ಪುಸ್ತಕ ಪರಿಚಯ : ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ

 ಡಾ.ಎಂ.ಚಂದ್ರ ಪೂಜಾರಿ

[“ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ” ಪುಸ್ತಕಕ್ಕೆ ಬರೆದಿರುವ ಮುನ್ನುಡಿ.]

ಇದೊಂದು ಸಣ್ಣ ಪುಸ್ತಕವಾದರೂ ಇದು ಕಟ್ಟಿಕೊಡುವ ಸತ್ಯಗಳು ಇಂದಿನ ಸಂದರ್ಭದಲ್ಲಿ ತುಂಬಾ ಮಹತ್ವದ್ದಾಗಿವೆ. ಶೇಕಡಾ ಮೂವತ್ತರಷ್ಟು ಜನರು ಶೇಕಡಾ ಎಪ್ಪತ್ತರಷ್ಟು ಜನರ ಆಸಕ್ತಿಗಳನ್ನು ಬಲಿಕೊಟ್ಟು ಬದುಕುತ್ತಿರುವುದು ಇಂದಿನ ಸಮಾಜದ ಲಕ್ಷಣ. ಸಮಾಜದ ಎಲ್ಲರ ಸುಖಸಂತೋಷಗಳಿಗಾಗಿ ಬಳಸಬೇಕಾದ ಭೌತಿಕ ಮತ್ತು ಸಾಂಸ್ಕೃತಿಕ ಸಂಪನ್ಮೂಲಗಳನ್ನು ಅಲ್ಪಸಂಖ್ಯೆಯ ಜನರ ಸುಖಸಂತೋಷಗಳಿಗಾಗಿ ಬಳಸುವುದು ಇಂದಿನ ಸಮಸ್ಯೆಯ ಮೂಲ. ಇಂತಹ ಸಮಾಜ ನಿರ್ಮಾಣವಾಗಿರುವುದು ಪರದೇಶದ ಅಥವಾ ಪರಲೋಕದ ಶಕ್ತಿಗಳಿಂದಲ್ಲ. ನಾವು ನೀವೆಲ್ಲ ಸೇರಿ ಮತ ಹಾಕಿ ಚುನಾಯಿಸಿದ ಜನಪ್ರತಿನಿಧಿಗಳಿಂದ ಈ ಸಮಾಜ ನಿರ್ಮಾಣವಾಗಿದೆ. ಇದನ್ನೇ ಇನ್ನೊಂದು ವಿಧದಲ್ಲಿ ಹೇಳುವುದಾದರೆ ಇಂದು ಆಚರಣೆಯಲ್ಲಿರುವ ಪ್ರಜಾಪ್ರಭುತ್ವದಲ್ಲಿ ಮತದಾರರ ಆಸಕ್ತಿಗಿಂತ ಪಾರ್ಟಿ ಫಂಡ್‌ಗೆ ದೇಣಿಗೆ ನೀಡುವವರ ಆಸಕ್ತಿಗಳು ಮುಖ್ಯವಾಗಿವೆ. ಇಂತಹ ಪ್ರಜಾಪ್ರಭುತ್ವವನ್ನು ಎಲ್ಲ ಬಗೆಯ ಚಳವಳಿಗಳು ಮಾತ್ರ ಸುಧಾರಿಸಲು ಸಾಧ್ಯ ಎನ್ನುವ ಸಂದೇಶವನ್ನು ಈ ಪುಸ್ತಕ ನೀಡುತ್ತಿದೆ.

