ಎಚ್.ಎಸ್.ದೊರೆಸ್ವಾಮಿ : ವರ್ತಮಾನ.ಕಾಮ್‌ನ (2014) ವರ್ಷದ ವ್ಯಕ್ತಿ

ವರ್ತಮಾನ ಬಳಗ

ವಯಸ್ಸು 96 ದಾಟಿದೆ. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಪ್ರಯಾಣಿಸಿ ಆಯಾಸಗೊಂಡಿರಬಹುದು. ಸಿರಿಮನೆ ನಾಗರಾಜ್ ಹಾಗೂ ನೂರ್ ಜುಲ್ಫಿಕರ್ ಅವರನ್ನು ಮುಖ್ಯವಾಹಿನಿಗೆ ಕರೆತರುವ ಸಂಬಂಧ ಅಧಿಕಾರಿಗಳೊಂದಿಗೆ ನಡೆದ ಮಾತುಕತೆ, ಸಭೆಗಳು, ಪತ್ರಿಕಾ ಗೋಷ್ಟಿಗಳು, ನೆರೆದಿದ್ದ ನೂರಾರು ಜನ.. – ಈ ಎಲ್ಲಾ ಕಾರಣಗಳಿಂದಾಗಿ ಹಿರಿಯ ಜೀವ ಸುಸ್ತಾಗಿರಬಹುದು. ಅವರನ್ನು ಆದಷ್ಟು ಬೇಗ ಬೆಂಗಳೂರಿನಲ್ಲಿ ಅವರ ಮನೆಗೆ ತಲುಪಿಸಿ doreswamy-ex-naxalsವಿಶ್ರಾಂತಿ ತೆಗೆದುಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಜೊತೆಗಾರರು ಯೋಚಿಸುತ್ತಿದ್ದರೆ, ಅವರು ಇತರೆ ಗೆಳೆಯರೊಂದಿಗೆ ಬಳ್ಳಾರಿಗೆ ಹೊರಟು ನಿಂತಿದ್ದಾರೆ! “ನನಗೆ ಅಲ್ಲೊಂದು ಕಾರ್ಯಕ್ರಮವಿದೆ. ಬರುತ್ತೇನೆ ಎಂದು ಹೇಳಿದ್ದೇನೆ..” ಎಂದು ಬೆಂಗಳೂರಿನ ಸ್ನೇಹಿತರನ್ನು ಗೊಂದಲಕ್ಕೀಡುಮಾಡಿದವರು ಎಚ್.ಎಸ್.ದೊರೆಸ್ವಾಮಿ.

ಕರ್ನಾಟಕದ ಮಟ್ಟಿಗೆ ‘ನಮ್ಮ ನಡುವೆ ಇರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರ’ ಎಂದಾಕ್ಷಣ ಥಟ್ಟನೆ ನೆನಪಾಗುವ ಹೆಸರು ದೊರೆಸ್ವಾಮಿ. ವಯಸ್ಸು, ಅನಾರೋಗ್ಯ ಎಂಬೆಲ್ಲಾ ಕಾರಣಗಳಿಗೆ ವಿಶ್ರಾಂತಿ ಜೀವನದ ಮೊರೆಹೋಗಿದ್ದರೆ, ಅವರನ್ನು ಯಾರೂ ಬೇಡ ಎನ್ನುತ್ತಿರಲಿಲ್ಲ. ಬದಲಿಗೆ ಅವರು ಬೀದಿ ಹೋರಾಟಕ್ಕೆ ಇಳಿದು ದುರ್ಬಲ ವರ್ಗಗಳಿಗೆ ದನಿಯಾಗುತ್ತಾರೆ. 2014ರಲ್ಲಿ ನಡೆದ ಪ್ರಮುಖ ಮೂರು ಹೋರಾಟ/ಬೆಳವಣಿಗೆಗಳಲ್ಲಿ ದೊರೆಸ್ವಾಮಿಯವರ ಪಾತ್ರ ದೊಡ್ಡದು. ಮಂಡೂರಿನ ಜನ ತಮ್ಮ ಊರಿಗೆ ಕಸ ಹಾಕಬಾರದೆಂದು ಧರಣಿ ಕೂತಾಗ ಅವರೊಟ್ಟಿಗೆ ಇವರು ನಿಂತರು. Doreswamy-mandurಇತರರು ಬಂದರು. ಸರಕಾರ ಮಾತು ಕೇಳಬೇಕಾಯಿತು. ಒಂದು ಹಂತಕ್ಕೆ ಸರಕಾರ ಜನರ ಮಾತಿಗೆ ಬೆಲೆ ಕೊಟ್ಟು ಹಂತಹಂತವಾಗಿ ಆ ಊರಿಗೆ ಕಸ ಸಾಗಿಸುವುದನ್ನು ಕಡಿಮೆ ಮಾಡಿತು. ಆ ಮಟ್ಟಿಗೆ ಜನರ ಹೋರಾಟ ಯಶಸ್ವಿ.

