲ್ಲ. ನಮ್ಮ ರಾಜ್ಯದ ಐದು ವಿದ್ಯುತ್ ಕಂಪನಿಗಳು ಸರಕಾರದಿಂದ ರೈತರ ಹೆಸರಿನಲ್ಲಿ ವರ್ಷಕ್ಕೆ ಸುಮಾರು ಐದು ಸಾವಿರದ ಇನ್ನೂರು ಕೋಟಿ ರೂಪಾಯಿ ಹಣ ಪಡೆಯುತ್ತಿವೆ. ಹಾಗಿದ್ದೂ, ರೈತರಿಗೆ ವಿದ್ಯುತ್ ಸರಬರಾಜಿನಲ್ಲಿ ಖೋತಾ ಮಾಡುತ್ತಿರುವುದು ಏಕೆ? ರೈತ ಏಕೆ ಸುಮ್ಮನಿರುತ್ತಾನೆ? ಈಗ ಮೇಲಿನ ಇಡ್ಲಿ-ವಡೆ ಲೆಕ್ಕ ಮತ್ತೊಮ್ಮೆ ಓದಿ.

ಇನ್ನೊಂದು ವಿಚಾರ, ಸರಕಾರ ಈ ಐದು ಸಾವಿರದ ಇನ್ನೂರು ಕೋಟಿ ಹಣ ಹೇಗೆ ಹೊಂದಿಸುತ್ತದೆ ಗೊತ್ತೇ? ಪ್ರತಿ ಗ್ರಾಹಕನೂ ಕೊಡುವ ವಿದ್ಯುತ್ ಬಿಲ್ಲಿನ ಮೊತ್ತಕ್ಕೆ ಶೇಕಡಾ ಐದರಷ್ಟು ವಿದ್ಯುತ್ ತೆರಿಗೆಯನ್ನು ವಿಧಿಸಿ ಈ ಹಣ ಹೊಂದಿಸಲಾಗುತ್ತದೆ. ಈ ಪದ್ಧತಿ ಐವತ್ತರ ದಶಕದಿಂದಲೂ ಜಾರಿಯಲ್ಲಿದೆ. ಹೀಗಾಗಿ ಸರಕಾರಕ್ಕೆ ಕೂಡ ರೈತರಿಗೆ ವಿದ್ಯುತ್ ಸರಬರಾಜು ಮಾಡಿಸಲು ಯಾವ ರೀತಿಯಲ್ಲೂ ಹೊರೆಯಾಗುವುದಿಲ್ಲ. ಸರಕಾರ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಖರ್ಚನ್ನು ಹೊಂದಿಸುತ್ತಿದೆ.

ರಾಜ್ಯ ಸರಕಾರ ಹೊರಡಿಸಿರುವ ಈ ಉಚಿತ ವಿದ್ಯುತ್ ಆದೇಶದ ಪ್ರಕಾರ ಸರಬರಾಜು ಕಂಪನಿಗಳು ಮೀಟರ್ ಅಳವಡಿಸಿದ ಸ್ಥಾವರಗಳಿಗೆ ಮಾತ್ರ ಉಚಿತ ವಿದ್ಯುತ್ ಲಭ್ಯ. ಹೀಗಾಗಿ ಮೀಟರ್ ಇಲ್ಲದ ಸ್ಥಾವರಗಳಿಗೆ ಸರಕಾರ ನ್ಯಾಯವಾಗಿ ಸಬ್ಸಿಡಿ ಕೊಡಬೇಕೆಂದೇನೂ ಇಲ್ಲ. ಆದರೆ ಸರಬರಾಜು ಕಂಪನಿಗಳು ಇದಕ್ಕೊಂದು ಒಳದಾರಿ ಕಂಡುಕೊಂಡಿವೆ. ಒಂದು ಪಂಪ್ ಸೆಟ್ ಗೆ ಸರಬರಾಜು ಮಾಡಲು ಇಂತಿಷ್ಟು ಖರ್ಚು, ಒಟ್ಟು ಪಂಪ್ ಸೆಟ್ ಗಳು ಇಂತಿಷ್ಟು ‘ಬೀರಬಲ್ಲನ ಊರಿನಲ್ಲಿರುವ ಕಾಗೆಗಳ’ ಲೆಕ್ಕ ತೋರಿಸಿ ಕಂಪನಿಗಳು ಸಬ್ಸಿಡಿ ಹಣ ಪಡೆಯುತ್ತಿವೆ. ವಿದ್ಯುತ್ ಕಾಯಿದೆಯನ್ನು ಕಡೆಗಣಿಸಿ,ಗುಂಡಾಗುತ್ತಿಗೆ ಲೆಕ್ಕದಲ್ಲಿ ಐದುಸಾವಿರದ ಇನ್ನೂರು ಕೋಟಿಯಷ್ಟು ಹಣ ಕೊಡಲು ಸರಕಾರಕ್ಕೆ ಆದೇಶ ಕೊಟ್ಟಿರುವುದು ಸ್ವತಃ ವಿದ್ಯುತ್ ನಿಯಂತ್ರಣ ಆಯೋಗ. ಈ ಪದ್ಧತಿಯನ್ನು ನಿಯಂತ್ರಣ ಆಯೋಗದ ಮೇಲಿನ (ಹೈ ಕೋರ್ಟಿನ ಮಾಜಿ ಮುಖ್ಯ ನ್ಯಾಯಾಧೀಶರಿರು ಅಧ್ಯಕ್ಷರಾಗಿರುವ) ಅಪೀಲು ನ್ಯಾಯಾಧಿಕರಣ ಕೂಡ ಅನುಮೋದಿಸಿದೆ.