ಆದರೆ ಚಳವಳಿಗಳ ಬೆಳವಣಿಗೆಯ ದೃಷ್ಟಿಯಿಂದ ತೊಂಬತ್ತರ ನಂತರದ ದಶಕಗಳು ಬರಡು ಭೂಮಿಯಂತಾಗಿವೆ. ವಿದ್ಯಾರ್ಥಿ ಚಳವಳಿಗಳು, ಅಧ್ಯಾಪಕರ ಚಳವಳಿಗಳು, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಚಳವಳಿಗಳು, ನೀರಿನ ಚಳವಳಿಗಳು ಎಪ್ಪತ್ತು ಎಂಬತ್ತರ ದಶಕಗಳಲ್ಲಿ ಪ್ರತಿನಿತ್ಯದ ಬೆಳವಣಿಗೆಗಳು. ತೊಂಬತ್ತರ ನಂತರ ವಿದ್ಯಾರ್ಥಿ ಚಳವಳಿಗಳು, ಅಧ್ಯಾಪಕರ ಚಳವಳಿಗಳು ಸಂಪೂರ್ಣ ಮಾಯವಾಗಿವೆ. ಸಂಘಟಿತ ವಲಯದ ಕಾರ್ಮಿಕರು ವರ್ಷಕ್ಕೊಮ್ಮೆ ಚಳವಳಿಯ ದಿನವನ್ನು ಆಚರಿಸುತ್ತಿದ್ದಾರೆ. ಅಸಂಘಟಿತ ಕಾರ್ಮಿಕರಂತೂ ಚಳವಳಿ ಮಾಡಲಾರದಷ್ಟು ಬಲಹೀನರಾಗಿದ್ದಾರೆ. ಇನ್ನೂ ಕೂಡ ಜೀವಂತ ಇರುವ ಮತ್ತು ಬೇರೆ ಬೇರೆ ರೂಪದಲ್ಲಿ ಮತ್ತು ಪ್ರಮಾಣದಲ್ಲಿ ದೇಶವ್ಯಾಪಿ ಸುದ್ದಿ ಮಾಡುತ್ತಿರುವುದು ರೈತ ಚಳವಳಿಗಳು ಮಾತ್ರ. ಪ್ರತಿಭಟನೆ, ಚಳವಳಿ, ಅನ್ಯಾಯದ ವಿರುದ್ಧದ ಹೋರಾಟ ಇತ್ಯಾದಿಗಳೆಲ್ಲ ಮೌಲ್ಯ ಕಳೆದುಕೊಳ್ಳುತ್ತಿರುವ ಇಂತಹ ಸಂದರ್ಭದಲ್ಲಿ ಕರ್ನಾಟಕದ ಯಾವುದೋ ಮೂಲೆಯಲ್ಲಿ ಹೇಳಹೆಸರಿಲ್ಲದ ರೈತರು ರಾಜ್ಯ ರಾಜಕೀಯದ ದಿಕ್ಕುದಿಶೆಯನ್ನು ಬದಲಾಯಿಸುವ ಚಳವಳಿಯನ್ನು ಸಂಘಟಿಸಿದ ಕಥನ ಇಂದಿನ ಅನಿವಾರ್ಯತೆ. ಸೊಪ್ಪಿನ ಅವರ ನರಗುಂದ-ನವಲಗುಂದ ರೈತರ ಬಂಡಾಯದ ಕಥನ ರಾಜ್ಯ ಅಧಿಕಾರಶಾಹಿಯಿಂದ ಹಿಂಸೆ ಅನುಭವಿಸುವ ಬಹುತೇಕರಿಗೆ ಪ್ರತಿರೋಧಗಳನ್ನು ಕಟ್ಟಿಕೊಳ್ಳಲು ಪ್ರೇರಕ ಶಕ್ತಿಯಾಗಬಹುದು.

