ಭೂಪಾಲ್ ದುರಂತಗಳು, ಸಾವಿರಾರು ಹೆಣಗಳು – Make in India


– ಬಿ. ಶ್ರೀಪಾದ ಭಟ್


ಮೀಥೈಲ್ ಐಸೋ ಸೈನೇಟ್ (MIC) ಎನ್ನುವ ಪದ ಕಿವಿಗೆ ಬಿದ್ದರೆ ಭೂಪಾಲ್‌ನ ನಾಗರಿಕರು ಇಂದಿಗೂ ಬೆಚ್ಚಿ ಬೀಳುತ್ತಾರೆ. ಅದು 1984ರ ಡಿಸೆಂಬರ್ ತಿಂಗಳ ಚಳಿಗಾಲದ ರಾತ್ರಿ. ಆ ರಾತ್ರಿಯ ಚಳಿಗಾಳಿಯ ತೀವ್ರತೆ, ಅದರಿಂದುಂಟಾದ ನಡುಕ ಮುಂದಿನ ಕೆಲವೇ ಗಂಟೆಗಳಲ್ಲಿ ಸುಮಾರು 25000 ಜನರ ಭಯಾನಕ ಸಾಮೂಹಿಕ ಕಗ್ಗೊಲೆಗೆ ಮುನ್ನುಡಿಯಂತಿತ್ತೇನೋ. ಡಿಸೆಂಬರ್ 2-3, 1984 ರ ರಾತ್ರಿ 12.30ಕ್ಕೆ ಭೂಪಾಲ್‌ನಲ್ಲಿರುವ ಯೂನಿಯನ್ ಕಾರ್ಬೈಡ್ (UCC) ಎನ್ನುವ ವಿದೇಶಿ ಕಂಪನಿಯ ಕಾರ್ಖಾನೆಯಿಂದ ಈ MIC ಎನ್ನುವ ರಾಸಾಯನಿಕ ವಿಷಾನಿಲ ಸೋರಿಕೆಗೊಂಡು ಸುಮಾರು 9 ಕಿ.ಮೀ.ನಷ್ಟು ದೂರ ಪಸರಿಸತೊಡಗಿತು.ಈ ಕಾರ್ಖಾನೆಯ ಸುತ್ತ ಸ್ಲಂ ಕಾಲೋನಿಗಳಿದ್ದವು. ಮರುದಿನ ಬೆಳಗಿನ ಹೊತ್ತಿಗೆ ಇಡೀ ಭೂಪಾಲ್ ನಗರ ಸಾವಿನ ನೃತ್ಯಕ್ಕೆ ಸಾಕ್ಷಿಯಾಯಿತು. ಈ ಸಾವಿನ ನೃತ್ಯ ನೇರವಾಗಿ ಪ್ರವೇಶಿಸಿದ್ದು Bhopal-Gas-Tragedy-TIMEಕಾರ್ಖಾನೆಯ ಸುತ್ತಲಿದ್ದ ಸ್ಲಂ ಕಾಲೋನಿಗಳನ್ನು. ಕೆಲವೇ ಗಂಟೆಗಳಲ್ಲಿ ಈ MIC ವಿಷಾನಿಲ ಮಕ್ಕಳು, ಮಹಿಳೆಯರನ್ನೊಳಗೊಂಡಂತೆ ಸಾವಿರಾರು ಜನರನ್ನು ಬಲಿತೆಗೆದುಕೊಂಡಿತು. ಇಡೀ ಕಾಲೋನಿ ಕೆಮ್ಮು, ಆಕ್ರಂದನ, ವಾಂತಿಯಿಂದ ನಲುಗಿಹೋಯ್ತು. ಭೂಪಾಲ್‌ನ ಆಸ್ಪತ್ರೆಗಳಲ್ಲಿ ಈ MIC ರಾಸಾಯನಿಕ ವಿಷಾನಿಲದಿಂದುಟಾದ ಭೀಕರತೆಯನ್ನು ಗುಣಪಡಿಸುವ ಮದ್ದಿನ ವಿವರಗಳು ಗೊತ್ತಿರಲಿಲ್ಲ. ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದಲೂ ಯಾವುದೇ ವೈಜ್ಞಾನಿಕ ವಿವರಗಳು ದೊರಕಲಿಲ್ಲ. ಇದರ ಪರಿಣಾಮವೇನಾಯ್ತೆಂದರೆ ಈ ದುರ್ಘಟನೆ ನಡೆದು ಎರಡು ದಿನಗಳವರೆಗೂ ಅಲ್ಲಿನ ಆಸ್ಪತ್ರೆಗಳಲ್ಲಿ ಸೂಕ್ತ ಔಷದೋಪಚಾರಗಳ ಕೊರತೆಯಿಂದಾಗಿಯೇ ಸಾವಿರಾರು ಜನ ಸಾವಿಗೀಡಾಗುತ್ತಲೇ ಇದ್ದರು. ಇನ್ನೊಂದು ಅಘಾತಕಾರಿ ಸಂಗತಿಯೆಂದರೆ ಈ MIC ವಿಷಾನಿಲದ ಜೊತೆಗೆ ಹೈಡ್ರೋಜನ್ ಸೈನೈಡ್, ನೈಟ್ರೋಜನ್ ಆಕ್ಸೈಡ್‌ಗಳಂತಹ ರಾಸಾಯನಿಕ ವಿಷಾನಿಲಗಳೂ ಸೇರಿಕೊಂಡಿದ್ದವೆಂದು ಅನೇಕ ದಿನಗಳ ನಂತರ ಗೊತ್ತಾಗಿದ್ದು. ಇದರ ಪರಿಣಾಮವಾಗಿ ಈ ದುರ್ಘಟನೆ ನಡೆದು ಒಂದು ವಾರದ ನಂತರವೂ ಸಾವಿನ ವಾಸನೆ ಭೂಪಾಲ್ ನಗರವನ್ನು ನುಂಗುತ್ತಲೇ ಇತ್ತು. ಇನ್ನೂ ಹಸಿಹಸಿಯಾಗಿ ಹೆಣಗಳು ಬೀಳುತ್ತಲೇ ಇದ್ದವು.

ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ ಸುಮಾರು 5000 ಜನರು ಸಾವಿಗೀಡಾಗಿದ್ದರೆ ವಾಸ್ತವದಲ್ಲಿ 25000 ಕ್ಕೂ ಮೇಲ್ಪಟ್ಟು ಜನ ಸತ್ತಿದ್ದಾರೆಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದರು. ಪತ್ರಿಕಾ ವರದಿಯು ಸಹ ಇದೇ ಅಂಕಿಯನ್ನು ಕೊಟ್ಟಿದೆ. ಆ ದಿನದಂದು ಈ ಘಟನೆಗೆ ಸಾಕ್ಷಿಯಾಗಿದ್ದ ವ್ಯಕ್ತಿಯೊಬ್ಬ 30 ವರ್ಷಗಳ ನಂತರ ಮೊನ್ನೆ ಹೇಳುತ್ತಿದ್ದ: “ಅಂದು ರಾತ್ರಿಯಾಗಿತ್ತು. Bhopal-Gas-Tragedy-1ಇಡೀ ಸ್ಲಂನ ಜನರು ದಿಕ್ಕಾಪಾಲಾಗಿ ಕಿರುಚುತ್ತ ಓಡತೊಡಗಿದರು.ಆದರೆ ಎಂತಹ ದುರಂತವೆಂದರೆ ಅವರು ಭಯದಲ್ಲಿ ತಮಗರಿವಿಲ್ಲದೇ ಆ ಕತ್ತಲಿನಲ್ಲಿ ಈ MIC ವಿಷಾನಿಲ ತೇಲಿ ಬರುತ್ತಿದ್ದ ದಿಕ್ಕಿನೆಡೆಗೆ ಧಾವಿಸುತ್ತಿದ್ದರು. ತಾವಾಗಿಯೇ ಆ ಸಾವಿಗೆ ಆಹುತಿಯಾಗಿ ಹೋದ್ರು. ಸುಮಾರು 500000 ಜನ ಕಣ್ಣು, ಧ್ವನಿ, ಕೈಕಾಲುಗಳನ್ನು ಕಳೆದುಕೊಂಡರು.”

ಕಾರ್ಖಾನೆಯೊಳಗಡೆ ಸುರಕ್ಷತೆಯ ವೈಫಲ್ಯವೇ ಇಡೀ ದುರ್ಘಟನೆಗೆ ಮೂಲಭೂತ ಕಾರಣ. ಈ ಬಗೆಯ ವಿಷಾನಿಲವನ್ನು ಉತ್ಪಾದಿಸುವ ಯೂನಿಯನ್ ಕಾರ್ಬೈಡ್ ಎನ್ನುವ ವಿದೇಶಿ ರಾಸಾಯನಿಕ ಕಾರ್ಖಾನೆಯನ್ನು 1969 ರಲ್ಲಿ ಪರಿಸರ ಮತ್ತು ಸುರಕ್ಷತೆಗೆ ಸಂಬಂಧಪಟ್ಟಂತಹ ಎಲ್ಲ ನಿಯಮಾವಳಿಗಳನ್ನು ಉಲ್ಲಂಘಿಸಿ ನಗರ ಪ್ರದೇಶದ ವ್ಯಾಪ್ತಿಗೆ ಬರುವಂತಹ ಪ್ರದೇಶದಲ್ಲಿಯೇ ಸ್ಥಾಪನೆಗೆ ಅನುಮತಿ ನೀಡಲಾಯಿತು. (ವ್ಯಂಗವೆಂದರೆ ಈ ಕಾರ್ಖಾನೆಯ ಬಳಿಯಲ್ಲಿಯೇ ಡಿ.ಐ.ಜಿ. ಬಂಗಲೆಯಿದೆ)

ಆರಂಭದಲ್ಲಿ Pesticide Sevin ಎನ್ನುವ ರಸಗೊಬ್ಬರಕ್ಕೆ ಸಂಬಂಧಿತ ರಾಸಾಯನಿಕವನ್ನು ತಯಾರಿಸುತ್ತೇವೆಂದು ಪ್ರಾರಂಭವಾದ ಈ ಯೂನಿಯನ್ ಕಾರ್ಬೈಡ್ ಕಂಪನಿ 1979ರಲ್ಲಿ ಇದಕ್ಕೆ ಪೂರಕವಾಗಿ ಈ MIC ವಿಷಾನಿಲ ತಯಾರಿಕೆಯ ಎರಡು ಘಟಕಗಳನ್ನು ಪ್ರಾರಂಭಿಸಿತು. ಇದಕ್ಕೆ ಅನುಮತಿ ಕೊಟ್ಟವರಾರು ಎಂದು ಇಂದಿಗೂ ನಿಗೂಢವಾಗಿ ಉಳಿದಿದೆ ಎಂದು ಸ್ಥಳೀಯರು ಹೇಳುತ್ತಾರೆ. ಸ್ಥಾಪಿತಗೊಂಡ ಕೇವಲ ಮೂರು ವರ್ಷಗಳ ನಂತರ 1982ರಲ್ಲಿ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ ಸುಮಾರು ಅವಘಡಗಳು ಜರುಗಿದವು. ಕಾರ್ಖಾನೆಯ ಕಾರ್ಮಿಕನೊಬ್ಬ ಈ MIC ವಿಷಾನಿಲದ ಫಲವಾಗಿ ಸ್ಥಳದಲ್ಲೇ ಮೃತ ಪಟ್ಟರೆ ಎಲೆಕ್ಟ್ರಿಕ್ ಇಂಜಿನಿಯರ್ ಇದೇ ಸುರಕ್ಷತೆಯ ವಿಫಲತೆಯ ಪರಿಣಾಮವಾಗಿ ಕಣ್ಣುಗಳನ್ನು ಕಳೆದುಕೊಂಡ. 1982 ರ ಜನವರಿಯಿಂದ 1982 ರ ಫೆಬ್ರವರಿಯ ಒಂದು ತಿಂಗಳ ಅವಧಿಯಲ್ಲಿ ಅನಿಲ ಸೋರಿಕೆಯ ಪರಿಣಾಮವಾಗಿ ಸುಮಾರು 36 ನೌಕರರು ಅಸ್ವಸ್ಥರಾಗಿ ಅಸ್ಪತ್ರೆಗೆ ಸೇರಿಕೊಳ್ಳಬೇಕಾಯಿತು. ಅಲ್ಲಿನ ನೌಕರರರಿಗೆ ಸುರಕ್ಷತೆಯ ಮುಖವಾಡವನ್ನು ಸಹ ಕೊಟ್ಟಿರಲಿಲ್ಲ ಎನ್ನುವುದು ಆಗಲೇ ಗೊತ್ತಾಗಿದ್ದು. 1983-1984ರ ಅವಧಿಯಲ್ಲಿ ಸುಮಾರಿ ಬಾರಿ ಅನಿಲ ಸೋರಿಕೆ ಘಟನೆಗಳು ಜರುಗಿದವು. ಇಡೀ ಕಾರ್ಖಾನೆಯೇ ಸುರಕ್ಷತೆಯ ಸಂಪೂರ್ಣ ವೈಫಲ್ಯದಿಂದಾಗಿ ಸಿಡಿಮುದ್ದಿನ ಮೇಲೆ ಮಲಗಿದಂತಿತ್ತು ಎಂದು ಸ್ಥಳೀಯರು ಇಂದಿಗೂ ನಡಗುವ ಧ್ವನಿಯಲ್ಲಿ ಹೇಳುತ್ತಾರೆ.