ಒಟ್ಟಿನಲ್ಲಿ, ರೈತರಿಗೆ ವಿದ್ಯುತ್ ಸರಬರಾಜು ಮಾಡುತ್ತೇವೆ ಎಂದು ಆಶ್ವಾಸನೆ ನೀಡಿ ರಾಜ್ಯದ ಕಂಪನಿಗಳು ಸರಕಾರದಿಂದ water-pumpsetರೈತರ ಹೆಸರಿನಲ್ಲಿ ಪಡೆಯುತ್ತಿರುವ ಹಣ ಸದ್ವಿನಿಯೋಗವಾಗಿದ್ದೇ ನಿಜವಾದರೆ ಯಾವ ರೈತನೂ ಹಾವು ಚೇಳು ಕಚ್ಚಿಸಿಕೊಳ್ಳುವ ಪ್ರಮೇಯ ಇರಲಿಲ್ಲ. ಒಟ್ಟಾರೆ ದುಡ್ಡು ಸಂದಾಯವಾದ ಮೇಲೆ ರೈತನಿಗೆ ವಿದ್ಯುತ್ ಕೊಡಲು ಈ ಕಂಪನಿಗಳಿಗೆ ಏನು ಕಷ್ಟ? ಇನ್ನು ದುಡ್ಡು ಪಡೆಯುತ್ತಿರುವುದು ಕಾಗೆ ಲೆಕ್ಕದ ಗುಂಡಾ ಗುತ್ತಿಗೆ ಮೇಲೆ ಎಂದ ಮೇಲೆ ಮೀಟರ್ ಅಳವಡಿಸಿಲ್ಲ ಎಂಬ ಸಬೂಬು ಏಕೆ?

ಮಂಗಳೂರು ವಿದ್ಯುತ್ಶಕ್ತಿ ಕಂಪನಿ (ಮೆಸ್ಕಾಂ), ತಾನೇ ಹೇಳಿಕೊಳ್ಳುವಂತೆ ಶೇಕಡಾ ತೊಂಬತ್ತು ಭಾಗ ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಕೆ ಮಾಡಿದೆಯಂತೆ. ಇರಬಹುದು ಎಂದಿಟ್ಟುಕೊಳ್ಳೋಣ. ಹಾಗದ ಮೇಲೆ, ರೈತರಿಗೆ ಸರಬರಾಜಾಗುವ ವಿದ್ಯುತ್ ಅಳೆಯುವುದು ಅತಿ ಸುಲಭವಾಗಲಿಲ್ಲವೇ? ಈ ಗುಂಡಾ ಗುತ್ತಿಗೆ ಲೆಕ್ಕ ಏಕೆ ಬೇಕು? ಹಾಗಿದ್ದೂ, ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ, ಮೆಸ್ಕಾಂಗೂ ಗುಂಡಾ ಗುತ್ತಿಗೆಯ ಲೆಕ್ಕದಲ್ಲಿ ಸಬ್ಸಿಡಿ ಕೊಡಲು ಸರಕಾರಕ್ಕೆ ಆದೇಶ ಕೊಟ್ಟಿದೆ. ಹಾಗೆಂದು ಮೀಟರ್ ಅಳವಡಿಸುವ ಖರ್ಚು ಮೆಸ್ಕಾಂ ಗ್ರಾಹಕರ ಮೇಲೆ ಹೇರಲು ನಿಯಂತ್ರಣ ಆಯೋಗ ಮರೆತಿಲ್ಲ. ಸಬ್ಸಿಡಿ ಬರುವುದು ಗುಂಡಾ ಗುತ್ತಿಗೆಯ ಲೆಕ್ಕದಲ್ಲಿ ಎಂದ ಮೇಲೆ ಮೀಟರ್ ಏಕೆ ಅಳವಡಿಸಬೇಕು? ಮೀಟರ್ ಅಳವಡಿಕೆಗೆ ತಗಲುವ ವೆಚ್ಚ ಗ್ರಾಹಕರು ಏಕೆ ಭರಿಸಬೇಕು? ಇದಕ್ಕೆಲ್ಲ ಯಾರ ಹತ್ತಿರವೂ ಉತ್ತರವಿಲ್ಲ.

