ಮುದ್ದು ಕಂದ ಸ್ಪರ್ಧೆ : ಮಾನಸಿಕ ಅಸ್ವಸ್ಥರು ನಡೆಸುವ ಕಾರ್ಯಕ್ರಮ


– ನವೀನ್ ಸೂರಿಂಜೆ 


 

ಮಕ್ಕಳ ದಿನಾಚರಣೆಯ ನೆಪದಲ್ಲಿ ಕೆಲವು ಪತ್ರಿಕೆಗಳು ಸಂವಿಧಾನದ ಅನುಚ್ಚೇದ 15 ರಲ್ಲಿ ಪ್ರಸ್ತಾಪಿಸಿರುವ ಮಕ್ಕಳ ತಾರತಮ್ಯದ ವಿರುದ್ಧದ ಹಕ್ಕನ್ನು ಉಲ್ಲಂಘಿಸುತ್ತಿವೆ. ಪತ್ರಿಕೆ ಅಥವಾ ಯಾವುದೇ ಮಾಧ್ಯಮದಲ್ಲಿ “ಮುದ್ದು ಕಂದ ಸ್ಪರ್ಧೆ” ನಡೆಸುವುದು ಮಕ್ಕಳ ತಾರತಮ್ಯದ ವಿರುದ್ಧದ ಹಕ್ಕು ಉಲ್ಲಂಘನೆಯಾಗುತ್ತದೆ. ಬಿಳಿ ಮಗು, ಕಪ್ಪು ಮಗು ಎಂದು ವಿಂಗಡನೆ ಮಾಡುವುದು ಒಂದು ಕ್ರೂರ ಮನಸ್ಥಿತಿಯಿಂದಷ್ಟೇ ಸಾಧ್ಯ. ಇಂತಹ ಕೆಲಸವನ್ನು ಕೆಲವೊಂದು ಪತ್ರಿಕೆಗಳು ಹಲವು ವರ್ಷಗಳಿಂದ ಸಾಂಗವಾಗಿ ಮಾಡುತ್ತಾ ಬಂದಿದೆ. ಮೇಲ್ವರ್ಗ-ಮೇಲ್ಜಾತಿ ಅಥವ ಶ್ರೀಮಂತರ ಮಗುವಷ್ಟೇ ಈ ಮುದ್ದು ಕಂದ ಸ್ಪರ್ಧೆಯ ಬಹುಮಾನ ಪಡೆಯಬಹುದಾಗಿದ್ದು, ಬಡ ದಲಿತ ಅಥವಾ ಫುಟ್‌ಪಾತ್‌ನಲ್ಲಿ ವಾಸಿಸುವ ಮಗು ಮುದ್ದು ಕಂದ ಸ್ಪರ್ಧೆಯಲ್ಲಿ ಭಾಗವಹಿಸುವ ಸಾಧ್ಯತೆ ಮತ್ತು ಪ್ರಶಸ್ತಿ ಪಡೆಯುವ ಸಾಧ್ಯತೆಗಳೇ ಇಲ್ಲ.

ನವೆಂಬರ್ 14 ಮಕ್ಕಳ ದಿನಾಚರಣೆ. ಮಕ್ಕಳ ದಿನಾಚರಣೆಯ ಸಂಧರ್ಭ ಮಕ್ಕಳ ಹಕ್ಕು, ಶಿಕ್ಷಣ, ಬದುಕಿನ ಬಗ್ಗೆ ಗಂಭೀರ ಚರ್ಚೆ ನಡೆಸಬೇಕಾದ ಪತ್ರಿಕೆಗಳಲ್ಲಿ ಕೆಲವು ಪತ್ರಿಕೆಗಳು ಪ್ರಸಾರ ಸಂಖ್ಯೆ ಹೆಚ್ಚಿಸುವ ಸಲುವಾಗಿ ಮುದ್ದು ಕಂದ ಸ್ಪರ್ಧೆಯನ್ನು ಆಯೋಜಿಸುತ್ತವೆ. ಬಹಳ ಸೂಕ್ಷ್ಮವಾಗಿ ಆಲೋಚಿಸಿದರೆ ಇದೊಂದು ತೀರಾ ಕೆಟ್ಟ ಗುಣಮಟ್ಟದ ಸ್ಪರ್ಧೆ ಮತ್ತು ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುವ ಸ್ಪರ್ಧೆ. ಈ ಮುದ್ದು ಕಂದ ಸ್ಪರ್ಧೆಯಲ್ಲಿ ಮಗುವಿನ ಪ್ರತಿಭೆಗೆ ಯಾವುದೇ ಅವಕಾಶ ಇಲ್ಲ. ಬದಲಾಗಿ ಚೆಂದ ನೋಡಿ ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ. ಪತ್ರಿಕೆಗಳು ಮನೆ ಮನೆಗೆ ತೆರಳುವುದರಿಂದ ಈ ಸ್ಪರ್ಧೆಗಳು ಪ್ರಶಸ್ತಿ ಪುರಸ್ಕೃತವಲ್ಲದ ಮಗುವಿನ ಮನಸ್ಸಿನ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಇಷ್ಟಕ್ಕೂ ಬಿಳಿ ಇದ್ದ ಮಕ್ಕಳು ಮಾತ್ರ ಚೆಂದ ಎಂದು ಈ ಪತ್ರಿಕೆಗಳಿಗೆ ಹೇಳಿ ಕೊಟ್ಟವರ್‍ಯಾರು? ಎಲ್ಲಾ ಮಕ್ಕಳು ಚೆಂದ. ಎಲ್ಲಾ ಮಕ್ಕಳು ಮುದ್ದು ಕಂದಗಳೆ. ಅದರಲ್ಲಿ ಸ್ಪರ್ಧೆ ಏನು ಬಂತು?