ನವೆಂಬರ್ 1984ರ ವೇಳೆಗೆ ಇಡೀ ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಎಲ್ಲಾ ಸುರಕ್ಷೆ ಸಂಬಂಧಿತ ವ್ಯವಸ್ಥೆಗಳು ಕೆಟ್ಟು ಹೋಗಿದ್ದವು. Bhopal-Gas-Tragedy-3ಪೈಪ್ ಲೈನ್‌ಗಳು, ವಾಲ್ವ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಅಲ್ಲಿನ ಮಾಜಿ ನೌಕರರೊಬ್ಬರನ್ನು ಸಂದರ್ಶನ ಮಾಡಿದಾಗ ಅವರು ಮಾತನಾಡುತ್ತಾ ಹೇಳುತ್ತಿದ್ದರು “1984ರ ಆ ದಿನಗಳಲ್ಲಿ ಯಾವುದೇ ಅಡಚಣೆಗಳಿಲ್ಲದೆ ಕೇವಲ ಉತ್ಪಾದನೆಯೊಂದೇ ನಮ್ಮ ಮುಂದಿರುವ ಟಾರ್ಗೆಟ್ ಆಗಿತ್ತು. ಯಾವುದೇ ಬೆಲೆ ತೆತ್ತಾದರೂ ಸರಿಯೇ ಘಟಕವನ್ನು ಒಂದು ಕ್ಷಣಕ್ಕೂ ಸ್ಥಗಿತಗೊಳಿಸಬಾರದೆಂದು ವಿದೇಶದಲ್ಲಿರುವ ಅದರ ಮಾಲೀಕರು ನಿರ್ದೇಶಿಸಿದ್ದಾರೆಂದು ನಮ್ಮ ವ್ಯವಸ್ಥಾಪಕರು ಹೇಳುತ್ತಿದ್ದರು. ಇದರ ಪರಿಣಾಮವಾಗಿ ಸುರಕ್ಷತೆಗಾಗಿ ಯಾವುದೇ ಸಮಯವನ್ನು ಸಹ ಮೀಸಲಿಡದೇ ಹೋದದ್ದು ಈ ದುರ್ಘಟನೆಗೆ ಕಾರಣ. ಮತ್ತೊಂದು ಮುಖ್ಯ ಸಂಗತಿಯೆಂದರೆ ಟ್ಯಾಂಕ್ 610 ಸುಮಾರು 50 ಟನ್‌ನಷ್ಟು MIC ವಿಷಾನಿಲವನ್ನು ಅಡಗಿಸಿಕೊಂಡಿತ್ತು. ಇದು ಸುರಕ್ಷತೆಯ ಎಲ್ಲಾ ನಿಯಮಗಳಿಗೆ ವಿರುದ್ಧವಾಗಿತ್ತು. ಇದನ್ನು ಪ್ರಶ್ನಿಸಿದಾಗ ಹೊಸ ಟ್ಯಾಂಕ್ ಖರೀದಿಗೆ ಆರ್ಥಿಕ ಸೌಲಭ್ಯದ ಕೊರತೆ ಇದೆಯೆಂದೇ ನಮ್ಮನ್ನು ದಬಾಯಿಸಿದ್ದರು. ಎಲ್ಲಾ ಪೈಪ್ ಲೈನ್‌ಗಳು ತುಕ್ಕು ಹಿಡಿದುಹೋಗಿದ್ದವು. ಆ ದುರ್ದಿನದಂದು ಅನಿಲ ಸೋರಿಕೆಯಾದಾಗ ಉಷ್ಣತೆಯ ತಾಪಮಾನ ಸುಮಾರು 200 ಸೆಂಟಿಗ್ರೇಡ್ ಅನ್ನು ದಾಟಿತ್ತು (ವೈಜ್ಞಾನಿಕವಾಗಿ ಇಡೀ ಪ್ರದೇಶವು -20 ಸೆಂಟಿಗ್ರೇಡ್ ತಾಪಮಾನದಲ್ಲಿರಬೇಕು). ಟ್ಯಾಂಕ್ 610 ನಲ್ಲಿದ್ದ ಹೆಚ್ಚುವರಿಯಾದ ಅನಿಲವು ವಾತಾವರಣದ ಈ ಒತ್ತಡದ ಫಲವಾಗಿ ಅದರಿಂದಲೂ ಅನಿಲ ಸೋರಿಕೆ ಪ್ರಾರಂಭವಾಯಿತು. ಈ ಬಗೆಯ ಸಂಪೂರ್ಣ ಸುರಕ್ಷತೆ ವೈಫಲ್ಯಕ್ಕೆ ಕಾರಣರಾದ ಯೂನಿಯನ್ ಕಾರ್ಬೈಡ್‌ನ ವಿದೇಶಿ ಮಾಲೀಕರೇ ಇದಕ್ಕೆ ನೇರ ಹೊಣೆಗಾರರು.”