ಎಂಬತ್ತರ ದಶಕದಲ್ಲಿ ಕರ್ನಾಟಕದಲ್ಲಾದ ರಾಜಕೀಯ ಬದಲಾವಣೆಯನ್ನು ಎಲ್ಲರೂ ಅವರವರ ಆಸಕ್ತಿಗನುಸಾರ ಕಟ್ಟಿಕೊಳ್ಳುತ್ತಿದ್ದಾರೆ. ಕೆಲವರು ಗೋಕಾಕ್ ಚಳವಳಿ ಮತ್ತು ಗುಂಡೂರಾವ್ ಅವರ ದುರಾಡಳಿತದ ಮೂಲಕ ರಾಜ್ಯ ರಾಜಕೀಯದ ಬದಲಾವಣೆಯನ್ನು ಗುರುತಿಸಿದರೆ ಇನ್ನು ಕೆಲವರು ಬಲಾಢ್ಯ ಸಮುದಾಯದ ನಾಯಕರು ಮತ್ತು ಕಾಂಗ್ರೆಸ್ ಹೈಕಮಾಂಡ್ ನಡುವಿನ ತಿಕ್ಕಾಟದ ರೂಪದಲ್ಲಿ ಬದಲಾವಣೆಯನ್ನು ಗುರುತಿಸುತ್ತಿದ್ದಾರೆ. ಆದರೆ ಎಲ್ಲೂ ಕೂಡ ರೈತರು, ಕಾರ್ಮಿಕರು ಬದಲಾವಣೆಯ ಪ್ರೇರಕ ಶಕ್ತಿಯಾಗಿದ್ದರು ಎನ್ನುವ ಕಥನಗಳು ಮುಂಚೂಣಿಗೆ ಬಂದಿಲ್ಲ. ಸೊಪ್ಪಿನ ಅವರ ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತರು ಈ ಕೊರತೆಯನ್ನು ತುಂಬಿದೆ. ಲೇಖಕರ ಮಾತಲ್ಲೇ ಹೇಳುವುದಾದರೆ, ನರಗುಂದ ರೈತ ಬಂಡಾಯದ ಬೆನ್ನ ಹಿಂದೆ ಬೆಲೆ ಏರಿಕೆಯನ್ನು ವಿರೋಧಿಸಿ ಹಾಗೂ ನರಗುಂದ ರೈತರಿಗೆ ಬೆಂಬಲ ಸೂಚಿಸಿ ಸ್ವಯಂಪ್ರೇರಿತವಾಗಿ ಜನರು ನಡೆಸಿದ ಪ್ರತಿಭಟನೆಗಳು, ಪೋಲಿಸರ ಗೋಲಿಬಾರಿನಿಂದ 135 ಜನ ರೈತರು ಹಾಗೂ ನಾಗರೀಕರು ಪ್ರಾಣ ಕಳೆದುಕೊಂಡಿದ್ದು ಮುಂತಾದ ಘಟನೆಗಳು ಜನಮಾನಸದಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಜಿಗುಪ್ಸೆ ಉಂಟುಮಾಡಿದವು. ಆಡಳಿತಾರೂಢ ಪಕ್ಷದ ಬಗ್ಗೆ ಜನರು ತಿರಸ್ಕಾರ ಭಾವನೆಯಿಂದ ನೋಡುವಂತಾಗಿತ್ತು. ಇವೆಲ್ಲದರ ಒಟ್ಟು ಪರಿಣಾಮವೇ 1983ರ ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು.

