ಎರಡನೇ “ಯುವ ಚೈತನ್ಯ ಮತ್ತು ನಾಯಕತ್ವ ತರಬೇತಿ” ಶಿಬಿರ


– ರವಿ


ವರ್ತಮಾನ.ಕಾಮ್ ಪ್ರಿಯ ಓದುಗರೇ,

ಇದೇ ಡಿಸೆಂಬರ್ 6 ಮತ್ತು 7 (ಶನಿವಾರ ಮತ್ತು ಭಾನುವಾರ) ದಂದು ಜನ ಸಂಗ್ರಾಮ ಪರಿಷತ್ ವತಿಯಿಂದ ರಾಣೆಬೆನ್ನೂರಿನಲ್ಲಿ jsp-ranebennur-announcement2ಎಸ್.ಆರ್.ಹಿರೇಮಠರ ನೇತೃತ್ವದಲ್ಲಿ 2ನೇ “ಯುವ ಚೈತನ್ಯ ಮತ್ತು ನಾಯಕತ್ವ ತರಬೇತಿ” ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ರಾಣೆಬೆನ್ನೂರಿನಲ್ಲಿರುವ ಸಮಾಜ ಪರಿವರ್ತನ ಸಮುದಾಯದ “ಪರಿವರ್ತನ ಸದನ”ದಲ್ಲಿ ಈ ಶಿಬಿರ ನಡೆಯಲಿದೆ. ಪ್ರಜಾಪ್ರಭುತ್ವ, ಭಾರತ ಮತ್ತು ಕರ್ನಾಟಕದ ಇತಿಹಾಸ, ರಾಜಕೀಯ, ಸಾಮಾಜಿಕ ಸ್ಥಿತಿಗತಿಗಳು, ಸಾಂಸ್ಕೃತಿಕ ಬಂಡಾಯ, ಚಳವಳಿಗಳು, ಸಾಹಿತ್ಯದಲ್ಲಿ ಬಂಡಾಯ, ಜಾಗತಿಕ ತಾಪಮಾನ, ಮಾಹಿತಿ ಹಕ್ಕು ಮತ್ತು ತರಬೇತಿ, ಹಾಡು, ಆಟ, ಪಾಠ; ಹೀಗೆ ಅನೇಕ ವಿಷಯಗಳ ಬಗ್ಗೆ ಎಸ್.ಆರ್.ಹಿರೇಮಠರ ಆದಿಯಾಗಿ ಹಲವಾರು ಹೋರಾಟಗಾರರು, ಪ್ರಾಧ್ಯಾಪಕರು, ಲೇಖಕರು, ಹಾಡುಗಾರರು, ನಡೆಸಿಕೊಡಲಿದ್ದಾರೆ. ವೃಂದಚರ್ಚೆ ಮತ್ತಿತರ ಸಂವಾದಗಳ ಮೂಲಕ ಎಲ್ಲಾ ಶಿಬಿರಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವ, ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ವ್ಯವಸ್ಥೆ ಇದೆ.

ತರಬೇತಿಯ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದು, ತುಮಕೂರಿನ ಹಸಿರು ಬಳಗ ಮತ್ತು ಸಿಜ್ಞಾ ತಂಡಗಳು ನಡೆಸಿಕೊಡಲಿವೆ. ಕೇವಲ ಮಾಹಿತಿ ಅಷ್ಟೇ ಅಲ್ಲ, ತಮ್ಮ ಊರು-ನಗರಗಳಲ್ಲಿ ಮುಂದಕ್ಕೆ ಹೇಗೆ ಶಿಬಿರಾರ್ಥಿಗಳು ಜನಪರ ಕಾರ್ಯಕ್ರಮಗಳನ್ನು, ಹೋರಾಟಗಳನ್ನು ರೂಪಿಸಬಹುದು, ನಾಯಕತ್ವ ವಹಿಸಿಕೊಳ್ಳಬಹುದು ಎನ್ನುವುದರ ಬಗ್ಗೆ ತರಬೇತಿ ಕೊಡಲಾಗುತ್ತಿದೆ. ಹಾಗೆಯೇ, ಶಿಬಿರ ಮುಗಿದ ನಂತರವೂ ಆಯೋಜಕರು ಶಿಬಿರಾರ್ಥಿಗಳ ಜೊತೆ ಸಂಪರ್ಕದಲ್ಲಿದ್ದು, ಕಾಲಕಾಲಕ್ಕೆ ಸಹಕಾರ ಮತ್ತು ಮಾರ್ಗದರ್ಶನ hiremath-jsp-workshopನೀಡುತ್ತಿರುತ್ತಾರೆ.