ಈ ದುರ್ಘಟನೆಯ ನಡೆದ ನಂತರ ಡಿಸೆಂಬರ್4, 1984ರಂದು ಭಾರತಕ್ಕೆ ಆಗಮಿಸಿದ ಯೂನಿಯನ್ ಕಾರ್ಬೈಡ್‌ನ ಮಾಲೀಕ ಅಂಡರಸನ್‌ನನ್ನು ಭಾರತ ಸರ್ಕಾರವು ಗೃಹ ಬಂಧನದಲ್ಲಿರಿಸಿತು. ಆದರೆ ಅಮೇರಿಕಾದ ಒತ್ತಡಕ್ಕೆ ಮಣಿದು ಡಿಸೆಂಬರ್ 7, 1984ರಂದು ನರಹಂತಕನೆಂದು ಬಣ್ಣಿಸಲ್ಪಡುವ ಈ ಅಂಡರ್‌ಸನ್‌ನನ್ನು ಮಧ್ಯಪ್ರದೇಶದ ಆಗಿನ ಮುಖ್ಯ ಮಂತ್ರಿ ಅರ್ಜುನ್ ಸಿಂಗ್ ವಿಶೇಷ ವಿಮಾನದಲ್ಲಿ ಭಾರತದಿಂದ ಅಮೇರಿಕಾಗೆ ಕಳುಹಿಸಿಕೊಟ್ಟರು. ಅಂದು ಇಲ್ಲಿಂದ ಪರಾರಿಯಾದ ಈ ಅಂಡರ್‌ಸನ್ ಮರಳಿ ಭಾರತಕ್ಕೆ ವಿಚಾರಣೆಗೆ ಬರಲೇ ಇಲ್ಲ. ಆತನನ್ನು ‘ಪಲಾಯನಗೊಂಡ ಅಪರಾಧಿ’ ಎಂದು ನಮ್ಮ ನ್ಯಾಯಾಲಯಗಳು ತೀರ್ಪನ್ನಿತ್ತರು. 1992ರಲ್ಲಿ ಭೂಪಾಲ್‌ನ ಮುಖ್ಯ ಮಾಜಿಸ್ಟ್ರೇಟ್ ಅಂಡರ್‌ಸನ್‌ನ್ನು ಒಬ್ಬ Fugitive ಎಂದೇ ತೀರ್ಪಿತ್ತರು. ಅಮೇರಿಕಾ ಇದಕ್ಕೆ ಮನ್ನಣೆ ನೀಡಲೇ ಇಲ್ಲ. ಮೂವತ್ತು ವರ್ಷಗಳ ನಂತರ ಈ ಅಂಡರ್‌ಸನ್ ಮೊನ್ನೆ ಸೆಪ್ಟೆಂಬರ್ 2014 ರಲ್ಲಿ ತೀರಿಕೊಂಡ. Bhopal-Union_Carbide_Memorialಹೌದು ಯಾವುದೇ ಶಿಕ್ಷೆಯನ್ನು ಅನುಭವಿಸಲೇ ಇಲ್ಲ.

ಇನ್ನು ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಭಾರತೀಯ 10 ನೌಕರರನ್ನು (ಪ್ರಮುಖರೆಂದರೆ ಕೇಶುಭ್ ಮಹೇಂದ್ರ – ಛೇರ್ಮನ್, ವಿಪಿ.ಗೋಖಲೆ – ವ್ಯವಸ್ಥಾಪಕ ನಿರ್ದೇಶಕ, ಕಾಮ್ದರ್ – ಉಪಾಧ್ಯಕ್ಷ, ಮುಕುಂದ್, ಚೌಧುರಿ – ವ್ಯವಸ್ಥಾಪಕರು, ಇಂದು ಇವರೆಲ್ಲ 70ರ ಆಸುಪಾಸಿನಲ್ಲಿದ್ದಾರೆ) ನಿರ್ಲಕ್ಷ್ಯದ ಆರೋಪದ ಮೇಲೆ 2 ವರ್ಷಗಳ ಸಾದಾ ಜೈಲು ಶಿಕ್ಷೆ ಎಂದು ನಿರ್ಣಯ ನೀಡಲಾಯಿತು. ಕೆಲವೇ ತಿಂಗಳುಗಳ ನಂತರ ಅವರೆಲ್ಲಾ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಹೌದು ಯಾವುದೇ ಶಿಕ್ಷೆಯನ್ನು ಅನುಭವಿಸದೆ.

ಇನ್ನು ಬದುಕುಳಿದ ಲಕ್ಷಾಂತರ ಸಂತ್ರಸ್ಥರಿಗೆ ಈ ನೆಲದ ಅಭೂತಪೂರ್ವ ಗುಣದಂತೆಯೇ ನ್ಯಾಯಯುತವಾದ ಪರಿಹಾರದ ಮೊತ್ತ ಇಂದಿಗೂ ಮೂವತ್ತು ವರ್ಷಗಳ ನಂತರವೂ ಸಂದಾಯವಾಗಿಲ್ಲ. ಈ ಭೂಪಾಲ್ ಅನಿಲ ದುರಂತದ 30ನೇ ವರ್ಷದಲ್ಲಿ ಭೂಪಾಲ್‌ಗೆ ಭೇಟಿ ಕೊಟ್ಟಂತಹ ಸಂದರ್ಭದಲ್ಲಿ ಈ ನಿರಾಶ್ರಿತರನ್ನು ಭೇಟಿಯಾದಾಗ ಅವರೆಲ್ಲ ಸೋತು ಹೋಗಿದ್ದು ನಮ್ಮ ಮುಖಕ್ಕೆ ರಾಚುತ್ತಿತ್ತು. ಇಲ್ಲಿನ ಕಾನೂನು, ರಾಜಕೀಯದ ಭ್ರಷ್ಟತೆ, ವೈಫಲ್ಯಗಳಿಂದಾಗಿ ಸಂಪೂರ್ಣ ಕುಗ್ಗಿ ಹೋಗಿರುವ ಈ ಸಂತ್ರಸ್ಥರನ್ನು ಈ 30 ವರ್ಷಗಳ ಕಾಲಘಟ್ಟ ಹೆಚ್ಚೂ ಕಡಿಮೆ ಜೀವಂತಶವಗಳನ್ನಾಗಿಸಿದೆ. “ಕಾಲ ಮತ್ತು ಪ್ರವಾಹ ಯಾರನ್ನು ಕಾಯುವುದಿಲ್ಲ” ಎನ್ನುವ ಮಾತು ಇವರ ಪಾಲಿಗೆ ದಿನನಿತ್ಯದ ವಾಸ್ತವವಾಗಿರುವುದು ನಮ್ಮಲ್ಲಿ ತಲ್ಲಣವನ್ನುಂಟು ಮಾಡಿತು.