ನರಗುಂದ ನವಲಗುಂದ ರೈತ ಪ್ರತಿಭಟನೆಯ ಕಾರಣವನ್ನು ಶಾಂತಿಯುತ ರೈತ ಹೋರಾಟ ಹಿಂಸಾರೂಪಕ್ಕೆ ಪರಿವರ್ತನೆಗೊಂಡ ಬಗೆಯನ್ನು ಮತ್ತು ರೈತ ದಂಗೆಯ ಪರಿಣಾಮಗಳನ್ನು ಪುಸ್ತಕ ಬಿಡಿಬಿಡಿಯಾಗಿ ವಿವರಿಸುತ್ತದೆ. ಮಲಪ್ರಭ ನದಿಗೆ ಅಣೆಕಟ್ಟು ನಿರ್ಮಾಣ ಕೆಲಸ 1960ರಲ್ಲಿ  ಆರಂಭವಾಗಿ, ಆಮೆಗತಿಯಲ್ಲಿ ಸಾಗಿ, 1976-77ರಲ್ಲಿ ಹೊಲಗಳಿಗೆ ನೀರು ಹರಿಯಲಾರಂಭಿಸಿತು. ನೀರಾವರಿ ಬಂದ ಕೂಡಲೇ ಸ್ವರ್ಗವೇ ನಿರ್ಮಾಣವಾಗುತ್ತದೆ ಎಂದು ನಂಬಿದ್ದ ರೈತರಿಗೆ ನೀರಾವರಿ ಜತೆ ಬರುವ ಸಮಸ್ಯೆಗಳ ಬಗ್ಗೆ ಅರಿವಿರಲಿಲ್ಲ. ಮೂರು ಹೊತ್ತಿನ ಊಟಕ್ಕಾಗಿ ಬೆಳೆಯುತ್ತಿದ್ದವರು ಮಾರುಕಟ್ಟೆಗೆ ಬೆಳೆಯಲಾರಂಭಿಸಿದರು. ಉತ್ಪಾದಕತೆಯನ್ನು ಹೆಚ್ಚಿಸುವ ಭರದಲ್ಲಿ ಹೆಚ್ಚು ಹೆಚ್ಚು ಉತ್ಪಾದನಾ ಪರಿಕರಗಳ ಮೇಲೆ ವಿನಿಯೋಜನೆ ಮಾಡಿದರು. ಉತ್ಪಾದನೆಯಲ್ಲಿ ವಿನಿಯೋಜಿಸಲು ಹೆಚ್ಚು ಹೆಚ್ಚು ಸಾಲ ಮಾಡಿದರು. ಉತ್ಪಾದನೆಯನ್ನು ಮಾರಿ ಸಾಲ ಸಂದಾಯ ಮಾಡಲು ಸಾಧ್ಯವಾಗದೆ ಸಾಲ ಸಂದಾಯಕ್ಕಾಗಿ ಸಾಲ ಮಾಡಿದರು. ರೈತರ ಬವಣೆ ಹೆಚ್ಚಿಸಲು ಇವೆಲ್ಲ ಸಾಲದೆನ್ನುವ ರೀತಿಯಲ್ಲಿ ಜಲಾಶಯ ಅಭಿವೃದ್ದಿ ಕರವನ್ನು 1977-74ರಿಂದಲೇ ರೈತರು ಸಂದಾಯ ಮಾಡಬೇಕೆಂದು ಅಧಿಕಾರಿಗಳು ಒತ್ತಡ ಹೇರಲಾರಂಭಿಸಿದರು. ಈ ಎಲ್ಲ ಸಮಸ್ಯೆಗಳನ್ನು ರೈತರು ಸರಕಾರದ ಗಮನಕ್ಕೆ ಹಲವಾರು ಬಾರಿ ತಂದರು. ಮಂತ್ರಿಗಳಿಗೆ ಮನವಿ ನೀಡಿದರು. ಅಧಿಕಾರಿಗಳಿಂದ ಮಂತ್ರಿಗಳಿಂದ ಸಮಸ್ಯೆ ಪರಿಹಾರದ ಭರವಸೆ ಅಥವಾ ಸಾಂತ್ವನದ ಮಾತುಗಳ ಬದಲು, ರೈತರು ಮೈಗಳ್ಳರು, ಶ್ರಮಜೀವಿಗಳಲ್ಲ ಎನ್ನುವ ಕಹಿ ಮಾತುಗಳು ಬಂದವು. ಅಭಿವೃದ್ದಿ ಕರ, ನೀರಿನ ಕರ ಇತ್ಯಾದಿಗಳ ಬಾಕಿ ವಸೂಲಿಗೆ ರೈತರ ಚರಾಸ್ತಿಗಳನ್ನು, ಪಾತ್ರೆ ಪಗಡೆಗಳನ್ನು ಹರಾಜು ಹಾಕಲಾರಂಭಿಸಿದರು. ಇವೆಲ್ಲವೂ ರೈತರ ಕಷ್ಟ ಧಾರಣ ಶಕ್ತಿಯನ್ನೇ ಪರೀಕ್ಷಿಸಲಾರಂಭಿಸಿದವು.