ಸಾರ್ವಜನಿಕರಿಗೆ ಈ ರೀತಿ ತೊಂದರೆಯಾಗುತ್ತಿರುವುದು ತಪ್ಪಿಸಲು ಮತ್ತು ರೈತರ ಹೆಸರಿನಲ್ಲಿ ತಾನು ಕೊಡುವ ಸಬ್ಸಿಡಿ ಬಳಕೆ ಸದ್ವಿನಿಯೋಗ ಆಗಬೇಕು ಎಂಬ ಅಸೆಯಿಂದ, ೨೦೧೦ ರಲ್ಲಿ ರಾಜ್ಯ ಸರಕಾರ ತನ್ನದೇ ಕಂಪನಿಗಳ ಮೇಲೊಂದು ಕೇಸ್ ಹಾಕಿತು. ಈ ಕೇಸನ್ನು ಸಾರ್ವಜನಿಕರು ಸಂಪೂರ್ಣ ಬೆಂಬಲಿಸಿದರು. ಆದರೆ ಗುಂಡಾ ಗುತ್ತಿಗೆಯ ಸಬ್ಸಿಡಿ ಲೆಕ್ಕವೇ ಸರಿ ಎಂದು ಸಾರಿ ನಿಯಂತ್ರಣ ಆಯೋಗ ಸರಕಾರದ ಕೇಸನ್ನು ವಜಾ ಮಾಡಿತು. ಈಗ ಹೇಳಿ, ರೈತ ಮೀಟರ್ ಏಕೆ ಅಳವಡಿಸಬೇಕು? ತಪ್ಪು ಯಾರದು?

ಬಡವರಿಗೆ, ಅದರಲ್ಲೂ ರೈತರಿಗೆ, ಏನಾದರೂ ಸೌಲಭ್ಯ ಸಿಕ್ಕರೆ ಸಿಡಿಮಿಡಿಗೊಳ್ಳುವ ಮಧ್ಯಮ ವರ್ಗ ಕೂಡ ಗಮನಿಸಬೇಕಿರುವ ಒಂದು ಅಂಶ ಇದೆ. farmers-suicideಗೃಹ ಬಳಕೆಯ ವಿದ್ಯುತ್ ಸರಬರಾಜು ಮಾಡಲು ಸರಬರಾಜು ಕಂಪನಿಗಳಿಗೆ ಕೊಂಚ ಮಟ್ಟಿನ ನಷ್ಟ ತಗಲುತ್ತದೆ. ಈ ಹಣವನ್ನು ಸರಕಾರದಿಂದ ಇಲ್ಲವೇ ಬೇರೆ ಗ್ರಾಹಕರ ಜೇಬಿನಿಂದ ಹೊಂದಿಸಲಾಗುತ್ತದೆ. ಹಾಗೆಯೇ ಗೃಹ ಬಳಕೆದಾರರಿಗೆ ನೀರು ಬಿಸಿ ಮಾಡಲು ಸೌರ ವಿದ್ಯುತ್ ಯಂತ್ರ ಬಳಸಿದರೆ ಪ್ರತಿ ಯೂನಿಟ್ ಗೆ (ನೂರು ಯೂನಿಟ್ ವರೆಗೆ ಮಾತ್ರ) ಐವತ್ತು ಪೈಸೆ ಲಾಭವಿದೆ. ಇದರಿಂದಲೂ ವಿದ್ಯುತ್ ಕಂಪನಿಗಳಿಗೆ ಯಾವ ನಷ್ಟವೂ ಇಲ್ಲ. ಏಕೆಂದರೆ, ಈ ಐವತ್ತು ಪೈಸೆ ಕಡಿಮೆ ದರದ ನಷ್ಟ ಭರಿಸುವುದು ಬೇರೆ ಗ್ರಾಹಕರೇ ವಿನಃ ಕಂಪನಿಗಳಲ್ಲ. ಹಳ್ಳಿಗಳಲ್ಲಿ ತಣ್ಣೀರು ಸ್ನಾನ ಮಾಡಿ ಯಾವುದೇ ಹೀಟರ್ ಬಳಕೆ ಮಾಡದ ರೈತ, ಮಧ್ಯಮ ವರ್ಗದ ಜನರನ್ನು ಪೋಷಿಸುತ್ತಿದ್ದಾನೆ.