ಮುಖ್ಯವಾಗಿ ಕರ್ನಾಟಕದ ಎರಡು ಪ್ರಮುಖ ಪತ್ರಿಕೆಗಳು ಆಯೋಜಿಸುವ ಮುದ್ದು ಕಂದ ಸ್ಪರ್ಧೆ ಹೆಚ್ಚು ಪ್ರಸಿದ್ಧಿಯನ್ನು ಪಡೆದಿವೆ. ಮೇಲ್ನೋಟಕ್ಕೆ ಈ ಸ್ಪರ್ಧೆ ರಂಗು ರಂಗಾಗಿ ಕಂಡರೂ ಇದರ ಆಳದಲ್ಲಿ ಕ್ರೌರ್ಯ ಅಡಗಿದೆ. ಈ ಸ್ಪರ್ಧೆಗಾಗಿ ತಿಂಗಳ ಮೊದಲೇ ಜಾಹೀರಾತನ್ನು ನೀಡಲಾಗುತ್ತದೆ. ಮಗುವಿನ ಬೇರೆ ಬೇರೆ ಪೋಸ್‌ನ ಫೋಟೋಗಳನ್ನು ಪತ್ರಿಕೆಯ ವಿಳಾಸಕ್ಕೆ ಕಳುಹಿಸಿಕೊಡುವಂತೆ ಕೇಳಿಕೊಳ್ಳಲಾಗುತ್ತದೆ. ಯಾವುದಾದರೂ ಪ್ರತಿಷ್ಠಿತ ಕಂಪನಿಗಳು ಈ ಸ್ಪರ್ಧೆಯ ಪ್ರಾಯೋಜಕತ್ವವನ್ನು ವಹಿಸಿಕೊಂಡಿರುತ್ತದೆ. ಹೆತ್ತವರಿಗೆ ಮಕ್ಕಳ ಫೋಟೋ ಪತ್ರಿಕೆಯಲ್ಲಿ ಪ್ರಕಟವಾಗುವುದೆಂದರೆ ಅದು ಆಕಾಶಕ್ಕೆ ಸ್ವರ್ಗಕ್ಕೆ ಉಳಿದಿರೋದು ಮೂರೇ ಗೇಣು ಎಂಬಂತಹ ಸ್ಥಿತಿ. ಪತ್ರಿಕಾ ಕಚೇರಿಗೆ ನೂರಾರು ಮಂದಿ ಮಕ್ಕಳ ಪೋಟೋ ಕಳುಹಿಸುತ್ತಾರೆ. ಈ ಫೋಟೋಗಳ ಆಯ್ಕೆಗಾಗಿ ಮಕ್ಕಳ ತಜ್ಞೆ, ಕಲಾವಿದರು, ಖ್ಯಾತ ಫೊಟೋಗ್ರಾಫರ್ ಮತ್ತಿತರರ ತೀರ್ಪುಗಾರರ ಪ್ಯಾನಲ್ ಒಂದನ್ನು ರಚಿಸಿರುತ್ತಾರೆ. ಎಲ್ಲಾ ಮಕ್ಕಳ ಫೋಟೋ ವೀಕ್ಷಿಸಿದ ನಂತರ ತೀರ್ಪುಗಾರರು “ಎಲ್ಲಾ ಮಕ್ಕಳೂ ಚಂದವೇ. ಕಷ್ಟಪಟ್ಟು 30 ಫೋಟೋವನ್ನು ಆಯ್ಕೆ ಮಾಡಿದ್ದೇವೆ” ಎಂದು ಹೇಳುತ್ತಲೇ ಮುದ್ದು ಕಂದ ಪ್ರಶಸ್ತಿಯನ್ನು ಘೋಷಿಸುತ್ತಾರೆ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 65 ವರ್ಷವಾದರೂ ಇನ್ನೂ ನಾವು “ಬಿಳಿ ಚರ್ಮ” ಉಚ್ಚವಾದುದು ಎಂಬ ಭ್ರಮೆಯಿಂದ ಹೊರ ಬಂದಿಲ್ಲ. ಇದೊಂದು ವಿಕೃತ racist ಮನಸ್ಸು. ನಮ್ಮ ರಾಜ್ಯದಲ್ಲೇ ಬೇಕಾದಷ್ಟು ದಲಿತ ಕೇರಿಗಳು, ಸ್ಲಂಗಳು, ಬೀದಿಯ ಬದಿಯಲ್ಲಿ ಜೋಪಡಿ ಹಾಕಿಕೊಂಡ ಬದುಕುಗಳು ಇನ್ನೂ 21 ನೇ ಶತಮಾನಕ್ಕೆ ಬಂದೇ ಇಲ್ಲ ಎಂದು ಇವರಿಗಿನ್ನೂ ಗೊತ್ತೇ ಇಲ್ಲ ಎಂದು ಕಾಣುತ್ತದೆ. ಸಾವಿರಾರು ಮಕ್ಕಳ ಬೆನ್ನಿನ ಎಲುಬಿಗಂಟಿರುವ ಹೊಟ್ಟೆಗೆ ಮದ್ದೇ ಇಲ್ಲ ಎಂಬಂತಾಗಿದೆ. ಹಾಗೆಂದು ಇವರೆಲ್ಲ ಮುದ್ದು ಕಂದಗಳು ಅಲ್ಲವೇ?

ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಫ್ಎಚ್ಎಸ್ -3) ಪ್ರಕಾರ ರಾಷ್ಟ್ರ ಮಟ್ಟದಲ್ಲಿ ಶಿಶು ಮರಣ ಪ್ರಮಾಣ 1000 ಜನನಕ್ಕೆ ಶೇಕಡಾ 45 ರಷ್ಟು ಮಕ್ಕಳು. ಗ್ರಾಮೀಣ ಪ್ರದೇಶದಲ್ಲಿ ಇದು 50 ಇದ್ದರೆ ಮತ್ತು ನಗರ ಪ್ರದೇಶದಲ್ಲಿ ಈ ಮರಣ ಪ್ರಮಾಣ 30 ಇದೆ. ಕರ್ನಾಟಕದಲ್ಲಿ ಶಿಶು ಮರಣ ಪ್ರಮಾಣ 1000 ಕ್ಕೆ 55. ಅಂದರೆ ಇದು ರಾಷ್ಟ್ರೀಯ ಸರಾಸರಿಗಿಂತ ಅಧಿಕ. ಉತ್ತರ ಕರ್ನಾಟಕದಲ್ಲಿ ಈ ಸಮಸ್ಯೆ ಇನ್ನೂ ತೀವ್ರವಾಗಿದೆ. ಪ್ರತ್ಯೇಕ ಪ್ರತ್ಯೇಕವಾಗಿ ಜಿಲ್ಲೆಗಳ ಅಂಕಿ ಅಂಶಗಳನ್ನು ನೋಡಿದರೆ ಈ ಸಮಸ್ಯೆಯ ತೀವ್ರತೆ ಮತ್ತಷ್ಟೂ ಅಘಾತಕಾರಿಯಾಗಿದೆ. ಬೀದರ್‌ನಲ್ಲಿ 66, ಬಿಜಾಪುರದಲ್ಲಿ 67, ಧಾರವಾಡದಲ್ಲಿ 69, ಗುಲ್ಬರ್ಗದಲ್ಲಿ 67, ಗದಗದಲ್ಲಿ 66, ಹಾವೇರಿಯಲ್ಲಿ 66, ಕೊಪ್ಪಳದಲ್ಲಿ 65 ರಷ್ಟು ಶಿಶು ಮರಣ ನಡೆಯುತ್ತದೆ.

ರಾಯಚೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ವಿಭಾಗದ ಅಂಕಿ ಅಂಶಗಳ ಪ್ರಕಾರ 2009 ರಲ್ಲಿ 811 ನವಜಾತ ಶಿಶುಗಳು ಸಾವನ್ನಪ್ಪಿದರೆ, 2010 ರಲ್ಲಿ 1233 ಶಿಶುಗಳು, ಮತತ್ತು 2011 ರ ಜನವರಿಯಿಂದ ಆಗಸ್ಟ್ ಅವಧಿಯಲ್ಲಿ 645 ಶಿಶುಗಳು ಸಾವನ್ನಪ್ಪಿವೆ. ಒಟ್ಟು ಎರಡು ವರ್ಷ ಎಂಟು ತಿಂಗಳ ಅವಧಿಯಲ್ಲಿ ರಾಯಚೂರು ಜಿಲ್ಲೆಯೊಂದರಲ್ಲೇ 2,689 ಮಕ್ಕಳು ಸಾವನ್ನಪ್ಪಿದ್ದಾರೆ. ಆತಂಕಕಾರಿ ವಿಷಯವೆಂದರೆ ಈ ಎಲ್ಲಾ ಸಾವುಗಳೂ ಅಪೌಷ್ಠಿಕತೆಯಿಂದಲೇ ಸಂಭವಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿದೆ. ಇಷ್ಟಕ್ಕೆ ಮುಗಿಯುವುದಿಲ್ಲ. ರಾಯಚೂರು ಜಿಲ್ಲೆಯೊಂದರಲ್ಲೇ 4,531 ಮಕ್ಕಳು ಅಪೌಷ್ಠಿಕತೆಯಿಂದ ಇನ್ನೂ ಬಳಲುತ್ತಿದ್ದಾರೆ ಎಂದು ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೇಳಿದೆ.

ನವಜಾತ ಶಿಶುಗಳ ಮರಣ ಮತ್ತು ಅಪೌಷ್ಠಿಕತೆಯ ವಿಚಾರ ಕೇವಲ ರಾಯಚೂರಿಗೆ ಮಾತ್ರ ಸೀಮಿತವಾಗಿಲ್ಲ. ಇಡೀ ರಾಜ್ಯದಲ್ಲಿ ಇದು ವ್ಯಾಪಿಸಿದೆ. ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವವರ ಸಂಖ್ಯೆ ಬಾಗಲಕೋಟೆಯಲ್ಲಿ 8,957, ಬಿಜಾಪುರದಲ್ಲಿ 8,953, ಬೆಳಗಾವಿಯಲ್ಲಿ 7,016, ಬಳ್ಳಾರಿಯಲ್ಲಿ 6,411, ಹಾವೇರಿಯಲ್ಲಿ 4,537 ಮತ್ತು ಕೊಪ್ಪಳದಲ್ಲಿ 4,085 ಆಗಿದೆ. ಕರ್ನಾಟಕದಲ್ಲೇ ಇಷ್ಟೊಂದು ಮಕ್ಕಳು ಸಾವಿನ ಹೊಸ್ತಿಲಲ್ಲಿ ನಿಂತಿರುವಾಗ ಒಂದಷ್ಟು ಬಿಳಿ ಚರ್ಮದ ಮುಗ್ದ ನಗುವಿನ ಮಕ್ಕಳನ್ನು ತೋರಿಸಿ “ಮುದ್ದು ಕಂದಗಳು” ಎಂದು ತಾರತಮ್ಯ ಮಾಡಲು ಮಾನಸಿಕ ಅಸ್ವಸ್ಥರಲ್ಲದವರಿಗೆ ಮನಸ್ಸಾದರೂ ಹೇಗೆ ಬಂದೀತು?

ಮುಂದುವರಿದ ಜಿಲ್ಲೆ ಎಂದೇ ಪರಿಗಣಿಸಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ 2012 ಜನವರಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ 870 ಮಕ್ಕಳಲ್ಲಿ ಅಪೌಷ್ಠಿಕತೆ ಕಂಡು ಬಂದಿತ್ತು. ಮಂಗಳೂರಿನ ಚೇಳ್ಯಾರು ಗ್ರಾಮದ ಮಧ್ಯ ಎಂಬಲ್ಲಿರುವ ಕೊರಗ ಬುಡಕಟ್ಟು ನಿವಾಸಿಗಳ ಕಾಲನಿಯಲ್ಲಿ ಇತ್ತೀಚೆಗೆ ಅಪೌಷ್ಠಿಕತೆ ಕಂಡು ಬಂದಿತ್ತು. ಅಪೌಷ್ಠಿಕತೆಗೆ ಒಳಗಾಗಿರುವ ಈ ಸಾವಿರಾರು ಮಕ್ಕಳ ಫೋಟೋ ಪತ್ರಿಕಾ ಕಚೇರಿ ತಲುಪಿದರೆ ಒಂದಾದರೂ ಮಕ್ಕಳು ಮುದ್ದು ಕಂದ ಸ್ಪರ್ಧೆಯಲ್ಲಿ ಆಯ್ಕೆಯಾಗುವರೇ? ಅಪೌಷ್ಠಿಕತೆಗೆ ಒಳಗಾಗಿ ಮುಖದ ತೇಜಸ್ಸನ್ನೇ ಕಳೆದುಕೊಂಡಿರುವ ಇವರುಗಳು ಮುದ್ದು ಕಂದಗಳಲ್ಲವೇ?