ಸರ್ಕಾರದ ರೈತ ವಿರೋಧಿ ಧೋರಣೆಗಳನ್ನು ರೈತರು ಸಂಘಟಿತರಾಗಿ ಶಾಂತಿಯುತರಾಗಿ ಪ್ರತಿಭಟಿಸಲು ತೀರ್ಮಾನಿಸಿದರು. ಇದಕ್ಕಾಗಿ ಮಲಪ್ರಭಾ ನೀರಾವರಿ ರೈತ ಸಮನ್ವಯ ಸಮಿತಿಯನ್ನು ರಚಿಸಿಕೊಂಡರು. ಜುಲೈ 21, 1980ರಲ್ಲಿ ನರಗುಂದದಲ್ಲಿ ಏಳೆಂಟು ಸಾವಿರ ರೈತರು ಸೇರಿ ತಹಶೀಲ್ದಾರರು ಕಚೇರಿ ಕೆಲಸವನ್ನು ಸ್ಥಗಿತಗೊಳಿಸಿ ತಮ್ಮ ಹೋರಾಟಕ್ಕೆ ಸಹಕಾರ ನೀಡಬೇಕೆಂದು ಕೇಳಿದರು. ಪ್ರತಿಭಟನಾಕಾರರ ಕೋರಿಕೆಯನ್ನು ತಹಶೀಲ್ದಾರರು ವಿವೇಚನೆಯಿಂದ ಪರಿಗಣಿಸಲಿಲ್ಲವೆಂದು ಘಟನೆಯ ತನಿಖೆಗೆ ಸರ್ಕಾರ ನೇಮಿಸಿದ ವಿಚಾರಣಾ ಆಯೋಗವೇ ತೀರ್ಮಾನಿಸಿದೆ. ಇದರಿಂದ ಕೆರಳಿದ ಪ್ರತಿಭಟನಾಕಾರರು ಕಚೇರಿ ಒಳಗೆ ನುಗ್ಗಲು ಯತ್ನಿಸಿದಾಗ ಬಲ ಪ್ರಯೋಗ ಮಾಡಲಾಯಿತು. ಪೋಲಿಸ್ ಗುಂಡಿಗೆ ಒಬ್ಬ ರೈತ ಹತನಾದ. ಈ ಘಟನೆಯಿಂದ ಪ್ರತಿಭಟನೆ ಹಿಂಸಾರೂಪ ತಾಳಿತು, ಮೂವರು ಪೋಲಿಸ್ ಅಧಿಕಾರಿಗಳು ಪ್ರಾಣ ಕಳೆದುಕೊಂಡರು, ಆಸ್ತಿ ಪಾಸ್ತಿ ಹಾನಿಯಾಯಿತೆಂದು ಆಯೋಗ ವರದಿ ಮಾಡಿದೆ. ಕಂದಾಯ ಮತ್ತು ಲೋಕೋಪಯೋಗಿ ಇಲಾಖೆಗಳ ಅಧಿಕಾರಿಗಳ ಬೇಜವಾಬ್ದಾರಿತನದ ನಡವಳಿಕೆ ಬಗ್ಗೆನೂ ಆಯೋಗ ಕಿಡಿಕಾರಿದೆ. ರೈತರು ತಮ್ಮ ಸಮಸ್ಯೆಗಳನ್ನು ಕೇಳಿಕೊಂಡಾಗ ಅವುಗಳನ್ನು ಸಹಾನುಭೂತಿಯಿಂದ ಕೇಳುವ ಸೌಜನ್ಯವನ್ನು ಅಧಿಕಾರಿಗಳು ರೂಢಿಸಿಕೊಂಡಿಲ್ಲ. ಕರಗಳ ವಸೂಲಾತಿಯನ್ನು ಮುಂದಕ್ಕೆ ಹಾಕುವ ಮನವಿಯನ್ನು ಕೂಡಾ ಕಂದಾಯ ಇಲಾಖೆ ಮಾನ್ಯ ಮಾಡಲಿಲ್ಲ. ಅದೂ ಅಲ್ಲದೆ ಅಧಿಕಾರಿಗಳು ಈ ವಿಷಯದಲ್ಲಿ ಪೂರ್ವಗ್ರಹ ಪೀಡಿತರಾಗಿ ವರ್ತಿಸಿದರು. ಅಂದರೆ ಕೆಲವು ಶ್ರೀಮಂತ ರೈತರು ಕರಗಳನ್ನು ಉಳಿಸಿಕೊಳ್ಳಲು ಸಣ್ಣ ಮತ್ತು ಮಧ್ಯಮ ವರ್ಗದ ರೈತರನ್ನು ಎತ್ತಿಕಟ್ಟಿ ಹೋರಾಟಕ್ಕೆ ಇಳಿಸಿದ್ದಾರೆ. ಅಧಿಕಾರಿಗಳ ಈ ನಿಲುವು ಸರಿಯಾದುದಲ್ಲ, ಯಾಕೆಂದರೆ ಕರಗಳ ಜೊತೆಗೆ ರೈತರ ಉತ್ಪನ್ನಗಳಿಗೆ ಯೋಗ್ಯಬೆಲೆ ಕಟ್ಟುವ ಸಾಮರ್ಥ್ಯವನ್ನು ಕುಗ್ಗಿಸಿವೆ. ರೈತರ ಬಗ್ಗೆ ಕಿಂಚಿತ್ ಕಾಳಜಿಯುಳ್ಳ ಅಧಿಕಾರಿಗಳಾಗಿದ್ದರೆ ಈ ಎಲ್ಲ ಸಮಸ್ಯೆಗಳನ್ನು ಅಧ್ಯಯನ ಮಾಡಿ ಸರ್ಕಾರದ ಗಮನಕ್ಕೆ ತರುತ್ತಿದ್ದರು. ಆದರೆ ರೈತರ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲದ ಅಧಿಕಾರಿಗಳು ಇಂತಹ ಸಕರಾತ್ಮಕ ಸ್ಪಂದನೆಗೆ ಬದಲು ಕರ ಸಂಗ್ರಹಕ್ಕೆ ಒತ್ತಡ ಹೇರಿದ ಕಾರಣದಿಂದಲೇ ಸಮಸ್ಯೆ ಬಿಗಡಾಯಿಸಿತೆಂದು ಆಯೋಗ ಟೀಕಿಸಿದೆ. ಹೀಗೆ ಶಾಂತಿಯುತವಾದ ಪ್ರತಿಭಟನೆಯನ್ನು ಹಿಂಸಾತ್ಮಕ ಪ್ರತಿಭಟನೆಯನ್ನಾಗಿ ಪರಿವರ್ತಿಸುವಲ್ಲಿ ಸರ್ಕಾರಿ ಮೆಶಿನರಿಯ ಪಾತ್ರ ದೊಡ್ಡದಿದೆ.