ಡಿಸೆಂಬರ್ 6, ಶನಿವಾರ ಬೆಳಗ್ಗೆ ಹತ್ತರ ಸುಮಾರಿಗೆ ಆರಂಭವಾಗುವ ಶಿಬಿರ ಭಾನುವಾರ ಸಂಜೆ ಐದರ ತನಕ ನಡೆಯಲಿದೆ. ರಾಣೆಬೆನ್ನೂರು ಒಂದು ರೀತಿಯಲ್ಲಿ ಇಡೀ ರಾಜ್ಯಕ್ಕೆ ಕೇಂದ್ರ ಸ್ಥಾನದಲ್ಲಿದೆ. (ದಾವಣಗೆರೆಯಿಂದ ಮುವ್ವತ್ತು ಕಿ.ಮೀ. ಉತ್ತರಕ್ಕಿದೆ.) ರಾಜ್ಯದ ಬಹುತೇಕ ಭಾಗಗಳಿಂದ ನಾಲ್ಕೈದು ಗಂಟೆಗಳಲ್ಲಿ ಬಸ್ಸಿನಲ್ಲಿ ತಲುಪಬಹುದು. ಉತ್ತಮ ರೈಲು ಸಂಪರ್ಕವೂ ಇದೆ. ಶನಿವಾರ ರಾತ್ರಿ ವಸತಿ ಸೌಕರ್ಯವೂ ಇರುತ್ತದೆ. ಶನಿವಾರ ಬೆಳಗ್ಗೆಯಿಂದ ಭಾನುವಾರದ ಸಂಜೆಯ ತನಕ ಊಟ-ತಿಂಡಿ-ಚಹಾ ವ್ಯವಸ್ಥೆ ಇರುತ್ತದೆ. ಇವೆಲ್ಲವಕ್ಕೂ ಸೇರಿ ಶಿಬಿರ ಶುಲ್ಕ ಎಂದು ರೂ.500 ಇರುತ್ತದೆ.

ಶಿಬಿರದಲ್ಲಿ, ಎಸ್.ಆರ್.ಹಿರೇಮಠ್, ಪರಿಸರವಾದಿ ಯತಿರಾಜು, ಜನಸಂಗ್ರಾಮ ಪರಿಷತ್‌ನ ಕಾರ್ಯದರ್ಶಿ ದೀಪಕ್ ನಾಗರಾಜ್, ಸಂಘಟನೆಯ ಶಾಂತಲಾ ದಾಮ್ಲೆ, ತುಮಕೂರಿನ ಸಿಜ್ಞಾ ಎಂಬ ಯುವನಾಯಕತ್ವ ಶಿಬಿರಗಳನ್ನು ಆಯೋಜಿಸುವ ಸಂಸ್ಥೆಯ ಸಿಜ್ಞಾ ಸಿಂಧು ಸ್ವಾಮಿ, ನಾನು, ಮತ್ತಿತರರು ಸಂಪನ್ಮೂಲ ವ್ಯಕ್ತಿಗಳಾಗಿ ಬರಲಿದ್ದಾರೆ.

ಹೆಚ್ಚಿನ ವಿವರಗಳಿಗೆ ಪ್ರಕಾಶ್ ಹೂಗಾರ್ ಅವರನ್ನು 8867186343 ರಲ್ಲಿ ಸಂಪರ್ಕಿಸಿ.

ನಮ್ಮ ವರ್ತಮಾನ.ಕಾಮ್ ಅನ್ನು ನಿಯಮಿತವಾಗಿ ಓದುವ ಮತ್ತು ಬೆಂಬಲಿಸುವ ಯುವ ಪ್ರಜ್ಞಾವಂತರೂ ಇಂತಹ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯ ಮತ್ತು ರಹನಾತ್ಮಕವಾಗಿ ಪಾಲ್ಗೊಳ್ಳಲು ಬೇಕಾದ ಪೂರ್ವಸಿದ್ಧತೆ, ಪರಿಚಯ, ಅವಕಾಶಗಳನ್ನು ಈ ಶಿಬಿರ ಒದಗಿಸುತ್ತದೆ ಎಂದು jsp-ranebennur-announcement1ಭಾವಿಸುತ್ತೇನೆ.

ನಮಸ್ಕಾರ,
ರವಿ

[ಮೊದಲ ಶಿಬಿರದ ಸಂದರ್ಭದಲ್ಲಿ ಬರೆದಿದ್ದ ಟಿಪ್ಪಣಿ: ರಾಣೆಬೆನ್ನೂರಿನಲ್ಲಿ “ಯುವಚೈತನ್ಯ ಮತ್ತು ನಾಯಕತ್ವ ತರಬೇತಿ” ಶಿಬಿರ]

3 thoughts on “ಎರಡನೇ “ಯುವ ಚೈತನ್ಯ ಮತ್ತು ನಾಯಕತ್ವ ತರಬೇತಿ” ಶಿಬಿರ

  1. maheshgiri

    ಮೈಸೂರಿನಲ್ಲಿ ಕಾರ್ಯಕ್ರಮ ಆಯೋಜನೆ ಯಾವಾಗ. ದಯಮಾಡಿ ತಿಳಿಸಿ

    Reply
  2. Nagshetty Shetkar

    ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಲ್ಲಿ ಯಾರಾದರೂ ಒಬ್ಬರು ಮುಂದೆ ಬಂದು ಕಾರ್ಯಕ್ರಮದ ಬಗ್ಗೆ ಒಂದು ಮಾಹಿತಿಪೂರ್ಣ ಲೇಖನ ಬರೆದರೆ ಚೆನ್ನಾಗಿರುತ್ತದೆ. ಇಂತಹ ಕಾರ್ಯಕ್ರಮಗಳಿಗೆ ನಮ್ಮ ಊರಿನ ಯುವಕರನ್ನು ಕಳುಹಿಸಬೇಕೋ ಬೇಡವೋ ಎಂದು ನಿರ್ಧರಿಸಲು ಅನುಕೂಲವಾಗುತ್ತದೆ,.

    Reply

Leave a Reply

Your email address will not be published.