ದೇವರು-ಭಕ್ತಿ-ಹರಕೆ-ಸಂಪ್ರದಾಯಗಳ ಹೆಸರಲ್ಲಿ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳ ಸಾಲಿನಲ್ಲೇ ಮುದ್ದು ಕಂದ ಸ್ಪರ್ಧೆಯನ್ನೂ ಸೇರಿಸಬೇಕಾಗುತ್ತದೆ. ಎರಡೂ ವಿಷಯಗಳಲ್ಲಿ ಮಕ್ಕಳಿಗೆ ತಾವು ಏನು ಮಾಡುತ್ತಿದ್ದೇವೆ ಎಂಬುದರ ಕನಿಷ್ಠ ಅರಿವೂ ಇರುವುದಿಲ್ಲ. ಗುಲ್ಬರ್ಗ ಜಿಲ್ಲೆಯ ಇಳಂಗೀ ತಾಲೂಕಿನ ಹಿರೋಳಿ ಗ್ರಾಮದ ಸೋಮೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಸಂದರ್ಭ ದೇವಸ್ಥಾನ ಮೊದಲನೇ ಮಹಡಿಯಿಂದ ಹಸುಗೂಸುಗಳನ್ನು ಕೆಳಕ್ಕೆಸೆಯುವ ಸಂಪ್ರದಾಯವಿದೆ. ದೇವಸ್ಥಾನದ ಕೆಳಭಾಗದಲ್ಲಿ ಬಟ್ಟೆ ಹಿಡಿದುಕೊಂಡು ನಿಂತಿದ್ದ ಮಂದಿ ಮೇಲಿಂದ ಬೀಳೋ ಮಕ್ಕಳು ಬಟ್ಟೆಯ ಮೇಲೆ ಬೀಳುವಂತೆ ಮಾಡುತ್ತಾರೆ. ಮೇಲಿಂದ ಕೆಳಕ್ಕೆ ಬೀಳುವಂತಹ ಸಮಯದಲ್ಲಿ ಮುಗ್ದ ಮಗುವಿನ ಮನಸ್ಸಿನಲ್ಲಿ ಆವರಿಸೋ ಭಯ ಎಂತದ್ದಿರಬಹುದು?

ಬೆಳಗಾವಿಯ ಮದಭಾವಿ ಗ್ರಾಮದ ಸಿದ್ದೇಶ್ವರ ಜಾತ್ರೆಯಲ್ಲಿ, ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಶಾಂತೇಶ್ವರ ದೇವಸ್ಥಾನದಲ್ಲಿಯೂ ಮಕ್ಕಳನ್ನು ಎತ್ತರದಿಂದ ಎಸೆದು ಕಂಬಳಿಯಲ್ಲಿ ಹಿಡಿಯುವ ಸಂಪ್ರದಾಯವಿದೆ. ಈ ರೀತಿ ಮಾಡುವುದರಿಂದ ದೇವರು ಸಂತುಷ್ಠನಾಗುತ್ತಾನೆ ಎಂಬ ನಂಬಿಕೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೇಪು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆಯ ಸಂದರ್ಭ ಮಧ್ಯ ರಾತ್ರಿ ಇನ್ನೂ ಮಾತು ಬಾರದ ಪುಟ್ಟ ಮಕ್ಕಳನ್ನು ನೀರಲ್ಲಿ ಮುಳುಗಿಸೋ ಸಂಪ್ರದಾಯವಿದೆ. ಸಾವಿರಾರು ಮಕ್ಕಳನ್ನು ಏಕಕಾಲದಲ್ಲಿ ತೋಡಿನ ಕೊಳಕು ನೀರಿನಲ್ಲಿ ಮುಳುಗಿಸಲಾಗುತ್ತದೆ. ಇಲ್ಲೂ ಒಂದು ವಿಶೇಷವಿದೆ. ಈ ಮುಳುಗಿಸುವಿಕೆ ಬ್ರಾಹ್ಮಣ ಮತ್ತು ದಲಿತ ಮಕ್ಕಳಿಗೆ ಇಲ್ಲ. ಬ್ರಾಹ್ಮಣ ಮಕ್ಕಳು ಶೂದ್ರರ ಜೊತೆ ಮುಳುಗುವುದು ನಿಷೇದವಾದರೆ, ದಲಿತರ ಮಕ್ಕಳು ಶೂದ್ರರಿಗೂ ಅಸ್ಪ್ರಶ್ಯರು! ಗೌರಿಬಿದನೂರು ತಾಲೂಕಿನ ಅಲಿಪುರಲ್ಲಿ ಶಿಯಾ ಮುಸ್ಲೀಮರು “ಮಾತಂ” ಆಚರಿಸುವುದು ಹಿಂಸೆಯ ಪರಮಾವಧಿ. ಮಕ್ಕಳ ಎದೆ ತಲೆಗೆ ರಕ್ತ ಬರುವಂತೆ ಬ್ಲೇಡಿನಿಂದ ಕೊಯ್ದು ಕೈದಿಯಂತೆ ಮಕ್ಕಳಿಗೆ ಸರಪಳಿ ಬಿಗಿಯುವುದು ಈ ಆಚರಣೆಯ ಶೈಲಿ. ಮುಸ್ಲೀಮರು ಆಚರಿಸೊ ಮೊಹರಂ ಕೂಡಾ ಇದರಿಂದ ಹೊರತಾಗಿಲ್ಲ. ಅದೇನೇ ಇರಲಿ. ಇಂತಹ ಆಚರಣೆಗಳಿಗೂ ಈ ಮುದ್ದು ಕಂದ ಸ್ಪರ್ಧೆಗೂ ಹೋಲಿಕೆ ಇದೆ. ಈ ಎಲ್ಲಾ ಪ್ರಕರಣಗಳಲ್ಲೂ ಬಲಿಪಶುಗಳು ಏನೂ ಅರಿಯದ ಮಕ್ಕಳು.

ಈವರೆಗೆ ನಡೆದ ಮುದ್ದು ಕಂದ ಸ್ಪರ್ಧೆಯಲ್ಲಿ ಒಂದೇ ಒಂದು ದಲಿತರ ಮಗುವಿಗೆ ಪ್ರಶಸ್ತಿ ಬಂದಿಲ್ಲ. ಉತ್ತಮ ಫೋಟೋಗ್ರಫಿ ಪ್ರಶಸ್ತಿ ನೀಡುವುದಾದರೆ ಅದಕ್ಕೊಂದು ಅರ್ಥ ಇರುತ್ತಿತ್ತು. ಆಗ ಬೀದಿ ಮಕ್ಕಳ ಫೋಟೋಗಳು, ಜೋಪಡಿಯಲ್ಲಿ ವಾಸಿಸೋ ಮಕ್ಕಳ ಫೋಟೋಗಳು, ಬಿಕ್ಷುಕರ ಮಕ್ಕಳ ಫೋಟೋಗಳಿಗೂ ಪ್ರಾಮುಖ್ಯತೆ ದೊರೆಯುತ್ತದೆ. ಅಲ್ಲಿ ಛಾಯಾಗ್ರಾಹಕನ ಕ್ರಿಯೇಟಿವಿಟಿ ಮಾತ್ರ ಪ್ರಾಧಾನ್ಯತೆಯನ್ನು ಪಡೆದುಕೊಳ್ಳುತ್ತದೆ. ಈ ಪತ್ರಿಕೆಗಳು ನಡೆಸುವ ಈ ಕ್ರೂರ ಸ್ಪರ್ಧೆಯಲ್ಲಿ ಮಗುವಿನ ಬಿಳಿ ಚರ್ಮ ಮತ್ತು ಶ್ರೀಮಂತಿಕೆ ಪ್ರಭಾವವಿರುವ ಮುಖ ಲಕ್ಷಣಗಳು ಮಾತ್ರ ಗಣನೆಗೆ ಬರುತ್ತದೆ. ಇದು ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಮಾತ್ರವಲ್ಲ ಬಿಳಿ ತೊಗಲೇ ಶ್ರೇಷ್ಠ ಎಂದು ಮುಗ್ದ ಕಂದಮ್ಮಗಳನ್ನು ಪ್ರತ್ಯೇಕಿಸಿ ತಾರತಮ್ಯ ಮಾಡುವ ವಿಕೃತ ಪುರೋಹಿತಶಾಹಿ ಮನಸ್ಸುಗಳ ಕ್ರೂರ ಮನಸ್ಥಿತಿಯಾಗಿದೆ.