ಹಲವು ವರ್ಷಗಳಿಂದ ಬೆಂಗಳೂರಿನ ಭೂಗಳ್ಳರ ವಿರುದ್ಧ ಹೋರಾಟ ನಡೆದೇ ಇತ್ತು. ಈ ವರ್ಷ ಹೋರಾಟ ನಿರ್ಣಾಯಕ ಹಂತಕ್ಕೆ ತಲುಪಿ ಕೋಟಿಗಟ್ಟಲೆ ಮೌಲ್ಯದ ಭೂಮಿ ಸರಕಾರಕ್ಕೆ ಹಿಂತಿರುಗಲು ದೊರೆಸ್ವಾಮಿ ನೇತೃತ್ವದಲ್ಲಿ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮತ್ತಿತರರು ಬೆಂಗಳೂರಿನಲ್ಲಿ ನಡೆಸಿದ ಹೋರಾಟ ಕಾರಣ. ಭೂಗಳ್ಳರ ವಿರುದ್ಧ ಕಠಿಣ ಕ್ರಮ ಹಾಗೂ ಆ ಸಂಬಂಧದ ಪ್ರಕರಣಗಳನ್ನು ಶೀಘ್ರಗತಿಯಲ್ಲಿ ಇತ್ಯರ್ಥ ಮಾಡಲು ಅಗತ್ಯ ನ್ಯಾಯಾಲಯಗಳ ಸ್ಥಾಪನೆಗೆ ಸಂಬಂಧಪಟ್ಟ ಕಾನೂನು ತಿದ್ದುಪಡಿ ವಿಧೇಯಕ ಸರಕಾರದಿಂದ ಅಂಗೀಕಾರವಾಗಿ ರಾಷ್ಟ್ರಪತಿಯವರ ಮುಂದೆ ಬಹಳ ಕಾಲದಿಂದ ಹಾಗೇ ಉಳಿದಿತ್ತು. ಈ ಹೋರಾಟದ ಫಲವಾಗಿ ಕೇಂದ್ರ ಸರಕಾರ ರಾಷ್ಟ್ರಪತಿ ಅಂಗೀಕಾರ ಪಡೆಯಿತು. ಅಷ್ಟೇ ಅಲ್ಲ ಭೂಗಳ್ಳರ ಪಾಲಾಗಿದ್ದ ಸಾವಿರಾರು ಕೋಟಿ ರೂ ಮೌಲ್ಯದ ಸರಕಾರಿ ಭೂಮಿಯನ್ನು ಸರಕಾರ ಹಿಂದಕ್ಕೆ ಪಡೆಯುತ್ತಿದೆ. ಈ ನಿಟ್ಟಿನಲ್ಲಿ ಆಗಬೇಕಿರುವ ಕಾರ್ಯ ಇನ್ನೂ ಬಹಳಷ್ಟಿದೆ.doreswamy-anti-land-grabbing

ಬಹಳ ಕಾಲದಿಂದ ನಕ್ಸಲರನ್ನು ಮುಖ್ಯವಾಹಿನಿಗೆ ತರುವ ಕೆಲಸ ನಿಂತಿತ್ತು. ಸಿರಿಮನೆ ನಾಗರಾಜು ಮತ್ತು ಜುಲ್ಫಿಕರ್ ಅವರು ಸೈದ್ಧಾಂತಿಕ ಕಾರಣಗಳಿಗಾಗಿ ಸಶಸ್ತ್ರ ಹೋರಾಟದಿಂದ ಹಿಂದೆ ಸರಿದಿದ್ದರೂ ಮುಖ್ಯವಾಹಿನಿಗೆ ಬರಲಾಗಿರಲಿಲ್ಲ. ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದರು. ಅವರೇನು ಸರಕಾರದ ಯಾವ ಪ್ಯಾಕೇಜನ್ನೂ ಬಯಸಿದವರಲ್ಲ. ಶಾಂತಿಗಾಗಿ ನಾಗರಿಕರ ವೇದಿಕೆಯ ಗೌರಿ ಲಂಕೇಶ್, ಶಿವಸುಂದರ್ ಮತ್ತಿತರರ ಪ್ರಯತ್ನದಿಂದ ಸರಕಾರ ಇತ್ತ ಕಡೆ ಸ್ವಲ್ಪ ಗಮನ ಹರಿಸಲು ಸಾಧ್ಯವಾಗಿತ್ತು. ನಕ್ಸಲರನ್ನು ಮುಖ್ಯವಾಹಿನಿಗೆ ತರಲು ನಾಗರಿಕರನ್ನು, ಅಧಿಕಾರಿಗಳನ್ನು ಒಳಗೊಂಡ ಸಮಿತಿ ನೇಮಕವಾಯಿತು. ಆ ಸಮಿತಿಯಲ್ಲಿ ನಾಗರಿಕರ ಪ್ರತಿನಿಧಿಯಾಗಿ ನೇತೃತ್ವ ವಹಿಸಿದರು ದೊರೆಸ್ವಾಮಿ, ಗೌರಿ ಲಂಕೇಶ್ ಹಾಗೂ ಎ.ಕೆ.ಸುಬ್ಬಯ್ಯ. ಮೊದಲ ಹಂತವಾಗಿ ಇಬ್ಬರು ಮುಖ್ಯವಾಹಿನಿಗೆ ಬಂದಿದ್ದಾರೆ. ಇದೇ ಸಮಿತಿಯ ಮುಂದೆ ಸಶಸ್ತ್ರ ಚಳವಳಿಯಲ್ಲಿ ತೊಡಗಿಸಿಕೊಂಡಿರುವ ಇನ್ನು ಮೂರು ಜನ ಮುಖ್ಯವಾಹಿನಿಗೆ ಬರುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಖ್ಯವಾಹಿನಿಗೆ ಬಂದವರಾರೂ, ಹೋರಾಟದಿಂದ ದೂರ ಸರಿಯುತ್ತಿಲ್ಲ. ಬದಲಿಗೆ ಸಾಮಾಜಿಕ ನ್ಯಾಯಕ್ಕಾಗಿ ಮತ್ತಷ್ಟು ಗಟ್ಟಿಯಾಗಿ ಹೋರಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಮುಖ್ಯವಾಹಿನಿಯಲ್ಲಿರುವ ಸಂಗಾತಿಗಳಿಗೆ ಇದು ಆಶಾದಾಯಕ ಬೆಳವಣಿಗೆ.