ಏಕೆಂದರೆ ಕಾಲ ಎಲ್ಲವನ್ನೂ ಉಪಶಮನ ಮಾಡುತ್ತದೆ ಎನ್ನುವುದು ಭೂಪಾಲ್ ಸಂತ್ರಸ್ಥರ ಪಾಲಿಗೆ ಸುಳ್ಳಾಗಿ, bhopal_Film_Posterನ್ಯಾಯಕ್ಕಾಗಿ ಕನಸು ಕಾಣುತ್ತಾ ಜೀವನ ಸಾಗುತ್ತಿದೆ ಎನ್ನುವುದು ಮಾತ್ರ ನಿಜವಾಗಿ, ನಾಗರಿಕತೆಯ ಮುಖ್ಯ ಗುಣಲಕ್ಷಣಗಳಾದ ಆಳವಾದ ಸಂವೇದನೆ, ನಿಸ್ವಾರ್ಥ, ಕನಿಷ್ಠ ಕ್ಷುದ್ರತೆ, ಗರಿಷ್ಠ ಸಮತೋಲನ ಎಲ್ಲವೂ ಕಣ್ಮರೆಯಾಗಿದ್ದು ಮಾತ್ರ ಅಂದು ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಸುತ್ತಲಿನ ಸ್ಲಂಗಳಲ್ಲಿ ಬಹಿರಂಗವಾಗಿ ಗೋಚರಿಸುತ್ತಿತ್ತು.

ಈ ಭೂಪಾಲ್ ಅನಿಲ ದುರಂತದ ಕುರಿತಾಗಿ “Bhopal: A Prayer for Rain” ಎನ್ನುವ ಇಂಗ್ಲೀಷ್-ಹಿಂದಿ ಭಾಷೆಯ ಚಲನಚಿತ್ರ ಡಿಸೆಂಬರ್ 5, 2014 ರಂದು ಬಿಡುಗಡೆಗೊಂಡಿದೆ. ಪ್ರತಿಯೊಬ್ಬರೂ ನೋಡಲೇ ಬೇಕಾದ ಸಿನಿಮಾ. ಇಲ್ಲಿ ಅಂಡರ್‌ಸನ್‌ನನ್ನು ಮಾನವೀಯ ನೆಲೆಯಿಂದ ಚಿತ್ರಿಸಿರುವುದು ಈ ಸಿನಿಮಾದ ಒಂದು ದೌರ್ಬಲ್ಯ. ಇದನ್ನು ಹೊರತು ಪಡಿಸಿದರೆ ಇದು ನಮ್ಮನ್ನು ಸಂಪೂರ್ಣ ಅಲ್ಲಾಡಿಸಿಬಿಡುತ್ತದೆ. ಒಂದು ಮಾನವೀಯ ಸಿನಿಮಾ.

ಉಪಸಂಹಾರ : ಈ ಭೂಪಾಲ್ ಅನಿಲ ದುರಂತ ಒಳಗೊಂಡಂತೆ ಇನ್ನು ಅನೇಕ ದುರ್ಘಟನೆಗಳು ಇಲ್ಲಿ ಜರುಗಿದ್ದರೂ ಈ ಬೇಜವಬ್ದಾರಿ ಪ್ರಧಾನ ಮಂತ್ರಿ ಮೋದಿ ಘೋಷಿಸಿದ ’ಕೈಗಾರಿಕಾ ಸುಧಾರಣಾ ನೀತಿ’ಯ ಪಾಲಿಸಿಗಳು ಸಂಪೂರ್ಣವಾಗಿ ಕಾರ್ಪೋರೇಟ್ ಪರವಾಗಿವೆ. ಇದನ್ನು ವಿವರವಾಗಿ ಚರ್ಚಿಸಲು ಇಲ್ಲಿ ಸಾಧ್ಯವಿಲ್ಲ. ಈ ಹೊಸ ಕೈಗಾರಿಕ ನೀತಿಯ ಒಂದು ಪ್ರಮುಖ ಅಂಶವೆಂದರೆ ಇನ್ನು ಮುಂದೆ ಕೈಗಾರಿಕೆಗಳನ್ನು ಸ್ಥಾಪಿಸಲು ಅದರ ಮಾಲೀಕರು ಈಗ ಜಾರಿಯಲ್ಲಿರುವ ಪದ್ಧತಿಯಂತೆ ಪರಿಸರ ಇಲಾಖೆ, Inspectors of Factories Act ಇಲಾಖೆ, make-in-indiaವಾಯುಮಾಲಿನ್ಯ ನಿಯಂತ್ರಣ ಮಂಡಳಿಗಳಂತಹ ಪ್ರಮುಖ ಸರ್ಕಾರಿ ಇಲಾಖೆಗಳಿಂದ ಅನುಮತಿ ಪಡೆಯುವ ಅಗತ್ಯವೇ ಇಲ್ಲ. ಈ ಮಾಲೀಕರು ಸುರಕ್ಷತೆ, ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದಂತೆ Self Certificate ಗಳನ್ನು ಸಲ್ಲಿಸಿದರೆ ಅಷ್ಟೇ ಸಾಕು. ಅದರ ಆಧಾರದ ಮೇಲೆ ಅವರಿಗೆ ಕೈಗಾರಿಕೆಗಳನ್ನು ಸ್ಥಾಪಿಸಲು ಅನುಮತಿ ದೊರಕುತ್ತದೆ. ಇದು ಈ ಮೋದಿ ಎನ್ನುವ ಅಪ್ರಬುದ್ಧ ಪ್ರಧಾನ ಮಂತ್ರಿಯ ಕೈಗಾರಿಕಾ ನೀತಿ!!! ನಮ್ಮ ಕಣ್ಣ ಮುಂದೆಯೇ ಈ ಎಲ್ಲಾ ಇಲಾಖೆಗಳ ನಿರ್ಬಂಧಗಳ ಅಡಿಯಲ್ಲಿಯೇ, ಕಾನೂನು ಕಟ್ಟಳೆಗಳ ಸಮ್ಮುಖದಲ್ಲಿಯೇ ಭೂಪಾಲ್ ಅನಿಲ ದುರಂತ ಸಂಭವಿಸಿದೆ. ಇನ್ನು ಇವೆಲ್ಲದರ ಅವಶ್ಯಕತೆ ಇಲ್ಲವೆಂದರೆ?? ಸಾವಿರಾರು ಭೂಪಾಲ್ ದುರಂತಗಳು ನಮ್ಮನ್ನು ನಿರೀಕ್ಷಿಸುತ್ತಿವೆ ಅಷ್ಟೆ. ಆದರೆ ಇಲ್ಲಿನ ನೀರು, ಗಿಡ ಮರಗಳು, ಪ್ರಾಣಿಗಳು, ಗೃಹ ಕೈಗಾರಿಕೆಗಳು, ಕೃಷಿ ಮಂತಾದವುಗಳ ಕುರಿತಾಗಿ ಪ್ರಾಥಮಿಕ ತಿಳುವಳಿಕೆ ಇಲ್ಲದ ಈ ನರೇಂದ್ರ ಮೋದಿಯ ಈ ದುರಹಂಕಾರದ ಅತ್ಮಹತ್ಯಾತ್ಮಕ ನೀತಿಗಳು ದೇಶವನ್ನು ಕೊಂಡೊಯ್ಯುವ ದಿಕ್ಕನ್ನು ನಾವೀಗಲೇ ಊಹಿಸಬಹುದು. ಮತ್ತು ಈ ಎಲ್ಲ ನೀತಿಗಳು “Make in India” ಎನ್ನುವ ಸ್ಲೋಗನ್‌ನ ಅಡಿಯಲ್ಲಿಯೇ ಜಾರಿಗೊಳ್ಳುತ್ತವೆ. ಹಾಗಿದ್ದರೆ ಸಾವಿರಾರು ಹೆಣಗಳು, ಭೂಪಾಲ್ ದುರಂತಗಳು ಸಹ ಇನ್ನು ಮುಂದೆ “Make in India” ಎನ್ನುವ ಸರ್ಕಾರಿ ಅಧಿನಿಯಮದ ಅಡಿಯಲ್ಲಿ ಸಂಭವಿಸುತ್ತಿರುತ್ತವೆ ಕಾಲಕಾಲಕ್ಕೆ.

8 thoughts on “ಭೂಪಾಲ್ ದುರಂತಗಳು, ಸಾವಿರಾರು ಹೆಣಗಳು – Make in India

  1. Nagshetty Shetkar

    ದೆಹಲಿಯ ಹೊಸ ಬಾದಶಾಹನ ಪ್ರೊ-ಕಾರ್ಪೋರೆಟ್ ದರ್ಬಾರಿನಲ್ಲಿ ಭೋಪಾಲ್ ದುರಂತದಂತಹ ನೂರಾರು ದುರಂತಗಳೂ ಗೋದ್ರಾದಂತಹ ಅನೇಕ ಪೋಗ್ರೊಮ್ಗಳು ಸಂಭವಿಸುವ ಎಲ್ಲಾ ಸಾಧ್ಯತೆಗಳೂ ಇವೆ. ಈ ದೇಶವನ್ನು ಕಾಪಾಡುವವರು ಯಾರು?

    Reply
  2. Ananda Prasad

    ಅತಿಯಾದ ನಗರೀಕರಣ ಪ್ರಕೃತಿ ನಿಯಮಗಳಿಗೆ ವಿರುದ್ಧವಾಗಿದ್ದು ನಗರಗಳು ಕೊಳಚೆಯ ಆಗರಗಳಾಗುತ್ತಿವೆ. ಭಾರತದ ಎಲ್ಲ ದೊಡ್ಡ ನಗರಗಳಲ್ಲಿಯೂ ಕೊಳಚೆನೀರಿನಿಂದ ಕೂಡಿದ ನದಿಗಳು/ತೋಡುಗಳು/ಕಾಲುವೆಗಳು ವರ್ಷದ ಎಲ್ಲಾ ದಿನಗಳಲ್ಲಿಯೂ ತುಂಬಿ ಹರಿಯುತ್ತಿರುತ್ತವೆ. ಹೀಗಿರುವಾಗ ಸ್ವಚ್ಛ ಭಾರತವನ್ನು ರೂಪಿಸುವುದು ಹೇಗೆ? ಒಂದೇ ಕಡೆ ಅತಿಯಾದ ಜನರ ಸಾಂದ್ರತೆ ತುಂಬಿರುವುದೇ ಇದಕ್ಕೆ ಪ್ರಧಾನ ಕಾರಣ. ೨೦/೪೦ ಮಹಡಿಗಳ ಫ್ಲಾಟ್ಗಳಲ್ಲಿ ಇಡೀ ಜೀವನ ತೆಗೆಯಬೇಕಾದ ದುರ್ಗತಿ ಇಂದು ನಗರಗಳಲ್ಲಿ ನಿರ್ಮಾಣವಾಗುತ್ತಿದೆ. ಹಳ್ಳಿಗಳಲ್ಲಿ ಒಳ್ಳೆಯ ಜೀವನ ತೆಗೆಯುವ ಸ್ವಚ್ಛ ಪರಿಸರ ಇದ್ದರೂ ಇಂದಿನ ಯುವಜನಾಂಗ ತಮ್ಮ ಪೂರ್ವಜರ ಜಮೀನುಗಳನ್ನು ಬಿಟ್ಟು ನಗರಗಳಿಗೆ ದೌಡಾಯಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಹೆಚ್ಚು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಬೇಕಾದ ಅನಿವಾರ್ಯತೆಗೆ ಸರಕಾರಗಳು ಸಿಲುಕಿಕೊಂಡಿವೆ. ಇದಕ್ಕಾಗಿ ಹೆಚ್ಚು ಹೆಚ್ಚು ಕಾರ್ಖಾನೆಗಳನ್ನು ಸೃಷ್ಟಿಸುವುದು ಅನಿವಾರ್ಯ. ಇಲ್ಲದಿದ್ದರೆ ಯುವಜನಾಂಗಕ್ಕೆ ಐಶಾರಾಮಿ ಜೀವನ ತೆಗೆಯಲು ಲಕ್ಷಗಟ್ಟಲೆ ಸಂಬಳ ಕೊಡುವುದು ಹೇಗೆ? ಅದಕ್ಕಾಗಿ ಮೇಕ್ ಇನ್ ಇಂಡಿಯಾ ಅನಿವಾರ್ಯ. ಕಾರ್ಖಾನೆಗಳನ್ನು ಸ್ಥಾಪಿಸಲು ಭಾರತದಲ್ಲಿ ಬೇಕಾದಷ್ಟು ಬಂಡವಾಳ ಇಲ್ಲ. ಹೀಗಾಗಿ ವಿದೇಶಿ ಬಂಡವಾಳದ ಅವಲಂಬನೆ ಅನಿವಾರ್ಯ. ವಿದೇಶಿ ಬಂಡವಾಳ ಬರಬೇಕಾದರೆ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಶೀಘ್ರವಾಗಿ ಪರವಾನಗಿ ನೀಡಬೇಕಾದ ಅಗತ್ಯ ಇದೆ ಮತ್ತು ಕತ್ತೆಯಂತೆ ಮೂರುಕಾಸಿಗೆ ದುಡಿಯುವ ಜನರ ಅಗತ್ಯವೂ ಇದೆ. ಹೀಗಾಗಿ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ಮಾಡುವುದು ಅನಿವಾರ್ಯ. ಇದಕ್ಕೆಲ್ಲಾ ಮೂಲ ಕಾರಣ ನಮ್ಮ ಐಶಾರಾಮಿ ಜೀವನ ವಿಧಾನ ಮತ್ತು ನಮ್ಮ ಮಿತಿಮೀರಿದ ಜನಸಂಖ್ಯೆ. ಹೀಗಾಗಿ ಮೋದಿಗೆ ಹಾಗೂ ಅವರು ತೆಗೆದುಕೊಳ್ಳುವ ನಿರ್ಧಾರಗಳಿಗೆ ಯುವಜನಾಂಗದ ಸಂಪೂರ್ಣ ಬೆಂಬಲ ಇದೆ. ಮೋದಿಯನ್ನು ಇನ್ನು ಹಿಡಿಯುವುದು ಸಾಧ್ಯವಿಲ್ಲ ಏಕೆಂದರೆ ಜನರ ಐಶಾರಾಮಿ ಜೀವನದ ಆಕಾಂಕ್ಷೆಗಳಿಗೆ ಅನುಗುಣವಾಗಿ ಮೋದಿಯ ನೀತಿಗಳು ಪೂರಕವಾಗಿವೆ.