4 thoughts on “ಮುದ್ದು ಕಂದ ಸ್ಪರ್ಧೆ : ಮಾನಸಿಕ ಅಸ್ವಸ್ಥರು ನಡೆಸುವ ಕಾರ್ಯಕ್ರಮ

  1. prasad raxidi

    ಈ ಹುಚ್ಚಿಗೆ ಹೋರಾಟದ ಹಿನ್ನೆಲೆಯಿಂದ ಬಂದಿರುವವರು ಅನೇಕ ನವ ಮಧ್ಯಮವರ್ಗದ ದಲಿತರೂ ಪಕ್ಕಾಗಿದ್ದಾರೆ. ಹತ್ತು ಹಲವು ಬಗೆಗಳಲ್ಲಿ ಮಕ್ಕಳ ಪೋಟೋ ತಗೆಸಿ ಕಂಡ ಕಂಡ ಸ್ಪರ್ಧೆಗಳಿಗೆ ಕಳುಹಿಸುತ್ತಿರುವವರೂ ಇದ್ದಾರೆ. ವಿಷಾದವೆಂದರೆ ಅವರಿಗೆ ತಮ್ಮದೇ ಬೀದಿಯಲ್ಲಿರುವ ಹರಕು ಬಟ್ಟೆ ತೊಟ್ಟ ಮಕ್ಕಳು ಕಣ್ಣಿಗೆ ಬೀಳುವುದಿಲ್ಲ. ನನ್ನ ಗೆಳೆಯರೊಬ್ಬರಲ್ಲಿ ಈ ಹಿಂದೆ ಈಸ್ಪರ್ಧೆಗಳ ಹಿಂದಿರುವ ಮನೋಸ್ಥಿತಿಯ ಬಗ್ಗೆ ಹೇಳಿದಾಗ, ಕಾಮಾಲೆ ಕಣ್ಣಿನವನೆಂದು ಬೈದಿದ್ದರು,…

    Reply
  2. vimala

    ಲೇಖನ ಸಮಯೋಚಿತವಾಗಿದೆ. ಈ ದೇಶದ ಅನಿಷ್ಟಗಳ ಬಗ್ಗೆ ಮಾತನಾಡಲು, ಪ್ರಶ್ನೆ ಮಾಡಲು ದಿನದ 24 ಘಂಟೆಯನ್ನೂ ಮೀಸಲಿಟ್ಟರೂ ಸಾಲದಲ್ಲ!

    Reply
  3. Noel Chungigudde

    ’ವಿಜಯಕರ್ನಾಟಕ’ದಲ್ಲಿ ಪ್ರಕಟವಾಗದ ನನ್ನ ಮಗನ ಚಿತ್ರವೂ, ನವೀನ್ ಸೂರಿಂಜೆ ಲೇಖನವೂ…..
    ”ನವೆಂಬರ್ 8,2012 ‘ವಿಜಯಕರ್ನಾಟಕ ಮಕ್ಕಳ ಭಾವಚಿತ್ರ ಸ್ಪರ್ಧೆ2012’ ಕ್ಕೆ ಮಕ್ಕಳ ಭಾವಚಿತ್ರ ಕಳುಹಿಸಲು ಕೊನೆ ದಿನಾಂಕ’ ಎಂಬುದನ್ನು ಓದಿದವನೇ Facebook ನಲ್ಲಿ ನಾನು ನನ್ನ ಮುಖಪುಟಕ್ಕೆ ಬಳಸಿಕೊಂಡಿದ್ದ ನನ್ನ ಮಗ ಶಾನ್ ರಿಚಿಯ ನನಗೆ ಚಂದ ಕಂಡ ಎರಡು ಚಿತ್ರಗಳನ್ನು ಮಿಂಚಿನ ವೇಗದಲ್ಲಿ ಪೆನ್ ಡ್ರೈವ್ ಗೆ ಹಾಕಿಕೊಂಡು ಶರವೇಗದಿಂದ ಕುಂದಾಪುರದ ಫೋಟೋ ಲ್ಯಾಬ್ ನಲ್ಲಿ ಪ್ರಿಂಟ್ ಹಾಕಿಸಿಕೊಂಡು ಅದೇ ವೇಗದಲ್ಲಿ ಪ್ರೊಫೆಷನಲ್ ಕೊರಿಯರ್ ಗೆ ಅವರ ಪತ್ರಗಳು ಇಲ್ಲಿಂದ ಹೊರಡುವ ಕೊನೆ ನಿಮಿಷದಲ್ಲಿ ತಲುಪಿಸಿ ಉಸಿರೆಳೆದು ಕೊಂಡಿದ್ದೆ. ನಂತರ ಶಾನ್ ಅಮ್ಮನಿಗೆ ’Shawns photos sent to Vijayakarnataka kids contest’ ಎಂದು ಮೇಸೇಜ್ ಮಾಡಿದ್ದೆ. ಆಗ ಅವಳು ಮಾಡಿದ ರಿಪ್ಲೈ ನೋಡಿ ನನಗೆ ಅತ್ಯಂತ ಸಂತೋಷವಾಗಿತ್ತು. ಏಕೆಂದರೆ ನನ್ನ ಭಾಷೆಯಲ್ಲಿ ಅವಳು ಮಾತನಾಡುತ್ತಿದ್ದಳು. ’ವರ್ತಮಾನ ಕರ್ನಾಟಕ’ದಲ್ಲಿ ನವೀನ್ ಸೂರಿಂಜೆ ಮಕ್ಕಳ ಭಾವಚಿತ್ರ ಸ್ಪರ್ಧೆಯ ಕೆಟ್ಟ ಮುಖದ ಬಗ್ಗೆ, ಅಮಾನವೀಯತೆಯ ಬಗ್ಗೆ ಬರೆದಿದ್ದಾರೆ. ನೀನು ಫೋಟೋ ಕಳಿಸುವ ಮೊದಲು ನನಗೆ ಒಂದು ಮಾತು ಹೇಳಿದ್ದರೆ ನಾನೇ ಬೇಡ ಎಂದು ಹೇಳುತ್ತಿದ್ದೆ ಎಂದಳು.’ ನಾನು, ’ವರ್ತಮಾನ ಕರ್ನಾಟಕ’ದ ಲೇಖನ ನೀನು ಓದಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ. ನನಗೆ ಕೂಡ ಈ ಸೌಂದರ್ಯ ಸ್ಪರ್ಧೆಗಳಲ್ಲಿ ಒಲವು ಇಲ್ಲ ಮತ್ತು ಇದೇ ಕಾರಣಕ್ಕೆ ಕಳೆದ ಎರಡು ವರ್ಷಗಳಲ್ಲಿ ನಾನು ಯಾವುದೇ ಪತ್ರಿಕೆಯ ಮಕ್ಕಳ ಸ್ಪರ್ಧೆಗಳಿಗೆ ನಮ್ಮ ಮಗನ ಫೋಟೋ ಕಳಿಸಿಲ್ಲ ಎಂಬುದು ನಿನಗೂ ಗೊತ್ತು. ಆದರೆ ನಿನ್ನ ಅಪ್ಪನಿಗೆ ಶಾನ್ ಫೋಟೊವನ್ನು ಪತ್ರಿಕೆಗಳಲ್ಲಿ ನೋಡಬೇಕು, ಯಾವುದೇ ಬಹುಮಾನ ಸಿಗದಿದ್ದರೂ ಪರವಾಗಿಲ್ಲ, ಮಕ್ಕಳ ದಿನಾಚರಣೆಯಂದು ಮೊಮ್ಮಗನ ಚಿತ್ರ ಪತ್ರಿಕೆಯಲ್ಲಿ ಬಂದರೆ ಅದನ್ನು ನೋಡಿ ಖುಷಿ ಪಡಬೇಕು ಎಂಬ ಆಸೆ ಇತ್ತಲ್ಲ. ಏಕೋ ಈ ಸಲ ನನಗೂ ಕಳಿಸಿ ಬಿಡೋಣ ಅನಿಸಿತು’ ಎಂದೆ. ’ನಾವು ತೀರಾ ಬುದ್ದಿಜೀವಿಗಳಾಗುತ್ತಾ ಹೋದಂತೆ, ವೈಚಾರಿಕತೆ ರೂಢಿಸಿಕೊಳ್ಳುತ್ತಾ ಹೋದಂತೆ ಬದುಕಿನ ಸಣ್ಣ ಪುಟ್ಟ ಸಂಭ್ರಮ-ಉತ್ಸವಗಳನ್ನೂ ಕಳೆದುಕೊಳ್ಳುತ್ತಾ ಹೋಗುತ್ತಿರುತ್ತೇವೆಂದು ಅನಿಸಿತು. ನಾನು ಯಾವುದೇ ಸ್ಟುಡಿಯೋಗೆ ಹೋಗಿ ಶಾನ್ ಫೋಟೋ ತೆಗೆಸಿಲ್ಲ. ನಾನೇ ಮೊಬೈಲ್ ನಲ್ಲಿ ತೆಗೆದ ಫೋಟೋ ಕಳಿಸಿದ್ದೇನೆ’ ಎಂದು ಮತ್ತೆರಡು ಮೆಸೇಜ್ ಕಳಿಸಿದೆ. ನಂತರ ಶಾನ್ ಫೋಟೋ ಕಳಿಸಿದ ವಿಷಯವನ್ನು ಗೆಳೆಯ ಶಶಿಧರ ಹೆಮ್ಮಾಡಿಗೂ ಹೇಳಿದೆ. ಮೊದಲೇ ಹೇಳಿದ್ದರೆ ’ಬೇಡ, ಅದೆಲ್ಲ ನಿನಗೆ ಯಾಕೆ’ ಎಂದು ಹೇಳಿ ನನ್ನ ಉತ್ಸಾಹಕ್ಕೆ ತಣ್ಣೀರು ಎರಚಿಬಿಟ್ಟಾನೆಂದು ನನಗೆ ಭಯ ಇತ್ತು. ಯಾಕೆಂದರೆ ನನ್ನ ಗೆಳೆಯರೆಲ್ಲ ಬುದ್ಧಿಜೀವಿಗಳು(ನನ್ನನ್ನು ಬಿಟ್ಟು). ಆದರೆ ಶಶಿ ಫೋಟೋ ಕಳಿಸಿದ್ದು ಯಾಕೆ ಎಂದೆಲ್ಲ ಕೇಳಲಿಲ್ಲ. ಆದ್ದರಿಂದ ನನ್ನ ಮನಸ್ಸಿಗೂ ಸ್ವಲ್ಪ ಸಮಾಧಾನ. ನಾನು ಊರ ಮಂದಿ, ಜನ ಸಾಮಾನ್ಯರು ಮಾಡದ ಕೆಲಸವನ್ನೇನೂ ಮಾಡಿಲ್ಲ ಎಂಬಂತಹ ಸಮಾಧಾನವಾಗಿತ್ತದು. ನನ್ನ ಮಾವನಿಗೆ ವಿಷಯ ತಿಳಿಸಿದೆ. ’ನೀವು ಕಳಿಸಿ ಎಂದಾಗ ನಾನೇ ಬೇಡ ಎನ್ನುತ್ತಿದ್ದೆ. ಈ ಸಲ ನೀವು ಶಾನ್ ಫೋಟೊ ಕಳಿಸು ಎನ್ನದಿದ್ದರೂ ಕಳಿಸಿ ಬಿಟ್ಟೆ ಕೊನೆ ಕ್ಷಣದಲ್ಲಿ, ಅದು ಅವರಿಗೆ ಕೊನೆ ದಿನದ ಒಳಗೆ ತಲುಪುತ್ತದೋ ಇಲ್ಲವೋ ಎಂಬುದೇ ಅನುಮಾನ’ ಎಂದು ಅವರ ಮುಖದಲ್ಲಿ ಖುಷಿ ಉಕ್ಕುವಂತೆ ಮಾಡಿದ್ದೆ.
    ಇಂದು ನವೆಂಬರ್ 14. ಮಕ್ಕಳ ದಿನಾಚರಣೆ ಎಂಬ ಕಾರಣಕ್ಕೋ ಏನೋ ಶಾನ್ ಬೆಳಗಾಗುವ ಮೊದಲೇ ಎದ್ದು ತಿರುಗಾಡಲು ಹೋಗುವಾ ಎಂದು ನನ್ನ ಕೈ ಬೆರಳು ಹಿಡಿದು ಎಳೆದು ಇನ್ನಿಲ್ಲದಂತೆ ಒತ್ತಾಯಿಸುತ್ತಿದ್ದ. ಅಪರೂಪಕ್ಕೆ ರಾತ್ರಿ ಬಂದು ಉಳಿದಿದ್ದ ಶಾನ್ ಅಮ್ಮನ ಅಕ್ಕನ ಗಂಡ ರಾಜೇಶ್ ಬಳಿ ನಾನು ಪೇಪರ್ ಗೆ ಫೋಟೊ ಕಳಿಸಿದ ವಿಷಯ ತಿಳಿಸಿ’ ಶಾನ್ ಗೆ ಒಂದು ರೌಂಡ್ ತಿರುಗಿಸಿದ ಹಾಗೂ ಆಯ್ತು, ಪೇಪರ್ ತಂದ ಹಾಗೂ ಆಯ್ತು, ಬನ್ನಿ’ ಎಂದು ಬೆಳಿಗ್ಗೆ 6 ಕ್ಕೆ ಪೇಪರ್ ಸ್ಟಾಲ್ ಗೆ ಹೋಗಿ ’ವಿಜಯಕರ್ನಾಟಕ’ ಖರೀದಿಸಿದೆ. ಶಾನ್ ಫೋಟೋ ಇಲ್ಲದಿರುವುದನ್ನು ನೋಡಿ ನನ್ನ ಮಾವನಿಗಾಗ ಬಹುದಾದ ಬೇಸರವನ್ನು ಊಹಿಸಿ ಸ್ವಲ್ಪ ಬೇಸರವಾದರೂ ಸ್ಪರ್ಧೆಗೆ ಬಂದಿದ್ದ 4508 ಮಕ್ಕಳ ಚಿತ್ರಗಳಲ್ಲಿ ನನ್ನ ಮಗನ ಚಿತ್ರವನ್ನು ಯಾವ ಮಾನದಂಡದಲ್ಲೇ ಆಯ್ಕೆ ಮಾಡುವುದಾದರೂ ಅದು ಹೇಗೆ ಸಾಧ್ಯ ಎಂದು ತರ್ಕಿಸಿ ಮಾವನನ್ನು ಈ law point ಮೂಲಕ ಖುಷಿ ಪಡಿಸಬೇಕೆಂದುಕೊಂಡೆ. ಮನೆಗೆ ತಲುಪಿ ಅದನ್ನೇ ಹೇಳಿದೆ. ಶಾನ್ ಅಜ್ಜಿಗೆ, ಚಿಕ್ಕಮ್ಮನಿಗೆ ಶಾನ್ ಫೋಟೋ ಪ್ರಕಟವಾಗದಿರುವುದರ ಬಗ್ಗೆ ಬೇಸರವಾಯಿತಾದರೂ “ಯಾವ ಮಗುವಿನ ಮುಖ ಚಂದ ಅಲ್ಲ ಹೇಳಿ, ಎಲ್ಲ ಮಕ್ಕಳೂ ಚಂದವೇ” ಎಂದು ಹೇಳಿದರು. ನನ್ನ ಮಾವ ’ಮಕ್ಕಳಲ್ಲಿ ಸ್ಪರ್ಧೆ, ಪ್ರಥಮ, ದ್ವಿತೀಯ, ಸಮಾಧಾನಕರ ಎಂದು ಬಹುಮಾನ ನೀಡುವ ಕ್ರಮವೇ ತಪ್ಪು, ಸುಮ್ಮನೇ ಎಲ್ಲ ಮಕ್ಕಳ ಫೋಟೋ ಹಾಕಬೇಕು. ಊರಿನವರ ಪೊಲಿಟಿಕ್ಸ್ ಬಗ್ಗೆ ಬರೆಯುವ ಈ ಪೇಪರ್ ನವರು ಮಾಡುವ ರಾಜಕೀಯ ಯಾರೂ ಮಾಡುವುದಿಲ್ಲ. ನಮ್ಮ ಶಾನ್ ಫೋಟೋ ಹಾಕಲಿಲ್ಲ ಎಂದರೆ ಮತ್ತೆ ಇವರು ಯಾರ ಫೋಟೋ ಹಾಕುವುದು’ ಎಂದರು. ನಾನು ’ಇವಳು ಬೇಡ ಎಂದರೂ ಮಗುವಿನ ಫೋಟೋ ಕಳಿಸಿದೆನಲ್ಲ, ಮಕ್ಕಳ ಪೋಟೋ ಕಳಿಸುವ ನಮಗೆ ಮಂಡೆ ಸರಿ ಇಲ್ಲ’ ಎಂದು joke cut ಮಾಡಿದೆ.
    ನಂತರ…….