2014ರಲ್ಲಿ ಪಟ್ಟಿ ಮಾಡಬಹುದಾದ ಈ ಮೇಲಿನ ಪ್ರಮುಖ ಘಟನೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ ದೊರೆಸ್ವಾಮಿಯವರನ್ನು hiremath-doreswamyವರ್ತಮಾನ ವರ್ಷದ ವ್ಯಕ್ತಿ ಎಂದು ಗುರುತಿಸಲು ಹೆಮ್ಮೆ ಪಡುತ್ತದೆ. ಬಲಾಢ್ಯರ ವಿರುದ್ಧ, ದುರ್ಬಲರ ಪರ ದನಿ ಎತ್ತುವ ಪ್ರಾಮಾಣಿಕ ವ್ಯಕ್ತಿತ್ವಗಳನ್ನು ಗುರುತಿಸುವುದು ವರ್ತಮಾನದ ಉದ್ದೇಶ. ಕಳೆದ ವರ್ಷ ವರ್ತಮಾನ ಈ ಸ್ಥಾನಕ್ಕೆ ಎಸ್.ಆರ್.ಹಿರೇಮಠರನ್ನು ಆಯ್ಕೆ ಮಾಡಿದ್ದು ಓದುಗರಿಗೆ ನೆನಪಿರಬಹುದು. ಹಿರೇಮಠರು ತಮ್ಮ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ನಡೆಯುತ್ತಿದ್ದಾರೆ. ದೊರೆಸ್ವಾಮಿಯವರು ನೇತೃತ್ವ ವಹಿಸಿದ್ದ ಭೂಗಳ್ಳರ ವಿರುದ್ಧ ಹೋರಾಟದಲ್ಲಿ ಇವರೂ ಪಾಲ್ಗೊಂಡಿದ್ದನ್ನು ಸ್ಮರಿಸಬಹುದು.

4 thoughts on “ಎಚ್.ಎಸ್.ದೊರೆಸ್ವಾಮಿ : ವರ್ತಮಾನ.ಕಾಮ್‌ನ (2014) ವರ್ಷದ ವ್ಯಕ್ತಿ

  1. ಅಭಿನವ ಚನ್ನಬಸವಣ್ಣ

    ದೊರೆಸ್ವಾಮಿಯವರು ವರ್ತಮಾನದ ಯುವ ಅಭಿಮಾನಿಗಳಿಗೆ ಪ್ರೇರಕ ಶಕ್ತಿ. ಅವರನ್ನು ಗೌರವಿಸುವ ಮೂಲಕ ವರ್ತಮಾನ ಬಳಗವು ತನ್ನನ್ನೇ ಗೌರವಿಸಿಕೊಂಡಿದೆ ಅನ್ನಬಹುದು.

    Reply
  2. Salam Bava

    ದೀಮಂತ ವ್ಯಕ್ತಿತ್ವದ ,ಸಂತ ದೊರೆಸ್ವಾಮಿ ಯವರನ್ನು ವರ್ಷದ ವ್ಯಕ್ತಿ ಯಾಗಿ ಆರಿಸುವ ಮೂಲಕ ಟೀಂ ವರ್ತಮಾನ ಅತ್ಯಂತ ಅರ್ಹ ವ್ಯಕ್ತಿಯನ್ನು ಸನ್ಮಾನಿಸಿದೆ . ಅಭಿನಂದನೆಗಳು ಸಾರ್

    Reply

Leave a Reply

Your email address will not be published. Required fields are marked *