    Reply
    1. Nagshetty Shetkar

      ಆನಂದ ಪ್ರಸಾದ್ ಅವರ ಅಭಿಪ್ರಾಯಕ್ಕೆ ನನ್ನ ಸಹಮತಿ ಇದೆ. ಕಾಯಕವೇ ಕೈಲಾಸ ಎಂಬ ತತ್ವವನ್ನು ಗಾಳಿಗೆ ತೋರಿ ಮಿತಿ ಮೀರಿದ ಯಾಂತ್ರೀಕರಣದತ್ತ ದಾಪುಗಾಲು ಇಡುತ್ತಿರುವ ಮೋದಿ ಸರಕಾರಕ್ಕೆ ಕಡಿವಾಣ ಹಾಕುವವರು ಯಾರು?

      Reply
  3. Salam Bava

    ನಾಗಶೆಟ್ ಮತ್ತು ಆನಂದ್ ರವರೊಂದಿಗೆ ನನ್ನ ಪೂರ್ಣ ಸಹಮತವಿದೆ . ಆಪ್ರಿಕಾದ ಅತ್ಯಂತ ಬಡ ರಾಷ್ಟ್ರ ದಲ್ಲೂ ಇಲ್ಲ ದಷ್ಟು ಅಪ್ರ ಮಾಣಿಕತೆ,ಬಡವರಿಗೆ ಕನಿಷ್ಟ ಮೂಲಭೂತ ಸೌಲಭ್ಯಗಳ ಕೊರತೆ,ಐಶಾರಾಮದ ಬದುಕನ್ನು ಯಾವ ಬೆಲೆಕೊಟ್ಟಾದರೂ ಆಸ್ವಾದಿಸುವ ಲೋಭದ ಹೊಂದಿರುವ ಯುವ ಜನತೆ .-ಇದು ನಮ್ಮ ಇಂದಿನ ಭಾರತದ ಸ್ಥಿತಿ .ಇನ್ನು ಬೋಪಾಲ ದ ನೆನಪು ಯಾರಿಗಿದೆ ಸಾರ್ !ಬಂಡವಾ ಳಿ ಶಾಹಿಗಳ ಗ್ರೀಡ್ ನಮ್ಮ ಅರ್ಥ ವ್ಯವಸ್ಥೆಯನ್ನೇ ಬುಡಮೇಳು ಮಾಡಿದೆ ,ಪೂರಾ ಸರಕಾರಿ ವ್ಯವಸ್ಥೆಯ್ ಭಂಡವಾಳಿ ಶಾಹಿಗಳ ಹಿತಾಸಕ್ತಿ ಮಾತ್ರಾ ಕಾಯುದರಲ್ಲಿ ನಿರತವಾಗಿದೆ . ಟಿ. ಆರ್ .ಪಿ ಯ ಭರಾಟೆಯಲ್ಲಿ ನಿರತವಾಗಿರುವ ಮಾದ್ಯಮಗಳಿಗೆ ಶ್ರಮಿಕ ವರ್ಗದ ,ಬಡಜನರ ಇಶ್ಯೂವಿಗೆ ಯಾವುದೇ ಮಹತ್ವವಿಲ್ಲ . ಅವರಿಗೆ ಸಲ್ಮಾನ್ ನ ತಂಗಿಯ ಮದುವೆ ,ಭೋಪಾಲ ದುರಂತಕ್ಕಿಂತ ಮಹತ್ವವೆನಿಸುತ್ತದೆ !ಈಗ ಒಬ್ಬ ಲೋಹಿಯಾ ,ಅರಸು ,ಏ .ಕೆ. ಜಿ,ಶಹಾಬುದ್ದೀನ್ ಮತ್ತು ಲಂಕೇಶ್ ನೆನಪಾಗುತ್ತಾರೆ . ಮೋದಿಯ ಭಂಡವಾಳ ಬಯಲಾಗಲು ಸ್ವಲ್ಪ ಕಾಯಬೇಕಾಗಬಹುದು ,ಆದ್ರೆ ಅರುಣ್ ಶೌರಿ ಈಗಲೇ ಹೇಳಲು ಸುರು ಮಾಡಿದ್ದಾರೆ – ಕೇವಲ ಬಟ್ಟಲಿನ ಶಬ್ದ ಮಾತ್ರ ಕೇಳುತ್ತಿದೆ ,ಊಟ ಬರುವುದು ಕಾಣುವುದಿಲ್ಲ ಎಂದು !