ನರಗುಂದ-ನವಲಗುಂದ ರೈತ ಬಂಡಾಯ ರಾಜ್ಯಾದ್ಯಂತ ವ್ಯಾಪಕ ಪರಿಣಾಮ ಉಂಟು ಮಾಡಿದೆಯೆಂದು ಲೇಖಕರು ಅಭಿಪ್ರಾಯ ಪಡುತ್ತಾರೆ. ಸರ್ಕಾರಗಳು ರೈತರ ಸಮಸ್ಯೆಗಳನ್ನು ಕಡೆಗಣಿಸಿದರೆ ಏನೆಲ್ಲ ಅನಾಹುತಗಳಾಗುತ್ತವೆ ಎನ್ನುವುದಕ್ಕೆ ಈ ಚಳವಳಿ ಸಾಕ್ಷಿಯಾಯಿತು. ಈ ಹೋರಾಟದ ಫಲವಾಗಿ ಕರ್ನಾಟಕ ಪ್ರಾಂತ ರೈತ ಸಂಘ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಲೇಖಕರು ಮತ್ತೊಂದು ಮಹತ್ವದ ಬೆಳವಣಿಗೆಯ ಮೇಲೆ ಬೆಳಕು ಚೆಲ್ಲಿದ್ದಾರೆ. 1983ರ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡು ಜನತಾ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಿತು. ಆದರೆ ಮಲಪ್ರಭಾ ನೀರಾವರಿ ಪ್ರದೇಶದ ಮೂರು ಮತಕ್ಷೇತ್ರಗಳ ಪೈಕಿ (ಸವದತ್ತಿ, ನರಗುಂದ ಮತ್ತು ನವಲಗುಂದ) ಎರಡು ಕ್ಷೇತ್ರಗಳಲ್ಲಿ (ಸವದತ್ತಿ ಮತ್ತು ನವಲಗುಂದ) ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದು ಒಂದರಲ್ಲಿ (ನರಗುಂದ) ಮಾತ್ರ ಸೋತರು. ನರಗುಂದ ಕ್ಷೇತ್ರದಲ್ಲಿ ಕ್ರಾಂತಿರಂಗದ ಅಭ್ಯರ್ಥಿ ಮತ್ತು ಮಲಪ್ರಭಾ ರೈತ ಹೋರಾಟ ಸಮನ್ವಯ ಸಮಿತಿಯ ಸಂಚಾಲಕರೊಬ್ಬರು ಗೆದ್ದರು. ಆಯ್ಕೆಯಾದ ಎಲ್ಲ ಅಭ್ಯರ್ಥಿಗಳು ಭೂಮಾಲೀಕ ವರ್ಗಕ್ಕೆ ಸೇರಿದವರು. ಈ ಬೆಳವಣಿಗೆಯನ್ನು ಗುರುತಿಸುವ ಮೂಲಕ ಲೇಖಕರು ಪ್ರಗತಿಪರ ನಿಲುವುಗಳು ರಾಜಕೀಯ ಶಕ್ತಿಯಾಗಿ ಪರಿವರ್ತನೆಗೊಳ್ಳಲು ಕ್ರಮಿಸಬೇಕಾದ ದೂರವನ್ನು ಗುರುತಿಸಿದ್ದಾರೆ. ಇದು ಸತ್ಯ ಕೂಡ. ದಿನಗೂಲಿ ನೌಕರರಿಗೆ, ಬೀಡಿ ಕಾರ್ಮಿಕರಿಗೆ, ಅಂಗನವಾಡಿ ಟೀಚರುಗಳಿಗೆ, ಬಹುತೇಕ ಇಲಾಖೆಗಳ ನೌಕರರಿಗೆ, ಅಸಂಘಟಿತ ಕಾರ್ಮಿಕರಿಗೆ ತಮ್ಮ ಉದ್ಯೋಗದ ಸೇವಾ ಸೌಲಭ್ಯಗಳನ್ನು ಪಡೆಯಲು ಎಡಪಂಥೀಯ ಸಂಘಟನೆಗಳು ಬೇಕು. ಆದರೆ ಚುನಾವಣೆ ಸಂದರ್ಭದಲ್ಲಿ ಇಂತಹ ಸಂಘಟನೆಗಳ ಸದಸ್ಯರ ಮತ ಎಡಪಂಥೀಯ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬಹುದೆನ್ನುವ ಗ್ಯಾರಂಟಿ ಇಲ್ಲ. ವೇದಿಕೆಗಳಲ್ಲಿ ಗಂಟೆಗಟ್ಟಲೆ ಪ್ರಗತಿಪರತೆಯ ಬಗ್ಗೆ ಭಾಷಣ ಬಿಗಿಯುವ, ಪುಟಗಟ್ಟಲೆ ಲೇಖನ ಬರೆಯುವ ಬುದ್ದಿಜೀವಿಗಳು ಕೂಡ ಮತ ಚಲಾವಣೆಯ ಸಂದರ್ಭದಲ್ಲಿ ಯಥಾರೀತಿ ಮುಖ್ಯವಾಹಿನಿಯ ಪಕ್ಷಗಳನ್ನು ಬೆಂಬಲಿಸುತ್ತಾರೆ. ಪ್ರಗತಿಪರ ನಿಲುವುಗಳು, ಮಾತುಗಳು, ಬರಹಗಳು, ಪ್ರಗತಿಪರ ರಾಜಕೀಯವಾಗಿ ಪರಿವರ್ತನೆಗೊಳ್ಳದಿದ್ದರೆ ಪ್ರಗತಿಪರತೆಗೆ ಅರ್ಥ ಇದೆಯೇ ಎನ್ನುವ ಪ್ರಶ್ನೆಯನ್ನು ಸೊಪ್ಪಿನ ಅವರ ಪುಸ್ತಕ ಕೇಳುತ್ತಿದೆ.