    Facebook ತೆರೆದು ’ವರ್ತಮಾನ ಕರ್ನಾಟಕ’ದಲ್ಲಿ ನವೀನ್ ಸೂರಿಂಜೆ ಬರೆದ ಲೇಖನ ಓದಿದೆ. ಮೊದಲೇ ಓದಿದ್ದರೆ ಖಂಡಿತವಾಗಿಯೂ ಫೋಟೋ ಕಳುಹಿಸುತ್ತಿರಲಿಲ್ಲ ಎನಿಸಿತು. ’ವಿಜಯಕರ್ನಾಟಕ’ ಸಂಪಾದಕರು ಮಕ್ಕಳಿಗೆ ಪತ್ರ ಬರೆಯುತ್ತಾ ’ಮಗುವೇ ಹಾಗೆ…ಶ್ರೀಮಂತ-ಬಡವ, ಕಪ್ಪು-ಬಿಳುಪಿನ ಬೇಧವಿಲ್ಲ. ಪ್ರತಿ ಕಂದನೂ ಮುದ್ದು ಕಂದನೇ’ ಎಂದಿದ್ದಾರೆ. ಆದರೆ ಒಂದಂತೂ ಅತ್ಯಂತ ಸತ್ಯ. ಇಲ್ಲಿ ಪ್ರಕಟವಾದ ಚಿತ್ರಗಳಲ್ಲಿ ಒಂದೇ ಒಂದು ಮಗು ಕಪ್ಪು ಬಣ್ಣ ಹೊಂದಿರಲಿಲ್ಲ!!! ಶ್ರೀಕೃಷ್ಣನೇ ನೀಲ ಮೇಘ ಶ್ಯಾಮನಾಗಿದ್ದ ಅಂದರೆ ಕಪ್ಪು ಬಣ್ಣದವನಾಗಿದ್ದ ಎಂದು ಮಹಾಭಾರತ ಹೇಳುತ್ತದೆ. So ಶ್ರೀಕೃಷ್ಣ ಕೂಡ ಇಲ್ಲಿ fail. Ha ha ha. ಸಂಪಾದಕರ ಮನಸ್ಸಿನಂತೆ ತೀರ್ಪುಗಾರರ ಮನಸ್ಸು ವಿಶಾಲವಾಗಿಲ್ಲವೆ ಅಥವಾ 4508 ಮಕ್ಕಳ ಭಾವಚಿತ್ರಗಳಲ್ಲಿ ಒಂದೇ ಒಂದು ಕಪ್ಪು ಬಣ್ಣದ ಮಗುವಿನ ಚಿತ್ರವಿರಲಿಲ್ಲವೆ? ಆಯ್ಕೆಯಾದ 39 ಚಿತ್ರಗಳಲ್ಲಿ ಒಬ್ಬನೇ ಒಬ್ಬ ಶ್ರೀಕೃಷ್ಣ ಇರಲಿಲ್ಲವೆ? Ha ha ha.
    ನವೀನ್ ಸೂರಿಂಜೆ ತಮ್ಮ ಲೇಖನದಲ್ಲಿ ಹೇಳುತ್ತಾರೆ: ’ಈ ವರೆಗೆ ನಡೆದ ಮುದ್ದು ಕಂದ ಸ್ಪರ್ಧೆಯಲ್ಲಿ ಒಂದೇ ಒಂದು ದಲಿತರ ಮಗುವಿಗೆ ಪ್ರಶಸ್ತಿ ಬಂದಿಲ್ಲ’. ಹೌದೆ? ನನಗೆ ನಿಜಕ್ಕೂ ಗೊತ್ತಿರಲಿಲ್ಲ. ಇದೆಂಥ ಅನ್ಯಾಯ? ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಜಾತ್ಯತೀತ ಸಂವಿಧಾನ ಒಪ್ಪಿಕೊಂಡ ಈ ಮಹಾನ್ ದೇಶದ ’ಜಾತ್ಯತೀತ’ ಮನೋಭಾವದ ಎಂದು ನಾವು ನಂಬುವ ಪತ್ರಿಕೆಗಳಿಗೆ ದಲಿತರ ಕಂದಮ್ಮಗಳ ಬಗ್ಗೆ ತಾತ್ಸಾರವೆ?
    ಈ ಕುರಿತು ಗಾಢವಾಗಿ ಚಿಂತಿಸಿದ ಎಲ್ಲರಂಥಲ್ಲದ ಪತ್ರಕರ್ತ ನವೀನ್ ಸೂರಿಂಜೆ ಇಂದು ತನ್ನ ಕೆಲಸಕ್ಕೆ ನ್ಯಾಯ ಒದಗಿಸಿದ್ದಕ್ಕಾಗಿಯೇ ಇಂದು ಜೈಲಿನಲ್ಲಿದ್ದಾರೆ. ನನ್ನಂಥವರು ದೀಪಾವಳಿ ಸಂಭ್ರಮದಲ್ಲಿದ್ದೇವೆ. ಎಲ್ಲಿಯ ದೀಪಾವಳಿ, ಎಂಥ ಮಕ್ಕಳ ದಿನಾಚರಣೆ?
    ನಮ್ಮ ಶಾನ್ ಮಕ್ಕಳ ಭಾವಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನೋ ಕೊನೆಯ ಸ್ಥಾನವನ್ನೋ ಪಡೆದು, ಕೊನೆ ಪಕ್ಷ ಅವನ ಚಿತ್ರ ಇಂದಿನ ಪತ್ರಿಕೆಯಲ್ಲಿ ಪ್ರಕಟವಾಗಿದ್ದರೆ ನಾನು ’ವರ್ತಮಾನ ಕರ್ನಾಟಕದಲ್ಲಿ ಪ್ರಕಟಿತ ’ಮುದ್ದು ಕಂದ ಸ್ಪರ್ಧೆ: ಮಾನಸಿಕ ಅಸ್ವಸ್ಥರು ನಡೆಸುವ ಕಾರ್ಯಕ್ರಮ’ ಎಂಬ ಲೇಖನವನ್ನೇ ಓದುತ್ತಿರಲಿಲ್ಲವೇನೋ. ಓದಿದ್ದರೂ ಆ ಕುರಿತು ಚಿಂತಿಸುತ್ತಿರಲಿಲ್ಲ ಅನಿಸುತ್ತದೆ. ಉತ್ಸವ, ಸಂಭ್ರಮಗಳಿಗಿಂತ ಆತ್ಮವಿಮರ್ಶೆ, ಸಾಮಾಜಿಕ ನ್ಯಾಯ, ಕಟು ವಾಸ್ತವಗಳಿಗೆ ನಾವು ಯಾಕೆ ಬೆನ್ನು ತಿರುಗಿಸಬಾರದು ಎಂಬುದಕ್ಕೆ ಈ ಸ್ಪರ್ಧೆ ನಮ್ಮಂಥವರಿಗೆ ಒಂದು ಪಾಠ. ಅಲ್ಲವೆ?

    Reply
    1. Ramakrishna M

      ಕಣ್ಣು ತೆರೆಸುವ ಒಳ್ಳೆಯ ಲೇಖನ ಮತ್ತು ಬಹಳ ಒಳ್ಳೆಯ ಪ್ರತಿಕ್ರಿಯೆ. ನವೀನ ಮತ್ತು ನೋಯೆಲ್ ಇಬ್ಬರಿಗೂ ಧನ್ಯವಾದ – ರಾಮಕೃಷ್ಣ

      Reply

Leave a Reply

Your email address will not be published. Required fields are marked *