    Reply
    1. Nagshetty Shetkar

      ಸಲಾಂ ಬಾವ ಅವರ ವಿಚಾರಗಳು ಬಹಳ ಗಹನವಾದವು. ಬಂಡವಾಳಶಾಹಿ ಶಕ್ತಿಗಳು ಸ್ವಾರ್ಥ ಹಾಗೂ ಲೋಭವನ್ನು ಮೌಲ್ಯವಾಗಿಸಿ ಮಧ್ಯಮವರ್ಗಕ್ಕೆ ಬಿಕರಿ ಮಾಡಿವೆ. ಮಧ್ಯವರ್ಗದ ಜನರು ಕಷ್ಟ ಪಟ್ಟು ದುಡಿದು ಸಂಪಾದನೆ ಮಾಡಿ ಸಾರ್ಥಕ್ಯ ಕಾಣುವ ಬದಲು ಸುಲಭವಾಗಿ ಹಣ ಮಾಡುವ ಮಾರ್ಗಗಳನ್ನು ಅರಸುತ್ತಿದ್ದಾರೆ. ಹಾಗೂ ಐಶಾರಮಿ ಜೀವನದ ಆಸೆಯನ್ನು ಕಾಣುತ್ತಿದ್ದಾರೆ. ಮಧ್ಯಮವರ್ಗದ ಆಸೆಗಳನ್ನೇ ಬಂಡವಾಳ ಮಾಡಿಕೊಂಡು ಮೋದಿ ಅವರು ಚುನಾವಣೆ ಗೆದ್ದರು. ಅಂದ ಮೇಲೆ ಸರಕಾರ ಕೂಡ ಸ್ವಾರ್ಥ ಹಾಗೂ ಲಾಭಗಳನ್ನು ಮೌಲ್ಯವಾಗಿ ಒಪ್ಪಿಕೊಂಡಿದೆ.

      Reply
  4. Sharada halli

    ಶ್ರೀಪಾದ್ ಸರ್ ಭೋಪಾಲ್ ಅನಿಲ ದುರಂತ ಸಂಭವಿಸಿದಾಗ ಇಲ್ಲಿನ ಪ್ರಧಾನ ಮಂತ್ರಿ ಮುಖ್ಯ ಮಂತ್ರಿಗಳಾಗಿದ್ದವರು ಎಲ್ಲಾ ಸುರಕ್ಶೆಗಳನ್ನು ತಗೊಂಡಿದ್ದರೂ ದುರಂತ ಸಂಭವಿಸಿತೇ ಅಥವಾ ಸುರಕ್ಷತೆ ತೊಗೊಂಡಿರಲಿಲ್ಲವೆ? ಎಲ್ಲಾ ರಾಜಕೀಯದವರೂ ತಮ್ಮ ಸ್ವಾರ್ಥ ಮಾತ್ರ ನೋಡಿಕೊಳ್ಳುತ್ತಾರೆ. ಸೂಟ್ ಕೇಸ ಸಿಕ್ಕರೆ ದೇಶವನ್ನೇ ಮಾರಲು ಹೇಸಲ್ಲ. ಹೀಗಿದ್ದಾಗ ನೀವು ಕೇವಲ ಮೋದಿಯನ್ನು ಮಾತ್ರ ಟಾರ್ಗೆಟ್ ಮಾಡಿ ದೂಶಷಿಸುತ್ತಿದ್ದೀರಲ್ಲಾ?? ಹಿಂದಿನವರ ಅಪರಾದಧಗಳನ್ನು ಹೆಳುತ್ತಲೇ ಇಲ್ಲ. ಆ ಖದೀಮ ಅಂಡರ್ ಸನ್ ಅನ್ನು ಗಡೀಪಾರು ಮಾಡಿದವರು ಮೋದೀನಾ? ಇಲ್ಲಿನ ಖದೀಮರಿಗೆ ಶಿಕ್ಶೆ ಆಗದಂತೆ ನೋಡಿಕೊಂಡವರು ಮೋದೀನಾ? ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣನೇ?

    Reply
  5. ಎಸ್.ಐ. ಹಸ್ಸನ್

    ಅಪಾಯಕಾರಿ ಉದ್ಯಮಗಳನ್ನು ಅದರ ಪರ ವಹಿಸಿ ವಾದಿಸುವ, ಪ್ರೋತ್ಸಾಹಿಸುವ ಹಾಗೂ ಅನುಮತಿ ನೀಡುವ ರಾಜಕೀಯ ನೇತಾರರು ಹಾಗು ಉದ್ದಿಮೆದಾರರು ವಾಸಿಸುವ ಅಥವಾ ಶಾಸಕರ ಭವನ ಅಥವಾ ಪಾರ್ಲಿಮೆಂಟಿನ ಹತ್ತಿರದಲ್ಲಿಯೇ ನಿರ್ಮಿಸಬೇಕು. ಆಗ ಅವರ ನೈಜ ಬಣ್ಣ ಬಯಲಾಗುತ್ತದೆ. ಸಾಮಾನ್ಯ ನಾಗರಿಕ ಯಾವುದೆಲ್ಲ ತೊಂದರೆ, ರೋಗ, ಮಾಲಿನ್ಯ, ಭಯ, ಅಶಾಂತಿಯ ವಾತವರಣದಲ್ಲಿ ಜೀವಿಸುತ್ತಾನೆ ಎಂಬುದು ಅವರಿಗೂ ಅರಿವಾಗಬೇಕು. ಜನರ ಹಣದಿಂದ ತನ್ನ ಪರಿವಾರದ ಜೊತೆಗೆ ತಿಂದು ತೇಗಿ ಆನಂದಿಸುವ ಮಾರಲ್ಪಟ್ಟ ರಾಜಕಾರಣಿಗಳಿಗೆ ಸರಿಯಾದ ಕಡಿವಾಣ ಹಾಕಲು ನಮ್ಮ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಬೇಕಾಗಿರುವುದು ಅತ್ಯಗತ್ಯ.
    ಆದರೆ ಅದೇ ಪ್ರಶ್ನೆ…ಬೆಕ್ಕಿಗೆ ಘಂಟೆ ಕಟ್ಟುವವರಾರು?

    Reply
  6. Anonymous

    ಅದ್ಭುತವಾದ ಲೇಖನ ದಯವಿಟ್ಟು ಈ ಲೇಖನಗಳು ಪತ್ರಿಕೆಗಳಲ್ಲಿ ಪ್ರಸಾ
    ಕಟವಾಗಲಿ

    Reply

Leave a Reply

Your email address will not be published. Required fields are marked *