ಶೀರ್ಷಿಕೆ: ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ
ಲೇಖಕರು: ಬಿ.ಎಸ್. ಸೊಪ್ಪಿನ
ಪ್ರಕಾಶಕರು:ಚಿಂತನ ಪುಸ್ತಕ
ನಂ. 405, 1 ನೇ ಮುಖ್ಯ ರಸ್ತೆ, 10 ನೇ ಅಡ್ಡರಸ್ತೆ, ಡಾಲರ್ಸ್ ಕಾಲನಿ, ಜೆ.ಪಿ. ನಗರ ನಾಲ್ಕನೇ ಹಂತ, ಬೆಂಗಳೂರು – 78
ಪುಟ:104+4
ಬೆಲೆ: ರೂ.70/-


ಪ್ರಕಟಿತ ಪುಸ್ತಕಗಳ ಲೇಖಕರು/ಪ್ರಕಾಶಕರ ಗಮನಕ್ಕೆ…

One thought on “ಪುಸ್ತಕ ಪರಿಚಯ : ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ

  1. prasad raxidi

    ಹೌದು ಈ ಪುಸ್ಪ್ರತಕದ ಮೂಲಕ ಅವರು ಎತ್ತಿರುವ ಪ್ರಶ್ನೆಗಳು ಸರಿಯಾಗಿವೆ – ಪ್ರಗತಿಪರ ಚಿಂತನೆಗಳನ್ನಿಟ್ಟುಕೊಂಡು ಹೋರಾಟಕ್ಕಿಳಿಯುವ ಯಾವದೇ ಸಂಘಟನೆಯೂ ಹೋರಾಟದ ಜೊತೆ ಜೊತೆಗೇ ಅದನ್ನು ರಾಜಕೀಯ ಶಕ್ತಿಯಾಗಿ ಬೆಳೆಸುತ್ತಾ ಅದೇಕಾಲಕ್ಕೆ ಪ್ರಜಾಪ್ರಭುತ್ವ ವ್ಯವಸ್ತೆಯ ಅತೀಮುಖ್ಯವಾದ ಕಾರ್ಯಸೂತ್ರ ಮತ್ತು ಕಾರ್ಯಕ್ರಮವಾದ ಚುನಾವಣೆಗಳಲ್ಲಿ ಭಾಗವಹಿಸುತ್ತ , ಅದರಮೂಲಕ ಅಧಿಕಾರ ಗಳಿಸಿ ಬದಲಾವಣೆ ತರಲು ಪ್ರಯತ್ತಿಸಬೇಕು, ಇದು ಗ್ರಾಮ ಮಟ್ಟದಿಂದ ಪ್ರಾರಂಭವಾಗಬೇಕು. ಇಲ್ಲವಾದಲ್ಲಿ ಅಂದು ಹುಟ್ಟಿದ ರೈತಸಂಘ ಮೂರುನಾಲ್ಕು ವರ್ಷ ತಾನು ರಾಜಕೀಯದಿಂದ ದೂರ, ರಾಜಕಾರಣ ಎಂದರೇ ಕೆಟ್ಟದ್ದು ಎಂದು ಜನರಿಗೆ ಹೇಳಿ ನಂತರ ಏಕಾಯೇಕಿ ಸಂಸತ್ತಿಗೆ ಚುನಾವಣೆಗೆ ನಿಂತು ಆತ್ಮಹತ್ಯೆ ಮಾಡಿಕೊಂಡಂತೆ, ಆಗುತ್ತದೆ. ಜನರಿಗೆ ಈ ಹೋರಾಟಗಾರರು ನಿಜವಾಗಿಯೂ ರಾಜ್ಯ ಆಳಬಲ್ಲರು ಎಂದು ನಂಬಿಕೆ ಬಾರದೆ ಅವರನ್ನು ಬೆಂಬಲಿಸಲಾರರು..

    Reply

Leave a Reply

Your email address will not be published. Required fields are marked *