ರೈತ ತನಗೆ ಉಚಿತ ವಿದ್ಯುತ್ ಕೊಡಿ ಎಂದು ಯಾರ ಕಾಲೂ ಹಿಡಿಯಲಿಲ್ಲ. ಎಲ್ಲ ಪಕ್ಷಗಳೂ ರೈತನಿಗೆ ಅಸೆ ತೋರಿಸಿ ವೋಟನ್ನು ಬಾಚಿವೆ. ವಿಶ್ವ ಬ್ಯಾಂಕ್ ಪ್ರೇರಿತ ವಿದ್ಯುತ್ ಕಾಯಿದೆಯಲ್ಲಿನ ತಮಗೆ ಬೇಕಿರುವ ಅಂಶಗಳು ಮಾತ್ರ ಜಾರಿ ಮಾಡಿ, ರೈತರ ಹೆಸರಿನಲ್ಲಿ ಸಬ್ಸಿಡಿ ಹಣ ಪಡೆದು, ರೈತನಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿವೆ. ಇದೇ ನಿಯಂತ್ರಣ ಆಯೋಗ ಗ್ರಾಹಕರಲ್ಲಿ ‘ಜಾಗೃತಿ’ ಮೂಡಿಸುವ ‘ಶಿಕ್ಷಣ’ ಕೊಡಲು ಬೆಂಗಳೂರು ಸರಬರಾಜು ಕಂಪನಿಯೊಂದಕ್ಕೇ ಸುಮಾರು ಒಂದು ಕೋಟಿ ಹಣ ನಿಗದಿ ಮಾಡಿದೆ. ಗ್ರಾಹಕರಿಗೆ ಶಿಕ್ಷಣ ಸಿಕ್ಕಿತೋ ಇಲ್ಲವೇ ರೈತರಿಗೆ ಶಿಕ್ಷೆ ಸಿಕ್ಕಿತೋ – ನೀವೇ ತೀರ್ಮಾನಿಸಿ.

ಒಟ್ಟಿನಲ್ಲಿ, ರೈತ ಯಾರಪ್ಪನದ್ದೂ ತಿನ್ನುತ್ತಿಲ್ಲ; ರೈತನ ಸಂಪತ್ತನ್ನೇ ರೈತನ ಹೆಸರಿನಲ್ಲಿ, ಎಲ್ಲರೂ ತಿನ್ನುತ್ತಿದ್ದಾರೆ.

3 comments

  1. ತುಂಬಾ ಸಕಾಲಿಕ ಲೇಖನ. ನನಗೆ ತಿಳಿಯದ ಎಷ್ಟೋ ವಿಷಯಗಳನ್ನು ತಿಳಿಸಿಕೊಟ್ಟಿದ್ದೀರಿ. ರೈತರನ್ನು ಕುರಿತ ಕತೆಯೊಂದನ್ನು ಚಿತ್ರವಾಗಿಸುವ ಹಾದಿಯಲ್ಲಿದ್ದವನಿಗೆ ಕರೆಂಟ್ ಟ್ರೀಟ್ಮೆಂಟು ಕೊಟ್ಟ ಲೇಖಕರಿಗೆ ಧನ್ಯವಾದಗಳು.

  2. ರೈತನ ಸ್ವಾಭಿಮಾನವನ್ನು ಕಡೆಗಣಿಸಿ ಅವನನ್ನು ಅಣುಅಣುವಾಗಿ ಕುಬ್ಜನನ್ನಾಗಿಸುವ ವಿನಾಯ್ತಿ, ರಿಯಾಯ್ತಿ ನಾಟಕಗಳೇಕೆ?

Leave a Reply

Your email address will not be published.